ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಅಣು ಒಪ್ಪಂದದಿಂದ ನಮಗೇನು ಲಾಭ, ನಿಮಗೇನಾದ್ರೂ ಗೊತ್ತಿದೆಯೇ?

ಜುಲೈ 22, 2008. ಆಡಳಿತ ಪಕ್ಷ, ವಿರೋಧ ಪಕ್ಷಗಳು ಸೇರಿದಂತೆ ರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಬಲಾಬಲ ಪ್ರದರ್ಶಿಸಲು (ತಿಳಿದುಕೊಳ್ಳಲು), ಮುಂಬರಲಿರುವ ಚುನಾವಣೆಯಲ್ಲಿ ತಮ್ಮ ಹಣೆಬರಹವನ್ನು ಪರೀಕ್ಷಿಸಿಕೊಳ್ಳಲು ಕೆಳಮನೆ ಲೋಕಸಭೆಯಲ್ಲಿ ವೇದಿಕೆ ಸಿದ್ಧವಾಗಿದೆ (ಅಲ್ಲಿಯವರೆಗೆ ಈ ಲೆಕ್ಕಾಚಾರ ತಲೆಕೆಳಗಾಗಬಹುದೇನೋ!). ಹೆಸರೇನೋ ಅಣು ಒಪ್ಪಂದದ್ದೇ ಆದರೂ, ಕೊಸರು ಬೇರೆಯದೇ ಇದೆ!

ಕಳೆದ ಕೆಲದಿನಗಳಿಂದ ಯಾವ ದಿನಪತ್ರಿಕೆಗಳು, ಸುದ್ದಿವಾಹಿನಿಗಳು ಎಲ್ಲಿ ನೋಡಿದರೂ ಇದೇ ಸುದ್ದಿ.

ಭಾರತ-ಅಮೆರಿಕ ಅಣು ಒಪ್ಪಂದವಂತೆ, ಎಡಪಕ್ಷಗಳು ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿದ್ದಾವಂತೆ, ಇದರಿಂದಾಗಿ ಆಡಳಿತ ಪಕ್ಷ ಬೇರೆ ಪಕ್ಷಗಳ ಬೆಂಬಲ ಪಡೆಯಬೇಕಂತೆ, 543 ಸದಸ್ಯರ ಲೋಕಸಭೆಯಲ್ಲಿ 271 ಸದಸ್ಯರ ಬೆಂಬಲವಿದ್ದರೆ ಸಾಕಂತೆ, ಹೀಗೇ....!

ನಾವು ದಿನಪತ್ರಿಕೆಗಳು, ಸುದ್ದಿವಾಹಿನಿಗಳಲ್ಲಿ ನೋಡುತ್ತಾ ಇರುವುದಾದರೂ ಏನನ್ನ? ಈ ಒಪ್ಪಂದವನ್ನ ಜಾರಿಗೆ ತರಲು ಬೇಕಾದ ಅಂಕಿಅಂಶಗಳ ಲೆಕ್ಕಾಚಾರ, ಅದಕ್ಕಾಗಿ ರಾಜಕೀಯ ಪಕ್ಷಗಳು ನಡೆಸುತ್ತಿರುವ "ಕುದುರೆ ವ್ಯಾಪಾರ". ಯಾರು ಯಾರನ್ನ ಬೆಂಬಲಿಸಬೇಕು, ಇದರಿಂದ ಅವರಿಗೆ ಏನು ಲಾಭ? ರಾಜಕೀಯ ನೋಡೀ, ಲಾಭವಿಲ್ಲದೆ ಮಾಡೋದನ್ನ ವ್ಯಾಪಾರ ಅಂತಾಗಲೀ, ರಾಜಕೀಯ ಅಂತಾಗಲೀ ಕರೀತಾರೆಯೇ? ನಮ್ಮ ದೇಶದ ದುರಂತ ನೋಡಿ, ಸ್ವಾತಂತ್ರ್ಯ ಬಂದು 60 ವರ್ಷ ಪೂರೈಸಿದ್ದರೂ, ಭಾರತದಂತಹ "ಪ್ರಜಾಪ್ರಭುತ್ವ"ದಲ್ಲಿ ನಡೆಯುತ್ತಿರುವ "ಪ್ರಭುತ್ವ"ವೆಂದರೆ ಇದುವೇ. ಅಂದರೆ ಸಿಂಪಲ್, "ಕುದುರೆ ವ್ಯಾಪಾರ" ಕಣ್ರೀ.

