ತರ್ಕವೆಂಬ ಎರಡಲಗಿನ ಕತ್ತಿಯ ಮೇಲೆ...
ತರ್ಕ ಅಥವಾ ಲಾಜಿಕ್ ಎಂದು ಯಾವುದನ್ನು ಕರೆಯುತ್ತೇವೆಯೋ ಅದು ತುಂಬಾ ಶಕ್ತಿಶಾಲಿ. ಅದರಷ್ಟು ಪರಿಣಾಮಕಾರಿಯಾಗಿ ನಮ್ಮ ಬುದ್ಧಿಯನ್ನು ಒಪ್ಪಿಸುವುದು ಬೇರಾವುದೂ ಇರದು. ಎಂಥದ್ದೇ ವಿಚಾರವನ್ನು, ಸಿದ್ಧಾಂತವನ್ನು ತರ್ಕಬದ್ಧವಾಗಿ ಪ್ರಸ್ತುತ ಪಡಿಸಿದಾಗ ಯಾರಿಗಾದರೂ ಮನವರಿಕೆ ಮಾಡಿಕೊಡಬಹುದು. ತರ್ಕ ಸುಂದರವಾದದ್ದು, ಅದು ಹರಿತವಾದದ್ದು. ಫಳ ಫಳ ಹೊಳೆಯುವ ಮೋಹಕವಾದ ಕತ್ತಿಯ ಅಲಗಿನಂಥದ್ದು. ಎಷ್ಟು ಸೂಕ್ಷ್ಮವಾದ ಪದರದ ಎದೆಯ ಮೇಲಾದರೂ ಸರಾಗವಾಗಿ ಹರಿದು ಅದನ್ನು ಎರಡು ಭಾಗವಾಗಿ ಛೇದಿಸಿಬಿಡಬಲ್ಲದು. ಎಂತಹ ದೊಡ್ಡ ವಸ್ತುವನ್ನಾದರೂ ವಿಂಗಡಿಸಿ ವಿಂಗಡಿಸಿ, ಕತ್ತರಿಸಿ ತುಂಡು ಮಾಡಬಲ್ಲದು.
ಈ ಒಂದು ತರ್ಕವನ್ನೇ ಗಮನಿಸಿ. ತಾರ್ಕಿಕತೆ ಎಂಬ ಮನುಷ್ಯನ ಬೌದ್ಧಿಕತೆಯ ಅದ್ಭುತ ಸಲಕರಣೆಯೊಂದರ, ಮೆಥಡಾಲಜಿಯೊಂದರ ಮಿತಿಗಳೇನು ಎಂಬುದರ ಅರಿವಾಗುತ್ತದೆ. ದೇವರನ್ನು ಆಸ್ತಿಕರು ಸರ್ವಶಕ್ತ ಎನ್ನುತ್ತಾರೆ. ಇಂಗ್ಲೀಷಿನಲ್ಲಿ omnipotent ಎನ್ನುತ್ತಾರೆ. ಅಂದರೆ ಆತನಿಗೆ ಎಲ್ಲವೂ ಸಾಧ್ಯ. ಅವನ ಕೈಲಿ ಮಾಡಲಾಗದ ಯಾವ ಕೆಲಸವೂ ಜಗತ್ತಿನಲ್ಲಿಲ್ಲ. 'ದೇವರ defnition ಕೊಡು' ಎಂದು ಕೇಳಿದಾಗ ಆಸ್ತಿಕ ಈ ವಾದವನ್ನು ಮಂಡಿಸುತ್ತಾನೆ. ಆಗ ತರ್ಕ ತನ್ನ ಹರಿತವಾದ ಅಲಗನ್ನು ಝಳಪಿಸುತ್ತಾ ಅಪ್ಪಳಿಸುತ್ತದೆ. 