ಕಥೆ: ಪರಿಭ್ರಮಣ..(57)

ಕಥೆ: ಪರಿಭ್ರಮಣ..(57)

( ಪರಿಭ್ರಮಣ..56ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...

ಹೀಗೆ ಹಂಚಿ ಹೋದ ಶಕ್ತಿ ಪ್ರಮಾಣ ಬೇರೆಯಾದ ಕಾರಣದಿಂದಲೆ ಬೇರೆ ಬೇರೆ ಕಾಯಗಳು, ವಸ್ತುಗಳು ಬೇರೆ ಬೇರೆ ಸಾಂದ್ರತೆಯ ಶಕ್ತಿಯನ್ನು ಪಡೆದುಕೊಂಡವೆ? ಉದಾಹರಣೆಗೆ ಬರಿಯ ಸೌರವ್ಯೂಹವನ್ನೆ ಪರಿಗಣಿಸಿದರೆ ಅತ್ಯಂತ ಬಲಶಾಲಿಯಾದವನು ಸೂರ್ಯ - ಇಡೀ ಸೌರ ಮಂಡಲವನ್ನೆ ತನ್ನ ಬಿಗಿ ಮುಷ್ಟಿಯಲ್ಲಿ ಭದ್ರವಾಗಿ ಹಿಡಿದಿಟ್ಟುಕೊಂಡವನು. ಅವನೆ ಶಕ್ತಿಯ ಅಕರವಾಗಿ ಪ್ರಖರವಾಗಿ ಧಗಧಗಿಸುತ್ತಿರುವವನು. ಅವನ ಸುತ್ತ ನೆರೆದಿರುವ ಗ್ರಹಾದಿ ಬಳಗಗಳೆಲ್ಲ ಮೊದಲಿಗೆ ಅವನ ಭಾಗವೆ ಆಗಿದ್ದು, ಸ್ಪೋಟದ ಅನುಕ್ರಮಣತೆಯಿಂದಾಗಿ ಸಿಡಿದು ಅವನ ಸುತ್ತಲೆ ಎಸೆಯಲ್ಪಟ್ಟವಲ್ಲವೆ ? ಅಲ್ಲಿಗೆ ಅವನ ಶಕ್ತಿಯ ತುಣುಕೆ ಸಿಡಿದು ದೂರಾದರೂ ಅವನಂತೆ ಉರಿಯುವ ಗೋಳವಾಗೆ ಉಳಿಯುವಷ್ಟು ಸಾಮರ್ಥ್ಯ ಬಲ ಸಾಲದೆ ತಣ್ಣಗಾಗಿ, ಸೌಮ್ಯ ರೂಪ ಪಡೆದುಕೊಂಡಿರಬೇಕು. ಅವುಗಳಲ್ಲಿ ಭೂಮಿಯನ್ನು ಸೇರಿದಂತೆ, ಕೆಲವಾದರೂ ಅವನನ್ನು ಬಿಟ್ಟುಹೋಗದೆ ಅವನ ಕಕ್ಷೆಯಲ್ಲೆ ಸುತ್ತುವ ಮಟ್ಟಿಗೆ ಆಕರ್ಷಣೆ ಉಳಿಸಿಕೊಂಡು ಅಲ್ಲೆ ನೆಲೆಗೊಂಡಿದ್ದು -  ಒಂದು ರೀತಿ ಆ ಶಕ್ತಿ ಛೇಧಗಳ ಋಣಾನುಬಂಧವೊ ಏನೊ? ಅಥವಾ ಯಾರಿಗೆ ಗೊತ್ತು - ಬಿಡುಗಡೆ ಸಿಕ್ಕಿದ್ದೆ ಸಾಕೆಂದು ಚಿಮ್ಮಿ, ನೆಗೆದು ಅಗತ್ಯವಿದ್ದ ವಿಮೋಚನಾವೇಗವನ್ನು ಕ್ರೋಢೀಕರಿಸಿಕೊಂಡು ತಪ್ಪಿಸಿಕೊಂಡು ಹೋಗುವ ಹವಣಿಕೆಯಲ್ಲಿದ್ದವಲ್ಲಿ ಕೆಲವನ್ನು ತನ್ನ ಅಸೀಮ ಆಕರ್ಷಣ ಬಲದಿಂದ ಹಿಡಿದು ನಿಲ್ಲಿಸಿಕೊಂಡಿರಬೇಕು ಆ ಸೂರ್ಯನ ಶಕ್ತಿ.. ಆ ಪ್ರಕ್ರಿಯೆಯಲ್ಲಿ ಕೆಲವು ತಪ್ಪಿಸಿಕೊಂಡು ಅವನ ಕಕ್ಷೆಯಾಚೆಗೆ ನೆಗೆದು ಅಂತರ್ಪಿಶಾಚಿಯ ಹಾಗೆ ಹಾರಿಕೊಂಡು, ಅಪಾರ ವ್ಯೋಮ ವಿಸ್ತಾರದಲೆಲ್ಲೊ ಸುತ್ತುತ್ತಿದ್ದರೂ ಅಚ್ಚರಿಯೇನಿಲ್ಲ. ಒಟ್ಟಾರೆ ಹೇಗೊ - ಎಂತೊ, ಮಿಕ್ಕುಳಿದವು ಪರಸ್ಪರ ಬಿಡಿಸಲಾರದ ಬಂಧದಲ್ಲಿ ಸಿಲುಕಿಕೊಂಡು ನಿಭಾಯಿಸಿಕೊಂಡಿವೆ ಎನ್ನುವುದಂತೂ ನಿಜ. ಅಂದರೆ ಈ ಸೌರ ವ್ಯವಸ್ಥೆಯಲ್ಲಿ ಸೂರ್ಯನ ಪಾಲಿನ ಶಕ್ತಿಯೆ ಗಣನೀಯ - ಅದರಿಂದಲೆ ಅವನು ಮಿಕ್ಕೆಲ್ಲರ ಮೇಲೆ ತನ್ನ ಗುರುತ್ವದ ಆಕರ್ಷಣಾ ಶಕ್ತಿಯ ಬಲೆ ಹೆಣೆದು, ಕಡಿವಾಣ ಹಾಕಿ ಹತೋಟಿಯಲ್ಲಿಟ್ಟುಕೊಳ್ಳಲು ಸಾಧ್ಯವಾಗಿದೆ. ಅದೆ ವ್ಯವಸ್ಥೆಯ ಮಿಕ್ಕ ಗ್ರಹಗಳೊ ತಮ್ಮಇಚ್ಛೆಯಿರಲಿ - ಬಿಡಲಿ, ಯಾವುದಾದರೂ ಸೂರ್ಯನಿಗೆ ಗಂಟು ಬೀಳಲೇಬೇಕು. ಅವುಗಳಿಗೆ ಹಂಚಿಕೆಯಾದ ಶಕ್ತಿಯ ಮೊತ್ತ ಸೂರ್ಯನಿಗೆ ಹೋಲಿಸಿದರೆ ಸಾಸಿವೆಗಿಂತಲೂ ಕಡಿಮೆ. ಆದರೂ ಸೂರ್ಯನನ್ನು ಹೊರಗಿಟ್ಟು ಪರಸ್ಪರ ಅವುಗಳಲ್ಲೆ ಹೋಲಿಸಿದರೆ, ಕೆಲವಕ್ಕೆ ಹೆಚ್ಚು ಶಕ್ತಿಯಿದ್ದರೆ ಮಿಕ್ಕ ಕೆಲವಕ್ಕೆ ಕಡಿಮೆ ಶಕ್ತಿಯಿರುವುದು ನಿಜ. ಮಂಗಳನಿಗೆ ಹೋಲಿಸಿದರೆ ಭೂಮಿಯ ಶಕ್ತಿಯ ಪಾಲು ಹೆಚ್ಚಿರುವುದರಿಂದ ಭೂಮಿಯ ಗಾತ್ರವೂ ಹೆಚ್ಚು, ಗುರುತ್ವವೂ ಹೆಚ್ಚು. ಅದೇ ಭೂಮಿ ಗುರುಗ್ರಹದ ಹೋಲಿಕೆಯಲ್ಲಿ ಸಣ್ಣದಾಗಿಬಿಡುತ್ತದೆ - ಶಕ್ತಿಯ ಗಾತ್ರ ಮತ್ತು ಗುರುತ್ವ ಎರಡರಲ್ಲೂ; ಅದೂ ಸರಿ ಸುಮಾರು ಹತ್ತು ಪಟ್ಟು! ಅಂದರೆ ಭೂಮಿಯಲ್ಲಿ ಹತ್ತು ಕೇಜಿ ತೂಗುವ ಬಾಲಕ ಗುರುವಿನಲ್ಲಿ ಸುಮಾರು ನೂರು ಕೇಜಿ ತೂಗಿಬಿಡುವ.. ಅದೇ ಮಂಗಳನಂಗಳಕ್ಕಿಳಿದರೆ ಅರ್ಧಕ್ಕರ್ಧ ಕಡಿಮೆ ತೂಗಬೇಕು ! ಅಂದರೆ ಗುರುವಿನಲ್ಲಿ ಹಂಚಿಕೆಯಾಗಿ ಸೇರಿಕೊಂಡ ಶಕ್ತಿ ಭೂಮಿಗಿಂತ ಹೆಚ್ಚಾದ ಕಾರಣ ಅದರ ಗುರುತ್ವಾಕರ್ಷಣ ಶಕ್ತಿಯೂ ಅಷ್ಟು ಪಟ್ಟು ಹೆಚ್ಚಾಗಿ ಹೋಗುತ್ತದೆ. 

