ತಪ್ಪುಗಳು ಹೀಗೂ ಸಂಭವಿಸಬಹುದು
ಇತ್ತೀಚಿಗೆ ಸಂಪದದಲ್ಲಿ, ವಿರಹಗೀತೆಯನ್ನೋದುವಾಗೊಂದು ತಪ್ಪು ಸಂಭವಿಸಿತು. ಹಾಗೆ ನೋಡಿದರೆ ತಪ್ಪುಗಳೇನು ಹೊಸತಲ್ಲ, ಕಾಗುಣಿತದಲ್ಲೊ, ಪದ ಜೋಡಣೆಯಲ್ಲೊ, ಹೇಗೊ ಏನೋ ತಪ್ಪುಗಳು ನಡೆಯುತ್ತವೆ. ಆದರೆ ಈ ಎಳೆಯಲ್ಲಿ ಸಂಭವಿಸಿದ ತಪ್ಪು ಸ್ವಲ್ಪ ವಿಶೇಷವಾಗಿದೆ.
http://sampada.net/ninilladiddaga#comment-1248
ಇದೇಕೆ ಹೀಗಾಯಿತು ಎಂದು ಯೋಚಿಸುವಾಗ ಹೊಳೆಯಿತು ನನಗೆ ಯಾಕೆ ಹೀಗಾಯಿತೆಂದು. ಈಗ್ಗೆ ಸುಮಾರು ತಿಂಗಳ ಹಿಂದೆ ಅಂಕಿತ ಪುಸ್ತಕದಲ್ಲಿ ಕಾಳಿದಾಸನ ಮೇಘದೂತ ಮಾಹಾಕಾವ್ಯದ ಕನ್ನಡ ಅನುವಾದ ಖರೀದಿಸಿದ್ದೆ. ಅದೂ ಕೂಡ ವಿರಹ ಗೀತೆ. ಈಗ ಸುಧಾ ವಾರಪತ್ರಿಕೆಯಲ್ಲಿ ನಳ ದಮಯಂತಿಯ ಕಥೆ ಪ್ರಕಟವಾಗುತ್ತಿದೆ. ಅದೂ ಕೂಡ ವಿರಹ ಗೀತೆಯೇ. ಕಳೆದ ವಾರದ ಸಂಚಿಕೆಯಲ್ಲಿ, ಎಷ್ಟೋ ದಿನಗಳ ನಂತರ ದಮಯಂತಿಗೆ ನಳ ಸಿಕ್ಕಿರುತ್ತಾನೆ. ದಮಯಂತಿ ನಳನನ್ನು ಸಿಕ್ಕಾಪಟ್ಟೆ ಬೈದು ಕಳುಹಿಸುತ್ತಾಳೆ. ಆದರೆ ಸುಧಾಗಿಂತ ಮುಂಚೆ ಎಲ್ಲೋ ಓದಿದ ನೆನಪು. ಇದು ನಿಜವಲ್ಲಿದಿರಬಹುದು ಆದರೆ ನಾನು ತಿಳಿದುಕೊಂಡಿರುವ ಕಥೆ ಇದು. ನಳನಿಗೆ ಅದ್ಯಾವುದೋ ಸರ್ಪ ಕಚ್ಚಿ (ಸರ್ಪವೂ ಅದ್ಯಾವುದೋ ಶಾಪಗ್ರಸ್ತವಾಗಿರುತ್ತೆ.) ಅವನು ಬಹಳ ಕುರೂಪಿಯಾಗಿರುತ್ತಾನೆ. ಕುರೂಪಿಯೆಂದು ಅವನನ್ನು ಬೈಯ್ಯುವುದಿಲ್ಲ. ಮೊದಲು ರಾಜ್ಯವನ್ನು ಸಂಪಾದಿಸು. ಜನಾನುರಾಗಿಯಾಗು. ನಂತರ ನಮ್ಮಿಬ್ಬರ ಸಮಾಗಮ ಎಂದು ಹೇಳುತ್ತಾಳೆ. ಇದನ್ನೋದುವಾಗ ನನ್ನ ಮನಸ್ಸಿಗೆ ಹೊಳೆದದ್ದು ಮೇಘದೂತದಲ್ಲಿ ಯಕ್ಷ ಯಕ್ಷಿಣಿ(ಅಥವಾ ಪ್ರೇಯಸಿ ಎನ್ನೋಣ) ಯರ ಸಮಾಗಮವಾದಾಗ, ಅವರ ಪ್ರತಿಕ್ರಿಯೆಗಳು ಹೇಗಿದ್ದಿರಬಹುದು ಎಂದು. ಆಗ ನನ್ನ ಸಹಾಯಕ್ಕೆ ಬಂದವನೇ ಆಪ್ತಮಿತ್ರ. ಇದೇನು ಎಲ್ಲೆಲ್ಲೂ ಹೋಗ್ತಾ ಇದೆ, ಈ ಬ್ಲಾಗು ಅಂದುಕೊಂಡ್ರ. ಏನು ಮಾಡುವುದು, ಈ ಮನಸ್ಸೇ ಹಾಗೆ, ಏನೇನೋ ಓದಿ, ಏನೇನೋ ಕಲ್ಪಿಸಿಕೊಂಡು ಏನೇನೋ ನಿರ್ಧಾರಕ್ಕೆಬಂದು ಥರಾವರಿ ಮಜಾ ತೊಗೊಳ್ಳುತ್ತೆ. ಬ್ಲಾಗಿಗೆ ಹಿಂದಿರುಗೋಣ. ಹಾ, ಆಪ್ತಮಿತ್ರ. ಆಪ್ತಮಿತ್ರದಲ್ಲಿರುವ ತಿರುಳೇನು. ಒಬ್ಬರೆ ತಾನ್ನನ್ನು ಇಬ್ಬರಾಗಿ ಕಲ್ಪಿಸಿಕೊಳ್ಳುವುದು. ಇಲ್ಲೇ ಇದ್ದದ್ದು ಸಮಸ್ಯೆ, ನಾನೂ ಯೋಚಿಸಿದೆ, ಈ ಮೇಘದೂತ ಮತ್ತು ನಳ ದಮಯಂತಿ ಯಾಕೆ ಒಂದೇ ಕಥೆಯಾಗಿರಬಾರದು. ಈ ನಮ್ಮ ಕವಿಗಳು, ಕಥಗಾರರು, ಲೇಖಕರು, ಒಂದು ಎಳೆ ಸಿಕ್ಕರೆ ಸಾಕು ಅದನ್ನು ಹಿಗ್ಗಾ ಮುಗ್ಗಾ ಎಳೆದಾಡಿ, ಒಂದು ಸುಂದರ ರೂಪ ಕೊಟ್ಟುಬಿಡುತ್ತಾರೆ. ಇಲ್ಲಿಯೂ ಏಕೆ ಹೀಗಾಗಿರಬಾರದು. ನಳ ದಮಯಂತಿಯರು ಒಂದು ಕಡೆ, ಯಕ್ಷ ಮತ್ತವನ ಪ್ರೇಯಸಿ ಮತ್ತೊಂದು ಕಡೆ. ಇವರಿಬ್ಬರೂ ಒಬ್ಬರೇ ಯಾಕಾಗಿರಬಾರದು ಎಂಬ ಅನುಮಾನ ಕಾಡಹತ್ತಿತು. ಈ ಅನುಮಾನವೇ ಇಷ್ಟೆಲ್ಲಾ ಅವಘಡಕ್ಕೆ ಕಾರಣ. ಅನುಮಾನ ತಿಳಿಯಾಗುವ ಮುಂಚೆಯೇ ನೀನಿಲ್ಲದಿದ್ದಾಗ ಪದ್ಯ ಓದಿದೆ. ಎಲ್ಲೆಲ್ಲೂ ವಿರಹ ಗೀತೆಗಳೇ ಮನಹೊಕ್ಕು ತೊಂದರೆ ತಮ್ಮ ವಿನೋದ ಆಚರಿಸಿದವು ಎಂಬಲ್ಲಿಗೆ ಈ ಬ್ಲಾಗ ಪುರಾಣವು ಮುಗಿಯಿತು ಅಥವಾ ಪ್ರಾರಂಭವಾಯಿತು ಎನ್ನೋಣವೆ.

- Sunil Jayaprakash ರವರ ಬ್ಲಾಗ್
- Login or register to post comments
- 713 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ:ತಪ್ಪುಗಳು ಹೀಗೂ ಸಂಭವಿಸಬಹುದು..
ನಿಮ್ಮ ವಾದ ಸರಿಯಾಗಿದೆ. ನಳ-ದಮಯಂತಿಯ ಕಥೆಯಲ್ಲಿ ನಳ ಹಾಗೂ ದಮಯಂತಿಯರ ನಡುವೆ ಒಂದು ರಾಜಹಂಸ ರಾಯಭಾರಿಯಾಗಿ ವರ್ತಿಸುತ್ತದೆ. ಮೇಘದೂತದಲ್ಲಿ ಮೇಘ.. ಕೆಲವು ಸಮಾನತೆಗಳಿವೆ. ಸ್ಪಷ್ಟತೆಗಾಗಿ ನಳ-ದಮಂತಿಯ ಕಥೆಯನ್ನು ಸಂಕ್ಷಿಪ್ತವಾಗಿ ಕೊಡುತ್ತಿದ್ದೇನೆ.
ನಳ-ದಮಯಂತಿಯರ ನಡುವೆ ವಿರಹ ಏರ್ಪಡುವುದು ಅವರ ಮದುವೆಯಾದ ನಂತರ. ನಳ ಶನಿಯ ಶಾಪಕ್ಕೆ ಒಳಗಾಗುತ್ತಾನೆ. ದಾಯಾದಿ ಪುಷ್ಕರನೊಂದಿಗೆ ಜೂಜಾಡಿ ರಾಜ್ಯ ಕಳೆದುಕೊಳ್ಳುತ್ತಾನೆ. ದಮಯಂತಿಯನ್ನು ಕಾಡಿನಲ್ಲೆ ಬಿಟ್ಟು ಹೋಗುತ್ತಾನೆ ( ಅವಳು ತನ್ನ ತಂದೆಯ ಮನೆಗೆ ಹೋಗುತ್ತಾಳೆ ಎಂಬ ನಂಬಿಕೆಯೊಂದಿಗೆ.). ಮಾರ್ಗ ಮಧ್ಯದಲ್ಲಿ ಕಾರ್ಕೊಟಕ(???)ವೆಂಬ ಸರ್ಪವನ್ನು ಅಗ್ನಿಯಿಂದ ರಕ್ಷಿಸುತ್ತಾನೆ. ಆದರೆ ಅದು ಅನನ್ನು ಕಚ್ಚಿ ಕುರೂಪಿಯಾಗಿಸುತ್ತದೆ. ಆದರೆ ಅದು ಅವನಿಗೆ ಉಪಕಾರವಾಗುವುದೆಂದೂ ತಿಳಿಸುತ್ತದೆ. ದಮಯಂತಿ ತನ್ನ ತಂದೆ ಭೀಮನ(ಪಾಂಡವರ ಭೀಮ ಅಲ್ಲ) ಮನೆ ತಲುಪುತ್ತಾಳೆ. ನಳ ತನ್ನ ಅಶ್ವಹೃದಯದ ಬಲದಿಂದ ರಿತುಪರ್ಣನ ಆಸ್ಥಾನದಲ್ಲಿ ಸೂತನಾಗಿ ಸೇರುತ್ತಾನೆ. ರಿತುಪರ್ಣನಿಂದ ಅಕ್ಷಹೃದಯ ಕಲಿಯುತ್ತಾನೆ(ಕಥೆ ಬಹಳ ದೊಡ್ಡದಾಗಿತ್ತಿದೆ.....ಮುಗಿಸುತ್ತೇನೆ) ಕೊನೆಗೆ ದಮಯಂತಿಯ ಜಾಣ್ಮೆಯಿಂದ ಇಬ್ಬರೂ ಒಂದುಗೂದುತ್ತಾರೆ.... ನಳ ಕಲಿತ ಅಕ್ಷಹೃದಯದಿಂದ ಪುಷ್ಕರನೊಂದಿಗೆ ಜೂಜಾಡಿ ರಾಜ್ಯ ಮರಳಿ ಪಡೆಯುತ್ತಾನೆ.
ಒಮ್ಮೆ ಸಮಯ ಸಿಕ್ಕಾಗ ಸಂಪೂರ್ಣ ಕಥೆ ತಿಳಿಸುವ ಆಶಯವಿದೆ.. ಸುನಿಲ್ ಅವರಿಂದ ಮರೆತ ಕಥೆ ನೆನೆಪಿಗೆ ಬಂದಿದೆ.. ಧನ್ಯವಾದಗಳು..