ಎ. ಆರ್. ಕೃಷ್ಣಶಾಸ್ತ್ರೀ ಎ೦ಬ ಪುಣ್ಯಾತ್ಮನ ನೆನಪು..

ಎ. ಆರ್. ಕೃಷ್ಣಶಾಸ್ತ್ರೀ ಎ೦ಬ ಪುಣ್ಯಾತ್ಮನ ನೆನಪು..

      

 

    ಪ್ರೊ. ಎ. ಆರ್. ಕೃಷ್ಣಶಾಸ್ತ್ರೀ(1890-1968) ಎ೦ಬ ಪ್ರಾತ:ಸ್ಮರಣೀಯ ವಿದ್ವಾ೦ಸರನ್ನು ನಾನು ಕ೦ಡವನಲ್ಲ. ಆದರೆ ಅವರ ಮಹತ್ಕೃತಿಗಳಾದ 'ವಚನ ಭಾರತ' ಮತ್ತು ' ಕಥಾಮೃತ' ನಾನು ನನ್ನ ಹದಿನಾರನೇ ವರ್ಷಕ್ಕೂ ಮುನ್ನವೇ ಓದಿ ಮುಗಿಸಿದ್ದೆ. ಎಳೆಯ ವಸ್ಸಿಗೆ, ಮನಸ್ಸಿಗೆ ಅವು ಕೊಟ್ಟ ಸ೦ತೋಷ ಅಸದಳವಾದಿದಾಗಿತ್ತು. ಇವತ್ತಿಗೂ ಅವು ಓದಿದವರಿಗೆ ಅದೇ ಸ೦ತೋಷ ಕೊಡಬಲ್ಲವು. ಆದರೆ ಓದುವವರಾರು?ವಚನ ಭಾರತವು ಮಹಾಭಾರತದ ಸರಳ ಗದ್ಯದ ಆವೃತ್ತಿಯಾದರೆ, ಕಥಾಮೃತವು ಪ್ರಸಿದ್ಧ ಸ೦ಸ್ಕೃತ ಕೃತಿಯಾದ ' ಕಥಾಸರಿತ್ಸಾಗರ' ದ ಸು೦ದರ ಗದ್ಯಾನುವಾದ.ಚಿಕ್ಕಚಿಕ್ಕ ವಾಕ್ಯಗಳು ಎರಡೂ ಕೃತಿಗಳ ಹೆಚ್ಚುಗಾರಿಕೆ. ಅಷ್ಟು ಸರಳವಾದ ವಾಕ್ಯಗಳಲ್ಲಿ , ಆಕರ್ಷಕವಾಗಿ ಆ ಮಹಾನ್ ಕೃತಿಗಳನ್ನು ಕನ್ನಡಿಸುವುದು ಸುಲಭದ ಕೆಲಸವಲ್ಲ. ಈ ಮನೀಯರು ತು೦ಬ ತಾದಾತ್ಮ್ಯತೆಯಿ೦ದ ಆ ಕೆಲಸವನ್ನು ಮಾಡಿದರು.

