ಕರುಣಾಳು ಬಾ ಬೆಳಕೆ.....

ಕರುಣಾಳು ಬಾ ಬೆಳಕೆ.....

                       

ಮೂರನೇ ಪೀರಿಯಡ್ ಮುಗಿಸಿ ಉಸ್ಸಪ್ಪ್ಪಾ…..ಎಂದುಕೊಂಡು ಕುರ್ಚಿಯ ಮೇಲೆ ನಾನು ಕುಳಿತುಕೊಂಡಾಗ ೫ನೇ ತರಗತಿಯ ಉತ್ತರಪತ್ರಿಕೆಗಳ ಬೆಟ್ಟ ನನ್ನನ್ನು ಅಣಕಿಸಿತು.ಇನ್ನು ಎರಡು ಪೀರಿಯಡ್  ಬಿಡುವಾಗಿದೆ.ಈ ಪರ್ವತವನ್ನಾದರೂ ಕರಗಿಸೋಣ ಎಂದುಕೊಂಡು ಕೆಂಪು ಪೆನ್ ಕೈಗೆತ್ತಿಕೊಂಡೆ.ಅವೇ ಪ್ರಶ್ನೆಗಳು-ಉತ್ತರಗಳು. ನಿಮ್ಮ ದಿನಚರಿಯ ಬಗ್ಗೆ ಅಜ್ಜಿಗೆ ಪತ್ರ ಬರೆಯಿರಿ ಎಂಬುದಕ್ಕೆ ಮಾತ್ರ ಉತ್ತರಗಳು ಕುತೂಹಲಕಾರಿಯಾಗಿದ್ದವು.ಈ ಹತ್ತು ವರ್ಷದ ಮಕ್ಕಳ ಸರಳ- ಸುಂದರ  ಸಮಸ್ಯೆಗಳ,ನಿರೀಕ್ಷೆಗಳ ಪ್ರಪಂಚವನ್ನು ವರ್ಣಿಸುವ ಆ ಪತ್ರಗಳನ್ನು ಏನೆಂದು ಬಣ್ಣಿಸಲಿ.ಹಾಗೇ ಮುಂದಿನ ಪತ್ರಿಕೆ ಕೈಗೆತ್ತಿಕೊಂಡೆ. ಯಾಕೋ ಇದು ಎಲ್ಲದರಂತಲ್ಲ ಅನಿಸಿತು. ಆದಿತ್ಯ ಬರೆದ ಪತ್ರ ಹೀಗಿತ್ತು.“ಅಜ್ಜಿ,ನಾನು ಬಹಳ  ಬೇಸರದಲ್ಲಿದ್ದೇನೆ. ಏಕೆಂದರೆ ಮನೆಯಲ್ಲಿ ಅಮ್ಮ ಇಲ್ಲ.ಅವಳು ದೇವರ ಬಳಿ ಹೋದ ಮೇಲೆ ಮನೆಯಲ್ಲಿ ನನ್ನನ್ಯಾರೂ ಪ್ರೀತಿಸುತ್ತಿಲ್ಲ.ಅಪ್ಪ ಯಾವಾಗಲೂ ಚಿಕ್ಕಮ್ಮನ ಜೊತೆಗೇ ಮಾತಾಡ್ತಾರೆ. ಎಲ್ಲರಿಗೂ ನನ್ನ ತಮ್ಮನ ಮೇಲೆಯೇ ಪ್ರೀತಿ.ಅಮ್ಮ ನೀನ್ಯಾಕೆ ನನ್ನ ಬಿಟ್ಟು ಹೋದೆ? ….ಇತ್ಯಾದಿ ……..ಯಾಕೋ ಮನಸ್ಸು ಕದಡಿಹೋಯಿತು. ನಿಜ, ತಾಯಿಗೆ ಸರಿಸಾಟಿ ಯಾರು?೨ವರ್ಷಗಳ ಹಿಂದೆ ಆದಿತ್ಯನ ತಾಯಿ ಅಪಘಾತಕ್ಕೆ   ಬಲಿಯಾಗಿದ್ದು , ಮಾಧ್ಯಮಗಳಲ್ಲಿ ಸುದ್ದಿಯಾದದ್ದು  ನೆನಪಾಯಿತು.ಓಹ್ …ಅವನ ತಂದೆ ಆಗಲೇ ಇನ್ನೊಂದು ಮದುವೆಯಾಗಿ,ಒಂದು ಮಗು ಕೂಡಾ…ಪಾಪ ಆತ ತಾನೇ ಏನು ಮಾಡಲು ಸಾಧ್ಯ? ಆದಿತ್ಯನನ್ನು ನೋಡಿಕೊಳ್ಳಲು ಕಷ್ಟವಾಗಿರಬಹುದು. ಆದರೆ ಈ ಮಗು ಹೀಗೆ ದು:ಖಿಸುತ್ತಿದ್ದರೆ ಏನು ಚೆನ್ನ? ನಾನು ಆದಿತ್ಯನ ಕ್ಲಾಸ್ ಟೀಚರ್ ಆಗಿ ಸುಮ್ಮನೆ ಇದ್ದರೆ ಅಪರಾಧವಲ್ಲವೇ?ನಾನೇನಾದರೂ ಇದಕ್ಕೆ ಮಾಡಲೇಬೇಕೆಂದು ನಿರ್ಧರಿಸಿದೆ.

