ಜಲಪಾತ ಮತ್ತು ನಾನು - ಲಕ್ಷ್ಮೀಕಾಂತ ಇಟ್ನಾಳ

ಜಲಪಾತ ಮತ್ತು ನಾನು - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ಜಲಪಾತ ಮತ್ತು ನಾನು
1                                                                                                                                 
ಎಲ್ಲೆಂದರಲ್ಲಿ ಹಸಿರು ಮಳೆ ಸುರಿದು, ಸೊಂಪಾಗಿತ್ತು,
ನನ್ನೊಡಲಿನ  ಈ  ಅಂಗಳಕ್ಕೆ ತಾಕುತ್ತಿರಲಿಲ್ಲ,  ರಶ್ಮಿಗಳು
ಬಲು  ನುಸುಳುತ್ತಿದ್ದವು  ಮರಗಳ ಕೊರಳಲ್ಲಿ  ದಿಕ್ಕು ತಪ್ಪಿಸಿ, ನೆಲ ಮೂಸಲು,
ಆಡಿಕೊಂಡಿದ್ದವು ಬದುಕಿನಾಟ ,….ಹುಲಿ, ಚಿರತೆ, ಆನೆ, ಕೋಣಗಳು
 ಜಿಂಕೆ ಮೊಲಗಳ ದಂಡಿನೊಂದಿಗೆ,
ನವಿಲುಗಳು ಕಲಿಸುತ್ತಿದ್ದವು   ಕುಣಿತಗಳನ್ನು,  ಹಸಿರು ಕಾನನದ ಎಲೆಎಲೆಗಳಿಗೆ,
ನನ್ನ ಭೋರ್ಗರೆತಕ್ಕೆ ಹಕ್ಕಿ ಇಂಚರಗಳ ಮಾರ್ದನಿ,
ಧೂಮ್ರಪಟಗಳು   ಪರದೆ ತೂರಿ ನನ್ನ ರಂಗವನ್ನು ಮಾಯವಾಗಿಸುತ್ತಿದ್ದವು,
ಹಾಡು ಹಗಲಲ್ಲೆ ಕವಿಯುವ ಕತ್ತಲು,
ನಿಶಾಚರಿಗಳನ್ನು  ಬೇಟೆಗಿಳಿಸುತ್ತಿತ್ತು,
ತಣ್ಣಗೆ ಜುಳುಜುಳು ಹರಿವ, ಕಲರವದ    ದಂಡೆಗೆ  ದಣಿದು
ಬಾಯಾರಿ  ಬಾಯಿ ಚಾಚಿ ಮುತೀಡುತ್ತಿದ್ದವು ,.. ನನ್ನ ಅಂಗಳದ  ಚತುರ್‍ಪಾದಿಗಳು……
ಗುಟುಕು ನೀಡಿ ಸಂತೈಸುತ್ತಿದ್ದೆ,
….  
ಒಂದೊಮ್ಮೆ ಈ ದ್ವಿಪಾದಿಯ ಹೆಜ್ಜೆಗಳು ಮೂಡಿದ ಮೇಲೆ,
 …, ನನ್ನ ಒಡಲಿಗೆ ಬೆಂಕಿ ಬಿದ್ದಿತು….
ಇವನ  ವಾಂಛೆಗಳೋ ಮುಗಿಲೆತ್ತರ!…..
ರಸ್ರೆ, ಗಣಿ, ಮನರಂಜನೆಯೆಂದು, ನನ್ನ ಎದೆ ಎದೆಗಳಲ್ಲಿ   ಬಗೆದು,
ಅಪಧಮನಿಗಳನ್ನು ಕತ್ತರಿಸಿ, ನನ್ನುಸಿರು ಕೊಲ್ಲುತ್ತಿದ್ದಾನೆ,
ನೆತ್ತಿ  ಬೋಳಾಗಿ,….ನನ್ನ ನಾಡಿಗಳು  ನಿಧಾನವಾಗಿ ಸಾಯುತ್ತಿವೆ, ಕ್ಷಣ ಕ್ಷಣವೂ,
ನನ್ನ  ಜಲಪಾತದಲ್ಲಿ ನಾನೀಗ  ಜಿನುಗುತ್ತಿರುವೆ  ಮಾತ್ರ,
ಕಲ್ಲು ಕೊರಕಲಲ್ಲಿ, ಸಂದು ಗೊಂದುಗಳಲ್ಲಿ ನಿಶ್ಯಬ್ದವಾಗಿ,
ಪೋಲಿಯೋ ಕಾಲುಗಳಲ್ಲಿ

