ಇಲ್ಲಿ ಸೋತವರ್ಯಾರೂ ಇಲ್ಲ
ನನಗೊಂದು ಆಮಂತ್ರಣ ಕಳಿಸದೆ
ಹುಣ್ಣಿಮೆ ರಾತ್ರಿಯ
ಚಂದಿರ ಮಾಯವಾದಂತೆ
ಅವನ ಕೈ ಹಿಡಿದು ಹೊರಟು
ಹೋದೆ ನೀನು
ಮರವು ತೊರೆದ ಬಳ್ಳಿಯ ಹಾಗೆ
ಒಡಲು ಬರಿದಾದ ತಾಯಿಯ ಹಾಗೆ
ಸಂತೆಯಲ್ಲಿ ತಂದೆಯ ಬೆರಳು ಕೈ ಬಿಟ್ಟ ಕಂದನ ಹಾಗೆ
ಬಾಣವ ಹೂಡಿ ಮಂತ್ರ ಮರೆತ ಕರ್ಣನ ಹಾಗೆ
ಉಳಿದೆ ನಾನು
ನನಗೆ ಗೊತ್ತು
ಮಾತುಕತೆ ಮುಗಿದಿದ್ದ ಸಾಕ್ಷಿಗೆ
ನಾಜೂಕು ಕೈಬೆರಳ ಒತ್ತುತ್ತಿರುವ
ಚಿನ್ನದುಂಗುರ
ಹಣೆಗೆ ಬಿಗಿದ ಬಾಸಿಂಗ
ಕೊರಳ ಹಿಸುಕುವ ಮಾಂಗಲ್ಯ
ಕಾಲ ಮೃದು ಬೆರಳನು
ಹಿಂಸಿಸುವ ಬೆಳ್ಳಿಯ ಉಂಗುರ
ಸಪ್ತಪದಿಯ ಒಂದೊಂದು
ಹೆಜ್ಜೆಯನು ಭಾರವಾಗಿಸಿದೆ
***
ಇದೇನು, ಕಳೆದಿರುಳು
ಅರಳಿ ಹಿತ್ತಲನು
ಆವರಿಸಿದ ಹೂವು
ಬೇರೇನೋ ಹೇಳುತಿದೆ
ನೀ ತೊಟ್ಟ ಉಂಗುರ,
ಬಾಸಿಂಗ, ಸೊಂಟದ ಡಾಬು
ಚಿನ್ನದ ಮಾಂಗಲ್ಯದ ಸುತ್ತ
ಹೂಬಳ್ಳಿ ತಬ್ಬಿದೆ
ಕನಸಿನ ಬೀಜ ಬಿತ್ತಿದೆ
ತಪ್ಪು ಅವಳದೋ
ತ್ಯಾಗ ನಿನ್ನದೋ
ಸಂಚು ವಿಧಿಯದೋ
ಎದೆಯಲ್ಲಿ ಚಿಗಿತು
ಅರಳಿ ನಿಂತ ಪ್ರೀತಿ ಸತ್ಯ
ಪ್ರೀತಿ
ಒಮ್ಮುಖ ರಸ್ತೆ ಕಾಣೋ ಮೂರ್ಖ
ಇಲ್ಲಿ ಸೋತವರ್ಯಾರೂ ಇಲ್ಲ.
- uniquesupri's blog
- Login or register to post comments
- 377 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ಇಲ್ಲಿ ಸೋತವರ್ಯಾರೂ ಇಲ್ಲ
ಮನಸ್ಸನ್ನು ತುಂಬಾ ಕಾಡಿತು ಕವನ. ಕವಿ ಒಮ್ಮುಖವಾಗಿ ಆಲೋಚಿಸುತ್ತಿದ್ದ ಹಾಗೆ ಭಾಸವಾಗುತ್ತದೆ. ವಿಧಿಯ ಸಂಚಿನಿಂದಾಗಿ, ಪರಿಸ್ಥಿತಿಯೊಂದಿಗೆ ಪ್ರೀತಿ ರಾಜಿ ಮಾಡಿಕೊಂಡಿರಬಹುದಲ್ಲವೇ?
ಉ: ಇಲ್ಲಿ ಸೋತವರ್ಯಾರೂ ಇಲ್ಲ
ಪ್ರತಿ ಕವಿತೆಯೂ ಕವಿಯದೇ ಭಾವವಾಗಬೇಕಿಲ್ಲ. ಈ ಕವಿತೆಯಲ್ಲಿರುವ ವಿರಹಿಯ ಭಾವನೆಯನ್ನು ಕವಿ ಅಭಿವ್ಯಕ್ತಿಸಿದ್ದಾನೆ. ಆ ವಿರಹಿಯು ಒಮ್ಮುಖವಾಗಿ ಯೋಚಿಸಿದರೆ ಕವಿ ತಾನೇ ಏನು ಮಾಡಿಯಾನು?
ಉ: ಇಲ್ಲಿ ಸೋತವರ್ಯಾರೂ ಇಲ್ಲ
ಒಪ್ಪಿಗೆ :-)
ಉ: ಇಲ್ಲಿ ಸೋತವರ್ಯಾರೂ ಇಲ್ಲ
ಒಂದು ತಪ್ಪಿತ್ತು ತಿದ್ದಿರುವೆ.
ಎರಡನೆಯ ಭಾಗದಲ್ಲಿ ಎಲ್ಲವನ್ನೂ ಹೇಳಿದ್ದು ಹಿತ್ತಲಲ್ಲಿ ಅರಳಿದ ಹೂವು.
ಉ: ಇಲ್ಲಿ ಸೋತವರ್ಯಾರೂ ಇಲ್ಲ
ಹು, ಕವಿ ಹೇಳಿದ್ದೋ, ವಿರಹಿ ಹೇಳಿದ್ದೋ, ಹೂವು ಹೇಳಿದ್ದೋ, ಒಟ್ಟಿನಲ್ಲಿ ಭಾವ ಅರ್ಥವಾಗಿತ್ತು :-)
ಉ: ಇಲ್ಲಿ ಸೋತವರ್ಯಾರೂ ಇಲ್ಲ
ಸೋತವರ್ಯಾರೂ ಇಲ್ಲ ಅಂತಂದ್ರೆ ಕವಿಗೆ ಪ್ರೀತಿಸಿದವಳು ಸಿಕ್ಕಿಲ್ಲ, ಕವಿ ಸೋತ ಹಾಗೇ ಅಲ್ವೇ?
ಉ: ಇಲ್ಲಿ ಸೋತವರ್ಯಾರೂ ಇಲ್ಲ
ಹುಡುಗಿಯನ್ನು ಮದುವೆಯಾಗುವುದರಲ್ಲಿ ನಮ್ಮ ವಿರಹಿ ಸೋತಿರಬಹುದು. ಆದರೆ ಪ್ರೀತಿ ಅವನಲ್ಲಿ ಅರಳಿದ್ದು ನಿಜವಲ್ಲವಾ?