ಹಕಲ್ಬೆರಿ ಫಿನ್ - (ಕನ್ನಡಕ್ಕೆ: ಮಂಜುನಾಥ್ ವೆಂ)

HuckleBerry Finn

ಹಕಲ್ಬೆರಿ ಫಿನ್

ಕನ್ನಡಕ್ಕೆ:
ಮಂಜುನಾಥ್ ವೆಂ

00 ಪರಿವಿಡಿ

ಹಕಲ್ ಬೆರಿ ಫಿನ್.
ಮಾರ್ಕ್ ಟ್ವೈನ್.
ಅನುವಾದ ಮಂಜುನಾಥ್. ವೆಂ.

%%%%%%%%%%%%%%%%%%%%%%%%%%%%%%%%%%%%%%%%%%%%%%%%%

೧. ಡಕಾಯಿತರ ತಂಡ ಕಟ್ಟಿದ ಕತೆ.
೨. ಅಪ್ಪನನ್ನು ಮತ್ತೆ ಕಂಡ ಹಕ್.
೩. ಪರಾರಿಯಾದ ಪೋರ.
೪. ಸಾರಾ ಮೇರಿ ಜಾರ್ಜ್ ವಿಲಿಯಮ್ಸ್ ಪೀಟರ್.
೫. ಹಬೆದೋಣಿಯ ಅವಶೇಷಗಳ ಮೇಲೆ.
೬. ಮನೆಗಿರ ಹಿಡಿದ ಜಿಮ್
೭. ಗ್ಯಾಂಗರ್‌ಫ಼ೋರ್ಡ್ ಮನೆತನ.
೮. ರಾಜನೂ, ಪಾಳೆಗಾರನೂ.
೯. ಶೇಕ್ಸ್ ಪಿಯರ್ ನ ಪುನರುಥ್ಥಾನ.
೧೦. ವಿಲಿಯಂ ಮತ್ತು ಹಾರ್ವೇ ಸೋದರರು.
೧೧. ಶವಪೆಟ್ಟಿಗೆಯಲ್ಲಿ ಹಣ.
೧೨. ಜಿಮ್ ಮತ್ತೆ ಬಂಧಿ
೧೩. ಟಾಮ್ ಮತ್ತು ಸಿದ್ ಸಾಯರ್.
೧೪. ಸಂಚಿನ ಸುಳಿ
೧೫. ಜಿಮ್ ನ ಜೀತ ವಿಮುಕ್ತಿ.
೧೬. ಬಯಲಾದ ರಹಸ್ಯ.

0೧. ಢಕಾಯಿತರ ತಂಡ ಕಟ್ಟಿದ ಕತೆ.

೧. ಢಕಾಯಿತರ ತಂಡ ಕಟ್ಟಿದ ಕತೆ.

ನೀವು ನಮ್ಮ ಟಾಮ್ ಸಾಯರ್ ನ ಸಾಹಸಗಳ ಕತೆ ಓದದೇ ಇದ್ದರೆ, ನಾನಾರೆಂದು ನಿಮಗೆ ತಿಳಿದಿರುವುದಿಲ್ಲ. ಹಾಗೆ ತಿಳಿದಿರಬೇಕಾದುದೂ ಏನೂ ಇರಲಿಲ್ಲ ಅಂತಲೇ ಇಟ್ಟುಕೊಳ್ಳಿ. ಆದರೆ, ನನ್ನ ಜೀವನದ ಸಾಹಸಗಳ ಕತೆ ನಿಮಗೆ ಹೇಳುವ ಮುಂಚೆ ನಾನಾರೆಂದು ನಿಮಗೆ ತಿಳಿಸಲೇಬೇಕಲ್ಲ. ನನ್ನ ಹೆಸರು ಹಕಲ್ ಬೆರಿ ಫ಼ಿನ್. ನನಗಾರೂ ಅಣ್ಣ-ತಮ್ಮ, ಅಕ್ಕ-ತಂಗಿಯರಿಲ್ಲ. ಅಷ್ಟೇಕೆ ಅಮ್ಮನೂ ಇಲ್ಲ. ನನ್ನಪ್ಪ ಇದ್ದರೂ, ಅವನು ನನ್ನ ಕಣ್ಣಿಗೆ ಬಿದ್ದು, ಸುಮಾರು ತಿಂಗಳುಗಳೇ ಆಗಿವೆ. ಸದ್ಯಕ್ಕೆ ಅವನು ಕಾಣೆಯಾದಾಗಿನಿಂದ ಇದುವರೆಗೂ ಅವನ ಕಾಟ ನನಗಿಲ್ಲ. ಏಕೆಂದರೆ ಅವನೊಬ್ಬ ಕುಡುಕ. ಸದ್ಯಕ್ಕೆ ನಾನು ಡಗ್ಲಾಸ್ ಆಂಟಿಯ ಮನೆಯಲ್ಲೇ ಇರುವುದು. ಆವಳೊಬ್ಬ ಗಂಡ ಇಲ್ಲದ ಮುದುಕಿ. ಸಾಧು, ಆದರೆ ತುಂಬಾ ಶಿಸ್ತಿನವಳು. ನನ್ನ ಸ್ನೇಹಿತರೆಲ್ಲ ನನ್ನನ್ನು 'ಹಕ್' ಎಂದು ಕರೆಯುತ್ತಾರೆ.

ಈ ಮುದುಕಿಗೊಂದು ಹುಚ್ಚು. ನನ್ನನ್ನು ನಾಗರಿಕನನ್ನಾಗಿ ಮಾಡುವ ಹುಚ್ಚು. ಅದಕ್ಕಾಗಿಯೇ ವಿಪರೀತ ಶಿಸ್ತನ್ನು ನನ್ನ ಮೇಲೆ ಹೇರಿದ್ದಳು. ಒಂದು ದಿನ ಅವಳ ಶಿಸ್ತಿನ ಕಾಟ ತಡೆಯಲಾರದೆ ನಾನು ಅವಳ ಮನೆಯಿಂದ ಓಡಿಹೋದೆ. ಆದರೆ ಕೆಲವೇ ಗಂಟೆಗಳಲ್ಲಿ ಅವಳ ಮನೆಯಲ್ಲಿಯೇ ಇದ್ದೆ, ಅವಳಿಗೂ ಅರಿವಾಗುವುದಕ್ಕೂ ಮುಂಚೆಯೇ. ಏಕೆ? ಏಕೆಂದು ನೀವು ನೀವು ಕೇಳುತ್ತೀರಿ ಎಂದು ನನಗೆ ಚೆನ್ನಾಗಿ ಗೊತ್ತು. ಕಾರಣ ಇಷ್ಟೆ. ನನ್ನ ಸ್ನೇಹಿತ ಟಾಮ್ ಸಾಯರ್, ಆಗಲೇ ಹೇಳಿದೆನಲ್ಲಾ ಅವನು ನನಗೊಂದು ವಿಷಯ ತಿಳಿಸಿದ. ನಾವೆಲ್ಲಾ ಸೇರಿ ಢಕಾಯಿತರ ತಂಡವೊಂದನ್ನು ಕಟ್ಟಿದರೆ ಹೇಗಿರುತ್ತದೆ ಎಂದು. ನಾನೇನೋ ಮನೆ ಬಿಟ್ಟು ಓಡಿಹೋಗಲು ಸಿದ್ದನಾಗಿಯೇ ಇದ್ದೆ. ಆದರೆ ಓಡಿಹೋದರೆ, ಮತ್ತೆ ಟಾಮ್ ನನ್ನನ್ನು ಭೇಟಿಯಾಗುವುದೆಂತು? ನಮ್ಮ ಢಕಾಯಿತರ ತಂಡಕ್ಕೆ ನಾನು ಸೇರುವುದೆಂತು. ಅದಕ್ಕೇ ಮೆಲ್ಲಗೆ ಮುದುಕಿ ಡಗ್ಲಾಸಳ ಮನೆಗೇ ಹಿಂತಿರುಗಿಬಿಟ್ಟೆ. ಅವತ್ತು ಸಾಯಂಕಾಲ ನನ್ನ್ ಮನಸ್ಸಿಗೆ ತುಂಬಾ ಬೇಜಾರಾಗಿತ್ತು. ಶಾಲೆಯಲ್ಲೇನೋ ಗಲಾಟೆ. ಮನೆಗೆಲಸ ಪೂರ್ತಿ ಮಾಡಿಲ್ಲವೆಂದೋ, ಮಗ್ಗಿ ಹೇಳಲಿಲ್ಲವೆಂದೋ, ಮಾಸ್ತರು ನನಗೆ ಬೈದಿದ್ದರು. ಸರಿಯಾಗೇ ಎರಡು ಹೊಡೆತ ಬಿದ್ದಿದ್ದವೆನ್ನಿ. ಅದೇ ಬೇಜಾರಿನಲ್ಲೇ ಮನೆಗೆ ಬಂದರೆ ವಾಟ಼್ನ್ ಆಂಟಿ ಬೈಯ್ಯಬೇಕೆ? ವಾಟ್ಸನ್ ಆಂಟಿ, ಡಗ್ಲಾಸ್ ಮುದುಕಿಯ ತಂಗಿ, ಸದಾ ಸತ್ಯವನ್ನೇ ಹೇಳಬೇಕು, ಒಳ್ಳೆಯ ನಡತೆಯನ್ನೇ ಅನುಸರಿಸಬೇಕು. ಶುಚಿಯಾಗಿರಬೇಕು, ಎಂದು ಏನೇನೋ ಹೇಳಿ ತಲೆ ತಿನ್ನುತ್ತಾಳೆ. ಈ ವಿಷಯಗಳ ಬಗ್ಗೆ ಮಾತನಾಡಲು ಬಾಯಿ ತೆರೆದರೆ, ಬಾಯಿ ಮುಚ್ಚುವ ಪ್ರಶ್ನೆಯೇ ಬರುವುದಿಲ್ಲ. ಅವತ್ತೂ ಅವಳ ಬೈರಿಗೆ ಮಾತನ್ನು ತುಂಬಾ ಹೊತ್ತಿನವರೆಗೆ ಕೇಳಿದೆ. ಬೇಸತ್ತು ಹಸಿಗೆಯ ಮೇಲೆ ಮೌನವಾಗಿ ಮಲಗಿ, ಇರುಳ ದನಿಗಳನ್ನೇ ಆಲಿಸುತ್ತಾ ಏನೋ ಯೋಚಿಸುತ್ತಿದ್ದೆ. ಇರುಳು ನಿಶ್ಯಬ್ದವಾಗಿಯೇ ಇತ್ತು. ಆ ನಿಶ್ಯಬ್ದ ರಾತ್ರಿಯ ಮೌನವನ್ನು ಭೇದಿಸಿ, ನನಗೆ ಕೇಳಿಸಿತು. ಮ್ಯಾಂವ್.... ಮಿಯಾವ್.!!!

ಅದು ಕಂಡಿತಾ ಬೆಕ್ಕಲ್ಲ. ಅದು ಏನೆಂದು ನನಗೆ ಗೊತ್ತಿತ್ತು. ಮತ್ತೆ ದನಿಯನ್ನಾಲಿಸಿದೆ. ನನಗೆ ಅದು ನಮ್ಮ ತೋಟದಿಂದಲೇ ಬರುತ್ತಿರುವುದು ಗೊತ್ತಾಯಿತು. ನಾನೂ ಅದಕ್ಕೆ ಅಷ್ಟೇ ಮೆಲುವಾಗಿ ಮಾರುತ್ತರ ಕೊಟ್ಟು, ಬಟ್ಟೆ ತೊಟ್ಟು, ಕಿಟಕಿಯಿಂದ ಹಾರಿ ಕೊಟ್ಟಿಗೆಯ ಮಾಡಿನ ಮೇಲೆ ಸದ್ದಾಗದಂತೆ ನಡೆದು, ತೋಟದ ಹುಲ್ಲಿನ ಮೇಲೆ ನೆಗೆದೆ. ತೋಟದಲ್ಲಿ ನನಗಾಗಿ ಟಾಮ್ ಸಾಯರ್ ಕಾಯುತ್ತಿರುತ್ತಾನೆಂದು ನನಗೆ ಗೊತ್ತಿತ್ತು.

ಹುಲ್ಲಿನ ಮೇಲೆ, ಚೂರೂ ಸದ್ದಾಗದಂತೆ, ಮನೆಯ ಹಿಂಭಾಗಕ್ಕೆ ನಡೆದು ಹೋಗುತ್ತಿರಬೇಕಾದರೆ, ಅಡಿಗೆಯ ಮನೆಯ ಕಿಟಕಿ ಹಾಯುವಾಗ ನೆಲದ ಮೇಲೆ ಹರಡಿಕೊಂಡಿದ್ದ ಮರದ ಬೇರೊಂದನ್ನು ಎಡವಿ ಬಿದ್ದುಬಿಟ್ಟೆ. ಸದ್ದೂ ಜೋರಾಗಿಯೇ ಅಯಿತೆನ್ನಿ. ಹೆಬ್ಬಾಗಿಲ ಬಳಿ ಮಲಗಿದ್ದ, ಕಾವಲು ಕಾಯುವ, ಡಗ್ಲಾಸಳ ನೀಗ್ರೋ ಗುಲಾಮ ಜಿಮ್‍ಗೆ ಆ ಸದ್ದಿಗೆ ಎಚ್ಚರಾಗಿಬಿಟ್ಟಿತು. ಅವನು ಎದ್ದು ನಿಂತು ಕತ್ತಲೆಯಲ್ಲೇ ಇಣುಕುತ್ತಾ "ಯಾರಲ್ಲಿ?" ಎಂದ. ನಾವು ಮೆಲ್ಲಗೆ ಪೊದೆಗಳೊಳಗೆ ನುಸುಳಿ ಸದ್ದಿಲ್ಲದಂತೆ ಕೂತೆವು. ಜಿಮ್ ಸ್ವಭಾವತಃ ಧೈರ್ಯಶಾಲಿ. ದೆವ್ವ ಭೂತ ಇತ್ಯಾದಿ ಅಲೌಕಿಕ ಶಕ್ತಿಗಳನ್ನು ಬಿಟ್ಟರೆ, ಬೇರೇನಕ್ಕೂ ಅವನು ಹೆದರುತ್ತಿದ್ದಿಲ್ಲ. ಅವನು ಸದ್ದು ಏನೆಂದು ಪರೀಕ್ಷಿಸಿಯೇ ಬಿಡೋಣವೆಂದು ಎದ್ದು ನಾವು ಅಡಗಿದ್ಧಲ್ಲಿಗೆ ನಡೆದು ಬಂದುಬಿಟ್ಟ.

"ಯಾರೋ ಅದು? ಏನ್ರೋ ಅದು?" ಎಂದ.

ಅವನ ಪ್ರಶ್ನೆಗೆ ಮೌನವೇ ಉತ್ತರವಾಯಿತು. ನಾವು ಅಡಗಿದ್ದ ಜಾಗದಿಂದ ಅವನು ಕಾಣುತ್ತಿದ್ದರೂ, ಅವನಿಗೆ ನಾವು ಕಂಡಿರಲಿಲ್ಲ. ಮತ್ತೆ ಅವನು ಪ್ರಶ್ನಿಸಿದಾಗಲೂ ಅವನಿಗೆ ಮೌನವೇ ಉತ್ತರವಾಯಿತು. ಅವನಿಗೇನಾಯಿತೋ " ಸರಿ, ಮತ್ತೆ ಆ ಸದ್ದು ಕೇಳೋವರೆಗೂ ನಾನಿಲ್ಲೇ ಕೂತುಕೋತೀನಿ" ಎಂದು ಅಲ್ಲೇ ಕುಳಿತುಬಿಟ್ಟ, ಸರಿಯಾಗಿ ನಾನಿದ್ದ ಪೊದೆಗೂ, ಟಾಮ್ ಇದ್ದ ಪೊದೆಗೂ ಮಧ್ಯೆ. ನಾವು ಮತ್ತಷ್ಟು ಬಿಗಿಯಾಗಿ ಉಸಿರೂ ಆಡದಂತೆ ಕುಳಿತುಬಿಟ್ಟೆವು.

ಎಷ್ಟು ಹೊತ್ತು ಹಾಗೆ ಅಲುಗಾಡದೆ, ಶಬ್ದ ಕೂಡಾ ಕೇಳದಂತೆ ಉಸಿರಾಡಿಕೊಂಡಿರಲು ಸಾಧ್ಯ? ಆ ಯಮಸಾಹಸವನ್ನು ಮಾಡುತ್ತಿದ್ದಾಗಲೇ ಶುರುವಾಯಿತು ನೋಡಿ ಕಡಿತ, ಮೂಗಿನಲ್ಲಿ. ಮೆಲ್ಲಗೆ ಕೆರೆದೆ. ಮೂಗಿನಲ್ಲಿ ನಿಂತ ಕಡಿತ, ಕಿವಿಯಲ್ಲಿ ಶುರುವಾಯಿತು, ಅಲ್ಲಿಂದ ಕುತ್ತಿಗೆಗೆ ಹಬ್ಬಿ, ಹೊಟ್ಟೆ, ಬೆನ್ನಿಗೆ ಇಳಿದು, ಸರ್ವತನುಮಯವಾಯಿತು. ಅದೃಷ್ಟದಾಟ ಎನ್ನುವುದು ಇದನ್ನೇ ಏನೋ? ಈ ಕಡಿತ ತಾಳಲಸಾದ್ಯವಾಗಿ ಇನ್ನೇನು ಸಿಕ್ಕಿ ಬೀಳುತ್ತೇವೆಂದು ಯೋಚಿಸುವುದರಲ್ಲಿ 'ಜಿಮ್' ಕುಳಿತಲ್ಲಿಯೇ ಗೊರಕೆ ಹೊಡೆಯಲು ಶುರು ಮಾಡಿದ್ದ! ಪಾಪ ಬೆಳಿಗಿನಿಂದ ದುಡಿದು ದಣಿದ ದೇಹವಲ್ಲವೇ? ಅಲ್ಲಿಂದ ಓಡಿ ದೂರ ಹೋಗಲು ಎದ್ದಾಗ, ಟಾಮ್ " ಈ ಜಿಮ್‍ಗೇನಾದರೂ ಆಟ ಕಟ್ಟಿದರೆ ಬೆಳಿಗ್ಗೆಗೆ ಒಳ್ಳೆ ಮಜಾ ಬರುತ್ತಲ್ಲೇನೋ?" ಅಂದ. ಸರಿ ಏನು ಮಾಡುವುದು? ಜಿಮ್ ಒರಗಿ ಕುಳಿತಿದ್ದ ಮರಕ್ಕೇ ಅವನನ್ನು ಬಿಗಿದು ಕಟ್ಟಿಬಿಟ್ಟರೆ? ಆ ಪ್ರಯತ್ನದಲ್ಲಿ ಅವನಿಗೇನಾದರೂ ಎಚ್ಚರವಾದರೆ ನಮ್ಮ ಕತೆ ಮುಗಿದಂತೆಯೇ. ಅದಕ್ಕೆ ಆ ಪ್ರಾತ್ನವನ್ನು ಕೈಬಿಟ್ಟು, ಅವನ ಟೋಪಿಯನ್ನು ಅದೇ ಮರದ ಮೇಲಿನ ಕೊಂಬೆಯ ತುದಿಗೆ ತಗುಲಿಸಿ, ಅಲ್ಲಿಂದ ಜಾಗ ಬಿಟ್ಟೆವು.

ಅಲ್ಲಿಂದ ಹಳ್ಳಿಗ್ ಬಂದು, ಅಲ್ಲಿ ಕಾಯುತ್ತಿದ್ದ ಉಳಿದ ಹುಡುಗರನ್ನು ಸೇರಿಸಿಕೊಂಡು, ನದಿಯಲ್ಲಿ ತೆಪ್ಪವನ್ನೇರಿ ಹುಟ್ಟು ಹಾಕುತ್ತಾ, ಎರಡು ಮೈಲುಗಳ ದೂರದಲ್ಲಿ, ದಟ್ಟ ಪೊದೆಗಳಿಂದೊಡಗೂಡಿದ ದಡದ ಬಳಿ ಇಳಿದೆವು. ಅಲ್ಲಿ ಇಳಿಯುತ್ತಿದ್ದಂತೆಯೇ ತಾಮ್ ಎಲ್ಲರೂ ಆ ಜಾಗವನ್ನು ರಹಸ್ಯವಾಗಿಡಬೇಕೆಂದು ಪ್ರತಿಙ್ನೆ ಮಾಡಿಸಿಕೊಂಡ. ತೆಪ್ಪವನ್ನು ದಡದಲ್ಲಿದ್ದ ಮರವೊಂದಕ್ಕೆ ಕಟ್ಟಿ ಪೊದೆಗಳಲ್ಲಿ ನುಗ್ಗಿ ಬಂದಾಗ ಕಂಡಿತು, ದೊಡ್ಡದೊಂದು ಗವಿಯ ದ್ವಾರ. ಆ ವವಿಯಲ್ಲಿಯೇ ನಮ್ಮ ಡಕಾಯಿತರ ತಂಡದ ಮೊದಲನೆಯ ಸಭೆ. ಊರಿಂದ ನಾವು ತಂದಿದ್ದ ಮೇಣದ ಬತ್ತಿಗಳನ್ನು ಬೆಳಗಿ ಆ ಜಾಗೆಯನ್ನು ಬೆಳಕು ಮಾಡಿಕೊಂಡೆವು.

ನಮ್ಮೀ ಸಭೆಯ ಅಲಿಖಿತ ಅವಿರೋಧ ನಾಯಕನಾದ ಟಾಮ್ ಅದೇ ಅಧಿಕಾರವಾಣಿಯಲ್ಲಿ ಬಿತ್ತರಿಸಿದ.

" ಸ್ನೇಹಿತರೇ,"

ಎಲ್ಲರೂ ಟಾಮ್ ಎನು ಹೇಳುತ್ತಾನೋ ಎಂದು ಕಿವಿಗಣ್ಣಾದರು.

" ಈ ದಿನ ನಾವು ಈ ಢಕಾಯಿತರ ತಂಡ ಕಟ್ಟುತ್ತಿದ್ದೇವೆ. ಈ ತಂಡಕ್ಕೆ ಸದಸ್ಯನಾಗಲು ಇಚ್ಚಿಸುವವರು, ಪ್ರಮಾಣ ಮಾಡಿ ರಕ್ತದಲ್ಲಿ ತಮ್ಮ ರುಜು ಹಾಕಬೇಕು."

ಅಲ್ಲಿದ್ದವರೆಲ್ಲಾ ಸದಸ್ಯರಾಗಲು ಬಂದವರು ತಾನೇ? ಯಾರೂ ಕಮಕ್ ಕಿಮಕ್ ಎನ್ನಲಿಲ್ಲ. ಟಾಮ್ ಜೇಬಿಗೆ ಕೈಹಾಕಿ ಅಲ್ಲಿಂದ ಹಾಳೆಯೊಂದನ್ನು ತೆಗೆದು, ಅದರಲ್ಲಿದ್ದ ಪ್ರಮಾಣ ವಚನವನ್ನು ಓದಿದ.ಅದು ಪೂರ್ಣ ವಾಗಿ ನನಗೆ ನೆನಪಿನಲ್ಲಿಲ್ಲದಿದ್ದರೂ, ಸ್ಥೂಲವಾಗಿ, "ಎಲ್ಲರೂ ತಂಡಕ್ಕೆ ನಿಷ್ಟರಾಗಿದ್ದು, ತಂಡದ ರಹಸ್ಯಗಳನ್ನು ಕಾಪಾಡಿಕೊಳ್ಳಬೇಕೆಂದೂ, ತಂಡದ ಸದಸ್ಯರಿಗೇನಾದರೂ ಅಪಾಯವಾದರೆ, ಆ ಅಪಾಯಕ್ಕೆ ಕಾರಣವಾದವನನ್ನೂ ಅವನ ಕುಟುಂಬವನ್ನೂ ಕೊಂದು, ಅವರ ಎದೆಯ ಮೇಲೊಂದು ಶಿಲುಬೆಯ ಗುರುತನ್ನು ಚಾಕುವಿನಿಂದ ಮಾಡಬೇಕೆಂದೂ, ತಂಡದ ಸದಸ್ಯರೇನಾದರೂ ತಂಡದ ರಹಸ್ಯಗಳನ್ನು ಹೊರಜಗತ್ತಿಗೆ ಬಾಯಿಬಿಟ್ಟರೆ, ಅವರ ಗಂಟಲು ಸೀಳಿ ಕೊಲ್ಲಬೇಕೆಂದೂ, ಶವವನ್ನು ಸುಟ್ಟು, ಬೂದಿಯನ್ನು ಚೆಲ್ಲಿಬಿಡಬೇಕೆಂದೂ, ರಕ್ತ-ರುಜುವಿನಿಂದ ಅವನ ಹೆಸರನ್ನು ಹೊಡೆದು ಹಾಕಿ ಅವನನ್ನು ಮತ್ತೆಂದೂ ನೆನಸಿಕೊಳ್ಳದಿರುವುದೆಂದೂ" ತಿಳಿಸುತ್ತಿತ್ತು.

