ಅನುವಾದ: ಪ್ರೊ. ಓ ಎಲ್ ಎನ್ ಸ್ವಾಮಿ
[ಕಳೆದ ಮೂರು ದಶಕಗಳಲ್ಲಿ ನನ್ನನ್ನು ಆವರಿಸಿಕೊಂಡು ಬಹುವಾಗಿ ಕಾಡಿದ ಮೂರು ಕಥೆಗಳಲ್ಲಿ ಇದೂ ಒಂದು. ಇದರಲ್ಲಿ ಎಂಟು ಅಧ್ಯಾಯಗಳಿವೆ. ಸಾವಧಾನವಾಗಿ ಓದಿ. ಅಲ್ಲಲ್ಲಿ ಕೆಲವು ಬೆರಳಚ್ಚಿನ ತಪ್ಪುಗಳಿರಬಹುದು, ದಯವಿಟ್ಟು ತಿದ್ದಿಕೊಳ್ಳಿ. ಅಲ್ಲಲ್ಲಿ ಎದುರಾಗುವ ವಿಶೇಷ ಪದಗಳಿಗೆ ವಿವರಣೆಯನ್ನು * ಗುರುತಿನೊಂದಿಗೆ ಅಧ್ಯಾಯದ ಕೊನೆಯಲ್ಲಿ ಕೊಟ್ಟಿದ್ದೇನೆ.]
ಫಾದರ್ ಸೆರ್ಗಿಯಸ್
ಒಂದು
ಪ್ರಿನ್ಸ್ ಸ್ಟೆಪಾನ್ ಕಸಾಟ್ಸ್‌ಕಿ ಮಾಡಿದ್ದನ್ನು ಕಂಡು ಪೀಟರ್ಸ್‌ಬರ್ಗಿನ ಜನಕ್ಕೆಲ್ಲ ಆಶ್ಚರ್ಯವಾಗಿತ್ತು. ಅವನು ಸಾವಿರದ ಎಂಟುನೂರ ನಲವತ್ತರ ಸುಮಾರಿನಲ್ಲಿ ಕ್ಯುರಾಸ್ಸಿಯರ್ ಲೈಫ್‌ಗಾರ್ಡ್ಸ್‌ನಲ್ಲಿ ಅಫೀಸರನಾಗಿದ್ದ, ಸದ್ಯದಲ್ಲಿಯೇ ಚಕ್ರವರ್ತಿ ಮೊದಲನೆಯ ನಿಕೊಲಸ್‌ನ ಏಡ್ ಡಿ ಕ್ಯಾಂಪ್ ಆಗಿ ಭವ್ಯವಾದ ಭವಿಷ್ಯರೂಪಿಸಿಕೊಳ್ಳುತ್ತಾನೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಸ್ಟೆಪಾನ್ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟ; ಮಹಾರಾಣಿಯ ಆಪ್ತಸಖಿಯಾಗಿದ್ದ ಸುಂದರ ಯುವತಿಯೊಡನೆ ಇನ್ನೊಂದು ತಿಂಗಳಲ್ಲಿ ನಡೆಯಬೇಕೆಂದು ನಿಶ್ಚಯವಾಗಿದ್ದ ಮದುವೆಯನ್ನು ಮುರಿದುಕೊಂಡ; ತನಗಿದ್ದ ಚಿಕ್ಕ ಎಸ್ಟೇಟನ್ನು ಅಕ್ಕನಿಗೆ ಬರೆದುಕೊಟ್ಟು, ಮಠಕ್ಕೆ ಸೇರಿ ಸನ್ಯಾಸಿಯಾಗಿಬಿಟ್ಟಿದ್ದ. ಅವನ ವರ್ತನೆಗೆ ಇದ್ದ ಅಂತರಂಗದ ಕಾರಣಗಳು ಗೊತ್ತಿಲ್ಲದಿದ್ದವರಿಗೆ ಇದೆಲ್ಲ ಅಸಾಮಾನ್ಯ, ಅವ್ಯಾವಹಾರಿಕ ವರ್ತನೆಯಂತೆ ಕಂಡಿತ್ತು. ನಡೆದದ್ದೆಲ್ಲ ಅತ್ಯಂತ ಸಹಜವಾಗಿ ನಡೆಯಿತೆಂದೂ, ಹಾಗಲ್ಲದೆ ಬೇರೆ ರೀತಿಯಲ್ಲಿ ತಾನು ನಡೆದುಕೊಳ್ಳುವುದು ಸಾಧ್ಯವೇ ಇರಲಿಲ್ಲವೆಂದೂ ಸ್ಟೆಪಾನ್ ಕಸಾಟ್ಸ್‌ಕಿಗೆ ಅನಿಸಿತ್ತು.
ಸ್ಟೆಪಾನ್‌ನ ತಂದೆ ಒಬ್ಬ ಕರ್ನಲ್, ಗಾರ್ಡ್ಸ್‌ಗಳಲ್ಲಿದ್ದು ರಿಟೈರಾಗಿದ್ದ. ಸ್ಟೆಪಾನ್‌ಗೆ ಹನ್ನೆರಡು ವರ್ಷವಾಗಿದ್ದಾಗ ತೀರಿಹೋಗಿದ್ದ. ಸ್ಟೆಪಾನ್‌ನ ತಾಯಿಗೆ ಮಗನನ್ನು ಮನೆಯಿಂದ ದೂರ ಕಳಿಸಲು ಇಷ್ಟವಿರಲಿಲ್ಲ. ಆದರೆ ತನ್ನ ಸಾವಿನ ನಂತರ ಮಗನನ್ನು ಮನೆಯಲ್ಲಿಟ್ಟುಕೊಳ್ಳಬಾರದೆಂದೂ ಮಿಲಿಟರಿ ಕಾಲೇಜಿಗೆ ಸೇರಿಸಬೇಕೆಂದೂ ಗಂಡ ವಿಲ್ ಬರೆದಿಟ್ಟಿದ್ದ. ಮಗನನ್ನು ಮಿಲಿಟರಿ ಕಾಲೇಜಿಗೆ ಸೇರಿಸಿದಳು. ಅವನು ರಜೆಯಲ್ಲಿ ಮನೆಗೇ ಬಂದು ಇರುವಂತಾಗಲಿ, ತಾನೂ ಮಗನ ಹತ್ತಿರವೇ ಇದ್ದಂತಾಗಲಿ ಅನ್ನುವ ಆಸೆಯಿಂದ ಮಗಳು ವಾರ್ವರಾ ಜೊತೆಯಲ್ಲಿ ಸೇಂಟ್ ಪೀಟರ್ಸ್‌ಬರ್ಗಿಗೇ ಬಂದು ಇದ್ದುಬಿಟ್ಟಿದ್ದಳು.
ಸ್ಟೆಪಾನ್ ಜಾಣ, ಅಗಾಧವಾದ ಆತ್ಮವಿಶ್ವಾಸವಿತ್ತು. ಜನರ ನಡುವೆ ಎದ್ದುಕಾಣುತ್ತಿದ್ದ. ಓದಿನಲ್ಲಿ, ಅದರಲ್ಲೂ ಅವನಿಗೆ ಪ್ರಿಯವಾದ ಗಣಿತದಲ್ಲಿ, ಕವಾಯತು, ಕುದುರೆಸವಾರಿಗಳಲ್ಲಿ ಎಲ್ಲರಿಗಿಂತ ಮುಂದಿದ್ದ. ಎತ್ತರವಾಗಿದ್ದ, ನೋಡುವುದಕ್ಕೆ ಚೆನ್ನಾಗಿದ್ದ, ಚುರುಕಾಗಿದ್ದ. ಮುಂಗೋಪದ ಗುಣ ಒಂದಿಲ್ಲದಿದ್ದರೆ ಮಾದರಿ ಕೆಡೆಟ್ ಆಗಿರುತ್ತಿದ್ದ. ಕುಡಿತವಾಗಲೀ, ಹೆಣ್ಣಿನ ಚಟವಾಗಲೀ ಇರಲಿಲ್ಲ. ಆಶ್ಚರ್ಯವಾಗುವಷ್ಟು ಸತ್ಯವಂತನಾಗಿದ್ದ. ಕೋಪ ಬಂದಾಗ ಮಾತ್ರ ಮೈಮೇಲಿನ ಎಚ್ಚರವನ್ನು ಕಳೆದುಕೊಂಡು ಕಾಡು ಮೃಗದಂತಾಗಿಬಿಡುತ್ತಿದ್ದ. ಅವನು ಸಂಗ್ರಹಿಸಿದ್ದ ಅಪರೂಪದ ಶಿಲೆಗಳ ಬಗ್ಗೆ ತಮಾಷೆ ಮಾಡಿದ ಕೆಡೆಟ್ ಒಬ್ಬನನ್ನು ಒಮ್ಮೆ ಕಿಟಕಿಯಿಂದಾಚೆಗೆ ಎಸೆದುಬಿಡುವುದರಲ್ಲಿದ್ದ. ಇನ್ನೊಮ್ಮೆ ದೊಡ್ಡ ಅನಾಹುತವೇ ಆಗುವುದರಲ್ಲಿತ್ತು. ಸ್ಟೀವರ್ಡ್‌ನಾಗಿದ್ದ ಅಫೀಸರು ಸುಳ್ಳು ಹೇಳಿದನೆಂದು, ಕಟ್ಲೆಟ್ಟುಗಳು ತುಂಬಿದ್ದ ತಟ್ಟೆಯನ್ನೇ ಅವನ ಮುಖದ ಮೇಲೆ ಎಸೆದು, ಮೇಲೆಬಿದ್ದು, ಕೆಲವರು ಹೇಳುವಂತೆ, ಹೊಡೆದೂಬಿಟ್ಟಿದ್ದ. ಕಾಲೇಜಿನ ಡೈರೆಕ್ಟರು ಸ್ಟೀವರ್ಡ್‌ನನ್ನು ಕೆಲಸದಿಂದ ತೆಗೆದು ವಿಷಯವನ್ನು ಮುಚ್ಚಿಹಾಕಿಬಿಟ್ಟ. ಇಲ್ಲದಿದ್ದರೆ ಸ್ಟೆಪಾನ್ ಹಿಂಬಡ್ತಿ ಪಡೆದು ಸಾಮಾನ್ಯ ಪೇದೆಯಾಗಬೇಕಾಗಿತ್ತು.
ಹದಿನೆಂಟು ತುಂಬುವವೇಳಗೆ ಕಾಲೇಜು ಮುಗಿಸಿದ. ಗಾರ್ಡ್ಸ್‌ಗಳ ಅರಿಸ್ಟೊಕ್ರಾಟಿಕ್ ರೆಜಿಮೆಂಟಿನಲ್ಲಿ ಕಮೀಶನ್ಡ್ ಅಧಿಕಾರಿಯಾದ. ಕಾಲೇಜಿನಲ್ಲಿದ್ದಾಗಲೇ ಅವನು ಚಕ್ರವರ್ತಿ ನಿಕೊಲಾಸ್ ಪಾವ್ಲೊವಿಚ್‌ನ ಕಣ್ಣಿಗೆ ಬಿದ್ದಿದ್ದ. ರೆಜಿಮೆಂಟಿಗೆ ಅಧಿಕಾರಿಯಾಗಿ ಸೇರಿದಮೇಲೂ ಚಕ್ರವರ್ತಿಯು ಸ್ಟೆಪಾನ್‌ನನ್ನು ವಿಶೇಷವಾಗಿ ಗಮನಿಸುತ್ತಿದ್ದ. ಆ ಕಾರಣದಿಂದಲೇ ಸ್ಟೆಪಾನ್ ಶೀಘ್ರದಲ್ಲೇ ಚಕ್ರವರ್ತಿಯ ಏಡ್-ಡಿ-ಕ್ಯಾಂಪ್ ಆಗುತ್ತಾನೆಂದು ಎಲ್ಲರೂ ನಿರೀಕ್ಷಿಸಿದ್ದರು. ಸ್ವತಃ ಸ್ಟೆಪಾನ್‌ಗೂ ಅಂಥ ಆಸೆ ಇತ್ತು. ಕೇವಲ ಉದ್ಯೋಗದಲ್ಲಿ ಮೇಲೆ ಬರಬೇಕೆನ್ನುವ ಆಕಾಂಕ್ಷೆಮಾತ್ರವಲ್ಲ, ಚಕ್ರವರ್ತಿ ನಿಕೊಲಾಸನ ಮೇಲೆ ತೀವ್ರವಾದ ಭಕ್ತಿ, ಅಭಿಮಾನಗಳೂ ಇದ್ದವು. ಚಕ್ರವರ್ತಿಯು ಆಗಾಗ ಮಿಲಿಟರಿ ಕಾಲೇಜಿಗೆ ಬರುತ್ತಿದ್ದ. ಮಿಲಿಟರಿ ಯೂನಿಫಾರಂ ತೊಟ್ಟು, ಚುರುಕು ನಡಿಗೆಯಲ್ಲಿ ಬರುವ, ಎತ್ತರ ನಿಲುವಿನ, ಉಬ್ಬಿದೆದೆಯ, ಚಿಕ್ಕ ಸೈಡ್‌ಬರ್ನುಗಳ, ಬಾಗಿದ ಮೂಗಿನ, ದಟ್ಟ ಮೀಸೆಯ ಚಕ್ರವರ್ತಿಯನ್ನು ಕಂಡಾಗಲೆಲ್ಲ, ಅವನು ತುಂಬು ದನಿಯಲ್ಲಿ ಸೈನಿಕ ವಿದ್ಯಾರ್ಥಿಗಳನ್ನು ಮಾತನಾಡಿಸುವುದನ್ನು ಕೇಳಿದಾಗಲೆಲ್ಲ ಸ್ಟೆಪಾನ್ ಪರವಶನಾಗಿಬಿಡುತ್ತಿದ್ದ. ಅಂಥದೇ ಪರವಶತೆಯನ್ನು ಆತ ಮತ್ತೆ ಅನುಭವಿಸಿದ್ದು ಮುಂದೆ ತನ್ನ ಪ್ರೇಯಸಿಯನ್ನು ಕಂಡಾಗ. ನಿಜ ಹೇಳಬೇಕೆಂದರೆ ಚಕ್ರವರ್ತಿಯ ಬಗ್ಗೆ ಅವನಿಗಿದ್ದ ಭಾವದ ತೀವ್ರತೆ ಇನ್ನೂ ಹೆಚ್ಚಿನದು. ಎಲ್ಲವನ್ನೂ ತ್ಯಾಗಮಾಡಿ, ಪ್ರಾಣವನ್ನು ಬೇಕಾದರೂ ಕೊಟ್ಟು ಚಕ್ರವರ್ತಿಯ ಮೇಲೆ ಇರುವ ಭಕ್ತಿಯನ್ನು ತೋರಿಸಬೇಕು ಅನ್ನುವಂಥ ಭಾವ ಅವನಲ್ಲಿ ಮೂಡುತ್ತಿತ್ತು. ಚಕ್ರವರ್ತಿ ನಿಕೋಲಸನಿಗೂ ಅವನ ಪರವಶತೆಯ ಅರಿವು ಇತ್ತು. ಉದ್ದೇಶಪೂರ್ವಕವಾಗಿಯೇ ಅಂಥ ಭಾವ ಮತ್ತಷ್ಟು ಉದ್ದೀಪನಗೊಳ್ಳುವ ಹಾಗೆ ನಡೆದುಕೊಳ್ಳುತ್ತಿದ್ದ. ಕೆಡೆಟ್ಟುಗಳೆಲ್ಲ ತನ್ನ ಸುತ್ತ ಗುಂಪುಕೂಡಲು ಅವಕಾಶಮಾಡಿಕೊಟ್ಟು ಒಮ್ಮೊಮ್ಮೆ ಮಕ್ಕಳಷ್ಟು ಸರಳವಾಗಿ ಅವರೊಡನೆ ಬೆರೆಯುತ್ತಾ, ಒಮ್ಮೊಮ್ಮೆ ಗೆಳೆಯನಹಾಗೆ ವರ್ತಿಸುತ್ತಾ, ಆಗಾಗ ರಾಜಗಾಂಭೀರ್ಯವನ್ನೂ ತೋರುತ್ತಿದ್ದ. ಸ್ಟೀವರ್ಡನ ಮೇಲೆ ತಟ್ಟೆ ಎಸೆದ ಘಟನೆ ನಡೆದ ನಂತರ ಚಕ್ರವರ್ತಿ ನಿಕೊಲಾಸ್ ಏನೂ ಹೇಳಿರಲಿಲ್ಲ. ಆದರೆ ಸ್ಟೆಪಾನ್ ಅವನ ಬಳಿಗೆ ಬಂದಾಗ ನಾಟಕೀಯವಾಗಿ ಕೈಬೀಸುತ್ತಾ ಅವನು ಹೋಗಬಹುದು ಎಂದು ಸೂಚಿಸಿದ. ಹೊರಟಾಗ, ಹುಬ್ಬು ಗಂಟಿಕ್ಕಿಕೊಂಡು, ಹುಷಾರು ಎಂಬಂತೆ ತೋರುಬೆರಳು ಆಡಿಸುತ್ತಾ ‘ನಡೆಯುವುದೆಲ್ಲ ನನಗೆ ಗೊತ್ತಾಗುತ್ತದೆ, ಕೆಲವು ಸಂಗತಿಗಳು ನನ್ನವರೆಗೆ ಬರದಿದಿದ್ದರೆ ಒಳ್ಳಯದು, ನನಗೆ ತಿಳಿದ ಸಂಗತಿಗಳೆಲ್ಲ ಇಲ್ಲಿ ಇರುತ್ತವೆ’ ಎಂದೆನ್ನುತ್ತಾ ಎದೆಯಮೇಲೆ ಕೈ ಇಟ್ಟುಕೊಂಡಿದ್ದ.
ಕೆಡೆಟ್ಟುಗಳು ಕಾಲೇಜು ಬಿಡುವ ದಿನ ಬಂದಿತು. ಚಕ್ರವರ್ತಿಯ ಎದುರಿಗೆ ಹಾಜರಾದರು. ಆಗ ಅವನು ಸ್ಟೆಪಾನನ ಅಪರಾಧ ಕುರಿತು ಮತ್ತೇನೂ ಹೇಳದೆ ಎಲ್ಲರನ್ನೂ ಉದ್ದೇಶಿಸಿ "ನೀವೆಲ್ಲರೂ ನಿಷ್ಠೆಯಿಂದ ಚಕ್ರವರ್ತಿಯ, ಮಾತೃಭೂಮಿಯ ಸೇವೆ ಮಾಡಬೇಕು, ನಾನು ಯಾವಾಗಲೂ ನಿಮ್ಮ ಆತ್ಮೀಯ ಗೆಳೆಯನಾಗಿರುತ್ತೇನೆ, ನಿಮಗೆ ಏನಾದರೂ ಅಗತ್ಯವಿದ್ದರೆ ನೇರವಾಗಿ ನನ್ನನ್ನು ಬಂದು ಕಾಣಬಹುದು" ಎಂದು, ಎಲ್ಲ ಸೈನಿಕ ವಿದ್ಯಾರ್ಥಿಗಳಿಗೂ ಹೇಳುವಂತೆಯೇ, ಹೇಳಿದ. ಆ ಮಾತುಗಳನ್ನು ಕೇಳಿ ಕೆಡೆಟ್ಟುಗಳ ಮನಸ್ಸು ಕರಗಿತು. ತಾನು ಮಾಡಿದ ಕೆಲಸವನ್ನು ನೆನೆಸಿಕೊಂಡು ಸ್ಟೆಪಾನನ ಕಣ್ಣು ತುಂಬಿಬಂದವು. "ಚಕ್ರವರ್ತಿಗಾಗಿ ಬದುಕನ್ನೇ ಮೀಸಲಾಗಿಡುತ್ತೇನೆ" ಎಂದು ಮನಸ್ಸಿನಲ್ಲೇ ಆಣೆ ಇಟ್ಟುಕೊಂಡ.
ಸ್ಟೆಪಾನ್ ಕಮಿಶನ್ಡ್ ಅಧಿಕಾರಿಯಾದ. ಅವನ ತಾಯಿ ಮತ್ತು ಅಕ್ಕ ಮೊದಲು ಮಾಸ್ಕೋಗೆ ಹೋದರು. ಅಲ್ಲಿಂದ ತಮ್ಮ ಊರಿನ ಎಸ್ಟೇಟಿಗೆ ತೆರಳಿದರು. ಸ್ಟೆಪಾನ್ ತನ್ನ ಆಸ್ತಿಯಲ್ಲಿ ಅರ್ಧ ಪಾಲನ್ನು ಅಕ್ಕನ ಹೆಸರಿಗೆ ಬರೆದುಕೊಟ್ಟ. ಉಳಿದ ಅರ್ಧದ ಆದಾಯ ಅವನ ಖರ್ಚುವೆಚ್ಚಗಳಿಗೆ ಸರಿಹೋಗುತ್ತಿತ್ತು. ಅವನಿದ್ದದ್ದದ್ದು ಶ್ರೀಮಂತ ಅಧಿಕಾರಿಗಳೇ ಇದ್ದ ಪ್ರತಿಷ್ಠಿತ ರೆಜಿಮೆಂಟು.
ಮೇಲು ನೋಟಕ್ಕೆ ಸ್ಟೆಪಾನ್ ಪ್ರತಿಭಾವಂತನಾದ, ಕೆರಿಯರ್ ರೂಪಿಸಿಕೊಳ್ಳುತ್ತಿರುವ ಸಾಮಾನ್ಯ ಅಧಿಕಾರಿಯಂತೆ ಕಾಣುತ್ತಿದ್ದ. ಆದರೆ ಅವನ ಮನಸ್ಸಿನೊಳಗೆ ಜಟಿಲವಾದ ಹೋರಾಟಗಳು ಸತತವಾಗಿ ನಡೆಯುತ್ತಿದ್ದವು. ತೀರ ಚಿಕ್ಕಂದಿನಿಂದಲೂ ಈ ಹೋರಾಟಗಳು ಅವನೊಳಗೆ ನಡದೇ ಇದ್ದವು. ಅವನ ಮನಸ್ಸು ಬಗೆಬಗೆಯಾಗಿ ಏಗುತ್ತಿದ್ದರೂ ಗುರಿ ಮಾತ್ರ ಒಂದೇ ಆಗಿತ್ತು. ನಾನು ಏನೇ ಮಾಡಿದರೂ ಅದರಲ್ಲಿ ಗೆಲ್ಲಬೇಕು, ಪರಿಪೂರ್ಣತೆ ಸಾಧಿಸಬೇಕು, ನೋಡುವವರಿಗೆ ಆಶ್ಚರ್ಯವಾಗಿ ಹೊಗಳುವಂತಿರಬೇಕು ಅನ್ನುವುದು ಅವನ ಗುರಿಯಾಗಿತ್ತು. ಓದಿನ ವಿಷಯಕ್ಕೆ ಬಂದರೆ ಸದಾ ಪುಸ್ತಕಗಳಲ್ಲಿಯೇ ಮುಳುಗಿ ತರಗತಿಗೆ ಮೊದಲನೆಯವನಾಗಿ, ಮಾದರಿ ವಿದ್ಯಾರ್ಥಿ ಎಂದರೆ ಇವನೇ ಎಂದು ಎಲ್ಲರೂ ಹೊಗಳುವವರೆಗೆ ಅವನಿಗೆ ಸಮಾಧಾನವಿರುತ್ತಿರಲಿಲ್ಲ. ಒಂದು ವಿಷಯ ಕರಗತವಾದಮೇಲೆ ಇನ್ನೊಂದರತ್ತ ತಿರುಗುತ್ತಿದ್ದ. ಕಾಲೇಜಿನಲ್ಲಿ ಫ್ರೆಂಚ್ ಭಾಷೆಯಲ್ಲಿ ಮಾತನಾಡುವಾಗ ಮುಜುಗರ ಅನುಭವಿಸಿ, ಹಠ ತೊಟ್ಟು ಫ್ರೆಂಚನ್ನೂ ರಶಿಯನ್‌ನ ಹಾಗೆಯೇ ಸರಾಗವಾಗಿ ಮಾತಾಡುವುದಕ್ಕೆ ಕಲಿತಿದ್ದ. ಆಮೇಲೆ ಚೆಸ್ ಬಗ್ಗೆ ಆಕರ್ಷಣೆ ಹುಟ್ಟಿ ಅದರಲ್ಲಿ ಪರಿಣತನಾಗಿದ್ದ.
ಚಕ್ರವರ್ತಿಯ ಮತ್ತು ಮಾತೃಭೂಮಿಯ ಸೇವೆಯೇ ಪ್ರಧಾನ ಗುರಿ ಎಂದುಕೊಂಡಿದ್ದರೂ ಸ್ಟೆಪಾನ್‌ನ ಕಣ್ಣೆದುರಿನಲ್ಲಿ ಯಾವಾಗಲೂ ಒಂದಲ್ಲ ಒಂದು ನಿರ್ದಿಷ್ಟ ಗುರಿ ಇದ್ದೇ ಇರುತ್ತಿತ್ತು. ಆ ಗುರಿ ಎಷ್ಟೇ ಕ್ಷುಲ್ಲಕವಾದ್ದದಾದರೂ ಬದುಕಿನ ಪರಮೋದ್ದೇಶ ಅದೇ ಎಂಬಂತೆ ಆ ಗುರಿಯ ಸಾಧನೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುತ್ತಿದ್ದ. ಒಂದು ಗುರಿಯನ್ನು ತಲುಪಿದ ಕೂಡಲೇ ಮತ್ತೊಂದು ಗುರಿ ಅವನ ಹುಟ್ಟಿಕೊಳ್ಳುತ್ತಿತ್ತು. ವಿಶೇಷವಾದ ಮನ್ನಣೆಯನ್ನು ಪಡೆಯಬೇಕು, ಹಾಗೆ ಮನ್ನಣೆಯನ್ನು ಪಡೆಯಲು ಏನಾದರೂ ಸಾಧಿಸಬೇಕು ಅನ್ನುವುದೇ ಅವನ ಬಾಳಿನ ತಿರುಳಾಗಿಬಿಟ್ಟಿತ್ತು. ಕಮೀಶನ್ಡ್ ಅಧಿಕಾರಿಯಾದಮೇಲೆ ತನ್ನ ಸರ್ವಿಸ್ಸಿಗೆ ಸಂಬಂಧಿಸಿದಂತೆ ಪರಿಪೂರ್ಣ ಜ್ಞಾನವನ್ನು ಹೊಂದಲು ತೀರ್ಮಾನಿಸಿ ಬಲು ಬೇಗನೆ ಮಾದರಿ ಅಧಿಕಾರಿಯೆಂದು ಹೆಸರು ಪಡೆದ. ಆದರೂ ಹತೋಟಿಯಿಲ್ಲದ ಅವನ ಕೋಪ ಹಾಗೇ ಉಳಿದಿತ್ತು. ಸ್ವಭಾವತಃ ದುಷ್ಟವಾದ, ಮತ್ತೆ ಅವನ ಬಡ್ತಿಗೂ ಅಡ್ಡಿಯಾಗುವಂಥ ಒಂದೆರಡು ಕೆಲಸಗಳನ್ನು ಮಾಡಿದ್ದ. ಆಮೇಲೆ ತನಗಿರುವ ಶೈಕ್ಷಣಿಕ ಹಿನ್ನಲೆ ಸಾಲದು ಅನ್ನಿಸಿ ಪಟ್ಟು ಹಿಡಿದು ಓದಿ ಓದಿ ಜ್ಞಾನವೃದ್ಧಿಯ ಗುರಿ ಸಾಧಿಸಿದ್ದ. ಹೈ ಸೊಸೈಟಿಯಲ್ಲಿ ಎದ್ದು ಕಾಣಬೇಕೆಂಬ ಹಂಬಲ ಹುಟ್ಟಿ ಬಾಲ್‌ರೂಮ್ ಡಾನ್ಸಿನಲ್ಲಿ ಪರಿಣತನಾಗಿದ್ದ. ಬಲು ಬೇಗನೆ ಹೈ ಸೊಸೈಟಿಯ ಬಾಲ್‌ರೂಮುಗಳಿಗೆ, ಆಹ್ವಾನಿತರಿಗೆ ಮಾತ್ರ ಅನ್ನುವಂಥ ಕೆಲವು ಪರಿಮಿತ ಪಾರ್ಟಿಗಳಿಗೂ ಕರೆ ಬರತೊಡಗಿತು. ಆದರೆ ಮನಸ್ಸಿಗೆ ಸಮಾಧಾನವಿರಲಿಲ್ಲ. ಯಾವಾಗಲೂ ಮೊದಲಿಗನಾಗಿರಬೇಕೆಂಬುದು ಅವನ ಆಸೆ. ಸೊಸೈಟಿಯಲ್ಲಿ ಅವನಿಗೆ ಪ್ರಥಮ ಮನ್ನಣೆ ಇನ್ನೂ ಸಿಕ್ಕಿರಲಿಲ್ಲ.
ಆಗಿನ ಕಾಲದ ಉನ್ನತ ಸಮಾಜದಲ್ಲಿ, ಎಲ್ಲ ಕಾಲದ ಉನ್ನತ ಸಮಾಜಗಳಲ್ಲಿರುವಂತೆಯೇ, ನಾಲ್ಕು ಬಗೆಯ ಜನವರ್ಗವಿತ್ತೆಂದು ನನ್ನ ಭಾವನೆ--ಆಸ್ಥಾನಕ್ಕೆ ಪ್ರವೇಶವಿದ್ದ ಶ್ರೀಮಂತರ ವರ್ಗ, ಶ್ರೀಮಂತರಲ್ಲದಿದ್ದರೂ ಆಸ್ಥಾನಿಕರ ಕುಟುಂಬಗಳ ವಾತಾವರಣದಲ್ಲಿ ಬೆಳೆದು ಶಿಕ್ಷಿತರಾದವರ ವರ್ಗ, ಆಸ್ಥಾನಕ್ಕೆ ಸಂಬಂಧಪಟ್ಟ ಕುಟುಂಬಗಳಿಗೆ ಒಪ್ಪುವಂತೆ ಇರಲು ಬಯಸುವ ಶ್ರೀಮಂತರ ವರ್ಗ, ಶ್ರೀಮಂತರೂ ಅಲ್ಲದ, ಆಸ್ಥಾನಿಕರೂ ಅಲ್ಲದ ಆದರೆ ಅವರಿಬ್ಬರಿಗೂ ಪ್ರಿಯವಾಗಲು ಬಯಸುವವರ ವರ್ಗ. ಸ್ಟೆಪಾನ್ ಮೊದಲ ವರ್ಗಕ್ಕೆ ಸೇರಿದವನಲ್ಲ, ಆದರೆ ಕೊನೆಯ ಎರಡು ವರ್ಗಗಳ ಜನರ ಆಹ್ವಾನ, ಆದರಗಳಿಗೆ ಪಾತ್ರನಾಗಿದ್ದ. ಹೈಸೊಸೈಟಿಗೆ ಕಾಲಿಡುವಾಗಲೇ ತಾನು ಯಾರಾದರೊಬ್ಬ ಉನ್ನತ ವರ್ಗದ ಮಹಿಳೆಯೊಡನೆ ಸಂಬಂಧ ಬೆಳೆಸಿಕೊಳ್ಳಬೇಕು ಎಂಬ ಗುರಿಯನ್ನು ಇಟ್ಟುಕೊಂಡಿದ್ದ. ಆ ಗುರಿ ಅವನಿಗೇ ಆಶ್ಚರ್ಯವಾಗುವಷ್ಟು ಬೇಗ ನೆರವೇರಿತು. ಆದರೂ ಅವನಿದ್ದದ್ದು ಉನ್ನತ ವರ್ಗದ ಕೆಳ ಹಂತದಲ್ಲಿ, ಅತಿ ಉನ್ನತ ವರ್ಗದ ಜನರ ನಡುವೆ ಆತ ಆಗಾಗ ಬೆರೆಯುತ್ತಿದ್ದ. ಅವನನ್ನು ಅವರೆಲ್ಲ ಸೌಜನ್ಯದಿಂದಲೇ ಕಾಣುತ್ತಿದ್ದರು. ಅವರ ವರ್ತನೆ ಸೂಕ್ಷ್ಮ ನೋದಿದರೆ ನಾನು ಅವರಲ್ಲಿ ಒಬ್ಬನಲ್ಲ, ಹೊರಗಿನವನು ಅನ್ನಿಸುತ್ತಿತ್ತು ಸ್ಟೆಪಾನ್‌ಗೆ. ಆ ಅತಿ ವಿರಳ ಸ್ತರಕ್ಕೆ ಸೇರಿದನಾಗಲು ಬಯಸಿದ. ಆ ಗುರಿಯನ್ನು ಈಡೇರಿಸಿಕೊಳ್ಳುವುದಕ್ಕೆ ಚಕ್ರವರ್ತಿಯ ಏಡ್-ಡಿ-ಕ್ಯಾಂಪ್ ಆಗಬೇಕಿತ್ತು--ಹೇಗಿದ್ದರೂ ಇಷ್ಟರಲ್ಲೆ ಆಗುವವನಿದ್ದ, ಅಥವಾ ಆ ವಿರಳ ಗುಂಪಿನ ಯಾರನ್ನಾದರೂ ಮದುವೆಯಾಗಬೇಕಿತ್ತು. ಹಾಗೆ ಮದುವೆಯಾಗುವುದೇ ಸರಿ ಎಂದು ನಿರ್ಧರ ಮಾಡಿದ. ಅದಕ್ಕಾಗಿ ಆಸ್ಥಾನಕ್ಕೆ ಸೇರಿದ ಚೆಲುವೆಯಾದ ಒಬ್ಬ ಹುಡುಗಿಯನ್ನು ಆಯ್ದುಕೊಂಡ. ಅವಳ ಹೆಸರು, ಕೌಂಟೆಸ್ ಮೇರಿ ಕೊರತ್ಕೊವಾ. ಸ್ಟೆಪಾನ್ಸ್‌ಕಿ ಸೇರಲು ಬಯಸಿದ್ದ ಅತ್ಯುನ್ನತವರ್ಗಕ್ಕೆ ಸೇರಿದವಳು. ಉನ್ನತ ವರ್ಗದ ಅನೇಕರು ಅವಳ ಕೈ ಹಿಡಿಯಲು ಹಾತೊರೆಯುತ್ತಿದ್ದರು. ಕೇವಲ ಕೆರಿಯರ್ ಬೆಳೆಸಿಕೊಳ್ಳುವುದು ಮಾತ್ರ ಸ್ಟೆಪಾನ್‌ನ ಉದ್ದೇಶವಾಗಿರಲಿಲ್ಲ. ಆಕೆಯ ಚೆಲುವು, ಆಕರ್ಷಣೆಗಳು, ಅಗಾಧವಾಗಿದ್ದವು. ಅವಳ ಬಗ್ಗೆ ಪ್ರೀತಿ ಹುಟ್ಟಿತ್ತು. ಮೊದಮೊದಲು ಆಕೆ ಅವನ ಬಗ್ಗೆ ಅಂಥ ಆಸಕ್ತಿಯನ್ನೇನೂ ತೋರಿಸಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಬದಲಾಗಿಬಿಟ್ಟಳು. ಅವಳ ಮನಸ್ಸು ಮೃದುವಾಯಿತು. ಆಕೆಯ ತಾಯಿ ಕೂಡ ಸ್ಟೆಪಾನ್ ಮನೆಗೆ ಬರಬೇಕೆಂದು ಒತ್ತಾಯಮಾಡಿ ಕರೆಯತೊಡಗಿದಳು.
ಸ್ಟೆಪಾನ್ ಮದುವೆಯ ಪ್ರಸ್ತಾಪವನ್ನು ಮುಂದಿಟ್ಟ, ಒಪ್ಪಿಗೆಯೂ ಸಿಕ್ಕಿಬಿಟ್ಟಿತು. ಇಷ್ಟು ಸರಾಗವಾಗಿ ಮದುವೆಯ ನಿಶ್ಚಯವಾಗಿದ್ದು ಕಂಡು ಅವನಿಗೇ ಆಶ್ಚರ್ಯವಾಗಿತ್ತು. ತಾಯಿ, ಮಗಳ ವರ್ತನೆಯಲ್ಲಿ ಏನೋ ಅಸಹಜವಾದ್ದು ಇದೆ, ವಿಚಿತ್ರವಾದ್ದು ಇದೆ ಅನ್ನಿಸಿತು. ಆದರೆ ಸ್ಟೆಪಾನ್ ಪ್ರೀತಿಯಲ್ಲಿ ಮುಳುಗಿಬಿಟ್ಟಿದ್ದ, ಕುರುಡನಾಗಿದ್ದ. ಇಡೀ ಊರಿಗೆ ಗೊತ್ತಿದ್ದ ಸಂಗತಿ ಅವನ ಮನಸ್ಸಿಗೆ ಬರಲೇ ಇಲ್ಲ. ಅವನು ಮದುವೆಯಾಗಲಿದ್ದ ಹೆಣ್ಣು ಕಳೆದ ವರ್ಷವಷ್ಟೆ ಚಕ್ರವರ್ತಿ ನಿಕಾಲಸ್‌ನ ಪ್ರೇಯಸಿಯಾಗಿದ್ದಳು.
(ಮುಂದುವರೆಯುವುದು)
ಎರಡು
ಮದುವೆಗೆ ಹದಿನೈದು ದಿನ ಮುಂಚೆ ಸ್ಟೆಪಾನ್, ತ್ಸಾರ್ಸಕೊ ಸೆಲೊ ಎಂಬ ಊರಲ್ಲಿದ್ದ, ಹೆಣ್ಣಿನ ಮನೆಗೆ ಹೋಗಿದ್ದ. ಮೇ ತಿಂಗಳು. ಬಿಸಿಲು, ಶಖೆ. ಇಬ್ಬರೂ ತೋಟದಲ್ಲೆಲ್ಲಾ ಅಡ್ಡಾಡಿಕೊಂಡು ಬಂದು ದಟ್ಟ ಮರಗಳ ನೆರಳಿನಲ್ಲಿದ್ದ ಬೆಂಚಿನ ಮೇಲೆ ಕೂತಿದ್ದರು. ಕೌಂಟೆಸ್ ಮೇರಿ ಅವತ್ತು ಅಚ್ಚ ಬಿಳಿಯ ಇಂಡಿಯಾ ಮಸ್ಲಿನ್ ಬಟ್ಟೆ ತೊಟ್ಟಿದ್ದಳು. ಈಗ ತಲೆ ಬಗ್ಗಿಸಿಕೊಂಡು, ಆಗ ಒಂದಿಷ್ಟೇ ತಲೆ ಎತ್ತಿ, ಎಲ್ಲಿ ಯಾವ ಮಾತಿನಿಂದ ತನ್ನ ಯಾವ ಭಂಗಿಯಿಂದ ಅವಳ ಮೃದುಮನಸ್ಸಿಗೆ ನೋವಾಗುವುದೋ ದೇವತೆಯಂಥ ಅವಳ ಪರಿಶುದ್ಧತೆ ಮುಕ್ಕಾಗುವುದೋ ಎಂದು ತೀರ ಮೃದುವಾಗಿ, ತೀರ ಪ್ರೀತಿಯಿಂದ ಮಾತಾಡುತ್ತಿದ್ದ ಆಳೆತ್ತರದ ಸುಂದರ ಯುವಕನತ್ತ ಕುಡಿನೋಟ ಬೀರುತ್ತಾ ಮುಗ್ಧತೆ, ಪ್ರೀತಿಗಳ ಪ್ರತಿ ರೂಪದಂತೆ ಕಾಣುತ್ತಿದ್ದಳು.
ಸ್ಟೆಪಾನ್ ಸಾವಿರದ ಎಂಟುನೂರ ನಲವತ್ತರ ದಶಕದ ಯುವಕ. ಈಗ ಅಂಥವರು ಕಾಣುವುದೇ ಇಲ್ಲ. ಆ ಕಾಲದ ಯುವಕರು ಕಾಮದ ವಿಷಯದಲ್ಲಿ ತಮ್ಮ ಅಶುದ್ಧತೆಯನ್ನು ಒಪ್ಪಿಕೊಂಡರೂ ಅದರಲ್ಲೇನೂ ತಪ್ಪಿಲ್ಲವೆಂದೂ ಆದರೆ ತಾವು ಮದುವೆಯಾಗುವ ಹುಡುಗಿ ಮಾತ್ರ ದೈವಿಕವೆಂಬಷ್ಟು ಶುದ್ಧವಾಗಿ, ಆದರ್ಶ ಕನ್ಯೆಯಾಗಿ ಇರಬೇಕೆಂದೂ ಬಯಸುತ್ತಿದ್ದರು. ತಮ್ಮ ಸಾಮಾಜಿಕ ವರ್ಗಕ್ಕೆ ಸೇರಿದ ಅವಿವಾಹಿತ ಹುಡುಗಿಯರನ್ನು ಅಚ್ಚಕನ್ನೆಯರೆಂದೇ ಭಾವಿಸುತ್ತಿದ್ದರು. ಅದು ಸುಳ್ಳು ದೃಷ್ಟಿಕೋನವಾಗಿದ್ದರೂ, ಗಂಡಸರ ಸ್ವಚ್ಛಂದತೆ ಹಾನಿಕರವಾಗಿದ್ದರೂ ಹೆಂಗಸರ ಬಗ್ಗೆ ಇದ್ದ ಆ ಹಳೆಯ ದೃಷ್ಟಿ ಈಗಿನ ಯುವಕರು ಪ್ರತಿ ಹೆಣ್ಣೂ ಸಂಭೋಗವನ್ನು ಬಯಸುವ ಪ್ರಾಣಿ ಎಂದು ತಿಳಿದಿರುವುದಕ್ಕಿಂತ ಮೌಲಿಕವಾದದ್ದು ಎಂದೇ ತೋರುತ್ತದೆ. ಗಂಡಸರು ತಮ್ಮನ್ನು ಅರಾಧಿಸುತ್ತಾರೆಂದು ಗೊತ್ತಿದ್ದ ಹೆಂಗಸರು ಬಲುಮಟ್ಟಿಗೆ ದೇವತೆಯರಂತೆಯೇ ಇರುವುದಕ್ಕೆ ಪ್ರಯತ್ನಿಸುತ್ತಿದ್ದರು.
ಸ್ಟೆಪಾನ್ ಕೂಡ ತಾನು ಮದುವೆಯಾಗಲಿರುವ ಹೆಣ್ಣನ್ನೂ ಅಚ್ಚಕನ್ಯೆಯೆಂದೇ ಭಾವಿಸಿದ್ದ. ಅಂದು ಅವನ ಮನಸ್ಸಿನಲ್ಲಿ ವಿಶೇಷವಾಗಿ ಪ್ರೀತಿ ತುಂಬಿ ಬಂದಿತ್ತು. ಆದರೆ ಆ ಪ್ರೀತಿಯಲ್ಲಿ ದೇಹ ಸುಖದ ಬಯಕೆ ಇರಲಿಲ್ಲ. ತನ್ನ ಕೈಗೆ ಸಿಗಲಾರದ ದೇವಿಯೊಬ್ಬಳ ಬಗ್ಗೆ ಇರುವಂಥ ಆರಾಧನೆಯ ಭಾವವಿತ್ತು.
ಅವಳೆದುರು ನೆಟ್ಟಗೆ ಎದ್ದು ನಿಂತು, ನೆಲಕ್ಕೆ ತನ್ನ ಕತ್ತಿಯನ್ನು ಊರಿ, ಅದರ ಮೇಲೆ ಎರಡೂ ಕೈ ಇಟ್ಟುಕೊಂಡು ಹೇಳಿದ:
‘ಬದುಕಿನಲ್ಲಿ ಎಂಥ ಸುಖ ಇದೆಯೆಂದು ಇವತ್ತು ನನಗೆ ತಿಳಿಯಿತು! ಅದಕ್ಕೆ ನೀನು...ನೀವು ಕಾರಣ.’
ಅವನ ಮುಖದ ಮೇಲೆ ಹಿಂಜರಿಕೆಯ ಮುಗುಳುನಗುವಿತ್ತು. ಆಕೆಯನ್ನು ನೀನು ಎಂದು ಕರೆಯುವಷ್ಟು ಸಲುಗೆ ಇನ್ನೂ ಬೆಳೆದಿರಲಿಲ್ಲ. ನೈತಿಕವಾಗಿ ತನಗಿಂತ ಪರಿಶುದ್ಧಳಾದ ದೇವತೆಯಂಥ ಹೆಣ್ಣನ್ನು ನೀನು ತಾನು ಎಂದು ಮಾತನಾಡಿಸುವದಕ್ಕೆ ಹಿಂಜರಿಯುತ್ತಿದ್ದ.
‘ನಾನು ಎಂಥವನೆಂದು ನಿನ್ನಿ..ನಿಮ್ಮಿಂದ ನನಗೆ ಗೊತ್ತಾಯಿತು. ಅದಕ್ಕೆ ಥ್ಯಾಂಕ್ಸ್ ಹೇಳಬೇಕು. ನಾನು ಅಂದುಕೊಂಡದ್ದಕ್ಕಿಂತ ಒಳ್ಳೆಯವನಾಗಿದ್ದೇನೆ ಎಂದು ಈಗ ಗೊತ್ತಾಗಿದೆ.’
‘ನೀವು ತುಂಬ ಒಳ್ಳೆಯವರೆಂದು ನನಗೆ ಮೊದಲೇ ಗೊತ್ತಿತ್ತು. ಅದಕ್ಕೇ ನಿಮ್ಮನ್ನು ಲವ್ ಮಾಡಿದೆ.’
ಹತ್ತಿರದಲ್ಲೇ ಎಲ್ಲೋ ಕೋಗಿಲೆ ಕೂಗಿತು. ಒಂದಿಷ್ಟೆ ಗಾಳಿ ಬೀಸಿ ಎಲೆಗಳು ಮರ್ಮರ ಸದ್ದುಮಾಡಿದವು.
ಅವನು ಅವಳ ಮುಂಗೈ ಹಿಡಿದು ಮುತ್ತಿಟ್ಟ. ಅವನ ಕಣ್ಣು ತುಂಬಿ ಬಂದವು. ನಾನು ಲವ್ ಮಾಡುತ್ತಿದ್ದೇನೆ ಎಂದು ಹೇಳಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತಿದ್ದಾನೆ ಎಂದು ಅವಳಿಗೆ ತಿಳಿಯಿತು. ಅವನು ಅಲ್ಲೇ ಒಂದು ಹತ್ತು ಹೆಜ್ಜೆ ಅಡ್ಡಾಡಿದ. ಮತ್ತೆ ಅವಳ ಬಳಿಗೆ ಬಂದು ಕುಳಿತುಕೊಂಡ.
‘ನಿನ...ನಿಮಗೆ ಹೇಳಬೇಕು. ಮೊದಲು ನಾನು ಸ್ವಾರ್ಥಿಯಾಗಿದ್ದೆ. ಅದಕ್ಕೇ ನಿಮ್ಮನ್ನು ಮದುವೆಯಾಗಿ ಸಮಾಜದಲ್ಲಿ ಗಣ್ಯನಾಗಲು ಬಯಸಿದ್ದೆ. ಆದರೆ ನಿಮ್ಮ ಪರಿಚಯ ಬೆಳೆದಂತೆ ಅವೆಲ್ಲ ತೀರ ಸಾಮಾನ್ಯ ಆಸೆಗಳು ಅನ್ನಿಸಿಬಿಟ್ಟವು. ನಿಮ್ಮನ್ನು ಬಿಟ್ಟರೆ ಬೇರೆ ಏನೂ ಮುಖ್ಯವಲ್ಲ ಅನ್ನಿಸಿತು. ನನ್ನ ಮೇಲೆ ಕೋಪವಿಲ್ಲ ತಾನೇ?’
ಅವಳು ಮಾತಾಡಲಿಲ್ಲ. ಅವನ ಕೈಯ ಮೇಲೆ ಕೈ ಇಟ್ಟಳು. ಅವಳಿಗೆ ಕೋಪವಿಲ್ಲ ಎಂದು ಅರ್ಥಮಾಡಿಕೊಂಡ.
‘ನೀವು ಹೇಳಿದಿರಿ...’ ಕೊಂಚ ತಡವರಿಸಿದ. ಕೇಳಬೇಕೋ ಬೇಡವೋ ಅಂದುಕೊಳ್ಳುತ್ತಲೇ, ‘ನೀವು ಹೇಳಿದಿರಿ, ನನ್ನ ಲವ್ ಮಾಡುತ್ತೇನೆ ಅಂತ. ಆದರೂ, ಕ್ಷಮಿಸಿ,...ಇದು ಅಪನಂಬಿಕೆಯಲ್ಲ...ನೀವು ಯಾಕೋ ಡಿಸ್ಟರ್ಬ್ ಆಗಿದ್ದೀರಿ, ಕಳವಳ ಇದೆ ಅನ್ನಿಸುತ್ತದೆ. ಯಾಕೆ?’ ಎಂದು ಕೇಳಿದ.
