ಕತೆ : ಕಂಡವರು ಕಣ್ಣಲ್ಲಿ ಕಂಡಂತೆ (ಉತ್ತರಾರ್ದ)

ಕತೆ : ಕಂಡವರು ಕಣ್ಣಲ್ಲಿ ಕಂಡಂತೆ (ಉತ್ತರಾರ್ದ)

ಕತೆ : ಕಂಡವರು ಕಣ್ಣಲ್ಲಿ ಕಂಡಂತೆ (ಉತ್ತರಾರ್ದ)

ಇಲ್ಲಿಯವರೆಗೂ…

ಕಾರಿನ ಹಿಂಬಾಗಕ್ಕೆ ಬಂದೆವು ಮರದ ಕೆಳಗೆ ನಿಂತಿರುವಂತೆ ಆತ ಸಣ್ಣ ದ್ವನಿಯಲ್ಲಿ ಹೇಳಿದ.

’ನೋಡಿ ನೀವು ಕೇಳುತ್ತ ಇದ್ದಿರಲ್ಲ ದೆವ್ವದ ಮನೆ ಕಾಣಿಸುತ್ತಿದೆಯ ?"

ನನ್ನಗೆ ಬೆನ್ನಲ್ಲಿ ಸಣ್ಣಗೆ ಚಳಿ ಹುಟ್ಟಿತು!  

------------------------------------------

 

ಮುಂದೆ ಓದಿ…..

ಅಲ್ಲ ಈಗ ರಸ್ತೆಯ ಪಕ್ಕ ಮೂತ್ರಕ್ಕೆ ಅಂತ ಕಾರು ನಿಲ್ಲಿಸಿ,  ಇದ್ದಕ್ಕಿದ್ದಂತೆ , ದೆವ್ವದ ಮನೆ ನೋಡು ಅಂದರೆ !!

ಕತ್ತಲಲ್ಲಿಯೆ ದೃಷ್ಟಿ ಇಟ್ಟು ನೋಡಿದೆ. ರಸ್ತೆಯ ಒಳಬಾಗಕ್ಕೆ ಇದ್ದ ದೊಡ್ಡ ಮನೆ  ಕೆಂಪು ಹೆಂಚಿನದು. ಮನೆಯ ಮುಂಬಾಗದಲ್ಲಿ ಕಾಂಪೋಡ್ ಇತ್ತು. ಆದರೆ ಮನೆಯ ಒಳಗೆ ಯಾವುದೇ ದೀಪವಾಗಲಿ ಯಾವುದೇ ಚಟುವಟಿಕೆಯಾಗಲಿ ಇಲ್ಲ .

ಕತ್ತಲೆ ಹೊರತುಪಡಿಸಿ ಮತ್ತೇನು ಇಲ್ಲ.

ಆದಾಗ್ಯೂ ಮನದಲ್ಲಿ , ಎದೆಯಲ್ಲಿ ಎಂತದೋ ತಳಮಳ, ಎದೆಯಲ್ಲಿ ಬಡಿತದಲ್ಲಿ ಏರಿಕೆಯಾದ ಅನುಭವ.

’ಈಗ ಒಳಗೆ ಹೋಗಿ ಬರೋಣವೆ?" ಕೇಳಿದೆ.

ನಾವಿಬ್ಬರು ಮೆತ್ತಗೆ ಮಾತನಾಡುತ್ತ  ಇದ್ದುದ್ದರಿಂದ  ಕಾರಿನ ಒಳಗಿದ್ದ ನನ್ನವಳಿಗೆ ಕೇಳಿಸುವ ಸಂಭವವಿರಲಿಲ್ಲ. ಅಲ್ಲದೆ ಕಾರಿನ ಇಂಜಿನ್ ಶಬ್ದ ಬೇರೆ.

 

’ಈಗ? , ಬೇಡ ಈಗ ಮನೆಯ ಒಳಗೆ ಬೇಡ, ನಾಳೆ ನಾವಿಬ್ಬರೆ ಬರೋಣ, ಈಗ ಜೊತೆಗೆ ನಿಮ್ಮವರು ಬೇರೆ ಇದ್ದಾರೆ , ಅಲ್ಲದೆ ಊರಿನವರೆಲ್ಲ, ಮನೆಯೋಳಗೆ ಯಾರು ಹೋಗದಂತೆ ದಿಗ್ಭಂದನ ವಿಧಿಸಿ, ಕಟ್ಟಲೆಮಾಡಿದ್ದಾರೆ, ಯಾರು ಹೋಗಬಾರದು ಎಂದು, ಇನ್ನು ಈ ಸಮಯದಲ್ಲಿ ಹೋದರೆ ಎಲ್ಲರಿಗೂ ಗೊತ್ತಾದರೆ ಊರಲ್ಲಿ ವಿರೋದ ಎದುರಿಸಬೇಕಾಗುತ್ತೆ’

ಆತ ಸಣ್ಣ ದ್ವನಿಯಲ್ಲಿ ಹೇಳಿದರು

ನನಗೂ ಅಂತಹುದೇ ಉತ್ತರ ಬೇಕಿತ್ತು!

ಪತ್ನಿ ಇಲ್ಲಿರುವಾಗ ಸಾಹಸ ಮಾಡುವ ಮನಸ್ಸು ನನಗಿರಲಿಲ್ಲ. ಸರಿ ಎನ್ನುತ್ತ, ಸ್ವಲ್ಪ ಮುಂದೆ ಹೋಗಿ ಮನೆಯನ್ನು ಕತ್ತಲೆಯ ಮುಸುಕುಬೆಳಕಿನಲ್ಲಿ ಕಣ್ಣು ತುಂಬಿಕೊಂಡೆ, ಸಾದಾರಣ ಹಳ್ಳಿಯಲ್ಲಿ ಇರುವಂತ ಮನೆ. ಆದರೆ ವೆಂಕಟಾದ್ರಿಯವರು ಹೇಳಿದ ವಿಷಯದ  ಹಿನ್ನಲೆಯಲ್ಲಿ ಮನೆ ನಿಗೂಡವಾಗಿ ಕಾಣಿಸುತ್ತಿತ್ತು.

ಮತ್ತೆ ಕಾರಿನಲ್ಲಿ ಬಂದು ಕುಳಿತೆವು ಕಾರು ಮುಂದೆ ಓಡಿತು. ಅಗೋ ಇಗೋ ಅನ್ನುವದರಲ್ಲಿ ಆತನ ಮನೆ ಬಂದೆ ಬಿಟ್ಟಿತು.

ಮನೆಯ ಗೇಟಿನ ಹತ್ತಿರ ನಿಂತು ಹಾರ್ನ್ ಮಾಡಿದರು ಆತ. ಒಳಗಿನಿಂದ ಆತನ ಪತ್ನಿ ಬಂದು ಹೊರಬಾಗಿಲು ತೆರೆದು,

ಗೇಟ್ ತೆಗೆಯುತ್ತ

’ಎಷ್ಟು ಹೊತ್ತಿಗೆ ರೀ ಬರೋದು, ನಿಮಗೆ ಸಾಗರಕ್ಕೆ ಹೋದರೆ ಇಲ್ಲಿಯದು ಮರೆತೇ ಹೋಗುತ್ತೆ….. ’

ಎನ್ನುತ್ತ ಮುಂದೆ ಏನೊ ಅನ್ನಲು ಹೋದವರು, ಕಾರಿನಲ್ಲಿ ನಾವಿಬ್ಬರು ಇರುವದನ್ನು ನೋಡಿ ಮಾತು ನಿಲ್ಲಿಸಿದರು. ಕಾರು ಮನೆಯ ಕಾಂಪೋಂಡ್ ಆವರಣದಲ್ಲಿ ಪ್ರವೇಶಿಸಿತು. ಮನೆಯ ಮುಂದೆ ಕಾಂಪೋಂಡ್ ಒಳಗೆ ಸಾಕಷ್ಟು ಜಾಗವಿದ್ದು ಗಿಡ ಮರಗಳನ್ನು ಬೆಳೆಸಲಾಗಿತ್ತು. ಕತ್ತಲಿನಲ್ಲಿ ಯಾವ ಯಾವ ಗಿಡ ಎಂದು ಗುರುತಿಸುವುದು ಕಷ್ಟವೆ. ಮನೆಯ ಮುಂದೆ ರಸ್ತೆಯ ದೀಪವಿರಲಿಲ್ಲ.

ಕಾರ್ ಇಂಜಿನ್ ಆಫ್ ಮಾಡಿ ಕೆಳಗಿಳಿದ ಆತ, ನೋಡೆ ಇವರು ನನ್ನ ಹಳೆಯ ಗೆಳೆಯರು. ಕಾಲೇಜಿನಲ್ಲಿ ಜೊತೆಗೆ ಓದುತ್ತಿದ್ದವರು,  ಇವರು ಅವರ ಪತ್ನಿ  ಎನ್ನುತ್ತ ನಮ್ಮಿಬ್ಬರನ್ನು   ಪರಿಚಯ ಮಾಡಿಸುತ್ತಿರುವಂತೆ ಆಕೆ,

 

’ಕಾಲೇಜಿನಲ್ಲಿಯೆ ಯಾವಾಗ? ಓದಿದ್ದು ’ ಎಂದು ಪ್ರಶ್ನಿಸಿದರು,

ನಾನು ನನ್ನ ಪತ್ನಿಗೆ ಹೇಳಿದಂತೆ ಆತನೂ ತನ್ನ ಪತ್ನಿಗೆ ನನ್ನ ಬಗ್ಗೆ ಹಳೆಯ ಗೆಳೆತನ ಎಂದು ಸುಳ್ಳು ಹೇಳುತ್ತಿರುವುದು ನನಗೆ ಆಶ್ಚರ್ಯದ ಜೊತೆ ಜೊತೆಗೆ ನಗುವನ್ನು ತರಿಸುತ್ತಿತ್ತು.

ಇನ್ನು ಆತ ಸಿಕ್ಕಿ ಹಾಕಿಕೊಳ್ಳುವ ಸಂಭವ ಜಾಸ್ತಿ, ನಾನು ಅವರು ಒಂದೇ ಕಾಲೇಜಿನಲ್ಲಿ ಓದಿರಲಿಲ್ಲ, ಆತ ಕಾಲೇಜಿನ ಹೆಸರು ಹೇಳಿದ್ದಲ್ಲಿ, ನನ್ನ ಪತ್ನಿ ಹಾಗು ಅವರ ಪತ್ನಿ ಇಬ್ಬರಿಗು ಒಟ್ಟಿಗೆ ಅನುಮಾನ ಬರುತ್ತಿತ್ತು.