ಹುಡುಗರಿಗೆಲ್ಲಾ ಈ ಪ್ರಮಾಣವಚನ ತುಂಬಾ ಇಷ್ಟವಾಯಿತು. ಆದರೂ ಅದನ್ನು ಇನ್ನೂ ಉತ್ತಮ ಪಡಿಸಲು ಸಲಹೆಗಳು ಬಂದವು. ಅದರಲ್ಲೊಂದು ಅಮೂಲ್ಯ ಸಲಹೆಯೆಂದರೆ, "ತಂಡಕ್ಕೆ ನಿಷ್ಠನಾಗಿರದ ಸದಸ್ಯನ ಕುಟುಂಬವನ್ನೂ ಕೊಲ್ಲುವ' ಸಲಹೆ. ಟಾಮ್‍ಗೆ ಈ ಸಲಹೆ ತುಂಬಾ ಹಿಡಿಸಿತಾದರೂ ನನ್ನಿಂದಾಗಿ "ಧರ್ಮಸೂಕ್ಷ್ಮ" ತಲೆದೋರಿತು. ಏಕೆಂದರೆ ನನಗೆ ಕುಟುಂಬವೇ ಇರಲಿಲ್ಲ! ಇದ್ದೊಬ್ಬ ಅಪ್ಪನೂ ಸುಮಾರು ಒಂದು ಒಂದೂವರೆ ವರ್ಷಗಳಿಂದ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಕಡೆಗೆ ನನ್ನನ್ನು ನೋಡಿಕೊಳ್ಳುತ್ತಿರುವ ಡಗ್ಲಾಸ್ ಆಂಟಿಯನ್ನೇ ಕೊಲ್ಲಬಹುದೆಂದೂ, ಅವಳನ್ನು ಕೊಲ್ಲಲು ಸಾಧ್ಯವಿರುವುದರಿಂದ ನಾನು ತಂಡಕ್ಕೆ ಸೇರಬಹುದೆಂದೂ ತೀರ್ಮಾನವಾಯಿತು.

'ತಂಡದ ರೂಪು-ರೇಷೆಗಳೇನು? ತಂಡದ ಕಾರ್ಯ ವಿಧಾನ ಯಾವುದು?" ಇಲ್ಲಿಯವರೆಗೂ ಯಾರೂ ತಲೆ ಕೆಡಿಸಿಕೊಂಡಿರದ ಈ ಪ್ರಶ್ನೆ ಬೆನ್‍ರೋಗರನ ತಲೆಯಲ್ಲಿ ಕುಣಿದು ಬಾಯಲ್ಲಿ ಬಂದೇ ಬಿಟ್ಟಿತು. ಅಷ್ಟೇ ಸರಳವಾಗಿ "ಏನೂ ಇಲ್ಲ, ಬರೀ ಕೊಲೆ ಮತ್ತು ಸುಲಿಗೆ: ಎಂದು ಬಿಟ್ಟ ಟಾಮ್.
"ಸುಲಿಗೆ!! ಸುಲಿಗೆ ಮಾಡುವುದಾದರೂ ಏನನ್ನು? ಜನ-ಮನೆ-ದನ"

' ಛೇ! ಛೇ!! ದನಗಳನ್ನು ಲೂಟಿ ಮಾಡುವುದೇ, ನಾವು ಯಕಃಶ್ಚಿತ್ ಕಳ್ಳರಲ್ಲ. ನಮ್ಮದು ಢಕಾಯಿತಿ. ಮುಖವಾಡ ಧರಿಸಿ, ಹೆದ್ದರಿಯಲ್ಲಿ ಬರುವ ಗಾಡಿಗಳನ್ನು ನಿಲ್ಲಿಸಿ, ಜನಗಳನ್ನು ಕೊಂದು, ಒಡವೆ, ವಸ್ತು, ಉಡುಗೆ-ತೊಡುಗೆಗಳನ್ನು ಕೊಳ್ಳೆ ಹೊಡೆಯುವುದು"

"ಓಹೋ, ಸರಿ ಮತ್ತೆ"

"ಎಲ್ಲಾ ಸರಿ, ನಾವು ಯಾವಾಗಲೂ ಜನಗಳನ್ನು ಕೊಲ್ಲಬೇಕೋ?"

'ಅಲ್ಲವೇ ಮತ್ತೆ, ಹಾಗೆ ಮಾಡಿದರೇ ತಾನೇ ನಮಗೆ ಹೆಸರು ಬರುವುದು."

"ಒತ್ತೆಯಾಳಾಗಿಟ್ಟುಕೊಂಡರೆ?"

"ಅದೂ ಒಳ್ಳೆಯದೇ"

"ಹೌದು, ಒತ್ತೆಯಾಳಾಗಿಟ್ಟುಕೊಳ್ಳುವುದು ಅಂದರೆ...?"

"ಹ.. ಹ... ನನಗೂ ಸರಿಯಾಗಿ ತಿಳಿಯದು. ದೊಡ್ಡ ದೊಡ್ಡ ಢಕಾಯಿತರ ತಂಡಗಳು ಜನರನ್ನು ಒತ್ತೆಯಾಳಾಗಿಟ್ಟುಕೊಳ್ಳುತ್ತಾರಂತೆ."

"ಹಾಗೆಂದರೇನೆಂದು ಗೊತ್ತಿಲ್ಲದೇ ಹೇಗೆ ಒತ್ತೆಯಾಳಗಿಟ್ಟುಕೊಳ್ಳುವುದು?"

"ಅಯ್ಯೋ... ನಾನೂ ಪುಸ್ತಕದಲ್ಲಿ ಓದಿದ್ದೇ. ಹಾಗೆಂದರೆ ಅವರ ಜೀವ ಹೋಗುವವರೆಗೂ ನಮ್ಮ ಸೆರೆಯಲ್ಲಿಟ್ಟುಕೊಳ್ಳುವುದಿರಬೇಕು"

"ಓ ಹಾಗೋ... ಸರಿ.. ಸರಿ..."

ಅಲ್ಲಿಗೆ ನಮ್ಮ ತಂಡದ ಸಭೆ ಬರಖಾಸ್ತಾಗಲು ಬಂತು.

ಮತ್ತೊಂದು ದಿನ ಸಭೆ ಸೇರಿ ಮುಂದಿನ ರೂಪು-ರ್‍ಏಷೆಗಳನ್ನು ನಿರ್ಧರಿಸುವುದೆಂದೂ, ಈಗ ಮನೆಗೆ ಹೊರಡುವುದೆಂದೂ ನಿರ್ಧರಿಸಿ, ಹೊರಟೇ ಬಿಟ್ಟೆವು.

ಮನೆ ತಲುಪಿದಾಗ ನನಗೆ ತುಂಬಾ ಆಯಾಸವಾಗಿತ್ತು, ಮತ್ತು ಪ್ರಯಾಣದಿಂದ ಬಟ್ಟೆಯೂ ಕೊಳಕಾಗಿತ್ತು. ಬೆಳಿಗ್ಗೆ ನನಗೆ ಡಗ್ಲಾಸ್ ಮತ್ತು ವಾಟ್ಸನ್ ಆಂಟಿಗಳಿಬ್ಬರೂ ಬೈದರು. ಏಕೋ ಗೊತ್ತಿಲ್ಲ. ಜಿಮ್ ರಾತ್ರಿ ಯಾವುದೋ ಪಿಶಾಚಿ ಮನೆಯ ಸುತ್ತಾ ಸುತ್ತಿದೆ ಎಂದು ಹೇಳೀ ಬೈಸಿಕೊಂಡಿದ್ದ. ನಮ್ಮ ತಂಡ ಮುಂದಿನ ತಿಂಗಳಲ್ಲಿ ಮತ್ತೆ ಮೂರ್‍ನಾಲ್ಕು ಬಾರಿ ಸಭೆ ಸೇರಿತು. ನಮ್ಮ ಚಟುವಟಿಕೆ ಬರೀ ಸಭೆ ಸೇರುವಷ್ಟಕ್ಕೆ ಮಾತ್ರ ಸೀಮಿತವಾಗಿತ್ತು. ನಾವು ಯಾರನ್ನೂ ಕೊಲ್ಲಲೂ ಇಲ್ಲ. ದೋಚಲೂ ಇಲ್ಲ. ತಿಂಗಳು ಕಳೆದ ಮೇಲೆ ನಾನು ತಂಡವನ್ನು ಬಿಟ್ಟುಬಿಟ್ಟೆ. ಹಾಗೇ ಎಲ್ಲರೂ ಬಿಟ್ಟರು. ನಮ್ಮ ಈ ಢಕಾಯಿತರ ತಂಡ 'ಟಾಮ್ ಸಾಯರ್‍ಸ್ ಗ್ಯಾಂಗ್" ಹೀಗೆ ನಿಂತು ಹೋಯಿತು.

0೨. ಅಪ್ಪನನ್ನು ಮತ್ತೆ ಕಂಡ ಹಕ್.

ಹಾಗೇ ಮೂರ್‍ನಾಲ್ಕು ತಿಂಗಳು ಕಳೆಯಿತು. ಹಿಮ ಸುರಿದು, ಚಳಿ ಹೆಚ್ಚಿ ಶರದೃತು ಬಂತು. ಶಾಳೆಗೆ ಹೋಗುವುದು ನನಗೀಗ ಒಂಥರಾ ಒಗ್ಗಿಕೊಂಡಿತ್ತು ಅನಿಸುತ್ತದೆ. ಮೊದಮೊದಮೊದಲು ಶಾಲೆಗೆ ಹೋಗುವುದೆಂದರೆ ನನಗಾಗುತ್ತಲೇ ಇರಲಿಲ್ಲ. ನನ್ನಪ್ಪನೂ ಶಾಲೆಗಳ ಬಗ್ಗೆ ಗೌರವವನ್ನೇನೂ ಇಟ್ಟುಕೊಂಡಿರಲಿಲ್ಲ., ಹಾಗೂ ನಾನು ಹೆಚ್ಚು ಕಲಿಯುವುದನ್ನೂ ಅವನು ಇಷ್ಟಪಟ್ಟಿರಲಿಲ್ಲ. ಆದರೆ ಬಹುದಿನಗಳಿಂದ ಅವನು ಕಂಡಿರಲಿಲ್ಲವೆಂದು ನಿಮಗಾಗಲೇ ಹೇಳಿದ್ದೆನಲ್ಲಾ, ಸುಮ್ಮನೆ ಕುಳಿತು ಕಾಲ ಕಳೆಯುತ್ತಾ, ನಮ್ಮಪ್ಪನಿಂದ ಏಟು ತಿನ್ನುವುದಕ್ಕಿಂತಲೂ, ಶಾಲೆಗೆ ಹೋಗಿ ಪಾಠ ಕ್ಲಿಯುವುದರಲ್ಲಿ ಸುಖವಿದೆ ಎಂದು ನನಗೀಗ ಅನಿಸತೊಡಗಿತ್ತು.

ಅದೊಂದು ದಿನ, ತಿಂಡಿ ತಿನ್ನಲು ಕುಳಿತಿರುವಾಗ, ಉಪ್ಪಿನ ಕುಡಿಕೆಗೆ ಕೈ ತಾಗಿ ಉಪ್ಪು ಚೆಲ್ಲಿಬಿಟ್ಟಿತು. ನಮ್ಮ ಕಡೆ ಉಪ್ಪು ಚೆಲ್ಲಿದರೆ ಅದೊಂದು ಅಪಶಕುನ. ಕಷ್ಟದ ದಿನಗಳು ಬರುತ್ತವೆಂಬುದರ ಮುನ್ಸೂಚನೆ. ಅದಕ್ಕೆ ತಕ್ಷಣ ಉಪ್ಪನ್ನು ಭುಜದ ಹಿಂದಕ್ಕೆ ಹಾರಿಸಿಬಿಡಬೇಕಂತೆ. ನಾನು ಹಾಗೆ ಮಾಡಲು ಹೋದಾಗ, ವಾಟ್ಸನ್ ಆಂಟಿ, ತಡೆದು ಬೈದುಬಿಟ್ಟಳು. ಇದರಿಂದಾಗಿ ನನಗೆ ಕಂಡಿತಾ ಕಷ್ಟಕಾಲ ಪ್ರಾಪ್ತಿಯಾಗುತ್ತದೆಂದು ಖಚಿತವಾಯಿತು. ಈಗಂತೂ ಹಿಮ ಸುರಿತ ವಿಪರೀತ ದಟ್ಟವಾಗಿತ್ತು. ಅದೇ ಯೋಚನೆಯಲ್ಲಿ ಮನೆಯಿಂದ ಹೊರಬಂದು, ತೋಟ ಹಾಯ್ದು, ಬೇಲಿ ಹಾರಿದಾಗ ಕಣ್ಣಿಗೆ ಬಿತ್ತೊಂದು ಹೆಜ್ಜೆ ಗುರುತು. ಅದನ್ನೇ ನಿಡಿದಾಗಿ ದಿಟ್ಟಿಸಿದಾಗ ಕಂಡಿದ್ದು.......

ಎಡಗಾಲಿನ ಬೂಟಿನಲ್ಲಿ ಎರಡು ಅಡ್ಡ ಮೊಳೆ ಹೊಡೆದು ಶಿಲುಬೆಯಾಕಾರದ ಗುರುತಾಗುವಂತೆ ಮಾಡಿದ್ದು, ಅದು ನಿಚ್ಚಳವಾಗಿ ಹಿಮದಲ್ಲಿ ಗುರುತು ಮೂಡಿಸಿತ್ತು. ಆ ರೀತಿಯ ಬೂಟುಗಳನ್ನು ಧರಿಸುವವರಾರೆಂದೂ ನನಗೆ ಚೆನ್ನಾಗಿ ತಿಳಿದಿತ್ತು..... ಅದು ನನ್ನಪ್ಪ.

ಕೂಡಲೇ ಮಲೆಯಿಳಿದು, ಕೆಳಗಿನ ಬೀಡಿನಲ್ಲಿರುವ, ನ್ಯಾಯಾಧೀಶ ಥ್ಯಾಚರ್ ರವರ ಮನೆಯವರೆಗೂ ನಿಲ್ಲದೆ ಓಡಿದೆ. ಟಾಮ್ ಜೊತೆ, ಯಾರೋ ಢಕಾಯಿತಿ ತಂಡದವರು ಗುಹೆಯೊಂದರಲ್ಲಿ, ಮುಚ್ಚಿಟ್ಟಿದ್ದ ಆರು ಸಾವಿರ ಡಾಲರ್‌ಗಳನ್ನು, ಕಂಡು ಹಿಡಿದು ನ್ಯಾಯಾಧೀಶ ಥ್ಯಾಚರ್‌ರವರಿಗೆ ಕೊಟ್ಟಾಗ, ಅವರು ಈ ಹಣವನ್ನು ನಮಗಾಗಿ ಬ್ಯಾಂಕಿನಲ್ಲಿಡುವ ವ್ಯವಸ್ಥೆ ಮಾಡಿದ್ದರು. ನಮಗೆ ಬೇಕಾದಾಗ ಖರ್ಚಿಗೆಂದು ಹಣವನ್ನೂ ಕೊಡುತ್ತಿದ್ದರು. ಒಳ್ಳೆಯ ಹೃದಯದ ಥ್ಯಾಚರ್ ನ್ಮಗೆ ಆಪ್ತಮಿತ್ರನಂತಿದ್ದರು.
http://localhost/
ಬಾಗಿಲಿನಲ್ಲೇ ಕುಳಿತಿದ್ದ ಥ್ಯಾಚರ್ ನನ್ನನ್ನು ನೋಡಿ "ಏನೋ ಹಕ್? ಇಷ್ಟು ದೂರ... ದುಡ್ಡೇನಾದರೂ ಬೇಕೇನೋ?" ಎಂದರು.

"ಬೇಡ, ಬೇಡ... ನನಗೇನೂ ಹಣ ಬೇಡ, ಸಾರ್, ಅದೆಲ್ಲವನ್ನೂ ನೀವೆ ಇಟ್ಟುಕೊಂಡು ಬಿಡಿ."
"ಏನು...?!"
"ಸಾರ್.., ನನ್ನನ್ನೇನೂ ಕೇಳಬೇಡಿ, ಆದರೆ ದಯವಿಟ್ಟು ದುಡ್ಡನ್ನೆಲ್ಲಾ ತಗೊಂಡುಬಿಡಿ.... ತಗೋತೀರಲ್ಲವಾ....?"

ಒಂದು ನಿಮಿಷ ಯೊಚಿಸಿದ ಅವರಿಗೆ ಏನೆನ್ನಿಸಿತೋ, 'ಒಂದು ನಿಮಿಷ ಇರು' ಎಂದವರೇ ಒಳಗೆ ಹೋಗಿ ಏನೋ ಬರೆದ ಹಾಳೆಯೊಂದನ್ನು ತಂದು ನನಗೆ ತೋರಿಸಿದರು. ಅದು ನನಗೇನೂ ಅರ್ಥವಾಗಲಿಲ್ಲ. ಓದಿದರೇ ತಾನೇ ಅರ್ಥವಾಗುವುದು.., ನನಗೆ ಸರಿಯಾಗಿ ಒದಲೂ ಬರುವುದಿಲ್ಲವಲ್ಲ..! ಆ ಹಾಳೆಯ ಕೆಳಗೆ ಅವರು ಕೈ ತೋರಿದ ಜಾಗದಲ್ಲಿ ಸಹಿ ಮಾಡಿದೆ.(ನಾನು ಸಹಿ ಮಾಡುವುದನ್ನು ಕಲಿತಿದ್ದೆ).

"ನೋಡಪ್ಪ, ಈಗ ನಿನ್ನ ದುಡ್ಡೆಲ್ಲಾ ನನ್ನದು, ಸದ್ಯಕ್ಕಂತೂ ನನ್ನದೇ" ಎಂದು ಮುಗುಳ್ನಕ್ಕರು. ನಾನು ಅವರಿಗೆ ಕೃತಙ್ಞತೆಗಳನ್ನು ಹೇಳಿ ಅಲ್ಲಿಂದ ಮನೆಗೆ ಬಂದೆ. ಬಹಳ ದಿನಗಳಿಂದ ಕಾಣೆಯಾಗಿದ್ದ ಅಪ್ಪನ ಬಗ್ಗೆ ತಿಳಿಯಲು ಮನಸ್ಸು ಕಾತುರಗೊಂಡಿತ್ತು. ಸಂತಸದಿಂದೇನೂ ಅಲ್ಲ. ಮನೆಯ ಕೆಲಸದಾಳು ಜಿಮ್‍ಗೇನಾದರೂ ಗೊತ್ತಿರಬಹುದೆಂದು ಅವನ್ನು ವಿಚಾರಿಸಿದರೂ ಅದರಿಂದೇನೂ ಪ್ರಯೋಜನವಾಗಲಿಲ್ಲ.

ಒಟ್ಟಿನಲ್ಲಿ ಹಗಲೆಲ್ಲ ಅಪ್ಪನ್ ವಿಷಯ ಅರಿಯಲು ಅಲೆದೂ, ಅಲೆದೂ ಸುಸ್ತಾಗಿ ಮನೆಗೆ ಹೋಗಿ, ದೀಪ ಹಚ್ಚಿದರೆ, ಅಲ್ಲಿ ನನ್ನ ಕೊಠಡಿಯಲ್ಲೇ, ನನ್ನ ಕುರ್ಚಿಯ ಮೇಲೇ ಕೂತಿದ್ದ ನನ್ನಪ್ಪ. ನಾನು ಬೆಚ್ಚಿಬಿದ್ದೆ. ನನ್ನಪ್ಪನನ್ನು ಕಂಡರೆ ನನಗೇನೋ ಹೆದರಿಕೆ, ಹೆದರಿಕೆ ಅಂತಲ್ಲ. ನಮ್ಮಪ್ಪ ಹೊಡೆಯುವ ಏಟಿಗೆ ನೀವೂ ಹೆದರಲೇಬೇಕು. ಆದರೆ ನಾನು ಏಟು ತಿಂದೂ, ತಿಂದೂ, ನನಗೀಗ ಒಂಥರಾ ಮೊಂಡು ಧೈರ್ಯ. ಈಗ ನಮ್ಮಪ್ಪನಿಗೆ ಐವತ್ತು ವರುಷಗಳ ಆಸುಪಾಸು ಇರಬೇಕು. ನೋಡಿದರೆ ಅದು ತಿಳಿಯುತ್ತಲೂ ಇತ್ತು. ಉದ್ದನೆಯ ಎಣ್ಣೆ ಕಾಣದ ಕೂದಲು, ಬೆಳ್ಳನೆಯ ಮುಖ, ಬೆಳ್ಳನೆಯ ಮುಖವೆಂದರೆ, ನಾವು ಬಿಳಿಅಯ್ ಮನುಷ್ಯರ ಬಿಳೀ ಮುಖವಲ್ಲ. ಎನೋ ಒಂದು ಥರಾ ಖಾಯಿಲೆಯಿಂದ ಮುಖ ಬಿಳಿಚಿಕೊಳ್ಳುತ್ತದಲ್ಲಾ, ಹಾಗೆ. ಭಾವನೆಗಳಿಲ್ಲದ ನಿರ್ಭಾವ ಬಿಳುಚು ಮುಖ. ಎನ್ನಬಹುದು. ಚಿಂದಿಯಾದ ಬಟ್ಟೆಗಳು, ನಾನು ಅಲ್ಲೇ ನಿಂತು ನಮ್ಮಪ್ಪನನ್ನೇ ದಿಟ್ಟಿಸಿ ನೋಡಿದೆ. ಅವನೂ ಒಂದೆರಡು ಕ್ಷಣ ಹಾಗೇ ದಿಟ್ಟಿಸಿದ. ಕಡೆಗೊಮ್ಮೆ ಮೌನ ಮುರಿದು ಅವನೇ ಮತಾಡಿದ. " ಹೊಸ ಬಟ್ಟೆಗಳು.... ಹೂ.. ಏನೋ ನಿಮ್ಮಪ್ಪ ಊರ ಸಾಹುಕಾರ ಅನ್ಕೊಂಡಿದಿಯೇನು? ಈ ಥರಾ ಬಟ್ಟೆಗಳು ಹಾಕ್ಕೊಂಡು ಮೆರೆಯೋಕೆ?"

ನಾನೇನೂ ಮಾತಾಡಲಿಲ್ಲ.
"ಹೇ, ಹೇ,... ನನಗ್ಗೊತ್ತೋ, ನೀನು ಶಾಲೆಗೆ ಹೋಗಿ ಓದು ಬರೆಹ ಕಲಿತು ನನ್ಗಿಂತ ದೊಡ್ಡವನಾಗಿದ್ಧೀನಿ ಅಂತ ಯೋಚಿಸ್ತಿದೀಯಾ.. ಹೂ ಇದಕ್ಕೆಲ್ಲಾ ಒಂದು ಗತಿ ಕಾಣಿಸ್ಲೇಬೇಕು".

ಹೀಗೇ ಒಂದು ಗಂಟೆ ಏನೇನೋ ಕೂಗಾಡಿದ. ಕಡೆಗೆ ನನ್ನಿಂದ ಒಂದು ಡಾಲರ್ ತೆಗೆದುಕೊಂಡು ಹೊರಟುಹೋದ. ಮಾರನೇ ದಿನ ನಮ್ಮಪ್ಪ ಬಂದಾಗ ಪೂರ್ತಿ ಕುಡಿದಿದ್ದ. ಆರು ಸಾವಿರ ಡಾಲರ್ ಪಡೆಯಲು ಶತ ಪ್ರಯತ್ನ ಪಟ್ಟ. ನ್ಯಾಯಾಲಯಕ್ಕೆ, ತನ್ನ ಮಗ ಬೇಕೆಂದು ಅರ್ಜಿ ಹಾಕಿಕೊಂಡ. ಅದನ್ನು ತಪ್ಪಿಸಲು, ಡಗ್ಲಾಸ್ ಆಂಟಿ ಮತ್ತು ನ್ಯಾಯಾಧೀಶ ಥ್ಯಾಚರ್ ಪ್ರಯತ್ನಿಸಿದರೂ, ಕಾನೂನಿನ ಪ್ರಕಾರ ಅದು ಸಾಧ್ಯವಾಗಲಿಲ್ಲ. ಅದರೆ ನಮ್ಮಪ್ಪ ನನ್ನನ್ನು ಪಡೆದುಕೊಂಡರೂಹಣ ಪಡೆದುಕೊಳ್ಳಲಾಗಲಿಲ್ಲ. ಏಕೆಂದರೆ ನಾನಾಗಲೇ ಅದನ್ನು ದಾನ ಕೊಟ್ಟುಬಿಟ್ಟಿದ್ದೆನಲ್ಲಾ.. ನಮ್ಮಪ್ಪ ಸಿಡುಕಾಡಿಕೊಂಡೇ ನನ್ನನ್ನು ಅವನ ಮನೆಗೆ ಕರೆದುಕೊಂಡು ಹೋದ.

