ಕಥೆ: ಪರಿಭ್ರಮಣ..(55)  

ಕಥೆ: ಪರಿಭ್ರಮಣ..(55)  

( ಪರಿಭ್ರಮಣ..54ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...

ಅವರು ಹೋದತ್ತಲೆ ಕೈ ಜೋಡಿಸಿಕೊಂಡು ನಮಿಸುತ್ತ ನಿಂತ ಶ್ರೀನಾಥನ ಮನದಲ್ಲಿ ಮಾತ್ರ ಮೊದಲಿಗಿಂತ ಹೆಚ್ಚಿನ, ಶಾಂತ ಸಾಗರದ ಪ್ರಶಾಂತ ಭಾವ ತುಂಬಿಕೊಂಡಿದ್ದರೂ, ಈಗ ಮೊದಲಿದ್ದ ಆತಂಕದ ಜಾಗದಲ್ಲಿ ಅತೀವ ಕುತೂಹಲ ತುಂಬಿಕೊಂಡಿತ್ತು - ಈ ನಾಲ್ಕಾರು ದಿನಗಳಲ್ಲಿ ಏನೇನು ಪರಿವರ್ತನೆಯ ಪದರಗಳ ಅನಾವರಣವಾಗಲಿದೆಯೊ, ಏನೊ? ಎಂದು. ಅದಕ್ಕು ಮಿಗಿಲಾಗಿದ್ದ ಮತ್ತೊಂದು ನೈತಿಕ ಹಾಗೂ ಸಾತ್ವಿಕ ಕುತೂಹಲವೆಂದರೆ - ಅವನಾಗಲೆ ಅನುಭವಿಸತೊಡಗಿದ್ದ ಒಂದು ಹೊಸ ತರದ ಮಾನಸಿಕ ಪ್ರಶಾಂತತೆ. ಆಗಿನ್ನು ಕೇವಲ ಆರಂಭ ಹಂತದ ಪ್ರಶಾಂತತೆಯನ್ನು ಮಾತ್ರ ಅನುಭವಿಸುತ್ತಿದ್ದರೂ, ಅದೆ ಅದ್ಭುತದ ಪರಮೋನ್ನತ ಶಿಖರವೆನ್ನುವಂತೆ ಭಾಸವಾಗತೊಡಗಿತ್ತು.. ಇನ್ನು ನಿಜಕೂ ಆ ಶಿಖರದ ತುದಿ ಮುಟ್ಟಿದರೆ? ಅಲ್ಲಿ ಅವರ್ಣನೀಯ, ವರ್ಣಿಸಲಸದಳ ಅನುಭವ, ಅನುಭೂತಿಯೊಂದು ತನಗಾಗಿ ಕಾದಿರುತ್ತದೆಯೆ? ಎನ್ನುವ ಅಸೀಮ ಕುತೂಹಲ ಈಗ ಹೊಸದಾಗಿ ಗರಿ ಕೆದರಿಕೊಂಡಿತ್ತು. ಜತೆಗೆ ಮಾಂಕ್ ಸಾಕೇತರೆ ನುಡಿದಂತೆ ಎಲ್ಲರೂ ಪೂರ್ಣ ಪರಿಶುದ್ಧತೆಯ ಮಟ್ಟ ಮುಟ್ಟಲು ಆಗುವುದಿಲ್ಲವೆಂದು ಅರಿವಾಗಿದ್ದರಿಂದಲೊ ಏನೊ, ಆ ಐದು ದಿನಗಳ ಕೊನೆಯಲ್ಲಿ ತಾನು ಮುಟ್ಟಲು ಆಗಬಹುದಾದ ಮಟ್ಟ ಎಷ್ಟಿರಬಹುದೆಂಬ ಕುತೂಹಲವೂ ಜತೆಗೆ ಸೇರಿಕೊಂಡಿತ್ತು. 'ಈ ಎರಡು ದಿನದ ಭೌತಿಕ ಶ್ರಮದ ಹಿನ್ನಲೆಯಲ್ಲೆ ಏನೊ ರಹಸ್ಯವಿರಬೇಕು.. ಅದು ಕೇವಲ ಶ್ರಮದಾನದ ಹಿನ್ನಲೆಯ ಭೌತ ಕಾರ್ಯವಿರಲಾರದು. ಅದೇನೆಂದು ಈಗ ತಿಳಿಯದಿದ್ದರೂ ಕೊನೆಗಾದರೂ ಅರಿವಾಗುವುದೊ ಏನೊ... ಅಲ್ಲದೆ, ಅದನ್ನು ನಿರ್ವಹಿಸಿದ ಬಗೆಯೆ ತಾನು ಅಂತಿಮವಾಗಿ ಮುಟ್ಟಬಹುದಾದ ಮಟ್ಟವನ್ನು ನಿರ್ಧರಿಸುವಂತಿದ್ದರೆ .....? ಏನೆ ಆಗಲಿ ಯಾವುದನ್ನು ಉಢಾಫೆ ಮಾಡದೆ ಮನಃಪೂರ್ತಿಯಾಗಿ ನಿಭಾಯಿಸಿಬಿಡಬೇಕು, ಅದರ ಅಂತಿಮ ಫಲ ಏನು ಸಿಗುವುದೆಂಬುದನ್ನು ಮನಗಾಣಿಸಿಕೊಳ್ಳಲು ಅದೆ ಸರಿಯಾದ ದಾರಿ' ಎಂದು ಮನದಲ್ಲಿ ನಿರ್ಧರಿಸಿಕೊಂಡವನೆ ಪ್ರಾರ್ಥನಾ ಮಂದಿರದತ್ತ ಹೊರಡುವ ಸಿದ್ದತೆ ನಡೆಸಲು ಮೇಲೆದ್ದ ಶ್ರೀನಾಥ. 

ಎಂದಿನಂತೆ ದೈನಂದಿನದ ಪ್ರಾರ್ಥನೆ, ಸಭೆ, ಆಚರಣೆಯ ಜತೆಗೆ ಅಂದಿನ ಆಹಾರ ಸೇವನೆಯನ್ನು ಮುಗಿಸಿ, ಶ್ರಮದಾನದ ಸಮೂಹ ಕಾರ್ಯದಲ್ಲಿ ಭಾಗವಹಿಸಿ ಮತ್ತೆ 'ಕುಟಿ' ಯನ್ನು ಸೇರುವ ತನಕವೂ ಶ್ರೀನಾಥನ ತಲೆಯಲ್ಲಿ ಮಾತ್ರ ಆ ದ್ವಂದ್ವ ಸಿದ್ದಾಂತದ ಗುಂಗೆ ನಿರಂತರವಾಗಿ 'ಗುಂಯ್'ಗುಡಲಾರಂಭಿಸಿತ್ತು. ಇದ್ದಕ್ಕಿದ್ದಂತೆ ಈಗ ಕಂಡ ಕಂಡದ್ದರೆಲ್ಲೆಲ್ಲ, ಕಂಡ ಕಂಡೆಡೆಯೆಲ್ಲ ಎಲ್ಲದರಲ್ಲೂ, ಎಲ್ಲೆಡೆಯಲ್ಲೂ ಅದೇ ದ್ವಂದ್ವದ ಹೊಳಹುಗಳು ಕಾಣತೊಡಗಿ ಅವನಿಗೆ ಅರೆಗಳಿಗೆ ಗಾಬರಿಯೆ ಆಗಿತ್ತು. ಅದೇನು ತನಗಾದ ದ್ವಂದ್ವದ ಜ್ಞಾನೋದಯದಿಂದ ಅದುವರೆವಿಗು ಗೋಚರಿಸದಿದ್ದುದೆಲ್ಲವೂ ಇದ್ದಕ್ಕಿದ್ದಂತೆ ಗೋಚರವಾಗುತ್ತಿರುವ ಸಹಜ ಪರಿಯೊ, ಅಥವಾ ತಾನರಿತ ದ್ವಂದ್ವದ ರೀತಿ ತನಗಿರಬೇಕಾದ ತಿಳಿವಿನ ಸಹಜ ಗಡಿಯನ್ನು ಮೀರಿ ಅಧಿಗಮಿಸಿಕೊಂಡ ಕಾರಣವಾಗಿ ಹುಚ್ಚಾಪಟ್ಟೆಯಾಗಿ ವಿಶ್ಲೇಷಿಸಿಕೊಳ್ಳುತ್ತ , ದ್ವಂದ್ವವಿಲ್ಲದ ಕಡೆಯೂ ಸೇರಿದಂತೆ ಎಲ್ಲೆಡೆ ಸುತ್ತ ದ್ವಂದ್ವದ ಇರುವಿಕೆಯನ್ನು ಕಲ್ಪಿಸಿಕೊಂಡು ಗೊಂದಲಕ್ಕೆ ಸಿಕ್ಕಿ ನರಳುತ್ತಿದೆಯೊ, ಏನೊ? ಎಂದು ಸಂಶಯ ಹುಟ್ಟಲೂ ಕಾರಣವಾಗಿಬಿಟ್ಟಿತ್ತು. ಆದರೂ ಮನದಲ್ಲಿ ಮೂಡುತ್ತಿದ್ದ ದ್ವಂದ್ವದ ಪರ - ವಿರೋಧಿ ವಾದಾಂಶಗಳು ತಾರ್ಕಿಕ ಮತ್ತು ಸಂಗತವೆನಿಸಿ ಅದನ್ನು ಅಲ್ಲಗಳೆಯಲೂ ಕಷ್ಟವಾಗಿಬಿಟ್ಟಿತ್ತು. ಆ ದಿನ ಪ್ರಾರ್ಥನೆಯ ನಂತರ ನಡೆಸಿದ್ದ ಸಮುದಾಯ ಕಾರ್ಯಕ್ರಮದಡಿಯಲ್ಲಿ ಹೂ ತೋಟ ಮತ್ತು ತರಕಾರಿಯ ಗಿಡಗಳಿಗೆ ನೀರುಣಿಸುವ ಕೆಲಸ ತನ್ನ ಪಾಲಿಗೆ ಬಂದಿತ್ತಾಗಿ, ನೀರನ್ನು ಹನಿಸುವ ಹೊತ್ತಲ್ಲೂ ಅವನ ಮನ ನಿರಂತರವಾಗಿ ದ್ವಂದ್ವದ ಕುರಿತೆ ಚಿಂತಿಸುತ್ತಿತ್ತು. ಆ ಹೊತ್ತಲ್ಲಿ ಹೂ ಗಿಡಗಳಿಗೆ ಯಾಂತ್ರಿಕವಾಗಿ ನೀರುಣಿಸುವ ಸಮಯದಲ್ಲೆ ಯಾವ್ಯಾವುದೊ ದ್ವಂದ್ವದ ಸ್ವಗತಗಳು ಕಣ್ಮುಂದೆ ಮತ್ತೆ ಮತ್ತೆ ಪ್ರತ್ಯಕ್ಷವಾಗತೊಡಗಿದ್ದವು - ಅವನಲಿದ್ದ ಜ್ಞಾನಪಾತ್ರದ ಯಾವುದೊ ಖಾಲಿಯಿದ್ದ ಭಾಗವನ್ನು ತುಂಬಿಸುವಂತೆ. ಅಲ್ಲಿ ಕಾಣುವ ನೆಲದ ಮೇಲೆ ಬಿದ್ದಿರುವ ಕಲ್ಲಿನ ದ್ವಂದ್ವರೂಪಿ ಯಾವುದು? ಮಣ್ಣಿನ ದ್ವಂದ್ವ ರೂಪಿ ಏನು? ಗಿಡ ಮರಗಳ ದ್ವಂದ್ವ ರೂಪ ಯಾವುದು? ನೀರಿನ ಪ್ರತಿಸ್ಪರ್ಧಿ ದ್ವಂದ್ವ ಯಾವ ವಸ್ತುವಿನ ಪಾಲಿಗೆ ಸೇರಿದ್ದು? ಹೀಗೆ ನಿರಂತರವಾಗಿ, ಪುಂಖಾನುಪುಂಖವಾಗಿ ಒಂದರ ಹಿಂದೆ ಒಂದರಂತೆ ಪ್ರಶಾರ್ಥಕಗಳು, ಉತ್ತರಗಳು ಮೂಡಿ ಬರತೊಡಗಿದ್ದವು. ಮಾಂಕ್ ಸಾಕೇತರ 'ಯಾವುದನ್ನು ತಡೆಯಬೇಡ..' ಎನ್ನುವ ಸಲಹೆಯನ್ನು ಇಲ್ಲಿಗೂ ವಿಸ್ತರಿಸಿ, ಬಂದದ್ದನು ಬಂದ ಹಾಗೆ ಸ್ವೀಕರಿಸುತ್ತಲೆ ನೀರುಣಿಸುವ ಕೆಲಸ ಮುಂದುವರೆಸುತ್ತ ಸಾಗಿದ್ದ ಶ್ರೀನಾಥ. ಹಾಗೆಯೆ ಮುಂದುವರೆದಿದ್ದವನಿಗೆ ಆಗ ಇದ್ದಕ್ಕಿದ್ದಂತೆ ಎದುರಾಗಿತ್ತು ಹೋಲಿಕೆಯಲ್ಲಿ ಚಿಕ್ಕದೆನ್ನಬಹುದಾದ, ಒಂದು ಪ್ರಾರ್ಥನ ಮಂದಿರದಂತಹ ಕಟ್ಟಡ. 

ಆ ಮಂದಿರದ ಸುತ್ತಲೂ ಬೇಲಿಯಾಗುವಂತೆ ಬೆಳೆಸಿದ್ದ ಗಿಡಗಳಿಗೆ ನೀರು ಹನಿಸುವ ಹೊತ್ತಲ್ಲೆ ಅದರ ಹೊರ ಪಾರ್ಶ್ವದ ಗೋಡೆಗಳ ಮೇಲೆ ಶ್ರೀನಾಥನ ಕಣ್ಣು ಬಿದ್ದಿತ್ತು. ಥಾಯ್ಲ್ಯಾಂಡಿನ ಬಹುತೇಕ ದೇವಾಲಯದ ವಿಶಾಲವಾದ ಪ್ರಾಂಗಣದಲ್ಲಿ ಸಹಜವಾಗಿರುವಂತೆ ಇಲ್ಲಿಯೂ ಗೋಡೆಯ ತುಂಬ ಉದ್ದಕ್ಕೂ ಪೌರಾಣಿಕ ಕಥಾನಕಗಳ ಚಿತ್ರಣದ ಪೇಂಟಿಂಗುಗಳಿಂದ ತುಂಬಿಹೋಗಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಅಲ್ಲಿ ಸಮೃದ್ಧ ವರ್ಣ ವೈವಿಧ್ಯಗಳಿಂದ ತುಂಬಿಕೊಂಡಿದ್ದ ಚಿತ್ರಗಳಲ್ಲಿ ಬಹು ಪಾಲು ಥಾಯ್ ರಾಮಾಯಣದ ದೃಶ್ಯಾವಳಿಗಳೆ ಹೆಚ್ಚಾಗಿ ಆವರಿಸಿಕೊಂಡಿದ್ದವು. ರಾಮಾಯಣ ನಡೆದ ಮೂಲ ನಾಡಾದ ನಮ್ಮಲ್ಲೆ ಇಷ್ಟು ಕಾಳಜಿ, ಶ್ರದ್ದೆಯಿಂದ ಇವನ್ನೆಲ್ಲ ಸೃಜಿಸಿ ಕಾಪಿಡುತ್ತಾರೋ ಇಲ್ಲವೊ - ಇವರು ಮಾತ್ರ ಇವೆಲ್ಲ ಸಂಸ್ಕೃತಿ ಪರಂಪರೆಯ ತುಣುಕುಗಳನ್ನು ತಮ್ಮ ಜೀವಾಳವೆನ್ನುವಂತೆ ಸಂರಕ್ಷಿಸಿಕೊಂಡೆ ಮುಂದಿನ ಪೀಳಿಗೆಗಳಿಗೆ ದಾಟಿಸುತ್ತಿದ್ದಾರಲ್ಲಾ - ಅದರಲ್ಲೂ ಬೌದ್ಧ ಧರ್ಮದ ಶ್ರದ್ಧಾಳುಗಳಾಗಿದ್ದರೂ ಸಹ, ಎನಿಸಿ ಅಚ್ಚರಿಗೊಳ್ಳುತ್ತ ಅವುಗಳನ್ನು ದಾಟಿಕೊಂಡೆ ಮುಂದುವರೆಯುತ್ತಿದ್ದಾಗಲೆ ಕಣ್ಣಿಗೆ ಬಿದ್ದಿತ್ತು ವಾಸುಕಿಯನ್ನಿಟ್ಟುಕೊಂಡು ಕಡಲನ್ನು ಕಡೆಯುತ್ತಿರುವ 'ಸಮುದ್ರ ಮಥನ'ದ ದೃಶ್ಯ! ಮಧ್ಯದಲ್ಲಿ ಅಗಾಧ ಗಾತ್ರದ ಮಂದಾರ ಪರ್ವತಕ್ಕೆ ಸುತ್ತಿಕೊಂಡ ಅಷ್ಟೇ ದೊಡ್ಡ ಗಾತ್ರದ ವಾಸುಕಿ, ಕಡಲಿನ ದುರ್ಗಮದಸ್ಥಿರದಲ್ಲಿ ಇಡೀ ಪರ್ವತವನ್ನೆ ಕಡಗೋಲಿನಂತಾಗಿಸಲು ಬೆನ್ನಿನ ಆಧಾರ ಕೊಟ್ಟ ಕೂರ್ಮಾವತಾರಿ ವಿಷ್ಣು, ಸರ್ಪದ ಶಿರೋಭಾಗದಲ್ಲಿ ಅದರ ಶ್ವಾಸದಿಂದುಗುಳಲ್ಪಡುತ್ತಿರುವ ವಿಷ ಜ್ವಾಲೆಯನ್ನು ಸೇವಿಸಿಕೊಂಡೆ ಅದರ ತಲೆಯನ್ನು ಹಿಡಿದು ಕಡಗೋಲಿನ ಸುತ್ತ ನೆರೆದೆಳೆಯುತ್ತಿರುವ ದಾನವ ಗಣ , ಬಾಲದ ಕಡೆಯಿಂದ ಅದೇ ಕೆಲಸವನ್ನು ವಿರುದ್ಧ ದಿಕ್ಕಿನಿಂದ ಪೂರೈಸುತ್ತಿರುವ ದೇವ ಗಣ - ಎಲ್ಲವೂ ಸಾಕ್ಷಾತ್ ಸಮುದ್ರ ಮಥನದ ಶ್ರೀನಾಥನ ನಂಬಿಕೆಯಂತೆಯೆ, ಅದರನುಗುಣವಾಗಿಯೆ ಇದ್ದ ಚಿತ್ರಣ... ಆದರೆ ಒಂದೆ ಒಂದು ವ್ಯತ್ಯಾಸವೆಂದರೆ ಅವರು ಹಾಕಿದ್ದ ಉಡುಪುಗಳು, ದಿರಿಸುಗಳು, ಆಭರಣಗಳು ಮತ್ತು ಮುಖ ಚಹರೆಗಳು. ಪ್ರತಿಯೊಬ್ಬರಲ್ಲೂ ಕಿರೀಟವಿದ್ದರೂ ಅವೆಲ್ಲ ಥಾಯ್ ಶೈಲಿಯಲ್ಲಿ ಶಿಖರದ ಗೋಪುರದಂತೆ ಉದ್ದಕ್ಕೆ ಚೂಪಾಗಿ ಚಾಚಿಕೊಂಡ ಮೊನೆಚಾದ ತುದಿಯಲುಗಿನವು. ತೊಟ್ಟ ದಿರುಸು, ಆಭರಣಗಳೂ ಸಹ ಹೋಲಿಕೆಯಲ್ಲಿ ಸಾಮ್ಯತೆಯಲ್ಲಿ ಮೂಲಕ್ಕೆ ಹತ್ತಿರವಿರುವಂತೆ ಕಂಡರೂ, ತೀರಾ ಸೂಕ್ಷ್ಮವಾಗಿ ವಿವರಗಳನ್ನು ಗಮನಿಸಿದರೆ ಅಲ್ಲಿ ಥಾಯ್ ಸಂಪ್ರದಾಯದ ಕೌಶಲ, ಕಲೆಗಾರಿಕೆಗಳು ಹೇರಳವಾಗಿ ಕಾಣಿಸುತ್ತಿದ್ದವು. ಅಂತೆಯೆ ಅವುಗಳ ಹೆಸರುಗಳೂ ಸಹ ಎಲ್ಲಾ ಥಾಯ್ ಹೆಸರುಗಳಾಗಿ ಹೋಗಿ ಮೂಲಕ್ಕೆ ಹೊಂದದ ರೀತಿ ಭಾಷಾಂತರಿಸಿಕೊಂಡು ಬದಲಾಗಿ ಹೋಗಿದ್ದವು. ಆ ರೀತಿಯ ಮಾರ್ಪಾಡುಗಳನ್ನು ಬಿಟ್ಟರೆ ಮಿಕ್ಕೆಲ್ಲವೂ ಮೂಲಕ್ಕೆ ಹೊಂದುವ ಅಪ್ಪಟ ಸಾಮ್ಯತೆಯ ಚಿತ್ರಣಗಳೆ. ಅದರಲ್ಲೂ ಅವರು ಬಳಸುವ ವರ್ಣಗಳಲ್ಲಿ ಬಂಗಾರದ ಬಣ್ಣವನ್ನು ಮಿಕ್ಕಿತರ ಬಣ್ಣಗಳೊಡನೆ ಯಥೇಚ್ಛವಾಗಿ ಬಳಸಿದ್ದ ಕಾರಣ ಒಂದು ರೀತಿಯ ವೈಭವೋಪೇತ ಚಿತ್ರಣ ತಾನಾಗಿಯೆ ಅನಾವರಣಗೊಂಡಂತೆ ಕಾಣುತ್ತಿತ್ತು. 

ಆ ಸಾಗರ ಮಥನದ ಚಿತ್ರಣ ನೋಡುತ್ತ ಅದರ ವೈಭವಕ್ಕೆ ಬೆರಗಾಗುತ್ತಿದ್ದ ಹೊತ್ತಲೆ ಸರಕ್ಕನೆ ಶ್ರೀನಾಥನ ಮನದಲ್ಲುದ್ಭವಿಸಿತ್ತು ಮತ್ತೊಂದು ದ್ವಂದ್ವದ ಪಲುಕು..' ಅರೆರೆ...? ಈ ಸಾಗರವನ್ನು ಕಡೆಯುವ ಪ್ರಕ್ರಿಯೆಯಲ್ಲೆ ಅದೆಷ್ಟು ದ್ವಂದ್ವದ ಉದಾಹರಣೆಗಳು ತುಂಬಿಕೊಂಡಿದೆಯಲ್ಲ? ಅದರಲ್ಲಿಯೂ ಸಮುದ್ರ ಮಥನದ ಅತ್ಯಂತ ಪ್ರಮುಖ ಕಾರಣವಾದ 'ಕಡಲನ್ನು ಕಡೆದು ಅಮೃತವನ್ನು ಪಡೆಯುವ' ಆ ಮಹಾನ್ ಪ್ರಕ್ರಿಯೆಯಲ್ಲೆ ಈ ದ್ವಂದ್ವ ಸಿದ್ದಾಂತದ ಸ್ಪಷ್ಟ ನಿದರ್ಶನ ಗೋಚರಿಸಿಬಿಟ್ಟಿತಲ್ಲಾ ಎನಿಸಿ ಅಚ್ಚರಿಯೂ ಆಯಿತು. ಅಚ್ಚರಿಯಾಗಿದ್ದಕ್ಕೆ ಕಾರಣ ಆ ಅಮೃತವನ್ನು ಕಡೆಯುವ ಹೊತ್ತಲ್ಲೆ ದ್ವಂದ್ವ ಸಿದ್ದಾಂತಕ್ಕನುಸಾರವಾಗಿ ಘೋರಾತಿಘೋರ ಕಾರ್ಕೋಟಕ ವಿಷ ಹುಟ್ಟಿಕೊಂಡಿತೆಂಬ ಹೃದ್ಗತವಾಗಿದ್ದ ಪರಿಜ್ಞಾನವಾಗಿರಲಿಲ್ಲ. ಬದಲಿಗೆ ಅದಷ್ಟು ಚೆನ್ನಾಗಿ ಪರಿಚಿತವಾದ ಪುರಾಣ ಕಥಾನಕದ ವಿಷಯವೇ ಆಗಿದ್ದರೂ ಇಲ್ಲಿಯತನಕ ಆ ದ್ವಂದ್ವತ್ವದ ಆಯಾಮ ಹೊಳೆದಿರಲಿಲ್ಲವಲ್ಲಾ ಎಂದು ಅಚ್ಚರಿಯಾಗಿದ್ದುದು. ನಮ್ಮ ಪುರಾಣ ಕಥಾನಕಗಳಲುದ್ಭವಿಸಿದ ಅಮೃತದ ಕಲ್ಪನೆ ಹೇಗೆ ಜೀವಕ್ಕೆ ಸಂಜೀವಿನಿಯೊ, ಹೇಗೆ ಅಮರತ್ವಕ್ಕೆ ಕರೆದೊಯ್ಯುವ ಸೋಪಾನವೊ, ಹಾಗೆಯೆ ಅದರ ಸಂವಾದಿ ಋಣಾತ್ಮಕವಾದ ಕಾರ್ಕೋಟಕ ವಿಷವೂ ಅದರ ವಿರುದ್ಧ ಪರಿಣಾಮದ ಪ್ರಖರತೆಯ ಸಾಕಾರ. ಸಮುದ್ರವನ್ನು ಕಡೆದ 'ನಃ ಭೂತೋ ನಃ ಭವಿಷ್ಯತೋ' ಎನ್ನುವಂತ ಸಾಗರಾಂತರಾಳ ಮಹೋತ್ಸಂಘರ್ಷಣದಲ್ಲಿ ಅಮೃತದ ಸೃಷ್ಟಿಯಾಗುವ ಪ್ರಕ್ರಿಯೆಯಲ್ಲೆ ಅದಕೂ ಮೊದಲೆ ಹುಟ್ಟಿದ್ದು ಈ ಕಾರ್ಕೋಟಕ ವಿಷವೆಂಬ ಗರಳ. ಅಂದರೆ ಅಮೃತದ ಅಸ್ತಿತ್ವವುಂಟಾಗಬೇಕಿದ್ದರೆ ಅದರ ಅಸ್ತಿತ್ವವನ್ನೆ ನಿರಸ್ತಿತ್ವವಾಗಿಸಬಲ್ಲ ವಿಷವೂ ಜತೆಯಲ್ಲೆ ಉತ್ಪತ್ತಿಯಾಗಿಹೋಗಿತ್ತು, ದ್ವಂದ್ವ ಸಿದ್ದಾಂತ ನಿರೀಕ್ಷೆಯಂತೆ! ಅವೆರಡು ಮಹಾನ್ ಸೃಷ್ಟಿಗಳು ಪರಸ್ಪರ ಘರ್ಷಣೆಯಲ್ಲಿ ತೊಡಗಿಕೊಂಡು ಪರಸ್ಪರರನ್ನೆ ನುಂಗಿ ಹಾಕಿಕೊಂಡು ನಿರಸ್ತಿತ್ವದ ದುಸ್ಥಿತಿಗೊಳಪಡುವ ಮೊದಲೆ ಆ ಗರಳವನ್ನೆ ಆಪೋಷಿಸಿ ಕಂಠಾಭರಣವಾಗಿಸಿಕೊಂಡ ನೀಲಕಂಠ, ಒಂದು ರೀತಿಯ ಅವೆರಡರ ಸಮತೋಲನ ಸ್ಥಿತಿಯನ್ನು ಕೃತಕವಾಗಿ ನಿರ್ಮಿಸುವ ಯಶಸ್ಸಿನ ಕಾರಣೀಭೂತನಾದ; ಒಟ್ಟಾರೆ ಅಲ್ಲಿಯೂ ಈ ಸಿದ್ದಾಂತಕ್ಕೆ ಪೋಷಣೆ ನೀಡುವ ಪ್ರಕ್ರಿಯೆಯೆ ನಡೆದಂತಿದೆ. ಅದೇನು ಪುರಾಣಗಳು ವೈಭವೀಕರಿಸುವಂತೆ ಇಡೀ ವಿಷವನ್ನೆ ಬಾಚಿಕೊಂಡು ಆಪೋಷಿಸಿಬಿಟ್ಟನೆ, ಅಥವಾ ನಾವರಿಯಲಾಗದ ಯಾವುದೊ ಮತ್ತೊಂದು ವೈಜ್ಞಾನಿಕ ಪ್ರಕ್ರಿಯೆಯಲ್ಲಿ ಅದನ್ನು ಸಂಗ್ರಹಿಸಿ, ಕಾಡುವ ಸರಕಾಗದಂತೆ ಬಿರಡೆ ಹಾಕಿ ಮುಚ್ಚಿಟ್ಟುಬಿಟ್ಟನೊ (ಬಹುಶಃ ಗಂಟಲ ಪೆಟ್ಟಿಗೆಯ ಯಾವುದೊ ಸುರಕ್ಷಿತ ಭಾಗದಲ್ಲಿ, ಅಥವ ಇನ್ನೆಲ್ಲೊ ಆ ಹೋಲಿಕೆಗೊಂದಿಕೊಳ್ಳುವ ತಾಣದಲ್ಲಿ...) - ಸದ್ಯಕಿಲ್ಲಿ ಅದು ಅಪ್ರಸ್ತುತ. ಆ ಹೊತ್ತಿನಲ್ಲಿ ಹುಟ್ಟಿದ ಇನ್ನದೆಷ್ಟೊ ದ್ವಂದ್ವಗಳು ಹೀಗೆ ಜೀವ ತಳೆದು ಅಸ್ತಿತ್ವವನ್ನು ಪಡೆದುಕೊಂಡವೊ, ಏನೊ? ಮಸಲ ಸಮುದ್ರದ ನೀರನ್ನು ಕಡೆಯುವಾಗ ಅದರಲ್ಲಿ ನಿಜವಾಗಿ ಕಡೆದ ಮೂಲ ವಸ್ತುವಾದರೂ ಏನಿದ್ದೀತು ? ಬಹುಶಃ ಸಾತ್ವಿಕ, ರಾಜಸ, ತಾಮಸ ಗುಣಗಳನ್ನೊಳಗೊಂಡ ಯಾವುದೊ ಭೌತಿಕ ಮೂಲವಸ್ತುಗಳನ್ನು ವಿವಿಧ ಅನುಪಾತದಲ್ಲಿ ಮಂದಾರ ಪರ್ವತದಡಿಯಿಟ್ಟು ಕಡಗೋಲಿನಲ್ಲಿ ಪುಡಿ ಮಾಡಿ ಕಡೆದು ನೋಡಿರಬೇಕು - ಏನೇನು ಬಂದೀತು? ಎಂದು, ಕಡೆಗೆ ಅಮೃತವು ಹುಟ್ಟುವವರೆಗೆ..(ಅಥವಾ ಆ ಮೂರು ತ್ರಿಗುಣಾತ್ಮಕ ಶಕ್ತಿಗಳ ಮೂಲ ಸರಕು ಆ ಮೊದಲೆ ಸಮುದ್ರದಡಿಯ ಆ ಭಾಗದಲ್ಲಿ ಇದೆಯೆಂದನ್ನು ಕಂಡುಕೊಂಡಿದ್ದರೋ ಏನೋ - ನಾವು ಆಧುನಿಕ ತಂತ್ರಜ್ಞಾನ ಬಳಸಿ  ಸಮುದ್ರದಾಳದಿಂದ ತೈಲ ಪಡೆಯುವ ಹಾಗೆ..?). ಬಹುಶಃ ಅಮೃತವೂ ಶುದ್ಧ ಸಾತ್ವಿಕವಿರಬೇಕೊ ಏನೊ - ಆ ರೀತಿಯ ಅದ್ಭುತ ಶಕ್ತಿ ಹೊಂದಿರಲು. ಕನಿಷ್ಠ ರಾಜಸ ತಾಮಸದಂತಹ ಮಿಕ್ಕೆರಡನ್ನು ನೀರಾಗಿಸಿ ಕರಗಿಸಿ ಸಂಕ್ಷಿಪ್ತವಾಗಿಸುವ, ಬರಿ ಸಾತ್ವಿಕತೆಯನ್ನು ಮಾತ್ರ ಬಲವತ್ತರಗೊಳಿಸಿ ದೇಹಕ್ಕೆ ತುಂಬಿಸುವ ಶಕ್ತಿ ಪೇಯದಂತಹ ಪುಣ್ಯ ಜಲವಾದರೂ ಆಗಿರಬೇಕೇನೊ..?

ಎಲ್ಲಿಂದೆಲ್ಲಿಗೊ ಎಳೆದುಕೊಂಡು, ಏನೇನೊ ಆಯಾಮ ಪಡೆದುಕೊಳ್ಳುತ್ತಾ ಸಾಗುತ್ತಿದ್ದ ಲಂಗುಲಗಾಮಿಲ್ಲದ ಆಲೋಚನಾ ಲಹರಿಗೆ ತನಗೆ ತಾನೆ ಎಂಬಂತೆ ನಗು ಬಂದಿತ್ತು ಶ್ರೀನಾಥನಿಗೆ. ಅಮೃತದ ಸೃಷ್ಟಿಯ ಕಥಾನಕವೆಲ್ಲಿ ? ಅದರ ಮೂಲ ಶೋಧನೆಗಿಳಿವ ಹುನ್ನಾರವೆಲ್ಲಿ? ಯಾಕೊ ಚಿಂತನೆಯ ಆಳ ಅಗತ್ಯಕ್ಕಿಂತಲೂ ಆಳಕ್ಕಿಳಿಯುತ್ತಿರುವಂತಿದೆ.. ಬಹುಶಃ ಎಷ್ಟು ಆಳಕ್ಕಿಳಿಯಬಹುದು ಎನ್ನುವುದಕ್ಕೂ ಕೂಡ ಒಂದು ಆದರ್ಶ ಮಟ್ಟವನ್ನು ನಿಗದಿಸುವ ನಿಯಮವಿದೆಯೊ ಏನೊ..? ಅದರ ಮಟ್ಟವನ್ನು ಮೀರಿದರೆ ಸಂಗತವೆನಿಸಿದ್ದೂ ಕೂಡ ಹುಚ್ಚಾಟದ ಪರಿಧಿಯತ್ತ ನಡೆದೀತೇನೊ - ತಾನೀಗ ಆಲೋಚಿಸಹತ್ತಿದಂತೆ. ಅಮೃತದ ಸಂವಾದಿಯಾಗಿ ವಿಷ ಹುಟ್ಟಿತು, ದೇವತೆಗಳ ಸಂವಾದಿಯಾಗಿ ದೈತ್ಯರ ಜನನವಾಯಿತು, ಸೌಂದರ್ಯವನ್ನು ಸೃಜಿಸಲಿಳಿದಾಗ ಕುರೂಪವೂ ಹುಟ್ಟುಕೊಂಡಿತು ಎನ್ನುವತನಕ ಈ ವಾದದ ತಿರುಳು ಸರಿಯಾಗಿಯೆ ಸಾಗುವಂತೆ ಕಾಣುತ್ತಿದೆ.. ಅದರ ಮುಂದಿನ ಆಳಕ್ಕಿಳಿದರೆ ಅದು ಹಾಗೆಯೆ ಇರುವುದೊ, ಇಲ್ಲವೊ ಎಂದು ಹೇಳಲಾಗದು.. ಬಹುಶಃ ಈ ಪ್ರಶ್ನೆಯನ್ನು ಮಾಂಕ್ ಸಾಕೇತರಲ್ಲೊಮ್ಮೆ ಮತ್ತೆ ಕೇಳಿ ನೋಡಬೇಕು - ಆಳದ ಗಣನೆ ಇಲ್ಲಿ ಪ್ರಸ್ತುತವೆ ಅಥವಾ ಇಲ್ಲವೆ? ಎಂದು.. ಅವರೇನೊ ಪೂರ್ತಿ ಸಮತಳವನ್ನು ಮುಟ್ಟಿ, ಮತ್ತೇನು ಆಳವೂ ಮಿಕ್ಕಿಲ್ಲವೆನ್ನುವಷ್ಟರ ಮಟ್ಟ ತಲುಪುವ ತನಕವೂ ಇಳಿಯುತ್ತಿರಬೇಕೆಂದು ಹೇಳಿದ್ದು ನಿಜ. ಆದರೆ ಆ ಇಳಿಯುವ ಹವಣಿಕೆಯಲ್ಲಿ ತೀರಾ ಅಸಂಗತವೆನಿಸಿಯೊ, ಅತಾರ್ಕಿಕವೆನಿಸಿಯೊ ಅಥವಾ ಸ್ವಯಂನಿರೀಕ್ಷಣ ಶಕ್ತಿ ಸಾಲದ ಅಸಹಾಯಕತೆಯಿಂದಲೊ ಗಲಿಬಿಲಿಯಾಗಿ ತಡೆಯುಂಟಾದರೆ, ಆಗಲೂ ಅದನ್ನು ನಿರ್ಲಕ್ಷಿಸಿ ಮುಂದುವರೆಯುತ್ತಿರಬೇಕೆ, ಸರಿಯಲ್ಲದ ಸಮತಲದತ್ತ ಒಯ್ಯುತ್ತಿರಬಹುದೇನೊ ಎಂದು ಅನಿಸುತ್ತಿದ್ದರೂ ಕೂಡ? - ಎಂದು ಮತ್ತೆ ಅನುಮಾನ ತಲೆದೋರುತ್ತಿದೆ. ಉದಾಹರಣೆಗೆ ಸೌಂದರ್ಯದ ವಿಷಯವನ್ನೆ ತೆಗೆದುಕೊಂಡರೆ, ಒಂದು ವಿಧದಲ್ಲಿ ಸೌಂದರ್ಯದ ವಿವರಣೆಯೆ ಕುರೂಪವಲ್ಲವೆ? ಕುರೂಪವನ್ನು ವಿವರಿಸುತ್ತಲೊ ಅಥವಾ ತೋರಿಸುತ್ತಲೊ - ಯಾವುದು ಇದಲ್ಲವೊ, ಅದೇ ಸೌಂದರ್ಯ ಎಂದುಬಿಡಬಹುದಲ್ಲ? ಅದೆ ರೀತಿ ಸೌಂದರ್ಯದ ವಿವರಣೆಯೆ ಕುರೂಪದ ಪ್ರತಿ-ವಿವರಣೆಯಾಗುವುದಿಲ್ಲವೆ? ಪೂರ್ತಿ ಸೌಂದರ್ಯವೆ ಅಸ್ತಿತ್ವದಲ್ಲಿ ಇರುವಂತಿದ್ದರೆ ಅದರ ವಿವರಣೆಯಾದರೂ ಹೇಗೆ ಸಾಧ್ಯವಾಗುತ್ತಿತ್ತು - ಅದರ ವಿಕೃತ ರೂಪವಾಗಿ ಕುರೂಪದ ದರ್ಶನವಾಗುವ ತನಕ? ಆ ಸಂದಿಗ್ದದ ಕಾರಣವೆ ತಾನೆ ಸೃಷ್ಟಿಯಲ್ಲಿ ಸೌಂದರ್ಯ-ಕುರೂಪಗಳು ಜತೆಯಾಗಿಯೆ ಬಾಳಬಲ್ಲಂತಹ ಸಮತೋಲನದ ಸ್ಥಿತಿ ಉದ್ಭವವಾಗಿರುವುದು? ಅದು ಸಾಲದೆನ್ನುವಂತೆ ಯಾವ ಅಸ್ತಿತ್ವಕ್ಕು, ಪೂರ್ಣ ಪರಿಶುದ್ಧ ಸುರೂಪವನ್ನಾಗಲಿ, ಕುರೂಪವನ್ನಾಗಲಿ ಕೊಡದೆ ಯಾವುದೊ ಅನುಪಾತದಲ್ಲಿ ಬೆರೆಸಿ ಜೋಡಿಸಿಟ್ಟಿರುವುದು ಸಮತೋಲನದ ಮತ್ತೊಂದು ವೈವಿಧ್ಯತೆ ತಾನೆ - ಕೆಲವೊಮ್ಮೆ ಸುರುಪ-ಕುರೂಪದ ಭೌತಿಕ ಅನುಪಾತದಲ್ಲಿ, ಮತ್ತೆ ಕೆಲವೊಮ್ಮೆ ರೂಪ-ಗುಣಗಳ ಭೌತಿಕಾಭೌತಿಕತೆಗಳ ಮಿಶ್ರಣದ ಅನುಪಾತದಲ್ಲಿ ? ಗುಣಗಳ ನಿದರ್ಶನದಲ್ಲೆ ಪ್ರತ್ಯೇಕವಾಗಿ ಪರಿಗಣಿಸಿದರೆ ಸುಗುಣ-ದುರ್ಗುಣಗಳ ಅನುಪಾತವೂ ಮತ್ತೊಂದು ಸಮತೋಲಿತ ಸ್ಥಿತಿಗೆ ಕಾರಣವಾಗುವುದು ರೂಪವನ್ನು ಹೊರತುಪಡಿಸಿದ, ಬರಿಯ ಗುಣಮಾತ್ರದ ಆಯಾಮದಲ್ಲಿ ವಿವರಿಸಬೇಕಾದ ಮತ್ತೊಂದು ಅಸ್ತಿತ್ವವಾಗಿಬಿಡುತ್ತದೆ.. ಅದೇನೆ ಆಗಲಿ, ಅನುಮಾನಕ್ಕೆಡೆಯಿರದಂತೆ ಮಾಂಕ್ ಸಾಕೇತರಲ್ಲಿ ಒಮ್ಮೆ ಈ ಜಿಜ್ಞಾಸೆಗೂ ಪರಿಹಾರವನ್ನು ಹುಡುಕಿಸಿಕೊಳ್ಳಬೇಕು, ಇಲ್ಲಿಂದ ಹಿಂದಿರುಗಿ ವಾಪಸ್ಸು ಹೋಗುವುದರೊಳಗೆ...

ದ್ವಂದ್ವತೆಯ ವಾದದ ಆಳಕ್ಕಿಳಿದಂತೆ, ಮೇಲುಸ್ತರವನ್ನು ದಾಟಿ ಒಳಗಿಳಿದಂತೆಲ್ಲ ಅದರ ವಿವರಣಾತ್ಮಕ ಜಟಿಲತೆಯ ಸ್ತರದ ಕಠಿಣತೆಯ ವಿಸ್ತಾರವಾದಂತಾಗಿ, ಆ ಜಟಿಲತೆಯಲ್ಲೆ ಏನೊ ನಿಗೂಢತೆ ಅಡಗಿರುವಂತೆ ಭಾಸವಾಗಹತ್ತಿತ್ತು ಶ್ರೀನಾಥನಿಗೆ. ಮೇಲು ಸ್ತರದಲ್ಲಿ ಸರಳವಾಗಿ ಕಾಣುವ ಎಲ್ಲಾ ಪ್ರಕ್ರಿಯೆಗಳು, ಅದರ ಮೊದಲ ಪದರ ಹಾದು ಮತ್ತೊಂದು ಪದರದ ಒಳಹೊಕ್ಕವೆಂದರೆ ಪೂರ್ಣ ಗೊಂದಲ ಆರಂಭವಾಗಿಬಿಡುತ್ತಿತ್ತು. ಇಂಗಾಲದ ವಿಷಯದಲ್ಲೂ ಇದೇ ರೀತಿಯ ದ್ವಂದ್ವಕ್ಕೆ ಸಿಕ್ಕಿಕೊಂಡು ಒದ್ದಾಡಿದ್ದ ಶ್ರೀನಾಥ. ಒಂದೆಡೆ ಜೀವ ವಾಯುವಾದ ಆಮ್ಲಜನಕದ ಜತೆಗಿನ ಒದ್ದಾಟದಲ್ಲಿ ಪೂರ್ತಿ ವಿಲನ್ನಿನಂತೆ ವರ್ತಿಸಿದ್ದ ಇಂಗಾಲದ ಸಂಯುಕ್ತಕಗಳು ಮತ್ತೊಂದೆಡೆ ಇಂಗಾಲದ ಪರಿಶುದ್ಧ ರೂಪದಲ್ಲಿ ಬೇರೆಯದೆ ಆದ ಗುಣ ಸ್ವಭಾವವನ್ನು ಪ್ರಕ್ಷೇಪಿಸಿ ಪೂರ್ತಿ ಗೊಂದಲವನ್ನುಂಟು ಮಾಡಿಬಿಟ್ಟಿದ್ದವು. ಒಂದೆಡೆ ಇಂಗಾಲ ಬರಿಯ ಇಂಗಾಲವಾಗಿರದೆ ಮಾನಾಕ್ಸೈಡ್ ಅಥವಾ ಡಯಾಕ್ಸೈಡ್ ಆಗಿ ಕಿತಾಪತಿ ಮಾಡುವ 'ಕಿರಿಕಿರಿ ದಾಸನಾಗಿ' ಕುಪ್ರಸಿದ್ದನಾಗಿದ್ದರೆ, ಅದೇ ಮೂಲಧಾತು ಶುದ್ಧ ಇಂಗಾಲದ ರೂಪದಲ್ಲಿ ಸಂಪೂರ್ಣ ಬೇರೆಯದೆ ಅವತಾರವನ್ನೆತ್ತುವ ವಿಪರೀತ ವಿರುದ್ದ ಸ್ವಭಾವದ ಸಾತ್ವಿಕ ಪ್ರಭುವಿನಂತೆ ವರ್ತಿಸಿ ಅಚ್ಚರಿಗೊಳಿಸುತ್ತಿತ್ತು. ಪ್ರತಿಯೊಂದರ ಅಸ್ತಿತ್ವವೂ ಇಂಗಾಲದಂತೆಯೆ ಸಾತ್ವಿಕ, ರಾಜಸ, ತಾಮಸಗಳೆಲ್ಲದರ ಸಂಗಮವಾಗಿ, ವಿವಿಧ ರೂಪಾಂತರದಲ್ಲಿ ತನ್ನ ವಿಭಿನ್ನ ಮುಖವಾಡವನ್ನು ತೋರಿಸುವ ಬಹುರೂಪಿಯೆ ಎಂದೆನಿಸತೊಡಗಿತ್ತು. ಬರಿಯ ಇಂಗಾಲವೇ ಏಕೆ ಪ್ರತಿ ಮಾನವ ಜೀವಿಯಲ್ಲೂ ಇದೇ ಸತ್ಯವಲ್ಲವೆ? ಸಮಯ, ಸಂಧರ್ಭಕ್ಕನುಸಾರವಾಗಿ ಮಾನವನ ಅಥವಾ ಇನ್ನಾವುದೆ ಜೀವಿಯ ಪ್ರತಿಕ್ರಿಯೆ, ಸ್ಪಂದನಗಳು ತಮ್ಮ ಸಾತ್ವಿಕವೊ, ತಾಮಸವೊ ಅಥವಾ ರಾಜಸವೊ ಪ್ರತಿನಿಧಿತವಾಗುವ ಗುಣವನ್ನು ಪ್ರದರ್ಶಿಸುವುದಿಲ್ಲವೆ? ಅಂದರೆ ಒಂದು ರೀತಿ ಹೇಳುವುದಾದರೆ ಪ್ರತಿ ವಸ್ತುವಿನ ಅಸ್ತಿತ್ವದಲ್ಲಿ ಈ ಮೂರು ಅಂಶಗಳು ಸದಾ ಇದ್ದು, ಯಾವಾಗ ಯಾವುದು ಪ್ರಕಟವಾಗುತ್ತದೆನ್ನುವುದು, ಬಾಹ್ಯ ಸನ್ನಿವೇಶ ಮತ್ತು ಅಂತರಾಳದ ಒಳದೋಟಿಯ ಲೆಕ್ಕಾಚಾರದ ಗಣಿತಗಳು ಸೇರಿದಂತೆ, ಮತ್ತಿನ್ನೇನೇನೊ ಪ್ರಭಾವಿಸಿದ ಸಂಕಲಿತ ಮೊತ್ತದ ಅನಾವರಣವೆನ್ನಬಹುದಲ್ಲವೆ ? ಬರಿ ಅಷ್ಟೆ ಲೆಕ್ಕಾಚಾರ ಆಗಿದ್ದಿದ್ದರೆ ಪರವಾಗಿರಲಿಲ್ಲ, ಶ್ರೀನಾಥ ಅದನ್ನಷ್ಟು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲವೇನೊ? ಆದರೆ ಬರಿ ಆ ಇಂಗಾಲವನ್ನು ಮಾತ್ರವೆ ಜಾಡಿಸಿ ಒರೆಗೆ ಹಚ್ಚಿ ನೋಡಲ್ಹೊರಟರೆ, ಸಂಪೂರ್ಣ ದಿಗ್ಭ್ರಾಂತಿಗೊಡ್ಡುವ ಮತ್ತೊಂದು ತರದ ವಿಪರೀತದ ಸನ್ನಿವೇಶಕ್ಕೆ ಸಾಕ್ಷಿಯಾಗುವಂತೆ ಮಾಡಿತ್ತು, ಆ ಅವಲೋಕನ . 

ಅದುವರೆವಿಗೆ, ಎಲ್ಲರಿಗು ತಿಳಿದಂತೆ ಇಂಗಾಲ ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಹಲವಾರು ಬಗೆಯಲ್ಲಿ ತನ್ನ ಅವತಾರವನ್ನು ಪ್ರಕ್ಷೇಪಿಸಿಕೊಂಡು ಬೇರೂರಿರುವುದು ಶ್ರೀನಾಥನಿಗೂ ಗೊತ್ತಿರುವ ವಿಷಯ. ಅದು ಚೆನ್ನಾಗಿ ಗೊತ್ತಿತ್ತಾದರೂ, ಅದನ್ನು ಬರಿಯ ನೀರಸ ವೈಜ್ಞಾನಿಕ ವರದಿಯಂತೆ ಮಾತ್ರ ನೋಡಿ ಅಭ್ಯಾಸವಿದ್ದ ಅವನಿಗೆ ಈ ದ್ವಂದ್ವ ಸಿದ್ದಾಂತದ ನಂತರ ಅದೂ ಪೂರ್ತಿ ಬೇರೆಯದೆ ಆದ ಆಳ, ವಿಸ್ತಾರಗಳಲ್ಲಿ ಕಾಣಿಸಿಕೊಳ್ಳತೊಡಗಿತ್ತು. ಮೊದಲನೆಯದಾಗಿ ಇದ್ದಿಲು - ಇಂಗಾಲದ ಒಂದು ಸರಳ ರೂಪ - ಮುಷ್ಟಿಯಲೊಮ್ಮೆ ಹಿಡಿದು ಗಟ್ಟಿಯಾಗಿ ಅಮುಕಿದರೆ ಪುಡಿಪುಡಿಯಾಗಿಬಿಡುವ ದುರ್ಬಲ ವಸ್ತು. ಅದೂ ಮರ, ಸೌದೆಯಂತಹ ವಸ್ತು ಬೆಂಕಿಯಲ್ಲಿ ಉರಿದಾಗ, ಉರಿಯದೆ ಅಳಿದುಳಿದ ಕೆಂಡ ತಂಪಾದಾಗ ಉತ್ಪತ್ತಿಯಾದ ನಿಷ್ಪತ್ತಿ. ಅದೇ ಇಂಗಾಲ ಮತ್ತೊಂದು ವಿರುದ್ಧ ದಿಕ್ಕಿನ ಹಾದಿ ಹಿಡಿದಾಗ ಕಾಣಿಸಿಕೊಂಡ ರೂಪ - ವಜ್ರ ! ಇಂಗಾಲ ಅಥವ ಇದ್ದಿಲ ತುಂಡೆ ಭೂಮಿಯೊಳಗಿನ ಅಪರಿಮಿತ ಒತ್ತಡದ ಅನೇಕಾನೇಕ ಕ್ರಿಯೆ ಪ್ರತಿಕ್ರಿಯೆಗಳ ಅಭೂತಪೂರ್ವ ಅಂತರ್ಕ್ರಿಯೆ ಸಮೀಕರಣದ ಮೊತ್ತವಾಗಿ, ಏನೇನೊ ನಿಗೂಢ ರೂಪಾಂತರಕ್ಕೊಳಗೊಂಡು ಅತ್ಯಂತ ಕಠಿಣತಮ ವಸ್ತುವೆನಿಸಿಕೊಂಡ ವಜ್ರವಾಗುತ್ತದೆಂದು ಊಹಿಸಲಾಗಲಿ, ನಂಬಲಾಗಲಿ ಬಲು ಕಷ್ಟ... ಆದರೆ ನೈಸರ್ಗಿಕವಾಗಿ ದೊರಕುವ ವಜ್ರ, ಇದ್ದಿಲಿನಂತೆ ಇಂಗಾಲದ ಮತ್ತೊಂದು ರೂಪ ಎನ್ನುವುದು ಈ ಸೃಷ್ಟಿ ಸೋಜಿಗದ ಅಪ್ಪಟ ಸತ್ಯ; ಎಲ್ಲಿಯ ದುರ್ಬಲ ಇದ್ದಿಲು, ಎಲ್ಲಿಯ ಅಬೇಧ್ಯ ಕಾಯದ ವಜ್ರ? ಇವೆರಡು ಅಸೀಮ ತುಟ್ಟ ತುದಿಗಳ ವೈವಿಧ್ಯಮಯ ಸೋಜಿಗದ ಅಣಕವೇ ಸಾಲದೆನ್ನುವಂತೆ, ಇಂಗಾಲ ಇವೆರಡರ ನಡುವಿನ ಮತ್ತೊಂದು ರೂಪದಲ್ಲೂ ಮೈದಾಳಿ ಅಚ್ಚರಿಯ 'ಶಾಕ್'  ಕೊಡುತ್ತದೆ - ಗ್ರಾಫೈಟಿನ ರೂಪದಲ್ಲಿ...! ಸೀಸದ ಕಡ್ಡಿಯ (ಪೆನ್ಸಿಲ್ಲು) ಒಳಗಿರುವ ಈ ಇಂಗಾಲದ ಸ್ವರೂಪ ಇದ್ದಿಲಿನಂತೆ ದುರ್ಬಲವೂ ಅಲ್ಲದ, ವಜ್ರದಂತೆ ಅಭೇಧ್ಯವೂ ಅಲ್ಲದ ಮಧ್ಯಮ ಸ್ಥಿತಿ. ಬರೆಯುವ ಕಾಯಕದಲ್ಲಿ ಇದು ದೊಡ್ಡ ಸಂಗಾತಿಯಾದ ಇದು ಇಂಗಾಲದ ಮತ್ತೊಂದು ಅವತಾರವೆಂದಾಗ ನಂಬಲು ಕಷ್ಟವೆನಿಸಿದರು, ಅದು ಸತ್ಯದ ಮಾತು. ಈ ರೀತಿಯ ಅಸ್ತಿತ್ವವೆ 'ಒಂದೆ ರೂಪ ಹಲವು ಗುಣ' ಎನ್ನುವ ಹಾಗೆ ಅನಿಸಿದರೂ, ಒಂದೆ ಮೂಲ ವಸ್ತು ಇಷ್ಟು ವೈವಿಧ್ಯಮಯ ಅವತಾರಗಳಲ್ಲಿ ಏಕ ಕಾಲದಲ್ಲಿ ಪ್ರಸ್ತುತದಲ್ಲಿರುವುದು ದೊಡ್ಡ ಸೋಜಿಗವೆಂದೆ ಹೇಳಬೇಕು. ಒಂದು ರೀತಿ ನಮ್ಮ ವೇದ ಪುರಾಣದಲ್ಲಿ ಉಲ್ಲೇಖಿತವಾದ ಒಬ್ಬನೆ ದೇವರು ಹಲವಾರು ರೂಪಗಳಲ್ಲಿ ಏಕಕಾಲದಲ್ಲಿ ಪ್ರಸ್ತುತವಾಗಿರುವ ಆಶಯಕ್ಕೆ ಬಹು ಸಮೀಪವಾದ ಭೌತಿಕ ಉದಾಹರಣೆ ಇದೆನ್ನಬಹುದೇನೊ? ಸಾಧಾರಣ ವಸ್ತುವಾದ ಇಂಗಾಲಕ್ಕೆ ಈ ಬಹುರೂಪಿ ತತ್ವ ಸಾಧ್ಯವಾಗುವುದಾದರೆ, ಪರಮ ಶಕ್ತನಾದ ಭಗವಂತವೆಂಬ ಅಭಿವ್ಯಕ್ತಿಗೆ ಅಗಣಿತ ರೂಪಗಳಲ್ಲಿ ಏಕ ಕಾಲದಲ್ಲಿ ಅಸ್ತಿತ್ವದಲ್ಲಿರುವುದಾಗಲಿ, ಪ್ರಕಟವಾಗುವುದಾಗಲಿ ದೊಡ್ಡ ವಿಷಯೆವೆ? ಎಂದೆನಿಸಿದರೆ ಆ ವಾದವನ್ನು ನಿರಾಕರಿಸಿ ಪಕ್ಕಕ್ಕೆ ಸರಿಸುವುದು ಸುಲಭ ಸಾಧ್ಯವಲ್ಲ. ಅದು ನಿಜವೊ, ಸುಳ್ಳೊ ಅನ್ನುವ ತಾರ್ಕಿಕ- ಅತಾರ್ಕಿಕ ಜಿಜ್ಞಾಸೆಗಿಂತ ಇಲ್ಲಿ ಮುಖ್ಯವಾದ ಅಂಶವೆಂದರೆ, ನಮ್ಮ ಸುತ್ತಲೆ ನಮ್ಮ ವಿವರಣೆಯಳವಿಗೆ ಸಿಗದ ಹಲವಾರು ಸೋಜಿಗಗಳಿಗೆ ನಾವಿನ್ನೂ ಉತ್ತರ ಕಂಡುಕೊಳ್ಳಬೇಕಾಗಿದೆ ಅನ್ನುವುದು...

ಅಲ್ಲಿ ನಿಜವಾದ ತಿಕ್ಕಾಟ ಶುರುವಾಗುವುದು, ಇವು ಮೂರೂ ಒಂದೆ ಮೂಲವಸ್ತುವಾದ ಇಂಗಾಲದ ವಿವಿಧ ರೂಪಗಳು ಎಂದರಿವಾದಾಗ. ಇದೊಂದು ರೀತಿ ನೀರಿನ ಘನ, ದ್ರವ, ಅನಿಲಗಳೆಂಬ ಮೂರು ಸ್ಥಿತಿಗಳ ಸಾಧ್ಯತೆಯ ಹಾಗೆ.. ಆದರೆ ನೀರಿಗಾದರೊ ಈ ಮೂರು ಸ್ಥಿತಿಗಳು ಉಂಟಾಗಲಿಕ್ಕೆ ಬೇರೆ ಬೇರೆ ಸಾಂಧರ್ಭಿಕ ಶರತ್ತುಗಳು ಪೂರಕವಾಗಿರಬೇಕು - ಉದಾಹರಣೆಗೆ ತಾಪಮಾನದ ಗಣನೀಯ ಮತ್ತು ನಿಖರ ವ್ಯತ್ಯಾಸ. ಆಗಷ್ಟೆ ಘನರೂಪಿ ಮಂಜುಗಡ್ಡೆಯಾಗಿಯೊ, ದ್ರವರೂಪಿ ನೀರಾಗಿಯೊ ಅಥವಾ ಅನಿಲರೂಪಿ ಹಬೆಯಾಗಿಯೊ ಇರಲು ಸಾಧ್ಯವಾಗುತ್ತದೆ. ಆದರೆ ಮೂರು ಒಟ್ಟಿಗೆ, ಒಂದೆ ಪರಿಸರದ ಏಕರೂಪಿ ವಾತಾವರಣದ ಪರಿಮಾಣಗಳಲ್ಲಿ ಇರಲು ಸಾಧ್ಯವಾಗುವುದಿಲ್ಲ. ಈ ಇಂಗಾಲದ ಕಥೆ ಆ ಕಾರಣದಿಂದಲೆ ವಿಶಿಷ್ಠವಾಗುವುದು - ಮೂರು ಘನ ಸ್ಥಿತಿಗಳೆ; ಹೀಗಾಗಿ ಸಾಮಾನ್ಯ ವಾತಾವರಣದಲ್ಲೆ ಮೂರರ ಸಹ ಅಸ್ತಿತ್ವ ಸಾಧ್ಯ. ಆದರೂ ಅದು ಹೇಗೆ, ಒಂದೆ ಮೂಲವಸ್ತುವಿನ ಧಾತುವನ್ನು ಹೊಂದಿದ್ದು ಅಧಮ-ಮಧ್ಯಮ-ಉತ್ತಮ ಸಾಮರ್ಥ್ಯದ ಶಕ್ತಿ, ಬಲದ ವಿನ್ಯಾಸವನ್ನು ಹೊಂದಲು ಸಾಧ್ಯ? ಆ ಸಾಧ್ಯತೆಯ ಆಲೋಚನೆಯೆ ಅತಾರ್ಕಿಕವಾಗಿ, ಅಸಂಗತವಾಗಿ ಕಾಣುವುದಿಲ್ಲವೆ? ಇದೊಂದು ರೀತಿಯಲ್ಲಿ ಒಂದೆ ವಸ್ತು ಒಂದೆ ಹೊತ್ತಿನಲ್ಲಿ ಮತ್ತು ಒಂದೆ ಪರಿಸರದಲ್ಲಿ ಮೂರು ವಿಭಿನ್ನ ರೂಪ ಹೊಂದಿದ ಸಮತೋಲನ ಸ್ಥಿತಿಯಲ್ಲಿ ಇರುವ ವಿಪರ್ಯಾಸವಾಗಿ ಕಾಣಿಸುವುದಿಲ್ಲವೆ? ಬಹುಶಃ ಬರಿಯ ಕಣ್ಣಿಗಂತೂ ವಿಪರ್ಯಾಸವೆ ನಿಜ... ಆದರೆ ಸ್ವಲ್ಪ ಆಳಕ್ಕೆ ಹೊಕ್ಕು ನೋಡಿದರೆ ತಿಳಿಯುವ ಸತ್ಯ - ಇವೆಲ್ಲದರ ಮೂಲಧಾತು ಇಂಗಾಲವಾದರೂ, ಇವುಗಳ ವ್ಯತ್ಯಾಸಕ್ಕೆ ಕಾರಣವಾಗುವುದು ಎರಡು ಇಂಗಾಲದ ಅಣುಗಳ ನಡುವೆಯಿರುವ ಪರಸ್ಪರ ದೂರ ಮತ್ತು ಪರಮಾಣು ಕಣಗಳ ಪರಸ್ಪರ ಜೋಡಣೆಯಲ್ಲಿನ ವ್ಯತ್ಯಾಸ... ದೂರ ಹೆಚ್ಚಿದ್ದಷ್ಟು ಮತ್ತು ಕಣಗಳ ಬಂಧದ ಹಂದರ ಸಡಿಲವಿದ್ದಷ್ಟೂ, ಇದ್ದಿಲಿನಲ್ಲಿರುವಂತೆ ಪೊಟರೆಗಳು ಹೆಚ್ಚಿ ದುರ್ಬಲ ಮೈಕಟ್ಟಿಗೆ ಕಾರಣವಾಗುತ್ತದೆ. ಆದರೆ ಆ ದೂರವನ್ನು ಸುಭದ್ರ ಹಂದರದಲ್ಲಿ ಹಿಡಿದಿಡಲಾಗುವಂತೆ, ಇದ್ದಿಲಿನ ವಿನ್ಯಾಸ ಮತ್ತು ಸಡಿಲತೆ ಸಾಧಿಸಲೆ ಆಗದಂತೆ ಭೂಮಿಯೊಳಗೆ ವಿಪರೀತ ಒತ್ತಡ ಹಾಕುತ್ತ, ಅದರ ಬೇಗುದಿ ಮಾತ್ರಕ್ಕೆ ಒಂದಕ್ಕೊಂದು ಭದ್ರವಾಗಿ ಕಚ್ಚಿಕೊಂಡ ಬಂಧವಾಗಿಸಿ, ವಜ್ರಬಂಧದಂತಹ ಗಟ್ಟಿ ಘನಕಾಯವನ್ನು ನೈಸರ್ಗಿಕವಾಗಿ ಉತ್ಪಾದಿಸಿ ಚಿನ್ನದ ಮೊಟ್ಟೆಯನಿಡುವ ಕೋಳಿಯಾದ ಭಾಗ್ಯ ವಜ್ರದ್ದು ; ಎಂದಿನಂತೆ ಎರಡರ ನಡುವಿನ ಜಟ್ಟಿ ಗ್ರಾಫೈಟೆಂಬ ಮಧ್ಯವರ್ತಿಯದು. ಒಟ್ಟಾರೆ ಮೂರು, ತನ್ನದೆ ಆದ ವಿಭಿನ್ನ ಸಮತೋಲನ ಸ್ಥಿತಿಗಳನ್ನು ಕಂಡುಕೊಳ್ಳುವ ಸಹಜ ಪರಿ ಪ್ರಕೃತಿಯ ಅದ್ಭುತವೆ ತಾನೆ? ಭೂಮಿಯೊಡಲಿನ ಯಾವ ಇಂಗಾಲದ ಅಣುವಾದರೂ ಸರಿ - ಅದು ಇದ್ದಿಲಾದರೂ ಆದೀತು, ಸೀಸದ ಕಡ್ಡಿಯಾದರೂ ಆದೀತು ಅಥವಾ ವಜ್ರವಾದರೂ ಆದೀತು , ಯಾವ ಒತ್ತಡ ಅದರ ಮೇಲೆ ಕಾರ್ಯಭಾರ ನಡೆಸುತ್ತಿದೆ ಎನ್ನುವುದರ ಮೇಲೆ. ವಿಚಿತ್ರವೆಂದರೆ, ಕೃತಕವಾಗಿ ಎಷ್ಟೆ ಪ್ರಯತ್ನಿಸಿದರೂ ನೈಸರ್ಗಿಕ ಮಾದರಿಯ ಅದೇ ವಜ್ರಗಳನ್ನು ಇನ್ನು ತಯಾರಿಸಲಾಗಿಲ್ಲ, ಪ್ರಯೋಗಶಾಲೆಗಳಲ್ಲಿ. ನಿಸರ್ಗದ ಲ್ಯಾಬಿನ ಅಶಿಸ್ತಿನ ಕಾರ್ಯಾಗಾರದ ದಕ್ಷ ಕಾರ್ಯಕ್ಷಮತೆ, ಆಧುನಿಕತೆಯ ಶಿಸ್ತಿನ ಮತ್ತು ದಕ್ಷ ಕಾರ್ಯಕ್ಷಮತೆಯ ಕೃತಕ ಕಾರ್ಯಾಗಾರಕ್ಕೆ ಇನ್ನು ಸಾಧ್ಯವಾಗಿಲ್ಲವೆನ್ನುವುದು ಈ ಜಗದ ಮತ್ತೊಂದು ಅಪ್ರತಿಮ ವಿಸ್ಮಯ..! 

ಅಂದ ಹಾಗೆ ಇಂಗಾಲದ ಅಣುಗಳು ತಮಗೆ ಬೇಕಾದ ಒತ್ತಡ ಹಾಕಿಕೊಂಡು ತನಗಿಷ್ಟವಾದ ರೂಪ ಧರಿಸಿಕೊಳ್ಳುವ ಹಾಗೆ, ನಾವು ದೇವತೆಗಳೆಂದು ಕರೆಯುವ ಆ ವ್ಯಕ್ತಿಗಳಿಗೂ ತಮ್ಮ ದೇಹದ ಜೀವಕೋಶದ ಅಣುಗಳನ್ನು ಯಾವುದೋ ವಿಶೇಷ ಹಾಗು ವಿಭಿನ್ನ ಜೈವಿಕ ತಾಂತ್ರಿಕತೆಯ ನೆರವಿನಿಂದ, ಬೇಕಾದಂತೆ ಒತ್ತಡ ಹಾಕಿ ರೂಪಾಂತರಿಸಿಕೊಳ್ಳುವ ವೈಜ್ಞಾನಿಕ ವಿದ್ಯೆ ಗೊತ್ತಿತ್ತೆ? ಹನುಮಂತ ಸೂಕ್ಷ್ಮ ರೂಪಿಯಾದ ಅಥವ ಬೃಹತ್ ದೇಹಿಯಾದ ಎನ್ನುವ ಕಥೆ ಓದಿದಾಗ ಬಹುಶಃ ಅಂತಹ ವೈಜ್ಞಾನಿಕ ವಿದ್ಯೆಯ ನೆರವಿನಿಂದಲೆ ಅವನಿಗೆ ಬೇಕಾದ ಗಾತ್ರದ ರೂಪು ಧರಿಸುತ್ತಿದ್ದನೆ? ಬರಿಯ ಗಾತ್ರ ಮಾತ್ರವಲ್ಲದೆ ಬೇರೆ ಆಯಾಮಕ್ಕೂ ವಿಸ್ತರಿಸಬಲ್ಲ ಜ್ಞಾನ-ವಿಜ್ಞಾನದ ಸಿದ್ದಿಯಿಂದಾಗಿ ದೇವತೆಗಳೆಂದು ಕರೆದುಕೊಂಡವರು ಕಾಮರೂಪಿಗಳಾಗಳು ಸಾಧ್ಯವಾಗಿತ್ತೆ? ಎಲ್ಲವೂ ಬರಿಯ ಅಯೋಮಯವೆ ಅನಿಸುತಿದ್ದರೂ, ಆದರೆ ಹಿಂದೆಯೆ ನುಗ್ಗಿಬಂದ ಆಲೋಚನೆಯ ಅಲೆ ಯಾವುದೂ ಅಸಾಧ್ಯವಲ್ಲವೆಂದೂ ಕೂಡ ಹೇಳತೊಡಗಿತ್ತು. ದೇವತೆಗಳ ಮಾತಿರಲಿ, ಅದಾವುದೊ ಕಾಲಘಟ್ಟದಲ್ಲಿ ನಮ್ಮಂತಹ ಸಾಧಾರಣ ಮಾನವರಿಗೆ, ಪಶು, ಪಕ್ಷಿ, ಪ್ರಾಣಿಯಂತಹ ಜೀವಿಗಳಿಗೆ ಈ ಜೈವಿಕ ತಾಂತ್ರಿಕತೆ ಸಾಧ್ಯವೆ ಇರಲಿಲ್ಲವೆಂದು ಸಾರಾಸಗಟಾಗಿ ಹೇಳುವುದಾದರೂ ಹೇಗೆ ಸಾಧ್ಯ ? ಅಷ್ಟೇಕೆ, ಈಗಲೂ ಸಹ ಹುಲು ಮಾನವರಾದ ನಮ್ಮಲ್ಲೆ ಕಾಮೋದ್ರೇಕಕ್ಕೊಳಗಾಗುವ ದೇಹದ ಕೆಲವು ಅಂಗಗಳು ಉದ್ರಿಕ್ತ ಸ್ತಿತಿ ತಲುಪಿದಾಗ, ತಮ್ಮ ಸಾಮಾನ್ಯ ಗಾತ್ರವನ್ನು ಮೀರಿಸುವ ರೂಪಧಾರಣೆ ಮಾಡುವುದಿಲ್ಲವೆ - ಆ ಸಂಧರ್ಭಕ್ಕನುಗುಣವಾಗಿ? ಕೇವಲ ರಕ್ತ ಪರಿಚಲನೆ, ನರವ್ಯೂಹದ ಸಂಯೋಜಿತ ಸಹಯೋಗದಲ್ಲಿ ಇದು ಸಹಜವಾಗಿ ಅನಾವರಣಗೊಳ್ಳುವ ಪ್ರಕ್ರಿಯೆಯಾಗಿ ಸಾಧ್ಯವಿದೆಯೆಂದರೆ, ಈ ರೀತಿಯ ಕಾಮರೂಪಿ ಗಾತ್ರ ನಿಯಂತ್ರಣವನ್ನು ವೈಜ್ಞಾನಿಕವಾಗಿ ಪ್ರಸ್ತುತಗೊಳಿಸುವ ವಿದ್ಯೆ ಈ ದೇಹಕ್ಕೆ ಗೊತ್ತಿದೆ ಎಂದಾಯ್ತಲ್ಲವೆ ? ಅದೇ ತರ್ಕದಲ್ಲಿ ಭೂಮಿಯ ಇನ್ನಾವುದೋ ಜೀವಿಗಳಲ್ಲಿ ಅದೇ ವೈಜ್ಞಾನಿಕ ತಿಳುವಳಿಕೆ ಇನ್ನು ಎತ್ತರದ ಸ್ತರದಲ್ಲಿ ವಿಕಸನಗೊಂಡು, ಆ ವಿಕಾಸ ಕೇವಲ ಬರಿಯ ಕೆಲವು ಅಂಗಕ್ಕೆ ಮಾತ್ರ ಸೀಮಿತಗೊಳ್ಳದೆ, ಆ ಶಕ್ತಿಯ ಸಾಧ್ಯತೆ ಇಡೀ ದೇಹಕ್ಕೆ ವ್ಯಾಪಿಸಿಕೊಂಡಿರುವುದು ಸಾಧ್ಯವಿಲ್ಲವೆ? ಆ ವಿಕಸನದ ಹಾದಿಯಲ್ಲಿ ಅದರದೆ ಆದ ವಿಶಿಷ್ಠ ಪರಿಪಕ್ವತೆಯ ಸೀಮೆಯನ್ನು ತಲುಪಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗುವುದೆ? ಈ ಬಾರಿ ಮಾತ್ರ ಶ್ರೀನಾಥನಿಗೆ ಆ ಮನ ಮಂಥನದ ನಡುವೆಯೂ ಉಂಟಾದ ಕಸಿವಿಸಿಯನ್ನು ನಿಜಕ್ಕೂ ತಡೆ ಹಿಡಿಯಲಾಗಲಿಲ್ಲ - ತನ್ನ ಲಂಗು ಲಗಾಮಿಲ್ಲದ ಚಿಂತನೆಯ ಕುದುರೆ, ಶಿಷ್ಟಾಚಾರದ ಪರಿಧಿಯನ್ನು ಮೀರಿದರೂ, ಶಿಸ್ತಿನಲ್ಲೆ ದೌಡಾಯಿಸುತ್ತಿರುವ ವಸ್ತುನಿಷ್ಠ ನಾಗಾಲೋಟಕ್ಕೆ !

'ಊಹನಾ ಲೋಕದ ಉತ್ತುಂಗದ ಸೀಮೋಲ್ಲಂಘನಕೆಣಿಸಿದರೆ ಉಧ್ಭವವಾಗುವ ವಿನೂತನ ಯೋಜನಾಲೋಚನೆಗಳು ಒಂದು ಕಡೆ ಸೃಜನಾತ್ಮಕತೆಯ, ಸೃಜನಶೀಲತೆಯ ಉತ್ತುಂಗವೆನಿಸುವ ಫಲಿತಗಳಾದರೆ, ಮತ್ತೊಂದೆಡೆ ಅಷ್ಟೆ ಅವೈಚಾರಿಕ, ಪ್ರಾಯಶಃ ವಿಕೃತಾತಿರೇಖದ ಉತ್ತುಂಗವೆಂದೆಲ್ಲ ಕರೆಯಬಹುದಾದ ಅಸಂಗತಗಳು... ಸಂಗತವಾಗುವುದೊ ಬಿಡುವುದೊ - ಅದು ವಾಸ್ತವ ಜಗತ್ತಿನ ನೈಜ ಮತ್ತು ಕಾಣ್ಕೆಗೆ ಸಿಗುವ ಅಂಶವಾಗದ ಹೊರತು ಅದನ್ನೊಪ್ಪುವ ಸಮ್ಮತಿ ಮುದ್ರೆ ಸಿಗದು ಈ ಭೌತಿಕ ಜಗದಲ್ಲಿ' ಎಂದುಕೊಂಡವನೆ ಕುಟಿಯ ಮೆಟ್ಟಿಲುಗಳನೇರುತ್ತ ಅದರ ತುದಿಯ ಕಡೆಯ ಮೆಟ್ಟಿಲಲ್ಲಿ ಹಾಗೆ ಕುಳಿತ ಶ್ರೀನಾಥ. ಪೌರಾಣಿಕ ಹಿನ್ನಲೆಯ ಅಂಶಗಳನ್ನು ಪರಿಗಣಿಸಿದರೆ ಅವು ಪ್ರಸ್ತುತ ವಾಸ್ತವದಲ್ಲಿ, ವಿವಾದಾತೀತವಾಗಿ ಚರ್ಚೆಗರ್ಹ ಎಂಬ ಹಣೆಪಟ್ಟಿ ಹಚ್ಚಿ ವಿಶ್ಲೇಷಿಸಲು ಸಾಧ್ಯವಾಗದ ಚಿತ್ರಣಗಳಾದ ಕಾರಣ, ಸಂಗತ - ಅಸಂಗತಗಳೆಂಬ ಪರಿಗಣನೆಗಿಳಿಯದೆ ವಿಶ್ಲೇಷಿಸಬೇಕಾದ ಅನಿವಾರ್ಯವನ್ನು ತಪ್ಪಿಸಲಾಗದೆಂದು ಅವನಿಗೂ ಅರಿವಿತ್ತು . ಯಾವುದಾದರೂ ವಿವಾದಾತೀತವಾದ ಭೌತಿಕ ಅಂಶವನ್ನು, ಅದರಲ್ಲೂ ಎಲ್ಲರೂ ಸಾಕ್ಷೀಭೂತವಾಗಿ ನೋಡಲು ಸಾಧ್ಯವಿರುವಂತಹ ಅಂಶವನ್ನು ಪರಿಗಣಿಸುವುದು ಒಳಿತೆನಿಸುವ ಹೊತ್ತಿಗೆ ಸರಿಯಾಗಿ, ಸುತ್ತಲೂ ಹರಡಿದ್ದ ವಿಶಾಲ ಕಾನನ ವೃಕ್ಷ ಸಂಕುಲದ ನೆರಳನ್ನು ಭೇಧಿಸಿಕೊಂಡು ಬಂದ ಬೆಳಕಿನ ತೀಕ್ಷ್ಣವಾದ ಕೋಲೊಂದು, ಆ ಮರಗಿಡಗಳ ಸಂದನ್ನೆಲ್ಲ ಹಾದು ಅವನ ಮುಖದ ಮೇಲೆ ಬಿದ್ದು, ಮುಖದ ಮೇಲಿನ ಮೆಲುವಾಗಿ ಚುಚ್ಚುವ ಉರಿಯುವ ಬೆಳಕಿನ ಕೋಲಾಗಿ ಅವನನ್ನು ಅಸಹನೆಗೀಡು ಮಾಡಿತ್ತು. ತಂಪಿನ ಹಿತಾನುಭವದ ನಡುವೆ, ಅ ಹಿತಾನುಭೂತಿಗೆ ಧಕ್ಕೆಯೊಡ್ಡಿದ ಅದರ ತೀಕ್ಷ್ಣತೆಯಿಂದ ಬೇಸತ್ತ ಶ್ರೀನಾಥ ಅದರಿಂದ ತಪ್ಪಿಸಿಕೊಳಲೆಂಬಂತೆ ಮೇಲೆದ್ದು ಅಟ್ಟಣೆಯ ಬಿಸಿಲು ಬೀಳದ ಜಾಗದತ್ತ ಒರಗಿ ಕೂರಲೆತ್ನಿಸುವಾಗ ತಟ್ಟನೆ ಮಿಂಚು ಹೊಳೆದಂತೆ ಹೊಳೆದಿತ್ತು - 'ಅರೆರೆ...ಇದೇ ಬೆಳಕು-ಕತ್ತಲೆಯ ದ್ವಂದ್ವವೆ ಅಂತಹ ಒಂದು ಮಹಾನ್ ಭೌತಿಕ ಉದಾಹರಣೆಯಲ್ಲವೆ? ಕತ್ತಲೆ-ಬೆಳಕು-ಅವೆರಡರ ಸಾಂಗತ್ಯ ಮಿಳಿತವಾದ ನೆರಳು - ಈ ಮೂರನ್ನು ಯಾರು ಬೇಕಾದರೂ ನೋಡಬಹುದು, ತಾಳೆ ನೋಡಬಹುದು..ಅದನ್ಯಾಕೆ ಮತ್ತೊಮ್ಮೆ ದ್ವಂದ್ವ ಸಿದ್ದಾಂತದ ಮೂಸೆಯಲ್ಲಿಟ್ಟು ತಿಕ್ಕಿ, ಆಳಕ್ಕಿಳಿದು ನೋಡಬಾರದು? ಮೇಲ್ನೋಟಕ್ಕೆ ಸರಳ ವಿದ್ಯಾಮಾನಗಳೆಂದು ಕಂಡರೂ ಒಳಗ್ಹೊಕ್ಕು ನೋಡಿದರೆ ಏನೆಲ್ಲ ಹೊಳಹು ಕಾಣಿಸುವುದೊ, ಏನೊ?'

(ಇನ್ನೂ ಇದೆ)
_________

Comments

Submitted by nageshamysore Tue, 09/23/2014 - 20:09

In reply to by partha1059

ಪಾರ್ಥಾ ಸಾರ್ ನಮಸ್ಕಾರ. 56ರ ಮೂಲ ರೂಪ ಸಿದ್ದವಾಗಿದ್ದರೂ ವಿಷಯದ ಗಹನತೆಯ ಆಳ (ಮತ್ತು ಬರೆಯಲ್ಹೊರಟ ವಿಷಯಗಳು ಸೇರಿದಂತೆ), ಅಗತ್ಯಕ್ಕಿಂತ ತುಸು ಹೆಚ್ಚು 'ಭಾರವಾಗಿ' ಹೋಯ್ತೇನೊ ಎಂಬ 'ದ್ವಂದ್ವ' ಕಾಡತೊಡಗಿ, ಹಾಗೆಯೆ ಪ್ರಕಟಿಸುವುದೊ ಅಥವಾ ಮತ್ತಷ್ಟು ಸರಳೀಕರಿಸಲು ಯತ್ನಿಸುವುದೋ ಎಂಬ ಗೊಂದಲದಲ್ಲಿ ಬಿದ್ದ ಕಾರಣ ತಡವಾಗಿ ಹೋಯ್ತು. ಆದರೆ ನಿಮ್ಮ ಪ್ರತಿಕ್ರಿಯೆ ನೋಡಿದ ಮೇಲೆ ಇನ್ನೂ ಸರಳೀಕರಿಸುತ್ತ ಕೂರುವುದು ಸರಿಯಲ್ಲವೆಂಬ ಅನಿಸಿಕೆಯಲ್ಲಿ ಲಘುವಾಗಿ ಪರಾಮರ್ಶಿಸಿ ಈಗ ತಾನೆ ಸಂಪದದಲ್ಲಿ ಪ್ರಕಟಿಸಿದ್ದೇನೆ, ನೋಡಿ. ತೀರಾ ಓದಲಾಗದ ಮಟ್ಟದ ಸಂಕೀರ್ಣತೆಗಿಳಿದಿಲ್ಲ ಅಂದುಕೊಂಡಿದ್ದೇನೆ - ನೋಡೋಣ :-)