"ಕನ್ನಡದ ಕಗ್ಗೊಲೆ" ವಿಜಯ ಕರ್ನಾಟಕದ ಉದ್ದೇಶವೇ ?
ಗೆಳೆಯರೆ,
ವಿಜಯ ಕರ್ನಾಟಕ ಪತ್ರಿಕೆಯ ಬಗ್ಗೆ ಏನೇ ವಾದ-ವಿವಾದಗಳು ಇರಲಿ, ಒಂದು ಕಾರಣಕ್ಕೆ ಅದು ನನಗೆ ಮೆಚ್ಚಿಗೆಯಾಗುತ್ತದೆ. ಒಂದು ಕನ್ನಡ ದಿನಪತ್ರಿಕೆಗೆ ೩:೫೦-೪:೦೦ರೂ, ಇದ್ದಂತಹ ಕಾಲದಲ್ಲಿ ೧:೫೦ರೂಗೆ ನೀಡಲು ಮುಂದೆಬಂದ ಇದು ತನ್ನ ಪ್ರತಿಸ್ಪರ್ಧಿಗಳು ಕಂಪಿಸುವಂತೆ ಮಾಡಿದ್ದು ಸುಳ್ಳಲ್ಲ. ಅದೆಲ್ಲ ಆಗ. ಈಚೆಗೆ ಅದರಲ್ಲಿ ಒಂದು ಅಂಕಣ ಪ್ರಾರಂಭವಾಯಿತು. ಆ ಅಂಕಣದ ಉದ್ದೇಶ ನಾನು ಕೇಳಿ ಹಿರಿ ಹಿರಿ ಹಿಗ್ಗಿದೆ. ಕಡೆಗೂ ಒಂದಾದರೂ ಪತ್ರಿಕೆ ಮುಂದೆ ಬಂತಲ್ಲಾ, ಈ ನಿಟ್ಟಿನಲ್ಲಿ ಎಂದು. ಆದರೆ ಆ ಅಂಕಣವನ್ನು ಕೆಲದಿನಗಳ ಮಟ್ಟಿಗೆ ಓದಿದ ನಂತರ, ನಿಜವಾಗಿಯೂ ವಿಜಯ ಕರ್ನಾಟಕದ ಪತ್ರಕರ್ತರಿಗೆ ಕನ್ನಡ ಬರುತ್ತದೆಯೇ ಎಂಬ ಸಂಶಯ ನನ್ನಲ್ಲಿ ಹುಟ್ಟಿದೆ.
ಮೇಲಿನ ಬರಹದ ಕೊನೆಯ ಸಾಲು ಸ್ವಲ್ಪ ಕಟುವಾಯಿತೇ ಎಂದು ನಿಮಗನಿಸಿರಬಹುದು. ಅದಕ್ಕೆ ಕಾರಣವಿದೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ನನಗಿಲ್ಲ. ಆದರೆ ನನಗಾದ ನೋವನ್ನು ಇಲ್ಲಿ ತೋಡಿಕೊಳ್ಳುತ್ತಿದ್ದೇನೆ ಅಷ್ಟೇ.
ವಿಜಯ ಕರ್ನಾಟಕದಲ್ಲಿ ಈಚೆಗೆ ದಿನಪದ ಎಂಬ ಒಂದು ಅಂಕಣ ಬರುತ್ತಿದೆ. ದಿನಕ್ಕೊಂದು ಪದದಂತೆ, ಕನ್ನಡಿಗರಿಗೆ(???) ಒಂದೊಂದು ಪದಗಳ ಪರಿಚಯ ಮಾಡಿಕೊಡುತ್ತಿದೆ. ಆದರೆ ಕೆಲವೊಂದು ವೇಳೆ ಅದು ಎಷ್ಟು ಕೆಟ್ಟದಾಗಿರುತ್ತದೆ ಎಂದರೆ, 'Once bitten twice shy' ಎಂಬುದನ್ನು, 'ಒಮ್ಮೆ ಕಡಿತ....ತುಡಿತ' ಎಂದು ಪರಿಚಯಿಸಿದ್ದರು. Shy ಎಂಬುದನ್ನು ತುಡಿತ ಎಂದು ಯಾರು ಒಪ್ಪುವರೋ ನಾ ಕಾಣೆ. ಅದನ್ನು ಓದಿದಾಗ ನಗು ಬರುತ್ತಿತ್ತಾದರೂ, ನಿಜಕ್ಕೂ ಇವರಿಗೆ ಕನ್ನಡ ಬರುತ್ತದೆಯೇ ಎಂಬ ಸಂಶಯ ಬಂದದ್ದು ಈ ದಿನದ ಪದವನ್ನು ಓದಿ. ಅದನ್ನು ಓದಿ ನೋಡಿ, ನಿಮಗೂ ಕೂಡ ಬೇಸರವಾಗುವುದು. ಈ ದಿನದ ಪದ, ಕನ್ನಡವನ್ನು ಕಗ್ಗೊಲೆ ಮಾಡುವ ಪ್ರಯತ್ನ ಎಂದೇ ನಾನು ತಿಳಿದಿರುವೆ.
