(ಅಕ್ಷರ) ದುಃಖ ನಿವೇದನೆ.
ಮನದೊಳಗೆ ಮೊನೆಯಾಡಿಸುವ ಹಳೆ ನೆನಪಿನ ಮುಳ್ಳಿಗೆ, ಕೇಳುತ್ತಿರುವ ಗಝಲ್ ಭಾವಗಳು ಬಲ ತುಂಬಿ, ಹೀಗೊಂದು (ಅಕ್ಷರ) ದುಃಖ ನಿವೇದನೆ.
ಹಚ್ಚಿದ ದೀಪ ಆರಲೇಬೇಕು,
ಮುಡಿದ ಹೂವು ಬಾಡಲೇಬೇಕು,
ಮತ್ತೆ ಮತ್ತೆ ನೆನಪಾಗಿಯೂ
ನಿನ್ನ ಮರೆಯಲೇಬೇಕು..
ಒಂಟಿ ನಾನು
ನೀನು ಬರುವ ಮುಂಚೆ;
ಒಂಟಿ ನಾನು
ನೀನು ಹೋದ ಮೇಲೆ ಕೂಡಾ;
ನೀನು ಬಂದರೇನು, ಬರದಿದ್ದರೇನು..
ಬಂದರೆ ಅರೆಘಳಿಗೆ ನಲಿವಲ್ಲಿ ಅದ್ದಿ ತೆಗೆದೀತು ಜೀವ,
ಹೊರಟ ಮೇಲೆ ಕೆಲ ದಿನಗಳು ಸವೆಯುತ್ತವೆ-
ಹಸಿ ಗಾಯದಂತೆ,
ಬೇಸರವಿಲ್ಲ, ಉರಿ ಗೊತ್ತಾಗುವುದಿಲ್ಲ
ನಿನ್ನ ಕನಸು ತುಂಬುತ್ತದೆ ಗಾಯಕ್ಕೆ ರಂಗು.
...ಆಮೇಲೆ
ಇದ್ದೇ ಇದೆಯಲ್ಲ,
ದೀಪವಾರಿ, ಹೂಗಳುದುರಿ,
ಮರೆಯಲಿಕ್ಕೆಂದೇ ನೀನು ನೆನಪಾಗುವುದು..
ಇಲ್ಲ ಇದನ್ನು ಬರೆಯುವಾಗ ನಾನು ಅಳುತ್ತಿಲ್ಲ,
ನೀನು ನೆಮ್ಮದಿಯಿಂದ ಮಲಗು.
ಇಷ್ಟಕ್ಕೆಲ್ಲ ಅಳುತ್ತಾರೆಯೇ,
ನಿನ್ನ ಕಳೆದುಕೊಂಡಾಗಲೂ ಕಣ್ಣು ತುಸು ನೆನೆದಿತ್ತಷ್ಟೆ.

- sindhu ರವರ ಬ್ಲಾಗ್
- Login or register to post comments
- 541 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: (ಅಕ್ಷರ) ದುಃಖ ನಿವೇದನೆ.
ನಿಮ್ಮ ಪದಗಳು/ಒರೆಗಳು ತಿಳಿತಿಳಿಯಾಗಿವೆ ...ಆದರೆ ತಲೆಬರಹನೂ ಇನ್ನೊ ತಿಳಿ ಮಾಡಬಹುದಿತ್ತು ಅನ್ಸುತ್ತೆ.
-ನಲಿವು
ಉ: (ಅಕ್ಷರ) ದುಃಖ ನಿವೇದನೆ.
ತುಂಬಾ ಸೊಗಸಾಗಿದೆ .. ಸಿಂಧು ರವರೆ.. ನಿಮ್ಮ ಬ್ಲಾಗ್ ಕೂಡ ನೋಡಿದೆ..
ಅದರಲ್ಲಿ ನೀವು ಬರೆದ ಲೇಖನಗಳು ಹಾಗು ಕೆಲವು ಕವನಗಳು ಕೂಡ ಒಮ್ಮೆ ಓದಿದರೆ.. ಮತ್ತೆ ಮತ್ತೆ ಓದಬೇಕೆನಿಸುತ್ತದೆ...
