ಗಾಳಿಪಟ - ಒಂದು ಹೂರಣ
೧೮-೦೧-೨೦೧೮
ಕಳೆದ ದಶಕದಲ್ಲಿ ಬಿಡುಗಡೆಯಾದ "ಗಾಳಿಪಟ" ಸಿನಿಮಾ ಸೃಷ್ಟಿಸಿದ ವಿವಾದಗಳು ಅನೇಕ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಗಾಳಿಪಟಕ್ಕೆ ಈ ದಿನ ಹತ್ತುವರ್ಷಗಳು ತುಂಬಿದ ಕಾರಣ, ಅದರ ಸುತ್ತ ಏನೇನೆಲ್ಲಾ ಆರೋಪ ಮಾಡಲಾಗಿದ್ದವು ಎಂಬುದರ ಕುರಿತು ಒಂದು ನೇರ, ದಿಟ್ಟ ರಿಪೋರ್ಟ್ ನಮ್ಮ ನಿರಂತರ ಪ್ರತಿನಿಧಿಯಿಂದ.
೧. ಪಿ.ಯು.ಸಿ ಓದುತ್ತಿರುವ ಹುಡುಗಿಗೆ ಮದುವೆ ಏರ್ಪಡಿಸುವುದು ಕಾನೂನುಬಾಹಿರ ಎಂದು ಆರೋಪಿಸಿ, ಅಖಿಲ ಭಾರತ ಮಹಿಳಾ ಆಯೋಗದ ಕರ್ನಾಟಕ ಪ್ರಾಂತ್ಯದ ಅಧ್ಯಕ್ಷೆ, "ಯೂವಿಯಲ್ ಕಾರ್ಮೆನೋಸಿಲಿಯಾ" ಚಿತ್ರದ ನಿರ್ದೇಶಕರು ಮತ್ತು ನಿರ್ಮಾಕರುಗಳಿಗೆ ನೊಟೀಸ್ ಜಾರಿ ಮಾಡಲಾಗಿತ್ತು.
೨. ಚಿತ್ರದಲ್ಲಿ ವಿಧವೆಯ ಪಾತ್ರವನ್ನು ಕೋಲೆಬಸವನಂತೆ ಬಳಸಿಕೊಂಡಿರುವುದು, "ಮಹಿಳಾ ಹಕ್ಕುಗಳನ್ನು ದಮನ ಮಾಡುವ ಕಾರ್ಯ" ಎಂದು ಮಹಿಳಾ ಹಕ್ಕು ಆಯೋಗ ಯೋಗರಾಜ್ ಭಟ್ಟರಿಗೆ ನೋಟೀಸ್ ಜಾರಿ ಮಾಡಿದೆ. ಮಹಿಳೆಗೆ ಎಷ್ಟೇ ಕಷ್ಟ ಬಂದರೂ ಆಕೆ ಅದನ್ನು ಸೈರಿಸಿಕೊಳ್ಳಬೇಕು ಎಂಬುದನ್ನು ಸಾರುತ್ತದೆ ಎಂದು "ಮೀನಸ್ ಮೈನಾ ಓವಿಕಾನಗನ್" ಅವರು ಆಯೋಗಕ್ಕೆ ದೂರು ನೀಡಿದ್ದರು.
೩. ಕಾನ್ವಂಟ್ ಶಾಲೆಗಳಲ್ಲಿ ಕನ್ನಡ ಕಡೆಗಣಿಸಲಾಗಿದೆ ಎಂಬ ಆರೋಪದಲ್ಲಿ ಹುರುಳಿಲ್ಲ, ಕ್ರೈಸ್ತರೂ ಕನ್ನಡದವರೇ ಎಂದು ಸಾರಲು "ಕ್ಯಾಥೋಲಿಕ್ ಕನ್ನಡ ಕ್ರೈಸ್ತ ಸಂಘ" ಪೊಲೀಸ್ ಕಣ್ಗಾವಲಿನಲ್ಲಿ ಸಂತ ಮೇರಿಯಮ್ಮನ ಜಾತ್ರೆಯನ್ನು ಆಯೋಜಿಸಿ ತನ್ನ ಪ್ರತಿಭಟನೆಯನ್ನು ಶಾಂತ ರೀತಿಯಲ್ಲಿ ಪ್ರಸ್ತುತಪಡಿಸಿತ್ತು.
