ಅನಂತಮೂರ್ತಿಗಳು ಹಾಗು ಜೀವನ ಹೋರಾಟ

ಅನಂತಮೂರ್ತಿಗಳು ಹಾಗು ಜೀವನ ಹೋರಾಟ

ಚಿತ್ರ

ಚಿಕ್ಕವಯಸಿನಿಂದ ನಾವು ಬೆಳೆಯುತ್ತ ಬೆಳೆಯುತ್ತ ನಮ್ಮ ಜೊತೆ ಇದ್ದವರು ಅನೇಕರು ಮರೆಯಾದರು. ಹಾಗೆ ಶ್ರೀ ಅನಂತಮೂರ್ತಿಗಳು ನಮ್ಮಂತವರ ಜೊತೆ ನೇರವಾಗಿ ಸಂಪರ್ಕದಲ್ಲಿಲ್ಲದಿದ್ದರು, ಪುಸ್ತಕಗಳ ಮೂಲಕ. ಅಥವ ಪತ್ರಿಕೆಗಳ ಮೂಲಕ ನಂತರ ಟೀವಿ ಎಂಬ ಮಾಧ್ಯಮಗಳ ಮೂಲಕ ಪರಿಚಿತರಂತೆ ಜೊತೆ ಜೊತೆಯಾಗಿ ಬಂದವರು ಈಗ ಕಣ್ಮರೆಯಾದರು. ಚಿಕ್ಕವಯಸಿನಿಂದ ಪರಿಚಿತರಾದವರು ಒಬ್ಬೊಬ್ಬರೆ ಈ ಪ್ರಪಂಚ ತೊರೆಯುತ್ತಿರುವಂತೆ ನಾವು ಒಂಟಿಯಾಗುತ್ತ ಹೋಗುತ್ತಿದ್ದೇವೇನೊ ಎನ್ನುವ ಭ್ರಮೆ ಮೂಡುತ್ತದೆ.

    ವಯಸಿನಲ್ಲಿ ನಮಗಿಂತ ಸುಮಾರು ಮೂವತ್ತು ವರ್ಷಕ್ಕೆ ದೊಡ್ಡವರು, ನಾವು ಚಿಕ್ಕವಯಸಿನಲ್ಲಿ ಅವರ ಪುಸ್ತಕಗಳನ್ನು ಓದುತ್ತ ಬೆಳೆದವನು. ಘಟಶ್ರಾದ್ಧ ಓದಿ ಮುಗಿಸುವಾಗ ನನ್ನ ಮನಸಿನ ಮೇಲೆ ಮಾಡಿದ್ದ ಪರಿಣಾಮ ಮಾತ್ರ ಅದ್ಭುತ ಅನ್ನುವಷ್ಟು. ಹಾಗೆ ಮೌನಿ ಅನ್ನುವ ಕತೆ, ಸಂಸ್ಕಾರದ ನಿರೂಪಣೆ ಇವೆಲ್ಲ ಮನಸಿನ ಮೇಲೆಮಾಡಿದ್ದ ಪರಿಣಾಮ ತುಂಬಾ ಗಾಡವಾದುದ್ದು. ಆದರೆ ಆಗೆಲ್ಲ ಇಷ್ಟೊಂದು ಮಾಧ್ಯಮಗಳ, ಸೋಸಿಯಲ್ ಮೀಡಿಯಾ ಅನ್ನುವ ಪುಟಗಳ ಪ್ರಭಾವವಾಗಲಿ ಅಥವ ವಿಲೋಮ ಪ್ರಭಾವವಾಗಲಿ ಇರಲಿಲ್ಲ. ಪುಸ್ತಕಗಳನ್ನು ವಸ್ತುನಿಷ್ಠವಾಗಿ ಓದುವ ಅಭ್ಯಾಸ. ಓದಿದ ನಂತರ ಅವರ ಕತೆಗಳಲ್ಲಿ ಮನಸು ವಿಹರಿಸುತ್ತಿತ್ತು, ಅಥವ ಕತೆಯ ಬಗ್ಗೆ ಹಾಗಲ್ಲ ಹೀಗೆ ಅನ್ನುವ ಭಾವ ಮೂಡುತ್ತಿತ್ತೆ ಹೊರತಾಗಿ , ಕತೆ ಬರೆದ ಅನಂತಮೂರ್ತಿಯವರ ಬಗ್ಗೆ ಮನಸು ಚಿಂತಿಸುತ್ತಿರಲಿಲ್ಲ. ಕ್ರಮೇಣ ಎಲ್ಲವೂ ಬದಲಾಗುತ್ತ ಸಾಗಿತು. ಮಾಧ್ಯಮಗಳು ಪ್ರಭಾವಶಾಲಿಯಾದವು , ಹೆಚ್ಚು ಕಡಿಮೆ ನಮ್ಮ ಮನಸಿನ ಭಾವನೆಗಳನ್ನು ಅವು ನಿಯಂತ್ರಿಸುವ ಮಟ್ಟಕ್ಕೆ ಬೆಳೆದವೇನೊ. ಅನಂತಮೂರ್ತಿಗಳು ವೈದೀಕ ಸಂಪ್ರದಾಯದ, ಬ್ರಾಹ್ಮಣ ಸಂಪ್ರದಾಯಗಳ ವಿರೋದಿ, ಹಾಗು ಅವರ ಬರಹಗಳು ಸಹ ಪ್ರಮುಖವಾಗಿ ಈ ಸಂಪ್ರದಾಯಗಳ ಹುಳುಕನ್ನು ಹೊರಹಾಕುವದಷ್ಟಕ್ಕೆ ಸೀಮಿತ ಅನ್ನುವಂತೆ ಮನಸಿನ ಭಾವನೆ ಬದಲಾಯಿತು. ಬಹುಶಃ ಅದರಲ್ಲಿ ತಪ್ಪು ಇರಲಿಲ್ಲ.

ನಂತರ ವ್ಯಕ್ತಿಯೊಬ್ಬರ ಬರಹಗಳಿಗಿಂತ ವ್ಯಕ್ತಿಯ ಪ್ರಭಾವ ಮುಖ್ಯ ಎನ್ನುವ ಘಟ್ತ ತಲುಪಿತೇನೊ, ಈಚಿನ ವರ್ಷಗಳಲ್ಲಿ ಅನಂತಮೂರ್ತಿಯವರ ಬರಹಗಳ ಬಗ್ಗೆ ಚರ್ಚೆಯಾಗಿದ್ದು ಕಡಿಮೆಯೆ ಅವರ ಮಾತುಗಳು, ಅವರ ವರ್ತನೆ ಅವರ ಜೀವನ ಇಂತಹುವುಗಳೆ ಸಾಮಾಜಿಕ ತಾಣಗಳಲ್ಲಿ , ಮುದ್ರಣ ಮಾಧ್ಯಮಗಳಲ್ಲಿ ಚರ್ಚೆಗೆ ಒಳಪಟ್ಟವು. ಹಾಗು ಅವರು ಸಹ ಅದನ್ನು ಬೆಳೆಸುತ್ತಲೆ ಬಂದರು ಅನ್ನುವುದು ಸಹ ಸತ್ಯವೇ. ಸದಾ ಯಾವುದಾದರೊಂದು ವಿವಾದಗಳ ಮೂಲಕವೇ ಅವರ ಹೆಸರು ಪದೆ ಪದೇ ಮಾಧ್ಯಮಗಳಲ್ಲಿ ಬರುತ್ತಿತ್ತು ಎನ್ನುವುದು ಗಮನಿಸುವಾಗ ಕ್ರಮೇಣ ಅವರ ಶ್ರಮ ಸಾಹಿತ್ಯ ಕೃಷಿಗಳೆಲ್ಲ ಹಿಂದಕ್ಕೆ ಸರಿದವು. ...

ನಾನು ಹಿಂದೊಮ್ಮೆ ಬರೆದಿದ್ದ ಸಾಲುಗಳು ಮತ್ತೆ ಅದೇಕೊ ನೆನಪಿಗೆ ಬರುತ್ತದೆ. ಹೋಲಿಕೆ ಯಾವ ಮಟ್ಟಕ್ಕೆ ನಿಜವೋ ಗೊತ್ತಿಲ್ಲ . ಶ್ರೀ ಅನಂತಮೂರ್ತಿಗಳು ಒಂದು ರೀತಿ ವಿಶ್ವಾಮಿತ್ರನ ರೀತಿ , ಆದರೆ ಹೋಲಿಕೆ ಮಾತ್ರ ವಿಲೋಮ ರೀತಿಯಲ್ಲಿ. ಕೌಶಿಕನೆಂಬ ಕ್ಷತ್ರೀಯನೊಮ್ಮ ತನಗೆ ಸಿಗದ ಕಾಮದೇನುವಿಗಾಗಿ ವಶಿಷ್ಟರ ಜೊತೆ ಯುದ್ದ ಹೂಡಿ ಪರಾಜಿತನಾದ, ಕೇವಲ ಒಬ್ಬ ಬ್ರಾಹ್ಮಣನನ್ನು ಎದುರಿಸಲಾಗದ ಅವನ ಕ್ಷತ್ರೀಯ ಗುಣ ಅವನನ್ನು ಚಕಿತಗೊಳಿಸಿತ್ತು. ಯಾವ ಬ್ರಾಹ್ಮಣ ಶಕ್ತಿ ಅವನನ್ನು ಸೋಲಿಸಿತ್ತೋ ಅದು ಅವನನ್ನು ಕೆರಳಿಸಿತ್ತು, ಆದರೆ ಅವನ ಕೋಪ ಸರಿಯಾದ ದಾರಿಯಲ್ಲಿತ್ತು, ಸಕಾರಾತ್ಮಕವಾಗಿತ್ತು. ಯಾವ ಬ್ರಹ್ಮಶಕ್ತಿ ತನ್ನನ್ನು ಸೋಲಿಸಿತೋ , ತಾನು ಸಹ ಅಂತಹ ಬ್ರಾಹ್ಮಣನಾಗಬೇಕೆಂದು ನಿರ್ಧರಿಸಿದ. ಯಾವುದು ಹುಟ್ಟಿನಿಂದ ಬರಲಿಲ್ಲವೋ ಅದನ್ನು ಸಾದನೆಯಿಂದ ಗಳಿಸಬೇಕೆಂದು ಪಣತೊಟ್ಟ ಅದು ಎಂತಹ ಪಣ, ತಾನು ದ್ವೇಷಿಸಿ , ಯಾರಿಂದ ತಾನು ಸೋತುಹೋದೆನೋ ಅಂತ 'ವಶಿಷ್ಟರಿಂದಲೆ ತಾನು ಮಹಾಬ್ರಾಹ್ಮಣ' ಅನ್ನಿಸಿಕೊಳ್ಳಬೇಕು ಅನ್ನುವ ಛಲ. ಆ ದಾರಿಯಲ್ಲಿ ತಾನು ದ್ವೇಷಿಸಿ ವಿರೋದಿಸಿದ ಬ್ರಹ್ಮ ಶಕ್ತಿಗೆ ಸವಾಲು ಎನ್ನುವಂತೆ ತಾನೆ ಬ್ರಾಹ್ಮಣನಾಗುತ್ತ ಸಾಗಿದೆ, ಅದೇ ಹಾದಿಯಲ್ಲಿ ಅವನು ಒಂದು ' ತ್ರಿಶಂಕು ಸ್ವರ್ಗ' ವನ್ನು ಕಟ್ಟಿಕೊಂಡ, ಕಡೆಗೆ ಅದೆಲ್ಲವನ್ನು ದಾಟಿ ಅವನು ಮಹಾಬ್ರಾಹ್ಮಣನಾದ' ಈಗ ನೋಡಿ,

ತಾನು ಬ್ರಾಹ್ಮಣನಾಗಿಯೆ ಹುಟ್ಟಿದವರು ಅನಂತಮೂರ್ತಿಗಳು, ತಾವು ಬ್ರಾಹ್ಮಣರ ಸಂಪ್ರದಾಯಗಳನ್ನು ವಿರೋದಿಸಿದರು. ತಾವು ಬ್ರಾಹ್ಮಣತ್ವವನ್ನು ತ್ಯಜಿಸುತ್ತ , ಅಬ್ರಾಹ್ಮಣರಾಗುತ್ತ ಸಾಗಿದರು. ಅವರ ಜೀವನದ ಪ್ರತಿ ಘಟ್ಟದಲ್ಲು ತಾವು ನಂಬಿದ ತತ್ವಕ್ಕೆ ಅನುಗುಣವಾಗಿ ಬ್ರಾಹ್ಮಣತ್ವವನ್ನು ವಿರೋದಿಸುತ್ತ, ಕಡೆಗೆ ತಮ್ಮ ಸುತ್ತ ತಾವೆ ಎಲ್ಲರ ದ್ವೇಷ, ವಿರೋದ, ದ್ವಂದ್ವಗಳ, ವಿವಾದಗಳ, ತೀವ್ರ ಅನಾರೋಗ್ಯದ ಜೊತೆಗೆ ತ್ರಿಶಂಕು ನರಕವನ್ನೆ ನಿರ್ಮಿಸಿಕೊಂಡು ಬಿಟ್ಟರು. ಅದನ್ನು ದಾಟುವ ಶಕ್ತಿ ಅವರಿಗಿತ್ತು. ತಾವು ನಂಬಿದ ತತ್ವಕ್ಕೆ ಅನುಗುಣವಾಗಿ ಅಬ್ರಾಹ್ಮಣತ್ವದ ಕಡೆಗೆ ನಡೆಯಬೇಕಾದ ಅವರು ಕಡೆಗೆ ಮತ್ತೆ ದ್ವಂದ್ವಕ್ಕೆ ಸಿಲುಕಿದರಾ ಎನ್ನುವ ಅನ್ನುಮಾನ. ಜೀವನ ಪೂರ್ತಿ ಯಾವ ಭ್ರಾಹ್ಮಣ 'ಸಂಸ್ಕಾರಗಳನ್ನು' ಅವರು ದೂರ ಸರಿಸುತ್ತ, ವಿರೋದಿಸುತ್ತ ಬಂದರೋ ಅಂತಹ ಸಂಸ್ಕಾರ ಆಚರಣೆಗಳು ಅವರ ಸಾವಿನ ನಂತರ ಅವರನ್ನು ಆಕ್ರಮಿಸಿದ್ದು ಕಾಣುವಾಗ ಎಂತಹ ವಿರೋಧಭಾಸವಲ್ಲವೆ ಅನ್ನಿಸುತ್ತೆ. ಅಥವ ಹೀಗೂ ಅರ್ಥಮಾಡಿಕೊಳ್ಳಬಹುದಾ, ಬದುಕಿನ ಅಂತ್ಯದವರೆಗೂ ಅವರು ವಿರೋದಿಸುತ್ತಿದ್ದ ಸಂಸ್ಕಾರ ರೂಪಗಳು ಅವರ ಸಾವಿನ ನಂತರೆ ತಾವು ಗೆದ್ದವೆಂದು ವಿಜೃಂಬಿಸಿದವಾ ?

ನನ್ನ ಈ ಭಾವನೆಗಳೆಲ್ಲ ದೀರ್ಘ ಮೌನದಲ್ಲಿ ಲೀನವಾದ ಅನಂತಮೂರ್ತಿ ಎಂಬ ಪ್ರಸಿದ್ದರ ಬಗೆಗಲ್ಲ, ಪ್ರಕೃತಿಯಲ್ಲಿ ಸದಾ ನಡೆಯುವ ಶಕ್ತಿ ಶಕ್ತಿಗಳ ನಡುವಿನ ಹೋರಾಟದ ಬಗ್ಗೆ, ಜನಮನದಲ್ಲಿ ನಡೆಯುವ ಜಿಜ್ಞಾಸೆಯ ತಿಕ್ಕಾಟದ ಮತ್ತೊಂದು ರೂಪವೆ ಈ ಅನಂತಮೂರ್ತಿಗಳು ಎನ್ನುವ ವ್ಯಕ್ತಿಯ ಜೀವನವೇನೊ ಎನ್ನುವ ಕೌತುಕದ ಬಗ್ಗೆ

Rating
No votes yet

Comments

Submitted by kavinagaraj Mon, 08/25/2014 - 09:30

ಉತ್ತಮ ವಿಶ್ಲೇಷಣೆ, ಪಾರ್ಥಸಾರಥಿಯವರೇ. ಹುಟ್ಟಿನ ಬ್ರಾಹ್ಮಣರು ಆಚರಿಸುತ್ತಿರುವ ಅನೇಕ ಸಂಪ್ರದಾಯಗಳು ಬ್ರಾಹ್ಮಣ್ಯ ವಿರೋಧಿಯಾಗಿವೆ. ನಿಜವಾದ ಬ್ರಾಹ್ಮಣ್ಯದಲ್ಲಿ ತಾರತಮ್ಯ ಭಾವ ಇರಬಾರದು, ಇರಲಾರದು.

Submitted by H A Patil Mon, 08/25/2014 - 20:46

ಪಾರ್ಥ ಸಾರಥಿ ಯವರಿಗೆ ವಂದನೆಗಳು
ಅನಂತ ಮೂರ್ತಿಯವರ ಕುರಿತು ತಾವು ಬರೆದ ಲೇಖನ ವಿಚಾರಾರ್ಹವಾಗಿದೆ, 'ಬ್ರಾಹ್ಮಣ್ಯವನ್ನು ಅನಂತ ಮೂರ್ತಿಯವರು ಬಿಟ್ಟರೂ ಬ್ರಾಹ್ಮಣ್ಯ ಅವರನ್ನು ಬಿಡಲಿಲ್ಲ'. ಅವರ ಮರಣಾ ನಂತರ ಅವರ ಕುಟುಂಬದವರು ಆಚರಿಸಿದ ವಿಧಿ ವಿಧಾನಗಳಿಗೆ ಅನಂತ ಮೂರ್ತಿಯವರನ್ನು ಹೇಗೆ ಹೊಣೆಗಾರರನ್ನಾಗಿ ಮಾಡಲು ಸಾಧ್ಯ? ಇಲ್ಲಿಯೂ ಅನೇಕರು ಈ ಕುರಿತು ಅಪಸ್ವರ ಎತ್ತಿದ್ದಾರೆ, ಹೀಗಾಗಿ ಈ ಅನಿಸಿಕೆ, ವಿಚಾರಾರ್ಹ ಲೇಖನ ನೀಡಿದ್ದೀರಿ ಧನ್ಯವಾಧಗಳು.

Submitted by partha1059 Tue, 08/26/2014 - 08:58

In reply to by H A Patil

ಪಾಟಿಲರೆ ನಮಸ್ಕಾರ,
ಅನಂತಮೂರ್ತಿಯವರ ಜೀವನ ಅಥವ ಸಾವಿನ ನಂತರದ ಆಚರಣೆಯ ಬಗ್ಗೆ ನನ್ನ ವಿಚಾರವಲ್ಲ, ಅನಂತಮೂರ್ತಿಯಂತವರು ಸಾವಿರಾರು ವರ್ಷಗಳಿಂದ ಹುಟ್ಟುತ್ತಲೆ , ತಮ್ಮ ದಾರಿಯಲ್ಲಿ ಹೋರಾಡುತ್ತಲೆ ಹೋಗುತ್ತಿದ್ದಾರೆ, ಆದರೆ ಈ ಹೋರಾಟದಲ್ಲಿ ಒಮ್ಮೆ ಅಂತಹ ಹೋರಾಟದ ಕೈ ಮೇಲೆ ಅನಿಸಿದರೆ, ಮತ್ತೊಮ್ಮೆ ಇಂತಸ ಆಚರಣೆಗಳು ಅವರ ಮೇಲೆ ವಿಜಯ ಸಾದಿಸುತ್ತವೆ. ಇಳಿ ವಯಸಿನಲ್ಲಿ ಅನಂತಮೂರ್ತಿಗಳಂತವರು ತಮ್ಮೆಲ್ಲ ಹೋರಾಟ ಬದಿಗಿತ್ತು, ವಿದ್ಯುತ್ ಚಿತಾಗರಾದಲ್ಲಿ ನನ್ನನ್ನು ಸುಡಬೇಡ ಅಗ್ನಿಯಲ್ಲಿಯೆ ಸುಡು ಎಂದು ಆಸೆ ವ್ಯಕ್ತ ಪಡಿಸುತ್ತಾರೆ, ಸುಡುವ ಕ್ರಿಯೆ ಒಂದೆ ಅಲ್ಲವೆ, ವಿಚಾರವಾದವೆಲ್ಲ ಎಲ್ಲಿ ಹೋಯಿತು? . ಅದಕ್ಕಾಗಿಯೆ ಹೇಳಿದೆ ಇಂತಹ ಹೋರಾಟಗಳು ಸೋಲು ಗೆಲುವುಗಳು ಇತಿಹಾಸದಲ್ಲಿ ಸಾಗುತ್ತಲೆ ಇರುತ್ತದೆ, ಮತ್ತೆ ನೂರು ವರ್ಷಗಳ ನಂತರ ಅನಂತಮೂರ್ತಿಗಳ ಬದಲಿಗೆ ಮತ್ಯಾರೊ ತಮ್ಮ ವೈಚಾರಿಕೆ ಹೋರಾಟ ಮುಂದುವರೆಸುತ್ತಾರೆ, ಗೆಲ್ಲುತ್ತ ಸೋಲುತ್ತ ಸಾಗುತ್ತಲೆ ಇರುತ್ತರೆ, ಶ್ರೀ ಬಸವಣ್ಣನವರ ಕಾಲದಿಂದಲೂ, ಅಥವ ಹಿಂದಕ್ಕೆ ಹೋದರೆ ನಚಿಕೇತನ ಕಾಲದಿಂದಲೂ ಇಂತಹುದೆಲ್ಲಾ ಇತಿಹಾಸದಲ್ಲಿ ದಾಖಲಾಗುತ್ತಲೆ ಸಾಗಿದೆ, ಗಮನಿಸುವ ವ್ಯವದಾನ ನಮಗಿರಬೇಕು ಅಲ್ಲವೆ ?
‍ ‍ ವಂದನೆಗಳು,
ಪಾರ್ಥಸಾರಥಿ
ಕವಿನಾಗರಾಜರಿಗೆ ತಮ್ಮ ಪ್ರತಿಕ್ರಿಯೆಗಾಗಿ ವಂದನೆಗಳು

Submitted by ಗಣೇಶ Wed, 08/27/2014 - 00:33

In reply to by H A Patil

ಪಾಟೀಲರೆ,
ಅನಂತಮೂರ್ತಿಗಳದ್ದು ವಿಚಾರವಾದ...ಇಲ್ಲಿ ಅನೇಕರದ್ದು "ಅಪಸ್ವರ".. ಯಾಕೆ ಹೀಗೆ?:)
ಪಾರ್ಥಸಾರಥಿಯವರ ಲೇಖನ ಹಾಗೂ ಪ್ರತಿಕ್ರಿಯೆ-ವಿಚಾರಯೋಗ್ಯ.