ತುಳು ಭಾಷೆ ಮತ್ತು ಲಿಪಿ

ತುಳು ಭಾಷೆ ಮತ್ತು ಲಿಪಿ

ಬಹುಶಃ ನಾನು ತುಂಬಾ ಕಷ್ಟ ಪಟ್ಟ ಭಾಷೆಗಳಲ್ಲಿ ಇಂಗ್ಲೀಷ್ ಮೊದಲಿನದಾದರೆ ತುಳು ಎರಡನೆಯದು. ಹಿಂದಿ ಮತ್ತು ಕನ್ನಡಗಳು ನನಗೆ ಬೇಗನೆ ಒಲಿದಿದ್ದವು. ಇಂಗ್ಲಿಷ್ ನನ್ನ ಪರಿಶ್ರಮದಿಂದ ಒಲಿದರೆ ತುಳು ಸಂಪೂರ್ಣವಾಗಿ ಒಲಿದದ್ದು ಅಂತಿಮ ಪದವಿಯಲ್ಲಿ ನನಗೆ ತುಳು ಚೆನ್ನಾಗಿ ಕಲಿಸಿದ ಪ್ರಥಮ ವರ್ಷದ ಹುಡುಗಿಯರಿಂದ ಮತ್ತು ಆಗ ನೋಡಲು ಆರಂಭಿಸಿದ ದೇವದಾಸ್ ಕಾಪಿಕಾಡ್ ನಾಟಕಗಳಿಂದ. ಅದರ ಮೊದಲು ತುಳು ಮಾತನಾಡುವುದೆಂದರೆ ಎಲ್ಲರೂ ಬೇಡ ಎಂದೇ ಹೇಳುತ್ತಿದ್ದರು. ಅಷ್ಟು ಕೆಟ್ಟದಿತ್ತೆಂದು ಪ್ರತ್ಯೇಕ ಹೇಳುವ ಅಗತ್ಯ ಇಲ್ಲ.

 

ಮನೆಯಲ್ಲಿ ಕನ್ನಡ ಮಾತನಾದುತ್ತಿದುದರಿಂದ ಮೊದಲಿನಿಂದಲೂ ತುಳು ನನಗೆ ದೂರ. ‘ದಾನಿ, ಎಂಚ ಉಲ್ಲ?’ (ಏನು, ಹೇಗಿದ್ದಿ?) ಎಂದು ಯಾರಾದರೂ ಕೇಳಿದರೆ ‘ಯಾನ್ ಉಷಾರ ಉಲ್ಲೆ, ಈರ್ ಎಂಚ ಉಲ್ಲರ್?’ (ನಾನು ಚೆನ್ನಾಗಿದ್ದೇನೆ, ನೀವು ಹೇಗಿದ್ದೀರಿ?) ಎಂದು ಕೇಳುವ ಅಭ್ಯಾಸವಿತ್ತೆ ಹೊರತು ನಂತರದ ಪ್ರಶ್ನೆಗಳಿಗೆ ಉತ್ತರ ಕನ್ನಡದಲ್ಲೇ. ಈಗಲೂ ತುಳುವಿನಲ್ಲಿ ನನಗೆ ಆತ್ಮ ವಿಶ್ವಾಸ ಕಡಿಮೆ, ಏನೋ ಒಂದು ಹೇಳಿ ಏನೋ ಆಗುವುದು ಬೇಡ ಎಂದು ಕನ್ನಡವನ್ನೇ ಬಳಸುತ್ತೇನೆ. ಅದರ ಮೇಲೆ ಅದರ ಎರಡು ರೂಪಗಳಿಂದ ಎಷ್ಟೋ ಸಲ ನಗೆಪಾಟಲಿಗೆ ಗುರಿಯಾಗಿ ನೊಂದಿದ್ದೇನೆ. ಆ ಎರಡು ರೂಪಗಳ ವ್ಯತ್ಯಾಸ ಇಲ್ಲಿಯವರೆಗೆ ಗೊತ್ತಿಲ್ಲವಾದ್ದರಿಂದ ಆ ಬಗ್ಗೆ ಬರೆಯುವುದಿಲ್ಲ. ಆದರೆ ನಮ್ಮೂರು ಮತ್ತು ಅದನ್ನು ಒಳಗೊಂಡ ಉಡುಪಿ ಮತ್ತು ಮಂಗಳೂರುಗಳಲ್ಲಿ ತುಳು ಒಂದು ಪ್ರಧಾನ ಭಾಷೆ. ಕರಾವಳಿ ಸಂಸ್ಕೃತಿ ಎಂದು ಎಲ್ಲಾ ಏನು ಕರೆಯುತ್ತಾರೋ ಅದರೊಂದಿಗೆ ಅದರ ಬೆನ್ನು ಮೂಳೆ ಆಗಿ ಇರುವಂಥದ್ದು.   

 

ಕೇವಲ ಎರಡು ಜಿಲ್ಲೆಗಳಲ್ಲಿ ಪ್ರಧಾನವಾಗಿ ಸೀಮಿತವಾಗಿರುವ ಈ ಭಾಷೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು. ಪರಶುರಾಮನ ಕೊಡಲಿಯಿಂದ ಹುಟ್ಟಿದೆ ಎನ್ನಲಾದ ತುಳುನಾಡು ಇಂದಿಗೂ ಆಡು ಭಾಷೆಯ ವಿಷಯದಲ್ಲಿ ತುಳುವನ್ನು ಕಾಯ್ದುಕೊಂಡು ಬಂದಿದೆ. ಕಳೆದುಕೊಂಡದ್ದು ಕೇವಲ ಲಿಪಿ ಮಾತ್ರ. ಲಿಪಿ ಯಾಕೆ ಬಳಕೆಯಿಂದ ದೂರವಾಯಿತೋ ಗೊತ್ತಿಲ್ಲ, ಬಹುಶಃ ಇದ್ದ ಸಾಕ್ಷರರ ಸಂಖ್ಯೆ ಕಡಿಮೆ ಇತ್ತೋ ಅಥವಾ ಸಾಕ್ಷರರಾಗಿದ್ದ ಗುಂಪು ಲಿಪಿ ಬಳಸುವುದಕ್ಕೆ ಪ್ರಾಧಾನ್ಯತೆ ಕೊಡಲಿಲ್ಲವೋ. ಇದು ಅನುಮಾನ ಅಷ್ಟೇ. ಏಕೆಂದರೆ ಒಂದು ಭಾಷೆ ನಶಿಸುವುದು ಮಾತನಾಡುವವರ ಸಂಖ್ಯೆ ಕ್ಷೀಣಿಸಿದರೆ, ಹಾಗೆಯೇ ಲಿಪಿ ನಶಿಸುವುದು ಬಳಕೆ ಕೊನೆಗೊಂಡಾಗ. ಇಲ್ಲಿ ಆಳಿದೆ ಎನ್ನಲಾದ ಆಳುಪ ವಂಶದ ಶಾಸನ ತುಳು ಲಿಪಿಯಲ್ಲಿ ಇದೆಯೋ ಮುಂದೊಮ್ಮೆ ಯಾರಾದರೂ ಇತಿಹಾಸಜ್ಞರು ಸಿಕ್ಕಿದರೆ ಕೇಳಬೇಕು ಅಥವಾ ಸಂಪದದಲ್ಲಿ ಇದರ ಬಗ್ಗೆ ಗೊತ್ತಿದ್ದರೆ ತಿಳಿಸಿ.

 

ತುಳು ಭಾಷೆಗೆ ಪ್ರಸ್ತುತ ಕಾಲದಲ್ಲಿ ಗಮನ ದೊರಕಿದ್ದು ರೆವೆರೆಂಡ್ ರಾಬರ್ಟ್ ಕಾಡವೆಲ್, ಇವರ A comparative Grammar of the Dravidian or South Indian Family of Languages’ ಎಂಬ ಪುಸ್ತಕದಲ್ಲಿ ಅವರು ದ್ರಾವಿಡ ಭಾಷೆಗಳಲ್ಲಿ ಇದೂ ಕೂಡ ವಿಕಾಸಗೊಂಡ ಭಾಷೆ ಎಂದು ಹೇಳಿದ್ದಾರೆ. ಭಾಷೆಗೆ ಲಿಪಿ ಇದ್ದರೆ ಅದು ವಿಕಾಸಗೊಂಡಿದೆ, ಆ ಭಾಷೆಯ ಅಭಿವೃದ್ಧಿಗಾಗಿ ಕೆಲಸ ನಡೆದಿದೆ ಎಂದು ಅರ್ಥೈಸಬಹುದು. ನಮ್ಮಲ್ಲಿ ಇರುವ ವಿಷಯಗಳು ಬೇರೆ ದೇಶದವರು ಹೇಳಿದರೆ ಮಾತ್ರ ನಾವು ಗಮನ ಹರಿಸುವುದರಿಂದ ತುಳು ಕೂಡ ಅದರ ನಂತರವೇ ತುಳುವರಲ್ಲದವರ ಗಮನಕ್ಕೆ ಬಂದದ್ದು.

 

http://upload.wikimedia.org/wikipedia/commons/2/24/Grantha_Tulu_Malayalam1.png

 ಮಲಯಾಳಂನೊಂದಿಗೆ ಸಾಮ್ಯತೆ ಇರುವ ತುಳು ಲಿಪಿ(ಗ್ರಂಥ ಲಿಪಿ) ಯಲ್ಲಿ ಬರೆಯಲಾದ ಪುಸ್ತಕಗಳೆಂದರೆ ‘ತುಳು ಮಹಾಭಾರತೋ’ ‘ದೇವಿ ಮಹಾತ್ಮೆ’, ‘ಶ್ರೀ ಭಾಗವತ’ ಇತ್ಯಾದಿ. ಈ ಪುಸ್ತಕಗಳು ಸುಮಾರು ೧೫ನೆ ಶತಮಾನದವು ಅದ್ದರಿಂದ ಅಲ್ಲಿಯವರೆಗೆ ಈ ಲಿಪಿ ಬಳಕೆಯಲ್ಲಿತ್ತು ಎಂದು ಹೇಳಬಹುದು.

 

 

ತುಳು ಲಿಪಿಯ ಸಂಪೂರ್ಣ ಕೊನೆ ಕಾರಣವಾದವರು ಜರ್ಮನ್ ಮಿಷಿನರಿಗಳು ಎಂದು ಹೇಳಲಾಗಿದೆ. ಏಕೆಂದರೆ ಅವರು ತುಳು ಪುಸ್ತಕಗಳನ್ನು ಕನ್ನಡ ಲಿಪಿಯಲ್ಲಿ ಪ್ರಕಟಿಸಿದ್ದು ಅವನತಿಯ ಹಾದಿಯಲ್ಲಿದ್ದ ತುಳು ಲಿಪಿಗೆ ಕಬ್ಬಿಣದ ಸಲಾಕೆಯಲ್ಲಿ ಹೊಡೆದಂತಾಯಿತು.

 

http://upload.wikimedia.org/wikipedia/commons/thumb/c/cb/Tulu_glyphs.jpg/330px-Tulu_glyphs.jpg

 

ಈ ಲೇಖನಕ್ಕೆ ಮೂಲ ಕಾರಣ ನನ್ನ ಗೆಳೆಯ ಭರತ್, ನಿನ್ನೆ ತುಳುಗೆ ಕೂಡ ಲಿಪಿ ಇದೇ ನೋಡು ಎಂದು ಮೇಲ್ ಮಾಡಿದ್ದ. ಅದರಿಂದ ಈ ಬಗ್ಗೆ ಅಂತರ್ಜಾಲದಲ್ಲಿ ಹುಡುಕಿದಾಗ ಸಿಕ್ಕ ಮಾಹಿತಿಗಳೊಂದಿಗೆ ನಿಮ್ಮ ಮುಂದಿಟ್ಟಿದ್ದೇನೆ

 

ಚಿತ್ರಕೃಪೆ: ವಿಕಿಪೀಡಿಯ

 

ಇನ್ನೂ ಹೆಚ್ಚಿನ ಮಾಹಿತಿಗಾಗಿ ನೋಡಿ

http://shivallibrahmins.com/tulunadu/tulu-language/tulu-language-and-script/

http://www.yakshagana.com/tulu.htm

http://en.wikipedia.org/wiki/Tulu_script

Rating
No votes yet

Comments