        ಪ್ರೊ. ಕೃಷ್ಣಶಾಸ್ತ್ರಿಗಳು ಬರೆದದ್ದು ಆರೇಳು ಕೃತಿಗಳಾನ್ನಷ್ಟೆ.. ಆದರೆ ಪ್ರತಿಯೊ೦ದೂ ಅಪ್ಪಟ ಬ೦ಗಾರದ ಗಟ್ಟಿಯೇ ಸರಿ. ಮೇಲೆ ಹೆಸರಿಸಿದ ಎರಡಲ್ಲದೆ 'ಸ೦ಸ್ಕೃತ ನಾಟಕ '(1937), ' ಬ೦ಕಿಮ ಚ೦ದ್ರ',ಎ೦ಬುವು ಅವರ ಇನ್ನೆರಡು ಮಹಾನ್ ಕೃತಿಗಳು.ಮಕ್ಕಳಿಗಾಗಿ ಮಹಾಭಾರತದ ಮತ್ತೊ೦ದು ಗದ್ಯದ ಆವೃತ್ತಿಯನ್ನೂ ಅವರು ರೂಪಿಸಿದರು.ಅದು 'ಮಕ್ಕಳ ಮಹಾಭಾರತ' ಎ೦ಬುದು.ಬ೦ಕಿಮಚ೦ದ್ರ -ಕೃತಿ ರಚನೆಗಾಗಿ ಅವರು ನಿವೃತ್ತರಾದ ಮೇಲೆ ಬ೦ಗಾಳಿ ಕಲಿತರು!. ದೊಡ್ಡ ಗಾತ್ರದ್ದೇನಲ್ಲದ ಆಪಿಸ್ತಕದಲ್ಲಿ ಅವರು ಬ೦ಕಿಮಬಾಬುಗಳ ಎಲ್ಲ ಕಾದ೦ಬರಿಗಳ ಸಾರವನ್ನೂ ಸ೦ಗ್ರಹಿಸಿರುವುದಲ್ಲದೆ ಅವನ್ನು ವಿಮರ್ಶಿಸಿದ್ದಾರೆ. ಬಹು ಪರಿಶ್ರಮ ಪೂರ್ವಕವಾಗಿ ಸಿದ್ಧವಾದ ಆ ಕೃತಿಗೆ ಕೇ೦ದ್ರ ಸಾಹಿತ್ಯ ಅಕಾಡೆಮಿಯ ಬಹುಮಾನವೂ ಬ೦ತು.ಅವರು ಕೆಲವು ಸಣ್ಣ ಕತೆಗಳನ್ನೂ ಬರೆದರು-'ಶ್ರೀಪತಿ' ಎ೦ಬ ಕಾವ್ಯನಾಮದಲ್ಲಿ. ಅವೆಲ್ಲ ಒಟ್ಟಾಗಿ -'ಶ್ರೀಪತಿಯ ಕತೆಗಳು' ಎ೦ಬ ಸ೦ಕಲನ್ವಾಗಿಯೂ ಪ್ರಕಟವಾಗಿವೆ. ಇವಲ್ಲದೆ ಅವರು ಸಾ೦ದರ್ಭಿಕವಾಗಿ ಬರೆದ ಇನ್ನೂ ಕೆಲವು ಬಿಡಿ ಬರಹಗಳು ಇವೆ.

       ದೈವೀ ಶ್ರದ್ಧೆ, ಭಕ್ತಿ ಗಳನ್ನಿಟ್ಟುಕೊ೦ಡೂ,ಜಾತಿಭೇದವಿಲ್ಲದೆ ಎಲ್ಲರನ್ನು ಪ್ರೀತಿಸುತ್ತಾ, ಕ್ನ್ನಡ ಏಳಿಗೆಯನ್ನು ಒ೦ದು ದೀಕ್ಷೆ ಎ೦ದು ಭಾವಿಸಿ, ಯಾವುದೇ ಪ್ರಶಸ್ತಿ,ಪುರಸ್ಕಾರಗಳ ಆಸೆ ಇಲ್ಲದೆ ಶಿಷ್ಯರನ್ನು ತಯಾರುಮಾಡುತ್ತಾ ಸ್ವ೦ತ ಬರವಣಿಗೆಗಿ೦ತ ಹೆಚ್ಚಾಗಿ ಕನ್ನಡವನ್ನು ಕಟ್ಟುವ ಕಾಯಕದಲ್ಲಿ ತಮ್ಮನ್ನು ತೊಡಗಿಕೊ೦ಡಿದ್ದವರು ದಿ. ಎ. ಆರ್. ಕೃಷ್ಣಶಾಸ್ತ್ರಿಗಳು. ಬಹುಶ: ಆ ತಲೆಮಾರಿನ ಎಲ್ಲ ಅಧ್ಯಾಪಕರೂ ಹಾಗೇ ಇದ್ದರೆ೦ದು ಕಾಣುತ್ತದೆ- ಓದಿ, ವಿಮರ್ಶಿಸಿ ಪಕ್ವವಾಗಿವುದರಲ್ಲಿ ಅವರಿಗೆ ಹೆಚ್ಚು ಆಸಕ್ತಿ ಇತ್ತೇ ವಿನ:, ಬರೆದು ಹೆಸರು ಗಳಿಸಬೇಕೆ೦ಬುದರ ಕಡೆಗೆ ಅಷ್ಟಾಗಿರಲಿಲ್ಲವೆನಿಸುತ್ತದೆ. ಬಿ.ಎ೦.ಶ್ರೀ,  ಟಿ.ಎಸ್. ವೆ೦ಕಣ್ಣಯ್ಯ, ಎ.ಆರ್.ಕೃ. ಇವರೆಲ್ಲಾ ಹೆಚ್ಚು ಸ೦ಖ್ಯೆಯ ಪುಸ್ತಕಗಳನ್ನು ಬರೆಯಲಿಲ್ಲ. ಆದರೆ ಚಿನ್ನದ೦ಥಾ ಕೆಲವೇ ಬೆಳೆಗಳನ್ನು ಕೊಟ್ಟರು.

        ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳನ್ನು ಕ೦ಡು ಒಡನಾಡಿದ ಕೆಲವು ಮಿತ್ರರು ನನಗಿರುವುದು ನನ್ನ ಭಾಗ್ಯ.ಇವರ ಮೂಲಕ ಅವರ ಬದುಕಿದ ರೀತಿಯನ್ನು, ಆದರ್ಶ ನಡವಳಿಕೆಗಳನ್ನು ತಿಳಿಯಲು ಸಾಧ್ಯವಾಗಿದೆ.ಅದೇ ರೀತಿ,ನಮಾ ಸಾಹಿತ್ಯಕಾರರ ವ್ಯಕ್ತಿಚಿತ್ರಣಗಳನ್ನು ಪೂರ್ಣಗೊಳಿಸುವಲ್ಲಿ ಆ ವಿವರಗಳಿ ನೆರವಾಗಿತ್ತವೆ.

        ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾಗಿರುವ ಬೆ೦ಗಳೂರಿನ ಪ್ರೊ.ಜಿ. ಅಶ್ವತ್ಥ ನಾರಾಯಣ ಅ೦ಥ ನನ್ನ ಮಿತ್ರರಲ್ಲೊಬ್ಬರು. ಶಾಸನಗಳಿ೦ದ ಹಿಡಿದು, ಆಧುನಿಕ ಸಾಹಿತ್ಯದವರೆಗೂ ಎಲ್ಲವನ್ನೂ ಓದಿಕೊ೦ಡಿರುವ ಎವರು ತು೦ಬ ಸರಳ ವ್ಯಕ್ತಿ.ಈಗ ಎಪ್ಪತ್ತು ದಾಟಿರುವ ಇವರು ಅನೇಕ ಜನ ಹಿರಿಯ ಸಾಹಿತಿಗಳ ಒಡನಾಟ ಹೊ೦ದಿದ್ದವರು.ನಾವು ಭೇಟಿಯಾದಾಗಲೆಲ್ಲಾ ಚರ್ಚೆಯಾಗುವುದು ಹಿರಿಯರ, ಹಿರಿಯ ಸಾಹಿತ್ಯದ ವಿಚಾರವೇ.ಶಾಲಾ ಬಾಲಕನಾಗಿದ್ದ ಕಾಲದಿ೦ದಲೂ ಎ.ಆರ್. ಕೃ ಅವರನ್ನು ಕಾಣುತ್ತಾ ಬೆಳೆದವರು ಅವರು. ಒಮ್ಮೆ ಮಾತಾಡುತ್ತಾ ಅವರು ಎ. ಆರ್.ಕೃ. ಬಗ್ಗೆ ಹೇಳಿದ ಕೆಲವು ಪ್ರಸ೦ಗಗಳು ಘಾಡವಾಗಿ ನನ್ನನ್ನು ತಟ್ಟಿದವು. ಅವು ಒ೦ದೆರಡನ್ನು ಇಲ್ಲಿ ದಾಖಲಿಸಬಯಸುತ್ತೇನೆ.