ಅದೇನೂ ಮನೆಯಲ್ಲ. ನದೀ ದಡದ ತೋಪಿನಲ್ಲಿ ಮರದ ದಿಮ್ಮಿಗಳನ್ನೇ ಸೀಳಿ ಮಾಡಿದ್ದ ಕ್ಯಾಬಿನ್. ಆ ಕ್ಯಾಬಿನ್ನಿನಲ್ಲಿ ಸದಾ ಕಾಲವೂ ನನ್ನನ್ನು ಕೂಡಿಹಾಕಿದ್ದ ನನ್ನಪ್ಪ. ನದಿಯಲ್ಲಿ ಹಿಡಿದ ಮೀನುಗಳೋ, ಶಿಕಾರಿ ಹೊಡೆದ ಹಂದಿಗಳೋ, ನಮಗೆ ಆಹಾರ. ಅದಂತೂ ಶುದ್ದ ಸೊಂಭೇರಿ ಜೀವನ. ಮೊದಮೊದಲು ಅದೂ ಚೆನ್ನಾಗಿತ್ತೆನ್ನಿ. ಅದರೆ ನಮ್ಮಪ್ಪ ಎರಡೆರಡು ದಿನ ನನ್ನನ್ನು ಒಳಗೇ ಕೂಡಿಹಾಕಿ ಹೊರಗಿನಿಂದ ಬೀಗ ಹಾಕಿಕೊಂಡು ಹೋಗುತ್ತಿದ್ದುದರಿಂದಲೂ, ಹಾಗೆ ಕೂಡಿಹಾಕಿ ಹೋದವನು ಹಿಂತಿರುಗಿ ಬಂದಾಗ ಚೆನ್ನಾಗಿ ಕುಡಿದಿರುತ್ತಿದುದರಿಂದ ನನಗೆ ಚೆನ್ನಾಗಿ ಬಡಿಯುತ್ತಿದ್ದುದರಿಂದಲೂ, ನಾನು ಆ ಜೀವನವನ್ನು ದ್ವೇಷಿಸಲಾರಂಭಿಸಿದೆ. ನನ್ನ ಮೈ ಮೇಲೆಲ್ಲಾ ಬರೆಗಳೆದ್ದಿದ್ದವು. ನನಗಲ್ಲಿಂದ ತಪ್ಪಿಸಿಕೊಂಡು ಓಡಿಹೋಗಬೇನ್ನಿಸತೊಡಗಿತು. ಮನದಲ್ಲೇ ಯೋಜನೆ ಹಾಕಲಾರಂಭಿಸಿದೆ. ನಮ್ಮಪ್ಪ ಹೊರಗಿನಿಂದ ಬೀಗ ಹಾಕಿಕೊಂಡು ಹೋಗುವಾಗ ನನ್ನ ಕೈಗೆ ಯಾವ ಸಾಮಾನೂ ಸಿಕ್ಕದಂತೆ ಮಾಡಿ ಬೀಗ ಹಾಕಿಕೊಂಡು ಹೋಗುತ್ತಿದ್ದ. ಆದರೆ ಅವತ್ತು ಮಾಡಿನ ತೊಲೆಗೆ ಸ್ಕ್ಕಿಸಿದ್ದ, ತುಕ್ಕು ಹಿಡಿದ, ಹಿಡಿ ಇಲ್ಲದ ಗರಗಸ ನನ್ನ ಕಣ್ಣಿಗೆ ಬಿತ್ತು. ಅದು ಹೊರ ಪ್ರಪಂಚದ ಕೀಲಿಯಾಗಿತ್ತು. ಇನ್ನು ಸಮಯಾನುಕೂಲಕ್ಕಾಗಿ ಕಾಯಬೇಕಾಗಿತ್ತು.

ಒಮ್ಮೆ ಅಪ್ಪ ದಿನಸಿ ತರಲೆಂದೇನೋ ಪೇಟೆಗೆ ಹೋದ. ಹಾಗೆ ಹೋದರೆ ಅವನು ಬರುವುದು ರಾತ್ರಿಗೇ.... ಎಂದಿನಂತೆ ನನ್ನನ್ನು ಒಳಗೆ ಕೂಡಿಹಾಕಿ ಬೀಗ ಹಾಕಿಕೊಂಡು ಹೋಗಿದ್ದ. ಆ ದಿನವೆಲ್ಲಾ ಮೊಂಡು ಗರಗಸದಿಂದ ಕ್ಯಾಬಿನ್ನಿನ ಹಿತ್ತಲ ಮರದಗೋಡೆಯಲ್ಲೊಂದು ತೂತು ಮಾಡಿದೆ. ಆ ತೂತು ಯಾರ ಕಣ್ಣಿಗೂ ಬೀಳದ ಮೂಲೆಯಲ್ಲಿದ್ದು, ನನ್ನ ತಯ್ಯಾರಿ ನನಗೇ ಖುಶಿ ಕೊಡಲಾರಂಭಿಸಿತು.

ಅಂದು ರಾತ್ರಿ ಎಂದಿನಂತೆ ಅಪ್ಪ್ ಬಂದಾಗ ಪೂರ್ತಿ ಕುಡಿದಿದ್ದ. ಬಂದವಏ ಹಾಗೇ ಬಿದ್ದುಕೊಂಡ. ಧೀರ್ಘಶ್ವಾಸಗಳ ಅವನ್ ಉಸಿರಾಟದ ಸದ್ದು ವಿಕಾರವಾಗಿತ್ತು. ಇದ್ದಕಿದ್ದಂತೆ ಎದ್ದು ಏನೇನೋ ಕಿರುಚಿಕೊಳ್ಳುತ್ತಿದ್ದ. ನಾನೂ, ಹಾಗೇ ಕಣ್ಣು ಮುಚ್ಚಿದೆ. ಎಷ್ಟು ಹೊತ್ತು ನಿದ್ದೆ ಮಾಡಿದ್ದೆನೋ ಗೊತ್ತಿಲ್ಲ, ಯಾರೋ ಕಿರುಚಿದಂತಾಗಿ ಎದ್ದು ಕುಳಿತೆ. "ಹಾವೂ.. ಹಾವೂ... ಅಯ್ಯಯ್ಯೋ, ಮೈ ಮೇಲೆ ಹತ್ಬಿಡ್ತಲ್ಲಪ್ಪೋ... ಅಯ್ಯೋ ಓಡಿಸ್ರಪ್ಪೋ" ಎಂದರಚುತ್ತಿದ್ದ ನಮ್ಮಪ್ಪ. ಸ್ವಲ್ಪ ಹೊತ್ತು ಹೀಗೇ ಅರಚಿದವನು, ಎದ್ದು ಕಾಲು ಝಾಡಿಸಲು ಶುರು ಮಾಡಿದ. ಅವನ ಕಾಲಿಗೆ ಸಿಕ್ಕಿದ್ದೆಲ್ಲವೂ, ಉರುಳುವುದೋ, ಒಡೆಯುವುದೋ, ಮುರಿಯುವುದೋ, ಏನೋ ಒಂದಾಗಿ ಕ್ಷತವಾಗುತ್ತಿದ್ದವು. ಹಾಗೆ ಕುಣಿದಾಡಿದವನು ಮತ್ತೆ ನೆಲದ ಮೇಲೆ ಬಿದ್ದು ಮಲಗಿಬಿತ್ತ. ಈನ್ನು ಬೆಳಿಗ್ಗೆಯವರೆಗೂ ಅವನು ಏಳುವುದಿಲ್ಲವೆಂದು ನಾನು ಭಾವಿಸಿದೆ. ಆದರೆ........ ಆದರೆ ಅವನು ಸ್ವಲ್ಪ ಹೊತ್ತಿನಲ್ಲಿಯೇ ಎದ್ದ. "ಅವ್ವಲೇ,... ನನ್ನನ್ನು ಹಿಡ್ಕೊಂಬಿಡ್ತಾರೋ, ಸೂ..ಮಕ್ಳು ನನ್ಹಿಂದೆ ಬಿದ್ದವ್ರೋ" ಎಂದೇನೋ ಕೂಗಿಕೊಳ್ಳುತ್ತಿದ್ದ. ಆಗ ನನ್ನನ್ನು ನೋಡಿ, ಕೈಗೆ ಸಿಕ್ಕಿದ ಚಾಕು ಹಿಡಿದು ಅಟ್ಟಿಸಿಕೊಂಡು ಬಂದ. ನಾನವನಿಗೆ ಅಂತಕನ ದೂತನಂತೆ ಕಂಡೆನಂತೆ., ನನ್ನನ್ನು ಕೊಂದರೆ ಅವನಿಗೆ ನೆಮ್ಮದಿಯಂತೆ, ಹೀಗೆ ಇನ್ನೂ ಏನೇನೋ ಹೇಳಿದ. ನಾನು ಅವರಾರೂ ಅಲ್ಲ, ಬರೀ ಹಕಲ್‍ಬೆರಿ ಫ಼ಿನ್ ಎಂದು ಎಷ್ಟು ಹೇಳಿದರೂ ಅವನು ಕೇಳಲೇ ಇಲ್ಲ. ಕಡೆಗೊಮ್ಮೆ ನಾನು ತೊಟ್ಟಿದ್ದ ಜಾಕೆಟನ್ನು ಹಿಡಿದು ಅದಕ್ಕೆ ಕತ್ತಿ ಚುಚ್ಚಿಯೇಬಿಟ್ಟ. ನಾನು ಕಣ್ಣು ಮಿಟುಕಿಸುವಷ್ಟರಲ್ಲಿ, ಆ ಜಾಕೆಟನ್ನು ಅವನ ಕೈಗೆ ಬಿಟ್ಟು ಹೊರಗೆ ಹಾರಿದ್ದೆ. ಅದಕ್ಕೆ ಸಾಕಷ್ಟು ಚುಚ್ಚಿ, ಸುಸ್ತಾಗಿ ಅಲ್ಲೇ ಕುಸಿದು ಬಿದ್ದು ಗೊರಕೆ ಹೊಡೆಯಲಾರಂಭಿಸಿದ.

ನನಗಂತೂ ಎಷ್ಟು ಸಿಟ್ಟು ಬಂದಿತ್ತೆಂದರೆ, ಅವನ ಕೋವಿ ಹಿಡಿದು ಕೂತೆ. ಮತ್ತೇನಾದರೂ ಅವನು ಎದ್ದರೆ ಕೊಂದೇ ಹಾಕಿಬಿಡಬೇಕೆಂದು. ಎಷ್ಟು ಹೊತ್ತು ಹಾಗೇ ಕುಳಿತಿದ್ದೆನೋ, ಯಾವಾಗ ಜೋಮ್ಪು ಹತ್ತಿತೋ, ಅಂತೂ ಅಪ್ಪ " ಬೋ....ಮಗನೇ, ಯರನ್ನ ಸಾಯಿಸ್ಬೇಕೂಂತ ಕೂತಿದೀಯಾ..?" ಎಂದು ಕಿರುಚಿದಾಗಲೇ ನನಗೆ ಎಚ್ಚರವಾಗಿದ್ದು. ಒಂದೆರಡು ಕ್ಷಣ ನಾನೆಲ್ಲಿದ್ದೇನೆ, ಏನಾಗಿದ್ದೇನೆ ಎಂಬುದೇ ಅರಿವಾಗಲಿಲ್ಲ. ನಂತರ "ಬಂದೂಕ ತಗೊಂಡು ಏನ್ಮಾಡ್ತಿದ್ದೀಯೋ?" ಎಂದು ಅಪ್ಪ ಗದ್ದರಿಸಿದಾಗ, ಅವನಿಗೆ ರಾತ್ರಿಯ ವಿಷಯ ಏನೂ ತಿಳಿದಿಲ್ಲವೆಂದೂ ಅರಿವಾಯ್ತು. ನಾನೂ ನಿಜ ಹೇಳಿದೆ! "ರಾತ್ರಿ ಯಾರೊ ಒಳಕ್ಕೆ ಬರಲು ಪ್ರಯತ್ನ ಪಡ್ತಿದ್ದರು. ಅದಕ್ಕೇ"
"ಹಾಗಿದ್ದರೆ ನನ್ನನ್ನೇಕೆ ಏಳಿಸಲ್ಲಿಲ್ಲವೋ? ... ಮುಠ್ಠಾಳ.."
"ಏಳಿಸಿದೆ, ಆದರೆ ಮೈಮೇಲೆ ಎಚ್ಚರ ಇಲ್ಲದೆ ಬಿದ್ದಿದ್ದೆಯಲ್ಲಾ"
"ಮುಚ್ಚೋ ಬಾಯಿ, ಎದ್ದು ತಿಂಡಿ ಮಾಡು"

ಅವತ್ತಿನ ದಿನವೆಲ್ಲಾ, ಮೀನು ಹಿಡಿಯುತ್ತಾ, ನದಿಯಲ್ಲಿ ತೇಲಿ ಬಂದ ಮರದ ದಿಮ್ಮಿಗಳನ್ನು ಹಿಡಿಯುತ್ತಾ ಕಳೆದೆವು. ಮಧ್ಯಾಹ್ನದ ನಿದ್ದೆಗೆ ಅಪ್ಪ ತೂಗಿದ್ದಾಗ, ನದಿಯ ಮೇಲೆ ತೇಲುತ್ತಾ ಬಂತೊಂದು ಖಾಲಿ ಚಿಟ್ಟುದೋಣಿ. ಕೂಡಲೇ ನದಿಗೆ ಹಾರಿ ಅದನ್ನೆಳೆತಂದು, ಸಮೀಪದ ಪೊದೆಗಳ ನಡುವೆ ಅವಿಸಿಟ್ಟು, ಸೊಪ್ಪು ಮುಚ್ಚಿ ಬಂದು, ಮೀನು ಹಿಡಿಯುತ್ತಾ ಕುಳಿತೆ. ಇದೇ ಸರಿಯಾದ ಅವಕಾಶ. ಇನ್ನು ಆ ನಿಮಿಷಗಳಲ್ಲೇನು ಮಾಡಬೇಕೆಂದು ಮನಸ್ಸಿನಲ್ಲೇ ಲೆಕ್ಕ ಹಾಕುತ್ತಾ ಸಮಯ ಸರಿದದ್ದೇ ತಿಳಿಯಲಿಲ್ಲ.

0೩. ಗಾಡಿ ಬಿಟ್ಟ ಪೋರ.

ನೀರಿಗೆ ಹಾರಿದ್ದರಿಂದ ಒದ್ದೆಯಾಗಿದ್ದ ಬಟ್ಟೆಗಳು, ಅಪ್ಪ ಏಳುವ ಹೊತ್ತಿಗೆ ಒಣಗಿತ್ತು. ಎದ್ದವನೇ ನನ್ನ ಬಳಿಗೆ ಬಂದು ನಮ್ಮೆಲ್ಲಾ ವಸ್ತುಗಳನ್ನೂ ಕ್ಯಾಬಿನ್ನಿನ ಒಳಗೆ ಹಾಕಲು ತಿಳಿಸಿದ. ಕ್ಯಾಬಿನ್ನಿನ ಒಳಗೇ ನನ್ನನ್ನೂ ಕೂಡಿಹಾಕಿ, ನಗರದ ದಿಕ್ಕಿನತ್ತ ತನ್ನ ದೊಣಿಯನ್ನೇರಿ ಹೊರಟುಬಿಟ್ಟ. ಅವನು ಎಲ್ಲಿಗೆ ಹೊಗುತ್ತಿದ್ದೇನೆಂದು ನನಗೆ ತಿಳಿಸಲಿಲ್ಲವಾದರೂ, ಆ ದಿಕ್ಕಿಗೆ ಹೋದರೆ, ರಾತ್ರಿ ಬರುವುದಿಲ್ಲವೆಂದು ನನಗೆ ಗೊತ್ತಿತ್ತು. ಇದು ನನಗೆ ಸುವರ್ಣಾವಕಾಶವಾಗಿತ್ತು.

ಅವನು ಕಣ್ಣಿಂದ ಮರೆಯಾಗುವುದಕ್ಕೂ ಮೊದಲೇ ನಾನು, ನಾನೇ ಕೊರೆದಿದ್ದ ಕನ್ನದಿಂದ ಈಚೆ ಬಂದು, ಕ್ಯಾಬಿನ್ನಿನಲ್ಲಿದ್ದ ಉಪಯುಕ್ತ ವಸ್ತುಗಳನ್ನೆಲ್ಲಾ ನನ್ನ್ ಚಿಟ್ಟುದೋಣಿಗೆ ಸಾಗಿಸಿದೆ. ಎಲ್ಲ ಸಾಗಿಸಿದ ನಂತರ ಮೊದಲಿನ ಹಾಗೇ ಕನ್ನವನ್ನು ಭದ್ರಪಡಿಸಿ, ಕೊಡಲಿ ಹಿಡಿದು ಮುಂಬಾಗಿಲನ್ನು ಒಡೆದು ಹಾಕಿದೆ. ಒಳಗಿದ್ದ ಇತರೇ ಪದಾರ್ಥಗಳನ್ನೆಲ್ಲಾ ಮುರಿದೋ, ಒಡೆಸೋ, ಕ್ಷತ-ವಿಕ್ಷತಗೊಳಿಸಿದೆ. ಬಂದೂಕು ಹಿಡಿದು ಹೊಡೆಯಲು ಯಾವುದಾದರೂ ಹಕ್ಕಿ ಸಿಗುತ್ತದೇನೋ ಎಂದು ಕಾದೆ. ಯಾವ ಹಕ್ಕಿಯೂ ಸಿಗಲಿಲ್ಲ. ಆದರೆ ತೋಪಿನೊಳಕ್ಕೊಂದು ವರಾಹ ಬಂತು. ಈಡು ಹೊಡೆದೆ, ಹಂದಿ ಬಿತ್ತು. ಅದನ್ನೆತ್ತಿಕೊಂಡು, ನಮ್ಮ ಕ್ಯಾಬಿನ್ನಿನ ಮೇಜಿನ ಮೇಲಿರಿಸಿ, ಅದರ ಗಂಟಲು ಸೀಳಿ ಅದರ ರಕ್ತ ಅಲ್ಲೆಲ್ಲಾ ಹರಿಯುವಂತೆ ಮಾಡಿದೆ. ಕೊಡಲಿಯಿಂದ ನನ್ನ ತಲೆಕೂದಲನ್ನು ಹಿಡಿಯಷ್ಟು ಕೊಯ್ದು, ಕೊಡಲಿಯ ಅಲಗಿಗೆ ಅದನ್ನು ರಕ್ತದಲ್ಲದ್ದಿ ಅಂಟಿಸಿದೆ. ಹಂದಿಯನ್ನು ರಕ್ತ ಸೋರುತ್ತಿರುವಂತೆಯೇ ಎಳೆದುಕೊಂಡು ಹೋಗಿ ನದಿಯೊಳಕ್ಕೆ ಎಸೆದೆ.

ಅಲ್ಲಿಗೆ ನನ್ನ ಕೆಲಸ ಪೂರ್ತಿಯಾಗಿತ್ತು.

ನೋಡಿದವರು, ಯಾರೋ ನನ್ನ ಕೊಲೆ ಮಾಡಿ, ನದಿಯೊಳಕ್ಕೆ ಎಸೆದಿದ್ದಾರೆಂದು ತಿಳಿಯಬೇಕಿತ್ತು.

ನನ್ನ ಚಿಟ್ಟು ದೋಣಿಯನ್ನೇರಿ, ಸೀದಾ ಸ್ವಲ್ಪ ಮುಂದೆ, ನದಿಯ ಕೆಳಗೇ ಇದ್ದ ಜಾಕ್ಸನ್ ಐಲ್ಯಾಂಡ್‍ಗೆ ಹೊರಟೆ. ಅಲ್ಲಿ ನನ್ನನ್ನ್ಯಾರೂ ಹುಡುಕುವುದಿಲ್ಲ ಎಂಬ ನಂಬಿಕೆಯಿಂದ, ನಾನಾ ದ್ವೀಪವನ್ನೇ ಆರಿಸಿಕೊಂಡಿದ್ದೆ. ಆದೂ ಅಲ್ಲದೆ, ಈಗಾಗಲೇ ಬೈಗಾಗುತ್ತಿರುವುದರಿಂದ, ನನ್ನ ಸಾವಿನ ವಿಷಯ ಎಲ್ಲರಿಗೂ ತಿಳಿದು, ಹುಡುಕಾಟ ಶುರುವಾದರೂ, ಅದು ನಾಳೆ ಬೆಳಿಗ್ಗೆಯೇ ಎಂದು ನನಗೆ ಚೆನ್ನಾಗಿ ತಿಳಿದಿತ್ತು. ದ್ವೀಪ ತಲುಪಿದಾಗ ಚೆನ್ನಾಗಿ ಕತ್ತಲಾಗಿತ್ತು. ಚಿಟ್ಟುದೋಣಿಯನ್ನು ದಡಕ್ಕೆಳೆದು ಮಲಗಿದ ನನಗೆ ಚೆನ್ನಗಿ ನಿದ್ದೆ ಹತ್ತಿತ್ತು. ಬೆಳಗ್ಗಿನಿಂದ ಏನು ಕಡಿಮೆ ಆಯಾಸವಾಗಿತ್ತೇ? ಮರುದಿನ ಬೆಳಿಗ್ಗೆ ನನಗೆ ಎಚ್ಚರಾದಾಗ ಹೊತ್ತು ಮಾರು ಮೇಲೇರಿತ್ತು. ಬಹುಶಃ ಎಂಟು ಗಂಟೆಗೂ ಮಿಕ್ಕು ಸಮಯ ಹರಿದಿರಬೇಕು.

ದೂರದಲ್ಲೊಂದು ಬಾರಿ 'ಬೂಂ" ಎಂದಿತು. ನನಗೆ ಸ್ವಲ್ಪ ನಗು ಬಂತು. ಅವರು 'ನನ್ನನ್ನು' ಅಂದರೆ ನನ್ನ ಶವವನ್ನು ಹುಡುಕುತ್ತಿರಬೇಕು. ಮತ್ತೆ ಸ್ವಲ್ಪ ಹತ್ತಿರದಲ್ಲೇ ಅದೇ ಶಬ್ದ ಕೇಳಿಸಿತು. ಈಗೊಂದು ಹಾಯಿದೋಣಿಯೂ ಅದರಲ್ಲಿದ್ದ ಕೆಲವು ಜನರೂ ಕಾಣಿಸಿದರು. ನೀರಿನೊಳಕ್ಕೆ ಫ಼ಿರಂಗಿ ಹಾರಿಸಿ, ನನ್ನ ದೇಹ ಮೇಲಕ್ಕೆತ್ತಲು ಪ್ರಯತ್ನಿಸುತ್ತಿದ್ದರು. ಹಾರಿಸಿದ ತೋಪಿನಿಂದ ಎದ್ದ ಹೊಗೆಯನ್ನು ನಾನು ಕಾಣಬಹುದಾಗಿತ್ತು. ದೋಣಿ ಮತ್ತೂ ಹತ್ತಿರಕ್ಕೆ ಬಂದಂತೆ, ಅದರಲ್ಲ್ಲಿ ಕುಳಿತಿದ್ದ ವಾಟ್ಸನ್ ಆಂಟಿ, ಥ್ಯಾಚರ್ ನ್ಯಾಯಾಧೀಶ, ನಮ್ಮಪ್ಪ ಹಾಗೂ ಟಾಮ್ ಸಾಯರ್ ಮತ್ತು ಪರಿಚಯದ ಇನ್ನೂ ಹಲವಾರು ಜನರಿದ್ದರು. ಅವರು ನನ್ನ ಕೊಲೆಯ ಬಗ್ಗೆ ಮಾತಾಡುತ್ತಿದ್ದುದನ್ನು, ಕೇಳಬಹುದಾಗಿತ್ತು. ಅವರಾರಿಗೂ ನಾನು ಬದುಕಿರಬಹುದೆಂಬ ಕಲ್ಪನೆಯೂ ಇರಲಿಲ್ಲ. ನನಗಂತೂ ಸಂತೋಷವಾಗಿತ್ತು. ಆ ದಿನ ನನಗಾಗಿ ಪುಟ್ಟದೊಂದು ಶಿಬಿರ ಕಟ್ಟಿಕೊಂಡೆ. ರಾತ್ರಿಯ ನೀಲಾಗಸದಲ್ಲಿ ಮಿನುಗುವ ನಕ್ಷತ್ರಗಳನ್ನೇ ದಿಟ್ಟಿಸುತ್ತಾ ನಿದ್ದೆ ಹೋದೆ. ನನಗೆ ಸಿಕ್ಕಿದ್ದ ಸ್ವಾತಂತ್ರ್ಯದಿಂದಾಗಿ ನಕ್ಷತ್ರಗಳೆಲ್ಲಾ ನಗುತ್ತಲಿವೆ ಎನ್ನಿಸಿತ್ತು. ಪ್ರಕೃತಿಯ ಮಡಿಲಲ್ಲಿ ನಾನು ಹೆಚ್ಚು ಸ್ವತಂತ್ರನಾಗಿದ್ದೆ.

