ಕವಿತೆ ಅರ್ಥವಾಗೋದಿಲ್ಲ ಬಿಡಿ!
ಮೊನ್ನೆಯೆರಡು ದಿನಗಳಿಂದ ಎಸ್.ಎಲ್.ಭೈರಪ್ಪನವರ "ಗ್ರಹಣ" ಕಾದಂಬರಿಯನ್ನು ಓದುತ್ತಿದ್ದೇನೆ. ಕಾದಂಬರಿಗಳೆಂದರೆ ಕೇವಲ ಮನರಂಜನೆಯ ಸರಕು. ಕಪೋಲ ಕಲ್ಪಿತ ಕಹಾನಿಗಳನ್ನು ಉದ್ದಕ್ಕೆ ಎಳೆದೆಳೆದು ನೂರಾರು ಪುಟಗಳಿಗೆ ವಿಸ್ತರಿಸಿದರೆ ಕಾದಂಬರಿಯಾಗುತ್ತದೆ ಎಂಬ ಭಾವ ಸಹಜವಾದದ್ದು. ಹಾಗಾಗಿ ಈ ಕಾದಂಬರಿಗಳನ್ನು, ಫಿಕ್ಷನ್ ಎಂದು ಕರೆಯಲ್ಪಡುವಂತಹ ಸಾಹಿತ್ಯವನ್ನು ಗಂಭೀರ ಎಂದು ಪರಿಗಣಿಸುವವರು ವಿರಳ. ಅದಕ್ಕೆ ಸರಿಯಾಗಿ ಮನೋರಂಜನೆಯೊಂದನ್ನೇ ಬಂಡವಾಳವನ್ನಾಗಿಸಿಕೊಂಡ ಮೆಗಾ ಸೀರಿಯಲ್ ಗಳಂತೆ ಕಥೆ ಹೆಣೆಯುವ ಕಾದಂಬರಿಕಾರರೂ ಕಾದಂಬರಿಗಳ ಬಗೆಗಿನ ಈ ಲೋಕ ಸಹಜ ಅಭಿಪ್ರಾಯಕ್ಕೆ ಕಾರಣಕರ್ತರಾಗಿದ್ದಾರೆ.
ಹೈಸ್ಕೂಲಿನಲ್ಲಿದ್ದಾಗ ನಾನು ಅನೇಕ ಬಗೆಯ ಸಾಂಸ್ಕೃತಿಕ, ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದೆ. ಶಾಲೆಯ ಗೋಡೆ ಪತ್ರಿಕೆಗೆ ಸಂಪಾದಕನಾಗಿದ್ದೆ. ಆ ದಿನಗಳಲ್ಲಿ ನಿಯಮಿತವಾಗಿ ಓದುತ್ತಿದ್ದ 'ಹಾಯ್ ಬೆಂಗಳೂರ್!' ಹಾಗೂ ರವಿ ಬೆಳಗೆರಯವರ ಬರಹಗಳಿಂದ ಪತ್ರಿಕೋದ್ಯಮದ ಬಗೆಗೆ, ಬರಹದ ಬಗ್ಗೆ ಒಂದು ಪ್ಯಾಶನ್ ಮೂಡಿತ್ತು. ಅದೇ ಕ್ರೇಜಿನಲ್ಲಿ ಗೋಡೆ ಪತ್ರಿಕೆಗೆ ಬರೆಯುತ್ತಿದ್ದೆ. ಮುಂದೆ ನಾನೇ ಒಂದು ಪತ್ರಿಕೆಯನ್ನೂ ಮಾಡಿದೆ. ಸಾಹಿತ್ಯದಲ್ಲಿ ಅಂತಹ ದುಡಿಮೆ ಇಲ್ಲದಿದ್ದರೂ ಮನಸ್ಸಿಗೆ ತೋಚಿದ ವಿಚಾರಗಳನ್ನು ಅಕ್ಷರ ರೂಪದಲ್ಲಿ ಇಳಿಸುವ ಕಲೆ ಸಿದ್ಧಿಸುತ್ತಾ ಬಂದಿತ್ತು. ಬಿಡಿ ಬಿಡಿ ಲೇಖನಗಳು ನನ್ನ ಏಕೈಕ ಬರವಣಿಗೆಯ ಮಾಧ್ಯಮವಾಗಿದ್ದವು. ಆದರೆ ಅದಷ್ಟರಿಂದ ಕವಿ ಎನ್ನಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಅರಿವಾಗುತ್ತಿದ್ದಂತೆಯೇ ಪದ್ಯ, ಕವನ, ಕತೆಗೆಳ ಬಗೆಗೆ ಒಲವು, ಕುತೂಹಲ ಮೂಡಿತು. ಆದರೆ ಎಲ್ಲವನ್ನೂ ಅಂಗೈ ಮೇಲಿನ ಗೆರೆಯಂತೆ ಸ್ಪಷ್ಟವಾಗಿ ವಿವರಿಸಿ ಹೇಳಬೇಕು ಎಂಬ ಪತ್ರಿಕೋದ್ಯಮದ ಪ್ರಾಥಮಿಕ ಪಾಠವನ್ನು ಕರಗತ ಮಾಡಿಕೊಳ್ಳುವ ಹವಣಿಕೆಯಲ್ಲಿದ್ದುದರಿಂದ ಕತೆಗಳು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದವು. ಒಳ್ಳೆಯ ಕಥೆಗಳು ನಿಗೂಢವಾಗಿ ಕಾಣುತ್ತಿದ್ದವು, ಸಾಮಾನ್ಯ ಕಥೆಗಳನ್ನು ಓದಿದಾಗ ಇವುಗಳಲ್ಲೇನಿದೆ ಸತ್ವ ಎನ್ನಿಸುತ್ತಿತ್ತು. ಈ ಕತೆಗಳನ್ನು ಯಾರಾದರೂ ಹೇಗೆ ಬರೆಯುತ್ತಾರೆ , ಅದನ್ನು ಯಾರಾದರೂ ಏಕೆ ಓದುತ್ತಾರೆ ಎಂದು ಹೊಳೆಯುತ್ತಿರಲಿಲ್ಲ. ಇನ್ನು ಕವಿತೆಗಳ ಪಾಡನ್ನಂತೂ ಕೇಳುವುದೇ ಬೇಡ. ನಾಲ್ಕು ಸಾಲಿನ ಕವಿತೆಯ ಸಾಲುಗಳನ್ನು ಎರಡೆರಡು ಬಾರಿ ಓದುವ ಸಂಯಮವೇ ಇರುತ್ತಿರಲಿಲ್ಲ. ಇನ್ನು ಅದು ಅರ್ಥವಾಗುವ, ಒಳಕ್ಕಿಳಿಯುವ, ಮನಸ್ಸನ್ನು ತಟ್ಟುವ ಮಾತು ದೂರವೇ ಉಳಿಯಿತು.
ಹೀಗೆ ಹೈಸ್ಕೂಲಿನಲ್ಲಿ ನಡೆದ ಸೃಜನಾತ್ಮಕ ಬರವಣಿಗೆಯ ಸ್ಪರ್ಧೆಯಲ್ಲಿ ಒಂದು ವಿಷಯವನ್ನು ಕೊಟ್ಟು ಅರ್ಧ ಗಂಟೆಯಲ್ಲಿ ಕವನ ಬರೆದು ಅದನ್ನು ವೇದಿಕೆಯ ಮೇಲೆ ವಾಚಿಸಬೇಕು ಎಂದರು. ಎಂಥದ್ದೋ ಪ್ರಾಸ ಪದಗಳುಳ್ಳ ಐದಾರು ಸಾಲು ಗೀಚಿದ್ದೆ. ಆದರೆ ವೇದಿಕೆಯ ಮೇಲೆ ನಿಂತು ಹತ್ತಾರು ಮಂದಿಯ ಎದುರು ಅದನ್ನು ವಾಚಿಸುವಾಗ ಎದೆಯ ಬಡಿತದ ಸದ್ದು ನೂರ್ಮಡಿಯಾಗಿ ಕಿವಿಯಲ್ಲಿ ಢವಗುಟ್ಟುತ್ತಿತ್ತು. ಕವನ ವಾಚನ ಮುಗಿದ ನಂತರ ತೀರ್ಪುಗಾರರು ನಮ್ಮನ್ನು ಒಬ್ಬೊಬ್ಬರನ್ನಾಗಿ ಕರೆದು ಸಾಹಿತ್ಯಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ನನಗೆ ಕೇಳಿದ ಕೆಲವು ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ ಮಾತ್ರ ಬಹುದಿನಗಳವರೆಗೆ ಕಾಡುತ್ತಿತ್ತು. 'ಕಥೆಗಳೆಂದರೆ ಏನು? ಅವು ಯಾಕೆ ಬೇಕು? ಲೇಖನದಲ್ಲೇ ಅದು ಹೇಳಬಯಸುವುದನ್ನು ಹೇಳಿಬಿಡಬಹುದಲ್ಲವೇ?' ನನಗೆ ಪ್ರಶ್ನೆಯ ತಲೆಬುಡವೂ ತಿಳಿಯಲಿಲ್ಲ. ಕಥೆಗಳನ್ನು ಓದಿದ್ದೇನೆ, ಲೇಖನಗಳನ್ನೂ ಓದಿದ್ದೇನೆ ಎರಡೂ ಬೇರೆ ತರಹ ಅಂತಲೂ ಗೊತ್ತು ಆದರೆ ಕಥೆಯೇ ಏಕೆ ಬೇಕು? ಏನೋ ಒಂದು ಸಮಜಾಯಿಷಿಯನ್ನು ಹೇಳಿದ್ದೆ.
