ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನ .
ಪುಣ್ಯಕೋಟಿ ಗೋವಿನ ಕಥೆ ನಮಗೆಲ್ಲ ಮಕ್ಕಳ ಕಥೆಯಾಗಿ ಗೊತ್ತು. ನಮ್ಮೆಲ್ಲರ ಮೆಚ್ಚಿನದೂ ಆಗಿದೆ. ಆದರೆ ಅದಕೆ ಹೆಚ್ಚಿನ ಅರ್ಥಗಳು ಇವೆಯೇ ?
ಶ್ರೀ ಪಿ. ಲಂಕೇಶರು ತಮ್ಮ ಗದ್ಯ ಬರವಣಿಗೆಯ ಮೂಲಕ ಕನ್ನದ ಗದ್ಯವನ್ನೂ ಇಷ್ಟು ಚೆನ್ನಗಿ ಬರೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅವರು ಪುಣ್ಯಕೋಟಿ ಕಥೆಯ ಬಗ್ಗೆ ಏನು ಹೇಳಿದ್ದಾರೆ ? ಇದು ಕನ್ನಡಿಗರೆಲ್ಲರೂ ಓದಲೇಬೇಕಾದ ವಿಷಯವಾಗಿದೆ.
ಹಿಂದೊಮ್ಮೆ ಪುಣ್ಯಕೋಟಿಯ ಕಥೆ ಬಗ್ಗೆ ಶ್ರೀ ಕೆ.ವಿ.ಸುಬ್ಬಣ್ಣ ಅವರು ಬರೆದ ಒಂದು ಲೇಖನದ ಸಂಗ್ರಹವನ್ನು ಇತರ ಸಹೃದಯೀ ಓದುಗರಿಗಾಗಿ ಹಾಕಿದ್ದೆ. ಶ್ರೀ ಪಿ ಲಂಕೇಶ್ ಅವರೂ ಈ ಬಗ್ಗೆ ಬರೆದಿದ್ದಾರೆ.
ಪುಣ್ಯಕೋಟಿ ಎಂಬ ಹೆಣ್ಣೂ ಮಗಳು ಅರ್ಬುದ ಎಂಬ ದುಷ್ಟನ ಎದುರು ನಿಂತು 'ಈ ದೇಹವನ್ನು ನೀನು ಭಕ್ಷಿಸು ' ಎಂದದ್ದು ಒಂದು ನಾಟಕೀಯ ಚಿತ್ರ . ಅದು ವಿಚಿತ್ರ ಅರ್ಥಗಳಿಂದ ಕೂಡಿದ ದೃಶ್ಯ .
ಸಾವಿಗೆ ಅರ್ಥ ತರುವದು ಎಲ್ಲ ಸಜ್ಜನರು ಮಾಡಿದ ಕೆಲಸ . ಕ್ರಿಸ್ತನ ರಕ್ತದಿಂದ ಅವನ ದೇಶದ ರಕ್ತದಾಹ ಕೊಂಚ ಕಡಿಮೆಯಾಯಿತು . ಗಾಂಧಿಯ ರಕ್ತದಿಂದ ಮನುಷ್ಯನಾಳದ ಕ್ರೌರ್ಯ ಸ್ವಲ್ಪ ಕಾಲವಾದರೂ ತಣ್ಣಗಾಯಿತು.
ಆದರೆ ಈ ಸಜ್ಜನಿಕೆ , ನನ್ನ ದೇಹವನ್ನು , ಪ್ರಾಣವನ್ನು ಬೇಕಾದರೆ ಪಡೆದುಕೋ ಎಂದು ಹೇಳುವ ವ್ಯಕ್ತಿಯ ಶಕ್ತಿಯ ಮೂಲ ಯಾವುದು ? ಈ ಪ್ರಾಣದ ಅರ್ಪಣೆಯಿಂದ ಕ್ರೂರಿಯಾದ ಎದುರಾಳಿಯಲ್ಲಿ ಉತ್ತಮಿಕೆ ಮೂಡಲು ಕಾರಣ ಏನು ?
ನಾನು ಚರ್ಚಿಸಲಿರುವ ನಮ್ಮ ಜನಜೀವನದ ಅಂಗವಾಗಿ ಹೋಗಿರುವ ಒಂದು ಪದ್ಯ ಮಕ್ಕಳು ಓದಲೇಬೇಕಾದ ಪದ್ಯವೆಂದು , ಹಿರಿಯರು ಧ್ಯಾನಿಸಲೇಬೇಕಾದ ಪದ್ಯವೆಂದು ನಾನು ತಿಳಿದಿದ್ದೇನೆ. ಆದ್ದರಿಂದಲೇ ಸಾತ್ವಿಕ ವ್ಯಕ್ತಿಗಳ ತ್ಯಾಗಕ್ಕೆ ಇರಬಹುದಾದ ಸ್ಫೂರ್ತಿಗಳತ್ತ ನಿಮ್ಮ ಗಮನ ಸೆಳೆಯುತ್ತೇನೆ.