ಈ ದಿನದ ಪದವೇನೆಂಬುದನ್ನು ತಿಳಿಯಲು ಇಲ್ಲಿ ಎಡತಾಗಿ
ಅಷ್ಟಕ್ಕೂ ಅವರು ಹೇಳಿರುವುದು ಏನನ್ನು ಗೊತ್ತೇ. Sustainable ಎಂಬುದಕ್ಕೆ ಕನ್ನಡದಲ್ಲಿ ಏನು ಹೇಳಬೇಕು ಅಂತ ಈ ದಿನದ ಅಂಕಣ. ಪಾಪ, ವಿಜಯ ಕರ್ನಾಚಕದ ಪತ್ರಕರ್ತರಿಗೆ sutain, sustainable sustainability ಎನ್ನುವುದಕ್ಕೆ ಕೇಳಲು ಸಂಸ್ಕೃತದ ಸುಸ್ಥಿರಕ್ಕಿಂತಲೂ ಇಂಪಾದ, ಬಳಕೆಯಲ್ಲಿ ಸಂಸ್ಕೃತದ ಸುಸ್ಥಿರ, ಸುಸ್ಥಿರತೆಗಿಂತಲೂ ಹೆಚ್ಚಾಗಿರುವ, ಹೇಳಲು ಸಂಸ್ಕೃತದ ಸುಸ್ಥಿರ, ಸುಸ್ಥಿರತೆಗಿಂತಲೂ ಸರಳವಾದ ಪದ ಕನ್ನಡದಲ್ಲಿ ಇದೆ ಎಂಬುದು ಅವರಿಗೆ ತಿಳಿದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ.
ಒಂದು ಮಾತು, ಸುಸ್ಥಿರ, ಸುಸ್ಥಿರತೆ ಎಂಬುದು ಸಂಸ್ಕೃತ ಪದಗಳು ಎಂಬ ಒಂದೇ ಕಾರಣಕ್ಕೆ ನಾನು ಬ್ಲಾಗುತ್ತಿಲ್ಲ, ಆದರೆ ಅದಕ್ಕಿಂತಲೂ ಸರಳವಾದ, ಇಂಪಾದ ಮತ್ತು ಅರ್ಥವಾಗುವ ಕನ್ನಡದ್ದೇ ಪದ ಇರುವಾಗ ಇವರೇಕೆ ಸಂಸ್ಕೃತ ತುರುಕುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇವರುಗಳು ಎಂದಾದರು ತಾಳಿಕೆ, ಬಾಳಿಕೆ, ತಾಳಬಲ್ಲ, ಬಾಳಬಲ್ಲ, ತಡೆಯಬಲ್ಲ, ತೂಗಬಲ್ಲ, ಹಸನು ಇಂತಹ ಪದಗಳನ್ನು ಕೇಳಿದ್ದಾರೆಯೇ ಎಂಬುದು ನನ್ನ ಪ್ರಶ್ನೆ. ಬೇಕಿದ್ದಲ್ಲಿ, ಇವರುಗಳು ಸಂಸ್ಕೃತದ್ದೇ ಒಂದು ಪತ್ರಿಕೆ ಹೊರತರಲಿ, ಯಾರು ಬೇಡ ಎಂದವರು. ಹಾಗೆಯೇ, ಗಮನಿಸಿ ನೋಡಿ ಈ ಅಂಕಣದಲ್ಲಿ ಹಾಕಿರುವುದು ಒಬ್ಬ ರೈತನ ಫೋಟೋ. ಒಬ್ಬ ಕನ್ನಡಿಗನಿಗೆ ಸುಸ್ಧಿರತೆ ಹತ್ತರಿವೋ, ತಾಳಿಕೆ ಬಾಳಿಕೆ ಹತ್ತಿರವೋ.
ಅಲ್ಲ, ಅವರು ಕೊಡುವ ಒಂದು ಉದಾಹರಣೆ ನೋಡಿ.
ನೇಕಾರ ಸಮುದಾಯದ ಸುಸ್ಥಿರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ .
ನೇಕಾರರ ಬದುಕನ್ನು ಹಸನುಗೊಳಿಸುವ ಕಾರ್ಯಕ್ರಮ.... ಹೇಳಬಹುದಲ್ಲವೇ.
ನಮ್ಮ ರೈತರನ್ನು, ನೇಕಾರರನ್ನು ಆ ಶಿವನೇ ಕಾಪಾಡಬೇಕು. ಏಕೆಂದರೆ ಶಿವನ ಢಮರುಗದಿಂದ ಅಕ್ಷರಗಳು ಬಂದವು ಎಂದಲ್ಲವೇ ನಾವುಗಳು ಓದಿರುವುದು, ಶಿವನೇ ಹೇಳಿಕೊಡಬೇಕು ನಮ್ಮ ನೇಕಾರರಿಗೆ ಸಂಸ್ಕೃತವನ್ನು. ಸುಸ್ಥಿರ ಸುಸ್ಥಿರ ಅಂತ ಬಡ್ಕೊಂಡು, ನಂತರ ಒಬ್ಬ ನೇಕಾರ ಅಥವಾ ಮಣ್ಣಿನ ಮಗ ಅದನ್ನು ಸುತ್ತಿರ ಎಂದು ಹೇಳಿದರೆ ಅದನ್ನು ಕೇಳಿ, ಕೇಕೆ ಹಾಕಿ ನಗುವುದು. ದಯವಿಟ್ಟು ಯಾರಾದರೂ ಈ ಪತ್ರಕರ್ತರಿಗೆ ಕುವೆಂಪುರವರ ಈ ಕವನನ್ನು ತಿಳಿಸಿಕೊಡಿ. "ಕನ್ನಡ, ಕನ್ನಡ ಹಾ ಸವಿಗನ್ನಡ, ಕನ್ನಡದಲ್ಲಿ ಹರಿ ಬರೆಯುವನು, ಕನ್ನಡದಲಿ ಹರ ತಿರಿಯುವನು, ಕನ್ನಡದಲ್ಲಿಯೆ ಬಿನ್ನಹಗೈದೊಡೆ, ಹರಿ ವರಗಳ ಮಳೆ ತಾ ಕರೆಯುವನು".
ಕನ್ನಡಿಗರಿಗೆ ಬೇಕಿರುವುದು ಸುಸ್ಥಿರತೆಯಲ್ಲ ತಾಳಿಕೆ, ಬಾಳಿಕೆ, ಕೂಡಿಕೆ, ಹೂಡಿಕೆ. ಇಷ್ಟವಾದರೆ ಬಳಸಲಿ, ಇಲ್ಲವಾದರೆ ಬಿಡಲಿ, ಆದರೆ ಸುಸ್ಥಿರತೆಯನ್ನು ಕನ್ನಡವೆಂದು ತುರುಕುವುದು ತೀರಾ ಬಾಲಿಷ.
ಇವರಿಗೆಲ್ಲಾ ಕನ್ನಡದ್ದೇ ಪದಗಳ ಒಂದು ದೊಡ ಕಣಜವಿದೆ ಎಂದು ತಿಳಿದಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಯಾರಾದರೂ ಅವರಿಗೆ, ದಯಮಾಡಿ ಈ ಕನ್ನಡ ನಿಘಂಟುಗಳ ಲಿಂಕನ್ನು ಕೊಡಿ. http://dsal.uchicago.edu/dictionaries/burrow/ ನಿಜಕ್ಕೂ ಇಚ್ಛಾಶಕ್ತಿಯಿದ್ದರೆ ಕನ್ನಡದ್ದೇ ಹೊಸ ಪದಗಳನ್ನು ಹುಟ್ಟುಹಾಕಲಿ.
ಒಟ್ಟಿನಲ್ಲಿ ದಿನಪದ ಒಂದೊಂದು ಪದಗಳ ಪರಿಚಯ ಮಾಡಿಕೊಡುತ್ತಿದೆ. ಅದು ಕನ್ನಡವೇ ಆಗಿರಬೇಕೆಂದೇನೂ ಇಲ್ಲ. ತಪ್ಪೋ, ಸರಿಯೋ ಒಟ್ಟಿನಲ್ಲಿ ಪದಗಳು ಅಷ್ಟೇ.
ಮತ್ತೊಮ್ಮೆ ಹೇಳುವೆ, ಯಾರಿಗೂ ನೋವುಂಟು ಮಾಡುವ ಉದ್ದೇಶ ನನಗಿಲ್ಲ. ಆದರೆ ಕನ್ನಡಕ್ಕಾದ ನೋವನ್ನು ಇಲ್ಲಿ ತೋಡಿಕೊಳ್ಳುತ್ತಿದ್ದೇನೆ ಅಷ್ಟೇ.

