ಆ ಚಿಕ್ಕ ಹುಡುಗಿ..
ಚಿಕ್ಕಂದಿನಲ್ಲಿ ಒಮ್ಮೆ ಅಮ್ಮ ಹಬ್ಬಕ್ಕೆ ತರ ಹೇಳಿದ ಎಣ್ಣೆ,ತರಕಾರಿ ತರಲು ಅಂಗಡಿಯೊಂದಕ್ಕೆ ಹೋಗಿದ್ದೆ. ಖರೀದಿಸುತ್ತಿರುವಾಗ ಒಬ್ಬ ಹುಡುಗಿ ಕಂಕುಳಲ್ಲಿ ಹಸುಳೆಯೊಂದನ್ನು ಹಿಡಿದುಕೊಂಡು ಬಂದಳು. ಬಡವರೆಂದು ನೋಡಿದೊಡನೆ ತಿಳಿಯುತ್ತಿತ್ತು.
ಬಂದವಳೇ "ಅರ್ಧ ಕಾಲು ಕೆಜಿ ಕಡ್ಲೆಹಿಟ್ಟು ಕೊಡಿ" ಎಂದಳು.
ಅಂಗಡಿಯಾತನಿಗೆ ಅರ್ಥವಾಗಲಿಲ್ಲ.
ಅವಳನ್ನು ಅಸಡ್ಡೆಯಿಂದ ನೋಡಿದವನೇ "ಕಾಲು ಕೆಜಿನಾ?" ಎಂದು ಕೇಳಿದ.
"ಇಲ್ಲ ಕಾಲು ಕೆಜಿಯಲ್ಲಿ ಅರ್ಧ" ಹುಡುಗಿ ಹೇಳಿದಳು.
ಕಟ್ಟಿಕೊಟ್ಟ ನಂತರ ಐವತ್ತು ಪೈಸೆ ಕರಿಬೇವು,ಒಂದಷ್ಟು ಹಳ್ಳುಪ್ಪು,ಚಿಕ್ಕ ಸೋಪು ಎಲ್ಲವನ್ನು ಅದರ ಬೆಲೆ ವಿಚಾರಿಸಿ ತೆಗೆದುಕೊಂಡಿದ್ದಳು ಹುಡುಗಿ. ಪ್ರತಿ ವಸ್ತು ತೆಗೆದುಕೊಳ್ಳುವಾಗಲೂ ಕೈಯಲ್ಲಿದ್ದ ಹಣ ಸರಿ ಹೊಂದುವುದೊ ಇಲ್ಲವೊ ಎಣಿಸುತ್ತಿದ್ದಳು.ಎಲ್ಲವೂ ಸೇರಿ ಆರು ರೂಪಾಯಿಯಾಯಿತು.
ಹುಡುಗಿಯ ಹತ್ತಿರ ಇದ್ದದ್ದು ಐದುವರೆ ಮಾತ್ರ.ಎಲ್ಲವನ್ನು ಅಂಗಡಿಯಾತನ ಕೈಗಿಟ್ಟಳು.
"ಇನ್ನು ಐವತ್ತು ಪೈಸೆ?" ಕೇಳಿದನವ.
"ಇಷ್ಟೇ ಅಣ್ಣಾ ಇರೋದು ಮತ್ತೆ ಬಂದಾಗ ಕೊಡ್ತೀನಣ್ಣಾ" ಅಂಗಲಾಚಿತು ಹುಡುಗಿ.
"ಪ್ರತಿ ಬಾರಿ ಬಂದಾಗಲೂ ಹೀಗೇ ಆಟ ಆಡ್ತಿಯಾ? ಏನು ಕೊಡೊದಿಲ್ಲ ಹೋಗು" ಎಂದ.
"ಅಣ್ಣ ನಿಜವಾಗ್ಲೂ ಕೊಡ್ತೀನಣ್ಣ ಒಯ್ಯಲಿಲ್ಲ ಅಂದ್ರೆ ಮನೇಲಿ ಬಡಿತಾರಣ್ಣಾ.." ಪರಿಪರಿಯಾಗಿ ಬೇಡುತ್ತಿದ್ದಳು ಹುಡುಗಿ.
"ನಾನು ಕೊಡ್ತೀನಿ ತಗೊಳ್ಳಿ" ನಾನೆಂದೆ.