ಅರುಣಾದ್ರಿಯಲ್ಲೊಂದು ದಟ್ಟ ಕಾಡು , ಅಲ್ಲಿ ತೇಗ, ಹೂನ್ನೆ, ಬನ್ನಿ, ಪಾದ್ರಿ ಮರಗಳೆಲ್ಲ ಇವೆ . ನಾಗಸಂಪಿಗೆ , ಮಾವು , ನೇರಲಗಳಿವೆ . ಮೊಲ್ಲೆ ಮಲ್ಲಿಗೆ , ಮುಗುಳು ಸಂಪಿಗೆ , ಚೆಲ್ವ ಜಾಜಿ ಕೂಡ ಇವೆ. ಇನ್ನು ಪ್ರಾಣಿಗಳು ? ವರಾಹ , ಶಾರ್ದೂಲ , ಸಿಂಹ , ಕರಡಿ, ಕಾಡೆಮ್ಮೆ ಎಲ್ಲ ಇವೆ . ಜತೆಗೆ ಬೆಕ್ಕು , ಜಂಬೂಕ , ಹುಲಿ , ಗಿಳಿ , ಕಾಡು ಕೋಳಿ , ರಣ ಹದ್ದುಗಳೂ ಇವೆ . ಪಂಚವರ್ಣದ ಪಾರಿವಾಳ , ಸಂಚಿನೊಳು ಬರುವ ಕಿರುಬ , ಹೊಂಚಿ ಕಾಯುವ ಚಿರತೆ ಕೂಡ ಇವೆ.
ಇಲ್ಲಿರುವ ಗೊಲ್ಲ ಕಾಳಿಂಗ , ಅವನ ಆಕಳುಗಳಲ್ಲಿ ಒಂದು ಹಸು ಪುಣ್ಯಕೋಟಿ, ಆ ಕಾಡಿನಲ್ಲಿರುವ ಪ್ರ್‍ಆಣಿಗಳಲ್ಲಿ ಒಂದು ಮುಖ್ಯ ಪ್ರಾಣಿ ಅರ್ಬುದ ಎಂಬ ಹುಲಿ.
ಇದು 'ಗೋವಿನ ಹಾಡು' ಎಂಬುದು ನಿಮಗೆ ಈಗಾಗಲೇ ಗೊತ್ತಾಗಿರಬೇಕು. ನಾವು ಚಿಕ್ಕವರಿದ್ದಾಗ ನಮ್ಮ ಪಠ್ಯವಾಗಿದ್ದ ಇದನ್ನು ಮೊನ್ನೆ ಇದನ್ನು ಮತ್ತೆ ಓದಲು ಕೈಗೆತ್ತಿಕೊಂಡೆ . ಪದ್ಯ ಶುರುವಾದೊಡನೆ ನಮ್ಮನ್ನು ಖುಷಿಯಿಂದ ಬೆಚ್ಚಿಬೀಳಿಸುವದು ಅದರ ಅಚ್ಚಗನ್ನಡ ಪದಗಳು ಮತ್ತು ಸರಳ ಸುಂದರ ಪದ್ಯ ರಚನೆ .
ಇದೊಂದು ಅತ್ತ್ಯುತ್ತಮ ಕವನ. ಇದನ್ನು ಓದಿ ಮುಗಿಸುತ್ತಿದ್ದಂತೆ ಕಂಬನಿ ಸುರಿಯತೊಡಗುತ್ತದೆ. ಕನ್ನಡ ನುಡಿಗಟ್ಟಿನ ಚೆಂದದಿಂದ, ಕಿವಿಯಲ್ಲಿ ಇಂಗದ ಅನುರಣನದಿಂದ , ಇದೊಂದು ಸರಳ ಸುಂದರ ಕತೆಯಾದ್ದರಿಂದ . ಗೊಲ್ಲ ಕಾಳಿಂಗ ಮತ್ತು ಪುಣ್ಯಕೋಟಿಯ ಲೋಕ ಸ್ವಯಂಪೂರ್ಣವಾದದ್ದು. ಹಸಿರಿನ ತೊಟ್ಟಿಲಂತಿರುವ ಇಲ್ಲಿ ಮನುಷ್ಯ , ಹಸು , ಹುಲಿಯ ವೃತ್ತಾಂತವಿದೆ. ಕಾಳಿಂಗ ಮನುಷ್ಯನಂತೆ ವರ್ತಿಸುವಂತೆಯೇ ಪುಣ್ಯಕೋಟಿ ತನ್ನ ಸಾಧುಸ್ವಭಾವದಿಂದ , ಪರೋಪಕಾರೀ ಗುಣದಿಂಡ ಅಪ್ಪಟ ಹಸುವಿನಂತೆಯೇ ಇದೆ. ವ್ಯಾಘ್ರ ಅರ್ಬುದ ಕೂಡ ತನ್ನ ಭೀಕರತೆ , ಕ್ರೌರ್ಯದಿಂದ ಹುಲಿಯಂತೆಯೇ ಇದೆ. ಹಸು ಸಾಧುವಾಗಿರುವದು , ಹುಲಿ ಮಾಂಸ ತಿನ್ನುವದು , ಗೊಲ್ಲ ಹಾಲು ಪಡೆಯುವದು ಎಲ್ಲವೂ ಜೀವಿಯ ಧರ್ಮಕ್ಕೆ ತಕ್ಕುದಾಗಿಯೇ ಇದೆ. ಆದರೆ ಈ ಸರಳಕತೆ ಮಹೋನ್ನತ ಮೌಲ್ಯವೊಂದನ್ನು ಮಂಡಿಸುತ್ತದೆ . ಪುಣ್ಯಕೋಟಿ ಕೊಟ್ಟ ಮಾತಿಗೆ ತಪ್ಪಲಾರಳು; ತನ್ನ ನಂಬಿಕೆಯ ವಿರುದ್ಧ ನಡೆಯಲಾರಳು ; ಅದು ಆಕೆಗೆ ಜೀವದಷ್ಟೇ ಮುಖ್ಯ . ಈ ದೇಹ ಎಷ್ಟು ದಿನ ಇರುತ್ತದೆ ? ತನ್ನ ಈ ನಶ್ವರ ದೇಹವನ್ನು ಉಳಿಸಿಕೊಳ್ಳಲು ದೇಹವನ್ನು ಮೀರಿದ ಮೌಲ್ಯವನು ಬಲಿಕೊಡುವದೆ? ಎಲ್ಲ ಜೀವಿಗಳು ಇರುವದು ಅನ್ನ ಬಟ್ಟೆಯಿಂದ ಮಾತ್ರವಲ್ಲ , ತಮ್ಮ ಮೌಲ್ಯಗಳನ್ನು ಒಳಗೊಂಡ ಆತ್ಮಗೌರವದಿಂದ .
ಪ್ರಾಣಿಗಳ ಈ ಕತೆ ಎಲ್ಲ ಜೀವಿಗಳ ಬಗ್ಗೆ ಕೂಡ, ಮನುಷ್ಯರಿಗೂ ಅನ್ವಯವಾಗುವ ರೂಪಕ . ಈ ಬದುಕಿನಲ್ಲಿ ಸಾಧು ಪ್ರಾಣಿಗೆ ಹುಲಿಗೆ ಇರುವ ಹಲ್ಲು , ಉಗುರು , ಶಕ್ತಿ ಇಲ್ಲದಿರಬಹುದು . ಆದರೆ ಪ್ರ್‍ಆಣವನ್ನು ಲೆಕ್ಕಿಸದ ಧೈರ್ಯ , ಪ್ರೀತಿ, ಛಲ ಇವೆ. ಹಸುವಿನಂಥ ವ್ಯಕ್ತಿ ದುರ್ಬಲನಾಗಿ ಕಾಣಿಸಬಹುದು. ಆದರೆ ಕಲ್ಲನ್ನು ಕರಗಿಸಬಲ್ಲ ಮೌಲ್ಯ ಅವನಲ್ಲಿದೆ. ಹಾಗೆಯೇ ವ್ಯಾಘ್ರ ತನ್ನ ಸ್ವಧರ್ಮವಾದ ಹಿಂಸೆ , ಕ್ರೌರ್ಯ ಪಡೆದಿರಬಹುದು . ಅದರೆ ಆತ ಕೂಡ ಬದುಕಿರುವದು ತನ್ನ ಘನತೆಯಿಂದ , ಹಸಿವನ್ನು ಮೀರಿದ ಸ್ವವಿಮರ್ಶೆಯಿಂದ , ಪುಣ್ಯಕೋಟಿಯಲ್ಲಿ ತನ್ನ ಅಕ್ಕನನ್ನು ಕಾಣಬಲ್ಲ ಬೆಚ್ಚನೆಯ ಹೃದಯದಿಂದ.
ತನ್ನ ಹೆಸರು ಕೂಡ ಪದ್ಯದ ಕೊನೆಯಲ್ಲಿ ಗೀಚದೆ ಹೊರಟುಹೋದ ಅನಾಮಿಕ ಕವಿಯ ಕವನ ಇದು.
ಪುಣ್ಯಕೋಟಿಗೆ , ಪುಣ್ಯಕೋಟಿಯಂಥ ಮನುಷ್ಯರಿಗೆ ಆತ್ಮಗೌರವದ , ಪ್ರ್‍ಈತಿಯನ್ನೊಳಗೊಂಡ ಬದುಕು ಸಾಧ್ಯವಾಗುವದು ದೇವರಲ್ಲಿನ ನಂಬಿಕೆಯಿಂದಲೇ ? ಅಥವಾ ಇಲ್ಲಿಯ ಪರಮಾತ್ಮ ಕೇವಲ ನೈತಿಕತೆಯ ಮಾರ್ಗದರ್ಶಿಯೆ? ಈ ಗೋವು ಯಾರಿಗೂ ಕೆಟ್ಟದ್ದನ್ನು ಬಯಸಿದ ಪ್ರಾಣಿಯೆಲ್ಲ . ಮೃಗ ಜಗತ್ತಿನಲ್ಲಿಯೇ ಅತ್ಯಂತ ಸಾಧು ಪ್ರಾಣಿಯಾದ , ಸಹನೆ , ಪ್ರೀತಿ ತುಂಬಿದ , ಎಲ್ಲರಿಗೂ ಒಳ್ಳೆಯದನ್ನೇ ಬಯಸುವ , ನೀಡುವ ಪ್ರಾಣಿ ಹಸು. ಅದರ 'ದೇವರು ' ಪೂಜೆಯಲ್ಲ , ಮೂಢನಂಬಿಕೆಯಲ್ಲ. ಅಕಸ್ಮಾತ್ತಾಗಿಯೋ , ಉದ್ದೇಶಪೂರ್ವಕವಾಗಿಯೋ ಸೃಷ್ಟಿಯಾಗಿರುವ ಈ ಜಗತ್ತಿನಲ್ಲಿ ತನ್ನ ಪಾತ್ರವನ್ನು ನಿಸರ್ಗದ ನಿಯಮಕ್ಕೆ ತಕ್ಕಂತೆ ನಿರ್ವಹಿಸುವ , ಈ ನಿಸರ್ಗದ ನಿಯಮಕ್ಕೆ ತಲೆಬಾಗುವ ಗೋವಿನ ದೇವರು ಅದರ ಒಳ್ಳೆಯತನ. ಮಕ್ಕಳು ಇದನ್ನು ಕಲಿಯಬಹುದಾದರೆ ದೊಡ್ಡವರು ಈ ದೇವರ ಇನ್ನೊಂದು ಅರ್ಥವಾದ ನೈತಿಕತೆ , ಪರಿಶುದ್ಧ ಜೀವನ , ಆತ್ಮಗೌರವದ ಬದುಕಿನ ಅಗತ್ಯವನ್ನು ಮನಗಾಣಬಹುದು.
ಈ ಕವನವನ್ನು ನಾನು ಹುಡುಕಿ ಮತ್ತೆ ಓದಲು ಮುಖ್ಯ ಕಾರಣ ಇದು ಹಲವು ಅನಿಸಿಕೆಗಳನ್ನು ಕೆರಳಿಸಬಲ್ಲ ಕವನವೆನ್ನುವದು . 'ಗೋವಿನ ಹಾಡು' ಮಕ್ಕಳು ಓದಲೇಬೇಕಾದ ಪದ್ಯ .
--ಇದು ಪಿ ಲಂಕೇಶರ 'ಟೀಕೆ ಟಿಪ್ಪಣಿ'ಯಲ್ಲಿ ಇರುವ ಒಂದು ಲೇಖನದ ಸಾರ . ಅವರ ಗದ್ಯದ ಶೈಲಿ ಬಹಳ ಸುಂದರ . ಅವರ ಇತರ ಬರಹಗಳನು ಓದಿ ನೀವೂ ಆನಂದಿಸಿರಿ.

- shreekant.mishrikoti ರವರ ಬ್ಲಾಗ್
- Login or register to post comments
- 639 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಪುಣ್ಯಕೋಟಿಯನ್ನು ಶೋಷಕರ ಪ್ರತಿನಿಧಿ ?
