ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನ್ನಡ ಬರಹವನ್ನು ಸರಿಪಡಿಸೋಣ - ಶಂಕರಭಟ್ಟರ ಪುಸ್ತಕ

ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ , ಕನ್ನಡ ಪದರಚನೆ , ಕನ್ನಡ ವಾಕ್ಯರಚನೆ ಈ ಪುಸ್ತಕಗಳನ್ನು ಹಿಂದೊಮ್ಮೆ ಓದಿದ್ದೆ . ( ಈ ಪುಸ್ತಕಗಳನ್ನು ನನ್ನ ಕಯ್ಯಲ್ಲಿ ನೋಡಿದವರು 'ಸರ್ , ನೀವು ಪ್ರೊಫೆಸರ್ರಾ?' ಅಂತ ಕೇಳಿದರು! ' ಅಲ್ಲ ' ಅಂದಾಗ ' ಪಿ ಎಚ್ ಡಿ ಮಾಡ್ತಿದ್ದೀರಾ ? ' ಅಂದ್ರು . ಅದಕ್ಕೂ ಅಲ್ಲ ಎಂದಾಗ ಸುಮ್ಮನಾದರು ! ಏನು ಯೋಚಿಸಿದರೋ ಗೊತ್ತಿಲ್ಲ !)

ಇರಲಿ.'ಕನ್ನಡ ಬರಹವನ್ನು ಸರಿಪಡಿಸೋಣ ' ಈ ಪುಸ್ತಕ ಕೊಂಡು ಓದಿದೆ.
ಅವರು ಹೇಳುವದು ಸರಿ ಎನ್ನಿಸುತ್ತದೆ.
೧. ಸಂಸ್ಕೃತದ ವ್ಯಾಕರಣ ಕನ್ನಡಕ್ಕೆ ಬೇಡ
೨. ಐ , ಔ , ಋ ಮುಂತಾದವನ್ನು ಕೈಬಿಡಬೇಕು .ಶ , ಷ ಉಚ್ಚಾರ ಒಂದೇ ಇರುವದರಿಂದ ಷ ಕೈಬಿಡಬೇಕು .
೩. ಮಹಾಪ್ರಾಣ ಅಕ್ಷರಗಳು ಬೇಡ .
೩. ಉಚ್ಚರಣೆಯಂತೆ ಶಬ್ದಗಳನ್ನು ಬರೆಯಬೇಕು.
೪. ಸಂಸ್ಕೃತದ ಸ್ಪೆಲ್ಲಿಂಗ್ ಬಳಸಿ ( ಸಂಸ್ಕೃತ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ಸಂಸ್ಕೃತದಲ್ಲಿಯಂತೆ ಬರೆಯಬೇಕು ಎಂಬ ಒತ್ತಾಯದಿಂದ) ಜನರನ್ನು ಕನ್ನಡ ಕಲಿಕೆಯಿಂದ ದೂರ ಮಾಡುತ್ತಿದ್ದೇವೆ.
೫. ಹೊಸ ಕನ್ನಡ ಶಬ್ದ ರಚಿಸುವಾಗ ಸಂಸ್ಕೃತದ ಮೊರೆ ಹೋಗುವ ಬದಲು ಹಳಗನ್ನಡದತ್ತ ನೋಡಬೇಕು.

ಅವರು ಹೇಳುವದು ಸರಿ ಎನ್ನಿಸುತ್ತದೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

Re: ಕನ್ನಡ ಬರಹವನ್ನು ಸರಿಪಡಿಸೋಣ - ಶಂಕರಭಟ್ಟರ ಪುಸ್ತಕ

ಕರಿ ತವಳೆ's picture

ಕನ್ನಡ ಮೂಲದ ಹಲವು ಪದಗಳು 'ಐ' ಸ್ವರವನ್ನು ಬಳಸುತ್ತವೆ ಎಂದನಿಸುತ್ತದೆ. ನನ್ನ ಬಳಿ ಈಗ ನಿಘಂಟಿಲ್ಲ. ಸದ್ಯಕ್ಕೆ ಕೆಲ ಪದಗಳು ನನ್ನ ನೆನಪಿಗೆ ಬರಿತ್ತಿವೆ.
೧. ಮೈ (ದೇಹ)
೨. ಕೈ (hand)
೩. ಬೈಗಳು
೪. ಸೈ (ಪ್ರಶಂಸೆ)
೫. ಐದು.

ಅಚ್ಚಗನ್ನಡದಲ್ಲಿ ಮಹಾಪ್ರಾಣವಿಲ್ಲದಿದ್ದರೂ, ಹೊಸ ಕನ್ನಡದಲ್ಲಿ ಕೊಂಚ ಮಟ್ಟಿಗೆ ಮಹಾಪ್ರಾಣದ ಬಳಕೆಯನ್ನು ಕಾಣಬಹುದು.
೧. ಠೀವಿ
೨. ಠರಾವು.
೩. ಖಾರ (ಮೂಲವಾಗಿ 'ಕಾರ')

ಮಹಾಪ್ರಾಣವೇಕೆ ಬೇಕು ಕನ್ನಡವೇನು ಖನ್ನಢವೇ?

mahesha's picture

೧. ಠೀವಿ
೨. ಠರಾವು.
೩. ಖಾರ (ಮೂಲವಾಗಿ 'ಕಾರ')

ಇವು ಮೂರು ಮರಾಟಿ ಎರವಲು :)

ಕನ್ನಡದಲ್ಲಿ
ಹಠ ಹಟ ಆಗಿಲ್ಲವೇ
ಕಥೆ ಕತೆ ಆಗಿಲ್ಲವೇ

ಹಾಗೆ ಮಹಾಪ್ರಾಣ ಆಡದಿದ್ದರೆ ನಮ್ಮ ಪ್ರಾಣವೇನೂ ಹೋಗಲ್ಲ :)

ಅಲ್ಲದೆ ಅಚ್ಚಗನ್ನಡದ ಒಂದು ಪದದಲ್ಲೂ ಮಹಾಪ್ರಾಣವಿಲ್ಲ...

ಇದರ ಬಗ್ಗೆ ಹುರುಪಿರುವವರು ಬಿ.ಎಂ.ಶ್ರೀ ಅವರ ೨೭ ಅಕ್ಕರದ ವರ್ಣಮಾಲೆ ಕುರಿತೋದಬೇಕು.

Re: ಮಹಾಪ್ರಾಣವೇಕೆ ಬೇಕು ಕನ್ನಡವೇನು ಖನ್ನಢವೇ?

hamsanandi's picture

 

Quote:

೧. ಠೀವಿ
೩. ಖಾರ (ಮೂಲವಾಗಿ 'ಕಾರ')

ಇವು ಮೂರು ಮರಾಟಿ ಎರವಲು Smiling

ಈ ಪದಗಳು ಮರಾಠಿಯಿಂದ ಎನ್ನುವುದಕ್ಕಿಂತ ಪ್ರಾಕೃತದಿಂದ ಎನ್ನಬಹುದು.  ಖಾರವಂತೂ ಸಂಸ್ಕೃತದ ಕ್ಷಾರದಿಂದ ಎಂದುಕೊಂಡಿದ್ದೇನೆ.

-ಹಂಸಾನಂದಿ

ಮೈ ಕೈ ಐ ಐ,

mahesha's picture

ಕರಿ ತವಳೆಯವರೇ,

ಶಬ್ದಮಣಿದರ್ಪಣದಲ್ಲೂ ಇದರ ಬಗ್ಗೆ ಹೇಳಿದೆ.

ಮೈ ಅಂತ ಬರೆದರೂ ಅದರ ಉಲಿ ಮಯ್ ಎಂದೇ

ಅಲ್ಲದೆ ಹಳಗನ್ನಡದಲ್ಲಿ ಐ ಮತ್ತು ಔ ಇರಲಿಲ್ಲವಂತೆ. ಇವು ತರುವಾಯ ಸೇರಿಕೊಂಡವು.

ಇವು ಕೂಡ ಅರೆಕ ಒತ್ತಿನಂತೆ ಎಕ್ಸಟ್ರ, ಯಾವ ಹೆಚ್ಚು ನೆರವಿಲ್ಲ.

ನೀವು ಸಂಸ್ಕೃತದ ವರ್ಣಮಾಲಾರಚನೆಯ ಕುರಿತು ಓದಿರಿ. ಅದರ ರಚನೆ ಹೀಗೆ.

ಅ ಇ ಉ ಇವು ಮೂರು basic vowels

ಅ + ಇ = ಏ ( ಗುಣ )
ಅ + ಏ = ಐ ( ವೃದ್ಧಿ )
ಅ + ಉ = ಓ ( ಗುಣ )
ಅ + ಓ = ಔ ( ವೃದ್ಧಿ )

ಗಮನಿಸಿ

ಅ ಆ ಇ ಈ ಉ ಊ ಋ ೠ ( short and long of basic vowels )
ಏ ಐ
ಓ ಔ

ಸಂಸ್ಕೃತದ ಈ ಬಗೆಯ ಅಕ್ಕರ ಓಜೆಗೆ ಅದರ ಸಂಧಿ ನಿಯಮಗಳೇ ಕಾರಣ. ಹೆಚ್ಚು ಬೇಕಾದರೆ ಅಲ್ಲಿ ನೋಡಿರಿ.
http://en.wikipedia.org/wiki/Shiva_Sutra

ಆದರೆ ಕನ್ನಡದ ಸಂದಿನಿಯಮಗಳು ಸಂಸ್ಕ್ರುತಕ್ಕಿಂತ ಬೇರೆ ಬೇರೆ.

ಅದಕ್ಕೆ ಕನ್ನಡದ ಈಗಿನ ವರ್ಣಮಾಲೆಯ ಓಜೆ ಕನ್ನಡಕ್ಕೆ ಹೊಂದದು.

ಅದಕ್ಕೆ ಆ ಬುಕ್ಕಿನಲ್ಲಿ ಕನ್ನಡಕ್ಕೆ ಬೇರೆಯದೇ ಆದ ಅಕ್ಕರಗಳ ಓಜೆ( arrangement of alphabets ) ಕೊಟ್ಟಿದ್ದಾರೆ.