‘ಹೇಳಿದರೆ ಈಗಲೇ ಹೇಳಬೇಕು’ ಅಂದುಕೊಂಡಳು. ‘ಹೇಗಿದ್ದರೂ ಗೊತ್ತಾಗುತ್ತದೆ. ಆದರೆ ಈಗ ಅವನು ನನ್ನ ಕೈ ಬಿಡುವುದಿಲ್ಲ. ದೇವರೇ! ನನ್ನನ್ನು ಬೇಡ ಅಂದುಬಿಟ್ಟರೆ ಏನು ಗತಿ!’ ಎಂದು ಯೋಚಿಸುತ್ತಾ ಆಜಾನುಬಾಹು ಸದೃಢ ಮನೋಹರ ಯುವಕನತ್ತ ಪ್ರೀತಿ ತುಂಬಿದ ನೋಟ ಬೀರಿದಳು. 'ನಿಕೊಲಾಸನು ಚಕ್ರವರ್ತಿಯಾಗಿರದಿದ್ದರೆ ಅವನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಆದರೆ ಈ ಯುವಕನ ಪ್ರೀತಿಯನ್ನು ಬಿಟ್ಟು ಹೇಗಿರುವುದು' ಎಂದುಕೊಂಡಳು.
"ಕೇಳಿ. ಯಾಕೆ ಡಿಸ್ಟರ್ಬ್ ಆಗಿದ್ದೇನೆ ಎಂದಿರಲ್ಲಾ? ನಿಜ ಹೇಳಿಬಿಡುತ್ತೇನೆ. ಈಗಾಗಲೇ ಒಬ್ಬರೊಡನೆ ಪ್ರೀತಿಮಾಡಿದ್ದೇನೆ."
ಅವನ ಕೈಯ ಮೇಲೆ ಮತ್ತೆ ಕೈ ಇಟ್ಟಳು. ಆ ಸ್ಪರ್ಶದಲ್ಲಿ ಯಾಚನೆ ಇತ್ತು. ಅವನು ಸುಮ್ಮನಿದ್ದ.
‘ಯಾರು ಎಂದು ಹೇಳಬೇಕೆ? ಚಕ್ರವರ್ತಿ.’
‘ಚಕ್ರವರ್ತಿಯನ್ನು ನಾವೆಲ್ಲರೂ ಪ್ರೀತಿಸುತ್ತೇವೆ. ನೀವು ಚಿಕ್ಕ ಹುಡುಗಿಯಾಗಿ ಸ್ಕೂಲಿನಲ್ಲಿದ್ದಾಗ..’
‘ಸ್ಕೂಲಿನಲ್ಲಿ ಅಲ್ಲ. ಆಮೇಲೆ. ಅವರ ಮೇಲೆ ವ್ಯಾಮೋಹ ಹುಟ್ಟಿಬಿಟ್ಟಿತ್ತು. ಆದರೆ ಈಗಿಲ್ಲ.’
‘ಅಂದರೆ?’
‘ಬರೀ ಪ್ರೀತಿಯಲ್ಲ’, ಆಕೆ ಮುಖ ಮುಚ್ಚಿಕೊಂಡಳು.
‘ಚಕ್ರಚರ್ತಿಗೆ ಒಪ್ಪಿಸಿಕೊಂಡುಬಿಟ್ಟಿರಾ?’
ಸುಮ್ಮನಿದ್ದಳು.
‘ಚಕ್ರವರ್ತಿಯ ಸೂಳೆ?’
ಸುಮ್ಮನಿದ್ದಳು.
ತಟ್ಟನೆ ಎದ್ದು ನಿಂತ. ತುಟಿಗಳು ಅದುರುತ್ತಿದ್ದವು. ಮುಖ ಹೆಣದ ಮುಖದ ಹಾಗೆ ಆಗಿತ್ತು. ಇದ್ದಕ್ಕಿದ್ದ ಹಾಗೆ ನೆವ್ಸ್ಕಿಯಲ್ಲಿ ಸಿಕ್ಕಿದ್ದಾಗ ಚಕ್ರವರ್ತಿಯು ಮದುವೆಯ ನಿಶ್ಚಿತಾರ್ಥ ಆದದ್ದಕ್ಕೆ ಅಭಿನಂದನೆ ಹೇಳಿ ಕಂಗ್ರಾಟ್ಸ್ ಅಂದದ್ದು ನೆನಪಿಗೆ ಬಂದಿತು.
‘ದೇವರೇ, ದೇವರೇ, ಎಂಥ ಕೆಲಸಮಾಡಿಬಿಟ್ಟೆ! ಸ್ಟಿವಾ!’
‘ಮುಟ್ಟಬೇಡ ನನ್ನನ್ನ! ಮುಟ್ಟಬೇಡ ಅಂದೆ! ದೇವರೇ!’ ಅನ್ನುತ್ತಾ ದಾಪುಗಾಲು ಹಾಕಿಕೊಂಡು ಮನೆಗೆ ಹೊರಟುಹೋದ. ಹಾಲ್‌ನಲ್ಲಿ ಮೇರಿಯ ತಾಯಿ ಕಂಡಳು.
‘ಏನಾಯಿತು ರಾಜಕುಮಾರ? ನಾನು..’ ಅವನ ಮುಖ ನೋಡಿದವಳೇ ಸುಮ್ಮನಾದಳು. ಕೋಪದಿಂದ ಅವನ ಮುಖ ಕೆಂಪಾಗಿತ್ತು.
‘ನಿಮಗೆ ಗೊತ್ತಿತ್ತು. ಆದರೂ ಅವರ ವ್ಯವಹಾರ ಬಚ್ಚಿಡುವುದಕ್ಕೆ ನನ್ನನ್ನು ಗುರಾಣಿಯ ಹಾಗೆ ಬಳಸಿಕೊಂಡಿರಿ. ನೀವು ಗಂಡಸಾಗಿದ್ದಿದ್ದರೆ...’ ಅನ್ನುತ್ತಾ ಮುಷ್ಠಿ ಬಿಗಿದು ಕೈ ಎತ್ತಿದ. ತಟ್ಟನೆ ಅವಳಿಗೆ ಬೆನ್ನು ತಿರುಗಿಸಿ ಮನೆಯಿಂದಾಚೆಗೆ ಓಡಿಹೋದ. ಮೇರಿಯ ಪ್ರಿಯಕರ ಯಾರೇ ಆಗಿದ್ದಿದ್ದರೂ ಕೊಂದುಬಿಡುತ್ತಿದ್ದ. ಆದರೆ ಅವನು ಅಷ್ಟೊಂದು ಭಕ್ತಿ ಇಟ್ಟುಕೊಂಡಿದ್ದ ಚಕ್ರವರ್ತಿ.
ಮಾರನೆಯ ದಿನ ರಜೆಗೆ ಅರ್ಜಿ ಹಾಕಿ ಜೊತೆಗೆ ರಾಜೀನಾಮೆಯ ಪತ್ರವನ್ನೂ ಕಳಿಸಿಬಿಟ್ಟ. ಯಾರ ಮುಖವನ್ನೂ ನೋಡಲು ಇಷ್ಟವಿಲ್ಲದೆ ಕಾಯಿಲೆಯಾಗಿದೆ ಎಂದು ಹೇಳಿ ತನ್ನ ಎಸ್ಟೇಟಿಗೆ ಹೋಗಿಬಿಟ್ಟ. ಬೇಸಗೆ ಪೂರ್ತಿ ಅಲ್ಲೇ ಇದ್ದು ಎಲ್ಲ ವ್ಯವಹಾರ ಸರಿಪಡಿಸಿ, ರಜೆ ಮುಗಿದ ಮೇಲೆ ಪೀಟರ್ಸ್‌ಬರ್ಗಿಗೆ ಹೋಗುವ ಬದಲಾಗಿ ಸನ್ಯಾಸಿಯಾಗಬೇಕೆಂದು ನಿರ್ಧರಿಸಿ ಮಠವೊಂದಕ್ಕೆ ಸೇರಿಕೊಂಡುಬಿಟ್ಟ. ಅವನ ತಾಯಿ ಮಠದ ವಿಳಾಸಕ್ಕೇ ಒಂದು ಕಾಗದ ಬರೆದು ಇಂಥ ದುಡುಕಿನ ತೀರ್ಮಾನ ಬೇಡ ಎಂದು ಕೋರಿಕೊಂಡಳು. 'ದೇವರ ಸೇವೆಗಾಗಿ ಕರೆ ಬಂದಿದೆ, ದೇವರ ಸೇವೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ' ಎಂದು ಉತ್ತರ ಬರೆದ. ಅವನಷ್ಟೇ ನಾನತ್ವ ಮತ್ತು ಮಹತ್ವಾಕಾಂಕ್ಷೆ ಇದ್ದ ವಾರ್ವರಾಗೆ ಮಾತ್ರ ತಮ್ಮನ ಮನಸ್ಥಿತಿ ಅರ್ಥವಾಗಿತ್ತು.
ಅವಳ ಪ್ರಕಾರ ತಾವೇ ದೊಡ್ಡವರು ಎಂದುಕೊಂಡಿದ್ದ ಎಲ್ಲರಿಗಿಂತ ತಾನು ಮೇಲು ಎಂದು ತೋರಿಸುವ ಸಲುವಾಗಿಯೇ ಅವನು ಸನ್ಯಾಸಿಯಾಗಿದ್ದ. ಅವಳು ಅರ್ಥಮಾಡಿಕೊಂಡದ್ದು ಸರಿಯಾಗಿಯೇ ಇತ್ತು. ಮಿಕ್ಕವರೆಲ್ಲ ಮುಖ್ಯವೆಂದುಕೊಂಡಿದ್ದ, ತಾನೂ ಸೈನಿಕನಾಗಿದ್ದಾಗ ಬಲು ಮುಖ್ಯವೆಂದು ಭಾವಿಸಿದ್ದ, ಸಂಗತಿಗಳೆಲ್ಲ ತಿರಸ್ಕಾರ ಯೋಗ್ಯ ಎಂದು ತೋರಿಸುವ ಸಲುವಾಗಿಯೇ ಅವನು ಸನ್ಯಾಸಿಯಾಗಿದ್ದ. ಆದರೆ ವಾರ್ವರಾ ಅಂದುಕೊಂಡಂತೆ ಇದೊಂದೇ ಸಂಗತಿ ಅವನ ತೀರ್ಮಾನಕ್ಕೆ ಕಾರಣವಾಗಿರಲಿಲ್ಲ. ವಾರ್ವರಾಗೆ ತಿಳಿದಿರದಿದ್ದ ತೀವ್ರವಾದ ಧಾರ್ಮಿಕ ಭಾವನೆಯೂ ಸ್ಟೆಪಾನ್‌ನಲ್ಲಿತ್ತು. ಅದು ತಾನು ಎಲ್ಲರಿಗಿಂತ ಮಿಗಿಲಾಗಬೇಕೆಂಬ ಆಸೆಯೊಡನೆ ಬೆರೆತಿತ್ತು. ದೇವತೆಯಂತೆ ಪರಿಶುದ್ಧಳು ಎಂದು ಮೇರಿಯ ಬಗ್ಗೆ ಅಂದುಕೊಂಡಿದ್ದದ್ದು ಕೇವಲ ಭ್ರಮೆ ಎಂದು ತಿಳಿದಾಗ ಮನಸ್ಸಿಗೆ ಘಾಸಿಯಾಗಿ ಹತಾಶೆಯಲ್ಲಿ ಮುಳುಗಿಹೋದ. ಆ ಹತಾಶೆಯೇ ಅವನನ್ನು ದೇವರತ್ತ ಕರೆದೊಯ್ದಿತು. ಬಾಲ್ಯದಲ್ಲಿ ಅವನ ಮನಸ್ಸಿನಲ್ಲಿ ಬೇರುಬಿಟ್ಟಿದ್ದ ದೇವರ ಬಗೆಗಿನ ವಿಶ್ವಾಸ ಹಾಳಾಗದೆ ಹಾಗೇ ಉಳಿದಿತ್ತು.
(ಮುಂದುವರೆಯುವುದು)
ಮೂರು
ಇತರರ ಪರವಾಗಿ ಮಾತೆ ಮೇರಿಯನ್ನು ಪ್ರಾರ್ಥಿಸುವ ಹಬ್ಬದ ದಿನ ಸ್ಟೆಪಾನ್ ಮಠಕ್ಕೆ ಸೇರಿಕೊಂಡ. ಆ ಮಠದ ಹಿರಿಯ ಸನ್ಯಾಸಿ ಹುಟ್ಟಿನಿಂದ ಉನ್ನತ ವರ್ಗಕ್ಕೆ ಸೇರಿದವನು, ವಿದ್ವಾಂಸ, ಲೇಖಕ ಮತ್ತು ಗುರುಸ್ಥಾನ*ದಲ್ಲಿದ್ದವನು. ವಲಾಛಿಯಾ* ದಿಂದ ಬಂದ ಸನ್ಯಾಸಿಗಳ ಪರಂಪರೆಗೆ ಸೇರಿದವನು. ಈ ಸನ್ಯಾಸಿಗಳು ಗುರುಗಳಿಗೆ ಅತೀವ ನಿಷ್ಠೆಯಿಂದ ಇದ್ದು ತಮ್ಮ ಗುರುಪರಂಪರೆಯನ್ನು ಸತತವಾಗಿ ಮುಂದುವರೆಸಿಕೊಂಡು ಬಂದವರಾಗಿದ್ದರು. ಈ ಮಠದ ಗುರುವು ಪಾಸ್ಸಿ ವೆಲಿಚ್ಕೊವ್ಸ್‌ಕಿಯ ಶಿಷ್ಯನಾದ ಲಿಯೊನಿಡ್‌ನ ಶಿಷ್ಯನಾದ ಮಾಕಾರಿಯಸ್‌ನ ಶಿಷ್ಯನಾದ, ಪ್ರಸಿದ್ಧ ಗುರು ಆಂಬ್ರೋಸನ ಶಿಷ್ಯನಾಗಿದ್ದ. ಈ ಅಬಾಟನಿಗೆ ಶರಣಾಗಿ ಸ್ಟೆಪಾನ್ ಅವನನ್ನು ತನ್ನ ಮಾರ್ಗದರ್ಶಕ ಗುರು ಎಂದು ಒಪ್ಪಿಕೊಂಡ.
ಮಠಕ್ಕೆ ಸೇರಿದ್ದರಿಂದ ತನ್ನ ಬದುಕು ಮಿಕ್ಕ ಲೌಕಿಕರಿಗಿಂತ ಮಿಗಿಲು ಎಂಬ ಭಾವ ಸ್ಟೆಪಾನ್ಸ್‌ಕಿಯಲ್ಲಿ ಮೂಡಿತ್ತು. ಕೈಗೆತ್ತಿಕೊಂಡ ಎಲ್ಲ ಕಾರ್ಯಗಳಲ್ಲಿ ಪರಿಪೂರ್ಣತೆಯನ್ನು ಸಾಧಿಸಬೇಕೆಂಬ ಹಂಬಲ ಈಗ ಅಂತರಂಗದ ಮತ್ತು ಬಹಿರಂಗದ ಪರಿಪೂರ್ಣತೆಯನ್ನು ಸಾಧಿಸುವ ಛಲದ ರೂಪತಳೆದಿತ್ತು. ಅವನು ಸೈನಿಕನಾಗಿದ್ದಾಗ ಯಾರೂ ನನ್ನತ್ತ ಬೆಟ್ಟು ತೋರಿಸದಿದ್ದರೆ ಸಾಕು ಅಂದುಕೊಳ್ಳುವ ಅಧಿಕಾರಿಯಷ್ಟೇ ಆಗಿರಲಿಲ್ಲ. ಕರ್ತವ್ಯದ ಪರಿಧಿಯನ್ನು ವಿಸ್ತರಿಸಿಕೊಂಡು ಬೇರೆಯ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಾ ಇತರರಿಗೆ ಮಾದರಿಯಾಗಿದ್ದ ಹಾಗೆಯೇ ಈಗ ಪರಿಪೂರ್ಣ ಸನ್ಯಾಸಿಯಾಗಲು ಬಯಸಿದ. ಕಠಿಣ ದುಡಿಮೆ, ಚಾಪಲ್ಯಗಳ ನಿಯಂತ್ರಣ, ವಿಧೇಯತೆ, ವಿನಯಶೀಲತೆ ಮತ್ತು ಕಾರ್ಯಗಳಲ್ಲೂ ಆಲೋಚನೆಗಳಲ್ಲೂ ಪರಿಶುದ್ಧತೆಗಳನ್ನು ಸಾಧಿಸುವುದಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದ. ಅದರಲ್ಲೂ ವಿಧೇಯತೆ ಎಂಬ ಗುಣ, ಅಥವ ಸದ್ಗುಣ ಅವನಲ್ಲಿರದಿದ್ದರೆ ಮಠದ ಬದುಕು ಸಹ್ಯವೂ ಸುಲಭವೂ ಆಗುತ್ತಲೇ ಇರಲಿಲ್ಲ.
ರಾಜಧಾನಿಗೆ ಸಮೀಪದಲ್ಲಿದ್ದ, ಅತಿಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿಕೊಡುತ್ತಿದ್ದ ಆ ಮಠದಲ್ಲಿ ಸನ್ಯಾಸಿಯಾಗಿದ್ದುಕೊಂಡು ಪಾಲಿಸಬೇಕಾಗಿದ್ದ ನಿಯಮಗಳು ಇಷ್ಟವಾಗಿರಲಿಲ್ಲ. ಮನಸ್ಸನ್ನು ಕದಡುವ ಪ್ರಲೋಭನೆಗಳೂ ಹೇರಳವಾಗಿದ್ದವು. ವಿಧೇಯತೆಯ ಗುಣದ ಮೂಲಕ ಈ ಪ್ರಲೋಭನೆಗಳನ್ನು ಸ್ಟೆಪಾನ್ ಗೆದ್ದ. ‘ವಿಚಾರಮಾಡುವುದು, ಪ್ರಶ್ನೆಮಾಡುವುದು ನನ್ನ ಕೆಲಸವಲ್ಲ. ನನಗೆ ವಹಿಸಿದ ಕರ್ತವ್ಯಗಳನ್ನು, ಪವಿತ್ರ ವಸ್ತುಗಳ ಪಕ್ಕದಲ್ಲಿ ನಿಂತಿರುವುದೇ ಇರಬಹುದು, ಪ್ರಾರ್ಥನೆ ಹಾಡುವುದೇ ಇರಬಹುದು, ಅಥವಾ ಮಠದ ಗೆಸ್ಟ್‌ಹೌಸಿನ ಲೆಕ್ಕ ಬರೆಯುವುದೇ ಇರಬಹುದು, ನಿಷ್ಠೆಯಿಂದ ಮಾಡುವುದಷ್ಟೇ ನನ್ನ ಪಾಲಿಗೆ ಬಂದದ್ದು’ ಎಂಬ ತಿಳಿವಳಿಕೆ ಅವನಲ್ಲಿ ಮೂಡಿತ್ತು. ಗುರುವಿಗೆ ನಿಷ್ಠನಾಗಿರಬೇಕು ಎಂಬ ಎಚ್ಚರವು ಮನಸ್ಸಿನಲ್ಲಿ ಮೂಡುತ್ತಿದ್ದ ಯಾವುದೇ ಅನುಮಾನವನ್ನು ಚಿವುಟಿಹಾಕುತ್ತಿತ್ತು. ಹಾಗಿರದಿದ್ದರೆ ಚರ್ಚಿನಲ್ಲಿ ನಡೆಯುತ್ತಿದ್ದ ಸುದೀರ್ಘವಾದ ಪ್ರಾರ್ಥನೆಯ ವಿಧಿ ಬೋರು ಹೊಡೆಸಿಬಿಡುತ್ತಿತ್ತು. ಚರ್ಚಿಗೆ ಹೊತ್ತುಗೊತ್ತಿಲ್ಲದೆ ಬಂದು ಹೋಗುತ್ತಿದ್ದ ಜನರ ಗದ್ದಲ, ಉಳಿದ ಸನ್ಯಾಸಿಗಳ ದುರ್ಗುಣಗಳು ಇವೆಲ್ಲ ಅವನ ಮನಸ್ಸನ್ನು ಕದಡಿಬಿಡುತ್ತಿದ್ದವು. ವಿಧೇಯತೆಯ ಕಾರಣದಿಂದ ಇವನ್ನೆಲ್ಲ ಸ್ಟೆಪಾನ್ ಸಂತೋಷದಿಂದಲೇ ಸಹಿಸಿಕೊಂಡ, ಇವೆಲ್ಲ ಬದುಕಿಗೆ ಆಸರೆಯಾಗುವ, ಮನಸ್ಸಿಗೆ ನೆಮ್ಮದಿಕೊಡುವ ಸಂಗತಿಗಳು ಎಂದುಕೊಂಡ. ‘ದಿನಕ್ಕೆ ಅದೆಷ್ಟೋ ಬಾರಿ ಒಂದೇ ಪ್ರಾರ್ಥನೆಯನ್ನು ಮತ್ತೆ ಮತ್ತೆ ಯಾಕೆ ಕೇಳಬೇಕೋ ಗೊತ್ತಿಲ್ಲ. ಆದರೆ ಹಾಗೆ ಕೇಳುವುದು ಅಗತ್ಯವೆಂದು ಗೊತ್ತು. ಅಗತ್ಯವೆಂದು ಗೊತ್ತಿರುವುದರಿಂದ ಅದರಲ್ಲಿ ಸಂತೋಷವನ್ನು ಕಾಣುವೆ’ ಎಂದುಕೊಂಡ. ಲೋಕದಲ್ಲಿ ಬದುಕುವುದಕ್ಕಾಗಿ ದೇಹಕ್ಕೆ ಆಹಾರ ಹೇಗೆ ಅಗತ್ಯವೋ ಹಾಗೆಯೇ ಆಧ್ಯಾತ್ಮಿಕ ಜೀವನ ಸಾಗಿಸುವುದಕ್ಕೆ ಆತ್ಮಕ್ಕೂ ಆಹಾರ-ಅಂದರೆ, ಚರ್ಚಿನ ಪ್ರಾರ್ಥನೆಗಳು-ಬೇಕು ಎಂದು ಅವನ ಗುರು ಹೇಳಿದ್ದ. ಸ್ಟೆಪಾನ್ ಅದನ್ನು ಪೂರ್ಣವಾಗಿ ನಂಬಿದ. ಮುಂಜಾವಿನ ಪ್ರಾರ್ಥನೆಗಾಗಿ ಬೇಗನೆ ಏಳುವುದು ಕಷ್ಟವಾಗಿದ್ದರೂ ಅದರಿಂದ ಅವನ ಮನಸ್ಸಿಗೆ ಶಾಂತಿ, ಸಂತೋಷಗಳು ದೊರೆಯತೊಡಗಿದವು. ಗುರುವಿಗೆ ಶರಣಾಗಿ, ಗುರುವಿನ ಮಾತನ್ನು ಪ್ರಶ್ನಿಸದೆ ಒಪ್ಪಿ ಅದರಂತೆ ನಡೆದುಕೊಳ್ಳುವ ವಿಧೇಯತೆ, ವಿನಯಗಳಿಂದ ಸಂತೋಷ ಸಿಕ್ಕಿತ್ತು. ತನ್ನ ಇಚ್ಛೆಯನ್ನು ಮತ್ತೂ ಮತ್ತೂ ಮಣಿಸಬೇಕು, ಎಲ್ಲ ಕ್ರಿಶ್ಚಿಯನ್ ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬುದೊಂದೇ ಅವನ ಬದುಕಿನ ಆಸಕ್ತಿಯಾಗಿತ್ತು. ಮೊದಲಲ್ಲಿ ಈ ಸದ್ಗುಣಗಳನ್ನು ಬೆಳೆಸಿಕೊಳ್ಳುವುದು ಸುಲಭವೆನ್ನಿಸಿತ್ತು. ತನ್ನ ಎಸ್ಟೇಟನ್ನು ಅಕ್ಕನ ಹೆಸರಿಗೆ ಬರೆದುಕೊಟ್ಟುಬಿಟ್ಟಿದ್ದ. ಅದರಿಂದ ಮನಸ್ಸಿಗೇನೂ ಖೇದವಾಗಿರಲಿಲ್ಲ. ಅವನ ಸ್ವಂತದ್ದು ಅನ್ನುವುದೇನೂ ಇರಲಿಲ್ಲ. ತನಗಿಂತ ಕಿರಿಯರಾದವರಿಗೂ ವಿನಯವನ್ನು ತೋರುವುದು ಸುಲಭವಷ್ಟೇ ಅಲ್ಲ ಅದರಿಂದ ಮನಸ್ಸಿಗೂ ಖುಷಿಯಾಗುತ್ತಿತ್ತು. ಲೋಭ, ಮೋಹ, ಕಾಮಗಳಮೇಲೆ ಗೆಲುವು ಸಾಧಿಸುವುದೂ ಕಷ್ಟವೇನೂ ಆಗಲಿಲ್ಲ. ಕಾಮದ ಬಗ್ಗ ಎಚ್ಚರವಿರಲಿ ಎಂದು ಗುರು ಹೇಳಿದ್ದ. ಆದರೆ ಸ್ಟೆಪಾನ್‌ನಲ್ಲಿ ಈ ದುರ್ಗುಣಗಳು ಇರಲಿಲ್ಲ. ಇವೆಲ್ಲವುಗಳಿಂದ ಬಿಡುಗಡೆ ಪಡೆದಿದ್ದೇನೆ ಎಂದು ಸ್ಟೆಪಾನ್ ಸಂತೋಷಚಿತ್ತನಾಗಿದ್ದ.
