ಯಾವ ಹತ್ತೆಂದು ಹೇಳೋಣಾ ?

ಯಾವ ಹತ್ತೆಂದು ಹೇಳೋಣಾ ?

ಯಾವ್ ಹತ್ತೂಂತ, ನಾ ಕೈಯೆತ್ತಿ, ಹೆಂಗೆ ಹೇಳಲಿ ಸ್ವಾಮಿ ?
ಓದೋದ್ಕೊಂಡು, ಬೆಳೆದಿದ್ದೆಲ್ಲಾ, ಅಚ್ಚ ಕನ್ನಡದಲ್ಲೆ ಮಾಮಿ
ಶುರುವಾಗಿದ್ದೆಲ್ಲಾ, ಮಕ್ಕಳಾಟ, ಆಡ್ಕೊಂಡಾಡ್ತಾನೆ ನಾಕಾಣಿ
ಚಂದಮಾಮ, ಬಾಲಮಿತ್ರ, ಬೊಂಬೆಮನೆ ಜತೆಗೆ ಪುಟಾಣಿ ||

ವಾರ ತಿಂಗಳು, ಬಂದು ಹೋಗೊ, ಹಿರಿ ಅತಿಥಿಗಳೊಂದಷ್ಟು
ಪ್ರಜಾಮತ, ಸುಧಾ, ಮಯೂರ, ತುಷಾರ, ಕಸ್ತೂರಿನೊ ಬೆಸ್ಟು
ವಿಜಯವಾಣಿ, ರೂಪತಾರ ತರ ಸಿನಿಮಾ ಸುದ್ದಿ ತಲೆ ತರಲೆ
ಮಧ್ಯದ ಹಾಳೆಗೆ ಶೂಜಾ, ಮಜನೂ, ಡಿಂಗಾನು ಮಂಗಳದಲ್ಲೆ ||

ಸ್ಕೂಲಿಂದೇನೊ, ಕಲ್ತಿದ್ದೆಲ್ಲೊ, ವಿಜ್ಞಾನ ಸಮಾಜ ಆಂಗ್ಲಾಸ್ತ್ರ
ಸಸ್ತ ರಷ್ಯ, ಪುಸ್ತಕ ಸಿಕ್ತಲ್ಲ, 'ಮನರಂಜನೆಗಾಗಿ ಭೌತ ಶಾಸ್ತ್ರ' 
ಯಾಕೋವ್ ಪೆರಲ್ಮನ್, ಎರಡೂ ಭಾಗ, ಓದಿದ್ದೇ ದೊಡ್ಡಾಸ್ತಿ
ಆವತ್ತು ಬಿದ್ದಿದ್ದೆ, ತಳಪಾಯಕ್ಕೆ, ಇನ್ನೂ ಹಿಡಿದಿಲ್ಲಾ ವಸ್ತಿ ||

ಅದೆಲ್ಲಾದರ ಮಧ್ಯೆ, ಭಗವಂತನ ಧ್ಯಾನ, ಭಯ ಭಕ್ತಿಗೂ ಸ್ಥಾನ
ರಾಮಾಯಣ, ಮಹಾಭಾರತದ ಜತೆಗೆ, ಭಾಗವತಕೂ ಆಸ್ಥಾನ
ಯಾವ್ಯಾವ್ದೊ ಪುರಾಣ, ಓದ್ಕೊಂಡ ಜಾಣ, ಭಗವದ್ಗೀತೆಗು ಕಣ್ಣ
ಆಡಾಡಿಸ್ಕೊಂಡೆ, ಬೋಧಿಸತ್ವ ಕಥಾ, ಸರಿತ್ಸಾಗರಕಲ್ಲೆ ಪಯಣ ||

ಅಲ್ಲೆಲ್ಲೊ ಕಳೆದು, ಹೋದ ರಾತ್ರಿ, ಸಿಕ್ಕಿತೆ ಅರಬಿಯನ್ ನೈಟ್ಸೂ
ಬಾಗ್ದಾದಿನ, ಷಹಜಾದೆಯ ಜತೆ, ನಿದ್ದೆಗೆಟ್ಟು ಕಳೆದ ಬಿಟ್ ಬೈಟ್ಸೂ
ಈಸೋಪನ ಕಥೆ, ಬೀರಬಲ್ಲ ತೆನಾಲಿ, ಎಲ್ಲರದು ಸಮಪಾಲು
ನೆನಪಿನ ಉಪ್ಪಿಟ್ಟು, ಕೆದಕುತ್ತ ಹೋದರೆ, ಕೇಸರಿ ಬಾತಿನ ಡೌಲು ||

ಆಡೋ ವಯಸಲ್, ಪತ್ತೆದಾರಿ, ಓದೋಕ್ ಬಿಟ್ಟೋರ್ಯಾರು?
ನರಸಿಂಹಯ್ಯ, ಮಾಭೀಶೇ-ಜಿಂದೆ, ಎಲ್ಲರ ಪತ್ತೇದಾರಿಕೆ ಜೋರು
ಅರಿಂಜಯನೊ, ಮೃತ್ಯುಂಜಯನೊ, ರವಿಕಾಂತರೆ ಆಗ್ಬಿಟ್ಟೆಲ್ಲಾ
ಕದ್ದು ಓದೋದ್ತಾನೆ, ಹಿಡಿದು ಹಾಕ್ತಿದ್ವಲ್ಲ, ಕಳ್ಳರಿಗೆಲ್ಲಿತ್ತು ಕಾಲ? ||

ಇಳಿದಂಗಲ್ಲಿ, ಪತ್ತೇದಾರಿ ಉದ್ವೇಗ, ಬೇಕಿತ್ತು ಹೊಸ ಉದ್ಯೋಗ
ಉಷಾ ತ್ರಿವೇಣಿ, ಸಾಯಿಸುತೆಯರ, ಸಂಸಾರದ ಕಥೆ ಆವೇಗ
ಗಡಸಾಗ್ತ ಮೀಸೆ, ಬಲಿತಂತೆ ಆಸೆ, ಅನಕೃ ತರಾಸು ಬಂತೂರಿ
ಅವರ್ದೆಲ್ಲ ಮುಗ್ಸಿ, ಕೂರೊ ಹೊತ್ಗೆ, ಟೀಕೆ ರಾಮ್ರಾವು-ಯಂಡ್ಮೂರಿ ||

ಓದ್ತಾ ಓದ್ತಾ, ಬಲಿತಾ ಬೇಳಿತಾ, ಬೇಕಿತ್ತು ಮೆದುಳಿಗೆ ಮೇವು
ಕಂಡವರಲ್ಲಿ ಬರಿ, ಒಬ್ಬರು ಇಬ್ಬರು, ತೇಜಸ್ವಿ ಮನು ತರದವರು
ವಿಜ್ಞಾನವೂ, ಕಥೆಯಾಗಿ ಹೋಯ್ತೆ, ಕುತೂಹಲದಲ್ಲೆ ಕುಲಾವಿ
ಹೊಲೆಸುತ್ತಲೆ, ಬೈರಪ್ಪ ಬಡಿಗೆ, ಸಾಕ್ಷಿಯಾಗಿ ಆವರಣ ಕೊಡವಿ ||

ಕುವೆಂಪು ಕಾರಂತ ತರ, ಘಟಾನುಘಟಿಗಳು, ಓದೋಕೆಲ್ಲಿ ಬುದ್ಧಿ?
ಎದ್ದು ಬಿದ್ದು, ಮಲೆಗಳಲ್ಲಿ, ಮದುಮಗಳನ್ನ ಹುಡುಕಿದ್ದೆ ಸುದ್ಧಿ 
ಕಾನೂರು ಹೆಗ್ಗಡತಿ, ಮೂಕಜ್ಜಿ ಕನಸಿಗೆ, ಪಕ್ವತೆ ಫ್ರೌಡತೆ ಚಿಮ್ಮಿ
ಮಿತಿಯಿದ್ದರೂನು, ಓದರಿತಷ್ಟೆ ಪಡೆದ ಸಿರಿ, ನಾವ್ಯಾರಿಗೇನು ಕಮ್ಮಿ ||

ಹೆಸರುಗಳೆ ಸಾವಿರ, ಪುಸ್ತಕವೆ ಹೇರಳ, ಒಂದೊಂದು ಕಾಲದಲ್ಲು
ಅಡಿಗಾಲನಿಡಿಸಿ, ಮೊಣಗಾಲಲೆಳೆಸಿ, ನಡೆದಾಡಿಸಿದ್ದೆ ಥ್ರಿಲ್ ಥ್ರಿಲ್ಲು
ಅಂದೋದಿದ ಕಥೆ, ಇಂದೂನು ಗೊತ್ತು, ಧಾರಾವಾಹಿಗಳ ಕಾದಿದ್ದು
ಅಂಗಡಿಗೆ ಬಂದ, ಹೊತ್ತಲ್ಲೆ ತಂದು, ಮೂಲೆ ಹಿಡಿದು ಕೂತು ಓದಿದ್ದು ||

ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು
 

Comments

Submitted by nageshamysore Thu, 09/18/2014 - 03:01

In reply to by kavinagaraj

ಹೌದು ಕವಿಗಳೆ, ಈಗೆಲ್ಲ 'ಗೂಗಲ್ಲು', 'ಟೀವಿ ಸೀರಿಯಲ್'ಗಳ ಅಂತರ್ಜಾಲದ ಜಮಾನ. ಈ ಪುಸ್ತಕಗಳನ್ನು ಓದಲಿಕ್ಕು / ನೋಡಲಿಕ್ಕು ಈಗ ಅಂತರ್ಜಾಲ, ಟೀವಿ ಜಾಲಗಳಲಿದ್ದರೆ ಮಾತ್ರ ಸಾಧ್ಯವೇನೊ? ಆದರೆ ನಮಗೆ ಕಾದು ಕಚ್ಚಾಡಿ ಪುಸ್ತಕ ಓದಲಿರುತ್ತಿದ್ದ ಥ್ರಿಲ್ಲು, ಸರ್ಕ್ಯುಲೇಟಿಂಗ್ ಲೈಬ್ರರಿಗಳಿಂದ ತಂದು ಓದಲಿರುತ್ತಿದ್ದ ಕಾತರವೂ ಈಗ ಮಂಗಮಾಯ! ಓದಲೆಂದು ಹಣ ತೆತ್ತು ಪುಸ್ತಕ ತಂದಿಟ್ಟರೂ ಓದಲು ಕಷ್ಟ...:-(