ಕತೆ: ಒಂದು ಹನಿ ಕಣ್ಣೀರು

ಕತೆ: ಒಂದು ಹನಿ ಕಣ್ಣೀರು

ಒಂದು ಹನಿ ಕಣ್ಣೀರು:
==============

ಎಲ್ಲವೂ ಅನಿರೀಕ್ಷಿತ ಅನ್ನಿಸುವಂತೆ ಮುಗಿದುಹೋಯಿತು.
ಬೆಳಗಿನ ಜಾವ ನಾಲಕ್ಕು ಗಂಟೆ ಇರಬಹುದು ರೂಮಿನಲ್ಲಿ ಮಲಗಿದ್ದ ಅಮ್ಮ ತುಂಬಾನೆ ಕೆಮ್ಮುತ್ತಿದ್ದಳು, ಇದೇನು ಎಂದು ಎದ್ದುಹೋದೆ.
"ಏನಮ್ಮ ತುಂಬಾ ಕೆಮ್ಮು ಇರುವ ಹಾಗಿದೆ , ಕುಡಿಯಲು ನೀರು ಕೊಡಲಾ? " ಎಂದೆ, ದೀಪ ಹಾಕುತ್ತ.
ಅವಳಿಗೆ ಉತ್ತರಿಸಲು ಆಗಲಿಲ್ಲ ಅನ್ನಿಸುತ್ತೆ,
"ಕೊಡು" ಅನ್ನುವಂತೆ ತಲೆ ಆಡಿಸಿದಳು. ಹೋಗಿ ನೀರು ತಂದೆ. ಎದ್ದು ಕುಳಿತು ಕುಡಿಯಲು ಪ್ರಯತ್ನಿದಳು, ಆದರೆ ಪೂರ್ತಿ ನೀರು ಕುಡಿಯಲೇ ಇಲ್ಲ. ತಲೆ ಪಕ್ಕಕ್ಕೆ ವಾಲಿಸಿ ಹಾಗೆ ಹಿಂದಕ್ಕೆ ಒರಗಿಬಿಟ್ಟಳು.
ನನಗೆ ಸ್ವಲ್ಪ ಗಾಭರಿ ಅನ್ನಿಸಿತು
"ಏನಾಯಿತು"  ಎಂದು ಕೇಳೀದರೆ ಉತ್ತರವಿಲ್ಲ. ಅಲುಗಿಸಿದರೆ ಕಣ್ಣು ಬಿಡುತ್ತಿಲ್ಲ. ತಕ್ಷಣ 
"ಕಮಲ" ಎನ್ನುತ್ತ ಜೋರಾಗಿ ಹೆಂಡತಿಯನ್ನು ಕೂಗಿದೆ. ರೂಮಿನಲ್ಲಿ ಮಲಗಿದ್ದವಳು ಎದ್ದು ಬಂದಳು. ಹಾಗೆ ಮತ್ತೊಂದು ರೂಮಿನಿಂದ ಮಗನು ಎದ್ದು ಬಂದ.
ತಕ್ಷಣ ನರ್ಸಿಂಗ್ ಹೋಮ್ ಗೆ ಪೋನ್ ಮಾಡಿ ಆಂಬ್ಯೂಲೆನ್ಸ್ ತರಿಸಿ, ತಲುವುವಾಗ ಅರ್ಧಗಂಟೆ ಕಳೆದಿತ್ತು. ಯಾವುದೇ ಉಪಯೋಗವಾಗಲಿಲ್ಲ.
ಡಾಕ್ಟರ್ ಹೇಳಿದರು
"ಇಲ್ಲ , ಉಪಯೋಗವಿಲ್ಲ, ತಡವಾಗಿದೆ ಪ್ರಾಣಹೋಗಿ ಅರ್ಧಗಂಟೆಯಾಗಿದೆ ಅನ್ನಿಸುತ್ತೆ,ಸಿವಿಯರ್ ಹಾರ್ಟ್ ಅಟ್ಯಾಕ್ "
ಏನು ಎಂದು ಅರ್ಥವಾಗುವದರಲ್ಲಿ  ಅಮ್ಮ ಬಿಟ್ಟುಹೊರಟುಹೋಗಿದ್ದಳು.

**** *** 

ಮುಂದಿನದೆಲ್ಲ ಯಾಂತ್ರಿಕ. ಬೆಂಗಳೂರಿನಲ್ಲಿದ್ದ    ತಮ್ಮನಿಗೆ ಬರುವಂತೆ ಕಾಲ್ ಮಾಡಿದೆ, ಬೆಳಗ್ಗೆ ಆಗುವದರಲ್ಲಿ ಎಲ್ಲರಿಗು ವಿಷಯ ತಿಳಿದು ಒಬ್ಬರ ನಂತರ ಒಬ್ಬರು ಬರುತ್ತಿದ್ದರು. ಅಮ್ಮನ ತಮ್ಮಂದಿರು ಇಬ್ಬರೂ ಬಂದರು. ಎಲ್ಲರು ಅವಳ ಗುಣಗಾನ ಮಾಡುತ್ತ ಕಣ್ಣೀರು ಸುರಿಸುವರೆ.
ನನಗೆ ಏನು ತೋಚದೆ ಸಪ್ಪಗೆ ಕುಳಿತಿದ್ದೆ.
ಎಲ್ಲರೂ ಬಂದು ಏರ್ಪಾಡುಗಳೆಲ್ಲ ಮುಗಿದು ಅಂತ್ಯಕ್ರಿಯೆಗೆ ಹೊರಡುವಾಗ ಮಧ್ಯಾನ್ಹ ದಾಟಿತ್ತು. ನಾನು ಮೌನವಾಗಿ ನಡೆದಿದ್ದೆ. ಅದೇನು ಎಂದು ಅರ್ಥವಾಗುತ್ತಿಲ್ಲ, ಎದೆಯಲ್ಲಿ ಮಡುವುಗಟ್ಟಿದ ಸಂಕಟ. ಅಮ್ಮನ ದೇಹಕ್ಕೆ ಬೆಂಕಿ ಹಚ್ಚುವಾಗಲು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದೆ. ಎಲ್ಲರೂ ಅಳುತ್ತಿರುವಾಗಲು ನನ್ನ ಕಣ್ಣಲ್ಲಿ ಒಂದು ಹನಿಯಾದರು ನೀರು ಬರಲಿಲ್ಲ.

**** ****

ಹತ್ತನೆ ದಿನದ ಕಾರ್ಯಗಳು ಕಡೆಯ ಘಟ್ಟ ಮುಟ್ಟಿದ್ದವು.
ಪುರೋಹಿತರು ಹೇಳುತ್ತಿದ್ದರು. "ಇಂದಿಗೆ ಎಲ್ಲ ಕಾರ್ಯಗಳು ಕೊನೆಮುಟ್ಟಿದವು. ವಿಸರ್ಜನೆಯಾದರೆ ಪ್ರೇತಾತ್ಮಕ್ಕೆ ಭೂಮಿಯ ಋಣಮುಗಿಯಿತು. ಇನ್ನೂ ಏನಿದ್ದರು ನಾಳೆ ವೈಧೀಕ, ನಾಡಿದ್ದು, ವೈಕುಂಠ.ಅಳುವ ಹಾಗಿದ್ದರೆ ಅತ್ತು ಬಿಡಿ, ತಾಯಿಗೆ ಹಾಕುವ ಕಡೆಯ ಕಣ್ಣೀರು ಇದು"
ಅವರ ಮಾತು ತಂದ ದುಃಖ ತಡೆಯಲಾರದೆ, ಸೋದರಮಾವ ಕಣ್ಣು ಒತ್ತಿಕೊಳ್ಳುತ್ತ ಅಲ್ಲಿಂದ ಎದ್ದು ಹೊರಗೆ ಹೋದರು. ತಮ್ಮ ದುಃಖತಡೆಯಲಾರದೆ ಜೋರಾಗೆ ಅತ್ತುಬಿಟ್ಟ. 
ನಾನು ಅವರು ಪ್ರೇತರೂಪಕ್ಕೆ ಜೋಡಿಸಿದ ಮೂರು ಸಣ್ಣ ಕಲ್ಲುಗಳನ್ನು ಅದರ ಮೇಲೆ ಹಾಕಿದ್ದ ಅರಳು ಮುಂತಾದವನ್ನು ನೋಡುತ್ತಿದ್ದೆ ಹೊರತಾಗಿ ಅಳುಬರಲಿಲ್ಲ. ಅಮ್ಮನನ್ನು ನೆನೆಯುತ್ತ ದುಃಖ ಒತ್ತರಿಸುತ್ತ ಬರುತ್ತಿತ್ತು, ಹಿಂಸೆಯಾಗುತ್ತಿತ್ತು ಆದರೆ ಅದೇನೊ ಕಣ್ಣಿನಲ್ಲಿ ಒಂದೇ ಒಂದು ಹನಿ ನೀರಾದರು ಕಾಣಿಸಿಕೊಳ್ಳಲಿಲ್ಲ. ಪುರೋಹಿತರು ನನ್ನನ್ನೇ ತೀಕ್ಷ್ಣ ದೃಷ್ಟಿಯಿಂದ ನೋಡುತ್ತಿದ್ದರು. ನಾನು ಸುಮ್ಮನೆ ದೃಷ್ಟಿ ಶೂನ್ಯನಾಗಿ ಕುಳಿತಿದ್ದೆ.

ಊಟವೆಲ್ಲ ಮುಗಿದು ಎಲ್ಲರೂ ಮಾತನಾಡುತ್ತ ಕುಳಿತಂತೆ, ಪುರೋಹಿತರು ಹೇಳುತ್ತಿದ್ದರು
"ನಮ್ಮ ಧರ್ಮದಲ್ಲಿ ನಾವು ಹೆತ್ತ ತಾಯಿ ತಂದೆಯರಿಗೆ ಸತ್ತಾಗ ಈ ಎಲ್ಲ ಕರ್ಮಗಳನ್ನು ಮಾಡುತ್ತೇವೆ, ಇದೆಲ್ಲ ಹಣದಿಂದ ಆಗುವುದು, ಆದರೆ ನಿಜವಾದ ತಿಥಿ ಎಂದರೆ ತಾಯಿಗಾಗಿ ಹರಿಸುವ ಒಂದು ಹನಿ ಕಣ್ಣೀರು. ಆ ರೀತಿ ಭಾವವೇ ಇಲ್ಲದ ಮೇಲೆ ತಿಥಿ ಮಾಡಿ ಸಹ ಏನು ಉಪಯೋಗ, ಅಲ್ಲವೆ "
ಪಕ್ಕದಲ್ಲಿದ್ದ ನನ್ನ ಸೋದರ ಮಾವನನ್ನು ಕೇಳುತ್ತಿದ್ದರು.
ನನಗೆ ಅರ್ಥವಾಗುತ್ತಿತ್ತು ಪುರೋಹಿತರು ಹೇಳುತ್ತಿರುವುದು ನನ್ನ ಬಗ್ಗೆ ಎಂದು. ಆದರೆ ನಾನು ಏನು ಉತ್ತರಕೊಡಲಾರದ ಸ್ಥಿತಿ ತಲುಪಿದ್ದೆ. ಮೌನವಾಗಿಯೆ ಅವರ ಮಾತುಗಳನ್ನು ಅವಹೇಳನವನ್ನು ನುಂಗಿಕೊಂಡೆ.

**** ******  

ಎಲ್ಲ ಕಾರ್ಯಗಳು ಮುಗಿದಿದ್ದವು. ಮನೆಯಲ್ಲಿ ಈಗ ನಾವು ಮೂರು ಜನ ಮಾತ್ರ, ನಾನು , ಪತ್ನಿ ಹಾಗು ಮಗ.

ಅಮ್ಮ ಮಲಗುತ್ತಿದ್ದ ರೂಮೀಗ ಖಾಲಿ ಖಾಲಿ.  ಒಂದು ವಾರ ಕಳೆದಿತ್ತು ಅನ್ನಿಸುತ್ತೆ. ಹೆಂಡತಿ ಮಾತು ತೆಗೆದಳು.

"ಇದೇನು ಹೀಗೆ ಇರುತ್ತೀರಿ, ಸಮಾದಾನ ತಂದುಕೊಳ್ಳಬಾರದೆ. ಅತ್ತೆ ಜೀವನದಲ್ಲಿ ಎಲ್ಲವನ್ನು ಕಂಡರು ಸುಖಃ ದುಃಖ ಎಲ್ಲವನ್ನು ನೋಡಿದರು , ಸಾವಿನಲ್ಲೂ ಯಾವುದೇ ಸಂಕಟ ಅನುಭವಿಸಲಿಲ್ಲ. ಸುಖಃದ ಮರಣವನ್ನೆ ಪಡೆದರು. ಎಷ್ಟು ದಿನ ಹೀಗಿರುತ್ತೀರ ಹೇಳಿ. ಸ್ವಲ್ಪ ಮನವನ್ನು ಬೇರೆ ಕಡೆ ಹರಿಸಿ" ಎಂದೆಲ್ಲ ಹೇಳಿದಳು.

ನಾನು  ಹೇಳಿದೆ

"ಇಲ್ಲ ಕಮಲ , ನನ್ನ ಮನದ ದುಃಖ ಬೇರೆಯೇ ಇದೆ. ಅಮ್ಮ ಸತ್ತಾಗ ಎಲ್ಲರೂ ಸೇರಿದರು, ಸೋದರಮಾವ ಆದಿಯಾಗಿ ದುಃಖಪಟ್ಟರು, ನನ್ನ ಮನದಲ್ಲಿ ಅದೆಂತದೋ ಭಾವ ಬೇಯುತ್ತಲೆ ಇತ್ತು, ಆದರೆ ನನ್ನನ್ನು ಸಾಕಿ ಸಲಹಿದ ಅಮ್ಮನಿಗಾಗಿ ಒಂದು ಹನಿ ಕಣ್ಣೀರು ಹಾಕಲಾಗಲಿಲ್ಲ. ಬೇಕು ಅಂದರೂ ಅಳು ಬರಲಿಲ್ಲ. ನನ್ನ ಮನದ ಬಗ್ಗೆ ನನಗೆ ಚಿಂತೆಯಾಗಿದೆ, ನನ್ನಲ್ಲಿ ಭಾವನೆಗಳೆಲ್ಲ ಬತ್ತಿ ಹೋದವ ಅನ್ನಿಸುತ್ತಿದೆ"

ಅದಕ್ಕೆ ಕಮಲ ಹೇಳಿದಳು

"ಹಾಗೇನು ಇಲ್ಲರೀ , ಕೆಲವರಿಗೆ ಹಾಗೆ ಬೇಗ ಅಳು ಎನ್ನುವುದು ಬರುವದಿಲ್ಲ. ಅದು ಅವರವರ ಸ್ವಭಾವ , ಹೊರಗೆ ಅಳುವುದು ತಮ್ಮ ದುಃಖದ ತೋರ್ಪಡೆ ನಿಮ್ಮ ಸ್ವಭಾವ ಅಲ್ಲ ಬಿಡಿ"

"ಇಲ್ಲ ಕಮಲ, ನೀನು ಏನು ಹೇಳುವಾಗಲು ನನಗೆ ಸಮಾದಾನವಿಲ್ಲ. ಹಾಗೆಂದು ನನಗೆ ಸುಮ್ಮನೆ ಎಲ್ಲರೆದುರಿಗೂ ಅಳುವ ನಾಟಕವಾಡಲು ಇಷ್ಟವಿರಲಿಲ್ಲ, ನನಗೆ ನನ್ನ ಬಗ್ಗೆಯೆ ಅನುಮಾನ ಪ್ರಾರಂಭವಾಗಿದೆ, ನಾನು ಅಷ್ಟೊಂದು ನಿರ್ಭಾವುಕನ, ಕಡೆಗೆ ಅಮ್ಮನ ಸಾವಿಗೆ ಅಳದಷ್ಟು. ಅಥವ ನನ್ನ ಒಳ ಮನದಲ್ಲಿ ಅವಳ ಬಗ್ಗೆ ಪ್ರೀತಿಯೆ ಇಲ್ಲವಾ?"

 ನನ್ನ ಮನೋವ್ಯಥೆ ಮುಂದುವರೆದಿತ್ತು. ಕಡೆಗೆ  ಕಮಲ ಹೇಳಿದಳು
"ನಿಮ್ಮ ಮಾನಸಿಕ ತುಮಲ ನೋಡಲು ಆಗುತ್ತಿಲ್ಲ, ನಿಮಗೆ ನಿಮ್ಮ ಮನದ ಬಗ್ಗೆ ಅಷ್ಟೋಂದು ಬೇಸರವಿದ್ದಲ್ಲಿ, ಯಾರಾದರು ಮಾನಸಿಕ ತಜ್ಞರಲ್ಲಿ ಹೋಗಿ ತೋರಿಸೋಣ, ಅವರು ನಿಮ್ಮ ಮನವನ್ನು ಸರಿಯಾಗಿ ಅರ್ಥೈಸಿ ಹೇಳಬಹುದು. ಆಗ ನಿಮಗೂ ಒಂದು ಸಮಾದಾನ ದೊರೆಯುತ್ತದೆ. ಅಂತಹ ಸಮಸ್ಯೆಗಳು ಏನಾದರು ಇದ್ದಲ್ಲಿ ಪರಿಹಾರವಾಗುತ್ತದೆ"

ಏನು, ಅಮ್ಮನ ಸಾವಿಗೆ ಅಳಲಿಲ್ಲ ಎನ್ನುವ ಕಾರಣಕ್ಕೆ ಮಾನಸಿಕ  ಡಾಕ್ಟರ್  ಬಳಿಯೆ ?
ಎಂದು ಮೊದಲು ಅನ್ನಿಸಿತು, ಕಡೆಗೊಮ್ಮೆ ಹೆಂಡತಿಯ ಮಾತು ಸರಿ ಅನ್ನಿಸಿತು.  

ಮನೋವೈದ್ಯರು ಸಹನೆಯಿಂದ ನಾನು ಹೇಳುವದನ್ನೆಲ್ಲ ಕೇಳಿದರು.
ನಂತರ ಮಧ್ಯ ಮಧ್ಯ ಕೆಲವು ಪ್ರಶ್ನೆಗಳನ್ನು ಕೇಳಿದರು. ಉತ್ತರಿಸಿದೆ. ನನ್ನ ಹೆಂಡತಿ ಸಹ ಅವರಿಗೆ ಕೆಲವು ವಿಷಯಗಳನ್ನು ತಿಳಿಸಿದಳು. ನಾನು ತಂದೆಯನ್ನು ತೀರ ಚಿಕ್ಕವಯಸಿನಲ್ಲಿ ಕಳೆದುಕೊಂಡಿದ್ದು, ನಂತರ ಅಮ್ಮ ನನ್ನನ್ನು ಹಾಗು ತಮ್ಮನನ್ನು ಒಬ್ಬಂಟಿಯಾಗಿ ಸಾಕಿದ್ದು. ಎಲ್ಲವನ್ನು ತಿಳಿಸುತ್ತ, ಈಚೆಗೆ ತಾಯಿ ತೀರಿಕೊಂಡರೆಂದು, ಆ ಸಮಯದಲ್ಲಿ ಇವರು ಏನು ಮಾಡಿದರು ಅಮ್ಮನಿಗಾಗಿ ಒಂದೇ ಒಂದು ಹನಿ ಕಣ್ಣೀರು ಸುರಿಸಲಾಗದಿದ್ದು, ಮನೋವ್ಯಥೆ ಎಲ್ಲವನ್ನು ಹೇಳಿದಳು.

ಮನೋವೈದ್ಯರು ಕ್ಷಣಕಾಲ ಸುಮ್ಮನೆ ಕುಳಿತರು. ಅವರು ಏನನ್ನೋ ಚಿಂತಿಸುತ್ತ ಇದ್ದರು. ನನ್ನ ಮುಖವನ್ನೆ ದೀರ್ಘಕಾಲ ನೋಡಿ ನಂತರ ಎದ್ದು ಬಂದು, ಸ್ವಲ್ಪ ಕಣ್ಣು ಅಗಲಿಸಿ ಎನ್ನುತ್ತ ನನ್ನ ಕಣ್ಣುಗಳನ್ನು ಪರೀಕ್ಷಿಸಿ ಪುನಃ ಅವರ ಜಾಗದಲ್ಲಿ ಹೋಗಿ ಕುಳಿತರು.

"ನೋಡಿ ಶರ್ಮರವರೆ ನಿಮ್ಮ ಮಾತುಗಳ ಮೇಲೆ ಹೇಳುವದಾದರೆ ನಿಮ್ಮ ಮನಸ್ಥಿತಿ ಅತ್ಯಂತ ಸಹಜವಾಗಿದೆ, ಯಾವುದೇ ಏರುಪೇರುಗಳು ಇಲ್ಲ. ನಿಮಗೆ ಮಾನಸಿಕವಾಗಿ ಏನೋ ಆಗಿದೆ ಎನ್ನುವುದು ನಿಮ್ಮ ಕಲ್ಪನೆ ಅಷ್ಟೆ. ಹೆದರಬೇಡಿ, ನಿಮಗೆ ಯಾವ ಮನೋರೋಗದ ಚಿಕಿತ್ಸೆಯ ಅಗತ್ಯವೂ ಇಲ್ಲ'

ನನಗೆ ಸಮಾದಾನ ಅನ್ನಿಸಿತು, ಜೊತೆ ಜೊತೆಗೆ ಮತ್ತೆ ಆತಂಕ

'ಸರಿ ಡಾಕ್ಟರ್ ಎಲ್ಲವೂ ಸರಿ ಇದೆ ಅನ್ನುವದಾದರೆ ನನಗೆ ಏನಾಗಿದೆ, ಏಕೆ ಅಳು ಬರುತ್ತಿಲ್ಲ. ಮನದಲ್ಲೆ ಎಷ್ಟೇ ವ್ಯಥೆ ತುಂಬಿದರು, ಭಾವನೆಗಳ ವ್ಯತ್ಯಾಸವಾಗುತ್ತಿದ್ದಾಗಲು ನಾನು ಸಹಜವಾಗಿಯೆ ಇರುತ್ತೇನೆ ಅಳುತ್ತಿಲ್ಲ. ಅಳು ಅನ್ನುವುದು ಮನಷ್ಯನ ಸಹಜ ಭಾವವಲ್ಲವೇ, ಅಲ್ಲದೇ ತಾಯಿಯ ಮರಣ ಎನ್ನುವುದು ಎಂತಹ ಕಲ್ಲು ಮನದವರಿಗೂ ದುಃಖದ ಭಾವವನ್ನು ತುಂಬುತ್ತದೆ, ಆದರೆ ನನ್ನ ಮನಸ್ಥಿತಿಯನ್ನು ನೋಡಿ,   ನನಗೇಕೆ ಒಂದು ಹನಿ ಕಣ್ಣೀರು ಬರುತ್ತಿಲ್ಲ'

ಡಾಕ್ಟರ್ ನಿಧಾನವಾಗಿ ನುಡಿದರು

'ಇಲ್ಲ …, ಇದಕ್ಕೆ ಕಾರಣ ನಿಮ್ಮ ಮನಸ್ಥಿತಿಯಲ್ಲ  ಇದಕ್ಕೆ ಕಾರಣ ನಿಮ್ಮ ಕಣ್ಣು. ಅಲ್ಲಿ  ಕಣ್ಣೀರು ಉತ್ಪತ್ತಿಯಾಗುವ  ಗ್ಲಾಂಡ್ ಬತ್ತಿ ಹೋಗಿದೆ, ಆಂಗ್ಲದಲ್ಲಿ ಡ್ರೈ ಐಸ್ ಅನ್ನಬಹುದೇನೊ, ಅಂದರೆ ನಿಮಗೆ ಸಹಜವಾಗಿಯೆ ಕಣ್ಣೀರು ಬರುತ್ತಿಲ್ಲ. ನಿಮ್ಮ ಭಾವನೆಯ ಉತ್ಕರ್ಷದಲ್ಲಿಯೂ ಕಣ್ಣ್ಣೀರು ಬರುತ್ತಿಲ್ಲ ಏಕೆ ಎಂದರೆ ನಿಮ್ಮ ಕಣ್ಣಿನಲ್ಲಿ ನೀರೆ ಇಲ್ಲ. ನನ್ನ ಹತ್ತಿರ ಬಂದಿರುವಿರಿ,   ನಾನು ಜನರಲ್ ಆಗಿ ಒಂದು ಐ ಡ್ರಾಪ್  ಕೊಡುತ್ತೇನೆ,ನೀವು, ಮತ್ತೆ ಯಾರಾದರು ಕಣ್ಣಿನ ತಜ್ಞರನ್ನು ಬೇಟಿ ಆಗಬೇಕಾಗುತ್ತೆ. ಕೆಲವರಿಗೆ ಕಣ್ಣಿನಲ್ಲಿ ನೋವು ಇಂತಹುದೆಲ್ಲ ಇರುತ್ತೆ ಆದರೆ ನಿಮಗೆ ಯಾವುದೇ ನೋವಿಲ್ಲ ಹಾಗಾಗಿ ನಿಮ್ಮ ಅರಿವಿಗೆ ಬರಲಿಲ್ಲ ಅನ್ನಿಸುತ್ತೆ'

**** **** 

ಮನೆಗೆ ಬಂದು ತಲುಪಿದೆವು.  ಡಾಕ್ಟರ್ ಕೊಟ್ಟಿದ್ದ ಐ ಡ್ರಾಪ್ಸ್ ತರಲು ಹೋಗಲಿಲ್ಲ.  
ಅಮ್ಮನ ಕೋಣೆಯೊಳಗೆ ಹೋದೆ.
ಅಲ್ಲಿ ಹಾಕಿದ್ದ ಅವಳ ಫೋಟೋ ನೋಡುತ್ತ ನಿಂತಿದ್ದೆ. ಎಂತದೋ ಹಿಂಸೆ ಅನ್ನಿಸುತ್ತಿತ್ತು. ಕಣ್ಣು ಮುಚ್ಚಿಕೊಂಡು ಅಮ್ಮನನ್ನು ನೆನೆದುಕೊಂಡೆ
"ಅಮ್ಮ ನೀನು ಗಂಡನನ್ನು ಕಳೆದುಕೊಂಡ ನಂತರ ನಮ್ಮನ್ನು ಎಷ್ಟು ಜತನದಿಂದ ಬೆಳೆಸಿದೆ ಎಂದು ತಿಳಿದಿದೆ. ನಿನ್ನ ಎಲ್ಲ ದುಃಖವನ್ನು ನಿನ್ನೊಳಗೆ ಅಡಗಿಸಿಕೊಂಡು, ನಮ್ಮ ಎದುರಿಗೆ ಯಾವ ಭಾವವನ್ನು ತೋರದೆ ಸಹಜವಾಗಿ ವರ್ತಿಸುತ್ತಿದ್ದೆ, ಮುಖದಲ್ಲಿ ನಗುವನ್ನು ತುಂಬಿಕೊಳ್ಳುತ್ತಿದ್ದೆ. ನಮ್ಮ ಎದುರಿಗೆ ಅತ್ತುಬಿಟ್ಟರೆ , ಎಲ್ಲಿ ನಮ್ಮ ಆತ್ಮ ವಿಶ್ವಾಸ ಕುಗ್ಗಿಹೋಗಿ ಬಿಡುವುದೋ ಎನ್ನುವ ಆತಂಕ ನಿನಗೆ. ನನಗೆ ಕಾಣದಂತೆ ನೀನು ಕೊರಗಿ ಕಣ್ಣೀರು ಒರೆಸಿಕೊಳ್ಳುವದನ್ನು ಎಷ್ಟೋ ಸಾರಿ ನಾನು ಗಮನಿಸಿದ್ದೆ ಅಮ್ಮ. ನಮ್ಮ  ಕಣ್ಣಲ್ಲಿ ಎಂದು ನೀರು ಬರದಂತೆ ನಮ್ಮನ್ನು ಬೆಳೆಸಿದೆ. ಈಗ ನೋಡು  ನೀನು ಕಣ್ಣೀರು ಹಾಕುತ್ತ ಬೆಳೆಸಿದ ನಾನು ನಿನ್ನ ಸಾವು ಅನ್ನುವಾಗಲು ಒಂದು ಹನಿ ಕಣ್ಣೀರು ಹಾಕಲು ಆಗದಂತ ಸ್ಥಿತಿಯನ್ನು ಹೊಂದಿರುವೆ.  ನನ್ನ ಮನ ಭಾವೋತ್ಕರ್ಷಕ್ಕೆ ಒಳಗಾಗಿದೆ, ಆದರೂ   ನಿನಗಾಗಿ ಒಂದು ಹನಿ ಕಣ್ಣೀರು ಹಾಕಲಾರೆ, ನನ್ನನ್ನು ಕ್ಷಮಿಸು ಅಮ್ಮ"  

ಕಣ್ಣುಮುಚ್ಚಿ ಅಮ್ಮನನ್ನು ಬೇಡುತ್ತಿದ್ದೆ. ಹಾಗೆ ಎಷ್ಟು ಹೊತ್ತು ನಿಂತಿದ್ದೆನೊ ನನಗೆ ತಿಳಿಯದು. ಕೆನ್ನೆಯೆಲ್ಲ ಒದ್ದೆ ಆದಂತೆ ಅನ್ನಿಸಿತು. ನಿಧಾನಕ್ಕೆ ಕಣ್ಣನ್ನು ತೆಗೆದೆ. ನನ್ನ ಬಲಕೈ ಕಣ್ಣಿನ ಬಳಿ ಹೋಯಿತು. ಕೈಯನ್ನು ಕೆನ್ನೆಯ ಮೇಲೆ ಒತ್ತಿ , ನೋಡಿದೆ, ಕೈಯೆಲ್ಲ ಒದ್ದೆ ಒದ್ದೆ, ಕಣ್ಣೀರು.

ಅಮ್ಮ ನನ್ನ ಮಾತನ್ನು ಕೇಳಿಸಿಕೊಂಡಿದ್ದಳು, ಅವಳಿಗಾಗಿ ಕಣ್ಣೀರು ಹಾಕದ ಪಾಪಿ ಎನ್ನುವ ನನ್ನ ಭಾವ ತೊಡೆಯುವಂತೆ, ಕಣ್ಣಲ್ಲಿ ನೀರು ಸುರಿಯುತ್ತಿತ್ತು, ನಮಗಾಗಿ ಎಲ್ಲವನ್ನು ಕೊಟ್ಟ ಅಮ್ಮ ಈಗ ಕಣ್ಣೀರನ್ನು ಕೊಟ್ಟಿದ್ದಳು.  ಮನದಲ್ಲಿ ದುಃಖದ ಭಾವ ತುಂಬಿ ಬರುತ್ತಿತ್ತು, ಅಮ್ಮನನ್ನು ಕಳೆದುಕೊಂಡ ನೋವು ಮನವನ್ನು ತುಂಬುತ್ತಿರುವಂತೆ, ಅಳು ತುಂಬಿ  ಬಿಕ್ಕಿ ಬಿಕ್ಕಿ ಬರುತ್ತಿತ್ತು. ಅಂದಿನಿಂದ ತಡೆದಿದ್ದ ದುಃಖ ಕಣ್ಣೀರು ಅಮ್ಮನ ಫೋಟೊದ ಮುಂದೆ ತನ್ನ ಒತ್ತಡವನ್ನು ಕಳೆದುಕೊಳ್ಳುತ್ತಿತ್ತು.

Rating
No votes yet

Comments

Submitted by nageshamysore Fri, 11/21/2014 - 21:33

ಭಾವನಾ ಶಕ್ತಿಯಲ್ಲಡಗಿದ ಕ್ರಿಯಾಶಕ್ತಿಯ ಬಲವನ್ನು ನಿರೂಪಿಸುವ ಚೆಂದದ ಕಥೆ. ಆಂಗಿಕ ದೌರ್ಬಲ್ಯವನ್ನು ಅಧಿಗಮಿಸುತ ನಂಟಿನ ಅಂಟೆ ಗೆಲುವ ಅಂತ್ಯ ಚೆನ್ನಾಗಿ ಮೂಡಿಬಂದಿದೆ.

Submitted by ಗಣೇಶ Fri, 11/21/2014 - 23:45

>>ಇದಕ್ಕೆ ಕಾರಣ ನಿಮ್ಮ ಮನಸ್ಥಿತಿಯಲ್ಲ ಇದಕ್ಕೆ ಕಾರಣ ನಿಮ್ಮ ಕಣ್ಣು. ಅಲ್ಲಿ ಕಣ್ಣೀರು ಉತ್ಪತ್ತಿಯಾಗುವ ಗ್ಲಾಂಡ್ ಬತ್ತಿ ಹೋಗಿದೆ,..
-ಬತ್ತಿಹೋದ ಗ್ಲಾಂಡ್‌ನಿಂದ ಅಳು ತುಂಬಿ ಬಿಕ್ಕಿಬಿಕ್ಕಿ ಬಂತು...
ನನ್ನ ಕಣ್ಣಲ್ಲೂ ಅಳು ತುಂಬಿತ್ತು ಪಾರ್ಥರೆ.
ಅಳು ಬರದಿದ್ದರೆ ಯಾವ ಮನಶಾಸ್ತ್ರಜ್ಞ ಅಥವಾ ಕಣ್ಣಿನ ಡಾಕ್ಟ್ರ ಬಳಿ ಓಡಬೇಕಿಲ್ಲ. ಹಿಂದೊಮ್ಮೆ ಆಸುಹೆಗ್ಡೆಯವರ ಬರಹಕ್ಕೂ ಈ ಕೊಂಡಿ ಕೊಟ್ಟಿದ್ದೆ- http://timesofindia.indiatimes.com/edit-page/Say-goodbye-without-grief/a...

Submitted by partha1059 Tue, 11/25/2014 - 13:09

In reply to by ಗಣೇಶ

ನೀವು ಕೊಟ್ಟಿರುವ ಕೊಂಡಿಯಲ್ಲಿನ ವಾದ ತರ್ಕಬದ್ಧವಾಗಿದೆ !
.... ಆದರೂ ಭಾವನೆಗಳ ಕೈ ಮೇಲಾದಾಗ ತರ್ಕ ಕೆಲಸ ನಿಲ್ಲಿಸುತ್ತದೆ :-)
ವಂದನೆಗಳು ಗಣೇಶ ಸಾರ್,
ಏಕೊ ಮತ್ತೆ ನಿಮ್ಮ ಮಲ್ಲೇಶ್ವರ ದರ್ಶನದಂತೆ ಮತ್ತೊಂದು ಬೆಂಗಳೂರು ಬಾಗದ ದರ್ಶನ ಓದಬೇಕೆನಿಸುತ್ತೆ
ಬರೆಯುತ್ತೀರಾ ?
ಅಂದ ಹಾಗೆ ನಿಮ್ಮ ಅಂಡಾಂಡಬ್ರಹ್ಮಾಂಡ ಸ್ವಾಮಿಗಳು ಏನು ಮಾಡುತ್ತಿರುವರು

Submitted by ಗಣೇಶ Thu, 11/27/2014 - 00:28

In reply to by partha1059

ಪಾರ್ಥರೆ, ಬೇಕಲ ಕೋಟೆ ಬಗ್ಗೆ ಬರೆಯುತ್ತೇನೆ ಎಂದು ಬಹಳ ದಿನವಾಯಿತು, ಇನ್ನೂ ಬರೆಯಲಾಗಲಿಲ್ಲ. ಮಲ್ಲೇಶ್ವರಂ ದರ್ಶನ ಕಾಲದ ಕೆಲ ಮಿತ್ರರೆಲ್ಲಾ ಎಲ್ಲಿ ಹೋಗಿದ್ದಾರೆಂದು ಗೊತ್ತಿಲ್ಲ. ಅವರನ್ನೆಲ್ಲಾ ಒಟ್ಟು ಸೇರಿಸಿದ ಮೇಲೆ ಯಲಹಂಕನೋ ಇಂದಿರಾನಗರವೋ ಸುತ್ತಾಡೋಣ..

Submitted by ಗಣೇಶ Fri, 11/28/2014 - 00:17

In reply to by partha1059

>>ಅಂದ ಹಾಗೆ ನಿಮ್ಮ ಅಂಡಾಂಡಬ್ರಹ್ಮಾಂಡ ಸ್ವಾಮಿಗಳು ಏನು ಮಾಡುತ್ತಿರುವರು..
-ಅಂ.ಸ್ವಾಮಿಗಳು ತಮ್ಮ ಯೋಗನಿದ್ರೆಯಿಂದ ಹೊರಬಂದು, ಕವಿನಾಗರಾಜರ ದೇವರ ಬಗೆಗಿನ ಲೇಖನಕ್ಕೆ ತಮ್ಮ ಅಮೂಲ್ಯ ಸಲಹೆ ನೀಡಲಿದ್ದಾರೆ!

Submitted by swara kamath Mon, 11/24/2014 - 20:36

ಕಣ್ಣೀರು ಮಿಡಿಯುವುದು ದೇವರು ಮಾನವನಿಗೆ ಕೊಟ್ಟ ಒಂದು ದೊಡ್ಡ ವರ .ಸಂದರ್ಭಕ್ಕನುಸಾರವಾಗಿ ಭಾವೋದ್ವೆಗಗಳಿಗೆ ಅದರಲ್ಲೂ ಮನಸ್ಸಿಗೆ ತೀವ್ರ ದುಖಃ ವಾದಾಗ ಇಲ್ಲವೆ ಸಂತೋಷವಾದಾಗ ಒಂದೆರಡು ಹನಿ ಕಣ್ಣೀರು ಯಾರಿಗಾದರೂ ಬಂದೆಬರುತ್ತದೆ.ಶರ್ಮಅವರ ಸ್ಥಿತಿ ಅರಿಯದ ನಾವು ಅವರ ಬಗ್ಗೆ ಕನಿಕರ ಪಡುವಂತೆ ಸಂದರ್ಭ ಉಂಟಾಗಿತ್ತು.
ತುಂಬಾದಿನಗಳ ನಂತರ ನಿಮ್ಮ ಈ ಕಿರು ಲೇಖನ ಓದಲು ಸಂತೋಷ ವಾಯಿತು....ವಂದನೆಗಳು.....ರಮೇಶ ಕಾಮತ್