ಕೂರ್ ಬೇಕೇ ಕೂರ್ - ಭಾಗ ೨ (ಕನ್ನಡಿಗರ ಮದುವೆ)
ಈ ಬ್ಲಾಗಿನ ಮೊದಲ ಕಂತು ಇಲ್ಲಿದೆ, "ಸರ್ವಜ್ಞ ಮತ್ತು ಹಂಸಲೇಖ - ಭಾಗ ೧". "ಕೂರ್ ಬೇಕೇ ಕೂರ್" ಬ್ಲಾಗಿನ ಹರಿವನ್ನು ಹೆಚ್ಚಿಸುತ್ತಾ ಅದರ ಎರಡನೆಯ ಕಂತು "ಕನ್ನಡಿಗರ ಮದುವೆ".
೧. ನಾನು ಚಿಕ್ಕವನಿದ್ದಾಗ ಯಾರಾದರು "ಕೂರು, ಕೂರಪ್ಪಾ" ಎಂದರೆ ಅದು "ಕೂತ್ಕೊ, ಕೂತ್ಕೊಳಪ್ಪಾ ಅಂತ ಇರಬೇಕಲ್ವಾ" ಅಂತ ಮನಸ್ಸಿನಲ್ಲಿ ಅಂದುಕೊಳ್ತಾ ಇದ್ದೆ. ಏಕೆಂದರೆ "ಕೂರು" ಎಂಬ ಬಳಕೆ ದಿನನಿತ್ಯದ ಮಾತಿನಲ್ಲಿ ನಮ್ಮ ಮನೆ ಕಡೆ ಅಷ್ಟು ಬಳಕೆಯಲ್ಲಿಲ್ಲ. ಬೇರೆಯವರು ಯಾರಾದರೂ ಆ ಪದ ಹೇಳಿದಾಗ ಸ್ವಲ್ಪ ಗೊಂದಲವಾಗುತ್ತಿತ್ತು. ಆದರೆ ವಿಚಿತ್ರವೆಂದರೆ ನಮ್ಮ ಕಡೆ, ಮದುವೆಯನ್ನು ಕುರಿತ ಮಾತುಗಳಲ್ಲಿ ಮತ್ತು ಬರಹಗಳಲ್ಲಿ ಮಾತ್ರ ಗ್ಯಾರೆಂಟಿಯಾಗಿ ಕೂರಿಸಿ ಪದವನ್ನು ಬಳಸುತ್ತಾರೆ. "ಇಬ್ಬರನ್ನೂ ಒಟ್ಟಿಗೆ ಕೂರಿಸಿ ಆರತಿ ಮಾಡೋಣ ಬನ್ನಿ". ಇಲ್ಲಿ "ಕೂಡಿಸಿ" ಅಂತ ಬಳಸಲ್ಲ. ಏಕಿರಬಹುದು ?? ಊಹಿಸಿ. ಏಕೆಂದರೆ ಮದುವೆಯೆಂಬುದು ಗಂಡು ಹೆಣ್ಣುನ್ನು "ಕೂರಿಸುವ" ಒಂದು ಸಂಪ್ರದಾಯ. ಕೂರಿಸುವುದು -> ಸ್ನೇಹವನ್ನು ಬೆಸೆಯುವುದು, ಪ್ರೀತಿಯನ್ನು ಬೆಸೆಯುವುದು..ಗಂಡು ಹೆಣ್ಣನ್ನು ಏಕೆ ಕೂರಿಸುತ್ತಾರೆಂದರೆ, ಪ್ರೀತಿ ಮಾಡಲಿ ಅಂತ
ಪರಸ್ಪರ ನಂಬಿಕೆಯಿಂದ ಕೂಡಿದವರಾಗಿ ಬಾಳಲಿ ಎಂಬ ಹಾರೈಕೆಯೊಂದಿಗೆ, ಕೂರ್ - ನಲ್ಮೆ, ಪ್ರೇಮ, ಸ್ನೇಹ ಅಂತ ನಿಮಗೀಗಾಲೇ ಮೊದಲ ಕಂತಿನಿಂದಾಗಿ ತಿಳಿದಿರಬೇಕಷ್ಟೇ.
೨. ಆರಾಮಾಗಿ ಕೂತ್ಕೊಂಡು ಮಾತಾಡೋಣ ಬಾ.