ಕನ್ನಡ/ಸಂಸ್ಕೃತ ಎರಡು ಬಾಸೆಗಳ ಅಕ್ಕರಪಟ್ಟಿಯ ರಚನೆ, ಗ್ರಾಮರ್‍ ಗುಟ್ಟು ತಿಳಿಯಲು ತುದಿಗಾಲಿನಲ್ಲಿ ನಿಂತವರು ಆ ಹೊತ್ತಗೆಯನ್ನು ಓದಲೇ ಬೇಕು.

ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಶಂಕರ ಬಟ್ಟರ ’ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ’ ಹೊತ್ತಗೆ ಕನ್ನಡ ನುಡಿಯನ್ನು ಸುಮ್ಮನೆ ಸಂಪ್ರದಾಯದಂತೆ ಸಂಸ್ಕೃತ ಗ್ರಾಮರ್‍ ನೋಟದಿಂದ ನೋಡದೇ, ಬೇರೆಯಾದ ಲಾಜಿಕಲ್ ನೋಟವಿದೆ.

ಅವರ ವರ್ಣಮಾಲೆಯ ಓಜೆ(arrangement) ಬಹಳ ಚೆನ್ನಾಗಿದೆ.

ಕನ್ನಡಕ್ಕೆ

ಋ, ೠ, ಅಃ, ೧೦ ಮಹಾಪ್ರಾಣ, ಞ, ಙ, ಷ, ಬೇಕಾಗಿ ಇಲ್ಲ. ಸುಮ್ಮನೆ ಇದೊಂದು ಮಾಮೂಲಿ ಕನ್ನಡಿಗರಿಗೆ ಹೊರೆ.

ನನ್ನ ಅನಿಸಿಕೆಯಂತೆ ಸರಕಾರ ಎರಡು ವರ್ಣಮಾಲೆ ಮಾಡಲಿ.

೧) ನಮ್ಮಂತಪ್ಪ ಮಾಮೂಲಿ ಹಳ್ಳಿ ಮುಕ್ಕರಿಗೆ.
ಹೀಗೆ
ಅ ಆ ಇ ಈ ಉ ಊ ಎ ಏ ಒ ಓ ಅಂ ( ಐ = ಅಯ್, ಓ= ಅವ್ )

ಕ ಗ ಚ ಜ ಟ ಡ ಣ ತ ದ ನ ಪ ಬ ಮ

ಯ ರ ಲ ವ ಶ? ಹ ಳ

ಒಟ್ಟು ೩೦/೩೧

೨) ಪಂಡಿತರ ವರ್ಣಮಾಲೆ
ಹೀಗೆ
ಅ ಆ ಇ ಈ ಉ ಊ ಋ ೠ ಲೃ ಲೄ ಎ ಏ ಐ ಒ ಓ ಔ ಅಂ ಅಃ

ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ ಱ ೞ Fa Za ಇನ್ನು ಇದ್ದರೆ ಅವು..

ಒಟ್ಟು ೫೩ಕ್ಕಿಂತ ಜಾಸ್ತಿ

ಮಾಮೂಲಿ ಜನ ಮಾಮೂಲಿ ವರ್ಣಮಾಲೆ ಬಳಸಿಕೊಳ್ಳಲಿ,
ಪಂಡಿತರು ಪಂಡಿತ ವರ್ಣಮಾಲೆ ಉಪಯೋಗಿಸಿಕೊಳ್ಳಲಿ.

ಸುಮ್ಮನೆ ಎಲ್ಲರಿಗೂ ಇಸ್ಟು ದೊಡ್ಡ ಅಕ್ಕರಮಾಲೆ ಹೊರೆ!

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

kishorpatwardhan's picture

ವರ್ಣಮಾಲೆಯನ್ನು ಸರಕಾರ ರಚಿಸಬೇಕೆ? ಭಾಷೆ ಏನು ಸರಕಾರದ ಸೊತ್ತೇ? ಅದು ನಮ್ಮ ನಿಮ್ಮೆಲ್ಲರ ಸೊತ್ತು. ನಾವು ನೀವು ಉಪಯೋಗಿಸಿ ಭಾಷೆ ಬದಲಾಗುತ್ತಿದ್ದರೆ ಅದು ತಾನಾಗಿಯೇ ಬದಲಾಗಲಿ. ಭಾಷೆಯ ಮೇಲೆ ಬಲಾತ್ಕಾರ ಬೇಡ. ಸಂಸ್ಕೃತ ಶಬ್ದಗಳನ್ನು ಬರೆಯುವಾಗ ಈಗ ಚಾಲ್ತಿಯಲ್ಲಿರುವ ಅಕ್ಷರ ಮಾಲೆ ತುಂಬ ಉಪಯೋಗಿ. ಕನ್ನಡದ ಮೇಲಿನ ಅಭಿಮಾನ ಅತಿಯಾಗಿ ಸಂಸ್ಕೃತದ ಮೇಲಿನ ದ್ವೇಷವಾಗಿ ಬದಲಾಗುವುದು ಬೇಡ. ಸಂಸ್ಕೃತ ಕೂಡ ನಮ್ಮ ಭಾಷೆಯೇ ತಾನೆ? ಕನ್ನಡ ಮಾತ್ರವಲ್ಲ; ಜಗತ್ತಿನ ಅನೇಕ ಭಾಷೆಗಳು ಸಂಸ್ಕೃತದ ಪ್ರಭಾವಕ್ಕೊಳಗಾಗಿರುವುದು ಎಲ್ಲರಿಗೂ ತಿಳಿದಿರುವ ವಿಷಯ. English ಕೂಡ ಇದಕ್ಕೆ ಹೊರತಲ್ಲ. ಹಾಗಾಗಿ ಋ, ೠ, ಮಹಾಪ್ರಾಣ ಇತ್ಯಾದಿಗಳನ್ನು ಕೈಬಿಡುವ ಮೊದಲು ಗಂಭೀರ ಚರ್ಚೆ ಆಗಬೇಕು.

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಸಂಸ್ಕೃತ ನನ್ನ(ನಮ್ಮ) ನುಡಿಯಲ್ಲ!! ನಮ್ಮ ನಡುವೆ ಇರುವ ಕೆಲವರ ನುಡಿಯಿರಬಹುದು, ಉರ್ದು ಹಂಗೆ!!

ಇಂಗ್ಲೀಸು ಹೇಗೂ, ಹಾಗೆ ಸಕ್ಕದವೂ ಹೊರನೆಲದ ನುಡಿಯೇ...

ಅದರ ಹುಟ್ಟು ಬಳೆವಣಿಗೆ ಬಗ್ಗೆ ಓದಿದರೆ, ಅದು ಮತ್ತು ಪಾರಸೀ ಒಂದೇ ನುಡಿಯ ಕವಲು( ಹೇಗೆ ಕನ್ನಡ ಮತ್ತು ತಮಿಳು ನುಡಿಗಳು ಒಂದೇ ನುಡಿಯ ಕವಲುಗಳು ಹಾಗೆ). ಅದು ಈಗಿನ ಅಪಗಾನಿಸ್ತಾನದ ಸುತ್ತು ಪಡುವಣದಲ್ಲಿ ಹುಟ್ಟಿದೆ ಎಂದು ಹಲವರ ಮಾತು ತಿಳಿಯುವುದು.

ಸಂಸ್ಕೃತ ಹಗೆಗೂ ಕನ್ನಡದ ಸರಳಿಕೆಗೂ ಯಾವ ನಂಟು?

ಮಹಾಪ್ರಾಣ ನಮಗೆ ಬೇಡ ಅಂದರೆ ಅವನು ಸಕ್ಕದದ ಹಗೆ ಎಂದರೆ, ಅದು ಬರಿ ಬ್ರಾಂತು, ದಿಗಿಲು!!
ಕನ್ನಡದ ಮೇಲಿನ ಅಬಿಮಾನ ಅತಿಯಾಗುವುದು ಅಂದರೆ? ಕಡಮೆಯಾಗ ಬೇಕೆ?

ಸಕ್ಕದದಿಂದ ಇಂಗ್ಲೀಸಿಗೆ ಒರೆಗಳು ಹೋಗಿಲ್ಲ ಬದಲಿಗೆ, ಸಕ್ಕದಕ್ಕೆ ಗ್ರೀಕು, ಪಾರಸಿ, ದ್ರಾವಿಡದಿಂದ ಒರೆಗಳು ಬಂದಿರುವುವು. ರುಗ್ವೇದದ ಸಕ್ಕದದಲ್ಲಿ ಯಾವ ಯಾವ ನುಡಿಯಿಂದ ಒರೆಗಳು ಬಂದಿವೆ ಎಂದು ಗೂಗಲಲ್ಲಿ ಹುಡುಕಿ ಓದಿದರೆ, ಇಲ್ಲವೇ ಯಾವುದಾದರು ದ್ರಾವಿಡ ನುಡಿಗಳ ಪಂಡಿತರನ್ನು ಕೇಳಿದರೆ ತಿಳಿಯುವುದು.

ವೇದದಲ್ಲಿ ದ್ರಾವಿಡ ನುಡಿಯ ಒರೆಗಳು

ಹರಪ್ಪದ ನುಡಿ

ಸಿಂದು ಲಿಪಿ ಮತ್ತು ವೇದದಲ್ಲಿ ದ್ರಾವಿಡ ಒರೆಗಳು

ನಗರ, ಪಲ್ಲಿ, ಕೊಟ್ಟ, ಪಟ್ಟಣ ಮುಂ. ದ್ರಾವಿಡ ಒರೆಗಳು ವೇದದಲ್ಲಿ

ಪೀನಿಸ್ ಮತ್ತು ದ್ರಾವಿಡ ನುಡಿಗಳ ನಂಡು

ಈ ಕೊಂಡಿಗಳಲ್ಲಿ( ಇನ್ನೂ ಇವೆ, ಹುಡುಕಿ ಓದಬಹುದು), ನಮಗೆ ಬೇಕಿರುವ ಸಂಗತಿ ಸಕ್ಕದಕ್ಕೆ ಹೇಗೆ ಬೇರೆ ನುಡಿಗಳಿಂದ ಒರೆಗಳು ಹೋಗಿವೆ. ಹೇಗೆ ಸಕ್ಕದವೂ ಕನ್ನಡದಂತೆ ಬೇರೆ ಬೇರೆ ನುಡಿಗಳಿಂದ ಒರೆಗಳನ್ನು ಪಡೆದೇ ಬಳೆದಿದೆ ಎಂಬುದು ತಿಳಿಯಾಗುವುದು.