ಮರುದಿನ ಬೆಳಿಗ್ಗೆ ಬೇಗನೇ ಎದ್ದು, ಕೋವಿ ಹಿಡಿದು ತಿನ್ನಲು ಏನಾದರೂ ಸಿಗುತ್ತದೇನೋ ಎಂದು ನೋಡಲು ಶಿಕಾರಿ ಹೊರಟೆ. ಅಲ್ಲಿ... ಆ ದ್ವೀಪದಲ್ಲಿ ಅಂಡಲೆಯುವಾಗ, ನಿನ್ನೆ ಹಚ್ಚಿದ್ದ ಬೆಂಕಿ ಕಣ್ಣಿಗೆ ಬಿತ್ತು. ಅದರ ಬೂದಿ ಇನ್ನೂ ಆರಿರಲಿಲ್ಲ. ಸಣ್ಣಗೆ ಹೊಗೆಯಾಡುತ್ತಲೇ ಇತ್ತು. ಅಂದರೆ,.... ಅಂದರೆ.... ಇಲ್ಲಿ ನಾನಲ್ಲದೇ ಇನ್ನೂ ಯಾರೋ ಇದ್ದಾರೆ. ಅಂದರೆ ನಾನಿಲ್ಲಿರುವುದು ಕಂಡಿತಾ ಕ್ಷೇಮವಲ್ಲ. ಈ ಕ್ಷಣವೇ ಈ ದ್ವೀಪ ತೊರೆದು ಹೋಗಬೇಕು. ನಾನೊಂದು ಕ್ಷಣವೂ ತಡಮಾಡಲಿಲ್ಲ. ನನ್ನ ಶಿಬಿರದ ಬಳಿಗೆ ಓಡಿದೆ. ನನ್ನೆಲ್ಲಾ ಚರಾಸ್ತಿಗಳನ್ನೂ ನನ್ನ್ ಚಿಟ್ಟು ದೋಣಿಗೆ ಸಾಗಿಸಿದೆ. ನಾನೂ ದೋಣಿಯನ್ನೇರಿ ಹೊರಟೆ. ಇಷ್ಟೆಲ್ಲಾ ಮಾಡಬೇಕಾದರೂ ಈ ದ್ವೀಪದಲ್ಲಿ ಇರುವ ಬೇರೊಬ್ಬ ವ್ಯಕ್ತಿ ಯಾರೆಂದು ತಲೆಯಲ್ಲಿ ಕೊರೆಯುತ್ತಲೇ ಇತ್ತು. ನನ್ನನ್ನು ಹುಡುಕಲೆಂದು ಬಂದವರೋ? ಅಥವಾ ಇಲ್ಲಿನ ನಿವಾಸಿಗಳೋ...? ಅಥವಾ ನನ್ನಂತೆ ನಿರಾಶ್ರಿತರಾಗಿ ಇಲ್ಲಿಗೆ ಬಂದವರೋ...? ನಾನು ಹೀಗೆ ಓಡುತ್ತಾ ಹೋದರೆ ಏನು ಪ್ರಯೋಜನ? ಇಲ್ಲಿರುವವರಾರೆಂದು ತಿಳಿದರೆ ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸಬಹುದಲ್ಲಾ.! ಈ ಯೋಚನೆ ಬಂದದ್ದೇ ಮತ್ತೆ ದ್ವೀಪಕ್ಕೆ ಹಿಂದಿರುಗಿದೆ. ಕೋವಿ ಹಿಡಿದು ಎಚ್ಚರಿಕೆಯಿಂದ ದ್ವೀಪವನ್ನೆಲ್ಲಾ ಅವಲೋಕಿಸುತ್ತಾ ಸಾಧ್ಯವಾದಷ್ಟೂ ಮರೆಯಲ್ಲೇ ಮುನ್ನಡೆದೆ.

ಬೇಗನೇ ನಾನು ಮರಗಳಾಗಲೀ, ಪೊದೆಗಳಾಗಲೀ ಇಲ್ಲದ ಬಯಲು ಪ್ರದೇಶದ ಬಳಿಗೆ ಬಂದುಬಿಟ್ಟಿದ್ದೆ. ಅಲ್ಲಿ ಆ ಬಯಲಿನ ಅಂಚಿನಲ್ಲಿ ಬೆಂಕಿ ಕಾಯಿಸಿಕೊಳ್ಳುತ್ತಾ ಕುಳಿತಿದ್ದನೊಬ್ಬ ಕಂಬಳಿ ಹೊದ್ದ ಮನುಷ್ಯ. ನಾನು ಎಚ್ಚರಿಕೆಯಿಂದ ಅವನನ್ನೇ ಗಮನಿಸುತ್ತ್ತಿದ್ದೆ. ಸ್ವಲ್ಪ ಹೊತ್ತಿನಲ್ಲೇ ಅವನು ಆಕಳಿಸುತ್ತಾ, ಮೈ ಮುರಿಯುತ್ತಾ ಎದ್ದು ನಿಂತ. ಅದು "ಜಿಮ್" ಆಗಿದ್ದ. ನನ್ನ ರಕ್ಷಕಿ ಡಗ್ಲಾಸಳ ತಂಗಿ, ವಾಟ್ಸನ್ನಳ ಗುಲಾಮ ಜಿಮ್. ನನಗೆ ರೋಮಾಂಚನವಾಯಿತು.

"ಹೇ.. ಜಿಮ್" ಅವನ ಬಳಿ ಓಡುತ್ತಾ ಕೂಗಿದೆ. ತಿರುಗಿ ನೋಡಿದ ಅವನು ಬೆಚ್ಚಿಬಿದ್ದ. ಒಂದೊಂದಾಗಿ ಹಿಂದಕ್ಕೆ ಹೆಜ್ಜೆಯಿಡುತ್ತಾ, ಬಿಟ್ಟ ಬಾಯಿ ಬಿಟ್ಟಂತೆ ಕಣ್ಣು ಕೂಡಾ ಮಿಟುಕಿಸದೆ ನನ್ನನ್ನು ನೋಡುತ್ತಿದ್ದ. ಅವನ ನರ ನಾಡಿಗಳಲ್ಲೂ, ತುಂಬಿ ಹರಿದು ನಿಂತಿದ್ದ ಭಯವನ್ನು ಯಾರೇ ಆದರೂ ಕೂಡಲೇ ಗುರುತಿಸಬಹುದಾಗಿತ್ತು.

"ಹಕ್ಕಣ್ಣಾ, ನಾನು ಯಾರ್‍ಗೂ ಕೇಡು ಮಾಡಿಲ್ಲ. ನಿಂಗಂತೂ ಯಾವತ್ತೂ ದ್ರೋಹ ಬಗ್ದಿಲ್ಲ. ಭೂತದ್ ಪೂಜೆ ಮಾಡಿದೀನಿ, ನನ್ನ ಬಿಟ್ಬಿಟ್ಟು ನೀನು ಎಲ್ಲಿಂದ ಬಂದ್ಯೋ ಅಲ್ಲಿಗೇ ಹೊರಟ್‍ಹೋಗಪ್ಪಾ.... ದಯ್ವಿಟ್ಟು ನದೀಗೇ ಹೊರಟ್‍ಹೋಗಪ್ಪಾ." ಹೀಗೇ ಏನೇನೋ ಬಡಬಡಿಸಲಾರಂಭಿಸಿದ. ನಾನು ನಕ್ಕು " ಅಲ್ಲೋ, ಜಿಮ್. ನಾನು ಭೂತಾನೂ ಅಲ್ಲ, ತಾತಾನೂ ಅಲ್ಲ. ಸತ್ತೋರು ತಾನೇ ಅದೆಲ್ಲಾ ಅಗೋದು, ನಾನಿನ್ನೂ ಸತ್ತಿಲ್ಲ ಕಣೋ' ಅಂದೆ. "ಹಂಗಾದ್ರೆ..... ಹಂಗಾದ್ರೆ..." ಎಂದು ಬೆಪ್ಪು ಬೆರಗಾಗಿ ಬಯ್ಬಾಯಿ ಬಿಡುತ್ತಿದ್ದ ಅವನನ್ನು ಕೂರಿಸಿಕೊಂಡು ನನ್ನ ಕತೆಯನ್ನೆಲ್ಲಾ ಹೇಳಿದೆ. ಎಲ್ಲವನ್ನೂ ಸಾವಧಾನವಾಗಿ ಅವನಿಗೆ ಸ್ವಲ್ಪ ನಂಬಿಕೆ ಬಂತು, ಎಂದು ನನಗೆ ಮನವರಿಕೆಯಾದ ಮೇಲೆ, ಅವನು ಇಲ್ಲಿ ಏನು ಮಾಡುತ್ತಿದ್ದಾನೆಂದು ಕೇಳಿದೆ.

ಅವನೂ ನಾನು ತಪ್ಪಿಸಿಕೊಂಡ ಸಮಯದಲ್ಲೇ, ಸ್ವಲ್ಪ ಹೆಚ್ಚು ಕಡಿಮೆ, ವಾಟ್ಸನ್ನಳ ಮನೆಯಿಂದ ತಪ್ಪಿಸಿಕೊಂಡಿದ್ದ. ನನ್ನಂತೇ ಆಶ್ರಯ ಬಯಸಿ ಈ ದ್ವೀಪ ಸೇರಿದ್ದ. ನನ್ನ ಕತೆ ಕೇಳಿದ ಮೇಲೆ ಅವನ ಮುಖ ಹುಳ್ಳಗಾಯಿತು. "ಅಯ್ಯೋ, ಎಲ್ಲಾರೂ ನಾನೇ ನಿಮ್ಮನ್ನ ಸಾಯ್ಸಿ ಓಡಿಹೋಗಿರ್‍ತೀನಂತ ಮಾಡಿರ್‍ತಾರೆ." ಎಂದ. ಅದು ನಿಜವೂ ಆಗಿತ್ತು. ನಾನವನಿಗೆ ಧೈರ್ಯ ಹೇಳಿದೆ. ಯಾರಿಗೂ ಅವನು ಓಡಿ ಬಂದ ಗುಲಾಮನೆಂದು ಹೇಳುವುದಿಲ್ಲವೆಂದೂ, ನಾವಿಬ್ಬರೂ ಜೊತೆಯಾಗಿಯೇ ಮುಂದೆ ಪ್ರಯಾಣಿಸಬಹುದೆಂದು ಹೇಳಿದರೂ, ಅವನ ಮುಖದ ವಿಷಾದ ಮರೆಯಾಗಲಿಲ್ಲ.

ಜಾಕ್ಸನ್ ಐಲ್ಯಾಂಡ್, ಕೇವಲ್ ಕಾಲು ಮೈಲು ಅಗಲ, ಮೂರು ಮೈಲು ಉದ್ದದ ದ್ವೀಪ. ಆ ದ್ವೀಪದ ಮಧ್ಯದಲ್ಲಿ, ಸಮತಟ್ಟಾದ ಜಾಗದಲ್ಲಿ ಇಬ್ಬರೂ ಸೇರಿ, ಇಬ್ಬರಿಗಾಗುವಷ್ಟು ದೊಡ್ಡ, (ಇಬ್ಬರಿಗೇ ಆಗುವಷ್ಟು ಚಿಕ್ಕ) ಶಿಬಿರವೊಂದನ್ನು ನಿರ್ಮಿಸಿದೆವು. ಒಂದಷ್ಟು ದಿನ ನಮಗೆ ಹಾಯೆನಿಸಿತ್ತು. ಹಗಲೆಲ್ಲಾ ಈಜುವುದು, ಮೀನು ಹಿಡಿಯುವುದು, ಬಲೆ ಒಡ್ಡಿ ಪ್ರಾಣಿ ಶಿಕಾರಿ ಮಾಡುವುದು, ಅಷ್ಟೇ ನಮ್ಮ ಕೆಲಸ. ನದಿಯಲ್ಲಿ ಹರಿದು ಬಂದ ತೆಪ್ಪದೋಣಿಯೊಂದನ್ನು ಎಳೆದು ದಡ ಸೇರಿಸಿ ಮುಚ್ಚಿಟ್ಟಿದ್ದಷ್ಟೇ ಮುಖ್ಯ ಘಟನೆ. ಅದು ಮುಂದೆಂದಾದರೂ ಉಪಯೋಗಕ್ಕೆ ಬರುವುದೆಂಬುದು ನಮ್ಮ ಯೋಚನೆ.

ಹೀಗೇ ಒಂದು ರಾತ್ರಿ, ಹೊಳೆಯಲ್ಲಿ ಹರಿದು ಬರುವ ಅಮೂಲ್ಯ ವಸ್ತುಗಳಿಗೆ ಕಾಯುತ್ತಿದ್ದಾಗ, ಒಂದು ಮನೆ ದೋಣಿ ತೇಲಿಬಂತು. ಮನೆ ದೋಣಿ ಅಂದರೆ, ದೊಡ್ಡ ದೋಣಿಯೊಂದರಲ್ಲಿ ಮನೆಯಲ್ಲಿರುವ ಎಲ್ಲಾ ಸೌಕಲ್ಯಗಳೂ ಸಿಗುವಂತೆ ಮಾಡಿರುವ ದೋಣಿ. ಅದು ನೀರಿನಲ್ಲಿ ಆಗಲೇ ಒಂದು ಕಡೆಯಿಂದ ಮುಳುಗಲು ಶುರುವಾಗಿತ್ತು. ನನ್ನ ಚಿಟ್ಟು ದೋಣಿಯಲ್ಲಿ ನಾನೂ, ಜಿಮ್ ಅದರ ಬಳಿ ಸಾಗಿದಾಗ, ಮಸುಕು ಕತ್ತಲಿನಲ್ಲಿ ಏನೂ ಕಾಣಿಸಲಿಲ್ಲ. ಸ್ವಲ್ಪ ಬೆಳಕಾಗುವವರೆಗೆ ಕಾದು, ಮೆಲ್ಲನೆ ಆ ದೋಣಿಗೆ ಹತ್ತಿದೆವು. ಅಲ್ಲಿ ಎಲ್ಲಾ ಮುರಿದು ಬಿದ್ದಿತ್ತು. ಬಹುಶಃ ದೊಡ್ಡದೊಂದು ಹೊಡೆದಾಟವೇ ನಡೆದಿರಬೇಕು. ಕೊಠಡಿಯೊಂದರಲ್ಲಿ ವ್ಯಕ್ತಿಯೊಬ್ಬನ ಶವವನ್ನೂ ಕೂಡಾ ನೋಡಿದೆವು. ಅದರ ಬಳಿ ಹೋದ ಜಿಮ್ ಕನಿಕರದ ಮುಖಭಾವ ವ್ಯಕ್ತಪಡಿಸಿದ. ನಾನೂ ಕುತೂಹಲದಿಂದ ನೋಡಲು ಹೋದೆ. ಆದರೆ ಜಿಮ್ ಕೂಡಲೇ ಶವದ ಮುಖ ಮುಚ್ಚಿ, "ಭಯಂಕರ... ಭಯಂಕರ' ಎಂದ. ಎರಡು ಗುಂಡುಗಳು ಅವನ ಮೆದುಳನ್ನು ತೂರಿ ಹೋಗಿವೆಯೆಂದೂ, ನೋಡುವುದು ಅಸಹ್ಯ ಮತ್ತು ಭಯಂಕರ ಎಂದೂ ಅವನು ಹೇಳಿದ. ಆ ದೋಣಿಯಲ್ಲಿದ್ದ ಇತರ ಉಪಯುಕ್ತ ವಸ್ತುಗಳನ್ನು ಕಂಡ ನನಗೂ ಶವದ ವಿಷಯದಲ್ಲಿ ಆಸಕ್ತಿ ಬರಲಿಲ್ಲ. ಅಲ್ಲಿಂದ ನಾವು ಒಂದು ಲಾಟೀನು, ಮೇಣದ ಬತ್ತಿಗಳು, ಕತ್ತಿ, ಚಾಕು, ಸೂಜಿ, ಔಷಧಿಗಳೂ ಸೇರಿದಂತೆ ಹಲವಾರು ಉಪಯುಕ್ತ ವಸ್ತುಗಳನ್ನೆತ್ತಿಕೊಂಡೆವು.

ಅಷ್ತರಲ್ಲೇ ಬೆಳಕಾಗಿತ್ತು. ನಾವು ಆ ದೋಣಿ ಬಿಟ್ಟು ಎಚ್ಚರಿಕೆಯಿಂದ ಸಾಗುತ್ತಾ ನಮ್ಮ ಶಿಬಿರ ಸೇರಿಕೊಂಡೆವು. ಬೆಳಕಿನಲ್ಲಿ ನಾವು ಓಡಾಡುವುದು ಅಪರೂಪವೇ ಆಗಿತ್ತು. ಏಕೆಂದರೆ ಜಿಮ್ ಓಡ್ ಬಂದಿರುವ ಗುಲಾಮ. ಅವನನ್ನು ಹಿಡಿದರೆ ಶಿಕ್ಷೆ ಕಂಡಿತಾ. ಮತ್ತು ನಾನು ಅವನು ತಪ್ಪಿಸಿಕೊಳ್ಳಲು ಸಹಾಯ ಮಾಡಿರುವುದರಿಂದ ನನಗೂ ಶಿಕ್ಷೆ ತಪ್ಪಿದ್ದಲ್ಲ. ಅದಕ್ಕೇ ಜಿಮ್ ನನ್ನ ಚಿಟ್ಟು ದೋಣಿಯ ತಳದಲ್ಲಿ ಮಲಗಿದ್ದ. ನಾನು ಎಚ್ಚರಿಕೆಯಿಂದ ಹುಟ್ಟು ಹಾಕಿ, ಅಂತೂ ನಮ್ಮ ಶಿಬಿರ ಸೇರಿದೆವು. ಮುಂದಿನ ದಿನಗಳು ನಮ್ಮ ಪಾಲಿಗೆ ಅಷ್ಟೇನೂ ಒಳ್ಳೆಯವಾಗಿರಲಿಲ್ಲ. ಅದರ ಸೂಚನೆಯೂ ನಮಗೆ ಸಿಕ್ಕಿತ್ತು.

ಹೇಗೆಂದರೆ, ಒಂದು ದಿನ ದ್ವೀಪದಲ್ಲಿ ಅಲೆಯುತ್ತಿದ್ದಾಗ ಹಾವಿನ ಪೊರೆಯೊಂದನ್ನು ಕಂಡೆ. ಅದನ್ನು ಜಿಮ್‍ಗೆ ತೋರಿಸಿದಾಗ " ಅಯ್ಯೋ ದೇವ್ರೇ... ಹಾವಿನ ಪೊರೆ ಕಂಡ್ರೆ, ಕೆಟ್ಟ ಕಾಲ ಬಂತೂಂತ ' ಎಂದುಬಿಟ್ಟ. ಅವನ ಆ ಮೂಢನಂಬಿಕೆ ಕಂಡು ನನಗೆ ನಗು ಬಂತು. ನಾನು ಅದನ್ನೆಲ್ಲಾ ನಂಬಬೇಕೋ ಬೇಡವೋ ತಿಳಿದಿರಲಿಲ್ಲ. ಒಟ್ಟಿನಲ್ಲಿ ಮನಸ್ಸಿನಲ್ಲಿಯೇ ಜಿಮ್‍ಗೆ ಆಟ ಆಡಿಸಬೇಕೆಂದು ನಿಶ್ಚಯಿಸಿದೆ.

ಅಂದು ಸಂಜೆ ನಿಜವಾದ ಹಾವೊಂದನ್ನು ಹುಡುಕಿ, ಹೊಡೆದು ಎತ್ತಿಕೊಂಡು ಬಂದು, ಜಿಮ್‍ನ ಹಾಸಿಗೆಯ ಮೇಲೆ ಹಾಕಿಬಿಟ್ಟೆ. ಅವನನ್ನು ಹೆದರಿಸಬೇಕೆಂದಷ್ಟೇ ಮಾಡಿದ ಕೆಲಸ ಇದು. ನನಗೆ ಬೇರಿನ್ನಾವ ದುರುದ್ದೇಶವೂ ಇರಲಿಲ್ಲ. ರಾತ್ರಿ ಊಟವಾಗುವ ಹೊತ್ತಿಗೇ ಈ ವಿಷಯವನ್ನು ನಾನು ಮರೆತುಬಿಟ್ಟೆ. ಶಿಬಿರದಲ್ಲಿ ನಾನು ದೀಪ ಹಚ್ಚುವಷ್ಟರಲ್ಲಿ, ಜಿಮ್ ತನ್ನ ಕಂಬಳಿಯಲ್ಲಿ ತೂರಿಕೊಂಡು, ಹಾಸಿಗೆಯಲ್ಲಿ ಮೈಚಾಚಿ ಬಿಟ್ಟಿದ್ದ. ನಾನು ಮಧ್ಯಾಹ್ನ ಹೊಡೆದಿದ್ದ ಹಾವಿನ ಸಂಗಾತಿ ಅವನಿಗಾಗೇ ಅಲ್ಲೇ ಕಾಯುತ್ತಿದ್ದಂತೆ ಕುಳಿತಿದ್ದು, ತನ್ನ ದಂತ ಪ್ರಹಾರ ನಡೆಸಿಬಿಟ್ಟಿತ್ತು. ಅದು ವಿಷದ ಹಾವಲ್ಲ ಎಂದು ನಾನು ಗಮನಿಸಿದ್ದರೂ, ಅದನ್ನು ಜಿಮ್‍ಗೆ ಎಷ್ಟೆ ಹೇಳಿದರೂ ಅವನು ಅದನ್ನು ನಂಬಲಿಲ್ಲ. ತನ್ನ ಕೊನೆಗಾಲ ಬಂತೆಂದು ನಂಬಿ ಹಾಸಿಗೆಯ ಮೇಲೆ ನರಳುತ್ತಾ ಮಲಗಿಬಿಟ್ಟ. ನಾನೂ ನನಗೆ ಗೊತ್ತಿದ್ದಂತೆ ಚಿಕಿತ್ಸೆ ಮಾಡಿದೆ. ಆದರೇನು ಅವನ ನಂಬಿಕೆ ಧೃಡವಾಗುವಂತೆ, ಅವನಿಗೆ ಜ್ವರ ಬಂದು, ನರಳಾಟ ಹೆಚ್ಚೇ ಆಯಿತು. ನನಗೂ ಅದು ವಿಷದ ಹಾವೇ ಇರಬೇಕೆಂಬ ನಂಬಿಕೆ ಬರಲುಪಕ್ರಮಿಸಿತ್ತು. ಹಾಗೇ ನಾಲ್ಕು ದಿನಗಳವರೆಗೆ ಜ್ವರದಲ್ಲಿ ನರಳಿದ ಅವನು ನಾಲ್ಕನೇ ದಿನ ಎದ್ದು ಕುಳಿತ. ಊಟವನ್ನೂ ಚೆನ್ನಾಗೇ ಮಾಡಿದ. ಮೂರು ದಿನಗಳಾದರೂ ತಾನು ಸಾಯದ್ದನ್ನು ಕಂಡು ಅವನಿಗೂ ಅದು ವಿಷದ ಹಾವಲ್ಲವೆಂಬ ನಂಬಿಕೆ ಬಂತೋ ಏನೋ, ಒಟ್ಟಿನಲ್ಲು ಸಂಜೆಯ ವೇಳೆಗೆ, ಜಿಮ್ ಪೂರ್ತಿ ಗುಣಮುಖನಾಗಿದ್ದ.

ಅಲ್ಲಿಯ ರೋಮಾಂಚಕ ಜೀವನ, ಏಕತಾನತೆಯಿಂದ ನನಗಾಗಲೇ ಬೋರು ಹೊಡೆಯಲಾರಂಭಿಸಿತ್ತು. ಬದಲಾವಣೆಗಳೇ ಇಲ್ಲದ ಜೀವನ ನನಗಂತೂ ಬಲು ಬೋರು. ನಾನು ತಡೆಯದೆ ಜಿಮ್‍ನ ಬಳಿ " ನಾಳೆ ನಾನು ಪೇಟೆಗೆ ಹೋಗಿ ಬರ್ತೀನಿ ಕಣೋ" ಅಂದೆ. ಅವನು ಕೂಡಲೇ ಗಾಬರಿ ಬಿದ್ದ. ಆದರೂ ಸ್ವಲ್ಪ ಯೋಚಿಸಿ, "ಹೋಗೋದಾದ್ರೆ, ರಾತ್ರಿ ಹೊತ್ನಾಗೆ ಹೋಗಿ, ಹಗಲಲ್ಲಿ ಯಾರದ್ರೂ ನಿಮ್ಮನ್ನ ಗುರ್ತು ಹಿಡೀಬೋದು" ಅಂದ. "ಅದೂ ಸರಿ" ಎಂದು ನಾನು ಒಪ್ಪಿಕೊಳ್ಳುವಷ್ಟರಲ್ಲೇ 'ಅಲ್ಲಾ, ಹುಡ್ಗೀ ಹಂಗೆ ವೇಷ ಹಾಕ್ಕೊಂಡು ಹೋದ್ರೆ...?" ಅಂದ. ಅದು ನಿಜಕ್ಕೂ ಅತ್ಯುತ್ತಮ ಯೋಜನೆಯಾಗಿತ್ತು.