ಈ "ಕೂತು" ಎಂಬ ಪದ ಹೇಗೆ ಬಂತು. ಕೂರ್ ತು -> ಕೂರ್ತು -> ಕೂತ್ತು -> ಕೂತು = ಪ್ರೀತಿಯಿಂದ, ನಲ್ಮೆಯಿಂದ, ಅಕ್ಕರೆಯಿಂದ, ಸ್ನೇಹದಿಂದ, ಆತ್ಮೀಯಭಾವಿದಿಂದ, ನಂಬಿಕೆಯುಳ್ಳವರಾಗಿ, ಆರಾಮಾಗಿ (ಹೇಗೆ ಕಲೆತು, ಕಲಿತು, ಕಳೆತು, ಕೊಳೆತು, ಮರೆತು, ಬೆರೆತು ಪದಗಳು ಹುಟ್ಟುತ್ತವೆಯೋ ಹಾಗೆ ಕೂತು). ಹಾಗಾಗಿ, "ಕೂತು" ಅಂದರೆ ಬರೀ ಕಾಲು ಮಡಿಸಿ ಕೆಳಗೆ ಕುಳಿತುಕೊಂಡು ಮಾತನಾಡುವುದಲ್ಲ. ಮುಂದಿನ ಬಾರಿ ನಾವು ನಮ್ಮ ತಂದೆತಾಯಿಯ ಜೊತೆ, ತಾತಅಜ್ಜಿಯ ಜೊತೆ, ಹಿರಿಯರೊಡನೆ, ಕಿರಿಯರೊಡನೆ, ಸಂಬಂಧಿಕರೊಡನೆ, ಸ್ನೇಹಿತರೊಡನೆ ಅಥವಾ ಇದ್ದವರು ಇನಿಯಳ(ಗರ್ಲ್‌ಫ್ರೆಂಡಿನ) /ಇನಿಯನ(ಬಾಯ್‌ಫ್ರೆಂಡಿನ) ಜೊತೆಯಲ್ಲಿರುವಾಗ ಈ "ಕೂತು" ಪದ ಪಡೆದುಕೊಳ್ಳುವ ಬೇರೆ ಬೇರೆ ಅರ್ಥವನ್ನು ಗಮನಿಸಿ.
೩. ಕೂಡ್ರಿ, ಕೂರ್ರಿ, ಕೂತ್ಕೊಳಿ.
ನಾವು ಊಹಿಸಬಹುದಾದ ಹಾಗೆ ಕೂತ್ಕೊಳಿ, ಕೂರ್ರಿ ಎರಡೂ ಪದದ ಮೂಲಪದ ಕೂರ್. ಕೂಡ್ರಿ ಪದದ ಬಗ್ಗೆ ನನಗೆ ಅಷ್ಟು ಸರಿಯಾದ ತಿಳಿವಿಲ್ಲ. ರ->ಡ ಇರಬಹುದೇ. ಅದೂ ಅಲ್ಲದೆ, ಕೂರು -> ಕೂಡು ನಡುವೆ ಒಂದು ಸೂಕ್ಷ್ಮ ವ್ಯತ್ಯಾಸವಿದೆ. ಗಮನಿಸಿ...
"ಕೂರು" ಇದ್ದರೇನೆ "ಕೂಡು" = ಅಂದರೆ "ಪ್ರೀತಿ" ಇದ್ದರೇನೇ "ಪ್ರಣಯ" :ಗಪ್‌ಚುಪ್:
ಸರ್ವಜ್ಞನ ವಚನಗಳಲ್ಲೂ ಅದೆಂಥಹ ರಸಿಕತೆ ಇದೆ ಅಲ್ಲವೇ ? "ಕೂರ್ಪವಳ ಸೊಲ್ಲು"..ಅಥವಾ ......ಅಥವಾ......ಅಥವಾ.......ನಮ್ಮ ದಿಕ್ಕುದೆಸೆಯಿಲ್ಲದ ಯೋಚನಾಲಹರಿಯಲ್ಲಿ ![]()
ಇನ್ನು ಮುಂದೆ ಯಾರಾದರೂ ಕೂತ್ಕೊಳಿ, ಕೂರಿ, ಕೂಡ್ರಿ ಎಂದರೆ ಅದರಲ್ಲಿರುವ ಆತ್ಮೀಯತೆಯನ್ನು ತಿಳಿಯೋಣ. ಏಕೆಂದರೆ ಅದು ಕೇವಲ ಕಾಲಿಗೆ ಸಂಬಂಧಪಟ್ಟ ಕುಳಿತುಕೊಳ್ಳುವ ಕ್ರಿಯೆಯಲ್ಲ.