೪. "ಮನದ ಮುಗಿಲಲ್ಲಿ ಮುಹಬ್ಬತ್" ಎಂಬ ಹೆಸರಿಟ್ಟಿದ್ದರೂ ಚಿತ್ರದಲಿ ಮುಸ್ಲಿಂ ಸಂವೇದನೆ ಕಾಣಿಸುವುದಿಲ್ಲ. ಅದೂ ಅಲ್ಲದೆ ಈ ಚಿತ್ರದಲ್ಲಿ ಹಂದಿಯನ್ನು ಕೊಲೆ ಮಾಡುವ ಸನ್ನಿವೇಶಗಳಿದ್ದು, ಆದಕಾರಣ "ಮುಸ್ಲಿಮರು" ಈ ಸಿನಿಮಾ ನೋಡಬಾರದು ಎಂಬ ಫತ್ವಾ ಹೊರಡಿಸಲಾಗಿತ್ತು.
೫. ಈ ಚಿತ್ರದಲ್ಲಿ ತಮ್ಮ ಸಮಾಜದ ಒಬ್ಬರನ್ನು ಪ್ರಾಣಿಕುಲಕ್ಕೆ ಹೋಲಿಸಿ ಅವಮಾನ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಆರೋಪಿಸಿತ್ತು. "ಚಿತ್ರದಲ್ಲಿ ಒಬ್ಬ ದಲಿತನನ್ನು ಅವಶ್ಯವಿಲ್ಲದಿದ್ದರೂ ಮೂಗನನ್ನಾಗಿ ಮಾಡಲಾಗಿತ್ತು", ಎಂಬುದು ದಸಂಸದ ಆಕ್ರೋಶಕ್ಕೆ ಕಾರಣ.
೬. ತಮ್ಮ ಸಹಸಂಘಗಳ ಆರೋಪದಲ್ಲಿ ನಿಜಕ್ಕೂ ಹುರುಳಿದೆ ಎಂದು "ಅಹಿಂದ" ಅವುಗಳಿಗೆ ತನ್ನ ಪೂರ್ಣ ಬೆಂಬಲ ಘೋಷಿಸಿದೆ. ಅಹಿಂದ ಒಂದು ಹೆಜ್ಜೆ ಮುಂದೆ ಹೋಗಿ, ಪುರೋಹಿತಶಾಹಿ ಸಮಾಜವನ್ನು ಕಿತ್ತೊಗೆದು, ವಿಶ್ವದ ಏಕೈಕ ಸಮಾಜಮುಖಿ ಧರ್ಮವಾದ ಬೌದ್ಧ ಧರ್ಮದ ಪ್ರಚಾರವನ್ನು ಮತ್ತಷ್ಟು ತೀವ್ರಗೊಳಿಸುವಂತೆ ತನ್ನ ಸಹಸಂಘಟನೆಗಳಿಗೆ ಕರೆ ನೀಡಿತ್ತು.
೭. "ಬ್ರಾಹ್ಮಣರು ಮತ್ತು ಒಕ್ಕಲಿಗರು ಒಂದಾಗಿಬಿಟ್ಟರೆ ವೈದಿಕ ಧರ್ಮ ಪುನಶ್ಚೇತನಗೊಳ್ಳುತ್ತದೆ ಎಂಬುದನ್ನು ಮನಗಂಡಂತಿರುವ ಯೋಗರಾಜ ಭಟ್ಟರು, ಪುರೋಹಿತಶಾಹಿ ಸಮಾಜವನ್ನು ಹೇಗಾದರೂ ಮಾಡಿ ಮುಂದುವರಿಸಿಕೊಂಡು ಹೋಗಲೇಬೇಕು ಎಂಬ ಸಂದೇಶವನ್ನು ಸಾರುವ ಸೂಕ್ಷ್ಮ ಹಾಗು ಅತಿ ಹೀನ ಮನಿಸ್ಥಿತಿಯ ಸಿನಿಮಾ ಮಾಡಿದ್ದಾರೆ" ಎಂದು "ವಿಶ್ವ ಮಾನವ ವಿಮರ್ಶಕರ ಸಂಘ" ಗಂಭೀರ ಆರೋಪ ಮಾಡಿತ್ತು. "ಒಟ್ಟಿನಲ್ಲಿ ಬ್ರಾಹ್ಮಣರು ಮತ್ತು ಗೌಡರು ಒಂದಾಗಿಬಿಡಬೇಕು ಎಂಬ ಹಿಡನ್ ಅಜೆಂಡಾ ಈ ಸಿನಿಮಾದಲ್ಲಿದೆ" ಎಂಬುದೇ ಇಷ್ಟೆಲ್ಲ ಆಕ್ರೋಶಕ್ಕೆ ಕಾರಣವಾಗಿತ್ತು.
