ಫಿನ್ಲೆಂಡ್ ಪ್ರವಾಸ ಕಥನ
ಇದೊಂದು ವಿಶಿಷ್ಟ ಪ್ರವಾಸ ಕಥನ. ಕೇವಲ ಸ್ಥಳಪುರಾಣಕ್ಕೋ, ಊಟ ತಿಂಡಿಗಳ ವರ್ಣನೆಗೋ ಕಥನವನ್ನು ಸೀಮಿತಗೊಳಿಸದೆ ಆದರೆ ಅವನ್ನೂ ಉಳಿಸಿಕೊಂಡು ಫಿನ್ಲೆಂಡ್ ಕನ್ನಡದ ಸಂಸ್ಕೃತಿಗಳ ನಡುವಣ ತುಲನೆ ಮತ್ತು ವಿಶ್ಲೇಷಣೆಗಳ ಜತೆಗೆ ಸಾಗುವ ಕಥನ ಇದು. ಇದು ಕನಿಷ್ಠ ಹತ್ತು ಭಾಗಗಳಲ್ಲಿ ಪ್ರಕಟವಾಗಲಿದೆ.
-ಸಂಪದ ನಿರ್ವಾಹಕ ಬಳಗ
ಸ್ಥಳ: ಫಿನ್ಲೆಂಡ್. ೨೦೦೪ರ ಏಪ್ರಿಲ್ ಎರಡು. ಸ್ಟುಡಿಯೊ ಒಳಕ್ಕಿರಲಿ ಫಿನ್ಲೆಂಡ್ ದೇಶದೊಳಕ್ಕೆ ಕಾಲಿಟ್ಟೇ ಕೇವಲ ಎರಡು ಗಂಟೆ ಕಾಲವಾಗಿತ್ತು. ಫೋನ್ ರಿಂಗಾಯಿತು. ಪರವಾಗಿಲ್ಲ. ಹೊರಕ್ಕೆ ಹೋಗುವ ಸೌಲಭ್ಯವಿನ್ನೂ ದೊರೆತಿರದಿಲ್ಲದಿದ್ದರೂ ಒಳ ಕರೆಗಳು ಬರುತ್ತಿವೆಯಲ್ಲ. ೨೦೦೧ರಲ್ಲಿ ಇಲ್ಲಿಗೆ ಬಂದಾಗ ಪರಿಚಯವಾಗಿದ್ದ ಛಾಯಾಗ್ರಾಹಕ ಸಕ್ಕರಿ ಇರಬಹುದೆ? ಈ ಸ್ಟುಡಿಯೊ-ಇನ್-ರೆಸಿಡೆನ್ಸಿಯ ಮುಖ್ಯಸ್ಥೆ, ಸಕ್ಕರಿಯ ಮಡದಿ ಇರ್ಮೆಲಿ ಕೊಕ್ಕೊ ಇರಬಹುದೆ? ಸದ್ಯದ ಮುಖ್ಯಸ್ಥೆ, ಕಲಾವಿದೆ ಮಿನ್ನ ಇರಬಹುದೆ?
ಯಾರಾದರೇನು. ಫೋನ್ ರಿಂಗಾಯಿತಲ್ಲ, ಅಷ್ಟೇ ಸಾಕು. ಇಡೀ ಒಂದೆರೆಡು ಗಂಟೆ ಕಾಲ ಸಂಜೆಯ ಮಳೆ, ಮಂಜು, ಕಾರ್ಮೋಡದಲ್ಲಿ ಫೋನಿಗಾಗಿ, ಈಗಾಗಲೇ ಗೊತ್ತಿರುವ ರಸ್ತೆಗಳನ್ನೆಲ್ಲ ಅಲೆದು ಸಾಕಾಗಿತ್ತು. ಫೋನ್ ಬೂತುಗಳೇನೋ ದಂಡಿಯಾಗಿತ್ತು. ಆದರೆ ಅದಕ್ಕೆ ಬೇಕಾದ ಕಾರ್ಡ್ ಕೊಳ್ಳುವುದು ಹೇಗೆಂದು ಗೊತ್ತಿರಲಿಲ್ಲ. ಕಾರ್ಡ್ ಮಾಡುವ ಅಂಗಡಿಗಳೆಲ್ಲ ಮುಚ್ಚಿಬಿಟ್ಟಿದ್ದವು. ಯಾರನ್ನಾದರೂ ಕೇಳೋಣವೆಂದರೆ ತಪ್ಪು ವಿಳಾಸ ಹೇಳಲಿಕ್ಕಾದರೂ ಇದೇನು ತಮಿಳುನಾಡೆ? ಅಥವ ಯಾವಾಗೆಂದರೆ ಆವಾಗ, ಎಲ್ಲೆಂದರಲ್ಲಿ ಜನರು ಕಣ್ಣಿಗೆ ಬೀಳಲು ಇದೇನು ಬೆಂಗಳೂರೆ? ಕಣ್ಣಿಗೆ ಬೀಳಲೂ ಒಂದು ಹೊತ್ತುಗೊತ್ತಿರುವ'ಶಿಸ್ತಿನ ಜನ ಇವರು.
ರಸ್ತೆಯಲ್ಲಿ ಹುಡುಕಾಡುತ್ತ, ಈ ವಾಕ್ಯದಲ್ಲಿ ಈಗಾಗಲೇ ಆಗಿರುವಂತೆ ಏನನ್ನು ಹುಡುಕುತ್ತಿದ್ದೇನೆಂಬುದೇ ಮರೆತಂತಾಗಿತ್ತು. ಹಾರನ್ ಮಾತ್ರ ಜೋರಾಗಿಯೇ ಕೇಳಿತ್ತು. ಒಂದು, ಎರಡು, ಮೂರು--ಮೂರೇ ನೆಗೆತಕ್ಕೆ ರಸ್ತೆಯ ಆ ಬದಿ ಸೇರಿದ್ದೆ, ಕೇಂದ್ರ ರೈಲ್ವೇ ನಿಲ್ದಾಣದ ಮುಂಭಾಗದ ಜನರಹಿತ ರಸ್ತೆಯಲ್ಲಿ. ಹಿಂದಕ್ಕೇನಾದರೂ ಹೋಗುವ ಪ್ರಯತ್ನ ಪಟ್ಟಿದ್ದಲ್ಲಿ ಮೇಲಕ್ಕಷ್ಟೇ ಹೋಗಬೇಕಾಗಿತ್ತು. ಭಾರತವಿರಲಿ, ಲಂಡನ್ ಇರಲಿ, ಫಿನ್ಲೆಂಡ್ ಇರಲಿ, ಟ್ಯಾಕ್ಸಿ ಡ್ರೈವರ್‌ಗಳಲ್ಲೆ ಅದೆಂತಹ ಜೆನೆಟಿಕ್ಸ್-ಸಾಮ್ಯತೆ ಕಾರ್ಯನಿರ್ವಹಿಸುತ್ತದೆ ಸ್ವಾಮಿಶಾಂತ ಪ್ರಶಾಂತ ಸಾವಧಾನಿ ಫಿನ್ಲೆಂಡಿನಲ್ಲಿ ಟ್ಯಾಕ್ಸಿಗಳ ಓಟ ಒಂದು ಕಪ್ಪು ಚುಕ್ಕೆ.
ಸ್ಟುಡಿಯೊದ ಫೋನ್ ರಿಂಗಾಗಿದ್ದಕ್ಕೂ ಈ ಜೀವ ಉಳಿದ ಘಟನೆಗೂ ಸಂಬಂಧವಿದೆ. "ಟ್ಯಾಕ್ಸಿ ಅಡಿಯಲ್ಲಿ ಸಾಯುವುದಿದ್ದರೆ ಭಾರತದಲ್ಲೇ ಹಾಗೆ ಮಾಡುವೆ. ನಿನಗೇನು ಕ್ರೆಡಿಟ್ ಕೊಡುವುದು ಈಡಿಯಟ್" ಎಂದು ಬೆಂಗಳೂರಿನ ಕನ್ನಡದಲ್ಲೇ ಬಯ್ದುಕೊಂಡೆ. ಡ್ರೈವರ್ ಫಿನ್ನಿಶ್‌ನಲ್ಲಿ, "ನೀನು ಫಿನಿಶ್ ಆಗಿಬಿಡುತ್ತಿದ್ದೆ ಮಗನೆ" ಎಂದು ಹೇಳಿದ ಮೇಲೆ. ಎಂಟು ಸಾವಿರ ಮೈಲು ವ್ಯತ್ಯಾಸವಿದ್ದರೂ ಫಿನ್ನಿಶ್, ಕನ್ನಡದಲ್ಲಿ ಸಂವಾದ ಸಾಧ್ಯ ಎಂದು ಈ ಅಸಫಲ ದುರ್ಘಟನೆಯಿಂದ ಸಾಬೀತಾಯಿತು. "ಕನ್ನಡವು ಫಿನ್ನೋ-ಅಗ್ರೇರಿಯನ್ ಭಾಷೆಯಿಂದ ಸೃಷ್ಟಿಯಾಯಿತು" ಎಂದು ನಮ್ಮ ಕೆ.ವಿ.ಸುಬ್ಬಣ್ಣನವರು ಬರೆದದ್ದನ್ನು ಸಾಕ್ಷಿ ಸಮೇತ ನಾನು ಊರ್ಜಿತಗೊಳಿಸಿದ್ದೆ.
ಅದರ ನಂತರ ಹತ್ತು ನಿಮಿಷದಲ್ಲಿ ಸ್ಟುಡಿಯೋಗೆ ಹಿಂದಿರುಗಿದ ಕೂಡಲೆ, ಈ ಲೇಖನದ ಆರಂಭದ ನಾಲ್ಕನೆ ಸಾಲಿನಲ್ಲಿ ಟ್ರಿಣ್ ಅಂದಿತ್ತಲ್ಲ ಅದೇ "ಟ್ರಿಣ್" ಅಷ್ಟರಲ್ಲಿ ಇಷ್ಟೆಲ್ಲ ನಡೆದಿತ್ತು. ಝೆನ್ ಕೋನ್‌ಗಳಂತೆ ನನಗಂತೂ ಆಗ ಫೋನ್ ಫೋನಾಗಿರಲಿಲ್ಲ, ಟ್ರಿಣ್ ಟಿಣ್‌ಆಗಿರಲಿಲ್ಲ.
"ಹಲೋ?"
"ಹಲೋ. ಅನಿಲ್?"
"ಹೌದು. ಸುರೇಖ್. ಹಾಯ್?! ಈ ನಂಬರ್ ಹೇಗೆ ಸಿಕ್ತು"
"ಅಯ್ಯೋ ಮಾರಾಯ. ಮಿನ್ನಾಗೆ ಫೋನ್ ಮಾಡಿ ತೆಗೆದುಕೊಂಡೆ. ಅಲ್ಲಿ ಹೋಗಿದ್ ತಕ್ಷ್ಣ ಫೋನ್ ಮಾಡು ಅಂತ ಹೇಳಿರ್‌ಲಿಲ್ವ?"
"ತಕ್ಷ್ಣ ಅನ್ನೋದರ ಕಾಲಾವಕಾಶ ನಮ್ಮಿಬ್ಬರಿಗೂ ವ್ಯತ್ಯಾಸವಾಗುತ್ತೆ ಅಂತ ಗೊತ್ತಿಲ್ವ. ಇನ್ನೂ ಫೋನ್ ಕಾರ್ಡ್ ಸಿಕ್ಕಿಲ್ಲ. ಕಾರ್ಡ್ ಸಿಗೋ ಅಂಗ್ಡಿ ತೆಗ್ದಿಲ್ಲ. ಅದನ್ನ ತೆಗೆಯೋ ಜನ ಬಂದಿಲ್ಲ...ಗಾಭರಿ ಆಗ್ಬೇಡಿ"
"ಎಲ್ಲಾ ಸರಿಯಾಗಿದೆಯ?"
"ಫಿನ್ಲೆಂಡ್ ಮ್ಯಾಪ್ ೨೦೦೧ರಲ್ಲಿ ನಾವಿಬ್ಬ್ರೂ ಬಂದಿದ್ದಾಗ ಹೇಗಿತ್ತೋ ಹಾಗೇ ಇದೆ"
"ಷಟಪ್. ನೀನು ಆರಾಮಾನಾ?"
"ಇಲ್ದಿದ್ದ್ರೆ ಹೇಗೆ ಫೋನ್ ರಿಸೀವ್ ಮಾಡ್ತಿದ್ದೆ ಹೇಳು?" ಎಂದು ನಾನು ಉತ್ತರಿಸಿದಾಕ್ಷಣ ನೆನಪಿಗೆ ಬಂತು. ಆಕ್ಸಿಡೆಂಟ್. ಅಲ್ಲ ಅಸಫಲ ಆಕ್ಸಿಡೆಂಟ್!! ಇಷ್ಟು ಬೇಗ ಈ ಸುದ್ದಿ ಪ್ರಸಾರವಾಗಿಬಿಟ್ಟಿದೆಯಲ್ಲ, ಪರವಾಗಿಲ್ಲ. ಜಗತ್ತಿಗೇ ನೋಕಿಯವನ್ನು ನೂಕಿರುವ ತಂತ್ರಜ್ಣಾನ ಅದೆಷ್ಟು ಮುಂದುವರೆದಿದೆ ಎಂದುಕೊಳ್ಳಬೇಕು ಎಂದುಕೊಳ್ಳುತ್ತಿದ್ದೆ.
"ಒಂದು ವಿಷಯ ಹೇಳ್ತೀನಿ. ಗಾಭರಿಯಾಗ್ಬೇಡ. ನಿನ್ನನ್ನ ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ ಬಿಟ್ಟು ಮಧ್ಯರಾತ್ರಿ ಬಾಡಿಗೆ ಟ್ಯಾಕ್ಸಿಯಲ್ಲಿ ವಾಪಸಾಗುತ್ತಿದ್ದೆವಲ್ಲ ಪ್ರಕಾಶ್, ಭವಾನಿ ಮತ್ತು ನಾನು. ಮನೆ ಇನ್ನು ಅರ್ಧ ಮೈಲಿ ಇರೋಗ ರಾಮಯ್ಯ ಆಸ್ಪತ್ರೆ ಹತ್ರ ಆಕ್ಸಿಡೆಂಟ್ ಆಯ್ತು ನಮ್ಮ ಕಾರಿಗೆ. ಕುಡ್ದು ಬೈಕ್ ಓಡಿಸ್ತಿದ್ದ ಬಿಹಾರಿ ಸ್ಟೂಡೆಂಟ್ ತೀರ ಬಲಕ್ಕೆ ಬಂದು ಗುದ್ದಿದ್ದ. ಸ್ಪಾಟ್ ಡೆತ್. ಅಲ್ಲಿಂದ ಮನೆಗೆ ಒಬ್ಳೇ ಹೋದೆ ಅಷ್ಟೊತ್ನಲ್ಲಿ, ಪೋಲಿಸ್ ಮಹಜರಿ ಎಲ್ಲ ಆದ್ಮೇಲೆ. ಮನೇಲಿ ನೋಡಿದ್ರೆ ಕರೆಂಟ್ ಇರ್ಲಿಲ್ಲ. ರಾತ್ರಿ ಎಲ್ಲ ಇರ್ಲಿಲ್ಲ. ನೀನು ಆರಾಮ ತಾನೆ?"
"ಓಹ್! ಈಗ (ಆಗ) ತಾನೆ ಇಲ್ಲಿ ಮ್ಯಾನರ್ ಹಿಮ್ ಕಾತುವಿನಲ್ಲಿ (ಎಂ.ಜಿ.ರಸ್ತೆ ಎಂದು ಓದಿಕೊಳ್ಳುವುದು) ಟ್ಯಾಕ್ಸಿಯವ್ನು ಫ್ರೀಯಾಗಿ ಮೇಲಕ್ಕೆ ಕಳಿಸೊಕ್ಕೆ ಪ್ರಯತ್ನಿಸಿದ. ನೀನು ಬೇಕಾದ್ರೆ ಹೋಗು, ನಾನು ಸ್ವಲ್ಪ ತಡಮಾಡಿ ಬರ್ತೀನಿ ಮಾರಾಯ ಅಂತ ಹೇಳಿ ಈಗಷ್ಟೇ ಬಂದೆ" ಎಂದೆ. "ಒಂದು ವಿಷಯ ಹೇಳ್ತೀನಿ..."ಯೆಂಬ ವಾಕ್ಯದಿಂದ ಈ ವಾಕ್ಯದ "ಒಂದು ವಿಷಯ ಹೇಳ್ತೀನಿ..." ತನಕ ನಮ್ಮಿಬ್ಬರ ಸಂಭಾಷಣೆ ನಡೆದದ್ದು ಎರಡನೇ ದಿನ. ಮೊದಲ ದಿನ ಸುರೇಖ ಅದನ್ನು ಹೇಳಿರಲಿಲ್ಲ, ನಾನು ಗಾಭರಿಯಾಗದಿರಲೆಂದು, ಅಥವ ಗಾಭರಿಯಾಗುತ್ತೇನೆಂದು. "ಅಲ್ಲಿ ಸತ್ತ ಬಿಹಾರಿ ಹುಡುಗನೇನಾದರೂ ಇಲ್ಲಿ ಟ್ಯಾಕ್ಸಿ ಡ್ರೈವರನಾಗಿ ಬಂದಿದ್ದನೆ" ಎಂದೆಲ್ಲ ಯೋಚಿಸಲು ಏನೇನೋ ಪ್ರಯತ್ನ ಪಟ್ಟೆ. ನಾನೋ ಅಗ್ನೋಸ್ಟಿಕ್. ನನ್ನ ದೈವೀಕ ನಂಬಿಕೆಗೆ ಅಗ್ನಿಯೂ ಇಲ್ಲ, ಅದಕ್ಕೆ ಸ್ಟಿಕ್ಕಾನೂ ಆಗೋಲ್ಲ. ದೇವರ ಭಯವಿಲ್ಲದಿದ್ದರೂ ದೇಹದ ಭಯವಿದೆಯಲ್ಲ. ನಮ್ಮದಲ್ಲದ ತಪ್ಪಿಗೆ ನನಗೆ ಸರಿಯಾದ ಶಿಕ್ಷೆ ನೀಡಿದ್ದ ಆ ನಾನು ನಂಬದ ದೇವರು. ಶಿಕ್ಷೆ: ಮೂರು ತಿಂಗಳ ಫಿನ್ಲೆಂಡ್ ಘೋರ ಏಕಾಂಗೀತನದ ಶಿಕ್ಷೆ. ಈ ಮುಂಚೆ ಫಿನ್ಲೆಂಡಿಗೆ ಅದೇ ಯುನೆಸ್ಕೊ-ಆಶ್‌ಬರ್ಗ್ ಫೆಲೋಷಿಪ್ ಪಡೆದು ಬಂದಿದ್ದ ಗೆಳೆಯ ಪ್ರಕಾಶ್ ಏಕಾಂಗೀತನದ ಬಗ್ಗೆ ವಿಡಿಯೊ ಕಲೆ ಸೃಷ್ಟಿಸಿ ಬೆಂಗಳೂರಿನಲ್ಲಿ ಸಾಮೂಹಿಕವಾಗಿ ಏಕಾಂಗತನವನ್ನು ಹಂಚುತ್ತಿದ್ದ!
ಈ ಪ್ರವಾಸ ಕಥನದ ಇತರ ಭಾಗಗಳು
2
ಫಿನ್ಲೆಂಡ್ ಬಗ್ಗೆ ಒಂದು ಜೋಕ್ ಇದೆ. ಫಿನ್ಲೆಂಡ್ ಜನರನ್ನು 'ಫಿನ್ನಿಶ್' ಎಂದು ಕರೆಯಲಾಗಿರುವುದರಿಂದ ಇದು ಫಿನ್ನಿಶ್ ಜೋಕ್ ಕೂಡ. ಇದನ್ನು ಏಕೆ ಹೇಳುತ್ತಿದ್ದೇನೆಂದು ಈ ಜೋಕ್ ಫಿನಿಶ್ ಆದ
ನಂತರ
ತಿಳಿಸುವೆ. ಈ ಜೋಕ್‌ನ ವಿಶೇಷವೇನೆಂದರೆ ಇದರಲ್ಲಿ ಶೇಕಡ ಐವತ್ತರಷ್ಟು ಭಾಗದ ಕ್ರೆಡಿಟ್ ನನಗೆ ಸಲ್ಲುತ್ತದೆ.
