ಸಂಪಾದಕನ ಕಿವಿ ಮಾತು

ಸಂಪಾದಕನ ಕಿವಿ ಮಾತು

ಬರಹ

ಹೀಗೇ ಜಾಲವನ್ನು ತಡಕಾಡುತ್ತಿದ್ದಾಗೆ ಕಣ್ಣಿಗೆ ಬಿದ್ದ ಲೇಖನ.  ಅಂತರ್ಜಾಲದಲ್ಲಿ ಹೇಗೆ ನಡೆದು ಕೊಳ್ಳಬೇಕು, ಯಾವ ರೀತಿ propaganada ಹರಿಬಿಡಬೇಕು ಎಂದು ತನ್ನ ಅನುಯಾಯಿಗಳಿಗೆ ಕನ್ನಡ ಪತ್ರಿಕೆಯ ಸಂಪಾದಕನೋರ್ವ ಹೇಳಿದ್ದಾನೆ ಕಿವಿಮಾತನ್ನು. ಪ್ರವಾದಿ ಮೋಸೆಸ್ ಅವರಿಗೆ ತಮ್ಮ ಅನುಯಾಯಿಗಳು ಹೇಗೆ ನಡೆದುಕೊಳ್ಳಬೇಕು ಎಂದು ಪರಮಾತ್ಮ (ten commandments) "ಹತ್ತು ದೈವಾಜ್ಞೆ" ಗಳನ್ನು ನೀಡುತ್ತಾನೆ. ಅದೇ ರೀತಿಯ ಕೆಲವು "ಭಟ್ಟರಾಜ್ಞೆ" ಗಳು ಮಿತಿ ಮೀರಿ ವರ್ತಿಸುತ್ತಿರುವ "ಕೀಲಿ" ಪಟುಗಳಿಗೆ. 


ಬೆಳಿಗ್ಗೆ ಮೇಲ್ ಬಾಕ್ಸ್ ತೆರೆದ ಕೂಡಲೇ ಎದುರಾಗುತ್ತವೆ ಯಾವುದಾದರೂ ವಿಷಯ ತೆಗೆದುಕೊಂಡು ಕಪೋಲಕಲ್ಪಿತ ವರದಿಗಳನ್ನ ಹೆಣೆದ ಮೇಲ್ ಗಳು. ಈ ರೀತಿ ಫುಲ್ ಟೈಮ್ slandering ಮಾಡುವ ಜನ ತಮ್ಮ ಕಸುಬಿನ ವೇಳೆ ಮಾಡುತ್ತಿರಬಹುದು ಅಲ್ಲವೇ? ಅಂದರೆ ಕೆಲಸಕ್ಕೆಂದು ನಿಯುಕ್ತಗೊಂಡ ವ್ಯಕ್ತಿ ಸಂಬಳ ಪಡೆದುಕೊಂಡು ಮಾಡಬೇಕಾದ ಕೆಲಸ ಮಾಡದೆ ದಿನದಲ್ಲಿ ಕಡೆ ಪಕ್ಷ ಮೂರು, ನಾಲ್ಕು ಘಂಟೆಗಳಾದರೂ ಇಂಥ ಚಟುವಟಿಕೆಗಳಲ್ಲಿ ನಿರತರು. ಈ ವಿದ್ಯಮಾನಕ್ಕೆ ಭಟ್ಟ ಕಿವಿ ಮಾತು ಹೇಳುವುದಿಲ್ಲವೇ? ಈ ವಿಷಯಕ್ಕೆ ಬಂದಾಗ ಜಾಣ ಕುರುಡೋ ಹೇಗೆ? ಇಂಥ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಯಜಮಾನರುಗಳಿಗೆ ತಿಳಿದಿಲ್ಲವೇ ಇದು? ಕೆಲಸದ ವೇಳೆಯಲ್ಲಿ ಅಂತರ್ಜಾಲ ತಡಕಾಡುವ ಈ ಜನರನ್ನು ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ಕಿತ್ತುಹಾಕಬೇಕು. ಘಂಟೆಗಳ ಮಾತು ದೂರವೇ ಉಳಿಯಿತು ಒಂದು ನಿಮಿಷವೂ ಕೆಲಸಕ್ಕೆ ಸಂಬಂಧಿಸಿದ್ದಲ್ಲದ ಚಟುವಟಿಕೆಯಲ್ಲಿ ಭಾಗವಹಿಸುವವರನ್ನು ಮುಲಾಜಿಲ್ಲದೆ ಶಿಸ್ತಿಗೆ ಒಳಪಡಿಸಬೇಕು. ಮುಂದುವರಿದ ವಿಶ್ವದಲ್ಲಿ ಈ ರೀತಿಯ ನದತೆಯನ್ನು ಖಂಡಿತಾ ತಾಳಿಕೊಳ್ಳಲಾರರು. ಸರಕಾರೀ ಸೇವಕರು ಬೆಳಿಗ್ಗೆ ಬಂದು ಹಾಜರಿ ಹಾಕಿ ಬೇರೆಡೆ ಕೆಲಸಕ್ಕೆ ಹೋಗುತ್ತಾರಂತೆ. ಕೆಲಸಕ್ಕೆ ಸೇರಿದ ಕೂಡಲೇ ಬೀದಿ ಗೂಳಿ ಗಳಾಗಿ ಬಿಡುತ್ತಾರೆಯೇ ಈ ನೌಕರರು. ಲಂಗು ಲಗಾಮಿಲ್ಲದ ಗೂಳಿಗಳು. ಆಧುನಿಕ ಜೀವನದ ಮತ್ತೊಂದು ರೀತಿಯ ಕರ್ತವ್ಯ ಚ್ಯುತಿ ಕೆಲಸದ ವೇಳೆ ಮೇಲ್ campaigning. ಹೀಗೆ ಕೆಲಸಕ್ಕೆ ಬಂದೂ ಕೆಲಸ ಮಾಡದೆ ಸಂಬಳ ಪಡೆಯುವ ವರ್ಗ ಒಂದೆಡೆಯಾದರೆ ಮೇಲಿಂಗ್ ಮಾಡೋದಕ್ಕೆ ನಮ್ಮನ್ನು ಸಂಬಳ ಕೊಟ್ಟು ಇತ್ತು ಕೊಂಡಿರುವುದು ಎನ್ನುವ ಭಾವನೆ  ತಾಳಿರುವ ವರ್ಗ ಮತ್ತೊಂದೆಡೆ. 


"ಇಂಟರ್ನೆಟ್ ಹಿಂದು : ಮುಖ್ಯವಾಹಿನಿಗೇಕೆ ಸಿಡಿಮಿಡಿ?" ಲೇಖನದಲ್ಲಿ ಇಂಟರ್ನೆಟ್ ಹಿಂದೂಗಳನ್ನು ಮೂಲಭೂತವಾದಿಗಳು, ತಾಲಿಬಾನಿಗಳು ಎಂದು ಕರೆಯುತ್ತಾರೆಂದು ಅಳಲನ್ನು ತೋಡಿಕೊಳ್ಳುವ ಈ ಲೇಖಕ ಹಾಗೆ ಕರೆಯುವವರನ್ನು " ಎಡಪಂಥೀಯ ಒಲವಿನ ಹಾಗೂ ಮಾಧ್ಯಮದ ಹಿಡಿತ ಹೊಂದಿರುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದುಕೊಂಡಿರುವ ಪತ್ರಕರ್ತರಂತೆ ". ಅಂದರೆ ಈ ರೀತಿ ತಮ್ಮ ಕೆಲಸದ ವೇಳೆ ಕೆಸರೆರೆಚಲೆಂದೇ ಲಾಗಿನ್ ಆಗುವ ಮಹಾತ್ಮರ ಬಗ್ಗೆ ಯಾರೂ ಸೊಲ್ಲೆತ್ತಬಾರದೆಂದು ಈ ವ್ಯಕ್ತಿಯ ಕಿವಿಮಾತು.‍‍‌


ಈ ಲೇಖನ ಬರೆದ ವ್ಯಕ್ತಿ ವಿ (ಕೃತ). ಕ. ಪತ್ರಿಕೆ ಗೆ ಸೇರಿದವರಂತೆ. ಈ ಪತ್ರಿಕೆ ಈಗ ನಾಡಿನ ಪ್ರಮುಖ ಪತ್ರಿಕೆ. ಪ್ರಮುಖ ಪತ್ರಿಕೆಯಾದ ಮೇಲೆ ನಾಡಿನ ಎಲ್ಲಾ ಧರ್ಮಗಳವರೂ ಖಂಡಿತವಾಗಿ ಓದುತ್ತಾರೆ ಈ ಪತ್ರಿಕೆಯನ್ನ. ಹೀಗಿರುವಾಗ "ಇಂಟರ್ನೆಟ್ ಹಿಂದೂ"ಗಳ ವಕಾಲತ್ತು ಮಾತ್ರ ವಹಿಸಿ ಲೇಖನ ಬರೆಯುವುದು ಪತ್ರಿಕಾ ಧರ್ಮಕ್ಕೆ ಬಗೆಯುವ ದ್ರೋಹವಲ್ಲವೇ? ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನರು ಹುಟ್ಟಿದ, ಸೂಫಿ ಸಂತರ, kittel ರು ಪ್ರೀತಿಸಿದ, ಬೌದ್ಧ ಭಿಕ್ಷುಗಳು ಬಾಳಿದ ಈ ನಾಡು ಎಲ್ಲಾ ಧರ್ಮಗಳವರಿಗೆ ಸೇರಿದ್ದು ಎಂದು ಈ ಪತ್ರಿಕೆಗೆ ಯಾರಾದರೂ ಕಿವಿ ಮಾತನ್ನು ಹೇಳಿಯಾರೆ? ತಪ್ಪು ದಾರಿಗೆ ಎಳೆಯುವ ಹೆಸರನ್ನಿಟ್ಟು ಕೊಂಡು ಬಹುಸಂಖ್ಯಾತ ವರ್ಗದವರಿಗೆ cater ಮಾಡುತ್ತಿರುವ ಈ ಪತ್ರಿಕೆಗೆ ಪತ್ರಿಕಾ ಧರ್ಮದ ಬಗ್ಗೆ ಯಾರಾದರೂ ಕಿವಿ ಮಾತು ಹೇಳಿದ್ದರೆ ಚೆನ್ನಿತ್ತು.  


`ಹಿಂದು ಐಡೆಂಟಿಟಿ ಹೊಂದಲು ಮುಸ್ಲಿಮರನ್ನು ದೂಷಿಸಬೇಕಿಲ್ಲ".


ಬಹುಶಃ ಮುಸ್ಲಿಮರ ವಿರುದ್ಧ ಬರೆಯುವುದೇ ತಮ್ಮ ಧರ್ಮ ಮತ್ತು ಕಸುಬು ಎಂದು ಕೊಂಡಿರುವ ಈ ಸಮೂಹದ ಬಗ್ಗೆ ಬೇಸತ್ತ ಭಟ್ ಅವರು ಮೇಲಿನ ಕಿವಿ ಮಾತನ್ನೂ ಸೇರಿಸುತ್ತಾರೆ.  ತಮ್ಮ ಸಮುದಾಯವರ ಈ ವರ್ತನೆಯನ್ನು ಒಪ್ಪಿಕೊಂಡು apologetic ಆಗುವ ಭಟ್ಟರು ಹೃದಯವಂತಿಕೆಯನ್ನೇ ಮೆರೆದಿದ್ದಾರೆ ಎನ್ನಬಹುದು. ಈಗ ನನ್ನದೊಂದು ಪ್ರಶ್ನೆ. ಈ ರೀತಿ ವಿವಿಧ ಧರ್ಮಗಳ ವಿರುದ್ಧ ಹರಿ ಹಾಯುವ ಇಂಟರ್ನೆಟ್ ಹಿಂದೂಗಳು ಮುಸ್ಲಿಮರೂ ಅದೇ ರೀತಿಯದಾದ ನಡವಳಿಕೆಯನ್ನು ತಾಳಿದ್ದಾರೆಯೇ ಎಂದು ಏಕೆ ನೋಡಿಕೊಳ್ಳುವುದಿಲ್ಲ? ನನಗಂತೂ ಅಂಥ ಒಂದೇ ಒಂದು ಮೇಲೂ ಕಣ್ಣಿಗೆ ಬಿದ್ದಿಲ್ಲ. ತೀರಾ ಇಲ್ಲ ಎಂದಿಲ್ಲ. ತಮ್ಮ ಧರ್ಮವೇ ಮೇಲು ಎಂದು ತೋರಿಸಲು ಕೆಲವು ಚಮತ್ಕಾರಗಳ ಪ್ರಸ್ತಾಪ ಇರುವ ಮೇಲುಗಳು ನನಗೆ ಬಂದಿವೆ, ಅಂಥ ಮೇಲುಗಳು ನೇರವಾಗಿ ಬೆಳೆಸುತ್ತವೆ ತಿಪ್ಪೆ ಯಾತ್ರೆ.


"ಜವಾಬ್ದಾರಿಯುತ ಇಂಟರ್ನೆಟ್ ಹಿಂದು ಆಗಲು ನಿಯಮಗಳು ಬ್ಲಾಗ್‌ಗಳಲ್ಲಿ ಕಾಮೆಂಟ್ ಮಾಡುವಾಗ ಬೈಗುಳದ ಭಾಷೆ ಬಳಸದಿರಿ".


ಮತ್ತೊಂದು ಕಿವಿಮಾತು. ಈ ಕಿವಿಮಾತಿನ ಅವಶ್ಯಕತೆ ಹಿಂದೆಂದಿಗಿಂತ ಈಗ ಹೆಚ್ಚು. ಪಥ್ಯವಿಲ್ಲದ ಯಾವುದಾದರೂ ವಿಷಯ ಬರೆದಿರೋ ಬಂದೆರಗುತ್ತವೆ ಅವಹೇಳನಕಾರಿ ಮೇಲುಗಳು. ತಾಯಿ, ತಂಗಿ ಎನ್ನದೆ ಇಡೀ ಕುಟುಂಬವನ್ನೇ ಹರಾಜಿಗೆ ಹಾಕಿ ಬಿಡುತ್ತಾರೆ. ಇಷ್ಟೆಲ್ಲಾ ಬರೆದು ಹೊಲಸೆಬ್ಬಿಸಿದ ನಂತರ "ಇಷ್ಟಕ್ಕೂ ಹಿಂದು ಧರ್ಮ ಗುರುತಿಸಿಕೊಳ್ಳುವುದೇ ಸಹಿಷ್ಣುತೆಯಿಂದ" ಎಂದು ಮತ್ತೊಂದು ಮೇಲ್ ಬಿಡುತ್ತಾರೆ. ನನಗೂ ಆಗಿದೆ ಅನುಭವ. ನನ್ನ ತಾಯಿ ತಂಗಿಯರನ್ನು ಬೀದಿಗೆ ಎಳೆಯದೆ ಕೃಪೆ ತೋರಿದ ಈ ಜನ ಒಂದು ಸಣ್ಣ ಟೀಕೆಗೂ ನಿನ್ನ ಸಮುದಾಯ ಹಾಗೆ, ಹೀಗೆ ಎಂದು ತೋಚಿದ ರೀತಿಯಲ್ಲಿ ಬರೆದು ತಮ್ಮ ತೀಟೆ ತೀರಿಸಿಕೊಳ್ಳುತಾರೆ. ಈ ರೀತಿಯ ವರ್ತನೆಯಿಂದ ಗಾಭರಿಯಾಗಿ, ಬೇಸತ್ತು ಬಹಳಷ್ಟು ಜನ ಸಂಪದಿಗರು ಸಂಪದ ಬಿಟ್ಟು ನಡೆದಿದ್ದಾರೆಂದು ಕೆಲವು ಸಂಪದಿಗರು ಬರೆಯುವುದನ್ನು ನೋಡಿದ್ದೇನೆ.


"ಗುಂಪು ಗುಂಪಾಗಿ ಬ್ಲಾಗರ್ ಮೇಲೆ ಮುಗಿಬೀಳಬೇಡಿ. ಇದು ನಿಯೋಜಿತ ದಾಳಿಯಂತೆ ಕಾಣುತ್ತದೆ"


ಮುತ್ತಿನಂಥ ಮಾತು. ಸಾಕಷ್ಟು ನೋಡಿದ್ದಾರೆ ಮೇಲಿನ ವರಸೆಯನ್ನು ನಮ್ಮ ಭಟ್ಟರು. ನೀವೂ ನೋಡಿರಬಹುದು ಈ ವರ್ತನೆಯನ್ನು. ಈ ವಿಷಯದ ಮೇಲೆ ನಿಮಗೆ ಸಂದೇಹವಿದ್ದರೆ ಒಂದು ಉದಾಹರಣೆ ಕೊಡುತ್ತೇನೆ.


ಸಮುದಾಯಗಳ ಮಧ್ಯೆ ವಿವಾದ ಬಂದಾಗ ಸಾಕಷ್ಟು ರಾಡಿ ನೀರಿನೊಂದಿಗೆ ಬರುವ ಈ ಜನ ಪರಿಸ್ಥಿತಿ ಶಾಂತವಾಗಿದ್ದಾಗ ಮತ್ತೊಂದು ವರಸೆ ತೆಗೆದುಕೊಂಡು ಹಾಜರಾಗುತ್ತಾರೆ. "ಒಂದು ವರ್ಗಕ್ಕೆ ಸೇರಿದವರು ರೈಲು ಹತ್ತುತ್ತಾರೆ, ಅವರು ಹಕ್ಕುಬದ್ದವಾಗಿ ಕೂರಬೇಕಾದ ಜಾಗದಲ್ಲಿ "ಕರೀಂ" ಎನ್ನುವ ಮುಗ್ಧ ಬಾಲಕ ಕೂತಿರುತ್ತಾನೆ. ಅವನನ್ನು "ನಲ್ಮೆಯಿಂದ" ಎಬ್ಬಿಸಲು ಹೋದಾಗ ಅವನು "ಕ್ರುದ್ಧ ನಾಗುತ್ತಾನೆ", ನಂತರ ಕರೀಮ ತನ್ನ ಜನರನ್ನು ಕಲೆ ಹಾಕಲು ಕರೆ ಮಾಡುತ್ತಾನೆ, ಅವನು ಕರೆ ಮಾಡುತ್ತಿರುವಾಗ ಈ ಗುಂಪು ಪುಂಡರು ಬರುವವರೆಗೆ ವೀಳ್ಯ ಕೈಯ್ಯಲ್ಲಿ ಹಿಡಿದು ಕೊಂಡು ಕಾಯುತ್ತಿರುತ್ತಾರೆ". ಹೇಗಿದೆ ಸ್ಟೋರಿ? ಮಣಿರತ್ನಂ ಗೆ ಕೊಟ್ಟರೆ ಹೇಗಿರಬಹುದು? ಇಲ್ಲಿ ಕರೀಮನನ್ನು ಖಳನಾಯಕನಾಗಿಸಿ ಅವನ ಸಮುದಾಯವೆ ಹೀಗೆ ಎಂದು ಬಿಂಬಿಸಿ ಬಹುಸಂಖ್ಯಾತ ವರ್ಗದವರು  ಸಂಭಾವಿತರು ಎಂದು ತೋರಿಸಿ ಜನರಲ್ಲಿ ಸಂಶಯದ ಬೀಜ ಬಿತ್ತುವುದು. ಈ ಬ್ಲಾಗ್ ಬರೆದ ವ್ಯಕ್ತಿಗೆ ಗೊತ್ತು ಇದು ಕಟ್ಟು ಕಥೆ ಎಂದು, ಇದನ್ನು ಓದಿ ನಾ ಮುಂದು, ತಾ ಮುಂದು ಎಂದು ಪ್ರತಿಕ್ರಿಯೆ ನೀಡಿದ ಮಹನೀಯರಿಗೂ ಗೊತ್ತು ಇದು ಹುಟ್ಟಿಸಿಕೊಂಡು ಬರೆದ ಕತೆ ಎಂದು. ಇದೊಂದು coordinated ಕಾರ್ಯಾಚರಣೆ. ಮೇಲೆ ಹೇಳಿದ "ರೈಲಿನ" ಬ್ಲಾಗ್ ಓದಿ ಪ್ರತಿಕ್ರಿಯೆ ಬರೆಯಬೇಕು ಎಂದುಕೊಂಡಿದ್ದೆ. ಆದರೆ garbage ಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟ ಹಾಗಾಗುತ್ತದೆ ಎಂದು ಅರಿತು ಹಿಂಜರಿದೆ. 


ಮೇಲಿನ ರೀತಿಯದೇ ಆದ ಮತ್ತೊಂದು ಬರಹವನ್ನ ಈಗ ಇಲ್ಲಿ ಕಾಣಬಹುದು. ಜಿಹಾದ್, ಅದೂ, ಇದೂ ಎಂದು ಒದರಿಕೊಳ್ಳುತ್ತಾ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಇನ್ನಷ್ಟು ಜನರನ್ನು confuse ಹೇಗೆ ಮಾಡುತ್ತಾರೆಂದು ತಿಳಿಯುತ್ತದೆ. convince ಮಾಡಲು ಸಾಧ್ಯವಾಗದಿದ್ದರೆ confuse ಮಾಡಬೇಕು, ಇದು ಇವರ ಕಾರ್ಯತಂತ್ರ. ಇಂಥ ಬರಹ ಬರೆಯುವ, ಸುಳ್ಳನ್ನು ಪೋಣಿಸುವ mediocre ವ್ಯಕ್ತಿಗಳು ನಮ್ಮ ನಾಡಿನಲ್ಲಿ ತುಂಬಿರುವುದರಿಂದ ಹೊರ ರಾಜ್ಯದವರು ನಮ್ಮ ಮೇಲೆ ಸವಾರಿ ಮಾಡುತ್ತಿರುವುದು. ಇಂಥ ಬರಹಗಳನ್ನ ಓದಿ ಪ್ರತಿಕ್ರಯಿಸುವ ವ್ಯಕ್ತಿಗಳ ಪ್ರೊಫೈಲ್ ಒಮ್ಮೆ ನೋಡಿ, ಕನಿಕರ ಹುಟ್ಟುವುದಿಲ್ಲವೇ ಬುದ್ಧಿಯ ದಿವಾಳಿತನಕ್ಕೆ?  


ಅಂತಿಮವಾಗಿ, ಮುಸ್ಲಿಮರಲ್ಲಿ ಕಾಣುವ ನ್ಯೂನತೆಗಳಿಗೆ ಅವರ ಮದ್ರಸಾ ಶಿಕ್ಷಣವನ್ನು ದೂರುವ ಜನ ಮೇಲಿನ ಲೇಖನದಲ್ಲಿ ಭಟ್ಟರು ಎತ್ತಿ ತೋರಿಸಿದ "ಅಂತರ್ಜಾಲ" ನಡವಳಿಕೆಗಳು ಯಾವ ಮೂಲದಿಂದ ಬಂದವು ಮತ್ತು ಇವರಿಗೆ ತರಬೇತಿ ನೀಡುತ್ತಿರುವವರು ಯಾರು ಎಂದು ಹೇಳಿಯಾರೇ?