ಕೂಡಲೇ ಹಾಯಿದೋಣಿಯಿಂದ ನಾನು ತಂದ ಗೌನೊಂದನ್ನು ಕತ್ತರಿಸಿ, ನನ್ನ ಅಳತೆಗೆ ತಕ್ಕ ಫ಼್ರಾಕು ಮಾಡಿಕೊಂಡೆ. ಕುಚ್ಚುಟೋಪಿಯೊಂದಕ್ಕೆ ನನಗೆ ತಿಳಿದಂತೆ ಕುಸುರಿ ಕೆಲಸ ಮಾಡಿ, ಹುಡುಗಿಯರ ಟೋಪಿಯಂತೆ ಮಾಡಿಕೊಂಡೆ. ಅದನ್ನು ಧರಿಸಿ ಓಡಾಡುವುದನ್ನೂ ಅಭ್ಯಾಸ ಮಾಡಿದೆ. ಅದನ್ನು ನೋಡುತ್ತಿದ್ದ ಜಿಮ್ "ನೀವು ನಡದ್ರೆ ಹುಡುಗ್ರಾಗೇ ಕಾಣ್ತೀರಿ, ಇನ್ನೂ ಅಭ್ಯಾಸ ಮಾಡ್ಬೇಕು, ಸ್ವಲ್ಪ ಸೊಂಟ ಕುಲುಕಿಸೋದು" ಅಂದ. ಆಮೇಲೆ "ಪ್ಯಾಂಟ್ ಜೋಬಿಗೆ ಕೈ ಹಾಕೋಕೆ ಹಂಗೆಲ್ಲಾ ಲಂಗ ಎತ್ತಬ್ಯಾಡಿ' ಅಂದ. ಅಂತೂ ಇಂತೂ ಆ ಗುರುವಿನ ಸನ್ನಿಧಿಯಲ್ಲಿ ನನ್ನ ಅಭ್ಯಾಸ ನಡೆಯಿತು. ಸಂಜೆಯ ವೇಳೆಗೆ ತಕ್ಕ ಮಟ್ಟಿನ ಯಶಸ್ಸೂ ಸಿಕ್ಕಿತು. ಕತ್ತಲಾಗುತ್ತಿದ್ದಂತೆಯೇ ನನ್ನ ಚಿಟ್ಟು ದೋಣಿಯನ್ನೇರಿ, ನದಿಯ ಆಚೆ ದಡಕ್ಕೆ ಬಂದೆ. ನಗರದಿಂದ ತುಸು ದೂರದಲ್ಲಿ, ದಡದ ಬಳಿಯ ಮರವೊಂದಕ್ಕೆ ನನ್ನ ದೋಣಿಯನ್ನು ಕಟ್ಟಿ, ನಗರದ ಹೊರವಲಯದ, ನನಗೆ ತಿಳಿದಂತೆ ಖಾಲಿ ಬಿದ್ದಿದ್ದ, ಮನೆಯೊಂದರತ್ತ ನಡೆದೆ. ಮನೆಯಲ್ಲಿ ದೀಪವುರಿಯುತ್ತಿದ್ದುದು ದೂರದಿಂದ ಕಾಣಿಸುತ್ತಿತ್ತು. ಹತ್ತಿರವಾದಂತೆ ಆ ಮನೆಯಲ್ಲಿ ಮಧ್ಯವಯಸ್ಸನ್ನು ಮೀರಿದ ಹೆಂಗಸೊಬ್ಬಳು, ಮೇಣದ ಬತ್ತಿಯ ಬೆಳಕಿನಲ್ಲಿ ಏನನ್ನೋ ಹೆಣೆಯುತ್ತಿರುವುದು ಕಂಡಿತು.

ಅಲ್ಲೇ, ಒಂದೆರಡು ನಿಮಿಷ ನಿಂತು, ಎಲ್ಲಾ ಧೈರ್ಯವನ್ನೂ ಒಗ್ಗೂಡಿಸಿಕೊಂಡು ಬಾಗಿಲು ತಟ್ಟಿದೆ.

0೪ ಸಾರಾ ಮೇರಿ ಜಾರ್ಜ್ ವಿಲಿಯಮ್ಸ್ ಪೀಟರ್.

ಬಾಗಿಲು ತಟ್ಟಿದ ಮನೆಯೊಳಗಿಂದಲೇ ಮನೆಯೊಡತಿ

"ಯಾರದು, ಒಳಗೆ ಬನ್ನಿ." ಎಂದಳು. ನಾನು ಹೋದೆ.
"ಕೂತ್ಕೋಮ್ಮಾ" ಎಂದವಳು, ತನ್ನ ಹೊಳೆಯುವ ಕಣ್ಣುಗಳಿಂದ ತೀವ್ರವಾಗಿ ನನ್ನನ್ನು ದಿಟ್ಟಿಸಿದಳು.
"ಎನು ಪುಟ್ಟೀ ನಿನ್ನ ಹೆಸರು?"
'ಸಾರಾ ವಿಲಿಯಮ್ಸ್"
"ಎಲ್ಲಿ ನಿಮ್ಮನೆ? ಪಕ್ಕದ ಮನೇನಾ?"
'ಅಲ್ಲ, ಅಲ್ಲ, ಹೂಕರ್‌ವಿಲೀ ನಮ್ಮೂರು, ಇಲ್ಲಿಂದ ಏಳು ಮೈಲಿ ಆಗುತ್ತೆ, ಅಲ್ಲಿಂದ ನಡ್ಕೊಂಡು ಬಂದೆನಲ್ಲಾ ಸ್ವಲ್ಪ ಆಯಾಸ ಆಯ್ತು."
"ಹೋ.. ಹಸಿವೂ ಆಗಿರ್‍ಬೇಕಲ್ಲಾ..? ಇರು ತಿನ್ನೋಕೇನಾದರೂ ಕೊಡ್ತೀನಿ."
"ಇಲ್ಲ .. ಇಲ್ಲ.. ಹಸಿವೇನೂ ಇಲ್ಲ. ಇಲ್ಲಿಗಿನ್ನೂ ಎರಡು ಮೈಲಿ ಇದೆ ಅನ್ನೋವಾಗ ಊಟ ಮಾಡಿದ್ದೆ, ಮನೇಲಿ ನಮ್ಮಮ್ಮನಿಗೆ ಹುಶಾರಿಲ್ಲ. ದುಡ್ಡೆಲ್ಲಾ ಖರ್ಚಾಗೋಯ್ತು. ಅದಕ್ಕೆ ಈ ಊರಲ್ಲಿ ಮೇಲ್ಗಡೆ ಬೀದೀಲಿ ಇರೋ ನಮ್ಮ ಮಾವ ಮೂರ್ ಹತ್ರ ಹೇಳೋದಕ್ಕೆ ಬಂದಿದೀನಿ. ನಿಮ್ಗೆ ಅವರು ಗೊತ್ತಾ?"
"ಇಲ್ಲಮ್ಮ, ನಾನೇನೋ ಊರಿಗೆ ಹೊಸಬಳು" ಇನ್ನೂ ಇಲ್ಲಿ ಜನ ಪರಿಚಯ ಅಷ್ಟಾಗಿಲ್ಲ. ಮೇಲ್ಗಡೆ ಬೀದಿ ಅಂದ್ರೆ, ಬಾವಿ ಕಟ್ಟೆಯಿಂದ ಆ ಕಡೆನಾ?"
"ಹೌದು"
"ಅಯ್ಯೋ, ಅಲ್ಲಿಗೆ ತುಂಬಾ ದೂರಾನೇ ಅಯ್ತಲ್ಲಮ್ಮ. ಒಂದ್ಕೆಲ್ಸ ಮಾಡು. ರಾತ್ರಿ ಇಲ್ಲಿದ್ದು, ಬೆಳಿಗ್ಗೆ ಎದ್ದು ಹೋಗು, ನಿನ್ನ ಕುಲಾವಿ ತೆಗೆದು, ಕೈ ಕಾಲು ತೊಳ್ಕೋ, ಊಟ ಮಾಡುವೆಯಂತೆ."
"ಇಲ್ಲ, ಇಲ್ಲ ಕತ್ಲೇಂದ್ರೆ ನನಗೆ ಹೆದರಿಕೆಯೇನೂ ಇಲ್ಲ. ಸ್ವಲ್ಪ ಸುಧಾರಿಸಿಕೊಂಡು ಹೋಗ್ಬಿಡ್ತೀನಿ"
ಅವಳೊಮ್ಮೆ ನನ್ನನ್ನು ನೋಡಿ "ಸರಿಯಮ್ಮ, ಆದ್ರೆ ಒಬ್ಳೇ ಹೋಗೋದೇನೂ ಬೇಡ, ನಮ್ಮೆಜಮಾನ್ರು ಬಂದ್ಮೇಲೆ ಅವರ ಜೊತೆ ಮಾಡಿ ಕಳಿಸ್ತೀನಿ' ಎಂದಳು. ಅಲ್ಲಿಂದ ಅವಳ ಮಾತು ಅವಳ ಗಂಡ, ಮಕ್ಕಳು, ಸಂಬಂಧಿಕರ ಕಡೆ ಹೊರಳಿತು. ಮಾತಾಡಿದಷ್ಟೂ ತಣಿಯದ ಉತ್ಸಾಹ ಅವಳಿಗೆ ಈ ವಿಷಯದಲ್ಲಿ. ಅವಳು ಮಾತಾಡುತ್ತಲೇ ಇದ್ದಳು, ನಾನು ಕೇಳುತ್ತಲೇ ಇದ್ದೆ. ಒಟ್ಟಿನಲ್ಲು ನನಗಂತೂ ನಾನು ಈ ಮನೆಗೆ ಬಂದು ತಪ್ಪು ಮಾಡಿದ್ದು ಖಾತ್ರಿಯಾಗಿತ್ತು. ಮಾತು ನನ್ನ ಕೊಲೆಯ ಕಡೆ ಹೊರಳಿದಾಗ ನನಗೂ ಕುತೂಹಲ ಮೂಡಿತು. ಅವಳು ನನ್ನ ಕತೆಯನ್ನೆಲ್ಲಾ ಹೇಳಿ ಕೊಲೆಯ ಭಾಗಕ್ಕೆ ಬಂದಾಗ ತಡಿಯಲಾರದ ಕುತೂಹಲದಿಂದ ಕೇಳಿಯೇಬಿಟ್ಟೆ. 'ಕೊಲೆ ಮಾಡಿದವರ್‍ಯಾರು? ನಮ್ಮೂರಲ್ಲೂ ಈ ವಿಷ್ಯ ತುಂಬಾ ಮಾತಾಡ್ತಾರೆ, ಆದ್ರೆ ಕೊಲೆ ಮಾಡಿದವರ್‍ಯಾರು ಅಂತ ಏನೂ ಗೊತ್ತಾಗ್ಲಿಲ್ಲ."
"ಇಲ್ಲೊ ಅಷ್ಟೆ, ಏನೋ ವಿಷ್ಯ ಇನ್ನೂ ಸರಿಯಾಗಿ ಗೊತ್ತಿಲ್ಲ. ಕೆಲವರು ಹೇಳ್ತಾರೆ ಆ ಹುಡುಗನ ಅಪ್ಪಾನೇ ಕೊಲೆ ಮಾಡಿರ್‍ಅಬೇಕಂತ"
"ಇಲ್ಲ.. ಹಾಗೆಲ್ಲಾದರೂ ಆಗುತ್ತೇನು"
"ಮೊದಮೊದಲು ಎಲ್ಲಾರೂ ಹಾಗೇ ಅನ್ಕೊಂಡಿದ್ದರು. ಹೆಚ್ಚು ಕಮ್ಮಿ ಅವನಿಗೆ ಅದೇ ವಿಷಯಕ್ಕೆ ನೇಣಿಗೂ ಹಾಕ್ಬಿಡ್ತಿದ್ದರು. ಆದ್ರೆ ಈಗ ಎಲ್ರೂ ಓಡಿಹೋದ್ನಲ್ಲಾ ಆ ಗುಲಾಮ ಜಿಮ್ ಅಂತ ಅವನೇ ಕೊಲೆ ಮಾಡಿರ್‍ಬೇಕು ಅಂತ ಅಂದ್ಕೊತಿದಾರೆ"
"ಅವನ್ಯಾಕೆ...." ನಾನು ಇನ್ನೂ ಏನೋ ಹೇಳುವುದರಲ್ಲಿದ್ದೆ. ಆದರೆ ಇಂತಹ ಸಮಯದಲ್ಲಿ ಮೌನವಾಗಿರುವುದೇ ಕ್ಷೇಮ ಎಂದು ವಿವೇಕ ಎಚ್ಚರಿಸಿತು. ಮಾತಿನ ಭರದಲ್ಲಿದ್ದ ಆಕೆಗೆ ನಾನೇನೋ ಹೇಳಲು ಪ್ರಯತ್ನಿಸಿದೆ ಎಂಬುದು ಆರಿವಿಗೇ ಬಂದಿರಲಿಲ್ಲ.
"ಅದೇ..... ಆಯಮ್ಮ ವಾಟ್ಸನ್, ಅವಳ ನೀಗ್ರೋ ಗುಲಾಮ ಓಡಿ ಹೋದ್ನಲ್ಲಾ, ಅವನು ಓಡಿಹೋದ ದಿನಾನೇ ಪಾಪ ಆ ಹುಡುಗನ ಕೊಲೆ ಆಗಿದ್ದು. ಆ ನೀಗ್ರೋ ತಲೆಗೆ ಮುನ್ನೂರು ಡಾಲರ್ ಬಹುಮಾನ, ಆ ಹುಡ್ಗನ ಅಪ್ಪನ ತಲೆಗೆ ಇನ್ನೂರು ಡಾಲರ್ ಬಹುಮಾನ ಇದೆ. ಕೊಲೆ ಆದ ಮೂರ್‍ನೇ ದಿನ ಇಲ್ಲಿ ಬಂದಿದ್ದ. ಎಲ್ಲಾರ ಹತ್ರಾನೂ ಹೇಳ್ಕೊಂಡು ಬಾಯ್ಬಡ್ಕೋತಿದ್ದ. ದೋಣೀಲಿ ಹೆಣ ಹುಡ್ಕೋಕೆ ಹೋದಾಗಲೂ ಜೊತೆಯಲ್ಲಿ ಇದ್ದ, ಆಮೇಲೆ ಎಲ್ಲೊ ಮಾಯ ಆಗ್ಬಿಟ್ಟ. ರಾತ್ರಿ ಹೊತ್ತಿಗೆ ಅವನೇ ಕೊಲೆ ಮಾಡಿರೋದು ಅಂತ ಜನಾ ಎಲ್ಲ ಅವನ್ನ ನೇಣು ಹತ್ತಿಸೋ ನಿರ್ಧಾರ ಮಾಡಿದ್ದರು. ಆದರೆ ಅವನು ಯಾರ ಕೈಗೂ ಸಿಗ್ಲೇ ಇಲ್ಲ;"
'ಅದಾದ ಮೇಲೆ ಅವನು ಯಾರಿಗೂ ಸಿಗ್ಲೇ ಇಲ್ಲವಾ?"
"ಅವನು ಕಾಣೆಯಾದಾಗಿನಿಂದ ಜನ ಅವನೇ ಕೊಲೆ ಮಾಡಿದ್ದು ಅಂತನ್ಕೊಂಡ್ರು. ಆದ್ರೆ ಮೂರ್‍ನೇ ದಿನ ಅವನು ವಾಪಸ್ಸು ಬಂದ. ಥ್ಯಾಚರ್ ಸಾಹೇಬ್ರ ಹತ್ತಿರ, ಓಡಿ ಹೋಗಿರೋ ನೀಗ್ರೋ ಗುಲಾಮನ್ನ ಹುಡ್ಕೋಕೆ ಹಣ ಬೇಕು ಅಂತ ಕೇಳಿ ಸ್ವಲ್ಪ ಹಣ ಈಸ್ಕೊಂಡ್ನಂತೆ. ಅವತ್ತು ರಾತ್ರಿ ಅಂತೂ ಪೂರಾ ಕುಡಿದಿದ್ನಂತೆ...... ಅದಾದ ಮೇಲೆ ಅವನನ್ನು ಕಂಡವರಿಲ್ಲ."
"ಹೋ..... ಇನ್ನೂ ಅವನ್ನ ಹುಡುಕ್ತಾ ಇದಾರಾ...?"
"ಇಲ್ಲ, ಈಗ ಜನ ಆ ಕೊಲೆ ಮಾಡಿರೋದು ಕಂಡಿತವಾಗ್ಲೂ ಆ ನೀಗ್ರೋನೆ ಅಂತ ನಂಬಿಬಿಟ್ಟಿದಾರೆ. ನಿಜ ಹೇಳ್ಬೇಕೂಂದ್ರೆ, ಇವತ್ತು ನಮ್ಮೆಜನಮಾನ್ರೂ, ಅವರ ಸ್ನೇಹಿತರೂ, ಆ ನೀಗ್ರೋನ ಹುಡ್ಕೊಂಡು ಹೋಗ್ತಿದಾರೆ."
"ನಿಜವಾಗಿ..!!! ಆದರೆ ಎಲ್ಲೀಂತ ಹುಡುಕ್ತಾರೆ... ಇವತ್ತೆಲ್ಲಿ ಹುಡುಕ್ತಾರೋ?"
"ಹೂಒ.... ಹೊರಗೆ ಹೋಗೋಕೆ ಮುಂಚೆ ಅವರು ಸ್ವಲ್ಪ ನಾಯಿಗಳನ್ನ ಹೊಂದಿಸ್ಕೊಂಡು ಬರ್ತೀನಿ ಅಂತ ಹೇಳಿ ಹೋದ್ರು. ನಾಯಿಗಳು ಸಿಗ್ತಿದ್ದ ಹಾಗೇ, ನಮ್ಮವರು ಅವರನ್ನ ಅದೇ ಆ ದ್ವೀಪ, ಜಾಕ್ಸನ್ ಐಲ್ಯಾಂಡ್ನಲ್ಲಿ ಹುಡುಕ್ತಾರಂತೆ.'
ಜಾಕ್ಸ್ನ್ ಐಲ್ಯಾಂಡ್.....!! ನಾಯಿಗಳು....!!! ಎದೆ ಗುಂಡಿಗೆ ನಿಂತು ಹೋಯಿತು, ಏನು ಮಾಡುವುದೋ ತೊಚಲಿಲ್ಲ. ಧೈರ್ಯವೆಲ್ಲಾ ಕರಗಿ ಹೋಗಿ, ಅಸಹನೆಯೂ, ಅಳುಕೂ ಕಾಣಿಸಿಕೊಂಡುಬಿಟ್ಟಿತ್ತು. ಏನೂ ಮಾಡಲು ತೋಚದೆ ಮೇಜಿನ ಮೇಲೆ ಬಿದ್ದಿದ್ದ ಸೂಜಿ, ದಾರಗಳನ್ನೆತ್ತಿಕೊಂಡು, ಸೂಜಿಗೆ ದಾರ ಪೋಣಿಸತೊಡಗಿದೆ. ಅದನ್ನು ಕಂಡ ಕೂಡಲೇ, ಆ ಹೆಂಗಸು ಮಾತು ನಿಲ್ಲಿಸಿ ಅದನ್ನೇ ದಿಟ್ಟಿಸಿ ನೋಡಿದಳೂ. ನನಗಿನ್ನೂ ಅಳುಕು ಹೆಚ್ಚಾಯಿತು. ಮೆಲ್ಲನೆ ಕೇಳಿದಳು "ಮಗೂ, ನಿನ್ನ ಹೆಸರು ಏನು ಹೇಳಿದೆ...?"
'ಮ್.... ಮೇರಿ ವಿಲಿಯಮ್ಸ್" ಏಕೋ ನನ್ನ್ ಮನಸ್ಸಿಗೆ ನಾನಿ ಮೇರಿ ಎಂದೇ ಮುಂಚೆ ಹೇಳಿದ್ದೇನೆಂದೆನ್ನಿಸಿದ್ದರಿಂದ ಹಾಗೆ ಹೇಳಿಬಿಟ್ಟೆ.
"ನೀನು ಬಂದಾಗ ಸಾರಾ ಅಂತ ಹೇಳಿದ ಹಾಗಿತ್ತಲ್ಲಾ?"
"ಓ ಹೌದು, ನನ್ನ ಪೂರ್ತಿ ಹೆಸರು, ಸಾರಾ ಮೇರಿ ವಿಲಿಯಮ್ಸ್ ಅಂತ" ಈ ಯೋಚನೆ ಮನಸ್ಸಿಗೆ ಬಂದಿದ್ದರಿಂದ ನನಗೇ ಸಂತೋಷವಾಗಿತ್ತು. ಅವಳಿದನ್ನು ನಂಬುತ್ತಾಳೆಂದೆಣಿಸಿದೆ. ಅವಳು ಮುಂದೆ ಏನೇನೋ ಮಾತಾಡುತ್ತ ಹೋದಾಗ, ಅವಳು ನಿಜವಾಗಿಯೂ ನಂಬಿಬಿಟ್ಟಳು ಎಂದು ನಾನೂ ನಂಬಿದೆ. ಮಾತು ಮನೆಯಲ್ಲಿರುವ ಹೆಗ್ಗಣಗಳ ಕಾಟದತ್ತ ಹೊರಳಿ, ಅದನ್ನು ತಪ್ಪಿಸಲು ಅವಳು ಮಾಡಿದ ಪ್ರಯತ್ನವನ್ನೆಲ್ಲಾ ಹೇಳಿದಳು. ಅಲ್ಲೊಂದು ಇಲ್ಲೊಂದು ಇಣಿಕಿ ನೋಡಿ, ಒಮ್ಮೊಮ್ಮೆ ಧೈರ್ಯವಾಗಿಯೇ ಓಡಾಡುತ್ತಿದ್ದ ಇಲಿಗಳನ್ನು ನೋಡಿದ ನನಗೆ ಅವಳ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲವೆಂದೇ ತೋರಿತು. ಅವಳು ನನ್ನ ಕೈಗೊಂದು ಸೀಸದ ಗುಂಡನ್ನು ಕೊಟ್ಟು ಇಲಿಯೇನಾದರೂ ಕಂಡರೆ ಅದನ್ನು ಗುಂಡಿನಿಂದ ಹೊಡೆದು ಕೊಲ್ಲಬೇಕೆಂದು ಹೇಳಿದಳು. ನನ್ನ ಬೇಟೆಗಾರ ಮನಸ್ಸು ಎಚ್ಚೆತ್ತಿತು, ಅವಳ ಮಾತಿನ ಮಧ್ಯೆಯೂ ಸೂಕ್ಷ್ಮವಾಗಿ ಗಮನಿಸುತ್ತಲೇ ಕುಳಿತಿದ್ದ ನನಗೆ ಮೂಲೆಯಲ್ಲೊಂದು ಮೂಷಿಕ ಮುಖ ತೋರಿಸಿದ, ಕೂಡಲೇ ಗುರಿಯಿಟ್ಟು ಗುಂಡನ್ನು ಎಸೆದು ಬಿಟ್ಟೆ. ಮೂಷಿಕರಾಯನ ಅದೃಷ್ಟ ಚೆನ್ನಾಗಿತ್ತು ಎನಿಸುತ್ತದೆ. ಏಟು ಒಂದೆರಡು ನೂಲಿನೆಳೆಯ ಅಂತರದಲ್ಲಿ ತಪ್ಪಿ, ಇಲಿ ಓಡಿ ಹೋಯಿತ್ಯ್. ಆಕೆ ಆ ಎಸೆದ ಸೀಸದ ತುಂಡಿನ ಬಳಿಗೆ ಹೋಗಿ ಅದನ್ನೆತ್ತಿಕೊಂಡು ಮತ್ತೆ ನನತ್ತ ಎಸೆದಳು. ನಾನದನ್ನು ಹಿಡಿದು ಕೈಯಿಂದ ಕೆಳಜಾರುತ್ತಿದೆ ಎನಿಸಿದಾಗ ಕಾಲುಗಳೆರಡನ್ನೂ ಜೋಡಿಸಿ ನಿಧಾನವಾಗಿ ತೊಡೆಯ ಮೇಲೆ ಜಾರಿಸಿಕೊಂಡೆ. ಅವಳಂತೂ ಹಾಗೇ ಏನೇನೋ ಮಾತಾಡುತ್ತಲೇ ಇದ್ದಳು. ,ಆತಿನ ಮಧ್ಯೆ, ಅದೇ ಓಘದಲ್ಲಿಯೇ ಇದ್ದಕ್ಕಿದ್ದಂಟೇ, ಸಂಪೂರ್ಣ ಅನಿರೀಕ್ಷಿತವಾಗಿ "ಈಗ ಹೇಳು, ನಿನ್ನ ನಿಜವಾದ ಹೆಸರೇನು?" ಎಂದಳು.
"ಹೆ,,, ಹೆ,,,, ಏನೆಂದಿರಿ?"
"ನಿನ್ನ ನಿಜವಾದ ಹೆಸರು-- ಬಿಲ್, ಟಾಮ್, ಬಾಬ್ ಅಥವಾ ಏನಾದ್ರೂ ಸರಿ, ಅದೇನೋ ಅದನ್ನು ಹೇಳು."
ನಾನು ಗಾಳಿಗೆ ಸಿಕ್ಕ ತರಗೆಲೆಯಂತೆ ಅಲ್ಲಾಡಿ ಹೋದೆ, ಏನು ಮಾಡುವುದೋ ತಿಳಿಯಲೇ ಇಲ್ಲ. ಕೆಲವು ಕ್ಷಣ ಸುಧಾರಿಸಿಕೊಂಡು, ಮತ್ತೆ ಅಮಾಯಕಳಂತೆ, "ಅಮ್ಮಾ, ನನ್ನಂತಹ ಬಡಹುಡುಗಿಯನ್ನು ಕಂಡರೆ ನಿಮಗೂ ತಮಾಷೆ ಮಾಡಬೇಕೆನ್ನಿಸುತ್ತಿದೆಯೇ? ... ನಾನೇನೋ..." ಇನ್ನೂ ಏನು ಹೇಳುತ್ತಿದ್ದೆನೋ, ಮಧ್ಯದಲ್ಲಿಯೇ ನನ್ನ ಮಾತು ತುಂಡರಿಸಿ ಅವಳೆಂದಳು "ಇಲ್ಲ ನೀನಲ್ಲಿಂದ ಎದ್ದು ಎಲ್ಲಿಗೂ ಹೋಗುವಂತಿಲ್ಲ. ನಾನು ನಿನಗೇನೂ ತೊಂದರೆ ಕೊಡುವುದಿಲ್ಲ. ಮನೆ ಬಿಟ್ಟು ಓಡಿ ಹೋಗ್ತಾ ಇದೀಯಾ, ಅಥವಾ ಇನ್ನೇನಾದ್ರೂ ವಿಷಯಾನಾ...? ಒಂದಂತೂ ನಿಜ, ಅದು ನೀನು ಹುಡ್ಗಿಯಂತೂ ಅಲ್ಲ, ಏನೇ ಇದ್ರೂ ನಾನೇನು ಯಾರಿಗೂ ಹೇಳುವುದಿಲ್ಲ. ಆದ್ರೆ ನನ್ನ ಹತ್ರ ನೀನು ನಿಜ ಹೇಳಲೇಬೇಕು" ಎಂದಳು.

