ಸುಂದರ ಮುಂಜಾವಲ್ಲಿ ಮನಸ್ಸೊಂದರ `ಕಲರವ'
ಅದೊಂದು ಬೇಸಿಗೆಯ ಮಧ್ಯಾಹ್ನ. ಹೊರಗಡೆ ಸೂರ್ಯನ ಕಾವು. ಮನೆಯಲ್ಲಿ ಗಿರ ಗಿರ ತಿರುಗುವ ಫ್ಯಾನಿನ ಕೆಳಗೆ ಕುಳಿತು ಸುಮ್ಮನೆ ಯೋಚಿಸುತ್ತಿದ್ದಾಗ ಮನಸ್ಸಿನಲ್ಲೊಂದು ಕನಸು ಹೆಡೆ ಎತ್ತಿತು. `ನನಗೆ ಬರವಣಿಗೆ ಎಂಬುದು ಮೆಚ್ಚಿನ ವಿಚಾರ. ಅಂಥದ್ದರಲ್ಲಿ ನಾನೇಕೆ ನನ್ನ ಲೇಖನಗಳನ್ನೇ ಸೇರಿಸಿ ಪುಟ್ಟದೊಂದು ಪತ್ರಿಕೆಯನ್ನು ಮಾಡಿ ಅದನ್ನು ನನ್ನದೇ ಆದ ಖಾಸಗಿ ವಲಯದಲ್ಲಿನ ಗೆಳೆಯರ ನಡುವೆ ಹಂಚಬಾರದೇಕೆ, ಎಂಬ ಯೋಚನೆ ಹುಟ್ಟಿ ಕೊಂಡಿತು. ಮಾಡಲು ಕೆಲಸವೇನೂ ಇರಲಿಲ್ಲ. ಅವು ಪರೀಕ್ಷೆ ನಂತರದ ರಜೆಯ ದಿನಗಳು. ಸರಿ, ಸುಮ್ಮನೆ ಕೂತು ಸಮಯವನ್ನು ಕೊಲ್ಲುವುದಕ್ಕಿಂತ ಏನಾದರೊಂದು ಕ್ರಿಯೇಟೀವ್ ಆದ ಕೆಲಸಕ್ಕೆ ಕೈ ಹಾಕೋಣ ಅಂದುಕೊಂಡು ನನ್ನ ಆಪ್ತ ಗೆಳೆಯರಿಗೆ ಫೋನಾಯಿಸಿದೆ. ಅವರ ತಲೆಗೂ ನನ್ನ ಐಡಿಯಾ ತುಂಬಿದೆ. ನನ್ನ ಮೇಲಿನ ಮುಲಾಜಿಗೋ, ಐಡಿಯಾ ಮೇಲಿನ ಮೆಚ್ಚುಗೆಯಿಂದಲೋ ಕೆಲವರು `ಹೂಂ ಇದು ಒಳ್ಳೆಯ ಐಡಿಯಾ' ಅಂದರು. ಕೆಲವರು `ಆಯ್ತು ನೋಡೋಣ' ಅಂದರು.
ಅದೇನನ್ನಿಸಿತು ಅಂದೇ ಕೈಯಲ್ಲೊಂದು ಪುಟ್ಟ ಕಾಗದದ ತುಂಡನ್ನು ಹಿಡಿದು ನಮ್ಮ `ಪತ್ರಿಕೆ'ಗೆ ಏನಂತ ನಾಮಕರಣ ಮಾಡುವುದು ಅಂತ ಯೋಚಿಸುತ್ತಾ ಕುಳಿತೆ. ತಲೆಯಲ್ಲಿ ಸುಳಿದ ಹೆಸರುಗಳನ್ನು ಪಟ್ಟಿ ಮಾಡುತ್ತಾ ಹೋದೆ: ಸಂಭ್ರಮ, ಉತ್ಸಾಹ, ಸಡಗರ, ಮನಸ್ಸು.... ಹೀಗೆ ಪಟ್ಟಿ ಬೆಳೆಯುತ್ತಾ ಹೋಯ್ತು. ಕೊನೆಗೆ ಎಲ್ಲವನ್ನೂ ಸೋಸಿ ಜಾಲಾಡಿ ಎತ್ತಿಕೊಂಡ ಹೆಸರು `ಕಲರವ'. ಇದು ಯುವ ಮನಸ್ಸುಗಳ `ಕಲರವ'!
