ವೆಲೆಂಟೈನ್ ಡೇ ಸ್ಪೆಶಲ್
ಏನಿದು, "ಇಷ್ಟು ಹೊತ್ತಾದರೂ ಆಫೀಸಿಗೆ ಯಾರೂ ಬಂದಿಲ್ಲ", ಅಂತ ಯೋಚಿಸುತ್ತಿರುವಾಗಲೇ, ಹೊಳೆದು ಹೋಯಿತು. ಸುತ್ತಲೂ ಕಣ್ಣಾಡಿಸಲು ಶುರು ಮಾಡಿದೆ. ಬಂದಿದ್ದವರು ಮೂರೇ ಜನ. ನೆನ್ನೆ ತಾನೇ ರಥಸಪ್ತಮಿಯ ಸಿಹಿಯನ್ನು ಸವಿದಾಗಿತ್ತು. ನೆನ್ನೆ ಸಂಜೆಯಿಂದಲೇ "ಈ ಸಂಜೆ ಯಾಕಾಗಿದೆ" ಎನ್ನುವಂತೆ "ನೀಲ ಮೇಘ ಗಾಳಿ ಬೀಸಿ"ದಂತಾಗಿ ನನ್ನೆಲ್ಲ ಹದಿಹರೆಯದ ಭಾವನೆಗಳು ಗರಿಬಿಚ್ಚಿ "ಮನ ಉಯ್ಯಾಲೆಯಂತಾಗಿ ತೂಗಾಡಲು" ಮೊದಲುಮಾಡಿತ್ತು.
ತಲೆ ಕೊರೆಯಲು ಶುರುವಾಗಿದೆ. ಕನ್ನಡದ ಪಂಚಾಂಗದ ಪ್ರಕಾರ ಈ ದಿನಕ್ಕೆ ಏನು ಹೆಸರಿಡಬಹುದು ಎಂಬುದಾಗಿ.
"ವ್ಯಾಲೆಂಟೈನ್ ಡೇ" ಇದನ್ನು "ಪ್ರೇಮಿಗಳ ದಿನ" ಅಂತ ಯಾಕೆ ಕರೀತಾರೋ, ಎಪರಾತೊಪರಾ ಫ್ಲಾಪಾದ ಪದ ಅದು. "ಪ್ರೇಮ" ಎನ್ನುವ ಪದ ಬರೀ "ಲವ್" ಅನ್ನು ಸೂಚಿಸುತ್ತದೆ. ಆದರೆ ನಮ್ಮ ನಿಮ್ಮ ಪುಟ್ಟ ಹೃದಯದಲ್ಲಿ ಬರೀ ಪ್ರೇಮವಷ್ಟೇ ಅಲ್ಲ, ಕಾತರ, ಕುತೂಹಲ, ಆಸಕ್ತಿ, ಭಕ್ತಿ, ಭಯ ಮುಂತಾದ ರಸಜನಕಗಳೂ ಕೆಲಸ ಮಾಡುತ್ತಿರುತ್ತದೆಯಲ್ಲವೇ. ಮೊಟ್ಟ ಮೊದಲ ಬಾರಿಗೆ "ಪ್ರೇಮ" ಎನ್ನುವ ಪದದಲ್ಲಿ ಅಂತ ಆಕರ್ಷಣೆಯೇ ಇಲ್ಲವೆಂದನಿಸಿ, ಪಿಚ್ಚೆನಿಸಿತು. ಆದರೂ ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳಬಾರದಲ್ಲವೇ. ತಕ್ಷಣವೇ ಥಟ್ ಅಂತ ಹೊಳೆಯಿತು, ನೋಡಿ.
======================================
ಚಂದನ ವಾಹಿನಿಯ, ನಾ.ಸೋಮೇಶ್ವರ ಅವರು "ಥಟ್ ಅಂತ ಹೇಳಿ" ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಕೇಳುತ್ತಿರುವುದಾಗಿ ಕಲ್ಪಿಸಿಕೊಳ್ಳಿ
=======================================
ನಾಸೋ - ಸಾನೋ, ನಿಮ್ಮ ಪ್ರಶ್ನೆ ಹೀಗಿದೆ. ಪ್ರೇಮಿಗಳು ಕಾತರ ಕುತೂಹಲಗಳಿಂದ ಕೂಡಿ ಸ್ನೇಹದಿಂದ ನಲ್ಲ-ನಲ್ಲೆಯೊಡನೆ ಆಚರಿಸಲೇಬೇಕಾದ ವ್ರತ ಯಾವುದು ?
ಸಾನೋ - ಸ್ವಲ್ಪ ಕ್ಲೂ ಬೇಕಲ್ಲ.
ನಾಸೋ - ಸುಳುಹು ೧ ಗೆಳೆತನ, ಪ್ರೀತಿ, ಪ್ರೇಮ, ಕಾತರ, ಕುತೂಹಲ, ಆಸಕ್ತಿ, ಶ್ರದ್ಧೆ ಎಲ್ಲವನ್ನೂ ತಿಳಿಸುವ ಅಚ್ಚ-ಕನ್ನಡ ಪದ ಯಾವುದು.
ಸಾನೋ - <ತಲೆ ಕೆರೆದು ಕೊಳ್ಳುತ್ತಾ> ಗೊತ್ತಾಗ್ತಾ ಇಲ್ವಲ್ಪ ಸಾರ್. ಬೇರೆ ಕ್ಲೂ ಇದ್ರೆ ಕೊಡಿ.
ನಾಸೋ - ಸುಳುಹು ೨
ಸಂಪದ ಎಂಬ ಆನ್ಲೈನ್ ಸಮುದಾಯದಲ್ಲಿ ಭರತೇಶ ವೈಭವದ ಬಗ್ಗೆ ಇರುವ ಒಂದು ಲೇಖನ ಓದಿ. ಆ ಲೇಖನ ಹೀಗೆ ಸಾಗತ್ತೆ.
<ಪರದೆಯ ಮೇಲೆ ಭರತೇಶ ವೈಭವ ಕಲ್ಪು ೧೫ - ಕನ್ನಡದಲ್ಲಿ ಶ್ಲೇಷಾಲಂಕಾರದ ಪ್ರಯೋಗ ಬಿತ್ತರವಾಗತ್ತೆ>
ಸಾನೋ - "ಅರ್ತಿನಾಳ್"
ನಾಸೋ - ಸರಿಯಾದ ಉತ್ತರ. ನಿಮಗೆ "ಭರತೇಶ ವೈಭವ" ಪುಸ್ತಕವನ್ನ ಬಹುಮಾನವಾಗಿ ನೀಡ್ತಾ ಇದ್ದೇವೆ. ದಯವಿಟ್ಟು ಸ್ವೀಕರಿಸಿ.
ಸಾನೋ - ನನ್ನಿ, ಸಾರ್.
"ಹ್ಯಾಪಿ ಅರ್ತಿನಾಳ್".

- Sunil Jayaprakash ರವರ ಬ್ಲಾಗ್
- Login or register to post comments
- 278 hits
- Email this blog





RSS:
ಪ್ರತಿಕ್ರಿಯೆಗಳು
ಉ: ವೆಲೆಂಟೈನ್ ಡೇ ಸ್ಪೆಶಲ್
ನಲಿ ಕೂರ್‍ನಾಳ್