ಫಿನ್ಲೆಂಡ್ ನಲ್ಲಿ ಒಬ್ಬ ವ್ಯಕ್ತಿ ಪರಿಚಿತನಾಗಿ ನಂತರ ಆ 'ವ್ಯಕ್ತಿ' ಹೋಗಿ 'ಸ್ನೇಹಿತ'ನಾದ. (ಈ ಜೋಕ್ ಓದುವ ಮುನ್ನ ಅಥವ ಓದುವಾಗ ಇಂಗ್ಲೀಷ್ ಭಾಷೆಯಲ್ಲಿ ಫ್ರೆಂಡ್ ಎಂದರೆ ಗಂಡೂ ಆಗಿರಬಹುದೆಂಬ ನಿಮ್ಮ ನೆನಪಿನಲ್ಲಿರಲಿ) ಒಂದು ಸಂಜೆ ಬೇಸರವಾಗುತ್ತಿದ್ದುದ್ದರಿಂದ ಆ ಫ್ರೆಂಡನ್ನು ಭೇಟಿ ಮಾಡಬೇಕೆನಿಸಿತು. ಫೋನಾಯಿಸಿದೆ. "ಲೆಟ್ಸ್ ಹ್ಯಾವ್ ಅ ಡ್ರಿಂಕ್" "ಓಕೆ", ಎಲ್ಲಿ ಎಷ್ಟೊತ್ತಿಗೆ ಎಂದೆಲ್ಲ ಕೇಳಿ "ಭಾರತೀಯ ನೀನು. ಹೇಳಿದ ಸಮಯಕ್ಕೆ ಸರಿಯಾಗಿ ಬರತಕ್ಕದ್ದು" ಎಂದೆಚ್ಚರಿಸಿತ್ತು ಆ ಫ್ರೆಂಡ್. ಶುದ್ಧ ಭಾರತೀಯನಾದುದರಿಂದ ತಡವಾಗಿ ಹೋದೆ. ದಂಡ ರೂಪದಲ್ಲಿ ಬಿಯರ್ ಕೊಡಿಸಿದೆ ಆ ಫ್ರೆಂಡ್‌ಗೆ. ಒಂದನೆಯ ಬಿಯರ್ ಹೊರತುಪಡಿಸಿ ಮಿಕ್ಕ ನಾಲ್ಕು ಬಿಯರನ್ನು ಆ ಫ್ರೆಂಡ್ ತನ್ನ ಖರ್ಚಿನಲ್ಲೇ ಕುಡಿದು ಮುಗಿಸಿತು. ನಲ್ವತ್ತು ನಿಮಿಷವಾಯಿತು, ಒಂದೂ ಮಾತಿಲ್ಲದೆ.
ಬಾಯಿ ನವೆ ತಡೆಯಲಾರದೆ ಕೇಳಿಯೇ ಬಿಟ್ಟೆ, "ಏನಾದರೂ ಮಾತನಾಡುವ?"
"ಏನು! ಮಾತನಾಡುವುದೆ? ಕುಡಿಯಲಿಕ್ಕಲ್ಲವ ನೀನು ನನ್ನನ್ನು ಕರೆದದ್ದು!!"
ಒಂದು ವಾರದ ನಂತರ ಆ ಫ್ರೆಂಡ್ ಫೋನಾಯಿಸ್ತು. "ಬೇಜಾರು ಮಡಿಕೊಳ್ಳಬೇಡ, ಈ ಸಲ ನನ್ನ ಟ್ರೀಟ್. ಈ ಸಲ ಕುಡಿದು ಮಾತನಾಡುವ". ಅದೇ ಆರ್ಡರಿನಲ್ಲೇ ಆಗಲೆಂದು ಸುಮ್ಮನೆ ಕುಡಿದು
ಕುಳಿತಿದ್ದೆವು. ಮತ್ತೆ ನಲ್ವತ್ತು ನಿಮಿಷ ಸಂದಿತು. ಕಳೆದ ವಾರ ನಾನು ಬಳಸಿದ್ದ ಒಂದೇ ಒಂದು ವಾಕ್ಯವನ್ನು ಮತ್ತೆ ಬಳಸಿದ್ದೆ. "ಏನಾದರೂ
ಮಾತನಾಡುವ!" ಅಳು, ನಗು ಮತ್ತು ನವರಸವನ್ನೆಲ್ಲ ಅರೆದು
ಕುಡಿದಂತಹ ಶಾಂತ ಮುಖಭಾವದಲ್ಲೀ ಆ ಫ್ರೆಂಡ್ "ಓಕೆ ಮಾತನಾಡುವ" ಎಂದು ಜೇಬಿಗೆ ಕೈ ಹಾಕಿ, ಹೊರತೆಗೆದು, ಸರಿಯಾಗಿ ಮುವತ್ತೈದು ನಿಮಿಷ ಮಾತನಾಡಿತು, ನೋಕಿಯ ಮೊಬೈಲ್ ನಲ್ಲಿ-ಯಾರೋ ಸ್ನೇಹಿತರೊಂದಿಗೆ!!
ನಾನೇ ಪಾತ್ರವಾಗಿದ್ದ ಜೋಕ್ ಇದು. ಭಾರತಕ್ಕೆ ಬಾವುಟವಿರುವಂತೆ ಫಿನ್ನಿಶ್ ಜನರಿಗೆ ಈ ಜೋಕ್ ಎಲ್ಲ ರೀತಿಯಲ್ಲೂ ಅವರ ರಾಷ್ಟ್ರೀಯ ಲಾಂಛನವಾಗುವ ಯೋಗ್ಯತೆ ಇದೆ. ಅಲ್ಲಿನ ಜನ ಟೈಟಾದ ನಂತರವೇ ನಿಜವಾಗಿ ಕುಡಿಯಲು ಶುರುಮಾಡುತ್ತಾರೆ. 'ಲ್ಯಾಪಿನ್ ಕುಲ್ತ' ಎಂಬ, ಜಾಸ್ತಿ ಕಿಕ್ ಹೊಡಿಯದ ಬಿಯರ್ ನಮ್ಮ ಯು.ಬಿ ಬಿಯರ್‌ನಂತೆ. ಅರ್ಧ ಗಂಟೆ ಕಾಲ, ಪೂರ ಬಾರ್ ಖಾಲಿ ಇದ್ದು, ಒಂದೇ ಟೇಬಲ್ಲಿನಲ್ಲಿ ನೀವಿಬ್ಬರೇ ಇರುವ ಸಂದರ್ಭದಲ್ಲಿ ಎರಡನೆಯವರು ಫಿನ್ನಿಶ್ ಆದರೆ, ನೀವು ಅಸ್ತಿತ್ವದಲ್ಲೇ ಇಲ್ಲವೆಂಬಂತೆ ಮೌನವಾಗಿರುವ ಜನ ಅವರು. ಮತ್ತು ನಿಮ್ಮ ಫಿನ್ನಿಶ್ ಫ್ರೆಂಡ್‌ಗಳು ತಮ್ಮ ಮೊದಲ ಡ್ರಿಂಕ್‌ಅನ್ನು ತಾವೇ ಕೊಂಡುಕೊಳ್ಳುತ್ತಾರೆ. ಅದರ ನಂತರ, ಕಡೆಯ ಡ್ರಿಂಕ್ ತನಕ ನೀವು ಫಿನ್ನಿಶ್ ಪ್ರಜೆ ಅಲ್ಲದಿದ್ದರೆ ತಮ್ಮ ಡ್ರಿಂಕ್ ಜೊತೆ ನಿಮ್ಮ ಡ್ರಿಂಕ್ ಅನ್ನೂ ಕೊಂಡುಕೊಡುತ್ತಾರೆ. ಹೆಂಗಸರಾದರೆ ತಾವು ಕುಡಿದ ನಂತರವೂ, ಅಥವ ತಾವು ಕುಡಿದು ನಿಲ್ಲಿಸಿದ ನಂತರವೂ ನಿಮಗೆ ಕುಡಿಯಲು ಕಾಸು ತಾವೇ ಕೊಡುತ್ತಾರೆ. ಅವರಿಗೇನು ಗೊತ್ತು ಒಂದು ರೂಪಾಯಿ ಬೆಲೆ. ಹೇಗೆ ಗೊತ್ತಾಗಬೇಕು ಹೇಳಿ, ಅವರು ಬಳಸುವುದು ರುಪಾಯಿಗಳನ್ನಲ್ಲವಲ್ಲ. ೨೦೦೨ರವರೆಗೂ ಫ್ರಾಂಕ್ಸ್ (ಏಳು ರುಪಾಯಿಗೊಂದು ಫ್ರಾಂಕ್) ಆ ನಂತರ ಯೂರೋ (೬೫
ರೂಪಾಯಿ) ಬಳಸುತ್ತಿದ್ದಾರೆ ಫಿನ್ನಿಶ್ ಜನ.
ವಿಪರೀತ ಕುಡಿಯುವುದು, ಮೌನ ಮುರಿಯಲು ಬರದಿರುವುದು, ವರ್ಷದ ಎಂಟೊಂಬತ್ತು ತಿಂಗಳ ಕಾಲ ದಿನಕ್ಕೆ ಮೂರು ಗಂಟೆಕಾಲವೂ ಸೂರ್ಯನ ದರ್ಶನ ಮಾಡದಿರುವುದು, ಈ ಮೂರೂ
ಕಾರಣಗಳಿಂದಲೂ ಮಾನಸಿಕವಾಗಿ ಕುಸಿಯುವುದು, ಮತ್ತು ಈ ನಾಲ್ಕು ಕಾರಣಗಳಿಂದಾಗಿ ಇಡೀ ಯುರೋಪಿನಲ್ಲೇ ಅತ್ಯಂತ ಹೆಚ್ಚಿನ ಆತ್ಮಹತ್ಯೆ ಮಾಡಿಕೊಳ್ಳುವ ಮಂದಿ ಫಿನ್ನಿಶ್ ಜನ! ![]()
ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬುವರಿಗೆ ಎಲ್ಲೋ ಒಂದಿಷ್ಟು ಬದುಕುವ ಆಸೆ ಉಳಿದಿರುವುದು ಸಹಜವಷ್ಟೇ. ಆತ್ಮಹತ್ಯೆ ಯತ್ನವನ್ನು ಪೂರೈಸಿ ಸಫಲವಾಗಿ ಬದುಕಿಬಂದವರನ್ನು ಕೇಳಿ ನೋಡಿ. ಹಾಗೆ ದಾಟಿ ಬರುವ ಮಜವನ್ನು ಒಂದಷ್ಟು ವಿವರಿಸುವವರು ಯಾರಾದರೂ ಸಿಕ್ಕಾರೆಯೇ ಎಂದು ಈ ಜನ ಯಾವಾಗಲೂ ಜನರನ್ನು ಹುಡುಕುತ್ತಿರುತ್ತಾರೆ. ಭಾರತದಲ್ಲೇ ಹುಟ್ಟಿ ಬೆಳೆದವರಿಗೆ ಜನರಿಲ್ಲದ ಫಿನ್ಲೆಂಡನ್ನು
ಕಲ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ.
ಕರ್ನಾಟಕದ ಪಶ್ಚಿಮದ ಘಾಟಿಗೆ ಹೋಗಿರುತ್ತೀರಿ ಎಂದಿಟ್ಟುಕೊಳ್ಳಿ. ಮೈಲಿಗೋ ಹತ್ತು ಮೈಲಿಗೋ ಸಿಗುವ ಮನೆ, ಪ್ರಯಾಣಿಸುತ್ತಿರುವ ವಾಹನದ ಸೌಕರ್ಯ, ಮತ್ತೆ ಜನನಿಬಿಢ ಊರಿಗೆ ಹಿಂದಿರುಗುತ್ತೇವೆಂಬ ನಂಬಿಕೆಯಿಂದಾಗಿ ಆ ಘಟ್ಟಗಳು ಸೊಗಸಾಗಿ ಕಾಣುತ್ತವೆ. ಅಂತಹ ಒಂದು ಪ್ರಯಾಣದಿಂದ ಹಿಂದಿರುಗುವಾಗ ನಿಮ್ಮ ಜನನಿಬಿಡ ಊರು ಎಂದಿಗೂ ಸಿಗದೆ, ಆ
ಘಟ್ಟವೇ ಚಿರಕಾಲ ಪುನರಾವರ್ತನೆಯಾಗುತ್ತಿದೆ ಎಂದಿಟ್ಟುಕೊಳ್ಳಿ. ಬೇಗ ಈ ಕನಸಿನಿಂದ ಎದ್ದರೆ ಸಾಕಪ್ಪ ಎಂದು ನೀವು ಬೇಡಿಕೊಳ್ಳತೊಡಗುತ್ತೀರ. ನೀವು ಸಿನೆಮ ನಟರಾದರೆ ನಾಟಕೀಯವಾಗಿ
ಕೈಯನ್ನೂ ಇನ್ನೊಂದರಿಂದ ಚಿವುಟಿಕೊಳ್ಳುತ್ತೀರಿ. ಮನೆ, ಜನ, ಮನೆಮಟಗಳಿಂದ ತುಂಬಿರುವ ಜನನಿಭಿಡ ಊರಿನ ಸೊಬಗೇ ಬೇರೆ. ಟ್ರಾಫಿಕ್ ಜಾಸ್ತಿಯಾದಷ್ಟೂ ವೇಗದ ಅಪಘಾತದ ಭಯ ಮಾಯವಾಗುವುದಿಲ್ಲವೆ ಹಾಗೆ.
ಈ ಪ್ರವಾಸ ಕಥನದ ಇತರ ಭಾಗಗಳು
ನೀವು ಭಾರತೀಯರಾಗಿದ್ದರೆ ಈಗ ಮತ್ತೊಂದು ಅಸಾಧ್ಯ ಕಲ್ಪನೆಗೆ ಮುಂದಾಗಿ. ಹೀಗೆ ಹೇಳಿದನೆಂದು ಸಿಟ್ಟಾಗದಿರಿ. ಕನ್ನಡ ಓದಿಯೂ ಭಾರತೀಯನಲ್ಲದವರಾಗಿದ್ದರೆ ನೀವು ಎನ್.ಆರ್.ಐಗಳೇ ಇರಬೇಕು. ಅಂತಹವರಿಗೆ ಘಟ್ಟವೇಕೆ, ಬೆಂಗಳೂರು, ಮೈಸೂರೂ ಮಜ ಎನ್ನಿಸುತ್ತದೆ-ಏಕೆಂದರೆ, ತಾವು ಎಂದಿದ್ದರೂ ಯುರೋಪ್, ಯು.ಎಸ್.ಆಫ್ ಎಗೆ ಹಿಂದಿರುಗುತ್ತೇವೆ ಎಂಬ ನಂಬಿಕೆಯಿಂದಾಗಿ.
ಈಗ ಉಲ್ಟಾ ಎನ್‌ಆರ್‌ಐಗಳನ್ನು ಕಲ್ಪಿಸಿಕೊಳ್ಳಿ. ಸ್ವಲ್ಪಕ್ಕಿಂತಲೂ ಸ್ವಲ್ಪ ಹೆಚ್ಚು ಕಷ್ಟವಿದು. ಆ ಚಾರ್ಮಾಡಿ ಘಟ್ಟದವರೇ ಮತ್ತೂ ಜನನಿಭಿಡ ಕಾಡಿಗೆ ಹೋದಿರೆನ್ನಿ. ಒಂದರಿಂದ ಹತ್ತು ಕಿಲೋಮೀಟರ್ ಅಂತರದಲ್ಲಿ ಕಾಣುತ್ತಿದ್ದ ಮನೆಗಳು ಈಗ ಹತ್ತರಿಂದ ನೂರು ಕಿಲೋಮೀಟರ್ ಅಂತರದಲ್ಲಿ ಅಲ್ಲೊಂದು ಇಲ್ಲೊಂದು ಕಾಣುತ್ತಿದೆ ಎಂದಿಟ್ಟುಕೊಳ್ಳಿ. ಇರುವ ಮೂರು ಮತ್ತೊಂದು ಫಿನ್ಲೆಂಡ್ ನಗರಗಳ ಹೊರಗೆ ಅಕ್ಷರಶಃ ಹೀಗಿದೆ!
ಫಿನ್ಲೆಂಡ್ ಒಂಟಿ ದೇಶ. ವರ್ಷಕ್ಕೆ ಹತ್ತು ತಿಂಗಳು ಕತ್ತಲು. ಪ್ರತಿ ದಿನ ಏನಿಲ್ಲವೆಂದರೂ ಎರಡು ಮೂರು ಗಂಟೆ ಕಾಲ ಸೂರ್ಯನ ದರ್ಶನ. ಮಾಡಲು ಕೆಲಸವಿಲ್ಲದಿದ್ದರೂ ಇರಲು ಮನೆ, ತೊಡಲು ಬೆಚ್ಚನೆ ವಸ್ತ್ರ, ತಿಂಗಳ ಖರ್ಚಿಗೆ ಹಣ-ಇವಿಷ್ಟನ್ನೂ ಕೊಡುವ ಫಿನ್ನಿಶ್ ಸರ್ಕಾರ, ಇಷ್ಟಕ್ಕೆ ತನ್ನ ಪ್ರಜೆಗಳ ಅವಶ್ಯಕತೆ ಫಿನಿಶ್ ಆಯಿತೆಂದು ಭಾವಿಸುತ್ತದೆ. ಆದರೆ ಮನುಷ್ಯನ ಅವಶ್ಯಕತೆಗಳು ಪ್ರಾರಂಭವಾಗುವುದೇ ಹೊಟ್ಟೆ ಬಟ್ಟೆ ತುಂಬಿದ ಮೇಲಲ್ಲವೆ? ಇಲ್ಲದಿದ್ದರೆ, ಇಷ್ಟೆಲ್ಲ ಇದ್ದಾಗಲೂ ಇಡೀ ದೇಶದ ಶೇಕಡ ಮೂವತ್ತರಷ್ಟು ಜನರು 1960ರಲ್ಲಿ ಒಮ್ಮೆಲೆ ದೇಶ ಬಿಟ್ಟು ಹೋಗಿದ್ದೇಕೆ ಹೇಳಿ?
ಸ್ನೇಹಿತ ಸಾಮಿ ವ್ಯಾನಿಂಗನ್‌ನೊಂದಿಗೆ ಆತನ ಮನೆಗೆ ಹೋಗುತ್ತಿದ್ದೆ. ಗಂಟೆಗೆ ಸುಮಾರು ೧೨೦ ಕಿ.ಮೀ. ವೇಗದಲ್ಲಿ, ಆರು ಗಂಟೆಕಾಲದ ಪ್ರಯಾಣವದು. ಬೆಂಗಳೂರಿನಿಂದ ಗುಲ್ಬರ್ಗದವರೆಗೂ ಎಂದಿಟ್ಟುಕೊಳ್ಳಿ. ಒಂದೇ ಒಂದು ಶಾಪಿಂಗ್ ಕಾಂಪ್ಲೆಕ್ಸ್, ಎರಡು ಊರು, ಮೂರು ಮನೆ, ನಾಲ್ಕು ಮಾನವರು ಹಾಗೂ ಐದಾರು ಬಾರಿ ಮಳೆ ಕಾಣಸಿಕ್ಕಿತು ಅಷ್ಟರಲ್ಲಿ! "ಎಲ್ಲಿ ಜನ" ಎಂದು ಕೇಳಿದೆ.
"....."
"ಒಂಟಿ ಮನೆಗಳಿರುತ್ತವಲ್ಲ, ಕಳ್ಳತನವಾಗುವುದಿಲ್ಲವೆ?"
"ಜನರಿದ್ದರಲ್ಲವೆ ಕಳ್ಳರಾಗಲು ಸಾಧ್ಯ. ಒಂದು ವಿಷಯ ಗೊತ್ತೆ ನಿನಗೆ! ಇಷ್ಟರವರೆಗೂ ನೀನು ನೋಡಿದ ಮೂರೂ ಮನೆಗಳಲ್ಲಿ ಎರಡು ಮನೆಗಳಲ್ಲಿ ಜನರೇ ಇಲ್ಲ" ಎಂದು ನನ್ನ ಎರಡನೇ ಪ್ರಶ್ನೆಗೆ ಮೊದಲು ಉತ್ತರಿಸಿದ್ದ ಸಾಮಿ.