ಬದಲಿಗೆ ಬರಿ ಸಕ್ಕದ ಪಂಡಿತರ ಮಾತನ್ನೇ, ಅವರ ಹೊತ್ತಗೆಯನ್ನೇ, ಅವರ ತಲೆಮಾಸಿಕೆಯನ್ನೇ ನಂಬಿಕೊಂಡು, ಅದನ್ನೇ ಹೇಳುವುದು ಬಾವಿಗಪ್ಪೆಯಂತಾಗುವುದು.

ಸಕ್ಕದವೂ ಎಲ್ಲ ನುಡಿಗಳ ತಾಯಿ, ಇಲ್ಲ ಎಲ್ಲ ನುಡಿಗಳು ಅದರ ನೆರಳಲ್ಲಿ ಬಳದಿದೆ ಎನ್ನುವುದು ಒಂದು ಕುರುಡು ನಂಬಿಕೆ. ಅದನ್ನೇ ಸಾವಿರ ಸಲ ಹೇಳಿದರು ಅದು ದಿಟವಾಗದು.

ತುಸು cadwell, burrow ಮುಂತಾದ ದ್ರಾವಿಡ ನುಡಿಗಳ ಪಂಡಿತರ ಹೊತ್ತಗೆ, ಬರಹವನ್ನು ಓದಿದರೆ ಈ ಸಂಗತಿ ಹೆಚ್ಚು ತಿಳಿಯಾಗುವುದು.!
======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ವೇದದಲ್ಲಿ ದ್ರಾವಿಡ ನುಡಿಯ ಒರೆಗಳು

ಅಲ್ಲಿ ’ನಂಡು’ ನಂಟಾಗಬೇಕಿತ್ತು.

======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

kishorpatwardhan's picture

ಮಹೇಶ್ ಅವರೇ,
ಸಾಕಷ್ಟು ಹೋಮ್ ವರ್ಕ್ ಕೊಟ್ಟಿದ್ದೀರಿ. ಧನ್ಯವಾದಗಳು.

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ನಿಮಗೂ ನನ್ನಿ!
======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಕಿಶೋರರೇ,

ಈ ಎಳೆಯಲ್ಲಿನ ಈ ಕಮೆಂಟನ್ನು ಮತ್ತೆ ನೋಡಿದಾಗ ನಿಮಗೆ ಏನು ಅನ್ನಿಸಿತು... ತಿಳಿಸಿರಿ..

ಹೋಮ್ ವರ್ಕು ಈಗ ಪೂರ್ತಿ ಆಯ್ತು ಅಂತ ನಂಗೆ ಗೊತ್ತು

ನನ್ನಿ! :)

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

kishorpatwardhan's picture

ಮಹೇಶರೇ,
ನನ್ನ ಹೋಂ ವರ್ಕ್ ಪೂರ್ತಿ ಆಗಿದೆ.
ಮತ್ತೆ ಶಂಕರ ಭಟ್ಟರ ಹೊತ್ತಗೆಗಳು ನನಗೆ ಒಪ್ಪಿಗೆ ಆಗಿವೆ.
ಇನ್ನೇನು ಬರೆಯಲಿ?

ನನ್ನಿ.

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

Sunil Jayaprakash's picture

ಪರವಾಗಿಲ್ವೇ!!!!! ಬರೋಬ್ಬರಿ ಒಂದು ವರ್ಷಾನೇ ತೊಗೊಂಡಿದ್ದೀರಾ!!!!ಛಲದಂಕಮಲ್ಲ

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ನೀನೇನಿಲ್ಲ.. ನಲಿವು :)

ನನ್ನಿ...!!

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

ವೈಭವ's picture

ನಾನು ಎಲ್ಲೊ ಓದಿರುವಂತೆ ದ್ರಾವಿಡರೂ ಕೂಡ ಅಪ್ಘಾನಿಸ್ತಾನ್ ಮೂಲಕ ಭಾರತಕ್ಕೆ ಬಂದರಂತೆ. ಅದಕ್ಕೆ ಕುರುಹಾಗಿ ಇಂದಿಗೂ
ಅಲ್ಲಿನ( ಅರಬ್ ಮತ್ತು ಅದರ ಕವಲುಗಳು) ನುಡಿಯಲ್ಲಿ ದ್ರಾವಿಡದ ಒರೆಗಳು ಇವೆಯಂತೆ. ಆದರೆ ದ್ರಾವಿಡರು ಆರ್ಯರು ಬರುವ ಮೊದಲೆ ಬಂದರಂತೆ.

ಇದರ ಬಗೆಗಿನ ಲಿಂಕನ್ನು ನನಗೆ ಸಿಕ್ಕಾಗ ಇಲ್ಲಿ ಹಾಕುವೆ.

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಈ ಸಂಗತಿಯ ಕುರಿತು ಬಲು ಗೊಂದಲಗಳು, ಹಲವು ತಿಯರಿಗಳು ಬಂದಿವೆ.

ಆದರೆ ನಾನು ತಿಳಿದುಕೊಂಡಂತೆ.

ಕನ್ನಡಿಗರು ( ದ್ರಾವಿಡ ಒರೆ ಬಳಕೆ ಬೇಡ ) ಇಲ್ಲಿಯವರೇ, ಕನ್ನಡ ನೆಲದವರೆ. ಇದಕ್ಕೆ ಹಲವು ಓಸುಗರಗಳಿವೆ

೧) ಕನ್ನಡ( ದ್ರಾವಿಡ ) ನುಡಿಯಲ್ಲಿ 'ಸಿಂಹ'ಕ್ಕೆ ಒರೆಯಿಲ್ಲ. ಅಂದರೆ ಕನ್ನಡರು ಸಿಂಗವಿಲ್ಲದ ನಾಡಲ್ಲಿ ಇದ್ದವರು. ನಮ್ಮ ಈಗಿನ ತೆಂಕಣ ಬಾರತದ ನೆಲದಲ್ಲಿ ಸಿಂಗಗಳಿಲ್ಲ.
೨) 'ಕುದುರೆ' ( ಕುದರಿಸುಕೊಂಡು ಬಿಲಿಕೊಂಡದ್ದು ) ಇದು ನಮ್ಮ ನೆಲದ್ದಲ್ಲ, ಆದರೆ ಕುದುರೆಗಳಿಗೆ ಪಾರಸೀ, ಪಡು-ಯೇಸಿಯಾದ ನಾಡುಗಳು ಬಲು ಹೆಸರುವಾಸಿ.
೩) ನುಡಿಕೂಟ! ನಮ್ಮ ನುಡಿ, ಪಡುವಣ ಏಸಿಯಾದ ಯಾವ ನುಡಿಗೂ ನಂಟು ತೋರದು.( ಬ್ರಾಹಿ, ಇದನ್ನು ಬಿಡಿ )
೪)

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಈ ಸಂಗತಿಯ ಕುರಿತು ಬಲು ಗೊಂದಲಗಳು, ಹಲವು ತಿಯರಿಗಳು ಬಂದಿವೆ.

ಆದರೆ ನಾನು ತಿಳಿದುಕೊಂಡಂತೆ.

ಕನ್ನಡಿಗರು ( ದ್ರಾವಿಡ ಒರೆ ಬಳಕೆ ಬೇಡ ) ಇಲ್ಲಿಯವರೇ, ಕನ್ನಡ ನೆಲದವರೆ. ಇದಕ್ಕೆ ಹಲವು ಓಸುಗರಗಳಿವೆ

೧) ಕನ್ನಡ( ದ್ರಾವಿಡ ) ನುಡಿಯಲ್ಲಿ 'ಸಿಂಹ'ಕ್ಕೆ ಒರೆಯಿಲ್ಲ. ಅಂದರೆ ಕನ್ನಡರು ಸಿಂಗವಿಲ್ಲದ ನಾಡಲ್ಲಿ ಇದ್ದವರು. ನಮ್ಮ ಈಗಿನ ತೆಂಕಣ ಬಾರತದ ನೆಲದಲ್ಲಿ ಸಿಂಗಗಳಿಲ್ಲ.
೨) 'ಕುದುರೆ' ( ಕುದರಿಸುಕೊಂಡು ಬಿಲಿಕೊಂಡದ್ದು ) ಇದು ನಮ್ಮ ನೆಲದ್ದಲ್ಲ, ಆದರೆ ಕುದುರೆಗಳಿಗೆ ಪಾರಸೀ, ಪಡು-ಯೇಸಿಯಾದ ನಾಡುಗಳು ಬಲು ಹೆಸರುವಾಸಿ.
೩) ನುಡಿಕೂಟ! ನಮ್ಮ ನುಡಿ, ಪಡುವಣ ಏಸಿಯಾದ ಯಾವ ನುಡಿಗೂ ನಂಟು ತೋರದು.( ಬ್ರಾಹಿ, ಇದನ್ನು ಬಿಡಿ )
೪) ಗೋದಿಗೆ ಕನ್ನಡ(ದ್ರಾವಿಡ)ದಲ್ಲಿ ಒರೆಯಿಲ್ಲ. ದ್ರಾವಿಡರು ಗೋದಿ ತಿನ್ನುವವರಲ್ಲ. ಆದುದರಿಂದ ಗೋದಿಯ ಬಳಕೆ ಬೇರೆ ತಳಿಯಿಂದ ಬಂದುದು.

ಹೀಗೆ ಹುಡುಕುತ್ತಾ ಹೋದರೆ, ಕನ್ನಡದವರು ಇಲ್ಲಿಯವರೇ ಎಂದು ತೋರಲೂ ಕೂಡ ಬೇಕಾದನಿತ್ತು ಮಾತುಗಳನ್ನು ಹೇಳಬೋದು.

ಆದರೆ.....
'ಆರ್ಯ'ರು ಅನ್ನುವ ಮಂದಿ ಕುದುರೆಯ ಮೇಲೆ ಬರುವ ಮುನ್ನವೇ ಕನ್ನಡರು('ದ್ರಾವಿಡ') ಈ ನೆಲದಲ್ಲಿ ನೆಲೆಯೂರಿದ್ದರು ಎಂಬುದು, ಹಲವು ಮಂದಿ ಒಪ್ಪುವ ಮಾತು.