ಇನ್ನು ನಾನು ನಾಟಕವಾಡುವುದರಲ್ಲಿ ಯಾವ ಪ್ರಯೋಜನವೂ ಇರಲಿಲ್ಲ. ಅವಳ ಬಳಿ ಎಲ್ಲಾ ಹೇಳಿಬಿಡಲೇಬೇಕಿತ್ತು. ಎಂತಲೇ ಹೇಳಲು ಶುರು ಮಾಡಿದೆ. "ನಾನೊಬ್ಬ ಅನಾಥ, ಸ್ವಲ್ಪ ದಿನಗಳ ಹಿಂದೆ ನನ್ನ ತಂದೆ ತಾಯಿ ತೀರಿಕೊಂಡರು. ಕಾನೂನಿನ ಪ್ರಕಾರ ನಾನೀಗ ಒಬ್ಬ ರೈತನ ಮನೆಯಲ್ಲಿರಬೇಕು. ಅವನ ಮನೆ ಇಲ್ಲಿಂದ ಮೂವತ್ತು ಮೈಲಿ ದೂರ ಅವನೋ ಹಳೆ ಕಾಲದವನು ಮತ್ತು ಸಿಡುಕ, ಮತ್ತು ಮಹಾನ್ ಕೊಳಕ, ನನಗೆ ಅಲ್ಲಿರಲು ಇಷ್ಟವಾಗಲಿಲ್ಲ. ಅದಕ್ಕೆ ಅವನು ಊರಿಗೆ ಹೋಗಿದ್ದ ಸಂದರ್ಭ ಸಾಧಿಸಿ, ಅವನ ಮಗಳ ಬಟ್ಟೆ ತೊಟ್ಟು ಗೋಷನ್ ನಗರಕ್ಕೆ ಓಡಿ ಬಂದಿದ್ದೇನೆ, ಇಲ್ಲಿ ನನ್ನ ಮಾವ ಮೂರ್ ಇದ್ದಾನೆ. ನನಗೆ ಅವನ ಬಳಿಗೆ ಹೋಗಲು ಇಷ್ಟ" ಎಂದೆ.
'ಅಯ್ಯೋ ಮಗೂ, ಇದು ಗೋಷನ್ ನಗರ ಅಲ್ಲ, ಇದು ಸೇಂಟ್ ಪೀಟರ್‍ಸ್‍ಬರ್ಗ್, ಗೋಷನ್ ನದೀ ಗುಂಟ ಮೇಲೆ ಹೋದರೆ ಇನ್ನೂ ಹತ್ತು ಮೈಲುಗಳಾಚೆ ಇದೆಯಲ್ಲೋ, ನಿನಗಾರು ಹೇಳಿದರು, ಇದು ಗೋಷನ್ ಎಂದು" ಎಂದು ಕೇಳಿದಳು.
'ಬೆಳಿಗ್ಗೆ ಸಿಕ್ಕ ಮನುಷ್ಯ ಇದೇ ಗೋಷನ್ ಎಂದು ಹೇಳಿದನಲ್ಲ"
"ಅವನೆಲ್ಲೋ ಕುಡಿದಿರಬೇಕು, ಅಷ್ಟೇ"
"ಹೋಗಲಿ ಬಿಡಿ, ಈಗ ಹೊರಟರೆ, ಇನ್ನೊಂದೆರಡು ಮೂರು ಗಂಟೆಗಳಲ್ಲಿ ಗೋಷನ್‍ನಲ್ಲಿರ್ತೀನಿ."
"ಇರಪ್ಪ ಸ್ವಲ್ಪ ಬುತ್ತಿ ಏನಾದ್ರೂ ಕೊಡ್ತೀನಿ" ಎಂದವಳೇ ಸ್ವಲ್ಪ ಬುತ್ತಿ ತಂದು ಕೊಟ್ಟಳು. "ಈಗ ಪಟ್ಟಂತ ಹೇಳು.. ಕೆಳಗೆ ಕೂತ ಹಸು ಮೇಲಕ್ಕೇಳುವಾಗ, ಮೊದಲು ಎತ್ತುವುದು ಹಿಂದೇನೋ, ಮುಂದೆನೋ..?"
"ಹಿಂದೆ"
"ಹಾಗಿದ್ದರೆ ಕುದುರೆ...?"
"ಮುಂದೆ"
"ಮರದ ಮೇಲೆ ಹಾವಸೆ ಬೆಳೆದರೆ ಯಾವ ದಿಕ್ಕಿಗೆ ಇರುತ್ತೆ?"
"ಉತ್ತರದ ದಿಕ್ಕಿಗೆ"
"ಹದಿನೈದು ದನಗಳ ಮಂದೆ ಬೆಟ್ಟದ ಕೆಳಗೆ ಹುಲ್ಲು ಮೇಯ್ತಾ ಇದ್ದರೆ, ಒಂದೇ ದಿಕ್ಕಿಗೆ ತಿರುಗಿ ಹುಲ್ಲು ಮೇಯೋ ಹಸುಗಳೆಷ್ಟು?"
"ಎಲ್ಲಾ ಹದಿನೈದು ಹಸುಗಳೂ ಒಂದೇ ದಿಕ್ಕಿಗೆ ತಿರುಗಿರ್‍ತಾವೆ."
"ಹೂ ... ಪರ್ವಾಗಿಲ್ಲ. ಈಗ್ಲಾದ್ರೂ ನಿಜ ಹೇಳಿದ್ಯಲ್ಲ, ರೈತಾಪಿ ಹುಡುಗ ಅಂತ ನಂಬಬಹುದು, ಏನು ನಿನ್ನ ನಿಜವಾದ ಹೆಸರು?"
"ಜಾರ್ಜ್ ಪೀಟರ್"
"ಇದನ್ನಾದರೂ ಸರಿಯಾಗಿ ಙ್ಞಾಪಕ ಇಟ್ಕೊ. ನೀನು ಇಲ್ಲಿಂದ ಹೋಗೋಕೆ ಮುಂಚೆ ಅಲೆಕ್ಸಾಂಡರ್ ಪೀಟರ್ ಅಂತ ಹೇಳ್ಬೇಡ." ಈ ಥರಾ ಹುಡ್ಗೀರ ಲಂಗ ಹಾಕ್ಕೊಡು ನನ್ನಂಥವರನ್ನ ಮೂರ್ಖರನ್ನಾಗಿ ಮಾಡೊಕೆ ಆಗೋಲ್ಲ. ಮಗೂ..ಹೆಂಗಸರು ಸೂಜಿಗೆ ದಾರ ಪೋಣಿಸಬೇಕಾದರೆ, ಸೊಜೀನ ಗಟ್ಟಿಯಾಗಿ ಹಿಡಿದು ದಾರ ಹಿಡ್ದಿರೋ ಕೈನ ಹತ್ರ ತರ್ತಾರೆ. ನಿನ್ನ ಹಾಗೆ ದರ ಹಿಡ್ಕೊಂಡು ಸೂಜೀನ ಹತ್ರ ತರಲ್ಲ, ಮತ್ತೆ ಸೀಸದ ತುಂಡನ್ನ ಇಲಿಗೆ ಹೊಡೆದ್ರೆ, ನೀನೆ ಯೋಚ್ನೆ ಮಾಡು, ಅಷ್ಟು ಚೆನ್ನಾಗಿ ಗುರಿ ಕಟ್ಟಿ ಯಾರದ್ರೂ ಹುಡ್ಗಿ, ಹೊಡೀತಾಳಾ? ಗೋಲಿ ಆಡುವಾಗ ಹೊಡೆಯುವ ಹಾಗೆ. ಕಡೇ ಪಕ್ಷ ಅಂದ್ರೂ ಇಲಿಯಿಂದ ಆರಡಿ ದೂರ ಬೀಳ್ಬೇಕು, ಹುಡ್ಗಿ ಎಸೆಯೋ ಗುಂಡು ಗೊತ್ತಾಯ್ತಾ, ಮತ್ತೆ ಎಸೆದ ಗುಂಡನ್ನು ಹಿಡಿಯೋಕೆ, ಹುಡುಗೀರು ಕಾಲು ಜೋಡಿಸ್ಬೇಕ್ಯಾಕೆ? ಅಗಲ ಮಾಡಿದ್ರೆ ತಾನಾಗೇ ಲಂಗಕ್ಕೆ ಬೀಳುತ್ತಲ್ವಾ? ಕಾಲು ಜೋಡಿಸೋದು ಗಂಡಸರು. ಗೊತ್ತಾಯ್ತೇನೋ, ಮೊದ್ದೆ? ಸಾರಾ ಮೇರಿ ವಿಲಿಯಮ್ಸ್ ಜಾರ್ಜ್ ಪೀಟರ್. ಇನ್ನು ಮುಂದೆ ಹುಶಾರಾಗಿರು. ಈಗ ಹೊರಡು."

ಅಷ್ಟೇ, ಅವಳಿಗೆ ಕೃತಙ್ಞತೆ ಹೇಳಿ ಹೋಗಿ ಬರುತ್ತೇನೆ ಎಂದು ಹೇಳಲು ಕೂಡಾನಾನು ಅಲ್ಲಿರಲಿಲ್ಲ. ಒಂದೇ ಕ್ಷಣದಲ್ಲಿ ಮನೆಯ ಬಾಗಿಲು ದಾಟಿ, ನನ್ನ ದೋಣಿಯವರೆಗೂ ಒಂದೇ ಸಮ ಓಡಿ, ದೋಣಿ ಹತ್ತಿ, ಜಾಕ್ಸನ್ ಐಲ್ಯಾಂಡಿಗೆ ಬಂದೆ. ನಾನು ಮೊದಲು ಶಿಬಿರ ಹಾಕಿದ್ದ ಜಾಗದಲ್ಲಿ ಬೆಂಕಿ ಹತ್ತಿಸಿ, ಈಗಿನ ಶಿಬಿರದ ಬಳಿ ಓಡಿದೆ. ಅಲ್ಲಿ ಜಿಮ್ ನಿದ್ರಾದೇವಿಯ ಆಲಿಂಗನದಲ್ಲಿ ಮೈ ಮರೆತಿದ್ದ. ಅವನನ್ನು ಏಳಿಸಿ "ಜಿಮ್ ನಮಗೆ ಸಮಯವೇ ಇಲ್ಲ. ಇಲ್ಲಿಂದ ಹೋಗಬೇಕು, ನಮ್ಮ ಹಿಂದೆ ಜನ ಬಿದ್ದಿದ್ದಾರೆ" ಎಂದೆ. ಅವನು ಏನೂ ಕೇಳಲಿಲ್ಲ. ಒಂದಕ್ಷರವನ್ನೂ ಉಸುರಲಿಲ್ಲ. ಆದರೆ ಅವನು ಕೆಲಸ ಮಾಡಿದ ರೀತಿಯೇ ಅವನು ಎಷ್ಟು ಹೆದರಿದ್ದನೆಂದು ತೋರಿಸುತ್ತಿತ್ತು. ಈ ಪ್ರಪಂಚದಲ್ಲಿ ನಮ್ಮದೆಂದಿರುವ ಸಮಸ್ತವನ್ನೂ ನಾವು ತೆಪ್ಪದೋಣಿಗೆ ತುಂಬಿಸಿದ್ದೆವು. ನನ್ನ ಚಿಕ್ಕ ಚಿಟ್ಟು ದೋಣಿಯಲ್ಲಿ ಒಂದು ಸುತ್ತು ಹೋಗಿ ಬೇರೆ ಯಾವುದಾದರೂ ದೋಣಿಗಳು ಬರುತ್ತಿವೆಯೇನೋ ನೋಡಿದೆ. ಯಾವ ದೋಣಿಯೂ ಕಾಣಲಿಲ್ಲ. ನಾವು ತೆಪ್ಪ ದೋಣಿ ಹತ್ತಿ ಅದರಲ್ಲಿ, ಅಲ್ಲಿಂದ ನದಿಯ ಹರವಿನ ಜೊತೆಗೇ ಹೊರಟುಬಿಟ್ಟೆವು. ಪ್ರಕೃತಿ ನಿಶ್ಯಬ್ದವಾಗಿತ್ತು. ನೀರ ಹರವಿನ ಸದ್ದೂ ನದಿಯ ಮಧ್ಯೆ ಇರಲಿಲ್ಲ. ಈ ನಿಶ್ಯಬ್ದ ಸೌಂದರ್ಯಕ್ಕೆ ನಾವೂ ಮೌನವಾಗಿಯೇ ಕುಳಿತು ಕಾಣಿಕೆಯರ್ಪಿಸಿದರೂ, ಅದನ್ನು ಸವಿಯುವಷ್ಟು ಮನಸ್ಸು ಸರಳವಾಗಿರಲಿಲ್ಲ.

0೫. ಹಬೆದೋಣಿಯ ಅವಶೇಷಗಳ ಮೇಲೆ.

ನಾವು ಜಾಕ್ಸನ್ ಐಲ್ಯಾಂಡನ್ನು ಪೂರ್ತಿಯಾಗಿ ಹಾದುಹೋಗುವಷ್ಟರಲ್ಲಿ ರಾತ್ರಿ ತುಂಬಾ ಹೊತ್ತಾಗಿತ್ತು. ಬಹುಶಃ ಒಂದು-ಒಂದೂವರೆಯಾಗಿರಬೇಕು. ನಾವು ಎಷ್ಟು ಹೆದರಿದ್ದೆವೆಂದರೆ, ನಮ್ಮ ಮನಸ್ಸಿನಲ್ಲಿ ಯಾವ ಯೋಚನೆಗಳೂ ಸುಳಿಯುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ನಮ್ಮನ್ನು ಹಿಂಬಾಲಿಸಿಯೋ ಅಥವಾ ಮತ್ತೊಂದೋ ಏನಾದರೂ ದೋಣಿ ಬಂದರೆ, ನಾವು ತೆಪ್ಪದಿಂದ, ನನ್ನ ಚಿಟ್ಟು ದೋಣಿಗೆ ಹಾರಿ ಸ್ವಲ್ಪ ದೂರ ಹೋಗಿ ಅಡಗಿ ಕುಳಿತು ಮತ್ತೆ ತೆಪ್ಪಕ್ಕೆ ಹಿಂತಿರುಗಬಹುದಿತ್ತು. ಆದರೆ ನಮಗೆ ಅದೇನನ್ನೂ ಯೋಚಿಸುವ ಮನಸ್ಥಿತಿಯೇ ಇರಲಿಲ್ಲ.

ಮರುದಿನ ಪ್ರಥಮ ಉಷಾಕಿರಣಗಳನ್ನು, ಕಂಡದ್ದೇ, ದಡಕ್ಕೆ ತೆಪ್ಪವನ್ನೆಳೆದು ಮರವೊಂದಕ್ಕೆ ಕಟ್ಟಿದೆವು. ತೋಪಿನೊಳಗೆ ಸಾಕಷ್ಟು ಮರದ ರೆಂಬೆಗಳನ್ನೂ , ಸೊಪ್ಪುಗಳನ್ನೂ ಕಡಿದು ಅದರಿಂದ ನಮ್ಮ ತೆಪ್ಪವನ್ನು ಮುಚ್ಚಿಟ್ಟೆವು. ಅದೇ ಹತ್ತಿಯ ಪೊದೆಯ ಮರೆಯಲ್ಲಿ, ನಾವೂ ಮೈ ಒಡ್ಡಿದೆವು. ಆಯಾಸದಿಂದ ನಿದ್ದೆ ಬರುತ್ತಿದ್ದರೂ, ನಾನು ನಿದ್ದೆ ಹೋಗುವ ಮೊದಲು ಸೆಂಟ್ ಪೀಟರ್‍ಸ್‍ಬರ್ಗ್‍ನಲ್ಲಿ ಆ ಹೆಂಗಸು ಹೇಳಿದ ಕತೆಯನ್ನು ಜಿಮ್‍ಗೆ ಹೇಳಿದೆ.

ಕತ್ತಲು ಹಣಕಲು ಶುರುವಾದ ಮೇಲೆ, ನಾವು ಅವಿತಿದ್ದ ಪೊದೆಗಳಿಂದ ಹೊರಬಂದು ಸುತ್ತಲೂ ಅವಲೋಕಿಸಿದೆವು. ಏನೂ ಕಾಣಿಸಲಿಲ್ಲ. ಮ್ನಸ್ಸಿಗೆ ನೆಮ್ಮದಿಯಾದ ಮೇಲೆ, ಧೈರ್ಯವಾಗಿ ಓಡಾಡಲಾರಂಭಿಸಿದೆವು. ಜಿಮ್ ಮರದ ದಿಮ್ಮಿಗಳು, ಹಾಗೂ ತುಂಡುಗಳಿಂದ ನಮ್ಮ ತೆಪ್ಪದ ಮೇಲೊಂದು ಗುಡಾರ ಹೂಡಿದನು.

ಅದರ ಮೇಲೆ ಮರದ ರೆಂಬ್, ಸೊಪ್ಪು ಹರಡಿ ಎಷ್ಟು ಚೆನ್ನಾಗಿ ಮಾಡಿದನೆಂದರೆ, ಅದರೊಳಗೆ ರಣಬಿಸಿಲ ಸೂರ್ಯಕಿರಣವಾಗಲೀ, ಜವಮಳೆಯ ತುಷಾರವಾಗಲೀ, ಸದಾಕಾಲಕ್ಕೂ ನಿಷೇಧಿಸಲ್ಪಟ್ಟಿತ್ತು. ಅಂತೂ ನಮ್ಮ ಅಮೂಲ್ಯ ವಸ್ತುಗಳಿಗೊಂದು ರಕ್ಷೆ, ತೆಪ್ಪದ ಮೇಲೆ ಒಂದೂವರೆ ಅಡಿ ಎತ್ತರಕ್ಕಿದ್ದ ಆ ಗುಡಾರವಾಯಿತು.

ಆ ನದಿಯ ಹರವಿನೆಡೆಗೇ ಹಾಗೆ ಸಾಗಿ ಹೋದೆವು. ನಮ್ಮ ಪಯಣ ರಾತ್ರಿಗಳಲ್ಲಿ ಮಾತ್ರ. ಅದೊಂದು ನಿರಂತರ ತಾಮಸ ಯಾತ್ರೆಯಾಗಿತ್ತು. ಸುತ್ತ ನೀರು, ಆ ನೀರಿನ ಮೇಲೊಂದು ತೆಪ್ಪ, ತೆಪ್ಪದಲ್ಲಿ ಕುಳಿತ ನಾನು, ನನ್ನ ಒತ್ತಿಗೆ ಕರಿಯ ಗುಲಾಮ ಜಿಮ್, ತೆಪ್ಪಕ್ಕೆ ಹಗ್ಗದಿಂದ ಕಟ್ಟಿದ್ದು, ಹಿಂದೆಲ್ಲೋ ತೇಲಿಬರುತ್ತಿದ್ದ ನನ್ನ ಚಿಟ್ಟು ದೋಣಿ. ದಡಗಳಲ್ಲಿ ಬೆಳದಿಂಗಳಿಗೆ ಕಾಣುವ ವಿಪಿನ ವನರಾಜಿ. ಅದೊಂದು ಅದ್ಭುತ ಯಾತ್ರೆ. ನಮ್ಮ ಯಾತ್ರೆಯಲ್ಲಿ ಹಲವು ಪಟ್ಟಣಗಳನ್ನು ನಾವು ಹಾದು ಹೋದೆವು. ಹಲವು ದೂರದ ಬೆಟ್ಟಗಳ ಸಾಲಿನಲ್ಲಿರುವ ಪಟ್ಟಣಗಳು. ಅವುಗಳು ಚುಕ್ಕಿ ಚುಕ್ಕಿ ಬೆಳಕಿನಿಂದ ಕಂಗೊಳಿಸಿ ನಯನ ಮನೋಹರ ದೃಶ್ಯ ನಿರ್ಮಾತೃವಾಗಿದ್ದವು. ಐದನೆಯ ರಾತ್ರಿ, ಸೇಂಟ್ ಲೂಯಿಸ್ ನಗರವನ್ನು ಹಾದು ಹೋಗುವಾಗ, ಆ ಸೌಂದರ್ಯವನ್ನು ನೋಡಿ ಮೂಕನಾದೆ. ನಾನೆಂದೂ ಕಂಡಿರದ ಅದ್ಭುತ ದೃಶ್ಯವಾಗಿತ್ತು ಅದು. ರಾತ್ರಿ ಶುರುವಾಗಲು ಸ್ವಲ್ಪ ಮುಂಚೆ, ಹತ್ತಿರದ ಹಳ್ಳಿಗೆ ಹೋಗಿ, ಕುರಿಮಾಂಸವೋ, ಹಂದಿ ಮಾಂಸವೋ ತರುವುದು, ನಮ್ಮ ನಿತ್ಯ ಕರ್ಮವಾಗಿತ್ತು. ಒಂದೊಂದು ದಿನ ಯಾರದಾದರೂ ಮನೆಯ ಬೇಲಿಯಲ್ಲಿ ಕೋಳಿಯನ್ನೋ, ಕಲ್ಲಂಗಡಿಯನ್ನೋ, ಕಂಡರೆ ಈ ಕರ್ಮಕ್ಕೆ ರಜ. ಮೆಲ್ಲಗೆ ಅದನ್ನು ಲಪಟಾಯಿಸಿಕೊಂಡು ಓಡಿಬಿಡುತ್ತಿದ್ದೆ. ಆಗಾಗ ನೀರ್‍ಹಕ್ಕಿಗಳನ್ನೂ ಹೊಡೆದು ನಮ್ಮ ಊಟದ ರುಚಿ ಹೆಚ್ಚಿಸಿಕೊಳ್ಳುತ್ತಿದ್ದೆವೆನ್ನಿ.

ಆ ರಾತ್ರಿ ಸೇಂಟ್ ಲೂಯಿಸ್ ನಗರವನ್ನು ಹಾದು ಹೋದ ರಾತ್ರಿ. ಮಧ್ಯರಾತ್ರಿಯ ನಮ್ತರ ಚಂಡಮಾರುತವೆದ್ದಿತು! ಗುಡುಗು-ಸಿಡಿಲುಗಳಸ್ತ್ರವನ್ನೊಳಗೊಂಡ ಮಹಾ ಮುಸಲಧಾರಾ ಮಳೆಯು, ಭುವಿಯ ಮೇಲೆ ಆಕ್ರಮಣಗೈದಿತ್ತು. ನಮಗೇನು ಹೆದರಿಕೆ? ನಾವು ಪ್ರಕೃತಿಯ ಮಕ್ಕಳಲ್ಲವೇ? ಮಹಾ ಮಹಾ ಮಿಂಚುಗಳು ಸರ್ವಾಗಸವ್ಯಾಪಿಯಾಗಿ, ಸೂರ್ಯನಿಗೆ ಸವಾಲೆಸೆಯುವಂತೆ ಕ್ಷಣಗಟ್ಟಲೆ ಭೂಮಿಯನ್ನು ಬೆಳಗುತ್ತಿದ್ದವು. ಒಮ್ಮೆ ಹೀಗೇ ಭೂಮಿ ಬೆಳಕಾಯಿತು. ಆ ಬೆಳಕಿನಲ್ಲಿ "ಜಿಮ್.. ಅಲ್ಲಿ.... ಆ ಕಡೆ ನೋಡಿದೆಯಾ?" ಎಂದು ಕೂಗಿದೆ.

ಅಲ್ಲೊಂದು ಉಗಿದೋಣಿ ನಿಂತಿತ್ತು. ನದೀ ನೀರ ಪ್ರವಾಹದಲ್ಲಿ, ಏಕೋ, ಏನೋ ಮಧ್ಯೆ ಎದ್ದು ನಿಂತ ಬಂಡೆಗೆ ಅಪ್ಪಳಿಸಿ, ಇನ್ನು ಮಾನವನಿಗೆ ಉಪಯೋಗಕ್ಕೆ ಬಾರದಂತೆ, ಆ ದುಖಃದಲ್ಲೇ, ಅದೇ ನದೀ ನೀರಿನಲ್ಲೇ ಮಹಾಪ್ರಸ್ಥಾನಕ್ಕೆ ಸಿದ್ದವಾಗಿರುವಂತೆ. ನಾನು ಅಲ್ಲಿಗೆ ಹೋಗಿ ನಮಗೇನಾದರೂ ಉಪಯುಕ್ತವಾದುದಿದ್ದರೆ ತೆಗೆದುಕೊಂಡು ಬರಬೇಕೆಂದು ಯೋಚಿಸಿ ಜಿಮ್‍ಗೆ ಹೇಳಿದೆ. ಶವಸಂಸ್ಕಾರಕ್ಕೆ ಮುನ್ನ ಶವದ ಒಡವೆಗಳನ್ನು ಬಿಚ್ಚಿಕೊಳ್ಳುವುದಿಲ್ಲವೇ...? ಆದರೆ ಜಿಮ್ "ಅಯ್ಯಪ್ಪಾ... ಅಲ್ಲೆಲ್ಲಾ ಹೋಗಿ ನಾವೇ ಮುಠ್ಠಾಳರಾಗುವುದು ಬೇಡ. ಅಲ್ಲ್ಯಾರಾದರೂ ಕಾವಲುಗಾರರು ಇರಬಹುದು' ಎಂದ.
"ನಿಮ್ಮಜ್ಜಿ ತಲೆ, ಮುಳುಗ್ತಾ ಇರೋ ದೋಣಿಗೊಬ್ಬ ಕಾವಲುಗಾರನಂತೆ, ಥೂ ನಿನ್ನ! ಯಾರದ್ರೂ ಜೀವಾನೇ ಒತ್ತೆ ಇಟ್ಟು ಮುಳುಗೋ ದೋಣೀನ ಕಾಯ್ತಾರೇನೋ..?" ಎಂದೆ.
ಜಿಮ್‍ಗೆ ಏನನ್ನಿಸಿತೋ ಏನೋ ಗೊಣಗುತ್ತಲೇ ನನ್ನ ಜೊತೆ ಉಗಿದೋಣಿಗೆ ಹತ್ತಿದ. ದೋಣಿಯಲ್ಲಿ ನಾವು ಎಲ್ಲೆಡೆ ಓಡಾಡಿದೆವು. ಮೇಲಿನ ಅಟ್ಟ, ಕೆಳಗಿನ ಡೆಕ್ಕು, ಡೆಕ್ಕುಗಳ ಅಂತಸ್ತುಗಳು, ಹೀಗೇ ಬರಬೇಕಾದರೆ, ಬಾಗಿಲು ತೆರೆದಿದ್ದ ಕ್ಯಾಪ್ಟನ್ನನ ಕೊಠಡಿ ಕಾಣಿಸಿತು. ಅದು ಉದ್ದನೆಯ ಓಣಿಯ ಕೊನೆಯಲ್ಲಿತ್ತು, ಮತ್ತು ಅಲ್ಲಿಂದ ದೀಪದ ಬೆಳಕನ್ನೂ ಕಾಣಬಹುದಿತ್ತು. ಮತ್ತೆ ಸಣ್ಣನೆಯ ದನಿ ಕೂಡಾ ಕೇಳಿಸಿತು. "ಅಯ್ಯೋ....... ನನ್ನ ಬಿಟ್ಟು ಹೋಗಬೇಡಿ. ..... ನಾನಾರಿಗೂ ಹೇಳುವುದಿಲ್ಲ."
ಜಿಮ್‍ಗೆ ಏನೋ ಒಂದು ರೀತಿಯಾಯಿತು ಎನಿಸುತ್ತದೆ. "ನಡಿ... ಇಲ್ಲಿಂದ ಹೋಗಿ ಬಿಡೋಣ" ಎಂದ. ನಾವು ಆ ದೋಣಿಯಿಂದಿಳಿಯುವಷ್ಟರಲ್ಲೇ ಇನ್ನೊಂದು ಧ್ವನಿ ಗಟ್ಟಿಯಾಗಿ "ಜಿಮ್ ಟರ್ನರ್, ಸುಳ್ಳು ಹೇಳಬೇಡ. ನಿನ್ನ ಈ ಥರದ ನಾಟಕವನ್ನೆಷ್ಟೋ ನೋಡಿಯಾಯಿತು" ಎಂದಿತು.
ಮತ್ತೊಂದು ಧ್ವನಿ "ಹೂಞ್, ನಿನಗೇ ದೊಡ್ಡಪಾಲು ಬೇಕಾ? ಕೊಡಲ್ಲಿಲ್ಲಾಂದ್ರೆ ಎಲ್ಲರಿಗೂ ಹೇಳ್ತೀನಿ ಅಂತ ಬೇರೆ ಹೆದರಿಸ್ತೀಯಾ..? ಆದರೆ ಈ ಸರ್ತಿ ನಿನ್ನಾಟ ಕೊನೆಯಾಗುತ್ತೆ" ಎಂದ ಹಾಗೆ ಕೇಳಿಸಿತು.

ಇಷ್ಟೊತ್ತಿಗೆ ಜಿಮ್ ನಮ್ಮ್ ತೆಪ್ಪದೋಣಿಯಲ್ಲಿ ಸೇರಿಯಾಗಿತ್ತು. ಅವನ ಪುಕ್ಕಲುತನಕ್ಕೆ ನಗು ಬಂದರೂ, ಕುತೂಹಲ ಹೆಚ್ಚಿದ್ದರಿಂದ ಆ ಕೊಠಡಿಯ ಬಳಿಗೆ ಸದ್ದು ಮಾಡದೆ ತೆವಳಿದೆ. ಅದರ ಪಕ್ಕದ್ ಕ್ಯಾಬಿನ್ನಿನಿಂದೈದ್ದ ಬಾಗಿಲ ಸಂದಿಯಿಂದ, ಈ ರೂಮಿನಲ್ಲಿ ನಡೆಯುತ್ತಿರುವುದನ್ನೆಲ್ಲಾ ನೋಡಬಹುದಾಗಿತ್ತು. ಅಲ್ಲಿ ಒಬ್ಬ ಮನುಷ್ಯ ನೆಲದ ಮೇಲೆ ಅಂಗಾತ ಬಿದ್ದಿದ್ದ. ಅವನ ಕೈ ಕಾಲುಗಳನ್ನು ಕಟ್ಟಲಾಗಿತ್ತು. ಅವನೆದೆಯ ಮೇಲೆ ಕಾಲಿಟ್ಟು ಇಬ್ಬರು ನಿಂತಿದ್ದರು. ಒಬ್ಬನ ಕೈಯಲ್ಲಿ ಬಂದೂಕೂ, ಇನ್ನೊಬ್ಬನ ಕೈಯಲ್ಲಿ ಲಾಟೀನೂ ಇದ್ದಿತು. ಅವರಿಬ್ಬರೂ ಕೆಳಗೆ ಬಿದ್ದಿದ್ದವನನ್ನು ಕೊಲ್ಲುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದರು. ಲಾಟೀನು ಹಿಡಿದವನು, ಕೊಲ್ಲುವುದು ಬೇಡವೆಂದೂ, ಬಂದೂಕು ಹಿಡಿದವನು ಕೊಲ್ಲಲೇಬೇಕೆಂದೂ ನಿರ್ಧರಿಸಿದ್ದಂತೆ ಕಂಡಿತು. ಅದರಲ್ಲೊಬ್ಬ ಇನ್ನ್ನೊಬ್ಬನಿಗೆ "ನಿನಗೊಂದು ವಿಷಯ ಹೇಳಬೇಕು ಬಾ" ಎಂದು ನಾನಿದ್ದ ಕ್ಯಾಬಿನ್ನಿನ ಕಡೆಗೆ ಬಂದ....!!!!

ಮಿಂಚಿನಂತೆ ಆ ಕ್ಯಾಬಿನ್ನಿನ ಸಾಮಾನುಗಳನ್ನಿಡುವ ಅಟ್ಟಕ್ಕೆ ಹಾರಿದ ನಾನು ಹಾಗೇ ಕಚ್ಚಿಕೊಂಡು, ಮಿಸುಕಾಡದಂತೆ ಕುಳಿತೆ. ಅಲ್ಲಿಂದ ಆ ಇಬ್ಬರು ನನಗೆ ಕಾಣದಿದ್ದರೂ, ಅವರ ಮಾತು, ಉಸಿರಾಟ ಸ್ಪಷ್ಟವಾಗಿ ಕೇಳುತ್ತಿತ್ತು. ಅಷ್ಟೇಕೆ ಅವರು ಕುಡಿದಿದ್ದ ಕಳ್ಳಿನ ವಾಸನೆಯೂ ಹೊಡೆಯುತ್ತಿತ್ತು.

ಅವರಲ್ಲೊಬ್ಬ "ಅವನನ್ನು ಕೊಂದೇ ಸೈ" ಎಂದ.
ಇನ್ನೊಬ್ಬ " ಅದೊಂದು ಕರ್ಮ ನಮಗ್ಯಾಕೆ ಈಗ. ಒಂದು ಕೆಲಸ ಮಾಡೋಣ. ನಮಗೇನು ಬೇಕೋ ಅದನ್ನೆಲ್ಲಾ ತೆಗೆದುಕೊಂಡು ನಮ್ಮ ದೋಣಿಯಲ್ಲಿ ಇಲ್ಲಿಂದ ಹೊರಟು ಬಿಡೋಣ. ಹೇಗೂ ಎರಡು ಗಂಟೆಗಳಲ್ಲಿ ಈ ದೋಣಿ ಮುಳುಗಿ ಹೋಗುತ್ತದೆ. ಆಗ ಅವನೂ ತನ್ನಷ್ಟಕ್ಕೇ ಸಾಯುತ್ತಾನೆ. ಬದುಕಿದರೆ ಅವನ ಅದೃಷ್ಟಾನೋ.. ದುರದೃಷ್ಟಾನೋ.. ಯಾವುದೋ ಒಂದು" ಅಂದ. ಈ ಉಪಾಯ ಅವರಿಬ್ಬರಿಗೂ ಒಪ್ಪಿಗೆಯಾಯಿತೆಂದು ತೋರುತ್ತದೆ. ಬಾ ಬಾ ಎನ್ನುತ್ತಾ ಅಲ್ಲಿಂದ ಅವರಿಬ್ಬರೂ ಹೊರಗೆ ಹೋದರು. ನಾನು ಕೂಡಲೇ ಅಲ್ಲಿಂದ ಓಡಿ ಆ ಉಗಿದೋಣಿಯ ಮುಂಭಾಗಕ್ಕೆ ಬಂದೆ. ಅಲ್ಲೆಲ್ಲಾ ಕಾರ್ಗತ್ತಲು ಕವಿದಿತ್ತು. ಪಿಸುದನಿಯಲ್ಲಿಯೇ "ಜಿಮ್" ಎಂದು ಕರೆದೆ. ಅವನು ತೆಪ್ಪವನ್ನೇರಿ ಅಲ್ಲೇ ನನಗೆಲ್ಲಾದರೂ ಕಾಯುತ್ತಿರಬಹುದೆಂದು ನನ್ನ ಎಣಿಕೆಯಾಗಿತ್ತು. ಆದರೆ ಅವನು ಉಗಿದೋಣಿಯ ಮೇಲೇ, ನನ್ನ ಕೈಕೆಳಗೇ ಅವಿತುಕೊಂಡಿದ್ದ. "ಯಾಕೋ?" ಎಂದೆ.
" ನಮ್ಮ ತೆಪ್ಪ.. ಎಲ್ಲೋ ಕೊಚ್ಕೊಂಡು ಹೋಗಯ್ತೆ" ಎಂದ.
ನನ್ನ ಎಲ್ಲಾ ಆಸೆಗಳೂ, ಜೀವದ ಮೇಲಿನ ಆಸೆಯೂ ಸೇರಿದಂತೆ ಆ ಕ್ಷಣವೇ ಹುಸಿಯಾದವು. ತೆಪ್ಪವಿಲ್ಲದೆ ಆ ತುಂಬು ಹೊಳೆಯಲ್ಲಿ ಈಜುವುದಂತೂ ಅಸಾಧ್ಯ. ಇನ್ನು ಆ ಕೊಲೆಗಡುಕರ ಕೈಗೆ ಸಿಕ್ಕಿಬಿದ್ದರೆ?... ಅಷ್ಟೇ....!

ಇಲ್ಲಿಗೆ ಬರುವ ಮುಂಚೆ, ಕ್ಯಾಬಿನ್ನಿನಲ್ಲಿದ್ದಾಗ, ನಮ್ಮ ತೆಪ್ಪದಲ್ಲಿ ಕೂಡಲೇ ಹತ್ತಿರದ ನಗರಕ್ಕೆ ಹೋಗಿ, ಅಲ್ಲಿಂದ ಅಲ್ಲಿನ ಶರೀಫ಼ನನ್ನು ಕರೆತಂದು, ಈ ಮೂವರು ಕೊಲೆಗಾರರನ್ನೂ ಹಿಡಿದುಕೊಡಬೇಕೆಂದು ಯೋಚಿಸಿದ್ದೆ. ಈಗ ನಾನೇ ಅವರಿಗೆ ಸಿಕ್ಕಿಬೀಳುವುದೋ. ಅವರಿಗೆ ಸಿಕ್ಕಿಬೀಳದಿದ್ದರೂ, ಉಕ್ಕಿ ಹರಿಯುತ್ತಿರುವ ನೀರಿಗೆ ಸಿಕ್ಕೋ ಸಾಯುವಂತಾಗಿತ್ತು. ಆ ಕ್ಷಣ ಮನಸ್ಸಿಗೊಂದು ಯೋಚನೆ ಹೊಳೆಯಿತು. ಮಾತಿನ ಮಧ್ಯೆ ಆ ಖೂನಿಗಾರರು ತಮ್ಮ ದೋಣಿಯ ಬಗ್ಗೆ ಮಾತಾಡಿಕೊಂಡಿದ್ದರಲ್ಲಾ.. ಅದು ಇಲ್ಲೆಲ್ಲೋ, ಈ ದೊಡ್ಡ ಉಗಿದೋಣಿಯಲ್ಲೇ ಇರಬೇಕು ಎಂದು. ಕೂಡಲೇ ಜಿಮ್‍ಗೆ ವಿಷಯ ತಿಳಿಸಿ, ಅವನು ಎಡಗಡೆಯಿಂದ ಹುಡುಕುವುದೆಂತಲೂ, ನಾನು ಬಲಗಡೆಯಿಂದ ಹುಡುಕುವುದೆಂತಲೂ ನಿರ್ಧರಿಸಿ ಕಾರ್ಯರೂಪಕ್ಕಿಳಿದೆವು. ಆ ಕಾರ್ಗತ್ತಲಿನಲ್ಲಿ ಅದೇನೂ ಸುಲಭದ ಕಾರ್ಯವಾಗಿರಲಿಲ್ಲ.

ನಾನು ಬಲಗಡೆ ದೋಣಿಯ ಅರ್ಧದಷ್ಟು ದೂರ ಹೊಗಿರಬಹುದು. ಅಲ್ಲೇ ಒಂದು ಬಾಗಿಲು ಠಕ್ಕನೆ ತೆಗೆದುಕೊಂಡಿತು. ಅಲ್ಲಿಂದೊಬ್ಬನ ತಲೆ ಕೂಡಾ ಇಣುಕಿತು. ಅವನು ನನ್ನನ್ನು ನೋಡಿರಬೇಕೆಂದುಕೊಂಡೆ. ಆದರೆ ಸರಕ್ಕನೆ ತಲೆ ಒಳಗೆಳೆದುಕೊಂಡ ಅವನು. ಮಾತಾಡುತ್ತಿರುವುದು ಕೇಳಿಸಿತು. ನಾನು ಅವಿತುಕೊಂಡೆ.
"ಏ .. ಆ ಲಾಟೀನು ಆರಿಸು." ಅದರ ಬೆಳಕು ಹೊರಗಡೆ ನಮಗೆ ಅಪಾಯ ತರಬಹುದು."

"ಹೌದು, ಹೌದು..." ಎಂದ ಇನ್ನೊಬ್ಬ ಲಾಟೀನನ್ನು ಆರಿಸಿದನೇನೋ, ಬೆಳಕು ನಂದಿ ಹೋಯಿತು.

ಬಾಗಿಲು ತೆಗೆದುಕೊಂಡು ಬಂದ ಅವನು ಅಲ್ಲೇ ಎಡಗಡೆ ಮೂಲೆಗೆ ತನ್ನ ಕೈಯಲ್ಲಿದ್ದ ಚೀಲವನ್ನೆಸೆದುಆ ಕಡೆ ನಡೆದು ಹೋದನು. ಅಂದರೆ ಅವರ ಜೀವರಕ್ಷಕ ದೋಣಿ ಅಲ್ಲಿದೆ. ! ಅವರಿಬ್ಬರೂ ನಿಧಾನವಾಗಿ ಅದರಲ್ಲಿ ಇಳಿದರು. ನಾನು ನಿಸ್ಸಹಾಯಕನಾಗಿ ನೋಡುತ್ತಲೇ ಇದ್ದೆ. ಆಗ ಅವರಲ್ಲೊಬ್ಬ " ಹೇ.. ಅವನ ಜೇಬನ್ನೂ ತಡವಿ ನೋಡಬೇಕಿತ್ತು. ಅವನೊಬ್ಬ ಕಂತ್ರಿ. ಜೇಬಲ್ಲೂ ಏನಾದ್ರೂ ಬಚ್ಚಿಟ್ಟುಕೊಂಡಿರ್‍ತಾನೆ" ಎಂದ.
"ನೀನು ನೋಡಲಿಲ್ಲವಾ... ನೀನು ನೋಡಿರ್‍ತೀಯಾ ಅಂತ ನಾನು ಸುಮ್ಮನಾದೆ."
"ಇಲ್ಲ, ನೋಡಲಿಲ್ಲ. ಬಾ... ಹೋಗಿ ನೋಡ್ಕೊಂಡು ಬರೋಣ"

ಇಬ್ಬರೂ ಅಲ್ಲಿಂದೆದ್ದು ತಾವು ಹೊರಬಂದಿದ್ದ ಬಾಗಿಲಿನ ಮೂಲಕವೇ ಒಳಗೆ ಹೋದರು. ನನಗಂತೂ ಇದು ಸುವರ್ಣಸಂಧಿಯಾಗಿತ್ತು. ಜಿಮ್‍ನನ್ನು ಕೂಗುವುದೇನೂ ಬೇಕಾಗಲಿಲ್ಲ. ಅವನಾಗಲೇ ನನ್ನ ಹಿಂದೆ ಇದ್ದ. ನನ್ನ ಬಳಿ ಇದ್ದ ಪುಟ್ಟ ಕತ್ತಿಯಿಂದ ಆ ಪುಟ್ಟುದೋಣಿಯ ಲಂಗರು ಹಗ್ಗ ಕಡಿದು, ಅದರ ಜೋಡುಹುಟ್ಟು ಬಾರಿಸುತ್ತಾ, ನದಿಯಲ್ಲಿ ನಮ್ಮ ಯಾನ ಕ್ಷಣಮಾತ್ರದಲ್ಲೇ ಆರಂಭವಾಯಿತು. ಒಂದರ್ಧ ಮೈಲಿ ಹೋದ ಮೇಲೆ, ಆ ಉಗಿ ದೋಣಿಯಲ್ಲಿದ್ದ ಖೂನಿಗಾರರಿಗೆ ಆಗಿರಬಹುದಾದ ಅಘಾತವನ್ನು ನೆನೆದು ನನಗೆ ಮೈಯೆಲ್ಲಾ ಜುಮ್ಮೆಂದಿತು. ಜಿಮ್‍ಗೆ ಹೇಳಿದೆ "ಜಿಮ್, ಹತ್ತಿರ ಎಲ್ಲಾದರೂ ದೀಪ ಕಂಡ ಕೂಡಲೇ ದಡ ಹತ್ತಿ, ಏನಾದರೂ ಕತೆ ಹೇಳಿ, ಯಾರನ್ನಾದರೂ ಅವರ ರಕ್ಷಣೆಗೆ ಕಳಿಸೋಣ. ಆಮೇಲೆ ಅವರನ್ನು ನೇಣು ಬೇಕಾದರೂ ಹಾಕಿಕೊಳ್ಳಲಿ" ಎಂದೆ.
ಜಿಮ್ ಮಾತಾಡಲಿಲ್ಲ.

ಆದರೆ ಈ ಯೋಜನೆ ಕಾರ್ಯಗತವಾಗಲಿಲ್ಲ. ಏಕೆಂದರೆ ಮಳೆ ಮತ್ತೆ ಮುಸಲಧಾರೆಯಾಗಿ ತನ್ನ ಕರಾಳ ಸ್ವರೂಪ ತೋರಲು ಪ್ರಾರಂಭಿಸಿತು. ಗಗನ ಮಿಂಚು-ಗುಡುಗುಗಳ ಆಡೊಂಬಲವಾಯಿತು. ಆ ಮಿಂಚಿನ ಬೆಳಕಿನಲ್ಲೇ ಅಲ್ಲೇ ಸಮೀಪದಲ್ಲಿ ತೇಲುತ್ತಿದ್ದ ಮಸುಕು ಗುರುತು ನಮ್ಮದೇ ತೆಪ್ಪವೆಂದು ತಿಳಿದು, ನಮ್ಮ ಅದೃಷ್ಟಕ್ಕೆ ಮನದಲ್ಲೇ ಹಿಗ್ಗಿದೆವು. ಅದನ್ನೇ ಹಿಡಿದು ಅದರ ಹಿಂದೆಯೇ ಸಾಗಿ ಬಂದ ನಮಗೆ ದೂರದಲ್ಲೊಂದು ದೀಪ ಉರಿಯುವ ಬೆಳಕು ಕಾಣಿಸಿತು. ಕೂಡಲೇ ನಮ್ಮ ಪುಟ್ಟದೋಣಿಯಲ್ಲಿದ್ದ ಸಕಲವನ್ನೂ ನಮ್ಮ ತೆಪ್ಪದೋಣಿಗೇರಿಸಿ, ಜಿಮ್‍ನನ್ನು ತೆಪ್ಪಕ್ಕೇರಿಸಿ, ಎರಡು ಮೈಲು ಕೆಳಗಿಳಿದು ಜಿಮ್ ದೀಪವೊಂದನ್ನು ಹತ್ತಿಸಬೇಕೆಂದೂ, ನಾನು ಆ ನತದೃಷ್ಟ ಖೂನಿಗಾರರ ಅದೃಷ್ಟ ಪರೀಕ್ಷಿಸಿ, ಅವನನ್ನು ಸೇರಿಕೊಳ್ಳುವುದಾಗಿಯೂ ತಿಳಿಸಿ, ಬೆಳಕಿನತ್ತ ಧಾವಿಸಿದೆ.

ಬೆಳಕು ಬೀರುತ್ತಿದ್ದುದು, ದೊಡ್ಡ ಹಾಯಿದೋಣಿಯೊಂದರ ದೀಪವಾಗಿತ್ತು. ಅದನ್ನು ಸಮೀಪಿಸಿ ಯಾರಾದರೂ, ದೋಣಿಯ ಕಾವಲುಗಾರನೋ, ಕ್ಯಾಪ್ಟನ್ನನೋ ಕಾಣುತ್ತಾನೇನೋ ಎಂದು ದೃಷ್ಟಿ ಹಾಯಿಸಿದೆ. ದೋಣಿಯ ಮೇಲೆ ಸುರಕ್ಷಿತವಾದ ಜಾಗದಲ್ಲಿ ಆತ ನಿದ್ರಾದೇವಿಯ ವಶನಾಗಿ ಪವಡಿಸಿದ್ದ. ಎರಡು ಮೂರು ಬಾರಿ ಅಲ್ಲಾಡಿಸಿದ ಮೇಲೆ ಅವನಿಗೆ ಎಚ್ಚರವಾಗುವ ಹಾಗೆ ಕಂಡಿತು. ನಾನು ದೊಡ್ಡ ದನಿ ತೆಗೆದು ಅಳತೊಡಗಿದೆ.