"ಭಾರತದ ಟೀಮ್ ಎರಡನೇ ಇನ್ನಿಂಗ್ಸ್‌ನಲ್ಲಿ ಚೆನ್ನಾಗಿ ಆಡುವುದಾದರೆ ಅದನ್ನೇ ಮೊದಲು ಆಡಲು ನಾನು ಹೇಳಿದೆನೆಂದು ತಿಳಿಸಿಬಿಡಿ" ಎಂದಿದ್ದರಂತೆ ಒಮ್ಮೆ ಜವಹರಲಾಲ್ ನೆಹರು- ಸ್ಟೇಡಿಯಂ ಖ್ಯಾತಿಯ ಚಿನ್ನಸ್ವಾಮಿಯವರಿಗೆ. ಹಾಗಾಯಿತು ಸಾಮಿಯ ಕಥೆ. ಕೇಳಿದ ಪ್ರಶ್ನೆಗಳಲ್ಲಿ ಎರಡನೆಯದನ್ನು ಉತ್ತರಿಸುತ್ತಿದ್ದ ಆತ. ಥೇಟ್ ಫಿನ್ನಿಶ್ ಜನರಂತೆ ಆತ. ಏಕಾಗ್ರಚಿತ್ತರಾಗಿ ಕಂಪ್ಯೂಟರ್‌ನೊಳಗೆ ಮುಳುಗಿರುವ ಫಿನ್ನಿಶ್ ಜನರನ್ನು ಮಾತನಾಡಿಸಿ ನೋಡಿ. ಎಲ್ಲ ಕಾರ್ಯಕ್ರಮಗಳನಲ್ಲದಿದ್ದರೂ ಪ್ರೋಗ್ರಾಮ್‌ಗಳನ್ನು ಮುಚ್ಚಿ ಕೆಳಗಿಳಿಸಿ (ಶಟ್ ಡೌನ್ ಮಾಡಿ) ನಂತರ ನಿಮ್ಮನ್ನು ಪಾರದರ್ಶಕರೋ ನೀವು ಎಂಬಂತೆ ನೋಡಿ, ನಿಮ್ಮ ಪ್ರಶ್ನೆಗೆ ಉತ್ತರವನ್ನು ಫಿನ್ನಿಶ್‌ನಿಂದ ಇಂಗ್ಲೀಷಿಗೆ ತರ್ಜುಮೆ ಮಾಡಿ, ಸ್ಲೋಮೋಶನ್ನಿನಲ್ಲಿ ಉತ್ತರಿಸುತ್ತಾರವರು.
ನನ್ನ ಮೊದಲ ಪ್ರಶ್ನೆ (ಎಲ್ಲಿ ಜನ?)ಯನ್ನು ಸುಮಾರು ಎರಡು ಗಂಟೆ ಕಾಲ ಮೆಲುಕು ಹಾಕಿದ ನಂತರ ತಿರುವೊಂದರಲ್ಲಿ ಸಾಮಿ ಉತ್ತರಿಸಿದ, "ಇನ್ನೊಂದತ್ತು ಸೆಕೆಂಡುಗಳಲ್ಲಿ ಜನ ಸಿಗುತ್ತಾರೆ ನೋಡು" ಎಂದು ಕಾರನ್ನು ನಿಧಾನ ಮಾಡಿ ನಿಲ್ಲಿಸಿಯೇ ಬಿಟ್ಟ. ಅಲ್ಲಿದ್ದರು ಜನ! ಅವರ ಪಕ್ಕದಲ್ಲಿ ಎರಡು ಬೃಹತ್ ತಾರು ಹಾಕುವ ಮೋಟಾರುಗಳು ತಾವೇ ತಾವಾಗಿ, ಇಂಚಿಂಚೂ - ಒಂದಿಂಚೂ ಹೆಚ್ಚೂ ಕಡಿಮೆ ಆಗದಂತೆ ನಿರ್ಜನ ರಸ್ತೆಯ ಸೊಗಸಾದ ಡಾಮರು ರಸ್ತೆಯ ಮೇಲೆ ಮತ್ತೆ ಡಾಮರು ಹಾಕುತ್ತಿತ್ತು. ಬೆಂಗಳೂರಿನ ರಸ್ತೆಗಳ ನೆನಪಾಯಿತು. ಹೊಸದಾಗಿ ತಾರ್ ಹಾಕಿದಾಗ ಅದೆಷ್ಟು ಕಲಾತ್ಮಕವಾಗಿ ಅಂಕುಡೊಂಕಾಗಿರುತ್ತದೆಂದರೆ, ಮಳೆ ಬಿದ್ದಾಗ ಸವೆದ ಟೈರಿನ ಬೈಕಿನಲ್ಲಿ ನೀವು ಪಯಣಿಸುತ್ತಿದ್ದರೆ, ಎಚ್ಚರಿಕೆಯಿಂದ ನೀವು ರಸ್ತೆಯ ಎಡಬದಿಯಲ್ಲೇ ಹೋಗಬೇಕೆಂದೇನಿಲ್ಲ. ರಸ್ತೆಯ ಮಧ್ಯಭಾಗವು ಅದೆಷ್ಟು ಪಿರಮಿಡ್ಡಿನಂತೆ ಉಬ್ಬಿರುತ್ತದೆಂದರೆ (ಅವುಗಳ ಕಾಂಟ್ರಾಕ್ಟುದಾರನ ಸೈಟಿನಲ್ಲಿ ಹೊಸ ಮನೆ ನೆಲದಿಂದ ಉಬ್ಬಿಕೊಂಡಿರುವಂತೆ) ಬೈಕನ್ನು ರಸ್ತೆಯ ಮಧ್ಯದಲ್ಲಿ ಓಡಿಸಿದರೆ ಸಾಕು. ಸರಾಗವಾಗಿ ಅದು ಜಾರುತ್ತ ರಸ್ತೆಯ ಎಡಭಾಗಕ್ಕೇ ಬಂದಿರುತ್ತದೆ!
ಫಿನ್ನಿಶ್ ರಸ್ತೆಯ ಸಮತಟ್ಟು ಗುಣಕ್ಕೆ ಬೆರಗಾದರೂ ಭಾರತವನ್ನು ಬಿಟ್ಟುಕೊಡಬಾರದೆಂದು ಒಂದು ಡೈಲಾಗ್ ಹೊಡೆದೆ ( ನನ್ನ ಜತೆ ಇದ್ದ ಸಾಮಿ ಬೆಂಗಳೂರಿನ ಸಮೀಪದ ಮೈಸೂರಿನಲ್ಲಿ ಹುಟ್ಟಿಬೆಳೆದವನು). "ಇಲ್ಲಿ ಜನರೇ ಇಲ್ಲದಿರುವುದರಿಂದ ರಸ್ತೆಗಳು ಇಷ್ಟು ಸಮತಟ್ಟಾಗಿರುತ್ತವೆ, ಅಲ್ಲವೆ?"
ಡಾಮರು ಹಾಕುತ್ತಿದ್ದ ಗಾಡಿಗಳಲ್ಲಿ ಜನರಿರಲಿಲ್ಲ. ಸಮೀಪದ ಎರಡು ಕಾರ್‌ಗಳ ಹೊರಗೆ ಮಾತ್ರ 'ಇಬ್ಬರು' ಮೇಲ್ವಿಚಾರಕರು ನಿಂತು ಡಾಮರು ಹಾಕುವುದನ್ನು ವೀಕ್ಷಿಸುತ್ತಿದ್ದರು. ಅಲ್ಲಿಂದ ಸುಮಾರು ಇನ್ನೂರ ಐವತ್ತು ಕಿ.ಮೀಟರ್ ದೂರದ ರಾಜಧಾನಿ ಹೆಲ್ಸಿಂಕಿಯ ರಿಮೋಟ್ ಕಂಟ್ರೋಲ್ ರೂಮಿನಿಂದ ಇಲ್ಲಿ ಡಾಮರು ಹಾಕುವ ಇಂಚಿಂಚು ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಯುತ್ತಿತ್ತು. ಈ ಇಬ್ಬರನ್ನು ಕುರಿತೇ ಸಾಮಿ ಹೇಳಿದ್ದು, "ಮುಂದೆ ಜನ ಸಿಗುತ್ತಾರೆ ನೋಡು" ಎಂದು!
ಇನ್ನೂ ಸ್ವಲ್ಪ ಮುಂದೆ ಹೋದಾಗ ಬೆಳೆದು ನಿಂತ ಮರಗಳನ್ನು ಇಟ್ಟಿಗೆಯ ಅಚ್ಚು ಹಾಕಿದಷ್ಟು ಕರಾರುವಾಕ್ಕಾಗಿ, ಒಂದಿಂಚೂ ಹೆಚ್ಚೂಕಡಿಮೆಯಾಗದಂತೆ ಕಡಿಯುತ್ತ, ಪಕ್ಕದಲ್ಲಿ ಜೋಡಿಸಿಡುತ್ತಿದ್ದ ಯಂತ್ರಗಳನ್ನು ನೋಡಿದೆ. ಅಲ್ಲಿ ಒಬ್ಬರೂ ಕಾಣಲಿಲ್ಲ. ಇದ್ದ ಒಬ್ಬನೇ ಮನುಷ್ಯ ಅಲ್ಲೇ ಸುಮಾರು ಐವತ್ತು ಕಿ.ಮೀ. ಹತ್ತಿರವಿದ್ದ ಮೂರೂ ಮತ್ತೊಂದು ಮನೆಯಿರುವ ಪಟ್ಟಣಕ್ಕೆ ತಿಂಡಿ ತಿನ್ನಲು ಹೋಗಿದ್ದನಂತೆ...
ನಿಜ ಹೇಳಬೇಕೆಂದರೆ, "ಜನರೆಲ್ಲಿ" ಎಂದು ಟಿಪಿಕಲ್ ಭಾರತೀಯನಂತೆ ಹೃದಯದಾಳದಿಂದ ಕೇಳುವುದನ್ನು ನಾನು ಹಲವು ದಿನಗಳ ಹಿಂದೆಯೇ ಫಿನ್ನಿಶ್ ರಾಜಧಾನಿ ಹೆಲ್ಸಿಂಕಿಯಲ್ಲೇ, ಸುಮಾರು ದಿನಗಳ ಹಿಂದೆಯೇ ನಿಲ್ಲಿಸಿಬಿಟ್ಟಿದ್ದೆ. ಯಾಕೆಂದರೆ "ಜನರೆಲ್ಲಿ" ಎಂಬ ಪ್ರಶ್ನೆಯನ್ನು ಕೇಳಲಿಸಿಕೊಳ್ಳಲಿಕ್ಕಾದರೂ ಜನರಿರಬೇಕಲ್ಲವೆ ಅಲ್ಲಿ. ಆದರೂ ಫಿನ್ಲೆಂಡಿನ ಅತ್ಯಂತ ಜನನಿಭಿಡ ಜಾಗ ರಾಜಧಾನಿಯೇ. ಇಡೀ ದೇಶದ ಶೇಕಡ ಎಂಬತ್ಟರಷ್ಟು ಜನ ಭೂ ಅಳತೆಯಲ್ಲಿ ಎರಡು ಶೇಕಡ ನೆಲವಾದ ಹೆಲ್ಸಿಂಕಿಯಲ್ಲಿದ್ದಾರೆ! ಉಳಿದ ಇಪ್ಪತ್ತು ಶೇಕಡ ಜನ ಮಿಕ್ಕುಳಿದ ಶೇಕಡ ತೊಂಬತ್ತೆಂಟು ಜಾಗವನ್ನಾಕ್ರಮಿಸಿಕೊಂಡಿದ್ದಾರೆ! ರಾಜಧಾನಿಯ ಹೊರಗೆ ಬದುಕುವ ಜನರಿಗೆ ಕಾರ್ಯನಿಮಿತ್ತ (ಸಾಮಿಯಂತೆ) ರಾಜಧಾನಿಗೆ ಬರುವುದೆಂದರೆ ತಲೆನೋವು. ಕಾರಣ ಹೆಲ್ಸಿಂಕಿಯನ್ನು ಕುರಿತ ಅವರ ಆರೋಪವನ್ನು ಕನ್ನಡಕ್ಕೆ ಭಾಷಾಂತರಿಸಿ ಹೇಳುವುದಾದರೆ, "ಅಲ್ಲಿ ಜನಾ ಅಂದ್ರೆ ಜನ"!
ಫಿನ್ಲೆಂಡಿನ ಅತ್ಯಂತ ಜನನಿಭಿಡ ಪ್ರದೇಶದಲ್ಲಿ (ತುರ್ಕು, ಹೆಲ್ಸಿಂಕಿ, ಹ್ಯಾಂಕೋ ಎಂಬ ಒಂದೆರೆಡು ಜಾಗಗಳಲ್ಲಿ) ಚದರ ಕಿಲೋಮೀಟರಿಗೆ ಹದಿನಾರು ಮಂದಿ ವಾಸಿಸುತ್ತಾರೆ! ಬೆಂಗಳೂರಿನಲ್ಲಿ ಅದೇ ಅಳತೆಯ ಜಾಗದಲ್ಲಿ ಮೂರು ಸಾವಿರ ಜನ ಮತ್ತು ಮುಂಬಯಿಯಲ್ಲಿ ಅದೇ ಅಳತೆಯ ಜಾಗದಲ್ಲಿ ಐದು ಲಕ್ಷ ಜನ ವಾಸಿಸುತ್ತಾರೆ. ಇನ್ನೈದು ವರ್ಷದಲ್ಲಿ ಸಮಗ್ರ ಆಸ್ಟ್ರೇಲಿಯ ಖಂಡದ ಜನಸಂಖ್ಯೆಯನ್ನು ಏಷ್ಯ ಖಂಡವೆಂಬುದರೊಳಗಿರುವ ಭಾರತವೆಂಬ ಒಂದು ದೇಶದ ಒಂದು ನಗರದ ಜನಸಂಖ್ಯೆ (ಮುಂಬೈ) ಮೀರಿಸುತ್ತದೆಂಬುದು ಸತ್ಯಕ್ಕೆ ಹತ್ತಿರವಾದ ಮುನ್ನೋಟ! ಇಂತಹ ಊರನ್ನು ನೋಡಿರದ ಫಿನ್ನಿಶ್ ಜನ ತಮ್ಮ ರಾಜಧಾನಿಯನ್ನು "ಹೆಲ್-ಸಿಂಕ್-ಐ" ಎನ್ನುತ್ತ ತಮ್ಮ ತವರೂರಿಗೆ ಗುಳೇ ಹೋಗುತ್ತಾರೆ. ಕೇವಲ ಒಂದು ಶತಮಾನದ ಹಿಂದೆ ಕಾಡಿನಲ್ಲಿ ಬೇಟೆಯಾಡುತ್ತಿದ್ದ ವಾಲ್ಮೀಕಿ ಜನ ಅವರು. ಈಗಷ್ಟೇ ನೋಕಿಯ ಮೊಬೈಲ್ ಬಂದು ಅವರ ಸಾಧನೆಯ ಸುದ್ಧಿ ಎಲ್ಲೆಡೆ ಎಸ್ಸೆಮ್ಮೆಸ್ ಟೆಕ್ಸ್ಟ್ ಮೆಸೇಜ್‌ಆಗಿ ಹರಡಿಬಿಟ್ಟಿದೆ. ನೋಕಿಯ ಫಿನ್ಲೆಂಡಿಗೆ ಅಶೋಕ ಸ್ಥಂಭವಿದ್ದಂತೆ. ಅದೇ ಅವರ ರಾಷ್ಟ್ರೀಯ ಸ್ಮಾರಕ ಕೂಡ!
ಲಂಡರ್ ಎಂಬ ಗೆಳೆಯ ಬದುಕಿರುವ ಜಾಗದಲ್ಲಿ ಆತ ಇಪ್ಪತ್ತು ವರ್ಷದಲ್ಲಿ ಐದು ಜನರನ್ನು ಹಾಗೂ ಒಂದು ಕರಡಿಯನ್ನು ನೋಡಿದ್ದಾನಂತೆ. ಇದೊಂದು ಉತ್ಫ್ರೇಕ್ಷಿತ ಗಣಿತವೇ ಎಂದುಕೊಳ್ಳಿ. ಆತ ಐದು ವರ್ಷದಲ್ಲಿ ಇಪ್ಪತ್ತು ಜನರನ್ನೂ ಹಾಗೂ ಇಲ್ಲದ ಕರಡಿಯನ್ನು ನೋಡಿದ್ದಾನೆ ಎಂದೇ ಲೆಕ್ಕ ಹಾಕೋಣ. ಎಲ್ಲಿದೆ ಅಂತ ಪ್ರಶಾಂತ, ಜನನಿಭಿಡ ಜಾಗ ಭಾರತದಲ್ಲಿ? ಮಲಂಡರ್‌ನನ್ನು ಸುಳ್ಳ ಎನ್ನುವಂತಿಲ್ಲ. ಆತನ ಮಾಜಿ ಪ್ರೇಯಸಿ ಇಷ್ಟರಲ್ಲೇ ಫಿನ್ಲೆಂಡಿನ ಪ್ರಧಾನಿಯಾಗಲಿದ್ದಾಳೆ ಎಂದ ಆತನ ಹೇಳಿಕೆಯನ್ನೂ ಸುಳ್ಳು ಎನ್ನುವಂತಿಲ್ಲ. ಅದೊಂದು ಆಶಯ ಎಂದುಕೊಂಡೆ. ಏಕೆಂದರೆ ಮಲಂಡರ್ ಈ ಭವಿಷ್ಯ ನುಡಿದ ಕಾಲಕ್ಕೆ ಆಕೆ ಅಲ್ಲಿನ ಶಿಕ್ಷಣಾ ಮಂತ್ರಿಯೋ ರಕ್ಷಣಾ ಮಂತ್ರಿಯೋ (ಶಿಕ್ಷೆ, ರಕ್ಷೆಯ ನಡುವಣ ವ್ಯತ್ಯಾಸವೆಂತಯ್ಯ!) ಆಗಿದ್ದಾಗಿ ಹೋಗಿತ್ತು.
ಎಪ್ಪತ್ತರ ದಶಕದಲ್ಲಾಗಲೇ ದಲೈ ಲಾಮಾರನ್ನು ಫಿನ್ಲೆಂಡಿಗೆ ಕರೆತಂದಿದ್ದ ಮಲಂಡರ್. ಈಗಾಗಲೇ ಬುದ್ಧನೇ ಹೇಳಿಕೊಟ್ಟನೆನ್ನಲಾದ ವಿಪಶ್ಯನ ಧ್ಯಾನ ವಿಧಾನವನ್ನು ಅಲ್ಲಿನ ಜನರಿಗೆ ಪರಿಚಯಿಸಿಕೊಟ್ಟಿದ್ದ ಮಲಂಡರ್. ಬೌದ್ಧ ಧರ್ಮದ ಈ ಧ್ಯಾನವನ್ನು ಅಲ್ಲಿನ ಕ್ರೈಸ್ತ ಧರ್ಮದ ದೇವಾಲಯಗಳಲ್ಲಿ ನಿಯಮಿತವಾಗಿ ಹೇಳಿಕೊಡುತ್ತಿದ್ದಾರೆ ಕ್ರೈಸ್ತರೂ ಅಲ್ಲದ, ಬೌದ್ಧರೂ ಅಲ್ಲದ ವಿಪಶ್ಯನ ಸಾಧಕರು. ಇದಕ್ಕೆ ಮೂಲ ಪ್ರೇರಣೆ ಮಲಂದರ್. ಆತ ಇಲ್ಲಿದ್ದಿದ್ದರೆ, "ಅಲ್ಲಿ ನೋಡು ಮಲಂದರ್, ಇಲ್ಲಿ ನೋಡು ಸಿಕಂದರ್" ಎಂದು ನಮ್ಮ ಜನ ಹಾಡಿಹೋಗಳಬಹುದಾಗಿತ್ತು, ಛೇ!
ಸಾಮಿಯೊಂದಿಗಿನ ಆ ಒಂದು ಪ್ರಯಾಣ, ಹೆಲ್ಸಿಂಕಿಯಿಂದ ಪಕ್ಕದ ದೇಶವಾದ ಸ್ವೀಡನ್ನಿನ ರಾಜಧಾನಿ ಸ್ಟಾಕ್‌ಹೋಮಿಗೆ ಹದಿನೈದು ಗಂಟೆ ಕಾಲದ ಹಡಗು ಪ್ರಯಾಣ ಹಾಗೂ ಭಾರತ ಸಂಜಾತ ಫಿನ್ನಿಶ್ ಪ್ರಜೆ ಕೇತನ್ ಭುಪ್ತನೊಂದಿಗಿನ ಸುಮಾರು ಹನ್ನೆರೆಡು ಗಂಟೆ ಕಾಲದ ರಾತ್ರಿಯ ಆತನ ಹರಿಕಥೆ--ಈ ಮೂರು ಪ್ರಯಾಣಗಳದ್ಡು ಒಂದು ತೂಕವಾದರೆ ಮಿಕ್ಕುಳಿದ ಎರಡು ಭೇಟಿಗಳ ಒಟ್ಟು ನಾಲ್ಕೂವರೆ ತಿಂಗಳ ಫಿನ್ಲೆಂಡ್ ಪ್ರಯಾಣದ್ದು ಒಂದೇ ತೂಕ!
