ಅಮ್ಮಂದಿರ ಹಳೆಬಾಟಲಿ ಪ್ರೀತಿ
ನನ್ನ ಪ್ರಿಯ ಮಿತ್ರನೊಬ್ಬ ಕಳೆದ ವಾರಾಂತ್ಯದಲ್ಲಿ ಊರಿಗೆ ಹೊರಡುತ್ತಿದ್ದ. ಯುಕೆಯಿಂದ ಭಾರತಕ್ಕೆ ಪ್ರಯಾಣಿಸಬೇಕಾದರೆ, ವಿಮಾನದಲ್ಲಿ ೨೫ ಕೆಜಿಗಿಂತ ಹೆಚ್ಚು ಲಗೇಜ್ ಇರುವಂತಿಲ್ಲ. ಅವನಲ್ಲಿ ಅದಾಗಲೇ ಲಗೇಜ್ ೩೦ ಕೆಜಿಗಿಂತ ಹೆಚ್ಚಿತ್ತು!, ನನ್ನ ಪ್ರಾಜೆಕ್ಟ್ ಮ್ಯಾನೇಜರ್ ಅವರ ಸಂಬಂಧಿ ಮಕ್ಕಳಿಗಾಗಿ ರಿಮೋಟ್ ಕಂಟ್ರೋಲ್ಲರ್ ಚಾಲಿತ ಅಗ್ನಿಶಾಮಕ (ಆಟದ) ಟ್ರಕ್ ಒಂದನ್ನು ಅವನ ಮೂಲಕ ತರಿಸುತ್ತಿದ್ದರು. ಅವನಲ್ಲಿ ಅದನ್ನು ಹಿಡಿಸುವಂತ ಸೂಟ್ ಕೇಸ್ ಇಲ್ಲವಾಗಿ, ನಾನು ನನ್ನ ದೊಡ್ಡ ಸೂಟ್ ಕೇಸಿನಿಂದ ನನ್ನೆಲ್ಲ ಗಜಿಬಿಜಿಗಳನ್ನು ಖಾಲಿ ಮಾಡಿ ಕೊಡಬೇಕಾಯ್ತು. ಅವನ ಪರಿಸ್ಥಿತಿ ಇಂತಿದ್ದರೂ, ಅವನು ಒಂದು ಹಳೆಯ ಪರ್ಲ್ ಪೆಟ್ ಬಾಟಲಿ ಮತ್ತು ಹಲ್ದೀರಾಮ್ಸ್ ಸ್ವೀಟಿನ ಒಂದು (ಬಳಸಿ ಬಿಸಾಡಬೇಕಾದ) ಡಬ್ಬವನ್ನು ಜತನದಿಂದ ತುಂಬಿಸಿಕೊಡ. ಪರ್ಲ್ ಪೆಟ್ ಜಾರ್ ದೊಡ್ಡ ಬಾಯಿಯದು. ಅದರೊಳಗೆ ಕೈ ಹಾಕಿ ಸ್ಕ್ರಬ್ಬರ್ ಉಪಯೋಗಿಸಿ ಕ್ಲೀನ್ ಮಾಡಿರಬೇಕು; ತನ್ನ ಪಾರದರ್ಶಕತೆಯನ್ನು ಕಳೆದುಕೊಂಡು ಹಳೆಯ ಜಮಾನಾದ ಬಾಟಲಿಯಂತೆ ಕಾಣುತ್ತಿತ್ತು. ಅದ್ಯಾಕಯ್ಯ ನಿನಗೆ, ಬಿಸಾಡಬಾರದೇ ಎಂದು ನಾನಂದರೆ, ಅವು ಅವನು ಕಳೆದ ಬಾರಿ ಬಂದಾಗ ತಂದವೆಂದೂ, ಅವನ್ನು ಏಕೆ ಬಿಟ್ಟು ಬಂದಿದ್ದೀಯ ಎಂದು ಅವನ ಅಮ್ಮ ದಬಾಯಿಸಿದ್ದಾರೆಂದೂ, ಈ ಬಾರಿ ಹುಡುಕಿ ತರಲು ಅಪ್ಪಣೆಯಾಗಿದೆಯೆಂದು ಹೇಳಿದ. ಅದನ್ನು ಕೇಳಿ ಪ್ರಪಂಚದಲ್ಲಿ ಅಮ್ಮಂದಿರೆಲ್ಲರೂ ಒಂದೇ ಅಚ್ಚಿನಲ್ಲಿ ತಯಾರಿಸಲ್ಪಟ್ಟಿದ್ದಾರೆಂಬ ಬಗ್ಗೆ ನನ್ನ ಕೊನೆಯ ಸಂಶಯವೂ ಅಲ್ಲಿಗೆ ಪರಿಹಾರವಾಯಿತು.