ಗೋವಿನ ಹಾಡಿನ ಬಗ್ಗೆ ಛಂದ ಪ್ರಕಾಶನದ "ಜಾನಕಿ ಕಾಲಮ್" ನಲ್ಲಿರುವ "ಹಾರಿ ಪ್ರಾಣವ ಬಿಟ್ಟಿತು" ಲೇಖನ ಓದಿ.
ಪುಣ್ಯಕೋಟಿಯನ್ನು ಶೋಷಕರ ಪ್ರತಿನಿಧಿಯನ್ನಾಗಿ, ಹುಲಿಯನ್ನು ಶೋಷಿತರ ಪ್ರತಿನಿಧಿಯನ್ನಾಗಿ ಬಿಂಬಿಸಿದ ಒಂದು ವಿವರಣೆ ಅಲ್ಲಿದೆ.
ಉ: ಪುಣ್ಯಕೋಟಿಯನ್ನು ಶೋಷಕರ ಪ್ರತಿನಿಧಿ ?
ಈ ಪುಸ್ತಕ ಈಗ ಸಿಕ್ಕು , ಓದಿದೆ .
ಈ ಬಗ್ಗೆ ಇಲ್ಲಿ ಬರೆದಿದ್ದೇನೆ .
http://sampada.net/blog/shreekantmishrikoti/15/01/2008/7056
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: 'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನ .
ಅರೆರೆ, ಎಂತಹ ಒಳ್ಳೆಯ ಲೇಖನವಿದು, ಕಣ್ತಪ್ಪಿ ಉಳಿದುಬಿಟ್ಟಿತ್ತಲ್ಲ!
ನನಗೆ ಲಂಕೇಶರ ಲೇಖನದ ಶೈಲಿಯು ಇಷ್ಟವಾಗುವ ಸಂಗತಿ. ಇವರ ಬಗ್ಗೆ ಪೂರ್ವಾಗ್ರಹವೇನೂ ಇಲ್ಲವಾದರೂ ಕೆಲವು ಸಲ ಇತರರು ಒಳ್ಳೆಯದು ಅಂದುಕೊಂಡ ವಿಷಯವೂ ಇವರಿಗೆ ಟೀಕೆಯ ನೆಪವಾಗುತ್ತಿತ್ತೋನೋ ಅನ್ನಿಸಿದೆ. ಆದರೆ ಈ ಲೇಖನ ತುಂಬಾ ಸೊಗಸಾಗಿದೆ.
ಹಸುವೊಂದನ್ನು ಕರುವಿನೊಟ್ಟಿಗೇ ಸಾಕಬೇಕೆನ್ನುವುದು ನನ್ನ ಅತ್ಯಂತ ಹಳೆಯ ಆಸೆ. ದಿಲ್ಲಿಯಲ್ಲಿ ನಾನಿರುವ ಸಂಸ್ಥೆಯು ಇದನ್ನು ಮಾಡಲೇಬೇಕು ಆದರೆ ಇಲ್ಲಿನ ಕಾನೂನುಗಳು ಹಸುವನ್ನು ಸಾಕಲು ಬಿಡಲಾರವು, ಹುಲಿಯನ್ನು ಸಾಕಲು ಯಾರಿಗೂ ಸಾಧ್ಯವೇ ಇಲ್ಲವಾದ ಕಾರಣ ಅದೇ ಗಾತ್ರದ ನಾಯಿಗಳನ್ನು ಸಾಕಿಕೊಂಡಿದ್ದಾರೆ (ಅವುಗಳು ಗಜಗಾತ್ರದ ತಮ್ಮ ಒಡೆಯರೊಂದಿಗೆ ಸುತ್ತಾಡುವುದನ್ನು ನೋಡಿಯೇ ಇದ್ದೀರಲ್ಲ ನೀವು) ಇದಕ್ಕೆ ಕಾನೂನು ಸಹಕಾರ ನೀಡಿದೆ. ಅದಕ್ಕೇ ನಾನು ವಾಪಸ್ಸು ನನ್ನ ಹೊಲಗಳೆಡೆಗೆ ಹೋಗಿಬಿಡಬೇಕೆಂದು ನಿರ್ಧರಿಸಿದ್ದೇನೆ!
ಹಲವಾರು ಬಾರಿ ಓದಬೇಕೆನಿಸುವ ಹಾಗಿದೆ, ಹಸು ಹಾಗು ಹುಲಿಯ ಮನೋಧರ್ಮ ವಿಶ್ಲೇಷಣೆ.
ಎನಗಿಂತ ಕಿರಿಯರಿಲ್ಲ