ಮರದ ದಿಮ್ಮಿಗಳು ಬೇರುಸಹಿತ ತೇಲಿ ಬರುತ್ತಿದ್ದವು ಮೊದಲು,
ಈಗ ಕರಗಿದ ಮಣ್ಣಷ್ಟೆ ಧುಮಿಗಿಡುತ್ತದೆ, … ಬಣ್ಣಗೆಟ್ಟು!
ಎಂದೂ  ಕೈಜೋಡಿಸದ ನನ್ನ ದಂಡೆಗಳು
 ಈಗ ವರ್ಷದ ಬಹುತೇಕ ದಿನಗಳು ಜೊತೆಗೂಡಿ
ಓಡುವ ಮೋಡಗಳನ್ನು ನೋಡುತ್ತಿರುತ್ತವೆ,… ಬಾಯೊಣಗಿ
….. 
2

ಅದೇ ಜಲಪಾತವು ಆಕರ್ಷಣೆಯ ಪ್ರವಾಸಿ ಕೇಂದ್ರವೀಗ,

ಕಿರಿದಾದ ದಾರಿಯೊಂದು ಜಲಪಾತದಡಿಗೆ ಕರೆದೊಯ್ಯುತ್ತದೆ,
ಕೊರಕಲಿನಲ್ಲಿ ಜಿನುಗುತ್ತಿರುವ ನೀರನ್ನು  ಒಮ್ಮೆ ಬಾಯಲ್ಲಿ ಹಾಕಿಕೊಂಡೆ,
ಅರೆ…..ಇದೇನಿದು……!!
ನನ್ನರಿವಿಗೆ ಬರುವ ಮುನ್ನ ಫಕ್ಕನೆ ನನ್ನವೆರಡು ಕಂಬನಿಗಳೂ ಅದಕ್ಕೆ ಗೂಡಿದವು!

ಅದೇನೊ 'ರೆಸಾರ್ಟ'ಗಳಂತೆ, ….ಹೊಸ 'ಎಬೋಲಾ' ಅದಕ್ಕೆ,
ಅದರ ನೆತ್ತಿಯ ಕಾಡಿನಲ್ಲಿ ಹುಣ್ಣುಗಳಂತೆ ಎದ್ದಿವೆ,…. ಲಂಗು ಲಗಾಮಿಲ್ಲದಂತೆ,

ಬಾಯಾರಿಕೆ ಎಂದರೇನೆಂದೇ ಅರಿಯದ ಜಲಪಾತಕ್ಕೀಗ ನಿತ್ಯ  ಬಾಯಾರಿಕೆ,
ಅದರ ಕಾಡೆಲ್ಲ  ದಿನ ದಿನವೂ ಬರಡು, ಇನ್ನಷ್ಟು…
ಪ್ರತಿ ವರುಷವೂ  ಮೊಳಗಟ್ಟಲೆ ಎತ್ತರವಾಗಿ ಬೆಳೆಯಬೇಕಾದ ಮರಗಳೆಲ್ಲ
ಈಗ ಗೇಣು ಗಿಡ್ಡವಾಗುತ್ತಿವೆ,,,
ನೆತ್ತಿಯ ಟೊಂಗೆಗಳೂ ಕೂಡ  ನೀರು ಹುಡುಕಿಕೊಂಡು ಕೆಳಬರುತ್ತಿವೆ…..

ಮಳೆಗಾಲದಲ್ಲೂ ಹಳದಿ ಎಲೆಗಳು ,….ಎಲ್ಲೆಂದರಲ್ಲಿ ಮರಗಳಲ್ಲಿ,
ಅದರ  ಹಸಿರು ಭಾಷೆಯ ಮೇಲೆ ಅದೆಂತಹ ದಬ್ಬಾಳಿಕೆ,

ನೋಡಲು  ಬಂದವರೊಬ್ಬರ ದೃಷ್ಟಿ,  ಜಲಪಾತದ  ಗೋಡೆಗಂಟಿ ಬೆಳೆದ
ಆ ದಷ್ಟ ಪುಷ್ಟ ಮರದ ಮೇಲೆ ಇದೆ, ಹೂ ಹಣ್ಣು ತುಂಬಿದ ಅದರ ರೆಂಬೆಗಳಲ್ಲಿ
ನೂರಾರು ಗೂಡುಗಳು, ಹಕ್ಕಿಗಳು, ಪಿಕ್ಕಿಗಳು,  ಮರಿಗಳು….