ಮದುವೆಯಾಗಬೇಕಾಗಿದ್ದ ಹುಡುಗಿಯ ನೆನಪು ಮಾತ್ರ ಮನಸ್ಸಿಗೆ ಹಿಂಸೆಕೊಡುತ್ತಿತ್ತು. ನೆನಪು ಮಾತ್ರವಲ್ಲ, ಏನೇನು ಆಗಬಹುದಾಗಿತ್ತು ಎಂಬ ಸ್ಪಷ್ಟ ಕಲ್ಪನೆಗಳೂ ಮನಸ್ಸಿಗೆ ಬಂದು ಹಿಂಸೆಕೊಡುತ್ತಿದ್ದವು. ಚಕ್ರವರ್ತಿಯ ಪ್ರೇಯಸಿಯಾಗಿದ್ದ ಇನ್ನೊಬ್ಬಾಕೆ ಮದುವೆಯಾಗಿ, ಆದರ್ಶ ಗೃಹಿಣಿಯಾಗಿ ಮಕ್ಕಳ ತಾಯಾಗಿ ಇರುವುದು ಅಚಾನಕವಾಗಿ ಮನಸ್ಸಿಗೆ ಬರುತ್ತಿತ್ತು. ಅವಳನ್ನು ಮದುವೆಯಾದವನಿಗೆ ದೊಡ್ಡ ಅಧಿಕಾರ, ಪ್ರಭಾವ, ಗೌರವಗಳೊಡನೆ ಪಶ್ಚಾತ್ತಾಪದಲ್ಲಿ ಬೆಂದ ಒಳ್ಳೆಯ ಹೆಂಡತಿ ಸಿಕ್ಕಿದ್ದಳು.
ಎಲ್ಲ ಸರಿಯಾಗಿರುವ ಹೊತ್ತಿನಲ್ಲಿ ಇಂಥ ಯೋಚನೆಗಳು ಬಂದರೆ 'ಸದ್ಯ, ಆ ಎಲ್ಲ ಪ್ರಲೋಭನೆಗಳನ್ನು ಗೆದ್ದೆ!' ಎಂದು ಸಂತೋಷವಾಗುತ್ತಿತ್ತು. ಆದರೆ ಕೆಲವೊಮ್ಮೆ ಸದ್ಯದ ಬದುಕು ಮಂಕಾಗಿ ಅಸ್ಪಷ್ಟವಾಗಿ ತೋರುವ ವೇಳೆಯಲ್ಲಿ ಇಂಥ ನೆನಪುಗಳು ಬಂದಾಗ ತಾನೇ ನಿಗದಿಮಾಡಿಕೊಂಡ ಹೊಸ ಬದುಕಿನ ಗುರಿಗಳ ಬಗ್ಗೆ ಅನುಮಾನ ಬರದಿದ್ದರೂ ಮನಸ್ಸು ಕಲ್ಪಿಸಿಕೊಂಡ ಉಜ್ವಲ ದರ್ಶನವನ್ನು ಪಡೆಯುವ ಸಾಮರ್ಥ್ಯವಿದಯೇ ಅನ್ನುವ ಆತಂಕ ಹುಟ್ಟಿ ಧಾರ್ಮಿಕ ಬದುಕನ್ನು ಆಯ್ಕೆ ಮಾಡಿಕೊಂಡದ್ದಕ್ಕೆ ಖೇದವೆನಿಸಿ ಪಶ್ಚಾತ್ತಾಪಪಡುತ್ತಿದ್ದ.
ಹಾಗಾದಾಗಲೆಲ್ಲ ಅವನ ಮನಸ್ಸನ್ನು ಕಾಪಾಡುತ್ತಿದ್ದದ್ದು ಅವನ ವಿಧೇಯತೆಯೊಂದೇ. ಇಡೀ ದಿನ ಪ್ರಾರ್ಥನೆಯಲ್ಲಿ ಕಳೆದುಹೋಗುತ್ತಿತ್ತು. ಮನಸ್ಸು ಕೆಟ್ಟಾಗಲೆಲ್ಲ ಹೆಚ್ಚು ಪ್ರಾರ್ಥನೆಮಾಡುತ್ತಿದ್ದ. ದೇಹವು ವಿಧೇಯವಾಗಿ ತಲೆ ತಗ್ಗಿಸಿ ಪ್ರಾರ್ಥಿಸುತ್ತಿದ್ದರೂ ಮನಸ್ಸು ಅದರಲ್ಲಿ ತೊಡಗುತ್ತಿರಲಿಲ್ಲ. ಇಂಥ ಸ್ಥಿತಿ ಒಂದು ದಿನ ಅಥವಾ ಎರಡು ದಿನ ಇರುತ್ತಿತ್ತು. ಆಮೇಲೆ ಮತ್ತೆ ಮಾಮೂಲಾಗುತ್ತಿತ್ತು. ಆ ಒಂದೆರಡು ದಿನಗಳೇ ಭೀಕರವಾಗಿರುತ್ತಿದ್ದವು. 'ನಾನು ನನ್ನ ವಶದಲ್ಲೂ ಇಲ್ಲ, ದೇವರ ವಶದಲ್ಲೂ ಇಲ್ಲ, ಯಾರದೋ ವಶದಲ್ಲಿದ್ದೇನೆ' ಅನ್ನಿಸುತ್ತಿತ್ತು. ಅಂಥ ಹೊತ್ತಿನಲ್ಲಿ ‘ಹತೋಟಿ ಇರಲಿ, ಏನೂ ಮಾಡಬೇಡ, ಸುಮ್ಮನಿರು, ತಾಳ್ಮೆ ಇರಲಿ, ಕಾಯುತ್ತಿರು’ ಎಂದು ಗುರು ಮಾಡಿದ ಆಜ್ಞೆಯಂತೆ ನಡೆದುಕೊಳ್ಳುವುದು ಬಿಟ್ಟರೆ ಬೇರೇನೂ ಮಾಡಲು ಆಗುತ್ತಿರಲಿಲ್ಲ. ಸ್ಟೆಪಾನ್‌ಮ ಬದುಕು ಅವನಿಚ್ಛೆಯಂತೆ ನಡೆಯುತ್ತಿರಲಿಲ್ಲ, ಗುರುವಿನ ಇಚ್ಛೆಯಂತೆ ನಡೆಯುತ್ತಿತ್ತು. ಸಂಪೂರ್ಣ ಶರಣಾಗತಿಯಲ್ಲಿ ವಿಶೇಷವಾದ ಶಾಂತಿಯನ್ನು ಕಂಡುಕೊಂಡಿದ್ದ ಅವನು.
ಸ್ಟೆಪಾನ್ ಹೀಗೆ ಆ ಮಠದಲ್ಲಿ ಏಳು ವರ್ಷ ಇದ್ದ. ಮೂರನೆಯ ವರ್ಷ ಮುಗಿಯುವ ಹೊತ್ತಿಗೆ ತಲೆಗೂದಲು ತೆಗೆಸಿಕೊಂಡು ಪೂಜಾಕಾರ್ಯಗಳನ್ನು ನೆರವೇರಿಸುವ ಅಧಿಕಾರವಿರುವ ಫಾದರ್ ಆಗಿ, ಸೆರ್ಗಿಯಸ್ ಎಂಬ ಹೊಸ ಹೆಸರನ್ನು ಪಡೆದುಕೊಂಡ. ಅವನ ಅಂತರಂಗದ ಬದುಕಿನಲ್ಲಿ ಅದೊಂದು ಮಹತ್ವದ ಕ್ಷಣ. ಮೊದಲಿನಿಂದಲೂ ಅವನಿಗೆ ದೈವಸಂಯೋಗದ ಆಚರಣೆಯಿಂದ ಮನಸ್ಸಿಗೆ ಸಮಾಧಾನ ದೊರೆತು ಅವನ ಆತ್ಮ ಹಿಗ್ಗುತ್ತಿತ್ತು. ಈಗ ತಾನೇ ಸ್ವತಃ ದೈವಸಂಯೋಗದ* ಆಚರಣೆಯ ಅಧಿಕಾರಿಯಾಗಿ, ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುವುದರಲ್ಲಿ ಭಾವ ತುಂಬಿಬಂದಂತಾಗಿ ಮನಸ್ಸೆಲ್ಲ ಉನ್ಮತ್ತವಾಗುತ್ತಿತ್ತು. ಒಮ್ಮೆ ಹತಾಶ ಮನಸ್ಥಿತಿಯಲ್ಲಿ ಸೇವಾಕೈಂಕರ್ಯದಲ್ಲಿ ತೊಡಗಿರುವಾಗ ದೈವೀಸಂಯೋಗದ ದಿವ್ಯ ಉದಾತ್ತ ಭಾವನೆಯೂ ಬಹುಕಾಲ ಉಳಿದಿರುವುದಿಲ್ಲ ಅನ್ನಿಸಿತು. ಆದದ್ದೂ ಹಾಗೆಯೇ. ಕ್ರಮೇಣ ಭಾವದ ತೀವ್ರತೆ ತೀರಿಹೋಗಿ ಕೇವಲ ಆಚರಣೆಯ ಅಭ್ಯಾಸವೊಂದೇ ಉಳಿದುಕೊಂಡಿತು.
ಒಟ್ಟಾರೆಯಾಗಿ ಆ ಮಠದ ಬದುಕಿನ ಏಳನೆಯ ವರ್ಷದಲ್ಲಿ ಸ್ಟೆಪಾನ್‌ನ ಮನಸ್ಸು ಆಯಾಸಗೊಂಡು ಬೇಸರ ಕವಿದುಕೊಂಡಿತ್ತು. ಅಲ್ಲಿದ್ದು ಕಲಿಯಬಹುದಾದ್ದನ್ನೆಲ್ಲ ಕಲಿತಿದ್ದ, ಪಡೆಯಬಹುದಾದ್ದನ್ನೆಲ್ಲ ಪಡೆದಿದ್ದ. ಇನ್ನು ಮಾಡಬೇಕಾದದ್ದು ಏನೂ ಇರಲಿಲ್ಲವಾಗಿ ಅವನ ಆತ್ಮಕ್ಕೆ ಮಂಪರು ಹಿಡಿದಂತಾಗಿತ್ತು. ಅದೇ ಹೊತ್ತಿನಲ್ಲಿ ಅವನ ತಾಯಿ ತೀರಿಹೋದ ಸುದ್ದಿ, ಅಕ್ಕ ವರ್ವರಾ ಮದುವೆಯಾದ ಸುದ್ದಿ ಎರಡೂ ಬಂದವು. ಆದರೆ ಅವೆರಡೂ ಘಟನೆಗಳಿಂದ ಮನಸ್ಸನ್ನು ಕಲಕದೆ ಉದಾಸೀನನಾಗಿಯೇ ಇದ್ದ. ಅವನ ಇಡೀ ಗಮನ ಇದ್ದದ್ದು ಅಂತರಂಗದ ಬದುಕನ್ನು ಉತ್ತಮಪಡಿಸಿಕೊಳ್ಳುವ ಬಗ್ಗೆ ಮಾತ್ರ.
ಸ್ಟೆಪಾನ್ ಫಾದರ್ ಆಗಿ ನಾಲ್ಕನೆಯ ವರ್ಷದ ಸೇವೆ ಸಲ್ಲಿಸುತ್ತಿದ್ದಾಗ ಬಿಷಪ್ ಅವನ ಬಗಗೆ ವಿಶೇಷವಾದ ಮಮತೆಯನ್ನು ತೋರಿದರು. 'ಇನ್ನೂ ಹೆಚ್ಚಿನ ಕರ್ತವ್ಯ ನಿರ್ವಹಿಸಬೇಕಾದಂಥ ದೊಡ್ಡ ಹುದ್ದೆಯನ್ನು ನೀಡಿದರೆ ತಿರಸ್ಕರಿಸಬಾರದು' ಎಂದು ಗುರು ಹೇಳಿದ. ಮಠದ ಉಳಿದ ಸನ್ಯಾಸಿಗಳಲ್ಲಿ ಅಧಿಕಾರದ ಆಸೆ, ಆಕಾಂಕ್ಷೆಗಳನ್ನು ಕಂಡು ಅಸಹ್ಯ ಪಡುತ್ತಿದ್ದ ಸ್ಟೆಪಾನ್‌ನ ಮನಸ್ಸಿನಲ್ಲೂ ಅಧಿಕಾರದ ಅಪೇಕ್ಷೆ ತಲೆ ಎತ್ತಿತು. ರಾಜಧಾನಿಗೆ ಸಮೀಪದಲ್ಲಿದ್ದ ಮಠದ ಜವಾಬ್ದಾರಿಯನ್ನು ಅವನಿಗೆ ವಹಿಸಿಕೊಡಲಾಯಿತು. ಬೇಡ ಎಂದು ತಿರಸ್ಕರಿಸುವ ಮನಸ್ಸಾದರೂ ಅವನ ಗುರು ಮತ್ತು ಮಠದ ಉಳಿದ ಗುರುಗಳು 'ಸುಮ್ಮನೆ ಒಪ್ಪಿಕೋ' ಎಂದು ಸಲಹೆ ನೀಡಿದರು. ಅವನು ಒಪ್ಪಿಕೊಂಡು ಗುರುವಿನಿಂದ ಬೀಳ್ಕೊಂಡು ಹೊಸ ಮಠಕ್ಕೆ ಅಧಿಕಾರಿಯಾದ.
ನಗರದ ಮಠಕ್ಕೆ ಅಧಿಕಾರಿಯಾಗಿ ಹೋದದ್ದು ಸೆರ್ಗಿಯಸ್‌ನ ಬದುಕಿನ ಮುಖ್ಯ ಘಟನೆ. ಅಲ್ಲಿ ಎಲ್ಲ ಬಗೆಯ ಪ್ರಲೋಭನೆಗಳು ಅವನನ್ನು ಮುತ್ತಿಕೊಂಡವು. ಅವನ್ನು ಎದುರಿಸಿ ಗೆಲ್ಲುವುದರಲ್ಲೇ ಅವನ ಶಕ್ತಿಯೆಲ್ಲ ವ್ಯಯವಾಯಿತು.
ಅವನು ಮೊದಲಿದ್ದ ಮಠದಲ್ಲಿ ಹೆಂಗಸರು ಇರುವುದಕ್ಕೆ ಅವಕಾಶವಿರಲಿಲ್ಲ. ಹಾಗಾಗಿ ಕಾಮದ ಪ್ರಲೋಭನೆ ಅಲ್ಲಿ ಅಷ್ಟು ಪ್ರಬಲವಾಗಿರಲಿಲ್ಲ. ಇಲ್ಲಿ ಕಾಮ ಅಗಾಧವಾಗಿ ತಲೆ ಎತ್ತಿದ್ದಷ್ಟೇ ಅಲ್ಲ ನಿರ್ದಿಷ್ಟ ರೂಪವನ್ನೂ ಧರಿಸಿತು. ಹೆಸರು ಕೆಡಿಸಿಕೊಂಡಿದ್ದ ಒಬ್ಬ ಹೆಂಗಸು ಮಠಕ್ಕೆ ಬರುತ್ತಿದ್ದಳು. ಫಾದರ್ ಸೆರ್ಗಿಯಸ್‌ನ ನೆರವು ಬೇಡಿದಳು. ಅವನ ಮನಸ್ಸನ್ನು ಸೆಳೆದಳು. ತನಗೆ ಸಹಾಯಮಾಡುವುದಕ್ಕಾಗಿ ಮನೆಗೆ ಬರಬೇಕೆಂದು ಆಹ್ವಾನಿಸಿದಳು. ಸೆರ್ಗಿಯಸ್ ಅವಳ ಕೋರಿಕೆಯನ್ನು ನಿರಾಕರಿಸಿದ. ಆದರೂ ತನ್ನ ಮನಸ್ಸಿನಲ್ಲಿ ಕಾಮದ ಆಸೆ ಇಷ್ಟು ಖಚಿತವಾಗಿ, ಸ್ಪಷ್ಟವಾಗಿ ಮೂಡಿದ್ದನ್ನು ಕಂಡು ಭೀತನಾದ. ಆ ವಿಷಯವನ್ನು ಕುರಿತು ಗುರುವಿಗೆ ಪತ್ರ ಬರೆದ. ಜೊತೆಗೇ ತನ್ನ ಮೇಲೆ ಒಂದು ಹತೋಟಿ ಇರಲೆಂದು ತನ್ನ ನಾಚಿಕೆ, ಅಭಿಮಾನಗಳನ್ನು ತೊರೆದು ಮಠಕ್ಕೆ ಆಗತಾನೇ ಸೇರಿಕೊಂಡಿದ್ದ ಹೊಸಬ ಯುವಕನ ಎದುರಿಗೆ ಆತ್ಮ ನಿವೇದನೆ ಮಾಡಿಕೊಂಡು, 'ಚರ್ಚಿನ ಪ್ರಾರ್ಥನೆಗೆ ಮತ್ತೆ ಪಾದರಿಯಾಗಿ ತನ್ನ ಕರ್ತವ್ಯ ನಿರ್ವಹಿಸುವುದಕ್ಕಲ್ಲದೆ ಬೇರೆಡೆಗೆ ಹೋಗದಂತೆ ನನ್ನ ಮೇಲೆ ಕಣ್ಣಿಟ್ಟಿರು' ಎಂದು ಕೇಳಿಕೊಂಡ.
ಇದರೊಡನೆ ಹೊಸ ಮಠದ ಹಿರಿಯ ಅಬಾಟ್‌ನನ್ನು ಕಂಡರೆ ಸ್ಟೆಪಾನ್‌ಗೆ ಒಂದಿಷ್ಟೂ ಆಗುತ್ತಿರಲಿಲ್ಲ. ಆ ಹಿರಿಯ ಲೌಕಿಕ ಚಾತುರ್ಯವುಳ್ಳ ಅಪಾರ ಮಹತ್ವಾಕಾಂಕ್ಷೆಯ ವ್ಯಕ್ತಿ. ಸ್ಟೆಪಾನ್ ಎಷ್ಟೇ ಪ್ರಯತ್ನಿಸಿದರೂ ಹಿರಿಯನ ಬಗ್ಗೆ ಇದ್ದ ಅಸಹನೆಯನ್ನು ನಿವಾರಿಸಿಕೊಳ್ಳಲು ಆಗಲಿಲ್ಲ. ಹಿರಿಯನ ಮಾತಿಗೆ ಎಷ್ಟೇ ವಿಧೇಯತೆ ತೋರಿದರೂ ಮನಸ್ಸಿನ ಆಳದಲ್ಲಿ ಅವನ ಬಗ್ಗೆ ತಿರಸ್ಕಾರ ಇದ್ದೇ ಇರುತ್ತಿತ್ತು. ಹೊಸ ಮಠದಲ್ಲಿದ್ದ ಎರಡನೆಯ ವರ್ಷದಲ್ಲಿ ಈ ಪಾಪ ಭಾವನೆ ಸ್ಟೆಪಾನನ ಇಚ್ಛೆಯನ್ನೂ ಮೀರಿ ವ್ಯಕ್ತವಾಗಿಬಿಟ್ಟಿತು. ಕನ್ಯೆ ಮೇರಿಯ ಇಂಟರ್‌ಸೆಷನ್* ಹಬ್ಬದ ದಿನದ ಆಚರಣೆ ದೊಡ್ಡ ಚರ್ಚಿನಲ್ಲಿ ನಡೆಯುತ್ತಿತ್ತು. ಅನೇಕ ಜನ ಭಕ್ತರು ಬಂದಿದ್ದರು. ಹಿರಿಯ ಗುರು ತಾನೇ ಪ್ರಾರ್ಥನೆಯ ಸೇವೆ ನಡೆಸುತ್ತಿದ್ದ. ಫಾದರ್ ಸೆರ್ಗಿಯಸ್ ತನ್ನ ಮಾಮೂಲು ಜಾಗದಲ್ಲಿ ನಿಂತು ಪ್ರಾರ್ಥನೆ ಮಾಡುತ್ತಿದ್ದ. ದೊಡ್ಡ ಚರ್ಚಿನಲ್ಲಿ ತಾನೇ ಪ್ರಾರ್ಥನೆಯ ಸೇವೆ ನಡಸದೆ ಇರುವಾಗಲೆಲ್ಲ ಅವನ ಮನಸ್ಸಿನಲ್ಲಿ ಆಗುತ್ತಿದ್ದ ತಳಮಳ ಈಗ ಮತ್ತೆ ತಲೆದೋರಿತ್ತು. ಶ್ರೀಮಂತ ವರ್ಗದ ಜನ, ಅದರಲ್ಲೂ ವಿಶೇಷವಾಗಿ ಹೆಂಗಸರು ಬಂದಾಗಲೆಲ್ಲ ಕಸಿವಿಸಿಯಾಗುತ್ತಿತ್ತು. ಶ್ರೀಮಂತರು ಬಂದಾಗ ಸೈನಿಕನೊಬ್ಬ ಜನರನ್ನೆಲ್ಲ ಪಕ್ಕಕ್ಕೆ ತಳ್ಳುತ್ತ ಜಾಗಮಾಡಿಕೊಡುತ್ತಾ ಇದ್ದದ್ದು, ಹೆಂಗಸರು ಸ್ಟೆಪಾನ್‌ನನ್ನೂ ಸುಂದರವಾಗಿದ್ದ ಇನ್ನೊಬ್ಬ ಸನ್ಯಾಸಿಯನ್ನೂ ಪರಸ್ಪರ ತೋರಿಸುತ್ತಾ ತಮ್ಮಲ್ಲೆ ಮಾತಾಡಿಕೊಳ್ಳುತ್ತಾ ಇದ್ದದ್ದು ಇವನ್ನೆಲ್ಲ ನೋಡದೆ ಇರುವುದಕ್ಕೆ, ನೋಡಿದರೂ ಗಮನಿಸದೆ ಇರುವುದಕ್ಕೆ ಪ್ರಯತ್ನಿಸುತ್ತಿದ್ದ. ಕಣ್ಣಿಗೆ ಅಡ್ಡಪಟ್ಟಿ ಕಟ್ಟಿಕೊಂಡವನಂತೆ ವೇದಿಕೆಯ ಮೇಲೆ ಉರಿಯುತ್ತಾ ಇದ್ದ ದೀಪಗಳನ್ನು ಮಾತ್ರವೇ, ಚರ್ಚಿನಲ್ಲಿದ್ದ ವಿಗ್ರಹಗಳನ್ನು ಮಾತ್ರವೇ, ಪ್ರಾರ್ಥನೆಯ ಸೇವೆ ಸಲ್ಲಿಸುತ್ತಿದ್ದ ಚರ್ಚಿನ ಸನ್ಯಾಸಿಗಳನ್ನು ಮಾತ್ರವೇ ನೋಡುವುದಕ್ಕೆ, ಓದುತ್ತಿದ್ದ ಅಥವಾ ಹಾಡುತ್ತಿದ್ದ ಪ್ರಾರ್ಥನೆಯನ್ನು ಮಾತ್ರವೇ ಕೇಳುವುದಕ್ಕೆ, ಬೇರೆಲ್ಲವನ್ನೂ ಮರೆತು ತನ್ನ ಕರ್ತವ್ಯವನ್ನು ಮಾತ್ರವೇ ನಿರ್ವಹಿಸುತ್ತಾ ಅನೇಕ ಬಾರಿ ಕೇಳಿದ್ದ ಹೇಳಿದ್ದ ಪ್ರಾರ್ಥನೆಯ ಮುಂದಿನ ಸಾಲುಗಳನ್ನು ಮನಸ್ಸಿನಲ್ಲೇ ಅಂದುಕೊಂಡು ಸಂತೋಷಪಡುವುದಕ್ಕೆ ಪ್ರಯತ್ನಿಸುತ್ತಾ ಇದ್ದ.
