ಗೆಲುವಿನ ದಾರಿ

ಗೆಲುವಿನ ದಾರಿ

ಗೆಲುವಿನ ದಾರಿ 

              ನಾವು ಕಷ್ಟ  ದುಃಖಗಳನ್ನು ಗೆಲ್ಲಬೇಕೆಂದು ಹೊರಟರೆ, ಅದಕ್ಕೆ ಬೇರೆ ಮಾರ್ಗವಿಲ್ಲ. ಅವುಗಳನ್ನು ಅನುಭವಿಸುವುದೇ ಉತ್ತಮ ಮಾರ್ಗ; ಅವುಗಳಿಂದ ದೂರ ಓಡಬೇಕೆಂದು  ಬಯಸಿ ಪಲಾಯನ ವಾದಿಗಳಾದರೆ, ಅವುಗಳು ನಮ್ಮನ್ನು ಬಿಡುವುದಿಲ್ಲ. ಒಂದಕ್ಕೆ ನಾಲ್ಕರಂತೆ ಕಷ್ಟಗಳು ಬಂದು ಮುತ್ತುತ್ತವೆ. ಜೊತೆಗೆ ನಮ್ಮ ಹಿತೈಷಿಗಳಿಂದ, ಶತ್ರುಗಳಿಂದ ಮತ್ತು ಮಿತ್ರರಿಂದ ಅವಮಾನಿತರಾಗುತ್ತೇವೆ.    ಸ್ವಾಮಿ ವಿವೇಕಾನಂದರು ಹೇಳುತ್ತಾರೆ  " ಸ್ವರ್ಗಕ್ಕೆ ಏನಾದರು ದಾರಿ ಅಂತ ಇರುವುದಾದರೆ, ನರಕದ ಮೂಲಕವೇ ಹೋಗಬೇಕಾಗುತ್ತದೆ". 
              ನಮ್ಮ ಜೀವನದಲ್ಲಿ ಕಷ್ಟಗಳನ್ನು ಎದುರಿಸಲು  ಹೆದರಿ  ನಾವು ದೂರವಾದಂತೆ,  ಕಷ್ಟಗಳು   ಹೆಚ್ಚು ಹೆಚ್ಚು ಬಲಿಷ್ಠವಾಗುತ್ತವೆ. ನಾವು ಕಷ್ಟ ಎದುರಿಸಲು ಸಿದ್ಧರಾದಾಗ ಅವು ನಮ್ಮ ಕಾಲು ಹಿಡಿಯುತ್ತವೆ; ಹೆದರಿ ಓಡಲು ತಯಾರಾದರೆ ನಮ್ಮ ಜುಟ್ಟು  ಹಿಡಿದು ನಿಲ್ಲಿಸುತ್ತವೆ. ಇದಕ್ಕೆ ಶ್ರೀ ರಾಮ ಕೃಷ್ಣರು ಹೇಳುತ್ತಾರೆ  "ಸುಖದ ಹಿಂದೆ ಓಡಿ ಓಡಿ ದಣಿಯ ಬೇಡ; ಕಷ್ಟದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿ  ವೃಥಾ ಕಾಲಹರಣ ಮಾಡಬೇಡ. ಸುಖವನ್ನು ನಿರ್ಲಕ್ಷಿಸು; ಕಷ್ಟವನ್ನು ಎದುರಿಸು; ಆಗ ಸುಖ ನಿನ್ನ ಕಾಲ ಕೆಳಗೆ ಬೀಳುತ್ತದೆ. ಕಷ್ಟ ನಿನ್ನ ಕಂಡು ಹೆದರಿ ಓಡುತ್ತದೆ."
              ಇದನ್ನೇ  ಶ್ರೀ ಕೃಷ್ಣ ಹೇಳುತ್ತಾನೆ "ದೈರ್ಯದ ಹೋರಾಟ, ಅಸಂಗತ್ಯ ಮತ್ತು ಅನಾಸಕ್ತಿ".   ನಾವು  ನಾಟಕದಲ್ಲಿ ಪಾತ್ರವಹಿಸುವ ಕಲಾವಿದರು ; ನಾನು ರಾಜನೇ ಆಗಿರಬೇಕು, ಮಂತ್ರಿಯೇ ಆಗಬೇಕು, ಸೇವಕ ಬೇಡ ಎನ್ನುವಂತಿಲ್ಲ. ಆಯಾಯ ಸಂದರ್ಭಕ್ಕೆ ಬಂದ ಪಾತ್ರವನ್ನು ನಾವು  ಆಡಿ ಮುಗಿಸಲೇಬೇಕು. ನಾವು  ಕೇವಲ ಪಾತ್ರಧಾರಿಗಳು , ಪಾತ್ರವೇ ನಾವಾಗಬಾರದು. ನಾವು  ಯಾವಾಗ ಪಾತ್ರಕ್ಕೆ ನಾವೇ  ಎಂದು ಭಾವಿಸುತ್ತೇವೋ , ಆ ಕ್ಷಣದಿಂದ ನಾವು  ಸಂಕಷ್ಟಕ್ಕೆ ಸಿಕ್ಕಿ ಬೀಳುತ್ತೇವೆ.   ನಾವು ಕೇವಲ ಭಗವಂತನ ನಿರ್ದೇಶನದಂತೆ ಆಡುವ ಪಾತ್ರಧಾರಿಗಳು . 
             ಹೊರಗಿನಶತ್ರುಗಳಿಗಿಂತ ನಮ್ಮ ಒಳಗಿನ ಶತ್ರುಗಳೇ ಹೆಚ್ಚುಬಲಶಾಲಿಗಳು. ಈ  ಒಳಗಿನ ಶತ್ರುಗಳ ಜೊತೆ ಹೋರಾಡುವ ಶಕ್ತಿ ಬರಬೇಕಾದರೆ, ಮಾನಸಿಕ ಶಕ್ತಿ ಮತ್ತು ದೃಢತೆಯ ಅವಶ್ಯಕತೆ ಹೆಚ್ಚು ಬೇಕು. ಅವುಗಳಿಂದ ದೂರ ಓಡಿ ಹೋಗಲು ಬೇಕಾಗುವ  ಶಕ್ತಿಗಿಂತ, ಅವುಗಳ ಜೊತೆ ಹೋರಾಡಲು ಅಧಿಕಶಕ್ತಿ ಬೇಕು.  ನಿಜ,  ಆದರೆ, ಓಡಿ ಹೋದರೆ ಶ್ರಮ ಜಾಸ್ತಿ ಆಗುತ್ತದೆ, ಹೋರಾಡಿದರೆ ಶಕ್ತಿ ಜಾಸ್ತಿ ಲಭಿಸುತ್ತದೆ. 
             ನಮ್ಮಲ್ಲಿ  ಕಷ್ಟಕ್ಕೆ, ಹೂರಾಟಕ್ಕೆ ಮತ್ತು ದುಃಖಕ್ಕೆ  ಕಾರಣವೆ ಆಸೆ.    ಈ ಆಸೆಯನ್ನು ಗೆದ್ದವನು ಲೋಕವನ್ನೇ  ಗೆಲ್ಲುತ್ತಾನೆ. ಆಸೆ ತಪ್ಪಲ್ಲ; ಆದರೆ, ದುರಾಸೆ  ಖಂಡಿತಾ ತಪ್ಪು, ಭಗವಂತ ನಮಗೇನು   ಸಲ್ಲಬೇಕೋ ಅದನ್ನು ನಾವು ಕೇಳದೆಯೇ ನೀಡಿರುತ್ತಾನೆ; ನಾವು ದುರಾಸೆಯಿಂದ ಇನ್ನಷ್ಟು ಬೇಕೆಂದು ಗಳಿಸಲು ಹೂರಟಾಗಲೇ ಕಷ್ಟದ ಸಂಕೋಲೆಗೆ ಸಿಕ್ಕಿ ಬೀಳುತ್ತೇವೆ. ಅಸೆ ಎನ್ನುವುದು ಆದಿ  ಅಂತ್ಯವಿಲ್ಲದ ಚಕ್ರ. ಈ ಚಕ್ರಕ್ಕೆ ಸಿಕ್ಕದೇ  ಬದುಕಲು ಸಾಧ್ಯವಿಲ್ಲ.   ಆದರೆ, ಈ ಚಕ್ರದ ತಿರುವಿನಲ್ಲಿ ಕೇವಲ ಸ್ವಾರ್ಥ ಬೆರೆತರೆ ಬದುಕು ಗೊಜಲಾಗಲು ಪ್ರಾರಂಭವಾಗುತ್ತದೆ.  ಆಸೆಯು ಸಾರ್ವತ್ರಿಕವಾದಾಗ ಕಷ್ಟವಿಲ್ಲ , ಎಲ್ಲರಿಗಾಗಿ ಅಸೆ ಪಟ್ಟರೆ,  ನನಗೆ  ಎಂಬುದು ನಮಗೆ ಎಂದು ಬದಲಾಗುತ್ತದೆ.  ಆಗ  ನಮ್ಮ ಕಷ್ಟ - ನಷ್ಟ, ದುಃಖ  - ದುಮ್ಮಾನ, ಸ್ವಾರ್ಥ ಎಲ್ಲೂ ಕಾಣಿಸುವುದೆ ಇಲ್ಲ. ಆಗ ಜೀವನ ಒಂದು ಸವಾಲಾದರೂ,  ಅದು ಬಂಧನವಾಗುವುದಿಲ್ಲ, ಮುಕ್ತ ವಾತಾವರಣದಲ್ಲಿ   ಜೀವನವಿರುತ್ತದೆ.  ಆಗ  ದೊರೆಯುವ ಆನಂದವೇ ವಿಶಿಷ್ಟ.    

Rating
No votes yet

Comments

Submitted by kavinagaraj Fri, 11/28/2014 - 08:27

ಉತ್ತಮ ವಿಚಾರ ಹಂಚಿಕೊಂಡಿರುವಿರಿ, ಪ್ರಕಾಶರೆ. ವಂದನೆಗಳು.

Submitted by H A Patil Fri, 11/28/2014 - 20:01

ಪ್ರಕಾಶ ನರಸಿಂಹಯ್ಯ ರವರಿಗೆ ವಂದನೆಗಳು
ಗೆಲುವಿನ ದಾರಿಯ ಕುರಿತು ಬಹಳ ಸರಳವಾಗಿ ಆದರೆ ಮಾರ್ಮಿಕವಾಗಿ ನಿರೂಪಿಸಿದ್ದೀರಿ. ನಾನು ಎನ್ನುವ ಬದಲು ನಾವು ಎಂದು ಆಲೋಚಿಸುವುದು ಸರಿಯಾದ ಚಿಂತನಾ ಕ್ರಮ ಲೇಖನ ಹಿಡಿಸಿತು ಧನ್ಯವಾದಗಳು.