ಈ ಪ್ರವಾಸ ಕಥನದ ಇತರ ಭಾಗಗಳು
4
ಸಾಮಿ ಒಬ್ಬ ಪ್ರವಾದಿಯಂತೆ ಕಾಣುತ್ತಿದ್ದ ನನಗೆ. ತಾರು ಬಳಿಯುವ, ಮರ ಕಡಿಯುವ ಯಂತ್ರಗಳನ್ನು ಮಾತನಾಡಿಸಿದ ನಂತರ ಹಸುಗಳ ಫಾರ್ಮ್‌ಗೆ ಕರೆದುಕೊಂಡು ಹೋದ. ಮತ್ತೆ ಸ್ಕ್ರಿಪ್ಟ್ ಪುನರಾವರ್ತನೆಯಾದಂತಾಯ್ತು. ಐವತ್ತು ಹಸುಗಳು, ಒಬ್ಬನೇ ಮೇಲ್ವಿಚಾರಕ ಹಾಗೂ ಪ್ರತಿದಿನ ಆ ಐವತ್ತೂ ಜಾನುವಾರುಗಳ ಹಾಲು ಕರೆವ ಕ್ರಿಯೆ. ಹಸು ಯಂತ್ರೀಕೃತ ಕಟ್ಟೆಯ ಒಳಕ್ಕೆ ಬರುತ್ತದೆ, ಯಂತ್ರದ ಬಟ್ಟಲು ಯಾಂತ್ರಿಕವಾಗಿ ಅದರ ಕೆಚ್ಚಲನ್ನು ಹಿಂಡುತ್ತದೆ, ಹಾಲು ನಿಂತು ರಕ್ತ ಬರುವುದಕ್ಕೆ ಸ್ವಲ್ಪ ಮುಂಚೆಯೇ, ಮನುಷ್ಯರಿಗೆ ಸೆನ್ಸ್ ಇರುವಂತೆ ಯಂತ್ರಕ್ಕೆ ಇರುವ ಸೆನ್ಸರ್ ಅದನ್ನು ಗ್ರಹಿಸಿ ಬಾಲ ಮುದುರಿಕೊಳ್ಳುತ್ತದೆ. ಹಸು ನಿರಾಳವಾಗಿ ಎದೆಯ ಭಾರ ಇಳಿಸಿಕೊಂಡಂತೆ ವಾಕಿಂಗ್ ಹೋಗಿ, ಮೈಭಾರವಾದ ಮತ್ತೊಂದು ಹಸುವಿಗೆ ಜಾಗ ಬಿಟ್ಟುಕೊಡುತ್ತದೆ.
ಹಿಂದೆ ಬಂದರೆ ಹಾಯದ, ಮುಂದೆ ಬಂದರೆ ಒದೆಯದ, ಹಿಂದೆ ಮುಂದೆ ಬರುವವರಿಲ್ಲದ ಆ ಫಾರ್ಮ್ ಹೌಸಿನಿಂದ ಹೊರಬಂದು ಮತ್ತೆ ನಮ್ಮ ಗಂಟೆಗೆ ನೂರ ಇಪ್ಪತ್ತು ಕಿಲೋಮೀಟರ್ ಪ್ರಯಾಣವನ್ನೂ ನಿಧಾನವಾಗಿ ಆರಂಭಿಸಿದೆವು. ಆ ಎಲೆಕ್ಟ್ರಾನಿಕ್ ಯಂತ್ರಗಳಿಂದಾಗಿ ನನ್ನಲ್ಲಿ ವಿದ್ಯುದ್‌ಸಂಚಾರವಾಗಿತ್ತು. "ಯಾಕೆ ಮೌನವಾಗಿದ್ದೀ?" ಎಂದಿದ್ದ ಸ್ಯಾಮ್. "ಒಂದರೊಳಗೊಂದಾಗಿ ಎರಡು ಪ್ರಶ್ನೆಗಳಿವೆ ನನ್ನಲ್ಲಿ" ಎಂದಿದ್ದೆ. "ಮೊದಲನೆಯದು ಗೊತ್ತಿರುವುದೇ. ಈ ಮೂರು ಯಾಂತ್ರಿಕ ದರ್ಶನ. ಎರಡನೆಯದು ಊರಿಗೆ ಹೋಗಿ ಹೇಗೆ ಇವುಗಳ ಬಗ್ಗೆ ಸ್ನೇಹಿತರನ್ನು ನಂಬಿಸುವುದು" ಎಂದೆ. ಸಾಮ್ ಸುಮ್ಮನಿದ್ದ. ಆತ ಫಿನ್ನಿಶ್ ಆದ್ದರಿಂದ ಅದನ್ನು "ನಕ್ಕು ಸುಮ್ಮನಾದ" ಎಂದುಕೊಂಡೆ.
ಹಿಂದಿರುಗಿ ಹೆಲ್ಸಿಂಕಿಗೆ ಬಂದಾಗ ನಿಜವಾದ ವಿದ್ಯುದ್‌ಸಂಚಾರ ಕಾದಿತ್ತು ನನಗೆ. ('ವಿದ್ಯುದ್‌ಸಂಚಾರ'ದಷ್ಟು ಪರಿಣಾಮಕಾರಿಯಾಗಿ ಶಾಕ್ ನೀಡಲಾರದು 'ಶಾಕ್' ಅಲ್ಲವೆ). "ವಾವ್, ನಮ್ಮ ಬಗ್ಗೆ ನಮಗೇ ತಿಳಿಯದ್ದನ್ನು ಈ ಇಂಡಿಯನ್ ತಿಳಿಸುತ್ತಿದ್ದಾನೆ ಎಂದು ಸಕ್ಕರಿ ವಯಕ್ಕು ಹಾಗೂ ಇರ್ಮೇಲಿ ಕೊಕ್ಕೊ ಆಶ್ಚರ್ಯ ಪಟ್ಟರು.
ಸಾಮಿಯ ಮನೆಗೆ ತಲುಪುವಾಗ ಸಂಜೆ ಬಿಸಿಲು. ಹಕ್ಕಿಗಳು ಅದ್ಯಾವ ಭಾಷೆಯಲ್ಲೋ ಚಿಲಿಪಿಲಿಗುಟ್ಟುತ್ತ, ಎಲ್ಲ ಭಾಷೆಯ ಕವಿಗಳು ನಮಗೆ ತಿಳಿಸಿರುವಂತೆ ತಮ್ಮ ತಮ್ಮ ರೆಸಿಡೆನ್ಸ್‌ಗೆ ಮರಳುತ್ತಿದ್ದವು. ಸಮಯ: ಹನ್ನೆರೆಡು ಮುವತ್ತು ಎ.ಎಂ! ಫಿನ್ಲೆಂಡಿನಲ್ಲಿ ವರ್ಷಕ್ಕೆ ಹತ್ತು ತಿಂಗಳು, ದಿನಕ್ಕೆ ಎರಡು ಗಂಟೆ ಸೂರ್ಯದರ್ಶನವಾದರೆ ಇನ್ನುಳಿದ ಎರಡು ತಿಂಗಳು ದಿನಕ್ಕೆ ಎರಡು ಗಂಟೆ ಕತ್ತಲು! ಅದರಲ್ಲೂ ಜೂನ್ ೨೧ರಂದು ಅವರಿಗೆ ಶಿವರಾತ್ರಿ. ರಾತ್ರಿ ಒಂದೂವರೆಗೆ ಪಶ್ಚಿಮದಲ್ಲಿ ಸೂರ್ಯ ಮುಳುಗಿ, ನಿಮ್ಮ ಕೈಬೆರಳುಗಳನ್ನು ಎಣಿಸಿ, ಕಾಲೆರಡರ ಕೊನೆಯ ಬೆರಳನ್ನು ಎಣಿಸುವಷ್ಟರಲ್ಲಿ ಪೂರ್ವದಲ್ಲಿ ಸೂರ್ಯ ಹುಟ್ಟಿಬಿಟ್ಟಿರುತ್ತಾನೆ. ಅದೊಂದು ಕಡೆ ನನಗೆ ಸ್ಪಷ್ಟವಾಗಿದ್ದೇನೆಂದರೆ ಆಕಾಶ ಅರ್ಧವೆಂದು. ಇನ್ನರ್ಧ ಅದರ ಪ್ರತಿಫಲನವೆಂದು. ಇಲ್ಲದಿದ್ದರೆ ಪಶ್ಚಿಮದಲ್ಲಿ ಹೀಗೆ ಹೋದ ಸೂರ್ಯದೇವ ಇಡೀ ಭೂಮಿಯನ್ನು ಅರ್ಧ ಗಂಟೆಯಲ್ಲಿ ಸುತ್ತುಹಾಕಿ, ಹಾಗೆ ಪೂರ್ವದಲ್ಲಿ ಬರಬೇಕೆಂದರೆ ಆತನೇನು ಅಪ್ಪನನ್ನೇ ರೌಂಡ್ ಹಾಕಿ ಜಗಸುತ್ತಿದ ಲೆಕ್ಕ ತೋರಿಸಿದ ನಮ್ಮ ಗಣಪ ಕೆಟ್ಟುಹೋದನೆ?
ರಾತ್ರಿ--ಅಥವ ಬೆಳಿಗ್ಗೆ--ಅಷ್ಟೊತ್ತಿನಲ್ಲಿ 'ಸಾನ' ಮಾಡಿದೆವು. ಸ್ನಾನ ಎಂದು ಮುಂಚಿನ ವಾಕ್ಯದ ಪದವನ್ನು ತಪ್ಪರ್ಥ ಮಾಡಿಕೊಳ್ಳಬೇಡಿ. ಸಾನಕ್ಕೂ ಸ್ನಾನಕ್ಕೂ ಇರುವ ವ್ಯತ್ಯಾಸವೇ ಅದನ್ನು ಮಾಡುವ ಅವರ ಮತ್ತು ನಮ್ಮ ಕ್ರಮಕ್ಕೂ ವ್ಯತ್ಯಾಸದಷ್ಟೇ.....
ಸಾಮಿಯ ಕಥೆ ಒಂದಷ್ಟು: ಆತನ ತಂದೆ ಮೈಸೂರು-ಕೊಡಗು ಮಧ್ಯದವರು. ಆತನ ತಂದೆಯ ಪೂರ್ವಜರು ಅಮೆರಿಕನ್ನರು. ಮಹಾರಾಜರ ಕಾಲದಲ್ಲಿ ಟಾಕ್ಸಿಡಡರ್ಮಿಸ್ಟ್ ಆಗಿದ್ದವರು. ಅಂದರೆ ಸತ್ತ ಅಥವ ಸಾಯಿಸಲಾದ ಪ್ರಾಣಿಗಳನ್ನು ಮಮ್ಮಿಫೈ ಮಾಡಿ ಮನೆಗಳಲ್ಲಿ ಶೃಂಗಾರ, ಶೌರ್ಯಗಳ ಸಂಕೇತಗಳಾಗಿ ತೂಗಾಕುತ್ತಿದ್ದವರು. ಇದರಿಂದ ಖುಷಿಗೊಂಡ ಮಹಾರಾಜರು ಬೇಕಾದಷ್ಟು, ಅಥವ ಬೇಡವಾದಷ್ಟು ಕಾಡನ್ನು ಸಾಮಿಯ ಡ್ಯಾಡ್‌ಗೆ ಕೊಡುಗೆಯಾಗಿ ಕೊಟ್ಟಿದ್ದರು.
ಅಂದ ಹಾಗೆ ಫಿನ್ಲೆಂಡ್‌ನ ಬುಡಕಟ್ಟು ಜನರನ್ನು 'ಸಾಮಿ'ಗಳು ಎನ್ನುತ್ತಾರೆ. ಉತ್ತರದ ಫಿನ್ಲೆಂಡನ್ನು ಸಾಮಿಗಳು ಸಾಂತ ಕ್ಲಾಸ್‌ನೊಂದಿಗೆ ಬೈಟು ಮಾಡಿಕೊಳ್ಳುತ್ತಾರೆ. ಏಕೆಂದರೆ ಅಲ್ಲಿ ಫಿನ್ನಿಶ್ ಅಥವ ಪರದೇಶೀ ಜನರಿರಲಿ (ಇದನ್ನು ಬಯ್ಗುಳ ಎಂದು ಭಾವಿಸದೆ ಬೇರೆ ದೇಶದವರು ಎಂದು ಅರ್ಥ ಮಾಡಿಕೊಳ್ಳತಕ್ಕದ್ದು) ಸರ್ಕಾರದ ರೈಲು ಸಹ ಹೋಗುವುದಿಲ್ಲ. ವಿಪರೀತ್ ಸೊಳ್ಳೆಕಾಟ ಬೇರೆ. ಅಲ್ಲಿ ವಾರ್ಷಿಕವಾಗಿ ನಡೆವ ಫಿನ್ನಿಶ್ ಸಿನೆಮ ಉತ್ಸವ ನೋಡಲು ಹೋಗುವವರು ಸೊಳ್ಳೆಪರದೆಯಲ್ಲೇ, ಬುರ್ಕ ಎಂಬ ಬಟ್ಟೆಯನ್ನೇ ಹೊಲಿದುಕೊಂಡು, ಆ ನಂತರ ಅದನ್ನು ತೊಟ್ಟುಕೊಂಡು ಅಲ್ಲಿ ಹೋಗಿ ಬರುತ್ತಾರೆ. ಅಲ್ಲಿ ಹೋದ ನಂತರ ಹಾಕಿಕೊಳ್ಳಬಹುದೆಂದರೆ ಅದು ಆಗದ ಮಾತು. ಏಕೆಂದರೆ ಅದಾಗಲೇ ಬಂದಿರಬಹುದಾದ ಮೈಮೇಲಿನ ಸಹಸ್ರ ಬೊಬ್ಬೆಗಳಿಂದಾಗಿ ಸೊಳ್ಳೆಪರದೆ ಬಟ್ಟೆ ಸೈಜ್ ಚಿಕ್ಕದಾಗಿ ಹಾಕಿಕೊಳ್ಳುವುದು ಕಷ್ಟವಾಗುತ್ತದೆ. ಹಾಕಿಕೊಂಡರೂ ನೂಲಿನ ಎಳೆಗಳ ಮೂಲಕ ಬೊಬ್ಬೆಗಳು, ಸರಳುಗಳ ಹಿಂದಿನಿಂದ ಕೈಹೊರಗೆ ಹಾಕುವ ಸೆರೆಮನೆ ವಾಸಿಗಳಂತೆ, ಹೊರಚಾಚಿ ಸೊಳ್ಳೆಗಳಿಗೆ ತಮ್ಮ ತಮ್ಮಲ್ಲೇ ಇಂತಿಷ್ಟು ನೂಲುಗಳ ನಡುವಿನ ಊತವಿರುವ ಮನುಷ್ಯ ದೇಹ ತಮ್ಮದೆಂದು ಸ್ಪಷ್ಟವಾಗಿ ಸ್ವಾಧೀನಪಡಿಸಿಕೊಳ್ಳಲು ಸಹಾಯಕವಾಗುತ್ತದೆ. ಸೊಳ್ಳೆ ಪರದೆಯ ಸಣ್ಣ ಸಣ್ಣ ಪದರಗಳು ಮೈಮೇಲಿನ ಬೊಬ್ಬೆಗಳಿಗೆ ಅಂಟಿಕೊಂಡು ವಿಪರೀತ ಹಿಂಸೆ ಕೊಡುತ್ತವೆ ತೊಟ್ಟವರಿಗೆ.
ಆದ್ದರಿಂದಲೇ ಸಾಂತಕ್ಲಾಸ್ ಮೈತುಂಬ ಬಟ್ಟೆ, ಮುಖದ ತುಂಬ ದಾಡಿ ಧರಿಸಿರುವುದು. ಸ್ವತಃ ಸಾಂತ ಕ್ಲಾಸ್ ಹಾಗೂ ಶರ್ಲಾಕ್ ಹೋಮ್ಸ್ ತಾವು ಕಲ್ಪಿತ ವ್ಯಕ್ತಿಗಳೆಂದು ಹೇಳಿದರೂ ಜನ ಕೇಳರು. ಭಾರತದ ರಸ್ತೆಗಳು ಮಧ್ಯದಲ್ಲಿ ಉದ್ಭವ ಮೂರ್ತಿ ಸ್ವತಃ ತಾನೇ ಬಂದು ಇದು ಉದ್ಭವವಾದುದಲ್ಲ, ಯಾರೋ ಮನುಷ್ಯರ ಕೈವಾಡವೆಂದು ಹೇಳಿದರೂ ಹೇಗೆ ಜನ ನಂಬುವುದಿಲ್ಲವೋ ಹಾಗೆ ಇದು...!
ಗೆಳೆಯ ಸಾಮಿಯ ಅಮ್ಮ ಫಿನ್ಲೆಂಡಿನವಳು. ಮುಂದೆ ತನ್ನ ಮಕ್ಕಳ ಅಪ್ಪನಾಗುವ ಮೈಸೂರಿನ ಟಾಕ್ಸಿಡರ್ಮಿಸ್ಟ್ ಮಲ್ಲನನ್ನು ದಸರ ಹಬ್ಬದಲ್ಲಿ ಭೇಟಿಮಾಡಿ, ಪ್ರೀತಿಯಲ್ಲಿ ಬಿದ್ದು, ಮದುವೆಯಲ್ಲಿ ಎದ್ದರಂತೆ. ಪ್ರೀತಿಯ ನೆಪದಿಂದ ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದವರು ಒಂದಾಗಿ, ಪ್ರೀತಿಯ ಫಲಿತಾಂಶದ ನೆಪದಿಂದ ಅದೇ ಪ್ರೀತಿಯ ಬಂಧನವನ್ನು ತೊಡೆದುಹಾಕಿಕೊಂಡರು! ಮಕ್ಕಳನ್ನು ಫಿನ್ನಿಶ್ ಮಾಡಿಬಿಡಪವ ಸಲುವಾಗಿ ಅವರಮ್ಮ ಫಿನ್ಲೆಂಡಿನಲ್ಲೇ ನೆಲೆಸಿಬಿಟ್ಟರು. ಸಾಮಿ ಮತ್ತು ಆತನ ಅಣ್ಣ ಇಬ್ಬರೂ ಪ್ರಸಿದ್ದ ಸಮಕಾಲೀನ ಫಿನ್ನಿಶ್ ಕಲಾವಿದರು. "ಸಾಮಿ, ನೀನು ಫಿನ್ಲೆಂಡಿಗೇ ಜಗತ್ಪ್ರಸಿದ್ಧ ಕಲಾವಿದ" ಎಂದು ಹೊಗಳಿದೆ. ಹೊಗಳಿಕೆ ಕಡಿಮೆಯಾಯಿತು, ಅಷ್ಟು ಒಳ್ಳೆಯ ಕಲಾಬೋಧಕ ಆತ.
ಈ ಪ್ರವಾಸ ಕಥನದ ಇತರ ಭಾಗಗಳು
ಫಿನ್ನಿಶ್ 'ಸಾನ'ವನ್ನು ಅಲ್ಲಿಗೆ ಹೋಗುವ ಭಾರತೀಯರು ಮಾಡುವುದಿಲ್ಲ. ಮಾಡದಿದ್ದರೆ ನೋಡಲು ಸಿಗುವುದೂ ಇಲ್ಲ. ಬಚ್ಚಲ ಮನೆಯಲ್ಲಿ ದೊಡ್ಡ ಹಗೇವು ಅಥವ ಉದ್ದನೆಯ ಹಂಡೆ ಇರುತ್ತದೆ. ಅದರೊಳಗೆ ಕಲ್ಲು ಗುಂಡುಗಳು. ಇಡೀ ಸಾನದ ಕೋಣೆಗೆ ಹಬೆ ಉಕ್ಕುವುದು ಆ ಅಲ್ಲಾದೀನನ ಮ್ಯಾಜಿಕ್ ಹಂಡೆಯಿಂದ. ಹೊರಗಿನ ಚಳಿಯಿಂದಾಗಿ ಹಬೆ ಬೇಗನೆ ತಣ್ಣಗಾಗ ತೊಡಗುತ್ತದೆ. ಕೋಣೆಯ ಕಾಲು ಭಾಗ ಆಕ್ರಮಿಸಿಕೊಂಡಿರುತ್ತದೆ ಆ ಹಂಡೆ. ಅದರ ಸುತ್ತಲೂ ಮರದ ಚಜ್ಜ ಮತ್ತು ಅದನ್ನು ಹತ್ತಿ ಹೋಗಲು ನಾಲ್ಕಾರು ಮೆಟ್ಟಿಲುಗಳು. ಮರದ ಚಜ್ಜೆಯ ಮೇಲೆ ಜನ ಸುಮ್ಮನು, ದುಂಡಗೆ ಕುಳಿತುಕೊಳ್ಳಬೇಕು (ದುಂಡಗೆ ಎಂದರೆ 'ಬರ್ತ್‌ಡೆ ಡ್ರಸ್' ಎಂದರ್ಥ). ಆದ್ದರಿಂದಲೇ ಭಾರತೀಯರು ಸಾನ ಮಾಡಲು ನಿರಾಕರಿಸುವುದು.
ಹಬೆ ಏರತೊಡಗಿದಂತೆಲ್ಲ ಸೌಟಿನಲ್ಲಿ ನೀರನ್ನು ಹಂಡೆಗೆ ಸುರಿದರಾಯಿತು. ಹಬೆ ಹೆಚ್ಚಾಗುತ್ತದೆ. ಕ್ರಮೇಣ ನಿಧಾನವಾಗುತ್ತದೆ. ಫಿನ್ನಿಶ್ ಜನ ಎಷ್ಟು ಕಡಿಮೆ ಹಬೆಯಿಂದ ಸಾನ ಆರಂಭಿಸುತ್ತಾರೋ ಪರದೇಶೀಯರು ಅಷ್ಟಕ್ಕೇ ಹೊರ ಓಡಿಹೋಗುತ್ತಾರೆ, ತಡೆಯಲಾರದೆ. ಗೋಡೆಯ ಮೇಲೊಂದು ಬಿಸಿಯನ್ನು ತೋರಿಸುವ ಗಡಿಯಾರ. ಸುಮಾರು ೧೦೦ ಡಿಗ್ರಿ ಬಿಸಿ ದಾಟಿಬಿಡುತ್ತದೆ ಒಮ್ಮೊಮ್ಮೆ. ಆದರೆ ಅದು ನಿಜವಾದ ೧೦೦ ಡಿಗ್ರಿಗೆ ಸಮನಲ್ಲ--ಒಂದು ಅಥವ ಒಂದೂವರೆ ಡಿಗ್ರಿ ಕಡಿಮೆ ಇರುತ್ತದೆ. ಮತ್ತು ಹಬೆ ತಡೆಯಲು ಬಿರ್ಚಿ ಸೊಪ್ಪನ್ನು ಮೈಗೆಲ್ಲ ಹೊಡೆದುಕೊಳ್ಳಬೇಕು, ನಮ್ಮ ಭದ್ರಕಾಳಿ ಮೈಮೇಲೆ ಬಂದವರಂತೆ. ಮತ್ತು ಬಿಯರ್ ಕುಡಿದಷ್ಟೂ ದೇಹದ ಒಳಹೊರಗಿನ ಟೆಂಪರೇಚರ್ ಮಧ್ಯೆ ಒಂದು ಸಾವಯವ ಸಂಬಂಧ ಏರ್ಪಟ್ಟುಬಿಡುತ್ತದೆ.
ಸಾನದ ಬಿಸಿ ತಡೆಯಲಾರದೆ ಹೊರಗೆ ಬಂದೆವು. "ಕೊಳ ಎಲ್ಲಿ?" ಎಂದು ಕೇಳಿದೆ. ವಿಪರೀತ ಬಿಸಿ ತಪ್ಪಿಸಿಕೊಂಡು ವಿಪರೀತ ತಣ್ಣಗಿನ (ಅಥವ ಫಿನ್ನಿಶ್ ಭಾಷೆಯಲ್ಲಿ 'ತಣ್ಣಗಿನ') ನೀರಿನಲ್ಲಿ ಮುಳುಗಬೇಕು. ಆಗ ಬಿಸಿಲಿನ ಮಹತ್ವ ಅರ್ಥವಾಗುತ್ತದೆ. ಗಡಗಡ ನಡುಗುತ್ತ ಮತ್ತೆ ಸಾನದ ಮನೆಗೆ ಓಡಬೇಕು--ದುಂಡಗೆ. ಇದೊಂದು ಕೋಳಿ-ಮೊಟ್ಟೆ ಪ್ರಶ್ನೆ. ಚಳಿಯಿಂದ ಬಿಸಿಗೋ ಅಥವ ಬಿಸಿಯಿಂದ ಚಳಿಗೋ ಎಂದು. "ಬೇರೆಯದು ಎಂದೆಂದಿಗೂ ಆಕರ್ಷಕವೇ" ಎಂದು ಬೇರೆ ಬೇರೆಯವರು ತಿಮಿರಾನದಂದಿಂದ ತುದಿಯಾನಂದದವರೆಗೆ ಹೇಳಿರುವ ಅಮೃತ ವಾಕ್ಯದಂತೆ ಇದು. 'ನ'ಒತ್ತು ತೆಗೆದ ಈ ಕ್ರಿಯೆಯಲ್ಲಿ ಪಾಲ್ಗೊಂಡಿದ್ದಾಗಲೇ ಅಂತಹ ಮಹಾತ್ಮರಿಗೆ ಈ ಜಗದ ಈ ನಿಗೂಢ ಹೊಳೆದಿರಬಹುದು. ಅಂತಯವರ ಹೊಟ್ಟೆ ತಣ್ಣಗೆ ಮಿಕ್ಕೆಲ್ಲ ಅಂಗಗಳು ಬೆಚ್ಚಗಿರಲಿ ಪ್ರಭುವೆ!
ಒಂದಿಪ್ಪತ್ತಡಿ ಅಗಲ ಆರಡಿ ಆಳದ ಒಂದು ಕೊಳ ತೋಡಿಟ್ಟಿದ್ದ ಸಾಮಿ. ಅದನ್ನೇನೂ ತಣ್ಣಗೆ ಮಾಡುವ ಅವಶ್ಯಕತೆ ಇಲ್ಲವಲ್ಲ. ಅಷ್ಟರಲ್ಲಾಗಲೇ ಬೆಳಗಿನ ಜಾವ ಒಂದೂವರೆ. ಸೂರ್ಯ ಮುಳುಗುವ ಹೊತ್ತು!! ಹೊರಗಿದ್ದಂತಹ ಬೆಳಕು ಮಾತ್ರ ನಾನು ನಿಜ ಜೀವನದಲ್ಲೇಲ್ಲೂ ನೋಡಿರಲಿಲ್ಲ. ಆ ಬೆಳಕಿನಿಂದ ನಮ್ಮ ಭಾಷೆಯ ಇತಿಮಿತಿ ಅರ್ಥವಾದಂತಾಯ್ತು. ಅದನ್ನು ವರ್ಣಿಸುವುದು ಹೇಗೆ? "ಸ್ಲೀಪಿ ಹ್ಯಾಲೋಸ್" ಸಿನೆಮದಲ್ಲಿರುವಂತಹ ಬೆಳಕದು. ಅದರಲ್ಲಿ ಒಂದೇ ಒಂದು ಪ್ರಕರ ಸೂರ್ಯನಬೆಳಕಿನ ದೃಶ್ಯವಿಲ್ಲ!
ಸಾಮಿಯ ಹೆಂಡತಿ ಮಿನ್ನ ಯೂನಿವರ್ಸಿಟಿ ಪ್ರೊಫೆಸರ್. ಆತನಿಗಿಂತ ಒಂದೈದಾರು ಪಟ್ಟು ಹೆಚ್ಚು ಸಂಬಳ. ಮದುವೆಯಾಗಿದ್ದಾರೋ ಇಲ್ಲ ಸುಮ್ಮನೆ "ಲಿವಿಂಗ್ ಟುಗೆದರ್" ವ್ಯವಸ್ಥೆಯೊ ಗೊತ್ತಿಲ್ಲ. ಆದರೆ ಎಂಟತ್ತು ವರ್ಷದಿಂದ ಸುಖವಾಗಿ ಬದುಕಿದ್ದಾರೆ. "ಇನ್ನತ್ತು ವರ್ಷಕ್ಕೆ ಆಕೆ ಜೊತೆಯಲ್ಲಿರುತ್ತಾಳೋ ಇಲ್ಲವೋ" ಎಂದಿದ್ದ ಮಾತಿನ ಮಧ್ಯೆ ಸಾಮಿ. "ಹಾಗೆ ಹೇಳಲು ಕಾರಣವೇನಾದರೂ ಇದೆಯ?" "ನಿರ್ದಿಷ್ಟ ಕಾರಣವೇನೂ ಇಲ್ಲ" ಎಂದು ಸುಮ್ಮನಾದ. ಆ ದೇಶದಲ್ಲಿ ಜೊತೆಯಲ್ಲಿ ಇರುವವರೆಗು ಮಾತ್ರ ಸಂಬಂಧಗಳು. ಹೆನ್ರಿ ಗ್ರಹನ್ ಎಂಬ ಸ್ವೀಡನ್ನಿನಲ್ಲಿ ಹುಟ್ಟಿ ಫಿನ್ಲೆಂಡಿನಲ್ಲಿದ್ದ ಕಲಾವಿದ ಗೆಳೆಯನೊಬ್ಬ ಒಮ್ಮೆ ಹೇಳಿದ್ದ, "ಏನು ಮಾಡುವುದು, ಒಬ್ಬಳೂ ಸರಿಯಾಗಿ ಜೊತೆಯಲ್ಲಿರುವುದಿಲ್ಲ. ನಾನು ಭಾರತೀಯಳನ್ನೇ ಮದುವೆಯಾಗುವುದು. ಭಾರತೀಯ ಹುಡುಗಿ ಎಂದಿಗೂ ತನ್ನ ಗಂಡನನ್ನು ತೊರೆಯುವುದಿಲ್ಲ", ಎಂದು ತಮಾಷೆ ಮಾಡಿದ್ದ. "ಹೌದು, ಈ ಜನ್ಮಕ್ಕೆ ಭಾರತೀಯಳು ಹಾಗೂ ನೀನು ಒಟ್ಟಿಗೆ ಅಂಟಿಕೊಳ್ಳುತ್ತೇವೆಂದು ನಿಮ್ಮ ಮದುವೆಯಲ್ಲಿ ಅರ್ಥವಾಗದ ಸಂಸ್ಕೃತದಲ್ಲಿ ಒಪ್ಪಿಕೊಂಡರೆ ಮುಂದಿನ ಇನ್ನಾರು ಜನ್ಮದಲ್ಲಿ ಅದೇ ಪಾರ್ಟ್ನರ್ ಪರಸ್ಪರ ನಿಮ್ಮಿಬ್ಬರಿಗೂ ಬಿಟ್ಟಿ", ಎಂದೆ. "ವಾಟ್ ಅ ಡಿಸ್ಕೌಂಟ್" ಎಂದು ಉದ್ಘರಿಸಿದ. ಸಾಮಿಯ ಹೆಂಡತಿಯ ತಂಗಿಯೂ ರಜಕ್ಕೆ ಬಂದಿದ್ದಳು. "ಆಕೆಗೆ ನಲ್ಕಾರು ಮಕ್ಕಳು" ಎಂದು ಪರಿಚಯಿಸಿದ್ದ ಸಾಮಿ. "ನನಗೆ ಮಕ್ಕಳೇ ಇಲ್ಲ" ಎಂದಿದ್ದಳಾಕೆ, ಮಾರನೇ ದಿನ ವಾಪಸ್ ನನ್ನನ್ನು ಸಮೀಪದ (೧೨೦ ಕಿಲೋಮೀಟರ್ ಸ್ಪೀಡಿನಲ್ಲಿ ಕೇವಲ ಒಂದು ಗಂಟೆ ಡ್ರೈವ್ ನಂತರ ಸಿಗುತ್ತಿದ್ದ ಸಮೀಪದ ಸಾವೊನ್‌ಲಿನ ಎಂಬ ರೈಲು ನಿಲ್ದಾಣಕ್ಕೆ ಡ್ರಾಪ್ ಮಾಡುತ್ತಿದ್ದಾಗ). ಅಂದರೆ ಆಕೆಯ ಈಗಿನ ಗಂಡನ ಆಗಿನ ಹೆಂಡತಿಯರಿಂದ ಇರಬಹುದಾದ ಮಕ್ಕಳನ್ನು ಸಾಕಿಕೊಂಡಿದ್ದಾಳೆಂದು ಅರ್ಥಮಾಡಿಕೊಂಡೆ).
ಸುರೇಖಳ ಫೋಟೋ ತೋರಿಸಿ, "ನನ್ನ ಹೆಂಡತಿ" ಎಂದೆ. "ಅಂದರೆ ನಿನ್ನ ಪಾಟ್ನರ್ ಅಲ್ಲವೆ?" ಎಂದಳು. "ಅಲ್ಲ ನನ್ನ ಹೆಂಡತಿ, ಮಾಜಿ ಪ್ರೇಯಸಿ" ಎಂದು ತಮಾಷೆ ಮಾಡಿದೆ. ಮದುವೆ ಎಂಬ ಸಂಸ್ಥೆ ಮುರಿದುಬಿದ್ದಿರುವ ಸಮಾಜ 'ಫಿನ್ನಿಶ್'ನದಾಗಿದೆ. ಇಲ್ಲಿನ ಜನರು ಏಕಾಂಗಿಗಳೋ, ಏಕಾಂಗಿಗಳಾಗಿ ಬದುಕುವುದನ್ನು ಕಾಡು ಕಲಿಸಿದೆಯೋ ಅಥವ ಏಕಾಂಗಿಗಳಾಗಿರುವುದರಿಂದಲೇ ಅದೊಂದು ಚಟವಾಗಿಬಿಟ್ಟಿದೆಯೋ ಒಂದೂ ತಿಳಿಯುವುದಿಲ್ಲ. ಏಕೆಂದರೆ ಮುಂಚಿನ ವಾಕ್ಯದ ಮೂರೂ ಕ್ರಿಯೆಗಳು ಅವರ ಮಟ್ಟಿಗೆ ಐತಿಹಾಸಿಕವಾಗಿ ಸತ್ಯವಾದ ವಿಚಾರ. ಕೇವಲ ನೂರು ವರ್ಷದ ಹಿಂದೆ ಕಾಡುಗಳಲ್ಲಿ ರೈತರಾಗಿ, ಭೇಟಿಗಾರರಾಗಿದ್ದವರಿವರು. ಸರ್ಕಾರವು ಹೆಣ್ಮಕ್ಕಳಿಗೆ ಓದಲು ವಿದ್ಯಾರ್ಥಿವೇತನ ನೀಡಿದ ಕೂಡಲೆ ಕಾಡಿನ ಹೆಣ್ಮಕ್ಕಳೆಲ್ಲ ಹೊಸಿಲು ದಾಟಿದ ಹೆಣ್ಣುಗಳಾಗಿ ಹೋದರು ನಗರಕ್ಕೆ. ಜನರೇ ಇಲ್ಲದ ನಾಡಾದ ಫಿನ್ಲೆಂಡಿನ ಕಾಡುಗಳಲ್ಲಿ ಇದ್ದ ಹೆಣ್ಮಕ್ಕಳೂ ಇಲ್ಲದಾದಾಗ ಶೇಕಡ ಅರವತ್ತು ಮಂದಿ ಮಾಯವಾದಂತಾಯ್ತು (ಅಲ್ಲಿ ಹೆಂಗಸರದ್ದೆ ಇಂದಿಗೂ ಕಾರುಬಾರು ಮತ್ತು ಕಾರು ಮತ್ತು ಬಾರು ಹೆಚ್ಚು). ಇಡಿಯ ಹಳ್ಳಿಯ ರೈತಾಪಿ ಜನಜೀವನ ಕುಸಿದು ಬಿದ್ದದ್ದು ಹೀಗೆ. ಅದಕ್ಕೇ ಕನ್ನಡದಲ್ಲಿ ಹೇಳುವುದು, "ಹೆಂಗಸು ಹೊಸಿಲು ದಾಟಬಾರದೆಂದು". ಇಂತಹ ಕ್ರಿಯೆಯ ಫಲ ಅದೆಷ್ಟು ಸಮೃದ್ಧ!!
ಈ ಪ್ರವಾಸ ಕಥನದ ಇತರ ಭಾಗಗಳು
ಜನ ಮಾತ್ರ ಒಬ್ಬರಿಗೊಬ್ಬರು ಬೆರೆಯುವ ಸ್ವಭಾವದವರಲ್ಲ. ಜಗಳವಾಡುತ್ತಾರೆಂದೇನಲ್ಲ. ಆದರೆ ಮದುವೆಯಾಗದವರು, ಒಬ್ಬರನ್ನೊಬ್ಬರು ತೊರೆದವರು ಎರಡೆರೆಡು ಮನೆಗಳನ್ನು ಹೊಂದಿರುತ್ತಾರಿಲ್ಲಿ. ವಿಚ್ಛೇದನ ಪಡೆದ ನಿರುದ್ಯೋಗಿಯೊಬ್ಬ ಒಂಟಿಯಾಗಿ ಬದುಕುತ್ತಿದ್ದ. ಆತನ ಮಾಜಿ ಹೆಂಡತಿ (ಪಾಟ್ನರ್!) ಅದೇ ನಗರದಲ್ಲಿ ಬದುಕಿದ್ದಳು. ವಯಸ್ಸಿಗೆ ಬಂದ ಇಬ್ಬರು ಮಕ್ಕಳೂ ಇದ್ದರು ಆತನಿಗೆ. ನೆರೆಹೊರೆಯವರಿದ್ದರು. ನಿರುದ್ಯೋಗಿಯಾದುದರಿಂದ, ಮತ್ತು ಫಿನ್ನಿಶ್ ಸಮಾಜ 'ವೆಲ್‌ಫೇರ್ ಸಮಾಜವಾದ್ದರಿಂದ' ಆತನಿಗೆ ತಿಂಗಳಿಗೆ ಪಿಂಚಣಿ ರೂಪದ ಸಂಬಳ ಬರುತ್ತಿತ್ತು. ಮತ್ತು ಅದು ಬೆಂಗಳೂರು ಯೂನಿವರ್ಸಿಟಿಯ ಸೀನಿಯರ್ ಗ್ರೇಡ್ ಉಪಾಧ್ಯಾಯನಿಗಿಂತಲೂ ಹೆಚ್ಚಿತ್ತು.
ಅನೇಕ ದಿನಗಳ ಕಾಲ ಆತ ಯಾರಿಗೂ ಕಾಣಲಿಲ್ಲ. ಯಾರೂ ಕೇರ್ ಮಾಡಲಿಲ್ಲ. ತಿಂಗಳುಗಟ್ಟಲೆ ಆತ ಪತ್ರಗಳಿಗೆ ಉತ್ತರಿಸಲಿಲ್ಲ. ಯಾರೂ ಕ್ಯಾರೆ ಅನ್ನಲಿಲ್ಲ. ದೂರವಾಣಿ ಕರೆಗಳನ್ನು ಆತ ಸ್ವೀಕರಿಸುತ್ತಿರಲಿಲ್ಲ. ಯಾರೂ ಕ್ಯಾರೆ ತುಮಾರೆ ಅನ್ನಲಿಲ್ಲ--ಅದು ಫಿನ್ನಿಶ್ ಸಂಸ್ಕೃತಿ. ಪ್ರತಿ ತಿಂಗಳು ಬಿಟ್ಟಿ ಸಂಬಳ ಆತನ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿತ್ತು. ಹಾಗೆ ಬಿಟ್ಟಿ ಉಣ್ಣುವವರು, ಉಂಡ ನಂತರ ಅದನ್ನು ಕರಗಿಸಲು ಹೆಲ್ಸಿಂಕಿಯ ಚರ್ಚ್‌ಗಳಲ್ಲಿ ನೀಡಲಾಗುತ್ತಿದ್ದ ಬಿಟ್ಟಿ ಬ್ರೆಡ್, ಬಿಸ್ಕಟ್‌ಗಳನ್ನು ಪಡೆಯಲು ಕ್ಯೂ ನಿಲ್ಲುತ್ತಿದ್ದರು. ಅಂತಹ ಸಾಲಿನಲ್ಲಿ ನಿಲ್ಲುವುದೆಂದರೆ ತಾನು 'ಪಾಪರ್' ಎಂದು ಊರಿಗೇ ಸಾರಿದಂತೆ. ನಿತ್ಯಪಾಪರ್‌ನಂತೆ ಅಲ್ಲಿ ಕಾಣಸಿಗುತ್ತಿದ್ದ ಈ ಮಿಸ್ಟರ್‌ನನ್ನು ಜನ ನೋಡಿ ವರ್ಷಗಳೇ ಉರುಳಿದ್ದವು. "ಮಾನವಂತನಾಗಿ ಬದುಕುತ್ತಿರಬೇಕಾತ" ಎಂದುಕೊಂಡರು ಸಾಲಿನಲ್ಲಿ ಆತನ ಹಿಂದು ಮುಂದು ನಿಲ್ಲುತ್ತಿದ್ದವರು.
ಐದಾರು ವರ್ಷಕ್ಕೊಮ್ಮೆ ಪ್ರತಿಯೊಬ್ಬರೂ ತಾವಿರುವ ಮನೆಯ 'ಇರುವಿಕೆಯನ್ನು' ಸರ್ಕಾರದಲ್ಲಿ ನವೀಕರಿಸಬೇಕು. ಮಿಸ್ಟರ್ ಆತ ಅದನ್ನೂ ಮಾಡಲಿಲ್ಲ. ಅಧಿಕಾರಿಗಳು ಬಂದು ಮನೆ ಬಾಗಿಲು ತಟ್ಟಿದರು. ಮತ್ತೆ ಮತ್ತೆ ತಟ್ಟಿದರು ಮುಂದೊಂದಷ್ಟು ದಿನ. ಕೊನೆಗೊಂದು ದಿನ ಬಾಗಿಲನ್ನು ಮುರಿದರು, ಏಕೆಂದರೆ ಬೀಗ ಮುರಿಯಲು ಅದನ್ನು ಹಾಕಿರಲೇ ಇಲ್ಲ. ಒಳಗೆ ಅಂಚೆ ಕಾಗದಗಳ ಒಂದು ಗೋಡೆಯೇ ಇತ್ತು. ಆರು ವರ್ಷದ ಟಪಾಲಿನ ಗೋಡೆಯದು. ಒಳಗೆ, ಹಾಸಿಗೆಯ ಮೇಲೆ ಒಂದು ಮಮ್ಮಿ. ಇಬ್ಬರು ಮಕ್ಕಳ ತಂದೆಯ ಮಮ್ಮಿ ಮಲಗಿತ್ತು. ಹಾಸಿಗೆಯಲ್ಲೇ ಆಗಿದ್ದ ಹಾರ್ಟ್ ಅಟ್ಯಾಕ್‌ಗೇ ಆರು ವರ್ಷವಾಗಿತ್ತು. ಎಕ್ಸಾಸ್ಟ್ ಪೈಪ್‌ನ ದೆಸೆಯಿಂದಾಗಿ ಆತ ಬದುಕಿದ್ದಾಗ ಆತನೊಂದಿಗಿದ್ದ ದೇಹದ 'ವಾಸನೆ'ಯು, ಆತ ಅದನ್ನು ಬಿಟ್ಟು ಹೋದ ನಂತರ ಆತನ ಹಿಂದೆಯೇ ಹೋಗಲು ಹೊರ ಬಂದಾಗ, ಪೈಪಿನ ಓಳಕ್ಕೆ ಸೇರಿಕೊಂಡಿತ್ತು. ಆದ್ದರಿಂದ ಹೆಣದ ವಾಸನೆ ಸವಿಯುವ ಭಾಗ್ಯದಿಂದ ಅಕ್ಕಪಕ್ಕದವರು ವಂಚಿತರಾಗಿದ್ದಾರೆ.
ಫಿನ್ಲೆಂಡಿನಲ್ಲಿ ಪ್ರಾಣ ಮಿಂಚಿನಂತಾದರೆ, ದೇಹ ಗುಡುಗಿನಂತೆ. ಪ್ರಾಣ ಹೋದ ಐದಾರು ತಿಂಗಳ ನಂತರ ದೇಹ ಸೇರುವುದು ಒಂದು ಸಹಜ ಕ್ರಿಯೆ. ಅಷ್ಟು ಪರಸ್ಪರ ಅಪರಿಚಿತರು ಜನ. ಆದರೆ ಈ ಐದಾರು ವರ್ಷ ದೇಹವನ್ನು ನೋಡದಿರುವುದನ್ನು ಅವರುಗಳು ಅಸಹಜವೆಂದು ಭಾವಿಸಿವುದಿಲ್ಲ. ಡಬ್ಲುಡಬ್ಲುಡಬ್ಲು.ಹೆಲ್ಮೆಟ್.ಪಿ಼ ಎಂಬ ಭೌತಿಕವಾದ ಹಾಗೂ 'ರೇಖೆಯ ಮೇಲಿರುವ' (ಆನ್‌ಲೈನ್) ಲೈಬ್ರರಿಯನ್ನೊಮ್ಮೆ ವೀಕ್ಷಿಸಿ ನೋಡಿ. ಇಂತಹ 'ಅಸಹಜ' ಘಟನೆಗಳಲ್ಲಿ 'ಅ'ವನ್ನು ತೆಗೆದುಹಾಕಿರುವ ಅನೇಕ ವಿಷಯಗಳು ತಿಳಿದುಬರುತ್ತದೆ. ಸತ್ತವರನ್ನೂ ಬದುಕಿರುವವರಂತೆ ಮನೆಯಲ್ಲಿ ಇರಲು ಬಿಡುವ ಫಿನ್ನಿಶ್ ಸಂಸ್ಕೃತಿಗೆ ಒಂದು ಕಾರಣ ಹುಡುಕಿದ್ದೇನೆ. ಕೇವಲ ಎರಡು ಮೂರು ಗಂಟೆಗಳ ಪ್ರಯಾಣ ಮಾಡಿದರೆ ಸಾಕು. ಅರ್ಧ ಶತಮಾನದಿಂದಲೂ ಜೀವ ಹಾಗೂ ಅದು ಅಡಗಿದ್ದ ದೇಹವೊಂದನ್ನು ಪರಸ್ಪರ ಬೇರ್ಪಡಿಸಿರುವ ಸಾಕ್ಷಿಯೊಂದು ದೊರಕುತ್ತದೆ ಮಾಸ್ಕೊ ನಗರದಲ್ಲಿ. ರಷ್ಯದ ಅದ್ಯಾವದೋ ಋತುವಿನ ರಾಜಧಾನಿಯಾದ ಈ ನಗರದಲ್ಲಿ ಆ ಜೀವ ಈ ದೇಹ ಬಿಟ್ಟು ಸುಮಾರು ಐದಾರು ದಶಕಗಳಾಗಿವೆ. ದೇಹವನ್ನು ಮಮ್ಮಿಫೈ ಮಾಡಿ, ಆತನನ್ನು 'ಫಾದರ್' (ದೇಶಕ್ಕೇ ತಂದೆ) ಎಂದು ಆರಾಧಿಸುವವರಿದ್ದಾರೆ. ಲೆನಿನನ ದೇಹದ ಕಳೇಬರಹ ಅಲ್ಲಿ ಇನ್ನೂ ಜೀವಂತವಿದೆ! ಆದ್ದರಿಂದಲೇ ನಾಲ್ಕಾರು ವರ್ಷಗಳ 'ಮಮ್ಮಿ'ಗಳನ್ನು ಫಿನ್ನಿಶ್ ಜನ ಮಣ್ಣುಮಾಡುವಾಗ ಲೆನಿನ್ನನ ರೆಕಾರ್ಡ್ ಮುರಿಯಲಾಗದಿರುವುದಕ್ಕೆ ಬೇಸರ ಪಟ್ಟು ತಮ್ಮ ಮಮ್ಮಿಯ ದಾಖಲೆ ಕಮ್ಮಿ ಎಂದೇ ಭಾವಿಸುವುದು. ನೂರಾರು ವರ್ಷ ಕಾಲ ರಷ್ಯನ್ನರಿಂದ ಆಳಿಸಿಕೊಂಡಿದ್ದರಿಂದ ಫಿನ್ನಿಶ್ ಜನರಿಗೆ ಇಂತಹ ಬೇಸರ ಹೆಚ್ಚಿರಬಹುದು. ಫಿನ್ಲೆಂಡ್ ಯಾರನ್ನಾದರೂ ಸ್ವಾಗತಿಸುತ್ತದೆ, ರಷ್ಯನ್ನರನ್ನು ಹೊರತುಪಡಿಸಿ. ರಷ್ಯದ ಆಕರ್ಷಕ ಯುವಕ ಯುವತಿಯರು ತಾವೂ ಫಿನ್ಲೆಂಡಿನೊಳಕ್ಕೆ ಬರುವುದರ ಜೊತೆಗೆ ಡ್ರಗ್ಸ್, ಮಾಫಿಯ ಹಾಗೂ ಏಯ್ಡ್ಸ್‌ಗಳನ್ನು ಬಿಟ್ಟಿಯಾಗಿ ತರುವುದೇ ಇವರಿಗೆ ತಲೆನೋವಾಗಿದೆ. ಝಾರ್ ವಂಶಸ್ಥ ರಷ್ಯನ್ನರು ಬೇಸಿಗೆಯಲ್ಲಿ ಮುಂಜಾನೆ ನಾಲ್ಕು ಗಂಟೆಗೇ ಕೇಂದ್ರ ರೈಲ್ವೇ ಸ್ಟೇಷನ್ನಿನ ಮುಂದೆ ತಲೆಬಗ್ಗಿಸಿಕೊಂಡು ಪಿಯಾನೇ ಬಾರಿಸುತ್ತಿರುತ್ತಾರೆ. ರಷ್ಯನ್ನರು ಅಂತಹವರನ್ನು ಕಂಡು ಫಿನ್ಲೆಂಡಿನಲ್ಲಿ ಅವರ ಸ್ಥಿತಿಯ ಬಗ್ಗೆ ಬೇರೇನೂ ಮಾಡಲಾಗದಿರುವುದರಿಂದ ಮಮ್ಮಲ ಮರುಗುತ್ತಾರೆ, ತಲೆ ಬಾಗಿ ವಂದಿಸುತ್ತಾರೆ, ಅವರು ಕುಡಿದ ಅಮಲಿನಲ್ಲಿ ಉಗಿದರೆ, ಹಾಗೆ ಉಗಿದರಲ್ಲ ಎಂಬ ಸಂತುಷ್ಟ ಭಾವದಿಂದ ಎಳ್ಳಷ್ಟೂ ಬೇಸರ ಮಾಡಿಕೊಳ್ಳದೆ ಮುಖವೊರೆಸಿಕೊಳ್ಳುತ್ತಾರೆ. ಏಕೆಂದರೆ "ಎಳ್ಳಷ್ಟು' ಎಂಬ ಕನ್ನಡ ಪದ ಗೊತ್ತಿದ್ದರಲ್ಲವೆ ಅವರು ಎಳ್ಳಷ್ಟು ಬೇಸರ ಮಾಡಿಕೊಳ್ಳುವುದು!?
ಈ ಪ್ರವಾಸ ಕಥನದ ಇತರ ಭಾಗಗಳು
ತೆಗೆದುಕೊಂಡು ಹೋಗಿದ್ದ ಐದಾರು ಎಂಟಿಆರ್ ಪ್ಯಾಕೆಟ್‌ಗಳೆಲ್ಲ ಮೂರ್ನಾಲ್ಕು ದಿನಗಳಲ್ಲಿ ಮುಗಿದುಹೋಗಿತ್ತು. ಒಬ್ಬರೇ ಇದ್ದಾಗ ಬೇಜಾರು ಹಾಗೂ ಸೋಂಬೇರಿತನ ಕಳೆಯಲು ನಾವು ಒಂದು ಕೆಲಸ ಮಾಡುತ್ತೇವೆ. ಅದೇನೆಂದರೆ ತಿಂದ ಒಂದರ್ಧ ಗಂಟೆಯಲ್ಲಿ ಹಸಿವು ಮಾಡಿಕೊಳ್ಳುತ್ತೇವೆ. ಮತ್ತೆ ತಿನ್ನುತ್ತೇವೆ. ಹತ್ತು ದಿನವಾದರೂ ಬಂದೀತೆಂದು ಭಾವಿಸಿಕೊಂಡಿದ್ದ ಎಂಟಿಆರ್, ಮೂರು ದಿನಗಳಲ್ಲಿ 'ಎಂಪ್ಟಿ'ಯಾಗಿತ್ತು. ಅದರ ರುಚಿ ಹಾಗಿತ್ತೆಂದೇನಲ್ಲ. ನಮ್ಮ ಭಾರತೀಯ ಹೊಟ್ಟೆಯ ಹಸಿವು ಫಾರಿನ್ ಲೊಕೇಶನ್ನಿನಲ್ಲಿ ಹಾಗಿತ್ತು.
ಒಂದೇ ಅಡುಗೆ ಎರಡು ದೇಶಗಳಲ್ಲಿ ಎರಡು ರುಚಿ ಪಡೆವ 'ರಸ'ಸ್ವಾದ ಆಶ್ಚರ್ಯಕರ! ಭಾರತದಲ್ಲಿ ಉಪ್ಪಿಟ್ಟಿನಂತೆ ಅನ್‌ವಾಂಟೆಡ್ ಆದ ಎಂಟಿಆರ್ ಅದೇ ಫಿನ್ಲೆಂಡಿನಲ್ಲಿ ಮೃಷ್ಟಾನ್ನ. ಕಳೆದ ವಾಕ್ಯದ ಕೊನೆಗೆ ಬರುವ ಫುಲ್‌ಸ್ಟಾಪ್‌ನ ಮುಂಚಿನ ಪದದ ಅರ್ಥ ನನಗೆ ಗೊತ್ತಿಲ್ಲದಿದ್ದರೂ ಎಂಟಿಆರ್ ಫಿನ್ಲೆಂಡಿನಲ್ಲಿ ಅದಾಗಿತ್ತು. 
ತಲಾ ನಮ್ಮ ತರ್ಟಿ-ಫಾರ್ಟಿ ಸೈಟಿನ ಅಳತೆಯ ಎರಡು ಸ್ಟುಡಿಯೊ. ಮಧ್ಯದಲ್ಲಿ ಕಾಮನ್ ಅಡುಗೆಮನೆ. ಹೆಲ್ಸಿಂಕಿಯ ವಿಯಟ್ನಾಮಿ ಅಂಗಡಿಯಲ್ಲಿ ಭಾರತೀಯ ದಿನಸಿ ಹಾಗೂ ಆಫ್ರಿಕನ್ ಅಂಗಡಿಯಲ್ಲಿ ಮಸಾಲೆಗಳನ್ನು ಕೊಂಡಿದ್ದೆ. ನಿಜವಾದ ಮಲ್ಟಿ ಕಲ್ಚರಲ್ ಎಂದರೆ ಇದೇ ಅಲ್ಲವೆ. ಅಡುಗೆ ಮಾಡಲು ಪ್ರಾರಂಭಿಸಿದೆ. ಆರಾರು ವರ್ಷಕಾಲ ನಮ್ಮ ಡೆಡ್‌ಬಾಡಿ ಡೆಡ್ಲಿಯಾಗಿದ್ದರೂ "ಕ್ಯಾರೆತುಮಾರೆ" ಎನ್ನದವರು ಫಿನ್ನಿಶ್ ಮಂದಿ ಎಂದು ಈಗಾಗಲೇ ನಿಮಗೆ ತಿಳಿಸಿರುವೆ. ಹಾಗಂತ ನನಗೆ ನಾನೇ ಹೇಳಿಕೊಂಡೆ ಕೂಡ-ಅಡುಗೆ ಮಾಡುವ ಮೊದಲು! ಏಕೆಂದರೆ ಅಡುಗೆ ಮನೆಯಲ್ಲಿ ಮತ್ತು/ಅಥವ ಸ್ಟುಡಿಯೊದಲ್ಲಿ ಸಿಗರೇಟು ಸೇದುವಂತಿಲ್ಲ. ಅದರ ಹೊಗೆ (ಯಾವ ಹೊಗೆಯಾದರೂ ಸರಿ) ಸೀದ ಹೊಗೆ-ಸೆನ್ಸರ್‌ಅನ್ನು ತಲುಪಿ ಅದು ಸೀದ ಅಗ್ನಿಶಾಮಕ ದಳಕ್ಕೆ ಬಿಸಿ ಮುಟ್ಟಿಸಿ ಅವರು ಸೀದ ನಮ್ಮ ಸ್ಟುಡಿಯೋಕ್ಕೆ ಬರುವುದು ವಾಡಿಕೆಯಾಗಿತ್ತು. ಏಕೆಂದರೆ ಪರದೇಶಿ ಕಲಾವಿದರು ರೂಲ್ಸ್ ಮುರಿಯುವಲ್ಲಿ ನಿಷ್ಣಾತರು. ದಂಡ ಭಾರತೀಯ ಕರೆನ್ಸಿಯಲ್ಲಿ ಕೇವಲ ಎಂಟು ಸಾವಿರ ರೂಪಾಯಿ. ಆದ್ದರಿಂದ ಹುಷಾರಾಗಿ ಅಡುಗೆ ಮಾಡತೊಡಗಿದೆ.
ಎಣ್ಣೆ ಹಾಕಿ, ಉರಿ ಜೋರು ಮಾಡಿ, ಒಂದಿಡೀ ಒಂದು ಹಿಡಿ ಸಾಸಿವೆಯನ್ನು ಬಾಣಲೆಯ ಮೇಲೆ ಎಸೆದೆ ಬ್ರೂಸ್ಲಿಯಂತೆ, ಮೂರಡಿ ದೂರದಿಂದ. ಸ್ವಲ್ಪ ಜೀರಿಗೆ ಹಾಕಿ, ಈರುಳ್ಳಿ ಚೂರು ಚೂರು ಮಾಡುತ್ತಿದ್ದೆ, ಕಣ್ಮುಚ್ಚಿಕೊಂಡು. ಬಾಣಲೆಯ ಉರಿ ಹಾಗೂ ಈರುಳ್ಳಿಯನ್ನು ಕಟ್ ಮಾಡಲು ಇರುವ ಕಣ್ತೆರೆಸುವ ಉಪಾಯವೆಂದರೆ ಕಣ್ಣು ಮುಚ್ಚಿಕೊಂಡುಬಿಡುವುದು. ಹೊರಗೆ ಯಾರದೋ ಹೆಜ್ಜೆಯ ಸಪ್ಪಳ. ಮನುಷ್ಯನೊಬ್ಬನ ಹೆಜ್ಜೆಯ ಸದ್ದು ಆ ಮುನ್ನೂರೂ ಚಿಲ್ಲರೆ ಸ್ಟುಡಿಯೋಗಳಿರುವ ಕಟ್ಟಡದಲ್ಲಿ ಒಂದು 'ಸುದ್ದಿ' ಎಂದರೆ ನಂಬುತ್ತೀರ? ಅಂತಹುದರಲ್ಲಿ ಇಬ್ಬರು ಮನುಷ್ಯರ ಹೆಜ್ಜೆ ಕೇಳಿ ಇದು 'ಬ್ರೇಕಿಂಗ್ ನ್ಯೂಸ್' ಎಂದು ತಮಾಷೆಯಾಗಿ ನನಗೆ ನಾನೇ ಹೇಳಿಕೊಂಡೆ.
ಈ ಸುದ್ದಿಯನ್ನು ಇನ್ನೊಬ್ಬರಿಗೆ ಹೇಳಲು ಸಾಧ್ಯವಾದರೆ, ಹೀಗೆ ಹೇಳುವ ಸುದ್ದಿಯೇ ಒಂದು ಎಮರ್ಜೆನ್ಸಿ ನ್ಯೂಸ್ ಆಗಿಬಿಡಬಹುದು-ಎಂದೂ ನನಗೆ ನಾನೇ ಹೇಳಿಕೊಂಡೆ. ಯಾರೋ ಕ್ಷೀಣವಾಗಿ ಬಾಗಿಲು ತಟ್ಟಿದ ಸದ್ದು. ಹೆಲ್ಸಿಂಕಿಯ ಮುಖ್ಯ ರಸ್ತೆಯಲ್ಲಿ (ನಮ್ಮ ಎಂ.ಜಿ.ರೋಡಿನಂತಹದ್ದು) ಜೋರಾಗಿ ಹಾರನ್ ಬಾರಿಸುವ ಡ್ರೈವರ್ ಕಂಡರೆ ಆತನನ್ನು ರಷ್ಯನ್ ಅಥವ ಅನಾಗರೀಕ ಎಂದು ಕರೆಯುತ್ತಾರೆ ಜನ. ಅಂತಹ ಸೂಕ್ಷ್ಮವಂತರು ಫಿನ್ನಿಶ್ ಜನ. ಕಿವುಡರು ಹೇಗಪ್ಪಾ ಬದುಕುವುದು ಇಂತಹ ನಾಡಿನಲ್ಲಿ! ಹೋಗಿ ಬಾಗಿಲು ತೆಗೆದೆ.
ಹುಡುಗ ಆಗಲೇ ಮೊಬೈಲ್ ಚಾಲು ಮಾಡುತ್ತಿದ್ದ, ಬಾಯನ್ನು ಕರ್ಚೀಫಿನಲ್ಲಿ ಮುಚ್ಚಿಕೊಂಡೇ. ಹುಡುಗಿಯೂ ಬಾಯಿ ಮುಚ್ಚಿಕೊಂಡಿದ್ದಳು. ಕಣ್ಣೀರ ಧಾರೆ ಬೇರೆ. "ಮಿತಾಸ್ ಕೋಲೋ?" ಎಂದಳು. "ವಾಟ್" ಎಂದೆ. "ಬೆಂಕಿ ಹತ್ತಿದೆ ನಿನ್ನ ಕೋಣೆಗೆ" ಎಂದಳು. "ಒಹೋ, ಇಲ್ಲ, ಇಲ್ಲ. ಅಡುಗೆ ಮಾಡುತ್ತಿದ್ದೇನೆ. ಭಾರತೀಯ ಅಡುಗೆ" ಎಂದೆ. "ಎನೋ ಸೀದು ಹೋಗುತ್ತಿದೆ?!" ಎಂದಳು.
"ಸೀದು ಹೋಗುವುದನ್ನು ನಮ್ಮಲ್ಲಿ 'ಒಗ್ಗರಣೆ' ಎನ್ನುತ್ತೇವೆ. ಅಡುಗೆ ಪ್ರಾರಂಭವಾಗುವ ಮುಂಚಿನಿಂದಲೇ, ಮೂಗಿನಿಂದ ನಾವು ಅಡುಗೆಯನ್ನು ಆಸ್ವಾದಿಸಲು ತೊಡಗುವುದು ಭಾರತೀಯರ ವಿಧಾನ" ಎಂದೆ. ಆಕೆಗೆ ತಿಳಿಯಲಿಲ್ಲ, ಅಥವ ತಿಳಿದಿದ್ದರೂ ಅದು ನನ್ನ ಅಡುಗೆ ತಂತ್ರಗಾರಿಕೆಯ ಸ್ವಯಂಲೇವಡಿ ಎಂದು ಆಕೆಗೆ ತಿಳಿಯಲಿಲ್ಲ.
ಜೋಕ್ ಹೇಳಿದರೂ ಕಂಪ್ಯೂಟರ್ ಸಿಸ್ಟಂ ಆಫ್ ಮಾಡಿ ನಂತರ ನಗುವ ಜನರಲ್ಲವೆ ಫಿನ್ನಿಶ್. "ಅಂದರೆ ನೀನು ಸೇಫ್ ತಾನೇ?" ಎಂದಳು. ಖಂಡಿತ. ಆದರೆ ನನ್ನ ಅಡುಗೆಯನ್ನು ನಾನು ತಿಂದ ನಂತರ ಅದೇ ಮಾತನ್ನು ನನ್ನ ಬಗ್ಗೆಯೇ ನಾನು ಹೇಳಲಾರೆ. ಟೇಸ್ಟ್ ಮಾಡುವುದಾದರೆ ಭಾರತೀಯ ಊಟ ಬಡಿಸುವೆ" ಎಂದೆ ಪಕ್ಕದ ಸ್ಟುಡಿಯೋದ ಆ ಹುಡುಗ ಹುಡುಗಿಗೆ.
ಉತ್ತರ ಕರ್ನಾಟಕದ ಹಸಿಮೆಣಸಿನಕಾಯಿ ಒಣರೊಟ್ಟಿ ತಿಂದ ಉತ್ತರ ಕರ್ನಾಟಕದವರಲ್ಲದವರ ಎಕ್ಸ್‌ಪ್ರೆಶನ್ ಅವರ ಮುಖಗಳಲ್ಲಿತ್ತು.
ಅಡುಗೆ ಮಾಡಿದೆ. ನಮ್ಮದೇ ಸ್ಟುಡಿಯೋದ ಎರಡನೇ ಕೋಣೆಯಲ್ಲಿದ್ದ ಕೆನಡಾದ ಲಿಸ ಕ್ಲಾಪ್‌ಸ್ಟಾಕಳಿಗೆ ರುಚಿ ನೋಡಲು ನೀಡಿದೆ. ಕೊಟ್ಟದ್ದನ್ನು ನುಂಗಿ ನೀರು ಕುಡಿದಳು. ಭಾರತಕ್ಕೆ ಸಾಕಷ್ಟು ಸಾರಿ ಬಂದು ಹೋಗಿದ್ದಳಾಕೆ. "ವೆರಿ ಗುಡ್. ನೀನು ಒಳ್ಳೆಯ ಅಡುಗೆ ಮಾಡುತ್ತೀ" ಎಂದಳು. "ನನಗೆ ಭಾರತೀಯ ಅಡುಗೆ ಮಾಡಲು ಬರದು" ಎಂದು ಸುಳ್ಳು ಹೇಳಿದ್ದೆ. ನಿಜವೇನೆಂದರೆ ನನಗೆ ಯಾವ ಅಡುಗೆಯನ್ನೂ ಮಾಡಲು ಬರದಿರುವುದು. ಪ್ರತಿದಿನ ನಾನು ತಿನ್ನುವ ಮುನ್ನ ಆಕೆಗೆ ಒಂದು ಬಟ್ಟಲಿನಲ್ಲಿ ಅಡುಗೆ ನೀಡುತ್ತಿದ್ದೆ. ಆಕೆ ಸರಾಗವಾಗಿ ಧನ್ಯವಾದ ಹೇಳಿ ತಿಂದುಬಿಡುತ್ತಿದ್ದಳು. ಬದಲಿಗೆ ಹೆಸರು ಕುಲ ಹಾಗೂ ಗೋತ್ರ ಗೊತ್ತಿಲ್ಲದ, ಭಾರತದಲ್ಲಿ ನಾನೂರರಿಂದ ಆರುನೂರು ರೂಗಳವರೆಗೆ ಬೆಲೆ ಬರಬಹುದಾದ (ಕೆಜಿಗೆ) ಹಣ್ಣುಗಳನ್ನು ಕೊಡುತ್ತಿದ್ದಳು. ನನಗೆ ತಿನ್ನಲು ಭಯ. ನನ್ನ ರೂಮಿನಲ್ಲಿ ಮೈತುಂಬ ಮುಳ್ಳುಗಳಿದ್ದ ಆ ಹಣ್ಣುಗಳು ಕೊನೆಯವರೆಗೂ ಕೊಳೆಯುತ್ತಿದ್ದವು.
ಕ್ರಮೇಣ ಒಬ್ಬನಿಗಾಗಿ ಮಾಡುತ್ತಿದ್ದ ಅಡುಗೆ ಇಬ್ಬರಿಗೆ ಮಾಡಬೇಕಾಗಿ ಬರುತ್ತಿತ್ತು . ಹೊರಗೆ ತಿನ್ನೋಣವೆಂದರೆ ಒಂದೂಟಕ್ಕೆ ಕೇವಲ ಐದಾರು ಯೂರೊ ( ಮುನ್ನೂರು-ನಾನ್ನೂರು ರೂಪಾಯಿ, ಒಂದೊತ್ತಿಗೆ).
ಹೇಗಾದರೂ ಲೀಸಳಿಗೆ ನನ್ನ ಪಾಲಿನ ಊಟ ನೀಡುವುದು ನಿಲ್ಲಿಸಬೇಕೆಂದುಕೊಂಡೆ. ನನಗೆ ನಾನೇ ಹೇಳಿಕೊಂಡದ್ದೇನೆಂದರೆ ಆಕೆ ನನ್ನ ಅಡುಗೆ ತಿಂದ ನಂತರ ಹತ್ತು ನಿಮಿಷದಲ್ಲಿ ಸ್ವತಃ ರೆಡಿಮೇಡ್ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದಳು. ಒಮ್ಮೆ ಮಾತಿಗೆ, "ನಾನು ಶುದ್ಧ ಸಸ್ಯಾಹಾರಿ" ಎಂದಳು. ನನಗಷ್ಟೇ ಸಾಕಾಗಿತ್ತು. ಪ್ರತಿದಿನ ಸಸ್ಯಾಹಾರಿ ಅಡುಗೆ ಮಾಡುತ್ತಿದ್ದೆ. ಕೊನೆಗೆ ಬೇಯಿಸಿರುವ ಬೇಕಾನ್ ಮಾಂಸವನ್ನು ಸಣ್ಣದಾಗಿ ಹಚ್ಚಿ ಸಾರಿನೊಳಕ್ಕೆ ಪ್ರೋಕ್ಷಿಸುತ್ತಿದ್ದೆ. ದೊಡ್ಡ ದೊಡ್ಡ ಪೀಸ್‌ಗಳನ್ನು ಹಾಕಿದರೆ ಅವುಗಳನ್ನು ತೆಗೆದು ಬದಿಗಿರಿಸಿ, ಅದನ್ನೇ ಸಸ್ಯಾಹಾರಿ ಭಾರತೀಯ ಅಡುಗೆ ಎಂದುಕೊಂಡು ಆಕೆ ತಿನ್ನುವ ಚಾನ್ಸ್ ಇರುತ್ತಿತ್ತಲ್ಲ! ಅಲ್ಲಿಗೆ ಖರ್ಚಿನ ಗಂಡಾತರ ನಿಂತಂತಾಯಿತು. ಅಥವ ನಾನು ಹಾಗೆಂದುಕೊಂಡಿದ್ದೆ.
ಒಂದು ದಿನ ನಮ್ಮ ಸ್ಟುಡಿಯೋದ ನಿರ್ದೇಶಕರಲ್ಲಿ ಒಬ್ಬನಾದ ಪೆಕ್ಕ ಕಂಟೋನೆನ್ ಸ್ಟುಡಿಯೋಗೆ ಬಂದ. ತಿನ್ನಲು 'ಭಾರತೀಯ' ಎಂದು ನಾನೇ ಹೆಸರಿಸಿಬಿಟ್ಟಿದ್ದ ಅಡುಗೆ ನೀಡಿದೆ. ಭಾರತೀಯರಲ್ಲದವರು ಮಾತ್ರ ನನ್ನ ಅಡುಗೆಯ ರುಚಿ ನೋಡಿದ್ದರು. ಹಾಗೂ ನಾನು ಭಾರತೀಯನಾದುದರಿಂದಾಗಿ ನನ್ನ ಅಡುಗೆಯನ್ನು 'ಭಾರತೀಯ' ಎಂದು ಅನುಮಾನಾತೀತವಾಗಿ ಅನುಮೋದಿಸಿದ್ದರು.
"ಅನಿಲ್ ಅಡುಗೆ ತುಂಬ ಚೆನ್ನಾಗಿ ಮಾಡುತ್ತಾನೆ" ಎಂದು ಲೀಸ ತಾರೀಫು ಮಾಡಿದಳು. ಯಾವುದೇ ಲಾಭದ ಉದ್ದೇಶವಿಲ್ಲದೆ ಮಾತನ್ನೂ ಆಡದ ಕಲಾವಿದೆ ಲೀಸ. "ಇಂಗು ಮತ್ತು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತದೆ ಎಂದು ನಮ್ಮಲ್ಲಿ ಗಾಧೆಯೇ ಇದೆ" ಎಂದೆ. ಲೀಸ ನನ್ನನ್ನು ಒಂದು ಸುತ್ತು ಹಾಕಿ, ದಿಟ್ಟಿಸಿ, "ನೀನು ಮಂಗನಂತೆ ಕಾಣುತ್ತಿಲ್ಲವಲ್ಲ. ಅಡುಗೆ ಹೇಗೆ ಮಾಡಿದೆ" ಎಂದಳು.
ತಿಂಗಳಾಯಿತು. ಪೆಕ್ಕ ಕಂಟೋನೆನ್‌ನಿಂದ ಫೋನ್. "ಇನ್ನು ಹದಿನೈದು ದಿನಕ್ಕೆ ನಮ್ಮಲ್ಲಿ ಪಾರ್ಟಿ ಇದೆ. ನೀನು ಬರಲೇಬೇಕು. ಬೇರೇನಾದರೂ ಪ್ರೋಗ್ರಾಂ ಇದೆಯೇ?" ಎಂದು ಕೇಳಿದ. "ಇದು ನನಗೆ, ಭಾರತಕ್ಕೆ ಸಂದ ಮರ್ಯಾದೆ" ಎಂದುಕೊಂದು, ಜೋರಾಗಿ ಆತನಿಗೆ ಫೋನಿನಲ್ಲಿ ಕೇಳುವಂತೆ ಅಂದೂ ಬಿಟ್ಟೆ. ಸಂಪಿಗೆಹಳ್ಳಿ, ಯಶ್ವಂತ್‌ಪುರ, ಮಲ್ಲೇಶ್ವರದಿಂದ ಜಗತ್ತಿನ ತುತ್ತತುದಿಯಾದ ಉತ್ತರ ಫಿನ್ಲೆಂಡಿನವರೆಗೂ "ಎಲ್ಲಿಂದ ಎಲ್ಲಿಗೆ ಬಂದ್ಯೋ ಮಗ" ಎಂದು ನನ್ನ ಬೆನ್ನನ್ನು ನಾನೇ ತಟ್ಟಿಕೊಂಡೆ. ಅಲ್ಪಸ್ವಲ್ಪ ಯೋಗ ಮಾಡಿದ್ದರಿಂದ ನನ್ನ ಬೆನ್ನನ್ನು ನಾನೇ ತಲುಪಲು ಸಾಧ್ಯವಾಯಿತು.
ಮರುದಿನ ಮತ್ತೆ ಪೆಕ್ಕನ ಫೋನ್, "ಮೂವತ್ತು ಜನ ಬರುತ್ತಿದ್ದಾರೆ ಪಾರ್ಟಿಗೆ. ಬಂದೇ ಬರುತ್ತೀಯಲ್ಲವೆ?"
"ಖಂಡಿತ"
"ಅವರೆಲ್ಲಾ ಫಿನ್ಲೆಂಡಿನ ದೃಶ್ಯಕಲೆಯ ಹಣೆಯಬರಹ ನಿರ್ಧರಿಸುವವರು. ನೀನು ಲಕ್ಕಿ" ಎಂದ.
"ಥ್ಯಾಂಕ್ಸ್" ಎಂದೆ.
ನನ್ನಂತ ಉದಾಸೀನನಲ್ಲದ, ಮಹತ್ವಾಕಾಂಕ್ಷೆಯಿರುವ ನಮ್ಮ ಅಥವಾ ನನ್ನ ಬೆಂಗಳೂರಿನ ಕಲಾವಿದರಾಗಿದ್ದರೆ ಫೋನಿನಲ್ಲೇ ಕುಣಿದು ಕುಪ್ಪಳಿಸಿಬಿಡುತ್ತಿದ್ದರೇನೋ. ನನಗೂ ಒಳಗೊಳಗೇ ಖುಷಿ. ಮರುದಿನ ಪೆಕ್ಕನ ಫೋನ್, 'ಡೆಜಾವೂ'ನಂತೆ (ಇದೇ ಮುಂಚೆಯೇ ಹೀಗಿಯೇ ನಡೆದಂತೆನಿಸುತ್ತದೆ ಎಂಬ ನಾಲ್ಕು ಕನ್ನಡ ಪದಕ್ಕೆ ಸಮ ಈ ಫ್ರೆಂಚ್ ಪದ-ಡೆಜಾವು).
"ಅನಿಲ್, ಲಿಸ ಹೇಳಿದಳು. ನಾನೂ ಪರೀಕ್ಷಿಸಿಯಾಯಿತು. ಎಲ್ಲರಿಗೂ ಹೇಳಿದ್ದೂ ಆಯ್ತು. ನಮ್ಮ ಮನೆಗೆ ಬರುವ ಮೂವತ್ತು ಮಂದಿ ಫಿನ್ಲೆಂಡಿನ ಕಲೆಯ ಹಣೆಯ ಬರಹಗಾರರಿಗೆ ನಿನ್ನ ಕೈಯಿಂದ ಭಾರತೀಯ ಅಡುಗೆ ಸ್ಪೆಷಲ್!" ಎಂದು ಫೋನಿಟ್ಟ.
ಈ ಹಣೆಯಬರಹಗಾರರ ಹಣೆಯಬರಹವೇ ನನ್ನ ಕೈಯಲ್ಲಿತ್ತು. ಪಾರ್ಟಿಯ ಮರುದಿನದ, ಫಿನ್ಲೆಂಡಿನ ರಾಷ್ಟ್ರೀಯ ಪತ್ರಿಕೆಯಾದ "ಹೆಲ್ಸಿಂಕಿ ಸೊನೊಮತ್"ನ ಹೆಡ್‌ಲೈನ್ಸ್ ನೆನೆಸಿಕೊಂಡೆ, ಓದಲಾಗಲಿಲ್ಲ ಏಕೆಂದರೆ ಅದು ಫಿನ್ನಿಶ್ ಭಾಷೆಯಲ್ಲಿತ್ತು.
"ಭಾರತೀಯ ಕಲಾವಿಮರ್ಶಕನಿಂದ ಫಿನ್ಲೆಂಡಿನ ಕಲಾವಿದರ ಭೀಕರ ವಿಮರ್ಶೆ: ವಿಮರ್ಶಕನ ಭಾರತೀಯ ಅಡುಗೆ, ಮುವತ್ತು ಮಂದಿ ಕಲಾವಿದರು ಫಿನಿಶ್!"
ಈ ಪ್ರವಾಸ ಕಥನದ ಇತರ ಭಾಗಗಳು
ಸಾಮಿಯ ಮನೆಯ ಮೊದಲ ಮಹಡಿಯಲ್ಲಿ
ಆತನ ಡಾರ್ಕ್‌ರೂಂ. ಆತ ಫೋಟೋ ಹಾಗೂ ವಿಡಿಯೋ ಕಲಾವಿದ. ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಬೇಕೆಂದೇ ಆತ ನೆಗೆಟಿವ್-ಫೋಟೋಗ್ರಫಿ ಮಾಡುತ್ತಿದ್ದ. ಆಧುನಿಕೋತ್ತರಕ್ಕೆ ಆತನದು ನೆಗೆಟಿವ್ ಪ್ರತಿಕ್ರಿಯೆ. ಆ ಡಾರ್ಕ್‌ರೂಂನಲ್ಲಿ ಚಜ್ಜೆಯನ್ನೆಲ್ಲ ಕಪ್ಪು ಬಟ್ಟೆಯಿಂದ ಮುಚ್ಚಿಬಿಟ್ಟಿದ್ದ. ಅಥವ ಕಪ್ಪು ಕೋಣೆಯನ್ನು ಡಾರ್ಕ್ ಬಟ್ಟೆಯಿಂದ ಮುಚ್ಚಿದ್ದ. ಆ ಹಳೆಯ ಕಾಲದ ಕಪ್ಪುಬಿಳುಪು ಛಾಯಾಚಿತ್ರವನ್ನು ಹಳೆಯ ಕಾಲದ್ದೆಂದು ಪರಿಣಾಮಕಾರಿಯಾಗಿ ಮೂಡಿಸಲು ಸಹಾಯಕ್ಕಾಗಿ ಅನೇಕ ಕಂಪ್ಯೂಟರ್‌ಗಳನ್ನೂ ಇರಿಸಿಕೊಂಡಿದ್ದ. ಗಾಂಧೀಜಿಯನ್ನು ಬಡತನದಲ್ಲಿ ಇರಿಸಲು ಭಾರತ ಸರ್ಕಾರವು ಸಾಕಷ್ಟು ಖರ್ಚು ಮಾಡಿದಂತಿತ್ತು ಇದು. ಸಂಸಾರಸ್ಥರ ಮನೆಯೊಂದರಲ್ಲಿ ಮೇಜು, ಕುರ್ಚಿ, ಟೀಪಾಯಿ, ಹೂದಾನಿಗಳಿದ್ದಂತೆ ಆ ಕೋಣೆಯ ತುಂಬೆಲ್ಲ ವೈರುಗಳು, 'ಮೌಸುಗಳು' (ಇಲಿಗಳಿಲ್ಲದಿದ್ದರೂ), ಫ್ಲಾಪಿಗಳು, ಡಿಸ್ಕ್‌ಗಳು ಮರದ ಬೇರುಗಳಂತೆ ಟಿಸಿಲೊಡೆದಿದ್ದವು. ಮುಂಚಿನ ವಾಕ್ಯದ ಪ್ರತಿಯೊಂದು ಪದಕ್ಕೂ ನಾನು 'ಗಳು' ಸಿಕ್ಕಿಸಿರುವುದಕ್ಕೆ ಕಾರಣ ಅಂತಹ ವಸ್ತುಗಳಲ್ಲಿ ಯಾವುವೂ ಒಂಟಿಯಾಗಿರಲಿಲ್ಲ.
ಒಟ್ಟಾಗಿ ಆ ಕೋಣೆಯು ಎಲ್ಲ ಜಾತಿಯ ಪ್ರಾಣಿಗಳ ಒಂದೊಂದು 'ಜೋಡಿ'ಯನ್ನು (ಕಂಪನಿ ಕೊಡಲು ನಂತರ ಜಗಳ ಮಾಡಲು) 'ಹಳೆಯ ಒಡಂಬಡಿಕೆ' ಕಥೆಯ ನೋಹ ಎಂಬಾತ ಹಡಗಿನಲ್ಲಿ ತುಂಬಿಟ್ಟಂತಿತ್ತು. "ನೋಹನ ನೌಕೆಯಂತಿರುವುದರಿಂದ ಈಗ ಪ್ರಳಯ ಆಗುತ್ತದೆಯೆ ಈ ಕೋಣೆಯಲ್ಲಿ?" ಎಂದು ತಮಾಷೆಯಾಗಿ ಕೇಳಿದೆ. "ಹೌದು, ಒಂದರ್ಥದಲ್ಲಿ ಇಂದು ರಾತ್ರಿ ಪ್ರಳಯವೇ ಆಗಲಿದೆ. ಈ ನೋಹನ ನೌಕೆಗೆ ಇಂದು ನೀನೇ ನೋಹ್. ಅಲ್ಲಿರುವ ಮಂಚ ನಿನಗೇ. ನೀನು ಇಲ್ಲಿಯೇ ಮಲಗಬೇಕು. 'ಜೋಡಿ'ದಾರ ನೋಹ ಮಾತ್ರ ಒಂಟಿ ಮಲಗಬೇಕು", ಎಂದ ಸಾಮಿ.
" ಪ್ರಳಯ?!" ಎಂದೆ. ಬೆಳಿಗ್ಗೆ ಗೊತ್ತಾಗುತ್ತದೆ. ವ್ಯತ್ಯಾಸವಿಷ್ಟೇ. ಅಸಲಿ ನೋಹಾನಿಗೆ ಪ್ರಳಯದ ಆಗಮನ ಮೊದಲೇ ತಿಳಿದಿತ್ತು. ನಿನಗೆ ನಾಳೆ ತಿಳಿಯಲಿದೆ", ಎಂದು ನಗಾಡಿ ಸಾಮಿ ನನ್ನ ಒಡೆತನದ ನೋಹನ-ನೌಕೆಯಿಂದ ಕೆಳಗಿಳಿದು ಹೋದ ಕೆಳ ಅಂತಸ್ತಿಗೆ. "ನೌಕೆಯ ಕೆಳಗಿನ ಸಾಗರಕ್ಕೆ ಹೋಗಿಬಿಟ್ಟ ಪಾಪಿ, ಎಂತಹ ಪ್ರಳಯ ಎಂದು ಹೇಳದೆ" ಎಂದು ಬೈಯ್ದುಕೊಂಡೆ. ಒಂದು ತಾಸಿನ ನಂತರ, ಅಂದರೆ ಮುಂಜಾನೆ ಎರಡೂವರೆ ಸುಮಾರಿಗೆ ಮತ್ತೆ ಮೇಲೆ ಬಂದು ಮೆಲ್ಲಗೆ ಬಾಗಿಲು ತಟ್ಟಿದ ಸಾಮಿ. ದಡಕ್ಕನೆ ಬಾಗಿಲು ತೆಗೆದೆ. "ನಾನೇ ಬಂದದ್ದು ಎಂದು ಹೇಗೆ ಗೊತ್ತಾಯಿತು?" ಎಂದ.
"ಇರೋವ್ರು ನಾಲ್ಕು ಜನ, ಕದ್ದೋರು ಯಾರು ಅಂದಂಗಾಯ್ತು. ಹುಡುಕಿದ್ರೂ ಹತ್ತು ಕಿಲೋಮೀಟರ್ ಸುತ್ತಳತೇಲಿ ಇನ್ಯಾರಿದಾರೆ ಈ ಊರಲ್ಲಿ!" ಎಂದು ಆತ್ಮವಿಶ್ವಾಸದಿಂದಲೇ ಕೇಳಿದೆ. "ಆರಾಮವಾಗಿದ್ದೀ ತಾನೆ?" ಎಂದ. ಆಗ ನನಗೆ ಈ ಮಧ್ಯರಾತ್ರಿಯ ಪ್ರಶ್ನೆಯ ನಿಗೂಢ ತಿಳಿಯಲಿಲ್ಲ, ಹೊಳೆಯಲಿಲ್ಲ. "ಅಲ್ಲಿದೆಯಲ್ಲ ಕರಬೇವಿನ ಗಿಡ ಅದು ಇಡೀ ಫಿನ್ಲೆಂಡಿನಲ್ಲಿರುವ ಏಕೈಕ ಕರಬೇವಿನ ಗಿಡ, ಮೈಸೂರಿನಿಂದ ತಂದದ್ದು. ಅದನ್ನೇ ಇಂದಿನ ನಿನ್ನ ಪಾಲಿನ ದೇವರೆಂದು ಭಾವಿಸು", ಎಂದ. "ಕರಬೇವಿನ ಗಿಡವನ್ನು ಯಾರೂ ದೇವರೆಂದು ಭಾರತದಲ್ಲಿ ಭಾವಿಸುವುದಿಲ್ಲ?!" ಎಂದೆ. "ಬೆಳಿಗ್ಗೆ ಮಾತನಾಡುವ, ಗುಡ್ ನೈಟ್ ಅಥವ ಗುಡ್ ಮಾರ್ನಿಂಗ್" ಎಂದು ಸಾಮಿ ಹೋದ.
ಬೆಳಿಗ್ಗೆ ಹನ್ನೊಂದು ಗಂಟೆಗೆ ಎದ್ದೆ. ಸಾಮಿ ಬಂದ. ಆ ಕಪ್ಪು ಬಟ್ಟೆಯಾವೃತ್ತವಾದ ಡಾರ್ಕ್ ರೂಂನಲ್ಲಿ ಬೆಳಿಗ್ಗೆಗೂ ರಾತ್ರಿಗೂ ಏನೇನೂ ವ್ಯತ್ಯಾಸವಿರಲಿಲ್ಲ. ಚಜ್ಜೆಯ ಮೇಲಿನ ಕಪ್ಪು ಪರದೆ ಸರಿಸಿದ. ಆಗ ಕಾಣಿಸಿತು ಅವು. ಮೈಸೂರಿನಲ್ಲಿ ಅವರಪ್ಪ ನಿಜವಾದ ಹುಲಿ, ಚಿರತೆ, ಕರಡಿಗಳ ಸಾವಿನ ನಂತರ ಅವುಗಳ ಮುಖಗಳನ್ನು ಸ್ಟಫ್ ಮಾಡಿ ಮನೆಯ ಗೋಡೆಗೆ ತೂಗುಹಾಕುತ್ತಿದ್ದರಲ್ಲ, ಅಂತಹ ಮೂರು ಪ್ರಾಣಿಗಳ ಮುಖ-ಶವಗಳು ಅಲ್ಲಿದ್ದವು. ಸಾಮಿ ನಗತೊಡಗಿದ. "ರಾತ್ರಿಯೇ ಇವುಗಳನ್ನು ನನಗೆ ತೋರಿಸಿದ್ದಿದ್ದರೆ ನನಗೇನೂ ನಿದ್ರೆ ಕೆಡುತ್ತಿರಲಿಲ್ಲ ಬಿಡು" ಎಂದು ಆತನಿಗೆ ಸುಳ್ಳು ಹೇಳಿದೆ. "ಕರಬೇವಿನ ಗಿಡ ಈ ಪ್ರಾಣಿಗಳ ಶವಗಳ ಜೀವಂತ ಭೀತಿಯನ್ನು ದೂರ ಮಾಡುತ್ತವೆಯೆಂದು ನೀನು ನನಗೆ ರಾತ್ರಿ ಸೂಚಿಸಿದೆಯ?" ಎಂದು ಕೇಳಿದೆ.
ಆಗ ಹೇಳಿದ ಸಾಮಿ ಆ ಬೃಹತ್ ಮನೆಯ ಕಥೆಯನ್ನು. ಆ ಮನೆ ಅಷ್ಟು ದೊಡ್ಡದಿರಲು ಕಾರಣ ಇಬ್ಬರೇ ಅದರಲ್ಲಿ ವಾಸಿಸುತ್ತಿರುವುದರಿಂದ ಎಂದು ಭಾವಿಸಿದ್ದೆ. ಆದರೆ ಆ ಮನೆ ನಿಜಕ್ಕೂ ದೊಡ್ಡದಿತ್ತು, 'ಲಾರ್ಡ್ ಆಫ್ ದ ರಿಂಗ್ಸ್' ಸಿನೆಮದ ಕೋಟೆ ಕೊತ್ತಲಗಳಂತೆ. ಏಕೆಂದರೆ ಅದು ಮಕ್ಕಳ ಶಾಲೆಯಾಗಿತ್ತು ಹಿಂದೊಮ್ಮೆ. ಅತ್ಯಂತ ಕಡಿಮೆ ಬೆಲೆಗೆ ಆ ಶಾಲೆಯನ್ನು ಸರ್ಕಾರದಿಂದ ಕೊಂಡುಕೊಂಡಿದ್ದರು ಮಿಸ್ಟರ್ ಅಂಡ್ ಮಿಸ್ಸೆಸ್ ಸಾಮಿ. ಏಕೆಂದರೆ ಆ ಶಾಲೆಯ ಒಡೆಯ ಏಕಾಂಗಿತನ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದನಂತೆ. ಈಗ ಅಂದರೆ ಬೆಳಿಗ್ಗೆ, ಹಿಂದಿನ ರಾತ್ರಿಯ ನಿಗೂಢಗಳ ಮೇಲೆಲ್ಲ ಬೆಳಕು ಚೆಲ್ಲಿದಂತಾಯ್ತು. "ಅದಕ್ಕೇ ರಾತ್ರಿ ಎರಡೆರೆಡು ಸಲ ಬಂದು ನನ್ನನ್ನು ಮಾತನಾಡಿಸಿಕೊಂಡು ಹೋದದು ನೀನು?" ಎಂದು ಕೇಳಿದೆ. "ಅಸಲಿ ಪ್ರಾಣಿ ಚರ್ಮವು ದೆವ್ವಗಳನ್ನು ದೂರವಿರಿಸುತ್ತದೆಂದು ಮೈಸೂರಿನ ಹಳೆಯ ಮಂದಿ ಈಗಲೂ (ಅಂತಹವರು ಬದುಕಿದ್ದರೆ) ನಂಬುತ್ತಾರೆ," ಎಂದನಾತ. "ಓಹೋ ಈ ರೂಮಿನೊಳಕ್ಕೆ ಪ್ರೇತ ಬರುವುದನ್ನು ಈ ಸ್ಟಫ್ಡ್-ಪ್ರಾಣಿಗಳು ತಡೆಹಿಡಿದವೆ? ಹಾಗಿದ್ದರೆ ಪ್ರೇತ ಈ ಮನೆಯ ಮಿಕ್ಕೆಲ್ಲ ಕೋಣೆ, ಕೋನಗಳಲ್ಲೂ ಓಡಾಡುತ್ತದೆಂದು ಅರ್ಥವಲ್ಲವೆ?" ಎಂದು ತಮಾಷೆ ಮಾಡಿದೆ. " ಇಲ್ಲ ಇಲ್ಲ ಉಲ್ಟಾ ಕೇಸಿದು. ಈ ಕೋಣೆಯಲ್ಲೇ ಈ ಹಾಸಿಗೆ ಇರುವ ನೇರಕ್ಕೇ, ಹಾಸಿಗೆಯ ಮೇಲೆ ನಿಂತೇ ಶಾಲೆಯ ಒಡೆಯ ನೇಣು ಹಾಕಿಕೊಂಡಿದ್ದು. ಆದ್ದರಿಂದ ಈ ಕೋಣೆಯನ್ನು ಬಿಟ್ಟು ಪ್ರೇತ ಯಾವತ್ತೂ ಹೊರಗೆಲ್ಲೂ ನಮಗೆ ಕಾಟ ಕೊಟ್ಟದ್ದಿಲ್ಲ" ಎಂದು ಗಂಭೀರವಾಗಿ ನುಡಿದ ಸಾಮಿ. ನಾನು ಕೋಡಲೆ ಬಾತ್‌ರೂಮಿಗೆ ಓಡಿದೆ. ಬೆಳಿಗ್ಗೆ ತಡವಾಗಿ ಎದ್ದಿದ್ದರಿಂದ ಬಾತ್‌ರೂಮಿಗೆ ಇನ್ನೂ ಹೋಗಿರದಿದ್ದದ್ದು ಹಾಗೆ ಓಡಲು ನನಗಿದ್ದ ಕಾರಣಗಳಲ್ಲಿ ಎರಡನೆಯದು!!
ಸಾಮಿ ಹೆಲ್ಸಿಂಕಿಗೆ ಕೂಡಲೆ ಹಿಂದಿರುಗುತ್ತಿರಲಿಲ್ಲವಾದ್ದರಿಂದ ನಾನು ಆತನ ನಾದಿನಿಯೊಂದಿಗೆ ಸಮೀಪದ (ಗಂಟೆಗೆ ನೂರ ಇನ್ನೂರು ಕಿಲೋಮೀಟರ್ ಕ್ರಮಿಸುವ ನಿಧಾನದಲ್ಲಿ ಒಂದೆರೆಡು ಗಂಟೆ ಪ್ರಯಾಣ. ಲೈಟ್ ಇಯರ್ಸ್ ಲೆಕ್ಕದಲ್ಲಿ ಇದೆಷ್ಟು ನಿಕೃಷ್ಟ ನೋಡಿ) ರೈಲ್ವೇ ಸ್ಟೇಷನ್ನಿಗೆ ಬಳಿಗೆ ಡ್ರಾಪ್ ತೆಗೆದುಕೊಂಡೆ.
ಸ್ಟೇಷನ್ನಿನ ಮರದಿಂದ ಕಟ್ಟಲಾಗಿದ್ದ ವಿಕ್ಟೋರಿಯನ್ ಶೈಲಿಯ ಸ್ಟೇಷನ್. ಅದೇ "ಇಂಗ್ಲೀಷ್ ಬರುವಂತಿದ್ದರೆ ನಾನ್ಯಾಕೆ ಈ ದೇಶದಲ್ಲಿರುತ್ತಿದ್ದೆ" ಎಂಬ ಭಾವ ಒಂದಿಬ್ಬರ ಮುಖದ ಮೇಲೆ. ಏಕೆಂದರೆ ಅಲ್ಲಿದ್ದವರು ಒಂದಿಬ್ಬರು ಮಾತ್ರ, ನಮ್ಮಿಬ್ಬರನ್ನು ಹೊರತುಪಡಿಸಿ. ವಿಶಾಲ ಸ್ಥಳ. ಅಲ್ಲಿ ನಿಂತಿದ್ದ ಒಂದೇ ಒಂದು ರೈಲೀಗೆ ಮೂರು ಬೋಗಿ! ಒಂದಿಬ್ಬರು ಪ್ರಯಾಣಿಕರಿಗಾಗಿ ಮೂರು ಬೋಗಿ, ಭಗವಾನ್! ರೈಲು ಹೊರಡಲು ಇನ್ನೂ ಮೂರು ತಾಸು ಇತ್ತು. ಅಷ್ಟರಲ್ಲಿ ನಾಲ್ವರು, "ಇಂಗ್ಲೀಷ್" ಎಂಬ ಪದವನ್ನೂ ಇಂಗ್ಲೀಷಿನಲ್ಲಿ ಸ್ಪಷ್ಟವಾಗಿ ಹೇಳಲಾಗದವರೊಂದಿಗೆ, ತಲಾ ಅರ್ಧ ತಾಸು ಮಾತನಾಡಿದೆ. "ಫಿನ್ನಿಶ್" ಎಂಬ ಒಂದೇ ಒಂದು ಫಿನ್ನಿಶ್ ಪದ ಗೊತ್ತಿತ್ತು ಆಗ ನನಗೆ. ಈಗಲೂ ಅಷ್ಟೇ.
ಭಾಷೆಯ ಸಹಾಯವಿಲ್ಲದೆ ಹಲವರೊಂದಿಗೆ ಮಾತನಾಡಿದ ನಂತರ ಊರು ನೋಡಲು ಹೊರಟೆ, ಲಗೇಜನ್ನು ಲಾಕರಿನಲ್ಲಿರಿಸಿ. ಅಲ್ಲಿ ಲಗೇಜ್ ಇರಿಸಿಕೊಂಡು, ಅಮೇರಿಕನ್ ಆಕ್ಸೆಂಟಿನಲ್ಲಿ ಇಂಡಿಯನ್ ಇಂಗ್ಲೀಷ್ ಮಾತನಾಡಿ, ನೀವುಗಳು ಮನಸ್ಸಿನಲ್ಲೇ ಮೈಯೆಲ್ಲ ಪರಿಚಿಕೊಳುವಂತೆ ಮಾಡಬಲ್ಲ ತಾಕತ್ತಿನ (ಭಾರತದ ಏರ್‌ಪೋರ್ಟ್‌ಗಳಲ್ಲಿರುವಂತಹ) ಸ್ಮಿತಾ ರಾವ್, ಶ್ಯಾಮಲ ಕುಂಡು ಅಂತಹವರು ಇರಲಿಲ್ಲ. ಈ ಮಹಿಳಾಮಣಿಗಳು ಕಾಲ್ಪನಿಕ ಎಂದು ಹೇಳಬೇಕಿಲ್ಲವಷ್ಟೇ.
ಊರು ಊರೇ. ಊರ ಮಧ್ಯದ ನದಿ ನೆಲದ ಮಟ್ಟದಲ್ಲಿ. ಬೇಸಿಗೆಯಾದ್ದರಿಂದ ಬಿಸಿಲು ಹೋಗುವವರೆಗೂ ಯಾರೂ ತಮ್ಮ ತಮ್ಮ ಮನೆಗಳ ಒಳಕ್ಕೆ ಹೋಗುತ್ತಿದ್ದುದು ಕತ್ತಲಾದ ಮೇಲೆಯೇ. ಬೇರೆಯವರ ಮನೆಗಳಿಗೆ ಹೋಗುತ್ತಿದ್ದುದೂ ಕತ್ತಲಾದ ಮೇಲೆಯೇ. ಆದರೆ ಕತ್ತಲೇ ಆಗುತ್ತಿರಲಿಲ್ಲವಾದ್ದರಿಂದ ಮನೆಗಳಿಗೆ ಹೋಗುತ್ತಿದ್ದುದು ಕೇವಲ ಊಟ ಸ್ವೀಕರಿಸಲು ಮತ್ತು ವಿಸರ್ಜಿಸಲು. ಸ್ನಾನ ಮಾಡುವ ಗ್ಯಾರಂಟಿ ಇರುತ್ತಿರಲಿಲ್ಲ. ಬೆವರು ಬಂದರಲ್ಲವೆ ಸ್ನಾನ ಮಾಡುವುದು. ಇಡೀ ಯುರೋಪಿನಲ್ಲಿ ಅತಿ ಕೆಟ್ಟ ಉಡುಪಿನ ಶೈಲಿ ಇವರದ್ದೇ. ಆದರೂ ಬಿಸಿಲು ಬಂದಂತೆಲ್ಲ ಊರುಗಳಲ್ಲಿ ಏನೋ ಕಲರವ. ಕಿವಿಗೆ ಕೇಳಿಸುವಷ್ಟು ಕಲರವ. ಫಿನ್ಲೆಂಡಿನ ಬೇಸಿಗೆಯಲ್ಲಿ ಆತ್ಮಹತ್ಯೆಗಳು ಕಡಿಮೆ!
ಅದೇ ಅಭ್ಯಾಸದಿಂದ ಕಡಿಮೆ ದರ್ಜೆಯ ಹೋಟೆಲು ಹುಡುಕಿಕೊಂಡು ಹೋಗಿ, ಹುಡುಕಿ, ಕಾಫಿ ಕುಡಿದೆವು ನಾನು ಮತ್ತು ನನ್ನ ಬೆಂಗಳೂರಿನ ಸ್ನೇಹಿತ ಪ್ರಕಾಶ್ ಬಾಬುವಿನ ಮೂಲಕ ಪರಿಚಿತನಾದ ಅರ್ಧ ಫಿನ್ನಿಶ್ ಅರ್ಧ ಭಾರತೀಯ ಗೆಳೆಯ ಸಾಮಿ ವ್ಯಾನಿಂಗನ ನಾದಿನಿಯ ಜೊತೆ. ಈಗಲ್ಲ ಆಗಲೂ ಆಕೆಯ ಹೆಸರು ನನಗೆ ತಿಳಿದಿರಲಿಲ್ಲ. ಕಾಫಿ ಹೌಸಿನಲ್ಲಿ ನಾಯಿಗಳನ್ನು ಬಿಡಿತ್ತಿರಲಿಲ್ಲವಾದ್ದರಿಂದ ತನ್ನ ಪುಟ್ಟ ನಾಯಿ ಮರಿಯನ್ನು ತನ್ನ ಪುಟ್ಟದಲ್ಲದ ಬ್ಯಾಗಿನ ಒಳಗಿಟ್ಟುಕೊಂಡೇ ಕಾಫಿ ಕುಡಿದಳು. ಇಡೀ ನಗರವು ಜಿಮ್ ಕ್ಯಾರಿಯ "ಟ್ರೂಮನ್ ಶೋ" ಸಿನೆಮದ ಸೆಟ್ಟಿಂಗಿನಂತಿತ್ತು. ಆ ಸಿನೆಮದಲ್ಲಿ ಸೆಟ್ಟಿಂಗನ್ನು ಸೆಟ್ಟಿಂಗಿನಂತೆಯೇ ತೋರಿಸಿದ್ದಾರೆಂಬುದು ನೆನಪಿರಲಿ! ಕಾಫಿ ಕುಡಿದ ನಂತರ "ಓಲೆ ಹೂವ" (ಕನ್ನಡವಲ್ಲ, ಕನ್ನಡದಲ್ಲಿ "ಹಾಯ್" ಎನ್ನುತ್ತೇವಲ್ಲ ಹಾಗೆ) ಹೇಳಿ ಆಕೆ ಹೊ