೮. ಬ್ರಾಹ್ಮಣ ಕುಟುಂಬವೊಂದು ಬೇಟೆಯಲ್ಲಿ ನಿರತವಾಗಿರುವಂತೆ ಚಿತ್ರಿಸಿದ್ದರೂ, ಕೊನೆಗೆ ಅದೇ ಹಂದಿಯಲ್ಲಿ ವರಾಹಾವತಾರವನ್ನು ತೋರಿಸಿ, ಅದರ ಕಣ್ಣಿನಿಂದ ದಿವ್ಯ ಬೆಳಕನ್ನು ಕಾಣಿಸುತ್ತಲೇ ಒಬ್ಬನಿಗೆ ಮೋಕ್ಷ ನೀಡಿಸಿದ ಕಾರಣ, ಗಾಳಿಪಟದ ನಿರ್ದೇಶಕ ಯೋಗರಾಜ್ ಭಟ್ಟರಿಗೆ "ಬ್ರಾಹ್ಮಣರ ಸಂಘ"ವು, "ವರ್ಷದ ಬ್ರಾಹ್ಮಣ" ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಈ ತೀರ್ಮಾನ ಅದೇ ಸಮಾಜದ ಇನ್ನಿತರ ಅಭಿಮಾನಿ ಸಂಘಗಳ ಕೆಂಗಣ್ಣಿಗೆ ಗುರಿಯಾಗಿ ನಂತರ ಪ್ರಶಸ್ತಿ ತಿಪ್ಪೆ ಗುಂಡಿಗೆ ಬಿದ್ದುಹೋದದ್ದನ್ನು ನೆನಪಿಸಿಕೊಳ್ಳಬಹುದು.
೯. ಒಟ್ಟಿನಲ್ಲಿ ಗಾಳಿಪಟ, "ಪ್ರಗತಿಪರ ಸಮಾಜದ" ಯಾವ ಒಬ್ಬರೂ ನೋಡಬಾರದ ಸಿನಿಮಾ ಆಗಿದ್ದರೂ ಜನ ಅದನ್ನು ಇಷ್ಟಪಟ್ಟಿದ್ದು ಜಗತ್ತಿನ ೮+೮ನೆಯ ಅದ್ಭುತ!!!! ಎಂದು ಸಾಹಿತ್ಯವಲಯ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿತ್ತು.
೧೦. "ಅಖಿಲ ಭಾರತ ಸಂಸ್ಕೃತ ಪ್ರಚಾರ ಪರಿಷತ್ತಿನ" ಅಧ್ಯಕ್ಷರಾದ ಡಾ||ಸುಮಕೋಮಲಾನಂದಶಂಕರವಿದ್ಯಾಮತಿಶ್ರೀಗುಣಶೀಲರಘುವರೇಣ್ಯರು ಗಾಳಿಪಟ ಚಿತ್ರದಲ್ಲಿ ಒಂದು ಕಡೆ, ಸಂಸ್ಕೃತ ಪದವೊಂದನ್ನು "ಅಚ್ಚ ಕನ್ನಡ" ಪದ ಎಂಬುದಾಗಿ ಹೇಳಿಸಿರುವುದನ್ನು ಖಂಡಿಸಿ ಮಾತನಾಡುತ್ತ, "ಸಂಸ್ಕೃತವಿಲ್ಲದ ಕನ್ನಡ ಜಾಳು" ಎಂಬುದಾಗಿ ಹೇಳಿದ್ದರು. ಈ ಹೇಳಿಕೆ, ಅನೇಕ ಆನ್ಲೈನ್ ಫೋರಮ್ಮುಗಳಲ್ಲಿ ವಾದವಿವಾದಕ್ಕೆಡೆ ಮಾಡಿತ್ತು.
೧೧. "ತಪ್ಪುಗಳಿಗೆ ಜೈ", ಎಂಬುದನ್ನು ತೋರಿಸಿಕೊ"ಣ್ಣ" ಯೋಗರಾಜ್ ಭಟ್ಟರಿಗೆ "ಕನ್ನಡ ಸಂಘ"ವು ಸನ್ಮಾನ ಕಾರ್ಯಕ್ರಮ ಏರ್ಪಡಿಸಿತ್ತು. ಆದರೆ "ವರುಣ ಅವಕೃಪೆ ಕಾರ್ಯಕ್ರಮ ಅಸಂಪೂರ್ಣ" ಎಂಬ ಸುದ್ಧಿ ನಾಡಿನ ಪತ್ರಿಕೆಗಳಲ್ಲಿ ಮರುದಿನ ಕಾಣಿಸಿಕೊಂಡಿತ್ತು.