ಈ ಎರೆಡು ಬಗೆಯ ತಳಿ(race)ಗಳು ಒಂದೇ ಎಂಬ ಮಾತು ಇದೆ.
.
.
ಆದರೆ ಒಂದೇ ತಳಿಯ ಮಂದಿ ಬೇರೆ ಬೇರೆ ನುಡಿಕೂಟಗಳನ್ನು ಆಡುವುದು, ಹಲವು ಐಬುಗಳಿಗೆ ಎಡೆ ಮಾಡಿರುವುದು.

ಒಟ್ಟಿನಲ್ಲಿ ನಮ್ಮ ದೇಸದಾಗೆ ಐದು ನುಡಿಕೂಟಗಳಿವೆ, ಅವಲ್ಲಿ ಇಂಡೊ-ಯುರೋಪ ಮತ್ತು ದ್ರಾವಿಡ ನುಡಿಕೂಟಗಳು ಹಿರಿಯವು.
===================================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

hamsanandi's picture

Quote:
ಆದರೆ.....
'ಆರ್ಯ'ರು ಅನ್ನುವ ಮಂದಿ ಕುದುರೆಯ ಮೇಲೆ ಬರುವ ಮುನ್ನವೇ ಕನ್ನಡರು('ದ್ರಾವಿಡ') ಈ ನೆಲದಲ್ಲಿ ನೆಲೆಯೂರಿದ್ದರು ಎಂಬುದು, ಹಲವು ಮಂದಿ ಒಪ್ಪುವ ಮಾತು.

ಸ್ವಾಮೀ,

ಕನ್ನಡದವರು ಇಲ್ಲೇ ಯಾವಾಗಲೂ ಇದ್ದವರು ಎಂದು ಹೇಳಿದರೆ ಸಾಕಲ್ಲ?

ಕುದುರೆಯ ಮೇಲೆ ಯಾರೂ ಬಂದರೋ ಇಲ್ಲವೋ ಎಂಬುದೇ ಗೊತ್ತಿಲ್ಲ. ೧೫೦ ವರ್ಷಗಳ ಹಿಂದೆ ಹೇಳಿದ ಆರ್ಯರ ಆಕ್ರಮಣಕ್ಕೆ ಯಾವುದೇ ಪುರಾವೆಗಳಿಲ್ಲವೆಂಬುದು ಈಗಾಗಲೇ ಸಾಬೀತಾಗಿರುವಾಗ, ಆ ಮಾತನ್ನು ಮತ್ತೆ ಮತ್ತೆ ಹೇಳುವ ಅಗತ್ಯವೇ ಇಲ್ಲ.

ಕುದುರೆ ಭಾರತಕ್ಕೆ ಹೊರಗಿನಿಂದ ಬಂದಿರಬಹುದು, ಆದರೆ, ಆರ್ಯರು ಬಂದು ದ್ರಾವಿಡರನ್ನು ದಕ್ಷಿಣಕ್ಕೆ ಕಳುಹಿದರು ಎನ್ನುವ ಮಾತಿನಲ್ಲೂ ಹುರುಳಿಲ್ಲ. ಹಳೇ ತಮಿಳು ಕೃತಿಗಳು ಹೇಗೆ ತಮಿಳು ಕುಮರಿಯಿಂದ ವೇಂಗಡದ ವರೆಗೆ ಇತ್ತು ಎಂದು ಹೇಳುತ್ತವೋ, ಹಳೆಯ ಸಂಸ್ಕೃತವೂ, ಸಪ್ತಸಿಂಧು/ಗಂಗಾ ಬಯಲುಗಳಲಲ್ಲು ಸಂಸ್ಕೃತ (ಅಥವಾ ಅದಕ್ಕೆ ಸಂಬಂಧಿಸಿದ ಭಾಷೆಗಳು) ನೆಲೆಗೊಂಡಿದ್ದವು ಎಂಬುದನ್ನು ತಿಳಿಸುತ್ತವೆ. ಅದಕ್ಕೂ ಮೊದಲು, - ಐದಾರು ಸಾವಿರ ವರ್ಷಗಳ ಹಿಂದೆ ಏನಾಗಿದ್ದರೂ ಅದು ನಮ್ಮ ಚರ್ಚೆಗೆ ಸಂಬಂದ್ಜಿಸಿದ್ದಲ್ಲ. ಹಾಗೆ ನೋಡಿದರೆ, ಹೋಮೋ ಸೇಪಿಯೆನ್ಸ್ ಎಲ್ಲರೂ ಆಫ್ರಿಕಾದಿಂದಲೇ ಬಂದವರು ಅಲ್ಲವೇ?

ಇನ್ನೂ ನಾವು ಅಪ್ಪ ಹಾಕಿದ ಆಲದ ಮರಕ್ಕೆ ( ನಿಜವಾಗಿ ಹೇಳಬೇಕಾದರೆ, ಈ ನುಡಿಗಟ್ಟೂ ಸರಿಯಿಲ್ಲ - ಏಕೆಂದರೆ ಮ್ಯಾಕ್ಸ್ ಮುಲ್ಲರ್ ಏನು ನಮ್ಮವನೇ!?) ಮ್ಯಾಕ್ಸ್‍ಮುಲ್ಲರ್ ಮೊದಲಾದವರ ಕ್ರಿ.ಪೂ.೧೫೦೦ ರಲ್ಲಿ ಆರ್ಯರ ಆಕ್ರಮಣ ಮೊದಲಾದ ಥಿಯರಿ ಗಳಿಗೆ ಮಣ್ಣು ಹೊರಬೇಕಿಲ್ಲ.

ನಮಗೆ ತಿಳಿದಿರುವಷ್ಟು ಹಿಂದಕ್ಕೆ ಹೋದರೂ, ( ಶಿಲಾಯುಗದ ಮಾತು ಬೇಡ! - ಏಕೆಂದರೆ ಆಗ ಭಾಷೆ ಹೇಗಿತ್ತು ನಮಗೆ ಗೊತ್ತಿಲ್ಲ), ಗೋದಾವರಿಯ ದಕ್ಷಿಣದಲ್ಲಿ ದ್ರಾವಿಡ ಭಾಷಾವರ್ಗವೂ, ಉತ್ತರಕ್ಕೆ ಸಂಸ್ಕೃತ ಭಾಷಾವರ್ಗವೂ ಇದ್ದದ್ದೇ ನಮಗೆ ಸಿಗುವ ಪುರಾವೆ. ಇವತ್ತಿಗೂ ಅದೇನೂ ಹೆಚ್ಚು ಬದಲಾಯಿಸಿಲ್ಲ ಬಿಡಿ.

-ಹಂಸಾನಂದಿ

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಹಂಸಾನಂದಿ

ಕನ್ನಡದವರು ಇಲ್ಲೇ ಯಾವಾಗಲೂ ಇದ್ದವರು ಎಂದು ಹೇಳಿದರೆ ಸಾಕಲ್ಲ?

ಅದನ್ನೇ ಹೇಳಿರುವುದು. ನನ್ನ ಸೊಲ್ಲನ್ನು ಪೂರ ನೋಡಿ.

ನಿಮಗೆ 'ಆರ್ಯ' ಒರೆಯ ಬಗ್ಗಿನ ಇರುಸು-ಮುರುಸು ಗೊತ್ತು. :) ಆದರೆ ಏನು ಮಾಡಲಾಗದು, ಅಲ್ಲಿ ಅದನ್ನು ಬಳಸಲೇ ಬೇಕಾಗಿತ್ತು

ನನ್ನ ಮಾತು ಹೀಗೆದೆ, ನೀವು ಬರಿ ಅದರ ತುಂಡನ್ನು ಎತ್ತಿ ತೋರಿರುವಿರಿ.

ಕನ್ನಡಿಗರು ( ದ್ರಾವಿಡ ಒರೆ ಬಳಕೆ ಬೇಡ ) ಇಲ್ಲಿಯವರೇ, ಕನ್ನಡ ನೆಲದವರೆ. ಇದಕ್ಕೆ ಹಲವು ಓಸುಗರಗಳಿವೆ
.
.
ಹೀಗೆ ಹುಡುಕುತ್ತಾ ಹೋದರೆ, ಕನ್ನಡದವರು ಇಲ್ಲಿಯವರೇ ಎಂದು ತೋರಲೂ ಕೂಡ ಬೇಕಾದನಿತ್ತು ಮಾತುಗಳನ್ನು ಹೇಳಬೋದು.
.
.
ಆದರೆ.....
'ಆರ್ಯ'ರು ಅನ್ನುವ ಮಂದಿ ಕುದುರೆಯ ಮೇಲೆ ಬರುವ ಮುನ್ನವೇ ಕನ್ನಡರು('ದ್ರಾವಿಡ') ಈ ನೆಲದಲ್ಲಿ ನೆಲೆಯೂರಿದ್ದರು ಎಂಬುದು, ಹಲವು ಮಂದಿ ಒಪ್ಪುವ ಮಾತು.

ಈ ಎರೆಡು ಬಗೆಯ ತಳಿ(race)ಗಳು ಒಂದೇ ಎಂಬ ಮಾತು ಇದೆ.
.
.
ಆದರೆ ಒಂದೇ ತಳಿಯ ಮಂದಿ ಬೇರೆ ಬೇರೆ ನುಡಿಕೂಟಗಳನ್ನು ಆಡುವುದು, ಹಲವು ಐಬುಗಳಿಗೆ ಎಡೆ ಮಾಡಿರುವುದು.

ಒಟ್ಟಿನಲ್ಲಿ ನಮ್ಮ ದೇಸದಾಗೆ ಐದು ನುಡಿಕೂಟಗಳಿವೆ, ಅವಲ್ಲಿ ಇಂಡೊ-ಯುರೋಪ ಮತ್ತು ದ್ರಾವಿಡ ನುಡಿಕೂಟಗಳು ಹಿರಿಯವು.

ನೀವೇ ನೋಡಿಕೊಳ್ಳಿರಿ. ನಾನು 'ಕುದುರೆ ಬಂದವರು' ಎಂಬ ಮಾತಿದೆ ಎಂದೆನು ಹೊರತು, ನಿಕ್ಕುವವಾಗಿ ಅವರು 'ಕುದುರೆ ಮೇಲೇ ಬಂದರು" ಎಂದಿಲ್ಲ. ಮಿಕ್ಕ 'ಮಾತು'ಗಳನ್ನು ಮಡಗಿದ್ದೇನೆ. ಅವನ್ನು ತುಸು ಗವನಿಸಿರಿ.