’ಕಾಲೇಜು ಅಂದರೆ ಕಾಲೇಜು, ಅವರು ಕಾಲೇಜ್ ಓದಿದ್ದಾರೆ ನಾನು ಕಾಲೇಜ್ ಓದಿರುವೆ ಅಲ್ಲಿಗೆ ಕಾಲೇಜ್ ಮೇಟ್ಸ್ ಆಯಿತಲ್ಲ, ನಿನ್ನದೊಳ್ಳೆ ಪ್ರಸಂಗ ಆಯಿತಲ್ಲ ಬಂದವರನ್ನು ಬಾಗಿಲಲ್ಲಿ ನಿಲ್ಲಿಸಿ’ ಎಂದರು ಆತ ನಗುತ್ತ .

ಆಕೆ ಎಚ್ಚೆತ್ತರು,

’ಬನ್ನಿ ಒಳಗೆ ’

ಎಂದು ಕರೆಯುತ್ತ ಹೊರಟಂತೆ. ಆತ ಕಾರಿನಲ್ಲಿದ್ದ ಸಾಮಾಗ್ರಿ ಸಾಗಿಸತೊಡಗಿದರು, ನಮ್ಮ ಹತ್ತಿರ ಹೆಚ್ಚಿನ ಲಗೇಜ್ ಏನು ಇರಲಿಲ್ಲ. ನಾಳೆ ಬೆಳಗ್ಗೆ ಇಲ್ಲಿಂದ ಹಿಂದಿರುಗುವ ಇರಾದೆಯಲ್ಲಿದ್ದೆವು.

ಅದೊಂದು ಹಿಂದಿನ ಕಾಲದಲ್ಲಿ ಕಟ್ಟಿದ ಮನೆಯಂತಿತ್ತು. ನಡುವಿನಲ್ಲಿ ಇದ್ದ ಎರಡು ಚೌಕಾಕಾರದ ಮರದ ಕಂಬಗಳು ಮನೆಯ ನಡುವಿನ ಗಾಂಭೀರ್ಯವನ್ನು ಹೆಚ್ಚಿಸಿತ್ತು. ಅಲ್ಲಿಯೆ ಇದ್ದ ದಿವಾನದ ರೀತಿಯ ಆಸನದಲ್ಲಿ ನಾವು ಕುಳಿತಂತೆ. ಉಭಯ ಕುಶಲೋಪರಿ ಮಾತುಗಳಾಯಿತು.  ಇಬ್ಬರು ಸ್ನೇಹಿತರಾಗಿದ್ದು, ತಮ್ಮ ಪತ್ನಿಯರಿಗೆ ಇದನ್ನು ತಿಳಿಸದ ಬಗ್ಗೆ ಇಬ್ಬರು ಪತ್ನಿಯರಿಗೂ ಸ್ವಲ್ಪ ಆಶ್ಚರ್ಯವಾಗಿತ್ತು. ಆಕೆ ರಾತ್ರಿಯ ಅಡುಗೆಗೆ ತೊಡಗಿಕೊಂಡರು. ಎಷ್ಟೇ ಬೇಡವೆಂದರು ಕೇಳದೆ ಭಾರಿ ಅಡುಗೆಯನ್ನೆ ಮಾಡಿದ್ದರು. ಎಣ್ಣೆಯಲ್ಲಿ ಕರಿದಿದ್ದ ಹಲಸಿನ ಹಪ್ಪಳ ಹಾಗು ಖಾರದ ಮೆಣಸಿನ ಕಾಯಿ ಊಟದ ರುಚಿಯನ್ನು ಹೆಚ್ಚಿಸಿತು. ಮೊಸರನ್ನ ತಿನ್ನುವ ವೇಳೆಗಾಗಲೆ ಕಣ್ಣು ಎಳೆಯುತ್ತಿತ್ತು. ನಾನು ಹಾಗು ಆತ ಮನೆಯ ಹೊರಗೆ ಬಂದು ನಿಂತೆವು. ನಾನು ಕುತೂಹಲಕ್ಕೆ ಎಂದು ಕೇಳಿದೆ.

’ಆ ಮನೆಗೆ ಯಾವಾಗ ಹೋಗೋಣ, ಅಷ್ಟಕ್ಕೂ ಪ್ರತಿ ದೆವ್ವದ ಮನೆಗೂ ಒಂದು ಕತೆ ಅಂತ ಇರುತ್ತೆ, ಆ ಮನೆಯ ಕತೆಯೇನು?"

"ಈಗ ರಾತ್ರಿ ಆ ಸುದ್ದಿ ಏಕೆ ಬಿಡಿ, ಹೇಗೂ ಬೆಳಗ್ಗೆ ಅಲ್ಲಿಗೆ ಹೋಗುವದಲ್ಲವೇ, ಆಗ ತಿಳಿಸುತ್ತೇನೆ ಆ ಮನೆಯ ಕತೆಯನ್ನ".

ಅನ್ನುತ್ತ,

’ಅದಿರಲಿ ನಿಮಗೊಂದು ನೇರ ಪ್ರಶ್ನೆ ಕೇಳುತ್ತೇನೆ , ನೀವು ದೆವ್ವದ ಅಸ್ತಿತ್ವವನ್ನು ನಂಬುವಿರಾ?" ಎಂದರು

ನನಗೆ ನನ್ನೊಳಗೆ ಎಂತದೋ ಅನುಮಾನ.

’ಬಹುಶಃ ಇಲ್ಲ, ನಂಬುವದಿಲ್ಲ’ ಎಂದೆ.

ಆತನ ಮುಖದಲ್ಲಿ ನಗು

’ಹೋಗಲಿ ಬಿಡಿ , ದೇವರ ಇರುವನ್ನು ನಂಬುವಿರೋ"

ಈಗ ಸ್ವಲ್ಪ ಚಿಂತಿಸಿ,

’ನಂಬುತ್ತೇನೆ ’ ಎಂದೆ.

’ದೇವರನ್ನು ನಂಬುವಿರಿ, ದೆವ್ವವನ್ನು ನಂಬುವದಿಲ್ಲ ಎನ್ನುವಿರಿ, ಎರಡು ಕಣ್ಣಿಗೆ ಕಾಣದ ವಿಷಯಗಳೆ ಅಲ್ಲವೆ?"

ಎಂದರು ನಗುತ್ತ.

’ಹಾಗಲ್ಲ , ದೇವರನ್ನು ನಂಬಲು ನನಗೆ ನನ್ನದೆ ಆದ ಕೆಲವು ತರ್ಕಗಳಿವೆ, ವಿಶಾಲ ವಿಶ್ವವನ್ನು ನೋಡಿ, ಕೋಟಿ ಕೋಟಿ ನಕ್ಷತ್ರಗಳು, ಎರಡು ನಕ್ಷತ್ರಗಳ ನಡುವೆ ಅಗಾದ ಅಂತರ, ವಿಶ್ವದ ಒಂದು ಕೊನೆಯಿಂದ ಮತ್ತೊಂದು ಕೊನೆಗೆ ಇರುವ ಅಳತೆ ಯಾರು ಅರಿಯರು. ಇಂತಹ ವಿಶ್ವದ ಉಗಮ ಯಾವ ಕಾರಣವು ಇಲ್ಲದೆ, ಯಾರು ಕಾರಣರಿಲ್ಲದೆ ತಾನಾಗಿಯೆ ಆಯಿತು ಎಂದು ಹೇಗೆ ನಂಬುವುದು.

ಇನ್ನು ನಮ್ಮ ದೇಹಕ್ಕೆ ಬನ್ನಿ, ನಡೆಯುವ, ಕೆಲಸಕ್ಕೆ ಅನುಕೂಲಕರವಾದ ಕೈ ಕಾಲುಗಳು, ನೋಡಲು ಕಣ್ಣುಗಳು, ದ್ವನಿಯನ್ನು ಕೇಳಲು ಕಿವಿ, ಮಾತನಾಡಲು ನಾಲಿಗೆ. ಹುಟ್ಟಿನಿಂದ ಸಾಯುವವರೆಗೂ ನಿರಂತರವಾಗಿ ರಕ್ತವನ್ನು ಪಂಪ್ ಮಾಡುವ ಹೃದಯ. ಉಸಿರಾಟದ ವ್ಯವಸ್ಥೆ. ಇಷ್ಟೆಲ್ಲ ವ್ಯವಸ್ಥೆ ಸುಗಮವಾಗಿ ನಡೆಯಲು ಬೇಕಾದ ಶಕ್ತಿಯನ್ನು ತಾನಾಗಿಯೆ ಉತ್ಪಾದಿಸಿಕೊಳ್ಳಲು ಇರುವ ಜೀರ್ಣಾಂಗದ ವ್ಯವಸ್ಥೆ. ಈ ಎಲ್ಲ ವ್ಯವಸ್ಥೆಯ ಮೇಲ್ವಿಚಾರಣೆ ಹಾಗು ವಿಶ್ಲೇಷಣೆ, ಚಿಂತನೆಯಂತ ಕೆಲಸಕ್ಕಾಗಿ ಮೆದುಳು. ಇಂತಹ ಅದ್ಭುತವಾದ ವ್ಯವಸ್ಥೆಯೊಂದು ತನಗೆ ತಾನೆ ರೂಪಗೊಂಡಿತು ಎಂದು ಹೇಗೆ ಭಾವಿಸುವುದು ಇಂತಹ ಕಾರಣಗಳಿಗಾಗಿ ದೇವರ ಇರುವನ್ನು ನಂಬುತ್ತೇನೆ ’ ಎಂದು ಮಾತು ನಿಲ್ಲಿಸಿದೆ.

ಸ್ವಲ್ಪ ಕಾಲದ ಮೌನ , ನಂತರ ನಾನೆ ಪುನಃ ಹೇಳಿದೆ

’ಹಾಗೆ ನೋಡಿದರೆ ದೆವ್ವದ ಇರುವಿನ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ, ಆದರೆ ಅದರ ಅಸ್ತಿತ್ವದ ಬಗ್ಗೆ ಎಂತಹ ಸಾಕ್ಷಿಯೂ ಇಲ್ಲ. ಹಾಗೆ ದೆವ್ವದ ಅಸ್ತಿತ್ವದ ಅಗತ್ಯವೇ ಇಲ್ಲ. ಏತಕ್ಕಾಗಿ ಪ್ರಕೃತಿಯಲ್ಲಿ ದೆವ್ವದ ಅಗತ್ಯವಿದೆ?" ಎಂದೆ

ಅದಕ್ಕೆ ವೆಂಕಟಾದ್ರಿಯವರು

’ದೆವ್ವದ ಅಗತ್ಯವೇ ಇಲ್ಲವೆ ? ಹೇಗೆ ಹೇಳುವಿರಿ, ಪ್ರಕೃತಿಯಲ್ಲಿ ಎಲ್ಲವು ಅಗತ್ಯವಾಗಿರುವುದೇ ಇಲ್ಲ ಅಲ್ಲವೆ. ಕಚ್ಚುವ ಇರುವೆ ಗೊದ್ದಗಳು, ಹತ್ತು ಹಲವು ಪ್ರಾಣಿಗಳು. ಮನುಷ್ಯನಿಗೆ ಅಥವ ಪ್ರಾಣಿಗಳಿಗೆ ತೊಂದರೆ ಕೊಡುವ ಬ್ಯಾಕ್ಟೀರಿಯ ಅಥವ ವೈರಸ್ ಇಂತಹುಗಳೆಲ್ಲದ ಅಗತ್ಯವಾದರು ಏನಿದೆ. ಸಮುದ್ರದಲ್ಲಿ ಸಹ ನಾವು ಉಹಿಸಿಕೊಳ್ಳಲು ಆಗದ ಜೀವಿಗಳಿವೆ ಇವುಗಳೆಲ್ಲದರ ಸೃಷ್ಟಿ  ಪ್ರಕೃತಿಯ ಅಗತ್ಯಕ್ಕೆ ಅನುಗುಣವಾಗಿಯೆ ಆಗಿದೆಯೇನು?  ಹೋಗಲಿ ಸೃಷ್ಟಿಯಲ್ಲಿ ಮನುಷ್ಯನ ಅಗತ್ಯವಾದರು ಏನು? ಹಾಗಿರುವಾಗ ದೆವ್ವವು ಪ್ರಕೃತಿಯಲ್ಲಿ ಅಗತ್ಯವಿಲ್ಲದೆ ಇರುವಾಗಲು ಇರುವ ಸಾದ್ಯತೆ ಇದೆ ಅಲ್ಲವೆ ?’ ಎಂದರು

ನಾನು ನನ್ನ ಮಾತನ್ನು ಮುಂದುವರೆಸಿದ್ದೆ, ಹೀಗೆ  ಉಳಿದಂತೆ ಏನೊ ಮಾತುಕತೆಗಳು ನಡೆದವು.  ಸಾಕಷ್ಟು ಹೊತ್ತಾಯಿತು.

ನಂತರ ನನ್ನನ್ನು ಹಾಗು ಪತ್ನಿಯನ್ನು ಒಂದು ರೂಮಿನ ಒಳಗೆ ಕರೆದೋಯ್ದು,

’ನೋಡಿ ಈ ರೂಮಿನಲ್ಲಿ ಸ್ವಸ್ಥವಾಗಿ ರಾತ್ರಿ ಮಲಗಿಬಿಡಿ, ಇಲ್ಲಿ ನಿಮ್ಮ ಊರಿನಂತೆ ಯಾವುದೆ ಗಲಾಟೆಗಳು ಇರಲ್ಲ, ಹೊರಗೆ ತುಂಬಾ ನಿಶ್ಯಬ್ದವಾಗಿರುತ್ತೆ. ಮತ್ತೆ ಎಲ್ಲ ಬೆಳಗ್ಗೆ ನೋಡೋಣ.’ಎನ್ನುತ್ತ ಬಾಗಿಲನ್ನು ಮುಂದು ಬಿಟ್ಟು ಆತ ಹೊರಟರು.

ಅವರು ಹೇಳಿದಂತೆ ಹೊರಗಿನ ಪ್ರಪಂಚ ತೀರ ನಿಶ್ಯಭ್ದವಾಗಿತ್ತು. ನಿದ್ದೆ ಬರುವುದು ಕಷ್ಟ ಎನ್ನುವಂತೆ. ಹೊರಗಿನ ಪ್ರಪಂಚಕ್ಕೂ ನಮಗೂ ಯಾವುದೇ ಸಂಬಂಧವೇ ಇರದಂತ ನಿಶ್ಯಬ್ದ. ಆಗೊಮ್ಮೆ ಈಗೊಮ್ಮೆ ಹೊರಗೆ ವೆಂಕಟಾದ್ರಿಯವರು  ತಮ್ಮ ಪತ್ನಿ ಜೊತೆ ಮಾತನಾಡುತ್ತಿದ್ದ ಅಸ್ವಷ್ಟ ದ್ವನಿಯ ಜೊತೆಗೆ ನಿದ್ದೆ ಹತ್ತಿತು.

..

..

ಎಂತಹ ಸುಖವಾದ ನಿದ್ದೆ. ಬಹಳ ವರ್ಷಗಳೆ ಕಳೆದಿತ್ತೇನೊ ಇಂತಹ ನಿದ್ದೆ ಮಾಡಿ. ಎಚ್ಚರವಾದಾಗ ಸೂರ್ಯನ ಕಿರಣಗಳು ಮುಖವನ್ನು ತಾಕುತ್ತಿದ್ದವು. ಎದ್ದು ಕುಳಿತು ಎಂದಿನಂತೆ ಕಣ್ಣು ಮುಚ್ಚಿ ಕೈಗಳನ್ನು ಮುಖಕ್ಕೆ ಹಿಡಿದು

’ಕರಾಗ್ರೆ ವಸತೇ ಲಕ್ಷ್ಮೀ....’

ಎಲ್ಲ ಹೇಳಿ , ಕೈತೆಗೆದೆ.

ಒಂದು ಕ್ಷಣ ಏನು ಅರ್ಥವಾಗಲಿಲ್ಲ!

ಅಷ್ಟಕ್ಕೂ ನಾನಿರುವಾದದರು ಎಲ್ಲಿ ?

ಸುತ್ತಲೂ ನೋಡಿದೆ. ಬೆಳೆದುನಿಂತ ಗಿಡಗಂಟೆಗಳು. ಮುಳ್ಳಿನ ಗಿಡಗಳ ಜಾಗ. ಕಣ್ಣಿಗೆ ಕಾಣುವಂತೆ ಒಂದು ದೊಡ್ಡ ಹುತ್ತವಿತ್ತು. ಸಮೀಪದಲ್ಲಿ ಮೋಟು ಗೋಡೆಯ ಮೇಲೆ ಕಾಗೆಯೊಂದು ಕುಳಿತು ’ಕಾ ಕಾ’ ಎಂದು ನಮ್ಮನ್ನು ಎಚ್ಚರಿಸುತ್ತಿತ್ತು. ಅಷ್ಟಾಗಿ ಅಲ್ಲಿ ಮನೆಯೆ ಇರಲಿಲ್ಲ.

ನಾವು ರಾತ್ರಿ ಮಲಗಿದ್ದು ವೆಂಕಟಾದ್ರಿಯವರ ಮನೆಯಲ್ಲಿ ಅಲ್ಲವೆ?,

ಈಗ ಇದೆಲ್ಲಿ ಬಂದಿರುವೆ. ರಾತ್ರಿ ಅವರ ಮನೆಯಿಂದ ಇಲ್ಲಿಗೆ ಹೇಗೆ ಬಂದೆ?. ನನ್ನ ಜೊತೆಯಲ್ಲಿ ಪತ್ನಿ ಇದ್ದಳಲ್ಲವೆ ?

ಪತ್ನಿಯ ನೆನಪು ಬರುತ್ತಲೆ ಗಾಭರಿಯಾಗಿ ಪಕ್ಕ ನೋಡಿದೆ, ಅವಳಿನ್ನು ನಿದ್ದೆ ಮಾಡುತ್ತಿದ್ದಾಳೆ. ಅವಳು ಮಲಗಿರುವುದು ಸಹ ಕಡಪ್ಪ ಕಲ್ಲಿನಂತ ಕಟ್ಟೆಯ ಮೇಲೆ. ಅವಳನ್ನು ಅಲ್ಲಾಡಿಸಿ ಎಬ್ಬಿಸಿದೆ.

’ಆಗಲೇ ಬೆಳಕು ಆಗಿಹೋಯಿತೆ?"

ಎನ್ನುತ್ತ ಎದ್ದವಳು, ಒಮ್ಮೆ ಸುತ್ತಲೂ ನೋಡಿದಳು. ತಾನು  ಮಲಗಿರುವ ಜಾಗ, ಹಾಗು ನಾವಿಬ್ಬರು ಇರುವ ಪರಿಸ್ಥಿತಿ ಕಾಣುವಾಗಲೆ ಅವಳ ಕಣ್ಣುಗಳಲ್ಲಿ ಭಯ ತುಂಬಿ ಹೋಯಿತು. ಅವಳಿಗೆ ಅರಿವಿಲ್ಲದೆ ಅವಳ ಬಾಯಿಂದ

’ಅಯ್ಯೋ.......’

ಎನ್ನುವ ಚಿತ್ಕಾರ ಹೊರಬಿತ್ತು.

ಅವಳು ಎಷ್ಟು ಜೋರಾಗಿ ಕೂಗಿದ್ದಳೆಂದರೆ ಸುತ್ತಲು ಕಡಿಮೆ ಎಂದರು ಒಂದು ಕಿ.ಮೀ ದೂರದವರೆಗೂ ಅವಳ ದ್ವನಿ ಕೇಳಿರಬೇಕು ಅನ್ನಿಸುತ್ತೆ.

ನಾನು ಎಚ್ಚೆತ್ತು ಎದ್ದು ನಿಂತೆ. ಅವಳನ್ನು ಎದ್ದೇಳು ಅನ್ನುವಂತೆ ಕೈಕೊಟ್ಟು ಎಬ್ಬಿಸಿದೆ. ನಮ್ಮ ತಲೆಯ ಬಳಿಯೆ ನಾವು ಸಾಗರದಿಂದ ತಂದ ಬ್ಯಾಗ್ ಬಿದ್ದಿತ್ತು. ಅಷ್ಟರಲ್ಲಿ ದೂರದಲ್ಲಿ ಯಾರದೋ ಮುಖ ಕಾಣಿಸಿತು. ಹತ್ತಿರ ಬಂದ , ಯಾರೋ ಸಮೀಪದ ಹಳ್ಳಿಯವರು ಇರಬಹುದು ಅವನು, ಅವನ ಕೈಯಲ್ಲಿ ಇರುವ ನೀರಿನ ಪಾತ್ರೆ ಕಾಣುವಾಗಲೆ ಅರಿವಾಯಿತು, ಅವನು ಬಹುಶಃ ಬೆಳಗಿನ ತನ್ನ ದೇಹಬಾದೆಗಳನ್ನು ತೀರಿಸಿಕೊಳ್ಳಲು ಬಂದವನಿರಬೇಕು. ನನ್ನ ಪತ್ನಿ ಕೂಗಿಕೊಂಡಿದ್ದು ಕೇಳಿ ಬಂದವನಿರಬೇಕು.

ನಮ್ಮನ್ನು ಕಂಡು ಹತ್ತಿರ ಬರಲು ಭಯ ಎನ್ನುವಂತೆ ದೂರ ನಿಂತ

ನಾನಾಗಿಯೆ ಅವನನ್ನು ಕರೆದೆ

’ಇಲ್ಲಿ ಬಾರಪ್ಪ, ಇದು ಯಾವ ಸ್ಥಳ, ನಾವು ಮೋಸ ಹೋಗಿ ಇಲ್ಲಿ ಬಂದಿದ್ದೇವೆ, ಸ್ವಲ್ಪ ಸಹಾಯ ಮಾಡು’

ಅವನು

’ಯಾವೂರು ಸ್ವಾಮಿ ನಿಮ್ಮದು, ಇಲ್ಲಿ ಏಕೆ ಬಂದಿದ್ದೀರಿ, ಅದೇನು ಇಲ್ಲಿ ಬಂದು ಮಲಗಿದ್ದೀರಿ, ಮೊದಲು ಅಲ್ಲಿಂದ ಎದ್ದು ಹೊರಗೆ ಬನ್ನಿ, ನೀವು ಮಲಗಿರುವುದು ಸಮಾದಿಯ ಮೇಲೆ’ ಎಂದ.

ನಾನು ನನ್ನ ಬ್ಯಾಗನ್ನು ಕೈಲಿ ಹಿಡಿದು , ಪತ್ನಿಯ ಸಮೇತ ವೇಗವಾಗಿ ಹೊರಬಂದೆ.

ಅವನಾದರೋ

’ಬನ್ನಿ ಮೊದಲು ಇಲ್ಲಿಂದ ದೂರ ಹೋಗೋಣ’ ಎನ್ನುತ್ತ ಹೊರಟ.

ಅವನ ಜೊತೆ ಎರಡು ಮೂರು ನಿಮಿಶ ನಡೆಯುತ್ತಿರುವಂತೆಯೆ ಹಳ್ಳಿಯ ಪ್ರಾರಂಭ ಕಾಣಿಸಿತು. ಬಹುಶಃ ನಾವು ಮಲಗಿದ್ದು, ಹಳ್ಳಿಯ ಹೊರಬಾಗದಲ್ಲಿ, ಆದರೆ ರಾತ್ರಿ ಮಲಗಿರುವಾಗ ಅಂತ ಸೊಗಸಾದ ಮನೆಯಿತ್ತು. ನಮ್ಮೆ ಜೊತೆ ವೆಂಕಟಾದ್ರಿ ಎನ್ನುವರಿದ್ದರು, ಅವರ ಪತ್ನಿ ಸಹ ಇದ್ದರು ಅವರಿಬ್ಬರೂ ಎಲ್ಲಿ ಹೋದರು ಎನ್ನುವ ಆತಂಕ

ಅವನೇ ಕೇಳಿದ ’ ಏನು ಸ್ವಾಮಿ ನಿಮ್ಮ ಕತೆ, ಎಲ್ಲಿಂದ ಬಂದಿರಿ, ಅದೇನು ಹೋಗಿ ದೆವ್ವದ ಮನೆಯಲ್ಲಿ ಮಲಗಿದ್ದೀರಿ, ನೀವು ಮಂತ್ರವಾದಿಗಳಾ ?’ ಎಂದ

’ಇಲ್ಲಪ್ಪ, ನಾವು ಮಂತ್ರವಾದಿಗಳಲ್ಲ, ಇಲ್ಲೆ ಸಾಗರಕ್ಕೆ ಟೂರ್ ಎಂದು ಬಂದಿದ್ದಿವಿ, ಅಲ್ಲಿ ನಿಮ್ಮ ಹಳ್ಳಿಯವರೆ ಅಂತೆ ಅದ್ಯಾರೋ ವೆಂಕಟಾದ್ರಿ ಎನ್ನುವವರ ಪರಿಚಯವಾಯಿತು. ರಾತ್ರಿ ಅವರೇ ಕರೆತಂದರು. ನಮ್ಮ ಮನೆಯಲ್ಲಿರಿ ಎಂದು. ರಾತ್ರಿ ಅವರ ಮನೆಯಲ್ಲಿಯೆ ಮಲಗಿದ್ದೆವು. ಈಗ ನೋಡಿದರೆ ಹೇಗೆ ಇಲ್ಲಿ ಬಂದೆವು ತಿಳಿಯುತ್ತಿಲ್ಲ. ಹೋಗಲಿ. ಈ ಹಳ್ಳಿಯಲ್ಲಿ ವೆಂಕಟಾದ್ರಿ ಎನ್ನುವವರ ಮನೆ ಯಾವುದು ತೋರಿಸಿ ಅಲ್ಲಿಗೆ ಹೋಗುವೆವು’ ಎಂದೆ ಆತಂಕದಿಂದ.

ಅಷ್ಟರಲ್ಲಿ ಹಳ್ಳಿಯ ಇನ್ನೂ ಹತ್ತ ಹನ್ನೆರಡು ಜನ ಸೇರಿದ್ದರು. ನನ್ನ ಕತೆ ಕೇಳುತ್ತಿರುವಂತೆ ಅವರ ಮುಖದಲ್ಲಿ ಭಯ ಹಾಗು ಆಶ್ಚರ್ಯ ಕಾಣಿಸಿತು

’ಸ್ವಾಮಿ ನಿಜಾ ಹೇಳ್ತಾ ಇದ್ದೀರಾ ? , ನಿಮ್ಮನ್ನು ಕರೆತಂದಿದ್ದು ವೆಂಕಟಾದ್ರಿನಾ? , ನೋಡಲು ಅವರು ಹೇಗಿದ್ದರು ?’ ಇತ್ಯಾದಿ ಪ್ರಶ್ನೆ ಕೇಳಿದರು.

ನಾನು ಎಲ್ಲವನ್ನು ವಿವರಿಸಿದೆ. ಕಡೆಗೆ ಹಳ್ಳಿಯ ಪ್ರಮುಖ ದೊಡ್ಡಯ್ಯ ಅಂತೆ ಅವನ ಹೆಸರು ಅವನು ಹೇಳಿದ.

’ಸ್ವಾಮಿ ಹೆದರಬೇಡಿ, ನೀವು ಮಲಗಿದ್ದು ದೆವ್ವದ ಮನೆಯಿದ್ದ ಜಾಗ, ಅದೇ ವೆಂಕಟಾದ್ರಿ ಅನ್ನುವವರ ಮನೆ. ಆದರೆ ಅವರು ಹಾಗು ಅವರ ಪತ್ನಿ ತೀರಿಕೊಂಡು ಸುಮಾರು ಹತ್ತು ವರ್ಷಗಳೆ ಕಳೆದಿರಬೇಕು ಅನ್ನಿಸುತ್ತೆ’

ನನಗೆ ಈಗ ನಿಜಕ್ಕೂ ಹೆದರಿಕೆ ಆಗತೊಡಗಿತು.

ಇದೆಲ್ಲ ಹೇಗೆ ಆಯಿತು. ಮತ್ತೆ ದೆವ್ವದ ಮನೆ ಎಂದು, ಊರ ಹೊರಗಿನ ಗೌಡರ ಮನೆಯನ್ನು ರಾತ್ರಿ ತೋರಿಸಿದರಲ್ಲ ವೆಂಕಟಾದ್ರಿಯವರು,  ಅದು ಹೇಗೆ ಸಾದ್ಯ? . ಎನೇನೊ ಪ್ರಶ್ನೆಗಳು.

ಅವರಲ್ಲಿ ಎಲ್ಲವನ್ನು ತಿಳಿಸಿದೆ. ನನ್ನ ಪತ್ನಿಯಂತು ಹೆದರಿ ಏನು ಮಾತನಾಡಲು ತೋಚದೆ ಕುಳಿತ್ತಿದ್ದಳು.

ಕಡೆಗೆ ಆ ಹಳ್ಳಿಯ ರೈತ ದೊಡ್ಡಯ್ಯ ಅಲ್ಲಿನ ಮನೆಯ ಕತೆ ತಿಳಿಸಿದ.

ನಾವು ಮಲಗಿದ್ದು ವೆಂಕಟಾದ್ರಿ ಎನ್ನುವವರ ಮನೆಯಿದ್ದ ಜಾಗ. ಆ ಮನೆಯಲ್ಲಿ ಮೊದಲಿಗೆ ವೆಂಕಟಾದ್ರಿ ಹಾಗು ಅವರ ಪತ್ನಿ ವಾಸವಾಗಿದ್ದರು. ಅವರಿಗೆ ಇಬ್ಬರು ಮಕ್ಕಳು ರಘು ಹಾಗು ಭರತ. ಇಬ್ಬರೂ ಓದಲೆಂದು ಹಳ್ಳಿ ಬಿಟ್ಟವರು. ಕಡೆಗೆ ವಿದೇಶ ಸೇರಿದರು. ವೆಂಕಟಾದ್ರಿಯವರಿಗೆ ಅರವತ್ತು ಆಗಿತ್ತು, ಆ ಕಾರಣಕ್ಕಾಗಿ ಅವರ ಮನೆಯಲ್ಲಿ ಒಂದು ಶುಭ ಸಮಾರಂಭ ಏರ್ಪಾಡಾಯಿತು. ಹೊರದೇಶದಲ್ಲಿದ್ದ ಇಬ್ಬರೂ ಮಕ್ಕಳು ತಂದೆಯ ಆಯಸ್ಸು ಹೆಚ್ಚಿಸುವ ಆ ಕಾರ್ಯಕ್ರಮಕ್ಕೆ ಬರುತ್ತೇವೆಂದು ತಿಳಿಸಿದ್ದರು.

ಆದರೆ ವಿಧಿಯ ನಿಯಮ ಬೇರೆ ಇತ್ತು. ಮಕ್ಕಳಿಬ್ಬರು ಒಟ್ಟಾಗಿ ಬರುತ್ತಿದ್ದ ವಿಮಾನ ಅಪಘಾತಕ್ಕೆ ಒಳಗಾಗಿ ಇಬ್ಬರು ಮಕ್ಕಳು ಒಟ್ಟಿಗೆ ದುರ್ಮರಣ ಹೊಂದಿದ್ದರು. ವೆಂಕಟಾದ್ರಿಯವರ ಪತ್ನಿಗೆ ಮತಿಭ್ರಮಣೆಯಂತೆ ಆಯಿತು. ಪತಿ ಹಾಗು ಪತ್ನಿ ಇಬ್ಬರಿಗು ಅಘಾತವನ್ನು ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ಇಬ್ಬರು ನೇಣಿಗೆ ಶರಣು ಹೋದರು.

ಅವರಿಬ್ಬರ ಶವವನ್ನು ಅವರದೇ ಮನೆಯ ಕಾಂಪೋಂಡಿನಲ್ಲಿಯೆ ಅವರ ಬಂದುಗಳು ಮಣ್ಣುಮಾಡಿದರು. ವೆಂಕಟಾದ್ರಿಯವರ ಮನೆ ಬೀಗಹಾಕಲ್ಪಟ್ಟಿತು.

ಆ ನಂತರ ಹಳ್ಳಿಯಲ್ಲಿ ತರ ತರದ ಕತೆಗಳು ಹರಡಿದವು.

ವೆಂಕಟಾದ್ರಿಯವರು  ಹಾಗು ಅವರ ಪತ್ನಿ ಅದೇ ಮನೆಯಲ್ಲಿ ದೆವ್ವವಾಗಿ ವಾಸವಾಗಿದ್ದಾರೆ ಎಂದು.

ರಾತ್ರಿಯಲ್ಲಿ ಇಬ್ಬರು ಓಡಿಯಾಡುವುದು ,  ಮಕ್ಕಳಿಗಾಗಿ ಕಾಯುವುದು ಮಾಡುತ್ತಿದ್ದಾರಂತೆ ಅಂತ ಊರೆಲ್ಲ ಪುಕಾರು. ಆದರೆ ಅವರಿಂದ ಹಳ್ಳಿಯ ಯಾರಿಗೆ ಆಗಲಿ ತೊಂದರೆ ಆಗಿರಲಿಲ್ಲ.

ಹಾಗಿರುವಾಗಲು ಊರಿನ ಗೌಡ ಒಬ್ಬನಿದ್ದ  ರುದ್ರೇಗೌಡ ಎಂದು ಹೆಸರು, ಅದೇನು ಆಯಿತೋ, ಊರವರೆಲ್ಲ ಮಾತುಗಳು, ಹೆದರಿಕೆ ಇವನ್ನು ನೋಡುತ್ತ ಇದ್ದವನು, ಮನೆಯನ್ನು ಕೆಡವುತ್ತೇನೆಂದು ನಿರ್ಧಾರ ಮಾಡಿದ. ಊರವರೆಲ್ಲ ಬೇಡ ಎಂದು ಬುದ್ದಿ ಹೇಳಿದಾಗಲು ಕೇಳಲಿಲ್ಲ.

ಅವನಿಗೆ ದೆವ್ವ ಭೂತ ಇಂತಹುದರಲೆಲ್ಲ ನಂಭಿಕೆ ಇಲ್ಲ.

ಕೆಲವು ಕೆಲಸಗಾರರನ್ನು ಬಿಟ್ಟು ಮನೆಯನ್ನು ನೆಲಸಮ ಮಾಡಿಸಿಬಿಟ್ಟ. ಅಲ್ಲಿ ಮನೆ ಇದ್ದ ಗುರುತು ಉಳಿಯದಂತೆ ಅಲ್ಲಿನ ಎಲ್ಲ ಕಸವನ್ನು ಹೊರಸಾಗಿಸಿಬಿಟ್ಟ. ವೆಂಕಟಾದ್ರಿಯವರು ಇದ್ದ ಮನೆ ಈಗ ಖಾಲಿ ಜಾಗವಾಗಿ ಕಾಣುತ್ತಿತ್ತು. ಆದರೆ ಅವರಿಬ್ಬರ ಸಮಾದಿಗಳನ್ನು ಮಾತ್ರ ಮುಟ್ಟಿರಲಿಲ್ಲ.

ಅದು ಆಕಸ್ಮಿಕವೋ ಅಥವ ಎಂತದೋ ಯಾರು ತಿಳಿಯರು. ಮನೆಯನ್ನು ಕೆಡವಿದ ಮುಂದಿನ ಅಮಾವಾಸ್ಯೆಯಂದು ಆರೋಗ್ಯವಾಗಿದ್ದ ರುದ್ರೇಗೌಡ ಇದ್ದಕ್ಕಿದಂತೆ ರಾತ್ರಿ ಮರಣಹೊಂದಿದ.

ಸಾಯುವಾಗ ಅವನ ಬಾಯಲ್ಲಿ ಕಿವಿ ಮೂಗುಗಳಲ್ಲಿ ರಕ್ತ. ಊರಿನವರೆಲ್ಲ ಅದು ದೆವ್ವದ ಮನೆಯನ್ನು ಕೆಡವಿದ ಪರಿಣಾಮವೆಂದರು. ಓದಿಕೊಂಡ ಕೆಲವರು ಅದು ಬ್ರೈನ್ ಹ್ಯಾಮರೇಜ್ ಅಂತಾರಲ್ಲ ಹಾಗೆ ಆಗಿ ಸತ್ತಿರಬೇಕೆಂದರು. ಆದರೆ ಗೌಡನ ಮನೆಯವರು ಮಾತ್ರ ಹೆದರಿಹೋದರು. ಅವನು ಸತ್ತ ಮನೆಯಲ್ಲಿರಲು ಅವರು ಹೆದರಿ ಊರ ಹೊರಗಿನ ತೋಟದ ಮನೆಗೆ ತಮ್ಮ ವಾಸ್ತವ್ಯವನ್ನು ಬದಲಿಸಿದರು.

ಈಗ ಮತ್ತೊಂದು ಸುದ್ದಿ ಹಬ್ಬಿತು. ಬೀಗ ಹಾಕಿದ ರುದ್ರೇಗೌಡನ ಮನೆಯಲ್ಲಿ ರುದ್ರೇಗೌಡನು ದೆವ್ವವಾಗಿ ಸೇರಿರುವನೆಂದು ಅಮಾವಾಸ್ಯೆ ಬಂದರೆ ಸಾಕು ವೆಂಕಟಾದ್ರಿಯವರ ದೆವ್ವ  ರುದ್ರೇಗೌಡನ ಮನೆಗೆ ಹೋಗುವದೆಂದು ಆಗ ರಾತ್ರಿಯೆಲ್ಲ ಅವುಗಳ ನಡುವೆ ಘನಘೋರ ಕಾಳಗ ನಡೆಯುವದೆಂದು, ನಡುವೆ ಊರ ಮಂದಿ ಯಾರೇ ಹೋದರು ಅವರಿಗೆ ಉಳಿಗಾಲ ಇಲ್ಲವೆಂದು ಕತೆ. ಇದನ್ನು ಯಾರು ಹಬ್ಬಿಸುತ್ತಿದ್ದರೊ ಅಥವ ನಿಜವೋ ಯಾರು ತಿಳಿಯರು. ಎಲ್ಲರ ಮನದಲ್ಲಿ ಬೇರೂರಿರುವ ಭಯ ಗೌಡನ ಮನೆಯತ್ತ ಯಾರು ಸುಳಿಯದಂತೆ ಆಗಿತ್ತು.

ಕಡೆಗೊಮ್ಮೆ ಊರ ಹಿರಿಯರು ಸೇರಿದರು.  ಎಲ್ಲರೂ ಸೇರಿ ತೀರ್ಮಾನ ಕೈಗೊಂಡರು. ಪರಊರಿನಿಂದ ಮಂತ್ರವಾದಿಗಳನ್ನು ಕರೆಸಿ ರುದ್ರೇಗೌಡನ ಮನೆಗೆ ದಿಗ್ಬಂದನ ಏರ್ಪಡಿಸಿದರು. ಅವರ ನಂಬಿಕೆಯ ಪ್ರಕಾರ ವೆಂಕಟಾದ್ರಿಯವರ ದೆವ್ವ  , ರುದ್ರೇಗೌಡನ ಮನೆಯನ್ನು ಪ್ರವೇಶಿಸುವಂತಿಲ್ಲ, ಹಾಗು  ರುದ್ರೇಗೌಡನ ದೆವ್ವ ಆ ಮನೆಯನ್ನು ಬಿಟ್ಟು ಹೊರಬರದಂತೆ ಗಟ್ಟಿಯಾದ ಏರ್ಪಾಡಾಗಿತ್ತು.

ನಂತರ ಊರಿನಲ್ಲಿ ಸ್ವಲ್ಪ ನೆಮ್ಮದಿ ನೆಲೆಸಿತ್ತು. ಯಾವುದೇ ದೆವ್ವದ ಕಾಟವಿಲ್ಲ ಅಂತ ನೆಮ್ಮದಿಯಾಗಿದ್ದರು.ಊರಿನಲ್ಲಿರುವ ಯಾರು ದಿಗ್ಭಂದನ ಹಾಕಿದ ಗೌಡನ ಮನೆಯತ್ತ ಸುಳಿಯುತ್ತಿರಲಿಲ್ಲ. .......

ಈ ಎಲ್ಲ ಕತೆಯನ್ನು ಕೇಳುತ್ತ ನನ್ನ ಮನದಲ್ಲಿ ಗೊಂದಲ ಪ್ರಾರಂಭವಾಯಿತು. ಇದೇನು ಗ್ರಹಚಾರ ನನಗೆ ಸಂಬಂಧವೆ ಇಲ್ಲದ ಈ ಹಳ್ಳಿಯ ಕತೆಗೆ ನಾನು ಬಂದು ಸಿಕ್ಕಿಕೊಂಡನಲ್ಲ ಎಂದು. ರಾತ್ರಿ ವೆಂಕಟಾದ್ರಿಯವರು ನನ್ನ ಜೊತೆ ರುದ್ರೇಗೌಡನ ಮನೆಯ ಒಳಗೆ ಬರದಿರಲು ಈ ದಿಗ್ಬಂದನವೂ ಒಂದು ಕಾರಣವಿರಬಹುದು ಎನ್ನುವ ಕಾರಣ ನನಗೆ ಹೊಳೆದಾಗ, ನನ್ನಲ್ಲಿ ಎಂತಹುದೋ ಒಂದು ಭಾವ. ಒಂದು ವೇಳೆ ನಾನು ಅವರ ಜೊತೆ ಆ ಮನೆಯೊಳಗೆ ಹೋಗಿದ್ದಲ್ಲಿ ಎಂತಹ ಪರಿಸ್ಥಿತಿ ಎದುರಾಗುತ್ತಿತ್ತೊ ಬಲ್ಲವರಾರು. ನಾನು ವೆಂಕಟಾದ್ರಿಯ ಮಿತ್ರನೆಂದು ಬಗೆದು ಆ ರುದ್ರೇಗೌಡನ ದೆವ್ವ ನನ್ನನ್ನು ಸಿಗಿದು ಹಾಕುತ್ತಿತ್ತೋ ಎನೊ ಅನಿಸಿದಾಗ ಬೆನ್ನಿನಲ್ಲಿ ನಡುಕ ಉಂಟಾಯಿತು.

ಇಷ್ಟೆಲ್ಲ ಆಗುವಾಗ ನಾನು ಹೆದರಿ ಕುಳಿತಿದ್ದು ಕಂಡು ಊರ ಜನರೆಲ್ಲ ದೈರ್ಯ ಹೇಳಿದರು. ಅಲ್ಲಿಯ ಹನುಮಂತನ ಗುಡಿ ಪುಜಾರಿ ದೇವರಾಜ ಎನ್ನುವರೊಬ್ಬರಿದ್ದರು. ಅವರು

’ಏನು ಚಿಂತಿಸಬೇಡಿ. ನಮ್ಮ ಮನೆಗೆ ಬನ್ನಿ, ಇಬ್ಬರು ಸ್ನಾನ ಮುಗಿಸಿ. ನಂತರ ದೇವಾಲಯದಲ್ಲಿ ಹನುಮನಿಗೆ ಪೂಜಿಸಿದ ಹಳದಿ ದಾರ ಕೊಡುತ್ತೇನೆ ಇಬ್ಬರು ಕುತ್ತಿಗೆಗೆ ಕಟ್ಟಿಕೊಳ್ಳಿ. ನೀವು ನಮ್ಮ ಮನೆಯಲ್ಲಿ ಬೆಳಗಿನ ತಿಂಡಿ ಮುಗಿಸುವದರಲ್ಲಿ, ಹತ್ತಕ್ಕೆ ಸರ್ಕಾರಿ ಬಸ್ ಒಂದು ಬರುತ್ತದೆ. ನೀವು ಅದನ್ನು ಹತ್ತಿದರೆ ಆಯಿತು. ಒಂದು ಗಂಟೆಯಲ್ಲಿ ಸಾಗರ ಮುಟ್ಟುವಿರಿ’ ಎಂದು ದೈರ್ಯ ಹೇಳಿದರು.

ಅವರು ಹೇಳಿದ್ದನ್ನು ಕೇಳುವ ಹೊರತು ಬೇರೆ ಮಾರ್ಗ ನನಗೆ ಹಾಗು ನನ್ನ ಪತ್ನಿಗೆ ಇರಲಿಲ್ಲ. ಸರಿ ಅಲ್ಲಿ ಸ್ನಾನ ಮುಗಿಸಿ, ಅವರು ದೇವಾಲಯದಲ್ಲಿ ಕೊಟ್ಟ ತೀರ್ಥ ಪ್ರಸಾದ ಸೇವಿಸಿ, ಅವರ ಮನೆಯಲ್ಲಿ ತಿಂಡಿ ಮುಗಿಸಿ, ಕಾಯುತ್ತಿರುವಂತೆ ,  ಬಸ್ಸು ಕಾಣಿಸಿತು.

’ಅಬ್ಬಾ...’ ಎನ್ನುತ್ತ ಬಸ್ಸು ಹತ್ತಿ ಕುಳಿತೆವು.

ವೆಂಕಟಾದ್ರಿಯವರ ದೆವ್ವದ ಮನೆಯಿಂದ ನಮ್ಮನ್ನು ಕರೆದುಕೊಂಡು ಹೋಗಿದ್ದ ಬಸವ, ಊರ ರೈತ ದೊಡ್ಡಯ್ಯ, ಹನುಮನ ಗುಡಿ ಪುಜಾರಿ ಇತರರು  ಬಸ್ ಹೊರಟಂತೆ ನಮಗೆ ಬೈ ಬೀಸಿದರು. ಬಸ್ಸು ಹೊರಟು, ಅದೇ ಮಾರ್ಗದಲ್ಲಿ ಸಾಗುವಾಗ, ರಸ್ತೆಯ ಪಕ್ಕ ರಾತ್ರಿ ನೋಡಿದ ರುದ್ರೇಗೌಡನ ಮನೆ ನೋಡುವಾಗ ನಿಗೂಢವಾಗಿ ಕಾಣಿಸುತ್ತಿತ್ತು.

ಕಂಡೆಕ್ಟರ ಹತ್ತಿರ ಬಂದು ನಮ್ಮನ್ನು ಪರೀಕ್ಷಾತ್ಮಕವಾಗಿ ನೋಡುತ್ತ

’ಎಲ್ಲಿಗೆ ಸಾರ್ ’ ಎಂದ

’ಎರಡು ಸಾಗರಕ್ಕೆ ಕೊಡಪ್ಪ’  ಎನ್ನುತ್ತ ಟಿಕೇಟ್ ಪಡೆದೆ.

ಬಸ್ಸು ಸಾಗುತ್ತಿರವಂತೆ ಸೀಟಿಗೆ ತಲೆ ಒರಗಿಸಿದೆ.   ಸಾಗರಕ್ಕೆ ಹೋದ ನಂತರ ಪತ್ನಿಯಿಂದ ಇನ್ನು ಏನೇನು ಮಾತು ಅವಹೇಳನ ಕೇಳಬೇಕಲ್ಲಪ್ಪ ಎನ್ನುವ ಚಿಂತನೆ ಮೂಡುತ್ತಿತ್ತು.

...

ಅಂತು ಇಂತು ಸಾಗರ ಸೇರಿಯಾಯಿತು,

ಹೋಟೆಲಿನ ರೂಮು ಸೇರಿ, ಮತ್ತೊಮ್ಮೆ ಸ್ನಾನ ಮುಗಿಸಿ, ಊಟಕ್ಕೆ ಹೋಗಿ ಬಂದೆವು . ನನ್ನ ಪತ್ನಿಯ ಕಡೆಯಿಂದ ಸಾಕಷ್ಟು ಮಾತು ಕೇಳಿ ಆಯಿತು. ಇನ್ನು ಸಾಗರದ ಸುತ್ತಮುತ್ತ ಸುತ್ತವ ಮಾತು ಬೇಡವೆ ಬೇಡ ಹಿಂದಿರುಗಿ ಬೆಂಗಳೂರಿಗೆ ಹೋಗಿ ಬಿಡುವದೆಂದೆ ನಿರ್ಧರಿಸಿದೆವು. ಹೋಟೆಲಿನವರಿಗೆ ಸಂಜೆ ನಾವು ರೂಮು ಖಾಲಿ ಮಾಡುತ್ತಿದ್ದೇವೆಂದು ತಿಳಿಸಿದೆವು.

ನಂತರ ನಮ್ಮ ವಸ್ತುಗಳನ್ನೆಲ್ಲ ಪ್ಯಾಕ್ ಮಾಡಿ. ಅರಾಮವಾಗಿ ಕುಳಿತಿದ್ದೆ. ರೂಮಿನಲ್ಲಿ ಇದ್ದ ಫೋನ್ ರಿಂಗ್ ಆಯಿತು. ಅದೇಕೊ ರಿಸಪ್ಷನ್ ನಿಂದ ಕರೆ ಮಾಡಿದ್ದಾರೆ , ಬಹುಶಃ ಬಿಲ್  ಕ್ಲಿಯರ್ ಮಾಡಲು ಇರಬಹುದು  ಎಂದುಕೊಂಡು ಪೋನ್ ತೆಗೆದೆ

’ಸಾರ್ ,  ನಿಮಗೆ ಕಾಲ್ ಬಂದಿದೆ, ಯಾರೊ ನಿಮ್ಮ ಸ್ನೇಹಿತರಂತೆ ಮಾತಾಡಿ ’ ಎನ್ನುತ್ತ, ನಾನು ಯಾರು ಎಂದು ಕೇಳುವ ಮುಂಚೆಯೆ  ಕಾಲ್ ಕನೆಕ್ಟ್ ಮಾಡಿದರು ಹೋಟೆಲಿನವರು.

’ಹಲೋ ’ ಎಂದೆ ಯಾರಿರಬಹುದು ಎನ್ನುವ ಕುತೂಹಲದೊಂದಿಗೆ

’ನಮಸ್ಕಾರ ಹೇಗಿದ್ದೀರಿ, ನಾನು ಗೊತ್ತಾಯಿತಾ" ಎಂದು ನಗು. ನನಗೆ ಅರ್ಥವಾಗಲಿಲ್ಲ.

’ತಾವು ಯಾರು ತಿಳಿಯುತ್ತಿಲ್ಲವಲ್ಲ ’ ಎಂದೆ ಗೊಂದಲದಲ್ಲಿ

’ಇಷ್ಟು ಬೇಗ ಮರೆತುಬಿಟ್ಟಿರಾ, ನಾನು ವೆಂಕಟಾದ್ರಿ’

ಆ ಕಡೆಯಿಂದ ಬಂದ ಮಾತಿಗೆ, ಬೆಚ್ಚಿಬಿದ್ದೆ,  ನಾನು ಸ್ತಬ್ಧನಾದೆ. ಏನು ಹೇಳುವುದು ತಿಳಿಯುತ್ತಿಲ್ಲ.

’ಏಕೆ ಮಾತನಾಡುತ್ತಿಲ್ಲ ಸಾರ್ ’ ಆ ಕಡೆಯಿಂದ ಮತ್ತೆ ಮಾತು ನಗು

’ನೀವು ಯಾರು, ವೆಂಕಟಾದ್ರಿಯವರು ಹೇಗೆ ಮಾತನಾಡಲು ಸಾದ್ಯ, ನನ್ನ ನಂಬರ್ ನಿಮಗೆ ಹೇಗೆ ತಿಳಿಯಿತು’

ನಾನು ಅಂದೆ ದ್ವನಿ ಸ್ವಲ್ಪ ನಡುಗತ್ತ ಇತ್ತೇನೊ.

’ಸಾರ್ ನೀವು ಇರುವುದು ಹೋಟೆಲಿನಲ್ಲಿ, ನಂಬರ್ ತಿಳಿಯುವದಿಲ್ಲವೆ. ಅದನ್ನು ಬಿಡಿ. ವೆಂಕಟಾದ್ರಿ ಏಕೆ ಮಾತನಾಡಬಾರದು?"

ಎಂದರು

’ಅದು ಹೇಗೆ ಸಾದ್ಯ, ವೆಂಕಟಾದ್ರಿ ಎನ್ನುವವರು ಸತ್ತು ಹತ್ತು ವರ್ಷದ ಮೇಲಾಗಿದೆ ಎಂದು ಹಳ್ಳಿಯವರು ತಿಳಿಸಿದರು. ನೀವು ನನ್ನನ್ನು ಮೋಸ ಮಾಡಿ ಮರಸಳ್ಳಿಗೆ ಕರೆದೋಯ್ದಿರಿ , ಈಗ ಮತ್ತೆ ಕಾಲ್ ಮಾಡುತ್ತ ಇರುವಿರಿ. ನಾನು ನಿಮ್ಮ ಜೊತೆ ಮಾತು ಮುಂದುವರೆಸಲ್ಲ’

ಎಂದೆ

’ಸಾರ್ ಕೋಪ ಬೇಡ, ನಾನು ನಿಮಗೆ ಏನಾದರು ತೊಂದರೆ ಮಾಡಿರುವೆನಾ ? ಇಲ್ಲವಲ್ಲ , ನೀವು ದೆವ್ವದಮನೆಯ ಬಗ್ಗೆ ಕುತೂಹಲ ತೋರಿಸಿದಿರಿ, ನಾನು ನಿಮ್ಮನ್ನು ಕರೆದೋಯ್ದು ತೋರಿಸಿದೆ ಅಷ್ಟೆ, ಮತ್ತೆ ಯಾವ ಅಪರಾದ ಮಾಡಿಲ್ಲವಲ್ಲ’

’ಇರಬಹುದೇನೊ ಆದರೆ ನೀವು ಮನುಷ್ಯರಂತೆ ನನಗೆ ತೋರುತ್ತಿಲ್ಲ, ಹಾಗಿರುವಾಗ ಮಾತನಾಡುವುದು ಅಪಾಯ ಅನ್ನಿಸುತ್ತಿದೆ’ ಎಂದೆ

’ಅಂತೂ ದೆವ್ವದ ಇರುವಿನ ಬಗ್ಗೆ ನಂಬಿದಿರಿ?"  ಆತ ನಗುತ್ತ ಹೇಳಿದರು

’ಮತ್ತೆ ನೀವು ದೆವ್ವ ಅಲ್ಲವೇನು, ಮನುಷ್ಯರೆ ? ಹಾಗಿದ್ದರೆ ಹೀಗೆಲ್ಲ ಏಕೆ ಮಾಡಿದಿರಿ?"

’ಹೇಳಿದೆನಲ್ಲ ನೀವು ಇಷ್ಟಪಟ್ಟ ಕಾರಣಕ್ಕೆ ಕರೆದುಕೊಂಡು ಹೋಗಿ ತೋರಿಸಿದೆ ಅಷ್ಟೆ. ಅಷ್ಟಕ್ಕು ನನ್ನಿಂದ ನಿಮಗೆ ಯಾವ ಅಪಾಯವು ಇಲ್ಲ. ನಾನು ಮನುಷ್ಯನೊ ದೆವ್ವವೋ ನೀವು ನಿರ್ಧರಿಸಿ’ ಎಂದರು ಆತ

“ನನಗೆ ಅನುಭವಕ್ಕೆ ಬಂದಿರುವಂತೆ ನೀವು ದೆವ್ವವೆ ಹೌದು" ನನ್ನ ದ್ವನಿಯಲ್ಲಿ ಸ್ವಲ್ಪ ನಡುಕ.

’ಅದಕ್ಕೆ  ಊರವರೆಲ್ಲ ಹೇಳಿದ ಕತೆಯನ್ನು ಕೇಳಿ ಕುತ್ತಿಗೆಗೆ ದಾರ ಕಟ್ಟಿಸಿಕೊಂಡು ಬಂದಿರೋ? ’ ಎಂದರು ನಗುತ್ತ

ನನ್ನ ನನ್ನ ಕುತ್ತಿಗೆ ಮುಟ್ಟಿನೋಡಿಕೊಂಡೆ, ಹೌದು ಅಲ್ಲಿ ಹನುಮನ ಗುಡಿಯಲ್ಲಿ ಕಟ್ಟಿದ ಹಳದಿ ದಾರ ಇನ್ನು ಕುತ್ತಿಗೆಯಲ್ಲಿತ್ತು.

’ನಿಮಗೆ ಅದು ಸಹ ಗೊತ್ತು"  ನನ್ನ ದ್ವನಿಯಲ್ಲಿ ಆಶ್ಚರ್ಯ

’ಅದು ಬಿಡಿ, ಮತ್ತೆ ನೀವು ಹೇಳಿದ್ದಿರಿ, ದೆವ್ವಗಳ ಅಸ್ತಿತ್ವದಲ್ಲಿ ನಂಬಿಕೆ ಇಲ್ಲ ಎಂದು. ಅಲ್ಲದೆ ಪ್ರಕೃತಿಯಲ್ಲಿ ದೆವ್ವದ ಅಸ್ತಿತ್ವದ ಅವಶ್ಯಕತೆಯೇ ಇಲ್ಲ ಎಂದವರು, ಈಗ ದೆವ್ವವನ್ನು ನಂಬುತ್ತಿರುವಿರಿ ಅಲ್ಲವೆ ?" ಆತನ ದ್ವನಿಯಲ್ಲಿ ಕುಚೋದ್ಯ.

ನನಗೆ ಈಗ ಗೊಂದಲವಾಯಿತು.

’ಹಾಗಿದ್ದರೆ ಈಗ ನಡೆದಿರುವದೆಲ್ಲ ಏನು, ನಿಜ ಹೇಳಿಬಿಡಿ, ನೀವು ದೆವ್ವವೋ ಅಥವ ನನ್ನ ಹಾಗೆ ಮನುಷ್ಯನೋ?"

ನಾನು ಕೇಳಿದೆ ಅವರನ್ನು. ಒಂದು ಕ್ಷಣದ ಮೌನ ನಂತರ ನುಡಿದರು, ವೆಂಕಟಾದ್ರಿ

’ನಡೆದಿರುವ ಘಟನೆಯನ್ನೆಲ್ಲ ಒಂದು ಕ್ರಮದಲ್ಲಿ ಮೊದಲಿನಿಂದ ತರ್ಕಬದ್ಧವಾಗಿ ಯೋಚಿಸಿ. ಯಾವುದು ನಿಜ ಯಾವುದು ಸುಳ್ಳು ಎನ್ನುವ ಬಗ್ಗೆ ಚಿಂತಿಸಿ. ನಾನು ಮನುಷ್ಯನೋ ಅಥವ ದೆವ್ವವೋ ಎನ್ನುವ ಬಗ್ಗೆ ನೀವೆ ನಿರ್ಧಾರಕ್ಕೆ ಬನ್ನಿ. ಊರಿಗೆ ಹೊರಟಿರುವಿರಿ ಹೋಗಿಬನ್ನಿ  ’

ಆ ಕಡೆಯಿಂದ ಪೋನ್ ಡಿಸ್ಕನೆಕ್ಟ್ ಆಯಿತು. ನನ್ನ ಮನವೀಗ ಗೊಂದಲದ ಗೂಡಾಯಿತು. ಯಾವುದು ನಿಜ ಯಾವುದು ಭ್ರಮೆ ?

ಆತನನ್ನು ನೋಡಿದ್ದು, ಮಾತನಾಡಿದ್ದು, ಮರಸಳ್ಳಿಗೆ ಹೋಗಿ ಆತನ ಮನೆಯಲ್ಲಿ ಮಲಗಿದ್ದು , ಬೆಳಗ್ಗೆ ಏಳುವಾಗ ನಾನು ಸಮಾದಿಯ ಮೇಲೆ ಮಲಗಿದ್ದು ಎಲ್ಲವೂ ನಿಜ. ಆದರೆ ಈಗ ಕಾಲ್ ಮಾಡಿದವರು ಯಾರು ಅವರೇನ? .

ಏನು ತೋಚದಾಯಿತು.   

ನನ್ನ ಮುಖ ನೋಡುತ್ತಿದ್ದ ಪತ್ನಿಯ ಮುಖದಲ್ಲೂ ಭಯದ ಛಾಯೆ ಕಾಣುತ್ತಿತ್ತು.

ನಿನ್ನೆ ನಡೆದ ಘಟನೆಯ ಪ್ರತಿ ಕ್ಷಣವನ್ನು ಮನ ನೆನೆಯತೊಡಗಿತು.

- ಮುಗಿಯಿತು.

Comments

Submitted by ಗಣೇಶ Mon, 03/16/2015 - 00:11

ಪಾರ್ಥರೆ, ಹೆದರಬೇಡಿ...ನಮ್ಮ ಬಗ್ಗೆ ಆಸಕ್ತಿ ಇದ್ದವರಿಗೆ ನಾವೇನೂ ಹಾನಿ ಮಾಡುವುದಿಲ್ಲ. ನಾವು ಇಲ್ಲಾ ಎನ್ನುವವರಿಗೂ ತೊಂದರೆ ಕೊಡುವುದಿಲ್ಲ..ಅದೆಲ್ಲಾ ಗುಣ ನೀವು ಮಾನವರದ್ದು...
ನಮಗೂ ಸ್ವಲ್ಪ ಮನರಂಜನೆ ಬೇಕಲ್ಲಾ...ಅದಕ್ಕೆ ಕೆಲವರನ್ನು ಕೆಣಕುತ್ತೇವೆ...ಅವರು ಹೆದರಿಯೇ ಸತ್ತರೆ ನಾವು ಜವಾಬ್ದಾರರಾ? ಮುಂದಿನ ವಾರ ಇನ್ನೊಬ್ಬ ದೆವ್ವವನ್ನು ಕತೆ ಹೇಳಲು ಕಳುಹಿಸುವೆ...ಕತೆ ಚೆನ್ನಾಗಿ ಹೇಳುವಿರಿ. ಬೈ...ಹ್ಹ.ಹ್ಹ...ಹ್ಹಾ.....................ಹ್ಹ
-ದೆವ್ವಗಣಗಳೊಡೆಯ ಗಣೇಶ.

Submitted by partha1059 Tue, 03/17/2015 - 13:20

In reply to by ಗಣೇಶ

ಸಾರ್ ನನಗೆ ಹೆದರಿಕೆಯೆ , ದೆವ್ವದ‌ ಕತೆ ಬರೆದು ಅಭ್ಯಾಸವಾಗಿ ನಿಜವಾದ‌ ದೆವ್ವ‌ ಎದುರಿಗೆ ಬಂದು ನಿಂತರೂ ಸಹ‌ ಅದರ‌ ಕತೆ ಕೇಳುತ್ತೇನೆ ನಿಮಗೆ ಹೇಳಬಹುದಲ್ಲ‌ ಎಂದು, ಕಳಿಸಿ ಇನ್ನೊಂದು ದೆವ್ವವನ್ನು ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್ಹ್

ಪಾರ್ಥಸಾರಥಿ

Submitted by nageshamysore Mon, 03/16/2015 - 04:22

ಪಾರ್ಥಾ ಸಾರ್ ನಮಸ್ಕಾರ.. ಕತೆಯಲ್ಲಿ ಕರೆದುಕೊಂಡು ಹೋದ ವ್ಯಕ್ತಿಯೆ ದೆವ್ವವಿರಬಹುದೆಂಬ ಅನುಮಾನ ಮೊದಲ ಕಂತಿನಲ್ಲೆ ಮೂಡಿತ್ತು. ಆದರೆ ನಂತರದ ಟ್ವಿಸ್ಟುಗಳನ್ನು (ರುದ್ರೆಗೌಡನ ಉಪ ಕಥೆ ಮತ್ತೆ ಆ ವ್ಯಕ್ತಿಯೆ ಪೋನ್ ಮಾಡಿ ಮಾತನಾಡುವ ಪ್ರಸಂಗ) ನಿರೀಕ್ಷಿಸಿರಲಿಲ್ಲ. ಒಟ್ಟಾರೆ ಅಂತಿಮವಾಗಿ ಓದುಗನಲ್ಲು ಯಾರು ನಿಜವಾದವರು, ಯಾರು ದೆವ್ವಗಳು ಎನ್ನುವ ಗೊಂದಲ ಹುಟ್ಟಿಸುವುದಲ್ಲದೆ, ಎಲ್ಲರನ್ನು ದೆವ್ವಗಳೇ ಏನೊ ಎನ್ನುವ (ಕೆಲವು ಹಗಲಿನ, ಕೆಲವು ಇರುಳಿನ ) ಅನುಮಾನದಿಂದ ನೋಡುವಂತೆ ಮಾಡಿಬಿಡುತ್ತದೆ. ಕಥೆಗೆ ಆಯ್ದುಕೊಂಡ ಪರಿಸರ, ಊರುಗಳ ವಿವರ ಸಹಜವಾಗಿ ಮೂಡಿಬಂದಿದೆ. ಕಾದ ಕುತೂಹಲ ತಣಿಸಿದ ಕಥೆ :-)

Submitted by partha1059 Tue, 03/17/2015 - 13:21

In reply to by nageshamysore

ನಾಗೇಶ್ ಸಾರ್, ಮೊದಲ‌ ಕಂತಿನಲ್ಲಿ ಎಲ್ಲರಿಗೂ ಅನುಮಾನ‌ ಬರುತ್ತೆ ಅಂತ‌ ಗೊತ್ತು ಅದಕ್ಕೆ ಏನೇನೊ ತಿರುವು ಕೊಡಬೇಕಾಯಿತು !
ಉಪ್ !

ಪಾರ್ಥಸಾರಥಿ

Submitted by partha1059 Tue, 03/17/2015 - 13:22

ಮೊದಲ‌ ಬಾಗಕ್ಕೆ ಶ್ರೀನಿವಾಸ ಮೂರ್ತಿಗಳು ಪ್ರತಿಕ್ರಿಯೆ ನೀಡಿದ್ದರು ನಾನು ಉತ್ತರಿಸಿದ್ದೆ
ಆದರೆ ಆ ಎರಡು ಪ್ರತಿಕ್ರಿಯೆಗಳು ಮಾಯವಾಗಿವೆ !!!

ಪಾರ್ಥಸಾರಥಿ

ಈಗಷ್ಟೇ ಅವರ ಇ-ಮೇಯ್ಲ್ ತಲುಪಿತು. ಆದರೆ ಪ್ರತಿಕ್ರಿಯೆಗಳು ಹೇಗೆ ಮಾಯವಾದವು ಎನ್ನುವುದರ ಬಗ್ಗೆ ಇನ್ನೂ ಖರೆಯಾದ ಮಾಹಿತಿ ಸಿಕ್ಕಿಲ್ಲ.

ಸಮಯ ಸಿಗುತ್ತಿರುವಂತೆಯೇ ಸ್ವತಃ ನೋಡಿ ತಿಳಿಸುವ ಪ್ರಯತ್ನ ಮಾಡುವೆ.

ಕಳೆದ ಹಲವು ವಾರಗಳಿಂದ ಸಂಪದದಲ್ಲಿ spam attack ಹೆಚ್ಚಾಗಿದ್ದು ಅದನ್ನು ನಿಯಂತ್ರಿಸಲು ಸಾಕಷ್ಟು ಕೆಲಸಗಳು ನಡೆಯುತ್ತಿವೆ. ಕಂಟೆಂಟ್ ಮಟ್ಟಿಗೆ ಕೆಲವು ಏರು ಪೇರುಗಳಾಗುವ ಸಂಭವ ಉಂಟು. ತಂತ್ರಜ್ಞರೊಂದಿಗೆ ದಯವಿಟ್ಟು ಸಹಕರಿಸಿ. ಏನಾದರೂ ಏರು ಪೇರು ಕಂಡುಬಂದಲ್ಲಿ ತಪ್ಪದೆ ತಿಳಿಸಿ.

ಬಹುಶಃ ಇದು ನಿಮ್ಮ ಗಮನಕ್ಕೆ ಈಗಾಗಲೆ ಬಂದಿರಬಹುದು. ಈ ನಡುವೆ ಕೆಲವು ದಿನದ ಹಿಂದೆ, ಪ್ರತಿಕ್ರಿಯೆ ನೀಡಿದಾಗ ಬರುವ ಮಿಂಚಂಚೆಯೆ ನಿಂತುಹೋಗಿತ್ತು. ಸಂಪದದಲ್ಲಿ ಹೋಗಿ ಲೇಖನದ ಒಳಗೆ ನೋಡಿದರೆ ಮಾತ್ರ ಪ್ರತಿಕ್ರಿಯೆ ಕಂಡರು, ಅದರ ಸೂಚನೆ ನೀಡುವ ಮಿಂಚಂಚೆ ಬರುತ್ತಿರಲಿಲ್ಲ. ಕೆಲವು ದಿನಗಳಾದ ಮೇಲೆ ಇದು ಸರಿ ಹೋಯಿತು (ತದ ನಂತರ ಹಳೆಯ ಮಿಂಚಂಚೆಗಳು ಮತ್ತೆ ಬಂದವು).

ಆತ್ಮೀಯ hpn ರವರಿಗೆ,
ನನ್ನ ಪ್ರತಿಕ್ರಿಯೆ ಗಮನಿಸಿದ್ದಕ್ಕಾಗಿ ವಂದನೆಗಳು . ಮುಂದೂ ಇಂತಹ ಅಡಚಣೆಗಳೇನಾದರು ಇದ್ದಲ್ಲಿ ಖಂಡೀತ ಸಂಪದ ತಂತ್ರಜ್ಞರ ಗಮನಕ್ಕೆ ತರುವೆ
ವಂದನೆಗಳೊಡನೆ
ಪಾರ್ಥಸಾರಥಿ

Submitted by kavinagaraj Tue, 03/24/2015 - 21:57

ನಿಮ್ಮ ಕಥೆಯ ಪೂರ್ವಾರ್ಧ ಮತ್ತು ಉತ್ತರಾರ್ಧಗಳೆರಡನ್ನೂ ಈಗ ತಾನೇ ಓದಿ ಮುಗಿಸಿದೆ. ನಿದ್ದೆ ಬರುತ್ತಿದೆ. ಬೆಳಿಗ್ಗೆ ಏಳುವುದರ ಒಳಗೆ ಮತ್ತೆಲ್ಲೋ ಮಲಗಿರುವಂತೆ ಆಗಿ ಕಥೆ ಬರೆಯುವಂತೆ ಆಗದಿರಲಿ!! :))

Submitted by partha1059 Thu, 03/26/2015 - 12:47

In reply to by kavinagaraj

ನಾಗರಾಜರೆ ನೀವು ಮಲಗಿ ಏಳಲಿ ಎಂದು ಉತ್ತರಿಸಲು ಕಾಯುತ್ತಿದ್ದೆ :‍)
ಎಲ್ಲಿ ಮಲಗಿದ್ದರೋ ಅಲ್ಲಿಂದಲೆ ಎದ್ದಿರಿ ಎಂದು ನಂಬುತ್ತಿದ್ದೇನೆ !
ಇಲ್ಲಿದಿದ್ದಲ್ಲಿ ನೀವು ಮತ್ತೊಂದು ಕತೆ ಬರೆಯಿರಿ!

ವಂದನೆಗಳು
ಪಾರ್ಥಸಾರಥಿ

Submitted by partha1059 Thu, 03/26/2015 - 15:32

In reply to by partha1059

ತುಂಬಾ ದಿನಗಳ‌ ನಂತರ‌ ಕತೆಯೊಂದರ‌ ನೋಡುಗರ‌ ಕೌಂಟ್ 500 ದಾಟಿತು !
ಒಂದು ರೀತಿ ಖುಶಿ!
ಸಂಪದ‌ ಮೊದಲಿನಂತೆ ಮೈದುಂಬಿಕೊಂಡರೆ ಹೊಸ‌ ಹೊಸ‌ ವಿಚಾರ‌ ಬರೆಯಲು ಒಂದು ಸ್ಪೂರ್ತಿ ಇದ್ದಂತೆ !