ಕಥೆ: ಪರಿಭ್ರಮಣ..(46)

ಕಥೆ: ಪರಿಭ್ರಮಣ..(46)

( ಪರಿಭ್ರಮಣ..45ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ಪೋನಿನಲ್ಲಿ ಅವರ ದನಿ ಕೇಳಿ ಬರುತ್ತಿದ್ದಂತೆ, 'ಸವಾಡಿ ಕಾಪ್' ಎಂದ ಶ್ರೀನಾಥ.

ಅತ್ತ ಕಡೆಯಿಂದ ನೀಳ ನಿಟ್ಟುಸಿರು ಬೆರೆತ ದನಿಯಲ್ಲಿ ಮತ್ತೆ ತೇಲಿ ಬಂದಿತ್ತು ಭಿಕ್ಕು ಸಾಕೇತರ ದನಿಯಲ್ಲಿ, ಮತ್ತದೆ 'ಅಮಿತಾಭ' ಉವಾಚ. ಅರೆಗಳಿಗೆಯ ಮೌನದ ನಂತರ ಅವರೆ ಕೇಳಿದ್ದರು -

'ಅಂತು ಕೊನೆಗೂ ನನ್ನನ್ನು ಸಂಪರ್ಕಿಸಬೇಕೆಂದು ನಿರ್ಧರಿಸಿಬಿಟ್ಟೆ...?' 

' ಹೌದು.. ಇಂದು ಇದ್ದಕ್ಕಿದ್ದಂತೆ ನೀವು ಕೊಟ್ಟಿದ್ದ ವಿಳಾಸದ ಕಾರ್ಡು ಕಣ್ಣಿಗೆ ಬಿದ್ದು, ತಟ್ಟನೆ ನಿಮ್ಮ ಅವತ್ತಿನ ಮಾತುಗಳ ನೆನಪಾಯಿತು... ಆ ಪ್ರೇರಣೆಯಿಂದಲೆ ನಿಮ್ಮನ್ನು ತಕ್ಷಣವೆ ಸಂಪರ್ಕಿಸಲು ನಿರ್ಧರಿಸಿಬಿಟ್ಟೆ..'

'ಒಳ್ಳೆಯದಾಯ್ತು.. ಈಗ ಮಗುವಿನ ಆರೋಗ್ಯ ಹೇಗಿದೆ?' ಎಂದರು ಮಾಂಕ್ ಸಾಕೇತ್. 

ಈಗ ಸರಕ್ಕನೆ ಬೆಚ್ಚಿ ಬೀಳುವ ಸರದಿ ಶ್ರೀನಾಥನದಾಗಿತ್ತು - ಮಗುವಿನ ಆರೋಗ್ಯದ ಕುರಿತು ಇವರಿಗೆ ಹೇಗೆ ತಿಳಿಯಿತು?! ಆ ಆಘಾತದಿಂದಾದ ಗೊಂದಲದ ನಡುವೆಯೂ ಸಾವರಿಸಿಕೊಂಡು, ತನಗಾದ ವಿಸ್ಮಯವನ್ನು ತಾತ್ಕಾಲಿಕವಾಗಿ ಬದಿಗಿರಿಸುತ್ತ ಮಾರುತ್ತರವಿತ್ತ ಶ್ರೀನಾಥ - 

'ಇನ್ನು ಸೀರಿಯಸ್ಸೆ ಇದೆ.. ಸದ್ಯಕ್ಕೆ ಆಸ್ಪತ್ರ್ಯಲ್ಲಿ ಚಿಕಿತ್ಸೆ ನಡೆಯುತ್ತಿದೆ.. ಆದರೆ ಮಾಸ್ಟರ....?'

'ಸದ್ಯಕ್ಕೆ, ಅದು ನನಗೆ ಹೇಗೆ ತಿಳಿಯಿತೆಂಬ ಕುತೂಹಲದ ಚಿಂತೆ ಬಿಡು... ನಿನ್ನೊಡನೆ ಮಾತಾಡುವ ಮೊದಲು ನನಗೂ ತಿಳಿದಿರಲಿಲ್ಲ...  ನನ್ನನ್ನು ಹೀಗೆ ದಿಢೀರನೆ ಸಂಪರ್ಕಿಸಲು ಪ್ರೇರೇಪಿಸಿದ ಹಿನ್ನಲೆಯೇನು, ಸಂಪರ್ಕಿಸಲು ಪ್ರಚೋದಕವಾದ ಘಟನೆಗಳಾವುದು ಎಂದು ಅವಲೋಕಿಸಿ ನೋಡಲೆತ್ನಿಸಿದೆನಷ್ಟೆ - ಬರಿಯ ಕುತೂಹಲಕ್ಕಾಗಿ...'

ತಾನು ಜತೆಯಲ್ಲಿ ಮಾತನಾಡುತ್ತಿರುವಂತೆಯೆ ಅವರ ಪರಿವೀಕ್ಷಣಾ ಸಾಮರ್ಥ್ಯ, ಆ ಪೋನಿನ ತಂತಿಯ ಮೂಲಕವೆ ಹಾದು ತನ್ನ ತಲೆಯೊಳಗೆ ಪ್ರವಹಿಸಿ, ಒಳಹೊಕ್ಕು ಅಲ್ಲೇನಿದೆಯೊ ಎಂದೆಲ್ಲ ಕೆದಕಿ ನೋಡಿ ವಾಪಸ್ಸು ಬಂದಷ್ಟೆ ಸರಳವಾಗಿ ಹೇಳುತ್ತಿರುವರಲ್ಲ? ಇವರಿಗೆ ಮನಸನ್ನು ಒಳಹೊಕ್ಕು ನೋಡುವಂತಹ ವಿಶೇಷ ಶಕ್ತಿಯಿದೆಯೆ? ಎಂದುಕೊಳ್ಳುತ್ತಿರುವಂತೆಯೆ ಮತ್ತೆ ಮಿಂಚಿನಂತೆ ತೂರಿ ಬಂದಿತ್ತು ಅವರ ಮಾತು...

'ನನಗಾವ ವಿಶೇಷ ಶಕ್ತಿಯಿದೆಯೆಂಬ ಜಿಜ್ಞಾಸೆ, ಆತಂಕವನ್ನು ಬಿಡು. ಈ ಇಹ ಜಗದ ಪರಿವೆ, ಗೊಡವೆಯನ್ನು ಬಿಟ್ಟವರಿಗೆ ಮತ್ತೊಬ್ಬರ ಮನದಲ್ಲೇನಿದೆಯೆಂದು ತಿಳಿದುಕೊಂಡು ಆಗಬೇಕಾದ್ದೇನೂ ಇಲ್ಲ... ಆ ಆಸಕ್ತಿಯೂ ನನಗಿಲ್ಲ. ಯಾವುದೆ ದುರುದ್ದೇಶವಿಲ್ಲದೆ ಹಿನ್ನಲೆಯನ್ನು ಅರಿಯಲೆತ್ನಿಸಿದಾಗ ಅದಕ್ಕೆ ಸಂಬಂಧಪಟ್ಟ ಅಂಶಗಳು ಪುಟ್ಟ ಸಾರಾಂಶದ ರೀತಿಯಲ್ಲಿ ಮನಃಪಟಲದಲ್ಲಿ ತಾನಾಗೆ ಮೂಡಿದಂತೆ ತೇಲಿ ಬರುತ್ತದಷ್ಟೆ..'

' ಅಂದರೆ...ಪ್ರವಾಸದ ಹೊತ್ತಿನಲ್ಲಿ ನಡೆದ ಆ ಆಘಾತ ನೀಡಿದ ಘಟನೆಯ ಬಗ್ಗೆಯೂ ನಿಮಗೆ ಗೊತ್ತಾಗಿ ಹೋಗಿರಬೇಕು...?' ಕುಗ್ಗಿದ ದನಿಯಲ್ಲೇ ಪ್ರಶ್ನಿಸಿತ್ತು ಶ್ರೀನಾಥನ ತುಟಿ. ಮಗುವಿನ ಬಗ್ಗೆ ಅರಿತುಕೊಂಡ ಅತೀಂದ್ರಿಯ ಶಕ್ತಿಯಂತೆಯೆ ತನ್ನ ಮತ್ತು ಕುನ್. ಲಗ್ ನಡುವಿನ ಸಂಭಾಷಣೆಯೂ ತಿಳಿದುಹೋಗಿರಬೇಕೆಂಬ ಖೇದ ಭಾವ ಅಲ್ಲಿ ಎದ್ದು ಕಾಣುತ್ತಿತ್ತು. 

'ಪ್ರವಾಸ..?' ಎಂದವರೆ ಒಂದರೆ ಗಳಿಗೆ ಮಾತು ನಿಲ್ಲಿಸಿದರು ಆ ಕುರಿತು ಅಷ್ಟೇನೂ ಗೊತ್ತಿಲ್ಲದಿರುವ ದನಿಯಲ್ಲಿ. ಬಹುಶಃ ಏನಾಗಿರಬಹುದೆಂದು ಮನಃ ಪಟಲದಲ್ಲಿ ಚಿತ್ರಣ ಮೂಡಿಸಿಕೊಳ್ಳುತ್ತಿದ್ದರೊ ಏನೊ? ಅರೆಗಳಿಗೆಯ ಸ್ಥಬ್ದತೆಯ ನಂತರ 'ಅಮಿತಾಭ' ಎಂದುದ್ಗರಿಸುತ್ತ 'ನಿನಗಾ ವಿಷಯವೂ ಗೊತ್ತಾಗಿ ಹೋಯ್ತೆ?' ಎಂದರು ಅನುಕಂಪ ತುಂಬಿದ ದನಿಯಲ್ಲಿ. 

ಅವರು ಯಾವ ವಿಷಯದ ಕುರಿತು ಹೇಳುತ್ತಿದ್ದಾರೆಂದು ಗೊತ್ತಾದರೂ, ಮತ್ತೊಮ್ಮೆ ಪರೀಕ್ಷಿಸಿ ನೋಡುವ ಉದ್ದೇಶದಿಂದ, 'ಯಾವ ವಿಷಯ?' ಎಂದು ಕೇಳಿದ ಶ್ರೀನಾಥ.

ಅತ್ತಕಡೆಯಿಂದ ಮತ್ತೆ ನಕ್ಕ ದನಿ ಕೇಳಿಸಿತು...' ಮತ್ತೆ ಪರೀಕ್ಷೆ? ಹ್ಹ ಹ್ಹ ಹ್ಹ... ಚಿಂತೆಯಿಲ್ಲ. ನಿನ್ನ ಇತ್ತೀಚಿನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ ಆ ವ್ಯಕ್ತಿಯ ಜೀವನದಲ್ಲುಂಟಾದ ಅಷ್ಟೆಲ್ಲ ಕೋಲಾಹಲ ಸಾಲದೆಂಬಂತೆ, ಅವಳ ಕೆಲಸ ಕಳೆದುಹೋಗಲೂ ನೀನೆ ಪರೋಕ್ಷ ಕಾರಣವಾಗಿದ್ದು..' 

ಇನ್ನವರ ಅತಿ ಮಾನುಷ ಶಕ್ತಿಯ ಬಗ್ಗೆ ಯಾವುದೆ ಅನುಮಾನ ಉಳಿದಿರಲಿಲ್ಲ ಶ್ರೀನಾಥನಿಗೆ. ಎಲ್ಲವನ್ನು ಅರಿಯಬಲ್ಲ ಮಹಾನ್ಮಹಿಮ ಜ್ಞಾನವುಳ್ಳವರಲ್ಲಿ ಯಾವುದನ್ನೆ ಆದರೂ ಬಚ್ಚಿಟ್ಟು ತಾನೆ ಏನು ಪ್ರಯೋಜನ? ಎಂಬ ಶರಣಾಗತ ಭಾವ ಮೂಡಿ ಮಿಕ್ಕೆಲ್ಲ ತರದ, 'ನಡುವಣ ಸೇತುವೆ'ಯಾಗುವ ಮಾತಿನ ಹೂರಣದ ಅಗತ್ಯವೆಲ್ಲ ಹುಡಿ ಮಣ್ಣಿನಂತೆ ಉದುರೆದ್ದುಹೋಗಿತ್ತು. ಅದೇ ಭಾವ ಸಂಸರ್ಗದಲ್ಲಿ ದೀನನಾಗಿ ಕಾಲು ಹಿಡಿದಷ್ಟೆ ದೈನ್ಯ ಭಾವದ ದನಿಯಲ್ಲಿ ಕೇಳಿದ್ದ ಶ್ರೀನಾಥ -

' ಮಾಸ್ಟರ್ ಸಾಕೇತ್... ನಾನೀಗ ಪೂರ್ತಿ ಗೊಂದಲದಲ್ಲಿ ಸಿಲುಕಿ, ಏನು ಮಾಡಲೂ ತೋಚದೆ ಅಸಹಾಯಕನಾಗಿ ಹೋಗಿದ್ದೇನೆ... ನನ್ನ ಜೀವನದಲ್ಲಿ ಇದೆಲ್ಲಾ ಯಾಕಾಗುತ್ತಿದೆ, ಏನು ಕಾರಣದಿಂದ ಘಟಿಸುತ್ತಿದೆ ಎಂದು ಗೊತ್ತಾಗುತ್ತಿಲ್ಲ... ಅದರಲ್ಲೂ ಒಂದು ವಿಷಯವಂತೂ ಸದಾ ಮತ್ತಷ್ಟು ಗೊಂದಲಕ್ಕೆ ದೂಡುತ್ತಿದೆ..'

' ಯಾವ ವಿಷಯ?' ಸಹನೆಯಿಂದ ಅವನ ಮಾತನ್ನಾಲಿಸುತ್ತಿದ್ದವರ ಬಾಯಿಂದ ಹೊರಟು ಬಂದಿತ್ತು ಸಂಕ್ಷಿಪ್ತ ದನಿಯ ಪ್ರಶ್ನಾರ್ಥಕ. 

' ಜಯ ಅಪಜಯಗಳ ನಡುವಿನ ಸತತ, ನಿರಂತರ ಹೊಯ್ದಾಟ, ಹೊಡೆದಾಟ...ನೀರಿನಲೆಗಳಂತೆ ಒಂದೆಡೆ ಏಕಾಏಕಿ ವಿಜಯದ ಅಬ್ಬರ ಗೆಲುವಿನ ನಗೆ ಬೀರಿಸಿದರೆ ಮತ್ತೊಂದೆಡೆ ಅದೇ ತೀವ್ರತೆಯಲ್ಲಿ ಧಾಳಿಯಿಕ್ಕಿದ ಸೋಲೊಂದು ಪಾತಾಳಕ್ಕೆ ದೂಡಿಬಿಡುವ ಪರಿ.. ಗೆದ್ದ ಗೆಲುವಿಗೆ ಸಂಭ್ರಮಿಸಬೇಕೊ ಅಥವಾ ಬಿದ್ದ ಸೋಲಿಗೆ ಮಣ್ಣಾಗಲಿಲ್ಲವೆಂದು ನಿಟ್ಟುಸಿರು ಬಿಡಬೇಕೋ ಅರಿವಾಗದ ಸಂದಿಗ್ದ, ಗೊಂದಲ, ನಿರಂತರ ಅತಂತ್ರ ಭಾವ..'

' ನನಗೆ ಪೂರ್ಣವಾಗಿ ಅರ್ಥವಾಗಲಿಲ್ಲ..'

' ಅರ್ಥಾತ್ ಒಂದೆಡೆ ಪ್ರಾಜೆಕ್ಟಿನುದ್ದಕ್ಕೂ ಎಡಬಿಡದೆ ಕಾಡಿದ್ದ ಆತಂಕ, ಪಿತೂರಿಗಳ ಸರಮಾಲೆಯಿಂದ ತತ್ತರಿಸುವಂತಾಗಿದ್ದರೆ, ಮತ್ತೊಂದೆಡೆ ಯಾರೊ ಅಪ್ಸರೆಯೆ ಬಂದು ಕಾಪಾಡಿದಂತೆ, ಮುಹೂರ್ತದ ಸಮಯಕ್ಕೆ ಸರಿಯಾಗಿ ಯಾವುದೊ ಕಾಣದ ಹಸ್ತದ ಸಹಾಯ ಸಿಕ್ಕಿದಂತಾಗಿ ಕೊನೆಗಳಿಗೆಯಲ್ಲಿ ಬಿಕ್ಕಳಿಸಿ ದಕ್ಕಿಸಿಕೊಂಡಂತಾಗುವ ಸಂಘಟನೆಗಳು.. ಒಂದೆ ಎರಡೆ? ಅದೆಷ್ಟು ನಡೆದವು ಈ ಪ್ರಾಜೆಕ್ಟಿನುದ್ದಕ್ಕೂ ? ಇನ್ನು ಏಕಾಂತದ ಪೀಡನೆಯ ಭಾವ, ಸರೀಕರಲ್ಲಿ ಕೀಳರಿಮೆಯನ್ನು ಗೆಲ್ಲಬೇಕೆಂಬ ಅದಮ್ಯ ಲಾಲಸೆ, ಅದು ಹೊಂದಿಸಿ ಕೊಟ್ಟ ಕೆಳೆ, ಸಂಬಂಧಗಳಲ್ಲಿ - ಮತ್ತದೆ ಏರುಪೇರಿನ ವಿಕಟಾಟ್ಟಹಾಸ; ಕೊನೆಗೆ ಮಗುವಿನ ಈ ವಿಷಮ ಪರಿಸ್ಥಿತಿ - ಹೀಗೆ ಯಾವುದನ್ನೆ ತೆಗೆದುಕೊಂಡರು, ಯಾವ ಪುಟವನ್ನೇ ತೆರೆದು ನೋಡಿದರೂ ಬರಿಯ ಇದೆ ರೀತಿಯ ಗೊಂದಲಪೂರ್ಣ ಏರಿಳಿತದ ಜಿಜ್ಞಾಸೆಯೆ ಕಾಣುತ್ತದೆಯೆ ಹೊರತು ಪ್ರಶಾಂತ ಸಮುದ್ರದ ಪ್ರಬುದ್ಧತೆ ಕಾಣುವುದಿಲ್ಲ.. ಮಾನಸಿಕವಾಗಿ ಅದು ನನ್ನನ್ನು ಪೂರ್ತಿ ದಿಕ್ಕೆಡಿಸಿ ಬಿಟ್ಟಿದೆಯೇನೊ ಅನಿಸಿಬಿಟ್ಟಿದೆ, ತನ್ನೆಲ್ಲಾ ತರದ ಗೋಜಲು ಗೋಜಲಿನ ಸಿಕ್ಕನ್ನು ಒಮ್ಮೆಗೆ ನನ್ನ ಮೇಲೆ ತೂರಿಸಿ ಹಾಕಿ. ಎಲ್ಲಾ ಇನ್ನೇನು ಮುಗಿಯಿತು, ಇದೆ ಕೊನೆಯ ಬಾರಿ ಎಂದು ಅಂದುಕೊಳ್ಳುತ್ತಿರುವಂತೆ ಮತ್ತೇನೊ ಧುತ್ತನೆ ಎದ್ದು ನಿಲ್ಲುತ್ತದೆ, ಇನ್ನಾವುದೋ ಮೂಲೆಯಿಂದ - ಈಗ ಮಗುವಿನ ಆರೋಗ್ಯದ ವಿಷಯದಲ್ಲಾದಂತೆ.. ಸದ್ಯಕ್ಕೆ ಅದಂತೂ ತೀರಾ ಕಳವಳ, ಚಡಪಡಿಕೆಗೆ ಕಾರಣವಾಗಿಬಿಟ್ಟಿದೆ ಮಾನಸಿಕವಾಗಿ ನನ್ನನ್ನು ಪೂರ್ತಿ ಕುಗ್ಗಿಸುತ್ತ...'

ಅವನು ಹೇಳುತ್ತಿದ್ದಷ್ಟು ಹೊತ್ತು ಒಮ್ಮೆಯೂ ನಡುವೆ ಬಾಯಿ ಹಾಕದೆ ಕೇಳಿಸಿಕೊಳ್ಳುತ್ತಿದ್ದರು ಮಾಂಕ್ ಸಾಕೇತ್. ಅವನ ಸಾಕಷ್ಟು ಸುಧೀರ್ಘ ವಿವರಣೆ ಕೇಳುತ್ತಿದ್ದಂತೆಯೆ, ಅವನೆತ್ತುತ್ತಿದ್ದ ಯಾವ ಪ್ರಶ್ನೆಗೂ ಉತ್ತರಿಸದೆ ತಮ್ಮಲ್ಲೆ ಏನೊ ಚಿಂತಿಸುತ್ತಿರುವವರಂತೆ, 'ಅಂತು ಉತ್ತರಗಳನ್ನು ಹುಡುಕಬೇಕೆನ್ನುವ ಹಂತಕ್ಕೆ ಬಂದಿದ್ದಿ ಎಂದಾಯ್ತು.. ಕಳೆದ ಬಾರಿಗಿಂತ ಒಂದು ಮೆಟ್ಟಿಲು ಮೇಲೆ' ಎಂದರು.

' ಉತ್ತರಗಳನ್ನು ಹುಡುಕಬೇಕೆಂಬ ಪ್ರಬುದ್ಧ ಲಾಲಸೆಗಿಂತ ಸಮಸ್ಯೆಯ ಪೂರಕ್ಕೆ ಪರಿಹಾರ ಕಾಣಬೇಕೆಂಬ ಸಾಮಾನ್ಯ ಪಾಮರ ದಾಹವೆ ಹೆಚ್ಚಾಗಿ ಕಾಡುತ್ತಿದೆ ಮಾಸ್ಟರ್... ಇವೆಲ್ಲಕ್ಕೂ ಶಾಶ್ವತ ಪರಿಪೂರ್ಣ ಪರಿಹಾರವಿದೆಯೆನ್ನುವುದಾದರೆ ಅದಕ್ಕಾಗಿ ಏನು ಮಾಡಲೂ ಸಿದ್ಧ ... ಹೇಗಾದರು ಮಾಡಿ ಪರಿಹರಿಸಿಕೊಳ್ಳಬೇಕೆಂಬ ಪೀಡನೆ ಮಾತ್ರ ತೀವ್ರವಾಗುತ್ತಿದೆ....'

' ನನಗರ್ಥವಾಗುತ್ತಿದೆ...ಆದರೆ...'

'ಆದರೆ..? ನಿಮ್ಮ ದನಿ ಕೇಳಿದರೆ ಅದಕ್ಕೇನೊ ಅಡ್ಡಿಯಿರುವಂತಿದೆಯಲ್ಲಾ? ಅದರಲ್ಲೇನು ತೊಡಕಿದೆ ಮಾಸ್ಟರ್..?'

' ನೀನು ಲೌಕಿಕ ಸ್ತರದಲ್ಲಿರುವ ಪ್ರಶ್ನೆಗೆ ಅಭೌತಿಕ ಸ್ತರದಲ್ಲಿನ ಉತ್ತರ ಹುಡುಕುತ್ತಿರುವೆ...'

'ನನಗರ್ಥವಾಗಲಿಲ್ಲ ಮಾಸ್ಟರ...'

' ನಿನ್ನ ಅಸಂಖ್ಯಾತ ಪ್ರಶ್ನೆ, ಅದರ ಮೂಲವಾದ ಪ್ರತಿಯೊಂದು ಸಮಸ್ಯೆಗೆ ಕಪ್ಪು ಬಿಳುಪಿನ ಉತ್ತರ ಬಯಸುತ್ತಿದ್ದಿಯಾ..ಆದರೆ ಆ ಉತ್ತರ ನೇರವಾಗಿ ಹೇಳುವಷ್ಟು ಸರಳವಲ್ಲ.. ಆ ಪ್ರಶ್ನೆಗಳಿಂದಾಚೆಗಿನ ಮತ್ತೊಂದು ಪರಿಪಕ್ವ, ಪ್ರಬುದ್ದ ಸ್ತರದಲ್ಲಿ ಹುಡುಕಿ ಉತ್ತರವನ್ನು ಶೋಧಿಸದ ಹೊರತು ಈ ನಿರಂತರವಾದ ಪುಂಖಾನುಪುಂಖ ಸಮಸ್ಯೆಗಳ ಪೂರ ನಿಲ್ಲುವುದೂ ಇಲ್ಲ..'

' ಹಾಗಾದರೆ ಸಾಮಾನ್ಯ ಮಾನವ ಸ್ತರದಲ್ಲಿ ಇದಕ್ಕೆಲ್ಲ ಪರಿಹಾರವೇ ಇಲ್ಲವೆನ್ನುತ್ತಿರಾ ಮಾಸ್ಟರ್..?'

' ನಾನಂದದ್ದು ಆ ಆರ್ಥದಲ್ಲಲ್ಲ.. ಸರಿ ಬಿಡು. ಇನ್ನೂ ಸರಳೀಕರಿಸಿ ಹೇಳುವುದಾದರೆ, ಇಲ್ಲಿ ಪೋನಿನಲ್ಲಿ ವಿವರಿಸಿ ಪರಿಹರಿಸುವಷ್ಟು ಸುಲಭ ಸರಳದ್ದಲ್ಲ, ಈ ಪ್ರಶ್ನೆ '

'ಅಂದರೆ ನಾನಲ್ಲಿಗೆ, ನೀವಿರುವಲ್ಲಿಗೆ ಬರಬೇಕೆಂದು ಹೇಳುತ್ತಿದ್ದೀರಾ? ಒಂದು ವೇಳೆ ನಾನಲ್ಲಿಗೆ ಬರುವುದು ಸಾಧ್ಯವಾಗುವುದಾದರೆ, ಇದಕ್ಕೆಲ್ಲ ಪರಿಹಾರ ಮಾರ್ಗ ಸೂಚಿಸಲು ಸಾಧ್ಯವೇ?' ಆಸೆಯ ದನಿಯಲ್ಲಿ ಕೇಳಿದ ಶ್ರೀನಾಥ. 

' ಅಲ್ಲೇ ನೀನು ಎಡವುತ್ತಿರುವುದು..ನಾನು ಯಾವುದಕ್ಕೂ ಪರಿಹಾರ ಸೂಚಿಸುವುದಿಲ್ಲ..ಏನನ್ನು ಪರಿಹರಿಸುವುದೂ ಇಲ್ಲ..ಹೆಚ್ಚೆಂದರೆ ನಿನ್ನ ಪ್ರಶ್ನೆಗೆ ನೀನೆ ಉತ್ತರ ಕಂಡುಕೊಳ್ಳಲು ಸಹಾಯ ಮಾಡಬಹುದಷ್ಟೆ... ಆ ಉತ್ತರ ಹುಡುಕುವ ದಾರಿಗೆ ಮಾರ್ಗದರ್ಶಕನಾಗಬಹುದಷ್ಟೆ..'

' ಅರ್ಥವಾಯಿತು ಮಾಸ್ಟರ್..ಅದನ್ನು ಹೇಗೆ ಮಾಡಬಹುದೆಂದು ನೀವೆ ಮಾರ್ಗ ಸೂಚಿಸಿಬಿಡಬಾರದೆ? ನನಗಂತು ಇದೊಂದು ದಿಕ್ಕೇ ತೋಚದ ದಿಕ್ಕು ತಪ್ಪಿದ ನಾವೆಯ ಪರಿಸ್ಥಿತಿ.. '

ಅತ್ತ ಕಡೆಯಿಂದ ಮತ್ತೆ ಅರೆಗಳಿಗೆಯ ಮೌನ ನೆಲೆಸಿತ್ತು. ನಂತರ ಮೆಲುವಾಗಿ ಆದೇಶದ ರೂಪದಲ್ಲಿ ತೇಲಿಬಂದಿತ್ತು ಮಾಂಕ್ ಸಾಕೇತರ ದನಿ.. 'ನೀನ್ಯಾಕೆ ಒಂದು ವಾರದ ಮಟ್ಟಿಗೆ ಈ ಕಾಡಿನ ಪರಿಸರದಲ್ಲಿರುವ ದೇವಾಲಯಕ್ಕೆ ಬರಬಾರದು? ಇಲ್ಲಿನ ಪ್ರಶಾಂತ ವಾತಾವರಣದಲ್ಲಿ ಅಂತರ್ಧ್ಯಾನದಲ್ಲಿ ತೊಡಗಿಸಿಕೊಂಡು ನಿನ್ನೆಲ್ಲಾ ಜಿಜ್ಞಾಸೆಗಳನ್ನು ಒರೆಗಚ್ಚಿ ನೋಡಿಕೊಳ್ಳುತ್ತ ನೀನೆ ಸರಿಯುತ್ತರಕ್ಕೆ ಶೋಧನೆ ನಡೆಸಬಹುದು - ಯಾರ ಹಂಗೂ ಇಲ್ಲದೆ. ಅದು ಸರಿಯಾದ ಹಾದಿಯಲ್ಲಿ ಸಾಗುವಂತೆ ನಾನು ಮಾರ್ಗದರ್ಶನ ನೀಡುತ್ತೇನೆ. ಇಲ್ಲಿದ್ದರೆ ನನ್ನ ಬಿಡುವಿನ ವೇಳೆಯೆಲ್ಲ ಸಂವಾದ, ಚರ್ಚೆಗಳಿಗೆ ಬಳಸಿಕೊಳ್ಳಬಹುದು... ಅದು ಸಾಧ್ಯವಾಗುವುದಾದರೆ ಮಿಕ್ಕಿದ್ದೆಲ್ಲವನ್ನು ವ್ಯವಸ್ಥೆ ಮಾಡಿಸುತ್ತೇನೆ ಇಲ್ಲಿಯ ಇರುವಿಕೆಗೆ, ತಂಗುವಿಕೆಗೆ ಅನುಕೂಲವಾಗುವಂತೆ..'

ಈಗ ಅರೆಗಳಿಗೆ ಯೋಚಿಸುವ ಬಾರಿ ಶ್ರೀನಾಥನದಾಯ್ತು. ಮಾಂಕ್ ಸಾಕೇತ್ ಹೇಳುತ್ತಿರುವುದರ ಅರ್ಥ ಆ ದೇವಾಲಯಕ್ಕೆ ತಾತ್ಕಾಲಿಕ ಮಾಂಕ್ ಹುಡ್ ಬಯಸಿಯೊ ಅಥವ ಕೆಲದಿನಗಳ ಮಟ್ಟಿಗಿನ ಅರೆಕಾಲಿಕ ಅತಿಥಿಯ ರೂಪದಲ್ಲೊ ಹೋಗಿದ್ದುಕೊಂಡು, ಅಲ್ಲಿನ ಭಿಕ್ಕುಗಳ ತರದಲ್ಲೆ ದೈನಂದಿನ ದಿನಚರಿ ಸಾಗಿಸುತ್ತ ಧ್ಯಾನ-ಸಂವಾದ ನಿರತನಾಗಿ ಅಂತರ್ಶೋಧನೆ ನಡೆಸುವುದು - ತೀರಾ ಸರಳೀಕರಿಸಿ ಹೇಳುವುದಾದರೆ, ಅವನಷ್ಟು ಉನ್ನತ ಸ್ತರದಲ್ಲಲ್ಲದಿದ್ದರೂ, ತನ್ನ ಸಾಮಾನ್ಯ ಸ್ತರದ ಹುಡುಕಾಟದಲ್ಲಿ ಬುದ್ಧನಿಗೆ ಜ್ಞಾನೋದಯವಾದಂತೆ ತನಗೂ ಆಗುವುದೆ ಎಂದು ಪ್ರಯತ್ನಿಸುವುದು.. ಹೇಗಿದ್ದರೂ ಮುಂದಿನ ವಾರದ ರಜೆಯ ಅನುಕೂಲವಂತೂ ಇದೆ... ಅದನ್ನೆ ಈ ಸಂಧರ್ಭಕ್ಕೆ ಬಳಸಿ ಹೋಗಿ ಬಂದುಬಿಡಲೆ? ಹೋಗಿ ಬರುವ ಪ್ರಚೋದನೆಗೆಂದೆ ಮುನ್ನುಡಿಯಂತೆ ಇಷ್ಟೆಲ್ಲಾ ಸಂಘಟಿಸುತ್ತಿದೆಯೆ? ಪ್ರಾಯಶಃ ಅದೊಂದು ರೀತಿಯ ಕಾಡಿನ ಪ್ರಶಾಂತ ಪರಿಸರದಲ್ಲಿ ಹೊರಗಿನ ಜಂಜಾಟಕ್ಕೆಲ್ಲ ತಡೆ ಬಿದ್ದಾಂತಾಗಿ, ಜಡ್ಡುಗಟ್ಟಿದ ತನು ಮನಗಳಿಗೆಲ್ಲ ಕೊಂಚ 'ರೀಚಾರ್ಜು' ಆಗುವ ಅವಕಾಶ ಸಿಕ್ಕಿದಂತಾಗುವುದಿಲ್ಲವೆ? ತನ್ನರಿವಿನ ಪ್ರಜ್ಞೆಯ ಗ್ರಾಹ್ಯತೆಯನ್ನು ಮೀರಿ ತನ್ನನ್ನು ನಿಸ್ತಂತುವಾಗಿಯೆ ನಿಯಂತ್ರಿಸಿ ಏನೆಲ್ಲ ಮಾಡಿಸುತ್ತಿರುವ ಆ ನಿಯತಿಯ ಹುನ್ನಾರವೇನಿದೆಯೊ ಎಂದೊಂದು ಕೈ ನೋಡಿಬಿಡುವ ಸಾಧ್ಯತೆಯಿದ್ದರೆ ಯಾಕಾಗಬಾರದು? ಅದರಲ್ಲಿ ತಾನು ಕಳೆದುಕೊಳ್ಳುವುದಾದರೂ ಏನು? ಅದಕ್ಕೆ ಸರಿಯಾಗಿ ಎಲ್ಲವೂ ಕೂಡಿಕೊಂಡು ಬಂದಂತಿದೆ - ಕಾಲವೂ ಸೇರಿದಂತೆ; ಯಾಕಾಗಬಾರದು??

'ಮಾಸ್ಟರ್..ಹಾಗೆ ಬಂದರೆ ಅಲ್ಲಿ ಎಷ್ಟು ದಿನ ತಂಗಬೇಕಾಗಬಹುದು..?' ಆ ಯಾಕಾಗಬಾರದು? ಎಂಬ ಪ್ರಶ್ನೆಯಲ್ಲೆ ದನಿಸಿದ್ದ ಉತ್ತರಕ್ಕೆ ಒಂದು ನಿಶ್ಚಿತ ಮೂರ್ತ ರೂಪ ಕೊಡುವ ಉದ್ದೇಶದ ದನಿಯಲ್ಲಿ ಕೇಳಿದ ಶ್ರೀನಾಥ. 

ಆ ಮಾತಿಗೆ ನಕ್ಕ ಮಾಂಕ್ ಸುಚರಿತ್ ಸಾಕೇತ್, ' ಇಲ್ಲಿಯೆ ಇದ್ದುಬಿಡಬೇಕೆಂದು ಎಲ್ಲವನ್ನು ತ್ಯಜಿಸಿ ಇಲ್ಲಿಗೆ ಬರುವವರೂ ಇದ್ದಾರಿಲ್ಲಿ... ನೀನು ವಾರದ ಮಟ್ಟಿಗೆ ಬಂದರೆ ಸಾಕು..ಒಂದು ವೇಳೆ ನಿನಗೆ ಬೇಕಾದ ಉತ್ತರ ಬೇಗನೆ ಸಿಕ್ಕಲ್ಲಿ, ಬೇಗನೆ ಹಿಂದಿರುಗಲೂಬಹುದು...'

ಅವರು ಮಾತನಾಡುತ್ತಿದ್ದಂತೆಯೆ ತನ್ನಲ್ಲೇ ಸುಧೀರ್ಘಾಲೋಚನೆ ನಡೆಸಿದ್ದ ಶ್ರೀನಾಥ, ಯಾವುದೊ ದೃಢ ನಿಶ್ಚಯಕ್ಕೆ ಬಂದವನಂತೆ, ' ಸರಿ ಮಾಸ್ಟರ್.. ಬರುತ್ತೇನೆ..ಮುಂದಿನ ವಾರವೇ ಬರುತ್ತೇನೆ..ಹೇಗೂ ರಜೆಯಂತೂ ಇದೆ..' ಎಂದ. 

'ಸರಿ ಹಾಗಾದರೆ. ಮಿಕ್ಕ ವಿವರಗಳನ್ನು ಈ ಸ್ವಯಂಸೇವಕ ಗೆಳೆಯರು ನೀಡುತ್ತಾರೆ...ಮಿಕ್ಕಿದ್ದು ನೀನಲ್ಲಿ ಬಂದ ನಂತರ ನೋಡೋಣ..' ಎಂದರು ಮಾತನ್ನು ಮುಗಿಸುವವರಂತೆ. 

'ಸರಿ ಮಾಸ್ಟರ್.. ಆದರೆ ಒಂದೆ ಒಂದು ಕಡೆಯ ವಿಷಯ..'

'ಏನದು?'

'ಈಗ ಆಸ್ಪತ್ರೆಯಲ್ಲಿರುವ ಮಗುವಿನ ಪರಿಸ್ಥಿತಿ.....?'

ಅವನು ಮಾತು ಮುಂದುವರೆಸಬಿಡದೆ ನಡುವೆಯೆ ತಡೆದು ಹೇಳಿದರು ಮಾಂಕ್ ಸಾಕೇತ್..' ಇಲ್ಲ ಕುನ್. ಶ್ರೀನಾಥ, ಅದರ ಕುರಿತು ನಾನೇನು ಹೇಳಬಯಸುವುದಿಲ್ಲ.. ಇಲ್ಲಿಂದಲೆ ನಿನ್ನ ಪಯಣ ಆರಂಭವಾಗಲಿ..'

'ಅಂದರೆ..?'

'ನೀನಿಡುತ್ತಿರುವ ಹೆಜ್ಜೆ ಸರಿಯಾಗಿದ್ದುದಾದರೆ ಸುತ್ತಲಿನ ನಡೆಯುವಿಕೆಯೆಲ್ಲ ಅದಕ್ಕೆ ಪೂರಕವಾಗಿ ಪ್ರತಿಸ್ಪಂದಿಸುತ್ತದೆ.. ಅರ್ಥಾತ್ ಈಗ ನೀನು ಮಾಡಿದ ನಿರ್ಧಾರ ಸಮಯೋಚಿತ ಮತ್ತು ಸರಿಯಾದ ದಿಕ್ಕಿನ ತೀರ್ಮಾನವಾಗಿದ್ದರೆ, ಅದರ ಕುರುಹು ಸುತ್ತಲಿನ ಆಗುಹೋಗುಗಳಲ್ಲಿ ತಕ್ಷಣವೆ ಬಿಂಬಿತವಾಗಿ ಹೋಗಿರುತ್ತದೆ - ನಿನಗೆ ಸಂಬಂಧಿಸಿದ ಪ್ರತಿ ವಿಷಯದಲ್ಲೂ. ಈ ವಿಷಯವೂ ಅಷ್ಟೆ - ನೀನೀಗಿಟ್ಟ ಹೆಜ್ಜೆ ಸರಿಯಾದುದ್ದಾದರೆ ಅದರ ಸಂವಾದಿಯಾಗಿ ಪೂರಕ ಬೆಳವಣಿಗೆಗಳು ನಿನ್ನ ಕಣ್ಣಿಗೆ ಕಾಣಿಸಬೇಕು. ಅದು ತಪ್ಪು ಹೆಜ್ಜೆಯಾಗಿದ್ದರೆ ಅದು ಕೂಡ ನಿನಗೆ ತಂತಾನೆ ಬೋಧೆಯಾಗಬೇಕು.. ಈ ದೃಷ್ಟಿಕೋನದಿಂದ ನೀನೆ ಏನಾಗಿಬಿಡುವುದೆಂದು ನೋಡಿಕೊ. ನಿನಗೆ ಎಲ್ಲವೂ ವೇದ್ಯವಾಗುತ್ತದೆ ' ಎಂದರು.

ಆ ತರ್ಕವೂ ಸರಿಯೆನಿಸಿ, 'ಹಾಗೆ ಆಗಲಿ ಮಾಸ್ಟರ್.. ಸದ್ಯಕ್ಕೆ ಮುಂದಿನ ವಾರವೆಂದು ನಿರ್ಧರಿಸಿಯಾಗಿದೆ... ಅದರಲ್ಲೇ ನಿಗದಿತ ದಿನವನ್ನು ನಾಳೆಯೆ ಅಂತಿಮಗೊಳಿಸುತ್ತೇನೆ..'

'ಸರಿ..ವಿವರವನ್ನೆಲ್ಲ ನಾಳೆ ಈ ಪೋನಿನಲ್ಲೆ ತಿಳಿಸಿಬಿಡು. ಆದರೆ ಮರೆಯದೆ, ಬರುತ್ತಿರುವ ಕುರಿತು ಒಂದು ಪತ್ರ ಬರೆದು ಅಂಚೆಯಲ್ಲಿ ಆ ಕಾರ್ಡಿನ ವಿಳಾಸಕ್ಕೆ ಕಳಿಸಿಬಿಡು..ದೇವಾಲಯದಲ್ಲಿ ಪೋನ್ ಇಂಟರ್ನೆಟ್ ಬಳಸುವುದಿಲ್ಲ..' ಎಂದು ಹೇಳಿ ಪೋನ್ ಕೆಳಗಿಟ್ಟಿದ್ದರು. 

ಆ ಮಾತೆಲ್ಲ ಮುಗಿದಾಗ ಅದುವರೆವಿಗೂ ಇರದಿದ್ದ ಯಾವುದೊ ಪ್ರಶಾಂತ ಭಾವ ಮನಸನೆಲ್ಲ ಪೂರ್ಣವಾಗಿ ಆವರಿಸಿಕೊಂಡಂತಿತ್ತು. ಆ ಭಾವದಲ್ಲೇ ಮನೆಗೆ ಹೊರಡುವ ಮುನ್ನ ಆಸ್ಪತ್ರೆಗೊಮ್ಮೆ ಪೋನ್ ಮಾಡಿ ನೋಡುವುದೊಳಿತೆನಿಸಿ ಆ ನಂಬರಿಗೆ ಡಯಲ್ ಮಾಡತೊಡಗಿದ ಮಗುವಿನ ಕ್ಷೇಮ ಸಮಾಚಾರ ವಿಚಾರಿಸಿಕೊಳ್ಳಲು. 

ಒಂದೆರಡು ಬಾರಿಯ ವಿಫಲ ಯತ್ನದ ನಂತರ ಸಂಪರ್ಕ ಸಿಕ್ಕಿದಾಗ ಈ ಬಾರಿ ಪೋನೆತ್ತಿಕೊಂಡವಳ  ದನಿಯಲ್ಲೇನೊ ಕಳೆದ ಬಾರಿ ಕಾಣದ ಚೇತನವಿರುವಂತೆ ಭಾಸವಾಗಿ, ಅದೇನು ತಾನವಳ ಜತೆ ಒಮ್ಮೆ ಮಾತಾಡಿದ್ದರ ಪ್ರತಿಫಲವಾಗುಂಟಾದ ಗೆಲುಮುಖವೊ ಅಥವಾ ನಿಜವಾಗಿಯೂ ಮಾಂಕ್ ಸಾಕೇತರ ನುಡಿಗನುಸಾರವಾಗಿ, ಅವರ ದೇವಾಲಯಕ್ಕೆ ಕೆಲ ದಿನಗಳ ಮಟ್ಟಿಗೆ ಹೋಗಿ ಇರುವ ತನ್ನ ನಿರ್ಧಾರದ ಫಲಿತವಾಗಿ ಮೂಡಿದ ಧನಾತ್ಮಕ ಫಲಿತಾಂಶವೊ ಅರಿವಾಗದ ಗೊಂದಲದಲ್ಲಿ ಬಿದ್ದ ಶ್ರೀನಾಥ. ಇಷ್ಟು ಕ್ಷಿಪ್ರ ಗತಿಯಲ್ಲಿ ಬದಲಾವಣೆ ಕಾಣಿಸುವಷ್ಟು ಸಾಮರ್ಥ್ಯವಿದೆಯೆ ತನ್ನ 'ಸರಿಯಾದ' ಎನ್ನುಬಹುದಾದ ನಿರ್ಧಾರಗಳಿಗೆ? ಛೆ..ಛೆ.. ಇರಲಾರದು.. ತಾನಿನ್ನು ಆ ಮಾತಿನ ಭ್ರಮಾಧೀನ ಸ್ಥಿತಿಯಿಂದ ಹೊರಬಂದಿರದ ಕಾರಣ ತನಗೆ ಹಾಗೆನಿಸುತ್ತಿರಬಹುದೆನಿಸಿ, ಆ ಆಲೋಚನೆಗಳೆಲ್ಲ ಬದಿಗಿತ್ತು ಪೋನಿನತ್ತ ಗಮನ ಹರಿಸಿದ್ದ ಶ್ರೀನಾಥ. ಆಗಲೆ ಅವನರಿವಿಗೆ ಬಂದಿದ್ದು, ಹೆಂಡತಿ ಏನೊ ಹೇಳುತ್ತಿದ್ದರೂ ತನ್ನ ಎಲ್ಲೊ ಕಳೆದುಹೋದ ಸ್ಥಿತಿಯಿಂದಾಗಿ ಅತ್ತ ದೇವಾಲಯದಲ್ಲಿ ಎಂದು...

' ರೀ..ನಾನು ಹೇಳಿದ್ದು ಕೇಳಿಸುತ್ತಾ ಇದೆಯಾ? ಲೈನಿನಲ್ಲಿದ್ದೀರಾ , ಇಲ್ಲವಾ?'

' ಓಹ್ ಸಾರಿ ಲತಾ...ಹಾಳು ಮಳೆಗಾಳಿಯಿಂದ ಲೈನಿನ ಪ್ರಾಬ್ಲಮ್ ಅಂತಾ ಕಾಣುತ್ತೆ.. ಮಧ್ಯೆ ಮಧ್ಯೆ ಬಿದ್ದುಹೋಗಿ ತೊಂದರೆ ಕೊಡುತ್ತಿರಬೇಕು.. ನೀನು ಏನಂದೆ, ಸ್ವಲ್ಪ ಮತ್ತೆ ಹೇಳು?' ಎಂದ ತನ್ನ ಅನ್ಯಮನಸ್ಕತೆಯ ದೌರ್ಬಲ್ಯವನ್ನು ಚಾಲೂಕಿನಿಂದ ಮುಚ್ಚಿ ಹಾಕಲೆತ್ನಿಸುತ್ತ. ಆದರೆ ಅದನ್ನಾವುದನ್ನು ಲೆಕ್ಕಿಸುವ ಮನಸ್ಥಿತಿಯಲ್ಲಿರದ ಲತಾ, ಸ್ವಲ್ಪ ಉತ್ಸಾಹದ ದನಿಯಲ್ಲಿ,

' ರೀ ನಿಮ್ಮ ಡಾಕ್ಟರ ಫ್ರೆಂಡು ಮತ್ತು ಇಲ್ಲಿನ ದೊಡ್ಡ  ಡಾಕ್ಟರು ಮಧ್ಯಾಹ್ನ ಬಂದು ನೋಡಿಕೊಂಡು ಹೋದರು...'

' ಇಷ್ಟು ಬೇಗನೆ ಬಂದು ಹೋದರ? ಗ್ರೇಟ್...! ನಾನು ನಾಳೆ ಬರಬಹುದೇನೊ ಎಂದುಕೊಂಡಿದ್ದೆ.. ಇರಲಿ, ಪಾಪುವನ್ನು ಮತ್ತೆ ಪರೀಕ್ಷೆ ಮಾಡಿ ನೋಡಿದರ? ಏನು ಹೇಳಿದರು?'

' ಇಬ್ಬರೂ ಮತ್ತೊಮ್ಮೆ ಪರೀಕ್ಷೆ ಮಾಡಿ ತಮ್ಮ ತಮ್ಮಲ್ಲೆ ಏನೊ ಮಾತನಾಡಿಕೊಂಡರು...ಆಮೇಲೆ ಇನ್ನೊಂದಾವುದೊ ಔಷಧಿ ಕೊಟ್ಟು ತಕ್ಷಣದಿಂದಲೆ ಕುಡಿಸಲು ಹೇಳಿದರು...' 

'ವೆರಿ ಗುಡ್...! ಈಗಾಗಲೆ ಹೊಸ ಔಷಧಿ ಹಾಕಲು ಆರಂಭಿಸಿಯಾಯ್ತೆ?' ಅಷ್ಟೆ ಕಾತರದಿಂದ ಕೇಳಿದ ಶ್ರೀನಾಥ.

' ಡಾಕ್ಟರು ಇನ್ನು ಅಲ್ಲಿದಾಗಲೆ ಒಂದು ಡೋಸು ಕುಡಿಸಲು ಹೇಳಿದರು.. ಮತ್ತೊಂದು ಒಳಲೆ ಹಾಲಿಗೆ ಸೇರಿಸಿ ಕುಡಿಸಿದೆ...'

'ಗುಡ್... ನೋಡೋಣ..ಈ ಔಷಧಿ ಚೆನ್ನಾಗಿ ಕೆಲಸ ಮಾಡಿದರೆ ಪಾಪು ಸ್ವಲ್ಪ ಬೇಗ ಹುಷಾರಾಗಬಹುದು... ನಾನು ಬೇಕಾದರೆ ನಾಳೆಗೆ ಇನ್ನೊಮ್ಮೆ ಇಬ್ಬರು ಡಾಕ್ಟರರ ಹತ್ತಿರ ಮಾತನಾಡುತ್ತೇನೆ...'

' ಅಯ್ಯೊ, ಅದಿರಲಿ ಸ್ವಲ್ಪ ತಾಳಿಕೊಂಡು ನಾನು ಹೇಳುವುದನ್ನು ಪೂರ್ತಿಯಾಗಿ ಕೇಳಿ...'

ಅವಳು ಹೇಳುತ್ತಿರುವ ರೀತಿಯನ್ನು ಗಮನಿಸಿದರೆ ಏನೊ ವಿಶೇಷ ಮಾಹಿತಿಯೆ ಇರಬಹುದೆನಿಸಿ, ' ಸಾರಿ..ಸಾರೀ..ನೀನು ಹೇಳು..' ಎಂದ

'...ಇಷ್ಟು ದಿನವೂ ಒದ್ದಾಡಿಕೊಂಡು ಜ್ಞಾನ ತಪ್ಪಿದಂತೆ ಮಲಗಿರುತ್ತಿದ್ದ ಮಗು, ಈ ಔಷಧಿ ಕುಡಿದ ಅರ್ಧ ಗಂಟೆಯಲ್ಲೆ ಗಾಢ ನಿದ್ರೆಯಲ್ಲಿ ಮಲಗಿದಂತೆ ನಿದ್ರಿಸುತ್ತಿದೆ ರೀ.. ಪಾಪು ಈ ರೀತಿ ಮಲಗಿದ್ದನ್ನು ನೋಡೆ ಅದೆಷ್ಟು ದಿನಗಳಾಗಿ ಹೋಗಿತ್ತೊ ಅನಿಸಿತು, ಅದನ್ನು ನೋಡುತ್ತಿದ್ದರೆ...'

' ನಿದ್ರೆಯೆಂದರೆ...? ಗಾಬರಿಯಾಗುವಂತಾದ್ದೇನಿಲ್ಲ ತಾನೆ...' ಈ ಡೊಸೇಜುಗಳ ಹೆಚ್ಚು ಕಡಿಮೆಯಿಂದಲೊ, ಮಗುವಿಗೆ ಸೂಕ್ತವಲ್ಲದ ಔಷಧಿಯ ಪರಿಣಾಮದಿಂದಲೊ ವೀಪರೀತಕ್ಕೆ ಹೋದ ಘಟನೆಗಳನ್ನು ಕೇಳಿದ್ದ ಶ್ರೀನಾಥ, 'ಮಗುವಿನ ಸೌಖ್ಯದ ಮೊಗವನ್ನು ನೋಡಿ ತಪ್ಪಾಗಿ ಅರ್ಥೈಸಿಕೊಂಡುಬಿಟ್ಟಿದ್ದರೆ?' ಎನ್ನುವ ಅರ್ಥದಲ್ಲೆ ಅರ್ಧ ನುಂಗಿಕೊಂಡೆ ಕೇಳಿದ್ದ ಶ್ರೀನಾಥ. ಇಂತಹ ವಿಷಯಗಳಲ್ಲಿ ತಾಯಿಯ ಅನಿಸಿಕೆಯ ಲೆಕ್ಕಾಚಾರ ತಪ್ಪುವುದು ಅಪರೂಪವಾದರೂ, ಅಸ್ತವ್ಯಸ್ತ ಮನಸ್ಥಿತಿಯಲ್ಲಿ ಏನೂ ಹೆಚ್ಚುಕಡಿಮೆಯಾಗುವುದೊ ಹೇಳುವುದು ಕಷ್ಟ...

' ಥೂ.. ಬಿಡ್ತು ಅನ್ನಿ..ನನಗಷ್ಟೂ ಗೊತ್ತಾಗುವುದಿಲ್ಲವೆ? ಮೂರು ದಿನದಿಂದ ಪ್ರಜ್ಞೆಯಿಲ್ಲದಂತೆ ಬಿದ್ದಿದ್ದರು ಅದರ ಕಿವುಚಿದ ಮುಖ ನೋಡುತ್ತಲೆ ಇದ್ದೇನೆ.....ಆ ಮುಖಕ್ಕೂ ಈಗ ನೆಮ್ಮದಿಯ ನಿದ್ರೆಯ ಮುಖಕ್ಕೂ ವ್ಯತ್ಯಾಸ ಗೊತ್ತಾಗುವುದಿಲ್ಲವೆ?  ಸಾಲದ್ದಕ್ಕೆ ಈಗ ತಾನೆ ಡ್ಯೂಟಿ ನರ್ಸ ಬಂದು ಸಹ ನೋಡಿಕೊಂಡು ಹೋದಳು...'

' ಓಹ್..! ದಟ್ ಇಸ್ ರಿಯಲಿ ಎ ಪ್ರೋಗ್ರೆಸ್ ದೆನ್...?'

'ಈಗ.. ಬಂದು ಹೋದ ಡ್ಯೂಟಿ ನರ್ಸು ಇನ್ನೊಂದನ್ನು ಹೇಳಿ ಹೋದಳು ..ರೀ..' ಏನೊ ಸಸ್ಪೆನ್ಸ್ ಹೇಳುವಂತೆ ರಾಗವಾಗಿ ನುಡಿದಿದ್ದಳು ಸತೀಮಣಿ.

' ಅದೇನೆಂದು ಬೇಗ ಹೇಳು ಮಾರಾಯ್ತಿ...ಎಷ್ಟು ಹೊತ್ತು ಸಸ್ಪೆನ್ಸಿನಲ್ಲಿ ಇಡುತ್ತೀಯಾ?'

' ಇದೋ ಹೇಳುತ್ತಿದ್ದೀನಲ್ಲಾ?  ಆ ನರ್ಸ್ ಬಂದು ರುಟೀನ್ ಚೆಕ್ ಮಾಡಿ 'ಜ್ವರ ಆಗಲೆ ಕಡಿಮೆಯಾಗುತ್ತಿದೆ' ..ಎಂದಳು..'

' ಆಹಾ...'

'ಜತೆಗೆ ಆ ಔಷಧಿ ಕುಡಿದ ಮೇಲೆ ಮತ್ತೆ ವಾಂತಿಯೂ ಆಗಿಲ್ಲ, ಭೇಧಿಯೂ ಆಗಿಲ್ಲ..'

' ವಾಹ್..! ಅಷ್ಟೊಂದು ಚುರುಕಾಗಿ ಕೆಲಸ ಮಾಡುತ್ತಿದೆಯೆ ಆ ಔಷಧಿ? '

' ಅದೇನೊ ಗೊತ್ತಿಲ್ಲಾ..ರೀ...ಔಷಧಿಯೊ ಅಥವಾ ನೀವು ಪೋನ್ ಮಾಡಿದ್ದು ಗೊತ್ತಾಗಿ ಪಾಪುವಿಗೆ ಖುಷಿಯಾಗಿ ಹುಷಾರಾಗುತ್ತಿದೆಯೊ.. ಒಟ್ಟಿನಲ್ಲಿ 'ಹೀಗೆ ಮತ್ತೊಂದೆರಡು ದಿನ ಕಳೆದುಹೋದರೆ ಪೂರ್ತಿ ಬಚಾವಾದ ಹಾಗೆ' ಅಂದಳು ಡ್ಯೂಟಿ ನರ್ಸು....'

ಅವಳ ದನಿಯಲ್ಲಿದ್ದ ಉತ್ಸಾಹಕ್ಕೆ ಈಗ ಕಾರಣ ಸ್ಪಷ್ಟವಾಗಿ ಅವಳಷ್ಟೆ ಶ್ರೀನಾಥನೂ ಚಕಿತನಾಗಿ ಹೋಗಿದ್ದ... ಇದೇನು ಮಾಂಕ್ ಸಾಕೇತರ ಮಾತಿನ ರುಜುವಾತೊ ಅಥವ ಕೇವಲ ಕಾಕತಾಳೀಯತೆಯೊ ನಿರ್ಧರಿಸಲಾಗದ ಸಂದಿಗ್ದತೆಯಲ್ಲೆ, ಪ್ರಗತಿ ಕಾಣುತ್ತಿರುವಂತಿದ್ದರೂ ಪೂರ್ತಿ ಗುಣವಾಗದೆ ಯಾವುದನ್ನು ಖಚಿತವಾಗಿ ಹೇಳುವಂತಿಲ್ಲ ಎಂದುಕೊಳ್ಳುತ್ತಲೆ ಯಾಂತ್ರಿಕವಾಗಿ ಅವಳೊಡನೆ ಮಿಕ್ಕ ಮಾತು ಮುಗಿಸಿ ಮತ್ತೆ ನಾಳೆಗೆ ಪೋನು ಮಾಡುವುದಾಗಿ ಹೇಳಿ ಡಿಸ್ಕನೆಕ್ಟ್ ಮಾಡಿದ್ದ - 'ಸದ್ಯ ಮಗುವಿನ ಆರೋಗ್ಯದ ಬಗ್ಗೆ ಶುಭಕರ ಸುದ್ದಿ ಕೇಳುವ ಆರಂಭವಾದರೂ ಆಯ್ತಲ್ಲ' ಎನ್ನುವ ನಿರಾಳತೆಯಲ್ಲಿ. 

ಆದರೂ ಮನದಲ್ಲೇನೊ ಅಸಹನೀಯ ತುಮುಲವನ್ನು ತಡೆ ಹಿಡಿಯಲಾಗಲಿಲ್ಲ ಶ್ರೀನಾಥನಿಗೆ. ಅದು ಮಾಂಕ್ ಸಾಕೇತರ ಮಾತುಗಳ ಮೇಲಿನ ಅಪನಂಬಿಕೆಗಿಂತಲು ಹೆಚ್ಚಾಗಿ, ಆ ಕ್ಷಿಪ್ರಗತಿಯ ಸಂಘಟಿಸುವಿಕೆ ಸಹಜವಾಗಿ ಪ್ರೇರೇಪಿಸುವ ಕಾಕತಾಳೀಯತೆಯಿರಬಹುದೆಂಬ ಅನಿಸಿಕೆಯ ಪ್ರಚೋದನೆಯಾಗಿತ್ತು. ತಾನು ಮಾಂಕ್ ಸಾಕೇತರ ಜತೆಗೆ ಮಾತನಾಡುವ ಮೊದಲೆ ಡಾಕ್ಟರ ಬಳಿ ಮಾತನಾಡಿರಲಿಲ್ಲವೆ? ಡಾಕ್ಟರು ಗೆಳೆಯನ ಹತ್ತಿರವೂ ಸಹಾಯಕ್ಕೆ ಯಾಚಿಸಿರಲಿಲ್ಲವೆ? ಅವರು ಅದೆ ಹುರುಪಿನಲ್ಲಿ ಪ್ರತಿಕ್ರಿಯಿಸಿದ ಮೇಲೆ ತಾನೆ ಈ ಧನಾತ್ಮಕ ಬದಲಾವಣೆ ಕಂಡುಬಂದಿದ್ದು? ತಾನು ಮಾಂಕ್ ಸಾಕೇತರ ಬಳಿ ಮಾತನಾಡದೆ ಇದ್ದಿದ್ದರೂ ಇದೆ ಫಲಿತಾಂಶ ಬರುತ್ತಿರಲಿಲ್ಲವೆಂದು ಹೇಳುವುದಾದರೆ ಹೇಗೆ? 

ಹೀಗೆ ಆಲೋಚನೆಯ ರೈಲುಗಾಡಿ ಪರ ವಿರೋಧಗಳ ದಿಕ್ಕಿನ ವಾದ ಹೂಡಿ ಕಿತ್ತಾಡುತ್ತಿರುವ ಹೊತ್ತಲ್ಲೆ ಇದ್ದಕ್ಕಿದ್ದಂತೆ ನಗು ಬಂತು ಶ್ರೀನಾಥನಿಗೆ. ವಾದ ಎಷ್ಟೆ ಹುರುಳಿರಲಿ ಬಿಡಲಿ - ಪರಿಸ್ಥಿತಿಯಯ ತೀವ್ರತೆಯ ಹೊತ್ತಲ್ಲಿ ಪ್ರಜ್ವಲಿಸುವ ನಂಬಿಕೆಯ ಪರಾಕಾಷ್ಠೆಯಾಗಲಿ, ಕೃತಜ್ಞತಾ ಭಾವವಾಗಲಿ, ಆ ಸನ್ನಿವೇಶದ ಸಂಕಷ್ಟ ಪರಿಹಾರವಾಗಿ ಅಥವಾ ತಿಳಿಯಾಗಿ ಹೋದಾಗ ಇರಲಾರದು ಅನಿಸಿತು. ಬಹುಶಃ ತರ್ಕಾತೀತವಾಗಿ ಎಲ್ಲವನ್ನು ವಿಮರ್ಶೆಗೆ ಹಚ್ಚುವ ಮನಃಸತ್ವವು ಸಹ ಆ ರೀತಿಯ ಪರಿಸ್ಥಿತಿಯಲ್ಲಿ ದುರ್ಬಲವಾಗಿ ದಾರಿ ತಪ್ಪುವ ಸಾಧ್ಯತೆ ಎಷ್ಟು ಸಹಜವೊ, ಅದೆ ರೀತಿಯಲ್ಲಿ ತರ್ಕಕ್ಕೆ ಮೀರಿದ ಅತೀತ ಅತಿಶಯವನ್ನು ಪ್ರತ್ಯಕ್ಷವಾಗಿಯೆ ಅನುಭವದ ಪಾಲಾಗಿಸಿಕೊಂಡಿದ್ದರೂ ನಂತರದ ಚಿಂತನಾಶೀಲ, ವಿಚಾರವಾದಿ ತರ್ಕದ ಮುಖವಾಡದಲ್ಲಿ ಅದನ್ನು ಅಷ್ಟೆ ಸಾರಾಸಗಟಾಗಿ ಅಲ್ಲಗಳೆಯುವುದು ಅಷ್ಟೆ ಸಹಜವೆನಿಸಿತ್ತು. ಆ ಹೊತ್ತಿನಲ್ಲಿ 'ಮನುಷ್ಯ, ಪರಿಸ್ಥಿತಿ-ಸನ್ನಿವೇಶದ ಕೈಯಲ್ಲಿ ಸಿಕ್ಕ ಶಿಶು' ಎನ್ನುವ ಮಾತು ಅದೆಷ್ಟು ಸತ್ಯವೆಂದು ಮನವರಿಕೆಯಾಗತೊಡಗಿತ್ತು ಶ್ರೀನಾಥನಿಗೆ. ಅದುವರೆವಿಗು ಮಾಂಕ್ ಸಾಕೇತರ ಕಾನನದ ದೇವಾಲಯಕ್ಕೆ ಹೋಗಿ ಇದ್ದು ಬರಬೇಕೆಂದು ಸಿದ್ದವಾಗುತ್ತಿದ್ದ ಮನ ಮತ್ತೆ ಅನುಮಾನದ ಸುಳಿಯಲ್ಲಿ ಸಿಕ್ಕು ಡೋಲಾಯಮಾನವಾಗತೊಡಗಿತು.

ಆ ಅತಂತ್ರ ಭಾವದ ಹಿನ್ನಲೆಯಲ್ಲೆ ಮತ್ತೆ ಧುತ್ತನೆ ನೆನಪಾಗಿತ್ತು ಮಾಂಕ್ ಸಾಕೇತ್ ಸುಚರಿತರ ಒಡನಾಟದ ಸಂಗತಿಗಳು. ಅದರಲ್ಲು ಅವನು ಹೇಳುವ ಮೊದಲೆ ಅವರಿಗೆ ಅರಿವಾಗುತ್ತಿದ ಅವನ ಅಂತರಂಗಿಕ ವಿಷಯಗಳು, ಅಧಿಕಾರಯುತವಿದ್ದರು ಹಿತೈಷಿಯ ದನಿಯಲಿದ್ದ ಅವರ ಮಾರ್ಗದರ್ಶಿ ನುಡಿಗಳು ಅವರಲ್ಲೇನೊ ಅತಿಶಯ ಶಕ್ತಿಯಿರುವುದನ್ನಂತೂ ಖಚಿತ ಪಡಿಸಿಬಿಟ್ಟಿದ್ದವು. ಆ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತಿದ್ದ ಹಾಗೆ ಈಗ ನಡೆಯುತ್ತಿರುವ ಸುಸಂಗತಗಳೆಲ್ಲ ಅವರ ಶುಭ ಹಾರೈಕೆ, ಹರಕೆಯ ಫಲವೆ ಎಂದು ಬಲವಾಗಿ ಅನಿಸತೊಡಗಿತು. ಹೀಗೆ ತಕ್ಕಡಿಯಂತೆ ಎಡಬಲಕ್ಕೆ ತೂಗಾಡಿದ ಮನ ಮಂಥನ ಕಡೆಗಾವ ಕಡೆಗು ಓಲಾಡಲರಿಯದೆ ದಿಕ್ಕೆಟ್ಟಂತೆ ದಾರಿ ತಪ್ಪಿ ನಿಂತಾಗ, 'ಅದದ್ದಾಗಲಿ.. ಕೊನೆಗೊಂದು ಪ್ರವಾಸ ಹೋಗಿ ಬಂದಂತೆಂದುಕೊಂಡು ಭೇಟಿ ಕೊಟ್ಟಂತಾದರೂ ಸರಿ... ಹೋಗಿ ಇದ್ದು ಬಂದುಬಿಡುವುದು ವಾಸಿ... ಫಲ ಕಾಣಲಿ, ಬಿಡಲಿ - ಮುಂದೆ 'ಅದನ್ನು ಅಲಕ್ಷ್ಯದಿಂದ ಪಾಲಿಸದಿದ್ದ ಕಾರಣದಿಂದಲೆ ಹೀಗಾಯ್ತೇನೊ?' ಅನ್ನುವ ಅನುತಾಪ, ಪರಿತಾಪದಿಂದಾದರೂ ತಪ್ಪಿಸಿಕೊಂಡಂತಾಗುತ್ತದೆ' ಎಂದು ನಿರ್ಧರಿಸಿಕೊಂಡಾಗ ಮನಕ್ಕೆ ಸ್ವಲ್ಪ ನಿರಾಳವಾಯ್ತು. ಆ ನಿರಾಳತೆ ಮಾಯವಾಗಿ ಮತ್ತೆ ಹೊಸ ಸಂಶಯಗಳನ್ನು ಹುಟ್ಟು ಹಾಕುವ ಮೊದಲೆ ಆ ಪ್ರಯಾಣಕ್ಕೆ ಬೇಕಾದ ಸಿದ್ದತೆಗಾಗಿ ವಿವರಗಳನ್ನು ಹುಡುಕತೊಡಗಿದ ಶ್ರೀನಾಥ.

(ಇನ್ನೂ ಇದೆ)
__________
 

Comments

Submitted by partha1059 Tue, 08/19/2014 - 15:24

ನಾಗೇಶರವರೆ
ಸಾಮಾನ್ಯ ಮನುಷ್ಯನೊಬ್ಬನ ಮನಸಿನ ಏರಿಳಿತವನ್ನು, ಗೊಂದಲಗಳನ್ನು ಶ್ರೀನಾಥನ ಮನಸಿನ ಮಾತುಗಳ ಮೂಲಕ ಸಮರ್ಥವಾಗಿ ಚಿತ್ರಿಸುತ್ತ ಇದ್ದೀರಿ.
ಅಭಿನಂದನೆಗಳು
ಪಾರ್ಥಸಾರಥಿ

Submitted by nageshamysore Wed, 08/20/2014 - 18:07

In reply to by partha1059

ಪಾರ್ಥಾ ಸಾರ್, ನಮಸ್ಕಾರ. ಮಾನಸಿಕ ಸ್ತರದ ಹೊಯ್ದಾಟಗಳನ್ನು ಮತ್ತು ಅದು ನಿರ್ಧಾರಕ್ಕೆ ತಳ್ಳುವ ಹೊತ್ತಿನ ತಳಮಳಗಳನ್ನು ಸಾಧ್ಯವಾದಷ್ಟು ಹಿಡಿದಿಡಲು ಯತ್ನಿಸುತ್ತಿದ್ದೇನೆ. ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.