ಅನ್ವೇಷಣೆ ಕೊನೆಯ ಭಾಗ

ಅನ್ವೇಷಣೆ ಕೊನೆಯ ಭಾಗ

ಅರ್ಜುನ್ ಮೊದಲು ಈ ಪೇಪರ್ ಹೆಡ್ಲೈನ್ಸ್ ಓದಿ.

ಸರ್.... ಇದ್ಯಾವುದು ೨೫ ವರ್ಷ ಹಿಂದಿನ ಪೇಪರ್ ಕೊಡುತ್ತಿದ್ದೀರ... ಸರಿ.... ಪ್ರಖ್ಯಾತ ಉದ್ಯಮಿ ವೀರಾಸ್ವಾಮಿ ಮೊದಲಿಯಾರ್ ನಿಗೂಢ ಸಾವು.... ಯಾರು ಸರ್ ಇದು ವೀರಾಸ್ವಾಮಿ ಮೊದಲಿಯಾರ್? ಇದಕ್ಕೂ ಸೆಲ್ವಂಗು ಏನು ಸಂಬಂಧ? ಇದಕ್ಕೂ ನಮ್ಮ ಕೇಸಿಗೂ ಏನು ಸಂಬಂಧ?

ಅರ್ಜುನ್.... ಈ ವೀರಾಸ್ವಾಮಿ ಮೊದಲಿಯಾರ್ ಬೇರೆ ಯಾರೂ ಅಲ್ಲ... ಒಂದು ಕಾಲದಲ್ಲಿ ತಮಿಳುನಾಡಿನ ಪ್ರಸ್ತಿದ್ಧ VM Groups ನ ಸಂಸ್ಥಾಪಕ. ಆತನ ಆಸ್ತಿ ಸುಮಾರು ೫೦೦ ಕೋಟಿಗಳಷ್ಟು. ಆತ ಬರೀ ತಮಿಳುನಾಡಿನಲ್ಲಿ ಅಷ್ಟೇ ಅಲ್ಲದೆ, ವಿದೇಶಗಳಲ್ಲೂ ತನ್ನ ಕಂಪನಿಗಳನ್ನು ಹೊಂದಿದ್ದ. ಅಂಥಹ ವ್ಯಕ್ತಿ ಒಂದು ದಿನ ಇದ್ದಕ್ಕಿದ್ದಂತೆ ಸತ್ತು ಹೋಗುತ್ತಾನೆ. ಎರಡು ಮೂರು ವರ್ಷ ಅವನ ಸಾವಿನ ತನಿಖೆ ನಡೆದರೂ ಕೊನೆಗೆ ಅದರ ಕಾರಣ ತಿಳಿಯದೆ ಆ ಕೇಸನ್ನು ಮುಚ್ಚಿ ಹಾಕಿಬಿಟ್ಟರು. ಅವನು ಸತ್ತ ವರ್ಷದೊಳಗೇ ಅವನ ಹೆಂಡತಿಯೂ ಅದೇ ರೀತಿ ನಿಗೂಢವಾಗಿ ಸಾವನ್ನಪ್ಪಿದಳು. ಆ ಕೇಸ್ ಸಹ ಹೆಚ್ಚು ದಿನ ನಿಲ್ಲಲಿಲ್ಲ.

ಸರ್.... ಆದರೆ ಅದಕ್ಕೂ ಇದಕ್ಕೂ ಏನು ಸಂಬಂಧ?

ಇದೆ ಅರ್ಜುನ್.... ಈ ಸೆಲ್ವಂ ಬೇರೆ ಯಾರೂ ಅಲ್ಲ ವೀರಾಸ್ವಾಮಿ ಮೊದಲಿಯಾರ್ ಅವರ ಸ್ವಂತ ತಮ್ಮ.... ಈಗ ನಿಮಗೆ ಊಹೆ ಮಾಡಲು ಸುಲಭ ಆಗುತ್ತದೆ ಅಲ್ಲವೇ.... ಆದರೆ ಇಲ್ಲಿ ನಿಮಗೆ ಇನ್ನೊಂದು ಅನುಮಾನ ಕಾಡುತ್ತದೆ ಅಲ್ಲವೇ.... ಇವರಿಗೂ ಜಾನಕಿಗೂ ಏನು ಸಂಬಂಧ ಎಂದು.... ಜಾನಕಿ ವೀರಾಸ್ವಾಮಿಯ ಏಕೈಕ ಮಗಳು!!

ಸರ್.... ಇದೇನಿದು.... ಹೀಗೆ ಹೇಳುತ್ತಿದ್ದೀರ?

ಹೌದು ಅರ್ಜುನ್.... ಜಾನಕಿ ವೀರಾಸ್ವಾಮಿ ಅವರ ಸ್ವಂತ ಮಗಳು.

ವೀರಾಸ್ವಾಮಿಯವರು ಸೆಲ್ವಂನನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಅಷ್ಟೇ ಅಲ್ಲದೆ ತಮ್ಮ ಪಿತ್ರಾರ್ಜಿತ ಆಸ್ತಿ ಅಷ್ಟನ್ನೂ ಸೆಲ್ವಂ ಹೆಸರಿಗೆ ಬರೆದಿದ್ದರೂ ಸೆಲ್ವಂಗೆ ವೀರಾಸ್ವಾಮಿ ಅವರ ಆಸ್ತಿಯ ಮೇಲೆ ಕಣ್ಣಿತ್ತು. ಹೇಗಾದರೂ ಮಾಡಿ ಅದನ್ನು ಲಪಟಾಯಿಸಲು ಹೊಂಚು ಹಾಕುತ್ತಿದ್ದ. ಸೆಲ್ವಂಗೆ ಮೊದಲಿನಿಂದಲೂ ಕ್ಷುದ್ರ ಶಕ್ತಿಗಳ ಮೇಲೆ ಅಪಾರ ನಂಬಿಕೆ ಇದ್ದು, ಒಮ್ಮೆ ಒಬ್ಬ ಮಾಂತ್ರಿಕನ ಬಳಿ ತನ್ನ ಆಸೆಯನ್ನು ಅವಲತ್ತುಕೊಂಡಾಗ ಅವನು ಹೇಳಿದ ಮಾತು ಸೆಲ್ವಂ ತಲೆಯನ್ನು ಕೆಡಿಸಿತು.

 

ನಿನ್ನ ಅಣ್ಣನಿಗೆ ಹುಟ್ಟುವ ಮಗುವನ್ನು ಸರಿಯಾಗಿ ಇಪ್ಪತ್ತೈದನೇ ವರ್ಷಕ್ಕೆ ಕಾಲಿಟ್ಟ ದಿನ ಬಲಿ ಕೊಟ್ಟರೆ ನಿಮ್ಮ ಅಣ್ಣನ ಇಡೀ ಆಸ್ತಿ ನಿನ್ನ ಸ್ವಂತವಾಗುವುದು. ಹಾಗೊಂದು ವೇಳೆ ಆಗದಿದ್ದರೆ ನೀನು ಏನೇ ಮಾಡಿದರೂ ನಿನಗೆ ನಿಮ್ಮಣ್ಣನ ಆಸ್ತಿ ದೊರೆಯುವುದಿಲ್ಲ ಎಂದು ಹೇಳಿದನು. ಆಗ ವೀರಾಸ್ವಾಮಿ ಅವರ ಹೆಂಡತಿ ಮುತ್ತುಲಕ್ಷ್ಮಿ ಅಮ್ಮಾಳ್ ಒಂಭತ್ತು ತಿಂಗಳ ಬಸುರಿ. ಆದರೆ ಸೆಲ್ವಂ ದುರಾದೃಷ್ಟ ಈ ವಿಷಯ ಹೇಗೋ   ವೀರಾಸ್ವಾಮಿಯರ ಆಪ್ತ ಕಾರ್ಯದರ್ಶಿ ಶ್ರೀನಿವಾಸನ್ ಅವರಿಗೆ ತಿಳಿದು ಹೋಯಿತು. ಅವರು ಕೂಡಲೇ ವೀರಾಸ್ವಾಮಿ ಅವರಿಗೆ ವಿಷಯ ತಿಳಿಸಲು ಹೋದಾಗ ಸೆಲ್ವಂ ಕೈಗೆ ಸಿಕ್ಕಿಬಿಟ್ಟರು.

ಒಂದು ವೇಳೆ ಈ ವಿಷಯ ಏನಾದರೂ ನಮ್ಮಣ್ಣನಿಗೆ ತಿಳಿಸಿದರೆ ನಿನ್ನ ಕುಟುಂಬವನ್ನು ಉಳಿಸುವುದಿಲ್ಲ ಎಂದು ಹೆದರಿಸಿದನು. ಸೆಲ್ವಂ ಬಗ್ಗೆ ಅರಿತಿದ್ದ ಶ್ರೀನಿವಾಸನ್ ಅವರು ವೀರಾಸ್ವಾಮಿ ಅವರಿಗೆ ವಿಷಯವನ್ನು ತಿಳಿಸಲು ಆಗದೆ ಗೊಂದಲದಲ್ಲಿದ್ದರು. ಅಷ್ಟರಲ್ಲೇ ಮುತ್ತುಲಕ್ಷ್ಮಿ ಅಮ್ಮಾಳ್ ಗೆ ಮುದ್ದಾದ ಹೆಣ್ಣು ಮಗು ಜನಿಸಿತು, ಅದಕ್ಕೆ ವೈದೇಹಿ ಎಂದು ನಾಮಕರಣ ಮಾಡಿದರು. ವೈದೇಹಿಯ ಜನನದಿಂದ ಇಡೀ ಮನೆ ಸಂಭ್ರಮದಲ್ಲಿ ಮುಳುಗಿ ಹೋಗಿತ್ತು. ಆದರೆ ಸೆಲ್ವಂ ಮಾತ್ರ ವಿಕೃತ ಆನಂದ ಪಡುತ್ತಿದ್ದ.

ಶ್ರೀನಿವಾಸನ್ ಅವರು ಹೇಗಾದರೂ ಮಗುವನ್ನು ರಕ್ಷಿಸಬೇಕು ಎಂದು ಆಲೋಚಿಸಿ ಒಂದು ದಿನ ಯಾರಿಗೂ ತಿಳಿಯದಂತೆ ಮಗುವನ್ನು ಅಲ್ಲಿಂದ ಎತ್ತಿಕೊಂಡು ಬೆಂಗಳೂರಿಗೆ ಬಂದು ಅನಾಥಾಶ್ರಮದ ಮುಂದೆ ಮಲಗಿಸಿ ಹೊರಟು ಹೋದರು. ಇದ್ದಕ್ಕಿದ್ದಂತೆ ಮಗು ಕಾಣೆಯಾಗಿದ್ದರಿಂದ ವೀರಾಸ್ವಾಮಿ ಮತ್ತು ಮುತ್ತುಲಕ್ಷ್ಮಿ ಅಮ್ಮಾಳ್ ರೋದನೆಯಲ್ಲಿ ಮುಳುಗಿದರು. ಎಲ್ಲ ಕಡೆ ಮಗುವನ್ನು ಹುಡುಕಿಸಿದರೂ ಯಾವುದೇ ಮಾಹಿತಿ ದೊರೆಯಲಿಲ್ಲ. ವೈದೇಹಿ ಹುಟ್ಟುವಾಗ ಮುತ್ತುಲಕ್ಷ್ಮಿ ಅವರ ಗರ್ಭದಲ್ಲಿ ತೊಂದರೆ ಆಗಿದ್ದರಿಂದ ಮುಂದೆ ಅವರಿಗೆ ಮಕ್ಕಳು ಆಗುವುದಿಲ್ಲ ಎಂದು ಡಾಕ್ಟರ್ ಹೇಳಿದ್ದರಿಂದ ಈಗ ಅವರ ಕುಟುಂಬದ ಮೇಲೆ ಕತ್ತಲು ಆವರಿಸಿತ್ತು.

ಒಂದು ಕಡೆ ವೀರಾಸ್ವಾಮಿ ಅವರ ಕುಟುಂಬ ರೋದನೆಯಲ್ಲಿ ಮುಳುಗಿದ್ದರೆ, ಇತ್ತ ಸೆಲ್ವಂ ಕ್ರುದ್ಧನಾಗಿದ್ದ....ಮಗು ಕಳುವಾಗಿದ್ದರಲ್ಲಿ ಖಂಡಿತ ಶ್ರೀನಿವಾಸನ್ ಕೈವಾಡ ಇರುತ್ತದೆ ಎಂದೆನಿಸಿ ಶ್ರೀನಿವಾಸನ್ ನನ್ನು ಅಪಹರಿಸಿ ನಿಜ ಹೇಳದಿದ್ದರೆ ಕೊಂದುಬಿಡುತ್ತೇನೆ ಎಂದಾಗ, ಶ್ರೀನಿವಾಸನ್ ಸೆಲ್ವಂ ಬೆದರಿಕೆಗೆ ಕೇರ್ ಮಾಡದಿದ್ದಾಗ ಅವರನ್ನು ಮುಗಿಸಿ ಬಿಟ್ಟಿದ್ದಾನೆ. ನಂತರ ಹೇಗಾದರೂ ಮಾಡಿ ಮಗುವನ್ನು ಹುಡುಕಿ ೨೫ ವರ್ಷದವರೆಗೆ ಕಾಪಾಡಬೇಕು.... ಇಲ್ಲದಿದ್ದರೆ ಆಸ್ತಿ ತನಗೆ ದಕ್ಕುವುದಿಲ್ಲ ಎಂದು ಮಗುವಿನ ತಾಣ ಪತ್ತೆ ಮಾಡಲು ಮಾಂತ್ರಿಕನ ಮೊರೆ ಹೋದಾಗ ಮಗು ಬೆಂಗಳೂರಿನಲ್ಲಿ ಇದೆ ಎಂದು ಹೇಳಿದ್ದಾನೆ.... ಆದರೆ ಎಲ್ಲಿ ಎಂದು ನಿಖರವಾಗಿ ಹೇಳಲು ಸಾಧ್ಯವಾಗಲಿಲ್ಲ.

ಇದೇ ಸಂದರ್ಭದಲ್ಲಿ ಇನ್ನು ಮುಂದೆ ತನಗೆ ಮಕ್ಕಳಾಗುವುದಿಲ್ಲ ಎಂದು ಭಾವುಕರಾಗಿದ್ದ ವೀರಾಸ್ವಾಮಿ ಅವರು ತಮ್ಮ ಯಾವದಾಸ್ತಿಯನ್ನು ಮದರ್ ತೆರೇಸಾ ಫೌಂಡೇಶನ್ ಗೆ ಬರೆಯಲು ನಿರ್ಧರಿಸಿ ಈ ವಿಷಯವನ್ನು ಸೆಲ್ವಂಗೆ ತಿಳಿಸಿದ್ದಾರೆ. ಇದರಿಂದ ಕುಪಿತನಾದ ಸೆಲ್ವಂ ಹೊರಗಡೆ ಅದನ್ನು ತೋರಿಸದೆ ಸರಿ ಎಂದು ಒಪ್ಪಿಗೆ ಸೂಚಿಸಿ ಲಾಯರ್ ಆಫೀಸಿಗೆ ಹೋಗಬೇಕಾದರೆ ವೀರಾಸ್ವಾಮಿಯವರನ್ನು ಯಾರಿಗೂ ಅನುಮಾನ ಬರದ ಹಾಗೆ ಕೊಂದು ಅವರ ಶವವನ್ನು ಸಮುದ್ರದ ದಂಡೆಯಲ್ಲಿ ಹಾಕಿಬಿಟ್ಟ. ನಂತರ ತಾನೇ ಪೋಲಿಸ್ ಸ್ಟೇಷನ್ ನಲ್ಲಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಾನೆ. ಕೆಲವು ದಿನ ಕೇಸ್ ನಡೆದರೂ ಸರಿಯಾದ ಸಾಕ್ಷಿ ಪುರಾವೆಗಳಿಲ್ಲದೆ ಕೇಸ್ ಮುಚ್ಚಿ ಹೋಯಿತು. ಅತ್ತ ಮಗುವನ್ನು ಕಳೆದುಕೊಂಡು ಇತ್ತ ಗಂಡನನ್ನೂ ಕಳೆದುಕೊಂಡ ಮುತ್ತುಲಕ್ಷ್ಮಿ ಅಮ್ಮಾಳ್ ದಿನೇ ದಿನೇ ಕುಗ್ಗಿ ಹೋದರು. ಸಾಯುವ ಮುನ್ನ ತನ್ನ ಗಂಡನ ಆಸೆಯಂತೆ ಆಸ್ತಿಯನ್ನು ಮದರ್ ತೆರೇಸಾ ಫೌಂಡೇಶನ್ ಗೆ ವರ್ಗಾಯಿಸಬೇಕೆಂದು ಸೆಲ್ವಂ ಬಳಿ ವಿಷಯ ತಿಳಿಸಿದ್ದಾರೆ. ಎರಡು ಕೊಲೆ ಮಾಡಿದ್ದ ಸೆಲ್ವಂಗೆ ಮೂರನೆಯದ್ದು ಬಹಳ ಸುಲಭವಾಗಿತ್ತು.

ಇನ್ನೇನು ಯಾರೂ ಇಲ್ಲ, ಈಗ ವೈದೇಹಿ ಬರುವವರೆಗೂ ನಾನೇಕೆ ಕಾಯಬೇಕು, ಇಡೀ ಆಸ್ತಿಯನ್ನು ತಾನೊಬ್ಬನೇ ಅನುಭವಿಸಬಹುದು ಎಂದುಕೊಳ್ಳುತ್ತಿದ್ದ ಸೆಲ್ವಂಗೆ ಒಂದು ಆಘಾತ ಕಾದಿತ್ತು. ವೀರಾಸ್ವಾಮಿ ಅವರು ಯಾರಿಗೂ ತಿಳಿಯದಂತೆ ವಿಲ್ ಮಾಡಿದ್ದರು...!! ಆ ವಿಲ್ಲಿನ ಪ್ರಕಾರ ಒಂದು ವೇಳೆ ವೀರಾಸ್ವಾಮಿ ಮತ್ತು ಮುತ್ತುಲಕ್ಷ್ಮಿಗೆ ಏನಾದರೂ ಅಕಾಲ ಮೃತ್ಯು ಸಂಭವಿಸಿ ಆ ಸಂದರ್ಭದಲ್ಲಿ ವೈದೇಹಿಗಿನ್ನೂ ೧೮ ವರ್ಷ ಆಗಿರದಿದ್ದರೆ ಆಗ ಸಮಸ್ತ ಆಸ್ತಿ ಮತ್ತು ಜಾನಕಿಯ ಜವಾಬ್ದಾರಿ VM Groupನ ಡೈರೆಕ್ಟರ್ ತಿರುನಾರಾಯಣ ಐಯ್ಯಂಗಾರ್ ಅವರದ್ದಾಗಿರುತ್ತದೆ. ವೈದೇಹಿಗೆ ೧೮ ವರ್ಷ ಆದ ಮೇಲೆ ಇಡೀ ಆಸ್ತಿಯ ಹಕ್ಕು ಮತ್ತು ಜವಾಬ್ದಾರಿ ಜಾನಕಿಗೆ ಸೇರಿದ್ದು ಎಂದು ಬರೆದಿದ್ದನ್ನು ತಿರುನಾರಾಯಣ ಐಯ್ಯಂಗಾರ್ ಲಾಯರ್ ಸಮೇತ ಬಂದು ಸೆಲ್ವಂಗೆ ತೋರಿಸಿದ್ದರಿಂದ, ಸೆಲ್ವಂ ಏನೂ ಮಾಡುವ ಹಾಗಿರಲಿಲ್ಲ... ಆಗ ಸೆಲ್ವಂಗೆ ಮಾಂತ್ರಿಕ ಹೇಳಿದ ಮಾತು ನೆನಪಿಗೆ ಬಂತು. ಆ ಬಲಿ ಆಗುವವರೆಗೂ ನೀನು ಏನೇ ಮಾಡಿದರೂ ಆಸ್ತಿ ನಿನಗೆ ದಕ್ಕುವುದಿಲ್ಲ.....

ಈಗ ಸೆಲ್ವಂಗೆ ವೈದೇಹಿಯನ್ನು ಹುಡುಕದೆ ಬೇರೆ ದಾರಿ ಇರಲಿಲ್ಲ. ಆದರೆ ಬೆಂಗಳೂರಿನಲ್ಲಿ ಅದೂ ಅಷ್ಟು ಚಿಕ್ಕ ಮಗುವನ್ನು ಹೇಗೆಂದು ಹುಡುಕುವುದು?

ಹೇಗಾದರೂ ಮಾಡಿ ಮಗುವನ್ನು ಪತ್ತೆ ಹಚ್ಚಬೇಕು ಎಂದುಕೊಂಡು ಶ್ರೀನಿವಾಸನ್ ಅವರ ಮನೆಗೆ ಬಂದು ಮಗುವಿನ ಬಗ್ಗೆ ನಿಮಗೆ ತಿಳಿದಿರುವ ಮಾಹಿತಿ ತಿಳಿಸಿ, ಇಲ್ಲದಿದ್ದರೆ ನಿಮ್ಮನ್ನು ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಗಂಡನನ್ನು ಕಳೆದುಕೊಂಡಿದ್ದ ಶ್ರೀನಿವಾಸನ್ ಅವರ ಪತ್ನಿ ಇದ್ದ ಒಬ್ಬ ಮಗಳನ್ನೂ ಕಳೆದುಕೊಳ್ಳಲು ಇಷ್ಟವಿಲ್ಲದೆ, ಮಗುವನ್ನು ಬೆಂಗಳೂರಿನ ಒಂದು ಅನಾಥಾಶ್ರಮದಲ್ಲಿ ಬಿಡುವುದಾಗಿ ಹೇಳಿದ್ದರು, ಆದರೆ ಯಾವ ಅನಾಥಾಶ್ರಮ ಎಂದು ಗೊತ್ತಿರಲಿಲ್ಲ ಎಂದು ಹೇಳಿದರು.

ಆ ಮಾಹಿತಿಯನ್ನು ಹಿಡಿದುಕೊಂಡು ಬೆಂಗಳೂರಿಗೆ ಹೊರಟ ಸೆಲ್ವಂ ಮಾರ್ಗಮಧ್ಯದಲ್ಲಿ ನಡೆದ ಒಂದು ಆಕ್ಸಿಡೆಂಟ್ ನಲ್ಲಿ ತನ್ನ ಬೆನ್ನ ಮೂಳೆ ಮುರಿದುಕೊಂಡು ಸುಮಾರು ಏಳು ವರ್ಷ ಹಾಸಿಗೆ ಹಿಡಿದುಬಿಟ್ಟ. ಅದರಿಂದ ಸುಧಾರಿಸಿಕೊಂಡ ವರ್ಷದಲ್ಲೇ ಮತ್ತೊಂದು ಬಾರಿ ಆಕ್ಸಿಡೆಂಟ್ ಆಗಿ ಮತ್ತೆ ಹತ್ತು ವರ್ಷ ಅಲುಗಾಡದ ಹಾಗೆ ಆಗಿಬಿಟ್ಟ. ಅಷ್ಟಾದರೂ ಅವನಿಗೆ ಆಸ್ತಿಯ ಹುಚ್ಚು ಹೋಗಲಿಲ್ಲ. ಆ ಆಕ್ಸಿಡೆಂಟ್ ನಿಂದ ಸುಧಾರಿಸಿಕೊಂಡ ನಂತರ ಬೆಂಗಳೂರಿನ ಅನಾಥಾಶ್ರಮಗಳನ್ನು ಹುಡುಕಲು ಶುರುಮಾಡಿದ. ಎಲ್ಲೂ ಅವನಿಗೆ ಬೇಕಾದ ಮಾಹಿತಿ ಸಿಗಲಿಲ್ಲ. ಕಡೆಯದಾಗಿ ವೀಣಾದೇವಿ ಆಶ್ರಮಕ್ಕೆ ಹೋದ, ಅಲ್ಲಿ ಅವನಿಗೆ ಮತ್ತೊಂದು ಅಚ್ಚರಿ ಕಾದಿತ್ತು. ಒಂದೇ ದಿನಾಂಕದಲ್ಲಿ ಇಬ್ಬರು ಮಕ್ಕಳುಗಳು ಆಶ್ರಮ ಸೇರಿದ್ದು.... ಮತ್ತು ಇಬ್ಬರೂ ಈಗ ಆಶ್ರಮದಲ್ಲಿ ಇಲ್ಲದಿರುವುದು....

ವೈದೇಹಿಯನ್ನು ಕಂಡು ಹಿಡಿಯಲು ಸೆಲ್ವಂ ಬಳಿ ಇದ್ದದ್ದು ಒಂದೇ ಒಂದು ಆಧಾರವೆಂದರೆ, ವೈದೇಹಿ  ಬೆನ್ನ ಮೇಲೆ ರುಪಾಯಿ ಗಾತ್ರದ ಕಪ್ಪು ಮಚ್ಚೆ ಇದ್ದದ್ದು....ಆದರೆ ಹೇಗೆ ತಿಳಿದುಕೊಳ್ಳುವುದು?? ಆಗಲೇ ಅವನೊಂದು ಮಾಸ್ಟರ್ ಪ್ಲಾನ್ ಮಾಡಿದ. ಹೇಗಿದ್ದರೂ ತನಗೆ ಮುಂಚೆಯೇ ಕ್ಷುದ್ರ ಶಕ್ತಿಗಳು ತಿಳಿದಿದ್ದರಿಂದ ತನಗೆ ಬೇಕಾದವರ ಬಳಿ ಹೇಳಿ ಇಬ್ಬರ ಮೇಲೂ ಪ್ರಭಾವ ಬೀರುವಂತೆ ಮಾಟ ಮಾಡಿಸಿದ. ಯಾವಾಗ ಇಬ್ಬರೂ ಆಸ್ಪತ್ರೆಗೆ ಸೇರಿದರೋ ಅಲ್ಲಿನ ನರ್ಸ್ ಗಳಿಗೆ ಹಣದ ಆಸೆ ತೋರಿಸಿ ಮಚ್ಚೆ ಇರುವುದು ಜಾನಕಿ ಮೇಲೆ ಅವಳೇ ವೈದೇಹಿ ಎಂದು ಖಚಿತ ಪಡಿಸಿಕೊಂಡ. ನಂತರ ಅವಳನ್ನು ಅಪಹರಿಸಲು ಸರಿಯಾದ ಸಮಯಕ್ಕೆ ಕಾಯುತ್ತಿದ್ದ.... ನಿಮ್ಮ ಮದುವೆಯ ಹಿಂದಿನ ದಿನ ಅವಳು ಒಬ್ಬಳೇ ಆಚೆ ಬಂದಾಗ ಅಪಹರಿಸಿಬಿಟ್ಟ. ಆದರೆ ಅವಳಿಗೆ ಇಪ್ಪತ್ತೈದು ವರ್ಷ ಪೂರ್ತಿಯಾಗಲು ಇನ್ನೂ ಸಮಯ ಇದ್ದಿದ್ದರಿಂದ ಅವಳನ್ನು ಅಲ್ಲಿ ಬಚ್ಚಿಟ್ಟಿದ್ದ.

ಇಲ್ಲಿ ಯಾರಿಗೂ ಅನುಮಾನ ಬರಬಾರದೆಂದು ಯಾರನ್ನೋ ಕೊಲ್ಲಿಸಿ ಅವಳಿಗೆ ಜಾನಕಿಯ ಬಟ್ಟೆಯನ್ನು ಹಾಕಿದ್ದ. ಹಾಗೆಯೇ ಅವಳ ಶವ ಪರೀಕ್ಷೆ ಮಾಡಿದ ಡಾಕ್ಟರ್ ನನ್ನು ಅವನು ಸರಿಮಾಡಿಕೊಂಡು DNA ಪರೀಕ್ಷೆಯಲ್ಲಿ ಆ ಶವ ಜಾನಕಿಯದ್ದೇ ಎಂದು ರಿಪೋರ್ಟ್ ಕೊಡುವ ಹಾಗೆ ಮಾಡಿದ್ದಾನೆ. ಇನ್ನೇನು ಎಲ್ಲಾ ಸಮಸ್ಯೆ ಬಗೆಹರಿಯಿತು ಎಂದುಕೊಳ್ಳುವಷ್ಟರಲ್ಲಿ ನಾವು ಕೇಸಿನ ವಿಚಾರಣೆಯಲ್ಲಿ ವೇಗ ಪಡೆದುಕೊಂಡದ್ದನ್ನು ಗಮನಿಸಿ ನಿನ್ನನ್ನು ಕೊಲ್ಲಲು ನಿನ್ನ ಮೇಲೆ ಗುಂಡು ಹಾರಿಸಿದ ಆದರೆ ಆ ಯತ್ನ ವಿಫಲವಾಯಿತು. ಅದಾದ ನಂತರ ನಿನ್ನನ್ನು ಕೊಲ್ಲುವ ಯೋಚನೆ ಬಿಟ್ಟು ಬಿಟ್ಟ.

ನಂತರದ್ದೆಲ್ಲಾ ನಿಮಗೆ ತಿಳಿದೇ ಇದೆ ಅರ್ಜುನ್. ಈಗ ಅವನ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದೇವೆ. ನಾಳೆ ಕೋರ್ಟ್ಗೆ ಹಾಜರು ಪಡಿಸುತ್ತಿದ್ದೇವೆ, ಸಾಕ್ಷಿಗೆ ನೀವು ಮತ್ತು ನಿಮ್ಮ ಕುಟುಂಬದವರು ಮತ್ತು ವೀಣಾದೇವಿ ಹಾಗೆ ಮಾಧುರಿ ಅವರು ಬರಬೇಕಾಗುತ್ತದೆ. ಅರ್ಜುನ್... ಇನ್ನೇನು ನಾಳೆ ಅವನಿಗೆ ಕೋರ್ಟಿನಲ್ಲಿ ಮರಣ ದಂಡನೆ ಇಲ್ಲವಾದರೆ ಜೀವಾವಧಿ ಶಿಕ್ಷೆ ಆಗುತ್ತದೆ. ಇನ್ನು ಮುಂದಿನ ಕೆಲಸ ನಿಮಗೆ ಬಿಟ್ಟಿದ್ದು... ಅಂದರೆ VM Group ನ ಉಸ್ತುವಾರಿಯನ್ನು ತೆಗೆದುಕೊಳ್ಳುವುದು...

ಸರ್.... ಸೆಲ್ವಂ ಕಥೆ ಯಾವುದೋ ಫಿಲಂ ನೋಡಿದಂತೆ ಆಯಿತು....ಸರ್, ನಾನು ಒಮ್ಮೆ ಮನೆಯವರ ಬಳಿ ಮತ್ತು ಜಾನಕಿಯ ಜೊತೆ ಮಾತನಾಡಿ ಮುಂದಿನ ವಿಷಯವನ್ನು ನಿಮಗೆ ತಿಳಿಸುತ್ತೇನೆ.

ಅರ್ಜುನ್ ನಾನು ಈಗಾಗಲೇ ತಿರುನಾರಾಯಣ ಐಯ್ಯಂಗಾರ್ ಅವರ ಬಳಿ ಮಾತನಾಡಿದ್ದೇನೆ...ನಾಳೆ ಕೋರ್ಟ್ಗೆ ಅವರೂ ಬರುತ್ತಿದ್ದಾರೆ. ನಂತರ ಮುಂದಿನ ವಿಷಯಗಳನ್ನು ಅವರೇ ನಿಮಗೆ ತಿಳಿಸುತ್ತಾರೆ.

ಸರ್ ಈ ಕೇಸಿನ ವಿಚಾರದಲ್ಲಿ ನಿಮ್ಮ ಸಹಾಯ ನಾನು ಜನ್ಮ ಜನ್ಮದಲ್ಲಿ ಮರೆಯುವುದಿಲ್ಲ. ಈ ಕೂಡಲೇ ಈ ವಿಷಯಗಳನ್ನು ಜಾನಕಿಗೆ ತಿಳಿಸಬೇಕು. ಸರಿ ಸರ್ ನಾನಿನ್ನು ಬರುತ್ತೇನೆ ಎಂದು ಅಲ್ಲಿಂದ ಹೊರಟು ಮನೆಗೆ ಬಂದು ಜಾನಕಿಗೆ ಮತ್ತು ಮನೆಯವರಿಗೆ ವಿಷಯ ತಿಳಿಸಿದಾಗ ಎಲ್ಲರೂ ಆಶ್ಚರ್ಯಚಕಿತರಾದರು.... ಜಾನಕಿಯಂತೂ ಸಂಪೂರ್ಣ ಗೊಂದಲದಲ್ಲಿದ್ದಳು....

ಮರುದಿನ ಕೋರ್ಟಿನಲ್ಲಿ ಸೆಲ್ವಂಗೆ ಮೂರು ಕೊಲೆಯ ಆರೋಪದ ಮೇಲೆ ಮರಣ ದಂಡನೆ ವಿಧಿಸಿದರು. ಕೋರ್ಟಿನಿಂದ ಆಚೆ ಬಂದು ತಿರುನಾರಾಯಣ ಐಯ್ಯಂಗಾರ್ ಅವರನ್ನು ಭೇಟಿ ಮಾಡಿದಾಗ ಅವರು ಆಸ್ತಿ ಪತ್ರವನ್ನು ಜಾನಕಿಯ ಕೈಗೆ ನೀಡಿದರು. ಜಾನಕಿ ಆ ಪತ್ರವನ್ನು ಒಮ್ಮೆ ಕೈಯಲ್ಲಿ ಹಿಡಿದು ಎಲ್ಲರನ್ನೂ ನೋಡಿ ಮತ್ತೆ ಆ ಪತ್ರವನ್ನು ಅವರ ಕೈಯಲ್ಲೇ ವಾಪಸ್ ಕೊಟ್ಟು, ಸರ್.... ನನಗೆ ಜನ್ಮ ನೀಡಿದ್ದು ಅವರೇ ಆದರೂ ನನ್ನನ್ನು ಸಾಕಿ ಸಲಹಿದ್ದು, ಅಪ್ಪ ಅಮ್ಮ ಆಗಿದ್ದು ಎಲ್ಲಾ ಇವರೇ.... ಈಗ ಸಡನ್ನಾಗಿ ಯಾವುದೋ ಆಸ್ತಿ ಬರುತ್ತದೆ ಎಂದು ಅದಕ್ಕೆ ಆಸೆ ಪಟ್ಟರೆ ನನ್ನಷ್ಟು ಸ್ವಾರ್ಥಿ ಯಾರೂ ಇರುವುದಿಲ್ಲ. ನಮ್ಮ ತಂದೆಯ ಆಸೆಯಂತೆಯೇ ಈ ಸಂಪೂರ್ಣ ಆಸ್ತಿಯನ್ನು ಮದರ್ ತೆರೇಸಾ ಫೌಂಡೇಶನ್ ಗೆ ಕೊಟ್ಟು ಬಿಡಿ ಸರ್. ಹಾಗೆಂದು ನಾನೇ ಬರೆದುಕೊಡುತ್ತೇನೆ...

ಎಲ್ಲರೂ ಜಾನಕಿಯ ಕಡೆ ಹೆಮ್ಮೆಯ ನೋಟ ಬೀರಿ ಅಲ್ಲಿಂದ ಹೊರಟೆವು.

 

 

Rating
No votes yet

Comments

Submitted by kavinagaraj Tue, 03/03/2015 - 14:23

ದೀರ್ಘ ಪತ್ತೇದಾರಿ ಕಾರ್ಯ , ಧಿಡೀರ್ ವಿಚಾರಣೆ ನಡೆದು ಅಪರಾಧಿಗೆ ಶಿಕ್ಷೆಯಾಯಿತಲ್ಲ!! ಆಸ್ತಿ ಹಸ್ತಾಂತರ ಕಥೆಯಲ್ಲಿ ಹೇಳಿದಷ್ಟು ಸರಳವಲ್ಲವೆಂದು ನನ್ನ ಅನಿಸಿಕೆ. ಒಟ್ಟಾರೆಯಾಗಿ ಕುತೂಹಲಭರಿತ ಕಥೆ ಕೊಟ್ಟಿದ್ದಕ್ಕಾಗಿ ಅಭಿನಂದನೆಗಳು, ಜಯಂತರೇ.

Submitted by Jayanth Ramachar Tue, 03/03/2015 - 16:53

In reply to by kavinagaraj

ಕವಿಗಳೇ, ಆಸ್ತಿ ಹಸ್ತಾಂತರ‌ ನೀವು ಹೇಳಿದ‌ ಹಾಗೆ ಸುಲಭವಲ್ಲ‌ :). ಆದರೆ ಅದರ‌ ಮೇಲೆ ಜಾಸ್ತಿ ಗಮನ‌ ಕೊಟ್ಟರೆ ಕಥೆ ಮತ್ತಷ್ಟು ದೀರ್ಘವಾಗುತ್ತಿತ್ತು :). ಕಥೆ ಆರಂಭದಿಂದ‌ ಕೊನೆಯವರೆಗೂ ನನ್ನನ್ನು ನಿರಂತರ‌ ಪ್ರೋತ್ಸಾಹಿಸಿದ್ದಕ್ಕೆ ಅನಂತ‌ ಧನ್ಯವಾದಗಳು.