ಸಂಪದ ಶ್ರಾವ್ಯ, ೧೩ನೇ ಸಂಚಿಕೆ; ನಮ್ಮೊಂದಿಗೆ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ

ಸಂಪದ ಶ್ರಾವ್ಯ, ೧೩ನೇ ಸಂಚಿಕೆ; ನಮ್ಮೊಂದಿಗೆ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ

ಬರಹ

ಪ್ರಿಯ ಸಂಪದಿಗರೇ,

ಕನ್ನಡದ ಬಹುಮುಖ್ಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರೊಂದಿಗೆ ಸಂಪದ ತಂಡ ನಡೆಸಿದ ಸಂದರ್ಶನ ಪಾಡ್ ಕಾಸ್ಟ್ ರೂಪದಲ್ಲಿ ನಿಮ್ಮ ಮುಂದಿದೆ. ತುಂಬ ದಿನಗಳ ಹಿಂದೆಯೇ ಸಂದರ್ಶನ ನಡೆಸಿದ್ದೆವಾದರೂ ಕಾರಣಾಂತರಗಳಿಂದ ಪ್ರಕಟಣೆ ತೀರ ತಡವಾಯಿತು.

ಕೆಳಗೆ ನೀಡಿರುವ ಲಿಂಕು ಬಳಸಿ ಪಾಡ್ ಕಾಸ್ಟನ್ನು ಡೌನ್ ಲೋಡ್ ಮಾಡಿಕೊಂಡು ಕೇಳಬಹುದು ಇಲ್ಲವೇ ಸಂಪದದಲ್ಲೇ ಕೇಳಬಹುದು.

- ಸಂಪದ ನಿರ್ವಹಣೆ ತಂಡ

ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಅವರು ನವ್ಯೋತ್ತರ ಕನ್ನಡ ಕಾವ್ಯದ ಪ್ರಮುಖ ವಾಹಿನಿಗಳಲ್ಲಿ ಒಂದು ಪ್ರಮುಖ ಧಾರೆಯಾಗಿದ್ದಾರೆ. ಅವರ ಕಾವ್ಯ ಮಾರ್ಗ ಕೇವಲ ತೀವ್ರತೆಯೊಂದನ್ನೇ ಅಲ್ಲದೇ ಪ್ರಮಾಣದ ಕಾರಣದಿಂದಲೂ ಮಹತ್ವದ್ದಾಗಿದೆ. ೧೯೬೮ರಲ್ಲಿ ತಮ್ಮ ಮೊದಲ ಕವನ ಸಂಕಲನ ‘ಪರಿವೃತ್ತ’  ಪ್ರಕಟಿಸಿದ ಅವರು ೨೦೦೮ರಲ್ಲಿ ಉತ್ತರಾಯಣ ಸಂಕಲನ ಪ್ರಕಟವಾದಾಗ ಅದು ಅವರ ೬೪ನೇ ಕೃತಿಯಾಗಿತ್ತು ಅಂದರೆ ಅವರ ಒಟ್ಟೂ ಬರವಣಿಗೆಯ ಗಾತ್ರ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಪರಂಪರೆಯ ಸತ್ವದೊಡನೆ ಸ್ವಂತದ ಅನುಭವಗಳನ್ನು ಅನುಸಂಧಾನ ಮಾಡುತ್ತ ಪ್ರಾಚೀನ ಮತ್ತು ವರ್ತಮಾನಗಳ ಸಹಯೋಗವನ್ನು ಅವರು ಸಾಧಿಸಿದ್ದಾರೆ. ನಾಟಕಗಳನ್ನು, ಮಕ್ಕಳ ಕಾದಂಬರಿ ಮತ್ತು ವಿಮರ್ಶೆಗಳನ್ನು ಹಾಗೇ ಕವನ ಸಂಕಲನಗಳನ್ನು ಕಾಲದಿಂದ ಕಾಲಕ್ಕೆ ಪ್ರಕಟಿಸುತ್ತ ಬಂದಿರುವ ಎಚೆಸ್ವಿ, ಆ ಮುಖೇನ ಎಂಬ ಅಂಕಣಬರಹವನ್ನು ಉದಯವಾಣಿಗೆ ಬರೆಯುತ್ತಿದ್ದುದನ್ನೂ ಮರೆಯುವ ಹಾಗಿಲ್ಲ. ಚಿನ್ನಾರಿ ಮುತ್ತ ಚನಚಿತ್ರ ಕೂಡ ಅವರ ಕೊಡುಗೆಯೇ. ಭಾಷೆಯ ಲವಲವಿಕೆ, ಜೀವಂತಿಕೆ, ಸಹಜೋಲ್ಲಾಸ, ಚಿತ್ರಕಶಕ್ತಿ, ಲಾಲಿತ್ಯ, ವಸ್ತು ನಿರ್ವಹಣೆಯ ನಾವೀನ್ಯ, ಹೀಗೆ ಅವರ ಕಾವ್ಯೋದ್ಯೋಗವನ್ನು ಬೇರೆ ಬೇರೆ ನೆಲೆಗಳಿಂದ ವಿಷ್ಲೇಷಿಸಬಹುದಾದರೂ, ಅವರು ತಮ್ಮ ಸಂಕಲನಗಳ ಮೂಲಕ ಹುಡುಕುತ್ತಿರುವ ಹೊಸಹಾದಿಯನ್ನು ಗಮನಿಸುವುದೇ ಒಂದು ಸೊಗಸು.

ಅವರ ಇತ್ತೀಚಿನ ಸಂಕಲನ ಉತ್ತರಾಯಣದ ಹಲವು ಕವಿತೆಗಳಲ್ಲಿ ಅವರು ಧ್ಯಾನಿಸಿರುವ ರೀತಿ ಕನ್ನಡ ಕಾವ್ಯ ಪರಂಪರೆಗೆ ಮತ್ತೊಂದು ಮಜಲನ್ನು ಜೋಡಿಸಿದೆ. ಅನೇಕಾನೇಕ ಕೃತಿಗಳನ್ನು ಈವರೆಗೆ ತಂದಿದ್ದರೂ, ಅವರ ಕಾವ್ಯದ ಮೂಲಕೇಂದ್ರ ಯಾವುದೆಂದು ಮೇಲ್ನೋಟಕ್ಕೆ ದಕ್ಕದಿರುವುದೂ ಒಂದು ಹೆಗ್ಗಳಿಕೆಯೇ. ಬರಿಯ ಕನ್ನಡಕ್ಕಷ್ಟೇ ಅಲ್ಲದೆ ವಸಾಹತೋತ್ತರ ಭಾರತೀಯ ಕಾವ್ಯ ಸಂದರ್ಭಕ್ಕೇ ಅವರು ಮಾದರಿಯಾಗಿದ್ದಾರೆ. ಮೂಲಸ್ವರೂಪದ ಅಭಿಜ್ಞಾನದಲ್ಲೇ ಅವರ ಸಾಹಿತ್ಯ ಯಾತ್ರೆ ನಡೆಯುತ್ತಿರುತ್ತದೆ. ಬರಿಯ ಛಂದೋವಿನ್ಯಾಸಗಳಲ್ಲಲ್ಲದೇ ತಾತ್ವಿಕ ಕಾರಣಗಳಿಂದಲೂ ಅವರ ಕಾವ್ಯಕೃಷಿ ಮಹತ್ವದ್ದಾಗಿದೆ. ತಮ್ಮ ಕಾವ್ಯೋದ್ಯೋಗದುದ್ದಕ್ಕೂ ಕಾವ್ಯದ ಸ್ವದೇಶೀಕರಣಕ್ಕೆ ಬದ್ಧರಾಗಿದ್ದಾರೆ. ಕಾವ್ಯವನ್ನು ಅಮೂರ್ತದ ಆಗಸದಿಂದ ಮಣ್ಣ ನೆಲಕ್ಕೆ, ತಾತ್ವಿಕತೆಯ ಒಗಟಿನಿಂದ ಅನುಭವದ ನಿಜಕ್ಕೆ, ಕನಸಿನಾದರ್ಶಗಳನ್ನು ಕಥನಕಾವ್ಯದ ಅನುಸರಣದ ಕೆಲಸದಿಂದ ಅರಿವಿನಂಗಳಕ್ಕೆ ತಂದು ನಿಲ್ಲಿಸುವ ಅವರು, ಪುರಾಣದ ಪಾತ್ರಗಳಿಗೆ ಹೊಸ ಪೋಷಾಕು ತೊಡಿಸಿ ಬೆಚ್ಚಿಬೀಳಿಸಿದ್ದಾರೆ. ಶ್ರೀಸಂಸಾರಿ ಮತ್ತು ಆಪ್ತಗೀತೆ ಎಂಬ ಪದ್ಯಗಳಲ್ಲಿ ಅವರು ದೈವತ್ವಕ್ಕೆ ನೀಡಿದ ಮರುವ್ಯಾಖ್ಯಾನ ಕೂಡ ಗಮನೀಯವೇ ಆಗಿದೆ. ಹರಿವ ಇರುವೆ ಕೂಡ ನೋಯದ ಹಾಗೆ, ಪಂಚಮದ ಇಂಚರ ಎಷ್ಟು ಮಾತ್ರಕ್ಕೂ ಒಡೆಯದ ಹಾಗೆ ಕಾಪಿಡಬೇಕೆನ್ನುವುದು ಅವರ ಕವಿಮನಸ್ಸಿನ ವೈಚಾರಿಕತೆಯಾಗಿದೆ. ಪೌರಾಣಿಕ ಸ್ಮೃತಿಯ ಮಂಥನದ ಮೂಲಕ ಆಧುನಿಕ ಕಾಲಕ್ಕೂ ಪ್ರಸ್ತುತವಾಗುವ ವೈಚಾರಿಕ ನವನೀತವನ್ನು ಹಂಚುತ್ತಿರುವ ಎಚೆಸ್ವಿ ಆಧುನಿಕ ಮನೋಭೂಮಿಕೆಯಲ್ಲಿರುವ ನಮ್ಮನ್ನೆಲ್ಲ ಪರಂಪರೆಯ ಆಗಸದವಕಾಶಕ್ಕೆ ಜೋಡಿಸಿ ಹೊಸ
ಚಿಂತನೆಗಳು ಸಾಧ್ಯವಿದೆಯೆಂದು ಮನಗಾಣಿಸಿದ್ದಾರೆ.

ಎಚೆಸ್ವಿಯವರ ಕವಿತೆಗಳು ಸರಳವಾಗಿವೆಯೆನ್ನಿಸಿದರೂ ಅವು ಓದುಗನಲ್ಲಿ ಉಳಿಸುವ ಪ್ರಶ್ನೆಗಳು ದೊಡ್ಡವು. ಅವುಗಳ ಆಶಯವೂ ದೊಡ್ಡದೇ. ಕಾವ್ಯವೆಂದರೇನೆಂದು ಮತ್ತೆ ಮತ್ತೆ ಆಲೋಚಿಸುವ ಹಾಗೆ ಮಾಡುವ ಅವರ ಕಾವ್ಯಕ್ರಿಯೆಗೆ ಒಂದು ನಮಸ್ಕಾರ. 

- ಡಿ ಎಸ್ ರಾಮಸ್ವಾಮಿ

ಸಂದರ್ಶಕರು: ಇಸ್ಮಾಯಿಲ್

ಕವಿ ಪರಿಚಯ : ಡಿ ಎಸ್ ರಾಮಸ್ವಾಮಿ

ಚಿತ್ರಗಳು : ಹರಿಪ್ರಸಾದ್ ನಾಡಿಗ್