ನನ್ನಮ್ಮನಿಗೂ ಖಾಲಿ ಬಾಟಲಿಗಳ ಹುಚ್ಚು ವಿಪರೀತ. ಹಾರ್ಲಿಕ್ಸ್ ಮತ್ತು ಬೂಶ್ಟ್ ಪೇಯಗಳ ದಪ್ಪ ಗಾಜಿನ ಅಗಲ ಬಾಯಿಯ ಬಾಟಲಿಗಳ ಮೇಲೆ ವಿಶೇಷ ಪ್ರೀತಿ. ನಮ್ಮ ಮನೆಯಲ್ಲಿ ಕೆಲವು ಬಾಟಲಿಗಳು ನನಗಿಂತ ಹೆಚ್ಚು ವಯಸ್ಸಾದವು ಇವೆ. ಸಹಜವಾಗಿ ನನ್ನಮ್ಮನಿಗೆ ಅವುಗಳ ಮೇಲೆ ನನ್ನ ಮೇಲೆ ಇದ್ದದುಕ್ಕಿಂತ ಹೆಚ್ಚು ಮಮತೆ ಇದೆ. ಸಭೆ ಸಮಾರಂಭ ಮುಗಿದ ಮೇಲೆ ಕೆಲವೊಮ್ಮೆ ಹತ್ತಿರದ ಸಂಬಂಧಿಗಳು ಸಾರು, ಸಾಂಭಾರುಗಳು ಉಳಿದಿದ್ದರೆ ರಾತ್ರಿಗೆ ತೆಗೆದುಕೊಂಡು ಹೋಗುವುದಿದೆ. ಅಂಥ ಮನೆಗಳಿಗೆ ಆಮೇಲೆ ಯಾವಾಗಲಾದರೂ ಹೋದರೆ, ಖಾಲಿ ಬಾಟಲಿಗಳನ್ನು ಮತ್ತೆ ಕೇಳಿ ಪಡೆಯಲು ಯಾವುದೇ ಸಂಕೋಚವೂ ಇಲ್ಲ ನನ್ನಮ್ಮನಿಗೆ.
ನಾನು ಬೆಂಗಳೂರಿಗೆ ಹೋದ ಮೇಲೆ ನಮಗೆ ಆಗಾಗ್ಯೆ ಬಾಟಲಿಗಳಲ್ಲಿ ತಿಂಡಿ ತೀರ್ಥಗಳು ಸರಬರಾಜಾಗುವವಷ್ಟೆ. ಇಷ್ಟರೊಳಗೆ ನಿಮಗೆ ಅಂದಾಜಾಗಿರುವಂತೆ ನನಗೆ ಖಾಲಿ ಬಾಟಲಿಗಳ ಮೇಲೆ ವಿಶೇಷ ಆಸ್ಥೆ ಇಲ್ಲ. ನಾನು ಅವುಗಳನ್ನು ತೊಳೆಯದೆ ನನ್ನ ಬಿಡಾರದಲ್ಲಿ ಪೇರಿಸಿಡುತ್ತಿದ್ದೆ. ಅವುಗಳಲ್ಲಿರುವುದನ್ನು ಅರ್ಧವಷ್ಟೆ ಮುಗಿಸಿ, ತೊಳೆಯದೆ 'Bangalore's largest kitchen' ಎಂದು ನಾವು ಅಂದುಕೊಂಡಿದ್ದ ನಮ್ಮ ಕಿಚನ್ ನಲ್ಲಿ ಗುಂಪುಗೂಡಿಸಿ ಇಡುತ್ತಿದ್ದೆ. ಎಷ್ಟು ಬಾರಿ ಹೇಳಿದರೂ ಅವನ್ನು ಹಿಂದೆ ತರುತ್ತಲೂ ಇರಲಿಲ್ಲ. ನನ್ನಣ್ಣ ಸ್ವಲ್ಪ ವಿಧೇಯ, ಅವುಗಳನ್ನೆಲ್ಲ ಕೂಡಿಸಿ ಬ್ಯಾಗ್ ತುಂಬ ತುಂಬಿಸಿ ತರುತ್ತಿದ್ದ. ಈ ವಿಚಾರದಲ್ಲಿ ನನ್ನಮ್ಮನಿಗೆ ಅಣ್ಣನ ಮೇಲೆ ಸ್ವಲ್ಪ ಹೆಚ್ಚು ಪ್ರೀತಿ, ವಿಶ್ವಾಸಗಳು ಇವೆ. 'ಅಣ್ಣ ಒಳ್ಳೆಯವನು/ಪಾಪ ನಿನ್ನ ಹಾಗೆ ಅವನಿಗೆ ದೊಡ್ಡಸ್ತಿಕೆ ಇಲ್ಲ' ಎಂದು ಅವನ ಎದುರೇ ಹೇಳಿ ಅವನು ತನ್ನ ಸ್ವಭಾವವನ್ನು ಬದಲಿಸದ ಹಾಗೆ ನೋಡಿಕೊಳ್ಳುವ ಸೂಕ್ಶ್ಮತೆ ಬೇರೆ ಇದೆಯೆನ್ನಿ.