ನೀವು 'ಕನ್ನಡರು ಬೇರೆ ತಳ'ಿ ಎಂದು ಒಪ್ಪಿರುವಿರಿ ಎಂದು ನಿಮ್ಮ ಮಾತಿಂದ ಅಂದುಕೊಂಡಿರುವೆನು. :)
======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

kannadakanda's picture

ಈ ಆರ್ಯರು ಹೊಱಗಿನವರು ಎಂದು ಮಾಡಿದವರು ಐರೋಪ್ಯರು. ಅವರಿಗೆ ಒಂದು ತೆವಲು. ಅದೇನೆಂದರೆ ಚೆನ್ನಾಗಿದ್ದುದನ್ನೆಲ್ಲ ತಮ್ಮ ಕಡೆಯದೆಂದು ಹೇೞಬೇಕೆಂದು. ಅದಕ್ಕೆ ಅವರೊಂದು ಕಥೆ ಕಟ್ಟಿದರು ಆರ್ಯರು ಮೂಲತಃ ಭಾರತದವರಲ್ಲ. ಹೊಱಗಿನಿಂದ ಬಂದವರು. ಯುರೋಪ್‍ತಳಿಯೊಂದಿಗೆ ಹೊಂದಿಕೆಯದವರು ಇತ್ಯಾದಿ. ಈ ಕಥೆಯನ್ನೆಲ್ಲ ಬರೆದವರು ಯಾರು? ನಮ್ಮವರಲ್ಲದ ಐರೋಪ್ಯರು. ಇದನ್ನೊಪ್ಪದ ಭಾರತೀಯರ ಲೇಖನಗಳನ್ನೋದಿ.

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

kishorpatwardhan's picture

ಸಂಸ್ಕೃತದ ಬಗ್ಗೆ ಹಲವು ಉಪಯುಕ್ತ ಮಾಹಿತಿ ಒದಗಿಸಿದ್ದಕ್ಕೆ ಖುಶಿ ಆಯಿತು. ಧನ್ಯವಾದಗಳು.

ಆದರೆ ಕನ್ನಡವನ್ನು ಸರಳಗೊಳಿಸುವ ಬಗ್ಗೆ ನನ್ನ ಅಭಿಪ್ರಾಯ ಮಾತ್ರ ಇದರಿಂದ ಬದಲಾಗಿಲ್ಲ. ಮಹೇಶ ಅವರು ಕೊಟ್ಟ ಎಲ್ಲ ಕೊಂಡಿಗಳನ್ನು ಜಾಲಾಡಿದಾಗಲೂ ನನಗೆ ದೊರೆತುದು ಒಂದೇ ಒಂದು ಮಾಹಿತಿ- ಅದು ’ಸಂಸ್ಕೃತ” ದ್ರಾವಿಡ ಜನರು ಆಡುತ್ತಿದ್ದ ಭಾಷೆಯಿಂದ / ಭಾಷೆಗಳಿಂದ influenced ಆಗಿರುವ ಸಾಧ್ಯತೆಗಳು ಇವೆ ಮತ್ತು ಸಂಸ್ಕೃತ originally ನಮ್ಮ ಭಾಷೆ ಆಗಿರಲಾರದ ಸಾಧ್ಯತೆಗಳು ಇವೆ ಎಂದು.

ನಿಜ ಹೇಳಬೇಕೆಂದರೆ ಈ ಮಾಹಿತಿ ಹೊಸತು ಅಂತ ಅನಿಸಿದ್ದು ಬಿಟ್ಟರೆ ನನಗೇನೂ ಇದರಿಂದ ಲಾಭ ಆಗಲಿಲ್ಲ. ಬೇಕಿದ್ದರೆ ಸಂಸ್ಕೃತ ನಮ್ಮ ನುಡಿಯಲ್ಲ; ಹೊರಗಿಂದ ಬಂದದ್ದು - ಎಂದೇ ಇಟ್ಟುಕೊಳ್ಳೋಣ. ಆದರೆ ಹೊರಗಿಂದ ಬಂದದ್ದೆಂದ ಮಾತ್ರಕ್ಕೆ ಸಂಸ್ಕೃತ ನಮ್ಮ ಕಾಲದ ಕನ್ನಡದ ಮೇಲೆ ಮಾಡಿರುವ ಪ್ರಭಾವವನ್ನು ಮರೆಯಲಾದೀತೇ? ಸಂಸ್ಕೃತ ಶಬ್ದಗಳನ್ನು ಬಳಸದೇ ಒಂದು paragraph ಕೂಡ ಕನ್ನಡ ಬರೆಯಲಾಗದ ನನ್ನಂಥವರು ಅನೇಕರಿದ್ದಾರೆ ಎಂಬುದು ಕಟು (?) ಸತ್ಯ. ಹಾಗೇ, ಕನ್ನಡ ಮೊದಲಿಂದಲೂ ಬೇರೆ ಭಾಷೆಗಳನ್ನು ಮೈಗೂಡಿಸಿಕೊಳ್ಳುತ್ತ ಬಂದಿದೆ; ಇಂಗ್ಲಿಷನ್ನು ಕೂಡ ಸಂಸ್ಕೃತದಷ್ಟೇ ಸಲೀಸಾಗಿ ಮೈಗೂಡಿಸಿಕೊಂಡಿದೆ. ಇದನ್ನು ತಪ್ಪು ಎನ್ನಲಾಗುತ್ತದೆಯೇ? ಕನ್ನಡ ಬೆಳೆಯುವ ಬಗೆಯೇ ಇದಾಗಿರಬಹುದಲ್ಲ? ಮಹಾಪ್ರಾಣ, ಋ, ೠ ಇತ್ಯಾದಿಗಳನ್ನು ಬಿಟ್ಟು ಬಿಟ್ಟರೆ ನಮ್ಮ ಮಕ್ಕಳು ನಾವು ಬರೆದುದನ್ನು ಓದಲಾಗದ ಪರಿಸ್ಥಿತಿ ನಿರ್ಮಾಣ ಆಗದೇ?

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಮಹಾಪ್ರಾಣ, ಋ, ೠ ಇತ್ಯಾದಿಗಳನ್ನು ಬಿಟ್ಟು ಬಿಟ್ಟರೆ ನಮ್ಮ ಮಕ್ಕಳು ನಾವು ಬರೆದುದನ್ನು ಓದಲಾಗದ ಪರಿಸ್ಥಿತಿ ನಿರ್ಮಾಣ ಆಗದೇ?

ಬುದ್ದಿ,

ಇಲ್ಲಿ "ನಮ್ಮ"ದರಲ್ಲಿ ನನ್ನ(ನಮ್ಮ) ಮಕ್ಕಳಿಲ್ಲ.
ನಮ್ಮ ಮಕ್ಕಳು ಸಂಸ್ಕೃತವನ್ನು ಕಲಿಯುವುದೇ ಬೇಡ, ಅದರಿಂದ ಯಾವ ಕೊರತೆ ಇಲ್ಲ.

ಮತ್ತೆ ಆದೇ ಮಾತು....
ಕನ್ನಡದ ನೆಲದಲ್ಲಿರುವ ಹೆಚ್ಚು ಮಂದಿಗೆ ಸಕ್ಕದವೂ ಬೇಡ, ಅದರ ಒರೆಗಳೂ ಬೇಡ, ಅದರ ಅಕ್ಕರಗಳು, ಉಲಿಗಳಂತೂ ಬೇಡವೇ ಬೇಡ.

ಆದರೆ ಸಕ್ಕದವನ್ನು ಕುರಿತು ಆಳವಾಗಿ ಓದುವುದಕ್ಕೆ ನಮ್ಮ ಬನ್ನಿಲುವು ಇದೆ.

ಆದರೆ ಕನ್ನಡದ ಸಕ್ಕದಿಕೆ(sanskritization) ಒಪ್ಪಿಗೆಯಿಲ್ಲ.

ಪಟವರ್ದನರು,
ಈ ಸಂಗತಿಯ ಮೇಲೆ ನಡೆತ ಹಳೆಯ ಮಾತುಕಡೆಗಳನ್ನು ನೋಡಿಕೊಳ್ಳುವುದು ಒಳಿತು. ತಿರುಗಿ ತಿರುಗಿ, ಅದನ್ನೇ ಆಡುವುದರಿಂದ ಹಲ ಸಂಪದಿಗರಿಗೆ ಇರುಸು-ಮುರುಸಾಗಬವುದು.

======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

^^^
ನಡೆತ = ನಡೆದ ಅಂತ ಇಟ್ಟುಕೊಳ್ಳಿರಿ
======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಇನ್ನೊಂದು ಮಾತು...

ನಿಮಗೆ ದಿಟವಾಗಲೂ ಕನ್ನಡ ನುಡಿಯ ಒಳಹೊರಗಳ ಬಗ್ಗೆ, ಅದರ ಒರೆಗಳ ಬಗ್ಗೆ, ಹುರುಪಿದ್ದೆ, ಕಣ್ಣುಮುಚ್ಚಿ ಸಕ್ಕದಿಸಿದ ಕನ್ನಡವೇ ಮೇಲು ಅನ್ನದೇ ಇದ್ದರೆ,

D N ಶಂಕರ ಭಟ್ಟರ ಹೊತ್ತಗೆಗಳನ್ನು ಓದಿ ಅರಿಯಬಹುದು. ಅವರ ಹೊತ್ತಗೆಯ ಬಗ್ಗೆ ಇಲ್ಲಿ ಹಲವು ಮಾತುಕತೆಗಳು ಬರವಣಿಗೆಗಳು ದೊರೆಯುವುವು.

