ಮುತ್ತುಗಳು ... ನುಡಿ ಮುತ್ತುಗಳು !

ಮುತ್ತುಗಳು ... ನುಡಿ ಮುತ್ತುಗಳು !

ಮುತ್ತುಗಳು ... ನುಡಿ ಮುತ್ತುಗಳು !

ಕೇಳ್ರಪ್ಪೋ ಕೇಳ್ರೀ ...  ಹೆಡ್ ಫೋನ್ ನುಡಿ ಮುತ್ತುಗಳನ್ನ ಕೇಳ್ರೀ ...

’ಕಿವಿ ಮಾತು’ ಹೇಳಬೇಕೂ ಅಂತಾನೇ ಇದ್ದೆ ... ಏನ್ ಮಾಡೋದು ಕಿವಿ ಫ್ರೀ ಇದ್ರೆ ತಾನೇ? ಐ-ಫೋನೋ, ಐ-ಪಾಡೋ, ಮತ್ತಿನ್ಯಾವುದೋ ಸಾಧನದ ಬುಡದಿಂದಲೋ ತಲೆಯಿಂದಲೋ ಹೊರಟ ಒಂದೆಳೆ ದಾರ ನಂತರ ಎರಡಾಗಿ ಸೀಳಿ ಎರಡೂ ಕಿವಿಗಳನ್ನು ಅಪ್ಪಿ ಹಿಡಿದು ಅವರನ್ನು ಕೆಪ್ಪರನಾಗಿಸಿರಲು, ನಾನು ಕಿವಿ ಮಾತು ಅಂದ್ರೆ ಕಿವಿ ಕೇಳಿಸಬೇಕಲ್ಲಾ?  

ಜನರ ಈ ಪರಿಯ ಅವಾಂತರ ಕಂಡಾಗ ನನಗೆ ನೆನಪಾಗೋದು, ನೇತುಹಾಕಿರುವ ಬಾಟಲಿನಿಂದ ಹೊರಟ ಒಂದೆಳೆ ಪೈಪು ತನ್ನ ಇನ್ನೊಂದೆಡೆಗೆ ಬಿದ್ದುಗೊಂಡಿರುವ ದೇಹವ ಚುಚ್ಚಿ ರವಾನಿಸುವ ಗ್ಲೂಕೋಸ್ ದ್ರವ. ಒಂದೆಡೆ ಸಂಗೀತ ರಸ ಇನ್ನೊಂದೆಡೆ ಗ್ಲೂಕೋಸ್ ರಸ.

ಗ್ಲೂಕೋಸ್’ಗೆಂದು ಚುಚ್ಚಿಕೊಂಡ ದೇಹ, ಹಾಡಿಗೆಂದು ಕಿವಿಗೆ ಒತ್ತಿಸಿಕೊಂಡ ಬಾಡಿ ಎರಡು ಹೊರ ಜಗತ್ತಿನ ಮಾತಿಗೆ ಸ್ಪಂದಿಸೋಲ್ಲ ... ಸಾಮಾನ್ಯವಾಗಿ !

ಹಾಗಾಗಿ ಕೇಳ್ರಪ್ಪೋ ಕೇಲ್ರೀ ...  ಹೆಡ್ ಫೋನ್ ನುಡಿ ಮಾತುಗಳನ್ನ ಕೇಳ್ರೀ ...

೧. ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡುವಾಗ ಕನಿಷ್ಟ ಪಕ್ಷ ಎರಡು ಘಂಟೆಗೊಮ್ಮೆ ಎದ್ದು ಕಾಲುಗಳ ಝಾಡಿಸಿ. ಗೆದ್ದಲು ಹಿಡಿದಿದ್ದರೆ ಉದುರೀತು. ಜೇಡ ತನ್ನ ಬಲೆ ಕಟ್ಟಿದ್ರೆ ಬೇರೆಡೆ ಹೊರಟೀತು. ವೆಬ್ ನೋಡ್ತಿದ್ರೆ ಜನರಿಗೆ ಜೇಡ ವೆಬ್ ಕಟ್ಟಿದ್ರೂ ಗೊತ್ತಾಗೋಲ್ಲ !

ಅಂತರಾತ್ಮದ ಮಾತು: ಒಲ್ಲದ್ದನ್ನು ಝಾಡಿಸಿ ತೆಗೆಯುವುದು ಉತ್ತಮ. ನೀವು ಒಪ್ಪವಾಗಿದ್ದರೂ ಅನ್ನದಾತರಿಗೆ ನೀವು ಒಲ್ಲದವರಾದರೆ ಅವರೇ ಝಾಡಿಸುತ್ತಾರೆ! ನೀವಾಗ ಉದುರಲೇಬೇಕು.

೨. ಮದುವೆಯಾಗಿ ಮಡದಿ ಇದ್ದೂ ಸಹೋದ್ಯೋಗಿಗೆ ಲೈನ್ ಹೊಡೆಯಬೇಡಿ.

ಅಂತರಾತ್ಮದ ಮಾತು: ಮನೆಯಲ್ಲಿ ಸಿಗದ ಶಾಂತಿ ನಿಮಗೆ ಕಛೇರಿಯಲ್ಲಿ ಸಿಕ್ಕಿದ್ದರೆ ಅದೂ ಖೋತಾ ಆದೀತು !

೩. ತಗ್ಗಿ ಬಗ್ಗಿ ನೆಡೆದರೂ ಹುಷಾರಾಗಿ ನೆಡೀಬೇಕು. ದೇವನ ಮುಂದೆ ಬಾಗದ ತಲೆ ಕ್ಷೌರಿಕನಿಗೆ ಬಾಗುತ್ತೆ. ಕ್ಷೌರಕ್ಕೂ ಬಾಗದ ತಲೆ ಹೆಂಡತಿಗೆ ಬಾಗುತ್ತೆ. ಹೀಗೂ ಬಾಗದ ತಲೆ, ಸ್ಮಾರ್ಟ್ ಫೋನ್ ಮುಂದೆ ಖಂಡಿತ ಬಾಗಿಯೇ ಬಾಗುತ್ತೆ !

ಅಂತರಾತ್ಮದ ಮಾತು: ತಲೆ ಬಾಗುವುದು ತಪ್ಪೇನಿಲ್ಲ. ತಲೆ ಬಾಗಿಸದೇ ಇದ್ದಲ್ಲಿ ತಲೆ ಹಾಗೇ ಗಟ್ಟಿಯಾಗಿ ನಿಂತುಬಿಡಬಹುದು ! ಡಾರ್ವಿನ್’ಗೆ ಜೈ ಹೋ!

೪. ಬಾಗಿದರೆ ಬೆನ್ನು ತುಳೀತಾರೆ, ಬಿದ್ದರೆ ಹೊಸಕಿ ಹಾಕುತ್ತಾರೆ.

ಅಂತರಾತ್ಮದ ಮಾತು: ನಿಮ್ ಮೊಬೈಲ್ ಕೆಳಗೇನಾದರೂ ಬಿದ್ದರೆ ಅದನ್ನೆತ್ತಿಕೊಳ್ಳುವ ಮುನ್ನ ಆಚೆ ಈಚೆ ಒಮ್ಮೆ ನೋಡಿ. ಮೆಸೇಜ್ ಮಾಡಿಕೊಂಡೇ ನೆಡೆದಾಡೋ ಭೂತಗಳು, ಮೊಬೈಲಲ್ಲಿ ಮಾತನಾಡಿಕೊಂಡೇ ಓಡಾಡುವ ಚರಜೀವಿಗಳು ಇರುತ್ತಾರೆ. ಈ ಎರಡೂ ಪಂಗಡಕ್ಕೂ ಸುತ್ತಲ ಅರಿವಿರುವುದಿಲ್ಲ. ಫೋನೆತ್ತಿಕೊಳ್ಳಲು ಬಾಗಿದ ನಿಮ್ಮ ಬೆನ್ನನ್ನು ತುಳಿಯಬಹುದು ಅಥವಾ ಬಲಿಯನ್ನು ಪಾತಾಳಕ್ಕೆ ಒತ್ತಿದಂತೆ ನಿಮ್ಮ ತಲೆಯನ್ನೇ ಒತ್ತಿಬಿಡಬಹುದು.

೫. ಅವರವರ ಟೈಮ್ ಬಂದಾಗ ಅವರು ಜಾಗ ಖಾಲಿ ಮಾಡಲೇಬೇಕು.

ಅಂತರಾತ್ಮದ ಮಾತು: ನಿಮ್ ಬಾಸು ಇನ್ನೂ ಕೂತಿದ್ದಾನೆ ಅಂತ ನಿಮಗೆ ಕೆಲಸ ಇಲ್ಲದೇ ಹೋದ್ರೂ ಏನೋ ಮಾಡ್ಕೊಂತಾ ಕೂತಿರಬೇಡಿ. ಆ ಬಾಸ್’ಗೆ ಮನೆಯಲ್ಲಿರೋ ಅವನ ಬಾಸ್ ಕರೆ ಮಾಡಿದಾಗ, ಅವನೆದ್ದು ಹೋಗೋವಾಗ ನೀವಿನ್ನೂ ಕೂತಿದ್ದೀರಾ ಅಂತ ಆತ ನಿಧಾನಿಸೋಲ್ಲ.

೬. ಟೆಕ್ಕಿ ಜನರೇ, ಕಷ್ಟಪಟ್ಟು ಕೆಲಸವನ್ನು ...  ಮಾಡಬೇಡಿ. ಜಾಣ್ಮೆಯಿಂದ ಕೆಲಸ ಮಾಡಿ !  

ಅಂತರಾತ್ಮದ ಮಾತು: ನೀವೇನೂ ಬಾವಿ ತೆಗೆಯಲು ಮಣ್ಣು ಅಗೆಯುತ್ತಿಲ್ಲ, ಮೀನು ಮಾರುಕಟ್ಟೆಯಲ್ಲಿ ಮಲಗಿಲ್ಲ. ಕೂತಿರೋದು ಏ.ಸಿ ರೂಮಿನಲ್ಲಿ. ಇಪ್ಪತ್ತನಾಲ್ಕು ಘಂಟೆ ಸತತವಾಗಿ ದುಡಿದರೂ ಒಂದು ಹನಿ ಬೆವರು ಕಾಣಿಸೋಲ್ಲ. ಹೀಗಿದ್ದ ಮೇಲೆ ಕಷ್ಟ ಎಲ್ಲಿಂದ ಬಂತು? ದಿನ ಬೆಳಗಾದರೆ ಬರೋ ಸಂಕಟಗಳನ್ನ ಜಾಣ್ಮೆಯಿಂದ ಎದುರಿಸಿ.

೭. ಮೇಲೇರಿದವನು ಕೆಳಗಿಳಿಯಲೇಬೇಕು. ಇದು ಸರ್ವಕಾಲಿಕ ಶ್ರೇಷ್ಟ ಮಾತು.

ಅಂತರಾತ್ಮದ ಮಾತು: ನೀವು ಬೇಸ್ಮೆಂಟ್’ನಲ್ಲಿ ಕಾರು ಪಾರ್ಕ್ ಮಾಡಿ, ಲಿಫ್ಟ್’ನಲ್ಲಿ ಎಷ್ಟನೆಯದೋ ಮಾಹಡಿಯ ನಿಮ್ಮ ಕಛೇರಿಗೆ ತಲುಪಿದರೂ ಸಂಜೆಗೆ ಕೆಳಗೆ ಬರಲೇಬೇಕು. ಮೂರು ಮಹಡಿ ಮೇಲೆ ಕಾರು ನಿಲ್ಲಿಸಿದ್ದರೂ ಬಾಡಿ ಬೀದಿಗೆ ಬರೋ ಸಮಯ ಬಂದಾಗ ಕಾರು, ಕಾಲು ಎಲ್ಲ ಕೆಳಗೆ ಇಳಿದೇ ಇಳಿಯುತ್ತೆ. ಸದಾ ಕಾಲ ಮೇಲೇ ಇರಲು ಸಾಧ್ಯವಿಲ್ಲ !

ಇದು ನನ್ನ ಅಂತರಾತ್ಮದ ಪಿಸು ಮಾತುಗಳು ಅಷ್ಟೇ! ಇಂಟರ್ನೆಟ್ ಆತ್ಮದ ಮಾತುಗಳು ಅಂದ್ರೆ ಶೇರ್ ಮಾಡಿ ಮಾಡಿ ಖುಷಿ ಪಡ್ತೀರ. ಸಾಧ್ಯವಾದರೆ ಇದನ್ನೂ ಶೇರ್ ಮಾಡಿ. 

ಸದ್ಯಕ್ಕೆ ಎದ್ದೇಳೋಕ್ಕೆ ಈ ಏಳು ಮಾತುಗಳು ಸಾಕು ... ಎಲ್ಲೆಡೆ ಜನರು ದಂಬಾಲು ಬಿದ್ದು ಉಪದೇಶ ನೀಡುತ್ತಿರಲು, ನಾನೇಕೆ ಹಿಂದೆ ಬೀಳಲಿ ಎಂಬ ಪೈಪೋಟಿಯ (ದುರ್)ಉದ್ದೇಶದಿಂದ ಬರೆದ ಬರಹವಿದು ...

Comments