೧೨. "ಕರಾವಳಿಯ ಕಲೆಯಾದ ಯಕ್ಷಗಾನವನ್ನು ಚಿತ್ರದಲ್ಲಿ ಅಶ್ಲೀಲವಾಗಿ ಬಳಸಿಕೊಳ್ಳಲಾಗಿದೆ" ಎಂದು ಮಲೆನಾಡು ಯಕ್ಷಗಾನ ಅಭಿಮಾನಿಗಳ ಸಂಘ ಉಗ್ರ ಹೋರಾಟಕ್ಕೆ ಕರೆ ನೀಡಿತ್ತು.
-----------------------------------------------------------------------------------------------
ಬ್ಲಾಗಾರ್ಪಣೆ - "ಸೃಜನಶೀಲ" ಎಂಬ ಪದವನ್ನು ಅಡ್ಡಡ್ಡ ಉದ್ದುದ್ದ ಸೀಳಿ ಸೀಳಿ ಕನ್ನಡಿಗರನ್ನು ಕಲೆಯಿಂದ ದೂರಮಾಡಿ ಕನ್ನಡತನವನ್ನು ಕೊಲೆಮಾಡಬೇಕೆಂಬ ಮಹತ್ವಾಕಾಂಕ್ಷೆ ಹೊತ್ತ ಮಹಾಮಹಿಮ ಧೀಮಂತರಿಗೆ.

- Sunil Jayaprakash ರವರ ಬ್ಲಾಗ್
- Login or register to post comments
- 640 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಗಾಳಿಪಟ - ಒಂದು ಹೂರಣ
ಇಶ್ಟೇನಾ?
ಇನ್ನೂ ಸೇರಿಸೋ...
೧) ಬಾಮಣರ ಮಗನಿಗೆ ಗೋರಿ

)
೨) ಬಾಮಣ ವಿದವೆ ಯಾವಾಗಲೂ ಚೂಡಿದಾರ, ಬಾಮಣರ ಮಗಳು ತೋಳಿಲ್ಲದ ಅಂಗಿ
೩) ಬಾಮಣರ ಹುಡುಗಿಯರು ಯಾ ಯಾ ಜಾತಿಪಾತಿ ಹುಡುಗರಿಗೆ ಒಲಿದು ಮದುವಯಾಗೋದು..( ದೇವಯಾನಿ ಕತೆ
ಯೋಗರಾಜ ಬಟ್ಟರಿಗೆ ಬಾಮಣರು ಉಗಿದು ಉಪ್ಪಿನಕಾಯಿ ಹಾಕಬೇಕು. ಇಂದ ದರಿದರ ಸಿನಿಮ ಮಾಡಿದಕ್ಕೆ
ಒಟ್ರಾಸೆ...... ಕನ್ನಡ ಸಿನಿಮ ಓಡಬಾರದು!
ಉ: ಗಾಳಿಪಟ - ಒಂದು ಹೂರಣ
೧೦. "ಅಖಿಲ ಭಾರತ ಸಂಸ್ಕೃತ ಪ್ರಚಾರ ಪರಿಷತ್ತಿನ" ಅಧ್ಯಕ್ಷರಾದ
ಡಾ||ಸುಮಕೋಮಲಾನಂದಶಂಕರವಿದ್ಯಾಮತಿಶ್ರೀಗುಣಶೀಲರಘುವರೇಣ್ಯರು
ಗಾಳಿಪಟ ಚಿತ್ರದಲ್ಲಿ ಒಂದು ಕಡೆ, ಸಂಸ್ಕೃತ ಪದವೊಂದನ್ನು "ಅಚ್ಚ ಕನ್ನಡ" ಪದ ಎಂಬುದಾಗಿ ಹೇಳಿಸಿರುವುದನ್ನು ಖಂಡಿಸಿ ಮಾತನಾಡುತ್ತ, "ಸಂಸ್ಕೃತವಿಲ್ಲದ ಕನ್ನಡ ಜಾಳು" ಎಂಬುದಾಗಿ ಹೇಳಿದ್ದರು. ಈ ಹೇಳಿಕೆ, ಅನೇಕ ಆನ್ಲೈನ್ ಫೋರಮ್ಮುಗಳಲ್ಲಿ ವಾದವಿವಾದಕ್ಕೆಡೆ ಮಾಡಿತ್ತು.
ಇದನ್ನು ಓದಿ ನಕ್ಕು ನನಗೆ ಹೊಟ್ಟೆ ಹುಣ್ಣಾಗಿರಬೋದು!
