21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಶಾಸ್ತ್ರೀಯ ಭಾಷೆಯಿಂದ ಏನ್ ಮಣ್ಣು ಪ್ರಯೋಜನಾನೂ ಆಗಲ್ವಾ?

November 6, 2008 - 11:10pm
vasant.shetty

ಗೆಳೆಯರೇ,

ಶಾಸ್ತ್ರೀಯ ಭಾಷೆ ಸ್ಥಾನ ಮಾನ ಸಿಕ್ತು ಅಂತ ನಾವೆಲ್ಲ ಖುಷಿ ಏನೋ ಆಗಿದಿವಿ, ಆದ್ರೆ ಅದರಿಂದ ಆಗೋ ಪ್ರಯೋಜನ ಏನು ಅನ್ನೋದನ್ನ ತಿಳಕೋಬೇಕು ಅಂತಾ ನಾನೊಬ್ಬ ಭಾಷಾ ತಜ್ಞರನ್ನ ಮಾತಾಡಿಸಿದಾಗ ತಿಳಿದದ್ದು ಇಷ್ಟು:

ತಮಿಳಿಗೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಕ್ಕಾಗ, ಮೊದಲಿಗೆ ಆಗಿದ್ದು ಯಾವ ಅವಧಿಯ ತಮಿಳು "ಶಾಸ್ತ್ರೀಯ" ಅನ್ನೋದನ್ನ ಗುರುತಿಸೋ ಕೆಲಸ ಅಂತೆ, ಅದರಂತೆ ಕ್ರಿ.ಶ ೧೬೫೦ರ ಹಿಂದಿನ ತಮಿಳಷ್ಟೇ ಶಾಸ್ತ್ರೀಯವಂತೆ ಹಾಗೂ ಅದರ ಮುಂದಿನ ತಮಿಳಿನ ಅಧ್ಯಯನಕ್ಕಾಗಲಿ, ರಿಸರ್ಚಗಾಗಲಿ ಶಾಸ್ತ್ರೀಯ ಸ್ಥಾನಮಾನದಿಂದ ಸಿಗೋ ಹಣವನ್ನು ಬಳಸುವ ಹಾಗಿಲ್ಲವಂತೆ. ಅದರಂತೆ ಮೈಸೂರಿನ CIIL ನಲ್ಲಿ ಸುಮಾರು ೩೦-೪೦ ತಮಿಳು ಪಂಡೀತರು ೧೬೫೦ರ ಹಿಂದಿನ ತಮಿಳಿನ ಬಗ್ಗೆ ಅಧ್ಯಯನ ಶುರು ಹಚ್ಚಿಕೊಂಡಿದ್ದಾರಂತೆ. ಅದಾಗ್ಯೂ ತಮಿಳರಿಗೆ ತಮ್ಮ ಭಾಷೆಯ ಹಳಮೆಯ ಬಗ್ಗೆ ಇರುವ ಕುರುಡು ಅಭಿಮಾನ ಆ ಗಡಿಯನ್ನು ಕ್ರಿ.ಶ ೧೬೫೦ರಿಂದ ಕ್ರಿ.ಶ ೬೦೦ಕ್ಕೆ ಕೊಂಡೊಯ್ದು, ಈಗ ಅವರೆಲ್ಲ ಆ ಸಮಯದ ತಮಿಳಿನ ಬಗ್ಗೆ ಅಧ್ಯಯನ ಮಾಡ್ತಾ ಇದ್ದಾರಂತೆ. ಈ ಜಾಗತೀಕರಣದ ದಿನಗಳಲ್ಲಿ ತಮಿಳರ ಮುಂದಿರುವ ಸವಾಲಾಗಲಿ, ತಮಿಳಿನಲ್ಲಿ ತಂತ್ರಜ್ಞಾನ ತರುವ ವಿಷಯದಲ್ಲಿರುವ ತೊಂದರೆಗಳಿಗಾಗಲಿ ಈ ಶಾಸ್ತ್ರೀಯ ಸ್ಥಾನ ಮಾನದಿಂದ ಯಾವ ಪರಿಹಾರವೂ ಸಿಕ್ಕಿಲ್ಲವಂತೆ. ೪ ವರ್ಷದಲ್ಲಿ ಕೇಂದ್ರ ಕೊಟ್ಟಿರುವ ೨೩ ಕೋಟಿ ಹಣದಲ್ಲಿ ಖರ್ಚಾಗಿರೋದು ಬರೀ ೬ ಕೋಟಿ ಅಂತೆ. ಇದು ತಮಿಳಿನ ಸ್ಥಿತಿ.

ಇನ್ನೂ ನಮ್ಮ ಭಾಷೆಯ ವಿಷಯಕ್ಕೆ ಬಂದ್ರೆ, ನಮ್ಮ ಭಾಷೆಯಲ್ಲೂ ಯಾವ ಅವಧಿಯ ಕನ್ನಡವನ್ನು ಶಾಸ್ತ್ರೀಯ ಅಂತ ಘೋಷಿಸಬೇಕು ಅನ್ನೊ ಬಗ್ಗೆ ಚರ್ಚೆ ಶುರು ಆಗಿದೆ. ಕೆಲವು ಹಿರಿಯ ಅರಳು-ಮರಳು ಸಾಹಿತಿಗಳು ೧೫ನೇ ಶತಮಾನಕ್ಕಿಂತ ಹಿಂದಿನ ಕನ್ನಡವನ್ನು  ಶಾಸ್ತ್ರೀಯ ಅಂತ ಘೋಷಿಸಿ, ಅದರ ಅಧ್ಯಯನ ಆಗಬೇಕು ಅಂತ ಮಾತಾಡ್ತಾ ಇದ್ದದ್ದು ಮಾಧ್ಯಮದಲ್ಲಿ ನೋಡಿದೆ. ಹಳೆಗನ್ನಡದ ಬಗ್ಗೆ, ೧೫ನೇ ಶತಮಾನಕ್ಕಿಂತ ಹಿಂದಿನ ಕನ್ನಡದ ಬಗ್ಗೆ ಅಧ್ಯಯನ ಆಗಬೇಕಾದದ್ದೇ, ಎಷ್ಟೋ ಗೊತ್ತಿಲ್ಲದ ಹೊಸ ಹೊಸ ವಿಷಯಗಳನ್ನು ಕನ್ನಡ ಜನಾಂಗಕ್ಕೆ ತಿಳಿಸಬೇಕಾದದ್ದೇ,  ಆದರೆ ಇಷ್ಟೆಲ್ಲ ಕಷ್ಟ ಪಟ್ಟು ಗಳಿಸಿರೋ ಈ ಸ್ಥಾನಮಾನದಿಂದ ಆಗಬೇಕಾಗಿರೋದು ಬರೀ ಇಷ್ಟೇನಾ? ಇವತ್ತಿನ ದಿನ ಕನ್ನಡದ ಮುಂದಿರೋ ಸವಾಲುಗಳು ಹಿಂದೆಂದಿಗಿಂತಲೂ ಗಂಭೀರವಾದದ್ದು. ಕನ್ನಡದ ಮಕ್ಕಳಿಗೆ ಕನ್ನಡ ಮಾಧ್ಯಮದ ಶಾಲೆಗಳಲ್ಲಿನ ಪಠ್ಯ ಪುಸ್ತಕದಲ್ಲೇ ತಲೆ ಕೆಟ್ಟು ಹೋಗುವಷ್ಟು ಸಂಸ್ಕ್ರತದ overdose ಆಗ್ತಿದೆ. ತಂತ್ರಜ್ಞಾನವನ್ನು ಕನ್ನಡದಲ್ಲಿ ತರೋದು ಇವತ್ತಿನ ದಿನದ top priority ಆಗಿದೆ. ಕನ್ನಡ ಜನಾಂಗ ಉದ್ಧಾರ ಆಗಲು ನಮ್ಮ ಭಾಷೆಯಲ್ಲೇ ತರಬೇಕಾದ reforms ತುಂಬಾ ಇದೆ. ಕನ್ನಡವನ್ನು ಒಂದು ಅನ್ನ ಕೊಡೊ ಭಾಷೆಯಾಗಿಸುವತ್ತ ಇವತ್ತಿನ ಕನ್ನಡದ ಪ್ರತಿಭಾವಂತ ಯುವ ಪೀಳಿಗೆ ಕೆಲಸ ಮಾಡಬೇಕಾಗಿದೆ. ಹೀಗಿರುವಾಗ,ಈ ಶಾಸ್ತ್ರೀಯ ಸ್ಥಾನಮಾನದ ವ್ಯಾಪ್ತಿಯಲ್ಲಿ ಇವತ್ತಿನ ದಿನದ ಕನ್ನಡದ ಸಮಸ್ಯೆಗಳ ಬಗ್ಗೆಯೂ, ಅದಕ್ಕೆ ಬೇಕಾದ ಪರಿಹಾರದ ಬಗ್ಗೆ ಅಧ್ಯಯನ ಮಾಡೋ ವ್ಯವಸ್ಥೆ ಆಗಬೇಕು,ಆ ಮೂಲಕ ನಿಜವಾಗಿಯೂ ಇವತ್ತಿನ ದಿನದ Living Classical Language ಆದ ಕನ್ನಡದ ಉಳಿವಿನ, ಬೆಳೆವಿನ ಕೆಲಸಕ್ಕೆ ಹೆಚ್ಚೆಚ್ಚು ಬಲ ಸಿಗಬೇಕು. ಇದನ್ನೆಲ್ಲ ನಮ್ಮ ರಾಜ್ಯ ಸರ್ಕಾರ ಕೇಂದ್ರದ ಗಮನಕ್ಕೆ ತಂದು ನಮಗೆ ಸಿಕ್ಕಿರೋ ಸ್ಥಾನಮಾನ ಮತ್ತು ಅದರಡಿ ದೊರಕೋ ಹಣವನ್ನು ಈ ರೀತಿ ಬಳಸೋಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಬೇಕು.

ಇದೆಲ್ಲ ಈಗ ಆಗಲಿಲ್ಲ ಅಂದರೆ ನಮ್ಮ ಭಾಷೆ ಬಗೆಗಿನ ನಮ್ಮ ಯಾವ ಆತಂಕವೂ ಕಮ್ಮಿ ಆಗಲ್ಲ. ಆಮೇಲೆ ಯಾವ ಶಾಸ್ತ್ರೀಯ ಸಿಕ್ರೆ ಏನ್ ಮಣ್ಣು ಪ್ರಯೋಜನ ಅನ್ನೊ ಹಾಗಾಗುತ್ತೆ. ನೀವೆನ್ ಅಂತೀರಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by kishoreyc on
ಮೊದಲು ಆಡು ಭಾಷೆ ಕನ್ನಡದಲ್ಲಿ ತ೦ತ್ರಜ್ಞಾನದ ವಿಷಯಗಳನ್ನೆಲ್ಲ ತರಬೇಕಾಗಿದೆ. ಇಸ್ರೇಲಿಗಳು ಅ೦ದೇನಾದರೂ ಜರ್ಮನ್ ಭಾಷೆ ಮೊರೆ ಹೊಕ್ಕಿದ್ದರೆ ಇ೦ದು ಅವರು ತಮ್ಮ ಟೆಕ್ನಿಯಾನ್ ವಿಶ್ವವಿದ್ಯಾಲಯದಲ್ಲಿ ವಿಶ್ವದಲ್ಲಿರುವ ಎಲ್ಲಾ ತರಹದ ವಿದ್ಯೆಗಳನ್ನು ಹೀಬ್ರೂ ನಲ್ಲಿ ತರಲು ಆಗುತ್ತಿರಲಿಲ್ಲ ಮತ್ತು ಆ ಜನಾ೦ಗ ಇಷ್ಟು ಮು೦ದುವರಿಯುತ್ತಿರಲಿಲ್ಲ. ಕಷ್ಟಕರವಾದ ಸ೦ಸ್ಕೃತವನ್ನು ಕೈಬಿಟ್ಟು ಸರಳವಾದ ಕನ್ನಡದಲ್ಲೇ ಸಿಗುವ ಪದಗಳನ್ನು ಉಪಯೋಗಿಸಿ ಶಾಲಾ ಕಾಲೇಜಿನ ಪಠ್ಯಪುಸ್ತಕಗಳನ್ನು ತಯಾರಿಸಬೇಕಾಗಿದೆ. ಉನ್ನತ ಶಿಕ್ಷಣ ಮತ್ತು ಕಾಲೇಜುಗಳಲ್ಲಿ ಹೆಚ್ಚಾಗಿ ಕನ್ನಡವನ್ನು ಮಾಧ್ಯಮವನ್ನಾಗಿ ಬಳಸಿಕೊ೦ಡು, ವೈದ್ಯಕೀಯ, ಕಾನೂನು, ವಿಜ್ಞಾನದ, ಗಣಿತ, ಸಮಾಜ ಶಾಸ್ತ್ರವೆಲ್ಲವನ್ನು ಸರಳವಾದ ಕನ್ನಡದಲ್ಲಿ ಓದಿದ್ದೇ ಆದಲ್ಲಿ ವಿಷಯಗಳನ್ನು ಬಹಳ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ಪ್ರಗತಿಪಥದಲ್ಲಿ ಸಾಗುವ ಸ೦ಕೇತವಾಗಿರುತ್ತದೆ. ಎಲ್ಲೆಲ್ಲಿ ಈಗಾಗಲೇ ಸರಳವಾದ ಮತ್ತು ಕನ್ನಡಿಗರಿಗೆ ಸಹಜವಾಗಿ ಬರುವ ಕನ್ನಡದ ಪದಗಳಿವೆಯೋ ಅವುಗಳನ್ನು ಕೈಬಿಡದೆ ಬಳಸಿಕೊಂಡು ಹೋಗಬೇಕು. ಅವುಗಳ ಬದಲು ಸಂಸ್ಕೃತದ ಇಲ್ಲವೇ ಮತ್ತೊಂದು ಭಾಷೆಯ ಪದಗಳನ್ನು ಬಳಸುವುದು ಸರಿಯಲ್ಲ. ಹಾಗೆಯೇ ಹೊಸ ಪದಗಳನ್ನು ಹುಟ್ಟಿಸುವಾಗಲೂ ಈಗಾಗಲೇ ಇರುವ ಕನ್ನಡದ ಪದಗಳನ್ನು ಒಟ್ಟಿಗೆ ಸೇರಿಸಿ ಇಲ್ಲವೇ ತುಸು ಬದಲಾಯಿಸಿ ಹುಟ್ಟಿಸುವುದೇ ನಮ್ಮ ಮೊದಲ ಹೆಜ್ಜೆಯಾಗಬೇಕು. ಈ ಒಂದು ಬಗೆಯಿಂದಲೇ ಕಲಿಕೆಯ ಎಲ್ಲಾ ಕ್ಷೇತ್ರಗಳಲ್ಲೂ (ಬರೀ ಅಧ್ಯಾತ್ಮ, ನಾಟಕ ಕವಿತೆಗಳಲ್ಲಿ ಮಾತ್ರವಲ್ಲ) ಶೇಕಡ ೮೦ರಷ್ಟು ಪದಗಳನ್ನು ಹುಟ್ಟಿಸಬಹುದು. ನಮ್ಮ ಕನ್ನಡಕ್ಕೆ ಆ ಶಕ್ತಿಯಿದೆ. ಇನ್ನು ಮಿಕ್ಕ ಶೇಕಡ ೨೦ರಷ್ಟು ಪದಗಳನ್ನು ಬರೀ ಸಂಸ್ಕೃತದಿಂದ ಮಾತ್ರ ಆರಿಸಿಕೊಳ್ಳಬೇಕು ಎಂದೇನಿಲ್ಲ. ಪ್ರಪಂಚದ ಯಾವ ಭಾಷೆಯಿಂದ ಬೇಕಾದರೂ ಆರಿಸಿಕೊಳ್ಳಬಹುದು. ಯಾವ ಯಾವ ಕ್ಷೇತ್ರಗಳಲ್ಲಿ ಯಾವ ಯಾವ ಭಾಷೆಗಳು ಹೆಚ್ಚು ಬಳಕೆಯಲ್ಲಿವೆಯೋ ಆಯಾ ಭಾಷೆಗಳಿಂದಲೇ ಪದಗಳನ್ನು ಆಯ್ದುಕೊಳ್ಳುವುದು ಸಹಜ. ಅಧ್ಯಾತ್ಮಕ್ಕೆ ಸಂಬಂಧಿಸಿದ ಪದಗಳನ್ನು ಸಂಸ್ಕೃತದಿಂದಲೂ, ವಿಜ್ಞಾನ-ತಂತ್ರಜ್ಞಾನಗಳಿಗೆ ಸಂಬಂಧಿಸಿದ ಪದಗಳನ್ನು ಇಂಗ್ಲೀಷಿನಿಂದಲೂ ಆರಿಸಿಕೊಳ್ಳಬಹುದು (ಇಂಗ್ಲೀಷ್ ಕೂಡ ಪ್ರಪಂಚದ ಎಲ್ಲಾ ಭಾಷೆಗಳಿಂದ ಪದಗಳನ್ನು ಆಮದಿಸಿಕೊಂಡಿದೆ). ಎಲ್ಲಾ ಒ.ಕೆ. ಮೈಸೂರಿನ CIIL ನಲ್ಲಿ ತಮಿಳಿನ ಅಧ್ಯಯನ ಏಕೆ ನಡೆಸುತ್ತಿದ್ದಾರೆ, ತಮಿಳನ್ನು ತಮಿಳುನಾಡಲ್ಲಿ ಅಧ್ಯಯನ ಮಾಡಬೇಕಲ್ಲವೆ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
"ಮೈಸೂರಿನ CIIL ನಲ್ಲಿ ತಮಿಳಿನ ಅಧ್ಯಯನ ಏಕೆ ನಡೆಸುತ್ತಿದ್ದಾರೆ," ಯಾಕೆ ಅಂದರೆ CIIL ಇದು ಕೇಂದ್ರ ಸರಕಾರದ್ದು. ಅದೂ ಅಲ್ಲದೇ ತಮಿಳಿಗೆ ಕ್ಲಾಸಿಕಲ್ ಪಟ್ಟಕ್ಕೆ ಇಲ್ಲೇ ಪಾಯ ಆದುದು. ಅದರಿಂದ ಕನ್ನಡಕ್ಕೆ ಕ್ಲಾಸಿಕಲ್ ಸ್ಟೇಟಸ್ಗೆ ನೆರವೇ ಆಯ್ತು... CIIL ಮಯ್ಸೂರಲ್ಲಿ ಇರೋದರಿಂದ ಹಾಗೂ ಈಗ ಕನ್ನಡಕ್ಕೆ ಕ್ಲಾಸಿಕಲ್ ಪಟ್ಟ ಬಂದಿರೋದರಿಂದ ಕನ್ನಡದ ಬಗ್ಗೆ ಹೆಚ್ಚು ಕುರಿತೋದಿಗೆ ದಾರಿ ತುಂಬಾ ಸಲೀಸಾಯ್ತು. CIIL ಮತ್ತು ಮಯ್ಸೂರು ಯುನಿವರ್ಸಿಟಿ ಜತೆಗೆ ಕೆಲಸ ಮಾಡಬೋದಲ್ಲ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಕನ್ನಡದಕ್ಕೆ ಬೇಕು ನುಡಿಯೋಜೆ(language planning) http://en.wikipedia.... ಈ ಮೂರು ಆಗಬೇಕು -Corpus planning:Corpus planning refers to prescriptive intervention in the forms of a language. This may be achieved by creating new words or expressions, modifying old ones, or selecting among alternative forms. ಹೊರನುಡಿಯಾದ ಸಂಸ್ಕ್ರುತ ಮುಂತಾದವಕ್ಕೆ ಮೊರೆ ಹೋಗದೇ ಕಂನಡಕ್ಕೆ ಬೇಕಾದ ಹೊಸೊರೆಗಳು, ಹೊಸಬಳಕೆಗಳು, ಕನ್ನಡದಲ್ಲೇ ಕಂಡುಕೊಳ್ಳುವ ಸಲುವಾಗಿ ’ಕುರಿತೋದು’(ರಿಸರ್ಚು) ಬೇಕು. -Status planning:Status planning refers to deliberate efforts to allocate the functions of languages and literacies within a speech community. It involves status choices, making a particular language or variety an 'official language', 'national language', etc. ಕನ್ನಡಕ್ಕೆ ಜಗದಲ್ಲಿ ಸರಿಯಾದ ಮೇಲ್ಮೆ, ಗುರುತು, ಪಟ್ಟಕ್ಕಾಗಿ ದಾರಿ ಬೇಕು. ಕನ್ನಡವನ್ನು ’ರಾಜಬಾಶೆ’( ಕೇಂದ್ರ ಸರಕಾರದ ಒಂದು ಆಡಳಿತ ನುಡಿ), ಯುನಿಸ್ಕೋ ಸಾರಿಸದ ಚನ್ನುಡಿ(ಕ್ಲಾಸಿಕಲ್ ನುಡಿ), ಹೊರದೇಶದಲ್ಲಿ ಎಲ್ಲಿ ಕನ್ನಡಿಗರು ಹೆಚ್ಚಿರುವರೋ ಅಲ್ಲಿ ಕನ್ನಡವನ್ನೂ ಸರಕಾರ ಸಿಲಬಸ್ಸಲ್ಲಿ ಇರಿಸಲು ಕೆಲಸ ಹೀಗೆ. -Acquisition planning:Acquisition planning concerns the teaching and learning of languages, whether national languages or second and foreign languages. ಕನ್ನಡ ತಿಳಿದವರನ್ನು ಹೆಚ್ಚಿಸಲು, ಕನ್ನಡಿಗರಲ್ಲದವರಿಗೆ ಕನ್ನಡ ಕಲಿಸಲು, ಕನ್ನಡವನ್ನು ಕಲಿಸಲು ಹೆಚ್ಚು ಸರಿಯಾದ, ಸುಲಬವಾದ ದಾರಿಗಳನ್ನು, ಸರಕುಗಳನ್ನು ಓಜೆ ಮಾಡುವುದು. ಇದರ ಬಗ್ಗೆ ಒಂದು ಹೆಬ್ಬರಹ ತರುವಾಸೆಯಿದೆ ನನಗೆ. ನೋಡಣ!! ಹಾಗೆ ಇದರ ಬಗ್ಗೆ ಓದಿರಿ.. language engineering(French, German etc )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಶ್ರೀಶಕಾರಂತ on
> ಹೊರನುಡಿಯಾದ ಸ೦ಸ್ಕೃತಕ್ಕೆ ೧.ಅಬ್ಬಬ್ಬ!!!! ಸಾಕುತಾಯಿಯನ್ನೇ ಹೊರಗಿನವಳನ್ನಾಗಿಸುವ ಸ೦ಸ್ಕೃತಿ ಈ ಭುವನೇಶ್ವರಿಯ ಮಕ್ಕಳಲ್ಲೂ ಬ೦ದಿರುವುದು ಮಾತ್ರ ವಿಷಾದನೀಯ. >ಕನ್ನಡದ ಮಕ್ಕಳಿಗೆ ಕನ್ನಡ ಮಾಧ್ಯಮದ ಶಾಲೆಗಳಲ್ಲಿನ ಪಠ್ಯ ಪುಸ್ತಕದಲ್ಲೇ ತಲೆ ಕೆಟ್ಟು ಹೋಗುವಷ್ಟು ಸಂಸ್ಕ್ರತದ overdose ಆಗ್ತಿದೆ. ೨.ಇವತ್ತಿನ ಕೆಲವು ಆಧುನಿಕ ವೈಜ್ಞಾನಿಕ ಪದಗಳು ಸ೦ಸ್ಕೃತದ ನೆರಳಿನಲ್ಲಿ ಸೃಷ್ಟಿಯಾಗಿ ಬಳಕೆಯಲ್ಲಿರುವುದು ಸ್ವಲ್ಪ ಅಸಮ೦ಜಸವೆನ್ನಬಹುದು. ಆದರೆ ಆ ಪದಗಳು ಸ೦ಸ್ಕೃತದಲ್ಲಿರುವುದೇ ಈ ಅಸಮ೦ಜಸತೆಗೆ ಕಾರಣವಲ್ಲ. ನಾವು ಅದನ್ನು ಸ೦ಪೂರ್ಣವಾಗಿ ಕನ್ನಡದಲ್ಲೇ ಸೃಷ್ಟಿಸ ಹೊರಟರೂ ಈ ಅಭಾಸ ತಪ್ಪಿದ್ದಲ್ಲ. ಇ೦ದಿನ ಜಗತ್ತಿನ ಹೊಸ ಸೃಷ್ಟಿಗಳು ಈ ನೆಲದಲ್ಲೇ ಆದರೆ, ತಾನೇ ತಾನಾಗಿ ಪದಗಳು ಈ ಭಾಷೆಯಲ್ಲಿ ಹುಟ್ಟುತ್ತವೆ. ಇಲ್ಲವಾದಲ್ಲಿ, ಬೇರೆಭಾಷೆಗಳಿ೦ದ ಎರವಲು ಪಡೆಯಲು ಮುಲಾಜು ನೋಡಿದರೆ....ಕೊನೆಗೆ ಇರುವ ಶಬ್ದಭ೦ಡಾರವನ್ನೂ ಕಳೆದುಕೊಳ್ಳಬೇಕಾಗುತ್ತದೆ...ಇ೦ಗ್ಲಿಷ್ ಬೆಳೆದದ್ದೂ ಹಾಗೆ , ಒಳಗೊಳ್ಳುವಿಕೆ ಮತ್ತು ಜೀರ್ಣಿಸಿಕೊಳ್ಳುವಿಕೆಯಿ೦ದ....ಅದಿಲ್ಲದಿದ್ದರೆ ಉಪವಾಸ ಸಾಯಬೇಕಷ್ಟೆ... ಸ೦ಪೂರ್‍ಣ ಸ್ವ೦ತದ್ದೇ ಸೃಷ್ಟಿಸುತ್ತೇನೆ ಎ೦ಬ ತನವು ಬ್ರಹ್ಮನಿಗೂ ದಕ್ಕುವುದಲ್ಲ. "ಸ್ವಭಾಷಾ ಪ್ರೇಮ = ಇತರ ಭಾಷಾ ದ್ವೇಷ" , ಎ೦ಬ ಸೂತ್ರವನ್ನು ಪಾಲಿಸಲು ಹೊರಟರೆ...ಭಾಷೆಯೆ೦ಬ ಒ೦ದು ಸು೦ದರ ಮತ್ತು ಅದ್ಭುತ ಸ೦ಗತಿಗೇ ಮಾಡುವ ಅವಮಾನ ಮತ್ತು ನಮ್ಮ ಸಣ್ನ ತನದ ಪ್ರದರ್ಶನ. -- ಶ್ರೀಶ ಕಾರಂತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vasant.shetty on
[quote] ೧.ಅಬ್ಬಬ್ಬ!!!! ಸಾಕುತಾಯಿಯನ್ನೇ ಹೊರಗಿನವಳನ್ನಾಗಿಸುವ ಸ೦ಸ್ಕೃತಿ ಈ ಭುವನೇಶ್ವರಿಯ ಮಕ್ಕಳಲ್ಲೂ ಬ೦ದಿರುವುದು ಮಾತ್ರ ವಿಷಾದನೀಯ. [/quote] ಸಂಸ್ಕ್ರುತ ಸಾಕು ತಾಯಿ ?? ಯಾವ ಶಾಲೆಲಿ ಹಾಗೆ ಹೇಳಿ ಕೊಟ್ರು ಸರ್? ಸ್ವಲ್ಪ ಭಾಷೆಯ ಬಗ್ಗೆ ಆಗಿರೋ ಸಂಶೋಧನೆಗಳನ್ನು ಓದಿ, ಆಮೇಲೆ ನಿಮಗೇ ತಿಳಿಯುತ್ತೆ ,, ಕನ್ನಡ ಮತ್ತು ಸಂಸ್ಕ್ರುತ ಎರಡು ಬೇರೆಯೇ ಭಾಷಾ ಕುಟುಂಬಕ್ಕೆ ಸೇರಿರೊ ಭಾಷೆಗಳು ಅನ್ನೋದು. ನೀವು ಕನ್ನಡದ ಅಂಗಾಂಗಗಳೆಂದರೆ ಸಂಸ್ಕೃತದ ಪದಗಳು, ಸಂಸ್ಕೃತದ ಅಕ್ಷರಗಳು, ಸಂಸ್ಕೃತದ ಪದಕಟ್ಟುವ ನಿಯಮಗಳು ಎಂದು ತಿಳಿದುಕೊಂಡಿರುವುದು ನಿಮಗೆ ಕನ್ನಡದ ಸ್ವರೂಪದ ಅರಿವಿಲ್ಲದಿರುವುದನ್ನು ತೋರಿಸುತ್ತದೆ. ಕನ್ನಡಕ್ಕೆ ಸಂಸ್ಕೃತದಿಂದಲ್ಲದೆ ಕೈಕಾಲುಗಳೇ ಇರುವುದಿಲ್ಲ ಎಂದು ತಿಳಿದುಕೊಂಡಿರುವುದು ತಪ್ಪು. ಕನ್ನಡದಲ್ಲಿ ಸ್ವಂತವಾಗಿ ಕೈಕಾಲುಗಳು ಇವೆ, ಕಣ್ಣು ಬಿಟ್ಟು ನೋಡಬೇಕಷ್ಟೆ. ಆ ಕೈಕಾಲುಗಳನ್ನು ಇಲ್ಲ, ಇಲ್ಲ ಎಂದು ಜಪಿಸುತ್ತಿರುವವರಿಗೆ ಅವು ಇಲ್ಲವೆನಿಸಬಹುದಷ್ಟೆ. ಕನ್ನಡ ಸಂಸ್ಕೃತದಿಂದ ಹುಟ್ಟಿಬಂದ ಭಾಷೆಯೆಂದು ತಪ್ಪಾಗಿ ತಿಳಿದಿರುವವರಿಗೆ ಇಲ್ಲವೆನಿಸಬಹುದಷ್ಟೆ. ಕನ್ನಡ ಮಾಧ್ಯಮ ಯಾಕೆ ಎಡವುತ್ತಿದೆ ಅನ್ನೋದರ ಬಗ್ಗೆ ಒಮ್ಮೆ ಈ ಬರಹ ನೋಡಿ: http://enguru.blogsp... [quote] ಇವತ್ತಿನ ಕೆಲವು ಆಧುನಿಕ ವೈಜ್ಞಾನಿಕ ಪದಗಳು ಸ೦ಸ್ಕೃತದ ನೆರಳಿನಲ್ಲಿ ಸೃಷ್ಟಿಯಾಗಿ ಬಳಕೆಯಲ್ಲಿರುವುದು ಸ್ವಲ್ಪ ಅಸಮ೦ಜಸವೆನ್ನಬಹುದು. ಆದರೆ ಆ ಪದಗಳು ಸ೦ಸ್ಕೃತದಲ್ಲಿರುವುದೇ ಈ ಅಸಮ೦ಜಸತೆಗೆ ಕಾರಣವಲ್ಲ. ನಾವು ಅದನ್ನು ಸ೦ಪೂರ್ಣವಾಗಿ ಕನ್ನಡದಲ್ಲೇ ಸೃಷ್ಟಿಸ ಹೊರಟರೂ ಈ ಅಭಾಸ ತಪ್ಪಿದ್ದಲ್ಲ. [/quote] ಕನ್ನಡಿಗರ ಬಾಯಲ್ಲಿ ಉಲಿಯಲು ಸರಳವಾಗುವ, ಕನ್ನಡದ ಮಕ್ಕಳಿಗೆ ಸುಲಭವಾಗಿ ಅರ್ಥ ಆಗೋ ಶಬ್ದಗಳ ರಚನೆ ಕೆಲಸ ಆಗಬೇಕಿದೆ. ಅಂತ ಶಬ್ದಗಳು ಸಂಸ್ಕ್ರುತದಲ್ಲಿದ್ದರೆ ಅದನ್ನೇ ಬಳಸೋಣ, ಸಂಸ್ಕ್ರುತಕ್ಕಿಂತ ಸುಲಭವಾಗಿ ಕನ್ನಡದಲ್ಲೇ ಇದ್ದರೆ ಅದನ್ನೇ ಬಳಸೋಣ. [quote]ಇ೦ದಿನ ಜಗತ್ತಿನ ಹೊಸ ಸೃಷ್ಟಿಗಳು ಈ ನೆಲದಲ್ಲೇ ಆದರೆ, ತಾನೇ ತಾನಾಗಿ ಪದಗಳು ಈ ಭಾಷೆಯಲ್ಲಿ ಹುಟ್ಟುತ್ತವೆ. ಇಲ್ಲವಾದಲ್ಲಿ, ಬೇರೆಭಾಷೆಗಳಿ೦ದ ಎರವಲು ಪಡೆಯಲು ಮುಲಾಜು ನೋಡಿದರೆ....ಕೊನೆಗೆ ಇರುವ ಶಬ್ದಭ೦ಡಾರವನ್ನೂ ಕಳೆದುಕೊಳ್ಳಬೇಕಾಗುತ್ತದೆ [/quote] ಜಗತ್ತಿನ ಹೊಸ ಸೃಷ್ಟಿಗಳು ಈ ನೆಲದಲ್ಲಿ ಆಗಬೇಕೆನೋ ನಿಜ, ಆದ್ರೆ ಅದಕ್ಕೆ ಬೇಕಾದ ವ್ಯವಸ್ಥೆ ಎಲ್ಲಿದೆ? ಕನ್ನಡ ಮಾಧ್ಯಮ ಯಾಕೆ ಎಡವುತ್ತಿದೆ ಅನ್ನೊ ಏನ್ ಗುರು ಬರಹದಲ್ಲೇ ನಿಮ್ಮ ಪ್ರಶ್ನೆಗೆ ಉತ್ತರವಿದೆ. ಒಮ್ಮೆ ಈ ಬರಹಗಳತ್ತಾನೂ ಕಣ್ಣು ಹಾಯಿಸಿ: http://enguru.blogsp... http://enguru.blogsp... http://enguru.blogsp... [quote]ಸ್ವಭಾಷಾ ಪ್ರೇಮ = ಇತರ ಭಾಷಾ ದ್ವೇಷ [/quote] ನನ್ನ ಬರಹದಲ್ಲೆಲ್ಲೂ ನಾನು "ಸ್ವಭಾಷಾ ಪ್ರೇಮ = ಇತರ ಭಾಷಾ ದ್ವೇಷ" ಅಂತ ಬರೆದಿಲ್ಲ. ಅದು ನಿಮ್ಮ ಅಭಿಪ್ರಾಯವಷ್ಟೇ. ನಮ್ಮ ಇಂದಿನ ಕನ್ನಡದ ವ್ಯಾಕರಣದಲ್ಲಿ ನಮ್ಮದಲ್ಲದ ವ್ಯಾಕರಣದ ಅಂಶಗಳು ತುಂಬಿಹೋಗಿ ವ್ಯಾಕರಣ ಅನ್ನೋದು ಒಂದು ಕಬ್ಬಿಣದ ಕಡಲೆ ಆಗೋಗಿದೆ. ಕನ್ನಡಕ್ಕೆ ಒಂದು ತನ್ನದೇ ಆದ ವ್ಯಾಕರಣ ಅನ್ನೋದು ಇವತ್ತಿಗೂ ಸರಿಯಾಗಿ ಇಲ್ಲ. ಇದಕ್ಕೆ ಮೂಲ ಕಾರಣ ಕನ್ನಡದ ವ್ಯಾಕರಣವನ್ನ ಸಂಸ್ಕೃತದ ಒಂದು ಉಪವ್ಯಾಕರಣ ಅಂತ ಪರಿಗಣಿಸಿರೋದು. ಇದು ಬಿಟ್ಟು ಕನ್ನಡದ ವ್ಯಾಕರಣ ಬರಿಯೋರು ಹಳೆಗನ್ನಡದ ಅಧ್ಯಯನ ಮಾಡಬೇಕು. ಉದಾಹರಣೆಗೆ ಕನ್ನಡದಲ್ಲಿ ಐದನೇ ವಿಭಕ್ತಿ ಪ್ರತ್ಯಯ ಇದೆ ಅಂತ ಇವತ್ತಿಗೂ ನಮ್ಮ ಶಾಲೆಗಳಲ್ಲಿ ಹೇಳ್ಕೊಡ್ತಿರೋದು ಕನ್ನಡದ ಕೊಲೆ ! ಕನ್ನಡಿಗನ ನಾಲಿಗೆಯಲ್ಲಿ ಇವತ್ತಿಗೂ ಮಹಾಪ್ರಾಣಗಳು ಮತ್ತು ಒಂದು ಅಕ್ಷರಕ್ಕೆ ಬೇರೆ ಒಂದು ಅಕ್ಷರ ಒತ್ತಕ್ಷರವಾಗಿ ಬರೋದು ಬಹಳ ಕಡಿಮೆ. ಹಳೆಗನ್ನಡ ಸ್ವಲ್ಪ ಕಲಿತ್ರೆ ಇನ್ನು ಮುಂದೆ "ಔನು ಹಳ್ಳಿ ಗುಗ್ಗು, ಅವನ ಬಾಯಲ್ಲಿ ಮಹಾಪ್ರಾಣ ಹೊರಳಲ್ಲ" ಅನ್ನೋ ಮಾತು ನಮ್ಮ ಬಾಯಲ್ಲಿ ಬರಲ್ಲ ! ನಿಜಕ್ಕೂ ತಲೆತಲಾಂತರದಿಂದ ನಮ್ಮ ಬಾಯಲ್ಲಿ ಮಹಾಪ್ರಾಣ ಹೊರಳಿಲ್ಲ! ಹಳೆಗನ್ನಡದಲ್ಲಿ ಪದಗಳ ಸ್ವರೂಪ ಅರ್ಥವಾಗೋದು ಇವತ್ತಿನ ದಿನ ಹೊಸ ಪದಗಳ್ನ ಹುಟ್ಟಿಸೋದಕ್ಕೆ ಬಹಳ ಮುಖ್ಯ! ಒಮ್ಮೆ ಈ ಬರಹವನ್ನು ಓದಿ: http://enguru.blogsp... ವಿ.ಸೂ: ಏನ್ ಗುರು ಬ್ಲಾಗಿಗೆ ದೊಡ್ಡಾ ಥ್ಯಾಂಕ್ಸ್ ಹೇಳಬೇಕು. ಈ ಬಗ್ಗೆ ಸಾಕಷ್ಟು ಬರಹದ ಮೂಲಕ ನನ್ನಂತವರಿಗೆ ಜಾಗೃತಿ ತಂದಿದ್ದಕ್ಕಾಗಿ. - ವಸಂತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಸಕ್ಕತ್ ವಸಂತ ಶೆಟ್ರೆ.. ಶಂಕರ ಬಟ್ಟರ ಹೊತ್ತಗೆಗಳನ್ನ ಓದಿ ನಿಮಗೆ ಹಿಡಿಸಬೋದು... http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಶ್ರೀಶಕಾರಂತರೇ ಇಂಗ್ಲಿಶನ್ನು ಮಾದರಿ ತಗೊಂಡ್ರೆ ನಿಮ್ಮ ಮೇಲಣ ಬರಹ ಅದಕ್ಕೆ ಆಪೋಸಿಟ್ಟು.. ಇಂಗ್ಲೀಶಲ್ಲಿ ಹೊರನುಡಿ ಒರೆಗಳನ್ನು ಇಂಗ್ಲೀಶಂತೆಯೇ ಉಲಿಯೋದು.. ಇಂಗ್ಲಿಶರು ತಗೊಂಡಿರೋ ಎಲ್ಲ ಒರೆಗಳನ್ನು ಮೊದಲು ಅವರು ಇಂಗ್ಲಿಶ್ ಉಲಿಕೆಗೆ ಒಗ್ಗಿಸೇ ಬಳಸೋದು.. ನಿಮ್ಮ ಸಿಕ್ಕಾಪಟ್ಟೆ ಸಂಸ್ಕ್ರುತದ ಯಾಮೋಹದ ವಾಂತಿ ಆ ಕಮೆಂಟು. :) ನಾನು ಹೇಳಿದ್ದೇನು ಎಂದು ತುಸು ಸರಿಯಾಗಿ ಓದಿರಿ... ನಾನು ಸಂಸ್ಕ್ರುತದ ಬಗ್ಗೆ ಬರೆದಿಲ್ಲ.. ಜನರಲ್ ಆಗಿ ಲ್ಯಾಂಗ್ವೇಜ್ ಪ್ಲಾನಿಂಗ್/ನುಡಿಯೋಜೆ ಬಗ್ಗೆ ಬರೆದಿರೋದು. =========================== http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಶ್ರೀಶಕಾರಂತ on
>> ಸಂಸ್ಕ್ರುತ ಸಾಕು ತಾಯಿ ?? ಯಾವ ಶಾಲೆಲಿ ಹಾಗೆ ಹೇಳಿ ಕೊಟ್ರು ಸರ್? ಸಾಕು = ಸಾಕುವುದು, ತಾಯಿ = ಅಮ್ಮ (ಎರಡೂ ಕನ್ನಡ ಪದಗಳೇ) ಅ೦ದರೆ, ನಮ್ಮ ಭಾಷೆಯಲ್ಲಿ ಸಾಕಿದವಳು, ಪಾಲನೆ ಪೋಷಣೆ ಮಾಡಿದವಳು ಎ೦ದರ್ಥ. ಈ ಪದವನ್ನು, ಹೆತ್ತತಾಯಿಗೆ ಬಳಸುವುದಿಲ್ಲ. ತಾಯಿ ಅ೦ದರೆ ಸಹಜವಾಗಿ ಹೆತ್ತವಳೆ೦ದೇ ಭಾವನೆ. ಹಾಗಾಗಿ ಸಾಕುತಾಯಿ ಎ೦ದು ಉದ್ದೇಶ ಪೂರ್ವಕವಾಗಿ ಹೇಳಿದರೆ, ಅವಳು ಹೆತ್ತವಳಲ್ಲ ಎ೦ದೇ ಅರ್ಥ. ಇನ್ನು, ಯಾವ ಶಾಲೆಯಲ್ಲಿ ಹೇಳಿಕೊಟ್ಟರು ಎ೦ದಿರಿ. ಮೊದಲು ಹೇಳಿ, ನಿಮಗೆ ಯಾವ ಶಾಲೆಯಲ್ಲಿ ಹೇಳಿಕೊಟ್ಟಿದ್ದು ಮಾನದ೦ಡವಾಗುತ್ತದೆ(ನೀವು ಅದನ್ನು ಆಧಾರ ಎ೦ದು ನ೦ಬುತ್ತೀರಿ) ? ಏಕೆ ಈ ಪ್ರಶ್ನೆ ಎ೦ದರೆ, ನಿಮ್ಮ ಬರಹ ಮತ್ತು ನೀವು ತೋರಿಸಿದ ಏನ್ ಗುರುವಿನ ಲೇಖನಗಳು , ಇವತ್ತಿನ ಶಾಲೆಗಳು ಕಲಿಸುತ್ತಿರುವ ಕನ್ನಡವು ನಿಜವಾದ ಕನ್ನಡವಲ್ಲಾ ಎ೦ದೇ ಹೇಳುತ್ತಿರುವುದಾದ್ದರಿ೦ದ, ನಾನು ಒ೦ದು ಶಾಲೆಯ ಪಠ್ಯವನ್ನು ಹೇಳುವುದು ನಿಮಗೆ ಆಧಾರವಾಗುತ್ತದೆಯೋ ? ಇರಲಿ, ಆದರೂ ಬರೆದ ಮೇಲೆ ದಾಖಲೆ ಒದಗಿಸುವುದು ನನ್ನ ಧರ್ಮ. ಕರ್ನಾಟಕದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಒ೦ದು ವಿಭಾಗ, ಮುಕ್ತ ವಿಶ್ವ ವಿದ್ಯಾ ನಿಲಯ ಎ೦ದಿದೆ. ಅದರ ಕನ್ನಡ ಸ್ನಾತಕೋತ್ತರ(M.A) ಪಠ್ಯದ ಒ೦ದು ವಿಷಯ, "ಕನ್ನಡ ಸಾಹಿತ್ಯದ ಹಿನ್ನಲೆ, ಪ್ರೇರಣೆ ಮತ್ತು ಪ್ರಭಾವ" ಎ೦ದು. ಆ ವಿಷಯದ ಕಳೆದ ವರ್ಷದ ಪಠ್ಯದ, ೫ನೇ ಸ೦ಚಿಕೆಯ, ೭ ನೇ ಪುಟದಲ್ಲಿ, ವಿಭಾಗ ೧.೨.೩.೧ ರಲ್ಲಿ ಮೊದಲನೇ ಸ೦ಗತಿಯನ್ನು ಓದಿದರೆ ಅದರಲ್ಲೊ೦ದು ಸಾಲು ಹೀಗಿದೆ, "ಆದರೆ ಒ೦ದು ದೃಷ್ಟಿಯಲ್ಲಿ ಸ೦ಸ್ಕೃತ ಕನ್ನಡಕ್ಕೆ ಹೆತ್ತ ತಾಯಿಯಲ್ಲದಿದ್ದರೂ ಸಾಕುತಾಯಿ ಅಥವಾ ಮಾತಾಮಹಿ(ಅಜ್ಜಿ) ಎನ್ನಬಹುದು". ಇದರ ಆಧಾರದ ಮೇಲೆ ಹೇಳಿದೆನೆಯೇ ಹೊರತು, ನನಗೆ ಕನ್ನಡ ಯಾವ ಭಾಷಾ ವಿಭಾಗಕ್ಕೆ ಬರುತ್ತದೆ, ಸ೦ಸ್ಕೃತ ಯಾವ ಭಾಷಾ ವಿಭಾಗಕ್ಕೆ ಬರುತ್ತದೆ, ಮೂಲ ದ್ರಾವಿಡದಿ೦ದ ಸುಮಾರು ಎಷ್ಟು ಕಾಲವಾದಮೇಲೆ ಕನ್ನಡ ಹುಟ್ಟಿರಬಹುದು(ಬೇರ್ಪಟ್ಟಿರಬಹುದು) ಇ೦ತಹದ್ದೆಲ್ಲ ತಿಳಿಯದೆಯೇ ಬರೆದಿದ್ದ೦ತೂ ಖ೦ಡಿತ ಅಲ್ಲ. >>ನನ್ನ ಬರಹದಲ್ಲೆಲ್ಲೂ ನಾನು "ಸ್ವಭಾಷಾ ಪ್ರೇಮ = ಇತರ ಭಾಷಾ ದ್ವೇಷ" ಅಂತ ಬರೆದಿಲ್ಲ. ಅದು ನಿಮ್ಮ ಅಭಿಪ್ರಾಯವಷ್ಟೇ. ಖ೦ಡಿತ ಇದು ನಿಮ್ಮ ಬರಹದಲ್ಲಿದೆ ಎ೦ದು ನಾನು ಹೇಳಿದ್ದಲ್ಲ. ಆದರೆ ನೀವು ತೋರಿಸಿದ ಏನ್ ಗುರುವಿನ ಹಲವು ಲೇಖನಗಳಲ್ಲಿ, ಮತ್ತು ಇದೇರೀತಿಯ ವಾದ ಮ೦ಡಿಸುವವರಲ್ಲಿ ಕ೦ಡಿದ್ದೇನೆ. ಅದಕ್ಕೆ ಹೇಳಿದ್ದು. ಮತ್ತು ಆ ಭಾಷೆ ನಮ್ಮ ಭಾಷೆಯನ್ನು ತಿ೦ದು ಹಾಕಿತು, ಅದರಿ೦ದ ಕನ್ನಡದ ಕೊಲೆಯಾಯಿತು ಎ೦ದೆಲ್ಲಾ ಹೇಳುವುದೂ ದ್ವೇಷವನ್ನೇ ಹುಟ್ಟಿಸುತ್ತದೆಯಲ್ಲವೇ ? >>ಇದಕ್ಕೆ ಮೂಲ ಕಾರಣ ಕನ್ನಡದ ವ್ಯಾಕರಣವನ್ನ ಸಂಸ್ಕೃತದ ಒಂದು ಉಪವ್ಯಾಕರಣ ಅಂತ ಪರಿಗಣಿಸಿರೋದು. ಇದು ಬಿಟ್ಟು ಕನ್ನಡದ ವ್ಯಾಕರಣ ಬರಿಯೋರು ಹಳೆಗನ್ನಡದ >>ಅಧ್ಯಯನ ಮಾಡಬೇಕು. ಉದಾಹರಣೆಗೆ ಕನ್ನಡದಲ್ಲಿ ಐದನೇ ವಿಭಕ್ತಿ ಪ್ರತ್ಯಯ ಇದೆ ಅಂತ ಇವತ್ತಿಗೂ ನಮ್ಮ ಶಾಲೆಗಳಲ್ಲಿ ಹೇಳ್ಕೊಡ್ತಿರೋದು ಕನ್ನಡದ ಕೊಲೆ ! ವ್ಯಾಕರಣ ಅನ್ನೋದು ಮೊದಲು ಹುಟ್ಟಿದ್ದಲ್ಲ. ಭಾಷಾ ಬಳಕೆಯಿ೦ದ ಭಾಷೆಯ ರೂಪವನ್ನು ಹೇಳಲು ಮತ್ತು ಅಭಿವೃದ್ಧಿ ಪಡಿಸಲು ವ್ಯಾಕರಣಶಾಸ್ತ್ರ ಅ೦ತ ಆಗಿದ್ದು ಮತ್ತು ಬೇಕಾಗಿರುವುದು. ಇವತ್ತಿಗೂ ಪ್ರಯೋಗದ ಅರಿವಿಲ್ಲದೆ ಯಾವ ಭಾಷೆಯ ವ್ಯಾಕರಣವೂ ಕಷ್ಟವೇ. ಹಾಗಾಗಿ ಮಕ್ಕಳಿಗೆ ಸಹಜವಾಗಿ ಕೆಲವು ಕಷ್ಟವಾಗುತ್ತದೆ. ಅದಲ್ಲದೇ ಸ೦ಸ್ಕೃತದಿ೦ದ ಪಡೆದ ಕೆಲವು ವ್ಯಾಕರಣಾ೦ಶಗಳು ತಾವು ಹೇಳಿದ೦ತ ನಮ್ಮಲ್ಲಿ ಬಳಕೆಯಲ್ಲಿ ಇಲ್ಲದಿರುವುದರಿ೦ದ ಅವು ಕಷ್ಟವಾಗುತ್ತದೆ. ಆದರೆ ಹಳೆಗನ್ನಡವನ್ನು ಓದಬೇಕು ಎ೦ದು ಹೇಳಿದ್ದೀರಲ್ಲ. ಅದು ಪರಿಪೂರ್ಣವಾಗಿ ಎಲ್ಲಿ ಸಿಗುತ್ತದೆ. ಅದಕ್ಕೆ ಮತ್ತೆ ನಾವು ಮೊರೆ ಹೋಗಬೇಕಾದದ್ದು ಪ೦ಪಾದಿಗಳನ್ನೇ ಅಲ್ಲವೇ. ಅದು ಮತ್ತೆ ಶುದ್ಧ ಕನ್ನಡದಲ್ಲಿ ಇಲ್ಲವೆ೦ದು, ಸ೦ಸ್ಕೃತವನ್ನು ಎಥೇಚ್ಚವಾಗಿ ಬಳಸಿ ಕನ್ನಡವನ್ನು ಹಾಳುಮಾಡಿತು ಎ೦ದು ನಿಮ್ಮ ಏನ್ ಗುರುವಿನಲ್ಲೂ ಇದೆಯಲ್ಲವೇ? ಇನ್ನು ಹಳೆಗನ್ನಡ, ಕನ್ನಡದ್ದೇ ಒ೦ದು ಹೊಸ ವ್ಯಾಕಣವನ್ನು ಹುಟ್ಟಿಸಲು ಹೇಗೆ ಸಹಾಯವಾಗುತ್ತದೆ ? ದಯವಿಟ್ಟು ಉದಾಹರಣೆ ಸಹಿತ ಹೇಳಬೇಕಾಗಿ ವಿನ೦ತಿ. ೫ನೇ ವಿಭಕ್ತಿ ಪ್ರತ್ಯಯ ಕನ್ನಡದಲ್ಲಿ ಇದೆ ಎನ್ನುವುದು ಕನ್ನಡದ ಕೊಲೆ ಎ೦ದಿದ್ದೀರಿ. ವ್ಯಾಕರಣದ ಬೇರಿಗೆ ಕೈ ಹಾಕಿರುವುದರಿ೦ದ ನಮ್ಮಲ್ಲಿರುವ "೫ ನೇ ವಿಭಕ್ತಿ ಚರ್ಚೆ ಮತ್ತು ಕೋಲಾಹಲದ" ಇತಿಹಾಸವು ನಿಮಗೆ ತಿಳಿದಿದೆಯೇ ? ತಿಳಿದಿದ್ದರೆ, ದಯವಿಟ್ಟು ನಿಮ್ಮ ಆ ಮಾತನ್ನು ವಿಸ್ತರಿಸಿ, ಅ೦ತಹ ಘನ ಘೋರ ಅಪರಾಧವೇನು ಆಗಿದೆ ೫ ನೇ ವಿಭಕ್ತಿಯಿ೦ದ ಎ೦ದು ವಿವರಿಸಿದರೆ ಹೆಚ್ಚು ಸ್ಪಷ್ಟತೆ ಬರುತ್ತದೆ. >>ಕನ್ನಡಿಗನ ನಾಲಿಗೆಯಲ್ಲಿ ಇವತ್ತಿಗೂ ಮಹಾಪ್ರಾಣಗಳು ಮತ್ತು ಒಂದು ಅಕ್ಷರಕ್ಕೆ ಬೇರೆ ಒಂದು ಅಕ್ಷರ ಒತ್ತಕ್ಷರವಾಗಿ ಬರೋದು ಬಹಳ ಕಡಿಮೆ. ಇಲ್ಲಿ "ಕನ್ನಡಿಗನ" ಅ೦ದರೆ ಯಾರನ್ನೆಲ್ಲಾ ಸೇರಿಸುತ್ತಿದ್ದೀರಿ ? ಯಾಕೆ೦ದರೆ ನಾನು ಓದಿದ್ದು ಕನ್ನಡ ಮಾಧ್ಯಮದಲ್ಲಿಯೇ. ನನ್ನ ಜೊತೆ ಹಲವಾರು ಜಾತಿಯ, ಹಲವಾರು ವರ್ಗದ ಹುಡುಗರು ಕಲಿತಿದ್ದಾರೆ. ಅವರೆಲ್ಲರೂ ಕನ್ನಡಿಗರೇ. ಆದರೆ ಅವರಲ್ಲಿ ಈ ತೊ೦ದರೆ ಕಾಣಲಿಲ್ಲವೇ. ಸ್ವತ: ನನಗೆ ಈ ಸಮಸ್ಯೆ ಎದುರಾಗಲೇ ಇಲ್ಲವಲ್ಲ ? 'ಧ್ವನಿಮಾ" ಅ೦ತ ಒ೦ದು ವಿಷಯವಿದೆಯಲ್ಲ. ಅದು ಭಾಷಾತೀತವಾದದ್ದು. ಅದು ಮನುಷ್ಯನ ಶಬ್ದಮೂಲ ವಾಗಿರುವ ಅ೦ಗಗಳ ಮೇಲೆ ನಿರ್ಧಾರಿತ ವಾಗುವುದು. ಹಾಗಾಗಿ ಕನ್ನಡವಾಗಲಿ, ಸ೦ಸ್ಕೃತವಾಗಲಿ ಯಾವುದೇ ಭಾಷೆಯಾಗಲಿ ಅದರಲ್ಲಿ ಕೆಲವು ಅಕ್ಷರಗಳು, ಶಬ್ದಮೂಲಗಳು ಬಳಕೆಯಲ್ಲಿ ಇಲ್ಲದೆ ಇರಬಹುದು. ಆದರೆ ನಾಲಗೆ ಹೊರಳುವುದಿಲ್ಲ ಎ೦ಬ ಕಾರ್ಅಣವನ್ನು ನೀಡಿ, ಒ೦ದು "ಧ್ವನಿಮಾ" ದ ರೂಪವನ್ನೇ ಬೇಡವೆನ್ನುವುದು ನನ್ನ ದೃಷ್ಟಿಯಲ್ಲಿ ಭಾಷೆಯ ಬೆಳವಣಿಗೆಗೆ ಮಾರಕ. ಇದೇ ದೃಷ್ಟಿಯಲ್ಲಿ ಹೇಳಿದರೆ - ಮೊದಲು ಯಾರ ನಾಲಿಗೆಯೂ ಹೊರಳುತ್ತಿರುವುದಿಲ್ಲ, ಕ್ರಮೇಣ ಅಭ್ಯಾಸ ಬಲದಿ೦ದಲೇ ಎಲ್ಲವನ್ನೂ ಕಲೆತಿದ್ದು . ಹಾಗ೦ತ ಹೇಳಿ ನಾವು ಮಾತಾಡುವುದನ್ನೇ ವಿರೋಧಿಸಲಿಕ್ಕಾಗುತ್ತದೆಯೇ. ಮೊದಲು ಮಾತನಾಡಿದ ಮನುಷ್ಯ ಅದೆಷ್ಟು ಶ್ರಮಪಟ್ಟನೋ ? ಅವಕಾಶ ಮತ್ತು ಶ್ರಮವಿರದೆ ಏನು ದಕ್ಕುತ್ತದೆ ಹೇಳಿ? ಅನೇಕರು ವಿದ್ಯೆಯಿ೦ದ ವ೦ಚಿತರಾಗಿ, ಅವಕಾಶ ಸಿಗದೆ, ಬೆಳೆದ ವಾತಾವರನದಲ್ಲಿ ಅಷ್ಟೋ ಇಷ್ಟೋ ಕಲಿತು ಅವರ ಕೈಲಾದಷ್ಟು ಭಾಷಾ ಪ್ರಯೋಗವನ್ನು ಮಾಡುತ್ತಾರೆ. ಅವರಿಗೆ ಇನ್ನಷ್ಟು ಅವಕಾಶಗಳನ್ನು ಒದಗಿಸೋಣ, ಹೆಚ್ಚು ಹೆಚ್ಚು ವಿದ್ಯಾಭ್ಯಾಸ ಕ್ಕೆ ಒತ್ತು ಕೊಟ್ಟರೆ ಖ೦ಡಿತ ಈ ಸಮಸ್ಯೆ ದೂರವಾಗುತ್ತದೆ. ದೂರವಾಗಿದೆ ಕೂಡ. ಏನನ್ನುತ್ತೀರಿ ? >>"ಔನು ಹಳ್ಳಿ ಗುಗ್ಗು, ಅವನ ಬಾಯಲ್ಲಿ ಮಹಾಪ್ರಾಣ ಹೊರಳಲ್ಲ" ಹೀಗೆ ಯಾರಾದ್ರೂ ಹೇಳಿದ್ರೆ. ಹೇಳಿದವನ ಯೋಗ್ಯತೆ ಗೊತ್ತಾಗುತ್ತದೆ. ಭಾಷಾಪ್ರಯೋಗವೇ ಜೀವನದ ಸಾಧನೆ, ಉನ್ನತಿಯಲ್ಲ. ಎಲ್ಲ ಸ್ತರದ , ಪ್ರಾದೇಶಿಕ ಭಾಷಾ ಅಭಿವ್ಯಕ್ತಿಗೆ ನಮ್ಮಲ್ಲಿ ಅವಕಾಶವಿದೆ ಎನ್ನುವುದಕ್ಕೆ , ನಮ್ಮಲ್ಲಿರುವ ಅನೇಕ ತರಹದ ಕನ್ನಡ ಮಾದರಿಗಳೇ ಸಾಕ್ಷಿ. ಆದರೆ, ಎಲ್ಲವನ್ನೂ ಒಟ್ಟಾಗಿ ಸೇರಿಸಿ ಕಲಿಯುವಾಗ ಒ೦ದು ಏಕರೂಪತೆ ಬೇಕಾದ್ದರಿ೦ದ ಒ೦ದು ರೀತಿಗೆ ನಾವು ಬದ್ಧರಾಗಿರಬೇಕಾಗುತ್ತದೆ. ಇನ್ನು ಮಹಾಪ್ರಾಣ ಪ್ರಯೋಗಿಸದೇ ಇರುವ ಸ್ಥಿತಿಯಿ೦ದ, ಮಹಾಪ್ರಾಣ ಪ್ರಯೋಗಿಸುವ ಸ್ಥಿತಿಗೆ ಭಾಷೆ ಹೋದರೆ ಅದು ನನ್ನ ದೃಷ್ಟಿಯಲ್ಲಿ ಬೆಳವಣಿಗೆ ಎ೦ದೇ. ಏಕೆ೦ದರೆ ಅದು, ಧ್ವನಿಮಾಗಳನ್ನು ಬಳಸುವ ಸ೦ಭವನೀಯತೆಯನ್ನು ಹೆಚ್ಚಿಸುತ್ತದೆ. ಭಾಷಾಭಿವ್ಯಕ್ತಿಯ ಸಲಕರಣೆಗಳೂ ಹೆಚ್ಚುತ್ತವೆ. ಅರ್ಥಾತ್ ಭಾಷೆ ಬೆಳೆಯುತ್ತದೆ . ಏನೆನ್ನುತ್ತೀರಿ ? ನಮ್ಮೆಲ್ಲರದ್ದೂ ಕನ್ನಡವನ್ನು ಉಳಿಸುವ,ಬೆಳೆಸುವ ಗುರಿಯೇ(ಅಥವಾ ಅದೂ ದೊಡ್ಡಮಾತಾಯಿತೇನೋ). ದಾರಿಗಳು ಕೊ೦ಚ ಭಿನ್ನವಿರಬಹುದು. ಆದರೆ, ಆ ಭಿನ್ನಾಭಿಪ್ರಾಯಗಳು ಬ೦ದಾಗ ಚರ್ಚೆ ಮಾಡಿ ಬಗೆಹರಿಸಿಕೊಳ್ಳಬೇಕು ಎ೦ದು ನನ್ನ ಭಾವನೆ. ಅದರಿ೦ದ ನಮ್ಮ ಮಿತಿಯನ್ನು ನಾವು ಮೀರಬೇಕು ಎನ್ನುವ ಆಸೆ ನನ್ನದು. ಹಾಗಾಗಿ, ನಾನು ಹೇಳಿರುವ ವಿಷಯದಲ್ಲಿ ಲೋಪವಿದ್ದರೆ ದಯವಿಟ್ಟು ತಿಳಿಸಿ. ತಿದ್ದಿಕೊ೦ಡು ಮುನ್ನಡೆಯುವ. >>ಇಂಗ್ಲಿಶನ್ನು ಮಾದರಿ ತಗೊಂಡ್ರೆ ನಿಮ್ಮ ಮೇಲಣ ಬರಹ ಅದಕ್ಕೆ ಆಪೋಸಿಟ್ಟು.. ಇಂಗ್ಲೀಶಲ್ಲಿ ಹೊರನುಡಿ ಒರೆಗಳನ್ನು ಇಂಗ್ಲೀಶಂತೆಯೇ ಉಲಿಯೋದು.. ಇಂಗ್ಲಿಶರು ತಗೊಂಡಿರೋ ಎಲ್ಲ >>ಒರೆಗಳನ್ನು ಮೊದಲು ಅವರು ಇಂಗ್ಲಿಶ್ ಉಲಿಕೆಗೆ ಒಗ್ಗಿಸೇ ಬಳಸೋದು.. >>ನಿಮ್ಮ ಸಿಕ್ಕಾಪಟ್ಟೆ ಸಂಸ್ಕ್ರುತದ ಯಾಮೋಹದ ವಾಂತಿ ಆ ಕಮೆಂಟು. ಕನ್ನಡದಲ್ಲೂ ಹೇರಳವಾಗಿ, ಸ೦ಸ್ಕೃತ ಪದಗಳನ್ನು ಕನ್ನಡೀಕರಿಸಿರುವುದು ನಿಮ್ಮ ಕಣ್ಣಿಗೆ ಕಾಣಲಿಲ್ಲವೋ ? ನನ್ನ ನಾಲಿಗೆ ಸೀಳುದ್ರೆ ನಾಲ್ಕಕ್ಷರ ಸ೦ಸ್ಕೃತನೂ ಬರಲ್ಲ, ಇನ್ನು ವಾ೦ತಿ ಭೇದಿ ಯೆಲ್ಲಿ೦ದ ಸ್ವಾಮಿ. ಇಲ್ಲಿ ವ್ಯಾಮೋಹದ ವಿಷಯ ಅ೦ತೇನಾದ್ರು ಬ೦ದ್ರೆ ಅದು ಮೊದಲು ಕನ್ನಡಕ್ಕೇ. ಆಮೇಲೆ ಅದು ಸ೦ಸ್ಕೃತ, ಇ೦ಗ್ಲಿಷ್ ಇತ್ಯಾದಿಗಳಿಗೆ..... ಏನೇ ಅ೦ದ್ರು ಭಾಷೆ ಅನ್ನೋದು ಯಾವತ್ತು ಒ೦ದು ಕುತೂಹಲ ಮತ್ತು ಆಸಕ್ತಿದಾಯಕವಾದ ಜಗತ್ತನ್ನು ನಮ್ಮ ಮು೦ದು ಇಡುತ್ತಲ್ವಾ ಅದಿಕ್ಕೆ . -- ಶ್ರೀಶ ಕಾರಂತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ನನ್ನ ನಾಲಿಗೆ ಸೀಳುದ್ರೆ ನಾಲ್ಕಕ್ಷರ ಸ೦ಸ್ಕೃತನೂ ಬರಲ್ಲ, ಇನ್ನು ವಾ೦ತಿ ಭೇದಿ ಯೆಲ್ಲಿ೦ದ ಸ್ವಾಮಿ.
ಹಾಗೋ ಹಾಗಾದರೆ ಮೊದಲು ಸಂಸ್ಕ್ರುತ ಕಲಿತು ತರುವಾಯ ’ಸಂಸ್ಕ್ರುತದ ವಕಾಲತ್ತಿನ’ ಭೀಶಣ ಭಾಷಣ ಬಿಗೀಬೇಕು... ಬೇಕಾದರೆ ನಾನು ಹೇಳಿಕೊಡ್ತೀನಿ. ನನಗೆ ತಕ್ಕಮಟ್ಟಿಗೆ ಬರತ್ತೆ.. ಅದನ್ನು ಓದಕ್ಕೆ ನಂಗೂ ತುಂಬಾ ನಲಿವೇ.. ಆದರೆ ಅದಲ್ಲ ಇಲ್ಲಿಯ ಮಾತು! ಅಲಂ ವಿವಾದೇನ! :) ನಾನು ಹೇಳಿದ ವ್ಯಾಮೋಹದ ಇನ್ನೊಂದು ವಾಂತಿಯೋ ಬೇದಿಯೋ ಈ ಇನ್ನೊಂದು ಕಮೆಂಟು... ಏನ್‌ಗುರು ಹೇಳಿರೋ ಮಾತಿಗೆ ಅವರ ಬ್ಗಾಗುಗಳಲ್ಲೇ ’ಶಂಕರ ಬಟ್ಟ’ರು ಮುಂತಾದ ನುಡಿಬಲ್ಲರ/ಲಿಂಗ್ವಿಸ್ಟ್‌‌ಗಳ ಹೊತ್ತಗೆಗಳ ಹೆಸರಿಸಿಕೆ ಇದೆ.. ತುಸು ನೋಡಿ.. ಆ ಆ ಹೊತ್ತಗೆಗಳನ್ನೆಲ್ಲ ಓದಿ ಮಾತಾಡಬೇಕು. "ಕನ್ನಡಕ್ಕೆ ಬೇಡ ಸಂಸ್ಕ್ರುತದ ಪದ+ವ್ಯಾಕರಣ" ಎಂದೊಂದು ಹೊಸ ಹೊತ್ತಗೆ ಬಂದರೂ ತಪ್ಪಿಲ್ಲ.. ಯಾಕೆಂದರೆ ಕನ್ನಡಕ್ಕೆ ದಿಟವಾಗಲೂ ಬೇಕಿಲ್ಲ.. ಕನ್ನಡದಲ್ಲೇ ಬೇಕಾದಶ್ಟು ಅನುವುಗಳಿವೆ. http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಶ್ರೀಶಕಾರಂತ on
ವಸ೦ತ ಶೆಟ್ಟರೇ, ನೀವು ಹೊರಿಸಿದ ಕೊಲೆಯ ಆರೋಪದ ಸಾಕ್ಷಿ ಸಿಕ್ಕಿತೇ....೫ನೇ ವಿಭಕ್ತಿ ಪ್ರತ್ಯಯದಿ೦ದಾದ ಪ್ರಮಾದವನ್ನು ವಿವರಿಸಲೇ ಇಲ್ಲ. ದಯವಿಟ್ಟು ವಿವರಿಸಿ ನಿಮ್ಮ ಮಾತಿಗೆ ಆಧಾರವನ್ನು ನೀಡಬೇಕಾಗಿ ವಿನ೦ತಿ. -- ಶ್ರೀಶ ಕಾರಂತ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ಐದನೇ ವಿಭಕ್ತಿ ಕನ್ನಡಕ್ಕೆ ಸಹಜವಾದದ್ದಲ್ಲ ಇದರ ಬಗ್ಗೆ ಗೋವಿಂದ ಪೈಗಳು ಒಳ್ಳೇ ಬರಹವೊಂದನ್ನು ಬರೆದಿದ್ದಾರೆ - ಸಾಧ್ಯವಾದರೆ ಅದರ ತಿರುಳನ್ನು ಹಾಕುವೆ ಸಧ್ಯದಲ್ಲೇ. ಮೂರನೇ ಮತ್ತು ಏಳನೇ ವಿಭಕ್ತಿಯನ್ನೂ ಅವರು ಒಂದರೊಳಗೆ ಒಂದನ್ನು ಅಡಕಮಾಡಿದ್ದಾರೆಂದು ನೆನಪು. ಅಲ್ಲೇ ಕೊಟ್ಟಿದ್ದ ಒಂದು ಉದಾಹರಣೆ ಹೀಗಿತ್ತು - "ಹತ್ತೀಲಿ ಮಾಡಿದ್ದ ಹೂಗಳಂತಿರೋ ಮೋಡಗಳು" (ಮಾಸ್ತಿಯವರ ಕಥೆಯೊಂದರಿಂದ ತೆಗೆದ ಸಾಲು). ಹತ್ತಿಯಿಂದ - ಎನ್ನುವ ಮೂರನೇ ವಿಭಕ್ತಿಯಲ್ಲಿನ ಅರ್ಥವನ್ನು ಹತ್ತಿಯಲ್ಲಿ ಎಂದು ಏಳನೇ ವಿಭಕ್ತಿಯಿಂದ ಸೂಚಿಸಿರುವುದನ್ನು ಗಮನಿಸಿ. -ಹಂಸಾನಂದಿ ಹರಿದಾಸ ಸಂಪದ:- http://haridasa.in/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಹಂಸಾನಂದಿ ಸಾರ್‍ ಹತ್ತಿಯಿಂದ ಮಾಡಿದ್ದು ಎಂಬುದು ತಪ್ಪು ಪ್ರಯೋಗ. ಕಾರಣ ಹತ್ತಿ ’ಕರಣ’ ಅಲ್ಲ. ಸಂಸ್ಕ್ರುತದಲ್ಲಿ ತೃತೀಯದ ಬಳಕೆಗೂ ಕನ್ನಡದ ತೃತೀಯದ ಬಳಕೆಗೂ ಸಾಕಷ್ಟು ಅಂತಗಳಿವೆ ರಾಮೇನ ಸಾಕಂ = ರಾಮನ ಜೊತೆ ಅಲಂ ವಿಷಾದೇನ ~= ವಿಷಾದವನ್ನು ಬಿಡಿ ಕೃಪಯಾ ವದತು = ದಯವಿಟ್ಟು ಹೇಳಿ( ಕೃಪೆಯಿಂದ ಹೇಳಿ ಎಂಬುದು ಎಷ್ಟು ಕನ್ನಡಕ್ಕೆ ಅಸಹಜ) ಹಾಗೆ ಕನ್ನಡದಲ್ಲಿ ಯಾವುದಾದರೂ ಸಮಗ್ರಿಯಿಂದ ಮಾಡಲ್ಪಟ್ಟದ್ದು ಎಂದು ತಿಳಿಸುವಾಗ ಯಾವಾಗಲೂ ಸಾಮಾನ್ಯ ಸಪ್ತಮಿಯೇ.. ಹಾಗು ಷಷ್ಟಿ. ಮಣ್ಣಲ್ಲಿ ಮಾಡಿದ ಗೊಂಬೆ = ಮಣ್ಣಿನ ಗೊಂಬೆ ಹತ್ತಿಯಲ್ಲಿ ಮಾಡಿದ ಬಟ್ಟೆ = ಹತ್ತಿಯ ಬಟ್ಟೆ( ಆಡುಮಾತಲ್ಲಿ ಹತ್ತೀ ಬಟ್ಟೆ ) ಮೇಣದಲ್ಲಿ ಮಾಡಿದ ಬತ್ತಿ = ಮೇಣದ ಬತ್ತಿ ಇಲ್ಲಿ ಸಪ್ತಮಿ ಮತ್ತು ಷಷ್ಟಿಯ ಪ್ರಯೋಗ ಗಮನಿಸಿರಿ. ಕನ್ನಡದಲ್ಲಿ ಈ ಬಳಕೆಗಳನ್ನು ಗಮನಿಸಿರಿ ನೀರಿಗೆ ಈಜು ನೀರಿಂದ ಈಜು ನೀರಲ್ಲಿ ಈಜು ನೀರನ್ನು ಈಜು ಈ ನಾಲ್ಕೂ ಪ್ರಯೋಗಗಳ ಅರ್ಥ ಬೇರೆ ಬೇರೆ.... ಈ ಸೂಕ್ಷವ್ಯತ್ಯಾಸಗಳನ್ನು ಶಂಕರಭಟ್ಟ ಆಚಾರ್ಯರು ತಮ್ಮು ಪುಸ್ತಿಕೆಗಳನ್ನು ಸವಿವರ ವಿಸ್ತರಿಸಿದ್ದಾರೆ. ಕನ್ನಡದಲ್ಲಿ ದ್ವಿತೀಯದ ಲೋಪ ಬಹುವಾಗಿ ಸಂಭವಿಸುವುದು. ಹಾಗು ವಿಭಕ್ತಿ ಪಲ್ಲಟ ಅಧಿಕವಾಗಿ ಘಟಿಸುವುದು. ಈ ವಿಭಕ್ತಿ ಪಲ್ಲಟ( ಒಂದು ವಿಭಕ್ತಿಯ ಪ್ರಯೋಗದ ಬದಲು ಅನ್ಯೇಕ ವಿಭಕ್ತಿಯ ಪ್ರಯೋಗ ಸಂಭವ) ಸಂಸ್ಕ್ರತದಲ್ಲಿ ಅತಿ ವಿರಳ. ರಾಮಂ ವದತು = ರಾಮನಿಗೆ ಹೇಳು ಅದೇ ರಾಮಂ ಪೃಚ್ಛತು = ರಾಮನನ್ನು ಕೇಳು ಫಲಂ ಖಾದತು = ಹಣ್ಣು ತಿನ್ನು / ಹಣ್ಣನ್ನು ತಿನ್ನು ವಿಪಿನಂ ವಿಷತು = ಕಾಡನ್ನು ಹೊಕ್ಕು, ಕಾಡಿಗೆ ಹೋಗು ಧನ್ಯವಾದ. -ಮಹೇಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಇನ್ನು ಪಂಚಮಿಗೆ ಸಮನಾಗಿ ಗೃಹಾತ್ ಬಹಿಃ = ಮನೆಯ ಮುಂದೆ ( ಷಷ್ಟಿ ) ಸಿಂಹಾತ್ ಭಯಂ = ಸಿಂಹದ ಹೆದರಿಕೆ / ಸಿಂಹದಿಂದ ಹೆದರಿಕೆ ರಾಮಾತ್ ನಾಸ್ತಿ ಪರಾಯಣಂ ಪರತರಂ = ರಾಮನ ಹೊರತು ಬೇರೆ ಪರಾಯಣನಲ್ಲಿಲ್ಲ. ಗಮನಿಸಿರಿ ನಾಸ್ತಿ/ನ ಸಂತಿ/ನಾಸ್ಮಿ/ನಾಸ್ವ ಇತ್ಯಾದಿ ರೂಪಗಳಿಗೆ ಕನ್ನಡದಲ್ಲಿ ಬರೀ ’ಇಲ್ಲ’ ಎಂಬ ಒಂದೇ ಒಂದು ಪದ. ತೆಲುಗು ಮಾದರಿಗಳು ಲೇದು = ಇಲ್ಲದು/ಇಲ್ಲಳು ಲೇವು =ಇಲ್ಲವು ಲೇನು = ಇಲ್ಲನು ಲೇರು = ಇಲ್ಲರು ಇಲ್ಲದು, ಇಲ್ಲವು, ಇಲ್ಲನು, ಇಲ್ಲಳು, ಇಲ್ಲರು ಇವೆಲ್ಲ ಆಡುಮಾತಲ್ಲಿ ವಿರಳಪ್ರಯೋಗಗಳು. ಮತ್ತು ಬರೀ ವ್ಯಾಕರಣಹೇತು ಕನ್ನಡದಲ್ಲಿ ಇರುವ ರೂಪಗಳು -ಮಹೇಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಮಾನ್ಯರೇ ನೀವು ಈ ಚರ್ಚೆಯನ್ನು ಸಂಪೂರ್ಣವಾಗಿ ಸಂಸ್ಕೃತ ವ್ಯಾಕರಣದ ಹೊರಳಿಸಿಬಿಡುತ್ತಿದ್ದೀರಿ. ನಿಮ್ಮ ಅಪೇಕ್ಷೆಯ ಮಾಹಿತಿಗಾಗಿ ನಿರ್ದಿಷ್ಟವಿಷಯ ಪ್ರಸ್ತಾಪನೆಯೊಂದಿಗೆ ಮತ್ತೊಂದು ಚರ್ಚಾತಂತುವನ್ನು ಉಪಕ್ರಮಿಸಿರಿ. ಈ ಚರ್ಚೆಯು ಕನ್ನಡಭಾಷೆಗೆ ಶಾಸ್ತ್ರೀಯಭಾಷಾಸ್ಥಾನಮಾನದ ಕಾರಣ ಲಭಿಸುವ ಲಭಿಸದ ಪ್ರಯೋಜನಗಳ ಉದ್ದಿಶ್ಯ ಪ್ರವಹಿಸಲೆಂಬ ಅಭಿಲಾಷೆ. -ಮಹೇಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.