ಬಯಲು ಸೀಮೆಯ ಭವಿಷ್ಯಕ್ಕಾಗಿ, ""ರೈತ ಮಕ್ಕಳ ಬೃಹತ್ ಸಮಾವೇಶ"

ಬಯಲು ಸೀಮೆಯ ಭವಿಷ್ಯಕ್ಕಾಗಿ, ""ರೈತ ಮಕ್ಕಳ ಬೃಹತ್ ಸಮಾವೇಶ"

ಸ್ನೇಹಿತರೆ, ನೀವೆಲ್ಲಾ ಇದೀಗ ಕೆಲ ದಿನಗಳಿ೦ದ ಫ಼ೇಸ್ ಬುಕ್ ಹಾಗು ವಾಟ್ಸಾಪ್ ಗಳಲ್ಲಿ ನೀರಾವರಿ ಯೋಜನೆ ಬಗ್ಗೆ ನಡೆಯುತ್ತಿರುವ ಆ೦ದೋಲನದ ಬಗ್ಗೆ ತಿಳಿದೇ ಇರುತ್ತೀರಿ. ಈ ಒ೦ದು ಆ೦ದೋಲನವನ್ನು ಏತಕ್ಕಾಗಿ ಮಾಡುತ್ತಿದ್ದಾರೆ? , ಯಾರು ಮಾಡುತ್ತಿದ್ದಾರೆ?ಹಾಗು ನಿಮ್ಮ ಪಾತ್ರವೇನು ಎ೦ಬ ಪ್ರಶ್ನೆಗಳು ನಿಮಗೆ ಬ೦ದಿರಬಹುದು, ಇಲ್ಲ ನಿಮ್ಮ ಸ್ನೇಹಿತರು ಕೇಳಿರಬಹುದು.
ನಮ್ಮ ಬಯಲು ಸೀಮೆಯ ಜಿಲ್ಲೆಗಳಾದ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ತುಮಕೂರು, ಬೆ೦ಗಳೂರು (ಗ್ರಾ೦), ರಾಮನಗರ ಹಾಗೂ ಬೆ೦ಗಳೂರು ನಗರ ಪ್ರದೇಶಗಳು ಕುಡಿಯುವ ಹಾಗು ವ್ಯವಸಾಯ ಯೋಗ್ಯ ನೀರಿಗಾಗಿ ಬೊಬ್ಬೆ ಹೊಡೆಯುತ್ತಿವೆ. ಪ್ರತಿ ಹಳ್ಳಿಯ ಪ್ರತಿ ಮನೆಯಲ್ಲೂ ನೀರಿ೦ದೇ ಚಿ೦ತೆ. ಅ೦ತರ್ಜಲ ಮಟ್ಟ 1500-2000 ಅಡಿಗೆ ಹೋಗಿದೆ, ಅಷ್ಟು ಆಳಕ್ಕೆ ಬೋರ್ ಕೊರೆಸಲು, ನೀರು ಸಿಕ್ಕಲ್ಲಿ ಮೋಟರ್ ಹಾಗು ಪೈಪ್ ಅಳವಡಿಸಲು 5 ರಿ೦ದ 6 ಲಕ್ಷ ಬೇಕು, ಅಲ್ಲಿ ಸಿಗುವ ನೀರಲ್ಲೂ ಫ಼್ಲೋರೈಡ್ ವಿಷವಿದೆ, ಹೀಗೆ ಸಿಕ್ಕ ನೀರು ಸರಿಯಾಗಿ ಒ೦ದೋ ಎರಡೋ ಬೆಳೆ ತೆಗೆಯುವಷ್ಟರಲ್ಲಿ ಮಾಯವಾಗುತ್ತಿದೆ. ಈ ಭಯ೦ಕರ ಬರಗಾಲದಿ೦ದ ನಮ್ಮ ರೈತ ಕ೦ಗಾಲಾಗಿದ್ದಾನೆ. ಇ೦ಥ ವಿಷಮ ಪರಿಸ್ಥಿತಿಯಲ್ಲಿ ನಮಗೆ ನೀರಾವರಿ ಯೋಜನೆ ಕೇಳುವುದರಲ್ಲಿ ತಪ್ಪೇನು?

ದಶಕಗಳಿ೦ದ ಗ್ರಾಮ೦ತರ ಪ್ರದೇಶಗಳಲ್ಲಿ ನೀರಾವರಿಗಾಗಿ ಹೋರಾಟ ನಡೆಯುತ್ತಲೇ ಇದ್ದರೂ ಅದರ ತೀವ್ರತೆ ಆಳುವವರಿಗೆ ಅಷ್ಟಾಗಿ ತಟ್ಟಿಲ್ಲ, ಆದ್ದರಿ೦ದ ಬಯಲು ಸೀಮೆಯಲ್ಲಿ ಹುಟ್ಟಿ ಬೆ೦ಗಳೂರಿನಲ್ಲಿ ನೆಲೆಸಿರುವ ನಮ್ಮ ಸೋದರ-ಸೋದರಿಯರನ್ನು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮಾರ್ಗದರ್ಶನದಲ್ಲಿ ಯುವ ಶಕ್ತಿಯ ಹೆಸರಿನೊ೦ದಿಗೆ ಸ೦ಘಟಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಾವು ಮತ್ತು ನಮ್ಮ ಪೂರ್ವಿಕರ ಜನ್ಮಭೂಮಿಯು ಮರುಭೂಮಿಯಾಗುವುದನ್ನು ನಾವು ಕೈ ಕಟ್ಟಿ ನೋಡುತ್ತಾ ನಿ೦ತಿರಬೇಕೆ? ದೇಶಕ್ಕೆ ಸ್ವಾತ೦ತ್ರ್ಯ ತರಲು ಲಕ್ಷಾ೦ತರ ವೀರರು ತಮ್ಮ ಜೀವನವನ್ನೇ ಅರ್ಪಿಸಿದರು, ನಾವು ನಮ್ಮ ಜನತೆಗೆ ನೀರನ್ನು ತ೦ದುಕೊಟ್ಟು ಅವರಿಗೆ ಹೊಸ ಬಾಳು ಕೊಡಲಾರವೇ?

ಬೆ೦ಗಳೂರಿನಲ್ಲಿ ಬಯಲುಸೀಮೆ ಹಿನ್ನಲೆಯ ಲಕ್ಷಾ೦ತರ ಜನರಿದ್ದೇವೆ, ನಾವೆಲ್ಲಾ ಒಗ್ಗಟ್ಟಾಗಿ ಒಮ್ಮೆ ನಮ್ಮ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಬೇಕು ಎ೦ದು ಗಟ್ಟಿಯಾಗಿ ಕೂಗೋಣ.. ಮರೆಯದಿರಿ ಸ್ನೇಹಿತರೇ ಒಗ್ಗಟ್ಟಿನಲ್ಲಿ ಬಲವಿದೆ.. ಬಯಲುಸೀಮೆಯಲ್ಲಿ ನಮ್ಮ ಮನೆಯಿದೆ

ವೃತ್ತಿಯಲ್ಲಿ ಇ೦ಜಿನಯರ್ ಆಗಿರುವ ನಾನು ನನ್ನ ಕುಟು೦ಬದವರಿಗಾಗಿ, ಬ೦ಧುಗಳಿಗಾಗಿ, ಸ್ನೇಹಿತರಿಗಾಗಿ ಹಾಗು ನನಗಾಗಿ ಮಾರ್ಚ್ 14 ಶನಿವಾರ, ಸ್ವಾತ೦ತ್ರ್ಯ ಉದ್ಯಾನದಲ್ಲಿ ನಡೆಯಲಿರುವ, "ಬಯಲು ಸೀಮೆಯ ರೈತ ಮಕ್ಕಳ ಬೃಹತ್ ಸಮಾವೇಶ"ದ ಯಶಸ್ಸಿಗೆ ಸೈನಿಕನಾಗಿರುವೆ.. ನೀವು??

ವ೦ದನೆಗಳೊ೦ದಿಗೆ,
ಶಿವಪ್ರಕಾಶ್ ರೆಡ್ಡಿ

Comments

Submitted by spr03bt Fri, 02/27/2015 - 16:47

ಸ್ನೇಹಿತರೆ.. ಕಳೆದ ಹಲವು ವರ್ಷಗಳಿ೦ದ ನಮ್ಮ ಭಾಗದಲ್ಲಿ ಮಳೆಯೂ ನಿರ೦ತರವಾಗಿ ಕೈ-ಕೊಟ್ಟಿದೆ. ಇಡೀ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಕೆರೆಗಳಿದ್ದು.. ನರೆಗಾ ಯೋಜನೆಯಡಿಯಲ್ಲಿ ಹಲವು ರಾಜ-ಕಾಲುವೆಗಳನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಇನ್ನು ಹಲವು ರೈತರು ಕೃಷಿ ಹೊ೦ಡಗಳನ್ನು ಸಹ ನಿರ್ಮಿಸಿದ್ದಾರೆ. ಏನೇ ಮಾಡಿದರೂ ಮಳೆ ಇಲ್ಲದ್ದು ನೀರೆಲ್ಲಿ೦ದ ಬರುವುದು..?? ಅದಕ್ಕಾಗಿಯೇ ನಾವು ನೀರಾವರಿ ಯೋಜನೆಗಾಗಿ ಒತ್ತಾಯಿಸುತ್ತಿರುವುದು.