ನನ್ನಮ್ಮನ ಮೇಲೆ ಒಂದು ಹಳೆಯ (much repeated) ಜೋಕ್ ಇದೆ - ಅಮ್ಮನಿಗೆ ಒಂದು ಖಾಲಿ ಬಾಟಲಿ ಮತ್ತು ಇನ್ನೊಂದು ಬೂಸ್ಟ್ ತುಂಬಿದ ಏಕರೂಪದ ಬಾಟಲಿಗಳ ಮಧ್ಯೆ ಆಯ್ಕೆಯ ಅವಕಾಶ ಇದ್ದರೆ ಅವಳು ಖಾಲಿ ಬಾಟಲಿಯನ್ನೇ ಆಯ್ದು ಕೊಳ್ಳುತ್ತಾಳೆ!. ಇದು ವಾಸ್ತವಕ್ಕೆ ಹತ್ತಿರವಾದ ವಿಷಯ.
ನನಗೆ ಇತೀಚೆಗೆ ಸಾಫ್ಟ್ ವೇರ್ ಪೊಗರು ಬಂದ ಮೇಲೆ ನಾನು, ನಿನಗೆ ಬೇಕಾದಷ್ಟು ಬಾಟಲಿಗಳನ್ನು ಖರೀದಿಸಿ ಕೊಡುತ್ತೇನೆ ಎಂದರೆ ಅಮ್ಮನಿಗೆ ಅದು ಬೇಡ. ಬಾಟಲಿಗಳು ಬೇರೆ ಯಾವುದಾದರೂ ಉತ್ಪನ್ನದೊಂದಿಗೆ ಬಂದಿದ್ದು, ಆ ಪುಡಿಯೋ, ದ್ರವವೋ ಮುಗಿದ ಮೇಲೆ ತೊಳೆದೊಣಗಿಸಿ ಉಪಯೋಗಿಸಿದರಷ್ಟೆ ಹೆಚ್ಚಿನ ಸಮಾಧಾನ!.
ಪ್ಲಾಸ್ಟಿಕ್ ಕವರುಗಳ ನನ್ನಮ್ಮನ ಆಸಕ್ತಿಯ ಎರಡನೆಯ ವಿಷಯ. ಪೇಟೆಯಿಂದ ತಂದ ಕವರುಗಳನ್ನೆಲ್ಲ (ಅಗತ್ಯವಿದ್ದರೆ ತೊಳೆದು ಒಣಗಿಸಿ) ಇಟ್ಟುಕೊಳ್ಳುತ್ತಾಳೆ. ನಾವು/ತಂದೆ ಬೇಕೆಂದಾಗ ಒದಗಿಸುವದಕ್ಕೇ ಅವನ್ನು ಸಂಗ್ರಹಿಸುತ್ತಿದ್ದೇನೆ ಎಂದು ಸಮಜಾಯಿಶಿ ಇದೆ !.
ನಮ್ಮ ತಲೆಮಾರಿನ ಸಾಫ್ಟ್ ವೇರಿಗರಿಗೆ ಪಾತ್ರೆ-ಪಗಡಿ, ಉಡುಗೆ-ತೊಡುಗೆ, ಅನ್ನ, ದುಡ್ಡುಗಳ ನಿಜವಾದ ಬೆಲೆ ಗೊತ್ತಿಲ್ಲ ಎಂದೇ ಹೇಳಬೇಕು. ಪಾತ್ರೆಗಳು ಬಿಡಿ, ಕ್ಯಾಮರಾಗಳನ್ನು ಈಗ ವರುಷಕ್ಕೊಂದರಂತೆ ಬದಲಾಯಿಸುತ್ತಾರೆ.
ನಿತ್ಯಬಳಕೆಯ ವಸ್ತುಗಳನ್ನು ಅವುಗಳ ಆರ್ಥಿಕ ಮೌಲ್ಯವನ್ನು ನೋಡದೆ ಪ್ರೀತಿಸುವುದು ಹಿಂದಿನವರಿಗೆ ಸಾಧ್ಯವಾದಂತೆ ಮುಂದಿನವರಿಗೆ ಸಾಧ್ಯವಾಗದೇ ಹೋಗಬಹುದೇನೋ...
ವಸಂತ್ ಕಜೆ

- Vasanth Kaje ರವರ ಬ್ಲಾಗ್
- Login or register to post comments
- 611 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಅಮ್ಮಂದಿರ ಹಳೆಬಾಟಲಿ ಪ್ರೀತಿ
ನನ್ನ ಅಮ್ಮನಿಗೂ ಪ್ಲಾಸ್ಟಿಕ್ ಚೀಲದ ಹುಚ್ಚು!!!
ಉ: ಅಮ್ಮಂದಿರ ಹಳೆಬಾಟಲಿ ಪ್ರೀತಿ
ವಸಂತ್,
ತುಂಬಾ ಚೆನ್ನಾಗಿದೆ ಬರಹ ಮತ್ತು ಅದರೊಂದಿಗಿನ ಚಿತ್ರ. ನಿಮ್ಮ ಬರಹ ಓದಿ ಮತ್ತೆ ಚಿತ್ರವನ್ನು ಧೀರ್ಘವಾಗಿ ದಿಟ್ಟಿಸುವಂತೆ ಆಯಿತು.
ರೀಸೈಕಲ್ ಬಗ್ಗೆ ಪ್ರೊಮೋಷನ್ಸ್ ನೋಡುವಾಗೆಲ್ಲಾ, ನಮ್ಮಮ್ಮನ ಕಾಳಜಿಗಳು ನೆನಪಾಗುತ್ತದೆ. ಸಾಮಾನು ತರುವಾಗ ಪ್ಲಾಸ್ಟಿಕ್ ಬ್ಯಾಗ್ ಬದಲು ಬಟ್ಟೆ ಬ್ಯಾಗ್ ಬಳಸುವುದು ನಮ್ಮ ಪರಂಪರೆ ಎಂದು ಹೆಮ್ಮೆಯಾಗುತ್ತದೆ.
ಉ: ಅಮ್ಮಂದಿರ ಹಳೆಬಾಟಲಿ ಪ್ರೀತಿ
ವಸಂತರೆ,
ಚಿತ್ರ - ಬರಹ ಎರಡೂ ತುಂಬಾ ಹಿಡಿಸಿದವು.
ಜಗತ್ತಿನ ಎಲ್ಲ ಅಮ್ಮಂದಿರೂ ಒಂದೇ ಎಂದು ಈ ಬಾಟಲಿ ವಿಚಾರವನ್ನು ಎತ್ತಿಕೊಳ್ಳುವ ಮೂಲಕ ತೋರಿಸಿದ್ದೀರಿ.
ನಮ್ಮಮ್ಮನೂ ಇದೇ ರೀತಿ ಬಾಟಲಿಗಳ ಮೇಲೆ ಪ್ರೀತಿ ಇಟ್ಟುಕೊಂಡಿರುವವರು.
ನಿಮ್ಮ ಬರಹದಲ್ಲಿನ ಒಂದೊಂದು ವಾಕ್ಯವೂ ನನಗೆ ನನ್ನದೇ ಅನಿಸಿತು. ಹೀಗೇ ಬರೆಯುತ್ತಿರಿ.
ಉ: ಅಮ್ಮಂದಿರ ಹಳೆಬಾಟಲಿ ಪ್ರೀತಿ
ವಸಂತ್ ಕಜೆ, ನಮ್ಮನೇಲೂ ಡಿಟ್ಟೋ ಡಿಟ್ಟೋ, ಸೇಮ್ ಟು ಸೇಮ್. ಅಂದಹಾಗೆ, ನಿಮ್ಮ ಲೇಖನವನ್ನು ನಮ್ಮ ಅಮ್ಮನಿಗೂ ತೋರಿಸಿ ಓದಲು ಹೇಳಿದೆ. ಓದಿದ ಮೇಲೆ ಅವರ ಮೊಗದಲ್ಲೂ ಮಂದಹಾಸ ಮೂಡಿ, ನಗೆಯ ಅಲೆ ಚಿಮ್ಮಿ, ನಿಮ್ಮ ಅಮ್ಮನಿಗೆ ಬೆಂಬಲವಾಗಿ ನಿಂತೂಬಿಟ್ಟರು ಅಂತೀನಿ. ಸರಿ ಹೀಗೆಯೇ ಮುಂದುವರಿಯುತ್ತಾ, ನನ್ನಲ್ಲಿ ಹಂಚಿಕೊಳ್ಳಲು ಇನ್ನೂ ಸ್ವಾರಸ್ಯಕರವಾದ ವಿಚಾರಗಳಿವೆ ಅಂತನ್ನಿಸಿ ಈ ಕಾಮೆಂಟ್.