ಸಕ್ಕದ, ಕನ್ನಡದ ನಂಟು, ಗಂಟು ಬಗ್ಗೆ ತಿಳಿತಿಳಿಯಾಗಿ, ಬಿಡಿಬಿಡಿಯಾಗಿ ಬರೆದವ್ರೆ ಅವರು.
======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

^^^
ಅಲ್ಲಿ 'ನಿಮಗೆ' ಒಬ್ಬರ ಕುರಿತಿಲ್ಲ. ಒಂದು ಜೆನೆರಲ್ ಅರಿಕೆ.
======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

ರಘುನಂದನ's picture

ಇಂಗ್ಲೀಷು ಪಂಗ್ಲೀಷು ಸೇರಿಸಿ ಗಲೀಜು ಮಾಡುವುದಕ್ಕಿಂತ ಸಂಸ್ಕೃತ ಸೇರಿಸಿಕೊಂಡು ಚೆನ್ನಾಗಿ ಮಾತನಾಡಿದ್ರೆ ಆಯ್ತಪ್ಪ ಅದ್ರಲ್ಲೇನಿದೆ? ಕನ್ನಡದ್ದೇ ಅಲ್ಲದ ಇಂಗ್ಲೀಷನ್ನು ಆಡುನುಡಿಯ ಕನ್ನಡದಂತೆ ಮಾಡಿಕೊಂಡರೆ ತಮಾಶೆಯೆನಿಸೀತೆ ವಿನಃ ಮೂಲಭಾಷೆಯೆನಿಸಲಾರದು.

ಎನಗಿಂತ ಕಿರಿಯರಿಲ್ಲ

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಸಕ್ಕದವನ್ನು ಕಲಸಿದರೆ ಕಲವರಿಗೆ ಕನ್ನಡ ಹೊಲಸಾಗಿ ಕಾಣುವುದೂ ಉಂಟು ...

ಕನ್ನಡದ್ದೇ ಅಲ್ಲದ ಇಂಗ್ಲೀಷನ್ನು ಆಡುನುಡಿಯ ಕನ್ನಡದಂತೆ ಮಾಡಿಕೊಂಡರೆ ತಮಾಶೆಯೆನಿಸೀತೆ ವಿನಃ ಮೂಲಭಾಷೆಯೆನಿಸಲಾರದು.

:) ಸಕ್ಕದಿಸಿದ ಕನ್ನಡ ಬೇರುಗನ್ನಡದಂತೆ ಹೇಗೆ ಕಾಣುವುದು?

ತಮಾಷೆ = ಉರ್ದು/ಮರಾಟಿ
ಗಲೀಜು = ಉರ್ದು
:)

======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಕಲವರಿಗೆ = ಕೆಲವರಿಗೆ ಅಂದುಕೊಳ್ಳಿ..
======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

ರಘುನಂದನ's picture

ಸಂಸ್ಕೃತವನ್ನು ಸೇರಿಸಿದಾಗ "ಹೊಲಸಾಯಿತು" ಅನ್ನುವವರೆಂದರೆ ನೀವೊಬ್ಬರೇ! (ಹೆಚ್ಚೆಂದರೆ ಸಂಪದಿಗರಲ್ಲಿಯೇ ಇನ್ನೊಂದಿಬ್ಬರನ್ನು ನೀವು ಉದಾಹರಿಸಬಹುದು) ಯಾವುದೇ ಒಂದು ವಿಷಯವನ್ನು ಅಭಿಮಾನಿಸುವಾಗ ನಿರ್ದಿಷ್ಟ ಮಾನದಂಡಗಳಿರುತ್ತವೆ. ಉದಾ: ರಾಜಕುಮಾರ ಹಾಗು ಚಿರಂಜೀವಿಗಳಲ್ಲಿ ಕನ್ನಡಿಗರು ಎನ್ನುವ ಕಾರಣಕ್ಕೆ ಮೊದಲು ರಾಜಕುಮಾರರು ನಮ್ಮ ಅಭಿಮಾನ ಪಾತ್ರರು. ಆದರೆ ಅಮೆರಿಕೆಯಲ್ಲಿದ್ದಾಗ, ಕೇವಲ ಚಿರಂಜೀವಿಯೊಬ್ಬನನ್ನೇ ನೋಡುವ ಪ್ರಸಂಗ ಬಂದಾಗ ಭಾರತೀಯ/ನಮ್ಮವ ಎನ್ನುವ ದೃಷ್ಟಿಯಿಂದ ಇನ್ನಿತರೆ ಇಂಗ್ಲೀಷಿನವರಿಗಿಂತ ಚಿರಂಜೀವಿಯನ್ನು ಅಭಿಮಾನಿಸುವುದರಲ್ಲಿ ತಪ್ಪೇನಿದೆ? ಒಂದೇ ಸಮನೆ ಸಕ್ಕದ ಸಕ್ಕದ ಎನ್ನುತ್ತಾ ನಮ್ಮದೇ ಆದ ಸಂಸ್ಕೃತವನ್ನು ದೂರೀಕರಿಸಿ, ಇನ್ನೆಲ್ಲಿಯದೋ ಇಂಗ್ಲೀಷನ್ನು ಹತ್ತಿರವಿರಿಸಿಕೊಳ್ಳುತ್ತೀದ್ದೀರಿ. ಇದು ಅನವಶ್ಯಕ ಎಂದು ನನ್ನ ಅಭಿಪ್ರಾಯ. ಸಂಸ್ಕೃತವನ್ನು ಭಾರತದ್ದೇ ಆದ ಭಾಷೆ ಎನ್ನುವ ಮಾನದಂಡದಿಂದಲಾದರೂ ನಾವು ದೂರಿಕರಿಸದಿದ್ದರೆ ಒಳ್ಳೆಯದು.

ಸಂಸ್ಕೃತಕ್ಕೆ ಸಮನಾದ ಕನ್ನಡ ಶಬ್ದಗಳನ್ನು ನಮಗೆ ಕೊಡಮಾಡುತ್ತಿದ್ದೀರಿ ಅದಕ್ಕೆ ತುಂಬಾ ತುಂಬಾ ಸಂತಸ. ಈ ಶಬ್ದಗಳನ್ನು/ಪ್ರಯೋಗವನ್ನು ನಿತ್ಯದಲ್ಲಿಯೂ ಬಳಸೋಣ ಅಭ್ಯಂತರವಿಲ್ಲ. ಆದರೆ ಸಂಸ್ಕೃತವು ತಾನೇ ತಾನಾಗಿ ಕನ್ನಡದ ಮೇಲೆ ಆಕ್ರಮಣವನ್ನಂತೂ ಮಾಡಿಲ್ಲ ಎನ್ನುವುದಂತೂ ಒಪ್ಪುವ ಮಾತು. ಇದು ಇಂಗ್ಲೀಷಿಗೂ ಅನ್ವಯಿಸುವುದು, ಮಾತ್ರವಲ್ಲ ಜಗತ್ತಿನ ಎಲ್ಲ ಭಾಷೆಗಳೂ ಈ ರೀತಿಯಾದ ವಿಕಾಸಕ್ಕೆ ಈಡಾಗಿಯೇ ಆಗಿವೆ.

ಕನ್ನಡಮ್ಮನಿಗೇ ಜೈ.

ಎನಗಿಂತ ಕಿರಿಯರಿಲ್ಲ

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಅಯ್ಯ

ಸಂಸ್ಕೃತವನ್ನು ಸೇರಿಸಿದಾಗ "ಹೊಲಸಾಯಿತು" ಅನ್ನುವವರೆಂದರೆ ನೀವೊಬ್ಬರೇ! (ಹೆಚ್ಚೆಂದರೆ ಸಂಪದಿಗರಲ್ಲಿಯೇ ಇನ್ನೊಂದಿಬ್ಬರನ್ನು ನೀವು ಉದಾಹರಿಸಬಹುದು)

ಇದನ್ನೇ ನಾನು ಹೇಳಿದುದು 'ಕೆಲವರಿಗೆ' ಅಂತ. ಮೊದಲ ಸರಿಯಾಗಿ ಓದಿಬೇಕು.

ಒಂದೇ ಸಮನೆ ಸಕ್ಕದ ಸಕ್ಕದ ಎನ್ನುತ್ತಾ ನಮ್ಮದೇ ಆದ ಸಂಸ್ಕೃತವನ್ನು ದೂರೀಕರಿಸಿ, ಇನ್ನೆಲ್ಲಿಯದೋ ಇಂಗ್ಲೀಷನ್ನು ಹತ್ತಿರವಿರಿಸಿಕೊಳ್ಳುತ್ತೀದ್ದೀರಿ.

ಸಕ್ಕದ ನಮ್ಮದೋ ಅಲ್ಲವೋ ಇದಕ್ಕೆ ಮರುಮಾತುಗಳು ಹೇಳಿ ಆಗಿದೆ. ತುಸು ಮಾತುಕತೆ ಮುಡಿಯಡಿಗಳನ್ನು ಗಮನದಲ್ಲಿಟ್ಟರೆ ಒಳಿತು.

ಗಕ್ಕನೆ ಮಾತಿನ ನಡುವೆ ತೂರಿದರೆ, ತಲೆಬುಡಿಗಳರಿಯದ ಮಾತಾಗುವುದು, ಎಳೆದು ಎಳೆದು ಎತ್ತೆತ್ತಲೋ ಪೋಗುವುದು.
ಇಂಗ್ಗೀಷು ಹತ್ತಿರದ ಬಗ್ಗೆ ಮಾತೂ ಬಂದಿಲ್ಲ, 'ಸಕ್ಕದದ ಬದಲು ಇಂಗ್ಲೀಷು ಬೇಕು' ಅಂತ ಯಾರು ಅಂದಿಲ್ಲ. ಇದು ಮತ್ತೊಂದು ಬ್ರಾಂತು

ಆದರೆ ಸಂಸ್ಕೃತವು ತಾನೇ ತಾನಾಗಿ ಕನ್ನಡದ ಮೇಲೆ ಆಕ್ರಮಣವನ್ನಂತೂ ಮಾಡಿಲ್ಲ ಎನ್ನುವುದಂತೂ ಒಪ್ಪುವ ಮಾತು.

ಮತ್ತೆ ಒಂದು ಗುಂಪು ಒಪ್ಪದ ಮಾತು. ಸಂಸ್ಕೃತ ಮಾಡಿಲ್ಲ :), ಸಂಸ್ಕೃತದ fansಗಳು ಮಾಡಿರುವುದು.

ಆದರೆ ಕನ್ನಡದ ಮೇಲೆ ಸಕ್ಕದದ ದಾಳಿಯ ಕುರಿತು ಸೊಲ್ಲೆತ್ತಿದವರು ಕವಿರಾಜಮಾರ್ಗದಿಂದಲೂ ಇದ್ದಾರೆ. ಎಗ್ಗಿಲ್ಲದೆ ಕನ್ನಡದಲ್ಲಿ ಸಕ್ಕದದ ಬರೆಕೆಗೆ ಎದುರಾದವರೂ ಇದ್ದಾರೆ.
೧) ಕರಾಮಾ, ೨) ಶಬ್ದಮಣಿದರ್ಪಣ, ೩) ನಯಸೇನ ೪) ಅಂಡಯ್ಯ ಮುಂತಾದವರು ಇವರು ಹೇಳಿದ ಮಾತುಗಳನ್ನು ತಿಳಿಯಬೇಕು.

ಕರಮಾ: ಕನ್ನಡಕ್ಕೆ ಸಕ್ಕದದ ಬರಕೆ, ಇಂಪಾದ ಕೊರಲ ನಡುವೆ ಕಿಟಾರನೆ ಕಿರುಚಿದಂತೆ
ನಯಸೇನ : ತುಪ್ಪದಂತ ಕನ್ನಡಕ್ಕೆ ಎಣ್ಣೆಯಂತ ಸಕ್ಕದ ಬರೆಸಿದಂತೆ
ಇನ್ನೊಬ್ಬರು : ಬಾಳೆಹಣ್ಣು, ಜೇನು ಮುಂತಾ‌ದವು. ( ಈ ಪದ್ಯ ಇಲ್ಲೇ ಸಂಪದದಲ್ಲಿ ಹುಡುಕಿದರೆ ದೊರೆಯುವುದು )
ಬಿ.ಎಂ.ಶ್ರೀ : ಅವರು ಸುದ್ದಗೆ.( ವರ್ಣಮಾಲೆ )
ಬ್ಲಾಗು : ಕನ್ನಡದ ಮೇಲೆ ಸಂಸ್ಕೃತದ ಸವಾರಿ ( ಸಂಪದಲ್ಲೇ ಇದೆ )
D N ಶಂಕರ ಭಟ್ಟ : ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ, ಕನ್ನಡ ಬರಹ ಸರಿಪಡಿಸೋಣ!
==============================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ತಿದ್ದು
ಓದಿಬೇಕು = ಓದಿಕೋಬೇಕು,
fansಗಳು = fanಗಳು

"ಸಕ್ಕದ ಬೇಕು, ಆದರೆ ಸಕ್ಕದಿಸಿದ ಕನ್ನಡ ಬೇಡ"

ವೇದ ಬೇಕು, ಆದರೆ ವೇದದ ಕನ್ನಡಿಕೆ, ಅರಿಯಬೋದಾದ ಸರಳಗನ್ನಡದಲ್ಲಿ ಬೇಕು, ಸಕ್ಕದದ ಒರೆಗಳಿಗೆ ಕನ್ನಡದ ಪ್ರತ್ಯಯದಲ್ಲಿ ಬೇಡ

"ಸಮ್ಯಗ್ದರ್ಶನನಿಷ್ಠಯಾ" ಅನ್ನೋದು "ಸರಿಯಾಗಿ ನೋಡುವ ಗಮನ" ಅಂತ ಇರಲಿ, "ಸಮ್ಯಗ್ದರ್ಶನನಿಷ್ಠೆಯಿಂದ" ಅಂತ ಬೇಡ ( :) )

======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

ರಘುನಂದನ's picture

ಗಕ್ಕನೆ ನಡುವೆ ತಲೆ ತೂರಿಸಿರುವಂಥಾದ್ದೇನೂ ಇಲ್ಲಿಲ್ಲ. ನಿಮ್ಮ ಇತರೆ ಪೋಸ್ಟುಗಳನ್ನು ನೋಡಿ ನಾನು "ನೀವು ಇಂಗ್ಲೀಷನ್ನು ಕನ್ನಡದಲ್ಲಿ ಸೇರಿಸಿದ್ದೀರಿ" ಎನ್ನುವ ಅರ್ಥದಲ್ಲಿ ಹೇಳಿದ್ದೇನೆ. ಇದರಲ್ಲಿ ತಪ್ಪೇನೂ ಇಲ್ಲವಲ್ಲ.

ಇರಲಿ ಬಿಡಿ ಫ್ಯಾನುಗಳೋ ಬೀಸಣಿಕೆಗಳೋ! ಒಟ್ಟಿನಲ್ಲಿ ಸುಂದರವಾದ ಮಾತುಗಳಿದ್ದರೆ ಭಾಷೆ ಯಾವುದಾದರೇನು? ಆದರೂ ಇನ್ನಿತರ ಯಾವ ಭಾಷೆಯ ಹಂಗೂ ಇಲ್ಲದೆಯೂ ಕನ್ನಡ ಯಾವಾಗಲೂ ಉತ್ಕೃಷ್ಟವೇ ಎನ್ನುವ ನಿಮ್ಮ ವಾದಕ್ಕೆ ಎದುರಿಲ್ಲ. ಸಂತಸ!

ಎನಗಿಂತ ಕಿರಿಯರಿಲ್ಲ

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

ASHOKKUMAR's picture

[quote]ಒಟ್ಟಿನಲ್ಲಿ ಸುಂದರವಾದ ಮಾತುಗಳಿದ್ದರೆ ಭಾಷೆ ಯಾವುದಾದರೇನು? ಆದರೂ ಇನ್ನಿತರ ಯಾವ ಭಾಷೆಯ ಹಂಗೂ ಇಲ್ಲದೆಯೂ ಕನ್ನಡ ಯಾವಾಗಲೂ ಉತ್ಕೃಷ್ಟವೇ ಎನ್ನುವ ನಿಮ್ಮ ವಾದಕ್ಕೆ ಎದುರಿಲ್ಲ. ಸಂತಸ![\quote]
ಇಂತಹ ಮಾತು ಖುಷಿ ಕೊಡುತ್ತದೆ.

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture


ಆದರೂ ಇನ್ನಿತರ ಯಾವ ಭಾಷೆಯ ಹಂಗೂ ಇಲ್ಲದೆಯೂ ಕನ್ನಡ ಯಾವಾಗಲೂ ಉತ್ಕೃಷ್ಟವೇ ಎನ್ನುವ ನಿಮ್ಮ ವಾದಕ್ಕೆ ಎದುರಿಲ್ಲ. ಸಂತಸ!

ನನ್ನಿ!
ನನ್ನ ಮಾತು ಅಷ್ಟೆ.. ! ನಲಿವು!

ನಾವು ಎಲ್ಲೆಡೆಯಿಂದ(ಸಕ್ಕದ, ಇಂಗ್ಲೀಸು ಎಲ್ಲ ) ಅರಿವು ಪಡೆದು ಅದನ್ನು ಕನ್ನಡದಲ್ಲೇ, ತಿಳಿಗನ್ನಡದಲ್ಲೇ ಹೇಳೋಣ.

ಆದರೆ ಎಲ್ಲದಕ್ಕೂ "ಬೇರೆ ನುಡಿಯ ನೆರವು ಬೇಕು "ಎಂದು ಮಾಡಿಕೊಳ್ಳುವುದು ಬೇಡ!
======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

Sunil Jayaprakash's picture

ಸಂಸ್ಕೃತ ಶಬ್ದಗಳನ್ನು ಬಳಸದೇ ಒಂದು paragraph ಕೂಡ ಕನ್ನಡ ಬರೆಯಲಾಗದ ನನ್ನಂಥವರು ಅನೇಕರಿದ್ದಾರೆ ಎಂಬುದು ಕಟು (?) ಸತ್ಯ.

ಕಿಶೋರ್ ಪಟವರ್ಧನ್ ಅವರೇ, ಜ್ಞಾನಕ್ಕೆ ನಂಟಾಗದೆ, ಕೇವಲ ಪಾಂಡಿತ್ಯ ಪ್ರದರ್ಶನಕ್ಕಾಗಿ "ವಿದ್ವಾಂಸರು ಬರೆಯುವ ಕನ್ನಡವನ್ನು" ಅರ್ಥಮಾಡಿಕೊಳ್ಳಲಾಗದವರು ಕೋಟಿಗಟ್ಟಲೆ ಇದ್ದಾರೆ ಎನ್ನುವುದೂ ಅಷ್ಟೇ ಕಟು ಸತ್ಯ. ಪಶು ಸಂಗೋಪನಾ ಇಲಾಖೆ, ಕುಕ್ಕುಟ ಉದ್ಯಮ, ಇತ್ಯಾತ್ಮಕ, ನೇತ್ಯಾತ್ಮಕ. "ಸಂಸ್ಕೃತವಿಲ್ಲದ ಕನ್ನಡ ಜಾಳು" ಎಂಬ ಆಕ್ಷೇಪಣೆ ಬಂದಾಗ ವಸ್ತುನಿಷ್ಠವಾಗಿ ಒಂದು ಲೇಖನ ಬರೆದಿದ್ದೆ. ಬಿಡುವಾದಾಗ ಓದಿ ನೋಡಿ. ಜ್ಞಾನದ ತುಡಿತವನ್ನು ತುಂಬಿಸುವ ನುಡಿ. ಅಲ್ಲಿ ನಾನು ಬಲವಾಗಿ ಪ್ರತಿಪಾದಿಸಿದ್ದು. ಮನುಷ್ಯನ ತುಡಿತ ಇರುವುದು ಜ್ಞಾನದ ಹುಡುಕಾಟದಲ್ಲಿ. ಪಂಡಿತರುಗಳು ಜ್ಞಾನವನ್ನು ಪಸರಿಸಲಿ. ಅದನ್ನು ಬಿಟ್ಟು, ಪ್ರತಿಯೊಂದಕ್ಕೂ "ಸಂಸ್ಕೃತವೇ ಎಲ್ಲ" ಎಂಬ ಅಹಂಕಾರದ, ಅಪ್ರಬುದ್ಧ ಮಾತು ಬೇಕಿಲ್ಲ ಎಂದು ಪ್ರತಿಪಾದಿಸಿದ್ದೆ. ನಮಗೆ ಜ್ಞಾನ ಬೇಕು(ಸಂಗೀತ, ವೇದ..ಮುಂತಾದವು), ಆದರೆ ಯಾದೃಚ್ಛಿಕ, ಇತ್ಯಾತ್ಮಕ, ನೇತ್ಯಾತ್ಮಕ, ಸಿದ್ಧಸ್ಮೃತಿಕೋಶ, ಸ್ಮರಣ ಕೋಷ್ಟಕ, ವಕ್ರಾವರಣ ಮುಂತಾದ ಕಷ್ಟವಾದ ಸಂಸ್ಕೃತ ಪದಬಳಕೆಗಳು ಬೇಡ. ಅವುಗಳಲ್ಲಿ ಯಾವ ಬದನೆಕಾಯಿ ಜ್ಞಾನವೂ ಇಲ್ಲ.