ಈಗೀಗ ನನ್ನ ಅನುಭವಕ್ಕೆ ಬರುತ್ತಿರುವ ಸಂಗತಿಯೆಂದರೆ, ಸಾಹಿತ್ಯದ ಮಹುಮುಖ್ಯವಾದ ಉದ್ದೇಶವೇ ಅಭಿವ್ಯಕ್ತಿ. ಒಂದು ಭಾವವನ್ನು ವ್ಯಕ್ತಿ ಯಾವ ನೆಲೆಯಲ್ಲಿ, ಯಾವ ಪರಿಸರದಲ್ಲಿ, ಎಷ್ಟು ತೀವ್ರತೆಯಲ್ಲಿ ಅನುಭವಿಸುತ್ತಾನೆಯೋ ಅದೇ ತೀವ್ರತೆಯಲ್ಲಿ, ಅಂಥದ್ದೇ ಚೌಕಟ್ಟಿನಲ್ಲಿ ಅದನ್ನು ಅಭಿವ್ಯಕ್ತಿಗೊಳಿಸಲು ಆತ ಅನೇಕಾನೇಕ ಮಾರ್ಗಗಳನ್ನು ಹುಡುಕುತ್ತಾನೆ. ಕೆಲವರಿಗೆ ಸರಳವಾದ ಲೇಖನವೊಂದರಲ್ಲಿ ಅಭಿವ್ಯಕ್ತಿಯ ಸಾರ್ಥಕ್ಯ ಕಾಣಬಹುದು. ಕೆಲವರಿಗೆ ಬೇರೊಂದು ವಿಧಾನ ಸಹಾಯಕವಾಗಬಹುದು, ಅದಕ್ಕೆ ಆತ ಕಥೆ ಎಂದು ಹೆಸರಿಡಬಹುದು. ಮತ್ತೊಬ್ಬನು ಕಂಡುಕೊಂಡ ವಿಧಾನವನ್ನು ನಾಟಕ ಎಂದು ಕರೆಯಬಹುದು. ಕವನ, ಪದ್ಯ, ನೀಳ್ಗವನ, ರಗಳೆ, ಕಂದಪದ್ಯ ಹೀಗೇ ಏನೇನೋ ಪ್ರಕಾರಗಳನ್ನು ಕಂಡುಕೊಳ್ಳುತ್ತಾ ಹೊಗುತ್ತಾನೆ. ಕಲೆಯ ನಾನಾ ಪ್ರಕಾರಗಳ ಅನಾವರಣವಾಗುತ್ತಾ ಹೋಗುತ್ತದೆ. ಕವಿ ಹುಟ್ಟುತ್ತಾನೆ, ನೃತ್ಯ ಕಲಾವಿದ ಜನ್ಮ ತಾಳುತ್ತಾನೆ, ಕುಂಚ ಹಿಡಿದ ಕೈಗೆ ಚೈತನ್ಯ ಬರುತ್ತದೆ. ಆದರೆ ಎಲ್ಲದರ ಮೂಲ ಉದ್ದೇಶವೂ ಒಂದೇ, ಅಭಿವ್ಯಕ್ತಿ.
ನನ್ನ ಬ್ಲಾಗ್: http://uniquesupri.wordpress.com/

- uniquesupri ರವರ ಬ್ಲಾಗ್
- Login or register to post comments
- 246 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: