ಅವಳು - ಲಕ್ಷ್ಮೀಕಾಂತ ಇಟ್ನಾಳ

ಅವಳು - ಲಕ್ಷ್ಮೀಕಾಂತ ಇಟ್ನಾಳ

ಅವಳು  
ಅವಳು ನನ್ನವಳಾಗದಿದ್ದರೂ ಅದೆಷ್ಟನ್ನು ನೀಡಿ ಉಪಕರಿಸಿದೆ ದೈವ
ಚಲುವೇ ಮೈವೆತ್ತ ಹೆಜ್ಜೆಗಳಲ್ಲಿ, ನಾ ನಿಂತ ದಾರಿಯಲ್ಲೆ ಸಾಗುವಾಗ
ಅವಳನ್ನು ಕಣ್ದುಂಬಿಕೊಳ್ಳುವ ಕ್ಷಣಗಳನ್ನು ದಯಪಾಲಿಸಿಲ್ಲವೆ?
ಅವಳ ಮುಖದ ಮುಂಗುರುಳ ನೇವರಿಸಿದ ಗಾಳಿ ನನಗೂ ತಾಕಿರಬಹುದಲ್ಲವೆ!
ಅವಳು ಉಸಿರಿದ ಆ ಗಾಳಿ ನನ್ನ ದೇಹದೊಳಗೂ ಹರಿದಾಡಿರಬಹುದಲ್ಲವೆ
ನಮ್ಮ ದೃಷ್ಟಿಗಳು ಕೂಡಿದಾಗ,  ನನ್ನ ಕಣ್ಣೊಳು ಚುಂಬಕವೊಂದಿದ್ದರೆ?
ಅವಳು ಬಳುಕುತ್ತ ಸಾಗುವ ಹೆಜ್ಜೆಗಳಲ್ಲಿ ನನಗೂ ಹೆಜ್ಜೆಇಡುವ ಸುಖವಿದೆಯಲ್ಲಾ!
ಅವಳು ಕಂಡ ಕನಸುಗಳನ್ನು ಕಾಣದಿದ್ದರೂ, ಅವಳು ಕಂಡ ನೋಟಗಳನ್ನು ನಾನೂ ಕಂಡಿರುವೆನಲ್ಲವೇ?
ಅವಳ ಕಾಲೂರಿದ ಆ ಹೆಜ್ಜೆ ಗುರುತುಗಳಲ್ಲಿ, ಆ ಮಣ್ಣಲ್ಲೊಂದು ಕಣವಾದರೂ ನಾನಾಗಿದ್ದರೆ!
ಹಿಂಗಾಲುಗಳಲ್ಲಿ ಬೆಳಕನ್ನು ಚಿಮ್ಮುತ್ತ ಸಾಗಿ  ಹೋಗುತ್ತಿರುವ ಆ ಮಧುರ ನೆನಪುಗಳು
ಬೀಜವಾಗಿ ನನ್ನೆದೆಯಲ್ಲಿ ಇಂದಿಗೂ ನಾಟಿ, ಹಸಿರಾಗಿ ಅರಳಿ ನಿಂತಿಹವು!

ನಾನಾರೆಂದು ಅರಿಯದಿದ್ದರೂ, ನನ್ನೆಡೆ ಮುಗುಳು ನಗೆಯಾಡದಿದ್ದರೂ,
ಅಪರಿಚಿತವಲ್ಲ ಅವಳು  ನನಗೆ!
 
ಇಂದು ಹೇಗಿರುವಳೋ, ಎಲ್ಲಿರುವಳೋ, ನನ್ನಂತೆಯೇ
ಎಂಭತ್ತರ ವಯದಲ್ಲಿರುವಳೋ, ಅಥವಾ ……….? ಗೊತ್ತಿಲ್ಲಾ!
ಈಗಲೂ ಈ ದೀಪ ನಿನ್ನನ್ನೇ ಉಸಿರುತ್ತಿಹುದು, ಮೈಯೆಲ್ಲ ಕುಡಿಯಾದರೂ!

ನೀನೆಲ್ಲೇ ಇರು, ಇರು ಇಲ್ಲಾ ಇಲ್ಲದೇ ಇರು,
ನಿನ್ನ ಶೀತಲ ಕಣ್ಣು, ವದನಗಳಿಂದ ನನ್ನ ಯೌವ್ವನದ ಎದೆಯಲ್ಲಿ
ಆರದ ಪ್ರೇಮ ಹಚ್ಚಿಟ್ಟ ನಿನಗೆ ನೂರು ಸಲಾಮ್, ಗೆಳತಿ!

Rating
No votes yet

Comments

Submitted by nageshamysore Sun, 07/27/2014 - 11:55

ಇಟ್ನಾಳರೆ, ಎಲ್ಲರ ಬದುಕಲ್ಲಿ ಒಂದಲ್ಲ ಒಂದು 'ಅವಳು'ಗಳು ಬಿಡದೆ ಕಾಡುವ ಬಗೆಯನ್ನು ಸೊಗಸಾಗಿ ಹಿಡಿದ ಕವನ. ನಿಜವಾದ ಅವಳು ಕೊನೆಯವರೆಗು ಮಾಯವಾಗದೆ ಉಳಿಯುವ ಸಿಹಿ ಯಾತನೆಯೆ ಸೊಗಸಾದ ಅನುಭೂತಿ !

Submitted by lpitnal Sun, 07/27/2014 - 22:16

In reply to by nageshamysore

ನಾಗೇಶ್ ಜಿ, ನಮಸ್ಕಾರ. ತಮ್ಮ 'ಅವಳು' ಗಳು ವಿಮರ್ಶೆ ಮೆಚ್ಚುಗೆಯಾಯಿತು. ಬದುಕಿನ ದಾರಿಯಲ್ಲಿ ಕಣ್ಣಿಗೆ ತಾಗಿದ, ಎದೆಯಲ್ಲಿ ಬೆಚ್ಚಗೆ ಕುಳಿತ ಕೆಲವೊಂದು ಹೇಳಲಾರದ, ತೋಡಲಾರದ ಆಳ ನೆನಪುಗಳು ಜತನವಾಗಿ ಉಸಿರಿನೊಂದಿಗೆ ಬೆರೆಯುತ್ತ ಹೃದಯದಲ್ಲಿ ಮನೆಮಾಡಿ ಬಿಟ್ಟಿರುತ್ತವೆ. ತಮ್ಮ ಪ್ರತಿಕ್ರಿಯೆ ಖುಷಿ ನೀಡಿತು. ಧನ್ಯ.