ಸಂಸ್ಕೃತದ ಉಪಯುಕ್ತತೆ ಮತ್ತು ಕನ್ನಡದಲ್ಲಿನ ನಮ್ಮ ಹುಡುಕಾಟದ ಬಗ್ಗೆ ಮಾತನಾಡುವ ಆ ಲೇಖನದೊಡನೆ ಈ ಲೇಖನವನ್ನೂ ತಾಳೆ ಮಾಡಿ ನೋಡಿ. ಆಗ ಇನ್ನಷ್ಟು ವಿಚಾರಗಳು ಮನೆಮಾಡುವವು. ಅತಿಯಾದ ಸಂಸ್ಕೃತ ಪದಗಳನ್ನು ಬಳಸಿ ಪಾಂಡಿತ್ಯ ಪ್ರದರ್ಶನಗೈಯುವುದರ ಬಗೆಗಿನ ಆಕ್ಷೇಪಣೆಗಳು ಇಂದು ನೆನ್ನೆಯದಲ್ಲ. ಕನ್ನಡದ ಈವರೆಗಿನ ಅತಿ ಹಳೆಯ ಕಾವ್ಯವಾದ ಕವಿರಾಜಮಾರ್ಗದಲ್ಲಿಯೇ ಮತ್ತು ಇನ್ನೂ ಅನೇಕ ಕಾವ್ಯಗಳಲ್ಲಿ ಅತಿಯಾದ ಸಂಸ್ಕೃತ ಬಳಕೆಯ ಬಗ್ಗೆ ಆಕ್ಷೇಪಣೆಗಳಿವೆ. ಆದರೆ ನಮ್ಮದೇ ಕನ್ನಡಕ್ಕಿಂತ, ಸಂಸ್ಕೃತವನ್ನು ಹೆಚ್ಚಾಗಿ ಅಭ್ಯಾಸ ಮಾಡುವ ನಾವುಗಳು, ಹಾಗು ಸಂಸ್ಕೃತದ ಸುತ್ತ ಇರುವ ದಂತಕತೆಗಳು ಅದನ್ನು ಅಗತ್ಯಕ್ಕಿಂತ ಹೆಚ್ಚಾಗಿ ವೈಭವೀಕರಿಸುತ್ತವೆ. ಯಾವುದಕ್ಕೂ ಜ್ಞಾನದ ತುಡಿತವನ್ನು ತುಂಬಿಸುವ ನುಡಿ ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿ.

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಬರಿ ಸುನಿಲಂಗೆ

ಲೇಖನ = ಬರೆಹ, ಬರೆಪು, ಬರೆವಣಿಕೆ
ಕೇವಲ = ಬರಿ,
ಜ್ಞಾನ = ಅರಿವು, ಅರಿಮೆ, ತಿಳಿವು, ತಿಳಿತ
ಆಕ್ಷೇಪಣೆ = ಅಡ್ಡಮಾತು, ಅಡ್ಡುಲಿ, ಅಡ್ಡನುಡಿ
ಪ್ರತಿಪಾದಿಸು = ಮುಂದಿಡು, ಮಂದಿಕ್ಕು, ಮಮ್ಮಡಗು
ಉಪಯುಕ್ತತೆ = ಬಾಳಿಕೆ, ಬಳಕೆತನ
ಅತಿ = ಸಿಕ್ಕಾಪಟ್ಟೆ, ಹೇರಳ, ಹೆಚ್ಚು, ಹುಚ್ಚಂಪಟ್ಟೆ, ಕಂಡಾಪಟ್ಟೆ
ಅಭ್ಯಾಸ ಮಾಡು = ಪಳಗು,
ದಂತಕತೆ = ಹಲ್ಗತೆ
ಅಗತ್ಯ = ಬೇಕಾದುದು
ವೈಭವ = ಹರಿಮೆ, ಮೆರೆತ, ಮೆರೆಮೆ
ವೈಭವೀಕರಿಸು :) = ಮೆರೆಸು, ಹಿಗ್ಗಿಸಿ ಹೇಳು, ಪೊಂಗು( ಪುಂಗು :) )
ಪ್ರತಿಕ್ರಿಯೆ = ಇದುರುನುಡಿ, ಮಾರುಲಿ, ಮರುಮಾತು.

ನಿನ್ನ ಬಾಳಿಕೆ ಬರಲಿ ಈ ಒರೆಗಳು ಎಂದು ಇಲ್ಲಿ ಹಾಕಿದೆನು.. ತಪ್ಪು ತಿಳಿಯಬೇಡ!
======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

Sunil Jayaprakash's picture

ಮಹೇಶ, ಮೇಲಿನ ಪದಗಳನ್ನು ತಿಳಿಸಿದ್ದಕ್ಕಾಗಿ ನನ್ನಿ. ವೈಭವೀಕರಿಸು = ಪುಂಗು ಸಖತ್ತಾಗಿದೆ. ಪುಂಗು ಪದ ನಾವು, ನಮ್ಮ ಗೆಳೆಯರು ಚಿಕ್ಕವರಿದ್ದಾಗ ಅದೆಷ್ಟು ಬಾರಿ ಬಳಸಿದ್ದೇವೆಯೋ ಗೊತ್ತಿಲ್ಲ. ಆದರೆ "ದೊಡ್ಡವರಾದ" ಮೇಲೆ ಓಸಿ ಕಲ್ಚರ್ಡ್ ಆಗಿ ಮಾತನಾಡಬೇಕಲ್ಲಾ, ಅದಕ್ಕೆ ಅದನ್ನು ಬಿಟ್ಟುಬಿಟ್ಟಿದ್ವಿ. ಆದರೆ ಪೊಳ್ಳು ವೈಭವೀಕರಣ = ಪುಂಗು ಸರಿಯಾಗಿಯೇ ಹೊಂದುತ್ತದೆ. ಆ ವಿಜಯಕರ್ನಾಟಕದಲ್ಲಿ ಏನೇನೋ ಪದಗಳು ಬರ್ತಾ ಇರತ್ತೆ. ಪುಂಗು ಕೂಡ, ಇನ್ನೂ ಬಂದಿರದಿದ್ದರೆ, ಒಂದು ದಿನ ಬಂದರೆ ಚೆನ್ನಾಗಿರತ್ತೆ ;)

ಅಂದ ಹಾಗೆ, ನಾವು ಗೆಳೆಯರು ಈ ನಡುವೆ ಏನು ಮಾಡ್ತಾ ಇದ್ದೀವಿ ಗೊತ್ತಾ. Ping ಇದ್ಯಲ್ಲಾ, ಅದನ್ನು ಅನುವಾದ ಮಾಡಕ್ಕೆ ಹೋಗದೆ, ಕನ್ನಡದಲ್ಲಿ ಪುಂಗಿ ಅಂತ ಮಾಡ್ಕೊಂಡು ಮಾತು ಒಡರ್ಚುತ್ತೇವೆ.

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಕನ್ನಡದಾಗೆ ಪಿಂಗು ಅಂದರೆ 'ದೂರ ಸರಿ' 'ದೂರಾಗು' ಅಂತ

pingಗೆ 'ಕೆಣಕು', ಅಂತ ಇಟ್ಟುಕೊಳ್ಳೋಣ :)

ಪುಂಗಿ ಅಂದೆರ ಹಾವಾಡಿಗರು ನೆನೆಪಾಗ್ತಾರೆ :)

======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

ASHOKKUMAR's picture

ping (ಕ್ರಿ) ಹ್ರಸ್ವವೂ, ತೀವ್ರವೂ ಆದ ಅನುರಣಿಸುವ ಶಬ್ದ ಮಾಡು

ಒಡರ್ಚು ಅಂದರೆ?

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

Sunil Jayaprakash's picture

ಒಡರ್ಚು ಎಂದರೆ ಶುರು ಮಾಡು ಎಂದರ್ಥ.
ಒಡರ್ಚುತ್ತೇವೆ -> ಪ್ರಾರಂಭಿಸುತ್ತೇವೆ, ಶುರುಮಾಡುತ್ತೇವೆ. undertake, begin, do, perform, produce, make an effort;

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

mahesha's picture

ಒಡರ್ಚು ಅಂತ ಹೇಳಲೇ ಬೇಕಾಗಿಲ್ಲ...

'ಒಡರು' ಬಳಸಿ, ಒಡರಿತು = ಶುರುವಾಯಿತು ಅಂತಲೂ ಹೇಳಬವುದು.
======================================

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

kannadakanda's picture

ಎಲ್ಲವೂ ಬೇಕು
ಲೃ, ಋ, ೠ
ೞ, ಱ
ಶ್, ಷ್‍
ಙ್‍, ಞ್‍
ಕ಼್, ಗ಼್, ಜ಼್ ಪ಼್,
ಜ಼್,
ಇವೆಲ್ಲವನ್ನು ಹೇಗೆ ಉಚ್ಚರಿಸಬೇಕೆಂದು ನಮ್ಮ ಮಕ್ಕಳು ತಿಳಿದುಕೊಳ್ಳಲಿ ಬಿಡಿ

ಉ: ಸರಳಗನ್ನಡ ಕನ್ನಡದ ಉಳಿವಿಗೆ ಒಳಿತು

kannadakanda's picture

ಎಲ್ಲವೂ ಬೇಕು
ಲೃ, ಋ, ೠ
ೞ, ಱ
ಶ್, ಷ್‍
ಙ್‍, ಞ್‍
ಕ಼್, ಗ಼್, ಜ಼್ ಪ಼್,
ಜ಼್,
ಇವೆಲ್ಲವನ್ನು ಹೇಗೆ ಉಚ್ಚರಿಸಬೇಕೆಂದು ನಮ್ಮ ಮಕ್ಕಳು ತಿಳಿದುಕೊಳ್ಳಲಿ ಬಿಡಿ
ಜೊತೆಗೆ ಕನ್ನಡ ಅಂಕಿಗಳೂ ಸಹ ೦ ೧ ೨ ೩ ೪ ೫ ೬ ೭ ೮ ೯