 ಊಟದ ಅವಧಿಯಲ್ಲಿ ತರಗತಿಗೆ ಹೋದವಳು ಆದಿತ್ಯನ ಡಬ್ಬಿ ನೋಡಿದೆ.ದೋಸೆ, ಚಟ್ನಿ ಜೊತೆಗೆ ಹಣ್ಣಿನ ತುಂಡುಗಳು…ಪರವಾಗಿಲ್ಲ ಅನಿಸಿತು.ಆದರೆ ಇವನು ಅರ್ಧ ಹಾಗೇ ಉಳಿಸಿದ್ದ.ಕೇಳಿದರೆ ಇಷ್ಟವಿಲ್ಲ ಅಂದ.ಶುಭ್ರವಾದ ಬಟ್ಟೆ ಧರಿಸುವ,ಓದುವುದರಲ್ಲೂ ಉತ್ತಮವಾಗೇ ಇರುವ,ಒಳ್ಳೆಯ ಊಟವೂ ತರುವ ಈ ಮಗುವಿನ ಮನದಲ್ಲಿ ಎಂಥ ನೋವಿದೆ ಅನಿಸಿ ಬೇಜಾರಾಯಿತು.ತಂದೆ ತಾಯಿ ಮಕ್ಕಳನ್ನು ಸಂತೋಷವಾಗಿಡಲು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಅದು ಮರೀಚಿಕೆಯೇ ಆಗುತ್ತದಲ್ಲ. ಯಾಕೆ ಹೀಗೆ? ಹೃದಯ ತಳಮಳಗೊಂಡಿತು.ಸೀದಾ ಮುಖ್ಯೋಪಾಧ್ಯಾಯರಿಗೆ ವಿಷಯ ತಿಳಿಸಿ,ಪೋಷಕರನ್ನು ಕರೆದು ಮಾತಾಡಲೇ ಎಂದೆ.ಅವರು ಅಗತ್ಯವಾಗಿ ಮಾಡಿ ಬೇಕಿದ್ದರೆ ನನ್ನ ಬಳಿಗೇ ಕರೆತನ್ನಿ ಎಂದರು.

ಸರಿ,ಮಾರನೇ ದಿನ ಸರಿಯಾದ ಸಮಯಕ್ಕೆ ತಂದೆ- ಚಿಕ್ಕಮ್ಮ ಹಾಜರ್.ಅವರನ್ನು ನೋಡುತ್ತಿದ್ದಂತೆಯೇ ನನ್ನ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾದವು.ಇಬ್ಬರೂ ಸುಸಂಸ್ಕೃತರೂ ಹಾಗೂ ಮೃದುಭಾಷಿಗಳು.ಕೈಯಲ್ಲಿ ಮುದ್ದಾದ ಒಂದು ವರ್ಷದ ಮಗು. ಆಕೆಯ ಪ್ರಕಾರ ಮನೆಯಲ್ಲಿ ಆದಿತ್ಯ ಎಲ್ಲದಕ್ಕೂ ಸಿಡಿಮಿಡಿಗೊಳ್ಳುತ್ತಾನೆ.ಆಕೆ ಎಷ್ಟೇ ಪ್ರಯತ್ನಿಸಿದರೂ ಆದಿತ್ಯನ ಮನ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ಆಕೆಯ ಅಳಲು. ಮರುಮದುವೆಯಾಗಿ ತಪ್ಪು ಮಾಡಿದೆನೋ ಎಂಬುದು ಆತನ ಅಳಲು.ಯಾಕೋ ಇದು ಕಗ್ಗಂಟಾಯಿತಲ್ಲ ಅನಿಸಿತು.ಆದರೂ ಆದಿತ್ಯನ ಹಿತಕ್ಕಾಗಿ ನೀವಿಬ್ಬರೂ ಇನ್ನೂ ಕೆಲಕಾಲ ತಾಳ್ಮೆ ವಹಿಸಬೇಕು ಎಂದು ಸಲಹೆ ನೀಡಿ ಅವರನ್ನು ಬೀಳ್ಕೊಟ್ಟೆ. ಆದಿತ್ಯನಿಗೂ ಈ ವಿಚಾರದಲ್ಲಿ ಅರಿವು ಮೂಡಿಸಲು ದಿನವೂ ಅವನ ಜೊತೆ ಸ್ವಲ್ಪಹೊತ್ತು ಕಳೆಯಲು ನಿರ್ಧರಿಸಿದೆ.

 

ಆ ಭಾನುವಾರ ನಮ್ಮ ಬಂಧುಗಳೊಬ್ಬರ ಮನೆಯ ಸಮಾರಂಭಕ್ಕೆ ಜಯನಗರಕ್ಕೆ ಹೋಗಿದ್ದೆವು.ಅಲ್ಲಿ ಒಳಗೆ ಹೋಗಿ ಮಾತನಾಡುತ್ತಿದ್ದರೆ ಅರೆ… ಅಲ್ಲಿದ್ದಾನೆ ಆದಿತ್ಯ.ಅವನ ತಂದೆ ನನ್ನ ಬಂಧುಗಳ ಸಹೋದ್ಯೋಗಿ. ಯಾಕೋ... ಏನೋ... ಮಕ್ಕಳಿಗೆ ಶಾಲೆಯ ಹೊರಗೆ ಟೀಚರ್  ಕಂಡರೆ ಬಹಳ  ಇರಿಸುಮುರುಸಾಗುತ್ತದೆ.  ಪಾಪ.. ಆದಿತ್ಯ ನನ್ನ ಕಣ್ತಪ್ಪಿಸಿ ಓಡಾಡಲಾರಂಭಿಸಿದ . ಅವನ ಪಕ್ಕದ ಮನೆಯಲ್ಲೇ ವಾಸವಾಗಿರುವ ನನ್ನ ಮಾವನ ಮಗಳು ಕೂಡಾ ಬಂದಿದ್ದಳು. ಅವಳಲ್ಲಿ ಲೋಕಾಭಿರಾಮವಾಗಿ ಆದಿತ್ಯನ ವಿಷಯ ಪ್ರಸ್ತಾಪಿಸಿದೆ.ಆಕೆಯ ಪ್ರಕಾರ ಅವನ ತಂದೆ- ಚಿಕ್ಕಮ್ಮ ತುಂಬಾ ಚೆನ್ನಾಗಿ ಅವನ ಆರೈಕೆ ಮಾಡುತ್ತಾರೆ.ಆದರೆ ಆದಿತ್ಯನ ಅಜ್ಜಿ [ಅವನ ತಾಯಿಯ ತಾಯಿ] ಆಗಾಗ ಅವನಿಗೆ ದೂರವಾಣಿಕರೆ ಮಾಡುತ್ತಾರೆ.ವಾರಾಂತ್ಯದಲ್ಲಿ ತಮ್ಮ ಮನೆಗೂ ಕರಕೊಂಡು ಹೋಗುತ್ತಾರೆ.ಆದಿತ್ಯನನ್ನು ಅವನ ಚಿಕ್ಕಮ್ಮನಿಂದ ಮಾನಸಿಕವಾಗಿ ದೂರವಿರಿಸುತ್ತಾರೆ.ಅವನ ಸಮಸ್ಯೆಗೆ ಅವರ ದುರ್ಬೋಧನೆಯೇ ಕಾರಣ. ಅಬ್ಬಾ ….. ಮನಸ್ಸು ನಿರಾಳವಾಯಿತು. ನಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ ದೇವರು[ ಹಾಗೊಬ್ಬ ಇದ್ದರೆ] ಯಾವ ಯಾವ ರೂಪಗಳಲ್ಲಿ ಬಂದು ಸಹಾಯ ಮಾಡುತ್ತಾನಲ್ಲ ….

ಮುಂದಿನವಾರ ಆದಿತ್ಯನ ಅಜ್ಜಿಗೆ ದೂರವಾಣಿಕರೆ ಮಾಡಿ ನಯವಾಗಿ ಮಾತನಾಡಿ, ಶಾಲೆಗೆ ಕರೆಯಿಸಿದೆ.ಮಗಳ ಸಾವಿನಿಂದ ಕಂಗೆಟ್ಟಿದ್ದ ಅವರು,ಅವಳ ಸ್ಥಾನದಲ್ಲಿರುವ ಇನ್ನೊಬ್ಬ ಹೆಣ್ಣಿನ ಮೇಲಿನ ಮಾತ್ಸರ್ಯದಿಂದ  ಬೆಂದುಹೋಗಿದ್ದರು.ಹಾಗೇ ಸ್ನೇಹದಿಂದ ಅವರ ಜೊತೆ ಮಾತನಾಡಿ,ಆದಿತ್ಯನ ಭವಿಷ್ಯದ ದೃಷ್ಟಿಯಿಂದ ಅವನು ಚಿಕ್ಕಮ್ಮನ ಜೊತೆ ಹೊಂದಿಕೊಳ್ಳುವುದು ಎಷ್ಟು ಮುಖ್ಯ …ಇತ್ಯಾದಿಯಾಗಿ ಚರ್ಚೆ ನಡೆಸಿದವು.ಮುಂದೆ ಅನೇಕ ಬಾರಿ ಅವರಾಗೇ ನನ್ನನ್ನು ಕಾಣಲೂ ಬಂದರು.ಹಾಗೇ ಶೈಕ್ಷಣಿಕ ವರುಷ ಉರುಳಿತು.

                                                  ****

ಯಾಕ್ರೀ …. ಇಲ್ಲಿ ನಿಂತುಕೊಂಡು ಏನು ಯೋಚಿಸ್ತಿದ್ದೀರಾ…ಮನೆಗೆ ಹೋಗಲ್ವಾ..ದೈಹಿಕ ಶಿಕ್ಷಕರ ಧ್ವನಿ ನನ್ನನ್ನು ವಾಸ್ತವಕ್ಕೆ ತಂದಿತು.ಅರೆ… ನಾನಿಲ್ಲೆ ಗೇಟಿನ ಬಳಿ ಯಾಕಿದ್ದೇನೆ? ಹೌದು ಈಗ ತಾನೇ ಆದಿತ್ಯ ಬಂದಿದ್ದನಲ್ಲ…ಪಿ ಇ ಎಸ್ ಕಾಲೇಜಿನಲ್ಲಿ ಇಂಜನಿಯರಿಂಗ್ ಓದುತ್ತಿದ್ದೇನೆ ಎಂದನಲ್ಲ….ಅಮ್ಮ ಊರಿಗೆ ಹೋಗಿದ್ದಾರೆ…..ರಾತ್ರಿ ಬರುತ್ತಾರೆ. … ಹಾಗಾಗಿ ಮೂರನೇ ತರಗತಿಯಲ್ಲಿ ಓದುತ್ತಿರುವ ಅವನ ತಮ್ಮನನ್ನು ಮನೆಗೆ ಒಯ್ಯಲು ನಾನೇ ಬಂದೆ..….ಎಂದನಲ್ಲ.ಅವರಿಬ್ಬರೂ ಬೈಕಿನಲ್ಲಿ ಮರೆಯಾಗುತ್ತಿದ್ದಂತೆ ನಾನು ನೆನಪಿನ ಲೋಕಕ್ಕೆ ಜಾರಿದ್ದೆ.ಇಲ್ಲ… ಹೀಗೆ… ಹಳೆ ವಿದ್ಯಾರ್ಥಿಯೊಬ್ಬನ ಜೊತೆ ಮಾತನಾಡುತ್ತಿದ್ದೆ….ಎಂದು ನಗುತ್ತಾ ಹೇಳಿ ನೆಮ್ಮದಿಯಿಂದ ಮನೆಯ ದಾರಿ ಹಿಡಿದೆ.

 

Rating
No votes yet

Comments

Submitted by kavinagaraj Thu, 03/26/2015 - 15:02

ಉತ್ತಮ ಶಿಕ್ಷಕರು ಮಕ್ಕಳ ಬಗ್ಗೆ ಹೀಗೆಯೇ ನಿಗಾ ವಹಿಸುತ್ತಾರೆ! ಚೆನ್ನಾಗಿದೆ.