ಮ್ಮೊಕಜ್ಜಿಯ ದಾರಿ....

ಮ್ಮೊಕಜ್ಜಿಯ ದಾರಿ....

ಸಂಜೆ ಆರಾದರೂ ಅಕ್ಕ-ಪಕ್ಕದ ಮನೆಯ ಹುಡುಗರ ಜೊತೆ ಇನ್ನೂ ಆಡುತ್ತಿದ್ದ ಮೊಮ್ಮಗನ್ನನ್ನು ಕಂಡು ಅಜ್ಜಿ "ಗುಂಡಾ... ಅದ್ ಎಷ್ಟ್ ಅಂತ ಕುಣಿತೀಯ..ಕತ್ಲಾತು.. ಬಾ.. ಬಂದ್ ಓದ್ಕ" ಅಂದಳು. ಶಕ್ಕ್ತಿಇಲ್ಲದ ಆ ದ್ವನಿ ಮೊಮ್ಮಗನ ಸಣ್ಣ ಕಿವಿಗಳನ್ನು ತಟ್ಟಲಿಲ್ಲ. ಆದರೂ ಅಜ್ಜಿ ಮತ್ತೊಮ್ಮೆ ತನ್ನ ಪ್ರಯತ್ನವನ್ನು ಮಾಡಿದಳು. "ಅರ್ರೆ..ಇನ್ನೂ ಸಂಜೆ ಆರು..ಕತ್ಲೆ ಏನ್ ಆಗಿಲ್ಲ.. ಹೋಗಿ ಕನ್ನಡಕ ಹಾಕೋಳಿ... ಆಡೋ ವಯಸ್ಸು, ಇವಗ್ ಆಡದೆ ಇನ್ನ್ಯಾವಾಗ ಆಡ್ತಾನೆ?! ಆಮೇಲೆ ಅವ್ನ ಹೆಸ್ರು ಸೈದಾಂತ್.. ಗುಂಡ ಅಂತ ಅಲ್ಲ!" ಕೈಯಲ್ಲಿ ರಿಮೋಟ್ ಹಿಡಿದು ಟಿವಿಯ ಮುಂದೆ ರಾರಜಿಸಿದ್ದ ಸೊಸೆ ಏರು ದ್ವನಿಯಲ್ಲಿ ಕೂಗಿದಳು.

ಅರ್ಥವರಿಯದ,ಒಮ್ಮೆಯೂ ಆಡದ, ಕ್ಲಿಷ್ಟ ಪದದ ಮೊಮ್ಮಗ ಎಂದಿಗೂ ಅಜ್ಜಿಗೆ, ಪ್ರೀತಿಯ ಗುಂಡ. ಸೊಸೆಯ ಮಾತನ್ನು ಮನಸ್ಸಿಗೆ ಹಾಕಿಕೊಳ್ಳದೆ ಅಜ್ಜಿ,ತನ್ನ ಊರುಗೋಲನ್ನು ಹೊರಗೆಳೆದು ತುಸು ದೂರ ನಡೆದಾಡಲು ಹೊರಟಳು. ಆಗ ತಾನೆ ಮುಳುಗಿದ್ದ ಸೂರ್ಯನ ಕಿರಣಗಳು ಇನ್ನೂ ಪಶ್ಚಿಮದ ಆಗಸದಲ್ಲಿ ಹೊಳೆಯುತಿದ್ದವು.ವಯಸ್ಸು ಎಪ್ಪತ್ತಾದರೂ ಆಕೆಯ ಶಕ್ತಿ ಏನೂ ಕುಂದಿರಲಿಲ್ಲ. ಕೆಲವೇ ಕ್ಷಣಗಳಲ್ಲಿ ಅಜ್ಜಿ ಬಹು ದೂರ ನೆಡದಿದ್ದಳು. ಸೂರ್ಯನ ಕಿರಣಗಳು ಕಣ್ಮರೆಯಾಗಿ ಕೆಂದಾವರೆ ಬಣ್ಣದ ಆಕಾಶ ಕಣ್ಣಿಗೆ ಹಿತವಾಗಿ ಕಾಣುತಿತ್ತು. ದೂರ ದೂರಕ್ಕೆ ಹರಡಿರುವ ಹಸಿರಾದ ಮೈದಾನ, ಅದಕ್ಕೆ ಆಂಟಿಕೊಂಡು ಮೇಲೆದ್ದಿರುವಂತಿರುವ ಆಕಾಶ. ದೇಶ-ವಿದೇಶವನ್ನು ಕಂಡಿರದ ಅಜ್ಜಿಗೆ ಈ ಜಾಗವೇ ಎಲ್ಲಾ. ತನ್ನ ಮನದಲ್ಲಿರುವ ತುಮುಲಗಳನ್ನೆಲ್ಲ ಮುಳುಗುವ ಸೂರ್ಯನ್ನೋದಿಗೆ ಹಂಚಿಕೊಳ್ಳುತ್ತಿದ್ದಳು. ಅದೆಷ್ಟೇ ಮಾತಾಡಿದರೂ ಸೂರ್ಯ ಎಂದಿಗೂ ಬೇಜಾರಾಗುತ್ತಿರಲಿಲ್ಲ, ಎಲ್ಲವನ್ನು ತಾಳ್ಮೆಯಿಂದ ಆಲಿಸಿ, ಅಜ್ಜಿಯ ಮನಸ್ಸನ್ನು ಹಗುರಾಗಿಸುತ್ತಿದ್ದ. ಆದರೆ ಇಂದ್ಯಾಕೋ ಅಜ್ಜಿಗೆ, ಸೊಸೆಯ ಕೊಂಕು ಮಾತು ಮನಸ್ಸಿಗೆ ನಾಟಿತು."ತಾನೊಬ್ಬ ಅನಕ್ಷರಸ್ತೆ ಅನ್ನುವ ಒಂದೇ ಕಾರಣಕ್ಕೆ ಜನ ಹೀಗೆ ನೋಡ್ತಾರ? ನಾನೂ ಲಕ್ಷ್ಮಿತರ ಸ್ಕೂಲು ಕಾಲೇಜು ಅಂತ  ಹೋಗಿದ್ದರೆ ಮಾತ್ರ ನನ್ನನು ಗುರ್ತಿಸ್ತಿದ್ರ? ನನ್ನ ಮಕ್ಳು ನನ್ನ ಗೌರವಿಸುತಿದ್ರ?! ತನ್ನ ತಾಯಿ ಒಬ್ಬ ಅವಿಧ್ಯಾವಂತೆ ಅನ್ನೋ ಒಂದೇ ಕಾರಣಕ್ಕೆ ಇಂದು ನಾನು ತನ್ನ ಮಕ್ಕಳಿಗೆ ಬೇಕು ಬೇಡವಾಗಿದ್ದೀನ? ಹಾಗಾದ್ರೆ ನಾನು ಜೀವನದಲ್ಲಿ ಇಷ್ಟೆಲ್ಲಾ ಕಷ್ಟ ಬಿದ್ದು, ಹೊಟ್ಟೆ-ಬಟ್ಟೆ ಕಟ್ಟಿ ಅವ್ರನ್ನೆಲ್ಲ ಬೆಳಸಿದೆಲ್ಲ ಲೆಕ್ಕಕ್ಕೆ ಇಲ್ವಾ. ಲಕ್ಹ್ಮಿ ಮಕ್ಕ್ಲುಅಕೆನ ಅದೆಷ್ಟು ಪ್ರೀತಿ ವಿಶ್ವಾಸದಿಂದ ನೋಡ್ತಾರೆ. ಪ್ರತಿ ವಾರ ಒಬ್ಬೊಬ್ರು, ಒಬ್ಬೊಬ್ರ ಮನೆಗೆ ಕರ್ಕೊಂಡು ಹೋಗ್ತಾರೆ. ಶಾಲಾ ಶಿಕ್ಷಕಿ ಆದ ಆಕೆಗೆ ಊರಿಗೆ ಊರೆ ಗೌರವಿಸುತ್ತೆ.

ಜೀವನವೆಲ್ಲಾ ಪರರಿಗೆ ಮುಡಿಪಾಗಿಟ್ಟ ಅಜ್ಜಿ ಮೊದಲ ಬಾರಿಗೆ ತನ್ನ  ಜೀವನದ ಅರ್ಥ ತಿಳಿಯಬಯಸಿದಳು! ನಿರ್ಮಲ ತಾಯಿಯ ಪ್ರೀತಿ, ಅನಮ್ಯ ಕರುಣೆಗಿಂತಲೂ ಕಾಲೇಜು, ಡಿಗ್ರಿಗಳೇ ಹೆಚ್ಚಾ..? “ಅಜ್ಜಿ ಯೋಚಿಸತೊಡಗಿದಳು.

ದೂರ ದೂರಕ್ಕೆ ಹಾರಿ ದಣಿದ ಹಕ್ಕಿಗಳು ಪುನ್ಹ  ತಮ್ಮ ಗೂಡು ಸೇರುತ್ತಿದ್ದವು. ಅಜ್ಜಿಯ ಕಣ್ಣುಗಳು ದೂರದ  ಮೈದಾನದಲ್ಲಿ ಆಡುತ್ತಿದ್ದ ಮಕ್ಕಳನ್ನೇ ದಿಟ್ಟಿಸುತ್ತಿದ್ದವು. ಇದ್ದಕ್ಕಿದ್ದಂತೆ ಅಕೆಗೆ ಇಬ್ಬರು ಪುಟ್ಟ ಹುಡುಗಿಯರು ಇತ್ತ ನೆಡೆದುಕೊಂಡು ಬರುವುದು ಕಂಡಿತು.ಅಜ್ಜಿ, ತನ್ನ ಕಣ್ಣನ್ನೊಮ್ಮೆ ಮುಚ್ಚಿ ಬಿಟ್ಟಳು. ಸುಮಾರು ಎಂಟತ್ತು ಪ್ರಾಯದ ಅವರಲ್ಲಿ ಒಬ್ಬಾಕೆ ಅಜ್ಜಿಯನ್ನು ನೋಡಿ ಮುಗುಳ್ನಕ್ಕಳು. ಆಕೆಯ ಬಲ ಕೈಯಲ್ಲಿ ಸಿಂಬು(ಸಗಣಿ ತುಂಬಿದ ಕುಕ್ಕೆಯನ್ನುಒರಲು ತಲೆಗೆ ಆದಾರವಾಗಿ ಬಳಸುವ ಬಟ್ಟೆಯ ಸಾದನ) ಹಾಗು ಎಡಗೈಯಲ್ಲಿ ಸಗಣಿಯ ಖಾಲಿ ಕುಕ್ಕೆ. ಮೂಗ ಮುಗುತ್ತಿ ಹಾಗೂ ಕೈಯ ಒಂದು ಗಾಜಿನ ಬಳೆ ಬಿಟ್ಟು ಆಕೆಯ ಮೈಮೇಲೆ ಮತ್ಯಾವುದೇ ಆಭರಣಗಳಿಲ್ಲ. ತನ್ನ ಸಣ್ಣ ತಮ್ಮನಿಗಾಗಿ ದಾರಿಯಲ್ಲಿದ್ದ ಕಿತ್ತಳೆ ಮರದಿಂದ ನಾಲ್ಕು ಪುಟ್ಟ ಕಿತ್ತಳೆಹಣ್ಣುಗಳನ್ನು ಅಂಗಿಯ ಜೇಬಿನಲ್ಲಿ ತೂರಿಸಿದ್ದಾಳೆ. ಮುಂಜಾವಿನಿಂದ ಸಂಜೆಯವರೆಗೂ ಹಟ್ಟಿಯಲ್ಲೇ ದುಡಿದು ದಣಿದ ಸಣಕಲು ಮೈಯಿಂದ ಬರುವ ವಾಸನೆಗೆ ಜನರು ಆಕೆಯಿಂದ ದೂರ ಸರಿಯುತ್ತಿದ್ದರು. ಆಕೆಯ ಪಕ್ಕದಲ್ಲಿದ್ದ ಹುಡುಗಿ ನಾಲ್ಕಾರು ಪುಸ್ತಕಗಳನ್ನು ಎದೆಗೆ ಅವುಚಿಗೊಂಡು ಬರುತ್ತಿದ್ದಳು. ಮೈತುಂಬ ಬಣ್ಣದ ಬಟ್ಟೆ ದರಿಸಿದ್ದ ಅವಳಿಂದ ಇವಳು ತುಸು ದೂರದಲ್ಲೇ ಇದ್ದಳು. ಆಕೆಯ ಕೈಲಿದ್ದ ಪುಸ್ತಕದ ಮೇಲೆ ಇವಳ ದೃಷ್ಟಿ ನೆಟ್ಟಿರುವುದು ಕಂಡಿತು. ಅದೊಂದು  ದಿನ ಮನೆಯ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳಲು ಊರಿನ ಶಿಕ್ಷಕರು ಮನೆಗೆ ಬಂದಿದ್ದರು. ಈಕೆ ಕುಕ್ಕೆಯಲ್ಲಿ ಗದ್ದೆಗೆ ಸಗಣಿ ಹಾಕಿ ಬರುವಾಗಷ್ಟರಲ್ಲೇ ಎಲ್ಲಾ ಹೊರಟಿದ್ದರು. ಮನೆಯ ಯಾರೊಬ್ಬರೂ ಈಕೆಯ ಬಗ್ಗೆ ಹೇಳಲಿಲ್ಲವನ್ನಿಸುತ್ತೆ. ಈಕೆಯೂ ಶಾಲೆಗೆ ಹೋದರೆ ಹಟ್ಟಿಯ ಕೆಲಸ ಯಾರು ಮಾಡುವರು...?

ಮುಂಜಾನೆಯ ಕೋಳಿ ಕೂಗುವ ಮುನ್ನವೇ ಕೊರೆಯುವ ಚಳಿಯಲ್ಲಿ ಎದ್ದು, ಹಟ್ಟಿಗೆ ಹೋಗಿ, ಸಗಣಿಯನ್ನು ಬಾಚಿ, ಕುಕ್ಕೆಗೆ ತುಂಬಿ, ಎರಡು ಮೈಲು ದೂರ ಚಲಿಸಿ ಕುಕ್ಕೆಯನ್ನು ಖಾಲಿ ಮಾಡಿ, ವಾಪಾಸ್ ಬಂದು ಪುನಃ ಮತ್ತೊಮ್ಮೆ ಕುಕ್ಕೆಯನ್ನು ತುಂಬಿ, ಖಾಲಿ ಮಾಡಿ ಬರುವಾಗಲೇ ಅಮ್ಮನ ಸದ್ದು, "ಇನ್ನೂ ಹಾಲ್ ಬಿಟ್ತಿಲ್ವೇನೆ!?" ನೋಯುವ ಎಳೆ ಸೊಂಟದ ಮೇಲೆ ಕೈ ಇಟ್ಟು ದಣಿವು ನೀಗಲು ಸಮಯವಿಲ್ಲ! ಕೊಟ್ಟಿಗೆಯ ಗೋಡೆ ಮೇಲಿಟ್ಟಿರುವ ಪಾತ್ರೆಯನ್ನು ತೆಗೆದು, ಒದೆಯುವ ನಾಲ್ಕೈದು ಹಸುಗಳಿಂದ ಹಾಲು ಕರೆಯುವಷ್ಟರಲ್ಲಿ ಘಂಟೆ ಒಂಭತ್ತು!! ಪುಟ್ಟ ತಮ್ಮ ಶಾಲೆಗೆ ಹೋಗುವ ಮುನ್ನ ಹಾಲು ಬಿಸಿ ಮಾಡಿ ಕೊಡಬೇಕು ಎನ್ನುತ ಓಡೋಡಿ ಬರುತ್ತಿದ್ದಳು. ಇಷ್ಟೆಲ್ಲಾ ಮುಗಿದು ಹಸಿಯುವ ಹೊಟ್ಟೆಗೆ ಉಳಿಯುತ್ತಿದ್ದಿದ್ದು ಎರಡು  ತಣ್ಣನೆಯ ರೊಟ್ಟಿ ಹಾಗು ಉಪ್ಪಿನಕಾಯಿ. ಅದನ್ನೇ ಸಂತೋಷದಿಂದ ತಿಂದು ಪುನಃ ಗದ್ದೆಯ ಕಡೆ ಮುಖ ಮಾಡಿ ಕೆಲಸಕ್ಕೆ ಹೋಗುತ್ತಿದ್ದಳು.

ಈಕೆ ಎಂದರೆ ಊರ ಮಕ್ಕಳಿಗಂತು ವಿಪರೀತ ಇಷ್ಟ. ಸಣ್ಣ ಕಥೆಯನ್ನೂ ಸ್ವಾರಸ್ಯಯುತವಾಗಿ ಹೇಳುತ್ತಾ ಹೋದರೆ ಮಕ್ಕಳು ತೆರೆದ ಬಾಯಿಯನ್ನು ಮುಚ್ಚುತಿರಲಿಲ್ಲ. ಅಷ್ಟೊಂದು ಸೊಗಸಾದ ವರ್ಣನೆ! ಕೆಲವೊಮ್ಮೆ ಅಜ್ಜಿಯಂದಿರೂ ಈಕೆಯ ಕಥೆಯನ್ನು ಕೇಳಲು ಬರುವುದುಂಟು. 'ಚಿತ್ರಮಂದಿರಕ್ಕೆ ಹೋಗಿ ಹಣ ವೆಚ್ಚ ಮಾಡುವುದಕಿಂತ ಈಕೆಯ ಕಥೆ ಸೊಗಸು' ಅನ್ನುವ ಹೊಗಳಿಕೆಯ ಮಾತಿಗೆ ಈಕೆಯ ಅಪ್ಪ ಸಿಡುಗುತ್ತಿದ್ದ. 'ತಮ್ಮುಗಿಂತ ಅಕ್ಕ ಬಹಳ ಚುರ್ಕು, ಸ್ಕೂಲೇ ಕಳ್ಸಿ, ಚೆನ್ನಾಗ್ ಓದ್ತಾಳೆ, ಒಳ್ಳೆ ಹೆಸ್ರು ಮಾಡ್ತಾಳೆ ' ಅನ್ನೋ ಮಾತಿಗೆ ಅಪ್ಪನ ಸಿಟ್ಟು ನತ್ತಿಗೇರುತ್ತಿತ್ತು! "ನೆಟ್ಗೆ ಅಡ್ಗೆ ಮಾಡಿ ಪಾತ್ರೆ ಉಜ್ಜೋದ್ ಕಲಿಲಿ ಸಾಕು! ಸ್ಕೂಲು ಗೀಲು ಎಲ್ಲಾ ಕಂಡಿದಾರೆ" ಅನ್ನುತ ಕೂಗುತ್ತಿದ್ದ. ಅಪ್ಪನ ಮಾತಿಗೆ ಹೆದರಿ ಅಂದಿನಿಂದ ಕಥೆ ಹೇಳುವುದನ್ನು ನಿಲ್ಲಿಸಿ ಬಿಟ್ಟಳು ಸಣಕಲು ಜೀವದ ಹುಡುಗಿ! ಜೀವನ ಹಟ್ಟಿಯಲ್ಲಿ ಶುರುವಾಗಿ ಹಟ್ಟಿಯಲ್ಲೇ ಕೊನೆಗಾಣುತಿತ್ತು. ಈಕೆಯ ಒಟ್ಟಿಗೆ ಅದೆಷ್ಟೋ ಹುಡುಗಿಯರು! ಅಪರೂಪಕ್ಕೊಮ್ಮೆ(ಜಾಸ್ತಿ ಇರುವ ಸಂತೆಯ ಚೀಲವನ್ನು ಒರಲು) ವಾರದ ಸಂತೆಗೆ ಅಪ್ಪನೊಟ್ಟಿಗೆ ಹೋದರೆ, ಅದೇ ಬೆಂಗಳೂರು ನೋಡಿದ ಅನುಭವ. ಹಾಗೂ ಮನೆಗೆ ಬಂದು, ಅಮ್ಮನ ಬಳಿ ಸಂತೆಯ ಅನುಭವವನ್ನು ಕಣ್ಣಿಗೆ ಕಟ್ಟುವ ಹಾಗೆ ಹೇಳುತ್ತಿದ್ದಳು. ವರ್ಷದ ಜಾತ್ರೆಯೇ ಅಮೇರಿಕ ನೋಡುವ ಅನುಭವ! ಜಾತ್ರೆಯ ತಿಂಗಳ ಮುಂಚೆಯೇ, ಜಾತ್ರೆಯಲ್ಲಿ ಏನು ಮಾಡಬೇಕು, ಏನು ತಿನ್ನಬೇಕು, ಎಲ್ಲಿ ಹೋಗಬೇಕು ಅನ್ನೋ ಯೋಚನೆ.  ಅಪ್ಪ ಎಲ್ಲಿ ನೋಡಿ ಎಲ್ಲಿ ಹೊಡೆಯುತ್ತಾನೋ ಅನ್ನುವ ಭಯ ಬೇರೆ. ಜಾತ್ರೆ ಮುಗಿದ ಮೇಲೆ ಮುಂದಿನ ಒಂದು ವರ್ಷ ಅದೇ ನೆನಪಲ್ಲಿ ಕಳೆಯುವುದು. ಹಟ್ಟಿಯ ದನ ಎತ್ತುಗಳೊಟ್ಟಿಗೆ……..

ವರ್ಷಗಳು ಉರುಳಿದವು. ತಮ್ಮ ಕಾಲೇಜು ಸೇರಿದ. ಪಕ್ಕದಲ್ಲಿ ಇದ್ದ ಹುಡುಗಿ ಓದು ಮುಗಿಸಿ ಶಿಕ್ಷಕಿಯಾಗಿ ಬರುತ್ತಿದ್ದಳು. ದಾರಿಯಲ್ಲಿ ಕುಕ್ಕೆ ಹಾಗು ಸಿಂಬನ್ನು ಹೊತ್ತ ಈಕೆಯನ್ನು ನೋಡಿ ಆಕೆ ಮಾತಿಗಿಳಿಯುತ್ತಾಳೆ. ಈಕೆಗೆ ಮುಜುಗರ. ಮೈಯ ವಾಸನೆ, ಅಲ್ಲಲ್ಲಿ ಹರಿದ ಅಂಗಿ, ಸಣ್ಣವರಿದ್ದಾಗ ಇದ್ದ ಆತ್ಮೀಯತೆ ಯಾಕೋ ಈಗ ಇಲ್ಲ. ಸಂಕೋಚದಿಂದಲೇ ಆಕೆಯ ಪ್ರೆಶ್ನೆಗಳಿಗೆ ಉತ್ತರಿಸಿ ಅಲ್ಲಿಂದ ಬೇಗ ಬರುತ್ತಾಳೆ. 'ಅವತ್ತು ನಾನೂ ಶಾಲೆಗೆ ಹೋಗಿದ್ರೆ??' ಸಾವಿರಾರು ಬಾರಿ ಬಂದ ಈ ಪ್ರೆಶ್ನೆಯನ್ನ ಮತ್ತೆ ತನ್ನ ತಾನೇ ಕೇಳಿದಳು. ಅಪ್ಪನ ಸಿಟ್ಟಿಗೋ , ಕುಟುಂಬದ ಎಳಿಗೆಗೋ ಅಥವಾ ತಮ್ಮನ ಒಳಿತಿಗೋ, ನನ್ನ ಜೀವನ ಕಪ್ಪು ಹಾಳೆ.....ಕೆಲ ವರ್ಷಗಳಲ್ಲೇ ಮದುವೆ! ಎಳೆಯ ವಯಸ್ಸಿಗೆ ನಾಲ್ಕು ಮಕ್ಕಳು. ಅಪ್ಪನ ಮನೆಯ ಪ್ರಪಂಚ ಒಂದಾದರೆ ಗಂಡನ ಮನೆಯ ಪ್ರಪಂಚ ಮತ್ತೊಂದು. ಜೀವನದಲ್ಲಿ ತನಗಾದ ಅನ್ಯಾಯ ತನ್ನ ಮಕ್ಕಳಿಗಾಗಬಾರದು ಅನ್ನುವ ಬಯಕೆ ಅಕೆಯದು. ಇಲ್ಲೂ ಹಟ್ಟಿ ಕೆಲಸ.  ರೊಟ್ಟಿ ಸುಟ್ಟು ಅಳುವ ಮಕ್ಕಳಿಗೆ ಹಾಲುಣಿಸಿ, ಉಳಿದವನ್ನು ಶಾಲೆಗೆ ಕಳಿಸುವಾಗ ಸೂರ್ಯ ನತ್ತಿಯ ಮೇಲಿರುತಿದ್ದ.  ಇಲ್ಲೂ ಅದೇ ತಣ್ಣಗಾದ ಎರಡು ರೊಟ್ಟಿ ಹಾಗು ಉಪ್ಪಿನಕಾಯಿ! ತನ್ನ ಮಕ್ಕಳೋಟ್ಟಿಗೆ ಗಂಡನ ತಮ್ಮಂದಿರ ಮಕ್ಕಳ ಶುಶ್ರುಷೆಯೂ ಈಕೆಯದೆ. ಒಟ್ಟಿನಲ್ಲಿ ಆ ಪುಟ್ಟ ಊರಿನ ಇಂದಿನ ಯುವಕರೆಲ್ಲ ಈಕೆಯ ತೊಡೆಯ ಮೇಲೆ ಸ್ನಾನ ಮಾಡಿ, ಅತ್ತು-ಒದ್ದಾಡಿ ಬೆಳೆದವರು. ಊರಿಗೆ ತಾಯಿ ಅನಿಸಿದವಳು. ಎಲ್ಲರಿಗೂ ಸಮಾನ ಪ್ರೀತಿ, ಒಲವು ನೀಡಿದ ಈಕೆಗೆ ಯಾವ ಡಿಗ್ರ್ರೆ ಸಮಾನ?! 

ಹೊತ್ತು ಮುಳುಗಿ ಕತ್ತಲಾಗಿತ್ತು. ಇಬ್ಬರೂ ಹುಡುಗಿಯರು ಇನ್ನೂ ಇತ್ತಲೇ ಬರುತ್ತಿದ್ದರು. ಅಜ್ಜಿಗೆ ಪುಸ್ತಕ ಹಿಡಿದಿದ್ದ ಹುಡುಗಿಯ ನೋಡಿದ ನೆನಪು. "ಲಕ್ಷ್ಮಿ..."  ಅನ್ನುತ ಅಜ್ಜಿ ಎದ್ದು ನಿಂತಳು! ಲಕ್ಷ್ಮಿ ಊರ ಶಾಲೆಯ ಕಡೆ ಓಡಿದಳು. ಕುಕ್ಕೆ ಇಡಿದ ಹುಡುಗಿ ಮಾತ್ರ ಅಲ್ಲೇ ನಿಂತಿದ್ದಳು, ಅಜ್ಜಿಯನ್ನು ನೋಡುತ್ತ. ಅಜ್ಜಿ ಆಕೆಯ ಬಳಿ ಹೋಗಲು ಮುಂದಾದಳು. ಅಷ್ಟರಲ್ಲಾಗಲೇ ಕೆಲವರು ಆಕೆಯನ್ನು ಬಂದು ಎಳೆಯ ತೊಡಗಿದರು. ತಮ್ಮ, ಅಪ್ಪ, ಇತರರು. ಮನಸಿಲ್ಲದ ಮನಸಲ್ಲಿ ಹುಡುಗಿ ಅಳುತ್ತಾ ಮರೆಯಾಗ ತೊಡಗಿದಳು.ಕೈಯಲ್ಲಿ ಕುಕ್ಕೆ ಹಾಗು ಸಿಂಬು ಬೀಳಲಿಲ್ಲ! ಆಕೆಯ ಮುಗುತ್ತಿ ಒಮ್ಮೆ ಮಿನುಗಿತು. ಅಜ್ಜಿ ತನ್ನ ಮುಗುತ್ತಿಯನ್ನು ಒಮ್ಮೆ ಮುಟ್ಟಿ ನೋಡಿದಳು!

ಅಜ್ಜಿಯ ಕಣ್ಣುಗಳು ಒದ್ದೆಯಾದವು.

ಕತ್ತಲಾದರೂ ಅಜ್ಜಿ ಮನೆಗೆ ಬರಲಿಲ್ಲವಲ್ಲ ಎಂಬ ಪರಿವು ಯಾರೊಬ್ಬರಿಗೂ ಇಲ್ಲ. ಅಜ್ಜಿ ಮನೆ ಕಡೆ ಹೆಜ್ಜೆ ಹಾಕಿದಳು. ಅಷ್ಟರಲ್ಲಾಗಲೇ ಮೊಮ್ಮಗ (ಅಜ್ಜಿಯ ಗುಂಡ) ಓದತೊಡಗಿದ್ದ. ಸೊಸೆ ಇನ್ನೂ ಅದೇ ಸೋಫಾದ ಮೇಲೆ ರಾರಜಿಸಿದ್ದಳು. ತನ್ನ ಧಾರವಾಯಿಗಳೊಟ್ಟಿಗೆ! ಅಜ್ಜಿಯನ್ನು ನೋಡಿದ ಮೊಮ್ಮಗ "ಅಜ್ಜಿ....." ಎಂದು ಬಂದು ಅಪ್ಪಿಕೊಂಡ. "ಏನ್ ಓದ್ತಾ ಇದ್ದೀಯ ಗುಂಡ..." ಅಜ್ಜಿ ಮೊಮ್ಮಗನನ್ನು ಕೇಳಿದಳು.ಅಜ್ಜಿಯ ಮಾತನ್ನು ಕೇಳಿ ಸೊಸೆ ಇತ್ತ ತಿರುಗಿದಳು. "ಶಕ್ತಿ ನಿತ್ಯತೆಯ ನಿಯಮ" ಮೊಮ್ಮಗ ಹೇಳಿದ. "ಏನದು ನಂಗು ಸ್ವಲ್ಪ ಹೇಳು" ಅಜ್ಜಿ  ಕೇಳಿದಳು. "ಶಕ್ತಿಯನ್ನು ಸೃಷ್ಟಿಸಲು, ನಾಶ ಮಾಡಲು ಸಾದ್ಯವಿಲ್ಲ, ಅದನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಮಾತ್ರ ಬದಲಾಹಿಸಬಹುದು" ಎಂದು ಮೊಮ್ಮಗ ಹೇಳಿದಾಗ, ಸ್ವಲ್ಪ ಸಮಯ ಸುಮ್ಮನಿದ್ದ ಅಜ್ಜಿ, "ಅರ್ರೆ ಅದೆಂಗ್ ಆಗುತ್ತೋ?!.. ಪ್ರತಿ ದಿನ, ಪ್ರತಿ ನಿಂಶ ಮಕ್ಳು, ಕುರಿ,ದನ ಅಂತ ಹುಟ್ತಾನೆ ಇರ್ತಾವೆ! ಅದು ಸೃಷ್ಟಿ ಅಲ್ವ? ಅವೂ ಶಕ್ತಿಯ ರೂಪ ಅಲ್ವ?! ಅಧೆಂಗ್ ಅವ್ರ್ ಹಾಗ್ ಬರ್ದಿದ್ದಾರೆ!" ಅಜ್ಜಿಯ ಪ್ರೆಶ್ನೆಗೆ ಸೊಸೆ, ಗುಂಡನಿಗಿಂತ ಜಾಸ್ತಿ ಬಾಯಿ ತೆರೆದು ಅಜ್ಜಿಯನ್ನು ನೋಡಿದಳು. ಅಜ್ಜಿಯ ಪ್ರೆಶ್ನೆಗೆ ಗುಂಡನಿಗೆ ಏನು ಉತ್ತರಿಸಬೇಕೆಂದು ತಿಳಿಯಲಿಲ್ಲ. ಮುಗುಳ್ನಗೆಯಾ ಮುಖದಿಂದ ಅಜ್ಜಿ ಗುಂಡನಿಗೊಂದು ಮುತ್ತಿಕ್ಕಳು.............

Comments

Submitted by VeerendraC Mon, 09/15/2014 - 00:16

ತುಂಬಾ ದಿನಗಳ‌ ನಂತರ‌ ಸೊಗಸಾದ‌ ಕಥೆಯನ್ನು ಓದಿದೆ. ಹೀಗೆ ಒಳ್ಳೆಒಳ್ಳೆಯ‌ ಕಥೆಯನ್ನು ನಮಗೆ ಉಣಬಡಿಸಿ :)