ಹೀಗೆ ಬರೀತಾಇರಿ..
-ಖ.ವಿ.
ಉ: (ಅಕ್ಷರ) ದುಃಖ ನಿವೇದನೆ.
" (ಅಕ್ಷರ) ದುಃಖ ನಿವೇದನೆ."
ಅಕ್ಷರ ಅಂದರೆ ಅಳಿಸಲಾಗದ, ಇದ್ದೇ ಇರುವ, ನಿರಂತರ ಶಾಶ್ವತ ಅಂತೆಲ್ಲ ತಿಳಿವು ಬರುವುವು.
ನಿಮ್ಮ ಕವನಗಳಲ್ಲೂ ದುಕ್ಕ ಅಕ್ಷರವಾಗಿದೆ!
ಉ: (ಅಕ್ಷರ) ದುಃಖ ನಿವೇದನೆ.
ಮಹೇಶ..
ಅಕ್ಷರದ ಬಗ್ಗೆ ತಿಳಿಸಿದ್ದಕ್ಕೆ ನನ್ನಿ..
ಉ: (ಅಕ್ಷರ) ದುಃಖ ನಿವೇದನೆ.
ವೈಭವ, ಖ.ವಿ, ಮತ್ತು ಮಹೇಶ,
ಇಷ್ಟಪಟ್ಟಿದ್ದಕ್ಕೆ ನನಗೆ ಹಿತವಾಯಿತು.
ಮಹೇಶ ಬರೆದಿದ್ದು ಸರಿ ನನ್ನ ಉದ್ದೇಶ ಅಕ್ಷರವಾದ (ಕಡಿಮೆಯಾಗದ) ದುಃಖ ಅಂತ ಹೇಳುವುದೇ ಆಗಿತ್ತು. ಯಾಕೋ ಸೂಚ್ಯ ಇಷ್ಟವಾದ್ದರಿಂದ ಹಾಗೆ ಬರೆದೆ. ಅಲ್ಲದೆ ಅದು ಅಂತರ್ಗತ ಅಂತ ಹೇಳಬೇಕಿತ್ತು ನನಗೆ ಅದಕ್ಕೆ ಆ ಬಗೆಯ ತಲೆ ಬರಹ.
ಓದಿ ಸ್ಪಂದಿಸುತ್ತಿರಿ, ನನ್ನ ಅರಿವು ತಿಳಿಯಾಗುತ್ತದೆ.
ಪ್ರೀತಿಯಿರಲಿ,
ಸಿಂಧು
ಉ: (ಅಕ್ಷರ) ದುಃಖ ನಿವೇದನೆ.
ಸಿಂಧು ಅವರೇ,
ನಿಮ್ಮ ಸುಮಾರಾಗಿ ನಿಮ್ಮ ಎಲ್ಲ ಕವನ-ಕತೆಗಳಲ್ಲೂ ನೋವೇ ತುಂಬಿಕೊಂಡಿದೆ ಎಂದು ನನಗೆ ಅಂನಿಸಿದೆ( ತಪ್ಪಿರಬಹುದು ).
ನಿಮ್ಮದೊಂದು 'ನಲಿವು ತುಂಬಿದ" ಕವನವೂ ಬರಲೆಂಬ ಹಾರೈಕೆ!.
ಕವನ ಚನ್ನಾಗಿದೆ. ನೀವು ಬರೆಯುತ್ತಿರಿ, ನಾವು ಓದುತ್ತಿರುತ್ತೇವೆ.
ಉ: (ಅಕ್ಷರ) ದುಃಖ ನಿವೇದನೆ.
ಮಹೇಶ,
ನೋವಲ್ಲಿ ಹುಟ್ಟಿರಬಹುದು ಕವಿತೆ.. ನೋವೊಂದೆ ಅಲ್ಲ.. ನನ್ನ ಮಟ್ಟಿಗೆ ನಲಿವನ್ನು ಕೂತು ಆಸ್ವಾದಿಸಲು ಬೇಕಾಗುವುದೇ ನೋವಿನ ಕಟ್ಟೆ.. ಏನನ್ನಿಸುತ್ತೆ ನಿಮಗೆ?
ನೋಡೋಣ ಒಂದು ತಮಾಷಿ/ಹಿತ ಕವಿತೆ ಮಹೇಶನಿಗಾಗಿ ಮೊಗ್ಗೊಡೆಯಬಹುದಾ ಅಂತ...
ಉ: (ಅಕ್ಷರ) ದುಃಖ ನಿವೇದನೆ.
ನನಗೆ ನಿಮ್ಮಷ್ಟು ಚಂದವಾಗಿ ಕವನ ಬರೆಯಲು ಬರದು.
ಆದರೂ ನನ್ನದೊಂದು ಕವನ ಇದು http://sampada.net/blog/mahesha/18/06/2007/4578 ,
ಅಲ್ಲಿ ಈ ಸಾಲು ಬರುವುದು.
"ಬಾಳ ಮೆಟ್ಟಿಲುಗಳ ಎಡುರು ನಲಿವೆಂದು
ಬಗೆದು ಕೆಲವಕ್ಕೆ ಅತ್ತು ಕೆಲವಕ್ಕೆ ನಕ್ಕು"
ನನ್ನಂತೆ "ನೋವು ನಲಿವು" ಅನ್ನುವುದು ಇಲ್ಲ. ಇದು ಬರೀ ಮಾತು ಅಷ್ಟೆ.
ಆದರೆ ದಿಟದ ಬದುಕಲ್ಲಿ, ನನಗೊಂದು ದೊಡ್ಡ, ಬಲು ದೊಡ್ಡ ಅಂಜಿಕೆ ಇದೆ. ಏನಾದರು ಯಾವುದೋ ಒಂದು ಸಂಗತಿಯಿಂದ ನೊಂದು, ನಾವು ಅಲ್ಲೇ ಅಳುತ್ತಾ ನಿಂತು ಬಿಡುತ್ತೀವಾ ಅಂತ!! ಈ ಅಂಜಿಕೆ ಎಷ್ಟು ಆಳದಲ್ಲಿ ಅಡಗಿದೆ ಎಂದರೆ, ಅದರ ಇರುವಿನ ಗುಮಾನಿಯೂ ಬಾರದು!
ನಾವೆಲ್ಲರೂ ಹೀಗೆ ಒಂದೊಂದಕ್ಕೆ ಅಳುತ್ತಿರುತ್ತೇವೆ, ಆದರೆ ಜೊತೆ ಜೊತೆಗೆ ಕೊಂಚ ನಗುವುದಕ್ಕೂ ಮಾಡಬೇಕು. ಅಲ್ವಾ!
ಕೊರೆತ ಸಾಕು
ನನ್ನಿ! ಧನ್ಯವಾದ. ಈ ಒಳ್ಳೆಯದಾಗಲಿ.
ಉ: (ಅಕ್ಷರ) ದುಃಖ ನಿವೇದನೆ.
ತಿದ್ದು
ನಗುವುದಕ್ಕೂ ಮಾಡಬೇಕು = ನಗುವುದೂ ಮಾಡಬೇಕು
ಉ: (ಅಕ್ಷರ) ದುಃಖ ನಿವೇದನೆ.
ನೋವು ನಲಿವಿನ ಬಗ್ಗೆ ಸುಮಾರು ದಿನಗಳ ಹಿಂದೆ ಬರೆದದ್ದನ್ನು ಇವತ್ತು ಹಾಕಿದ್ದೀನಿ..
ನಿಮ್ಮಷ್ಟು ಸೊಗಸಾಗಿ ಬರೆಯಲು ಬರುವುದಿಲ್ಲ... ಆದರೂ ನಿಮ್ಮ ಅನಿಸಿಕೆ ತಿಳಿಸಿ..