'ದೇವರು ಸರ್ವಶಕ್ತನಾ? ಏನು ಬೇಕಾದರೂ ಮಾಡಬಲ್ಲವನಾ, ಹಾಗಾದ್ರೆ ತನಗೇ ಮೇಲಕ್ಕೆತ್ತಲು ಸಾಧ್ಯವಾಗದಂತಹ ಕಲ್ಲು ಬಂಡೆಯನ್ನು ಸೃಷ್ಠಿಸಲು ಸಾಧ್ಯವಾ?' ಎನ್ನುತ್ತಾ ಕೊಂಕು ನಗೆಬೀರುತ್ತದೆ ತರ್ಕ. ಆಸ್ತಿಕ ಯೋಚಿಸಲಾರಂಭಿಸುತ್ತಾನೆ. ತಾನೇ ಮೇಲಕ್ಕೆತ್ತಲು ಸಾಧ್ಯವಿಲ್ಲದ ಕಲ್ಲು ಬಂಡೆಯನ್ನು ದೇವರು ಸೃಷ್ಠಿಸಬಲ್ಲ. ಆದರೆ ಆತನಿಗೆ ಅದನ್ನು ಎತ್ತಲು ಸಾಧ್ಯವಾಗದು ಎಂದರೆ ಆತ ಸರ್ವಶಕ್ತ ಹೇಗಾಗುತ್ತಾನೆ? ಆಸ್ತಿಕನ ಮರ್ಮಕ್ಕೆ ಆಘಾತವಾಗುತ್ತದೆ. ತರ್ಕ ಬ್ರಹ್ಮಾನಂದವನ್ನು ಅನುಭವಿಸುತ್ತಿರುತ್ತದೆ.
ವಾದಕ್ಕೆ ನಿಂತರೆ, ಸಾಧಿಸಲು ನಿಂತರೆ, ಮತ್ತೊಬ್ಬನನ್ನು ಗೆಲ್ಲುವುದಕ್ಕೆ ನಿಂತರೆ ತರ್ಕದೆದುರು ಭಾವನೆ, ನಂಬಿಕೆ, ಶ್ರದ್ಧೆಗೆ ಉಳಿಗಾಲವಿಲ್ಲ. ಹಾಗೆ ನೋಡಿದರೆ ತರ್ಕ, ಪ್ರಶ್ನೆ ಕೆಟ್ಟದ್ದು ಅಂತೇನಲ್ಲ. ಅದಿಲ್ಲದಿದ್ದಿದ್ದರೆ ಯಾವ ವೈಜ್ಞಾನಿಕ ಪ್ರಗತಿಯೂ ಸಾಧ್ಯವಾಗುತ್ತಿರಲಿಲ್ಲ, ಪ್ರಕೃತಿಯ ಇಷ್ಟೆಲ್ಲ ರಹಸ್ಯಗಳ ಅನಾವರಣವೂ ಸಾಧ್ಯವಾಗುತ್ತಿರಲಿಲ್ಲ. ಸರಕಾರ ಕಟ್ಟಲು ಸಾಧ್ಯವಾಗುತ್ತಿರಲಿಲ್ಲ, ಆಡಳಿತ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ತರ್ಕ ಕೆಟ್ಟದ್ದಲ್ಲ. ತರ್ಕ ನಿರಪಾಯಕಾರಿ ಸಲಕರಣೆ ಮಾತ್ರ.ಅದನ್ನು ಎಲ್ಲೆಲ್ಲಿ ಬಳಸಬೇಕೋ ಅಲ್ಲಲ್ಲಿ ಜಾಣ್ಮೆಯಿಂದ ಬಳಸಿದರೆ ಅದ್ಭುತವಾದ ಪರಿಣಾಮವುಂಟಾಗುತ್ತದೆ. ಲ್ಯಾಬಿನಲ್ಲಿ ತರ್ಕದ ಕೈಹಿಡಿದ ವಿಜ್ಞಾನಿ ಜಗತ್ತಿಗೇ ವರದಾನವಾಗುವ ಸಂಶೋಧನೆ ಮಾಡಬಲ್ಲ. ಆದರೆ ತರ್ಕವನ್ನು ಲ್ಯಾಬಿನಲ್ಲೇ ಬಿಟ್ಟು ಆತ ಮನೆಗೆ ಹೋಗಬೇಕು, ದೇವಸ್ಥಾನಕ್ಕೆ ಹೋಗಬೇಕು.ಅಲ್ಲಿಗೂ ತರ್ಕವನ್ನು ಕರೆದುಕೊಂಡು ಹೊರಟಾಗಲೇ ಎಡವಟ್ಟಾಗುವುದು .
