ಬಾನುಲಿಯ ಬಾತ್ ಗಳು

ಬಾನುಲಿಯ ಬಾತ್ ಗಳು

ಚಿತ್ರ

ಇನ್ನೇನು ಇವುಗಳ ಕಾಲ ಮುಗಿದೇ ಹೋಯ್ತು ಅಂದುಕೊಳ್ತಿರುವಷ್ಟರಲ್ಲೇ, ನಿಮ್ಮ ಅಭಿಪ್ರಾಯ ತಪ್ಪು ಅಂತ ಮೇಲೆದ್ದು ಬಂದಿರೋದು ಇದು. ಹಳೆಯ ಕಾಲದಲ್ಲಿ ಇದನ್ನ ಮನೆಯಲ್ಲಿ ಇಟ್ಟುಕೊಳ್ಳುವುದೆಂದರೆ ಪ್ರತಿಷ್ಠೆಯ ಸಂಕೇತ, ಕೆಲವು ಕಟ್ಟಾ ಸಂಪ್ರದಾಯವಾದಿಗಳ ಮನೆಗೂ ಇದು ನುಸುಳಿ, ಮುಖ್ಯವಾದ ಸ್ಥಳವನ್ನು ಆಕ್ರಮಿಸಿಕೊಂಡು ಬಿಟ್ಟಿತ್ತು. ಉಳ್ಳವರ ಮನೆಯಲ್ಲಿ ಇದು ರಾರಾಜಿಸುತ್ತಿದ್ದರೆ, ಇಲ್ಲದವರು ಕದ್ದು ಮುಚ್ಚಿ ಇದರ ರಸಾಸ್ವಾದನೆಯಲ್ಲಿ ತೊಡಗುತ್ತಿದ್ದರು..... ಪೀಠಿಕೆ ಸ್ವಲ್ಪ ಉದ್ದವಾಯಿತೇನೋ? ಇನ್ನೂ ಹೆಚ್ಚಿಗೆ ಎಳೆದು ಓದುಗ ಮಹಾಶಯರ ತಾಳ್ಮೆ ಪರೀಕ್ಷಿಸಲಾರೆ! ಹೌದು, ನಿಮ್ಮ ಊಹೆ ಸರಿ ನಾನು ಹೇಳ್ತಾ ಇರೋದು ರೇಡಿಯೋ ಅನ್ನೋ ಶ್ರವ್ಯ ಮಾಧ್ಯಮದ ಬಗ್ಗೆ!

 

 

ಅಪ್ಪಟ ರೇಡಿಯೋ ಪ್ರೇಮಿ ಅಮ್ಮನ ಮಾತುಗಳಲ್ಲಿ ಕೇ/ಹೇಳುವುದಾರೆ, ಆಗ ಅವರ ತವರು ಮನೆಯಲ್ಲಿ ರೇಡಿಯೋದ “ರೇ” ಕೂಡ ಖರೀದಿಸುವ ಪರಿಸ್ಥಿತಿ ಇರಲಿಲ್ಲ, ಮನೆ ತುಂಬ ಮಕ್ಕಳು, ಬೆಂಗಳೂರಿನಲ್ಲಿ ಈಗ ಮಂತ್ರಿ ಮಾಲ್ ಆಗಿ ಹಲವರಿಗೆ ಉದ್ಯೋಗ ದೊರೆತಿರುವ ಸ್ಥಳದಲ್ಲಿ ಮುಂಚೆ ಇದ್ದ; ಮಲ್ಲೇಶ್ವರದ ಆಸುಪಾಸಿನ ಬಹುತೇಕ ಜನರಿಗೆ ಅನ್ನದಾತನಾಗಿದ್ದ ರಾಜಾ ಮಿಲ್ಲಿನಲ್ಲಿ ದುಡಿಯುವ ನಮ್ಮ ತಾತನಿಂದ ಮನೆ ನಡೆಯುತ್ತಿತ್ತು. ಒಬ್ಬರ ದುಡಿಮೆಯಿಂದ ನಿತ್ಯದ ಅಗತ್ಯಗಳನ್ನಷ್ಟೇ ಪೂರೈಸಲು ಆಗಿನ ಕಾಲದಲ್ಲಿ ಸಾಧ್ಯವಿತ್ತು, ಇನ್ನು ರೇಡಿಯೋದಂಥ ಲಗ್ಷುರಿಗೆ ಆಸ್ಪದವೆಲ್ಲಿ? ಮರ್ಫಿ ರೇಡಿಯೋ ಮುಂತಾದವಂತೂ ಆಗಿನ ಕಾಲದಲ್ಲಿ ವರದಕ್ಷಿಣೆಗೆ ಕೊಡುತ್ತಿದ್ದ ಸರಕು, ಕೆಳ ಮಧ್ಯಮ ವರ್ಗದವರ ಕನಸಿನಲ್ಲಷ್ಟೇ ಉಚಿತವಾಗಿ ಬರುವಂಥ ವಸ್ತುಗಳವು. ಇಂಥ ಸಂದರ್ಭದಲ್ಲಿ ರೇಡಿಯೋದ ಬಗ್ಗೆ ಇನ್ನಿಲ್ಲದ ಕುತೂಹಲ, ಆಸಕ್ತಿ ಅದರಲ್ಲಿ ಬರುವ ಹಾಡುಗಳನ್ನು ಕೇಳಬೇಕೆಂಬ ಹಂಬಲ ಅಮ್ಮನನ್ನು ಕಾಡಿತ್ತು. ಶಾಲೆ, ಮನೆ ಕೆಲಸಗಳೆಲ್ಲಾ ಮುಗಿದ ಮೇಲೆ, ಇಳಿ ಬಿಸಿಲಿನ ಸೊಂಪಾದ ಸಮಯದಲ್ಲಿ ರೇಡಿಯೋ ಕೇಳಲು ಅಮ್ಮ ಕಂಡುಕೊಂಡ ಏಕೈಕ ದಾರಿ, ಅವರ ಪಕ್ಕದ ಮನೆಯವರು ತಮ್ಮ ಮನೆಯ ಕಿಟಕಿಯ ಬಳಿ ಸ್ಥಾಪಿಸಿ, ಹಾಕುತ್ತಿದ್ದ ರೇಡಿಯೊ!!!! ಕೆಲಸ ಮುಗಿಸಿ, ಯಾರಿಗೂ ತೊಂದರೆಯಾಗದಂತೆ, ಪಕ್ಕದ ಮನೆಯವರ ವೈಯಕ್ತಿಕತೆಗೆ ಭಂಗ ಬರದಂತೆ ಅವರ ಕಿಟಕಿಯ ಬಳಿ ಹೋಗಿ ನಿಂತು/ ಕುಳಿತು ನಮ್ಮಮ್ಮ ರೇಡಿಯೋ ಕೇಳುತ್ತಿದ್ದರಂತೆ!

 

ಅಲ್ಲಿಂದ ಶುರುವಾದ ಅವರ ರೇಡಿಯೋ ಹಂಬಲ, ಮುಂದೆ ಅವರಿಗೆ ಮದುವೆಯಾದ ನಂತರವೂ ಮುಂದುವರೆದಿತ್ತು, ಅವರ ರೇಡಿಯೋ ಅಭಿಲಾಶೆಗೆ ಅಪ್ಪನ ಜೊತೆ ಕೂಡಾ ದೊರಕಿತ್ತು. ವಿಜ್ಞಾನ ಮುಂದುವರಿದಂತೆ ರೇಡಿಯೋಗಳೂ ಅಗ್ಗವಾಗಿ, ಅಕ್ವೇರಿಯಂನಂತಿದ್ದ ದೊಡ್ಡ ರೇಡಿಯೋಗಳು ಮಾಯವಾಗಿ ಹಲವರ ಮನೆಯಲ್ಲಿ ಚಿಕ್ಕ ಪುಟ್ಟ ರೇಡಿಯೋಗಳು ಪ್ರತ್ಯಕ್ಷವಾದವು. ಅಪ್ಪ ಅಮ್ಮನ ಇಚ್ಛೆಯಂತೆ ನಮ್ಮ ಮನೆಯಲ್ಲಿ ಪುಟಾಣಿ ರೇಡಿಯೋ ಪಾದಾರ್ಪಣ ಮಾಡಿತ್ತು...,. ನಮ್ಮ ಚಿಕ್ಕಂದಿನಲ್ಲಿ ಕ್ಯಾಸೆಟ್ ಕೂಡಾ ಹಾಕಬಹುದಾದ “ಟೂ-ಇನ್-ಒನ್” ಮನೆಯನ್ನು ಪ್ರವೇಶಿಸಿತ್ತು. ಬೆಳಗಿನ ದೈನಂದಿನ ಕೆಲಸ ಕಾರ್ಯಗಳನ್ನು ಆರಂಭಿಸುವ ಮುನ್ನ ಅಪ್ಪ-ಅಮ್ಮ ಮಾಡುತ್ತಿದ್ದ, ಈಗ ಮಾಡುತ್ತಿರುವ ಹಾಗೂ ಮುಂದೆಯೂ ಮಾಡುವ ಮೊಟ್ಟಮೊದಲ ಕೆಲಸವೆಂದರೆ ರೇಡಿಯೋ ಆನ್ ಮಾಡುವುದು 

 

ಅಮ್ಮನ ದೆಸೆಯಿಂದ ನಮ್ಮ ಚಿಕ್ಕಂದಿನಲ್ಲಿ ನಾವು ಕೇಳುತ್ತಿದ್ದ ರೇಡಿಯೋ ಹೆಚ್ಚಿನ ಏರಿಳಿತಗಳನ್ನು ಕಾಣದೇ, ಆಕಾಶವಾಣಿ-ವಿವಿಧ ಭಾರತಿಯಲ್ಲಿ ಬೆಳಗಿನ ಸಂಸ್ಕೃತ ವಾರ್ತೆ, ಝೇಂಕಾರ, ನಂದನ, ಮಕ್ಕಳ ಕಾರ್ಯಕ್ರಮಗಳು, ಬಾನುಲಿ ನಾಟಕಗಳು, ಶಾಸ್ತ್ರೀಯ ಸಂಗೀತ, ಕೃಷಿ ಸಮಾಚಾರ, ಕ್ರಿಕೆಟ್ ಕಮೆಂಟರಿ ಇವುಗಳಿಗಷ್ಟೇ ಸೀಮಿತವಾಗಿತ್ತು. ಅವರವರ ಆಸಕ್ತಿಗೆ ತಕ್ಕಂತೆ ದಿನದ ಕೆಲವೇ ಗಂಟೆಗಳಷ್ಟೇ ರೇಡಿಯೋ ಕೇಳುವುದು ಅಂದಿನವರ ಜಾಯಮಾನ...

 

ಈ ತೆರದಲ್ಲಿ ದಶಕಗಳ ಕಾಲ ಜನಪ್ರಿಯವಾಗಿದ್ದ ಆಕಾಶವಾಣಿ ಮುಂದೆ ಒಂದು ದಿನ ಟಿವಿಯ “ಹಾವಳಿ” ಹೆಚ್ಚಾದಂತೆ, ಕೇಬಲ್ ಟಿವಿಯ ಕಾರ್ಯಕ್ರಮಗಳ ನಡುವೆ ಮಕಾಡೆ ಮಲಗಿಯೇ ಬಿಟ್ಟಿತ್ತು ಎಂದರೆ ಅತಿಶಯೋಕ್ತಿಯಲ್ಲ. ಟಿವಿಯಂತಲ್ಲ, ಶ್ರವ್ಯ ಮಾಧ್ಯಮವಾದ್ದರಿಂದ ಅದರ ಎದುರಿಗೆ ಕುಳಿತೇ ನೋಡುವ ಪ್ರಮೇಯವಿಲ್ಲ, ಓಡಾಡುತ್ತಿದ್ದರೆ ಸಾಕು, ಎಲ್ಲಿದ್ದರೂ ಕೇಳಬಹುದು ಎಂಬ ಧನಾತ್ಮಕ ಅಂಶಗಳಿದ್ದರೂ, ಯಾವ ಸಮಯದಲ್ಲಾದರೂ ಬರುವ ಟಿವಿ ಕಾರ್ಯಕ್ರಮಗಳ ಮುಂದೆ, ರೇಡಿಯೋ ಮಂಕಾಗತೊಡಗಿತ್ತು! ದೂರದರ್ಶನದಲ್ಲೋ ನೂರಾರು ಚಾನೆಲ್ಲುಗಳು, ಹಲವಾರು ಭಾಷೆಗಳು, ಮಕ್ಕಳಿಗೇ ಪ್ರತ್ಯೇಕ ಚಾನೆಲ್, ಪ್ರಾಣಿ-ಪಕ್ಷಿಗಳ ಬಗ್ಗೆ ಮತ್ತೊಂದು, ಕ್ರೀಡೆಗಳಿಗೆ ಮಗದೊಂದು, ಅತ್ತೆ ಸೊಸೆಯರ ಕಾಳಗಕ್ಕೊಂದು, ಸಿನೆಮಾಗಳಿಗೊಂದು ಹೀಗೆ ಮೂರ್ಖ ಪೆಟ್ಟಿಗೆಯಲ್ಲಿ ಮನರಂಜನೆಯ ಸರಕಿನ ಆಕ್ರಮಣದಿಂದ ಹೊಸತೇನೂ ಹೆಚ್ಚಿಗಿಲ್ಲದ ರೇಡಿಯೋ ಅನಾಥವಾಗಿಬಿಟ್ಟಿತ್ತು, ಅಲ್ಲೊಬ್ಬರು ಇಲ್ಲೊಬ್ಬರು ಅಭಿಮಾನಿಗಳ ತೆಕ್ಕೆಯಲ್ಲಿ!

 

ಆದರೂ ಎಷ್ಟೆಂದರೂ ಬದಲಾವಣೆ ಜಗದ ನಿಯಮ, ದೃಶ್ಯಮಾಧ್ಯಮದ ಏಕತಾನತೆಯಿಂದ ಬಳಲಿದ್ದ ಸಮಯದಲ್ಲೋ ಅಥವಾ ಒಂದೇ ಕಡೆ ಕುಳಿತು ಟಿವಿಯಂತೆ ನೋಡಬೇಕಾದ ಅಗತ್ಯ ಇಲ್ಲದ್ದರಿಂದಲೋ ಅಥವಾ ಜನರಿಗೆ ತಮ್ಮ ಓಡಾಟದ/ಧಾವಂತದ ಸಮಯದಲ್ಲೂ ಮನರಂಜನೆ ಅಗತ್ಯ ಎನ್ನಿಸಿದ್ದರಿಂದಲೋ, ಯಾವುದೋ ಒಂದು ಸುಸಂದರ್ಭದಲ್ಲಿ ರೇಡಿಯೋ ತನ್ನ ಮೇಲೆ ಬಿದ್ದಿದ್ದ ಧೂಳು ಕೊಡವಿ ಎದ್ದೇ ಬಿಟ್ಟಿತ್ತು! ಬರೀ ದೂರದರ್ಶನವಷ್ಟೇ ಏಕೆ ಹಲವಾರು ವಾಹಿನಿಗಳನ್ನು ಹೊಂದಿರಬೇಕು ಅನ್ನುತ್ತಾ, ಎಫ್.ಎಂ.ತರಂಗಾಂತರದಲ್ಲಿ ರೇಡಿಯೋ ನೈಂಟಿ ಒನ್.ಒನ್, ರೇಡಿಯೋ ಒನ್, ರೇಡಿಯೊ ಮಿರ್ಚಿ, ಬಿಗ್ ಎಫ್. ಎಮ್, ಇಂಡಿಗೋ ಹೀಗೆ ಹತ್ತು ಹಲವು ಖಾಸಗಿ ವಾಹಿನಿಗಳು ಆಕಾಶವಾಣಿ-ವಿವಿಧ ಭಾರತಿಯೊಂದಿಗೆ ಸ್ಪರ್ಧಿಸುತ್ತಾ, ಕೇಳುಗರ ಮನಸ್ಸು-ಕಿವಿಯೆಡೆಗೆ ದಾಂಗುಡಿ ಇಟ್ಟವು.

 

ತದನಂತರ ಸುಮಾರು ಒಂದು ದಶಕದಿಂದೀಚೆಗೆ ಯಾವ ಬಸ್ಸಿನಲ್ಲೇ ಆಗಲಿ, ಆಟೋ ರಿಕ್ಷಾ ದಲ್ಲೇ ಆಗಲಿ, ಕಾರು-ಕ್ಯಾಬಿನಲ್ಲೇ ಆಗಲಿ.. ಎಲ್ಲಿ ಕೇಳಿದರಲ್ಲಿ ಎಫ್, ಎಮ್ ಜಮಾನಾ! ರೇಡಿಯೋ ಜಾಕಿ (ಆರ್.ಜೆ) ಎಂಬ ಹೊಸ ಉದ್ಯೋಗದ ಆವಿಷ್ಕಾರ, ಕಿವಿ ಗಡಚಿಕ್ಕುವಂತೆ, ನಿಶ್ಶಬ್ದದ ಸೊಬಗನ್ನೇ ಮರೆಯುವಂತೆ ಮಾಡುತ್ತಿರುವ “ಡಿಂಗ್-ಚಾಕ್” ಸಂಗೀತ!!! ಹೊಸದಾಗಲೀ ಹಳೆಯದಾಗಲೀ ಎಲ್ಲಾ ಚಲನಚಿತ್ರ ಗೀತೆಗಳನ್ನೂ ಶ್ರೋತೃಗಳಿಗೆ ಪರಿಚಯಿಸುವ ಸತತ ಪ್ರಯತ್ನ. ಮನರಂಜನೆಯ ಜೊತೆಗೇ ಹಲವಾರು ಮಾಹಿತಿಯುಕ್ತ ಕಾರ್ಯಕ್ರಮಗಳ ನಡುವೆ ರೇಡಿಯೋ ತನ್ನ ಕಳೆದುಹೋಗಿದ್ದ ವರ್ಚಸ್ಸನ್ನೂ ಹೆಚ್ಚಿಸಿಕೊಂಡಿತ್ತು.

 

ಆದರೆ ಹೊಸದರಲ್ಲಿ ಅಗಸ ಗೋಣಿಯನ್ನೂ ಎತ್ತೆತ್ತಿ ಒಗೆವಂತೆ ಕೆಲವು ಆರ್.ಜೆ.ಗಳೂ ಮೊದಲಿದ್ದ ತಮ್ಮ ಸತ್ವಯುತ ಮಾತುಗಳನ್ನು ಬಿಟ್ಟು, ತಮ್ಮ ವಟವಟದಿಂದ ಬೋರ್ ಹೊಡೆಸತೊಡಗಿದ್ದಾರೆ, ಕೆಲವರ ಕನ್ನಡ ದೇವರಿಗೇ ಪ್ರೀತಿ ಎನ್ನುವಂತಿದ್ದರೆ ಕೆಲವರು ಹೆಸರಿಗೆ ಮಾತ್ರ ಕನ್ನಡದಲ್ಲಿ ಟಾಕ್ ಮಾಡ್ತಾ ಇದ್ದಾರೆ.. ನಾವೂ ಲಿಸನ್ ಮಾಡ್ತಾ ಇದ್ದೀವಿ. ಹಾಡುಗಳ ರಚನೆಗೆ ಕಷ್ಟಪಟ್ಟ ಗೀತರಚನೆಕಾರನ ಹೆಸರು ಬೆಳಕಿಗೇ ಬರುತ್ತಿಲ್ಲ ಜೊತೆಗೆ, ಹಾಡು ಯಾವ ಚಿತ್ರದ್ದು? ಯಾರು ನಟಿಸಿದ್ದು ಎನ್ನುವುದನ್ನೂ ತಿಳಿಯದಾಗಿದ್ದೇವೆ... ತನ್ಮಧ್ಯೆ, ಬರೀ ಹಿಂದಿ ಹಾಡುಗಳನ್ನೇ ಹಾಕುವುದರಿಂದ ದಾಳಿಗೊಳಗಾದ ವಾಹಿನಿಯೊಂದು ಈಗ ಹಿಂದಿ ಹಾಡುಗಳ ಕಡೆ ತಲೆ ಹಾಕಿ ಮಲಗುವುದನ್ನೂ ನಿಲ್ಲಿಸಿದೆ 

 

ಅಮ್ಮ ಈ ಎಫ್.ಎಂ.ಗಳೂ ಚೆನ್ನಾಗೇನೋ ಇವೆ ಆದರೆ ಹಳೆಯ ಸ್ಟೇಷನ್ನೇ ಚಂದ ಕಣೇ ಅಂತಿರ್ತಾರೆ! ನಾವುಗಳು ಹೊಸದಕ್ಕೆ ಟ್ಯೂನ್ ಮಾಡುತ್ತಾ, ಹಳೆಯದನ್ನೂ ಬಿಡದೇ, “ಹೊಸ ಚಿಗುರು ಹಳೆ ಬೇರು ಕೂಡಿದರೆ ಮರ ಸೊಗಸು” ಎಂಬ ವಿಶ್ವಾಸದಲ್ಲಿದ್ದೇವೆ. ಇವೆಲ್ಲದರ ನಡುವೆಯೂ ರೇಡಿಯೋ ಇಷ್ಟು ಸುಲಭವಾಗಿ ಮರೆಯಾಗುವ ವಸ್ತು ನಾನಲ್ಲ ಅಂತ ಕಿರುನಗೆ ಸೂಸುತ್ತಿದೆ.

*****

 

ಫೋಟೋ ಕ್ರೆಡಿಟ್: ಗೂಗಲ್ ಮಹಾಶಯ‌ :)

 

Rating
No votes yet

Comments

Submitted by Gururaj Halmat Mon, 08/04/2014 - 13:24

In reply to by kavinagaraj

ಶ್ರೀ ಕವಿನಾಗರಾಜರೇ..ನಿಮ್ಮ ಬಾನುಲಿಯ ಬಾತ್ ಗಳು ಓದುತ್ತಿದ್ದರೆ.. ತುಂಬಾ ಖುಷಿಯನ್ನು ತಂದುಕೊಡುತ್ತದೆ. ನಮ್ಮ ಮಿತ್ರ ಡಾ||ಎ.ಎಸ್.ಶಂಕರನಾರಾಯಣ್ ಇವರು ಬಾನುಲಿಯ ಭಾಷಣಗಳ ಬಗ್ಗೆಯೇ ಪಿ.ಹೆಚ್.ಡಿ. ಪ್ರಬಂಧ ಮಂಡಿಸಿ, ಡಾಕ್ಟರೇಟ್ ಪಡೆದವರು. ಹಿಂದೆ ಈ ದೃಶ್ಯ ಮಾಧ್ಯಮ ಬರುವ ಮುನ್ನ ಬಾನುಲಿಯ ಮೂಲಕ ಅನೇಕ ಕವಿಗಳು ಜನಸಾಮಾನ್ಯರಿಗೆ ಹತ್ತಿರವಾದದ್ದು ಮತ್ತು ಬೆಳೆದದ್ದು.. ನಿಮ್ಮ ಬಾನುಲಿ ಬಾತ್ ಇಷ್ಟವಾಯಿತು.