"ಇರ್ಲಿ ಬಿಡಪ್ಪಾ ಇವಳು ಪ್ರತಿ ಬಾರಿ ಇದೇ ಆಟ ಆಡೋದು ಅದಕ್ಕೆ ಬುದ್ಧಿ ಬರಲಿ ಅಂತ ಹೇಳಿದ್ದು"ಎಂದು ಮರುಮಾತಾಡದೆ ಎಲ್ಲವನ್ನು ಚಿಕ್ಕ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಟ್ಟ.ಜೋಪಾನವಾಗಿ ತೆಗೆದುಕೊಂಡು ಹೋಯ್ತು ಹುಡುಗಿ.
ನಾನಿನ್ನೂ ಅವಳು ಹೋದ ದಿಕ್ಕಿನತ್ತಲೇ ನೋಡುತ್ತಿದ್ದೆ.ಮನಸ್ಸಿಗೆ ಕಸಿವಿಸಿಯಾಗಿತ್ತು ಕೇವಲ ಅಷ್ಟರಲ್ಲೆ ಈ ಜನ ಅದು ಹೇಗೆ ಬದುಕುತ್ತಿದ್ದಾರೋ ಎಂದು.ಮನೆಗೆ ಬಂದವನ ತಲೆಯಲ್ಲಿ ನೂರಾರು ವಿಚಾರಗಳು ಪ್ರಶ್ನೆಗಳು ಓಡಾಡುತ್ತಿದ್ದವು..ನಾವಿಲ್ಲಿ ತಿಂದು ಉಂಡು ಹಾಯಾಗಿರುತ್ತೇವೆ....ಅಲ್ಲಿ ಇನ್ನೊಂದು ಕಡೆ ಆ ದಿನದ ಊಟಕ್ಕೆ ಅವರು ಪಾಡು ಪಡುತ್ತಿರುತ್ತಾರೆ.ಕೆಲಸ ಸಿಗದಿದ್ದರೆ ಉಪವಾಸ! ಅವರ ನೋವು ಸುಲಭವಾಗಿ ಬಾಯಲ್ಲಿ ಹೇಳುವಂಥದ್ದಲ್ಲ.ಒಂದು ರಾತ್ರಿ ಉಪವಾಸವಿದ್ದರೆ ಜಗತ್ತೇ ಮುಳುಗಿ ಹೋದಂತೆ ಆಡುತ್ತೇವೆ..ಅಂಥಾದ್ರಲ್ಲಿ ಇವರು ದಿನವೂ ಹೋರಾಡಬೇಕಾದ ಪರಿಸ್ಥಿತಿ.
ಅದರ ಬಗ್ಗೆ ಎಲ್ಲಾದರೂ ಯಾರಾದರೂ ಬರೆದಿದ್ದಾರ ಅಂತ ಅಪ್ಪಾಜಿಯವರ ಕಪಾಟಿನೆಡೆಗೆ ಓಡಿದೆ.
ಇಷ್ಟೆಲ್ಲ ನೆನಪಾಗಿದ್ದು ಇತ್ತೀಚಿನ ಬೆಲೆ ಏರಿಕೆಯನ್ನು ನೋಡಿದಾಗ.ಇಲ್ಲಿ ತಣ್ಣಗೆ AC ರೂಮಲ್ಲಿ ಕೂತು ಕೆಲಸ ಮಾಡುವ ನಮ್ಮಂಥವರಿಗೇ ಇದರ ಬಿಸಿ ಹತ್ತಿರುವಾಗ ಇನ್ನು ಪಾಪ ಬಡವರ ಪಾಡೇನು?
ಯಾಕೋ ಐವತ್ತು ಪೈಸೆಗೆ ಆಗ ಅಷ್ಟೂ ಪಾಡು ಪಟ್ಟ ಆ ಹುಡುಗಿಯ ಚಿತ್ರ ಅಸ್ಪಷ್ಟವಾಗಿ ಮನದಲಿ ಸರಿದಾಡಿತು.

- sushil ರವರ ಬ್ಲಾಗ್
- Login or register to post comments
- 242 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಆ ಚಿಕ್ಕ ಹುಡುಗಿ..
ಹೌದು ಸುಶೀಲ್ ರವರೆ,
ಹೆಚ್ಚುತ್ತಿರುವ ಆಹಾರ ಬೆಲೆಯಿಂದ ನಮ್ಮ ನಡುವಿರುವ ಕಡು ಬಡವರು ಅದು ಹೇಗೆ ಬದುಕು ಸಾಗಿಸುತ್ತಿದ್ದಾರೊ ನನಗು ತಿಳಿಯದಾಗಿದೆ...!
-ಯುವಪ್ರೇಮಿ
ಉ: ಆ ಚಿಕ್ಕ ಹುಡುಗಿ..