ಮೊದಲೇನೋ ಸಂಭ್ರಮದಲ್ಲಿ ನಾನೇ ಸಂಪಾದಕ ಅಂತ ಮೂಗರಳಿಸಿ ಕೂತಿರುತ್ತಿದ್ದೆ. ನಂತರ ಪ್ರಾರಂಭವಾಯ್ತು ನಿಜವಾದ ಸರ್ಕಸ್ಸು. ನಾನಂದು ಕೊಂಡಂತೆ ಇಪ್ಪತ್ತು ಪುಟಗಳ ಪತ್ರಿಕೆಯನ್ನು ಹೊರತರಲು ನಾನು, ಒಂದಿಬ್ಬರು ಗೆಳೆಯರು ಕೂಡಿ ಮುಖ ಪುಟ ಬಿಟ್ಟು ಹದಿನೆಂಟು ಪುಟಗಳಾನ್ನು ತುಂಬಿಸ ಬೇಕಿತ್ತು! ಸಾಲದಕ್ಕೆ ಅದನ್ನು ಮಾಸ ಪತ್ರಿಕೆ ಅಂತ ಬೇರೆ ಕರೆದು ಬಿಟ್ಟಿದ್ವಿ. ನಮ್ಮ ಕಾಲೇಜು ಓದಿನ ನಡುವೆಯೇ ಸವಡು ಮಾಡಿಕೊಂಡು ತಿಂಗಳಿಗೆ ಹದಿನೆಂಟು ಪುಟ ತುಂಬಿಸುವ ಚಾಕರಿಗೆ ಮೈಯೊಡ್ಡ ಬೇಕಿತ್ತು. ಆದರೆ ಯುವ ಮನಸ್ಸಿನ ಕಲರವ ಮೌನವಾಗಲಿಲ್ಲ. ಉತ್ಸಾಹದಿಂದ ಪತ್ರಿಕೆಯನ್ನು ಹೊರ ತರಲಾರಂಭಿಸಿದೆವು. ಅಂದಿನಿಂದ ಇಂದಿನ ವರೆಗೆ ಐದು ಸಂಚಿಕೆಗಳನ್ನು ತಂದಿದ್ದೇವೆ. ಮುಂದೆಯೂ ಇದೇ ಉತ್ಸಾಹದಲ್ಲಿ ನಮ್ಮ ಕೆಲಸ ಮಾಡಿಕೊಂಡು ಹೋಗುತ್ತೇವೆ.
ಈ ಮಧ್ಯೆ ಇಂಟರ್‌ನೆಟ್‍ನಲ್ಲಿ ಬ್ರೌಸ್ ಮಾಡುವಾಗ ಸಂಪದ ಎಂಬ ಬೆರಳಂಚಿನ ಅಕ್ಷರಲೋಕದ ಪರಿಚಯವಾಯ್ತು. ಆಗಲೇ ಹೊಳೆದದ್ದು, ನಾನ್ಯಾಕೆ `ಕಲರವ' ವನ್ನು ಸಂಪದದ ಪ್ಲಾಟ್‍ಫಾರ್ಮ್ ಮೇಲೆ ತರ ಬಾರದು ಅಂತ. ಅದಕ್ಕಾಗಿ ನನ್ನ ಗೆಳೆಯರೊಂದಿಗೆ ಚರ್ಚಿಸಿ, ಆಯ್ತು ಅಂತ ತೀರ್ಮಾನಿಸಿದ್ದೇನೆ.
ಇನ್ನು ಮುಂದೆ ಆಗಾಗ `ಕಲರವ'ದ ಲೇಖನಗಳನ್ನ ಸಂಪದದ ಜೀವನದಿಯಲ್ಲಿ ಹರಿಬಿಡುತ್ತೇನೆ. ಅಕ್ಕರೆಯಿಂದ ಒಪ್ಪಿಕೊಳ್ಳುತ್ತೀರಲ್ಲವಾ...?

- uniquesupri ರವರ ಬ್ಲಾಗ್
- Login or register to post comments
- 304 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS: