ಕೊನೆಯ ಕಂತು
- confusionಭರಿತ By: hpn (Jan 1 2006 - 8:04am)
- ಇನ್ನೂ ಕಥೆ ಮುಗಿದಿಲ್ಲ! By: ಶ್ಯಾಮ ಕಶ್ಯಪ (Jan 1 2006 - 11:15am)
- 'ತೆಗಳೂಚಿ' By: (Jan 1 2006 - 3:10pm)
- confusion By: ಶ್ಯಾಮ ಕಶ್ಯಪ (Jan 2 2006 - 2:32am)
- 'ತೆಗಳೂಚಿ' By: (Jan 1 2006 - 3:10pm)
- ಇನ್ನೂ ಕಥೆ ಮುಗಿದಿಲ್ಲ! By: ಶ್ಯಾಮ ಕಶ್ಯಪ (Jan 1 2006 - 11:15am)
- ಭಾಗ ೨ By: ಶ್ಯಾಮ ಕಶ್ಯಪ (Dec 31 2005 - 5:39am)
- ಕೊನೆಯ ಕಂತು By: ಶ್ಯಾಮ ಕಶ್ಯಪ (Jan 5 2006 - 2:54am)
- ಒಂಥರ ಚೆನ್ನಾಗಿದೆ , ಮುಂದುವರಿಸಿ. By: shreekant.mishrikoti (Jan 3 2006 - 3:22pm)
- ಪಾಣಿನೆ ಭಾಷೆಯೇ? By: tvsrinivas41 (Dec 31 2005 - 4:48pm)
- ಭೃಗೂಚಿ By: ಶ್ಯಾಮ ಕಶ್ಯಪ (Jan 1 2006 - 4:57am)
- ಮೆಟಲ್ ಮಾಯೆ By: ಪ್ರದೀಪ್ ಕಿಶೋರ್ (Dec 30 2005 - 11:27pm)
- ಮೆಟಲ್ ಪಾಂಡಿತ್ಯ! By: ಶ್ಯಾಮ ಕಶ್ಯಪ (Dec 31 2005 - 5:43am)
- ಚೆನ್ನಾಗಿತ್ತು ಸರ್ ನಿಮ್ಮ ಕಥೆ By: (Jan 3 2006 - 2:56am)
- ಮೆಟಲ್ ಪಾಂಡಿತ್ಯ! By: ಶ್ಯಾಮ ಕಶ್ಯಪ (Dec 31 2005 - 5:43am)

RSS:
ಕೊನೆಯ ಕಂತು
ಮರುದಿನ ರಾತ್ರಿ ಮತ್ತೆ ಬಂದ ಪ್ರೆಸ್ತಕಾಯ. ಈ ಬಾರಿ ಯಾಕೋ ಸ್ವಲ್ಪ ಬೇಜಾರಿನ ಮೂಡಿನಲ್ಲಿದ್ದ.
ನಾನಾಗಿಯೇ ಕೇಳಲಿಲ್ಲ. ಇವನ ತಲೆಯಲ್ಲೇನಿರಬಹುದೆಂದು ಯೋಚಿಸುತ್ತಾ ಆಕಾಶವನ್ನು ದಿಟ್ಟಿಸುತ್ತಿದ್ದೆ. ಇದ್ದಕ್ಕಿದ್ದಂತೆಯೇ ಬಡಬಡಿಸತೊಡಗಿದ.
"ನೀನು ಗ್ಲೂರತ್ರಾಕದ ಬಗ್ಗೆ ಕೇಳಿದ್ದೀಯಾ?"
"ಹಾ.. ನಾವುಗಳು ಹೀಗೆ ಒಬ್ಬರಮೇಲೊಬ್ಬರು ಹೊಡೆದಾಡುವುದನ್ನು ಮುಂದುವರೆಸಿದರೆ ಮುಂದೊಂದು ದಿನ ಇಡೀ ಜಗತ್ತೇ ಸಮರಕ್ಕಿಳಿದು ವಿನಾಶವಾಗಿಹೋಗುತ್ತದೆಯೆಂದು ಕೇಳಿದ್ದೇನೆ. ಹಾಗೆಯೇ ಹಲವು ಗ್ರಂಥಗಳಲ್ಲಿಯೂ, ಮತಗಳಲ್ಲಿಯೂ ಕೂಡ ಹೇಳಿದ್ದಾರಂತೆ"
"ಅವರು ಹೇಳುವುದು ಸುಳ್ಳೇನಲ್ಲ, ಕಾಲಾಂತರದಿಂದ ಕೇಳಿ ಬರುತ್ತಿರುವ ವಿಷಯಗಳನ್ನು ಊಹಿಸಲು ಅತಿಯಾದ ಬುದ್ಧಿಶಕ್ತಿಯೇನು ಬೇಕಾಗಿಲ್ಲ.. ಬುದ್ಧಿಬೇಕಾಗಿರುವುದು ಅದನ್ನು ತಡೆಯುವುದಕ್ಕೆ. ಅದಕ್ಕೆ ಮಾತ್ರ ಯಾರೂ ತಯಾರಿಲ್ಲ. ಹೆಸರಿಗೆ ದೇವರು ದಿಂಡರು.. ನಾನು ನೋಡಿಲ್ಲವೇ ದೇವತೆಗಳು ಕೂಡ ಜೀವಿಗಳೇ ತಾನೆ. ನಿಮ್ಮ ಹೀನಕುಲದವರ ರಗಳೆಗಳನ್ನು ನೋಡಿ ನೋಡಿ ಅಂತರ್ಧಾನರಾಗಿದ್ದಾರೆ"
"ನಿಧಾನಕ್ಕೆ ಬಿಡಿಸಿ ಹೇಳು ದೊರೆ, ನನಗೊಂದೂ ತಿಳೀವೊಲ್ದು. ಹಾಗೆಯೆ, ಮನುಷ್ಯರ ಬಗ್ಗೆಯ ನಿನ್ನ ಮೂದಲಿಕೆ ನನಗೆ ಹಿಡಿಸುವುದಿಲ್ಲ"
"ನೀವೀಗ ಜಾಗತೀಕರಣ ಅಂತ ಏನಂತೀರೋ ಅದರ ತಳಪಾಯ ನಮ್ಮಜ್ಜನ ಕಾಲದಲ್ಲಿಯೇ ಹಾಕಿಯಾಗಿತ್ತು ಅನ್ನೋದು ಈಗ ನಿನಗೆ ತಿಳಿದಿರಬೇಕು. ನಾವು ಭೃಗೂಚಿಯಂತಹ ಭಾಷೆಯನ್ನು ಬೆಳೆಸಿಕೊಂಡಿದ್ದೇ ಅದಕ್ಕಲ್ಲವೇ. ಆದರೆ ನಾವು ಎಡವಿದ್ದು ನಮ್ಮನ್ನು ಅರ್ಥಮಾಡಿಕೊಳ್ಳುವಲ್ಲೇ.. ಜೀವವಿಕಸನದ ಆರಂಭದದ ದಿನಗಳು ಅವು. ಅಂದರೆ, ಇನ್ನೂ ಎಲ್ಲರೂ ಅಮೀಬಾಗಳೆಂದಲ್ಲ, ನಮ್ಮ ಮೆದುಳಿನ್ನೂ ಅಷ್ಟು ಸೂಕ್ಷ್ಮವಾಗಿ ವಿಕಸಿಸಿದ್ದಿಲ್ಲ. ವ್ಯಾಪಾರ, ಕೃಷಿ, ಮನೋರಂಜನೆ ಹೀಗೆ ಇತ್ಯಾದಿಗಳ ಬೇಡಿಕೆ ಬೆಳೆದಾಗ ಒಂದೇ ರಾಷ್ಟ್ರ ಎಲ್ಲವನ್ನೂ ಪೂರೈಸಲು ಸಾಧ್ಯವಾಗದೇ ಜಾಗತೀಕರಣದಂತಹ ಅಂತರ್ರಾಷ್ಟ್ರೀಯ ವ್ಯವಹಾರಗಳು ರೂಪಗೊಂಡದ್ದು ಸಹಜವೇ. ಆಷ್ಟು ಬುದ್ಧಿ ಬೆಳೆದಿತ್ತು."
"ಆದರೆ ಗೊತ್ತಿರದೇ ಇದ್ದ ಹಲವು ವಿಷಯಗಳಿದ್ದವು. ನಾವು ಕಾಣದ, ಕೇಳದ ಹೊಸ ವಿಷಯಗಳು ನಮಗೆ ತಿಳಿಯ ಬಂದಾಗ ನಮ್ಮ ಮಾನಸಿಕ ಚಟುವಟಿಕೆಗಳು ಇದ್ದಕ್ಕಿದ್ದಂತೆಯೇ ಹೆಚ್ಚಾಗುತ್ತದೆ. ಹಲವು ಶತಮಾನಗಳ ಜೀವವಿಕಸನ ಒಂದೇ ಜೀವಿತದಲ್ಲಿ ಹೊಂದಾಣಿಕೆಯ (adaptation) ಮೂಲಕ ಸಾಗಿಬರುತ್ತದೆ. ಇದಾದರೂ ಪ್ರಕೃತಿಗೆ ವಿರುದ್ಧವಾದದ್ದು. ವಿಕಸನ ಹಾಗು ಹೊಂದಾಣಿಕೆ, ಇವುಗಳ ಮಧ್ಯೆ ತಿಕ್ಕಾಟ ಶುರು: ಜೀವಿಯ ಸುಪ್ತ ಮನಸ್ಸು ಎರಡರಲ್ಲಿ ಒಂದನ್ನು ಆರಿಸಬೇಕು. ತನಗೆ ಅನುವಂಶೀಯವಾಗಿ ಬಂದ ಯೋಚನೆಗಳು, ಭಾವನೆಗಳನ್ನು ಮುಂದುವರೆಸಬೇಕೆ ಅಥವ ಈ ಹೊಸ ಬದಲಾವಣೆಗಳನ್ನು ಒಪ್ಪಿ ಅಳವಡಿಸಿಕೊಳ್ಳಬೇಕೆ? ಇದರ ಪರಿಣಾಮದಿಂದ ಬರುವುದೇ ಬುದ್ದಿಯ ವಿಕಾರತೆ. ಜೀವಿಯ ಪಾತ್ರ ಜೀವಿಸುವುದು ತಾನೆ, ಅದು ಬದಲಾಗಿ ಜೀವಿ ತೀರ್ಪುಗಾರನಾಗುತ್ತದೆ. ಸ್ವಲ್ಪ ಬಲವಿರುವ ಜೀವಿ ಇತರರ ವಿಷಯಕ್ಕೂ ನ್ಯಾಯಾಧೀಶನಾಗುತ್ತದೆ. ಬದಲಾಗದ ಜೀವಿ ಬದಲಾವಣೆಯನ್ನು ಅಲ್ಲಗಳೆಯುವುದರಲ್ಲಿ ಜೀವಿಸಬೇಕು. ಬದಲಾದದ್ದು ಬದಲಾವಣೆ ಸರಿಯೆಂದು ಸ್ಥಾಪಿಸುವುದರಲ್ಲಿ ಜೀವ ಕಳೆಯಬೇಕು. ಮಧ್ಯದಲ್ಲಿರುವ ಜೀವಿ ತ್ರಿಶಂಕುವಿನಂತೆ."
"ಇದನ್ನೂ ಈಗಿನವರು, ಭಾರತೀಯರ ಮೂಲಕ ತಿಳಿದಿದ್ದಾರೆ ತಾನೆ, ವೈದಿಕ ಧರ್ಮಜೀವನದಲ್ಲಿ ಇದರ ಪ್ರಸ್ತಾಪವಿದೆ. ನನ್ನ ತಂದೆಯ ಕಾಲದಲ್ಲಿ ಅದರ ಚರ್ಚೆ ಬಹಳ ನಡೆದಿತ್ತು. ಭಾರತೀಯ ವಿದ್ವಾಂಸರು ಹೇಳಿದ್ದು ಇಷ್ಟು. ಮನಸ್ಸಿಗೆ ಇಷ್ಟೋಂದು ಪ್ರಚೋದನೆ ಸರಿಯಲ್ಲ. ಮನೋವಿಕಾರದ ತೊಂದರೆಗಳು ಊಹಿಸುವುದಕ್ಕೂ ಕಷ್ಟ ಅಂತ. ಆದರೆ ಅಷ್ಟರಲ್ಲೇ ಅದರ ಪರಿಣಾಮಗಳು ಕೈಮೀರಿ ಹೋಗಿದ್ದವು. ಈ ವಿಷಯದ ಬಗ್ಗೆ ನಡೆದ ವಿಚಾರಗೋಷ್ಠಿಯಲ್ಲಿ ಇದನ್ನೊಪ್ಪದ ಕೆಲವರು ಅವೈಜ್ಞಾನಿಕ ಎಂಬ ಬಿರುದು ಕಟ್ಟಿ ಭಾರತೀಯ ವಿದ್ವಾಂಸನೊಬ್ಬನ ಕೊಲೆಗೈದರು. ಇದೇ ಶುರು. ಜನ ಇತರರ ವಿಷಯಗಳ ಬಗ್ಗೆ ಎಲ್ಲಾ ತಿಳಿದಂತೆ ತಮ್ಮದೇ ಆದ ತೀರ್ಪನ್ನಿಟ್ಟರು. ಇವ ಕರಿಯ, ಇವ ದಡ್ಡ, ಇವರ ಕುಲ ಕೀಳು, ಇವ ದೇವ, ಇವ ಭೂತ ಹೀಗೆ. ಅತೀ ಹತ್ತಿರದಿಂದ ಒಬ್ಬರನೊಬ್ಬರನ್ನು ಅರಿತಿದ್ದ ರಾಷ್ಟ್ರಗಳು ಏಕ್‍ಧಮ್ ವೈರಿಗಳಾದರು. ಮೃತರಾದರೂ ಆ ವಿದ್ವಾಂಸರ ಶೋಧನೆಗಳು ಚರಿತ್ರೆಯಲ್ಲಿ ಧೃಡವಾಗಿದೆ. ಮೊದಲಿಗೆ ದೇವ ದಾನವ ಮನುಷ್ಯರು ಬೇರೆಬೇರೆಯಾದರು. ಒಂದರ್ಥದಲ್ಲಿ ಮನೋವಿಕಾರದ ಮೊದಲನೆಯ ಹಂತ ಇದು. ನಂತರ ಮತ, ಕುಲ, ಸಂಸ್ಕೃತಿ, ರಾಜಕೀಯ ಹೀಗೆ ಒಂದರ ಮೇಲೊಂದು ಸೂಕ್ಶ್ಮತೆಯನ್ನಿಟ್ಟು ವಿಕಾರ ಬೆಳೆಯುತ್ತಲೇ ಹೋಗಿದೆ. ಆಗಿನಿಂದಲೇ ಪ್ರತಿದಿನವೂ ಜಗತ್ತಿಗೆ ಜಗತ್‍ಸಮರದ ಅಂಚೇ ಆಗಿದೆ"
ಇವನ ಮಾತುಗಳನ್ನು ಕೇಳಿ ನಡುಕ ಬಂದದ್ದೇನೋ ಸರಿ. ವೈಯುಕ್ತಿಕವಾಗಿ ಭೂತಪ್ರೇತಗಳ ವಿಷಯದಿಂದ ಭಯಗೊಂಡಿದ್ದ ನಾನು ಭಯದ ಮೂಲ ಹುಡುಕಲು ಹೋಗಿ ಕಂಡುಕೊಂಡದ್ದು ಅದಕ್ಕಿಂತಾ ಕಳವಳಕಾರಿ. ಜೀವಸಂಕುಲನದ ಸಂಕ್ಷಿಪ್ತವಾದ ನೋಟವನ್ನೇ ಕಂಡ ಅನುಭವ. ಕೃಷ್ಣ ಅರ್ಜುನನಿಗೆ ತೋರಿಸಿದಂತ ವಿಶ್ವನೋಟದಷ್ಟು ವೈಭವವಿರಲಿಲ್ಲ. ಆದರೂ comparable ಅನ್ನಿ. ಆದರೆ ಇಂತಹ ಘೋರ (gore?) ನೋಟಕ್ಕೆ ನಾನು ತಯಾರಿರಲಿಲ್ಲ. ನನ್ನ ಪ್ರಶ್ನೆ ಮುಂದುವರೆಸಿದೆ.
"ಹಾಗಾದರೆ ನಿನ್ನ ಅಭಿಪ್ರಾಯದಲ್ಲಿ ವಿವಿಧ ನಾಗರೀಕತೆ, ಸಂಸ್ಕೃತಿಗಳು ಇವೆಲ್ಲ ಕೇವಲ ಮನೋವಿಕಾರದ ಫಲವೇ? ಅವುಗಳಿಂದ ಮನುಷ್ಯನಿಗೆ ಜೀವನದ ಆನಂದವನ್ನು ಅನುಭವಿಸುವುದಕ್ಕಾಗಿಲ್ಲವೇ?"
"ನೀನು ಹೀನಜೀವಿಯೆಂದು ಹೇಗೆ ತೋರಿಸಿಕೊಡುತ್ತೀಯ! ನಾನು ಮಾತಾಡುತ್ತಿರುವುದು ಇಡೀ ಜೀವಸಂಕುಲನದ ವಿಷಯ. ನಿನ್ನ ಯೋಚನೆಗಳು ಮನುಷ್ಯನ ಪರಿಮಿತಿಯನ್ನು ಬಿಟ್ಟು ಮುಂದೆ ಹೋಗಿಯೇ ಇಲ್ಲ ನೋಡು. ಇರಲಿ. ಸಧ್ಯಕ್ಕೆ ಮನುಷ್ಯನ ವಿಷಯಕ್ಕೇ ಸೀಮಿತಗೊಳಿಸುವೆ. ಮ್ಯಾನ್ಹಾಟನ್ ಪ್ರಾಜೆಕ್ಟಿನಲ್ಲಿ ಭಾಗವಹಿಸಿದ ವಿಜ್ಞಾನಿಗಳ ಶೋಧನೆ ಇಂದು ವಿಶ್ವವನ್ನೇ ಅದರ ತುದಿಗೆ ತಂದು ನಿಲ್ಲಿಸಿದ್ದು ಸುಳ್ಳೇ?"
"ವಿವಿಧತೆ ಬೇಕೋ ಬೇಡವೊ, ಪ್ರತೀ ಮನುಷ್ಯನೂ ಮತ್ತೊಂದು ಮನುಷ್ಯನಿಗೆ ವಿಚಿತ್ರನೇ. ಆದರೆ ಮನುಷ್ಯನ ಆಕಾಂಕ್ಷೆಗಳು ಹಿರಿದೇ.. ಪ್ರತೀಸಲ ನೀನು ನಿನ್ನ ವೇಳಾಪಟ್ಟಿ ಸಿದ್ಧಪಡಿಸುವಾಗ ಮಾಡುವ ತಪ್ಪು ಎಂತದು? ಸಿಕ್ಕಾಪಟ್ಟೆ ಆದರ್ಶವಾಗಿ ಯೋಚಿಸಿ ಯೋಜನೆ ತಯಾರಿಸುವುದು. ಯೋಜನೆ ವಾಸ್ತವ್ಯದಲ್ಲಿ ಅಸಂಭವವಾಗಿರುತ್ತದೆ. ಮುಂದೆ ಒಂದು ದಿನವೂ ಯೋಜನೆಗಳನ್ನು ಕಾರ್ಯಗತವಾಗಿಸದೆಯೇ ಮರೆಯುವೆ, ತಾನೆ. ಹಾಗೆಯೇ ಯೋಚಿಸುವಾಗ ಮನುಷ್ಯನ ಆದರ್ಶಗಳಿಗೆ ಮಿತಿಯೇ ಇರುವುದಿಲ್ಲ. ವೈರಾಗ್ಯ ಅದ್ವೈತ, global village, free markets, classless society, perfect competition.. ಹೀಗೆ ಒಂದಕ್ಕಿಂತ ಒಂದು ಉನ್ನತ ಯೋಚನೆಗಳು. ಜೀವಮಾನವಿಡೀ ಅಂತಹ ನಿಖರತೆಯ ಶೋಧನೆಯಲ್ಲಿ ಮುಳುಗಿರುತ್ತಾನೆ ಮನುಷ್ಯ. ವಾಸ್ತವಕ್ಕೆ ಮಿತಿಯಿರುತ್ತದೆಯೆಂದು ಅರಿಯುವುದೇ ಇಲ್ಲ ನೀವು. ಅದರೆ ಸಂಪೂರ್ಣತೆಯ ಶೋಧನೆಯ ಆನಂದ ಬಹಳವೇ.. ಆದರೆ ಒಬ್ಬನ ಕ್ರಿಯೆ ಮತ್ತೊಬ್ಬನ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದರ ಎಣಿಕೆ ಯಾರಿಗಿದೆ? ಮನುಷ್ಯನ ಯೋಚನೆಗಳೇ ಇಷ್ಟು ಸಂಕೀರ್ಣವಾದರೆ ದೇವ ದಾನವರು ಎದುರಿಸುತ್ತಿರುವ ಸಮಸ್ಯೆಗಳು, ಅವರ ಶೋಧನೆಗಳ ಪರಿಣಾಮ, ಇವುಗಳನ್ನು ತಿಳಿಯಲು ಸಾಧ್ಯವೇ?"
ಇಷ್ಟಕ್ಕೆ ಪ್ರೆಸ್ತಕಾಯ ನಿಲ್ಲಿಸಿದ. ಸ್ವಲ್ಪ ಶಾಂತನಾಗಿದ್ದ.
"ವಿವಿಧತೆ ಮತ್ತು ಐಕ್ಯತೆಯ ನಿಖರ ಪ್ರಮಾಣಗಳನ್ನು ಕಂಡುಹಿಡಿಯಲು ನಿನ್ನ ಜೀವನವನ್ನು ಮುಡುಪಾಗಿಡುವೆಯಾ? ನಾನು ಸಹಾಯಮಾಡಬಲ್ಲೆ"
ಅಚಾನಕ್ಕಾಗಿ ಬಂದ ಈ ಪ್ರಶ್ನೆಯಿಂದ ಚಕಿತನಾದೆ. ಅವನ ಕಣ್ಣುಗಳಲ್ಲಿ ಹೊಸ ಹೊಳಪಿತ್ತು. ಒಂದು ಕ್ಷಣಕ್ಕೆ "ವಿಶ್ವಶಾಂತಿಯ ಹರಿಕಾರ" ಎಂಬ ಬಿರುದು ನನಗಿದ್ದರೆ ಹೇಗಿರುತ್ತದೆ ಅಂತ ಊಹಿಸಿನೋಡಿದೆ. ನಾನು ಪ್ರಶಸ್ತಿ ಸ್ವೀಕರಿಸುವಾಗ ಪ್ರೆಸ್ತಕಾಯ ಕೂಡ ನನ್ನ ಜೊತೆಯಲ್ಲಿದ್ದ. ವಾಸ್ತವಕ್ಕೆ ಬಂದಾಗ ನುಸುನಕ್ಕೆ.
"ಬೇಡ ಗುರು, ಬಹಳ ಕೆಲಸವಿದೆ!"
ಮತ್ತೆ ಸಪ್ಪಗಾದ ಪ್ರೆಸ್ತಕಾಯ.
"ನಾಳೆ ಜಗತ್ತು ಕೊನೆಗೊಳ್ಳಲಿದೆ. ಇದಕ್ಕೆ ನಿನ್ನ ಇಂದಿನ ನಿರ್ಧಾರವೇ ಕಾರಣ!" ಎಂದು ಹೇಳಿ ಅಂತರ್ಧಾನನಾದ. ಆಷ್ಟರಲ್ಲಿ ನಿದ್ದೆಯಿಂದ ಎದ್ದೆ ಅಂತ ಹೇಳಕ್ಕಾಗಲ್ಲ. ಇದು ಕನಸೋ ನಿಜವಾಗಿ ನಡೆದದ್ದೋ ತಿಳಿಯದಾಗಿದೆ. ನನ್ನ ಕನಸುಗಳಲ್ಲಿ ಯಾವತ್ತೂ ಕೊನೆಯಿರುತ್ತಿತ್ತು. ಇದಿನ್ನೂ ಮುಂದೆ ಕಾದುನೋಡಬೇಕಾದ ಪರಿಸ್ಥಿತಿ. ಆದ್ದರಿಂದ ಈ ಪ್ರಸಂಗ ಮುಗಿಯಿತೋ ಇಲ್ಲವೋ ತಿಳಿದಿಲ್ಲ. ಕಥೆಯಂತೂ ಮುಗಿಯಿತು ಅಷ್ಟೆ
--
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