ಬಡ ದೇಶಗಳ ಪಾಡು ಇಷ್ಟೇ. ಮೊದಲೇ ಬಡತನದಲ್ಲಿಯೇ ಮುಂದುವರಿಯುತ್ತಿರುವ ನಮ್ಮ ದೇಶದಲ್ಲಿ ಬೇಲೆಯೆರಿಕೆಯಂತಹ ಸಮಸ್ಯೆಗಳು ಮುಂದುವರಿದ ದೇಶಗಳು ತಂದು ಇಡುತ್ತಿರುವ ಕೊಡುಗೆಗಳು. ಮೊದಲು ನಮ್ಮ ದೇಶ ಎಲ್ಲ ರಂಗದಲ್ಲು ಸ್ವಸಾಮರ್ಥ್ಯ ಬೆಳೆಸಿಕೊಳ್ಳಬೇಕು.
-ನಂದನ್
ಉ: ಆ ಚಿಕ್ಕ ಹುಡುಗಿ..
ಹೌದು ನಂದನ್ ರವರು ಹೇಳಿದ್ದು ಅಕ್ಷರ ಸಹಿತ ನಿಜ..!!
ವರ್ಷಗಳಿಂದ ನಮ್ಮ ದೇಶ ಪರರ ಬುಜಕ್ಕೆ ಒತ್ತಿಕೊಂಡು ನಿಂತು ನಿಂತು ಈಗ ಸ್ವಂತವಾಗಿ ನಿಂತುಕೊಳ್ಳುವ ಶಕ್ತಿ ಕಳೆದುಕೊಂಡಿದೆ..!
-ಯುವಪ್ರೇಮಿ
ಉ: ಆ ಚಿಕ್ಕ ಹುಡುಗಿ..
ನಿಮ್ಮ ಅಭಿಪ್ರಾಯ ಸರಿಯಾಗಿದೆ.ಎಷ್ಟೋ ಸಲ ಅನಿಸಿದೆ ಈ ಐಟಿ ಬಿಟಿ ಬಿಟ್ಟು ಬದುಕೋಕೆ ಆಗಲ್ಲ ಅನ್ನೋ ಥರ ಆಡ್ತಾರಲ್ಲಾ ಅಂತ.
ಮೂಲ ಬೆನ್ನೆಲುಬಾದ ರೈತನಿಗೆ,ಮಕ್ಕಳ ವಿದ್ಯಾಭ್ಯಾಸಕ್ಕೆ,ಮೂಲ ಸೌಕರ್ಯಗಳಿಗೆ ಮೊದಲು ಆದ್ಯತೆ ನೀಡಬೇಕು ಅನ್ನಿಸಿದೆ.
ಜನಸಂಖ್ಯೆಯ ಬಹು ಪಾಲು ಇನ್ನೂ ಮೂಲ ಸೌಕರ್ಯಗಳಿಲ್ಲದೆ ನರಳುತ್ತಿದ್ದಾರೆ..ಅವರನ್ನು ಬಿಟ್ಟು ಶ್ರೀಮಂತ ಶ್ರೀಮಂತನಾಗುತ್ತಲೇ ಹೋಗುವ..ಬಡವ ಬಡವನಾಗಿಯೇ ಇರುವ ಈ ಸ್ಥಿತಿ ಮೊದಲು ನಿಲ್ಲಬೇಕು.
-ಸುಶೀಲ್.
ಕನ್ನಡಕಡಲಲಿ ಪುಟ್ಟ ಮೀನು ನಾ..!!
ಉ: ಆ ಚಿಕ್ಕ ಹುಡುಗಿ..
ಗಾಯದ ಮೇಲೆ ಬರ್ರೆ ಎನ್ನುವಂತಾಗಿದೆ ನಮ್ಮ ಬಡವರ ಜೀವನ ಸ್ಥಿತಿ. ಮೊದ್ಲೆ ಮಳೆ ಇರೋಲ್ಲ, ಇಲ್ಲ ಅಂದ್ರೆ ಬೆಳೆ ಇರೋಲ್ಲ. ಹೀಗೆ ಪದಾರ್ಥಗಳ ಬೆಲೆ ಗಗನಕ್ಕೆ ಏರುತ್ತಿದ್ದರೆ ನಮ್ಮಂತಹ ಸಾಮಾನ್ಯರ (ಮಧ್ಯಮ ವರ್ಗ) ಸ್ಥಿತಿಯ ಹದಗೆಡುತ್ತದೆ. ಇನ್ನು ಅವರ ಸ್ಥಿತಿ ಹೇಳುವಂತಿರುವುದಿಲ್ಲ.