ತಮ್ಮ ಈ ಶಕ್ತಿಯನ್ನು ಬಳಸಿಕೊಂಡೆ ಗ್ರಹಗಳು ತಮಗಿಷ್ಟವಿರುವ ಕಕ್ಷೆಯಲ್ಲಿ ನೆಲೆಗೊಂಡು ಸೂರ್ಯನ ಸುತ್ತ ಗಿರಕಿ ಹೊಡೆಯುತ್ತಿರಬೇಕು. ಬಹುಶಃ ಆ ಕಾರಣದಿಂದಲೆ ಇರಬೇಕು - ಸುತ್ತುವಾಗ ಪರಿಪೂರ್ಣ ವೃತ್ತವಾಗಿ ಸುತ್ತದೆ ಮೊಟ್ಟೆಯಾಕಾರದ ಧೀರ್ಘವೃತ್ತವಾಗಿ ಸುತ್ತುವುದು. ಹತ್ತಿರವಿದ್ದಾಗ ಅವನಿಂದಲೆ ಶಕ್ತಿ ಹೀರಿಕೊಂಡು ಬಲ ವೃದ್ಧಿಸಿಕೊಳ್ಳುತ್ತ, ದೂರವಿದ್ದಾಗ ಶೇಖರಿಸಿಟ್ಟ ಶಕ್ತಿಯನ್ನೆ ಬಳಸಿಕೊಳ್ಳುತ್ತ ಸಮತೋಲನ ಸಾಧಿಸಿಕೊಳ್ಳಲು. ಹತ್ತಿರವಿದ್ದಾಗ ಸೂರ್ಯನ ಬಲದ ಹಿಡಿತದಿಂದ ತಪ್ಪಿಸಿಕೊಳ್ಳಲು ಅಪಾಯದ ಗೆರೆಯಾಗುವ ಸೂರ್ಯನ ಸಮೀಪದ ಕಕ್ಷೆಯ ಮಿತಿಯಿಂದ ದೂರವೆ ಉಳಿದಿರಬೇಕು, ತೀರಾ ಹತ್ತಿರಕ್ಕೆ ಹೋಗಿಬಿಡದಂತೆ; ಇಲ್ಲವಾದರೆ ಸೂರ್ಯನ ಅಗಾಧ ಆಕರ್ಷಣಾ ಬಲಕ್ಕೆ ಸಿಕ್ಕಿ ಅವನತ್ತ ಪೂರ್ತಿ ಸೆಳೆಯಲ್ಪಟ್ಟು, ಬೆಳಕಿನಾಸೆಗೆ ಬೆಂಕಿಗೆ ಸಿಕ್ಕಿ ಸುಟ್ಟುಹೋದ ಪತಂಗದಂತೆ ನಾಶವಾಗಿ ಹೋಗಬಾರದಲ್ಲ? ಅಂತೆಯೆ ಸಾಧ್ಯವಾದಷ್ಟು, ಸುತ್ತುತ್ತಿರುವ ಕಕ್ಷೆಯ ಹೊರಗಿನ ಪರಿಧಿಯ ಮಿತಿಯಲ್ಲೆ ಇರುವ ಹಾಗೆ ನಿಭಾಯಿಸಿಕೊಳ್ಳುತ್ತಿರಬೇಕು - ಸೂರ್ಯನ ಶಕ್ತಿಯ ಆಪೋಶನ ಬಲ ದುರ್ಬಲವಾಗಿರುವ ರೇಖೆಗಳಲ್ಲೆ. ಬರಿಯ ಆ ಪರಿಧಿಯಲ್ಲೆ ನಿಂತಲ್ಲೆ ನಿಂತು ನಿಗ್ರಹಿಸಿಕೊಳ್ಳುತ್ತ, ಮತ್ತೆ ಹಿಂದಕ್ಕೆ ಸೂರ್ಯನ ಬೆಂಕಿಯತ್ತ ವಾಪಸ್ಸು ಬೀಳದಂತೆ ಹಿಡಿದಿಟ್ಟುಕೊಳ್ಳುವುದರಲ್ಲೆ ತಮ್ಮೆಲ್ಲ ಶಕ್ತಿಯನ್ನು ವಿನಿಯೋಗಿಸಬೇಕಾಗುತ್ತದೆ. ಕೊನೆಗೆ ತನ್ನಲ್ಲಿ ಮಿಕ್ಕುಳಿದ ಶಕ್ತಿಯಿಂದ ಸಿಡಿದು ತಪ್ಪಿಸಿಕೊಂಡು ಆಚೆಗೆ ಹೋಗಲಾರದಾದರೂ, ಮತ್ತೆ ಅವನೊಳಕ್ಕೆ ಸಿಕ್ಕು ಐಕ್ಯವಾಗಿ ಹೋಗದಂತೆ, ಒಂದು ತಮ್ಮದೆ ಆದ ಪ್ರಭಾವಲಯ ರಚಿಸಿ ಅದರಲ್ಲಿ ತಮ್ಮನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗುತ್ತವೆ. ಅಲ್ಲಿಗೆ ಅವುಗಳಲ್ಲಿ ಹುದುಗಿದ ಆ ಶಕ್ತಿಯ ಮೊತ್ತ - ಸೂರ್ಯ ಅವನ್ನು ನುಂಗಿ ಕಬಳಿಸಲಾಗದಷ್ಟು ಗಣನೀಯ; ಅಂತೆಯೆ ಸೂರ್ಯನ ಪ್ರಭಾವಲಯದಿಂದ ಬಿಡಿಸಿಕೊಂಡು, ತಪ್ಪಿಸಿಕೊಂಡು ಹೋಗಲಾಗದಷ್ಟು ದುರ್ಬಲ. ಈ ಹೊಯ್ದಾಟ, ತಿಕ್ಕಾಟದಲ್ಲೆ ಪ್ರತಿ ಗ್ರಹವೂ ತನ್ನ ತಾರೆಗಳೊಡನೆ ಸಮತೋಲನವನ್ನು  ಏರ್ಪಡಿಸಿಕೊಂಡುಬಿಡುತ್ತದೆ - ತಮತಮಗೆ ಸೂಕ್ತ ಕಂಡ ಸಮತೋಲನದ ವಲಯಗಳಲ್ಲಿ...! ಅಂದ ಹಾಗೆ ಪ್ರತಿ ಸೌರವ್ಯೂಹದ ಪ್ರತಿ ಗ್ರಹವೂ ಬೇರೆ, ಬೇರೆ ಗಾತ್ರದ ಮತ್ತು ಗುರುತ್ವದ ಶಕ್ತಿಯನ್ನು ಹೊಂದಿರುವುದು ಕೂಡ ಆ ಸೃಷ್ಟಿಯ ವಿಶ್ವಚಿತ್ತದ ಅಗಾಧ ಬುದ್ಧಿಮತ್ತೆಯ ದ್ಯೋತಕವೆ ಅಥವಾ ವಿಸ್ಪೋಟದ ಹೊತ್ತಿನಲ್ಲಿ ಭೌತಿಕ ಪರಿಮಾಣಗಳನ್ನು ನಿಯಂತ್ರಿಸಲಾಗದ ದುರ್ಬಲತೆಯೆ ? ಒಂದು ವೇಳೆ ಅವೆಲ್ಲಾ ಒಂದೆ ಗಾತ್ರ ಮತ್ತು ಶಕ್ತಿಯುಳ್ಳವಾಗಿದ್ದರೆ ಆ ಕಾರಣದಿಂದಲೆ ಒಂದೆ ನೇರದ ವೃತ್ತದಲ್ಲಿ ನೆರೆದುಕೊಂಡು, ಯಾರು ಶಕ್ತಿಶಾಲಿಗಳೆಂಬ ಸ್ಪರ್ಧೆಯ ಹುನ್ನಾರದಲ್ಲಿ ಘರ್ಷಿಸಿಕೊಂಡು ತಿಕ್ಕಾಡುತ್ತ, ಪರಸ್ಪರ ಢಿಕ್ಕಿ ಹೊಡೆದುಕೊಂಡು ನಾಶವಾಗಿಬಿಡುತ್ತಿತ್ತೆಂಬ ಮುನ್ನೆಚ್ಚರಿಕೆಯೆ ?

ಅಂದರೆ ಗ್ರಹಾದಿಗಳ ವಿಭಿನ್ನ ಶಕ್ತಿ ಪರಿಮಾಣದ ಗಾತ್ರವೆ ಅವುಗಳನ್ನು ಬದುಕುಳಿಸುವ ಸಂಜೀವಿನಿಯಾಯ್ತೆಂದುಕೊಳ್ಳಬಹುದೇನೊ? ಜತೆಗೆ ಇದರಿಂದಾಗಿ ಸೂರ್ಯನೂ ಕೂಡ ತನ್ನ ಗಮನವನ್ನು ಇರುವ ಗ್ರಹಗಳೆಲ್ಲದರತ್ತ ಹರಿಸುತ್ತ ಪ್ರತಿಯೊಬ್ಬರನ್ನು ಅವರವರದೆ ಪರಿಧಿಯಲ್ಲಿ ಬಂಧಿಸಿಡಲು ಹೆಣಗಬೇಕಾದ ಕಾರಣ, ಕೇವಲ ಒಂದೆ ಗ್ರಹದತ್ತ ಗಮನ ಹರಿಸಿ, ತನ್ನೆಲ್ಲ ಆಕರ್ಷಣಾ ಶಕ್ತಿ ಬಳಸಿ ಕಬಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಸ್ವಯಂ ವ್ಯವಸ್ಥೆ ಸೂರ್ಯನ ಮೇಲೂ ಒಂದು ನಿಯಂತ್ರಣ ಇರಿಸಿದಂತಾಯ್ತು - ತನ್ನ ಹದ್ದು ಮೀರಿ ನಡೆಯದಂತಿರಲು. ಅಂದ ಮೇಲೆ ಇದೊಂದು ವಿಶ್ವಚಿತ್ತದ ಅದ್ಭುತ ಸೃಷ್ಟಿ ಚಳಕವೆ ತಾನೆ? ಅಥವಾ... ಅದ್ಭುತವೆನ್ನಲಾಗದ ಆದರೆ ವ್ಯಾವಹಾರಿಕ ಜಾಣ್ಮೆಯ ಸೃಷ್ಟಿ ಕ್ರಿಯೆಯೆ? ನಿಜ ಹೇಳಬೇಕೆಂದರೆ ಈ ಎಲ್ಲಾ ಗ್ರಹಗಳು ಒಂದೆ ಗಾತ್ರದಲ್ಲಿ, ಒಂದೆ ಗುರುತ್ವದಲ್ಲಿ ಮತ್ತು ಒಂದೆ ವೃತ್ತದಲ್ಲಿ ಸೂರ್ಯನ ಸುತ್ತಲೂ ನೆರೆದಿರುವಂತೆಯೂ ಮಾಡಬಹುದಿತ್ತು. ಅವೆಲ್ಲ ಸಮಾನ ಶಕ್ತಿಯದಾದರೂ ಅವುಗಳಿರುವ ರೇಖೆಯಲ್ಲಿಯೆ ತಮ್ಮ ಪರಸ್ಪರ ಆಕರ್ಷಣ / ವಿಕರ್ಷಣ ಶಕ್ತಿಯನ್ನು ಬಳಸಿ ತಮ್ಮಲ್ಲೆ ಪರಸ್ಪರ ಸುರಕ್ಷಿತ ದೂರವನ್ನು ಕಂಡುಕೊಂಡು ನೆಲೆಸಿರಬಹುದಿತ್ತೇನೊ ? ತಮ್ಮ ಶಕ್ತಿಯನ್ನೆ ಬಳಸಿಕೊಂಡು ತಮ್ಮನ್ನು ಮತ್ತೊಂದು ಕಾಯ ಆಕರ್ಷಿಸಿ ನುಂಗಿ ಹಾಕುವುದನ್ನು ಪ್ರತಿರೋಧಿಸುತ್ತ, ಒಂದೆಡೆ ಸೂರ್ಯನ ಜತೆ ಸಮತೋಲನವನ್ನು, ಮತ್ತೊಂದೆಡೆ ನೆರೆಯ ಗ್ರಹಗಳೊಡನೆ ಸಮತೋಲನವನ್ನು ಹೊಂದಬಹುದಿತ್ತು. ಆದರೆ ಅದು ಏಕೆ ಹಾಗಾಗಲಿಲ್ಲ? ವಿಶ್ವಚಿತ್ತಕ್ಕೆ ಅದು ಅರಿವಿರದಿದ್ದ ವಿಷಯ ಆಗಿರಲಿಕ್ಕಂತೂ ಸಾಧ್ಯವಿಲ್ಲ . ಬೃಹತ್ ಸ್ಪೋಟವು ಕೇವಲ ಕೆಲವೆ ಕ್ಷಣ ಭಾಗದ ಅಂತರದಲ್ಲಿ ನಡೆದ ಪ್ರಕ್ರಿಯೆಯಾದ ಕಾರಣ ಈ ಬಗೆಯ 'ಪರ್ಫೆಕ್ಟ್' ವ್ಯವಸ್ಥೆಯನ್ನು ಸೃಜಿಸಲು ಸಾಧ್ಯವಾಗದೆ ಹೋಯ್ತೆಂದು ಕಾಣುತ್ತದೆ. ನಾವೀಗಲೂ ಮಾಡುವಂತೆ ತೀರಾ ನಿಖರತೆಯ, 'ಪರ್ಫೆಕ್ಟ್' ಸೃಷ್ಟಿಗಿಳಿದರೆ ಹೆಚ್ಚು ಸಮಯ ಬೇಕು, ಹೆಚ್ಚು ವೆಚ್ಚ ಸಹ ಮತ್ತು ತುಂಬಾ ನಿಧಾನದ ಕೆಲಸ. ವಿಶ್ವ ಚಿತ್ತಕ್ಕೆ ಬಹುಶಃ ಹಾಗೆ ಮಾಡಲು ಬೇಕಾದ ಸಮಯ, ವ್ಯವಧಾನ, ಸಂಪನ್ಮೂಲಗಳೆಲ್ಲದರ ತೊಡಕು ಅಡ್ಡಿಯಾಗಿ ಕಾಡಿತ್ತೇನೊ...? ಅದಕ್ಕೆ ಬದಲೆ ಈ 'ಚೀಪ್ ಅಂಡ್ ಬೆಸ್ಟ್' ಮತ್ತು ' ಕ್ವಿಕ್ ಅಂಡ್ ಡರ್ಟಿ' ಪರಿಹಾರ ಅನ್ನುವ ಹಾಗೆ ಈ 'ಬಿಗ್ ಬ್ಯಾಂಗ್' ಅಥವಾ 'ಬೃಹತ್ ಸ್ಪೋಟ' ಸಂಭವಿಸಿರಬೇಕು - ಕಡಿಮೆ ಸಮಯ, ಕಡಿಮೆ ವೆಚ್ಚ, 'ಪೂರ್ಣ ಪರ್ಫೆಕ್ಟ್' ಅಲ್ಲದಿದ್ದರೂ 'ವರ್ಕಬಲ್ ಸಲ್ಯೂಷನ್'... ಯಾರಿಗೆ ಗೊತ್ತು? ನಮ್ಮ ಪುರಾಣಗಳು 'ದೇವ ಲೋಕ' ಎಂದು ಕರೆಯುವ ಲೋಕಗಳು ಅಂತಹ ಪರ್ಪೆಕ್ಟ್ ಸೌರಗ್ರಹದಲ್ಲೊಂದಾಗಿರಬೇಕು - ಪರ್ಫೆಕ್ಟಾಗಿ ದೇವತೆಗಳಿಂದಲೆ 'ಇಂಜಿನಿಯರಿಂಗ್' ಮಾಡಲ್ಪಟ್ಟಿದ್ದು - ವಿಶ್ವಕರ್ಮನಂತಹವರ ಕೈಯಲ್ಲಿ..! ಹೀಗಾಗಿ ಅಲ್ಲಿ ಸ್ವರ್ಗಲೋಕ, ಸತ್ಯಲೋಕ, ಕೈಲಾಸ, ವೈಕುಂಠಾದಿ ಗ್ರಹಗಳ ಜತೆಗೆ 'ಯಮಲೋಕ'ದಂತಹ 'ಸ್ಪೆಷಲ್ ಟ್ರೀಟ್ಮೆಂಟ್' ಜಾಗಗಳೂ ಇರಬಹುದು.. ಕಲ್ಪನಾ ವಿಲಾಸದ ಬೆನ್ನೇರಿ ಹೊರಟರೆ ಅದೆಷ್ಟೊಂದು ಸಾಧ್ಯತೆಗಳು..! ಅದೆಲ್ಲಾ ಒತ್ತಟ್ಟಿಗಿರಲಿ - ಒಟ್ಟಾರೆ ಇಲ್ಲೂ, ಸೌರವ್ಯೂಹದ ಸೃಷ್ಟಿಯಲ್ಲೂ ಕೂಡ ದ್ವಂದ್ವ ಸಿದ್ದಾಂತದ ಸಮತೋಲನಕ್ಕೆ ಪುರಾವೆ ಸಿಕ್ಕಂತಾಯಿತು. ಒಂದೆಡೆ ಸೂರ್ಯವೆಂಬ ಬೆಳಕಿನ ಮತ್ತು ಗ್ರಹಗಳೆಂಬ ಕತ್ತಲೆಯ ದ್ವಂದ್ವ ತಮ್ಮ ಸಮತೋಲನವನ್ನು ಕಂಡುಕೊಂಡಾಗ ಉಂಟಾದ ಸೌರವ್ಯೂಹದ ಅಸ್ತಿತ್ವ... ಸೂರ್ಯ ಬೆಳಕಿನ-ಪ್ರಕಾಶದ ಪ್ರತಿರೂಪ, ಗ್ರಹ ಕತ್ತಲೆಯನ್ನೆ ನುಂಗಿ ಕೂತ ನಿಜರೂಪ. ಅಂದರೆ... ಸ್ಪೋಟದ ಶಕ್ತಿಯ ಹಂಚಿಕೆಯಾಗುವಾಗಲೆ ಕತ್ತಲೆ ಬೆಳಕಿನ ಶಕ್ತಿಗಳೆರಡು ಬೇರೆ ಬೇರೆ ತರದ ರೂಪದಲ್ಲಿ, ಬೇರೆ ಬೇರೆ ಕಾಯಗಳಲ್ಲಿ ಪೂರ್ವ ನಿಯೋಜಿತವಾಗಿಯೆ, ಉದ್ದೇಶ ಪೂರ್ವಕವಾಗಿಯೆ ಹಂಚಿಹೋದವೆ ? 

ಅಂದರೆ ಇದರರ್ಥ ಆ ಶಕ್ತಿಮೂಲ ಕೇವಲ ಬೆಳಕು ಮತ್ತು ಕತ್ತಲೆಯಾಗಿ ಮೂಲದಲ್ಲಿ ಸಂಕ್ಷಿಪ್ತಗೊಂಡಿತ್ತೆ? ಅದರ ಸಂಯುಕ್ತ ರೂಪದಲ್ಲಿ ಅರ್ಧನಾರೀಶ್ವರ-ಅರ್ಧನಾರೀಶ್ವರಿಯ ಕಲ್ಪನೆಯಂತೆ ಒಂದಾಗಿ ಸೇರಿಕೊಂಡಿದ್ದು, ಬೃಹತ್ ಸ್ಪೋಟದಲ್ಲಿ ಪ್ರಕೃತಿ-ಪುರುಷರ ಹಾಗೆ ಎರಡಾಗಿ ವಿಭಜಿಸಿಕೊಂಡು, ಒಂದು ಬೆಳಕಿನ ರೂಪದ ಕಾಯವಾಗಿ ರೂಪಾಂತರಗೊಂಡರೆ ಮತ್ತೊಂದು ಬೆಳಕಿಲ್ಲದ (ಕತ್ತಲೆಯ) ಕಾಯವಾಗಿ ರೂಪುಗೊಂಡಿರಬೇಕು. ಒಂದು ರೀತಿಯಲ್ಲಿ ಹೇಳಿದರೆ, ಬೃಹತ್ ಸ್ಪೋಟದಲ್ಲಿ  ಸಿಡಿಯುವಾಗ ಚೆದುರಿ ಚೆಲ್ಲಾಪಿಲ್ಲಿಯಾದ ಶಕ್ತಿಯ ಮೊತ್ತ, ಒಂದಷ್ಟು ಭಾಗ ಬೆಳಕಿನ ಹೆಚ್ಚು ಸಾಂದ್ರತೆಯುಳ್ಳ ತುಣುಕಾಗಿ ಸಿಡಿದು, ಶಕ್ತಿಕಾಯಗಳಾಗಿ ಪರಿವರ್ತಿತವಾಗಿ ಸೂರ್ಯಗಳಾದರೆ ಮತ್ತೊಂದಷ್ಟು ಬೆಳಕಿನ ಕಡಿಮೆ ಅಥವಾ ಶೂನ್ಯ ಸಾಂದ್ರತೆಯ ತುಣುಕುಗಳಾಗಿ ಸಿಡಿದು ಗ್ರಹಾದಿ ಕಾಯಗಳಂತಹ ಸೃಷ್ಟಿಗೆ ಕಾರಣವಾಗಿರಬೇಕು. ಅಲ್ಲಿಗೆ ಈ ಬೃಹತ್ ಸ್ಪೋಟವೂ ಒಂದು ರೀತಿಯಲ್ಲಿ ಕತ್ತಲು ಮತ್ತು ಬೆಳಕಿನ ಶಕ್ತಿಗಳ ದ್ವಂದ್ವವೆಂದೆ ಹೇಳಬಹುದೇನೊ? ಒಂದು ವೇಳೆ ಇವೆರಡು ಸಮಾನ ಶಕ್ತಿಯವಾಗಿದ್ದರೆ ಸ್ಪೋಟದ ತರುವಾಯ ಪರಸ್ಪರ ಘರ್ಷಣೆಯಲ್ಲೆ ಕರಗಿ ನಿರಸ್ತಿತ್ವವಾಗಿಬಿಡುತ್ತಿದ್ದವೇನೊ...? ಆದರೆ ಸೌರವ್ಯೂಹದ ಸಮತೋಲನದ ಹಾಗೆ ಇಡೀ ಬ್ರಹ್ಮಾಂಡದ ಕಾಯ-ವ್ಯೂಹಗಳೆಲ್ಲ ಈ ರೀತಿಯ ಸಮತೋಲನವೇರ್ಪಡುವಂತೆ ನೆರೆದುಕೊಂಡು ಸಂಭಾಳಿಸಿ, ನಿಭಾಯಿಸಿದ್ದರಿಂದ ಬ್ರಹ್ಮಾಂಡದ ಅಸ್ತಿತ್ವ ಉಳಿದುಕೊಳ್ಳುವಂತಾಯ್ತು. ಅರ್ಥಾತ್ ವಿಶ್ವಚಿತ್ತದ ಸ್ಪೋಟದ ಯೋಜನೆಯಲ್ಲೆ ಆ ಬೀಜಾಕ್ಷರವನ್ನು, ಕತ್ತಲು-ಬೆಳಕಿನ ಶಕ್ತಿಯ ರೂಪದಲ್ಲಿ ಬರೆದಿಟ್ಟು ನಂತರವೆ ಸ್ಪೋಟಿಸಲು ಹೊರಟ ಕಾರಣ, ಸ್ಪೋಟದ ಪೂರ್ವೋತ್ತರವೆಲ್ಲ ನಿಯೋಜಿತ ಕಾರ್ಯಕ್ರಮದಂತೆ ಬಿಚ್ಚಿಕೊಂಡಿರಬೇಕು; ವೀರ್ಯದ ಶಕ್ತಿ ಮತ್ತು ಅಂಡಾಣುವಿನ ಶಕ್ತಿ ಸಂಯುಕ್ತಗೊಂಡ ಮೇಲೆ ತಾನಾಗಿಯೆ ಹಂತಹಂತವಾಗಿ ಬಿಚ್ಚಿಕೊಳ್ಳುವ ಹುಟ್ಟಿನ ಕ್ರಿಯೆಯ ಹಾಗೆ.. ಸರಿ ಸರಿ.. ಈಗರ್ಥವಾಗುತ್ತಿದೆ ತನ್ನ ಮನಸಿನಲ್ಲಿ ಕತ್ತಲು-ಬೆಳಕಿನ ಕುರಿತು ಏಕೆ ಜಿಜ್ಞಾಸೆ ಹುಟ್ಟಿಕೊಂಡಿತು ಎಂದು..ಅದೆ ಸಕಲ ಶಕ್ತಿ ರಹಸ್ಯಗಳ ಮೂಲವಾದ ಕಾರಣ ಅದನ್ನರಿಯದೆ ಮಿಕ್ಕೆಲ್ಲವನ್ನು ಅರಿಯಲಾಗದು. ಈ ಬೃಹತ್ ಸ್ಪೋಟದಂತಹ ಗಹನ ವಿಚಾರವೂ ತನ್ನ ಮನದಲ್ಲಿ ಮೂಡಿದ್ದು ಕೂಡ ಅಸೀಮ ಗಹನತೆಯೂ ಹೇಗೆ ತೀರಾ ಕೆಳ ಸ್ತರದ ಲೌಕಿಕಕ್ಕೆ ಸಂಬಂಧಿತವಾಗಿ ನಂಟು ಇಟ್ಟುಕೊಂಡು, ಗಂಟು ಹಾಕಿಕೊಂಡಿದೆಯೆಂದು ಅರಿವಾಗಿಸಲು. ಆ ವಿಶ್ವಚಿತ್ತ ಬೇರೆಯಲ್ಲ, ತಾನು ಬೇರೆಯಲ್ಲ ಎಲ್ಲವೂ ಆ ಶಕ್ತಿಮೂಲದ ಸಂಕಲಿತ ಮೊತ್ತದ ವಿಭಿನ್ನ, ವಿಭಜಿತ ಭಾಗಗಳು ಎಂಬ ಸತ್ಯ ದರ್ಶನ ಮಾಡಿಸಲು... ತಾನೂ ಮತ್ತು ಪ್ರತಿಯೊಬ್ಬರು, ಪ್ರತಿಯೊಂದೂ ಆ ಶಕ್ತಿಯ ತುಣುಕುಗಳಷ್ಟೆ ಎನ್ನುವುದು ನಿಜ. ಬೆಳಕಿನ ಶಕ್ತಿ, ಕತ್ತಲ ಶಕ್ತಿಯ ಸಮಷ್ಟಿ ರೂಪದಲ್ಲಿ, ತಮ್ಮ ತಮ್ಮ ಸಮತೋಲಿತ ಸ್ಥಿತಿಯ ರೂಪಾಂತರದಲ್ಲಿ ಅಸ್ತಿತ್ವದಲ್ಲಿರುವ ಆ ಬೃಹತ್ ವಿಶ್ವಚಿತ್ತದ ಕಣಾದಿಕಣ ಸೂಕ್ಷ್ಮದ ತುಣುಕುಗಳು, ಈ ಸೃಷ್ಟಿಯ ಎಲ್ಲವೂ..

ಅಲ್ಲಿಗೆ ಈ ಜೀವಸೃಷ್ಟಿಯಲ್ಲೂ ಸಹ ಶಕ್ತಿಯ ಹೆಚ್ಚು ಪಾಲು ಪಡೆದವರು ದೇವತೆಗಳೊ, ದಾನವರೊ ಆಗುತ್ತ ಕಡಿಮೆ ಶಕ್ತಿ ಪಡೆದವರು ಮಾನವರೊ ಅಥವ ಕ್ಷುದ್ರ ಜಂತುಗಳಂತಹ ಅಸ್ತಿತ್ವವನ್ನು ಪಡೆದವರು ಆಗುತ್ತಾರೆಂದು ಅರ್ಥವೆ? ಹೆಚ್ಚು ಶಕ್ತಿಯಿದ್ದವರು ಅದನ್ನು ಹೆಚ್ಚು ಸಮರ್ಥವಾಗಿ ಬಳಸಬಹುದೆಂಬುದಂತೂ ಸತ್ಯದ ಮಾತು - ಸಾತ್ವಿಕ ಪ್ರೇರಿತವಾದ ಸದ್ಬಳಕೆಯಾದರೂ ಸರಿ, ತಾಮಸ ಪ್ರೇರಿತವಾದ ದುರ್ಬಳಕೆಯಾದರೂ ಸರಿ. ಅದನ್ನು ನಿರ್ಧರಿಸುವುದು ಆ ಶಕ್ತಿಯಲ್ಲಿರುವ ತ್ರಿಗುಣಾಂಶಗಳ ಸಾಂದ್ರತೆಯ ಸಮೀಕರಣ. ಅಲ್ಲೂ ರಾಜಸ, ತಾಮಸ ಮತ್ತು ಸಾತ್ವಿಕದ ಹೋರಾಟವೆ ಆ ಶಕ್ತಿಯ ಸಮತೋಲನ ಸ್ಥಿತಿಯನ್ನು ನಿರ್ಧರಿಸುತ್ತದೆಯೆನ್ನಬಹುದಾದರೆ, ಅಲ್ಲಿಗೆ ಒಂದು ಪೂರ್ತಿ ಸುತ್ತು ಬಂದಂತಾಯ್ತು - ವಾದ ಸಿದ್ದಾಂತ ಮತ್ತೆ ತ್ರಿಗುಣಗಳ ಮಡಿಲಿಗೆ. ಅದೇ ತ್ರಿಗುಣಗಳ ತರ್ಕದಲ್ಲೆ, ಶಕ್ತಿಗೂ ತ್ರಿಶಕ್ತಿಗಳ ವೈವಿಧ್ಯತೆಯನ್ನೂ ಆರೋಪಿಸಬಹುದೋ ಏನೊ - ಮೂಲಶಕ್ತಿಯನ್ನು , ಬೆಳಕು ಮತ್ತು ಕತ್ತಲೆಯ ಸೃಷ್ಟಿಗೆ ಕಾರಣವಾದ 'ಇಚ್ಛಾಶಕ್ತಿಯ' ರೂಪವೆಂದೊ, ಅದರಿಂದುತ್ಪನ್ನವಾದ ಕತ್ತಲು-ಬೆಳಕಿನಂತಹ ಶಕ್ತಿಯನ್ನು ತಾಮಸ ಮತ್ತು ರಾಜಸ ಗುಣದ 'ಕಾರಣ' ಮತ್ತು 'ಕ್ರಿಯಾ' ಶಕ್ತಿಯೆಂದೊ ಪರಿಗಣಿಸಿದ ಮತ್ತೊಂದು ದೃಷ್ಟಿಕೋನದಲ್ಲಿ ನೋಡಿದರೆ. ಸರಳ ಸಾರಾಂಶದಲ್ಲಿ ಪಾಮರ ಭಾಷೆಯಲ್ಲಿ ಹೇಳಿಬಿಡುವುದಾದರೆ - ಈ ಜಗದ ಶಕ್ತಿಯ ಎಲ್ಲಾ ಸ್ವರೂಪಗಳು, ಬೆಳಕಿನ ಹಾಗೆ ಶಕ್ತಿಯ ವಿವಿಧ ರೂಪಗಳು ಅಥವಾ ಬೆಳಕಿನದೆ ರೂಪಾಂತರಗಳು ಮಾತ್ರ. ಬೆಳಕಿದ್ದರೆ ಕಾಂತಿ, ಇರದಿದ್ದರೆ ಕತ್ತಲು. ಎರಡು ಬೆರೆತಿದ್ದರೆ ನೆರಳು ; ಶಕ್ತಿ ಸ್ಪೋಟಿಸಿದರೆ ಶಬ್ದದ ಉತ್ಪತ್ತಿಯ ಹಾಗೆ ಬರುವ ಮತ್ತಿತರ ಉಪ ಉತ್ಪನ್ನಗಳು ; ಏನೇ ಉತ್ಪನ್ನವಾದರೂ ಅದರ ಅಸ್ತಿತ್ವದ ಮೂಲ ಧಾತುಗಳು ಮಾತ್ರ ತ್ರಿಗುಣಗಳ ಸಂಯೋಜನೆಯಲ್ಲೆ ಆಗಬೇಕು - ರಾಜಸ, ತಾಮಸ, ಸಾತ್ವಿಕಗಳ ಸೂಕ್ತ ಹೊಂದಾಣಿಕೆಯಲ್ಲಿ. ಅಂತೆಯೆ ತ್ರಿಶಕ್ತಿಗಳ ಹಂಚಿಕೆಯೂ ಆಗಬೇಕು ಆ ಮೂರು ಗುಣಗಳಿಗನುಗುಣವಾಗಿಯೆ. ಬೆಳಕಿನ ವಿಷಯಕ್ಕೆ ಬಂದರೆ ಅದೆ ರಾಜಸ, ಅದಿಲ್ಲದ ಕತ್ತಲೆ ತಾಮಸ, ಅವೆರಡು ಸೂಕ್ತವಾಗಿ ಬೆರೆತ ಪರಿಮಾಣವೆ ಸಾತ್ವಿಕ ನೆರಳು ಅಥವಾ ಸಂಧ್ಯಾ. ಅದನ್ನೆ ವೇದಾಂತದ ಫ್ರೌಢ ಭಾಷೆಯಲ್ಲಿ ವಿಸ್ತರಿಸಿ ಹೇಳುವುದಾದರೆ - ಬೆಳಕೆ ಜ್ಞಾನ. ರಾಜಸ ಜ್ಞಾನವನ್ನು ಸಕಾರ್ಯಕ್ಕೂ ಬಳಸಬಹುದು , ಅಕಾರ್ಯಕ್ಕೂ ಬಳಸಬಹುದು. ಕತ್ತಲೆಯೆ ಅಜ್ಞಾನ - ತಾಮಸದ ಈ ಅಜ್ಞಾನವೆ ರಾಜಸವನ್ನು ಮಂಕಾಗಿಸಿಡಲು ಯತ್ನಿಸುವ ಕೀಚಕ; ಅದು ರಾಜಸದ ಮೇಲೆ ಎಷ್ಟು ಮಟ್ಟಿಗೆ ಪ್ರಭಾವ ಬೀರುವುದೆನ್ನುವುದರ ಮೇಲೆ ಸತ್ಕಾರ್ಯ, ಅಕಾರ್ಯ, ಸತ್ಕರ್ಮ, ದುಷ್ಕರ್ಮಗಳ ನಿರ್ಧಾರವಾಗುವುದು. ಅಂದ ಮೇಲೆ ಜ್ಞಾನ-ಅಜ್ಞಾನ ಇವೆರಡನ್ನು ಸಮತೋಲನದಲ್ಲಿ ಬಂಧಿಸಿಟ್ಟ ಸಾತ್ವಿಕ ಅಂಶ ಯಾವುದು? ಜ್ಞಾನ, ಅಜ್ಞಾನದ ನಡುವಿನ 'ಮೌಢ್ಯ'ವೆನ್ನುವ ಅರೆಜ್ಞಾನವೆ? ಆತ್ಮವೆನ್ನುವ ಕಲ್ಪನೆಯೆ? ಮಾಯೆಯೆನ್ನುವ ಮಾಯಾಂಗನೆಯೆ? ಅಥವಾ ಕರ್ಮವೆನ್ನುವ ಕರ್ತವ್ಯ ಪ್ರೇರಕ ನಿಷ್ಠೆಯೆ?  

ಬೆಳಕಿನ ರೂಪದಲ್ಲಿರುವ ಜ್ಞಾನ, ಅಸ್ತಿತ್ವದಲ್ಲಿರುವ ಮೂಲರೂಪವೆ ರಾಜಸವೆಂದಾಗಿಬಿಟ್ಟರೆ, ಬೆಳಕಿನ ಸಹಜ ಸ್ವಭಾವದನುಸಾರ, ತಾನಿದ್ದೆಡೆಯೆಲ್ಲ ತಂತಾನೆ ಪ್ರಸರಣವಾಗುವ ಬೆಳಕಿನಂತೆ ರಾಜಸವು ತಾನೂ ಪ್ರಕಟವಾಗಲಿಕ್ಕೆ ಯತ್ನಿಸುತ್ತದೆ ಎಂದಾಯ್ತು. ಅದರ ದ್ವಂದ್ವ ಸಂವಾದಿಯಾಗಿ ಕತ್ತಲ ರೂಪದಲ್ಲಿರುವ, ತಾಮಸಿ ಅಸ್ತಿತ್ವದ ಪ್ರತಿನಿಧಿಯಾದ ಅಜ್ಞಾನ ತನ್ನ ಪ್ರಭುತ್ವವನ್ನು ಸಾರುವ ಸಲುವಾಗಿಯೆ ತನ್ನ ವಿರೋಧಿ ಸ್ವರೂಪವಾದ ಜ್ಞಾನದ ಬೆಳಕನ್ನು ನುಂಗಿ ಹಾಕಲು ಯತ್ನಿಸುತ್ತಿರಬೇಕು. ಅದೇ ರೀತಿ ಜ್ಞಾನದಾಹಿ ಬೆಳಕು ಅಜ್ಞಾನದ ಕತ್ತಲ ಮೇಲೆ ತನ್ನ ಪ್ರಕಾಶವನ್ನು ಚೆಲ್ಲಿ, ಅದನ್ನು ನುಂಗಲಿಕ್ಕೆ ಯತ್ನಿಸುತ್ತಿರಬೇಕು. ಕತ್ತಲು-ಬೆಳಕು  ಎರಡು ಪರಸ್ಪರ ಸಮಾನ ಬಲದವೆ. ಅದರಿಂದಾಗಿಯೆ ಸಮಾನ ಶಕ್ತಿಯಿಂದಲೆ ಎರಡೂ ಹೋರಾಡುತ್ತ ಅಸ್ತಿತ್ವದಲ್ಲಿರಲು ಸಾಧ್ಯವಾಗಿದೆ - ಕತ್ತಲನ್ನು ನುಂಗಿ ಬೆಳಕು, ಬೆಳಕನ್ನು ನುಂಗಿ ಕತ್ತಲು ಇರುವಂತೆ. ಜ್ಞಾನ-ಅಜ್ಞಾನ ಇವೆರಡರ ಅಸ್ತಿತ್ವದ ಪರಿ ನೋಡಿದರೆ ಜ್ಞಾನ ರೂಪವೆ ಬೆಳಕಾಗಿ, ಅಜ್ಞಾನ ರೂಪವೆ ಕತ್ತಲಾಗಿರುವುದರಿಂದ ಜ್ಞಾನಕ್ಕೂ-ಅಜ್ಞಾನಕ್ಕೂ ಅದೇ ತೆರನಾದ ಸಂಬಂಧವಿರುವಂತೆ ತೋರುವುದಲ್ಲ? ಆದರೆ ಕತ್ತಲು-ಬೆಳಕಿನ ದ್ವಂದ್ವಕ್ಕೆ ಹೋಲಿಸಿದರೆ ಜ್ಞಾನ-ಅಜ್ಞಾನ ಸದಾ ಸಮಬಲದಲ್ಲಿರಲು ಹವಣಿಸಿದಂತೆ ಕಾಣುವುದಿಲ್ಲ. ಉದಾಹರಣೆಗೆ ಯಾವುದೊ ವಿಷಯದ ಮೇಲಿನ ಅಜ್ಞಾನ ಕಳೆದು ಜ್ಞಾನ ಸಂಪಾದನೆಯಾಯಿತೆಂದರೆ ಅದಕ್ಕನುಗುಣವಾಗಿ, ಅದೇ ಅನುಪಾತದಲ್ಲಿ ಮತ್ತೆಲ್ಲೊ ಅಜ್ಞಾನದ ಏರಿಕೆಯಾಗಬೇಕೆಂದೇನೂ ಇಲ್ಲ. ಹೀಗಾಗಿ ಬೆಳಕಿನ ಸಂಕೇತವಾದ ಜ್ಞಾನ ಒಮ್ಮೆ ಅಂತರ್ಗತವಾಗಿಬಿಟ್ಟರೆ, ಅದು ಅದರ ಸಂವಾದಿ ಅಜ್ಞಾನವನ್ನು 'ಕನಿಷ್ಠ ಆ ಅರಿತ ಜ್ಞಾನದ ವಿಷಯಕ್ಕೆ ಸಂಬಂಧಪಟ್ಟಷ್ಟು ಮಾತ್ರವಾದರೂ' ತಗ್ಗಿಸುವುದೇನೊ ನಿಜ. ಆದರೆ ಕತ್ತಲು ಬೆಳಕಿನ ವಿಷಯದಲ್ಲಿ ಅವೆರಡೂ ಸಮಬಲದ ಹೋರಾಟದಲ್ಲಿರುವಂತೆ ಗೋಚರಿಸಲು ಕಾರಣ, ನಾವು ಗ್ರಹಿಸುವ ಆ ಬೆಳಕು ಮತ್ತು ಕತ್ತಲೆಯನ್ನು ಉಂಟುಮಾಡುವ ಕಾಯಗಳಿಗೆ ನಾವು ಭೌತಿಕವಾಗಿ ಸಮೀಪದಲ್ಲೆ, ಅಂಟಿಕೊಂಡಂತೆ ಇರುವುದರಿಂದ ಇರಬೇಕು. ಅದನ್ನು ಹೊರತಾಗಿಸಿ ಬರಿ ಮೂಲ-ಶುದ್ಧ ಬೆಳಕು ಮೂಲ-ಶುದ್ಧ ಕತ್ತಲೆಯ ಅನ್ವೇಷಣಾತ್ಮಕ ವಿಶ್ಲೇಷಣೆಗೆ ಹೊರಟರೆ, ಅವು ಈ ಜ್ಞಾನ-ಅಜ್ಞಾನದ ಸಿದ್ದಾಂತಕ್ಕಿಂತ ವಿಭಿನ್ನವಾಗಿರಲೇನು ಇರಲಿಕ್ಕಿಲ್ಲ. ಜ್ಞಾನ ಹೆಚ್ಚಿದಷ್ಟು, ಅಜ್ಞಾನ ಕಡಿಮೆಯಾಗುತ್ತ ಹೋಗಬೇಕು; ಅಜ್ಞಾನ ಹೆಚ್ಚಿದಷ್ಟು ಜ್ಞಾನದ ಅನುಪಾತ ಕುಂದುತ್ತ ಹೋಗಬೇಕು. ತಾರ್ಕಿಕವಾಗಿ ಎರಡೂ ಸರಿ. ಆದರೆ ಇವೆರಡರ ಸಮತೋಲನವನ್ನು ಹಿಡಿದಿಡುವ ಮೂರನೆಯ ಶಕ್ತಿಯದೆ ಗೊಂದಲದ ಜಿಜ್ಞಾಸೆ... ಕತ್ತಲೆ, ಬೆಳಕನ್ನು ಹಿಡಿದಿಡುವ ಬಂಧ ಅವೆರಡೂ ಸಂಗಮಿಸಿದ ನೆರಳಿರಬಹುದೆಂದೆ ಅನಿಸಿತ್ತು, ಕೆಲವು ಹೊತ್ತಿನ ಮೊದಲು. ಆದರೆ ಈಗ ಅದೇ ವಿವರಣೆಯನ್ನು (ಬೆಳಕಿನ) ಜ್ಞಾನ, (ಕತ್ತಲೆಯ) ಅಜ್ಞಾನಕ್ಕೆ ಹೋಲಿಸಿದಾಗ, ಜ್ಞಾನ-ಅಜ್ಞಾನವನ್ನು ಸಮತೋಲದಲಿಟ್ಟ ಸಾತ್ವಿಕ ಶಕ್ತಿ, ಜ್ಞಾನ-ಆಜ್ಞಾನ ಮಿಶ್ರಣದಲ್ಲೊಡಮೂಡಿದ 'ಅರೆಬರೆ ಜ್ಞಾನ' ಎಂದು ಅರ್ಥೈಸಬೇಕಾಗುವುದಲ್ಲ? ಅಂದರೆ ಕತ್ತಲು-ಬೆಳಕಿನ ಸಮತೋಲನದ ಸಾತ್ವಿಕ ಶಕ್ತಿ ನೆರಳೆನ್ನುವುದು ಅರೆಬರೆ ಸತ್ಯವೆ? ಬಹುಶಃ ನೆರಳು ಆ ಶಕ್ತಿಯ ಪ್ರಕಟ ರೂಪವಿರಬಹುದೇ ಹೊರತು, ಅದೇ ತಂತಾನೆ ಸಾತ್ವಿಕ ಶಕ್ತಿಯಲ್ಲವೇನೊ? ಹಾಗಾದರೆ ಮತ್ತೇನಿರಬಹುದು ಆ ಬೆಳಕು ಕತ್ತಲಿನ ನಡುವಿನ ನೆರಳಿನ ಕೊಂಡಿಯ ಹಿನ್ನಲೆಯ ಬಂಧ? ಬಹುಶಃ - ಆ ಹಿನ್ನಲೆ ಬಂಧವೆ 'ಕಾಲ'ವಿರಬಹುದೆ ? ...ಕಾಲ ಒಂದು ರೀತಿಯಲ್ಲಿ ಬೆಳಕು - ಕತ್ತಲು ಎರಡಕ್ಕೂ ಸಂಬಂಧಿಸಿದ ವಿಷಯ. ಕಾಲಗಣನೆಗೆ ಎರಡರ ಚಲನೆಯೆ ಬಂಡವಾಳ - ಅವೆರಡೂ ದ್ವಂದ್ವದಲ್ಲಿ ಒಂದನ್ನೊಂದು ನುಂಗಿ 'ಗೆದ್ದೆ' ಎನ್ನುವುದಕ್ಕೆ ಮೊದಲೆ ಮತ್ತೊಂದು ಹೊಸ ಹಾಸನ್ನು ಹಾಸಿ ' ರೌಂಡ್ ಟೂ, ಇದನ್ನು ನುಂಗಿ ಈಗ' ಎನ್ನುತ್ತದೆ... ಅದು ಮುಗಿದರೆ 'ನೋಡಿ ಈಗ ರೌಂಡ್ ಥ್ರೀ..' ಎನ್ನುತ್ತದೆ. ಹೀಗೆ ಕಾಲದ ಮಧ್ಯಸ್ತಿಕೆ ಎರಡನ್ನು ಗೆಲ್ಲಲೂ ಬಿಡದೆ, ಸೋಲಲೂ ಬಿಡದೆ ಒಂದರ ಹಿಂದೆ ಒಂದನ್ನು ಬೆನ್ನಟ್ಟಲು ಬಿಟ್ಟು ನಿರಂತರ ಚಕ್ರದ ಸಮತೋಲನವಾಗಿಸಿಬಿಟ್ಟಿದೆ... ಅದನ್ನು ನಿಭಾಯಿಸುವ ಅಸ್ತ್ರವಾಗಿ ನೆರಳಿನ ಸಹಯೋಗ ಪಡೆದ ಕಾಲ ಅವೆರಡು ಒಂದಕ್ಕೊಂದನ್ನು ಅಧಿಗಮಿಸಲಾಗದಂತೆ, ಎರಡರ ಕಾಲಿಗೂ ಸರಪಳಿಯಂತೆ ತೊಡರಿಕೊಂಡು ಬಿಟ್ಟಿದೆ. ಹೀಗಾಗಿ ಕತ್ತಲು ಬೆಳಕನ್ನು ಪೂರ್ತಿ ನುಂಗಿ ನೀರು ಕುಡಿಯುವ ಮೊದಲೆ ಮೂಡುವ ಅರುಣೋದಯದ ಉಷಾ-ಸಂಧ್ಯೆ ಕತ್ತಲ ಕಾಲ್ತೊಡಕಾದರೆ, ಕತ್ತಲನೆ ಅಳಿಸಿ ದಿಗ್ವಿಜಯಿಯಾಗುವ ಬೆಳಕಿನ ಕಾಲು ಕಟ್ಟಲು ಗೋಧೂಳಿಯ-ಸಂಧ್ಯೆಯಾಗಿ ಸೂರ್ಯಾಸ್ತವನ್ನು ಪ್ರಕ್ಷೇಪಿಸುವ ಮುಸ್ಸಂಜೆಯ ಹವಣಿಕೆ. ಬಹುಶಃ ಇವೆರಡೂ ಕಾಲದ ಎರಡು ತೋಳುಗಳೊ, ಅಸ್ತ್ರಗಳೊ ಆಗಿ ದ್ವಂದ್ವದ ಸಮತೋಲನವನ್ನು ಕಾಪಾಡಲು ಸಹಕರಿಸುತ್ತಿವೆ ಎಂದಿಟ್ಟುಕೊಂಡರೆ, ಕಾಲವೆ ಕತ್ತಲು ಬೆಳಕನ್ನು ಸಮತೋಲನದಲ್ಲಿಟ್ಟಿರುವ ಅದೃಶ್ಯ ಸಾತ್ವಿಕ ಶಕ್ತಿಯೆನ್ನಬಹುದೇನೊ.... ಆದರೆ ಇದನ್ನೆ ಜ್ಞಾನ - ಅಜ್ಞಾನದ ಜಿಜ್ಞಾಸೆಯ ಒರೆಗೆ ಹಚ್ಚಿ ಅದನ್ನು ಸಮತೋಲಿಸಿರುವ ಶಕ್ತಿಯನ್ನು ಪತ್ತೆ ಹಚ್ಚುವುದು ಹೇಗೆ? ಕಾಲದ ಸಮಾನಾರ್ಥಕವಾದ ಶಕ್ತಿ ಯಾವುದಿರಬಹುದು - ಈ ಜ್ಞಾನ-ಅಜ್ಞಾನದ ನಡುವೆ ?

ಬಹುಶಃ ಆ ಒಗಟನ್ನು ಬಿಡಿಸಬೇಕಾದರೆ ಬೆಳಕು ಮತ್ತು ಕತ್ತಲನ್ನು ಸಮತೋಲಿಸುತ್ತಿರುವ ಕಾಲದ ಜ್ಞಾನಕ್ಕೆ ಕೈ ಹಾಕಬೇಕು.. ಅದರ ಕುರಿತು ಅರಿತುಕೊಂಡರೆ ಬಹುಶಃ ಅದರ ಸಮಾನಾರ್ಥಕವಾಗಿ ಜ್ಞಾನ ಅಜ್ಞಾನದ ನಡುವಿನ ಸೇತುವೆ ಏನಿರಬಹುದೆಂಬ ಸುಳಿವು ಸಿಕ್ಕರೂ ಸಿಗಬಹುದು. ಕಾಲವೆಂದರೇನು ? ಅದೊಂದು ಸಾತ್ವಿಕ ಅಸ್ತಿತ್ವ ಎಂದು ಈಗ ತಾನೆ ಜಿಜ್ಞಾಸಿಸಿದ್ದಾಯಿತು. ಸದ್ಯಕ್ಕೆ ಸೈದ್ದಾಂತಿಕವಾಗಿ ಅದೊಂದು ಪರಿಪೂರ್ಣ ಸಾತ್ವಿಕ ಶಕ್ತಿ ಎಂದಿಟ್ಟುಕೊಳ್ಳೋಣ. ಕಾಲದ ಸಾಮಾನ್ಯ ವಿವರಣೆಗೆ ಬಂದರೆ 'ಗಂಟೆ ಎಷ್ಟಾಯಿತು?' ಎಂಬ ಪ್ರಶ್ನೆಗೆ ಬರುವ ಉತ್ತರ ಕಾಲವಲ್ಲ - ಬದಲಿಗೆ ಕಾಲ ಗಣನೆಗೆ ಬಳಸುವ ಮಾನಕದ ಅಳತೆ ಎನ್ನಬಹುದೇನೊ? ಅದನ್ನೆ ವೇಳೆ ಅಥವಾ ಸಮಯವೆನ್ನಬಹುದೆಂದು ಕಾಣುತ್ತದೆ. ಕಾಲವೆನ್ನುವುದು ಅದಕ್ಕೂ ಉಚ್ಛ, ಉನ್ನತಮ ಸ್ಥಾಯಿಯ ಅಸ್ತಿತ್ವದ್ದು. ಕಾಲವನ್ನು ಶಕ್ತಿ ಎಂಬ ಮಸೂರದಲ್ಲಿ ನೋಡಿದರೆ ಬಹುಶಃ ಅದೊಂದು 'ಸ್ಥಾಯಿ' ಅಥವ 'ಜಡ' ಶಕ್ತಿ ಎಂದು ಹೇಳಬಹುದೆ, ಇಲ್ಲವೆ ' ಚಲನೆ' ಅಥವಾ 'ಚೇತನ' ಶಕ್ತಿಯೆಂದು ವರ್ಗೀಕರಿಸಬೇಕೆ? ಸಮಯ ಎಂದಾಕ್ಷಣ ಚಲನೆ ತಾನೆ ತಟ್ಟನೆ ಮನಸಿಗೆ ಬರುವುದು? ಅಂದರೆ ಕಾಲ ಕೂಡ ಸಮಯಕಾರಕನಾಗಿರುವುದರಿಂದ 'ಚಲನ ಚೇತನ ಶಕ್ತಿ' ಎಂದುಬಿಡಬಹುದೆ? ಯಾವುದೆ ಆಸ್ತಿತ್ವದ ಇರುವಿಕೆಯ ಪರಿಮಿತಿಯಲ್ಲಿ ಒಂದು ನಿಶ್ಚಿತವಾದ ಅವಧಿ ಗಣನೆಯ (ಸ್ಥಿರಾಂಕ) ಕಾಲ ಯಾಕೆ 'ಸ್ಥಿರ ಅಥವಾ ಜಡ ಸ್ತಾಯಿ ಶಕ್ತಿ' ಆಗಿರಬಾರದು ? ಕಾಲದಲ್ಲಿ ಹಿಂದಕ್ಕೆ, ಮುಂದಕ್ಕೆ ಚಲಿಸುವುದು ಎಂದ ತಕ್ಷಣವೆ ಅದೂ ಸಹ ಚಲನೆಯ ದ್ಯೋತಕವಾಗಿಬಿಡುವುದಿಲ್ಲವೆ? ಅರೆರೆರೆ...ತಾಳು..ತಾಳು... ಕಾಲದಲ್ಲಿ ಹಿಂದೆ, ಮುಂದೆ ಚಲಿಸುವುದೆ ? ಯಾವುದಾದರೂ ವಸ್ತುವಿನ ಮೇಲೆ ಹಿಂದಕ್ಕೊ , ಮುಂದಕ್ಕೊ ಚಲಿಸುವುದು ಎಂದಾದರೆ ಆ ವಸ್ತು 'ಸ್ಥಾಯಿ ಅಥವಾ ಸ್ಥಿರ ಅಥವಾ ಜಡ' ಸ್ಥಿತಿಯಲ್ಲಿರಬೇಕಲ್ಲವೆ? ರೈಲು ಹಳಿ ಅಥವಾ ರಸ್ತೆಯ ಮೇಲೆ ರೈಲು ಅಥವಾ ವಾಹನಗಳು ಚಲಿಸುವ ಹಾಗೆ? ಅಂದರೆ ಅದರರ್ಥ ಕಾಲವೆನ್ನುವುದು ಹಳಿ ಅಥವಾ ರಸ್ತೆಯ ಹಾಗೆ ಜಡ, ನಿಶ್ಚಿತ ಸ್ಥಿತಿಯಲ್ಲಿರಬೇಕಲ್ಲವೆ - ಸಾಗಾಣಿಕಾ ವ್ಯೂಹದ 'ಇನ್ಫ್ರಾ ಸ್ಟ್ರಕ್ಚರಿನ' ಹಾಗೆ? ಆದರೂ ಕಾಲ ಸ್ಥಿರವೆಂದು ತಾರ್ಕಿಕ ಮನವೇಕೊ ಸುಲಭದಲ್ಲಿ ಒಪ್ಪುವುದಿಲ್ಲವಲ್ಲ? ವೇಳೆ ಅಥವಾ ಸಮಯದ ದಿನನಿತ್ಯದ ಬಳಕೆ ಅದನ್ನು ಒಪ್ಪಲು ಅವಕಾಶ ಕೊಡುವುದಿಲ್ಲ. ಅದಕ್ಕೊಂದು ಸೂಕ್ತ ವಿವರಣೆ ಕೊಡದೆ ಕಾಲ 'ಜಡಸ್ಥಾಯಿ' ಎಂದು ಹೇಳಲು ಬರುವುದಿಲ್ಲ. ಕಾಲ ನಿಜಕ್ಕೂ ಚಲನಶೀಲವೆ? ಸರಿ, ಮತ್ತೆ ಸೂಕ್ಷ್ಮವಾಗಿ ಪರಿಶೀಲಿಸಿ ನೋಡೋಣ. ಪರಿಶೀಲನೆಗೆ, ಕಾಲ ಜಡ-ಸ್ಥಿರವೆಂದು ಅಂದುಕೊಂಡೆ ಮುಂದುವರೆಯೋಣ.. ಭೂಮಿಯ ಉದಾಹರಣೆಯಲ್ಲಿ ಬೆಳಗಿನ ಆರು ಗಂಟೆಯ ಸಮಯವನ್ನು ಕಾಲದ ಜಡ ಗುಣದ ತುಣುಕಾಗಿ ಪರಿಗಣಿಸಿ ಮುನ್ನಡೆಯೋಣ. ಮೊದಲ ಸೂರ್ಯನ ಕಿರಣ ಬೆಳಕಾಗಿ ಬೀಳುವ ಜಪಾನ್ ದೇಶ ಮೊದಲು ಈ ಆರರ ತುಣುಕನ್ನು ದರ್ಶಿಸುತ್ತದೆ. ತದ ನಂತರ ಅದರ ಅಕ್ಕಪಕ್ಕದ ದೇಶಗಳು ಸ್ವಲ್ಪ ಸಮಯದ ಅಂತರದಲ್ಲಿ... ತದ ನಂತರ ಅದರ ಅಕ್ಕ ಪಕ್ಕದವು ಮತ್ತಷ್ಟು ಸಮಯಾಂತರದ ನಂತರ. ಹೀಗೆ ಸಾಗಿಕೊಂಡು ಬಂದರೆ ಅಮೇರಿಕದಂತಹ ದೇಶ ಅದೇ ಆರು ಗಂಟೆಯ ತುಣುಕನ್ನು ಹನ್ನೆರಡು ಗಂಟೆಯ ಅಥವಾ ಅದಕ್ಕೂ ಮೀರಿದ ಅಂತರದ ನಂತರ ದರ್ಶಿಸುತ್ತದೆ... ಅಮೇರಿಕ ತನ್ನ ಬೆಳಗಿನ ಆರು ಗಂಟೆಯನ್ನು ದರ್ಶಿಸುವ ಹೊತ್ತಿಗೆ, ಈಗಾಗಲೆ ಜಪಾನಿನಲ್ಲಿ ರಾತ್ರಿಯ ವೇಳೆ. ಅಂದರೆ ಬಂದವರಿಗೆಲ್ಲ ದಿನ ಪೂರ್ತಿ ದರ್ಶನ ಕೊಡುವ ದೇವಸ್ಥಾನದ ದೇವರಂತೆ ಕಾಲವೂ ತನ್ನನ್ನು ಹಾದು ಹೋದವರಿಗೆಲ್ಲ ದರ್ಶನವಿತ್ತಂತಾಗಲಿಲ್ಲವೆ ? ಅಂದರೆ ಆ ಆರು ಗಂಟೆಯ ಕಾಲದ ತುಣುಕು ಸದಾ ಕಾಲ ಹಾಗೆಯೆ ರಸ್ತೆಯ ಹಾಗೆ, ರೈಲು ಹಳಿಯ ಹಾಗೆ ಅಲ್ಲೆ ಇದ್ದೆಡೆಯಲ್ಲೆ ಬಿದ್ದಿತ್ತೆಂದು ಹೇಳಬಹುದಲ್ಲವೆ? ಕೇವಲ ಹಾದು ಹೋಗುವ ರೈಲು ಮತ್ತಿತರ ವಾಹನಗಳಂತೆ ಕಾಲದ ಬಳಕೆದಾರರು ಅದನ್ನು ಹಾದು ಹೋಗುತ್ತಿದ್ದಾರೆನ್ನಬಹುದಲ್ಲವೆ ?

ಅಂದರೆ ಕಾಲದ ರಸ್ತೆಯಲ್ಲಿ ನಾವೇ ಚಲಿಸುತ್ತಿದ್ದೇವೆ ಎಂದರ್ಥವೆ? ಒಮ್ಮೆಗೆ ಒಂದು ಕಾಲ ಘಟ್ಟಕ್ಕೆ ಬಂದು ಮುಟ್ಟಿದರೆ ಅಷ್ಟೂ ದೂರ ಕ್ರಮಿಸಿದ ಹಾಗೆ. ನಿಜಕ್ಕೂ ಹಾಗೆ ನೋಡಿದರೆ, ನಾವು ವೇಗದ ವಿಮಾನ ಏರಿ ಪೂರ್ವದಿಂದ ಪಶ್ಚಿಮ ದೇಶಕ್ಕೆ ಹಾರಿದರೆ ನಾವು ಹೊರಟಾಗಿಂತ ಹಲವಾರು ಗಂಟೆಗಳ ಮೊದಲೆ ತಲುಪುವುದಿಲ್ಲವೆ  - ಅದೂ ಕೂಡಾ ಕಾಲದಲ್ಲಿ ಹಿಂದಕ್ಕೆ ಪ್ರಯಾಣ ಮಾಡಿದಂತೆಯೆ ಅಲ್ಲವೆ? ಕಾಲದ ರಸ್ತೆಯಲ್ಲಿ ಇಡೀ ಭೂಮಿಯೆ ಮುಂದಕ್ಕೆ (ವಾಹನವೊಂದರಂತೆ) ಚಲಿಸಿಬಿಟ್ಟಿರುವುದರಿಂದ ಅದಕ್ಕೂ ಹಿಂದೆ ಹೋಗಲಿಕ್ಕೆ ತಾರ್ಕಿಕ ಹಾಗೂ ಭೌತಿಕವಾಗಿ ಸಾಧ್ಯವಾಗುವುದಿಲ್ಲ ಅಷ್ಟೆ. ಇಲ್ಲವಾಗಿದ್ದರೆ ಇನ್ನೂ ಹಿಂದಕ್ಕೆ ಹೋಗಬಹುದಿತ್ತೇನೊ. ಅದೇ ತರ್ಕದಲ್ಲಿ ಕಾಲದ ಮುಂದಿನ ರಸ್ತೆ ಇನ್ನು ಸೇರಿಲ್ಲದ ಕಾರಣ ಹೆಚ್ಚು ಮುಂದಕ್ಕೆ ಹೋಗಲಾಗುವುದಿಲ್ಲ - ಪಶ್ಚಿಮದಿಂದ ಪೂರ್ವಕ್ಕೆ ಬಂದಾಗ ಕಳೆದುಕೊಳ್ಳುವ ಹೆಚ್ಚುವರಿ ಕಾಲವನ್ನು 'ನೆಗೆದುಕೊಂಡು ಮುಂದೆ ಬಂದಿದ್ದನ್ನು' ಬಿಟ್ಟರೆ. ಸೈದ್ಧಾಂತಿಕವಾಗಿ, ಕಾಲದ ರಸ್ತೆಯನ್ನು ಗುರುತಿಸಿ, ಭೂಮಿಯ ಗುರುತ್ವವನ್ನು ಅಧಿಗಮಿಸಿ ಆ ರಸ್ತೆಯ ಹಿಂದಕ್ಕೊ, ಮುಂದಕ್ಕೊ ನಡೆಯುವುದು ಸಾಧ್ಯವಿರಬಹುದಾದರೂ ಅದು ಭೌತಿಕವಾಗಿ ಆ ಜಾಗಗಳನ್ನು ತಲುಪುವುದಾಗಿರುತ್ತದೆಯೆ ಹೊರತು, ಆ ಹೊತ್ತಿನಲ್ಲಿ ನಡೆದಿರುವ ಅಥವಾ ನಡೆಯಬಹುದಾದ ಘಟನೆ, ಸಂಘಟನೆಗಳನ್ನಲ್ಲ. ಅದು ನಡೆಯಬೇಕಾದರೆ ಇಡೀ ಭೂಮಿಯೆ ಪೂರ್ತಿಯಾಗಿ ಆ ಮುಂದಿನ ಅಥವ ಹಿಂದಿನ ಜಾಗಕ್ಕೆ ವರ್ಗಾವಣೆಯಾಗಿದ್ದರಷ್ಟೆ ಸಾಧ್ಯ - ಸೂಪರಮ್ಯಾನಿನ ಚಿತ್ರವೊಂದರಲ್ಲಿ ಕೊನೆಯಲ್ಲಿ ಸೂಪರಮ್ಯಾನ್ ಭೂಮಿಯನ್ನೆ ಗಿರಗಿರನೆ ಹಿಂದಕ್ಕೆ ತಿರುಗಿಸಿ ಭೂತಕಾಲಕ್ಕೆ ಕೊಂಡೊಯ್ದ ಹಾಗೆ ! ಈ ವಿವರಣೆಯನ್ನು ನೋಡಿದರೆ ಕಾಲವು ಜಡ ಸ್ಥಾಯಿಯೆಂದೆ ಅನಿಸುತ್ತಿದೆ. ಮತ್ತೊಂದು ಉದಾಹರಣೆಯಾಗಿ ಮಾನವ ಜೀವಿತವನ್ನೆ ಪರಿಗಣಿಸಿದರೆ, ಜೀವಿತದ ಗರಿಷ್ಠ ಕಾಲಾವಧಿ ನೂರು ಮಾನವ ವರ್ಷಗಳೆನ್ನುವರು. ಅದರರ್ಥ ಮಾನವ ಜೀವಿತಾವಧಿಯಲ್ಲಿ ಸಾಗಲಿಕ್ಕೆ ಪ್ರಕೃತಿ ಮಾಡಿಟ್ಟ ಕಾಲದ ರಸ್ತೆ ನೂರು ವರ್ಷಗಳಷ್ಟು ಉದ್ದದ್ದು. ಕೆಲವರು ವೇಗವಾಗಿ ಓಡಿ ಅರವತ್ತಕ್ಕೆ ಮುಗಿಸಬಹುದು ಮತ್ತೆ ಕೆಲವರು ನಿಧಾನವಾಗಿ ಓಡಿ ನೂರಿಪ್ಪತ್ತಕ್ಕೆ ಮುಗಿಸಬಹುದು. ಮತ್ತೆ ಕೆಲವರು ಸರಿ ಸರಾಗವಾಗಿ ಓಡಿ ನೂರಕ್ಕೆ ಸರಿಯಾಗಿ ಮುಗಿಸಬಹುದು. ಮತ್ತೆ ಕೆಲವರು ಪೂರ್ತಿ ಮುಗಿಸದೆ ಅರ್ಧಂಬರ್ಧ ರಸ್ತೆಗೆ 'ಶಿವಾಯ ನಮಃ' ಎಂದು ಬಿಡಬಹುದು...! ಒಟ್ಟಿನಲ್ಲಿ ಕಾಲಾವಧಿಯ ಮೊತ್ತ ಮಾತ್ರ ರಸ್ತೆಯ ಹಾಸಿನ ಹಾಗೆ ಹಾಸಿಕೊಂಡಿತ್ತೆನ್ನಬಹುದು. ಅಲ್ಲಿ ತುದಿಗೆ ತಲುಪಲು ಹಿಡಿದ ಸಮಯ ಅಥವಾ ವೇಳೆ ಮಾತ್ರವಷ್ಟೆ ಅಲ್ಲಿಯ ಚಲನ ಅಥವಾ ಚಂಚಲ ಚೇತನ ಶಕ್ತಿಯಾಗಿತ್ತೆನ್ನಲು ಸಾಧ್ಯ. ಅಲ್ಲಿಗೆ ಕಾಲ ಸ್ಥಬ್ದ, ಜಡ, ಸ್ಥಿರ, ಸ್ಥಾಯಿ ಶಕ್ತಿಯೆಂದೆ ನಂಬಬಹುದಲ್ಲವೆ? ಆದರೂ...

ಇರಲಿ, ಈ ಸಿದ್ದಾಂತದಲ್ಲೆ ಇನ್ನಷ್ಟು ಮುಂದುವರೆದು ಮೂಡುತ್ತಿರುವ ಗೊಂದಲಕ್ಕೇನಾದರೂ ಪರಿಹಾರವಿದೆಯೆ ಎಂದು ಹುಡುಕೋಣ..ಈ ಸಮಯ ಅಥವಾ ವೇಳೆಯ ಕಲ್ಪನೆಯಲ್ಲೇನೊ ಉತ್ತರವಿದ್ದರೂ ಇರಬಹುದೆ? ಕಾಲದ ದೊಡ್ಡ ಹಾಸಿಗೆ ಹಾಸಿಯಾದ ಮೇಲೆ ಅದರ ಲೆಕ್ಕಾಚಾರ ಇಡುವ ಗಣಿತಜ್ಞ ಈ ಸಮಯ ಅಥವಾ ವೇಳೆ. ಅದರಿಂದಲೆ ಅವನು ಲೆಕ್ಕ ಹಾಕುತ್ತ ಕಾಲದ ರಸ್ತೆಯ ಮೇಲೆ ಚಲಿಸುತ್ತಲೆ ಇರುತ್ತಾನೆ, ಯಾರಿಗೂ ಕಾಯದೆ ತುದಿ ಮುಟ್ಟುವ ತನಕ. ಕಾಲ ಹಾಸಿದ ರಸ್ತೆಗಳೇನೊ ಅನೇಕ - ಪ್ರಾಣಿಗಳಿಗೊಂದು, ಪಶುಗಳಿಗೊಂದು, ಮಾನವ ಜೀವಾವದಿಗೊಂದು, ಭೂಮಿಯಂತಹ ಗ್ರಹದ ಜೀವಾವಧಿಗೊಂದು, ಸೂರ್ಯನಿಗೊಂದು, ಬ್ರಹ್ಮಾಂಡಕ್ಕೊಂದು..ಇತ್ಯಾದಿ. ಎಲ್ಲದರಲ್ಲೂ ಅಳತೆಯ ಗಣಕ ಮಾತ್ರ ಈ ಸಮಯನೆ. ಅವರವರು ತಲುಪಬೇಕಾದ ಕಾಲಕ್ಕನುಗುಣವಾಗಿ ಬೇಕಾದ ವೇಗ ನಿರ್ಧರಿಸಿ ಗಾಲಿ ಎಳೆದುಕೊಂಡು ಹೋಗುವುದು ಅವನ ಕಾಯಕ - ಕಡಿಮೆ ಗುರುತ್ವವಿರುವೆಡೆ ವೇಗವಾಗಿ ಚಲಿಸಿ, ಹೆಚ್ಚು ಗುರುತ್ವವಿರುವ ಕಾಯದಲ್ಲಿ ನಿಧಾನವಾಗಿ ಚಲಿಸುವ ಹಾಗೆ. ಅದೇನೆ ಆಗಲಿ ಅವನ ಚಲಿಸುವ ಕಾರ್ಯಕ್ಕೆ ಬೇಕಾದುದು ಚಲನಶಕ್ತಿ ತಾನೆ (ಕೈನೆಟಿಕ್ ಎನರ್ಜಿ)? ಅಂದ ಹಾಗೆ ಆ ಶಕ್ತಿ, ಎಂದರೆ ಸಮಯಕ್ಕೆ ಚಲಿಸುವ ಶಕ್ತಿ - ಎಲ್ಲಿಂದ ಬರಬೇಕು? ಸಮಯ ಕಾಲದ ಅಂಗವೆ ಆದ ಕಾರಣ ಅದರ ಶಕ್ತಿ ಮೂಲ ಸಹ ಕಾಲವೆ ಆಗಿರಬೇಕಲ್ಲವೆ? ಅಂದರೆ ಸಮಯ ತನ್ನ ಚಲನೆಗೆ ಬೇಕಾದ ಚಲನ-ಚೇತನ-ಶಕ್ತಿಯನ್ನು ಕಾಲದಿಂದ ಎಳೆದುಕೊಳ್ಳುತ್ತಿದೆ ಎಂದಂತಾಯ್ತು. ಅದರರ್ಥ ಕಾಲದಲ್ಲಿ ಶಕ್ತಿಯ ಪೆಟ್ಟಿಗೆಯೊಂದು ಬೀಗ ಹಾಕಿಕೊಂಡು ಕುಳಿತಿದೆ ಎಂದಂತಾಯ್ತಲ್ಲವೆ? ಆದರೆ ಕಾಲ ಚಲಿಸುತ್ತಿಲ್ಲದ ಕಾರಣ ಆ ಶಕ್ತಿಯೂ ಚಲನ ಸ್ಥಿತಿಯಿಲ್ಲದ ಜಡಶಕ್ತಿಯೆ (ಪೊಟೆಂಶಿಯಲ್ ಎನರ್ಜಿ) ಆಗಿರಬೇಕಲ್ಲವೆ ? ಕಾಲದ ರಸ್ತೆ ಹಾಸಿದ್ದರೂ ಅದರಲ್ಲಿ ಜಡಶಕ್ತಿ, ತುಂಬಿಟ್ಟ ಪೆಟ್ಟಿಗೆಯಂತೆ ಇರುವುದೆ ಹೊರತು ಚಲಿಸುತ್ತಿರುವುದಿಲ್ಲ. ಆದರೆ ಸಮಯ ಮಾತ್ರ ಚಲಿಸುತ್ತ ತನ್ನ ಕ್ರಮಣದ ಹಾದಿಯ ಆ ನಿಗದಿತ ಜಾಗಕ್ಕೆ ಬರಲು ಬೇಕಾಗುವ ಶಕ್ತಿಯನ್ನು ಆ ಕಾಲದ ರಸ್ತೆಯಿಂದಲೆ ಎತ್ತಿಕೊಂಡು ಚಲನಶಕ್ತಿಗೆ ಬಳಸಿಕೊಳ್ಳುತ್ತಿದೆಯೆ ? ಇನ್ನು ಸರಳವಾಗಿ ಸ್ಥೂಲವಾಗಿ ಹೇಳುವುದಾದರೆ ಕಾಲದಲ್ಲಿ ಅಡಕವಾಗಿರುವ 'ಜಡ ಸ್ಥಾಯಿ ಶಕ್ತಿ' (ಪೊಟೆಂಶಿಯಲ್ ಎನರ್ಜಿ), ಅಗತ್ಯಕ್ಕೆ ತಕ್ಕಂತೆ ವೇಳೆ ಅಥವ ಸಮಯದ ಹೆಸರಿನಲ್ಲಿ 'ಚಲನಶಕ್ತಿ' (ಕೈನೆಟಿಕ್ ಎನರ್ಜಿ) ಯಾಗಿ ರೂಪಾಂತರಗೊಂಡು ಕಾಲಯಂತ್ರವನ್ನು ನಡೆಸುತ್ತಿದೆಯೆ? ಹೌದಲ್ಲವೆ - ಈ ಸಿದ್ದಾಂತ ಕಾಲದ ಸ್ಥಿರ ಪ್ರಕ್ರಿಯೆಯ ಜೊತೆಗೆ ಸಮಯದ ಚಂಚಲ ಚಲನೆಯ ದ್ವಂದ್ವವನ್ನು ಅಚ್ಚುಕಟ್ಟಾಗಿ ಜೋಡಿಸುತ್ತಿದೆ? ಒಂದು ರೀತಿ ಇವೂ ದ್ವಂದ್ವಗಳಾಗಿ ಪರಸ್ಪರ ಸಮತೋಲನದಲ್ಲಿರುವಂತೆ ವರ್ತಿಸುತ್ತಿರುವಂತಿದೆಯಲ್ಲಾ - ಸಮತೋಲನದಲ್ಲಿಡಲು ಕಾಲದ ಉದ್ದಗಲವನ್ನು (ಒಟ್ಟವಧಿಯನ್ನು) ಹೆಚ್ಚು-ಕಡಿಮೆ ಮಾಡಿಕೊಳ್ಳುವ ತಂತ್ರದೊಡನೆ ? ಅಂದ ಹಾಗೆ 'ಕಾಲ' ಮತ್ತು 'ಸಮಯದ' ಈ ಸಿದ್ದಾಂತವೆ ನಮ್ಮ ವೇದಾಂತ ಪುರಾಣಗಳ 'ಜಡ ಪುರುಷ' ಮತ್ತು 'ಚಂಚಲ, ಚಲನಶೀಲ ಪ್ರಕೃತಿ'ಯ ಕಲ್ಪನೆಗೆ ಸರಿ ಸಮಾನವಾಗಿರುವಂತೆ ಕಾಣುವುದಲ್ಲ? ಒಂದು ಕಡೆಯಂತೂ ಸಾಕ್ಷಾತ್ ಪ್ರಕೃತಿ ರೂಪಿಣಿಯಾದ, ಚಲನಶಕ್ತಿಯ ಸ್ವರೂಪವಾದ ದೇವಿಯೆ, ಮೂಲಬ್ರಹ್ಮವಾದ 'ಜಡ ಪುರುಷ' ಪರಬ್ರಹ್ಮನನ್ನೆ ತನ್ನಡಿ ಹಾಸಿಕೊಂಡು ಕುಳಿತಂತೆ ವಿವರಣೆಯೂ ಇಲ್ಲವೆ (ಶ್ರೀಧರ ಬಂಡ್ರಿಯವರ ಶ್ರೀ ಲಲಿತ ಸಹಸ್ರ ನಾಮದ 'ಮಹಾಸನ' ವಿವರಣೆ ನೆನೆಪಿಸಿಕೊಳ್ಳಿ - ಲೇಖಕ)? ಆ ಪರಮಶಿವನನ್ನೆ ಕಾಲರೂಪಿ 'ಮಹಾಕಾಲ'ನೆಂದುಕೊಂಡರೆ ಅವನು ಜಡರೂಪಿಯ ಕಾಲವಾಗಿ ಹಾಸಿಕೊಂಡು ಪ್ರಸ್ತುತವಾಗಿದ್ದಾನೆ.. ಆ ಹಾಸಿಕೊಂಡ ಕಾಲದ ಜಡಶಕ್ತಿಯ ಮೇಲೆ ಸವಾರಿ ಮಾಡಿಕೊಂಡೆ 'ಚೇತನಶೀಲ ಚಂಚಲ ಚಲನ ಪ್ರಕೃತಿ' ಯಂತೆ ಸಮಯರೂಪಿಣಿ ಶ್ರೀ ದೇವಿ ಸಕಲವನ್ನು ನಿಭಾಯಿಸುತ್ತಿದ್ದಾಳೆ - ತನ್ನಡಿಯ 'ಕಾಲ'ದ ಜಡಶಕ್ತಿಯನ್ನೆ ಚಲಿಸುವ 'ಸಮಯ' ಶಕ್ತಿಯಾಗಿ ಮಾರ್ಪಾಡಾಗಿಸಿಕೊಂಡು... ಒಂದು ವೇಳೆ ಇದು ನಿಜವೇ ಆದಲ್ಲಿ ವೇದಾಂತ, ತಾತ್ವಿಕ ಸಿದ್ದಾಂತ, ವೈಜ್ಞಾನಿಕ ಸಿದ್ದಾಂತಗಳೆಲ್ಲ ಒಂದೆ ಬಿಂದುವಿನಲ್ಲಿ ಸಂಕಲಿಸಿ, ಸಂಗಮಿಸಿದಂತಾಗುವುದಿಲ್ಲವೆ? ವಿವರಿಸುವ ರೀತಿ ಮಾತ್ರ ಅವರವರ ಭಾವಾನುಬಂಧಕ್ಕೆ ಹೊಂದುವ ಆಸ್ತಿಕವೊ-ನಾಸ್ತಿಕವೊ ಆದ ಮೂಸೆಯಲ್ಲಿ ಪ್ರಕ್ಷೇಪಿತವಾದರೂ ಸಹ - ಒಂದೆ ಸತ್ಯವನ್ನು ಎರಡೂ ದೃಷ್ಟಿಕೋನದಿಂದ ವಿವರಿಸಿದಂತೆ... ಒಟ್ಟಾರೆ ಕಾಲದ ಜಡಶಕ್ತಿ ಪೂರ್ತಿ ಶುದ್ಧ ಸಾತ್ವಿಕತೆಯ ಭಂಡಾರವೆ ಇರಬೇಕು. ಅದನ್ನು ಹೆಕ್ಕಿಕೊಳ್ಳುವ ಸಮಯಕ್ಕು ಸಿಗುವುದು ಸಾತ್ವಿಕ ಶಕ್ತಿಯ ತುಣುಕು ಮಾತ್ರವಷ್ಟೆ. ಅಲ್ಲಿಗೆ ಕತ್ತಲೆಂಬ ತಾಮಸ ಮತ್ತು ಬೆಳಕೆಂಬ ರಾಜಸವನ್ನು ಸಮತೋಲನದಲ್ಲಿಟ್ಟಿರುವುದು ಸಮಯವೆಂಬ ಚಲನಶಕ್ತಿಯ ಸಾತ್ವಿಕ 'ಕಾಲದ' ದೂತ ಎಂದು ನಿಷ್ಪತ್ತಿಸಬಹುದಲ್ಲವೆ ? ಅವನೆ ಹಗಲಿರುಳನ್ನು ದೂಡಿಕೊಂಡು ಕಾಲದ ರಸ್ತೆಯ ಮೇಲೆ ಉರುಳಿಸಿಕೊಂಡು ಹೋಗುತ್ತಿದ್ದಾನೆ ಕತ್ತಲು-ಬೆಳಕು ಎರಡನ್ನೂ ನಿಭಾಯಿಸಿಕೊಂಡು. ಅಲ್ಲಿಗೆ ಕಾಲದೂತ 'ಸಮಯ' ಇವೆರಡರ ಸಮತೋಲಿತ ಶಕ್ತಿ ಎಂದಾದರೆ ಜ್ಞಾನ-ಅಜ್ಞಾನಕ್ಕೆ ಅದರ ಸಮಾನಾರ್ಥಕವಾದ ಸಮತೋಲನಕಾರಕ ಯಾವುದು ಅಥವಾ ಯಾರು?

(ಇನ್ನೂ ಇದೆ)
___________
 

Comments

Submitted by nageshamysore Fri, 09/26/2014 - 21:24

ಸಂಪದಿಗರೆ, ಈ ಬಾರಿಯ ವಿವರಣೆಯಲ್ಲಿ ತ್ರಿಶಕ್ತಿಯ ಕುರಿತಾದ ಪ್ರಸ್ತಾಪ ಬಂದಾಗ ಗೊಂದಲದಿಂದ 'ಜ್ಞಾನ' ಶಕ್ತಿಯ ಬದಲು 'ಕಾರಣ' ಶಕ್ತಿ ಎಂದು ತಪ್ಪಾಗಿ ನುಸುಳಿಕೊಂಡುಬಿಟ್ಟಿದೆ. ದಯವಿಟ್ಟು 'ಕಾರಣ' ಎಂದಿರುವ ಕಡೆಯೆಲ್ಲ 'ಜ್ಞಾನ' ಎಂದು ತಿದ್ದಿ ಓದಿಕೊಳ್ಳಬೇಕಾಗಿ ಕೋರುತ್ತೇನೆ. ಕಣ್ತಪ್ಪಿನಿಂದಾದ ದೋಷಕ್ಕೆ ದಯವಿಟ್ಟು ಕ್ಷಮಿಸಿ :-( - ನಾಗೇಶ ಮೈಸೂರು.