ತಡೆಯುವುದಾಗಲಿಲ್ಲ ಅವರಿಗೆ…ಉದ್ಘರಿಸಿದರು....
''…..ಎಷ್ಟೊಂದು ಚಂದ ಮರ ಅಲ್ಲವೇ….  ವಿಶಾಲ, ಎತ್ತರ …. ಪ್ರಕೃತಿಯ ಸೊಬಗು….ನೋಡಿ !
ಸಂದಣಿಯಿಂದೊಂದು ದನಿ….
''ಹೌದು …ಹೌದು,…. ಭಾರಿ ಗಾತ್ರ'',
''  ಒಂದಿಡೀ… ಮನೆಗೆ ಸಾಕಾಗುತ್ತದೆ ಬಿಡಿ..!!
 

ಚಿತ್ರಕೃಪೆ : ಅಂತರ್ಜಾಲ

 

 

 

Rating
No votes yet

Comments

Submitted by H A Patil Wed, 04/15/2015 - 10:23

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
’ ಜಲಪಾತ ಮತ್ತು ನಾನು’ ಒಂದು ಸುಂದರವಾದ ಬಹಳ ಅರ್ಥಗರ್ಬಿತ ಕವನ, ದಟ್ಟ ಕಾನನಗಳಲ್ಲಿ ತಮ್ಮ ಪಾಡಿಗೆ ತಾವು ಹರಿಯುತ್ತ ಬಂದವುಗಳನ್ನು ಕೇವಲ ಶತಮಾನದ ಕಾಲಾವಧಿಯಲ್ಲಿ ಎಂತಹ ಹೀನ ಸ್ತಿತಿಗೆ ತಂದು ನಿಲ್ಲಿಸಿ ಬಿಟ್ಟಿದ್ದೆವೆ. ಇದೊಂದು ಭೀಕರ ವಾಸ್ತವ, ನಿಮ್ಮ ಕವನ ನನಗೆ ಬಾಲ್ಯದ ಶಾಲಾ ದಿನಗಳಲ್ಲಿ ಓದಿದ ತಡಸಲು ತಡಸಲು ಅಗೊ ಅಲ್ಲಿ ದಡ ಧಡ ಎನುವುದು ಎದೆಯಲ್ಲಿ ಎಂಬ ಕವನ ನೆನಪಿಗೆ ಬಂತು, ಜೊತೆಗೆ ಶರಾವತಿಯ ಜೋಗ ಜಲಪಾತ ಸಹ ನೆನಪಾಗಿ ನನ್ನನ್ನು ಬಹಳವಾಗಿ ಕಾಡಿತು, ನಿಮ್ಮ ಕವನ ಜಗದ ಎಲ್ಲ ಜಲಪಾತಗಳ ಪ್ರಾತಿನಿದಿಕ ಕವನವೆಂದರೆ ತಪ್ಪಾಗಲಾರದು. ಕವನ ಕಟ್ಟಿಕೊಡುವ ಕಾನನದ ದಟ್ಟತೆ ಅದರ ಏಕಾಂತತೆ ಸೌಂದರ್ಯ ರೌದ್ರ ಬೀಕರತೆಗಳು ಅಲ್ಲಿನ ಜೀವ ವಿಕಾಸ ಅದಕ್ಕೆ ಕುಂದು ತರುತ್ತಿರುವ ಮನುಷ್ಯ ಒಟ್ಟಾರೆಯಾಗಿ ಬಹಳ ಕಾಡಿದ ಕವನ, ಮತ್ತೆ ಮತ್ತೆ ಓದಿದೆನ ಓದಿದಷ್ಟೂ ನಮ್ಮ ಪರಿಸರ ನಾಶದ ಪ್ರವೃತ್ತಿ ನನ್ನನ್ನು ಕಾಡುತ್ತ ಹೋಯಿತು. ಯಾಕೋ ಏನೋ ಕವನ ಓದುತ್ತಿದ್ದಂತೆ ಒಂದು ರೀತಿಯ ವಿಷಾದ ಭಾವ ನನ್ನನ್ನು ಆವರಿಸಿಕೊಂಡಿದೆ, ಪ್ರಕೃತಿಯನ್ನು ಉಳಿಸಿ ಬೆಳೆಸಲು ನಮ್ಮಿಂದ ಸಾದ್ಯವಿಲ್ಲವೆ ನನ್ನನ್ನು ಕಾಡುತ್ತಿರುವ ಪ್ರಶ್ನೆ, ನನ್ನ ಅಂತರಂಗ ಹೇಳುತಿದೆ ಬಹುಶಃ ಸಾಧ್ಯವೆ ಇಲ್ಲ, ನಮ್ಮ ಭೂಮಿ ಪ್ರಕೃತಿ ಮತ್ತು ಪರಿಸರಗಳು ಶರವೇಗದಲಿ ವಿನಾಶದೆಡೆಗೆ ಮುಖ ಮಾಡಿವೆ. ನಿಮ್ಮ ಕವನ ಇದೆಲ್ಲವನ್ನು ನೆನೆಯುವಂತೆ ಮಾಡಿತು ಧನ್ಯವಾದಗಳು.

Submitted by Lakshmikanth Itnal 1 Fri, 05/01/2015 - 09:27

In reply to by kavinagaraj

ಕ ವಿ ನಾಗರಾಜ್ ಸರ್, ತಮ್ಮ ಎಂದಿನ ಪ್ರೀತಿಪೂರ್ವಕ ಬೆನ್ನು ತಟ್ಟುವಿಕೆಗೆ ಖುಷಿ ಮನದಲ್ಲಿ, ವಂದನೆಗಳು ಸರ್.

Submitted by Lakshmikanth Itnal 1 Fri, 05/01/2015 - 09:26

ಹಿರಿಯರಾದ ಹೆಚ್ ಎ ಪಾಟೀಲ್ ಸರ್, ತಮ್ಮ ಪ್ರತಿಕ್ರಿಯೆಗೆ ವಂದನೆಗಳು. ಕ್ಷಮೆಯಿರಲಿ ಸರ್. ಕೆಲಸದ ಒತ್ತಡದಲ್ಲಿ ನಮ್ಮ ಸಂಪದಕ್ಕೆ ಭೇಟಿ ನೀಡಿ, ತಮ್ಮ ಪ್ರತಿಕ್ರಿಯೆ ಗಮನಿಸಲು ಆಗಿರಲಿಲ್ಲ. ಸಮಯದ ವಿಷಯದಲ್ಲಿ ಅಷ್ಟು ಅದೃಷ್ಟವಂತನಲ್ಲ ನಾನು. ಸಿಗುವ ನಾಲ್ಕೆರಡು ನಿದ್ದೆಯ ತಾಸುಗಳಲ್ಲಿ ಕದ್ದ ಸಮಯವೇ ನನ್ನ ಬರವಣಿಗೆಯ ಸಮಯ. ಈಚೆಗೆ ಕವನಗಳೂ ಹೊಳೆಯುತ್ತಿಲ್ಲದಿರುವುದು ಕಾರಣವೋ ಗೊತ್ತಿಲ್ಲ. ಇತ್ತೀಚೆಗೆ ನನ್ನೊಳಗೆ ಅಷ್ಟೊಂದು ಸಾಹಿತ್ಯವೇ ಮೂಡುತ್ತಿಲ್ಲದಿರುವುದೂ ಒಂದು ಕಾರಣವೋ ಗೊತ್ತಿಲ್ಲ. ಎಷ್ಟೋ ವಿಷಯಗಳಲ್ಲಿ ನಾನು ಅಜ್ಞ., ಅಷ್ಟಿಷ್ಟು ಸಾಹಿತ್ಯವನ್ನು ಓದುತ್ತ, ಬರೆಯುತ್ತ ಅದರೊಂದಿಗೆ ಆನಂದ ಪಡುತ್ತಿರುತ್ತೇನೆ. ಪ್ರಕಟಿಸಲು ಯೋಗ್ಯವಾಗಬಹುದು ಎಂದಾದರೆ ಮಾತ್ರ ಅಲ್ಲಿ ಇಲ್ಲಿಯೆಂದು ಕಳುಹಿಸುತ್ತೇನೆ. ತಮ್ಮೊಂದಿಗೆ ಹಲವಾರು ವಿಷಯಗಳನ್ನು ಹಂಚಿಕೊಳ್ಳಲು ಖುಷಿ. ಏಕೆಂದರೆ ನಮ್ಮೊಳಗಿನ ಹಿರಿಯಣ್ಣ ನೀವು. . ಇತ್ತೀಚೆಗೆ ರಾಜಸ್ಥಾನದ ಪ್ರವಾಸ ಕಥನದ ಕುರಿತು ಸೀರಿಯಸ್ಸಾಗಿ ಇನ್ನೊಂದು ಮ್ಯಾಗಜಿನ್ ಗೆ ಬರೆಯುವಲ್ಲಿ ತೊಡಗಿಸಿಕೊಂಡಿದ್ದೇನೆ. ಇರಲಿ,....ತಮ್ಮ ಪ್ರತಿಕ್ರಿಯೆಯಲ್ಲಿ ಕಳಕಳಿಯ ಪರಿಸರ ಪ್ರಜ್ಞೆ ಅದೆಷ್ಟು ದಟ್ಟವಾಗಿ, ಗಟ್ಟಿಯಾಗಿರುವುದನ್ನು ಗಮನಿಸಿದೆ. ತಾವು ಗಮನಿಸಿದಂತೆ ಕಾಡಿನ ಪರಿಸರ ನಾಶ ನಮ್ಮ ನಿಮ್ಮಂಥವರಿಗೆ ಅತೀವ ನೋವು ತರುವ ಸಂಕಟಕರ ಸಂಗತಿ. ಇದನ್ನು ತಡೆಯುವುದೇ ಆಗುವುದಿಲ್ಲವೇನೋ ಎಂಬಷ್ಟು ಅದು ವ್ಯಾಪಿ, ಅದೇ ವೇದನೆಯ ಮೂಲ. ಆಶಾವಾದಿಗಳಾಗೋಣ ಸರ್, ಒಳ್ಳೆಯ ದಿನಗಳು ಬರಲೂಬಹದು. ಭೇಟಿಯಾಗುತ್ತಿರೋಣ ಸರ್, ಮತ್ತೊಮ್ಮೆ ವಂದನೆಗಳು.

Submitted by H A Patil Fri, 05/08/2015 - 09:02

In reply to by Lakshmikanth Itnal 1

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ತಮ್ಮ ಮರು ಪ್ರತಿಕ್ರಿಯೆ ಓದಿದೆ, ನಿಮ್ಮ ಸಮಯದ ಮಿತಿಯಲ್ಲಿಯೂ ನೀವು ಬ್ಲಾಗ್‌ಗಳಿಗೆ ಬರುವುದು ಬರೆಯುವುದು ಮತ್ತು ಪ್ರತಿಕ್ರಿಯಿಸುವುದು ಒಂದು ಅದ್ಬುತ ಸಂಗತಿ ವಿಶ್ರಾಂತಿಯ ಸಮಯವನ್ನು ಸಾಹಿತ್ಯದ ಮೇಲಿನ ಪ್ರಿತಿಗೆ ಬಳಸಿಕೊಳ್ಳುವದಕ್ಕೂ ಒಂದು ರೀತಿಯ ಪ್ರೀತಿ ಮತ್ತು ಬದ್ಧತೆ ಬೇಕು ಅದು ನಿಮಗೆ ಇದೆ ಜೊತೆಗೆ ಅದು ನಿಮ್ಮ ಹೆಚ್ಚುಗಾರಿಕೆ ಕೂಡ. ಇತ್ತೀಚೆಗೆ ನನ್ನಲ್ಲಿ ಸಾಹಿತ್ಯವೆ ಮೂಡುತ್ತಿಲ್ಲವೆಂದಿದ್ದೀರಿ ಇದು ನಿಮ್ಮೊಬ್ಬೆರ ಸಮಸ್ಯೆಯಲ್ಲ ಎಲ್ಲರದೂ ಸಹ ನನ್ನನ್ನೂ ಸಹ ಈ ಖಾಲಿತನ ಬಹಳ ಸಲ ಬಹುತೇಕ ಕಾಡಿದೆ. ನಾನು ಸಾಹಿತ್ಯಿಕವಾಗಿ ಖಾಲಿಯಾಗಿಬಿಟ್ಟೆನೆ ಎಂದು ಕೊಳ್ಳುತ್ತಿರುವಾಗಲೆ ಯಾವುದೋ ಒಂದು ಯೋಚನೆ ಪಲ್ಲವಿಸಿ ಸಾಹಿತ್ಯ ರೂಪ ಪಡೆದು ಬಿಡುತ್ತದೆ. ಈ ಖಾಲಿತನವೆ ಹೊಸದೊಂದು ಯೋಚನೆಗೆ ಕಾರಣವಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ, ದನ್ಯವಾದಗಳು.