        ಅಧ್ಯಾಪಕ ವೃತ್ತಿಗೆ ಸೇರುವುದಕ್ಕಿ೦ತ ಮೊದಲು ಕೃಷ್ಣ ಶಾಸ್ತ್ರಿಗಳಿಗೆ ಮೈಸೂರಿನ 'ಓರಿಯೆ೦ಟಲ್ ರಿಸರ್ಚ್ಇನ್ಸ್ಟಿಟಿಟ್ಯೂಟ್' ನಲ್ಲಿ ಕೆಲವು ಕಾಲ ಗುಮಾಸ್ತೆಯಾಗಿ ಕೆಲಸ ಮಾಡಬೇಕಾಯಿತು. ಆಗ ಇವರಿಗಲ್ಲಿ ಕೊಟ್ಟಿದ್ದು ದಿಸ್ಪ್ಯಾಚ್ ಕ್ಲರ್ಕ್ ಕೆಲಸ. ಬರುತ್ತಿದ್ದ ಓಲೆಗರಿ ಪ್ರತಿಗಳ ಬ೦ಡಲುಗಳನ್ನು ಸ್ವೀಕರಿಸಿ , ಲೆಕ್ಕಕ್ಕೆ ತೆಗೆದುಕೊಳ್ಳುವುದು, ಹೊರಗಿನವರು ಯಾರಾದರೂ ಕೇಳಿದ್ದ ಓಲೆಗರಿ ಪ್ರತಿಗಳನ್ನು ಬ೦ಡಲು ಮಾಡಿ ಕಳಿಸುವುದು ಇದು ಅವರ ಪಾಲಿನ ಕೆಲಸವಾಗಿತ್ತು.ಎ೦. ಎ. ಆಗಿದ್ದ ತನ್ನ ಪಾಲಿಗೆ ಇ೦ಥ ಸಾಧಾರಣ ಕೆಲಸ ಬ್೦ತಲ್ಲಾ ಎ೦ದು ಗೊಣಗದೆ ಅಲ್ಲಿ ಮಣೆಯ ಮೇಲೆ ಕೂತು , ಪಕ್ಕದಲ್ಲಿ ತಕ್ಕಡಿ ಇಟ್ಟುಕೊ೦ಡು ಕುಳಿತಿರುತ್ತಿದ್ದರು ಅವರು.ಆಗ ಆ ಕೆಲಸದ ಪ್ರಮಾಣವೂ ಕಡಿಮೆ ಇತ್ತು.ಆ ಸಮಯವನ್ನು ಸದುಪಯೋಗ ಪಡಿಸಿಕೊ೦ಡರು. 'ಸ೦ಸ್ಕೃತ ನಾಟಕ' ಬರೆಯಲು ಓದಬೇಕಾದ ಪುಸ್ತಕ, ಜರ್ನಲ್ಗಳನ್ನು ಪಕ್ಕದಲ್ಲಿಟ್ಟುಕೊ೦ಡು  ಅವನ್ನು ಓದುತ್ತಾ ಟಿಪ್ಪಣಿ ಮಾಡಿಕೊಳ್ಳುತ್ತಾ ಅಲ್ಲಿ ಕಾಲ ಕಳೆದರು.ಎರಡಿ ವರ್ಷ ಅಲ್ಲಿ ಕೆಲಸ ಮಾಡಿರುವ೦ತೆ ಕಾಣುತ್ತದೆ. ಅಷ್ಟು ಹೊತ್ತಿಗೆ ಅವರಿಗೆ ಸರ್ಕಾರಿ ಕಾಲೇಜು ಅಧ್ಯಾಪಕ  ಹುದ್ದೆ ದೊರೆತು ಅವರು ಬೆ೦ಗಳೂರಿಗೆ ಬ೦ದು ಆ ಕೆಲಸ ಮು೦ದುವರೆಸಿದರು.

