ಎಲ್ಲಾ ಅನಿಷ್ಟಗಳಿಗೂ ಶನೀಶ್ಚರ ಕಾರಣನಲ್ಲ!

ಎಲ್ಲಾ ಅನಿಷ್ಟಗಳಿಗೂ ಶನೀಶ್ಚರ ಕಾರಣನಲ್ಲ!

ಮೊನ್ನೆ ತಾನೇ ಕೋಲಾರದಲ್ಲಿ ನಡೆದ ಘಟನೆ.

ಆ ಮನೆಯಲ್ಲಿನ ಎರಡರಿಂದ ಎರಡೂವರೆ ವರ್ಷಗಳಿರಬಹುದಾದ ಹೆಣ್ಣು ಮಗುವೊಂದು ಜೋರಾಗಿ ಅಳುತ್ತಲಿತ್ತು. ಮಗುವಿನ ತಾಯಿ ಒಳಗೆಲ್ಲೋ ಇದ್ದವಳು ಬಂದು ನೋಡಿದಾಗ ಮಗುವಿನ ಮೈಮೇಲೆಲ್ಲಾ ಉಗುರಿನಿಂದ ಪರಚಿದಂತೆ ಗಾಯಗಳಾಗಿದ್ದವು. ಆ ತಾಯಿಗೆ ಮಗುವಿನ ಮೇಲೆ ಅತ್ಯಾಚಾರವಾಗಿರುವುದು ಖಚಿತವಾಯಿತು. ಮಗುವನ್ನು ಕೇಳಿದಳು.. “ಕಂದಾ ಏನಾಯ್ತು, ಯಾಕೆ ಅಳ್ತಾ ಇದ್ದೀಯಾ?”

ಮಗು ಮುಗ್ದತೆಯ ದನಿಯಲ್ಲಿ ಹೇಳಿತು, “ಅಮ್ಮಾ... ಅಣ್ಣ ಅಬ್ಬು ಮಾಡಿದ!”

ನಮ್ಮ ಸಾಮಾಜಿಕ ವ್ಯವಸ್ಥೆ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ದೂರದ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣಗಳಂತಹಾ ಘಟನೆಗಳು ಇಂದು ದಿನನಿತ್ಯವೂ ನಮ್ಮ ರಾಜ್ಯದಲ್ಲಿಯೂ ನಡೆಯುತ್ತಿರುವುದು ಖಂಡಿತವಾಗಿಯೂ ಸುಸಂಸ್ಕೃತಿಗೆ ಹೆಸರಾದ ಕನ್ನಡಿಗರಿಗೆ ಶೋಭಿಸುವ ವಿಚಾರವಲ್ಲ.

ಇಷ್ಟಕ್ಕೂ ನಮ್ಮ ಯುವಜನತೆಯಲ್ಲಿ ಇಂತಹಾ ಕ್ರೌರ್ಯವು ಮೂಡುವಂತಾಗಲು ಮೂಲ ಪ್ರೇರಣೆ ಏನು? ಇಂದಿನ ಕುಟುಂಬದಲ್ಲಿಯೂ, ಮಾದ್ಯಮದಲ್ಲಿಯೂ, ಶಾಲಾ ಪರಿಸರದಲ್ಲಿಯೂ ಗಂಡಸಿಗೆ ಯಾವ ಬಗೆಯ ನೈತಿಕತೆಯ ಸಂದೇಶ ರವಾನಿಸಲಾಗುತ್ತಿದೆ? ಅತ್ಯಾಚಾರ ಪ್ರಕರಣಗಳು ವರದಿಯಾದಾಗ ಮೊದಲಿಗೆ ಎಲ್ಲರ ದೃಷ್ಟಿ ಬೀಳುವುದೂಸಹ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಮೇಲೆ. ಅದಾಕ್ಷಣದಲ್ಲಿ ಅವಳ ಮೇಲೆ ಅನುಕಂಪ, ಕರುಣೆಗಳು ತಾನಾಗಿ ಉಕ್ಕಿ ಹರಿಯುತ್ತದೆ. ಅದೇನೋ ಸರಿಯಾದುದೆ, ಆದರೆ ಇದರ ಫಲಿತವು ಮಾತ್ರ ಶೂನ್ಯ. ಕಾರಣವೇನೆಂದರೆ ಜನರು ಅದಾವುದನ್ನೂ ಸಹ ಗಂಭೀರವಾಗಿ ಪರಿಗಣಿಸುತ್ತಿಲ್ಲ! ಜನರ ಮನಸ್ಸು ಹೃದಯ ಅಷ್ಟೊಂದು ಕಠಿಣವಾಗಿದೆ, ಅಥವಾ ಅವರಿಗೆ ಅದರ ಬಗೆಗೆ ಚಿಂತಿಸಿ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವಷ್ಟು ಸಮಯವಿಲ್ಲ! ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಸಮೂಹ ಮಾದ್ಯಮಗಳು ಅವರನ್ನು ಆ ಮನಸ್ಥಿತಿಗೆ ತಂದು ನಿಲ್ಲಿಸಿವೆ!

ಸಮೂಹ ಮಾದ್ಯಮಗಳಲ್ಲಿ ಎಲ್ಲೆಡೆಯೂ ಹೆಣ್ಣಿನ ಅಂಗಾಂಗಗಳ ಪ್ರದರ್ಶನದ ವಿಜೃಂಭಿಸುವಿಕೆಯನ್ನೂ, ಗಂಡುಗಳ ಅನಾಗರಿಕ ಹಾಗೂ ಒರಟುತನವೇ ಅವನ ಪೌರುಷದ ಸಂಕೇತವೆಂಬಂತೆ ತೋರಿಸಲಾಗುತ್ತದೆ. ಇವುಗಳ ಮದ್ಯೆ ಮಾನವರಲ್ಲಿನ ನೈತಿಕ ಮೌಲ್ಯಗಳು ಅದಃಪತನದತ್ತ ಸಾಗುತ್ತಿರುವುದು ಯಾರ ಗಮನಕ್ಕೂ ಬರುವುದಿಲ್ಲ.

ಇನ್ನು ಅತ್ಯಾಚಾರಿಗಳೆಂದ ತಕ್ಷಣವೇ ಅವರೆಲ್ಲರೂ ರಾಕ್ಷಸರು, ಕಾಮ ಪಿಶಾಚಿಗಳು ಎನ್ನುವಂತೆ ಬಿಂಬಿಸಲಾಗುತ್ತದೆ. ಆದರೆ ನಿಜವಾದ ವಸ್ತುಸ್ಥಿತಿಯು ಹಾಗಿರುವುದಿಲ್ಲ. ಅವರೆಲ್ಲರಿಗೂ ಲೈಂಗಿಕತೆಯೇ ಪರಮ ಗುರಿಯಾಗಿರಲಾರದು. ಅವುಗಳಿಗೆ ಬೇರೆ ಬೇರೆ ಕಾರಣಗಳೂ ಇರಬಹುದು. ಮುಖ್ಯವಾಗಿ ಅಂತಹವರಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳುವ ಮಹತ್ವಾಕಾಂಕ್ಷೆಯು ಬಲವಾಗಿರುತ್ತದೆ. ಅಲ್ಲದೆ ಬಹುತೇಕರು ತಮ್ಮ ಬಾಲ್ಯ ಜೀವನದಲ್ಲಿ ತಮ್ಮ ತಾಯಿ ಇಲವೇ ಅನ್ಯ ಹೆಣ್ಣೋರ್ವಳಿಂದ ಅತಿಯಾದ ನೋವನ್ನನುಭವಿಸಿರುತ್ತಾರೆ. ಅದರಿಂದಾಗಿ ಅವರಲ್ಲಿ ಮಹಿಳಾ ವರ್ಗದ ಮೇಲೆಯೇ ಸೇಡು ತೀರಿಸಿಕೊಳ್ಳುವ ಹಂಬಲ ಬಲವತ್ತಾಗಿರುತ್ತದೆ. ತಮ್ಮ ಸ್ನೇಹಿತರ ಪ್ರಚೋದನೆಯಿಂದಲೂ, ತಮ್ಮಲ್ಲಿನ ಅಧಿಕಾರದ ಬಲದಿಂದಲೂ, ಅತ್ಯಾಚಾರಿಗಳಾದವರೂ ಅನೇಕರಿರುತ್ತಾರೆ. ಅವರುಗಳೊಂದಿಗೇ ತಾವು ಅಪರಾಧವನ್ನೇ ಮಾಡಿದರೂ ಯಾವುದೇ ಕಠಿಣ್ ಶಿಕ್ಷೆ ಆಗುವುದಿಲ್ಲ. ನ್ಯಾಯಾಲಯ, ಕಾನೂನಿನ ಕಡಿವಾಣಗಳಿಂದ ಅತ್ಯಂತ ಸುಲಭವಾಗಿ ತಪ್ಪಿಸಿಕೊಳ್ಲುವುದು ಸಾಧ್ಯವಿದೆ ಎನ್ನುವ ತರ್ಕ ಯುವಜನತೆಯಲ್ಲಿ ಬಲವಾಗಿ ಬೆಳೆದಿರುವುದು ಇಂದಿನ ಈ ಸ್ಥಿತಿಗೆ ಮೂಲ ಕಾರಣವೆನ್ನಬೇಕು.

ಇದಲ್ಲದೆ ಇಂದಿನ ದಿನಗಳಲ್ಲಿ ಮನೆ, ಕುಟುಂಬಗಳಲ್ಲಿ ನೈತಿಕತೆಯ ವಾತಾವರಣವು ಕಾಣದಿರುವುದು, ಓದಿನಲ್ಲಿ ಹಿಂದುಳಿದ ಪರಿಣಾಮದಿಂದ ಮನೆ ಹಾಗೂ ಶಾಲೆಯಲ್ಲಿ ತಿರಸ್ಕಾರಕ್ಕೆ ಒಳಗಾಗುವ ಮೂಲಕವೋ, ಬದುಕಿನ ಕುರಿತ ಸ್ಪಷ್ಟ ಆಲೋಚನೆ, ಗುರಿಗಳಿಲ್ಲದ ಸನ್ನಿವೇಶಗಳಲ್ಲಿಯೋ ಅತ್ಯಾಚಾರವೆಸಗುವ ಮನೋಭವನೆ ತಾನೇ ತಾನಾಗಿ ಬೆಳೆಯಲು ಅವಕಾಶಗಳಿವೆ. ಸಿನಿಮಾ, ಕಿರುತೆರೆಗಳಲ್ಲಿನ ಕಾರ್ಯಕ್ರಮಗಳಿಂದ ಪ್ರಬಾವಕ್ಕೊಳಗಾಗಿಯೋ, ಪ್ರೀತಿಯೆನ್ನುವ ಆಕರ್ಷಣೆಗೆ ಬಿದ್ದು ಹುಡುಗಿಯನ್ನು ಕೇಳಿದಾಗ ಆ ಹುಡುಗಿ ಅದಕ್ಕೊಪ್ಪದೇ ಹೋದ ಸಮಯದಲ್ಲಿ ಅವಳನ್ನು ಹೇಗಾದರೂ ಒಪ್ಪಿಸಿ ತನ್ನವಳನ್ನಾಗಿಸಿಕೊಳ್ಳುವ ಹುಚ್ಚು ಕೋಡಿಯ ಮನಸಿನ ಬೆನ್ನೇರಿದಾಗಲೂ ಸಹ ಇಂತಹಾ ಘಟನೆಗಳು ಸಂಭವಿಸುತ್ತವೆ. ಮನಃಶಾಸ್ತ್ರದ ಅನುಸಾರವಾಗಿ ಮಾನವನು ಇತರೆ ಪ್ರಾಣಿಗಳಂತಿರದೆ ತನ್ನ ಮೂಲಭೂತ ಅಗತ್ಯಗಳಾದ ಹಸಿವು, ನೀರಡಿಕೆ, ನಿದ್ರೆ ಹಾಗೂ ಮೈಥುನಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಒಂದು ಶಿಸ್ತುಬದ್ದವಾದ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾನೆ ಅದೇ ‘ನಾಗರಿಕತೆ’. ಈ ಬಗೆಯ ನಾಗರಿಕತೆಯನ್ನು ಮಕ್ಕಳಿಗೆ ಅವರು ಬೆಳೆಯುತ್ತಿರುವಾಗಲೇ ಕುಟುಂಬ, ಸಮಾಜ ಮತ್ತು ಅವರ ಸುತ್ತಲಿನ ಪರಿಸರವು ಕಲಿಸಬೇಕಾಗುತ್ತದೆ. ಆದರೆ ಇಂದು ಆ ಕೆಲಸವು ಆಗುತ್ತಲಿಲ್ಲ. ಬದಲಿಗೆ ಮಾನವನನ್ನು ಕೇವಲ ಹಣಗಳಿಕೆಯೇ ಮುಖ್ಯ ಉದ್ದೇಶವೆಂದೂ, ಐಷಾರಾಮಿ ಜೀವನ ನಡೆಸುವುದೇ ದ್ಯೇಯವೆಂದೂ ಅನಂಬುವಂತೆ ಮಾಡಲಾಗುತ್ತಿದೆ. ಇದರಿಂದಾಗಿಯೇ ಸಮಾಜದಲ್ಲಿನ ನಿಜವಾದ ಮೌಲ್ಯಗಳು ಕಣ್ಮರೆಯಾಗಿ ಕ್ರೌರ್ಯವೊಂದೇ ವಿಜೃಂಭಿಸುತ್ತಿದೆ.

ಇದೆಲ್ಲಾ ಕೊನೆಗಾಣಬೇಕಾದರೆ ಮೊದಲು ನಾವು ಸರಿಯಾಗಬೇಕು. ಮಕ್ಕಳನ್ನು ಬೆಳೆಸುವ ರೀತಿ ಬದಲಾಗಬೇಕು. ಎಲ್ಲವಕ್ಕೂ ಪೋಲೀಸ್ ಹಗೂ ಸರ್ಕಾರದತ್ತ ಬೊಟ್ಟು ಮಾಡಿ ಸುಮ್ಮನೇ ಕೂರುವ ನಮ್ಮ ಮನಸ್ಥಿತಿ ಬದಲಾಗಬೇಕು. ಕೇವಲ ಕಾನೂನು, ನೀತಿ ನಿಯಮಗಳಿಂದ ಏನೂ ಬದಲಾವಣೆ ಸಾಧ್ಯವಿಲ್ಲ. ಮಾಲ್, ಬಾರ್, ಪಬ್ ಗಳ ಸಮಯ ಬದಲಿಸಿದ ಮಾತ್ರಕ್ಕೆ ಎಲ್ಲವೂ ಸರಿ ಹೋಗುವುದೂ ಇಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು. ಮೌಲ್ಯಾಧಾರಿತ ನೈತಿಕ ಶಿಕ್ಷಣ ಜಾರಿಗೆ ಬರಬೇಕು. ಮಹಿಳೆಯರ ಕುರಿತು ಗೌರವ, ಭಯ ಭಕ್ತಿಯೊಂದಿಗೆ ಆರಾಧನಾ ಭಾವವಿದ್ದ ಪರಂಪರೆ ನಮ್ಮದು. ಇಂದು ಪುನಃ ಅಂತಹಾ ಭವನೆ ಮೂಡಿಸುವ ಪ್ರಯತ್ನಗಳಾಗಬೇಕು. ಇದಕ್ಕಾಗಿ ಮಹಿಳೆಯರೂ ಸಹ ಬದಲಾಗಬೇಕು. ಮಹಿಳೆ ಇಂದಿನ ಆಧುನಿಕ ಜೀವನ ಶೈಲಿಯನ್ನು ರೂಡಿಸಿಕೊಂಡಿದ್ದರಲ್ಲಿ ಅದೇನೂ ತಪ್ಪಲ್ಲ. ಆದರೆ ತಮ್ಮ ನಡತೆ, ಮಾತುಗಳಲ್ಲಿ ಪರರ ಮನಸ್ಸಿನಲ್ಲಿ ತಮ್ಮ ಕುರಿತಂತೆ ಗೌರವ ಭವನೆ ಮೂಡುವಂತೆ ವರ್ತಿಸಬೇಕಿದೆ. ತಾನು ಪುರುಷನಿಗೆ ಸರಿ ಸಮಾನಳು ಎನ್ನುವ ಹುಮ್ಮಸ್ಸಿನಲ್ಲಿ ಧೂಮಪಾನ, ಮದ್ಯಪಾನಗಳು, ಮಾದಕ ವ್ಯಸನಗಳ್ ಚಟಕ್ಕೆ ಬಲಿ ಬೀಳದೆ ತನ್ನ ಪರಿಮಿತಿ ಹಾಗೂ ಬದುಕಿನ ನೈಜ ಉದ್ದೇಶವನ್ನು ಅರಿತುಕೊಳ್ಳಬೇಕು. ಸಮಾಜದಲ್ಲಿ ಪುರುಷ ಹಾಗೂ ಮಹಿಳೆಯರಿಬ್ಬರೂ ಪರಸ್ಪರವಾಗಿ ತಮ್ಮ ದೃಷ್ಟಿಕೋನಗಳನ್ನು ಬದಲಾಯಿಸಿಕೊಳ್ಳಬೇಕು, ಸುಧಾರಿಸಿಕೊಳ್ಳಬೇಕು. ಹೀಗಾದಾಗ ಮತ್ತೆ ಮತ್ತೆ ಇಂತಹಾ ಅತ್ಯಾಚಾರ ಪ್ರಕರಣಗಳು ಸಂಭವಿಸಲಾರವು, ಪುನರಾವರ್ತನೆಗೊಳ್ಳಲಾರವು.

ಇನ್ನು ನಮ್ಮ ಕಾನೂನು , ಪೋಲೀಸ್ ವ್ಯವಸ್ಥೆ ಕೂಡಾ ಬದಲಾಗಬೇಕಿದೆ. ಅತ್ಯಾಚಾರಿಗಳಿಗೆ ಕೇವಲ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದಕ್ಕೆ ಬದಲಾಗಿ ಕಠಿಣವ್ದ ದಂಡನೆಯಾಗಬೇಕು. ಅಪರಾಧಿಗಳು ತಾವು ಯಾವುದೇ ಕಾರಣಕ್ಕೂ ನ್ಯಾಯಾಲಯದ ಶಿಕ್ಷೆಯ್ಂದ ತಪ್ಪಿಸಿಕೊಳ್ಳಲು ಅವಕಾಶಗಳನ್ನು ನೀಡಬಾರದು. ಪ್ರಾಚೀನ ಭರತದಲ್ಲಿ ಸಮಾಜ ಘಾತುಕ ಕೆಲಸ ಮಾಡಿದವರಿಗಾಗಿ ‘ಬಹಿಷ್ಖಾರ’ ಎನ್ನುವ ಘೋರ ಶಿಕ್ಷೆ ಕಾದಿರುತ್ತಿತ್ತು. ಅಂತಹಾ ವ್ಯಕ್ತಿಗೆ ಊರಿನವರಾಗಲೀ ಪರ ಊರಿನವರಾಗಲಿ ಅನ್ಮ ಆಹಾರಗಳನ್ನು ನೀಡುತ್ತಿರಲಿಲ್ಲ. ಬರಬರುತ್ತಾ ಅದು ಜಾತಿ ವಿಜಾತಿಗಳ ವಿಚಾರದಲ್ಲಿ ಅದು ದುರ್ಬಳಕೆಯಾಗತೊಡಗಿದ ಪರಿಣಾಮ ಬ್ರಿಟೀಷರು ಆ ಕಾನೂನನ್ನು ಕೊನೆಗೊಳಿಸಿದರು. ಇದೀಗ ಅತ್ಯಾಚಾರಿಗಳಿಗೂ ಅಂತಹುಏ ಕಠಿಣ ಶಿಕ್ಷೆ ಒದಗಿದಾಗ ಯಾರೊಬ್ಬರೂ ಅಂತಹಾ ಕೃತ್ಯಗಳಿಗಿಳಿಯಲಾರರೇನೋ? ಒಟ್ತಾರೆಯಾಗಿ ಭಾರತದಲ್ಲಿ ಕಾನೂನು ವ್ಯವಸ್ಥೆ ಬಲಗೊಳ್ಳಬೇಕು. ಸುಸ್ಥಿರವಾದ ಬಲವಾದ ಕಾನೂನುಗಳು ಜಾರಿಯಾದಲ್ಲಿ ಖಂಡಿತವಾಗಿಯೂ ಇಂತಹಾ ಅಪರಾಧ ಪ್ರಕರಣಗಳನ್ನು ತಡೆಗಟ್ತಬಹುದು. ಈ ಬಗೆಯ ಸುಧಾರಣೆಗಾಗಿ ನಮ್ಮಯ ಸರ್ಕಾರಗಳು ನೈತಿಕ ಸ್ಥೈರ್ಯವನ್ನು ಪ್ರದರ್ಶಿಸಬೇಕು.

ಅಂತಿಮವಾಗಿ ಹೇಳುವುದೆಂದರೆ ‘ಎಲ್ಲಾ ಅನಿಷ್ಟಗಳಿಗೂ ಶನೀಶ್ಚರನೇ ಕಾರಣ’ ಎಂದು ಸುಮ್ಮನಾಗದೆ ಬದಲಾವಣೆಯು ನಮ್ಮಿಂದಲೇ ಪ್ರಾರಂಭವಾಗಲಿ ಎಂದು ಇಂದಿನಿಂದಲೇ ನಾವೆಲ್ಲರೂ ಅದಕ್ಕಾಗಿ ಕಟಿಬದ್ದರಾದೆವಾದರೆ ಶಿಸ್ತುಬದ್ದ, ಸುಸಂಸ್ಕೃತ ಸಮಾಜ ಕಟ್ಟುವುದೇನೂ ಕಷ್ಟದ ವಿಚಾರವಲ್ಲ. ಅದೆಲ್ಲವನ್ನೂ ಬಿಟ್ಟು ಇದೇನು ಮಹಾ ಎಂದು ವಾರ್ತಾ ವಾಹಿನಿಗಳಲ್ಲಿ ಬರುವ ಅತ್ಯಾಚಾರ ವಿಚಾರದ ವರದಿಗಳನ್ನು ನೋಡುತ್ತಾ ಕುಳಿತೆವೆಂದರೆ ನಾಳೆ ನಮ್ಮಗಳ ಮನೆಯಲ್ಲಿಯೂ ಒಬ್ಬೊಬ್ಬ ಕೀಚಕನ ಉದಯವಾಗುತ್ತದೆ, ಎಚ್ಚರ! 

Comments

Submitted by kavinagaraj Wed, 07/23/2014 - 08:55

" ಬದಲಾವಣೆಯು ನಮ್ಮಿಂದಲೇ ಪ್ರಾರಂಭವಾಗಲಿ ಎಂದು ಇಂದಿನಿಂದಲೇ ನಾವೆಲ್ಲರೂ ಅದಕ್ಕಾಗಿ ಕಟಿಬದ್ದರಾದೆವಾದರೆ ಶಿಸ್ತುಬದ್ದ, ಸುಸಂಸ್ಕೃತ ಸಮಾಜ ಕಟ್ಟುವುದೇನೂ ಕಷ್ಟದ ವಿಚಾರವಲ್ಲ. " - ಈ ನಿಮ್ಮ ಮಾತಿಗೆ ಸಹಮತವಿದೆ. ಈ ಕುರಿತು ಜಾಗೃತಿ ಮೂಡಿಸಬೇಕಿದೆ.

Submitted by lpitnal Thu, 07/24/2014 - 09:29

ಆತ್ಮೀಯ ರಾಘವೇಂದ್ರ ಜಿ, ನಮಸ್ಕಾರ ಸರ್. ಸೂಕ್ತ ಸಮಯದಲ್ಲಿ ಪ್ರಚಲಿತ ವಿಷಯವೊಂದರ ಮೌಲಿಕ ಲೇಖನ ಇದಾಗಿದೆ. ಸಮಾಜ ತನ್ನ ತಪ್ಪು ತಿದ್ದಿಕೊಂಡು ಇಂತಹ ಘಟನೆಗಳ ಮೂಲಗಳಿಗೆ ಕಡಿವಾಣ ಹಾಕುವತ್ತ ಯೋಚಿಸಿ ಕಾರ್ಯತತ್ಪರರಾಗಬೇಕು, ಕೇವಲ ಮಾತಿನಲ್ಲಿಯೇ ಕಾಲಹರಣ ಮಾಡಿ, ಸುಮ್ಮನಾಗುವುದು, ಇತ್ತೀಚಿನ ಜಾಯಮಾನ. ಕಣ್ಣು ತೆರೆಸುವ ಲೇಖನ. ಧನ್ಯವಾದಗಳು