ಹೀಗೇ ಸುಮ್ಮನೆ ಇದ್ದು, ಪ್ರಾರ್ಥನೆಯ ಸಾಲುಗಳಿಗೆ ತಕ್ಕ ಹಾಗೆ ಆಗಾಗ ಎದೆಯ ಮೇಲೆ ಶಿಲುಬೆಯ ಆಕಾರದಲ್ಲಿ ಕೈ ಆಡಿಸುತ್ತಾ, ಆಗಾಗ ತಲೆ ತಗ್ಗಿಸುತ್ತಾ, ಒಮ್ಮೊಮ್ಮೆ ತೀವ್ರ ತಿರಸ್ಕಾರವನ್ನೂ ಒಮ್ಮೊಮ್ಮೆ ಮೂಡುವ ನೆನಪುಗಳನ್ನೂ ಭಾವನೆಗಳನ್ನೂ ಉದ್ದೇಶಪೂರ್ವಕವಾಗಿ ಒರೆಸಿಹಾಕುತ್ತಾ, ಒಳಗೊಳಗೇ ತನ್ನ ವಿರುದ್ಧ ತಾನೇ ಹೋರಾಡುತ್ತಾ ನಿಂತಿದ್ದ. ಆಗ ಸಾಕ್ರಿಸ್ಟಾನ್ ಪಾದ್ರಿ* ಫಾದರ್ ನಿಕೊದೆಮಸ್- ಅವನನ್ನು ಮಠದ ಹಿರಿಯನ ಬಾಲಬಡುಕ ಎಂದು ಸ್ಟೆಪಾನ್ ತನಗೇ ತಿಳಿಯದಂತೆ ದೂಷಿಸುತ್ತಿದ್ದ, ಫಾದರ್ ಸೆರ್ಗಿಯಸ ನ ಆಧ್ಯಾತ್ಮಿಕ ಪ್ರಗತಿಗೆ ಅಡ್ಡಿಯಾಗಿದ್ದ ಇನ್ನೊಬ್ಬ ವ್ಯಕ್ತಿ-ಅವನ ಸಮೀಪಕ್ಕೆ ಬಂದು, ಅತಿವಿನಯದಿಂದ ತಲೆಬಾಗಿ ನಮಸ್ಕರಿಸಿ, ಹಿರಿಯ ಪಾದರಿಯು ಸ್ಟೆಪಾನ್‌ನನ್ನು ಭೇಟಿಯಾಗಲು ಬಯಸಿದ್ದಾರೆ, ಗರ್ಭಗುಡಿಯ ಬಳಿಗೆ ಬರಬೇಕು ಎಂಬ ಸಂದೇಶವನ್ನು ಮುಟ್ಟಿಸಿದ. ಫಾದರ್ ಸೆರ್ಗಿಯಸ್ ತಲೆಯ ಮೇಲಿನ ಮುಸುಕನ್ನು ಕೊಂಚ ಸರಿಪಡಿಸಿಕೊಂಡು, ಚರ್ಚಿನಲ್ಲಿದ್ದ ಭಕ್ತ ಜನಕ್ಕೆ ತೊಂದರೆಯಾಗದಂತೆ ಹುಷಾರಾಗಿ ಹೆಜ್ಜೆಗಳನ್ನಿಡುತ್ತಾ ಅವನ ಹಿಂದೆ ಹೊರಟ.
‘ಲಿಸ್ಸಾ, ನಿನ್ನ ಬಲಗಡೆ ನೋಡು, ಅವನೇ!’ ಎಂದು ಒಬ್ಬಾಕೆ ಇನ್ನೊಬ್ಬಳಿಗೆ ಫ್ರೆಂಚ್‌ನಲ್ಲಿ ಪಿಸುಗುಟ್ಟಿದಳು.
‘ಎಲ್ಲಿ? ಎಲ್ಲಿ? ಅಷ್ಟೇನೂ ಚೆನ್ನಾಗಿಲ್ಲ ಅಲ್ಲವೇನೇ..’ ಎಂದಳು ಇನ್ನೊಬ್ಬಾಕೆ.
ಅವರು ಮಾತಾಡುತ್ತಿರುವುದು ತನ್ನ ಬಗ್ಗೆಯೇ ಎಂದು ಅವನಿಗೆ ಗೊತ್ತಿತ್ತು. ಅವರ ಮಾತು ಕೇಳಿಸಿಕೊಂಡು, ಪ್ರಲೋಭನೆ ಎದುರಾದಾಗಲೆಲ್ಲ, ಆತ್ಮ ಆಯಾಸಗೊಂಡಾಗಲೆಲ್ಲ, ಮಾಡುತ್ತಿದ್ದಂತೆ ‘ಪ್ರಲೋಭನೆ ಒಡ್ಡಬೇಡ ಪ್ರಭುವೇ’ ಎಂದು ಪ್ರಾರ್ಥನೆ ಹೇಳಿಕೊಂಡ. ತಲೆ ಬಗ್ಗಿಸಿಕೊಂಡು, ನೆಲದ ಮೇಲೇ ಕಣ್ಣಿಟ್ಟು ಅಗಲ ತೋಳಿನ ಬಿಳಿಯ ನಿಲುವಂಗಿ ತೊಟ್ಟು ವಿಗ್ರಹ ವೇದಿಕೆಯ ಬಳಿ ನಿಂತಿದ್ದ ಚರ್ಚಿನ ಹಾಡುಗಾರರಿಗೆ ತೊಂದರೆಯಾಗದಂತೆ ಅವರನ್ನು ಬಳಸಿಕೊಂಡು ಸಾಗಿ, ಉಪದೇಶದ ಕಟ್ಟೆಯ ಹಿಂದಿನ ಸಕ್ರೀನನ್ನು ದಾಟಿ ಹೋದ. ಗರ್ಭಗುಡಿಗೆ ಕಾಲಿಡುತ್ತಿದ್ದಂತೆ ಅಲ್ಲಿದ್ದ ವಿಗ್ರಹಗಳ ಮುಂದೆ ತಲೆ ಬಾಗಿ ನಮಸ್ಕರಿಸಿದ. ನಿಧಾನವಾಗಿ ತಲೆ ಎತ್ತಿ, ಆದರೆ ತಿರುಗದೆ, ಕಣ್ಣಂಚಿನಲ್ಲೇ ಮಠದ ಮುಖ್ಯ ಗುರುವನ್ನೂ ಅವನೊಡನೆ ಇದ್ದ ಉಜ್ವಲವಾಗಿ ತೋರುತ್ತಿದ್ದ ಇನ್ನೊಬ್ಬ ವ್ಯಕ್ತಿಯನ್ನೂ ನೋಡಿದ. ಮುಖ್ಯ ಗುರು ಗೋಡೆಯ ಪಕ್ಕದಲ್ಲಿ ನಿಂತು, ಪ್ರಾರ್ಥನಾ ಪೋಷಾಕಿನ ತೋಳುಗಳನ್ನು ಕೊಂಚವೇ ಮೇಲೆ ಸರಿಸಿಕೊಂಡು, ದಪ್ಪ ಮೋಟುಗೈಗಳನ್ನು ಉಬ್ಬಿದ ಹೊಟ್ಟೆಯಮೇಲಿಟ್ಟುಕೊಂಡು, ಜಪಮಣಿಗಳನ್ನು ನಿಧಾನವಾಗಿ ತಿರುಗಿಸುತ್ತಾ, ಮಿಲಿಟರಿ ಡ್ರೆಸ್ಸು ತೊಟ್ಟ ವ್ಯಕ್ತಿಯೊಬ್ಬನೊಡನೆ ಮಾತನಾಡುತ್ತಿದ್ದ. ಅವನ ತೋಳಿಗೆ ಕಟ್ಟಿದ್ದ ಚಿನ್ನದ ಕಿರುಹಗ್ಗದ ಗಂಟುಗಳ ವಿನ್ಯಾಸ, ಭುಜದ ಮೇಲಿದ್ದ ಲಾಂಛನ ಇವುಗಳನ್ನು ಫಾದರ್ ಸೆರ್ಗಿಯಸ್ಸನ ಅನುಭವಿ ಕಣ್ಣುಗಳು ತಟ್ಟನೆ ಗುರುತಿಸಿದವು. ನಾನು ಸೇವೆ ಸಲ್ಲಿಸಿದ್ದ ರೆಜಿಮೆಂಟಿನ ಕಮಾಂಡರ್ ಇವನು, ಈಗ ಬಹಳ ಪ್ರಮುಖ ಸ್ಥಾನ ಅಲಂಕರಿಸಿದ್ದಾನೆ, ಅಂಥವನೊಡನೆ ಮಾತಾಡುತ್ತಿರುವುದರಿಂದಲೇ ಈ ಗುರುವಿನ ಮುಖ ಕೆಂಪಾಗಿ ಬೋಳುತಲೆ ಹೊಳೆಯುತ್ತಾ ಸಂತೋಷವನನೂ ತೃಪ್ತಿಯನ್ನೂ ತೋರುತ್ತಿವೆ ಎಂದು ಅಂದುಕೊಂಡ. ಫಾದರ್ ಸೆರ್ಗಿಯಸ್ಸನಿಗೆ ಕಸಿವಿಸಿಯಾಯಿತು. ಅದರಲ್ಲೂ ತನ್ನ ರೆಜಿಮೆಂಟಿನಲ್ಲಿದ್ದು ಈಗ ಸನ್ಯಾಸಿಯಾಗಿರುವವನನ್ನು ನೋಡಬೇಕೆಂಬ ಜನರಲ್ಲನ ಕುತೂಹಲ ತಣಿಸುವ ಸಲುವಾಗಿಯೇ ಕರೆಕಳಿಸಿದ್ದಾನೆ ಎಂದು ತಿಳಿದಾಗ ಅಸಹ್ಯವೆನ್ನಿಸಿತು.
‘ದೈವದ ಪೋಷಾಕು ತೊಟ್ಟ ನಿಮ್ಮನ್ನು ಕಂಡು ಸಂತೋಷವಾಗಿದೆ’ ಕೈ ಮುಂದೆ ಚಾಚುತ್ತಾ ಜನರಲ್ ಹೇಳಿದ, ‘ನಿಮ್ಮ ಸಹೋದ್ಯೋಗಿಯನ್ನು ಮರೆತಿಲ್ಲವೆಂದು ಭಾವಿಸಲೇ?’
ಇಡೀ ಸನ್ನಿವೇಶ, ಮುಖ್ಯಗುರುವಿನ ಕೆಂಪು ಮುಖ, ಮುಖದಲ್ಲಿ ಎದ್ದು ಕಾಣುತ್ತಿದ್ದ ಸಂತೃಪ್ತಿಯ ನಗು, ನೆರೆತ ಗಡ್ಡ, ಜನರಲ್ಲನ ಮಾತು, ಎಚ್ಚರದ ಆರೈಕೆಯಿಂದ ಪೋಷಣೆಗೊಂಡಿದ್ದ ಅವನ ಮುಖ, ಅವನ ಉಸಿರಿನಲ್ಲಿದ್ದ ವೈನಿನ ಪರಿಮಳದೊಡನೆ ಬೆರೆತ ಸಿಗಾರಿನ ವಾಸನೆ, ಇವೆಲ್ಲ ಫಾದರ್ ಸೆರ್ಗಿಯಸ್ಸನ ಮನಸ್ಸನ್ನು ಕೆರಳಿಸಿದವು. ಮುಖ್ಯ ಗುರುವಿಗೆ ಮತ್ತೆ ತಲೆಬಾಗಿ ನಮಸ್ಕರಿಸುತ್ತಾ,
‘ಪೂಜ್ಯರು ಹೇಳಿಕಳಿಸಿದರಂತೆ..?’ ಎಂದು ಮಾತನ್ನು ಅರ್ಧದಲ್ಲೇ ನಿಲ್ಲಿಸಿದ. ಅವನ ಮುಖದಲ್ಲಿ ಕಣ್ಣಿನಲ್ಲಿ ನಿಂತ ಭಂಗಿಯಲ್ಲಿ ಏಕೆ ಹೇಳಿಕಳಿಸಿದ್ದು ಎಂಬ ಪ್ರಶ್ನೆ ಇತ್ತು.
‘ಹೌದು, ಜನರಲ್ಲರನ್ನು ಭೇಟಿ ಮಾಡಲಿ ಎಂದು’ ಮುಖ್ಯ ಗುರು ಹೇಳಿದ.
‘ಪೂಜ್ಯರೇ, ಪ್ರಲೋಭನೆಯನ್ನು ಗೆಲ್ಲಬೇಕೆಂದು ನಾನು ಲೌಕಿಕ ಬದುಕನ್ನು ಬಿಟ್ಟು ಬಂದೆ,’ ಫಾದರ್ ಸೆರ್ಗಿಯಸ್ ಹೇಳಿದ. ಅವನ ಮುಖ ಬಿಳಿಚಿಕೊಂಡಿತ್ತು. ತುಟಿಗಳು ಅದುರುತ್ತಿದ್ದವು. ‘ಈ ದೇವರ ಗುಡಿಯಲ್ಲಿ, ಪ್ರಾರ್ಥನೆಯ ವೇಳೆಯಲ್ಲಿ ಮತ್ತೇಕೆ ನನ್ನನ್ನು ಪ್ರಲೋಭನೆಗೆ ಒಡ್ಡುತ್ತಿದ್ದೀರಿ?’
‘ಹೋಗು. ಸರಿ, ಸರಿ. ಹೋಗು’ ಮುಖ್ಯ ಗುರು ಹುಬ್ಬು ಗಂಟಿಕ್ಕಿಕೊಂಡು ಕೋಪದಿಂದ ನುಡಿದ.
ಮರುದಿನ ಫಾದರ್ ಸೆರ್ಗಿಯಸ್ ಮುಖ್ಯ ಗುರುವಿನ ಮತ್ತು ಮಠದ ಇತರ ಸಹೋದರರ ಕ್ಷಮೆ ಕೋರಿದ. ಒಂದು ಇಡೀ ರಾತ್ರಿ ಪ್ರಾರ್ಥನೆಯಲ್ಲಿ ಕಳೆದ. ಈ ಮಠವನ್ನು ಬಿಡುವುದೇ ಸೂಕ್ತ ಎಂದು ನಿರ್ಧರಿಸಿದ. 'ನಾನು ಮತ್ತೆ ನಿಮ್ಮಲ್ಲಿಗೆ ಮರಳುವುದಕ್ಕೆ ಅನುಮತಿ ಕೊಡಿ' ಎಂದು ತನ್ನ ಗುರುವಿಗೆ ಪತ್ರ ಬರೆದ. 'ನನ್ನಲ್ಲಿ ದೌರ್ಬಲ್ಯವಿದೆ, ಪ್ರಲೋಭನೆಗಳನ್ನು ಮೀರಲಾರೆ, ನಿಮ್ಮ ಮಾರ್ಗದರ್ಶನ ಬೇಕು' ಎಂದು ಹೇಳಿ, ತನ್ನ ಪಾಪಿಷ್ಠ ಅಹಂಕಾರದ ಬಗ್ಗೆಯೂ ಬರೆದ. ಮರು ಟಪಾಲಿನಲ್ಲೇ ಗುರುವಿನ ಉತ್ತರ ಬಂದಿತು. ಏನೇನು ನಡೆಯಿತೋ ಅದಕ್ಕೆಲ್ಲ ಸೆರ್ಗಿಯಸ್‌ನ ಅಹಂಕಾರವೇ ಕಾರಣವಾಗಿದೆ ಎಂದು ಬರೆದಿದ್ದ. 'ನೀನು ದೇವರಿಗಾಗಿ ವಿನಯದಿಂದ ಶರಣಾಗಿಲ್ಲ, ಅಹಂಕಾರದಿಂದ ಶರಣಾಗತಿಯ ಭಾವ ಬೆಳೆಸಿಕೊಂಡಿರುವೆ; ಆದ್ದರಿಂದಲೇ ನಿನ್ನಲ್ಲಿ ಅಸಾಧ್ಯವಾದ ಕೋಪ ಆಗಾಗ ತಲೆ ಎತ್ತುತ್ತದೆ; ನಾನು ಆಸೆ ಆಮಿಷಗಳನ್ನೆಲ್ಲ ತೊರೆದು ಬಂದಿದ್ದೇನೆ, ಸಜ್ಜನ, ಅನ್ನುವ ಅಹಂಕಾರ ಇರುವುದರಿಂದಲೇ ‘ಎಲ್ಲವನ್ನೂ ತೊರೆದು ದೇವರಿಗಾಗಿ ಹಂಬಲಿಸಿ ಬಂದಿದ್ದರೂ ನನ್ನನ್ನು ಯಾವುದೋ ಕಾಡು ಪ್ರಾಣಿಯ ಹಾಗೆ ಪ್ರದರ್ಶನಕ್ಕೆ ಇಡುತ್ತಾರಲ್ಲಾ’ ಎಂದು ಮುಖ್ಯ ಗುರುವಿನ ಮೇಲೆ ನಿನಗೆ ಕೋಪ ಬಂದಿದೆ; ದೇವರ ಸಲುವಾಗಿ ನೀನು ಎಲ್ಲವನ್ನೂ ತ್ಯಾಗ ಮಾಡಿದ್ದಿದ್ದರೆ ನಿನ್ನಲ್ಲಿ ಸಹನೆ ಇರುತ್ತಿತ್ತು; ಲೌಕಿಕವಾದ ಅಹಂಕಾರ ಇನ್ನೂ ನಿನ್ನಲ್ಲಿ ಸತ್ತಿಲ್ಲ; ಮಗೂ ಸೆರ್ಗಿಯಸ್, ನಿನ್ನ ಬಗ್ಗೆ ಸದಾ ಚಿಂತಿಸುತ್ತೇನೆ, ನಿನಗಾಗಿ ಪ್ರಾರ್ಥಿಸುತ್ತೇನೆ, ದೇವರು ನನಗೆ ಒಂದು ದಾರಿ ತೋರಿದ್ದಾನೆ; ತಾಂಬೊವ್‌ನ ಮಠದಲ್ಲಿದ್ದ ಏಕಾಂತವಾಸೀ ಸನ್ಯಾಸಿ*, ಸಂತನಂತೆ ಬದುಕಿದ್ದ ಹಿಲರಿ ತೀರಿಕೊಂಡಿದ್ದಾನೆ; ಆತ ಅಲ್ಲಿ ಹದಿನೆಂಟು ವರ್ಷ ಇದ್ದ. ತಾಂಬೊವ್‌ನ ಮಠದ ಹಿರಿಯ ಗುರು ಅವನ ಸ್ಥಾನಕ್ಕೆ ಯೋಗ್ಯನಾದ ಬ್ರದರ್ ಯಾರಾದರೂ ಇದ್ದಾರಾ ಎಂದು ಕೇಳಿದ್ದಾರೆ; ಅವರು ಕೇಳಿ ಬರೆದ ಸ್ವಲ್ಪ ದಿನದಲ್ಲೇ, ನಿನ್ನ ಪತ್ರ ಬಂತು. ನೀನು ತಾಂಬೊವ್ ಹರ್ಮಿಟೇಜ್ ಮಠದ ಫಾದರ್ ಪೈಸಿಯ ಬಳಿಗೆ ಹೋಗು; ನಿನ್ನ ಬಗ್ಗೆ ನಾನೂ ಕಾಗದ ಬರೆಯುತ್ತೇನೆ; ನೀನು ಹಿಲರಿ ಇದ್ದ ಸೆಲ್ಲಿನಲ್ಲೇ ಇರಬಹುದು; ಹಿಲರಿಗೆ ಬದಲಾಗಿ ನೀನು ಎಂದಲ್ಲ, ಏಕಾಂತವಾಸದಿಂದ ನಿನ್ನ ಅಹಂಕಾರ ಅಡಗಬಹುದು; ದೇವರು ನಿನ್ನ ಹರಸಲಿ’ ಎಂದು ಗುರು ಬರೆದಿದ್ದ.
ಸೆರ್ಗಿಯಸ್ ಗುರುವಿನ ಮಾತನ್ನು ಪಾಲಿಸಿದ. ಗುರುವಿನ ಪತ್ರವನ್ನು ಮಠದ ಹಿರಿಯ ಗುರುವಿಗೆ ತೋರಿಸಿ, ಅವನ ಅನುಮತಿ ಪಡೆದು, ಚರ್ಚಿನ ತನ್ನ ಕೋಣೆ ಖಾಲಿಮಾಡಿ, ತನ್ನ ವಸ್ತುಗಳನ್ನೆಲ್ಲ ಮಠಕ್ಕೆ ಕೊಟ್ಟು, ತಾಂಬೊವ್ ಮಠಕ್ಕೆ ಹೊರಟ.
ತಾಂಬೊವ್ ಮಠದ ಹಿರಿಯ, ವರ್ತಕ ಸಮುದಾಯದಲ್ಲಿ ಹುಟ್ಟಿದ್ದವನು, ಉತ್ತಮ ವ್ಯವಸ್ಥಾಪಕ, ಸೆರ್ಗಿಯಸ್ಸನನ್ನು ಸರಳವಾಗಿ, ಗಂಭೀರವಾಗಿ ಸ್ವಾಗತಿಸಿ, ಹಿಲರಿಯ ಸೆಲ್ಲನ್ನು ಅವನಿಗಾಗಿ ಬಿಟ್ಟುಕೊಟ್ಟ. ಮೊದಮೊದಲು ಅವನ ಸಹಾಯಕ್ಕೆಂದು ಕಿರಿಯ ಶಿಷ್ಯನೊಬ್ಬನನ್ನು ನೇಮಿಸಿದ್ದರೂ ಆನಂತರ ಸೆರ್ಗಿಯಸ್ಸನ ಅಪೇಕ್ಷೆಯಂತೆ ಸಂಪೂರ್ಣ ಏಕಾಂತವಾಸಕ್ಕೆ ಅನುವುಮಾಡಿಕೊಟ್ಟ. ಸೆರ್ಗಿಯಸ್ಸನ ಸೆಲ್ಲು ಬೆಟ್ಟದ ದೊಡ್ಡ ಬಂಡೆಯೊಂದರಲ್ಲಿ ಕೊರೆದಿದ್ದ ಗವಿಯಂಥ ಕೋಣೆ. ಅದರಲ್ಲಿ ಎರಡು ಭಾಗಗಳಿದ್ದವು. ದಿವಂಗತ ಹಿಲರಿಯ ಸಮಾಧಿಯೂ ಅಲ್ಲೇ ಇತ್ತು. ಸಮಾಧಿ ಇದ್ದದ್ದು ಒಳಕೋಣೆ, ಅದರ ಮುಂದೆ ಇನ್ನೊಂದು ಭಾಗದಲ್ಲಿ ಗೋಡೆಗೆ ಕೊರೆದ ಗೂಡಿನಂಥ ಜಾಗದಲ್ಲಿ ಮಲಗಲು ಒಂದು ಚಾಪೆ, ಪುಟ್ಟದೊಂದು ಮೇಜು, ಕೆಲವು ಪುಸ್ತಕಗಳು ಮತ್ತು ವಿಗ್ರಹಗಳು ಇದ್ದವು. ಈ ಹೊರಕೋಣೆಗೆ ಒಂದು ಬಾಗಿಲು. ಅದಕ್ಕೆ ಬೀಗ ಹಾಕುವ ವ್ಯವಸ್ಥೆ. ಬಾಗಿಲ ಮುಂದೆ ಒಂದು ಶೆಲ್ಫು. ಅದರ ಮೇಲೆ ದಿನಕ್ಕೊಮ್ಮೆ ಮಠದಿಂದ ಯಾರಾದರೂ ಆಹಾರ ತಂದು ಇಡುತ್ತಿದ್ದರು.
ಹೀಗೆ ಫಾದರ್ ಸೆರ್ಗಿಯಸ್ ಸನ್ಯಾಸಿಯಾದ.
(ಮುಂದುವರೆಯುವುದು)
ಟಿಪ್ಪಣಿಗಳು:
ಗುರುಸ್ಥಾನ*-ಇಂಗ್ಲಿಷ್ ಪದ starets: ಪೂಜಾಕಾರ್ಯದಲ್ಲಿ ತೊಡಗಲೇಬೇಕೆಂಬ ಕಡ್ಡಾಯವಿರದ, ಈಸ್ಟರ್ನ್ ಆರ್ಥಡಾಕ್ಸ್ ಚರ್ಚ್ ಪಂಥಕ್ಕೆ ಸೇರಿದ ಧಾರ್ಮಿಕ ಮಾರ್ಗದರ್ಶಕ, ಗುರು.
ವಲಾಛಿಯಾ*-Wallachia, ರೊಮಾನಿಯಾದ ಪ್ರಾಚೀನ ಹೆಸರು, ಮಧ್ಯಯುಗದಿಂದ ಹತ್ತೊಂಬತ್ತನೆಯ ಶತಮಾನದವರೆಗೆ ಪ್ರಾಮುಖ್ಯಗಳಿಸಿದ್ದ ಭೌಗೋಳಿಕ ಪ್ರದೇಶ.
ದೈವಸಂಯೋಗ*- ಕಮ್ಯೂನಿಯನ್. ಬ್ರೆಡ್ ಮತ್ತು ವೈನ್ ಸ್ವೀಕರಿಸುವ ಮೂಲಕ ಕ್ರಿಸ್ತನ ಕಾಯ ಮತ್ತು ರಕ್ತಗಳನ್ನು ತಮ್ಮೊಳಗುಮಾಡಿಕೊಂಡು ದೈವೀಸಂಯೋಗವನ್ನು ಪಡೆಯುವ ಆಚರಣೆ.
ಇಂಟರ್‌ಸೆಷನ್*- ಭಕ್ತರ ಪರವಾಗಿ ಚರ್ಚಿನ ಪಾದರಿಯು ಹರಕೆ, ಪ್ರಾರ್ಥನೆಗಳನ್ನು ದೇವರಿಗೆ ಸಲ್ಲಿಸುವ ಕ್ರಿಯೆ.
ಸಾಕ್ರಿಸ್ಟಾನ್ ಪಾದ್ರಿ*- ಪೂಜಾ ಸಾಮಗ್ರಿಗಳು, ಉಡುಪುಗಳು ಇತ್ಯಾದಿಗಳ ಉಸ್ತುವಾರಿಯನ್ನು ನೋಡಿಕೊಳ್ಳುವ ಪಾದ್ರಿ.
ಏಕಾಂತವಾಸೀ ಸನ್ಯಾಸ*- ಆಂಕೊರೈಟ್ ಹರ್ಮಿಟೇಜ್. ಧಾರ್ಮಿಕ ಕಾರಣಗಳಿಗಾಗಿ ಲೋಕದೂರವಾಗಿ ಏಕಾಂತವಾಗಿ ವಾಸಿಸುವ ಕ್ರೈಸ್ತ ಸನ್ಯಾಸಿ.
ನಾಲ್ಕು
ಫಾದರ್ ಸೆರ್ಗಿಯಸ್ ಸನ್ಯಾಸಿಯಾಗಿ ಆರು ವರ್ಷ ಕಳೆದಿತ್ತು. ಕಾರ್ನಿವಾಲ್* ಸಮಯ ಬಂದಿತ್ತು. ಪಕ್ಕದ ಊರಿನ ಶ್ರೀಮಂತರ ಗುಂಪು ಭರ್ಜರಿ ಊಟ ಮುಗಿಸಿ, ವೈನ್ ಕುಡಿದು ಟ್ರಾಯ್ಕಾಗಳನ್ನು* ಏರಿ ವಿಹಾರ ಹೊರಟಿದ್ದರು. ಆ ಗುಂಪಿನಲ್ಲಿ ಇಬ್ಬರು ಲಾಯರು, ಒಬ್ಬ ಜಮೀನುದಾರ, ಒಬ್ಬ ಆಫೀಸರು ಮತ್ತು ನಾಲ್ಕು ಜನ ಹೆಂಗಸರಿದ್ದರು. ಒಬ್ಬಳು ಆಫೀಸರನ ಹೆಂಡತಿ, ಇನ್ನೊಬ್ಬಳು ಜಮೀನುದಾರನ ಹೆಂಡತಿ, ಮೂರನೆಯವಳು ಜಮೀನುದಾರನ ಇನ್ನೂ ಮದುವೆಯಾಗಿರದ ತಂಗಿ, ನಾಲ್ಕನೆಯವಳು ವಿವಾಹ ವಿಚ್ಛೇದನ ಪಡೆದಿದ್ದ, ತನ್ನ ವಿಚಿತ್ರ ವರ್ತನೆಯಿಂದಲೂ ಪ್ರಣಯ ಸಾಹಸಗಳಿಂದಲೂ ಊರವರು ಬೆಚ್ಚಿಬೀಳುವಂತೆ ಮಾಡಿದ್ದ ಶ್ರೀಮಂತ ಸುಂದರಿ.
ಹವೆ ಬಹಳ ಚೆನ್ನಾಗಿತ್ತು. ರಸ್ತೆಯ ಮೇಲೆ ಬಿದ್ದಿದ್ದ ಹಿಮ ನುಣ್ಣಗೆ, ಗಟ್ಟಿಯಾಗಿ, ಟ್ರಾಯ್ಕಾಗಳು ಸಲೀಸಾಗಿ ಸಾಗುತ್ತಿದ್ದವು. ಊರಿನಿಂದ ಸುಮಾರು ಏಳು ಮೈಲಿ ಬಂದಮೇಲೆ ಗಾಡಿಗಳನ್ನು ನಿಲ್ಲಿಸಿ ಮುಂದೆ ಹೋಗುವುದೋ ಅಥವಾ ಊರಿಗೆ ಮರಳುವುದೋ ಎಂದು ಚರ್ಚೆ ನಡೆಸಿದ್ದರು.
'ಈ ರೋಡು ಎಲ್ಲಿಗೆ ಹೋಗುತ್ತದೆ?’ ವಿಚ್ಛೇದನ ಪಡೆದಿದ್ದ ಸುಂದರಿ ಮಾಕೊವ್ಕಿನಾ ಕೇಳಿದಳು.
'ಹೀಗೇ ಇನ್ನೂ ಎಂಟು ಮೈಲಿ ಹೋದರೆ ತಾಂಬೋವ್ ಸಿಗುತ್ತದೆ’ ಅವಳೊಡನೆ ವ್ಯವಹಾರ ಇಟ್ಟುಕೊಂಡಿದ್ದ ಒಬ್ಬ ಲಾಯರು ಹೇಳಿದ.
‘ಮತ್ತೆ ಅಲ್ಲಿಂದ?’
‘ಅಲ್ಲಿಂದ ಮಠ ದಾಟಿ ಹೋದರೆ ಎಲ್..., ಊರಿಗೆ ತಲುಪುತ್ತದೆ.’
‘ಮಠ ಅಂದರೆ ಫಾದರ್ ಸೆರ್ಗಿಯಸ್ ಇರುತ್ತಾನಲ್ಲ ಆ ಮಠವೇ?’
‘ಹೌದು.’
‘ಸುಂದರ ಸನ್ಯಾಸಿ ಸ್ಟೆಪಾನ್ ಕಸಾಟ್ಸ್‌ಕಿ?’
‘ಹೌದು.’
‘ಮಹಿಳೆಯರೇ, ಮಹನೀಯರೇ, ನಾವು ಹೀಗೇ ಹೋಗಿ ಸುಂದರ ಸನ್ಯಾಸಿ ಸ್ಟೆಪಾನ್ ಕಸಾಟ್ಸ್‌ಕಿಯನ್ನು ನೋಡಿಕೊಂಡು ಬರೋಣ. ತಾಂಬೋವ್‌ನಲ್ಲಿ ಊಟ ಮಾಡೋಣ.’
‘ರಾತ್ರಿ ಆಗುವುದರೊಳಗೆ ಅಲ್ಲಿಗೆ ಹೋಗಿ ಬರುವುದಕ್ಕೆ ಆಗುವುದಿಲ್ಲ.’
‘ಪರವಾಗಿಲ್ಲ. ರಾತ್ರಿಯಾದರೆ ಕಸಾಟ್ಸ್‌ಕಿಯ ಮಠದಲ್ಲಿ ಉಳಿಯಬಹುದು.’
‘ಮಠದಲ್ಲಿ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಇದೆ. ಮಾಖಿಮ್ ಕೇಸಿಗೆ ಹೋಗಿದ್ದಾಗ ಅಲ್ಲಿ ಒಮ್ಮೆ ತಂಗಿದ್ದೆ.’
‘ಇಲ್ಲ, ನಾನು ಕಸಾಟ್ಸ್‌ಕಿಯ ಸೆಲ್ಲಿನಲ್ಲಿ ರಾತ್ರಿ ಕಳೆಯುವೆ!’
‘ಇಂಪಾಸಿಬಲ್. ನೀವು ಎಲ್ಲಿ ಬೇಕಾದರೂ ರಾತ್ರಿ ಕಳೆಯಬಹುದು, ಆದರೆ ಆ ಸನ್ಯಾಸಿಯ ಸೆಲ್ಲಿನಲ್ಲಿ ಉಳಿಯುವುದು ಅಸಾಧ್ಯ.’
‘ಇಂಪಾಸಿಬಲ್? ಬೆಟ್ ಕಟ್ಟುತ್ತೀರಾ?’
‘ಓಕೆ. ಬೆಟ್ಸ್. ನೀವು ಅವನ ಜೊತೆ ರಾತ್ರಿ ಕಳೆದದ್ದೇ ಆದರೆ ನೀವು ಕೇಳಿದ್ದು ಕೊಡುತ್ತೇನೆ.’
‘ಕೇಳಿದ್ದು ಕೊಡುತ್ತೀರಾ!’
‘ನೀವು ಸೋತರೆ ನಾನು ಕೇಳಿದ್ದು ಕೊಡುವ ಹಾಗಿದ್ದರೆ!’
‘ಸರಿ ಹಾಗಾದರೆ. ನಡೆಯಿರಿ ಹೋಗೋಣ.’
ಗಾಡಿಯವರಿಗೆ ವೋಡ್ಕಾ ಕೊಟ್ಟರು, ತಾವೆಲ್ಲ ಕೇಕು, ವೈನು, ಸಿಹಿ ತಿಂಡಿಗಳನ್ನು ತಿಂದರು. ಹೆಂಗಸರು ಬಿಳಿಯ ಫರ್ ಕೋಟುಗಳನ್ನು ಹಾಕಿಕೊಂಡರು. ಯಾರ ಗಾಡಿ ಮುಂದೆ ಹೋಗಬೇಕೆಂದು ಗಾಡಿಯವರು ಚರ್ಚೆಮಾಡಿಕೊಂಡರು. ಅವರಲ್ಲೆಲ್ಲ ಕಿರಿಯನಾದವನು, ಯಾವಾಗಲೂ ತನ್ನ ಸೀಟಿನ ಮೇಲೆ ಜಂಬದಿಂದ ಓರೆಯಾಗಿ ಕೂರುತ್ತಿದ್ದವನು, ಚಾಟಿ ಬೀಸಿ ಕೂಗು ಹಾಕಿದ. ಕುದುರೆಗಳು ಓಡಿದವು. ಟ್ರಾಯ್ಕಾ ಗಂಟೆಗಳು ಕಿಣಿಕಿಣಿ ಸದ್ದು ಮಾಡಿದವು. ಹಿಮದ ಮೇಲೆ ಕಿರುಗುಟ್ಟುತ್ತಾ ಗಾಡಿಗಳು ಸಾಗಿದವು.
ಸ್ಲೆಜ್ಜುಗಳು ಕೊಂಚವೇ ಕೊಂಚ ಓಲಾಡುತ್ತಾ, ಅಲಂಕೃತ ಬ್ರೀಚ್‌ಬ್ಯಾಂಡಿನ ಮೇಲೆ ಕುದುರೆಯ ಬಾಲಗಳು ಪುಟಪುಟನೆ ಪುಟಿಯುತ್ತಾ, ಕುದುರೆಗಳು ಸರಾಗವಾಗಿ, ವೇಗವಾಗಿ ಓಡಿದವು. ಅವುಗಳ ಕಾಲಿನ ಕೆಳಗೆ ನುಣುಪಾದ ರಸ್ತೆ ವೇಗವಾಗಿ ಹಿಂದೆ ಹಿಂದೆ ಸಾಗುತ್ತಿರುವಂತಿತ್ತು. ಗಾಡಿ ಓಡಿಸುತ್ತಿದ್ದ ಯುವಕ ಠೀವಿಯಿಂದ ಲಗಾಮು ಹಿಡಿದು ಆಗಾಗ ಎಳೆಯುತ್ತಾ, ಆಗಾಗ ಸಡಿಲ ಬಿಡುತ್ತಾ ಖುಷಿಯಾಗಿದ್ದ. ಮುಂದಿನ ಸೀಟಿನಲ್ಲಿ ಕೂತಿದ್ದ ಲಾಯರು ಮತ್ತು ಆಫೀಸರು ಮಾಕೋವ್ಕಿನಾಳ ತಲೆ ಚಿಟ್ಟು ಹಿಡಿಯುವ ಹಾಗೆ ಒಂದೇ ಸಮ ಮಾತನಾಡುತ್ತಿದ್ದರು. ಆಕೆ ಮಾತ್ರ ಫರ್ ಕೋಟನ್ನು ಮತ್ತಷ್ಟು ಬಿಗಿಯಾಗಿ ಮೈಗೆ ಸುತ್ತಿ ಹಿಡಿದುಕೊಂಡು ನಿಶ್ಚಲವಾಗಿ ಕೂತು ಆಲೋಚನೆಯಲ್ಲಿ ಮುಳುಗಿದ್ದಳು. ‘ಯಾವಾಗಲೂ ಅದೇ, ಅದೇ ಹೊಳೆಯುವ ಮುಖಗಳು, ವೈನು, ಸಿಗಾರಿನ ವಾಸನೆ, ಅದೇ ತಲೆಹರಟೆ. ಯಾವಾಗಲೂ ಅದೇ ವಿಷಯದ ಬಗ್ಗೆ ಅದೇ ಆಲೋಚನೆ, ಅದೇ ಮಾತು! ಸಂತೃಪ್ತರು! ಬದುಕಬೇಕಾದದ್ದೇ ಹೀಗೆ ಅಂತ ಬಲವಾಗಿ ನಂಬಿದ್ದಾರೆ, ಸಾಯುವವರೆಗೂ ಹೀಗೇ ಇದ್ದುಬಿಡುತ್ತಾರೆ. ಥೂ, ಹೀಗೆ ಇರುವುದಕ್ಕೆ ಇಷ್ಟವಿಲ್ಲ. ಬೋರಾಗುತ್ತದೆ. ಹಿಡಿದು ಅಲ್ಲಾಡಿಸುವಂಥ, ಬದುಕೇ ತಲೆಕೆಳಗಾಯಿತು ಅನಿಸುವಂಥ ಅನುಭವ ಆಗಬೇಕು. ಸಾರಾಟೋವ್‌ನ್ಲೋ, ಅಥವಾ ಎಲ್ಲೋ ಏನೋ, ಎಲ್ಲಿಗೋ ಹೊರಟಿದ್ದವರು ಹಿಮದಲ್ಲಿ ಮರಗಟ್ಟಿ ಹೋದರಂತಲ್ಲ ಅಂಥ ಅನುಭವ ಆಗಬೇಕು. ಹಾಗಾದರೆ ಇವರೆಲ್ಲ ಏನು ಮಾಡುತ್ತಾರೋ? ಹೇಗೆ ಆಡುತ್ತಾರೋ? ಅಸಹ್ಯ ಹುಟ್ಟುವ ಹಾಗೆ ಆಡುತ್ತಾರೆ. ನಿಜವಾಗಲೂ ಸ್ವಾರ್ಥಿಗಳು. ನಾನಿನ್ನೇನು, ಮಹಾ ಸಾಚಾನಾ? ಆದರೂ ನಾನು ನೋಡುವುದಕ್ಕೆ ಚೆನ್ನಾಗಿದ್ದೇನೆ. ಅದು ಇವರಿಗೂ ಗೊತ್ತು. ನನ್ನನ್ನ ನೋಡಿ ಆ ಸನ್ಯಾಸಿ ಏನು ಹೇಳುತ್ತಾನೋ! ಅವನಿಗೆ ‘ಅದರ’ ಬಗ್ಗೆ ರುಚಿ ಕಳೆದುಹೋಗಿದೆಯೋ? ‘ಅದರ’ ಬಗ್ಗೆ ಉದಾಸೀನ ಆಗಿದ್ದಾನೋ? ಇಲ್ಲ. ಸಾಧ್ಯವಿಲ್ಲ. ಎಲ್ಲಾರಿಗೂ ಬೇಕಾಗಿರುವುದು ‘ಅದು’ ಮಾತ್ರವೇ. ಹೋದ ವರ್ಷ ಒಬ್ಬ ಸೈನಿಕ ಬಂದಿದ್ದನಲ್ಲ, ಪೆದ್ದ, ಪೆದ್ದ!’
‘ಇವಾನ್ ನಿಕೊಲೆಯೆವಿಚ್!’ ಜೋರಾಗಿ ಕೂಗಿದಳು.
‘ಏನು ಹೇಳಿ?’
‘ಅವನಿಗೆ ಈಗ ಎಷ್ಟು ವಯಸ್ಸು?’
‘ಯಾರಿಗೆ?’
‘ಸ್ಟೆಪಾನ್ ಕಸಾಟ್ಸ್‌ಕಿಗೆ.’
‘ನಲವತ್ತು ದಾಟಿರಬೇಕು ಅಂತ ಕಾಣುತ್ತದೆ.’
‘ಹೋದವರನ್ನೆಲ್ಲ ಚೆನ್ನಾಗಿ ಮಾತಾಡಿಸುತ್ತಾನಂತೆ?’
‘ಹೌದು, ಎಲ್ಲಾರನ್ನೂ ಮಾತಾಡಿಸುತ್ತಾನೆ, ಆದರೆ ಯಾವಾಗಲೂ ಅಲ್ಲ.’
‘ಕಾಲಿಗೆ ಶಾಲು ಹೊದಿಸುತ್ತೀರಾ--ಹಾಗಲ್ಲ, ಥೂ--ಇನ್ನೂ ಸ್ವಲ್ಪ ಬಿಗಿಯಾಗಿ--ಹಾಂ, ಸರೀ ಆಯಿತು--ಕಾಲು ಚಿವುಟುವುದು ಯಾಕೋ!’
ಹೀಗೆ ಅವರು ಫಾದರ್ ಸೆರ್ಗಿಯಸ್ ಏಕಾಂತವಾಸದಲ್ಲಿದ್ದ ಗುಹೆ ಇದ್ದ ಕಾಡಿಗೆ ಬಂದರು. ಆಕೆ ಗಾಡಿಯಿಂದ ಇಳಿದು ಉಳಿದವರನ್ನೆಲ್ಲ ಮುಂದೆ ಸಾಗಿ ಎಂದಳು. ಉಳಿದವರೆಲ್ಲ ಹಟ ಒಳ್ಳೆಯದಲ್ಲ ಎಂದು ಅವಳ ಮನಸ್ಸು ತಿರುಗಿಸಲು ನೋಡಿದರು. ಆದರೆ ಅವರು ಮಾತಾಡಿದಷ್ಟೂ ಅವಳ ಹಟ ಹೆಚ್ಚಾಗಿ ಕೋಪಮಾಡಿಕೊಂಡಳು. ಸುಮ್ಮನೆ ಹೋಗುತ್ತೀರೋ ಇಲ್ಲವೋ ಎಂದು ಗದರಿಕೊಂಡಳು. ಬಿಳಿಯಾದ ಫರ್ ಕೋಟು ತೊಟ್ಟು ಆಕೆ ಒಬ್ಬಳೇ ಕಾಲುಹಾದಿಯಲ್ಲಿ ಹೆಜ್ಜೆ ಹಾಕಿದಳು. ಗಾಡಿಗಳು ಹೊರಟು ಹೋದವು. ಏನಾಗುತ್ತದೋ ನೋಡಬೇಕೆಂದು ಕೆಳಗಿಳಿದ ಲಾಯರು ಅವಳನ್ನೇ ದಿಟ್ಟಿಸುತ್ತಾ ನಿಂತುಕೊಂಡ.
ಕಾರ್ನಿವಲ್*-ಕ್ಯಾಥೊಲಿಕ್ ಕ್ರಿಶ್ಚಿಯನ್ನರು ಉಪವಾಸ ಮತ್ತಿತರ ವ್ರತಗಳನ್ನು ಆಚರಿಸಬೇಕಾದ ಲೆಂಟ್ ವಾರದ ಮುನ್ನ, ಫೆಬ್ರವರಿಯ ಮಧ್ಯಭಾಗದಲ್ಲಿ ನಡೆಯುವ ಖುಷಿ ಸಂಭ್ರಮಗಳ ಆಚರಣೆ, ಶ್ರೋವ್‌ಟೈಡ್
ಟ್ರಾಯ್ಕಾ*- ಗಾಲಿಗಳಿಲ್ಲದ, ಕುದುರೆ ಅಥವ ನಾಯಿಗಳು ಎಳೆಯುವ, ಹಿಮದ ಮೇಲೆ ಸಾಗುವ ಬಂಡಿ, ಸ್ಲೇ.
ಐದು
ಫಾದರ್ ಸೆರ್ಗಿಯಸ್‌ನ ಏಕಾಂತವಾಸದ ಆರನೆಯ ವರ್ಷ ನಡೆಯುತ್ತಿತ್ತು. ಅವನಿಗೆ ನಲವತ್ತೊಂಬತ್ತು ತುಂಬಿತ್ತು. ಏಕಾಂತವಾಸವು ಕಷ್ಟ ಅನ್ನಿಸತೊಡಗಿತ್ತು. ಉಪವಾಸ, ಪ್ರಾರ್ಥನೆಗಳ ಕಾರಣದಿಂದ ಅಲ್ಲ. ಅವು ಅವನಿಗೆ ಕಷ್ಟ ಅನಿಸುತ್ತಲೇ ಇರಲಿಲ್ಲ. ಅವನು ನಿರೀಕ್ಷಿಸಿಯೇ ಇರದಿದ್ದ ಸಂಘರ್ಷವೊಂದು ಮನಸ್ಸಿನಲ್ಲಿ ಆರಂಭವಾಗಿತ್ತು. ಅದನ್ನು ಎದುರಿಸುವುದು ಕಷ್ಟ ಅನ್ನಿಸುತ್ತಿತ್ತು. ಈ ಸಂಘರ್ಷಕ್ಕೆ ಎರಡು ಮೂಲಗಳಿದ್ದವು. ಒಂದು ಸಂಶಯ, ಇನ್ನೊಂದು ಕಾಮ. ಈ ಇಬ್ಬರೂ ಶತ್ರುಗಳು ಒಟ್ಟೊಟ್ಟಿಗೆ ಎದುರಾಗುತ್ತಿದ್ದರು. ಶತ್ರುಗಳು ಇಬ್ಬರು ಎಂದು ಅವನಿಗನ್ನಿಸಿದರೂ ನಿಜವಾಗಿ ಅವೆರಡೂ ಒಬ್ಬನೇ ಶತ್ರುವಿನ ಬೇರೆ ಬೇರೆ ಮುಖಗಳು. ಸಂಶಯವನ್ನು ಗೆದ್ದಕೂಡಲೇ ಕಾಮ ತಲೆದೋರುತ್ತಿತ್ತು. ಆದರೆ ಅವನು ಮಾತ್ರ ಅವರಿಬ್ಬರೂ ಬೇರೆ ಬೇರೆ ರಾಕ್ಷಸರೆಂದು ತಿಳಿದು ಬೇರೆ ಬೇರೆಯ ಹೋರಾಟ ನಡೆಸುತ್ತಿದ್ದ.
'ದೇವರೇ, ದೇವರೇ! ಯಾಕೆ ಹೀಗೆ? ಭಕ್ತಿ ಇಲ್ಲ, ವಿಶ್ವಾಸವಿಲ್ಲ. ಬರೀ ಕಾಮನೆ. ನಿಜ ಆಂತೊನಿಯಂಥ ಸಂತರೂ ಈ ಕಾಮದ ಉಪಟಳ ಸಹಿಸಿದ್ದರು. ಆದರೆ ಅವರ ಮನಸ್ಸಿನಲ್ಲಿ ದೃಢವಾದ ವಿಶ್ವಾಸವಿತ್ತು. ಆದರೆ ನಾನೋ? ಕೆಲವು ಹೊತ್ತಲ್ಲ, ಎಷ್ಟೋ ಗಂಟೆ, ಎಷ್ಟೋ ದಿನ ಮನಸ್ಸಿನ ತುಂಬ ಸಂಶಯ. ಈ ಲೋಕ, ಈ ಲೋಕದ ಆನಂದ ಇವೆಲ್ಲ ಪಾಪವೆಂದಾದರೆ, ಇವನ್ನೆಲ್ಲ ತ್ಯಾಗಮಾಡುವುದೇ ಸರಿಯಾದುದಾದರೆ, ಏಕೆ ಇವೆ ಅವೆಲ್ಲ? ಈ ಪ್ರಲೋಭನೆಯನ್ನೇಕೆ ಸೃಷ್ಟಿ ಮಾಡಿದೆ ದೇವರೇ? ಪ್ರಲೋಭನೆ. ಏನು ಪ್ರಲೋಭನೆ ಎಂದರೆ? ಈ ಲೋಕದ ಎಲ್ಲ ಸುಖ ಸಂತೋಷ ಬಿಟ್ಟು ಪರಲೋಕಕ್ಕೆ ಸಿದ್ಧನಾಗುತ್ತಿರುವುದೇಕೆ? ಇದೂ ಪ್ರಲೋಭನೆಯಲ್ಲವೇ? ಆ ಲೋಕ ಇರದಿದ್ದರೆ?' ಇಂಥ ಯೋಚನೆ ಬಂದಕೂಡಲೆ ನಡುಗಿದ. ತನ್ನ ಬಗ್ಗೆಯೇ ಅಸಹ್ಯವಾಯಿತು. 'ಅಯ್ಯೋ, ಸಂತನಾಗಲು ಬಯಸುವ ಕ್ರಿಮಿಯೇ!' ಎಂದು ಹಳಿದುಕೊಂಡ. ಪ್ರಾರ್ಥನೆಗೆ ಶುರುಮಾಡಿದ. ಪ್ರಾರ್ಥನೆಗೆ ತೊಡಗಿದ ಕೂಡಲೇ ಚರ್ಚಿನ ಪ್ರಮುಖ ಹುದ್ದೆಯನ್ನು ಅಲಂಕರಿಸಿ ಬಿರೆಟಾ* ಮತ್ತು ನಿಲುವಂಗಿ ಧರಿಸಿಕೊಂಡು ಗಂಭೀರವದನನಾಗಿ ನಡೆದುಬರುತ್ತಿದ್ದೇನೆ ಅನ್ನುವ ಚಿತ್ರ ಮನಸ್ಸಿನಲ್ಲಿ ನಿಜವೆಂಬಷ್ಟು ಸ್ಪಷ್ಟವಾಗಿ ಮೂಡಿತು. ತಲೆ ಕೊಡವಿದ. 'ತಪ್ಪು, ಹೀಗೆ ಯೋಚನೆಮಾಡಬಾರದು. ಅದು ಮೋಸ. ಬೇರೆಯವರನ್ನು ಮೋಸಮಾಡಿದರೂ ಮಾಡಬಹುದೇನೋ, ನನಗೆ ನಾನೇ ಮೋಸ ಮಾಡಿಕೊಳ್ಳಬಾರದು, ದೇವರಿಗೆ ಮೋಸಮಾಡಬಾರದು. ನನ್ನದು ಘನವಾದ ವ್ಯಕ್ತಿತ್ವವಲ್ಲ, ಹಾಸ್ಯಾಸ್ಪದವಾದ ಕ್ಷುದ್ರ ಮನುಷ್ಯ ನಾನು!' ಎಂದುಕೊಂಡ. ನಿಲುವಂಗಿಯನ್ನು ಹಿಂದೆ ಸರಿಸಿ, ಒಳ ಉಡುಪುಗಳಲ್ಲಿ ಕಂಡ ತನ್ನದೇ ಬಡಕಲು ಕಾಲುಗಳನ್ನು ನೋಡಿಕೊಂಡು ಮುಗುಳ್ನಕ್ಕ. ಮತ್ತೆ ನಿಲುವಂಗಿ ಸರಿಪಡಿಸಿಕೊಂಡು ಪ್ರಾರ್ಥನೆಗೆ ಶುರುಮಾಡಿದ. ಪ್ರಾರ್ಥನೆಯಲ್ಲಿ 'ಈ ಹಾಸುಗೆಯೆ ನನ್ನ ಸಮಾಧಿಯೆ' ಎಂಬ ಸಾಲೊಂದು ಬಂದಿತು. ಅದನ್ನು ಹೇಳುತ್ತಿದ್ದಂತೆ ಯಾವುದೋ ಪಿಶಾಚಿ 'ಒಂಟಿ ಹಾಸುಗೆ ಸಮಾಧಿಯಲ್ಲದೆ ಮತ್ತೇನು? ಸುಳ್ಳು, ಬರೀ ಸುಳ್ಳು' ಎಂದು ಅವನ ಕಿವಿಯಲ್ಲಿ ಪಿಸುಗುಟ್ಟಿದಂತಾಯಿತು. ಅವನ ಮನಸ್ಸು ಬಲು ಹಿಂದೆ ಸಂಬಂಧವಿಟ್ಟುಕೊಂಡಿದ್ದ ವಿಧವೆಯೊಬ್ಬಳ ಭುಜಗಳ ಚಿತ್ರವನ್ನು ಕಲ್ಪಿಸಿಕೊಂಡಿತು. ಆ ಯೋಚನೆಯನ್ನು ಬಲವಂತವಾಗಿ ಕೊಡವಿಕೊಂಡು ಪ್ರಾರ್ಥನೆ ಮುಂದುವರೆಸಿದ. ಪ್ರಾರ್ಥನೆಯ 'ನಿಯಮ'* ಗಳನ್ನು ಮುಗಿಸಿ ಸುವಾರ್ತೆಗಳ ಭಾಗದ ಯಾವುದೋ ಒಂದು ಪುಟವನ್ನು ತೆರೆದ. ಅದು ಅವನು ಅನೇಕ ಬಾರಿ ಓದಿ ಬಾಯಿಪಾಠವಾಗಿದ್ದ ಭಾಗ. 'ದೇವರೇ, ನಿನ್ನನ್ನು ನಂಬುತ್ತೇನೆ! ನನ್ನ ಅಪನಂಬಿಕೆಯನ್ನು ಹೋಗಲಾಡಿಸು!' ಎಂದು ಓದುತ್ತಾ ಮನಸ್ಸಿನಲ್ಲಿ ತಲೆ ಎತ್ತಿದ್ದ ಸಂಶಯಗಳನ್ನೆಲ್ಲ ದೂರಮಾಡಿಕೊಂಡ. ಉರುಟು ಗೋಲಿಯನ್ನು ಇಳಿಜಾರಿನ ಅಂಚಿನಲ್ಲಿ ಕಷ್ಟಪಟ್ಟು ಸಮತೋಲನದಲ್ಲಿ ನಿಲ್ಲಿಸಿ ತಟ್ಟನೆ ದೂರ ಸರಿಯುವಂತೆ ತನ್ನ ವಿಶ್ವಾಸವನ್ನು ಅಸ್ಥಿರವಾದ ತಳಹದಿಯಮೇಲೆ ಕಷ್ಟಪಟ್ಟು ನಿಲ್ಲಿಸಿ, ಮನಸ್ಸಿಗೆ ಅಭ್ಯಾಸವಾಗಿದ್ದ ಕಣ್ಣಪಟ್ಟಿ ತೊಡಿಸಿ, ಚಿಕ್ಕಂದಿನಿಂದಲೂ ಹೇಳುತ್ತ ಬಂದಿದ್ದ 'ನಾನು ನಿನ್ನವನು ಪ್ರಭೂ, ನಿನ್ನವನು' ಎಂಬ ಪ್ರಾರ್ಥನೆ ಹೇಳಿಕೊಂಡ. ಎಷ್ಟೋ ಸಮಾಧಾನವಾದಂತಾಯಿತು. ಮನಸ್ಸಿನ ತುಂಬ ಆನಂದದ ಪುಳಕ. ಎದೆಯ ಮೇಲೆ ಶಿಲುಬೆಯ ಆಕಾರದಲ್ಲಿ ಕೈ ಆಡಿಸಿಕೊಂಡು ಕಿರು ಬೆಂಚಿನ ಮೇಲಿದ್ದ ಹಾಸಿದ್ದ ತೆಳ್ಳನೆಯ ಚಾಪೆಯ ಮೇಲೆ, ಬೇಸಗೆಯಲ್ಲಿ ತೊಡುವ ನೂಲಿನ ನಿಲುವಂಗಿಯನ್ನೆ ತಲೆದಿಂಬು ಮಾಡಿಕೊಂಡು ಮಲಗಿದ. ತಟ್ಟನೆ ಜೋಂಪು ಹತ್ತಿತು. ಆ ಅರೆನಿದ್ರೆಯಲ್ಲಿ ಯಾವುದೋ ಹಿಮಗಾಡಿಯ ಗಂಟೆಗಳ ಕಿಣಿಕಿಣಿ ಸದ್ದು ಕೇಳಿಸಿದಂತಾಯಿತು. ನಿಜವಾಗಿ ಕೇಳುತ್ತಿದೆಯೋ ಕನಸು ಬಿದ್ದಿದೆಯೋ ಗೊತ್ತಾಗಲಿಲ್ಲ ಅವನಿಗೆ. ಬಾಗಿಲು ಬಡಿಯುವ ಸದ್ದು ಕೇಳಿ ಎದ್ದು ಕುಳಿತ. ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ. ಬಾಗಿಲು ಬಡಿಯುವ ಸದ್ದು ಮತ್ತೆ ಕೇಳಿಸಿತು. ಇಲ್ಲೇ ಎಲ್ಲೋ ಸಮೀಪದಲ್ಲಿ, ಅಲ್ಲ, ನನ್ನ ಕೋಣೆಯ ಬಾಗಿಲನ್ನೆ ಬಡಿಯುತ್ತಿದ್ದಾರೆ, ಯಾರೋ ಹೆಂಗಸಿನ ಧ್ವನಿ ಇದ್ದಂತಿದೆ ಅನ್ನಿಸಿತು.
'ದೇವರೇ! ನಿಜವಿರಬಹುದೇ ಇದು? ಸಂತರ ಜೀವನ ಚರಿತ್ರೆಗಳಲ್ಲಿ ಓದಿದ್ದ ಹಾಗೆ ಸೈತಾನ ಹೆಣ್ಣು ವೇಷ ಧರಿಸಿ ಬಂದಿರಬಹುದೇ? ಹೌದು ಇದು ಹೆಣ್ಣು ದನಿ. ಮೃದುವಾದ, ಕಂಪಿಸುವ, ಸವಿಯಾದ ದನಿ!' ಥೂ ಎಂದು ಉಗುಳಿ 'ತೊಲಗು, ತೊಲಗು' ಎಂದ.
'ಯಾರೂ ಇಲ್ಲ. ಇದೆಲ್ಲ ಬರೀ ನನ್ನ ಕಲ್ಪನೆ' ಎಂದು ಮನಸ್ಸಿಗೆ ಸಮಾಧಾನ ಹೇಳಿಕೊಂಡು ಪ್ರಾರ್ಥನೆಯ ಪೀಠದ ಬಳಿಗೆ ಹೋಗಿ, ಎಂದಿನ ಅಭ್ಯಾಸದಂತೆ ನೆಲಕ್ಕೆ ಮೊಳಕಾಲೂರಿ ಕುಳಿತ. ಹಾಗೆ ಮಂಡಿಯೂರಿ ಕುಳಿತುಕೊಳ್ಳುವ ಕ್ರಿಯೆಯೇ ಅವನ ಮನಸ್ಸಿಗೆ ಸಮಾಧಾನವನ್ನೂ ತೃಪ್ತಿಯನ್ನೂ ತರುತ್ತಿತ್ತು. ನೆಲಕ್ಕೆ ಹಣೆಯನ್ನು ಒತ್ತಿ ನಮಸ್ಕರಿಸಿದಾಗ ಉದ್ದವಾದ ತಲೆಗೂದಲು ಮುಂದೆ ಬಿದ್ದು ಮುಖವನ್ನು ಮರೆಮಾಡಿದವು. ಕೂದಲುದುರಿ ವಿಶಾಲವಾಗಿದ್ದ ಹಣೆಗೆ ಒದ್ದೆನೆಲದ ತೇವ ತಾಕಿತು. ಪ್ರಲೋಭನೆಗಳನ್ನು ನಿವಾರಿಸುತ್ತದೆ ಎಂದು ವೃದ್ಧ ಫಾದರ್ ಪೈಮೋನ ಹೇಳಿದ್ದ ಪ್ರಾರ್ಥನೆಯನ್ನು ಓದಿದ. ಎದ್ದು ನಿಂತ. ಕೃಶವಾಗಿದ್ದ ಅವನ ಶರೀರವನ್ನು ದೃಢವಾದ ಕಾಲುಗಳು ಸಲೀಸಾಗಿ ಹೊತ್ತಿದ್ದವು. ಪ್ರಾರ್ಥನೆ ಮುಂದುವರೆಸಬೇಕೆಂದುಕೊಂಡರೂ ಅವನ ಕಿವಿಗಳು ಸ್ವಂತ ಇಚ್ಛೆಯಿಂದೆಂಬಂತೆ ಆ ಮಧುರವಾದ ದನಿಯನ್ನು ಕೇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದವು. ಆ ದನಿ ಮತ್ತೆ ಕೇಳಿಸಲಿ ಎಂದು ಆಸೆಯಾಗುತ್ತಿತ್ತು. ಹೊರಗೆ ಎಲ್ಲ ನಿಶ್ಚಲವಾಗಿತ್ತು. ಗುಹೆಯ ಚಾವಣಿಯಮೇಲೆ ಬಿದ್ದು ಕರಗಿದ ಹಿಮ ಗೋಡೆಯ ಬಿರುಕಿನಿಂದ ಕೆಳಗೆ ಇಟ್ಟ ಬೋಗುಣಿಗೆ ಹನಿ ಹನಿಯಾಗಿ ಲಯಬದ್ಧವಾಗಿ ತಟಕಿಕ್ಕುವ ಸದ್ದು ಬಿಟ್ಟರೆ ಬೇರೆ ಏನೂ ಕೇಳಿಸಲಿಲ್ಲ. ಹೊರಗೆ ಇಡೀ ಲೋಕದ ಮೇಲೆ ಕಾವಳ ಕವಿದಂತಿತ್ತು. ನಿಶ್ಚಲ, ನಿಶ್ಚಲ. ಇದ್ದಕ್ಕಿದ್ದಂತೆ ಕಿಟಕಿಯ ಬಳಿ ಸರಸರ ಸದ್ದು ಕೇಳಿಸಿತು. ಮತ್ತೆ ಅದೇ ಮೃದುವಾದ, ಸವಿಯಾದ, ಭಯ ತುಂಬಿದ ದನಿ ಸ್ಪಷ್ಟವಾಗಿ ಕೇಳಿಸಿತು. ಸುಂದರಳಾದ ಹೆಣ್ಣಿಗೆ ಮಾತ್ರ ಅಂಥ ಧ್ವನಿ ಇರಲು ಸಾಧ್ಯ. ಹೆಂಗಸು ಹೇಳಿದಳು:
'ದಯವಿಟ್ಟು ಬಾಗಿಲು ತೆಗೆಯಿರಿ. ಕ್ರಿಸ್ತ ನಿಮಗೆ ಒಳಿತು ಮಾಡುತ್ತಾನೆ.'
ಮೈಯ ರಕ್ತವೆಲ್ಲ ಎದೆಗೆ ನುಗ್ಗಿ ಚಲಿಸಲಾರದೆ ನಿಂತಂತೆ ಅನಿಸಿತು ಫಾದರ್ ಸೆರ್ಗಿಯಸ್ಸನಿಗೆ. ಉಸಿರಾಡುವುದೇ ಕಷ್ಟವಾಯಿತು.
'ದೇವರು ಕಣ್ತೆರೆಯಲಿ, ದೇವರ ಶತ್ರುಗಳು ನಾಶವಾಗಲಿ...'
'ನಾನೇನು ದೆವ್ವ ಅಲ್ಲ!' ಆ ಮಾತುಗಳನ್ನು ನುಡಿದ ತುಟಿಗಳು ಮುಗುಳುನಗುತ್ತಿರಬೇಕು ಅನಿಸಿತು ಅವನಿಗೆ. 'ನಾನೇನು ದೆವ್ವ ಅಲ್ಲ. ದಾರಿ ತಪ್ಪಿ ಬಂದ ಪಾಪಿಷ್ಠೆ ಹೆಂಗಸು. ದಾರಿತಪ್ಪಿದ ಅಂದರೆ ಬೇರೇನೋ ಭಾವಿಸಬೇಡಿ, ನಿಜವಾಗಿ ದಾರಿ ತಪ್ಪಿ ಇಲ್ಲಿಗೆ ಬಂದಿರುವೆ ಅಷ್ಟೆ. ಚಳಿಗೆ ಮೈ ಕೊರೆಯುತ್ತಿದೆ. ದಯವಿಟ್ಟು ಆಶ್ರಯ ಕೊಡಿ.'
ಕಿಟಕಿಯ ಗಾಜಿಗೆ ಮುಖ ಒತ್ತಿ ನೋಡಿದರೆ ಕ್ರಿಸ್ತನ ಮುಂದೆ ಉರಿಯುತ್ತಿದ್ದ ಪುಟ್ಟ ದೀಪದ ಪ್ರತಿಫಲನವಷ್ಟೇ ಕಾಣಿಸಿತು. ಅಂಗೈಯನ್ನು ಬೊಗಸೆಮಾಡಿ, ಕಣ್ಣಿನ ಎರಡೂ ಅಂಚಿನಿಂದ ಬೆಳಕು ಮರೆಮಾಡಿಕೊಂಡು ನೋಡಿದ. ಮಬ್ಬು ಮಂಜು, ಕತ್ತಲು, ಮರ. ಮತ್ತೆ ಅವನ ಮುಖದ ಎದುರಿಗೇ ಅವಳು. ತಲೆಗೆ ಕ್ಯಾಪು ತೊಟ್ಟು, ಸಡಿಲವಾದ ಉದ್ದನೆಯ ಬಿಳಿಯ ಫರ್ ಕೋಟು ಬಿಗಿಯಾಗಿ ಎಳೆದು ಹಿಡಿದುಕೊಂಡಿರುವ, ಕರುಣೆ ಹುಟ್ಟಿಸುವ ಭಯಗೊಂಡ ಚಲುವಾದ ಮುಖದವಳು. ಅವನಿಂದ ಒಂದೋ ಎರಡೋ ಇಂಚು ದೂರದಲ್ಲಿ. ಅವರ ಕಣ್ಣು ಕಲೆತ ಕ್ಷಣದಲ್ಲಿಯೇ ಪರಸ್ಪರ ಗುರುತು ಸಿಕ್ಕಿಬಿಟ್ಟಿತು. ಅವರು ಮೊದಲೇ ಭೇಟಿಯಾಗಿದ್ದರೆಂದರ್ಥವಲ್ಲ. ಇಲ್ಲ. ಅವರು ಒಬ್ಬರನ್ನೊಬ್ಬರು ನೋಡಿರಲಿಲ್ಲ. ಆದರೂ 'ನಾವಿಬ್ಬರೂ ಪರಸ್ಪರ ಚೆನ್ನಾಗಿ ಬಲ್ಲೆವು' ಎಂದು ಅವರಿಗೆ, ಅದರಲ್ಲೂ ಅವನಿಗೆ, ತಟ್ಟನೆ ಅನ್ನಿಸಿಬಿಟ್ಟಿತು. ಹಾಗೆ ನೋಡಿದಮೇಲೆ ಅವಳು ದೆವ್ವ ಇರಬಹುದು ಎಂಬ ಆಲೋಚನೆಗೆ ತಾವಿರಲಿಲ್ಲ. ಸರಳ ಸ್ವಭಾವದ, ಕರುಣೆ ಹುಟ್ಟಿಸುವಂತಿರುವ, ಚೆಲುವೆಯಾದ ಭಯಭೀತ ಹೆಂಗಸು ಅಷ್ಟೆ ಅವಳು.
'ಯಾರು ನೀನು? ಯಾಕೆ ಬಂದಿದ್ದೀಯ?' ಅವನು ಕೇಳಿದ.
'ಬಾಗಿಲು ತೆಗೀರಿ ಮೊದಲು' ತುಂಟತನದ ಅಧಿಕಾರವಾಣಿಯಲ್ಲಿ ಹೇಳಿದಳು. 'ಚಳಿಗೆ ಮೈ ಮರಗಟ್ಟುತ್ತಾ ಇದೆ. ದಾರಿ ತಪ್ಪಿ ಬಂದೆ ಅಂತ ಹೇಳಿದೆನಲ್ಲ.'
'ನಾನು ಸನ್ಯಾಸಿ. ಏಕಾಂತವಾಸದಲ್ಲಿರುವವನು.'
'ಆದರೇನಂತೆ? ಬಾಗಿಲು ತೆಗೆಯಿರಿ. ನೀವು ಪ್ರಾರ್ಥನೆ ಮಾಡುತ್ತಿರುವಾಗ ನಾನು ಇಲ್ಲಿ ಚಳಿಗೆ ಸಿಕ್ಕಿ ಸಾಯಬೇಕು ಅನ್ನುತ್ತೀರಾ?'
'ಆದರೆ...'
'ನಾನೇನು ನಿಮ್ಮನ್ನು ತಿಂದುಬಿಡುವುದಿಲ್ಲ. ನಿಮಗೆ ಪುಣ್ಯ ಬರುತ್ತದೆ. ನನ್ನ ಮೈ ಸೆಟೆದುಹೋಗುತ್ತಿದೆ.'
ಅವಳಿಗೆ ಈಗ ಭಯವಾಗುತ್ತಿತ್ತು. ಕಣ್ಣಲ್ಲಿ ನೀರು ತುಂಬಿಬಂದಿರುವ ಸೂಚನೆ ಅವಳ ದನಿಯಲ್ಲಿತ್ತು.
ಕಿಟಕಿಯಿಂದ ಎರಡು ಹೆಜ್ಜೆ ಹಿಂದೆ ಸರಿದ. ಮುಳ್ಳಿನ ಕಿರೀಟ ತೊಟ್ಟ ಏಸುವಿನ ವಿಗ್ರಹದತ್ತ ನೋಡಿದ. 'ದೇವರೇ, ಕಾಪಾಡು! ದೇವರೇ, ಕಾಪಾಡು!' ಎಂದು ಗೊಣಗಿಕೊಂಡ. ಎದೆಯ ಮೇಲೆ ಶಿಲುಬೆಯ ಆಕಾರ ಬರೆದುಕೊಂಡು ತಲೆ ಬಗ್ಗಿಸಿ ಪ್ರಾರ್ಥನೆಮಾಡಿದ. ಹೊರಬಾಗಿಲಿನತ್ತ ನಡೆದ. ಬಾಗಿಲ ಅಗುಳಿ ಎಲ್ಲಿದೆ ಎಂದು ಕತ್ತಲಲ್ಲಿ ತಡಕಾಡಿದ. ಸಿಕ್ಕಿತು. ಹೊರಗೆ ಹೆಜ್ಜೆಯ ಸದ್ದು ಕೇಳಿಸಿತು. ಕಿಟಕಿಯನ್ನು ಬಿಟ್ಟು ಬಾಗಿಲ ಹತ್ತಿರ ಬರುತ್ತಿದ್ದಳು. ಇದ್ದಕ್ಕಿದ್ದಂತೆ ಹಾ ಅಂದಳು. ಚಾವಣಿಯಿಂದ ತೊಟ್ಟಿಕ್ಕಿ ಹೊಸ್ತಿಲ ಬಳಿ ನಿಂತಿದ್ದ ನೀರಿನಲ್ಲಿ ಕಾಲಿಟ್ಟಿರಬೇಕು ಅಂದುಕೊಂಡ. ಅವನ ಕೈ ನಡುಗುತ್ತಿತ್ತು. ಬಿಗಿಯಾಗಿ ಹಾಕಿದ್ದ ಬಾಗಿಲಿನ ಅಗುಳಿಯನ್ನು ತೆಗೆಯುವುದು ಕಷ್ಟವಾಯಿತು.
'ಏನು ಮಾಡುತ್ತಿದ್ದೀರಿ? ಬಾಗಿಲು ತೆಗೆಯಿರಿ. ನೆನೆದು ತೊಪ್ಪೆಯಾಗಿದ್ದೇನೆ. ಮೈ ಮರಗಟ್ಟುತ್ತಾ ಇದೆ. ನೀವು ನಿಮ್ಮ ಆತ್ಮವನ್ನು ಕಾಪಾಡಿಕೊಳ್ಳುತ್ತಾ ನಾನು ಇಲ್ಲೇ ಸಾಯಬೇಕು ಅಂತ ಇದ್ದೀರಾ...'