- Sunil Jayaprakash ರವರ ಬ್ಲಾಗ್
- Login or register to post comments
- 679 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: "ಕನ್ನಡದ ಕಗ್ಗೊಲೆ" ವಿಜಯ ಕರ್ನಾಟಕದ ಉದ್ದೇಶವೇ ?
ನೀವು ಹೇಳುವುದು ಸರಿ.
ನಾನು ನನ್ನ ಬ್ಲಾಗ್ ನ ಎರಡನೆ ಬರಹದಲ್ಲಿ ಇದನ್ನು ಬರೆದಿದ್ದೇನೆ ಓದಿ ನೋಡಿ.
http://oarjuna.blogspot.com/2006/11/blog-post_27.html
===
ನಾವು ಮಾತನಾಡುವಾಗ ಸಾಕಷ್ಟು ತತ್ಸಮ, ತದ್ಭವ, ಅನ್ಯದೇಶೀಯ ನುಡಿಗಳನ್ನು ಬಳಸುತ್ತೇವೆ. ಅದು ಬಾಸೆಯ ಸೊಗಡನ್ನು ಹೆಚ್ಚಿಸುತ್ತದೆ. ಆದರೆ ಬರವಣಿಗೆಯಲ್ಲಾದರೂ ಅಚ್ಚು ಕನ್ನಡದ ನುಡಿಗಳನ್ನು ಉಳಿಸೋಣ.
ಅರಿವು > ವಿವೇಕ (ತ್ಸ)
ನಾಡು > ರಾಜ್ಯ (ತ್ಸ)
ನುಡಿ > ಬಾಸೆ (ದ್ಭ) > ಭಾಷೆ (ತ್ಸ)
ನುಡಿ > ಪದ, ಶಬ್ದ (ತ್ಸ)
ನೆಲೆ > ತಾಣ (ದ್ಭ) > ಸ್ಥಳ (ತ್ಸ) > ಜಾಗ (ಹಿಂ)
ಪಡಿನುಡಿ > ಉತ್ತರ (ತ್ಸ)
ಬರಹ > ಲೇಖನ (ತ್ಸ)
ಹೊರಗೆಡಹು, ಹೊರತರು, ಹೊರಬರು > ಪ್ರಕಾಶನ, ಪ್ರಕಟಿಸು (ತ್ಸ) > ಪಬ್ಲಿಶ್ (ಇಂ)
===
ಇಲ್ಲಿ = ಚಿಹ್ನೆ ಬಳಸಿಲ್ಲ ಎಂಬುದನ್ನು ಗಮನಿಸಿ. ಈ ಪಟ್ಟಿಯನ್ನು ಮೇಲಿಂದ ಮೇಲೆ ಬೆಳೆಸುತ್ತಿರುತ್ತೇನೆ ಇದರ ಮೇಲೊಂದು ಕಣ್ಣಿಟ್ಟಿರಿ.
Re: "ಕನ್ನಡದ ಕಗ್ಗೊಲೆ" ವಿಜಯ ಕರ್ನಾಟಕದ ಉದ್ದೇಶವೇ ?
ಕೇಸರಿಯವರೇ, ಸುನೀಲರು ಒರಕೂಟ(orkut.com)ದಲ್ಲಿರುವ ನಮ್ಮ ಅಚ್ಚಗನ್ನಡ ಗುಂಪಿನ ಬಗ್ಗೆ ಬರೆದಿದ್ದಾರೆ, ಅದನ್ನು ಸೇರಿರಿ, ಮತ್ತು ಇನ್ನೂ ಹೆಚ್ಚಿನ ಅಚ್ಚಕನ್ನಡತನದ ಬಗ್ಗೆ ತಿಳಿಯಿರಿ, ಮತ್ತು ನಿಮಗೆ ತಿಳಿದಿದ್ದನ್ನು ತಿಳಿಸಿ.
http://www.orkut.com/Community.aspx?cmm=19679408
ಮಾದರಿಗೆ,
ಪದ ಎಂಬುದಕ್ಕೆ ಅಚ್ಚಕನ್ನಡದಲ್ಲಿ 'ಒರೆ' ಎಂಬ ಒರೆಯಿದೆ.
ಸ್ಥಳ/ತಾಣ - ನೆಲೆ. ಸರಿಯಾದ ಒರೆ.
ನಿಮ್ಮ,
ಸಂಗನಗೌಡ.