ಗಲಿಬಿಲಿಗೊಂಡು ಎದ್ದ ಅವನು, ನಾನೊಬ್ಬನೇ ಇದ್ದುದನ್ನು ಮನಗಂಡು, ಆಕಳಿಸಿ ಮೈಮುರಿದು "ಯಾಕೋ ಮಗು? ಯಾಕಳ್ತಿದೀಯಾ ಏನಾಯ್ತು? " ಎಂದ. ನಾನು 'ಅಪ್ಪ... ಅಮ್ಮ... ತಂಗಿ... ಎಲ್ಲಾ... ಎಲ್ಲಾ.....ಊ ಊಊ ಊಊ .." ಇನ್ನಷ್ಟು ದೊಡ್ಡ ದನಿ ತೆಗೆದು ಅಳತೊಡಗಿದೆ.
ಅವನು ಬೇಸರದ ದನಿಯಲ್ಲಿ "ಅಳುವುದನ್ನು ನಿಲ್ಲಿಸಿ ಏನಾಯ್ತೆಂದು ಹೇಳೋ?" ಎಂದ.
"ಅವರೆಲ್ಲಾ... ಅವರೆಲ್ಲಾ.... ನೀನು ಈ ಹಡಗಿನ ಕಾವಲಿನವನೇ?"
"ಹೂಞ್.... ಕಾವಲುಗಾರ, ಕಫ಼್ತಾನ...ಅಡಿಗೆಯವ.. ಪರಿಚಾರಕ, ಮಾಲಿಕ ಎಲ್ಲಾ ನಾನೇ..ಜಿಮ್ ಹಾರ್ನ್‍ಬ್ಯಾಕ್‍ನಷ್ಟು ದೊಡ್ಡ ಮನುಷ್ಯ ಅಲ್ಲದಿದ್ದರೂ, ನಾನಂತೂ ಖುಶಿಯಾಗಿದ್ದೀನಿ.. ಅದಿರಲಿ ನಿನ್ನ ವಿಷಯ ಏನು?" ಅಂದ.
"ಅಯ್ಯೋ, ನಮ್ಮಪ್ಪ, ಅಮ್ಮ, ತಂಗಿ.. ಹೂಕರ್ ಆಂಟಿ.. ಎಲ್ಲಾ ಅಲ್ಲಿದ್ದಾರೆ. ನಿನ್ನ ದೋಣಿ ಎತ್ಕೊಂಡು ಬೇಗ ಹೋಗಿ ಅವರನ್ನುಳಿಸು"
"ಅಲ್ಲಿ ಎಂದರೆ ಎಲ್ಲಿ?"
"ಅಧೇ ಆ ಮುರಿದಿರೋ ಉಗಿದೋಣಿ ಇದೆಯಲ್ಲಾ ಅದರಲ್ಲಿ"
"ಏನು?, ಅವರಿಗೇನಾದ್ರೂ ತಲೆ ಕೆಟ್ಟಿದೆಯಾ? ಯಾವ ನಿಮಿಷದಲ್ಲಿ ಅದು ಮುಳುಗೊತ್ತೋ ಏನೋ? ಅದರಲ್ಲಿ ಅವರೇನು ಮಾಡ್ತಾ ಇದಾರೆ?"
"ನಾವೆಲ್ಲಾ ನಮ್ಮ ದೋಣೀಲಿ ಬರಬೇಕಾದರೆ ಆ ದೋಣಿಗೆ ಡಿಕ್ಕಿ ಹೊಡೆದು ನಮ್ಮ ದೋಣಿ ಮುಳುಗ್‍ಹೋಯ್ತು. ಹೇಗೋ ಹೂಕರ್ ಆಂಟಿ ಆ ದೋಣೀನ ಹಿಡ್ಕೊಂಡ್ಲು, ಅಂತೂ ನಾವೆಲ್ಲಾ ಹೇಗೋ ಕಷ್ಟಪಟ್ಟು ಆ ದೋಣೀನ ಹತ್ಕೊಂಡು, ಅದರಲ್ಲಿದ್ದ ಈ ದೋಣೀನ ತಗೊಂಡು ಸಹಾಯಕ್ಕೆ ಯಾರದ್ರೂ ಸಿಗ್ತಾರೇನೋ ನೋಡೋಣ ಅಂತ ನಾನು ಬಂದೆ"
"ಸರಿ ಮಗೂ, ನಾನೇನೋ ಅವರನ್ನ ಬದುಕಿಸಬಹುದು. ಆದರೆ ನನಗೆಷ್ಟು ಖರ್ಚು ಬರುತ್ತೆ ಗೊತ್ತಾ? ಅದನ್ನ ಹೇಗೆ ನಿಭಾಯಿಸೋದು. ನಿಮ್ಮಪ್ಪ ಏನು...?"
" ಅವನ ಮಾತನ್ನು ಅರ್ಧಕ್ಕೆ ತುಂಡರಿಸುತ್ತಾ"ಹೂಕರ್ ಆಂಟಿ ಹೇಳ್ತಾ ಇದ್ಲು.. ಅವಳ ಚಿಕ್ಕಪ್ಪ ಹಾರ್ನ್‍ಬ್ಯಾಕ್..."
"ಯೋ .. ಹಾರ್ನ್‍ಬ್ಯಾಕ್ ಅವಳ ಚಿಕ್ಕಪ್ಪಾನಾ..? ಸರಿ ಮುಂಚೇನೆ ಯಾಕೆ ಹೇಳ್ಲಿಲ್ಲ. ಸರಿ ನೀನು ಹೊರಡು. ಸ್ವಲ್ಪ ಮುಂದೆ ಊರೊಂದಿದೆ. ನಾನು ಕೆಳಗೆ ಹೋಗಿ ಇನ್ನೊಂದು ಸ್ವಲ್ಪ ಜನ ಕರ್ಕೊಂಡು ಅವರತ್ರ ಹೋಗ್ತೀನಿ" ಎಂದವನೇ ತನ್ನ ಕ್ಯಾಬಿನ್ನಿನಿಂದ ಹಡಗು ನಿಯಂತ್ರಣ ಕೊಠಡಿಯೆಡೆಗೆ ಓಡಿದ. ನಾನು ನದಿಯ ಮಧ್ಯಕ್ಕೆ ಹುಟ್ಟು ಹಾಕಿ ನದಿಯ ಹರವಿನೊಡನೆ ತೇಲಲಾರಂಭಿಸಿದೆ. ಸ್ವಲ್ಪ ಹೊತ್ತಿನಲ್ಲಿಯೇ ಆ ಉಗಿದೋಣಿ ನೀರಲ್ಲಿ ಮುಳುಗುತ್ತಾ, ತೇಲುತ್ತಾ ನಾನಿರುವೆಡೆಗೇ ಬಂತು. ಅದನ್ನು ನೋಡಿದ ಕೂಡಲೇ ನನಗೆ ಕಾಲ್ಬೆರಳಿಂದ ಮಿದುಳವರೆಗೂ ಚಳಕು ಹೊಡೆದಂತಾಯಿತು. ಅದಾಗಲೇ ಮುಕ್ಕಾಲು-ಮೂರು ಪಾಲು ನೀರಿನಲ್ಲಿ ಮುಳುಗಿತ್ತು. ಅದರಲ್ಲಿದ್ದವರು ಜೀವದಿಂದ ಇರುವ ಸಾಧ್ಯತೆಯೇ ಇರಲಿಲ್ಲ. ಹಾಗೂ ಒಂದೆರಡು ಬಾರಿ ಕೂಗಿ ನೋಡಿದೆ. ಆದರೆ ಯಾರೂ ಓಗೊಡಲಿಲ್ಲ. ಮನಸ್ಸಿಗೇನೋ ವಿಷಾದ ಆವರಿಸಿಕೊಂಡಿತು.

ಜಿಮ್‍ನ ತೆಪ್ಪ ತಲುಪುವಷ್ಟರಲ್ಲಿ ಎಷ್ಟೋ ಸಮಯ ಹಿಡಿಯಿತು. ಅಷ್ಟರಲ್ಲಾಗಲೇ ಮೂಡಲಲ್ಲಿ ಬೆಳಕು ಕಾಣುತ್ತಿತ್ತು. ಮೋಡದಿಂದ ತುಂಬಿದ್ದ ಆಗಸದಲ್ಲಿ ಕಂದು ಬಣ್ಣದ ಬೆಳಕು ಧಾರೆಯಾಗಿ ಹರಿದು ಭೂಮಂಡಲವನ್ನೆಲ್ಲಾ ವ್ಯಾಪಿಸುತ್ತಿತ್ತು. ನಾವು ಪುಟ್ಟ ದೋಣಿಯನ್ನು ನೀರಿನಲ್ಲಿ ಮುಳುಗಿಸಿ, ನಮ್ಮ ತೆಪ್ಪ ಅವಿಸಿಟ್ಟು, ದಡದ ತೋಪೊಂದರಲ್ಲಿ ಆಡಗಿ ಮಲಗಿದೆವು. ಸತ್ತವರಂತೆ.....!

0೬. ಮನೆಗಿರ ಹಿಡಿದ ಜಿಮ್

ನಮಗೆ ಎಚ್ಚರವಾದ ಮೇಲೆ ಆ ಉಗಿದೋಣಿಯ ಪುಟ್ಟದೋಣಿಯ ಮೇಲೆ ಎಸೆದಿದ್ದ ಚೀಲದಲ್ಲಿದ್ದ ವಸ್ತುಗಳನ್ನು ಪರೀಕ್ಷಿಸಿದೆವು. ಅದರಲ್ಲಿಒಂದಿಷ್ಟು ಬಟ್ಟೆ, ಬೂಟ್ಸು, ಕಂಬಳಿಗಳು, ಪುಸ್ತಕಗಳು, ಮೂರು ಡಬ್ಬಿ ಸಿಗಾರ್‌ಗಳು, ಒಂದು ಕಣ್ಣ ಪಟ್ಟಿ, ಹಾಗೂ ಇತರೆ ಒಂದಷ್ಟು ಸಾಮಾನುಗಳಿದ್ದವು. ಆ ದಿನ ಮಧ್ಯಾಹ್ನ ಪೂರ್ತಿ ಆ ತೋಪಿನಲ್ಲೇ ಕಳೆದು ಹೋಯಿತು. ನಾನು ಹಾಯಿದೋಣಿಯ ಮಾಲೀಕನಿಗೆ ಕತೆ ಕಟ್ಟಿ ಹೇಳಿದ್ದನ್ನು ಜಿಮ್‍ಗೆ ವರ್ಣಿಸಿದೆ. ಉಗಿದೋಣಿಯ ಮೇಲೆ ಖೂನಿಗಾರರ ಮಾತುಕತೆಯನ್ನೂ ತಿಳಿಸಿದೆ. ಅವನೂ, ತಾನು ಹಿಂದಿರುಗಿ ಬಂದಾಗ ತೆಪ್ಪ ಕಾಣೆಯಾಗಿರುವುದನ್ನು ತಿಳಿದು ಗಾಬರಿಗೊಂಡುದನ್ನು ಹೇಳಿದ. ಅವನು ಬದುಕಲು ಮುರುಕಲು ದೊಣಿಯಿಂದ ಯಾರಾದರೂ ರಕ್ಷಿಸಬೇಕಿತ್ತು. ಹಾಗೆ ಯಾರಾದರೂ ರಕ್ಷಿಸಿದವರು, ಜಿಮ್ ಓಡಿ ಬಂದಿರುವ ಗುಲಾಮನೆಂದು ಗುರುತಿಸಿ, ಅವನನ್ನು ಮತ್ತೆ ಗುಲಾಮಗಿರಿಗೇ ಅಟ್ಟುವುದು ಖಚಿತವಾಗಿತ್ತು. ಅದೂ ಉಗ್ರಶಿಕ್ಷೆಯ ನಂತರ. ಹೀಗಾಗಿ ಜಿಮ್ ತನ್ನ ಪ್ರಾಣವನ್ನೋ ಸ್ವಾತಂತ್ರ್ಯವನ್ನೋ ಕಳೆದುಕೊಳ್ಳುವುದು ಖಚಿತವಾಗಿತ್ತು.

ಆ ಚೀಲದಲ್ಲಿ ಸಿಕ್ಕ ಪುಸ್ತಕಗಳನ್ನೂ, ರಾಜ-ರಾಣಿಯರ ಕತೆಗಳನ್ನೂ, ಪಾಳೆಯಗಾರರ ಸಾಹಸಗಳನ್ನೂ, ಜಿಮ್‍ಗೆ ಓದಿ ಹೇಳಿದೆ. ಜಿಮ್ ಕುತೂಹಲದಿಂದ "ಒಬ್ಬ ರಾಜನಿಗೆ ಎಷ್ಟು ಸಂಬಳ ಬರಬಹುದು?" ಎಂದ.
"ಸಂಬಳ .... ಸಂಬಳ ಬೇಕೆಂದರೆ ತಿಂಗಳಿಗೆ ಸಾವಿರ ಡಾಲರ್‌ವರೆಗೂ ತಗೋಬಹುದು. ಇನ್ನೂ ಜಾಸ್ತೀನೇ ತಗೋಬಹುದೋ ಏನೋ? ಯಾಕೆಂದರೆ ಎಲ್ಲಾ ಅವರಿಗೇ ಸೇರಿದ್ದಲ್ವಾ?"
"ಅಬ್ಬಾ, ಸಾವಿರ ಡಾಲರ್ ಸಂಬಳ..... ಎಷ್ಟು ಮಜವಾಗಿರುತ್ತೆ ಅಲ್ಲವಾ...? ಹೌದು.. ಅಂದ ಹಾಗೆ ರಾಜ ಏನೇನು ಕೆಲಸ ಮಾಡಬೇಕು..?"
"ಏನೂ ಇಲ್ಲ. ಸುಮ್ಮನೆ ಕೂತ್ಕೊಂಡು ಕಾಲ ಕಳೆಯೋದಷ್ಟೇ.'
"ಹೇ.... ಏನು ತಮಾಶೆ ಮಾಡ್ತಾ ಇದೀರಾ...?"
"ಇಲ್ಲ ಕಣೋ, ಅವರು ನಿಜವಾಗ್ಲೂ ಸುಮ್ಮನೇನೆ ಇರ್‍ತಾರೆ. ಏನೋ ಯುದ್ದ ಗಿದ್ದ ಅದಾಗ ಭಾಷಣ ಮಾಡ್ತಾರೆ. ಅಷ್ಟೆ. ಉಳಿದ ಸಮಯದಲ್ಲಿ ಸುಮ್ನೆ ಇರೋದಷ್ಟೇ ಅವರ ಕೆಲಸ. ಅವರ ಮಾತನ್ನು ಯಾರಾದ್ರೂ ಕೇಳ್ಲಿಲ್ಲ ಅಂದರೆ ಅವರ ತಲೆ ತೆಗಿಸ್ಬಿಡ್ತಾರೆ. ಅದ್ರೂ ತುಂಬಾ ದೊಡ್ಡ ಕೆಲಸ ಅಂದರೆ ಅವರಿಗೆ, ಅವರ ಅಂತ್ಃಪುರದಲ್ಲಿ ಕಾಲ ಕಳೆಯೋದು."
"ಎಲ್ಲಿ ಎಲ್ಲೆಲ್ಲಿ...?"
"ಅಂತಃಪುರದಲ್ಲಿ"
'ಹಂಗಂದ್ರೆ.?"
"ಅಂದ್ರೆ ಅಲ್ಲಿ ರಾಜನ ಹೆಂಡ್ತೀರೆಲ್ಲಾ ವಾಸ ಮಾಡ್ತಾರೆ. ಅಯ್ಯೋ ಸಾಲೋಮನ್ ರಾಜನ ಕತೆ ಕೇಳಿಲ್ವಾ ನೀನು. ಅವನಿಗೆ ಲಕ್ಷ ಜನ ಹೆಂಡಿರಂತೆ. ಅವನ ಅಂತಃಪುರ ತುಂಬಾ ದೊಡ್ಡದಂತೆ."

"ಓ .. ಹೌದು. ಹೌದು ಕೇಳಿದ್ದೆ. ಮರ್‍ತೋಗಿತ್ತು. ಅಂತ್ಃಪುರ ಅಂದ್ರೆ.... ಅಂದ್ರೆ... ಅದೊಂಥರಾ ಅನಾಥಾಶ್ರಮ ಇದ್ದಂಗೆ ಅನ್ನಿ. ಅಷ್ಟೊಂದು ಜನ ಹೆಂಡ್ತೀರು.. ಒಬ್ಬರಿಗೊಬ್ಬರು ಕಚ್ಚಾಡ್ಕೊಂಡು ಎಷ್ಟೊಂದು ಗಲಾಟೆ ಇರಬಹುದು ಅಲ್ಲಿ. ಇನ್ನು ಅಷ್ಟು ಜನ ಹೆಂಡಿರ ಮಕ್ಕಳು, ಚಿಳ್ಳೆ, ಪಿಳ್ಳೆ, ಪಿಸುಕು, ಕೂಸು, ಅವುಗಳ ಗಲಾಟೇನೂ ಸೇರಿದ್ರೆ.. ಅಲ್ಲಿ ಯಾರಾದ್ರೂ ಮನುಷ್ಯರು ಇರೋಕಾಗುತ್ತಾ. ಅಂತಹ ಜಾಗದಲ್ಲಿ ಇದ್ದನಲ್ಲಾ ಸಾಲೋಮನ್, ಏನೋ ಎಲ್ಲ್ ಅವನ್ನ ತುಂಬಾ ಬುದ್ದಿವಂತ ಅಂತ ಹೇಳ್ತಾರೆ. ಅವನು ನಿಜವಾಗ್ಲೂ ಬುದ್ದಿವಂತ ಆದರೆ ಒಂದು ಬಾಯ್ಲರ್ ಫ಼್ಯಾಕ್ಟರಿ ಮಾಡ್ಬೇಕು. ಕಾಸು ಸಂಪಾದಿಸಬೇಕು. ಕೊನೆಗಾಲದಲ್ಲಿ ಉಳಿಸಿದ ದುಡ್ಡಿಂದ ಆರಾಮಾಗಿ ಕಾಲ ಕಳೀಬೇಕು."
"ಅವನು ನಿಜವಾಗ್ಲೂ ತುಂಬಾ ಬುದ್ಧಿವಂತ ಆಗಿದ್ದ ಜಿಮ್. ಮುದುಕಿ ಡಗ್ಲಾಸ್ ಆಂಟಿ ಕೂಡಾ ಹೇಳ್ತಾ ಇದ್ಲಲ್ಲ."
"ಅಯ್ಯೋ, ಅವನ ಕತೆ ನಿಮಗ್ಗೊತ್ತಿಲ್ಲ. ಅವನು ಸ್ವಲ್ಪ ಮರುಳೋ, ಹುಚ್ಚನೋ ಇರಬೇಕೇ ವಿನಃ, ಬುದ್ದಿವಂತ ಅಂತೂ ಅಲ್ಲ. ನೋಡಿ, ಈಗ ನೀವು, ಹಾ.. ನೀವು.. ಸಾಲೋಮನ್ ರಾಜ ಅಂತಾ ಇಟ್ಕೊಳ್ಳೀ. ಈ ಮರ ಒಂದು ಹೆಂಗಸು. ನಾನು ಇನ್ನೊಂದು ಹೆಂಗಸು ಅಂತಾ ಇಟ್ಕೊಳ್ಳಿ. ನೋಡಿ.. ಈ ಡಾಲರ್ ನೋಟಿದೆಯಲ್ಲಾ.. ಇದು.. ಒಂದು ಮಗು. ನಾನೂ ಆ ಹೆಂಗಸೂ ಮಗು ನಂದು-ನಂದೂಂತ ಜಗಳ ಆಡ್ತಾಇರ್‍ತೀವಿ. ನ್ಯಾಯ ಕೇಳಿ ನಿಮ್ಹತ್ರ ಬರ್ತೀವಿ. ನೀವೇನು ಮಾಡ್ತೀರಾ...? ಯಾರೇ ಆಗ್ಲಿ... ಬುದ್ದಿ ಇರೋರು ಮಾಡೋ ಹಾಗೇ ಅಕ್ಕ್ ಪಕ್ಕದ ಮನೆಯವರನ್ನ ಕೇಳ್ತೀರಾ.. ಹೌದೋ ಅಲ್ವೋ..? ಆ ರಾಜ ತುಂಬಾ ಬುದ್ದಿವಂತ ಅಂತೆ. ಅವನು ಹಾಗೆ ಮಾಡ್ಲೇ ಇಲ್ಲ. ಮಗೂನೆ ಕತ್ತರಿಸಿ ಇಬ್ಬರು ಹಂಚಿಕೊಳ್ಳಿ ಅಂದನಂತಲ್ಲ. ಈ ನೋಟನ್ನೇ ಕತ್ತರಿಸಿಬಿಟ್ಟರೆ, ಅದರಿಂದೇನೂ ಪ್ರಯೋಜನ ಇಲ್ಲ. ಇನ್ನು ಮಗೂನ ಕತ್ತರಿಸಿ ಅರ್ಧ ತಗೋ ಅಂದ್ರೆ ನನಗಂತೂ ಕೋಟಿ-ಕೋಟಿ ಅರ್ಧ ಮಕ್ಕಳನ್ನ ಕೊಟ್ರೂ, ನಾನಂತೂ ಒಂದು ನಯಾಪೈಸೆ ಕೊಡೋದಿಲ್ಲ"
"ಜಿಮ್..... ಜಿಮ್.... ನೀನು ತಪ್ಪು ತಿಳ್ಕೊತಾ ಇದೀಯ.. ನಿಜವಾದ ವಿಷಯ ಎನು ಅಂತ ನೀನು ಯೋಚನೆ ಮಾಡಲೇ ಇಲ್ಲವಲ್ಲೋ."
"ಯಾರು ನಾನಾ..? ನಾನಂತೂ ಎಲ್ಲಾ ಥರಾ ಯೋಚನೆ ಮಾಡ್ಬಿಟ್ಟೆ. ಅಲ್ಲಾ ಅಂಗೈ ಹುಣ್ಣಿಗೆ ಕನ್ನಡಿ ತಗೋಬೇಕಾ..? ವಿವೇಕ ಒಂಚೂರಾದ್ರೂ ಇದ್ರೆ ಮಗೂನ ಕತ್ತರಿಸೋಕೆ ಹೇಳ್ತಾರ. ಅಲ್ಲಿ ಜಗಳ ಅರ್ಧ ಮಗೂಗೆ ಅಂತ ಆಗ್ತಾ ಇತ್ತಾ..? ಮಗು ಪೂರ್ತಿ ಬೇಕು ಅಂತ ತಾನೇ ಜಗಳ್ ಆಗ್ತಿದ್ದದ್ದು, ಮತ್ತೆ ಇಬ್ಬರಿಗೂ ಅರ್ಧರ್ಧ ಮಗು ಕೊಟ್ಟು ಜಗಳ ಮುಗಿದೋಯ್ತು ಅಂತ ತಿಳ್ಕೊಂಡ್ರೆ ಅವನಂತಾ ಮೂರ್ಖ ಇನ್ನ್ಯಾರು? ಅವನ ವಿಷಯ ಎಲ್ಲಾ ಚೆನ್ನಾಗಿ ನನಗ್ಗೊತ್ತು. ನೀನು ನನಗೇ ಹೇಳಕ್ಕೆ ಬರ್‍ಬೇಡ"
"ಅಲ್ಲಾ ಜಿಮ್. ಒಳಗಡೆ ವಿಷಯ ಏನೂಂದ್ರೆ...... "
"ಅಯ್ಯೋ ಇನ್ನೊ ವಿಷಯ ಅಂತ ಹೇಳ್ತೀರಲ್ಲಾ.. ಅಸಲು ನಿಮಗೇ ಇನ್ನೊ ವಿಷಯ ಗೊತ್ತಾಗಿಲ್ಲ. ನೋಡಿ ಈಗ ಯಾರಾದ್ರೂ ಒಂದೋ ಎರಡೊ ಮಕ್ಕಳಿದ್ರೆ, ಅವನು ಅವರನ್ನ ಸಾಯಿಸ್ತಾನಾ...? ಇಲ್ಲ. ಅವನ ಪ್ರಾಣಕ್ಕಿಂತ ಹೆಚ್ಚಾಗಿ ನೋಡ್ಕೋತಾನೆ. ಅದೇ ಒಬ್ಬನಿಗೆ ಲಕ್ಷ ಮಕ್ಕಳಿದ್ದರೆ..? ಅವನು ಬೆಕ್ಕು ಕತ್ತರಿಸೋ ಹಾಗೆ, ಮಕ್ಕಳನ್ನು ಕತ್ತರಿಸಿ ಹಾಕುತ್ತಾನೆ. ಒಂದು ಮಗು ಹೋದ್ರೆ ಅವನಪ್ಪನ ಗಂಟೇನು ಹೋಗಬೇಕು? ಇನ್ನೂ ತೊಂಬತ್ತೊ..... ತುಂಬಾ ತುಂಬಾ.. ಮಕ್ಕಳಿರ್‍ತಾವಲ್ಲ ಅವನ ಹತ್ರ."

ನಾನು ಮಾತು ನಿಲ್ಲಿಸಿದೆ. ಜಿಮ್ ಎಂತಹ ಮನುಷ್ಯನೆಂದರೆ, ಅವನ ತಲೆಗೇನಾದರೂ ಹೊಕ್ಕಿತೋ, ಅದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿರಲಿಲ್ಲ. ಅಷ್ಟು ಖಂಡಿತರಾಯ. ಥೇಟ್ ನಮ್ಮ ಹೇಸರಗತ್ತೆಯ ಹಾಗೆ.....!

ರಾತ್ರಿಗಳಲ್ಲಿ ಮೊದಲು ಜಿಮ್ ಕಾವಲಿಗಿದ್ದು, ಎರಡನೆಯ ಸುತ್ತು ನನ್ನ ಕಾವಲಾಗಿರುತ್ತಿತ್ತು. ಆದರೆ ಎಷ್ಟೊ ಬಾರಿ ಜಿಮ್ ಅವನ ಕಾವಲು ಮುಗಿದು ನನ್ನ ಸರದಿ ಬಂದರೂ ನನ್ನನ್ನು ಏಳಿಸುತ್ತಲೇ ಇರಲಿಲ್ಲ. ಹೀಗೇ ಒಮ್ಮೆ ನನ್ನ ಸರದಿಯ ಕಾವಲನ್ನೂ ಅವನೇ ಕಾಯುತ್ತಿದ್ದಾಗ, ನನಗೆ ಎಚ್ಚರವಾಯಿತು. ಬೆಳಗಿನ ಮೊದಲ ಜಾವದ ಕತ್ತಲು ತೆರೆತೆರೆಯಾಗಿ ಬೆಳಕಾಗಿ ಬದಲಾಗುತ್ತಿತ್ತು. ಜಿಮ್ ತೆಪ್ಪದ ಮೇಲೆ ಮೊಣಕಾಲುಗಳೆಡೆಯಲ್ಲಿ, ತನ್ನ ತಲೆ ಸಿಕ್ಕಿಸಿಕೊಂಡು ಕೂತಿದ್ದ. ಅವನ ಮೌನ ನರಳುವಿಕೆ, ನಿಟ್ಟುಸಿರು ನನಗೆ ಕೇಳಿಸುತ್ತಿತ್ತು. ಅವನು ತನ್ನ ಹೆಂಡತಿ ಮತ್ತು ಮಕ್ಕಳ ಬಗ್ಗೆ ಯೋಚಿಸುತ್ತಿರಬೇಕೆಂದು ನನಗನ್ನಿಸಿತು. ಅವನು ಮನೆಯಿಂದ ಇಷ