ಬಾಗಿಲನ್ನು ತನ್ನತ್ತ ಎಳೆದುಕೊಂಡು ಅಗುಳಿ ತೆಗೆದ. ಆಮೇಲೆ ಏನು ಮಾಡುತ್ತಿದ್ದೇನೆಂದು ಗೊತ್ತಿಲ್ಲದೆ ಜೋರಾಗಿ ಬಾಗಿಲು ದೂಡಿದ. ಆ ರಭಸಕ್ಕೆ ಬಾಗಿಲು ಅವಳಿಗೆ ಬಡಿಯಿತು.
'ಸಾರಿ, ಸಾರಿ. ಕ್ಷಮಿಸಿ!' ಎಂದು ಉದ್ಗರಿಸಿದ. ಮಹಿಳೆಯರೊಡನೆ ಮಾತನಾಡುವ ಹಳೆಯ ಸೌಜನ್ಯದ ರೀತಿ ಮತ್ತೆ ಬಂದುಬಿಟ್ಟಿತ್ತು. ಸಾರಿ, ಕ್ಷಮಿಸಿ ಎಂದು ಹೇಳಿದ ದನಿಯನ್ನು ಕೇಳಿ ಸಣ್ಣದಾಗಿ ನಕ್ಕಳು. 'ಇವನು ಗೆಲ್ಲಲಾರದವನೇನೂ ಅಲ್ಲ' ಅಂದುಕೊಂಡಳು. 'ನನ್ನನ್ನು ಕ್ಷಮಿಸಬೇಕಾದವರು ನೀವು. ಇಂಥ ಹೊತ್ತಿನಲ್ಲಿ ನಾನು ಹೊರಡಲೇ ಬಾರದಾಗಿತ್ತು. ಸಂದರ್ಭ ಹಾಗೆ ಬಂತು ಮಾಡುವುದೇನು...' ಅಂದಳು.
'ಬನ್ನಿ' ಅನ್ನುತ್ತಾ ಕೊಂಚ ಪಕ್ಕಕ್ಕೆ ಸರಿದು ಅವಳು ಒಳಕ್ಕೆ ಬರಲು ಅನುವುಮಾಡಿಕೊಟ್ಟ.
ಅವಳು ಅವನನ್ನು ದಾಟಿ ಹೋಗುತ್ತಿದ್ದಂತೆ, ಬಹಳ ಕಾಲದ ಹಿಂದೆಯೇ ಮರೆತು ಹೋಗಿದ್ದ, ಮಧುರವಾದ ಸುಗಂಧದ ಕಂಪು ಅವನ ಮೇಲೆ ದಾಳಿಮಾಡಿತು. ತಲೆಬಾಗಿಲು ದಾಟಿ ಅವನ ಕೋಣೆಯತ್ತ ಹೆಜ್ಜೆ ಹಾಕಿದಳು. ಬಾಗಿಲು ಮುಚ್ಚಿ, ಅಗಳಿಯನ್ನು ಹಾಕದೆ ಹಾಗೇ ಬಿಟ್ಟು, ಅವಳ ಹಿಂದೆ ನಡೆದ.
'ದೇವ ಪುತ್ರ, ಕರುಣಾಮಯಿ ಏಸು, ಪಾಪಿಯ ಮೇಲೆ ಕರುಣೆ ತೋರಿಸು. ದೇವರೇ, ನಾನು ಪಾಪಿ, ನನ್ನನ್ನು ಕಾಪಾಡು' ಎಂದು ಪ್ರಾರ್ಥಿಸಿಕೊಂಡ. ಬರಿಯ ಮನಸ್ಸಿನಲ್ಲಲ್ಲ, ಅವನಿಗೇ ಗೊತ್ತಿಲ್ಲದೆ ತುಟಿಗಳೂ ಆ ಮಾತುಗಳನ್ನು ಅನ್ನುತ್ತಿದ್ದವು.
'ಕುಳಿತುಕೊಳ್ಳಿ, ಸುದಾರಿಸಿಕೊಳ್ಳಿ' ಎಂದ.
ಕೋಣೆಯ ನಡುವೆ ನಿಂತಿದ್ದಳು. ಅವಳ ಉಡುಪಿನಿಂದ ನೀರು ನೆಲದಮೇಲೆ ತೊಟ್ಟಿಡುತ್ತಿತ್ತು. ಅವನನ್ನೇ ನೋಡುತ್ತಿದ್ದಳು. ಅವಳ ಕಣ್ಣು ನಗುತ್ತಿದ್ದವು.
'ನಿಮ್ಮ ಏಕಾಂತಕ್ಕೆ ಭಂಗ ತಂದದ್ದಕ್ಕೆ ಕ್ಷಮಿಸಿ. ಎಂಥಾ ಗತಿ ಬಂತು ನೋಡಿ ನನಗೆ. ಸ್ಲೆಡ್ಜ್ ಡ್ರೈವಿಗೆ ಅಂತ ಹೋಗಿದ್ದೆವು. ನಾನು ವರೊಬ್ವೆಕಾದಿಂದ ಊರಿನವರೆಗೆ ಒಬ್ಬಳೇ ನಡೆದು ಬರುತ್ತೇನೆ ಅಂತ ಬೆಟ್ಟು ಕಟ್ಟಿದೆ. ಬರುತ್ತಾ ಬರುತ್ತಾ ದಾರಿ ತಪ್ಪಿ ಹೋಯಿತು. ನಿಮ್ಮ ಮಠ ಕಾಣದೆ ಇದ್ದಿದ್ದರೆ...' ಸುಳ್ಳು ಹೇಳುತ್ತಿದ್ದಳು. ಅವನ ಮುಖದಲ್ಲಿದ್ದ ಗೊಂದಲ ಆತಂಕಗಳನ್ನು ಕಂಡು ಸುಳ್ಳು ಮುಂದುವರೆಸುವುದು ಕಷ್ಟವಾಯಿತು. ಅವನು ಹೀಗಿರುತ್ತಾನೆ ಅಂದುಕೊಂಡೇ ಇರಲಿಲ್ಲ ಅವಳು. ಅಂದುಕೊಂಡಿದ್ದಷ್ಟು ಸುಂದರನಲ್ಲದಿದ್ದರೂ ನೆರೆಯುತ್ತಿದ್ದ ಕೊಂಚ ಗುಂಗುರು ಗುಂಗುರಾದ ತಲೆಗೂದಲು, ಗಡ್ಡ, ನೀಟಾದ ಚೂಪು ಮೂಗು, ಅವಳತ್ತ ದಿಟ್ಟಿಸಿ ನೋಡುವಾಗ ಕೆಂಡದ ಹಾಗೆ ಉರಿಯುತ್ತಿದ್ದ ಕಪ್ಪು ಕಣ್ಣುಗಳು ಇವೆಲ್ಲ ಅವಳ ಮನಸ್ಸನ್ನು ಸೆಳೆದವು.
ಸುಳ್ಳು ಹೇಳುತ್ತಿದ್ದಾಳೆ ಎಂದು ಅವನಿಗೆ ತಿಳಿಯಿತು.
'ಸರಿ...ಸರಿ' ಅನ್ನುತ್ತಾ ಅವಳನ್ನು ಒಮ್ಮೆ ನೋಡಿ ದೃಷ್ಟಿ ತಗ್ಗಿಸಿದ. 'ನಾನು ಒಳಗೆ ಹೋಗುತ್ತೇನೆ, ನೀವು ಇಲ್ಲಿ ಮಲಗಿಕೊಳ್ಳಿ' ಅಂದ.
ಉರಿಯುತ್ತಿದ್ದ ದೀಪದಿಂದ ಮೇಣದ ಬತ್ತಿಯನ್ನು ಹಚ್ಚಿಕೊಂಡು, ಅವಳಿಗೆ ತಲೆ ಬಾಗಿಸಿ ನಮಸ್ಕಾರಮಾಡಿ, ತನ್ನ ಕೋಣೆಗೆ ಹೋಗಿಬಿಟ್ಟ. ಭಾರವಾದ ಏನನ್ನೋ ಎಳೆಯುತ್ತಿರುವ ಸದ್ದು ಕೇಳಿಸಿತು. 'ನಾನು ಬಾಗಿಲು ತೆಗೆದು ಒಳಕ್ಕೆ ಹೋಗದಿರಲಿ ಅಂತ ಏನೋ ಅಡ್ಡ ಇಡುತ್ತಿರಬಹುದು' ಎಂದುಕೊಂಡಳು, ನಗುತ್ತಾ. ಬಿಳಿಯ ಚರ್ಮದ ನಿಲುವಂಗಿಯಂಥ ಕೋಟು ತೆಗೆದೆಸೆದಳು. ಅದರ ಕ್ಯಾಪು ಅವಳ ತಲೆಗೂದಲಿಗೆ, ಮತ್ತೆ ಕ್ಯಾಪಿನ ಕೆಳಗೆ ಹಾಕಿಕೊಂಡಿದ್ದ ಕಸೂತಿಯ ಕರ್ಚೀಫಿಗೆ ಸಿಕ್ಕಿಹಾಕಿಕೊಂಡಿತ್ತು. ಕಿಟಕಿಯ ಬಳಿ ನಿಂತಿದ್ದಾಗ ಅವಳೇನೂ ಅಷ್ಟು ನೆನೆದಿರಲಿಲ್ಲ. ಒಳಕ್ಕೆ ಕರೆಯಲಿ ಎಂದೇ ನೆನೆದು ತೊಪ್ಪೆಯಾಗಿದ್ದೇನೆ ಎಂದು ನೆಪ ಹೇಳಿದ್ದಳು. ಬಾಗಿಲ ಬಳಿ ನಿಂತಿದ್ದ ನೀರಿನ ಪುಟ್ಟ ಹೊಂಡಕ್ಕೆ ಕಾಲಿಟ್ಟಾಗ ಅವಳ ಎಡಗಾಲಿನ ಪಾದ ಪೂರ್ತಿ ನೀರಿನಲ್ಲಿ ಮುಳುಗಿ ಬೂಟಿನೊಳಗೆಲ್ಲ ನೀರು ಸೇರಿತ್ತು. ಅವನ ಮಂಚದ ಮೇಲೆ ಕೂತು-ಚಿಕ್ಕ ಕೆಂಪು ಜಮಖಾನೆ ಹಾಸಿದ್ದ ಬೆಂಚು ಅಷ್ಟೇ ಅದು- ಬೂಟು ತೆಗೆಯತೊಡಗಿದಳು. ಗವಿಯಂಥ ಏಳಡಿ, ಒಂಬತ್ತಡಿ ಅಳತೆಯ ಆ ಚಿಕ್ಕ ಕೋಣೆ ಅವಳಿಗೆ ತುಂಬ ಸುಂದರವಾಗಿದೆ ಅನ್ನಿಸಿತು. ಕನ್ನಡಿಯಷ್ಟೆ ಸ್ವಚ್ಛವಾಗಿತ್ತು. ಅವಳು ಕೂತಿದ್ದ ಬೆಂಚು, ಅದರ ಮೇಲೆ ಗೋಡೆಗೆ ಹೊಡೆದಿದ್ದ ಬುಕ್ಕು ಶೆಲ್ಫು, ಮೂಲೆಯಲ್ಲಿದ್ದ ಲೆಕ್ಟರ್ನ್ ಬಿಟ್ಟರೆ ಇನ್ನೇನೂ ಇರಲಿಲ್ಲ ಅಲ್ಲಿ. ಬಾಗಿಲಿಗೆ ಒಂದು ಮೊಳೆ ಹೊಡೆದು ಕುರಿಯ ಚರ್ಮದ ಕೋಟು ಮತ್ತೆ ಒಂದು ಕ್ಯಾಸಕ್ ನೇತುಹಾಕಿತ್ತು. ಲೆಕ್ಟರ್ನ್‌ನ ಮೇಲುಗಡೆ ಪುಟ್ಟ ದೀಪ ಮತ್ತೆ ಮುಳ್ಳಿನ ಕಿರೀಟ ತೊಟ್ಟ ಏಸುವಿನ ವಿಗ್ರಹ ಇದ್ದವು. ರೂಮಿನಲ್ಲಿ ಬೆವರಿನ, ದೀಪದ ಎಣ್ಣೆಯ, ಮಣ್ಣಿನ ವಾಸನೆಗಳು ವಿಚಿತ್ರವಾಗಿ ಬೆರೆತಿದ್ದವು. ರೂಮಿನಲ್ಲಿದ್ದ ಎಲ್ಲವೂ, ವಾಸನೆ ಕೂಡ, ಅವಳಿಗೆ ಇಷ್ಟವಾದವು.
ಕಾಲು, ಅದರಲ್ಲೂ ಎಡಗಾಲು, ಒದ್ದೆಯಾಗಿ ಕಸಿವಿಸಿಯಾಗುತ್ತಿತ್ತು. ಬೂಟುಗಳನ್ನು ಬಿಚ್ಚಲು ತೊಡಗಿದಳು. ಬಿಚ್ಚುತ್ತಾ ತನಗೆ ತಾನೆ ಮುಗುಳ್ನಗುತ್ತಿದ್ದಳು. ಕಟ್ಟಿದ್ದ ಬೆಟ್ ಗೆದ್ದದ್ದಕ್ಕಿಂತ ಚೆಲುವನಾದ, ವಿಚಿತ್ರಸ್ವಭಾವದ, ಆಕರ್ಷಕನಾದ, ಹತ್ತು ಜನರಲ್ಲಿ ಎದ್ದುಕಾಣುವಂಥ ಅಪರಿಚಿತ ಗಂಡಸಿನ ಮನಸ್ಸಿನಲ್ಲಿ ತಳಮಳ ಹುಟ್ಟಿಸಿಬಿಟ್ಟೆ ಎಂದು ಖುಷಿಪಡುತ್ತಿದ್ದಳು. 'ಅವನು ರಿಯಾಕ್ಟ್ ಮಾಡಲಿಲ್ಲ. ಆದರೇನು, ಮನಸ್ಸು ಕದಡಿ ಹೋಗಿರುವುದು ಗ್ಯಾರಂಟಿ' ಅಂದುಕೊಂಡಳು.
'ಫಾದರ್ ಸೆರ್ಗಿಯಸ್! ಫಾದರ್ ಸೆರ್ಗಿಯಸ್! ನಿಮ್ಮನ್ನ ಹೇಗೆ ಕರೆಯಬೇಕು?'
'ಏನು ಬೇಕು ನಿಮಗೆ?' ಮತ್ತೊಂದು ಬದಿಯ ಕೋಣೆಯಿಂದ ಕುಗ್ಗಿದ ದನಿಯ ಮಾತು ಕೇಳಿಸಿತು.
'ನಿಮ್ಮ ಏಕಾಂತಕ್ಕೆ ತೊಂದರೆ ಮಾಡುತ್ತಿದ್ದೇನೆ. ಕ್ಷಮಿಸಿ. ಬೇರೆ ದಾರಿ ಇಲ್ಲ. ಜ್ವರ ಬಂದಹಾಗಿದೆ. ಮೈಯೆಲ್ಲ ನೆನೆದು ಹೋಗಿದೆ. ಕಾಲು ಹಿಮಗಟ್ಟಿವೆ.'
'ಕ್ಷಮಿಸಿ, ನಾನು ಏನೂ ಮಾಡಲಾರೆ' ಮೆಲುದನಿಯ ಉತ್ತರ ಕೇಳಿಸಿತು.
'ನಿಮಗೆ ತೊಂದರೆ ಕೊಡಬೇಕು ಅಂತಿರಲಿಲ್ಲ. ಏನು ಮಾಡುವುದಕ್ಕೂ ತೋಚಲಿಲ್ಲ ಅಷ್ಟೆ. ಬೆಳಗಾಗುವವರೆಗೂ ಇದ್ದು ಹೋಗಿಬಿಡುತ್ತೇನೆ.'
ಉತ್ತರ ಬರಲಿಲ್ಲ. ಮಣಮಣ ಸದ್ದು ಮಂತ್ರದ ಹಾಗೆ ಕೇಳಿಸಿತು. ಪ್ರಾರ್ಥನೆ ಮಾಡುತ್ತಿರಬಹುದು ಅಂದುಕೊಂಡಳು.
'ನೀವು ಇಲ್ಲಿಗೆ ಬರುವುದಿಲ್ಲ ತಾನೇ? ಯಾಕೆಂದರೆ ಮೈ ಒಣಗಿಸಿಕೊಳ್ಳಬೇಕು, ಬಟ್ಟೆ ಬದಲಾಯಿಸಬೇಕು.' ಮುಗುಳ್ನಗುತ್ತಾ ಕೇಳಿದಳು.
ಅವನು ಉತ್ತರಿಸಲಿಲ್ಲ. ಪ್ರಾರ್ಥನೆಯ ಮಾತುಗಳು ಲಯಬದ್ದವಾಗಿ ಕೇಳಿಸಿದವು.
ನೀರು ತುಂಬಿದ್ದ ಉದ್ದನೆಬೂಟು ಎಳೆಯುತ್ತಾ 'ನಿಜವಾದ ಗಂಡಸು ಇವನು' ಅಂದುಕೊಂಡಳು. ಒದ್ದೆ ಬೂಟು ಕಾಲುಚೀಲಕ್ಕೆ ಅಂಟಿಕೊಂಡು ಎಳೆದರೂ ಸುಲಭವಾಗಿ ಬರಲಿಲ್ಲ. ಬೂಟು ಕಳಚುವ ಪ್ರಯತ್ನದಿಂದ ಈ ಅಸಂಗತ ಅಸಂಬದ್ಧ ಪ್ರಯತ್ನದಿಂದ ಅವಳಿಗೆ ನಗು ಬಂದಿತು. ಕೇಳಿಸಿಯೂ ಕೇಳಿಸದಂಥ ನಗು. ಆದರೆ, ಅವನಿಗೆ ಈ ನಗು ಕೇಳಿಸಿರುತ್ತದೆ, ನಾನು ಬಯಸಿದಂತೆಯೇ ವಿಚಲಿತನಾಗಿರುತ್ತಾನೆ ಅನ್ನಿಸಿ ಸ್ವಲ್ಪ ಜೋರಾಗಿ ನಕ್ಕಳು. ಆ ನಗು, ಸಹಜ ಖುಷಿಯ ಮೆಲುನಗು ಅವಳು ಬಯಸಿದಂಥದೇ ಪರಿಣಾಮ ಮಾಡಿತ್ತು ಅವನ ಮೇಲೆ.
'ಪ್ರೀತಿ ಮಾಡಿದರೆ ಇಂಥವನನ್ನು ಪ್ರೀತಿಮಾಡಬೇಕು. ಆ ಕಣ್ಣು, ಅಷ್ಟು ಸರಳವಾದ ಉದಾತ್ತ ಅನ್ನಿಸುವಂಥ ಮುಖ, ಅಲ್ಲದೆ ಏನೇ ಪ್ರಾರ್ಥನೆ ಹೇಳಿಕೊಂಡರೂ ಬಚ್ಚಿಡಲಾಗದ ಅವನ ಬಯಕೆ! ಇಂಥ ವಿಚಾರದಲ್ಲಿ ಹೆಂಗಸರನ್ನು ಮೋಸ ಮಾಡುವುದಕ್ಕೆ ಆಗುವುದಿಲ್ಲ. ಕಿಟಕಿಯ ಗಾಜಿಗೆ ಮುಖ ಒತ್ತಿ ನನ್ನ ನೋಡಿದನಲ್ಲ ಆಗಲೇ ನನ್ನ ಮೇಲೆ ಆಸೆ ಇದೆ ಎಂದು ಅವನಿಗೂ ಗೊತ್ತಾಗಿಬಿಟ್ಟಿತ್ತು. ನನ್ನ ಮೇಲೆ ಹುಟ್ಟಿದ ಆಸೆ ಅವನ ಕಣ್ಣಿನ ಆಳದಲ್ಲಿ ಕಾಣಿಸಿ ಮುದ್ರೆ ಒತ್ತಿಬಿಟ್ಟಿತ್ತು' ಅಂದುಕೊಂಡಳು.
'ಹೌದು, ನನ್ನ ಮೇಲೆ ಆಸೆ ಇದೆ ಅವನಿಗೆ' ಅಂದುಕೊಳ್ಳುತ್ತಾ ಕೊನೆಗೂ ಬೂಟು ಕಳಚಿದಳು. ಇನ್ನು ಎಲಾಸ್ಟಿಕ್ ಹಾಕಿದ ಉದ್ದನೆಯ ಸ್ಟಾಕಿಂಗ್ ತೆಗೆಯಲು ಸ್ಕರ್ಟನ್ನು ಮೇಲೆತ್ತಬೇಕಾಗಿತ್ತು. ನಾಚಿಕೆ ಅನ್ನಿಸಿತು.
'ಈ ಕಡೆ ಬರಬೇಡಿ!' ಅಂದಳು.
ಗೋಡೆಯ ಆ ಬದಿಯಿಂದ ಉತ್ತರ ಬರಲಿಲ್ಲ. ಪ್ರಾರ್ಥನೆಯ ಲಯ ಮಾತ್ರ ಕೇಳಿಸುತ್ತಿತ್ತು. ಮತ್ತೆ ಏನೋ ಓಡಾಡಿದ ಹಾಗೆ ಸದ್ದು.
'ಮೊಳಕಾಲೂರಿ ಪ್ರಾರ್ಥನೆ ಮಾಡುತ್ತಿರಬೇಕು, ಅನುಮಾನವೇ ಇಲ್ಲ' ಅಂದುಕೊಂಡಳು. 'ಯಾವ ಪ್ರಾರ್ಥನೆ ಎಷ್ಟು ಬೇಕಾದರೂ ಮಾಡಲಿ, ನನ್ನ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾನೆ, ನನಗೆ ಗೊತ್ತು. ಈ ಕಾಲು, ಈ ಪಾದಗಳ ಬಗ್ಗೆ ನನಗೆ ಇರುವಂಥದೇ ಫೀಲಿಂಗು ಅವನಲ್ಲೂ ಇದೆ' ಅಂದುಕೊಳ್ಳುತ್ತಾ ಒದ್ದೆ ಸ್ಟಾಕಿಂಗುಗಳನ್ನು ತೆಗದು, ಬರಿಗಾಲನ್ನು ಒಣ ಹುಲ್ಲಿನ ಚಾಪೆಯಮೇಲೆ ಒತ್ತಿ ಉಜ್ಜಿ, ಕೊಂಚ ಶಾಖ ಹುಟ್ಟಲೆಂದು ಕಾಲುಮಡಚಿಕೊಂಡು, ಎರಡೂ ಕೈಯಲ್ಲಿ ಮೊಳಕಾಲುಗಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಕೂತಳು. 'ನಾವು ಕಾಡಿನ ಮಧ್ಯೆ ಇದ್ದೇವೆ. ಎಷ್ಟೊಂದು ಮೌನ. ಇಲ್ಲಿ ಏನು ಮಾಡಿದರೂ ಯಾರಿಗೂ ಗೊತ್ತಾಗುವುದಿಲ್ಲ...' ಅಂದುಕೊಂಡಳು.
ಎದ್ದಳು. ಒದ್ದೆ ಸ್ಟಾಕಿಂಗುಗಳನ್ನು ಅಗ್ಗಿಷ್ಟಿಕೆಯ ಹತ್ತಿರ ತೆಗೆದುಕೊಂಡು ಹೋಗಿ ಒಣಗಿಹಾಕಿದಳು. ಬರಿಗಾಲುಗಳನ್ನು ಮೆಲ್ಲನೆ ಎತ್ತಿಡುತ್ತಾ ಮರಳಿ ಬಂದು ಬೆಂಚಿನ ಮೇಲೆ, ಕಾಲು ಮೇಲಿಟ್ಟುಕೊಂಡು, ಕುಳಿತಳು. ಅತ್ತಕಡೆಯ ರೂಮಿನಲ್ಲಿ ಸಂಪೂರ್ಣ ಮೌನವಿತ್ತು. ತನ್ನ ಪುಟ್ಟ ಕೈಗಡಿಯಾರ ನೋಡಿಕೊಂಡಳು. ಎರಡು ಗಂಟೆಯಾಗಿತ್ತು. 'ನಮ್ಮವರೆಲ್ಲ ಪಾರ್ಟಿ ಮುಗಿಸಿ ಬರುವ ಹೊತ್ತಿಗೆ ಮೂರು ಗಂಟೆಯಾಗಬಹುದು' ಎಂದುಕೊಂಡಳು. ಇನ್ನು ಇರುವುದು ಒಂದೇ ಗಂಟೆ ಸಮಯ. 'ನಾನು ಒಬ್ಬಳೇ ಹೀಗೇ ಕೂತಿರಲೇ? ನಾನ್‌ಸೆನ್ಸ್. ಖಂಡಿತ ಒಬ್ಬಳೇ ಹೀಗೆ ಕೂತಿರುವುದಿಲ್ಲ. ಅವನನ್ನೂ ಕರೆಯುತ