ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
- ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: Nagaraj.G (Sep 8 2008 - 11:35am)
- ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: csomsekraiah (Mar 5 2008 - 9:43am)
- ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: ravikreddy (Mar 4 2008 - 7:53am)
- ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: ಪ್ರಶಾಂತ.ಪಂಡಿತ (Mar 13 2008 - 11:38am)
- ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: ravikreddy (Mar 7 2008 - 7:00am)
- ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: aniljoshi (Mar 3 2008 - 11:42am)
- ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: anivaasi (Mar 2 2008 - 11:20am)
- ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: tarlesubba (Apr 2 2008 - 1:36pm)
- ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: ಪ್ರಶಾಂತ.ಪಂಡಿತ (Mar 3 2008 - 11:08am)
- ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ By: hamsanandi (Mar 3 2008 - 5:39am)

RSS:
ಉ: ೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
ಮೊದಲಿಗೆ, ಈ ಆಡಿಯೊ ಸಂದರ್ಶನವನ್ನು ಸಾಧ್ಯ ಮಾಡಿದ ಹರಿಪ್ರಸಾದ್ ಮತ್ತು ಪ್ರಶಾಂತ್‌ರವರಿಗೆ ಧನ್ಯವಾದಗಳು. ಬಹಳ ಸಕಾಲಿಕವಾದ ಸಂದರ್ಶನ ಇದು.
ನಾಗೇಶ್ ಹೆಗಡೆಯವರ ಸಂದರ್ಶನವನ್ನು ಕೇಳಿದ ಮೇಲೆ ಅವರು ಹೇಳಿರುವ ಹಲವಾರು ವಿಷಯಗಳಲ್ಲಿ ಸದ್ಯಕ್ಕೆ ಒಂದೆರಡನ್ನು ಆಯ್ದುಕೊಂಡು ಪ್ರತಿಕ್ರಿಯೆ ನೀಡುತ್ತಿದ್ದೇನೆ. ಆಸಕ್ತರು ಸರಿಯೆನಿಸಿದಲ್ಲಿ (ತಪ್ಪೆನಿಸಿದರಂತೂ ಖಂಡಿತವಾಗಿ) ಚರ್ಚೆ ಮುಂದುವರೆಸಬಹುದು.
ನಾಗೇಶ್ ಹೆಗಡೆಯವರೆ,
ಮೊದಲಿಗೆ, ಮುಖ್ಯವಾಗಿ ನೀವು ಹೇಳಿದ ಐಟಿ, ಡಿಜಿಟಲ್ ಡಿವೈಡ್ ಮತ್ತು ಕನ್ನಡದ ಬಗ್ಗೆ ಒಂದೆರಡು ಮಾತು. ಇಲ್ಲಿ ಸ್ವಲ್ಪ ನನ್ನದೆ ಪ್ರವರ ಮತ್ತು ಅನುಭವವನ್ನು ಉಲ್ಲೇಖಿಸುತ್ತಿರುವುದಕ್ಕೆ ಕ್ಷಮೆಯಿರಲಿ.
ನೀವು ಕೈಗಣಕ ಮತ್ತು ಅಂಗೈಗಣಕಗಳಲ್ಲಿ ಕನ್ನಡ ಹೆಚ್ಚಿಗೆ ಕಾಣದೆ ಇರುವುದರ ಬಗ್ಗೆ ಪ್ರಸ್ತಾಪಿಸುತ್ತ, ’ಇಷ್ಟೆಲ್ಲ ಕನ್ನಡದ ಐಟಿ ತಂತ್ರಜ್ಞರು ಇದ್ದಾರೆ, ಯಾಕಿದು ಸಾಧ್ಯವಾಗುತ್ತಿಲ್ಲ,’ ಎಂಬ ಪ್ರಶ್ನೆ ಎತ್ತಿದ್ದೀರಿ. ನಾನು ಇದಕ್ಕೆ ನನಗರ್ಥವಾದ ವಾಸ್ತವ ಮತ್ತು ನನಗೆ ಹೊಳೆದ ಪರಿಹಾರವನ್ನು ಮಾತ್ರ ಇಲ್ಲಿ ಬರೆಯುತ್ತೇನೆ. ಈ ಸಮಸ್ಯೆಯ ಮೂಲ ಇರುವುದೆ ಭಾರತದ ಆರ್ಥಿಕ ಬಡತನದಲ್ಲಿ ಮತ್ತು ಬಲ್ಲಿದರಿಗಿರುವ ಇಂಗ್ಲಿಷ್ ಜ್ಞಾನದಲ್ಲಿ. ಇವತ್ತು ಕೇವಲ ಕನ್ನಡ ಮಾತ್ರ ಬರುವ ರೈತನಿಗೆ ಕಂಪ್ಯೂಟರ್‌ನ ಅವಶ್ಯಕತೆಯಿಲ್ಲ. ಯಾಕೆಂದರೆ ಅವನು ಬಡವನೂ ಹೌದು. ಅಷ್ಟಿಷ್ಟು ಸ್ಥಿತಿವಂತನಾದ ರೈತ ತನಗೆ ಅಷ್ಟಿಷ್ಟು ಇಂಗ್ಲಿಷು ಗೊತ್ತಿದ್ದರೆ ಅಗತ್ಯವಾದ ಕಡೆ ಇಂಗ್ಲಿಷ್ ಕಂಪ್ಯೂಟರ್ ಬಳಸುತ್ತಾನೆ. ಇಂಗ್ಲಿಷ್ ಬಾರದ ಸ್ಥಿತಿವಂತ ರೈತ ಅಗತ್ಯವಾದಾಗ ಮತ್ತಿನ್ಯಾರನ್ನೊ ಅವಲಂಬಿಸಿರುತ್ತಾನೆ. ಇನ್ನು ವ್ಯಾಪಾರಿಗಳು, ವಹಿವಾಟು ಮಾಡುವವರು ೨-೩ ಸಾವಿರಕ್ಕೆಲ್ಲ ಸಿಗುವ ಇಂಗ್ಲಿಷ್ ಬಲ್ಲ ನೌಕರರನ್ನು ಇಟ್ಟುಕೊಂಡು ಸಂಭಾಳಿಸುತ್ತಾರೆ. ಹಾಗಾಗಿ ಇವತ್ತಿನ ಸ್ಥಿತಿಯಲ್ಲಿ ಕನ್ನಡದಲ್ಲಿ, ಆ ವಿಚಾರದಲ್ಲಿ ಯಾವುದೆ ಭಾರತೀಯ ಭಾಷೆಯಲ್ಲಿ ಕಂಪ್ಯೂಟರ್ ತರುವ ಅಗತ್ಯ ಯಾವ ಕಂಪನಿಗೂ ಕಾಣಿಸುತ್ತಿಲ್ಲ. ಅವರಿಗೆ ಸದ್ಯಕ್ಕೆ ಮಾರುಕಟ್ಟೆ ಕಾಣಿಸುತ್ತಿಲ್ಲ ಮತ್ತು ಹಾಕುವ ಬಂಡವಾಳಕ್ಕೆ ಸೂಕ್ತ ಲಾಭವೂ ಕಾಣಿಸುತ್ತಿಲ್ಲ.
ಕನ್ನಡದ ಮಟ್ಟಿಗಷ್ಟೆ ಮಾತನಾಡುವುದಾದರೆ, ಡಿಜಿಟಲ್ ಡಿವೈಡ್‌ನ ಆರ್ಥಿಕ ಆಯಾಮ ಬಿಟ್ಟು ಕೇವಲ ಭಾಷೆಯ ಆಯಾಮದಲ್ಲಿ ಮಾತನಾಡುವುದಾದರೆ, ಇದನ್ನು ಈ ಕೂಡಲೆ ಸಾಧ್ಯಮಾಡುವ ಸ್ಥಿತಿಯಲ್ಲಿರುವ ಏಕೈಕ ಸಂಸ್ಥೆ ಎಂದರೆ ಅದು ರಾಜ್ಯ ಸರ್ಕಾರ. ಇವತ್ತಿನ ಕಂಪ್ಯೂಟರೀಕರಣದ ಕಾಲದಲ್ಲಿ "ಕೇವಲ ಕನ್ನಡ ಇರುವ ಕಂಪ್ಯೂಟರ್‌ಗಳನ್ನು ಮಾತ್ರ ಕೊಳ್ಳುತ್ತೇವೆ" ಎಂದು ಸರ್ಕಾರ ತೀರ್ಮಾನಿಸಿದರೆ ಸಾಕು ಅದು ಅರ್ಧ ಯುದ್ಧವನ್ನು ಗೆದ್ದಂತೆ. ಆದರೆ ಪರದೇಸಿ ಐಎಎಸ್ ಬಾಬುಗಳ ಅಧಿಕಾರಶಾಹಿಯಿಂದಾಗಿ ಮತ್ತು ನಮ್ಮ ರಾಜ್ಯದ ಕೀಳರಿಮೆಯ ಅಯೋಗ್ಯ ರಾಜಕಾರಣಿಗಳಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ಅಷ್ಟೆ ಅಲ್ಲ, ಇದರ ಬಗ್ಗೆ ನಮ್ಮ ಸಾಹಿತಿಗಳಿಗೂ, ಕನ್ನಡಪರ ಹೋರಾಟಗಾರರಿಗೂ, ಚಳವಳಿಕಾರರಿಗೂ ಸ್ಪಷ್ಟ ಕಲ್ಪನೆಯೆ ಇಲ್ಲ.
ಇದಕ್ಕೆ ನನ್ನ ಸ್ವಂತ ಅನುಭವದ ಉದಾಹರಣೆ ಕೊಡುತ್ತೇನೆ. ೨೦೦೫ ರಲ್ಲಿ ನಾನು ಬೆಂಗಳೂರಿಗೆ ಬಂದಿದ್ದಾಗ (ಆಗಲೆ ಮೊದಲ ಸಲ ನಿಮ್ಮನ್ನು ಪ್ರಜಾವಾಣಿಯಲ್ಲಿ ಭೇಟಿಯಾಗಿದ್ದು!) ಕನ್ನಡ ಸಂಸ್ಕೃತಿ ಇಲಾಖೆಗೆ ಮತ್ತು ವಿಧಾನಸೌಧದಲ್ಲಿನ ಕನ್ನಡ ಅಭಿವೃದ್ಧಿ ಇಲಾಖೆಗೆ ಮೂರ್ನಾಲ್ಕು ದಿನ ಅಲೆದೆ. "ಸರ್ಕಾರಿ ಇಲಾಖೆಗಳಲ್ಲಿ ಕನ್ನಡದ ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುವುದರಿಂದ ನೀವು ಕನ್ನಡವನ್ನು ಬೆಳಸಬಹುದು, ಕೇವಲ ನುಡಿ-ಬರಹಗಳನ್ನೆ ನೋಡಿ ಈಗಾಗಲೆ ಕಂಪ್ಯೂಟರ್‌ನಲ್ಲಿ ಕನ್ನಡ ಇದೆ ಎಂದುಕೊಳ್ಳಬೇಡಿ, ಹಾಗೆ ಮಾಡಿದರೆ ಕೇವಲ ಕನ್ನಡ ಮಾತ್ರ ಬರುವ ಬಹುಸಂಖ್ಯಾತ ಕನ್ನಡಿಗರಿಗೆ ಕಂಪ್ಯೂಟರ್ ದೂರವಾಗುತ್ತ ಹೋಗುತ್ತದೆ," ಎನ್ನುವ ವಿಚಾರವನ್ನಿಟ್ಟುಕೊಂಡು ಅದರ ಬಗ್ಗೆ ಚರ್ಚಿಸಲು ಸಂಸ್ಕೃತಿ ಇಲಾಖೆಗೆ ಹೋದೆ. ಎರಡು-ಮೂರು ಸಲ ಹೋದ ಮೇಲೆ ಯಾರೊ ಒಬ್ಬರು ಎರಡನೆ-ಮೂರನೆ ಸ್ಥಾನದ ನಿರ್ದೇಶಕರು ಸಿಕ್ಕರು. ಅವರಿಗೆ ಇದ್ಯಾವುದೂ ಮುಖ್ಯವಿರಲಿಲ್ಲ. ಸಂಬಳಕ್ಕಾಗಿ ಕೂಲಿ ಮಾಡುವ ನೌಕರರು ಅವರು! ಇನ್ನು ಇದಿನಬ್ಬ ಎಂಬ ವಯೋವೃದ್ಧ ಆಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ. ಅವರು ಮೂರ್ನಾಲ್ಕು ದಿನಕ್ಕೊಮ್ಮೆಯೂ ವಿಧಾನಸೌಧದ ಕಡೆ ತಲೆ ಹಾಕುತ್ತಿರಲಿಲ್ಲ. ಹಾಗೂ ಹೀಗೂ ಪ್ರಾಧಿಕಾರದ ಕಾರ್ಯದರ್ಶಿಯನ್ನು ಕಂಡು ಮಾತನಾಡಿದರೆ, ಅವರು, ಇದು ನಮ್ಮ ಕೆಳಗೆ ಇಲ್ಲ. ಚಾವ್ಲಾ ಎಂಬ ಇ-ಗವರ್ನಮೆಂಟ್ ಇಲಾಖೆಯವರನ್ನು ನೋಡಿ ಎಂದರು! ಎಲ್ಲರೂ ಕೇವಲ ಸಂಬಳ ತೆಗೆದುಕೊಳ್ಳುವ ಕೂಲಿಗಳು. ಮೂಲಭೂತವಾಗಿ ನಮ್ಮ ಸಮಸ್ಯೆ ಇರುವುದು ಇಲ್ಲಿಯೆ.
ಇದೆ ವಿಷಯದ ಮೇಲೆ ಒಮ್ಮೆ (MLC) ಚಂದ್ರಶೇಖರ ಕಂಬಾರರಿಗೆ ಇಲ್ಲಿಂದಲೆ ಫೊನ್ ಮಾಡಿದ್ದೆ. ಮೈಕ್ರೊಸಾಪ್ಟ್‌ನವರು ೪೦ ಡಾಲರ್‌ಗೆಲ್ಲ ಥಾಯ್ ಬಾಷೆಯಲ್ಲಿ ಆಪರೇಟಿಂಗ್ ಸಿಸ್ಟಮ್ ತರುತ್ತಿದ್ದಾರೆ, ನೀವು ಅದನ್ನು ಪ್ರಸ್ತಾಪಿಸಿ ಮತ್ತು ಸರ್ಕಾರದ ಕಂಪ್ಯೂಟರ್‌ಗಳು ಕನ್ನಡದ್ದಾಗಿರುವಂತೆ ಒತ್ತಾಯಿಸಿ ಎಂದು ಕೋರಿಕೊಂಡಿದ್ದೆ. ಅವರ ಮನೆಗೆ ಅದಕ್ಕೆ ಪೂರಕವಾದ ದಾಖಲೆಗಳು ತಲುಪುವ ವ್ಯವಸ್ಥೆಯನ್ನೂ ಮಾಡಿದೆ. ಹಾಗೆಯೆ (MLC) ಮುಖ್ಯಮಂತ್ರಿ ಚಂದ್ರುರವರಿಗೂ ಫೋನ್ ಮಾಡಿ ಅವರಲ್ಲೂ ಅದನ್ನೆ ಕೋರಿದ್ದೆ. ನಾನು ಮಾಡಿದಂತಹ ಯೋಚನೆ ಮತ್ತು ಕೆಲಸವನ್ನೆ ಇನ್ನೂ ಒಂದಷ್ಟು ಜನ ಮಾಡಿರಬಹುದು. ಆದರೆ ಮಾರನೆ ದಿನದ ಪತ್ರಿಕೆಗಳಲ್ಲಿ ಬಂದಿದ್ದೆ ಬೇರೆಯದಾಗಿತ್ತು. ಈ ಕನ್ನಡ ಪಂಡಿತರು ಮತ್ತು ಹೋರಾಟಗಾರರು ವಿಧಾನಪರಿಷತ್ತಿನಲ್ಲಿ ಏನೇನೊ ಅಮುಖ್ಯವಾದ ವಿಚಾರಗಳನ್ನು ಮಾತನಾಡಿದ್ದರೆ ಹೊರತು ಈಗ ತೀರ ಅಗತ್ಯವಾದದ್ದು ಏನು ಎನ್ನುವುದನ್ನೆ ಮರೆತಿದ್ದರು. ಇವರಿಗೆಲ್ಲ ಮೈಕ್ರೊಸಾಪ್ಟ್‌ನ ವಿರುದ್ಧವೊ ಇನ್ಯಾವುದೊ ಕಂಪನಿಯ ವಿರುದ್ದವೊ ಮಾತನಾಡುವುದು ಮುಖ್ಯವಾಗಿಬಿಡುತ್ತದೆಯೆ ಹೊರತು ನಮ್ಮ ಈಗಿನ ಅಗತ್ಯವಾದ ಕನ್ನಡ ಅನುಷ್ಠಾನ ಮುಖ್ಯವಾಗುವುದಿಲ್ಲ. ಇವರಿಗೆ ತಮ್ಮ ಸಿನಿಕತನ, ದ್ವೇಷ, ಅಸಹನೆ, ಈಗೊ, ಕ್ಯಾಪಿಟಲಿಸಮ್, ಮುಖ್ಯವಾಗಿಬಿಡುತ್ತದೆಯೆ ಹೊರತು ತಾವು ನಿರ್ವಹಿಸಬೇಕಾದ ಜವಾಬ್ದಾರಿ ಏನು ಎನ್ನುವುದು ಹಾಗು ಸಮಸ್ಯೆಗೆ ಪರಿಹಾರ ಏನು ಅನ್ನುವುದಲ್ಲ. ಅದೇ ಪರಿಸ್ಥಿತಿ ಇವತ್ತಿಗೂ ಮುಂದುವರೆಯುತ್ತಿದೆ. ನಾಲ್ಕು ವರ್ಷಗಳ ಹಿಂದೆ ನನ್ನಂತಹ ಅಮುಖ್ಯ ಮನುಷ್ಯ ಹೇಳಿದ್ದನ್ನೆ ಲಿಂಗದೇವರು ಹಳೆಮನೆಯಂತಹ ಅಧ್ಯಾಪಕರು ಇವತ್ತೂ ಪ್ರಜಾವಾಣಿಯಲ್ಲಿ ಬರೆಯುತ್ತಿದ್ದಾರೆ.
ಇನ್ನು ’ನಮ್ಮ ಐಟಿ ಇಂಜಿನಿಯರ್‌ಗಳು ಏನೂ ಮಾಡುತ್ತಿಲ್ಲ,’ ಎನ್ನುವ ಸಿನಿಕತನದ ಮಾತಿನ ಬಗ್ಗೆ. ಈ ಸಮಸ್ಯೆಗೆ ಇರುವ ಆರ್ಥಿಕ ಆಯಾಮವೆ ಹೀಗೆ ಹೇಳುವವರಿಗೆ ಅರ್ಥವಾಗುತ್ತಿಲ್ಲ. ಈ ಸಮಸ್ಯೆ ಒಂದು ವೆಬ್‍ಸೈಟು ಮಾಡುವಷ್ಟೊ, ಇಲ್ಲವೆ ಕೇವಲ ನಾಲ್ಕೈದು ಜನ ಸೇರಿಕೊಂಡು ಒಂದು ಪ್ರೊಗ್ರಾಮ್ ಬರೆದುಬಿಡುವಷ್ಟೊ ಆಗಿದ್ದರೆ ಇಷ್ಟೊತ್ತಿಗೆ ನಮ್ಮ ಹುಡುಗರು ಅದನ್ನು ಮಾಡಿಬಿಡುತ್ತಿದ್ದರು. ದಿನೇದಿನೇ ಬದಲಾಗುತ್ತಿರುವ ಹಾರ್ಡ್‍ವೇರ್ ಇಟ್ಟುಕೊಂಡು, ತಮ್ಮ ಜೀವನವನ್ನು ಸಾಗಿಸಲು ಮಾಡಬೇಕಾದ ಉದ್ಯೋಗವನ್ನಿಟ್ಟುಕೊಂಡು, ಭಾಷೆಗೆ ಸಂಬಂಧಪಟ್ಟ ಡಿಜಿಟಲ್ ಡಿವೈಡ್ ತುಂಬುವುದು ಅಸಾಧ್ಯ. ಇದನ್ನು ಮಾಡಬಲ್ಲ ಸಾಧ್ಯತೆ ಇರುವುದು ಸರ್ಕಾರಕ್ಕೆ ಮತ್ತು ಆದಾಯಕ್ಕಾಗಿ ಕೆಲಸ ಮಾಡುವ ಕಂಪನಿಗಳಿಗೆ ಮಾತ್ರ.
ಅದು ಬಿಟ್ಟರೆ ಯಾರಾದರೂ ದುಡ್ಡು ಕಳೆದುಕೊಳ್ಳಲು ಸಿದ್ಧವಿರುವ ಶ್ರೀಮಂತನಿಂದಲೂ ಇದನ್ನು ಸ್ವಲ್ಪ ಮಟ್ಟಿಗೆ ತುಂಬಲು ಸಾಧ್ಯವಿದೆ. ಇವತ್ತು ಕೇವಲ ಹತ್ತು ಸಾವಿರ ರೂಪಾಯಿಗೆ ಅಂತರ್ಜಾಲ ಜಾಲಾಡಬಹುದಾದ ಮತ್ತು ಒಂದೆರಡು ಉಪಯುಕ್ತ ತಂತ್ರಾಂಶಗಳಿರುವ ಅಪ್ಪಟ ಕನ್ನಡದ ಕಂಪ್ಯೂಟರ್ ಅನ್ನು ನಿರ್ಮಿಸಲು ಸಾಧ್ಯವಿದೆ. ಕನಿಷ್ಠ ೧-೨ ಸಾವಿರ ಕಂಪ್ಯೂಟರ್‌ಗಳನ್ನು ನಿರ್ಮಿಸಿದರೆ ಈ ಬೆಲೆಯಲ್ಲಿ ಸುಲಭವಾಗಿ ಮನೆ ಬಳಕೆಗೆ ಬೇಕಾದ ಕನ್ನಡ ಕಂಪ್ಯೂಟರ್ ಅನ್ನು ನಿರ್ಮಿಸಬಹುದು. ಆದರೆ ಅದಕ್ಕೆ ಕನಿಷ್ಠ ಎಂದರೂ ಒಂದು ಕೋಟಿ ರೂಪಾಯಿ ಕಳೆದುಕೊಳ್ಳುವ ದೊಡ್ಡಮನಸ್ಸಿನ ಕನ್ನಡ ಫ್ಹಿಲಾಂಥ್ರಪಿಸ್ಟ್ ಮುಂದೆ ಬರಬೇಕು. ಆದರೆ, ನಮ್ಮಲ್ಲಿ ಇಂತಹ ಒಬ್ಬ ದೊಡ್ಡಮನಸ್ಸಿನ ಶ್ರೀಮಂತನನ್ನೂ ನಾನು ನೋಡಿಲ್ಲ. ನಮ್ಮ ದಾರಿದ್ರ್ಯ ಇರುವುದು ಇಲ್ಲಿ. ನಮ್ಮಲ್ಲಿ ಬಡವರಿಗೆ ಸಹಾಯ ಮಾಡುವುದು ಅಥವ ದಾನ ಮಾಡುವುದು ಫ್ಯಾಷನ್ ಆಗಿದೆಯೆ ಹೊರತು ಬಡತನ ನಿರ್ಮೂಲನೆ ಅಲ್ಲ.
ಇಷ್ಟೆಲ್ಲ ಹೇಳಿಯೂ ನಾನು ಆಶಾವಾದದಿಂದ ಕೂಡಿದ್ದೇನೆ. ಅದೇನೆಂದರೆ, ಈಗಾಗಲೆ ಲಕ್ಷಕ್ಕೂ ಮಿಗಿಲಾಗಿ ನೌಕರರನ್ನು ಹೊಂದಿರುವ ಟಿಸಿಎಸ್, ಇನ್ಫೊಸಿಸ್, ವಿಪ್ರೊಗಳಂತಹ ಕಂಪನಿಗಳು ಜಾಗತಿಕ ಆರ್ಥಿಕ ಹಿಂಜರಿತವಾಗುತ್ತಿದ್ದಂತೆ ದೇಸಿ ಮಾರುಕಟ್ಟೆಗೆ ತಂತ್ರಾಂಶ ಅಭಿವೃದ್ಧಿ ಪಡಿಸಲು ತೊಡಗಿಕೊಳ್ಳಲೇಬೇಕು. ಹೊಸಹೊಸ ಮಾರುಕಟ್ಟೆಗಳನ್ನು ಸೃಷ್ಟಿಸಿಕೊಳ್ಳುವ ಆ ಸಮಯದಲ್ಲಿ ಸ್ವಲ್ಪ ಮಾರುಕಟ್ಟೆ ಇದೆ ಅಂದರೂ ಸಾಕು ಅವರು ನೂರಾರು ಜನರನ್ನು ಆ ಮಾರುಕಟ್ಟೆ ವಶಪಡಿಸಿಕೊಳ್ಳಲು ತೊಡಗಿಸುತ್ತಾರೆ. ಅದು ಐಡಿಯಲ್ ಆದ, ನಾವೆಲ್ಲ ಈಗ ಬಯಸುವ ಪರಿಸ್ಥಿತಿ ಅಲ್ಲ. ಹಾಗೆಯೆ ಅದು ಇಂತಹುದೆ ದಿನ ಆಗುತ್ತದೆ ಎನ್ನುವುದೂ ಅಸಾಧ್ಯ. ಆದರೆ ಅದು ತಡವಾಗದಿದ್ದರೆ ಸಾಕು ಎನ್ನುವ ಹಂಬಲವಷ್ಟೆ ನನ್ನದು.
ಇದೇ ವಿಷಯದ ಮೇಲೆ ನನ್ನದು ಇನ್ನೂ ಹಲವು ಅಂಶಗಳಿವೆ. ಉದಾಹರಣೆಗೆ, ನಮ್ಮ ಹಾಲಿ ವ್ಯವಸ್ಥೆ, ಹಿರಿಯರು ಸಿನಿಕರಾಗದೆ ಹುಡುಕಿಕೊಂಡು ಹೋಗಿ ನೀಡಬೇಕಾದ ನಿಸ್ವಾರ್ಥ ಮಾರ್ಗದರ್ಶನ ಮತ್ತು ಅಗತ್ಯವಾಗಿ ಬೀರಬೇಕಾದ ಪ್ರಭಾವ. ರಾಜಕೀಯ ಇಚ್ಚಾಶಕ್ತಿ, ಅಧಿಕಾರ ರಾಜಕಾರಣದಲ್ಲಿ ಮತ್ತು ಆಡಳಿತದ ಅಧಿಕಾರಶಾಹಿಯಲ್ಲಿ ರೂಪಿಸಬೇಕಾದ ಜವಾಬ್ದಾರಿ ಮತ್ತು ಮೌಲ್ಯಗಳು, ಇವು ಮುಚ್ಚುವ ಎಲ್ಲಾ ತರಹದ ಕಂದರಗಳು, ಇತ್ಯಾದಿ. ಈಗಾಗಲೆ ಈ ಪ್ರತಿಕ್ರಿಯೆ ಉದ್ದವಾಗಿರುವುದರಿಂದ ಇಲ್ಲಿಗೆ ನಿಲ್ಲಿಸುತ್ತೇನೆ. ಯಾರಾದರೂ ಚರ್ಚೆ ಮುಂದುವರೆಸಿದರೆ ಮುಂದಕ್ಕೆ ಹೇಳುವ ಅವಕಾಶ ಬರಬಹುದು.
ಮುಗಿಸುವ ಮುನ್ನ ನೀವು ಚಳವಳಿಗಳ ಬಗ್ಗೆ ಹೇಳಿದ ಮಾತಿಗೆ ಒಂದು ಪುಟ್ಟ ಟಿಪ್ಪಣಿ ಮಾಡಿಬಿಡುತ್ತೇನೆ: ಮಾಧ್ಯಮಗಳಿಂದಾಗಿ, ಯುವಕರೆಲ್ಲ ಕೆರಿಯರ್ ಎಂದು ಓಡುವುದರಿಂದಾಗಿ, ಮತ್ತೂ ಇನ್ನೂ ಹಲವು ಕಾರಣಗಳಿಗೆ ಚಳವಳಿಗಳು ಬಲ ಕಳೆದುಕೊಂಡವು ಎಂದಿದ್ದೀರಿ, ಆ ವಿಷಯದ ಬಗ್ಗೆ ನೀವು ಹೇಳಿರುವುದನ್ನು ಕೇಳಿ ನನಗೆ ಅನೇಕ ವಿಷಯಗಳು ತಿಳಿದುಬಂದವು. ಹಾಗೆಯೆ ನನಗೆ ಹೊಳೆದದ್ದು ಏನೆಂದರೆ, ಆ ಚಳವಳಿಗಳು ತಮ್ಮ ಮೂಲ ಉದ್ದೇಶ ಒಂದಷ್ಟು ಮಟ್ಟಿಗೆ ಈಡೇರುತ್ತಿದ್ದಂತೆ ಬಲಹೀನವಾದವು ಎಂದು. ಚಳವಳಿಗಳಿಂದ ವ್ಯವಸ್ಥೆ ಅಷ್ಟರ ಮಟ್ಟಿಗೆ ಸುಧಾರಿಸಿತು ಎನ್ನಿಸುತ್ತದೆ. ಆದರೆ ಈಗ ಬೀದಿ ಚಳವಳಿಗಳಿಗಿಂತ ಬೇರೆಯೆ ತರಹದ ಆಕ್ಟಿವಿಸಂ (ರ್‍ಯಾಲ್ಫ಼್ ನೇಡರ್ ಮಾದರಿಯದು) ಬೇಕಾಗಿದೆ ಎನ್ನುವುದು ನನ್ನ ಗಾಢ ನಂಬಿಕೆ. ಆ ದಿಸೆಯಲ್ಲಿ ನಮ್ಮ ಪ್ರಯತ್ನ ಇರಬೇಕು. ಇದರ ಬಗ್ಗೆ ಸಮಯವಾದರೆ ನಿಮ್ಮ ಅಭಿಪ್ರಾಯ ತಿಳಿಸಿ?
ನಮಸ್ಕಾರ,
ರವಿ...
[ಸಂಪದ ತಂಡಕ್ಕೆ ಮತ್ತೊಮ್ಮೆ ಧನ್ಯವಾದಗಳು]