ಇಂತಹ ಸಂಗತಿಗಳು ನಮ್ಮ ಕನ್ನಡದ ಅಭಿಮಾನವನ್ನು ಕೇವಲ ಕುರುಡಾಗಿಸದೆ, ಅದರ ಗಟ್ಟಿತನದ ಬಗೆಗಿನ ಗರ್ವವನ್ನುಂಟುಮಾಡುತ್ತದೆ. ಕನ್ನಡದ ಗಟ್ಟಿತನದ ಗರ್ವದಿಂದ ಅಭಿಮಾನಬಂದರೆ ಅದು ಬರೀ ಕುರುಡು ಅಭಿಮಾನವಾಗಿರುವುದಿಲ್ಲ.
"ಎಲ್ಲ ಓಕೆನಪ್ಪಾ, ಇದಕ್ಕೂ ವಿಜ್ಞಾನಕ್ಕೂ ಏನು ಸಂಬಂಧ, ಸುನಿಲ" ಅಂತೀರಾ....ಅಲ್ಲೇ ಇರೋದು ಮತ್ತಷ್ಟು ಸಸ್ಪನ್ಸ್. ಸರ್ವಜ್ಞನ ವಚನಗಳ ಸಹಾಯದಿಂದ ನಾವುಗಳು ಹೇಗೆ ಟೆಕ್ನಕಲಿ ಸ್ಟ್ರಾಂಗ್ ಆಗಿ ಯೋಚಿಸಬಹುದು ಎಂಬುದಕ್ಕೆ ಬ್ಲಾಗಿನ ಮೂರನೆ ಕಂತಿಗಾಗಿ ಕಾತರದಿಂದ ಕಾಯುತ್ತಿರಿ.

- Sunil Jayaprakash ರವರ ಬ್ಲಾಗ್
- Login or register to post comments
- 654 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕೂರ್ ಬೇಕೇ ಕೂರ್ - ಭಾಗ ೨ (ಕನ್ನಡಿಗರ ಮದುವೆ)
ಚನ್ನೀಲ
ಚನ್ನಾಗಿದೆ..
ನಮ್ಮ ಕಡೆ ನಾವು "ಕೂರು" ಎಂದು ಹೇಳಲ್ಲ, ನಾವು "ಕುೞಿ"ಬಳಸಿ "ಕುಳಿತುಕೊಳ್ಳಿ" ಅನ್ನೋದನ್ನ "ಕುಂತುಕೊಳ್ಳಿ", "ಕೂತುಕೊಳ್ಳಿ" ಅಂತೀವಿ.
ಈ "ಕೂರ್" ತಲುಗರಲ್ಲಿ ಹೆಚ್ಚು "ಕೂರ್ಚು, ಕೂರ್ಚೋಂಡಿ". ಅದಕ್ಕೆ ಕೆಲವು ತೆಲುಗರು ಕುರ್ಚಿ/ಕೂರ್ಚಿ ಇದು ತೆಲುಗು ಒರೆ ಅನ್ನೋದುಂಟು
ತಮಿಳಲ್ಲೂ "ಉಕುರ?", "ಉಕುರಂಗೊ:?
ತುಳು ಕಡೆ, ಕೂರ್ ಇದೆ ಅಲ್ವಾ!!
ನಿನ್ನ ಈ ಬಗೆ ಬರಹಗಳಿಗೆ ನನ್ನ
( ಸಕ್ಕದ ಕೂರ್ಮ ಅಲ್ಲ
)
ಕೂರ್ಮೆಯ
ನನ್ನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಕೂರ್ ಬೇಕೇ ಕೂರ್ - ಭಾಗ ೨ (ಕನ್ನಡಿಗರ ಮದುವೆ)
ಸಕ್ಕತ್ತಾಗಿದೆ,
'ಕೂಡ್ರಿ' ಬಗ್ಗೆ ಕೆಲ ಮಾತು. ನಮ್ಮ ಕಡೆ 'ಕುಂಡರ್ರಿ' ಅಂತ ಬಳಕೆಯಲ್ಲಿದೆ. ಇದರ ಬಿಡಿಕೆ 'ಕುಂಡಿ ಊರಿರಿ' ಎಂದು.
ಇದು ಉರ್ದುವಿನಲ್ಲಿ ಹೇಗೆ 'ತಸ್ರೀಫ್ ರಖಿಯೇ' ಅಂತ ಇದೆಯೋ ಹಾಗೆ. ಊರುವದು ಅಂದರೆ put firmly. ಊರು ಅಂದರೆ 'ಮಂದಿಯಿರುವ ತಾಣ', ಅಂದರೆ ಒಂದು ಕಡೆ ಕೊನೆಯವರೆಗೂ ನಿಲ್ಲುವದು. 'ಕುಂತುಕೋ','ಕುಂತುಕೊಳ್ರಿ' ಅಂತಾನೂ ಬಳಕೆಯಲ್ಲಿದೆ.
ನನಗೆ ಇಂತದೇ ಪದ, 'ಹೆರ್' ನೆನಪಾಗುತ್ತಿದೆ. 'ಹೆರ್'ಗೆ ತನ್ನದೇ ಉಳಿಮೆ ಇಲ್ಲಾ, ಅದು ಬೇರೆ ಒರೆಯೊಂದಿಗೆ ಸೇರಿಯೇ ತಿಳಿವುಳ್ಳ ಪದ ಹುಟ್ಟುತ್ತದೆ, ಮಾದರಿಗೆ, ಹಿರಿಮೆ, ಹಿರಿತನ, ಹೆಮ್ಮರ, ಹೆಬ್ಬಾವು, ಹೆಜ್ಜೇಣು, ಹಲವಾರು.
ಕೂರ್ ಇಂತದೇ ಒಂದು ಒರೆ/ಪದ ಅನಿಸುತ್ತೆ.
ಕೂರ್ಪ - ಪ್ರೀತಿ ಪಾತ್ರನಾದವ(ಇದು 'ಹೆರ್ - ಹಿರಿಯ' ದಂತೆ 'ಕೂರ್ - ಕೂರ್ಪ'), ಕೂರ್ಪವಳು - ಪ್ರೀತಿ ಪಾತ್ರಳು, ಕೂರ್ನುಡಿ - ಪ್ರಿಯವಾದ ಭಾಷೆ,loving language,
ಕೂರ್ಮಾತು - ಪ್ರೀತಿಯ ಮಾತು,loving talks.
ಕೂರ್ಮೆ - ಪ್ರೀತಿ, lovingness, ಕೂರ್ ಅಂದರೆ ಒಟ್ಟಿನಲ್ಲಿ loving ಅಂತ ಹೇಳಬಹುದು. ಯಾವುದೇ ಒರೆಯ ಹಿಂದೆ ಕೂರ್ ಹಚ್ಚಿದರೆ, its something that is loving ಅಂತ.
ಉ: ಕೂರ್ ಬೇಕೇ ಕೂರ್ - ಭಾಗ ೨ (ಕನ್ನಡಿಗರ ಮದುವೆ)
ನಮ್ಮ ಒಬ್ಬರು ಅತ್ತಿಗೆ ಮನೆ ಕಡೆ "ಅಂಡೂರ್ರಿ" ಎಂಬ ಬಳಕೆ ಇದೆಯಂತೆ
ಆದರೆ ಅವರು ನಮ್ಮ ಬಳಗಕ್ಕೆ ಸೇರಿದ ಮೇಲೆ ಕೂತ್ಕೊಳಿ ಅಂತಲೇ ಹೇಳ್ತಾ ಇದ್ದಾರೆ.
ಉ: ಕೂರ್ ಬೇಕೇ ಕೂರ್ - ಭಾಗ ೨ (ಕನ್ನಡಿಗರ ಮದುವೆ)
ಗೆಳೆಯರೆ, ಕನ್ನಡಿಗರ ಮದುವೆ ಹೀಗಾದರೆ, ಕನ್ನಡಿಗರ ಊಟ ಹೇಗಿರತ್ತೆ ? ತಿಳಿಯಲು ಓದಿ ಕೂರ್ ಬೇಕೇ ಕೂರಿನ ೩ನೆ ಭಾಗ - ಕನ್ನಡಿಗರ ಊಟ