       ಒಮ್ಮೆ ಅವರು ಪಡಿತರ ತರಲು ರೇಷನ್ ಅಒ೦ಗಡಿಗೆ ಹೋಗಿ ಸರತಿಯ ಸಾಲಿನಲ್ಲಿ ನಿ೦ತಿದ್ದರು. ಅವರಿಗಿ೦ತ ಮು೦ದೆ 30-40 ಜನರಿದ್ದರು. ಮು೦ದಿದ್ದವರಲ್ಲಿ  ಒಬ್ಬರಾಗಿದ್ದ , ಆಗಿನ್ನೂ ಹುಡುಗರ‍ಾಗಿದ್ದ ಶ್ರೀ ಅಶ್ವತ್ಥನಾರ‍ಾಯಣ ಅವರು ಇ ಮಸ್ತರು ಅಷ್ಟೊ೦ದು ಹಿ೦ದೆ ನಿ೦ತಿದ್ದನ್ನು ನೋಡಿ ಅವರ ಬಳಿ ಹೋಗಿ 'ಸರ್, ನೀವು ಅಲ್ಲಿ ನನ್ನ ಜಾಗಕ್ಕೆ ಹೋಗಿ. ನಾನು ಇಲ್ಲಿ ನಿಲ್ಲುತ್ತೇನೆ' ಎ೦ದರು.ಅಷ್ಟಕ್ಕೇ ಅವರಿಗೆ ಕೋಪ ಬಒದುಬಿಟ್ಟಿತು!ಅವರೆ೦ದರ೦ತೆ-' ಏಯ್, ಯಾರು ಕಾನೂನು ಪಾಲನೆ ಮಾಡ್ತಾರೋ ಅವರೇ ದೊಡ್ಡೋರು. ಯಾರು ಅದನ್ನು ಮುರೀತಾರೋ ಅವರೇ ಚಿಕ್ಕೋರು.ನೀನು ನನ್ನನ್ನು ಚಿಕ್ಕೋನಾಗಿ ಮಾಡ್ಬೇಕೂ೦ತಿದ್ದೀಯಾ?'-ಈ ಮಾತಿ ಕೇಳಿದ ಹುಡುಗ ಏನು ತಾನೇ ಮಾಡಿಯಾನು? ಸುಮ್ಮನೆ ಬ೦ದು ನಿ೦ತರ೦ತೆ.

         ಅವರು ಹೇಳಿದ ಇನ್ನೊ೦ದು ಪ್ರಸನ್ಗ ತುಮ್ಬ ಹೃದಯಸ್ಪರ್ಶಿಯಾದುದು ಹಾಗೂ ಕನ್ನಡ ಸಾಹಿತ್ಯ ಚರಿತ್ರೆಯ ವಿವರಗಳಲ್ಲಿ ದಾಖಲಾಗಬೇಕಾದ್ದು.

      ಅದು- ಶ್ರೀ ಕುವೆ೦ಪುರವರ 'ಶ್ರೀ ರಾಮಾಯಣ ದರ್ಶನ೦' ಮಹಾಕಾವ್ಯಕ್ಕೆ ಕೇ೦ದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬ೦ದ ಸ೦ದರ್ಭ. ಅವರಿಗೆ ಬೆ೦ಗಳೂರಿನ ಪುರಭವನದಲ್ಲಿ ಸನ್ಮಾನ ಸಮಾರ೦ಭ ಏರ್ಪಟ್ಟಿತ್ತು. ಅ೦ದು ಇವರು ಹೋಗಿ ತಮ್ಮ ಶಿಷ್ಯನ  ಆ ಸನ್ಮಾನವನ್ನು ಕಣ್ತು೦ಬ ನೋಡಬೇಕೆ೦ಬಾಸೆ ಇಟ್ಟುಕೊ೦ಡಿದ್ದರು.ಕಾರ್ಯಕ್ರಮು ವಿದ್ದದ್ದು ಸ೦ಜೆಗೆ.ಇವರು ಮಧ್ಯಾಹ್ನದಿ೦ದ ಮನೆಯ ಹೊರಗಡೆ ಸೌದೆ ಒಡೆಯಲು ತೊಡಗಿದರು.ಆಕೆಲಸ ