ಕಥೆ: ಪರಿಭ್ರಮಣ..(17)

ಕಥೆ: ಪರಿಭ್ರಮಣ..(17)

( ಪರಿಭ್ರಮಣ..(16)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ಆದರೂ ಅವನ ನೋಟದರಿವಿನಿಂದಲೆ ಕೆಂಪಾಗಿ ಹೋಗಿದ್ದ ಅವಳ ಮುಖ ಅವಳನ್ನು ಇನ್ನಷ್ಟು ಸೌಂದರ್ಯವತಿಯಾಗಿ ಕಾಣುವಂತೆ ಮಾಡಿತ್ತು; ಸಾಲದ್ದಕ್ಕೆ ಹಾಕಿದ್ದ ದಿರುಸಿನಿಂದ ಇನ್ನಷ್ಟು ಚಿಕ್ಕ ವಯಸ್ಸಿನವಳ ಹಾಗೆ ಕಾಣಿಸುತ್ತಿದ್ದಳು ಬೇರೆ. ಇನ್ನು ಹಾಗೆ ಕೂತಿದ್ದರೆ ಚಂಚಲವಾಗಿ ಹರಿದ ಮನದ ಓಘಕ್ಕೆ ಅಣೆಕಟ್ಟು ಹಾಕಲು ಸಾಧ್ಯವಾಗದೆಂಬ ಸಂಯಮದ ಅರಿವು ಎಚ್ಚರಿಸಿ ಸಿದ್ದತೆಯ ಅಗತ್ಯವಿದ್ದ ರೂಮಿನತ್ತ ಹೊರಡಲು ಎದ್ದು ನಿಂತ. ನಾಳಿನ ಹೊತ್ತಿಗೆ ಸಿದ್ದ ಸ್ಥಿತಿಯಲ್ಲಿರಬೇಕಾದ ಆ ಜಾಗದ ನೆನಪಾಗುತ್ತಿದ್ದಂತೆ ಸದ್ಯಕ್ಕೆ ಎಲ್ಲಕ್ಕು ಮೀರಿದ ಮೊದಲ ಆದ್ಯತೆ ಆ ಸಿದ್ದತೆಗೆಂಬ ನೆನಪು ಬೇರೆಲ್ಲ ಗಮನದ ಆಳವನ್ನು ತುಂಡಿರಿಸಿತ್ತು. ಇವನ ಜತೆಗೆ ಹೊರಡಲು ಎದ್ದು ನಿಂತವಳ ಜತೆ ಸರಸರ ರೂಮಿನತ್ತ ನಡೆದವನೆ ಒಂದು ಕಡೆಯಿಂದ ಬೇಕಾದ ರೀತಿಯಲ್ಲಿ ಜೋಡಿಸಲು ನಿರ್ದೇಶನ ಕೊಡತೊಡಗಿದ. ಹೆಂಗಸೊಬ್ಬಳೆ ಹೇಗೆ ಈ ಭಾರದ ಟೇಬಲ್ಗಳನ್ನೆಲ್ಲ ಸಂಭಾಳಿಸಿ ಜರುಗಿಸಬಲ್ಲಳು ಎಂದುಕೊಂಡವನಿಗೆ ಶೀಘ್ರದಲ್ಲೆ ಒಬ್ಬಳಿಗೆ ಯಾಕೆ ಆ ಕೆಲಸ ವಹಿಸಿದ್ದಾರೆಂದು ಅರಿವಿಗೆ ಬಂತು... ಅದೆಲ್ಲ ಚಕ್ರಗಳನ್ನು ಜೋಡಿಸಿದ್ದ ಫರ್ನೀಚರುಗಳು. ಹೀಗಾಗಿ ಯಾವುದೆ ತ್ರಾಸವಿಲ್ಲದೆ ಯಾರು ಬೇಕಾದರೂ ಎಲ್ಲೆಂದರಲ್ಲಿಗೆ ಸುಲಭವಾಗಿ ಜರುಗಿಸಬಹುದಿತ್ತು. ಅದು ಅರಿವಾದ ಮೇಲೆ ಅರ್ಧಕರ್ಧ ಕೆಲಸ ಸುಲಭವಾದಂತಾಯ್ತು.  ಅವಳಿಗೆ ಆದೇಶ ಕೊಡುತ್ತಲೆ, ಜತೆಗೆ ಕೈಗೂಡಿಸಿ ತಾನೂ ಕೆಲವನ್ನು ಜರುಗಿಸತೊಡಗಿದ. ಎಲ್ಲಾ ಬೇಕಾದ ಸ್ಥಿತಿಗೆ ಬರಲು ಬರಿ ಅರ್ಧ ಗಂಟೆಯೆ ಸಾಕಾಗಿ ಇನ್ನು ಬರಿ ಕಸ ಗುಡಿಸಿ ಒಂದಷ್ಟು ಧೂಳು ಬಡಿದು ಶುದ್ದಿ ಮಾಡಿಟ್ಟರೆ ಎಲ್ಲವೂ ಸಿದ್ದವಾದ ಹಾಗೆ ಅನಿಸಿತು. ಗುಡಿಸಿ ಧೂಳು ಬಡಿಯುವ ಕೆಲಸವನ್ನು ಅವಳಿಗೆ ಬಿಟ್ಟು ಬೇಕಾದ ಕಡೆಯೆಲ್ಲ ನೆಟ್ವರ್ಕ್ ಸಂಪರ್ಕಗಳು, ವಿದ್ಯುತ್ ಸಂಪರ್ಕಗಳು ಸರಿಯಾಗಿವೆಯೆ ಎಂದು ಪ್ರತಿ ಟೇಬಲ್ಲಿನ ಅಡಿಯೂ ಪರೀಕ್ಷಿಸಿ ನೋಡತೊಡಗಿದ. ಅವೆರಡರಲ್ಲಿ ಯಾವುದು ಕೈ ಕೊಟ್ಟರೂ ಆ ಆಸನದ ಜಾಗ ಇದ್ದೂ ಇಲ್ಲದಂತೆ ನಿಷ್ಪ್ರಯೋಜಕ...ಹೀಗಾಗಿ, ಬೇರೇನೆ ನ್ಯೂನ್ಯತೆಗಳಿದ್ದರೂ ಹೇಗೊ ನಿಭಾಯಿಸಿಕೊಂಡು ಹೋಗಬಹುದಾದರೂ ಇವೆರಡು ಸರಿಯಾಗಿ ಕೆಲಸ ಮಾಡುತ್ತಿರುವುದೆಂದು ಖಾತ್ರಿ ಮಾಡಿಕೊಂಡುಬಿಡಬೇಕು... ಎಲ್ಲಾ ಸರಿಯಿದೆಯೆಂದುಕೊಂಡು ಉಢಾಫೆಯಿಂದಿದ್ದು, ಟೆಸ್ಟಿಂಗ್/ ಟ್ರೈನಿಂಗ್ ಆರಂಭಿಸುವ ಹೊತ್ತಿಗೆ ಸರಿಯಾಗಿ ಕೈಕೊಟ್ಟು, ಏಟು ತಿನ್ನುವುದೆಂದರೆ ಇಡೀ ವೇಳಾಪಟ್ಟಿಯೆ ಗಬ್ಬೆದ್ದು ಹೋಗುವುದು ಮಾತ್ರವಲ್ಲದೆ ವೃತ್ತಿಪರತೆಯ ಪ್ರದರ್ಶನದ ಬದಲು ಪರದಾಟದ ಅವತರಣಿಕೆಯಾಗಿಬಿಡುತ್ತದೆಂದು ಶ್ರೀನಾಥನಿಗೆ ಅನುಭವದಿಂದ ಚೆನ್ನಾಗಿ ಗೊತ್ತು... ಅವನು ಪರೀಕ್ಷಿಸುತ್ತಿದ್ದ ಅದೇ ಹೊತ್ತಿನಲ್ಲಿ ಎದುರು ತುದಿಯಿಂದ ಕುನ್. ಸು ಗುಡಿಸಿಕೊಂಡು ಬರಲು ಶುರು ಹಚ್ಚಿಕೊಂಡಿದ್ದಳು . ಕೇಬಲ್ ಚೆಕ್ ಮಾಡುವುದು ಕೂಡಾ ಸರಸರ ಬೇಗನೆ ಮುಗಿದಾಗ, ಅಲ್ಲೆ ಹತ್ತಿರದಲಿದ್ದ ವ್ಹೀಲ್ ಚೇರೋಂದನ್ನೆಳೆದುಕೊಂಡು ಕುಳಿತು ಅವಳ ಕೆಲಸ ಮುಗಿಯುವುದನ್ನೆ ಕಾಯತೊಡಗಿದ. ಅವಳು ಸರಸರನೆ ಗುಡಿಸುವ ಕೆಲಸ ಮುಗಿಸಿ ಜರುಗಿಸಿದ್ದ ಜಾಗದ ಛಾವಣಿಯ ಮೂಲೆಯಲ್ಲಿ ಗೂಡುಗಟ್ಟಿದ್ದ ಜೇಡರ ಬಲೆಗಳನ್ನು ಬಳಿದು ಸಾವರಿಸತೊಡಗಿದಳು...

ಅವಳದು ಸಾಧಾರಣ ಎತ್ತರದ ನಿಲುವು. ಅವಳು ಪೂರ್ತಿ ಕೈ ಚಾಚಿದರೂ ಒಂದೆರಡು ಕಡೆ ಸುಲಭವಾಗಿ ನಿಟುಕದ ಎತ್ತರದಿಂದಾಗಿ, ನಡುನಡುವೆ ಕಾಲ್ಬೆರಳುಗಳ ಮೇಲೆ ಭಾರವೂರಿ ಎತ್ತರ ತಲುಪುವುದಕ್ಕೆ ಹೆಣಗಾಡಬೇಕಿತ್ತು, ಛಾವಣಿಗೂ ಗೋಡೆಗೂ ಕೋನದಂತೆ ಅಂಟಿಕೊಂಡಿದ್ದ ಜೇಡರ ಬಲೆಗಳನ್ನು ಚದುರಿಸಿ ತೆಗೆದು ಹಾಕುವ ಸಲುವಾಗಿ. ಹಾಗೆ ತುದಿಗಾಲಲ್ಲಿ ನಿಂತು ಏರಿಳಿದು ಬಳುಕುವ ದೇಹಸಿರಿಯ ಮೈಮಾಟ ನೃತ್ಯದ ನಾನಾ ಭಂಗಿಯ ತುಣುಕು ಪಲುಕುಗಳನ್ನು ನೆನಪಿಸುತ್ತಲೆ ಮತ್ತೊಂದೆಡೆ ಆಕರ್ಷಣೆಯ ರಾಗ ರಸದ ವಿವಿಧ ಮಜಲುಗಳನ್ನು ಉದ್ದೇಪಿಸಿದಂತೆ, ಅವಳ ಕೆಲಸವನ್ನೆ ಗಮನಿಸುತ್ತಿದ್ದ ಶ್ರೀನಾಥನ ಮೈ ಇದ್ದಕ್ಕಿದ್ದಂತೆ ಬಿಸಿಯೇರಿದಂತಾಗಿ ಒಳಗೆಲ್ಲಾ ಬೆವರುತ್ತಿರುವುದು ಅನುಭವಕ್ಕೆ ಬಂತು. ಬೇರಾರೂ ಇಲ್ಲದ ಏಕಾಂತ, ಬೇಡವೆಂದರೂ ಮನದಲ್ಲೇನೇನೊ ಕಾಮನೆಗಳನ್ನು ಹುಟ್ಟು ಹಾಕಿ ಅವಳನ್ನೆ ತದೇಕಚಿತ್ತನಾಗಿ ದಿಟ್ಟಿಸಿ ನೋಡತೊಡಗಿದ. ಇದಾವುದರ ಪರಿವೆಯೆ ಇಲ್ಲದಂತೆ ಅವಳ ಪಾಡಿಗವಳು ಇವನಿಗೆ ಬೆನ್ನು ಹಾಕಿ ತನ್ನ ಕಾಯಕದಲಿ ನಿರತಳಾಗಿದ್ದಳು, ಮತ್ತೆ ಮತ್ತೆ ಅದೇ ನಿಟುಕದೆತ್ತರಕ್ಕೆ ತುದಿಗಾಲಿನಲಿ ತಲುಪಲು ಹವಣಿಸುತ್ತಾ.....

ಯಾರೂ ಇಲ್ಲದ ಆಫೀಸಿನಲ್ಲಿ, ಮೂಲೆಯಲಿ ಅವಿತು ಕೂತಂತಿದ್ದ ಈ ರೂಮಿನಲ್ಲಿ ಅಷ್ಟು ದಿನದ ಒಡನಾಟ, ಸಖ್ಯ ಬೆಳೆಸಿದ ಸಲಿಗೆ ಆ ರೀತಿಯ ಸ್ವೇಚ್ಚೆಗೆ ತಾವಿತ್ತಿತೊ?.. ಆ ದಿನದ ಎದ್ದು ಕಾಣುತ್ತಿದ್ದ ಸೌಂದರ್ಯಲಹರಿಯ ಲಾವಣ್ಯೋಲ್ಲಾಸದ ಮನ್ಮಥ ಪ್ರೇರಣೆಯೊ - ಅಥವ ಅವೆರಡು ಕಲೆತ ಭಾವ ಸಂಕರವೊ..? ಇವಾವುದೂ ಅಲ್ಲದ, ಕೈಲಾಗದವನೆಂಬ ಹಣೆಪಟ್ಟಿ ಹೊತ್ತ ಕೀಳರಿಮೆಯನ್ನು ಜಯಿಸುವ ಅವಕಾಶಕ್ಕಾಗಿ ಅರಸುತ್ತಿದ್ದ ದುರ್ಬಲ ಮನದ ಭಾವೋಗ್ವೇದದ ಚಂಚಲ ಕ್ಷಣವೊ..? ಅಲ್ಲಿಯತನಕದ ಒಡನಾಟದಿಂದ ಮೂಡಿದ್ದ ಸಲಿಗೆಯಿಂದ, ಪ್ರಾಯಶಃ ಅವಳು ತಡೆಯಲಾರಳೆಂಬ ಹುಂಬ ಆತ್ಮವಿಶ್ವಾಸವೊ..? ಆ ತುದಿಗಣ್ಣಿನ ಕೊಂಕು ನೋಟ, ಆಗಾಗ ಸ್ಪರ್ಷ ಸುಖದಲಿ ಬೇಕೂ ಬೇಡದವಳಂತೆ ನಟಿಸಿ ಜಾರಿ ಹೋಗುತ್ತಿದ್ದ ರೀತಿ, ಅವಳೂ ಅವಳಿಗರಿವಿಲ್ಲದೆಯೆ ತನ್ನತ್ತ ಒಲಿಯುತ್ತಿರಬೇಕೆಂಬ ಕಲ್ಪನೆ.... ಹೀಗೆ ಯಾವುದಾವುದೊ ವಿಲಕ್ಷಣ ಆಲೋಚನೆ, ಪ್ರೇರಣೆಗಳೆಲ್ಲ ಸೇರಿದ ಸಂಕಲನದ ಮೊತ್ತವೊ..? ಅಲ್ಲಿಯವರೆಗೂ ಆ ರೀತಿಯ ತೀವ್ರ ಭಾವ ವಿಕಾರಗಳ ವಾಸನೆಯೂ ಇಲ್ಲದೆ ಕುಳಿತಿದ್ದವನ ಮನದಲ್ಲಿ, ಕೇವಲ ಒಂದರೆಗಳಿಗೆಯ ಅಂತರದಲ್ಲಿ ಏನೇನೊ ಆಲೋಚನೆ, ಚಿಂತನೆಗಳೊಡಮೂಡಿ ಯಾವುದಾವುದೊ ತರದ ಭಾವೋನ್ಮಾದದ ತೆವಲಿಗೆ ದಾರಿ ಮಾಡಿಕೊಟ್ಟುಬಿಟ್ಟಿತು. ಅದೇ ಹೊತ್ತಿನಲ್ಲಿ ಮನದ ಮತ್ತೊಂದು ಮೂಲೆಯಿಂದ, ಈ ಅವಕಾಶ ಕೈ ಜಾರಿದರೆ ಮತ್ತೆ ತಾವಿಬ್ಬರೆ ಇರಬಹುದಾದ ಸಮಯ ಮತ್ತೆ ಸಿಗದೆಂಬ ಒಂದು ರೀತಿಯ ಉದ್ವೇಗಾತಂಕವೂ ಜತೆಗೂಡಿ ಮನದಾವುದೊ ಒಳಮೂಲೆಯಿಂದ 'ನುಗ್ಗು..ಮುನ್ನುಗ್ಗು..ಇದೆ ಸುವರ್ಣಾವಕಾಶ..ಇಂತಹ ಸದಾವಕಾಶ ಕೈ ಬಿಡಬೇಡ..' ಎಂದು ಪ್ರೇರೇಪಿಸತೊಡಗಿದಾಗ ತಟ್ಟನೆ ಯಾವುದೊ ಸಾಹಸದ ಆಶಾಪೂರ್ಣಸಹಭಾವವೊಂದು ಉಗಮಿಸಿದಂತಾಗಿತ್ತು. ಇಷ್ಟೆಲ್ಲಾ ಸಲಿಗೆ, ಹತ್ತಿರದ ಸಾಂಗತ್ಯ, ಸಾಮೀಪ್ಯದಲ್ಲಿ ಒಡನಾಡಿದ್ದಾಳೆ ; ಹೀಗಾಗಿ ಅವಳು ಪ್ರತಿರೋಧಿಸದೆ ಸಹಕರಿಸುವಳೆಂಬ ಕುಮ್ಮುಕ್ಕು ನೀಡುತ್ತಿರುವ ಯಾವುದೋ ಭಂಢ ಆತ್ಮವಿಶ್ವಾಸ ಬೇರೆ..  ಆ ಹೊತ್ತಿನಲ್ಲಿ ಮನೋಪಟಲದಲ್ಲಿ ಆವಿರ್ಭವಿಸುತ್ತಿದ್ದ ಆಶಯಗಳಿಗೆ ರೂಪು ರೇಷೆ ನೀಡುತ್ತಿದ್ದ ಕಲ್ಪನಾ ವಿಲಾಸಿ ಚಿತ್ತ, ಆ ಮನಸಿನ ಅನಿಸಿಕೆಗೊಂದು ಭೌತಿಕ ರೂಪು ಕೊಟ್ಟು, ಅದನ್ನು ಅನಾವರಣಗೊಳಿಸಿ ಕಾರ್ಯರೂಪಕ್ಕೆ ತರಲ್ಹೇಗೆ ಎಂದು ಹೆಣಗಾಡುತ್ತ ಹಿಂದೆ ಮುಂದೆ ನೋಡುತ್ತಾ ಇದ್ದಾಗ, ಅವಳು ನಿಲುಕದ ಎತ್ತರಕ್ಕೆ ಪಾಡು ಪಡುತ್ತಿದ್ದ ರೀತಿ ಕಣ್ಣಿಗೆ ಬಿದ್ದಿತ್ತು.. ಅಷ್ಟು ಹೊತ್ತು ಹಾಗೆ ನೋಡುತ್ತಾ ಕುಳಿತಿದ್ದವನಿಗೆ ಅದ್ಯಾವ ಭಾವೋತ್ಕರ್ಷ ಉಕ್ಕೇರಿ ಬಂತೊ, ಯಾವ ರಾಗ ಪ್ರೇರಣೆ ಹುಚ್ಚು ಧೈರ್ಯವಿತ್ತಿತೊ - ಇದ್ದಕ್ಕಿದ್ದಂತೆ ತಟ್ಟನೆದ್ದು ಬಂದವನೆ, ಅವಳಿಗೇನಾಯ್ತೆಂದು ಅರಿವಾಗುವ ಮೊದಲೆ, ಹಿಂದಿನಿಂದ ಅಪ್ಪಿ ಗಟ್ಟಿಯಾಗಿ ಹಿಡಿದುಕೊಂಡುಬಿಟ್ಟ...!

ಇದ್ದಕ್ಕಿದ್ದಂತೆ ಘಟಿಸಿದ ಅನಿರೀಕ್ಷಿತ ಆಘಾತ ಗಾಬರಿ ಹುಟ್ಟಿಸಿ, ಏನಾಯಿತೆಂದು ಅರಿವಿಗೆ ನಿಲುಕುವ ಮೊದಲೆ ಹಿಂದಿನಿಂದ ಬಳಸಿದ್ದ ಕೈಗಳ ಬಲವಾದ ಬಂಧ ಅರಿವಿಗೆ ಬಂದು ಏನಾಗಿರಬೇಕೆಂದು ಅವಳ ಸೂಕ್ಷ್ಮಪ್ರಜ್ಞೆಗೆ ಹೊಳೆಯುವಂತೆ ಮಾಡಿತ್ತು... ಆ ಗಾಬರಿಯ ಆಯಾಚಿತ ಪ್ರತಿಕ್ರಿಯಾ ಪ್ರಜ್ಞೆಯಿಂದ ಪ್ರೇರಿತವಾಗಿ 'ಮಾಯ್..ಮಾಯ್..' ಎನ್ನುತ್ತಾ ಅವನ ಹಿಡಿತದಿಂದ ವಿಮುಕ್ತಳಾಗಲೆತ್ನಿಸಿದರೂ, ಆ ಯತ್ನದಲಂತರ್ಗತವಾಗಿದ್ದ ಅರೆಮನಸಿನ, ಅರೆಬರೆ ತಡೆಯುವಿಕೆ ಅನುರೋಧವೊ, ಪ್ರತಿರೋಧವೊ ಎಂದು ಅವಳಿಗೆ ಅನುಮಾನ ಹುಟ್ಟಿಸಿದಂತಾಗಿತ್ತು. ಜತೆಗೆ ಅಷ್ಟು ದಿನಗಳ ಸಲಿಗೆಯ ಒಡನಾಟದಲ್ಲಿ ಅವಳಲ್ಲೂ ಸುಪ್ತವಾಗಿದ್ದೊಂದು ಬಯಕೆಯ ಕಿಡಿ ಭುಗಿಲೆದ್ದಂತಾಗಿ ಪುರುಷನ ಸ್ಪರ್ಷವುಂಟು ಮಾಡಿದ ಮೈ ಬಿಸಿಗೊ, ತನ್ನರಿವಿದ್ದೂ ಇಲ್ಲದಂತೆ ಅವನೆಡೆಗಿದ್ದ ಸುಪ್ತ ಆರಾಧನಾ ಭಾವನೆಗೊ ಸೋತು ಶರಣಾದಂತೆ, ಅಲ್ಲಿನವರೆಗೂ ಬಿಡಿಸಿಕೊಳ್ಳಲೆಂಬಂತೆ ಕೊಸರಾಡುತ್ತಿದ್ದ ಕೈಗಳು ನಿಧಾನವಾಗಿ ಸ್ಥಬ್ದವಾಗುತ್ತ ಹೋಗಿ ತಟಸ್ಥವಾದಾಗ ಅವಳ ಆರಂಭಿಕ ನಿರಾಕರಣೆಯೆಲ್ಲ ಈಗ ಸಮ್ಮತಿಯ ರೂಪ ಪಡೆದಿದೆಯೆಂದರಿತ ಶ್ರೀನಾಥನಿಗೆ ಕಡೆಗೂ ಗೆದ್ದ ಹಮ್ಮಿನ ಭಾವ...ಕೊನೆಗೂ ತಾನು ಹೇಡಿಯಲ್ಲ, ಅಸಹಾಯಕನಲ್ಲವೆಂದು ನಿರೂಪಿಸುವ ಅವಕಾಶ ದೊರೆತ ರಾಕ್ಷಸೀ ಹರ್ಷ...

...ಆ ರಾಕ್ಷಸೀ ಆವೇಶದಲ್ಲಿಯೆ ಇಡಿ ಜನ್ಮಾಂತರದ ಸೋಲನ್ನೆಲ್ಲ ಒಂದೆ ಆಕ್ರಮಣದಲ್ಲಿ ಗೆದ್ದು ಸಾರಸಗಟು ಸೇಡು ತೀರಿಸಿಕೊಳ್ಳುವ ಹಾಗೆ ವಿಜೃಂಭಿಸಿತು ಪುರುಷ ಪೌರುಷ. ಧೀರ್ಘ ಕಾಲಾಂತರದಿಂದ ಹೆಪ್ಪುಗಟ್ಟಿದ್ದ ಕೋಡಿಯೆಲ್ಲ ಒಂದೆ ಏಟಿಗೆ ಒಡ್ಡೊಡೆದ ರಭಸದ ಪ್ರವಾಹದಂತೆ ಕಿತ್ತು ಹರಿದಾಗ, ಪುರುಷತ್ವದ ಶಕ್ತಿಪಾತದ ಭಾವಾವೇಶವನ್ನು ಅನುಭಾವಿಸಿದ ಪ್ರಕೃತಿಯ ಅಳಿದುಳಿದ ಸಂಯಮ, ನಿಯಂತ್ರಣ, ನಿರಾಸಕ್ತತೆಯ ಪೂರ್ಣ ಕವಚಗಳೆಲ್ಲ ಕಿತ್ತು ಹರಿದು ಹೋಗಿ ತನು ಮನ ನಿರಾಳ ಹಾರಿದ ಹಕ್ಕಿಯಂತೆ ಗರಿ ಬಿಚ್ಚಿ ತದೇಕತೆಯಿಂದ, ತಾದಾತ್ಮ್ಯಕತೆಯಿಂದ ಆ ಪರ್ವೋಲ್ಲಾಸ ವಿಶೇಷವನ್ನು ಅನುಭವಿಸತೊಡಗಿತು. ಆ ಮಿಲನ ವೈಭವದಲ್ಲಿ ಸುತ್ತಲಿನ ಪರಿಸರ, ಸಂಧರ್ಭ, ಔಚಿತ್ಯದ ಬೇಲಿಯ ನಿರ್ಬಂಧ, ಪೂರ್ವೋತ್ತರ ಪರಿಣಾಮದ ಗಹನತೆಯೂ ಸೇರಿದಂತೆ ಸುತ್ತಲಿನ ಮಿಕ್ಕೆಲ್ಲವೂ ಮೈಮನದಿಂದ ಮರೆಯಾಗಿ ಹೋಗಿತ್ತು. ಬರಿಯ ಪ್ರೇಮೋನ್ಮಾದದ ಉತ್ಪ್ರೇಕ್ಷೆಯ ಪ್ರಚಂಡ ಬಸಿರು ರಾಜ್ಯವಾಳತೊಡಗಿದಂತೆ, ಕಾಮೋನ್ಮತ್ತ ಚಿತ್ತಸಮಷ್ಟಿಯ ಏಕತ್ವದಲ್ಲಿ ಬೆಸೆದು ಲೀನವಾದ ಎರಡು ತನುಮನಗಳಲ್ಲಿ ಸುತ್ತ ಮುತ್ತಲಿದ್ದ ಭೌತಿಕವೆಲ್ಲವೂ ಮಾಯವಾದಂತ ಪರಿವೇಷ ಉದ್ಭವಿಸಿಬಿಟ್ಟಿತು.  ಆ ಮಿಲನ ಬ್ರಹ್ಮಾನಂದದಲ್ಲಿ ಗಳಿಸಿದವರಾರೊ-ಕಳೆದುಕೊಂಡವರಾರೊ ಎನ್ನುವ  ಲೌಕಿಕ ಕ್ಲೀಷೆಯ ತುಣುಕೂ ಕಾಡದೆ, ಬರಿ ಪ್ರಕೃತಿ, ಪುರುಷಗಳ ಸಮ್ಮಿಲನದ ಸಂತೃಪ್ತಿಯ ಪ್ರಚಂಡ ಜಲಪಾತ ಮಾತ್ರ ಮಿಕ್ಕುಳಿದುಬಿಟ್ಟಿತ್ತು. 

ಅಂದು ಮೊಟ್ಟ ಮೊದಲ ಬಾರಿಗೆ ತಾನೇನೊ ಅದ್ವಿತೀಯವಾದದ್ದನ್ನು ಸಾಧಿಸಿಬಿಟ್ಟೆನೆಂಬ ಹಮ್ಮಿನ ಭಾವದಲ್ಲಿ ಮೇಲೆದ್ದ ಶ್ರೀನಾಥ..!

ಆದರೆ ಆ ಗೆಲುವಿನ ಭಾವದಂತಿದ್ದ ಅನಿಸಿಕೆಯ ಹಿಂದೆಯೆ ಕಾಡತೊಡಗಿದ್ದ ತಾಕಲಾಟಗಳೇನು ಕಡಿಮೆಯದಾಗಿರದೆ ನೂರೆಂಟು ತರದ ವಿಲಕ್ಷಣ ಚಿಂತನೆ, ಆಲೋಚನೆಗಳಿಗೆ ಏಕಕಾಲದಲ್ಲಿ ಎಡೆಮಾಡಿಕೊಟ್ಟುಬಿಟ್ಟಿದ್ದವು. ಆ ಗಳಿಗೆಯಲ್ಲಿ ಮೂಡಿಬಂದ ಭಾವ ಸಂಚಯಕೆ ಅಂತರ್ಗತವಾಗಿ ಬೆಸೆದುಕೊಂಡಂತಿದ್ದ ಕೀಳರಿಮೆಯ ಮೇಲಿನ ಗೆಲುವು ಒಂದು ಬಗೆಯ ವರ್ಣನಾತೀತ ಮನಸ್ಥಿತಿಗೆ ಹುಚ್ಚು ಕುದುರೆಯ ಗೊತ್ತು ಗುರಿಯಿಲ್ಲದ ಕೆನೆದಾಟದ ತೀವ್ರತೆಯನ್ನು ಆರೋಪಿಸಿದರೆ, ಅದೆ ಹೊತ್ತಿನಲ್ಲಿ ಇನ್ಯಾವುದೊ ಮೂಲೆಯಿಂದ ಆಳದಿಂದೆಲ್ಲೊ ಬಂದಂತೆ ಕ್ಷೀಣವಾದ ದನಿಯೊಂದು ಅಚ್ಚರಿಯ ಬಿರುಗಣ್ಣಿನಿಂದ ಆಳವಾಗಿ ದಿಟ್ಟಿಸುತ್ತ, 'ಇದೇನು ಮಾಡಿದೆ ನೀನು?' ಎಂದು ಕೆಣಕಿದಂತೆ ಭಾಸವಾಗುತ್ತಿತ್ತು... ಆ ಗೊಂದಲ, ಕನಲಿಕೆಯ ನಡುವೆ ಯಾಕೊ ತಲೆಯೆತ್ತಿ ಮತ್ತವಳ ಮುಖ ನೋಡಲು ಹಿಂಜರಿಕೆಯಾದಂತಾಗಿ ಅಲ್ಲಿಂದ ನೇರ ತನ್ನ ಟೇಬಲ್ಲಿನತ್ತ ಸರಸರ ನಡೆದವನೆ ಸೀಟಿಗೊರಗಿ ಕೂತು ಚಡಪಡಿಸತೊಡಗಿದ... ಯಾವುದೊ ವಿಚಿತ್ರ ಸಂಘಟನೆಯ ಸಂಕಲನದಲ್ಲಿ, ಏನೊ ಕನಸಿನಲ್ಲಿ ನಡೆದಂತೆ ಊಹಿಸಲಾಗದ ಎಲ್ಲವೂ ನಡೆದು ಹೋಗಿತ್ತು...ಆ ಹೊಯ್ದಾಟದಲ್ಲಿ ಸೀಟಿನಲ್ಲೂ ಕೂತಿರಲಾಗದೆ ಚಡಪಡಿಕೆಯಲಿ ಅತ್ತಿತ್ತ ಹೊರಳಾಡತೊಡಗಿದ.. ಸಾಲದೆಂಬಂತೆ ಆ ಕನಲಿಕೆ ಅಷ್ಟಕ್ಕೆ ನಿಲ್ಲದೆ, ಎಲ್ಲಾ ಮುಗಿದು ಇಲ್ಲಿ ಓಡಿ ಬಂದು ಕೂತ ಮೇಲೆ ಅವಳಿನ್ನು ಅಲ್ಲೆ ಏನು ಮಾಡುತ್ತಿರುವಳೊ? ಎಂಬ ದಿಗಿಲು ಬೇರೆ ಜತೆಗೆ ಸೇರಿಕೊಂಡಿತು. ಆ ಹೊತ್ತಿನ ಉನ್ಮೇಷದಲ್ಲಿ ಅವಳೇನೋ ಸಹಕರಿಸಿದಂತೆ ಕಂಡರೂ ತದನಂತರದ ಚಿಂತನೆಯಲ್ಲಿ ಗಾಬರಿ, ದಿಗಿಲುಗಳೆಲ್ಲ ಕಾಡಿ ಅವಳೇನಾದರೂ ತದನಂತರ  ಗದ್ದಲವೆಬ್ಬಿಸಿಬಿಟ್ಟರೆ? ಎಂಬ ಭೀತಿಯೂ ಸೇರಿಕೊಂಡಿತು. ಅಷ್ಟರವರೆಗೆ ಅತ್ಯಂತ ಸುಪರಿಚಿತಳಾಗಿದ್ದವಳಂತೆ ಕಂಡವಳು ಈಗ ಇದ್ದಕ್ಕಿದ್ದಂತೆ ಯಾರೊ ಅಪರಿಚಿತಳ ಹಾಗೆ ಕಾಣತೊಡಗಿದಳು... ಆ ಅಪರಿಚಿತತೆಯ ಭಾವನೆ ಬಲವಾಗುತ್ತಿದ್ದಂತೆ ಯಾಕೊ - ಈಗ ನಡೆದುದರ ಫಲಿತವೇನಾದೀತೊ ಅನ್ನುವ ವಿಚಿತ್ರ ಭಯ ಮತ್ತೆ ಮೈ,ಮನಸನ್ನೆಲ್ಲ ಪೂರ್ಣವಾಗಿ ಆವರಿಸಿಕೊಂಡುಬಿಟ್ಟಿತು...ಸಾಲದ್ದಕ್ಕೆ ತಾನು ಹಾಗೆ ತಕ್ಷಣ ಓಡಿ ಬರಬಾರದಾಗಿತ್ತು... ಆ ಗಳಿಗೆಯಲ್ಲವಳ ಮನೋಭಾವ ಹೇಗಿತ್ತೊ ಏನೊ? ಖಂಡಿತ ತನ್ನಷ್ಟೆ ವಿಲಕ್ಷಣ ಮನಸ್ಥಿತಿಯೆ ಇದ್ದಿರಬೇಕು... ಆ ಹೊತ್ತಿನಲ್ಲಿ ಜತೆಗಿರದೆ ಹೊರಟು ಬಂದುದು ಇನ್ನಾವ ಭಾವನೆ, ತೀರ್ಮಾನ, ಭಾವ ವಿಚಲತೆಗೆ ಕಾರಣವಾದೀತೊ ಅನಿಸಿ ಮತ್ತೆ ಅಲ್ಲಿಗೆ ಹೋಗಲೆಂದು ನಿರ್ಧರಿಸಿ ಸೀಟಿನಿಂದ ಮೇಲೆದ್ದು ನಿಂತ. ಹಾಗೆ ಏಳುವ ಹೊತ್ತಿಗೆ ಸರಿಯಾಗಿ ತಟ್ಟನೆ ಮನದಲ್ಲಿ ಮೂಡಿದ ಆಲೋಚನೆಯೊಂದು ಕ್ಷಿಪ್ರ ಗತಿಯಲ್ಲಿ ಏನೇನೋ ಸಂಕೀರ್ಣ ಲೆಕ್ಕಾಚಾರ ಹಾಕಿ, ಅದು ಸರಿಯೊ ತಪ್ಪೊ ಎನ್ನುವ ಅನಿಸಿಕೆ ವಿವೇಚನೆಯ ಕೋಶ ಮಥನದಲಿ ಮಥಿಸಿ ಹೊರಬೀಳುವ ಮೊದಲೆ ತನ್ನ ಬ್ಯಾಗಿನಿಂದ ಸಾವಿರದ ಐದು ಗರಿಗರಿ ನೋಟುಗಳನ್ನೆತ್ತಿಕೊಂಡವನೆ ಕವರೊಂದರೊಳಗೆ ಹಾಕಿ ಮತ್ತೆ ಟ್ರೈನಿಂಗ್ ರೂಮಿನತ್ತ ದಾಪುಗಾಲಿಕ್ಕುತ ನಡೆದ. 

ಟ್ರೈನಿಂಗ್ ರೂಮಿನತ್ತ ಧಾವಿಸಿ ಬಂದ ಶ್ರೀನಾಥನಿಗೆ ಅಲ್ಲಿನ ದೀಪಗಳೆಲ್ಲ ಆರಿ ಕತ್ತಲು ತುಂಬಿದ್ದ ವಾತಾವರಣ ಸ್ವಾಗತ ಕೋರಿದಾಗ ಎದೆ ಧಸಕ್ಕೆಂದಿತು - ಹೇಳದೆ ಕೇಳದೆ ಹೋಗಿಬಿಟ್ಟಳೆ? ಎಂಬ ಅನಿಸಿಕೆಯಲ್ಲಿ. ಯಾವುದಕ್ಕೂ ಪರೀಕ್ಷಿಸಿ ನೋಡುವುದೊಳಿತೆಂದುಕೊಂಡು ಬಾಗಿಲು ಪೂರ್ತಿ ತೆರೆದು ದೀಪ ಹಾಕಿ ನೋಡಿದರೂ ಅವಳಲ್ಲಿ ಕಾಣದಿದ್ದಾಗ ಆತಂಕ ಇನ್ನು ಅಧಿಕವಾಗಿ ಅವನ ಎದೆಬಡಿತ ಅವನಿಗೆ ಸ್ಪಷ್ಟವಾಗಿ ಕೇಳಿಸತೊಡಗಿತು. ಮೆದುಳಿನಲ್ಲಿ ಇನ್ನು ಏನೇನೊ ಅಲ್ಲಸಲ್ಲದ ಆಲೋಚನೆ ಚಿಂತೆ ಕಾಡುತ್ತಿರುವಾಗಲೆ ತಟ್ಟನೆ, 'ಅವಳ ಪ್ರತಿನಿತ್ಯದ ಮಾಮೂಲಿ ಪ್ಯಾಂಟ್ರಿ ರೂಮಿಗೆ ಹೋಗಿರಬಹುದೆ?' ಎಂಬ ಅನುಮಾನ ಉದಿಸಿ ಹೆಚ್ಚುಕಡಿಮೆ ಅದರತ್ತ ಓಡಿದಂತೆಯೆ ನಡೆದ. ಅಲ್ಲಿ ತಲುಪಿದಾಗ ದೂರದಿಂದಲ್ಲಿ ಹಚ್ಚಿದ್ದ ದೀಪಗಳನ್ನು ಕಂಡಾಗ ಇಲ್ಲೆ ಇದ್ದರೂ ಇರಬಹುದೆನಿಸಿ ತುಸು ಆಶಾವಾದದ ಕೊನರನ್ನು ಚಿಗುರಿಸಿದರೂ, ಹತ್ತಿರಕ್ಕೆ ಬಂದು ನೋಡಿದರೆ ಬಾಗಿಲು ಹಾಕಿಕೊಂಡಂತಿತ್ತು... ತಳ್ಳಿ ನೋಡಿದರು ತೆರೆದುಕೊಳ್ಳಲಿಲ್ಲವಾಗಿ ಹೆಚ್ಚು ಕಡಿಮೆ ಅವಳು ಒಳಗಿರುವುದು ಖಚಿತವಾದರೂ, ಒಳಗೇನು ಮಾಡುತ್ತಿರುವಳೊ ಎಂದು ಗೊತ್ತಾಗದೆ ಆತಂಕದ ಚಡಪಡಿಕೆ ಇಮ್ಮಡಿಯಾಯ್ತು.. ಅಲ್ಲೇನು ಬಾಗಿಲು ಹಾಕಿಕೊಂಡು ಅಳುತ್ತ ಕುಳಿತಿದ್ದಳೊ, ಅಥವಾ ಮತ್ತೇನನ್ನಾದರೂ ಮಾಡಿಕೊಳ್ಳುವ ಹವಣಿಕೆಯಲ್ಲಿರುವಳೊ - ಅದೂ ಯಾರೂ ಇರದ ಈ ಹೊತ್ತಿನಲ್ಲಿ - ಅನಿಸಿ ಅರೆಬರೆ ನಡುಗುವ ಕೈಯಲ್ಲೆ ಮೆಲುವಾಗಿ ಬಾಗಿಲನ್ನು ಬಡಿದ.. ಆದರೂ ಉತ್ತರ ಬಾರದೆ ಕಂಗೆಡುವಂತಾಗಿ, ನಿಂತಲ್ಲಿ ನಿಲ್ಲಲಾಗದೆ ಆ ಕಾರಿಡಾರಿನ ಕಿರಿದಾದ ಓಣಿಯಲ್ಲೆ ಶತಪಥ ಹಾಕುತ್ತ ಬಾಗಿಲು ತೆರೆಯುವ ಅವಸರವನ್ನೆ ಕಾಯತೊಡಗಿದ. ಆ ಕಾಯುವಿಕೆಯ ಅಸಹನೀಯತೆಯೆ ಕಾಡುವ ಅಗ್ನಿಗೋಳವಾಗಿ ತಲೆ ಸಿಡಿಸುವಂತಾಗಿ, ಗೋಡೆಗಾನಿಸಿದ್ದ ಫ್ರಿಡ್ಜಿನ ಬಾಗಿಲು ತೆಗೆದು ಅಲ್ಲಿದ್ದ ತಣ್ಣನೆಯ ಬಾಟಲಿ ನೀರನ್ನೆತ್ತಿ ಗಟಗಟನೆ ಕುಡಿದುಬಿಟ್ಟ - ಆ ಆಗ್ನಿಗೋಳವನ್ನು ತಂಪಾಗಿಸುವವನಂತೆ. ಆ ಹೊತ್ತಿಗೆ ಸರಿಯಾಗಿ ಬೆನ್ನ ಹಿಂದಿನಿಂದ ಬೆಳಕಿನ ಕಾಂತಿ ಧಿಗ್ಗನೆ ಪ್ರಸರಿಸಿದಂತಾದಾಗ ಬಹುಶಃ ಬಾಗಿಲು ತೆಗೆದಿರಬೇಕೆಂಬ ಅನಿಸಿಕೆ ಮೂಡಿ ಸರಕ್ಕನೆ ಹಿಂದೆ ತಿರುಗಿದರೆ - ನಿರೀಕ್ಷೆಯಂತೆ ಬಾಗಿಲು ತುಸುವೆ ತೆರೆದುಕೊಂಡಿತ್ತು - ಒಳಗಿನ ಬೆಳಕನ್ನು ಭಾಗಶಃ ಹೊರಚೆಲ್ಲುತ್ತ. ಅವಳ ಮುಖ ದಿಟ್ಟಿಸಲಾಗದೆ ಓಡಿಹೋಗಿದ್ದ ಆತಂಕದ ಜಾಗದಲ್ಲೀಗ 'ಅವಳನ್ನು ಸುರಕ್ಷಿತವಾಗಿ ಕಂಡರೆ ಸಾಕಪ್ಪ' ಎಂಬ ಮನಸ್ಥಿತಿಯಲ್ಲಿದ್ದ ಶ್ರೀನಾಥನಿಗೆ ಕುಟುಕು ಜೀವ ಬಂದಂತೆನಿಸಿ ಬಾಗಿಲಿನತ್ತ ಹೆಜ್ಜೆ ಹಾಕಿದ, ಕೈಯಲ್ಲಿ ಹಣದ ಕವರನ್ನು ಹಿಡಿದುಕೊಂಡೆ. ಅವನು ಬಾಗಿಲ ಹತ್ತಿರ ಬರುವುದಕ್ಕೂ ಕುನ್. ಸು ಪೂರ್ತಿಯಾಗಿ ಬಾಗಿಲು ತೆರೆದುಕೊಂಡು ಹೊರಗೆ ಕಾಣಿಸಿಕೊಳ್ಳುವುದಕ್ಕೂ ತಾಳೆಯಾಗಿ ಇನ್ನೇನು ಢಿಕ್ಕಿ ಹೊಡೆದುಬಿಡಬಹುದೆಂದುಕೊಳ್ಳುವಷ್ಟರಲ್ಲಿ ಇಬ್ಬರೂ ಪರಸ್ಪರ ಸಾವರಿಸಿಕೊಂಡು ಸಂಭಾಳಿಸಿಕೊಂಡು ನಿಲ್ಲುವಾಗ ಪಕ್ಕನೆ ಶ್ರೀನಾಥನ ಗಮನಕ್ಕೆ ಬಂತು - ಅವಳು ತಾನು ಹಾಕಿಕೊಂಡು ಬಂದಿದ್ದ ದಿರುಸನ್ನು ಬಿಚ್ಚಿ ಮಾಮೂಲಿಯಾಗಿ ಹಾಕುತ್ತಿದ್ದ ಬಿಳಿ ಯೂನಿಫಾರಂ ಶರ್ಟು ಪ್ಯಾಂಟಿಗೆ ಬದಲಿಸಿಕೊಂಡುಬಿಟ್ಟಿದ್ದಳೆಂದು.. ಬಹುಶಃ ತಾನು ಹಾಕಿದ್ದ ಬಟ್ಟೆಯ ಪ್ರಚೋದನೆಯಿಂದಲೆ ಹೀಗಾಯಿತೆಂದು ಅನಿಸಿತೊ ಏನೊ? ಅಥವಾ ಇಲ್ಲೆ ಬಂದು ಬದಲಿಸುವುದೆ ಪ್ರತಿನಿತ್ಯದ ಅಭ್ಯಾಸವಾಗಿದ್ದು ಇಂದು ರಜೆ ದಿನವೆಂಬ ಕಾರಣಕ್ಕೆ ಇನ್ನು ಬದಲಿಸಿರಲಿಲ್ಲವೊ..? ಆದರೆ ಬದಲಿಸಿದ್ದ ದಿರಿಸನ್ನು ಮೀರಿ ಶ್ರೀನಾಥನ ಅಂತರಾತ್ಮಕ್ಕೆ ತಟ್ಟಿದ ಸೂಕ್ಷ್ಮ ಅಂಶ - ಸದಾ ಮಂದಹಾಸ ಭರಿತವಾಗಿ ನಗೆಮಲ್ಲಿಗೆ ಚೆಲ್ಲುತ್ತಿದ್ದವಳ ವದನ ಬಿಗಿದುಕೊಂಡ ತುಟಿಯಿಂದ ಮಂಕಾಗಿ, ಚೈತನ್ಯವಿರದ ಸಪ್ಪೆ ಜೀವರಸದಿಂದ ತುಂಬಿದಂತೆ ಭಾಸವಾಯ್ತು. ಅದೇನು ಅವನಿಗೆ ಭಾಸವಾದ ರೀತಿಯೊ ಅಥವ ನಿಜವಾಗಿಯೂ ಅವಳ ಮುಖ ಆ ಭಾವನೆ ಪ್ರತಿಬಿಂಬಿಸಿತ್ತೆ ಅನ್ನುವುದನ್ನು ಖಚಿತವಾಗಿ ನಿರ್ಧರಿಸಲಾಗದೆ, ಅದನ್ನು ಪರಿಶೀಲಿಸಲು ಮತ್ತೊಮ್ಮೆ ಅವಳ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸುವ ಧೈರ್ಯವೂ ಸಾಲದೆ ಎತ್ತಲೊ ನೋಟ ನೆಟ್ಟು ಕೈಯಲಿದ್ದ ಹಣದ ಕವರನ್ನು ಅವಳ ಮುಂದೆ ಹಿಡಿದ. ಅವಳೇನು ಮಾತನಾಡದಿದ್ದರೂ ಅದೇನೆಂಬ ಪ್ರಶ್ನಾರ್ಥ ಕಣ್ಣಲ್ಲಿ ಪ್ರತಿಫಲಿಸಿ ಹುಬ್ಬೇರಿಸಿದಾಗ ಏನು ವಿವರಣೆ ಕೊಡಲು ಆಗದಂತೆ ಕತ್ತಿನ ನರವುಬ್ಬಿ ಗಂಟಲು ಹಿಡಿದಂತಾಗಿ ಅವಳು ಮತ್ತೇನನ್ನಾದರೂ ಪ್ರಶ್ನಿಸುವ ಮೊದಲೆ - ಅವಳೆಲ್ಲಿ ತಿರಸ್ಕರಿಸಿ ಹಿಂದೆ ಕೊಟ್ಟುಬಿಡುವಳೊ ಎಂಬ ಅನಿಸಿಕೆ ಮೂಡಿ ಅದಕ್ಕೆ ಅವಕಾಶ ಕೊಡದ ಹಾಗೆ - ಸರಕ್ಕನೆ ಅವಳ  ಹಸ್ತದ ಮೇಲೆ ಕವರನಿಟ್ಟವನೆ ಮತ್ತೆ ತನ್ನ ಸೀಟಿನತ್ತ ಧಾವಿಸಿ ನಡೆದಿದ್ದ ; ಓಣಿಯ ತುದಿಯವರೆಗು ತನ್ನ ಬೆನ್ನ ಹಿಂದಿನಿಂದ ಎರಡು ತೀಕ್ಷ್ಣ ದೃಷ್ಟಿಯ ನೇತ್ರಗಳು ತನ್ನನ್ನೆ ಇರಿಯುತ್ತಿರುವಂತೆ ಬೆನ್ನಟ್ಟುತ್ತಿವೆ ಎಂಬ ಭಾವನೆಯಿಂದ ಮುಕ್ತನಾಗಲಿಕ್ಕೆ ಯಾಕೊ ಸಾಧ್ಯವೇ ಆಗಲಿಲ್ಲ ಶ್ರೀನಾಥನಿಗೆ.

ಹಾಗೆ ಕುಳಿತ ಶ್ರೀನಾಥನಿಗೆ ಮತ್ತೆ ಮತ್ತೆ ಆಲೋಚನಾ ಸರಣಿಯ ಧಾಳಿ ಗಪ್ಪನೆ ಆವರಿಸಿದ ಮೋಡದಂತೆ ಮುತ್ತಿಕೊಂಡು ತಲೆಯ ಸುತ್ತ ಭ್ರಮಿಸತೊಡಗಿತು. ಆ ವಿಜೃಂಭಣೆಯ ಗಳಿಗೆಯಲ್ಲಿ ತನ್ನ ಯಾವುದೊ ಬಲಹೀನತೆಯನ್ನು ಸಂಪೂರ್ಣ ಪರಾಜಿತಗೊಳಿಸಿ, ಜಯಿಸಿ ಬಿಟ್ಟೆನೆಂಬ ಹಮ್ಮಿನಲ್ಲಿ ಸಂಭ್ರಮಿಸುವಂತೆ ಮಾಡಿದ್ದ 'ಗೆಲುವು', ಭಾವ ಶಿಖರದ ಅಲೌಕಿಕ ವ್ಯೋಮ ವಿಹಾರ ಮುಗಿಸಿ ಗುರುತ್ವಕೊಳಗಾದ ಭೌತಿಕ ವಸ್ತುವಿನಂತೆ ಆವೇಶವೆಲ್ಲ ಕರಗಿಸಿ ಇಳೆಗಿಳಿಸಿದ ಮೇಲೆ, 'ಅದು ನಿಜವಾಗಿಯೂ ಸೋಲೊ? ಗೆಲುವೊ ?' ಎಂಬ ಅನುಮಾನ ಕಾಡತೊಡಗಿತು. ಸದ್ಯಕ್ಕೆ ಒಂದು ಗೆಲುವು ಸಿಕ್ಕಿದರೂ ಸಾಕು, ತನ್ನೆಲ್ಲ ಕೀಳರಿಮೆ, ದೌರ್ಬಲ್ಯಗಳನ್ನೆಲ್ಲ ಅದರಿಂದಲೆ ಮೆಟ್ಟಿ ತಲೆಯೆತ್ತಿ, ಹೆಮ್ಮೆಯಿಂದ ನಡೆಯಬಹುದೆಂದು ಅದುವರೆಗೂ ಪ್ರೇರೇಪಣೆ ನೀಡುತ್ತಿದ್ದ 'ಅಹಂ'ನ ಹಮ್ಮು, ಈಗ ಯಾರ ಸಲುವಾಗಿ ಅದನ್ನೆಲ್ಲ ಮಾಡುವ ಧಾರ್ಷ್ಟ್ಯತನ ತೋರಿತೆಂಬುದೆ ಅರಿವಾಗದೆ ತೊಳಲಾಡತೊಡಗಿತು. ಕೇವಲ ದೈಹಿಕ ತೃಷೆಯ ಪೂರೈಕೆಗಾಗಿ ಸಂಭಾವಿತ ಮನಸಿನ ಪದರ ಇಷ್ಟೆಲ್ಲ ಆಟ ಹೂಡಿಸಿತ್ತೆ? ತನ್ನ ಕೈ ಕೆಳಗಿನವರಿಗಿಂತಲೂ ತಾನೇನು ಕಡಿಮೆಯಿಲ್ಲವೆಂದು ನಿರೂಪಿಸುವ ಭಾವ ಹೀಗೆಲ್ಲಾ ಕಾಡಿಸಿತ್ತೆ? ಅಥವಾ ಇದೆಲ್ಲ ಬರಿಯ ವಿಕೃತ ಮನದ ವಿಚಿತ್ರ ಮಾಯಾಜಾಲವೆ? ಎಂದೆಲ್ಲ ಗದ್ದಲ ಗೊಂದಲವೆಬ್ಬಿಸತೊಡಗಿ ಅದರ ನಡುವಲ್ಲೆ - ಏನನ್ನಾದರೂ ನಿರೂಪಿಸಬೇಕೆಂದಿದ್ದರೂ ಕೂಡಾ, 'ನಿರೂಪಿಸಿ ತೋರಿಸಬೇಕಾದು ಯಾರಿಗೆ? ಹೊರಗಿನ ಜಗದ ಕಣ್ಣಿಗಾಗಿಯೆ?' ಎಂಬ ಪ್ರಶ್ನೆಯುದಿಸಿತು. ಆಳಕ್ಕಿಳಿದಂತೆ ಗೋಚರವಾಗುವ ಸತ್ಯದಂತೆ ಪಕ್ಕನೆ ಒಳಮನ 'ಈ ನಿರೂಪಣೆಯ ಸತ್ಯಾಸತ್ಯಗಳನ್ನು ನೋಡಲು ಹೊರ ಜಗದಲ್ಲಿ ಕಾತರದಿಂದ ಯಾರೂ ಕಾದು ಕುಳಿತಿರುತ್ತಾರೆ - ಅದರಲ್ಲೂ ಅವರಿಗೆ ಸಂಬಂಧಿಸದ ವಿಷಯದಲ್ಲಿ? ಬೇರೆಯವರ ವಿಷಯದಲ್ಲಿ ಅನವಶ್ಯಕ ಆಸಕ್ತಿ ತೋರುವುದೇನಿದ್ದರೂ ಆ ವಿಷಯಗಳು ಕೇವಲ ಮನರಂಜನೆಗೆ ಗ್ರಾಸವಾಗುವುದಿದ್ದರೆ ಮಾತ್ರ ತಾನೆ ?' ಎಂದು ಛೇಡಿಸಿದಾಗ ಇದು ಕೇವಲ ತನ್ನ ಮನಸಿನ ಅಂತರ್ಯುದ್ಧ, ಅನಿಸಿಕೆಯೆ ಹೊರತೂ ಬಾಹ್ಯ ಜಗದ ಅಪೇಕ್ಷೆ ನಿರೀಕ್ಷೆಗಳ ಪ್ರತಿಫಲನವಲ್ಲವೆನಿಸಿತು. ಅಲ್ಲದೆ ಸೌಮ್ಯ ಸಾತ್ವಿಕತೆಯ ಒಳದನಿ ಇಷ್ಟು ದಿನವೂ ತನ್ನನ್ನು ತೋರಿಕೊಳ್ಳದೆ ಸುಪ್ತವಾಗಿದ್ದುಬಿಟ್ಟು, ಘಟನೆಯ ನಂತರದ ಪರ್ಯಾಲೋಚನೆಯಲ್ಲಿ ಮಾತ್ರ ಯಾಕೆದ್ದು ಅನಾವರಣಗೊಳ್ಳುತ್ತಿದೆಯೆಂದು ಅರ್ಥವಾಗಲಿಲ್ಲ. ಬಹುಶಃ ತಾಮಸ ಕಾಮನೆಯ ತೀವ್ರತೆ ಅತೀವ ಕ್ರಿಯಾಶಕ್ತಿಯ ಪ್ರೇರಕವಾಗಿ ದುರ್ಬಲ ಸಾತ್ವಿಕವನ್ನು ಮೂಲೆಗೊತ್ತಿಬಿಟ್ಟಿತ್ತೋ ಏನೊ? ಒಟ್ಟಾರೆ ತಾನೇನೆ ನೆಪ ಒಡ್ಡಿಕೊಂಡರೂ ಇದು ಕೇವಲ ತನ್ನೊಳಗನ್ನು ಗೆಲ್ಲಲಾಗದ ದುರ್ಬಲತೆಯ ಮಾಯಾಜಾಲವೆ ಹೊರತು ಯಾರಿಗೊ ಏನನ್ನೋ ಸಾಧಿಸಿ ತೋರಿಸುವ ಇಚ್ಛಾಶಕ್ತಿಯ ಪ್ರಖರತೆಯಲ್ಲವೆಂದು ಅನಿಸತೊಡಗಿತು... ಅದೇನಿದ್ದರೂ ಕೇವಲ ಹೊರ ಪದರವಾಗಿ ಕೆಲಸ ಮಾಡಿ ತನ್ನ ಮೂಲ ದೌರ್ಬಲ್ಯವನ್ನು ಮುಚ್ಚಿಟ್ಟುಕೊಳ್ಳುವ ಮುಖವಾಡವಾಗಿರಬಹುದಷ್ಟೆ - ಸದಾ ಅನುವರ್ತಿಯಂತೆ ಅನುಕರಿಸುವ ನೆರಳಿನ ಛಾಯೆಯ ಹಾಗೆ..... 

ಆಲೋಚನಾ ಛಾಯೆಯ ಕತ್ತಲಿನಡಿ ಕಳುವಾದಂತೆ ಕುಳಿತವನ ಮೇಲೆ ಯಾವುದೊ ನೆರಳು ಬೆಳಕಿನ ಕೋಲು ಮೇಲೆ ಬಿದ್ದು ಯೋಚನಾಲಹರಿಗೆ ಕತ್ತರಿ ಹಾಕಿದಂತಾದಾಗಿ ಅದೆ ಭಂಗಿಯಲ್ಲೆ ತಲೆಯೆತ್ತಿ ನೋಡಿದಾಗ ಕೈಯಲ್ಲೊಂದು ಕಾಫಿ ಬಟ್ಟಲು ಹಿಡಿದಿದ್ದ ಕುನ್. ಸು ಕಣ್ಣಿಗೆ ಬಿದ್ದಿದ್ದಳು. ಸಾಧಾರಣವಾಗಿ ಕಾಫಿ ಲೋಟ ಹಿಡಿದು ಎದುರು ಬದಿಯಲ್ಲಿ ನಿಲ್ಲುತ್ತಿದ್ದವಳು, ಇಂದು ಮೇಜಿನ ಪಕ್ಕದಲ್ಲೆ ನಿಂತಿದ್ದಳು - ಬಗಲಿಗೆ ತನ್ನ ವ್ಯಾನಿಟಿ ಬಾಗನ್ನಿರಿಸಿಕೊಂಡು. ಕಾಫಿಯ ಕಪ್ಪನ್ನು ಸಾಸರಿನ ಜತೆಯೆ ಟೇಬಲಿನ ಮೇಲಿಟ್ಟು ಯಾವುದೆ ಮಾತಾಡದೆ ತಿರುಗಿ ಹೊರ ಹೋಗುವ ಬಾಗಿಲಿನತ್ತ ಹೆಜ್ಜೆ ಹಾಕತೊಡಗಿದಳು. ಹಾಗೆ ಅವಳು ತಿರುಗಿದಾಗ ಅದುವರೆವಿಗೂ ಕಣ್ಣಿಗೆ ಬೀಳದೆ ಮರೆಯಾಗಿದ್ದ ಪೇಪರಿನ ಬ್ಯಾಗೊಂದರಲ್ಲಿ ಅರೆಬರೆ ಕಾಣಿಸಿತ್ತು - ಅಂದು ಅವಳುಟ್ಟುಕೊಂಡು ಬಂದಿದ್ದ ಬಟ್ಟೆ ಮತ್ತು ಶ್ರೀನಾಥನಿತ್ತಿದ್ದ ಕವರಿನ ಹೊರಚಾಚಿದ ತುದಿ...ಅವಳ ಹೊರಹೋಗುವ ಹೆಜ್ಜೆಗಳನ್ನೆ ದಿಟ್ಟಿಸುತ್ತ ಕೂತಿದ್ದ ಶ್ರೀನಾಥನಿಗೆ, ಗಮಗಮಿಸುವ ಕಾಫಿಯ ವಾಸನೆ ಕಾಡಿಸಿ ಆ ಯೋಚನಾ ಭ್ರಾಮಕತೆಗೆ ಕಾಫಿ ಕುಡಿದರೆ ವಾಸಿ ಅಂದೆನಿಸಿದರೂ ಯಾಕೊ ಕುಡಿಯಲು ಮನಸು ಬಾರದೆ ಹೊರ ಹೋದವಳ ಹಾದಿಯನ್ನೆ ತದೇಕಚಿತ್ತನಾಗಿ ನಿರುದ್ದೇಶದಿಂದ ದಿಟ್ಟಿಸುತ್ತ ಕೂತುಬಿಟ್ಟ...

(ಇನ್ನೂ ಇದೆ)
___________
 

Comments

Submitted by nageshamysore Mon, 04/21/2014 - 22:00

In reply to by kavinagaraj

'ವಿಷ'ಯಾಸಕ್ತಿ ಪ್ರೇರೇಪಿಸಿದ ವಿಷ'ಘಳಿಗೆ'ಯೇನೊ ವಶೀಕರಣದ ಪರಿ ವಶವಾಗಿಹೋಯ್ತು. ಆದರೆ ವಿಷಘಳಿಗೆ ಕುಡಿಸುವ 'ಕಹಿಗುಳಿಗೆ' ನಿಧಾನ ವಿಷವಿದ್ದಂತೆ - ಸಮಯ ಹಿಡಿದರೂ, ಕಾಡದೆ ಬಿಡುವಳೆ ಆ ಮಾಯೆಯ ತಾಯೆ?
.
ಅಂದ ಹಾಗೆ ಈ ಕಂತಿಗೆ 'ಅಧಃಪತನ (ಮೂರನೆ ಭಾಗ)' ಮುಗಿದಂತಾಯ್ತು. ಮುಂದಿನ ಕಂತಿನಿಂದ ಅಂತಿಮ ನಾಲ್ಕನೆ ಅಧ್ಯಾಯ ಭಾಗವಾದ 'ಆರೋಹಣ'ದ ಆರಂಭ :-)

Submitted by nageshamysore Tue, 01/06/2015 - 19:47

In reply to by ಗಣೇಶ

ಗಣೇಶ್ ಜಿ,

ನಿಜ, ಘಳಿಗೆಗಳು ತಪ್ಪನ್ನು ಮರೆಮಾಚಿ ಜಾರಿಕೊಳ್ಳುವ ಸುಲಭದ ನೆಪಗಳಷ್ಟೆ. ಆದರೂ ತಪ್ಪುದಾರಿಯಲ್ಲಿ ನಡೆಯುವಷ್ಟು ವೇಗವಾಗಿ ಸರಿದಾರಿಯಲ್ಲಿ ನಡೆಯುವುದು ಕಷ್ಟವೆ. ಈ ಕಾದಂಬರಿಯನ್ನೆ ನೋಡಿ - ಅಧಃಪತನಕ್ಕೆ ತಲುಪಲು 17 ಕಂತುಗಳೆ ಸಾಕಾಯ್ತು. ಅಲ್ಲಿಂದ ಆರೋಹಣವನ್ನೇರಲು ಇನ್ನೂ 50 ಕಂತುಗಳು ಹಿಡಿಯಿತು ! ಸನ್ಮಾರ್ಗದಲ್ಲಿ ನಡೆವವರಿಗೆ ಸಂಕಷ್ಟಗಳು ಹೆಚ್ಚು ಎಂದು ಕಾಣುತ್ತದೆ !