೧. ಎಲ್ಲರೂ ಚಿಕ್ಕವರಿದ್ದಾಗ ಸ್ಕೂಲ್ ಊಟಕ್ಕೆ ನೀರನ್ನು ಯಾವುದರಲ್ಲಿ ತೆಗೆದುಕೊಂಡು ಹೋಗ್ತಾರೆ ಹೇಳಿ. ವಾಟರ್ ಕ್ಯಾನ್, ಚಿಕ್ಕದಾಗಿರುವ ಪ್ಲಾಸ್ಟಿಕ ಬಾಟಲಿಗಳಲ್ವೇ. ಆದರೆ ನಾನು ೩ನೇ ಕ್ಲಾಸ್ ಆಸುಪಾಸಿನಲ್ಲಿ ಶುರವಾಗಿ ೫ನೇ ಕ್ಲಾಸಿನ ತನಕ ಬಳಸುತ್ತಿದ್ದುದು ಬೂಸ್ಟ್, ಹಾರ್ಲಿಕ್ಸಿನ ದೊಡ್ಡ ದೊಡ್ಡ ಅಗಲ ಬಾಯಿಯ ಗಾಜಿನ ಬಾಟಲಿಗಳು!!!!!!!!!!. ತೆಗೆದುಕೊಂಡು ಹೋಗುವುದು ಒಂದು ಕಷ್ಟವಾದರೆ, ಒಡೆದರೆ ಎಲ್ಲಿ ಚುಚ್ಚುತ್ತೋ ಅನ್ನೋ ಭಯ. ಆದರೆ ಸಖತ್ ಮಜ್ಜಾ ಬರ್ತಾ ಇತ್ತು. ಏಕೆಂದರೆ ಗಾಜಿನ ಬಾಟಲಿಯಲ್ಲಿ ನೀರು ಸ್ಪಷ್ಟವಾಗಿ ಕಾಣಿಸುತ್ತಿತ್ತು ಮತ್ತು ಬೆರಳುಗಳ ಅಚ್ಚೊತ್ತಿ ನಲಿಯಬಹುದಿತ್ತು. ಆಟ ಆಡಿಕೊಂಡು ಮನೆಗೆ ಬರುವಾಗ, ಸ್ಕೂಲಿನ ಮೆಟ್ಟಿಲಿಳಿಯುವಾಗ ಅದೆಷ್ಟು ಗಾಜಿನ ಬಾಟಲಿ ಒಡೆದುಹಾಕಿದ್ದೇನೋ ಲೆಕ್ಕವಿಲ್ಲ. ಅಷ್ಟು ಬಾಟಲಿ ಒಡೆದರೂ ಮರುದಿನ ಮತ್ತೊಂದು ಗಾಜಿನ ಬಾಟಲಿ ನನ್ನ ಬ್ಯಾಸ್ಕೆಟ್ಟಿನಲ್ಲಿರುತ್ತಿತ್ತು@#$#@$#.
೨. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಅದ್ಯಾವಾಗ್ಲೋ ಕಾಂಪ್ಲಾನ್ನವರು ಚಿಕ್ಕ ಗಾಜಿನ ಬಾಟಲಿಗಳಲ್ಲೂ ಮಾರಾಟ ಮಾಡುವುದು ಕಣ್ಣಿಗೆ ಬಿತ್ತು ಅನ್ನಿಸುತ್ತೆ. ಅಂದಿನಿಂದ ದೊಡ್ಡ ಗಾಜಿನ ಬಾಟಲಿಗಳ ಬದಲು ಚಿಕ್ಕ ಗಾಜಿನ ಬಾಟಲಿಗಳು ನನ್ನ ಬ್ಯಾಸ್ಕೆಟ್ಟಿನಲ್ಲಿರುತ್ತಿದ್ದವು. ಅದೂ ಮುಂದೆ ಒಂದು ದಿನ ಒಡೆದುಹೋಯಿತು ಎನ್ನಿ. ಉಫ್.
೩. ಈ ಬಾಟಲಿಗಳು ಅದೆಷ್ಟು ಮೋಹಪರವಶವಾಗಿಸುತ್ತವೆಂದರೆ, ಮತ್ತೊಂದು ಉದಾಹರಣೆ. ಗಾಜಿನ ಬಾಟಲಿಗಳು ಎಲ್ಲರ ಮನೆಯಲ್ಲೂ ರಾರಾಜಿಸುತ್ತಿದ್ದಾಗ, ಬಂತು ನೋಡಿ, ಪರ್ಲಪೆಟ್ ಜಾರು. ಆಹಾ!!!ಅದೇನು ಮೋಡಿ ಮಾಡ್ತು ಅಂತೀನಿ ನಮ್ಮೂರುಗಳಲ್ಲಿ. ಆಗ ಅಮ್ಮಂದಿರ ಮಾತು ಶುರು ಆಗ್ತದ್ದಿದ್ದೇ ಹೆಚ್ಚುಕಡಿಮೆ ಹೀಗೆ. "ಲೇ...ಯಜಮಾನ್ರು ತಂದ್ ಹಾಕ್ತಾರೆ, ಮಗಾನೂ ದುಡಿಯುವ ಹಾಗೆ ಆದೆ. ಈಗ ಅವರ ಮನೆಯಲ್ಲೂ ಪರ್ಲಪೆಟ್ ಜಾರ್. ಕಡ್ಲೇಬೇಳೆ, ಮೆಣಸು, ಸಾಸಿವೆ, ಜೀರಿಗೆ ಎಲ್ಲಾನ್ನೂ ಕಣ್ಣಿಗೆ ಕಾಣುವ ಹಾಗೆ ಜಾರಲ್ಲಿ ಜೋಡ್ಸಿದ್ದಾಳೆ ಕಣ್ರೀ. ನಮ್ಮನೇಗೂ ಕೊಂಡುಕೋಬೇಕು ಆದಷ್ಟು ಬೇಗ, ಇವರಿಗೆ ಹೇಳಿ ಹೇಳಿ ಸಾಕಾಯ್ತು"&^#*&^$#(
೪. ಈ "ಪರ್ಲಪೆಟ್ ಜಾರ್" ಭರಾಟೆ ಸಾಗುವಾಗ ಶುರು ಆಯ್ತು ನೋಡಿ, "ಶ್ರೀಪೆಟ್, ಜಾರು ಇದು ಭಲೇ ಭಲೇ ಜೋರು"
. ಆಗ ಹೇಗಿತ್ತಪ್ಪಾ ಕಾಲ ಅಂದ್ರೆ, ಪರ್ಲಪೆಟ್ ಜಾರ್ ಇಟ್ಟಿರೋರು ದೊಡ್ಡೋರು. ಶ್ರೀಪೆಟ್ ಜಾರ್ ಇಟ್ಟಿರೋರು ಒಂದು ಮೆಟ್ಟಿಲು ಕೆಳಗಿಟ್ಟಿರೋರು. ಯಪ್ಪಾ...ಹ್ಯಾಟ್ಸಾಫ್..
ಕೊಕೊ (ಕೊನೆಯ ಕೊಸರು): ದೇಶದ ಸಾಮಾಜಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡಬಹುದಾದ ಒಂದು ಅತ್ಯಂತ ಸಣ್ಣ ವಸ್ತು ಹೇಳಿ ಎಂದರೆ, "ಬಾಟಲಿಗಳು" ಎಂದರೆ ತಪ್ಪಾಗಲಾರದೇನೋ.
ಉ: ಅಮ್ಮಂದಿರ ಹಳೆಬಾಟಲಿ ಪ್ರೀತಿ
ನನಗೆ ಈ ಪ್ರವೃತ್ತಿ ನಿಜಕ್ಕೂ 'ಸರ್ವ ಮಾತೃ ವ್ಯಾಪಿ' ಎಂದು ಗೊತ್ತಿರಲಿಲ್ಲ. ಅದರಲ್ಲಿ ಸ್ವಲ್ಪ ಉತ್ಪ್ರೇಕ್ಷೆ ಇರಬಹುದೇನೋ ಎಂದುಕೊಂಡಿದ್ದೆ.
ಅನಿವಾಸಿಯವರೆ, ನೀವು ಚಿತ್ರವನ್ನು ಇಷ್ಟಪಟ್ಟಿರಾದರೆ ನನಗೆ ಸಂತೋಷ.
ಕಿಶೋರ್ ಪಟ್ವರ್ಧನ್ ಅವರನ್ನು ನಾನು ನೋಡಿಲ್ಲ/ಮಾತನಾಡಿಲ್ಲವಾದರೂ, ಅವರ ತಮ್ಮ ವಿಕ್ರಮ್ ನನ್ನ ಮಿತ್ರ. ಅವರೊಂದಿಗಿನ ಒಂದು ಮಾತುಕತೆಯಲ್ಲಿ ನಮ್ಮ ಮಧ್ಯೆ ಈ ವಿಷಯ ಪ್ರಸ್ತಾಪವಾಗಿ, ನಾವು ಸಮಾನದು:ಖ
ವನ್ನು ಹಂಚಿಕೊಂಡದ್ದು ನನಗೆ ನೆನಪಿದೆ.
ಸುನಿಲ್, ನಿಮ್ಮ ಅನುಭವಗಳು, ಬಾಟಲಿಯ ಆಧಾರದ ಮೇಲೆ ಅಂತಸ್ತು ಅಳೆಯುವ ಪ್ರೊಜೆಕ್ಶನ್ ಗಳು ತುಂಬಾ ಮಜವಾಗಿವೆ.
ಅಮ್ಮಂದಿರ ನೆಮ್ಮದಿಯನ್ನು ಹಾರೈಸುತ್ತಾ,
ವಸಂತ್ ಕಜೆ
ಉ: ಅಮ್ಮಂದಿರ ಹಳೆಬಾಟಲಿ ಪ್ರೀತಿ
ವಸಂತ್ ಅವರೆ,
ಚೆನ್ನಾಗಿದೆ ನಿಮ್ಮ ಬರಹ - ನಿಮಗಿಂತ ಹೆಚ್ಚು ತಮ್ಮ ಜೊತೆ ಕಾಲ ಕಳೆದಿರುವ ಬಾಟಲಿಗಳ ಮೇಲೆ ಅವರಿಗೆ ಒಂದು ಕೈ ಹೆಚ್ಚೇ ಪ್ರೀತಿ - ಅಂತ ಹೇಳಿದ್ದು ಒಳ್ಳೇ ನಗು ತರಿಸಿತು
-ಹಂಸಾನಂದಿ
ಉ: ಅಮ್ಮಂದಿರ ಹಳೆಬಾಟಲಿ ಪ್ರೀತಿ
veena.
ನಾನು ಕೂಡ ಇದಕ್ಕೆ ಹೊರತಲ್ಲ. ತಿಂಗಳ ಸಾಮಾನು ತರುವಾಗ ಆದಷ್ಟೂ ರೀಫಿಲ್ ಪ್ಯಾಕ್ ತರದೆ, ಬಾಟಲು ಮನೆಗೆ ಬರುವಂತೆ ಮಾಡುತ್ತೇನೆ.ಒಮ್ಮೆ nescafe ಯ ಚಿಕ್ಕ ಬಾಟಲು ತುಂಬಾ ಇಷ್ಟವಾಗಿ ಊಟದ ಜೊತೆಗೆ ಮೊಸರು ತೆಗೆದುಕೊಂಡು ಹೋಗಲು ಎಂದು ಕೊಂಡು ತಂದಿದ್ದೆ. ಮನೆಯಲ್ಲಿ ಫಿಲ್ಟರ್ ಕಾಫಿ ಕುಡಿಯುವ ಅಭ್ಯಾಸವಿದ್ದರೂ, ಇನ್ಸ್ಟಂಟ್ ಕಾಫಿ ಪುಡಿ ತಂದಿದ್ದಕ್ಕೆ ಮನೆಯವರಿಂದ ಬೈಸಿಕೊಂಡಿದ್ದೆ.
ನಾನು ಊರಿಗೆ ಹೋದಾಗೆ ನಮ್ಮ ಮನೆಯವರು ಅದನ್ನು ಬಿಸಾಕಿದ್ದರು. ನನಗೆ ಶ್ಯಾನೆ ಬೇಜಾರಾಯಿತು.
ಉ: ಅಮ್ಮಂದಿರ ಹಳೆಬಾಟಲಿ ಪ್ರೀತಿ
ಹೋಗಲಿ ಬಿಡಿ, ವೀಣಾ ಅವರೆ, ಮುಂದಿನ ಬಾರಿ ನೆಸ್ಕ್ಯಾಫೆಯ ಬದಲು ಕಾಂಪ್ಲಾನೋ, ಗ್ಲಾಕ್ಸೋ ಅಥವಾ ಇನ್ಯಾವುದಾದರೋ ಬಾಟಲಿ ತನ್ನಿ. ಹಾಗೆಯೇ, ನಿಮಗೆ ಗೊತ್ತೇ, ಈ ಬೋರ್ನ್ವೀಟಾದಷ್ಟು ದೊಡ್ಡದೂ ಅಲ್ಲದ, ನೆಸ್ಕ್ಯಾಫೆಯಷ್ಟು ಚಿಕ್ಕದೂ ಅಲ್ಲದ ವೀಟಾ, ವೀವೀಟಾ ಬಾಟಲಿಗಳು ಬರ್ತಾ ಇತ್ತು. ಇವುಗಳನ್ನು ನೋಡಿ/ಸವಿದು ತುಂಬಾ ವರ್ಷಗಳಾಯ್ತು.
ಉ: ಅಮ್ಮಂದಿರ ಹಳೆಬಾಟಲಿ ಪ್ರೀತಿ
ಮುಂಚೆ ನಾ ಊರಿಂದ ಬರೋವಾಗ, ಬಾಟಲಿ, ಸ್ಟೀಲ್ ಡಬ್ಬಿಗಳಲ್ಲಿ ಉಂಡಿ, ಚಕುಲಿ ಮುಂತಾದವನ್ನು ಕಟ್ಟಿ ಕಳಿಸುತ್ತಿದ್ದರು, ನನ್ನ ತಾಯಿ. ಎಸ್ಟ್ ಸಲಾ ಹೇಳಿದರೂ ಅವು ತಿರುಗಿ ಮನೆ ಮುಟ್ಟಲಿಲ್ಲಾ, ಅದಕ್ಕೆ ಈಗ ನನ್ನನ್ನು ಪ್ಲಾಸ್ಟಿಕ್ ಚೀಲಗಳಿಗೆ ಡಿಮೋಟ್ ಮಾಡಿದಾರೆ
ಯಾಕೆ ಅವ್ವ ಹಂಗೆ ತುಗೊಂಡು ಬರೋಕೆ, ಒತ್ತಿ ಒತ್ತಿ ಹೇಳ್ತಿದ್ರು ಅಂತಾ ಈಗ ಗೊತ್ತಾಗ್ತಿದೆ
ಉ: ಅಮ್ಮಂದಿರ ಹಳೆಬಾಟಲಿ ಪ್ರೀತಿ
ವಸಂತ್ ಅವರಿಗೆ ನನ್ನ ನಮಸ್ಕಾರಗಳು....ನಾನು ಸಂಪದಕ್ಕೆ ಹೊಸದಾಗಿ ಸೇರಿದೆ.ನನ್ನ ಸ್ನೇಹಿತೆಯೊಬ್ಬಳು ನಿಮ್ಮ ಬ್ಲಾಗ್ ಲಿಂಕ್ ಕಳುಹಿಸಿದ್ದಳು. ತುಂಬಾ ಕುಶಿ ಆಗಿ ಸಂಪದ ಬಳಗಕ್ಕೆ ಜಾಯ್ನ್ ಅದೇ.ನಾನು quillpadನಲ್ಲಿ ಟೈಪ್ ಮಾಡ್ತಾ ಇದೀನಿ. ನನ್ನ ತಪ್ಪುಗಳಿಗೆ ಕ್ಷಮೆ ಇರಲಿ.....
ನೀವು ಬರೆದ ಬರಹ ತುಂಬಾ ಚೆನ್ನಾಗಿತ್ತು, ಎಲ್ಲಾ ಅಮ್ಮಂದಿರು ಒಂದೇ ಅಲ್ವಾ? ನನ್ನ ಅಮ್ಮನಿಗೆ ಇವಾಗಲೂ plastic covers ಸಂಗ್ರಹಿಸಿ ಇಡುವ ಅಭ್ಯಾಸ...ಅದೇ ನಂಗೂ ಬಂದಿದೆ!!!!!!!!!
ನಾನೀಗ ಅಮ್ಮ ಆಗಿ 1 ವರ್ಷ ಕಳೆದಿದೆ....ನಿಮ್ಮ ಹಾಗೆ ನನ್ನ ಮಗನು ಮುಂದೆ ಹೀಗೆ ಬ್ಲಾಗ್ ಬರೆಯಬಹುದು!!!!!!!
Sonali
ಉ: ಅಮ್ಮಂದಿರ ಹಳೆಬಾಟಲಿ ಪ್ರೀತಿ
ಬಹುಶ: ಇದು ಇಡೀ ಭಾರತದಲ್ಲೇ ಇದು universal syndrome ಅಂತ ಕಾಣುತ್ತೆ?!
ಬೇಳೆ, ಸಕ್ಕರೆ, ಇತರೆ ಕೂಡಿಡಳು , ನಮ್ಮ ಮ್ಮನ ಬಳಿಯೂ ಬಹು ದೊಡ್ಡ ಸಂಗ್ರಹ ಇದೆ. ಕೆಲವೊಮ್ಮೆ ಅಂಗಡಿಯಲ್ಲಿ ಇದಕ್ಕಾಗಿಯೇ ತಯಾರಾಗಿ ಬರುವ ಹೊಸ ಡಬ್ಬಗಳನ್ನು ತೆಗೆದುಕೊಳ್ಳಲು ಒತ್ತಾಯಿಸಿದ್ದೇನೆ... ಆದ್ರೂ ನಮ್ಮಮ್ಮಂಗೆ ತನ್ನ ಸ್ವಂತ "collection" ನೇ ಇಷ್ಟವೇನೊ?
ಹಾಗೇನೇ ... ನಮ್ಮಜ್ಜನಿಗೆ ಹಗ್ಗಗಳನ್ನು ಹೊಸೆಯುವ ಖಯಾಲೀ( offcourse, ನಮ್ಮಜ್ಜ ಟೈಮು ವೇಷ್ಟ್ ಮಡಿರೋದು ನಾನು ನೋಡಿಲ್ಲ! ಏನಾದ್ರೂ ಒಂದು ಕೆಲ್ಸಾ,... ಅದು ಹೆಂಗೆ ಸಾಧ್ಯವಾಗ್ತಿತ್ತೋ? ಈ ಸೋಮಾರಿಗಂತೂ ಇನ್ನೂ ಗೊತ್ತಾಗಿಲ್ಲ!). ನಮ್ಮ ಮನೆಯಲ್ಲಿ ಹಳೇ ಬಟ್ಟೆಗಳು ವೇಷ್ಟ್ ಆಗಿದ್ದೆ ಇಲ್ಲ. ನಾನಂತೂ ನಮ್ಮಜ್ಜನ ಜೊತೆ ಇರೋವಷ್ಟು ದಿನ, ನಾರು, ಉರಿ, ಹಳೆ ಅರಿವೆ, ... ಹೀಗೆ ವಿವಿಧ ವಸ್ತುಗಳಿಂದ , ನಾನಾ ರೀತಿಯ ಹಗ್ಗ ಹೊಸೆಯೋದು ಕಲ್ತೆ. ..(
ಈ ನನ್ನ ಟ್ಯಾಲೆನ್ಟ್ ಈಗ ವೇಷ್ಟ್ ಆಗ್‌ತೈದೆ:( )
ಸವಿತೃ
ಉ: ಅಮ್ಮಂದಿರ ಹಳೆಬಾಟಲಿ ಪ್ರೀತಿ
ಸೋನಾಲಿ ಮತ್ತು ಸವಿತೃ ಅವರೇ,
ವಂದನೆಗಳು. ಅಮ್ಮಂದಿರ ಹಳೆ ಬಾಟಲಿ ಪ್ರೀತಿ ಚಿರಾಯುವಾಗಲಿ!.
ಸೋನಾಲಿಯವರು ಸಂಪದ ಸೇರಲು ನಾನು ನಿಮಿತ್ತನಾದೆ ಎನ್ನುವುದು ನನಗೆ ತುಂಬಾ ಸಂತೋಷದ ವಿಷಯ. ನೀವೂ ಬರೆಯಿರಿ..
ಸಿಗೋಣ,
ವಸಂತ್ ಕಜೆ