ಉ: ಗಾಳಿಪಟ - ಒಂದು ಹೂರಣ
೧೫) ’ಮಂಕೇಶ್’ ಪತ್ರಿಕೆಯು ಈ ಚಿತ್ರ ತೋಪಾಗುತ್ತದೆ ಎಂದು ಭವಿಶ್ಯ ನುಡಿದಿದ್ದರೂ ಈ ಚಿತ್ರವನ್ನು ಯಶಸ್ವಿಯಾಗಿ ಮಾಡಿದ್ದಕ್ಕೆ, ಸಾರ್ವಜನಿಕರ ಮೇಲೆಯೇ ಮಾನ ನಷ್ಟ ಮೊಕದ್ದಮೆ ಕೇಸು ದಾಖಲಿಸಿರುವುದು.
ಉ: ಗಾಳಿಪಟ - ಒಂದು ಹೂರಣ
ನೇರ ವರದಿಗಾರ ಮುಂದುವರಿಸುತ್ತ___
ನೇರ ವರದಿಗಾರ ಎಂದು ಬಳಸುವ ಹಕ್ಕು ಇರುವುದು ನಮಗೆ ಮಾತ್ರ. ಅದು ಹೇಗೆಂದರೆ "ನೇರ ೦ ದಿಟ್ಟ ೦ ನಿರಂತರ" ಎಂಬುದು ನಮ್ಮ ಸ್ಲೋಗನ್ ಆಗಿದೆ. ಗಾಳಿಪಟದ ಒಂದು ಹಾಡಿನಲ್ಲಿ ಜಯಂತ್ ಈ ಕೆಳಗಿನಂತೆ ಬರೆದಿದ್ದರೆಂಬ ಕಾರಣಕ್ಕೆ ಅವರ ಮೇಲೂ ಕೇಸು ಜಡಿಯಲಾಗಿತ್ತು. :
"ನಾ ನೇರ ಹೃದಯದ ವರದಿಗಾರನು". ಕೊನೆಗೆ ಜಯಂತ್ ಮತ್ತು ಯೋಗರಾಜ ಭಟ್ಟರು ಇಬ್ಬರೂ ದೊಡ್ಡ ಮೊತ್ತವನ್ನೇ ಪರಿಹಾರವಾಗಿ ಕೊಡಬೇಕಾಯಿತು.
"ನೇರೋಡೆ ೦ ನಿರ್ಭಯಂ ೦ ನಿರಂತರಂ " ಇದು ನಮ್ಮ ಮಾತೃಸಂಸ್ಥೆಯಾದ ಏಷಿಯಾನೆಟ್ಟಿನ ಸ್ಲೋಗನ್ ಮತ್ತು ಅದನ್ನು ರೀಮೇಕ್ ಮಾಡುವ ಹಕ್ಕು ಇರುವುದು ನಮಗೆ ಮಾತ್ರ.
______
ಬೊಳುಂಬು
ಉ: ಗಾಳಿಪಟ - ಒಂದು ಹೂರಣ
ಇತ್ತೀಚೆಗೆ ಬಂದ ಸುದ್ದಿ:
ಹೆಚ್ಚು ಸಪ್ಪಳ ಮಾಡುತಿದ್ದ ಯೋಗರಾಜ್ ಭಟ್ ಎನ್ನುವ ಕಪ್ಪೆಯನ್ನು, ಬಾವಿಯಲ್ಲಿದ್ದ ಕಪ್ಪೆಗಳು, ಮತ್ತೆ ಅದೇ ಬಾವಿಗೆ ತಳ್ಳುವ ಪ್ರಯತ್ನ ನಡೆಸಿವೆ!
ಉ: ಗಾಳಿಪಟ - ಒಂದು ಹೂರಣ
ಗೆಳೆಯರೇ, ಮೇಲಿನ ತಲೆಗೆಟ್ಟ ವಿಮರ್ಶೆಗಳಿಗೆ ಕಿವಿಗೊಡದೆ ಮುಗಿಲುಪೇಟೆಗೆ ತೆರಳಿ ಗಾಳಿಪಟ ಹಾರಿಸಿ ಬನ್ನಿ.
ಯೋಗರಾಜ್ ಭಟ್ಟರ ಒಂದು ಇಂಟರ್ವ್ಯೂ ಇಲ್ಲಿ ಮೂಡಿ ಬಂದಿದೆ. ಬಿಡುವಿದ್ದಾಗ ನೋಡಿ
ಉ: ಗಾಳಿಪಟ - ಒಂದು ಹೂರಣ
ಭಟ್ಟರು ಸಕತ್ತಾಗಿ ಉತ್ತರ ಕೊಟ್ಟಿದ್ದಾರೆ...