"ಸತ್ತ ನಿನ್ನೆಗಳು"

"ಸತ್ತ ನಿನ್ನೆಗಳು"

ನನ್ನೆದೆಯ ಸುಡುಗಾಡಿನಲ್ಲಿ 
ಇನ್ನೊಂದು ನಿನ್ನೆಯ ಹೆಣ,

ಸತ್ತ ನಿನ್ನೆಗಳನ್ನು ಹೂಳಿ 
ಕಲ್ಲಿಟ್ಟು, ಗಿಡ ನೆಟ್ಟಿದ್ದೇನೆ,
ಸಾಯುವ ಇವತ್ತಿಗೆ ಕಾದು 
ಕಣ್ಣರಳಿಸಿ ಕುಳಿತಿದ್ದೇನೆ,,

ನಿನ್ನೆ ಸತ್ತಂತೆ 
ನಿನ್ನೆಯ ನೆನಪೂ ಸತ್ತಿದ್ದರೆ!
ಇಂದು ನನದಾಗಿ ನಗುತಿದ್ದೆ,
ನಾಳೆಯ ಬೆಳಕಿಗೆ ಕಾಯುತ್ತಿದ್ದೆ,

ಸತ್ತ ನಿನ್ನೆಗಳು ನಕ್ಷತ್ರಗಳಾಗಿ 
ಬಾಳಿಗೆ ಬೆಳಕು ನೀಡಿದ್ದರೆ!
ನಾಳೆಗಳ ಉಜ್ವಲತೆಗೆ 
ಇವತ್ತನ್ನ್ಯಾಕೆ ಬಲಿ ಕೊಡುತ್ತಿದ್ದೆ ?

ಇಂದು ನಿನ್ನದು ಮಂಕುತಿಮ್ಮ 
ಎಂದರು ತಿಮ್ಮನ ಕರ್ತು,,,,
ನಿನ್ನೆ ಯಾರದ್ದು ನನ್ನ ಪ್ರಶ್ನೆ?

ಎದೆ ಬಗೆದು ನೋಡಿ 
ಅಲ್ಲಿ 
ಬರಿಯ ಬರಿಯ ಬರಿಯ 
ನಿನ್ನೆಗಳೇ !!!!

ನೆನವು ನಿನ್ನೆ,,,,
ಕಲ್ಪನೆ ನಾಳೆ,,,,
ಕರ್ಮ ಇಂದು,,,,,
ಅಬ್ಬಾ,,,, ಯಾವ ಜನ್ಮದ ಕರ್ಮ,,,
ಎಲ್ಲವು ದೇವನೆನೆಸಿಕೊಳ್ಳುವವನ 
ಮರ್ಮ,,,,

ನಾನಾದರೋ,,,,,
ಕಳೆದ ನಿನ್ನೆಯ ನೆನಪಿನ ಸಾಗರ ಈಜಲಾರೆ,
ಇಂದು ಚಿಕ್ಕ ಹೊಟ್ಟೆಗೆ ಬಡಿದಾಡಲಾರೆ,,,
ನಾಳೆಯ ನೆನೆಯುತ್ತ ಕೂರಲಾರೆ,,

ಇನ್ನೆಲ್ಲಿ ನನಗೆ ಮುಕ್ತಿ,??????

ತಿಳಿದಿದ್ದರೆ ಹೇಳಿ ಬಿಡಿ 
ನಿನ್ನೆ-ಇಂದು-ನಾಳೆಗಳಿಂದ !!!!!!!!

--ನವೀನ್ ಜೀ ಕೇ 
 

Comments

Submitted by kavinagaraj Sat, 04/19/2014 - 08:36

ನಾಳೆ ಸರಿಯಾಗಿರಬೇಕೆಂದರೆ ಇಂದು ಸರಿಯಾಗಿರಬೇಕು! ಅಲ್ಲವೇ, ನವೀನರೇ. ನಿನ್ನೆಯ ನೆನಪುಗಳು ಇಂದಿಗೆ ಪಾಠವಾಗಬೇಕು! ಧನ್ಯವಾದ, ಕಾಲ ಎಲ್ಲಕ್ಕೂ ಮದ್ದು!!

Submitted by nageshamysore Sun, 04/20/2014 - 20:47

ನವೀನರೆ, ನಿನ್ನೆ, ಇಂದು, ನಾಳೆಗಳ ದ್ವಂದ್ವ ಸತತವಾಗಿ ಕಾಡುವ ಭೂತಗಳು. ಸಂತುಲಿತ ಸಮಷ್ಟಿಯಾಗದೆ ಧನಾತ್ಮಕ ಮುನ್ನಡೆ ಅಸಾಧ್ಯ. ಅದನ್ನರಿವಾಗಿಸಬಿಡದ ಕಾಲ ಮಹಿಮೆಯನ್ನು ಮಾಯೆಯೆನ್ನಬೇಕೊ, ವಿಧಿಯೆನ್ನಬೇಕೊ ಅನ್ನುವುದು ಮತ್ತೊಂದು ಜಿಜ್ಞಾಸೆ...

Submitted by naveengkn Mon, 05/05/2014 - 14:58

In reply to by nageshamysore

ಸಂತುಲಿತ ಸಮಷ್ಟಿಯು ಕಾಲದ‌ ಗರ್ಭದೊಳಗೆ ಅದಗಿದೆ ಎಂದರಿತರೂ, ಕ್ಷಣಕ್ಕೆ ಬೇಕೆನ್ನುವುದೇ ಆಸೆ ಎನಿಸುತ್ತಿದೆ, ಬಾಳು ಪ್ರಶ್ನೆಯಲ್ಲಿದೆ, ಪ್ರತಿಕ್ರಿಯೆಗೆ ಧನ್ಯವಾದಗಳು ನಾಗೇಶರೇ,,,
ನ‌ ಜೀ ಕೇ