ತರ್ಕ ಎಲ್ಲಕ್ಕೂ ವಿವರಣೆ ಕೇಳುತ್ತದೆ. ಅದನ್ನು ಸಮರ್ಥಿಸಿಕೊಳ್ಳಲು ಪುರಾವೆ ಒದಗಿಸು ಎಂದು ಮೈಮೇಲೆ ಬೀಳುತ್ತದೆ. ಕೊನೆಗೆ ತನಗೆ ಸಮರ್ಪಕವಾದ ಸಾಕ್ಷಿ, ವಿವರಣೆ ಸಿಗದಿದ್ದಾಗ ಕೇಸನ್ನು ಮುಚ್ಚಿ ಹಾಕಿಬಿಡುತ್ತದೆ. ನನಗೆ ಸಂತೋಷವಾಗುತ್ತಿದೆ, ಇದು ನನ್ನ ಮೊದಲ ಸಂಬಳ, ಕುಣಿಯಬೇಕು ಅಂತ ನಿಮಗನ್ನಿಸುತ್ತದೆ. ತರ್ಕ ಸಂತೋಷ ಯಾಕೆ ಆಗುತ್ತಿದೆ ವಿವರಣೆ ಕೊಡು. ಪ್ರಪಂಚದಲ್ಲಿ ಮೊದಲ ಸಂಬಳ ಪಡೆದವರೆಲ್ಲರೂ ಡ್ಯಾನ್ಸ್ ಮಾಡುತ್ತಾರಾ ಎಂದು ಕೇಳುತ್ತದೆ. ಅದು ತೀರ್ಪು ನೀಡುವಷ್ಟರಲ್ಲಿ ನಿಮ್ಮ ಮನಸ್ಸಿನಿಂದ ಸಂತೋಷ ಮರೆಯಾಗಿರುತ್ತದೆ, ಡ್ಯಾನ್ಸ್ ಮಾಡುವ ಉಮ್ಮೇದು ಸತ್ತುಹೋಗಿರುತ್ತದೆ. ನಾನು ಆತನನ್ನು ಪ್ರೀತಿಸುತ್ತಿದ್ದೇನೆ, ಆತ ಇಲ್ಲದೆ ಬದುಕೇ ಇಲ್ಲ ಅನ್ನಿಸುತ್ತಿದೆ ಅಂತ ತರ್ಕದ ಹೆಗಲ ಮೇಲೆ ಕೈಹಾಕಿ ಹೇಳಿ ನೋಡಿ. ಕೂಡಲೇ ಪ್ರೀತಿ ಅಂದರೆ ಏನು ಹೇಳು ಅಂತ ಗಂಟುಬೀಳುತ್ತದೆ. ಅವನ ಪರಿಚಯವೇ ಇಲ್ಲದೆ ಇಷ್ಟು ದಿನ ಬದುಕಿರಲಿಲ್ಲವಾ, ಒಂದು ವೇಳೆ ಅವನ ಪರಿಚಯವೇ ಆಗಿರದಿದ್ದರೆ ನೀನು ಬದುಕುತ್ತಲೇ ಇರಲಿಲ್ಲವಾ, ಇವನನ್ನು ಬಿಟ್ಟು ಬೇರೆ ಯಾರನ್ನಾದರೂ ಪ್ರೀತಿಸಿದ್ದರೆ ನೀನು ಬದುಕುತ್ತಿರಲಿಲ್ಲವಾ, ಅಕಸ್ಮಾತ್ ಈತ ಕೈಕಾಲು, ಕಣ್ಣು ಕಳೆದುಕೊಂಡು ನಿನ್ನ ಮೇಲೆ ಆಶ್ರಯಿಸಿದರೆ, ನಿನ್ನನ್ನು ಮದುವೆಯಾದ ಮೇಲೆ ಆತ ಬೇರೊಬ್ಬ ಹೆಣ್ಣಿನ ಸಹವಾಸಕ್ಕೆ ಬಿದ್ದರೆ ನಿನಗೆ ಅವನ ಮೇಲೆ ಪ್ರೀತಿ ಕಡಿಮೆಯಾಗುವುದಿಲ್ಲವಾ, ಆಗಲೂ ನಿನಗೆ ಅವನಿಲ್ಲದಿದ್ದರೆ ಬದುಕೇ ಇಲ್ಲ ಅನ್ನಿಸುತ್ತದಾ? ಎಂದು ಕುತ್ತಿಗೆಗೆ ಗಂಟು ಬಿದ್ದು ಉತ್ತರ ಕೊಡು ಅಂತ ಪೀಡಿಸುತ್ತದೆ. ಅದರ ಪ್ರಶ್ನೆಗಳನ್ನೆಲ್ಲ ಕೇಳಿ ಉತ್ತರ ಯೋಚಿಸುವಷ್ಟರಲ್ಲಿ ಮನಸ್ಸಲ್ಲಿ ಅರಳಿದ ಪ್ರೀತಿಯ ಹೂ ಮುದುಡಿ ಹೋಗಿರುತ್ತದೆ.
ತರ್ಕವನ್ನು ಕೇವಲ ಒಂದು ಸಾಧನವಾಗಿ, ಒಂದು ತಂತ್ರವಾಗಿ, ಮೆಥಡಾಲಜಿಯಾಗಿ ಬಳಸಿ ಕೈಬಿಡುವ ಬದಲು ಅದರ ಹೆಗಲ ಮೇಲೆ ಕೈ ಹಾಕಿಕೊಂಡು ಅದನ್ನು ಮನೆಯ ಬೆಡ್ ರೂಂವರೆಗೂ ಕರೆದುಕೊಂಡು ಬಂದರೆ ಅದರ ಹರಿತವಾದ ಅಲಗು ನವುರಾದ ಸಂಬಂಧದ ಎಳೆಗಳನ್ನೆಲ್ಲಾ ಶಾರ್ಪಾದ ಬ್ಲೇಡೊಂದು ಎಳೆಯ ಮೃದುವಾದ ಹೂವಿನ ಪಕಳೆಗಳ ಕೆನ್ನೆ ಹರಿಯುವಂತೆ ಹರಿದುಹಾಕಿಬಿಡುತ್ತದೆ. ಲ್ಯಾಬಲ್ಲೇ ಬಿಟ್ಟು ಬರಬೇಕಾದ ತರ್ಕದ ಜ್ವಾಲೆಯನ್ನು ದೇವಸ್ಥಾನಕ್ಕೂ ತೆಗೆದುಕೊಂಡು ಬಂದರೆ ಎಲ್ಲಾ ಮರೆತು ಶುದ್ಧವಾದ ಭಾವವನ್ನು ಅನುಭವಿಸುವಾಗ ಮನಸ್ಸಿನಲ್ಲಿ ಹರವಿಕೊಳ್ಳುವ ನಲ್ಮೆಯ ತೋಟಕ್ಕೆ ಅದು ಕಿಚ್ಚು ಹಚ್ಚಿಬಿಡುತ್ತದೆ. ಕೆಡುಕು, ಮೂರ್ಖತನ ಇರುವುದು ತರ್ಕದಲ್ಲಲ್ಲ, ಅದನ್ನು ತಲೆಯ ಮೆಲೆ ಹೊತ್ತು ತಿರುಗಾಡುವವನಲ್ಲಿ!
ನನ್ನ ಬ್ಲಾಗ್: http://uniquesupri.wordpress.com/

- uniquesupri ರವರ ಬ್ಲಾಗ್
- Login or register to post comments
- 230 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: