ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ವೀಣಾ
ಪರಿಚಯ
ನನಗೆ ಓದುವ ಹುಚ್ಚು... ಸದ್ಯಕ್ಕಂತೂ ಅಂತರ್ಜಾಲದ ಬರಹಗಳನ್ನು ಓದುವುದರಲ್ಲೇ ಖುಷಿಪಡುತ್ತಿದ್ದೇನೆ.
ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಮಂಗಳೂರಿನ ಸಂಸ್ಕ್ರತಿ, ಸಂಪ್ರದಾಯ, ವ್ಯವಹಾರ, ವಿದ್ಯಾಬ್ಯಾಸ ಪದ್ದತಿ, ಕಡಲ ಕಿನಾರೆ ಹೀಗೆ ಎಲ್ಲವನ್ನೂ ಇಷ್ಟ ಪಡುವವರು ಮಂಗಳೂರಿನ ಕನ್ನಡವನ್ನು ಮಾತ್ರ ವ್ಯಂಗ್ಯವಾಗಿ ಬಳಸುತ್ತಾರೆ. ಮಂಗಳೂರು ಕನ್ನಡ ಕೇಳೋದಿಕ್ಕೆ ಇಷ್ಟವಾಗುತ್ತೆ ಅಂಥ ಅಂದವರೇ ಮತ್ತೆ ಹಾಸ್ಯಮಾಡಿ ನಗುತ್ತಾರೆ.ಯಾಕೆ? ಇತ್ತೀಜಿನ ಸೂಪರ್ ಹಿಟ್ ಸಿನಿಮಾ ಮುಂಗಾರು ಮಳೆಯಿಂದ ಹಿಡಿದು ಹೆಚ್ಚಿನ ಸಿನಿಮಾಗಳು ಮಂಗಳೂರು ಕನ್ನಡವನ್ನು ಹಾಸ್ಯಸ್ಪದವಾಗಿ ಬಳಸಿದ್ದಾರೆ ಮುಂದೆಯೂ ಬಳಸಬಹುದು. ‘ಎಂಥದು ಮಾರಯ್ರೆ’ಎಂಬುವುದು ಮಂಗಳೂರಿನವರು ಬಳಸದಿದ್ದರೂ ಸಿನಿಮಾ ಮಹಿಮೆಯಿಂದ ಎಲ್ಲರೂ ಹೇಳುವುದು ಮಂಗಳೂರಿನವರದು ಮಾರಯ್ರೆ ಭಾಷೆಯೆಂದು.
ಮಂಗಳೂರಿನಲ್ಲಿ ಕನ್ನಡ ಮಾತ್ರವಲ್ಲದೇ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆ ಪ್ರಚಲಿತವಾಗಿದೆ. ಅದಕ್ಕಾಗಿಯೇ ಮಾತು ಮಧ್ಯ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳ ಮಿಶ್ರಣವಿರುತ್ತದೆ. ನಿಮಗೆ ಗೊತ್ತಿರಲಿ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆ ಮಾತನಾಡುವವರಿಗೆ ಕನ್ನಡ ಮಾತನಾಡಲು ಅದೆಷ್ಟು ಕಷ್ಟವಾಗುತ್ತೆ ಎಂದು. ಆ ಭಾಷೆಗಳ ಉಚ್ಚಾರಗಳಿಗೂ ಕನ್ನಡ ಪದಗಳ ಉಚ್ಚಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಾಗಿದ್ದರೂ ನಾವೆಲ್ಲರೂ ಕನ್ನಡದ ಅಭಿಮಾನದಿಂದ ಕನ್ನಡವನ್ನು ವ್ಯವಹಾರಿಕ ಭಾಷೆಯನ್ನಾಗಿ ಬಳಸುತ್ತಿದ್ದೇವೆ.ಉಳಿದವರಂತೆ ಮಕ್ಕೊಳ್ತಿನೀ ಅನ್ನಲ್ಲ ಅಪ್ಪಟ್ಟ ಕನ್ನಡದಲ್ಲಿ ಮಲಗುತ್ತಿನಿ ಅನ್ನುತ್ತೀವಿ.ಮಂಗಳೂರಿಗೆ ಹೋಗಿ ಯಾರದರೂ ಮಾರಯ್ರೆ ಎಂಬ ಪದವನ್ನು ಬಳಸುತ್ತಾರಾ ಕೇಳಿ ಆಮೇಲೆ ಹೇಳಿ. ಸುಮ್ ಸುಮ್ನೆ ಮಂಗಳೂರಿನವರ ಕನ್ನಡವನ್ನು ಕೇವಲ ಹಾಸ್ಯಕ್ಕಾಗಿ ಬಳಸಬೇಡಿ. ನೀವು ಹೀಗೆನೇ ಮಂಗಳೂರಿನವರ ಕನ್ನಡಕ್ಕೆ ತಮಾಷೆ ಮಾಡಿದರೆ ಮಂಗಳೂರಿನವರು ಕನ್ನಡ ಮಾತನಾಡುವುದನ್ನೇ ಬಿಟ್ಟು ಬಿಟ್ಟಾರು. ಯಾಕೆಂದರೆ ನಮಗೆ ಕನ್ನಡ ಮಾತ್ರವಲ್ಲದೇ ತುಳು, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳೂ ತಿಳಿದಿವೆ.
ನಾವು ಕನ್ನಡಕ್ಕೆ ಕೊಡುವ ಅಭಿಮಾನವನ್ನು ದುರುಪಯೋಗ ಮಾಡಬೇಡಿ.ಉಳಿದಂತೆ ನಿಮಗೆ ಬಿಟ್ಟದ್ದು.
- veenadsouza's blog
- Login or register to post comments
- 1747 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ವೀಣಾ ಅವ್ರೆ...
ಹಾಗೆ ಅಂದುಕೋಬೇಡಿ...
ಹಿಂಗೆ ಎಲ್ಲ ಭಾಷೆಯಾಗೂ ಐತೆ.
ಮಂಗಳೂರು ಭಾಷೆ ತಮಾಷೆಗೆ, ಮಂಡ್ಯ-ಹಾಸನದ ಭಾಷೆ ರೌಡಿಗಳ ಬಾಯಲ್ಲಿ ಇಲ್ವೇ ಪೆದ್ದರ ಬಾಯಲ್ಲಿ, ಉತ್ತರ ಕರ್ನಾಟಕದ ಭಾಷೆ corrupt ಪೊಲೀಸರ ಬಾಯಲ್ಲಿ. ಹಿಂಗೆ!
ಹಿಂದಿಯಲ್ಲೂ ಹಿಂಗೇ ಇರೋದು, ಬಿಹಾರಿ-ನುಡಿ ಪೆದ್ದ, ಹಳ್ಳಿಗಮಾರ ಅಂತ, ಮುಂಬಯಿಯ ಮರಾಟಿ ಬೆರೆಸಿದ್ದು ರೌಡಿಗಳಿಗೆ ಹಿಂಗೆ!
ತೆಲುಗುನಾಗೂ ಹಿಂಗೆ ರೌಡಿಗಳು ಅಂದ್ರೆ ಕಡಪ, ಕರ್ನೂಲ್ ತೆಲುಗು. ಸಭ್ಯಸ್ತರು ಅಂದ್ರೆ ವಿಜಯವಾಡ (ಕೊಷ್ಟ)ತೆಲುಗು ಹಿಂಗೆ!
ಇದನ್ನೆಲ್ಲ 'ಅಪಹಾಸ್ಯ' ಎಂದು ಬಗೆಯದೇ, 'ಹಾಸ್ಯ' ಎಂದು ಅಂದುಕೊಬೇಕು. ಸದ್ಯ ಹಿಂಗಾರ ಮೈಸೂರು-ಬೆಂಗಳೂರ ಕನ್ನಡ ಬಿಟ್ಟು ಬೇರೆ ಕನ್ನಡ ಸಿನಿಮಾದಾಗೆ ಕಾಣಿಸ್ತಾವಲ್ಲ!!
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ತಮ್ಮ,
ಸಕ್ಕತ್ತಾಗಿ ಹೇಳಿದ್ದೀ...ಜಾಣ ಆಗ್ತಿರುವ ಕುರುಹುಗಳು ಕ೦ಡು ಬರುತ್ತಾಯಿವೆ.
"ಜಾಣ" ಅನ್ನೋಕ್ಕೆ ಮ೦ಗಳೂರು ಭಾಷೆಯಲ್ಲಿ ಏನು ಅನ್ನಬೇಕು?
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ನಾನೇನೋ ಜಾಣನೇ ಆಯ್ತೀವ್ನಿ....
ಆದ್ರೇ ಮುರುಳಿ ದ್ವಾವ್ರು ನೀವ್ಯಾಕೆ ಪೆದ್ರಂಗೆ ಆಡ್ತೀರ್ರಿ? :)
'ಜಾಣ' ಅಂದ್ರೆ ಎಲ್ಲ ಕನ್ನಡದಾಗೂ 'ಜಾಣ' ಅಂತವೇ!
ಮಂಗಳೂರುರೋರ ಕನ್ನಡ ನಮ್ ಎಲ್ಲರ್ಗೂ ಅರ್ತ ಆಯ್ತದೆ. ಅವರ ಕನ್ನಡದಾಗೆ ಏನು ಶಾನೆ ಯತ್ವಾಸ ಇಲ್ವಲ್ಲ!!
ನೀವ್ ಒಂದ್ ದಪ ನಂಜನಗೂಡು, H D ಕೋಟೆಯವ್ರ ಕನ್ನಡ ಕೇಳ್ರಿ, ಗೊತ್ತಾಯ್ತದೆ! :)
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಅದು ಖರೆ ಬಿಡ್ರಿ. ಆದ್ರೆ "ಮುರುಳಿ ದ್ವಾವ್ರು" ಕೇಳಿದ್ದು ಸಮಾನಾರ್ಥಕ ಪದ ಏನರ ಬಳಸ್ತಾರಾ ಅ೦ತ. (ಇದು ನಿಮಗೂ ಗೊತ್ತು, ಆದ್ರೆ ಕೀಟಲೆ ಮಾಡಿದ್ದಿರಿ೦ತ ನಮಗೂ ಗೊತ್ತು ;-) )
ನಮ್ಮ ಕಡೆ ಮಾತ್ರ ಶಾಣ್ಯಾ ಅ೦ತಾರ...
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ನಮ್ ಕಡೆ 'ಬಲ್ ನನ್ ಮಗ' ಅಂದ್ರೆ ಸಿಕ್ಕಾಪಟ್ಟೆ 'ಜಾಣ'( ಹೆಜ್ಜಾಣ)!! :)
ಇನ್ನೂ ಕೆಲವು ನೋಡಿ..
'ತಲೇ ಮಡಗು', 'ಚುರುಕು', 'ತಲೇ ಅಂದ್ರೆ ತಲೇ' ಇವೆಲ್ಲ 'ಜಾಣ' ಅಂತ ಹೇಳ್ತಾವೆ!
ಜಾಣ = ಚದುರ = ಬಲ್ಲ = ಚುರುಕು-ತಲೆ = ತಲೆ ಮಡಗಿರೋನು ( ಕನ್ನಡದಾಗೆ )
ಶಾಣಾ/ಶಾಣ್ಯಾ( ಇದು ಮರಾಟಿಯಿಂದ ಅಲ್ವಾ! )
ಚತುರ, ಚಾಣಾಕ್ಷ, ಬುದ್ಧಿವಂತ, ಕುಶಾಗ್ರಮತಿ ( ಸಂಸ್ಕ್ರುತದಾಗೆ )
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ನಮ್ಮ ಕೊಂಕಣಿಯಲ್ಲಿ ಶ್ಯಾಣ್ ಎಂದರೆ ಸೆಗಣಿ ಎಂದು. ಆದ್ದರಿಂದ ನಾವು ಮಂಗಳೂರಿನವರು ಜಾಣನಿಗೆ ಜಾಣವೆಂದೇ ಹೇಳುವುದು.