ಇನ್ನು ಈ ರಾಜಕೀಯ ಪಕ್ಷಗಳೂ, ಮುಖಂಡರೂ...
------------------------------------------
ಯುಪಿಎ, ಎನ್ ಡಿಎ, ಯುಎನ್ ಪಿಎ ಹೀಗೇ ಎಲ್ಲಾ ರಾಜಕೀಯ ಗುಂಪುಗಳಿಗೂ ಇರುವ ಗುರಿಯೆಂದರೆ ನಮ್ಮ ದೇಶದ ಹಿತ ಕಾಪಾಡುವುದಕ್ಕೆ ಏನು ಮಾಡಬೇಕು ಎಂಬುದಲ್ಲ, ಬದಲಿಗೆ ತಮ್ಮ ರಾಜಕೀಯ ಬಲಾಬಲ ಏನು ಎಂಬ ದೊಡ್ಡಸ್ತಿಕೆಯ ಪ್ರದರ್ಶನವಷ್ಟೆ. ಅಣು ಒಪ್ಪಂದ ಜಾರಿಗೆ ಬರುವುದರಿಂದ ದೇಶಕ್ಕೆ ಏನು ಲಾಭ ಎನ್ನುವುದಲ್ಲ, ತಮಗೆ ತಮ್ಮ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಏನು ಲಾಭ ಎನ್ನುವುದಷ್ಟೇ ಇವುಗಳ ಆತಂಕ! ವಿರೋಧ ಪಕ್ಷಗಳ ಕೆಲಸ ಏನಪ್ಪಾ ಎಂದರೆ ಆಡಳಿತ ಪಕ್ಷ ಏನು ಮಾಡುತ್ತೆ ಅದೆಲ್ಲವನ್ನೂ ವಿರೋಧಿಸುವುದು. ಅದು ಜನೋಪಯೋಗಿಯಾಗಿರಲಿ, ಇಲ್ಲದಿರಲಿ ಯಾವುದೂ ಅವಕ್ಕೆ ಬೇಕಾಗಿಲ್ಲ.

ಈ ಹಣಾಹಣಿಯಲ್ಲಿ ಯುಪಿಎ ಗೆದ್ದೇಗೆಲ್ಲುತ್ತದೆ ಎನ್ನುವ ವಿಶ್ವಾಸವನ್ನ ಪ್ರಧಾನಿ ಮನಮೋಹನ್ ಸಿಂಗ್ ವ್ಯಕ್ತಪಡಿಸಿರುವುದೇನೋ ಸರಿ. ಆದರೆ, ಅದನ್ನು ದಿಟವಾಗಿಸುವುದು ಅವರು ಕೇವಲ ಒಬ್ಬ ಪ್ರತಿಭಾವಂತ ಅರ್ಥಶಾಸ್ತ್ರಜ್ಞ ಮಾತ್ರವಲ್ಲ, ತಾನೊಬ್ಬ ಚಾಣಾಕ್ಷ ರಾಜಕಾರಣಿ ಕೂಡ ಹೌದು ಎನ್ನುವುದನ್ನು ಸಾಬೀತುಪಡಿಸಲು ಇದು ಸದಾವಕಾಶ.

ಅತ್ತ ತೃತೀಯ ರಂಗದ ಮಾಯಾವತಿಯವರಿಗೆ ತಾವು ಮುಂದಿನ ಪ್ರಧಾನಮಂತ್ರಿಯಾಗುವುದಕ್ಕೆ ಪೂರ್ವಸಿದ್ಧತೆಯಂತೆ ಈ ಸನ್ನಿವೇಶ ಬಳಸಿಕೊಳ್ಳುವ ತವಕ.

