" ನಾದ ಗಾರುಡಿಗ "

" ನಾದ ಗಾರುಡಿಗ "

ಚಿತ್ರ

    

ಬಿದಿರ ಕೊಳಲುಗಳ ಗುಚ್ಛವನು ಹಿಡಿದು

ಕೈಯಲೊಂದದರ ನಮೂನೆಯನು ಹಿಡಿದು

ತನ್ನದೆ ಸ್ವರ ರಾಗಕೆ ತಾನೇ ಮನಸೋತು

ಕದೆದರಿದ ತಲೆಗೂದಲು ಕುರುಚಲು ಗಡ್ಡ

ಬಡೆತನವೆ ಮೈವೆತ್ತ ಬಡಕಲು ಕಾಯಕ ಜೀವಿ

ಸಾಗಿದ್ದಾನೆ ಬೀದಿಗುಂಟ ಹಸಿದೊಡಲು ತುಂಬಲು

ದಿನದ ತುತ್ತು ಕೂಳು ಗಳಿಸಲು

 

ಅದು ಕೊಳಲೆ ಕೊಳಲಲ್ಲ ಪೀಪಿಯೆ ಪೀಪಿಯಲ್ಲ !

ಎರಡರ ಮಧ್ಯದ ಒಂದು ಬಿದಿರು ವಾದ್ಯ

ತನ್ನದೆ ರಾಗ ಪ್ರಸ್ತಾರದ ಆವಿಷ್ಕಾರ ತಾನೇ

ರಾಗ ಸಂಯೋಜಕ ಶಾಸ್ತ್ರೀಯ ಸಂಗೀತದ

ಕಟ್ಟು ಪಾಡುಗಳಿಲ್ಲ ಕೊರಳಿಂದ ಹೊರಟ

ಆ ಕ್ಷಣದ ಉಸಿರು ನಾದದ ರೂಪದಳೆದು

ಬೀದಿಯುದ್ದಕೂ ಹಬ್ಬಿ ಹರಡುತಲಿದೆ ಆತನ

ಕರುಳ ವೇದನೆಯ ‘ನಾದಗಂಗೆ’

 

ಅಮಾಯಕ ಮಕ್ಕಳೇ ಆತನ ಅನ್ನದಾತರು

ಅಲ್ಲಲ್ಲ ! ತುತ್ತು ಕೂಳೊದಗಿಸುವ ಧಣಿಗಳು

ಮಕ್ಕಳ ಕೋರಿಕೆಯನು ತಿರಸ್ಕರಿಸಿ ಬೈದು

ಅವರ ಆಶೆಗಳನು ಹತ್ತಿಕುವ ಪಾಲಕರು

ಅವರೆಡೆಗೆ ಈ ನಾದ ಗಾರುಡಿಗನ ಒಂದು

ವಿಷಾದದ ನೋಟ ತನ್ನ ತುತ್ತು ಕೂಳಿಗೆ

ತರಬೇಡಿರೆಂಬ ದೀನತೆ

 

ಆದರೂ ನಿರ್ಲಿಪ್ತ ಗಾರುಡಿಗ ಸಾಗಿದ್ದಾನೆ

ಬೀದಿಗುಂಟ ತನ್ನ ದೈನಂದಿನ ಅನ್ನವನು ಅರಸಿ

ಯಾವುದೇ ತಿರುವುಗಳಿಲ್ಲದ ನೀರಸ ಬದುಕು

ಸಾಗಿದೆ ಅಂದಿನಂತೆ ಇಂದೂ ಎಂದಿನಂತೆ !

 

                *

ಚಿತ್ರಕೃಪೆ; http://bit.ly/1Gt9Kuc 

 

Rating
No votes yet

Comments

Submitted by swara kamath Sat, 01/24/2015 - 15:02

ಹೊಟ್ಟಪಾಡಿಗಾಗಿ ದುಡಿಯುವ ಈ ಮಂದಿಯ ಕರ ಕೌಶಲ್ಯ ನಿಜಕ್ಕೂ ಪ್ರಶಂಶನಿಯ. ಮಕ್ಕಳನ್ನು ಆಕರ್ಷಿಸುವ ಇಂಥಹ ದುಡಿಮೆಗಾರರನ್ನು ಅನೇಕ ವಿವಿಧ ರೂಪಗಳಲ್ಲಿ ನಾವು ನೋಡಬಹುದು..
ಗುಲಾಬಿಬಣ್ಣದ ಬೊಂಬಾಯಿ ಮಿಠಾಯಿ ಮಾರುವ ಜನ,
ತೆಂಗಿಕಾಯಿಯ ಗೆರಟೆಯಿಂದ ಮಾಡಿದ ಪಿಟಿಲಿನಿಂದ ಸಿನೇಮಾಹಾಡನ್ನು ಬಾರಿಸುತ್ತಾ ಹೋಗುವವ.
ಬಲೂನ ಗಳನ್ನು ಉದ್ದ ಕೋಲಿಗೆ ಕಟ್ಟಿಕೊಂಡು ಮಾರುವನನು.
ಹೀಗೆ ಅನೇಕ ಬಗೆಯ ವೃತ್ತಿಯಿಂದ ಒಪ್ಪತ್ತಿನ ಕೂಳಿಗಾಗಿ ದುಡಿಯುವ ಈ ಮಂದಿಗೆ ನಾವು ಸಹ ಸಹಕರಿಸಿದರೆ.ಸೋಮಾರಿಗಳ ಸಂಖ್ಯೆ ಕಡಿಮೆ ಆಗಬಹುದಲ್ಲವೆ?
ಉತ್ತಮ ಕವನ ಪಾಟೀಲರೆ,ನಮಸ್ಕಾರ.

Submitted by H A Patil Wed, 01/28/2015 - 20:02

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ಕವನ ಓದಿ ತಾವು ಹೊಟ್ಟೆಪಾಡಿಗಾಗಿ ದುಡಿಯುವ ವರ್ಗದವರ ಬದುಕನ್ನು ನೆನಪಿಸಿಕೊಂಡು ಅವರ ಬದುಕಿಗೆ ಮಿಡಿದಿದ್ದೀರಿ, ನಾವು ಆ ದಿಕ್ಕಿನಲ್ಲಿ ಅಲೋಚಿಸುತ್ತ ನಮ್ಮ ಮಾಡುತ್ತ ಹೋದರೆ ಈ ಜಗತ್ತು ಸುಂದರವಾಗುತ್ತ ಹೋಗುತ್ತದೆ ಎನ್ನುವುದರಲ್ಲಿ ಸಂಶಯವೆ ಬೇಡ ದನ್ಯವಾದಗಳು.

Submitted by ಗಣೇಶ Sun, 01/25/2015 - 00:16

ಪಾಟೀಲರೆ, ಇಂತಹ ಕೊಳಲು, ಕಾಮತರು ಹೇಳಿದ ತೆಂಗಿನ ಕಾಯಿ ಗೆರಟೆಯ ಪಿಟೀಲು ಅನೇಕ ಬಾರಿ ತೆಗೆದುಕೊಂಡಿದ್ದೆ, (ಹಾಗೇ ನಂತರ ದೊಡ್ಡವನಾದ ಮೇಲೆ ಮಕ್ಕಳಿಗೂ ಕೊಡಿಸಿದ್ದೆ). ಅವನು ಕೊಟ್ಟ ಕೊಳಲಲ್ಲಿ ಸ್ವರ ಬಾರದೇ, ಅವನು ಬಾರಿಸಿದ ಕೊಳಲೇ ಕೇಳಿ ತೆಗೆದುಕೊಂಡಿದ್ದೆ :) ನಿಮ್ಮ ಕವನ ಕೊಳಲು ಮಾರುವವನ ಬಗ್ಗೆಯೂ ಯೋಚಿಸುವಂತೆ ಮಾಡಿತು.ಕವನ ಸೂಪರ್.

Submitted by H A Patil Wed, 01/28/2015 - 20:09

In reply to by ಗಣೇಶ

ಗಣೇಶ ರವರಿಗೆ ವಂದನೆಗಳು
ತಮ್ಮ ಅನಿಸಿಕೆ ಸರಿ, ನಾನೂ ಸಹ ಬಾಲ್ಯದ ದಿನಗಳಲ್ಲಿ ಜಾತ್ರೆಗಳಲ್ಲಿ ಬಲೂನು, ಕೊಳಲು ಮುಂತಾದವುಗಳನ್ನು ಖರೀದಿಸಿ ಆ ಕೊಳಲನ್ನು ಬಾರಿಸಿದರೆ ಕರ್ಕಶ ನಾದ ಹೊಮ್ಮುತ್ತಿತ್ತೆ ವಿನಃ ಮಾದುರ್ಯದ ಸ್ವರ ಹೊರಡಿಸಲು ಶತ ಪ್ರಯತ್ನ ಪಟ್ಟು ಕ್ರಮೆಣ ಅದು ಮೋಡಕಾ ಬಜಾರ್ ಚೀಲ ಸೇರುತ್ತಿತ್ತು. ಆ ಚೀಲವನ್ನು ನನ್ನ ಅಜ್ಜಿ ತಾನು ಬದುಕಿರುವ ವರೆಗೂ ಜತನದಿಂದ ಕಾಯ್ದಿರಿಸಿದ್ದಳು, ಅಕೆ ತೀರಿಕೊಂಡ ನಂತರ ಅ ಹರಕು ಚೀಲ ನನ್ನ ಕಣ್ಣೆದುರೆ ತಿಪ್ಪೆಯ ಪಾಲಾಯಿತು, ಬಾಲ್ಯದ ನೆನಪುಗಳು ಎಷ್ಟು ಮಧುರ ಅಲ್ಲವೆ ಧನ್ಯವಾದಗಳು.

Submitted by kavinagaraj Sun, 01/25/2015 - 14:59

ಅವರ ಕುಶಲತೆ ಅನನ್ಯ. ಅವರ ಕೈಯಲ್ಲಿ (ಬಾಯಲ್ಲಿ) ಎಂತಹುದಾದರೂ ಮಧುರ ಸ್ವರ ಹೊರಡಿಸುತ್ತದೆ.ನಾವು ಉತ್ಕೃಷ್ಟ ವಾದ್ಯದಲ್ಲೂ ಸಾಮಾನ್ಯವಾಗಿಯಾದರೂ ಸ್ವರ ಹೊರಡಿಸುವುದು ಕಷ್ಟ. ಶ್ರಮ ಮತ್ತು ಸಾಧನೆಯ ಪ್ರತೀಕರಾದ ಅವರುಗಳನ್ನು ಸ್ಮರಿಸಿರುವುದಕ್ಕೆ ಅಭಿನಂದನೆಗಳು, ಪಾಟೀಲರೇ.

Submitted by H A Patil Wed, 01/28/2015 - 20:17

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು
ಲೋಕ ಸಾಧಕರಿಂದ ಸಾಧನೆಯನ್ನು ಕೆಳುತ್ತದೆ, ಅವುಗಳ ಕಲಿಕೆಗೆ ಬಳಸು ಮಾರ್ಗಗಳಿಲ್ಲ, ಸ್ರಮದ ಸಾಧನೆಯಿಂದ ಮಾತ್ರ ಅವುಗಳನ್ನು ಕರಗತ ಮಾಡಿಕೊಳ್ಳಲು ಸಾಧ್ಯ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲ ಮತ್ತು ಬಿಸ್ಮಿಲ್ಲಾ ಖಾನ್ ರಂತಹವರ ಸಾಧನೆಗಳು ನಮ್ಮ ಕಣ್ಮುಂದೆ ಇವೆ, ಕವನದ ಮೆಚ್ಚುಗೆಗೆ ಧನ್ಯವಾದಗಳು.

Submitted by nageshamysore Fri, 02/06/2015 - 15:12

ಪಾಟೀಲರೆ ನಮಸ್ಕಾರ. ನಾನು ಚಿಕ್ಕವನಿದ್ದಾಗ ಆಗಾಗ್ಗೆ ನಮ್ಮ ಮನೆಯ ಎದುರಿನಲೊಂದು ಅದ್ಭುತ ಮೈ ತೆರೆದುಕೊಳ್ಳುತ್ತಿತ್ತು. ಎದುರು ಮನೆಯಾಕೆಯೊಬ್ಬರು ಕಣ್ಣು ಕಾಣದ ಕುರುಡನೊಬ್ಬನನ್ನು ತಮ್ಮ ಜಗುಲಿಯ ಮುಂದಿನ ಕಾಂಕ್ರೀಟು ನೆಲದಲ್ಲಿ ಕೂರಿಸಿ, ತಾವು ಅವನೆದುರು ಜಗುಲಿಯ ಮೆಟ್ಟಿಲಲಿ ಕೂತುಬಿಡುತ್ತಿದ್ದರು. ನಂತರ ಆರಂಭವಾಗುತ್ತಿತ್ತು ದೈವೀಕವಾದ ಕೊಳಲ ಗಾನ. ಆ ಕಲಾಶ್ರೇಷ್ಠ ಅಂಧನೆನ್ನುವುದು ಪರಿವೆಗೆ ಬಾರದಂತೆ, ಆ ಹೆಣ್ಣು ಮಗಳು ಕೇಳಿದ ಪ್ರತಿಯೊಂದು ಹಾಡನ್ನು - ಚಲನ ಚಿತ್ರ, ಭಕ್ತಿ ಗೀತೆ, ದಾಸರ ಪದ.. ಹೀಗೆ ಇನ್ನೆಷ್ಟೊ ಹಾಡುಗಳನ್ನು ಕೊಳಲಿನಲ್ಲೆ ಮರುಕಳಿಸುತ್ತ ತನ್ನದೆ ಒಂದು ಕಲಾ ಸಾಮ್ರಾಜ್ಯವನ್ನು ಸೃಜಿಸಿಬಿಡುತ್ತಿದ್ದ... ಅದರಲ್ಲೂ ರಾತ್ರಿಯೂಟ ಮುಗಿಸಿ, ಬೀದಿಯ ಸುಮಾರು ಜನ ಮನೆ ಮುಂದಿನ ಜಗುಲಿಗಳಲ್ಲಿ ವಿಶ್ರಮಿಸುತ್ತ ಕೂತ ಹೊತ್ತಲಿ, ಎಲ್ಲರಿಗು ಈ ಗಾನವನ್ನು ಆಸ್ವಾದಿಸುವ ಸೌಭಾಗ್ಯ. ಸುಮಾರು ಅರ್ಧ ಗಂಟೆ, ಒಂದು ಗಂಟೆಯ ಬಳಿಕ ಮನತೃಪ್ತಿಯಿಂದ ಕೊಟ್ಟಷ್ಟು ಭಕ್ಷೀಸು ಪಡೆದು ಮುಂದೆ ಸಾಗುತ್ತಿದ್ದ ಆತನ ಮಸುಕು ಚಿತ್ರ ಇಂದಿಗೂ ಕಣ್ಣು ಕಿವಿಯಲ್ಲಿ ಸ್ಪಷ್ಟ. ನಿಮ್ಮ ಕವನ ಓದಿದಾಗ ಮತ್ತೆ ಅವೆಲ್ಲ ನೆನಪಾಯ್ತು. ಅವನ ರಾಗ ಮೀಟಿದ್ದ ಕಂಪನಗಳನ್ನೆ ನಿಮ್ಮ ಕವಿತೆ ಮರುನುಡಿಸಿತ್ತು!

Submitted by H A Patil Fri, 02/06/2015 - 17:19

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ ಬಹಳ ಸಾವಧಾನದಲ್ಲಿ ಓದಿ ಬರೆದಿದ್ದೀರಿ. ಖುಷಿಯಾಯಿತು ನನ್ನ ಬಾಲ್ಯದ ದಿನಗಳಲ್ಲಿ ಈ ಕೊಳಲು ಪೀಪೀ ಮತ್ತು ಬಲೂನು ಮಾರಾಟಗಾರರು, ಬೊಂಬಾಯಿ ಮಿಠಾಯಿ ಐಸ್‍ ಕ್ರೀಮ್ ಮಾರುವವರು ನಮ್ಮಲ್ಲಿ ಬೆರಗು ಹುಟ್ಟಿಸುತ್ತಿದ್ದರು, ಬೆರಗು ತುಂಬಿದ ಬಾಲ್ಯ ನಿಧಾನವಾಗಿ ಸರಿಯುತ್ತಿದ್ದ ಕಾಲ ಎಲ್ಲರೂ ಸಹಜವಾಗಿ ಸರಳವಾಗಿ ಬದುಕುತ್ತಿದ್ದ ಕಾಲವದು, ಈಗಲೂ ಗತ ಕಾಲಕ್ಕೆ ತೆರಳಿದರೆ ನಾನು ಉತ್ಸಾಹದ ಮೂಟೆಯಾಗುತ್ತೇನೆ. ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ ಬೆಳಗಿನ ಜಾವ ಕೊರವರ ಕೇರಿಯಿಂದ ಅವರು ನುಡಿಸುತ್ತಿದ್ದ ಬಜಂತ್ರಿಯವರ ಶಹನಾಯಿ ವಾದನ ಗಾಳಿಯಲ್ಲಿ ತೇಲಿ ಬಂದುನಮ್ಮನ್ನು ಅವ್ಯಕ್ತ ಲೋಕಕ್ಕೆ ನಮ್ಮನ್ನು ಕರೆದೊಯ್ಯುತಿತ್ತು ಅದೊಂದು ಮನಸೂರೆಗೊಳುವ ಅನುಭವ ನಿಮ್ಮಪ್ರತಿಕ್ರಿಯೆ ಅದನ್ನೆ ಲ್ಲನೆನಪಿಸಿತು ಧನ್ಯವಾದಗಳು.