ಕೃತಜ್ಞ ಹೇಗೆ ಹೇಳುವುದು ಹೇಳುತ್ತಿರಾ?
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ನೀವು ಹೇಳಿದ್ದು ನಿಜ. ಬಹುತೇಕ ಚಲನಚಿತ್ರ,ಗಳಲ್ಲಿ ಮಂಗಳೂರು ಕನ್ನಡವನ್ನು ಅಪಭ್ರಂಶವಾಗಿ ಬಳಸುತ್ತಾರೆ. ಅವರ ಪ್ರಕಾರ "ಮಾರಾಯ್ರೇ" ಅಂತ ಸೇರಿಸಿ ಬಿಟ್ರೆ ಅದು ಮಂಗಳೂರು ಕನ್ನಡವಾಗಿ ಬಿಡುತ್ತದೆ. ಯಾವುದೇ ಒಂದು ಪ್ರದೇಶದ ಆಡು ಭಾಷೆಯನ್ನು ಸರಿಯಾಗಿ ಬಳಸಬೇಕೇ ಹೊರತು ಸುಮ್ಮನೆ ಬೇಕಾ ಬಿಟ್ಟೀಯಾಗಿ ಬಳಸುವುದು ಸರಿಯಲ್ಲ.
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಎಶ್ಟೊ ಬಾರಿ ಸಿನಿಮಾಗಳಲ್ಲಿ ಹಳ್ಳಿ ನುಡಿಯನ್ನು(ಮಂಡ್ಯ, ಮೈಸೂರು ಕಡೆಯ) ಹಾಸ್ಯ ಮಾಡ್ತಾರೆ.....ಇದನ್ನು 'ಅಪಹಾಸ್ಯ' ಅಂತ ತಿಳೀಬೇಡಿ...
ಮಹೇಸರು ಹೇಳಿದಂಗೆ....ಎಲ್ಲ ನುಡಿಗಳ ಸಿನಿಮಾಗಳಲ್ಲಿ ಈ ರೀತಿ ಇವೆ.
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಮಂಗಳೂರಿನವರ ಬಗ್ಗೆ ನಾನು ಮೆಚ್ಚಿಕೊಳ್ಳುವದೆಂದರೆ, ಅವರು ಬೇರೆ ಕಡೆಗಳಂತೆ ಬರೀ ಸಿನಿಮಾಗಳಲ್ಲಿ ಮುಳುಗಿಲ್ಲ. ಅವರಿಗೆ ಓದಿನ ಕಡೆ ಹೆಚ್ಚು ಒಲವಿದೆ.
'ಅವಳೇ ನನ್ನ ಹೆಂಡತಿ' ಮತ್ತು ಹಲವಾರು ಸಿನಿಮಾಗಳಲ್ಲಿ ಮಂಗಳೂರ್ ಕನ್ನಡ ಮಾತಾಡುವ ಮನಸ್ಯಾನೇ ಹೀರೋ ಆಗಿರುತ್ತಾರೆ. ಮಹೇಶರು ಹೇಳಿದಂಗೆ ಹೀರೋ ಬೆಂಗಳೂರು-ಮೈಸೂರು ಕನ್ನಡ ಮಾತಾಡೋನ್ ಆಗಿರುತ್ತಾನೆ. ಇದು ಬದಲಾಗಬೇಕು.
ನಮ್ ಕನ್ನಡ ಬಗ್ಗೆ ನಗೆಚಟಾಕಿ ಮಾಡಿದರೆ ನಾವೇನು ಸಣ್ಣವರಾಗಿ ಬಿಡಲ್ಲ ಬಿಡಿ. ಆಯಾ ಭಾಗಗಳಿಂದ ಬಂದ producerಗಳು ಆ ಬಗ್ಗೆ ಕಾಳಜಿ ತುಗೋಬೇಕು.
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
veena.
ಕನ್ನಡ ಭಾಷೆ ಎಂದರೆ ಹೀಗೆ ಮಾತನಾಡಬೇಕು ಎಂಬ yardstick ಇಲ್ಲವಾದರೂ, ಭಾಷೆಯು ಆಯಾ ಪ್ರಾಂತೀಯ ಸಂಸ್ಕೃತಿ, ಆಚರಣೆಯನೊಳಗೊಂಡಿರುತ್ತದೆ. ಸಿನಿಮಾದಲ್ಲಿ ಪ್ರೇಕ್ಷಕರು ಏಕತಾನತೆಯಿಂದ ಹೊರಬರಲೆಂದು ಮಂಗಳೂರು ಕನ್ನಡ, ಉ.ಕ. ಕನ್ನಡವನ್ನು ಬಳಸುತ್ತಿರಬಹುದು, ಇದು ಅಪಹಾಸ್ಯವಾದಾಗ ಅಲ್ಲಿಯ ಜನರಿಗೆ ನೋವಾಗುವುದು ಸಹಜ. ಮೂಡಲ ಮನೆ ಧಾರಾವಾಹಿಯಿಂದ ಉ.ಕ. ಕನ್ನಡಕ್ಕೆ ಒಂದು ಖದರ್ ಬಂದಿದೆ.
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ವೀಣಾ ಅವರೇ, ಏಸಿಯಾನೆಟ್ ಸುವರ್ಣದಲ್ಲಿ ಸೋಮವಾರದಿಂದ ಶುಕ್ರುವಾರ ರಾತ್ರಿ ೯ ರಿಂದ ೧೦ "ಸಂಗೊಳ್ಳಿ ರಾಯಣ್ಣ" ಮೂಡಿ ಬರುತ್ತಿದೆ. ಹೇಗೆ ಬರುತ್ತಿದೆ ನೋಡಬೇಕು.
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.ನಿಮ್ಮ ಮಾತು ನಿಜ. ಕನ್ನಡಭಿಮಾನ ಎಂದಿಗೂ ಬತ್ತದು. ನಾನು ಆ ಮಾತು ಹೇಳೊದಿಕ್ಕೆ ಕಾರಣವಿದೆ. ಬೆಂಗಳೂರಿಗೆ ಬಂದ ಮಂಗಳೂರಿನವರು ಕನ್ನಡ ಮಾತನಾಡುವಾಗ ಜನ ತೀರ ಕೇವಲವಾಗಿ ನೋಡುತ್ತದೆ. ಇದರಿಂದ ಮನಸ್ಸಿಗೆ ಬೇಸರವಾಗಿ ಇಂಗ್ಲಿಷ್ ಭಾಷೆಗೆ ಮೊರೆ ಹೋಗಬೇಕಾಗುತ್ತದೆ. ಎಲ್ಲರಿಗೂ ತಮ್ಮತಮ್ಮ ಭಾಷೆ ಮೇಲೆ ಅಭಿಮಾನವಿದೆ. ಅದಕ್ಕಾಗಿ ಅಪಹಾಸ್ಯ ಯಾರು ಯಾವುದಕ್ಕೂ ಮಾಡಬಾರದು.
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
"ಮಾತನಾಡುವಾಗ ಜನ ತೀರ ಕೇವಲವಾಗಿ ನೋಡುತ್ತದೆ."
ಇದು ನಂಗೂ( ನನ್ ತಮ್ಮಂಗೂ ) ಆಯ್ತು.
ನಾವೆಲ್ಲ ( ನಮ್ಮ ಮನೆಯಾಗೆ ಸಂಸ್ಕ್ರುತ ಓದಿದ್ರೂ ನಾನು, ನನ್ನ ತಮ್ಮ, ನನ್ನ ಚಿಕ್ಕಪ್ಪನ ಮಗ ) ಮನೆಯಾಗೆ ನಮ್ಮ ನಾಗಮಂಗಲದ ಕನ್ನಡವನ್ನೇ ಮಾತಾಡೋದು, ಯಾರು ಇರಲಿ, ಹೋಗಲಿ!!
ಮೊನ್ನೆ ಮೈಸೂರಾಗೆ ಒಂದು ಮದುವೆಗೆ ಹೋಯಿದ್ವು. ಅಲ್ಲಿ ನಾನು ನನ್ನ ಚಿಕ್ಕಪ್ಪನ ಮಗ ಮಾತಾಡ್ತಾ ಇದ್ವು. ನಮ್ಮ ಬೆಂಗಳೂರ ನಂಟಳೊಬ್ಬಳು ಬಂದು "ಏನದು ಐತೆ ಪೈತೆ ಅಂತ ಹಳ್ಳಿಯೋರಂಗೆ ಮಾತಾಡ್ತೀರ, ನಾಚಿಕೆಯಾಗಲ್ವಾ?" ಅಂತ ಅಂದ್ಳು.
ಅದಕ್ಕೆ ನನ್ನ ಚಿಕ್ಕಪ್ಪನ ಮಗ(ಇವನೋ ಶಾನೆ ಸಂಸ್ಕ್ರುತ ಓದಿಕೊಂಡವ್ನೆ) ಸಿಟ್ಟು ಮಾಡಿಕೊಂಡು "ಯಾಕಮ್ಮಿ!! ನೀವ್ ಬೆಂಗಳೂರ್ ಮೈಸೂರೋರು ಬಲ್ ಚಂದಾಗಿ ಮಾತಾಡ್ತೀರಿ!! ನಿಮ್ ಕನ್ನಡ ಕೇಳಿ ನಾವ್ ಸಾಯ್ಬೇಕು. ಒಂದು ಕಿತ ಕನ್ನಡ ವ್ಯಾಕರಣ ತಗೆದು ನೋಡಿ, ಆಗ
'ಊಟನಾ, ತಿಂಡೀನಾ, ಸ್ನೇಹಾನಾ, ಇವೆಲ್ಲ ತಪ್ಪು, ನಾವು ಹೇಳೋ ಊಟವೇ, ತಿಂಡಿಯೇ, ಸ್ನೇಹವೇ, ಇವೆಲ್ಲ ಸರಿ ಅಂತ ತಿಳೀತೈತೆ',
ನೀವು ಮೈಸೂರ್-ಬೆಂಗಳೂರ್ ಅವರ ಕನ್ನಡ ತಗೊಂಡು ನೀವಾಳ್ಸಬೇಕು' ಅಂದ.
ಆಯಮ್ಮ 'ಗಬ್‌ಚಿಪ್'! ಮುಂದೇನ್ ಅಂದಾಳು? :)
ಯಾರೋ ಪೊಳ್ ದಿಮಾಕೋರು 'ಕೇವಲವಾಗಿ' ನೋಡಿದ್ರೆ ನಾವು 'ಕೇವಲ' ಆಗಕ್ಕಿಲ್ಲ.!! ನಾವು ನಮ್ಮ ನುಡಿ ಆಡದು ಅವರಿಗೆ ಹೆದರಿ ಬಿಡಕ್ಕೆ ಆಯ್ತದಾ? ನಾವು ಬಿಡಲೂ ಬಾರದು!
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
"...ಇದರಿಂದ ಮನಸ್ಸಿಗೆ ಬೇಸರವಾಗಿ ಇಂಗ್ಲಿಷ್ ಭಾಷೆಗೆ ಮೊರೆ ಹೋಗಬೇಕಾಗುತ್ತದೆ..."
ಹೀಗೆ ಮಾಡಬೇಡಿ... ಯಾರೇ ಏನೇ ಅಂದ್ರೂ ನಿಮ್ಗೆ ಯಾವ ಕನ್ನಡ ಬರುತ್ತೋ ಅತವ ಇಶ್ಟನೋ ಅದನ್ನೆ ಮಾತಾಡಿ..
------
ನಾವು ಒಂದು ಕನ್ನಡವನ್ನು ಉಳಿಸಿ ಬೆಳೆಸುತ್ತಿಲ್ಲ.. ಹಲವು ಕನ್ನಡಗಳನ್ನು ಉಳಿಸಿ ಬೆಳೆಸುತ್ತಿದ್ದೀವಿ.
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
veenadsouza
ನಾನು ಕನ್ನಡವನ್ನೇ ಮಾತನಾಡುತ್ತೇನೆ. ಯಾಕೆಂದ್ರೆ ನನಗೆ ಕನ್ನಡದ ಬಗ್ಗೆ ಅಭಿಮಾನವಿದೆ. ಇದು ನನ್ನ ಒಬ್ಬಳ ಸಮಸ್ಯೆ ಅಲ್ಲ.
ಅವರೆಲ್ಲರಲ್ಲಿ ಹೆಚ್ಚಿನವರು ಕನ್ನಡ ಮಾತನಾಡಿ ಅಪಹಾಸ್ಯಕ್ಕೆ ಈಡಾಗುವುದಕ್ಕಿಂತ ಮೌನವೇ ಒಳಿತು ಎಂದು ಕೊಂಡಿದ್ದಾರೆ. ಸಂವಹನ ಮಾಡದಿರಲು ಸಾಧ್ಯವಿಲ್ಲವಾದ್ದರಿಂದ ಇಂಗ್ಲಿಷ್ ಭಾಷೆ ಬಳಸಬೇಕಾಗುತ್ತದೆ ಅನ್ನುತ್ತಾರೆ.
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ನೀವು ಹೇಳುತ್ತಿರುವುದು ಸೊಲ್ಪ ಮಟ್ಟಿಗೆ ಸರಿ ಇರಬಹುದು.
ಆದ್ರೆ ಎಲ್ರೂ ಆ ತರ ಇರಲ್ಲ.... ಯಾಕಂದ್ರ ಬೆಂಗ್ಳೂರಲ್ಲಿ ಈಟೋಂದು ಉಡುಪಿ/ಮಂಗಳೂರಿರುವ ಬೇರಿರುವ ಮಂದಿ ಹೋಟೆಲ್ ತೆಗೀತ ಇರಲಿಲ್ಲ.
"ಮನಸ್ಸಿದ್ದರೆ ದಾರಿ"
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಏನ್ರಿ ವೀಣಾ ಹಿಂಗಂತೀರಿ ನಾನು ಬಾಯಿ ಬಿಟ್ರೇನೆ ನಗಾಕ ಶರು ಮಾಡತಾರ. ಆದರ ನಾ ಬ್ಯಾಸರಾ ಮಾಡಕೊಳಂಗಿಲ್ಲ ಅವರ ಜೊತೆ ನಾನು ದನಿಗೂಡುಸ್ತೀನಿ. ಪ್ರತಿದಿನ ಆಫೀಸುದಾಗ ಇದ್ದಾಗ, ಕನ್ನಡಿಗರೇ ಆದ್ರೂ ಎಂದೂ ನಂಜೊತೆ ಕನ್ನಡ ಮಾತಾಡದೆ ಇರೋರು ಕೂಡ ಒಂದು ಕ್ಷಣ ಬಂದು ಏನು ಮಾರಾಯ ಊಟ ಆತಾ? ಅಂತ ಕೇಳಿದಾಗ ನಾ ಗೆದ್ದೆ ಅನ್ನಿಸುತ್ತೆ. ಎಷ್ಟೋ ಸಿನಿಮಾದಾಗ ಉ.ಕ. ಭಾಷೆ ಮಾತಾಡಾಕ ಸರಿಯಾಗಿ ಬರದಿದ್ರೂ ಅದನ್ನ ಬಳಸ್ತಾರೆ ಅನ್ನೋದೊಂದು ಖುಷಿ ನಮಗ. ಆದರ ನೋಡವಾ ಕನ್ನಡ ಮಾತಾಡುದನ್ನ ಬಿಡಬ್ಯಾಡವಾ ತಾಯಿ.
ಎಂದೆಂದೂ,
ಗಿರೀಶ ರಾಜನಾಳ.
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಮಹೇಶ್, ತುಂಬಾ ಚೆನ್ನಾಗಿ ಹೇಳಿದ್ದೀರಿ. ಮಂಗಳೂರು ಕನ್ನಡವನ್ನು ಅಪಹಾಸ್ಯ ಮಾಡುತ್ತಾರೆ ಅನ್ನೋದಕ್ಕಿಂತ ಎಲ್ಲರಿಗೂ ಪ್ರಿಯವಾಗುತ್ತೆ ಅಂತಾನೇ ಸಿನಿಮಾಗಳಲ್ಲಿ ಬಳಸಿಕೊಳ್ಳುತ್ತಾರೆ ಅಂತ ನನ್ನನಿಸಿಕೆ. ಯಾಕೋ ಏನೋ, ಮಂಗಳೂರು ಕನ್ನಡ ಮಾತಾಡುವವರು ತೀರಾ ಆತ್ಮೀಯರು ಅಂತಲೂ ಅನಿಸುತ್ತದೆ.
ನೀವು ಈಟಿವಿಯ `ಪ್ರೀತಿ ಇಲ್ಲದ ಮೇಲೆ...' ಧಾರಾವಾಹಿ ನೋಡುತ್ತಿದ್ದರೆ ಅದರಲ್ಲಿ ಮಂಗಳೂರು ಕನ್ನಡವನ್ನು ಒಂದು ಪಾತ್ರದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಬಳಸಿದ್ದಾರೆ ಎಂಬುದು ಗೊತ್ತಾಗುತ್ತೆ. ಮಂಗಳೂರು ಕನ್ನಡ ಮಾತಾಡುವುದರಿಂದಲೇ ಆ ಪಾತ್ರಕ್ಕೊಂದು ತೂಕ, ಗಾಂಭೀರ್ಯ, ಸನ್ನಿವೇಶಕ್ಕೊಂದು ಗಟ್ಟಿತನ ಸಿಕ್ಕಿದೆ (ಆ ಧಾರಾವಾಹಿಯಲ್ಲಿ ನಿಖಿಲ್ ಗೆಳೆಯನ ಪಾತ್ರ ಮಂಗಳೂರು ಕನ್ನಡ ಮಾತಾಡುತ್ತೆ).
ಅಂದಹಾಗೆ, ಇದು ನನ್ನ ಪ್ರಾದೇಶಿಕ ಭಾಷಾಭಿಮಾನದ ಮಾತುಗಳು ಅಂತೇನಲ್ಲ. ಯಾಕೆಂದರೆ ನನ್ನದು ಮಂಗಳೂರು ಕನ್ನಡವಲ್ಲ, ಕುಂದಾಪ್ರ ಕನ್ನಡ. ಅದು ಆಮೇಲೆ ಶಿರಸಿಯ ಹವ್ಯಕ ಕನ್ನಡವಾಗಿ, ಈಗ ಬೆಂಗಳೂರಿನ ಕನ್ನಡದ ಜೊತೆ ಮಿಕ್ಸ್ ಆಗಿ ಮಿಸಳ್ಭಾಜಿ ಆಗಿಬಿಟ್ಟಿದೆ!
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ನಮಸ್ಕಾರ್ರೀ ವೀಣಾ ಅವರ,
ಯಾಕ್ರೀ ಇಷ್ಟೊಂದು ಸಿಟ್ಟು ಮಾಡ್ಕೊಂಡೀರಿ... ಪೂರ್ತಿ ಜೋರಾಗೇ ದಬಾಯ್ಸೀರಲ್ರಿ...
ಹಂಗ್ಯಲ್ಲಾ ಮಾಡಬ್ಯಾಡರಿ... ನಿಂ ನುಡಿ ಭಾಳ ಚಂದ ಅದ ನೋಡ್ರಿ.. ಸಮಾಧಾನ ಮಾಡಕೋರಿ ಸ್ವಲ್ಪ...
ಕನ್ನಡ ಎಷ್ಟೊಂದ ರೀತಿ ಮಾತಾಡಬೌದು ಅಂತ ನನಗ ಭಾಳ ಹೆಮ್ಮೆ ಅದರಿ... ಅದಕ್ಕ ಕನ್ನಡ ಮಾತಾಡೋದು ನಿಲ್ಲಿಸಿಬಿಡಬ್ಯಾಡರಿ..
ನಂದು ಪಕ್ಕಾ ಉತ್ತರ ಕರ್ನಾಟಕದ ಮಾತು ನೋಡ್ರಿ, ನಾನು ಸಣ್ಣವ ಇದ್ದಾಗ ನೀವು ಅಂದ್ಕೊಂಡಂಗ ಬೆಂಗಳೂರ ಮಂದಿ ನಮ್ಮ ನುಡಿನೂ ನಗಚಾಟಿಕಿ ಮಾಡತಾರು ಅನ್ಕೊಂಡಿದ್ದಿನ್ರಿ....
ಆದರ ಅಲ್ಲಿಗೆ ಹೋದ ಮ್ಯಾಲೆ ಗೊತ್ತಾತು.. ಜನ ಭಾಳ ಚೊಲೊ ಅದಾರು ಅಂತ.. ನಮ್ಮನ ಕಂಡರ ಭಾಳ ಪ್ರೀತಿಯಿಂದ ಮಾತಾಡಸ್ತಾರಿ..
ಒಂದು ಜೋಕ ಹೇಳತಿನಿ ಕೇಳ್ರಿ..
ನಾನು PUC ಓದಲಾಕ ಅಲ್ಲಿರೊ ನಮ್ಮ ದೊಡ್ಡಮ್ಮನವರ ಮನೆಗೆ ಹೋಗಿದ್ದೆ.... ನನಗ ಆವಾಗ ಅಷ್ಟೊಂದು ಬೆಂಗಳೂರು ಕನ್ನಡ ಬರತಿರಲಿಲ್ಲ..
ನಮ್ಮ ಅಕ್ಕ ಪಕ್ಕದವರಿಗೆ ನಮ್ಮನ್ನು ಕಂಡರೆ ತುಂಬಾ ಪ್ರೀತಿ...
ಒಂದು ದಿನ ನಮ್ಮ ಮಗ್ಗುಲ ಮನಿ (ಪಕ್ಕದ ಮನಿ) ತಾತ ನನ್ನ ಕರೆದು
"ವಿನಿ ಬಾ ಕಣೊ, ನಮ್ಮನೇಲಿ ಇವತ್ತು ಒಳ್ಳೆ ರವೆ ದೋಸೆ ಮಾಡಿದೀವಿ,
ಅದಕ್ಕೆ ಇಲ್ಲೆ ತಿಂಡಿ ತಿನ್ಕೊಂಡು ಹೋಗು ಮರಿ" ಅಂತ ಕರದರು...
ನಾ ಭಾಳ ಖುಷಿಯಿಂದ ಅವರ ಮನಿಗೆ ಜಿಕ್ಕೊಂಡು ಜಿಕ್ಕೊಂಡು (ಕುಣೀತ ಕುಣೀತ) ಹೋದೆ.
ಆದರೆ ದೂರದಲ್ಲಿ ನಮ್ಮ ದೊಡ್ಡಪ್ಪ ಬರತಾ ಇದ್ದರು, ಅವರು ಭಾಳ Strict. ಬೇರೆಯವರ ಮನೆಗೆ ಹೋಗಿ ತೊಂದರೆ ಕೊಡೋದು ಅಂದರೆ ಅವರಿಗೆ ಆಗೊದಿಲ್ಲ..
ಅವರನ್ನು ನೋಡಿದ ತಕ್ಷಣನೇ "ತಾತ, ನಮ್ಮ ದೊಡ್ಡಪ್ಪ ಬರಾಕತ್ಯಾರಿ.. ನಾ ಹಿಂದಾಗಡೆ ಬರತೀನ್ರಿ..." ಅಂತ ಹೇಳಿ ಅಲ್ಲಿಂದ ಕಾಲುಕಿತ್ತೆ..
ನಮ್ಮ ಕಡೆ "ಹಿಂದಾಗಡೆ" ಅಂದರೆ "ಆನಂತರ" ಅಥವಾ "ಆಮೇಲೆ" ಅಂತ ಅರ್ಥ..
ಅದಕ್ಕೆ ಅವರಿಗೆ ನಾನು ಏನು ಹೇಳಿದೆ ಅಂತ ಗೊತ್ತಾಗದೆ.. ಅದನ್ನ ತಪ್ಪು ತಿಳಿದು.. "ಈ ಹುಡುಗ ಏಕೆ ಹಿಂದಿನ ಬಾಗಿಲಲ್ಲಿ ಬರತೀನಿ ಅಂತ ಹೇಳಿ ಹೋದ?".. ಅಂತ ತುಂಬಾ ಹೊತ್ತು ತಲೆ ಕೆಡಿಸಿಕೊಂಡರಂತೆ..
ಆಮೇಲೆ... ನಮ್ಮ ದೊಡ್ಡಮನವರ ಹತ್ತಿರ ಬಂದು ನಿಮ್ಮ ಹುಡುಗ ಹೀಗೇಕೆ ಹೆಳಿದ ಅಂತ ಕೇಳಿದರು,
ಅದನ್ನ ನಮ್ಮ ದೊಡ್ಡಮ್ಮ ಬಿಡಿಸಿ ಹೇಳಿದರು ಆಗ ಎಲ್ಲರು ಬಿದ್ದು ಬಿದ್ದು ನಕ್ಕರಂತೆ..
ಈಗಲೂ ಕೂಡ ಅವರ ಮನೆಗೆ ಹೋದರೆ.. ಆ ಕತೆ ಹೇಳಿ ಎಲ್ಲರೂ ನಗತಾ ಇರತೀವಿರಿ..
ಆದರೆ ಈಗಲೂ ಅವರಿಗೂ ನಮಗೂ ಅವಿನಾಭಾವ ಸಂಬಂದ ಮುಂದುವರಿದಿದೆ...
ಈಗ ನೀವೇ ಹೇಳ್ರಿ...
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಚೊಲೊ ಐತಿ ನೋಡು ಕಾವಿ ನಿನ್ನ ಹಾಸ್ಯ ಪ್ರಸಂಗ.
ಅಂದಂಗ ನಿಮ್ಮ ಪೂರ್ಣ ಹೆಸರು???
ನಿಮ್ಮವ,
ಗಿರೀಶ ರಾಜನಾಳ
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಚೊಲೊ ಐತಿ ನೋಡು ಕಾವಿ ನಿನ್ನ ಹಾಸ್ಯ ಪ್ರಸಂಗ.
ಅಂದಂಗ ನಿಮ್ಮ ಪೂರ್ಣ ಹೆಸರು???
ನಿಮ್ಮವ,
ಗಿರೀಶ ರಾಜನಾಳ
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ವೀಣಾ ಅವರು ಹೇಳುವುದು ಸರಿ, ಬೆಂಗಳೂರಲ್ಲಿ ಬೆಂಗಳೂರು ಕನ್ನಡ ಬಿಟ್ಟು ಬೇರೆ ಯಾವ ಕನ್ನಡ ಮಾತಾಡಿದ್ರೂ, ಕೇವಲವಾಗಿ ನೋಡ್ತಾರೆ. ಬೆಂಗಳೂರು ಕನ್ನಡದಂತೆ (ನಾನು ಅರ್ಲಿ ಮಾರ್ನಿಂಗ್ ಎದ್ದ್ ಬಿಟ್ಟು ಫೋರ್ ಒ ಕ್ಲಾಕ್ ಗೆಲ್ಲಾ ಪಾರ್ಕ್ ಗೆ ವಾಕಿಂಗ್ ಹೋಗ್ ಬಂದ್ ಬಿಡ್ತೀನಿ, ನನ್ಗೂನುವೇ, ಬುಡ್ಡ ಖರಾಬಾಗಿದ್ದಾನೆ) ಕನ್ನಡವನ್ನು ಅಪಭ್ರಂಶವಾಗಿಸಿರುವ ಕನ್ನಡ ಬೇರಿಲ್ಲ.
ಯಾರು ಹೇಗೆ ಮಾತಾಡಿದರೂ ನಮ್ಮ ಕನ್ನಡ ನಮಗೆ, ಎಲ್ಲರೂ ಒಂದಾಗಿ ಹೇಳೋಣ " ಸಿರಿಗನ್ನಡಂ ಗೆಲ್ಗೆ"
ಹಾಗಂತ ಹಿಂದಿ ಸಿನೆಮಾಗಳಲ್ಲೂ ಗೋವದ ಹಿಂದಿಯನ್ನು ತಮಾಷೆ ಮಾಡ್ತಾರಲ್ಲ?
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಇದು ಏಟೋ ಪರವಾಗಿಲ್ಲ ಸಾರ್.. ನಾನು ಮಣಿಪಾಲಕ್ಕೆ ಹೋಗಿದ್ದಾಗ ಕರ್ನಾಟಕದಲ್ಲೇ ಇದೀನ ಅನ್ಸಿತ್ತು.? :(
ಅಲ್ಲಿ ಕನ್ನಡವೂ ಇಲ್ಲ..ತುಳುವೂ ಇಲ್ಲ.. ಬೆಂಗ್ಳೂರಲ್ಲಿ ಕನ್ನಡದ ಹಲಗೆ/ಪಲಕಗಳಾದರೂ ಕಾಣಿಸ್ತವೆ. ಮಣಿಪಾಲದಲ್ಲಿ ಅದೂ ಇಲ್ಲ :(
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ನಾನೂ ಮಂಗಳೂರು ಕನ್ನಡ ಮಾತನಾಡುವವನೇ.
ಬೆಂಗಳೂರು- ಮೈಸೂರು ಕಡೆ ಹೋದಾಗ ’ ನೀವು ಮಂಗಳೂರು ಕಡೆಯವ್ರಾ?’ ಅನ್ನುವ ಪ್ರಶ್ನೆಯನ್ನು ಬಿಟ್ಟರೆ ನನಗೆ ಈ ವರೆಗೂ ಯಾವ ಕೆಟ್ಟ ಅನುಭವವೂ ಆಗಿಲ್ಲ. ಯಾರೂ ನನ್ನನ್ನು ಕೇವಲವಾಗಿ ಕಂಡಿಲ್ಲ. ಹಾಸನದಲ್ಲಿ ಎರಡೂವರೆ ವರ್ಷ ಇದ್ದಾಗಲೂ ಒಮ್ಮೆಯೂ ನನಗೆ ಮಂಗಳೂರು ಕನ್ನಡ ಮಾತಾಡಿ ಕಹಿ ಅನುಭವ ಆಗಿಲ್ಲ. ಭಾಷೆಯ ಸಲುವಾಗಿ ಯಾರೂ ಯಾರನ್ನೂ ಕೀಳಾಗಿ ಕಾಣುತ್ತಾರೆಂದು ನನಗನ್ನಿಸುವುದಿಲ್ಲ.
ಹಾಗಾಗಿ ಬಹುಶಃ ಇದು ನಮ್ಮಲ್ಲಿನ ಯಾವುದೋ ರೀತಿಯ ಕೀಳರಿಮೆಯ ಭಾವನೆಯಿಂದ ಹುಟ್ಟಿಕೊಂಡ ಸಮಸ್ಯೆ ಎಂದು ನನಗನ್ನಿಸುತ್ತದೆ.
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಅಯ್ಯೊ ಬಿಡ್ರಿ, ಅದೇನ್ ಮಂಗಳೂರ್, ಬೆಂಗಳೂರ್, ಮೈಸೂರ್ ಕನ್ನಡಾಂತ ಒದ್ದಾಡ್ತೀರ. ಇಲ್ಲಿ ನಾವ್ ಪರದೇಶಿಗಳು, ನಮ್ದು kanglish ಕನ್ನಡ ಆಗಿದೇಂತ ಬಡ್ಕೋತಾ ಬದ್ಕತಿದೀವಿ ;-)
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಬೆಂಗಳೂರ್ ಕನ್ನಡನೂ ಈಗ ಕಂಗ್ಲೀಸೇ ಆಗೇತಿ ಬಿಡ್ರಿ. ಇಲ್ಲಿ ಮಂದಿ ಹುಚ್ಚೆದ್ದು ಇಂಗಲೀಸ್ ಬೆನ್ ಹತ್ಯಾರ, ಹೊರನಾಡ ಕನ್ನಡಿಗರು ಬಂದಾದ್ರು ಬುದ್ದಿ ಹೇಳ್‍ಬೇಕು ಇಲ್ಲಿ ಮಂದಿಗೆ.
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಇದೆಲ್ಲ ಜಗಳ ಬಿಡಿ. ಕನ್ನಡ ತುಳುವಿನ ತುಲನಾತ್ಮಕ ಅಧ್ಯಯನ ಮಾಡಿ. ನಮಗೂ ತಿಳಿಸಿ. ನೀವು ಕಲಿಯಿರಿ.
ಕನ್ನಡದಲ್ಲಿ ತೊಱೆ ತುಳುವಿನಲ್ಲಿ ತುದೆ
ಕನ್ನಡದಲ್ಲಿ ಗುೞಿ ತುಳುವಿನಲ್ಲಿ ಗುರಿ
ಕನ್ನಡದಲ್ಲಿ ಬೇಱ್(ಬೇಱೆ) ತುಳುವಿನಲ್ಲಿ ಬೇತ್
ಕನ್ನಡದಲ್ಲಿ ಅಳೆ(ಮಜ್ಜಿಗೆ) ತುಳುವಿನಲ್ಲಿ ಅಲೆ
ಇತ್ಯಾದಿ ಇತ್ಯಾದಿ. ನಮಗೂ ಕಲಿಸಿ. ನೀವೂ ಕಲಿಯಿರಿ.
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಕನ್ನಡದಲ್ಲೂ ತೊರೆ, ಗುರಿ, ಬೇರು..
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ತೊರೆ ತೊಱೆಯಲ್ಲ ತೊಱೆ=(ಸಣ್ಣ)ನದಿ ಅದು ತುಳುವಿನಲ್ಲಿ ತುದೆ
ಗುರಿ ನಿಜವಾಗಿ ಇಲ್ಲ. ಅದು ಗುಱಿ, ಗುೞಿ=ಗುಂಡಿ ತುಳುವಿನಲ್ಲಿ ಅದು ಗುರಿ=ಗುಂಡಿ, ಗುೞಿ
ಬೇರು ಬೇಱೆ, ಬೇಱ್=ಬೇಱೆ, ಬೇರ್=root. ಬೇರಿಂದ ಬೇಱಾದ ಆಧಾರ ಮರಕ್ಕಿಲ್ಲ ಎಂದಾಗ ಬೇರನ್ನು ಬಿಟ್ಟು ಬೇಱೆ ಆಧಾರ ಮರಕ್ಕಿಲ್ಲ ಎಂಬರ್ಥ. ಈ ಕನ್ನಡದ ಬೇಱ್(ಬೇಱೆ)=ಬೇತ್ ತುಳುವಿನಲ್ಲಿ.
ಉ: ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
ಇದೆಲ್ಲ ಜಗಳ ಬಿಡಿ. ಕನ್ನಡ ತುಳುವಿನ ತುಲನಾತ್ಮಕ ಅಧ್ಯಯನ ಮಾಡಿ. ನಮಗೂ ತಿಳಿಸಿ. ನೀವು ಕಲಿಯಿರಿ.
ಕನ್ನಡದಲ್ಲಿ ತೊಱೆ ತುಳುವಿನಲ್ಲಿ ತುದೆ
ಕನ್ನಡದಲ್ಲಿ ಗುೞಿ ತುಳುವಿನಲ್ಲಿ ಗುರಿ
ಕನ್ನಡದಲ್ಲಿ ಬೇಱ್(ಬೇಱೆ) ತುಳುವಿನಲ್ಲಿ ಬೇತ್
ಕನ್ನಡದಲ್ಲಿ ಅಳೆ(ಮಜ್ಜಿಗೆ) ತುಳುವಿನಲ್ಲಿ ಅಲೆ
ಇತ್ಯಾದಿ ಇತ್ಯಾದಿ. ನಮಗೂ ಕಲಿಸಿ. ನೀವೂ ಕಲಿಯಿರಿ.