ಹಾಲಿ ಸರಕಾರಕ್ಕೆ ಬೆಂಬಲ ನೀಡಿದ್ದ ಸೋ ಕಾಲ್ಡ್ ಸೋಶಿಯಲಿಸ್ಟ್, ಸೆಕ್ಯುಲರ್ ಎಡಪಕ್ಷಗಳಿಗೆ ತಮ್ಮನ್ನು ಎದುರು ಹಾಕಿಕೊಂಡವರ ಗತಿ ಏನಾಗುತ್ತದೆ ಎಂದು ತೋರಿಸುವ ಹೆಬ್ಬಯಕೆ.

ಇನ್ನು ಎನ್ ಡಿಎಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ, ತನ್ನ ಪ್ರಭುತ್ವ ಸ್ಥಾಪಿಸೋದಕ್ಕೆ ಇದೊಂದು ಸರಿಯಾದ ವೇದಿಕೆ.

ಈ ಪರಿಸ್ಥಿತಿ ಬಂದದ್ದು ಯಾಕೆ?ಹೇಗೆ?ಅದರ ಪರಿಣಾಮವೇನು?
------------------------------------------------------
ಸುಮಾರು 4 ವರ್ಷಗಳ ಕಾಲ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಹೊರಗಿನಿಂದ ಬೆಂಬಲ ನೀಡಿದ್ದ ಎಡಪಕ್ಷಗಳು ಕಳೆದ 3 ವರ್ಷಗಳಿಂದ ಸುದ್ದಿಯಲ್ಲಿರುವ ಭಾರತ-ಅಮೆರಿಕ ನಡುವಣ ಅಣು ಒಪ್ಪಂದದ ಕುರಿತು ಕಡೆಗೂ ತಮಗಿದ್ದ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿಕೊಳ್ಳಲಾಗದೆ, ಹೊರನಡೆಯುವುದರೊಂದೆಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ವಿಶ್ವಾಸ ಮತ ಯಾಚನೆ ನಡೆಸಲೇಬೇಕಾದ ಅನಿವಾರ್ಯತೆ ಬಂದೊದಗಿದೆ.

ಒಂದು ವೇಳೆ ಯುಪಿಎ ವಿಶ್ವಾಸಮತ ಗಳಿಸುವಲ್ಲಿ ವಿಫಲವಾದ ಪಕ್ಷದಲ್ಲಿ, ನಾವೆಲ್ಲರೂ ಸಧ್ಯದಲ್ಲೇ ಅಂದರೆ ಅಕ್ಟೋಬರ್-ನವೆಂಬರ್ ನಲ್ಲಿ ಚುನಾವಣೆ ಕಾಣಲಿದ್ದೇವೆ.

ದೇಶದ ರಾಜಕೀಯ, ಆರ್ಥಿಕ ಪರಿಸ್ಥಿತಿಗಳು ಆ ಮೂಲಕ ಸಾಮಾಜಿಕ ಪರಿಸ್ಥಿತಿ ಬಿಗಡಾಯಿಸಿರುವಂತಹ ಸನ್ನಿವೇಶದಲ್ಲಿ ಅಕಾಲ ಚುನಾವಣೆ ಪ್ರಸ್ತುತ ಸರಕಾರಕ್ಕೆ ಹಾಗೂ ಸರಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ. ಏರುತ್ತಿರುವ ಹಣದುಬ್ಬರ, ಆ ಮೂಲಕ ಗಗನಕ್ಕೇರುತ್ತಿರುವ ಎಲ್ಲಾ ದಿನಬಳಕೆ ವಸ್ತುಗಳ ದರಗಳು ಆರ್ಥಿಕತೆಯ ಕುಸಿತಕ್ಕೆ ಕಾರಣವಾಗಿದೆಯಲ್ಲದೆ, ಜನಸಾಮಾನ್ಯರಲ್ಲಿ ಅತೃಪ್ತಿಯನ್ನು ಮೂಡಿಸಿರುವುದರಿಂದ ಯುಪಿಎ ಸರಕಾರ "ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ್ರೆ ನೂರು ವರ್ಷ ಆಯಸ್ಸು" ಅನ್ನೋ ಹಾಗೆ, ಈ ಚುನಾವಣೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ನಡೆಸಿದೆ.

ಅಷ್ಟಕ್ಕೂ ಈ ಒಪ್ಪಂದದಿಂದ ಆಗೋ ಲಾಭವಾದ್ರೂ ಏನು?
-------------------------------------------------
ಈ ಒಪ್ಪಂದದಡಿಯಲ್ಲಿ ಭಾರತ ಅಮೆರಿಕಾದಿಂದ ಪಡೆಯುವ ಅಣು ಇಂಧನ ಹಾಗೂ ತಂತ್ರಜ್ಞಾನಕ್ಕೆ ಬದಲಾಗಿ ತನ್ನ ನಾಗರಿಕ ರಿಯಾಕ್ಟರ್ಗಳನ್ನು ಅಂತಾರಾಷ್ಟ್ರೀಯ ಪರಿವೀಕ್ಷಣೆಗೆಂದು ತೆರೆದಿರಿಸುವುದು.

ಭಾರತ ತಾನು ಬಳಸುವ ಶೇ.75ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದು, ಇಂಧನ ಕೊರತೆಯನ್ನು ಎದುರಿಸುತ್ತಿರುವ ನಮ್ಮ ದೇಶದ ಆರ್ಥಿಕತೆಯನ್ನು ಬಲಪಡಿಸುವುದು - ಪ್ರಧಾನಿ ಮನಮೋಹನ್ ಸಿಂಗ್

ಎಐಸಿಸಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಈ ಒಪ್ಪಂದವನ್ನು ನಮ್ಮ ಭವಿಷ್ಯದ ಪೀಳಿಗೆಗೆಳು ಖಂಡಿತ ಗುರುತಿಸುತ್ತವೆ ಎಂಬುದಾಗಿ ಹೇಳಿದ್ದಾರೆ. ಯಾಕೆಂದರೆ, ಈ ಒಪ್ಪಂದದಿಂದಾಗಿ ನಾವು ಹೆಚ್ಚು ಅಣು ಸ್ಥಾವರಗಳನ್ನು ಸ್ಥಾಪಿಸಬಹುದು ಹಾಗೂ ಆ ಮೂಲಕ ಹೆಚ್ಚು ಇಂಧನವನ್ನು ಉತ್ಪಾದಿಸಬಹುದು. ದಿನೇ ದಿನೇ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಈ ಒಪ್ಪಂದ ಉತ್ತರವಾಗಲಿದೆ ಎಂಬುದು ಅವರ ವಾದ.

ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಕಳೆದ 2-3 ವರ್ಷಗಳಿಂದ ಇಷ್ಟೆಲ್ಲಾ ವಾದವಿವಾದಗಳು, ಭಿನ್ನಾಭಿಪ್ರಾಯಗಳು ನಮ್ಮ ದೇಶದಲ್ಲಿ ನಡೆಯುತ್ತಿದ್ದರೂ ಜನಸಾಮಾನ್ಯನಿಗೆ ಅನಕ್ಷರಸ್ಥ ಜನಸಾಮಾನ್ಯನನ್ನು ಬಿಡಿ, ಅಕ್ಷರಸ್ಥ ಜನಸಾಮಾನ್ಯನಿಗೂ ಈ ಕುರಿತು ಕಿಂಚಿತ್ತೂ ತಿಳುವಳಿಕೆಯಿಲ್ಲ. ನಮ್ಮ ದೇಶದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಶ್ರೀ ಎ.ಪಿ.ಜೆ.ಅಬ್ದುಲ್ ಕಲಾಂರಂತಹವರು ಅಣು ಒಪ್ಪಂದವನ್ನ ಸ್ವಾಗತಿಸಿದರೆ, ಪ್ರಗತಿಪರ ಚಿಂತಕರು ಈ ಒಪ್ಪಂದ ಅಮೆರಿಕದ ಮರ್ಜಿಗೆ ಒಳಗಾಗಲು ದಾರಿಯಷ್ಟೆ ಎಂದು ಟೀಕಿಸುತ್ತಾರೆ. ಯಾರು ಸರಿ, ಯಾರು ತಪ್ಪು ಎಂದು ನಮ್ಮೊಳಗೆ ಯಾರಾದರೂ ಬಲ್ಲಿರಾ?

ಇದು ಯಾರ ದೋಷವೋ ಆ ಭಾರತಾಂಬೆಯೇ ಬಲ್ಲಳು!

ಯಥಾಪ್ರಕಾರ ಎಲ್ಲವೂ "ಅನುಕೂಲ ಸಿಂಧು"ರಾಜಕಾರಣ, ಎಲ್ಲದಕ್ಕೂ ಜಾಣಮೌನ. ಅದು ರಾಜಕಾರಣಿಗಳದ್ದಾಗಿರಬಹುದು ಅಥವಾ ಅವರನ್ನು ಆರಿಸಿಕಳಿಸುವ ನಮ್ಮಂತಹ ಪ್ರಜೆಗಳದ್ದಾಗಿರಬಹುದು. ಎಲ್ಲ(ವೂ)(ರೂ) ಮಾರಾಟಕ್ಕಿದೆ(ದ್ದಾರೆ) ಇಲ್ಲಿ! ಅದೇ ತಾನೇ "Consumerist Culture"ನಿಂದಾಗಿ ನಾವು ಪಡೆದಿರುವ ಬಳುವಳಿ.

ನಮ್ಮ(ದೇಶದ) ಭವಿಷ್ಯವನ್ನು "ಮಾರಾಟಕ್ಕಿರುವ ಸರಕು"ಗಳಾಗಿರುವ ಈ ಪ್ರಜಾಪ್ರತಿನಿಧಿಗಳು ನಿರ್ಧರಿಸಲಿದ್ದಾರೆ. ಸದ್ಯಕ್ಕೆ ಇದನ್ನು ಓದಿ, ಕೇಳಿ, ನೋಡಿ ಆನಂದಿಸುವುದಷ್ಟೇ ನಮ್ಮ ಭಾಗ್ಯ!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಅಣು ಒಪ್ಪಂದದಿಂದ ನಮಗೇನು ಲಾಭ, ನಿಮಗೇನಾದ್ರೂ ಗೊತ್ತಿದೆಯೇ?

girish.rajanal's picture

ಸರ್‍,
ನಾಗರಿಕ ಪರಮಾಣು ಯೋಜನೆಯಿಂದ ನಮಗೆ ಮಿಂಚು ಸಿಗೋದಾದ್ರೆ ಅದನ್ನ ನಾನು ಮುಕ್ತ ಮನಸ್ಸಿನಿಂದ ಬರಮಾಡಿಕೊಳ್ಳುತ್ತೇನೆ...
ಆದರೆ..ಅಮೇರಿಕ ಜೊತೆ ಈ ಒಪ್ಪಂದ ಮಾಡಿಕೊಳ್ಳುವುದರಿಂದ ನಮಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಅನ್ನಿಸುತ್ತೆ. ಅವರ ಕಪಿಮುಷ್ಟಿಗೆ ಸಿಕ್ಕಂತಾಗುತ್ತೆ. ಒಪ್ಪಂದ ಆಗಿ ಒಂದು ೫ ವರ್ಷ ಸಂಬಂಧ ಚೆನ್ನಾಗಿರುತ್ತೆ, ಅಷ್ಟರ ಹೊತ್ತಿಗೆ ನಾವು ಅಮೇರಿಕವನ್ನು ಬಹಳ ಅವಲಂಬಿಸಿರುತ್ತೇವೆ. ಮುಂದೆ ನಮಗೆ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟುಮಾಡಬಹುದು. ಒಂದು ವೇಳೆ ಈ ರೀತಿ ಆದರೆ ಮತ್ತೆ ನಾವು ಕತ್ತಲಲ್ಲಿ...!!!!!!!!
ಯೋಚನೆ ಮಾಡಿ...ಲಾಭ ಇಲ್ಲದೇ ಯಾವ ದೇಶಾನು ನಮ್ಮ ದೇಶದ ಜೊತೆ ಒಪ್ಪಂದಕ್ಕೆ ತಯಾರಿರಲ್ಲ..ಮುಂದೆ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಕೇಳದೇ ಇರುತ್ತಾರೆ ಅಂತ ಏನು ಖಾತ್ರಿ. ಮೊದಲೇ ನಮ್ಮ ದೇಶದಲ್ಲಿರೋ ನೈಸರ್ಗಿಕ ಸಂಪತ್ತು ವಿದೇಶ ಸೇರುತ್ತಾ ಇದೆ..ಇದೆಲ್ಲ ಆಗುಹೋಗುಗಳಿಗೆ ಒಂದು ಚರ್ಚೆ ಅಥವಾ ಸಂವಾದದ ತರ ಏನಾದರೂ ಮಾಡಬೇಕು.

ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

ಉ: ಅಣು ಒಪ್ಪಂದದಿಂದ ನಮಗೇನು ಲಾಭ, ನಿಮಗೇನಾದ್ರೂ ಗೊತ್ತಿದೆಯೇ?

shashikannada's picture

ಪ್ರಿಯ ಗಿರೀಶ್,

ನಮಸ್ಕಾರ. ಪ್ರತಿಕ್ರಿಯೆಗೆ ಧನ್ಯವಾದ. ತಡವಾಗಿ ಪ್ರತಿಕ್ರಿಯಿಸ್ತಿರೋದಕ್ಕೆ ಕ್ಷಮೆಯಿರಲಿ. ನಮ್ಮ ಸಂಪದದಲ್ಲಿ ಹಾಸ್ಯ ಲೇಖನಗಳಿಗೆ ಸಿಗುವಷ್ಟು ಪ್ರತಿಕ್ರಿಯೆ ಗಂಭೀರ ಲೇಖನಗಳಿಗೆ ಸಿಗ್ದೇ ಇರೋದು ಬೇಸರದ ಸಂಗತಿ.

ಇರಲಿ, ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ನೀವು ಹೇಳೋದೇನೋ ಸರಿ. ನಾನು ಕೂಡ ಈ ಅಣು ಒಪ್ಪಂದದ ಸಾಧಕ ಬಾಧಕಗಳ ಬಗ್ಗೆ ಯೋಚಿಸಿದ್ದೇನೆ. ಆದರೆ, ಏನೂ ಸ್ಪಷ್ಟವಾಗಿ ತೋಚ್ತಿಲ್ಲ( ಅಣು ಒಪ್ಪಂದದ ಬಗ್ಗೆ ನಮ್ಮ ಸಮಾಜವಾದಿ ಚಿಂತಕರಾದ ಡಿ.ಎಸ್.ನಾಗಭೂಷಣರವರು ಒಂದು ವಿಸ್ತಾರವಾದ ಲೇಖನವನ್ನು ಓದಿರದಿದ್ದಲ್ಲಿ ತಪ್ಪದೆ ಓದಿ). ತುಂಬಾ ಸಂಕೀರ್ಣವಾದ ವಿಚಾರಗಳನ್ನು ಒಳಗೊಂಡ ಕ್ಲಿಷ್ಟವಾದ ವಿಚಾರ ಇದು. ಈ ಬಗ್ಗೆ ಸರಕಾರ ಜನರಲ್ಲಿ ಅರಿವು ಮೂಡಿಸಬೇಕಿತ್ತು. ಪ್ರಜ್ಞಾವಂತ ನಾಗರಿಕರಿಗೂ ಇದರ ಬಗ್ಗೆ ಅರಿವು ಇರಬೇಕಿತ್ತು. ನಮ್ಮನ್ನೂ ಸೇರಿದ ಹಾಗೆ ಎಷ್ಟು ಜನರಿಗೆ ಈ ಒಪ್ಪಂದದ ಬಗ್ಗೆ ತಿಳಿದಿದೆ ಹೇಳಿ? ಅದಲ್ಲದೆ, ಕೇವಲ ಜಲವಿದ್ಯುತ್ ಅನ್ನೇ ನಾವು ಅವಲಂಬಿಸೋದಕ್ಕೆ ಆಗೋದಿಲ್ಲ. ಭಾರತದ ಜನಸಂಖ್ಯೆ ಹೇಗೆ ಏರ್ತಾ ಇದೆ ಅನ್ನೋದು ನಮಗೆಲ್ಲಾ ಗೊತ್ತಿದೆ. ಇದರ ಜತೆಜತೆಗೆ ನೀರಿನ ಅಭಾವವೂ ಸೇರಿದ ಹಾಗೆ ಏನೆಲ್ಲಾ ಸಮಸ್ಯೆಗಳು ಹುಟ್ಕೋತಾ ಇವೆ ಅನ್ನೋದು ಗೊತ್ತಿದೆ. ಅವನ್ನೆಲ್ಲಾ ಎದುರಿಸೋಕೆ ನಾವೆಲ್ಲಾ ಎಷ್ಟರ ಮಟ್ಟಿಗೆ ಸಿದ್ಧರಿದ್ದೇವೆ ಹೇಳಿ? ತೆರಿಗೆ ಕಟ್ಟೋದರ ಬಗ್ಗೆಯೇ ನಮಗೆ ಏನೂ ಸರಿಯಾಗಿ ಗೊತ್ತಿಲ್ಲ ಅಂತದ್ರಲ್ಲಿ...! ನಾವು ಹೇಗಿರ್ತೇವೆ ಸರಕಾರಗಳು ಕೂಡ ಹಾಗೇ ಇರ್ತವೆ ಅಲ್ವಾ?

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ

ಉ: ಅಣು ಒಪ್ಪಂದದಿಂದ ನಮಗೇನು ಲಾಭ, ನಿಮಗೇನಾದ್ರೂ ಗೊತ್ತಿದೆಯೇ?

yuvapremi's picture

ನಮ್ಗೆ ಏನು ಲಾಭಾನ ? ಈ ಅಣು ಒಪ್ಪಂದದಿಂದ ನಮಗೆ ಬಹಳಾನೇ ಲಾಭವಿದೇ ಸಾರ್. ಆದರೆ ನಷ್ಟ ಇರೋದು ಈ ಅಮೇರಿಕರ ಬಳಿ ಅಣು ಒಪ್ಪಂದ ಮಾಡಿಕೊಳ್ಳುವುದು.

ಹೋಗೀ ಹೋಗೀ ನರಿ ಹತ್ರ ಕಷ್ಟ ಸುಖ ಹಂಚ್ಕೊಳ್ಳೋಕೆ ಆಗುತ್ತ ಹೇಳಿ.

ಇದೆಲ್ಲ ಇರ್ಲಿ, ಈ ಅಮೇರಿಕನ್ನರು ನಮ್ಮ ಮುಂದೆ ಇಟ್ಟಿರುವ ಬೇಡಿಕೆಗಳು ನೋಡಿ.

೧) ಅಣು ಒಪ್ಪಂದವಾದ ಮೇಲೆ ಭಾರತ ವರ್ಷಕ್ಕೆ 50 ಅಣು ಆಯುಧವನ್ನು ಮಾತ್ರವೇ ಮಾಡಬೇಕು.
೨) ಭಾರತದ ಎಲ್ಲಾ ಅಣು ತಂತ್ರಜ್ನಾನವನ್ನು ಅಮೇರಿಕಾ ಮಾತ್ರವೇ ಒದಗಿಸುತ್ತದೆ,ಮುಂದೆಂದಾದರೂ ಒಪ್ಪಂದ ಮುರಿದುಬಿದ್ದಲ್ಲಿ ಅವರು ಕೊಟ್ಟಿರುವ ಎಲ್ಲಾ ತಂತ್ರಜ್ನಾನವನ್ನು ಅವರಿಗೆ ಹಿಂದಿರುಗಿಸಬೇಕು.
೩) ಮುಂದೆಂದಾರು ಅಮೇರಿಕಾ ಯುದ್ದಮಾಡುತ್ತಿದ್ದರೆ ಅವರಿಗೆ ಭಾರತದ ಅಣು ಆಯುಧಗಳನ್ನು ಉಪಯೋಗಿಸುವ ಅವಕಾಶ ನೀಡಬೇಕು.
೪) ಭಾರತ ಅಪ್ಪಿ ತಪ್ಪಿಯೂ ಪೋಕ್ರಾನ್ ನಂತಹ ಪ್ರಯೋಗವನ್ನು ಮುಂದೆಂದೂ ಮಾಡುವಂತಿಲ್ಲ. ಹಾಗೆ ಮಾಡಿದ್ದಲ್ಲಿ, ಅಮೇರಿಕಾ ತನ್ನ ಜೆಟ್ ಗಳನ್ನು ಕಳುಹಿಸಿ ನಮ್ಮ ನೆಲದಲ್ಲಿರುವ ಅಣುಶ್ರಾವರಗಳನ್ನು ಹೊಡೆದುರಿಳಿಸುತ್ತದೆ.

ಇದು ನೂರು ಕಾರಣಗಳಲ್ಲಿ ನಾಲ್ಕು ಮಾತ್ರ. ಇಷ್ಟೆಕ್ಕೆ ನಮಗೆ ಯಾಕಪ್ಪ, ಈ ಆಣು ಒಪ್ಪಂದ ಅಂತನಿಸಿದರೆ ಸಾಕು. :o

-ಯುವಪ್ರೇಮಿ

ಉ: ಅಣು ಒಪ್ಪಂದದಿಂದ ನಮಗೇನು ಲಾಭ, ನಿಮಗೇನಾದ್ರೂ ಗೊತ್ತಿದೆಯೇ?

shashikannada's picture

ನೀವು ಹೇಳೋದೇನೋ ಸರಿ ಗೆಳೆಯರೆ. ಆದ್ರೆ, ಇಷ್ಟೆಲ್ಲಾ ತೂತುಗಳಿರೋ ಒಪ್ಪಂದವನ್ನ ನಮ್ಮ ನೆಚ್ಚಿನ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಅಬ್ದುಲ್ ಕಲಾಂರವರು ಬೆಂಬಲಿಸ್ತಿರೋದಕ್ಕೆ ಕಾರಣಗಳೇನು ಅಂತ ತಿಳೀತಿಲ್ಲ.

ಇನ್ನು ಎಡಪಕ್ಷಗಳು, ಬಿಜೆಪಿ ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದೇನೂ ಈ ಒಪ್ಪಂದವನ್ನ ವಿರೋಧಿಸ್ತಿವೆ ಅಂತ ನಂಗೆ ಅನ್ನಿಸ್ತಿಲ್ಲ. ಅದು ಕೇವಲ ರಾಜಕೀಯ ಕುತಂತ್ರವಷ್ಟೆ.

ಕಡೆಯದಾಗಿ, ಈ ಒಪ್ಪಂದ ಅನಿವಾರ್ಯವೇ ಅನ್ನೋ ಪ್ರಶ್ನೆ. ಪರ್ಯಾಯ ವ್ಯವಸ್ಥೆ/ಮಾರ್ಗ ಕಂಡುಕೊಳ್ಳಲು ಸಾಧ್ಯವೇ?

ಈವತ್ತಿನ ಸುದ್ದಿ ಓದಿದ್ರಾ? ನಮ್ಮ ದೇಶ 73,050 ದಶಲಕ್ಷ ಯುನಿಟ್ ಗಳಷ್ಟು ವಿದ್ಯುತ್ ಕೊರತೆಯನ್ನ ಎದುರಿಸುತ್ತಿದೆಯಂತೆ! ಮುಂದಾಗೋ ಅನಾಹುತವನ್ನ ತಪ್ಪಿಸೋ ಮಾರ್ಗೋಪಾಯಗಳನ್ನ ಪ್ರಜ್ಞಾವಂತರಾದ ನಾಗರಿಕರೆಲ್ಲ ಯೋಚಿಸ್ಬೇಕಲ್ವೆ? ನೀರಿನ ಕೊರತೆ, ಆಹಾರದ ಕೊರತೆ, ವಿದ್ಯುತ್ ಕೊರತೆ. ಹಣದುಬ್ಬರ, ಗಗನಕ್ಕೆ ಏರ್ತಿರೋ ಬೆಲೆಗಳು, ಜನಸಂಖ್ಯಾ ಸ್ಪೋಟ, ಭಯೋತ್ಪಾದನೆ....ಇವೆಲ್ಲದರಿಂದ ಯಾವಾಗ ನಮ್ಗೆ ಮುಕ್ತಿ?

ನಿಜವಾದ ನರಕ ಇದೇನೇ!

ಸಿರಿಗನ್ನಡಂ ಗೆಲ್ಗೆ

ನಿಮಗೆ ಎಲ್ಲವೂ ಒಳ್ಳೆಯದಾಗಲಿ.

ವಿಶ್ವಾಸದಿಂದ,
ಶಶಿ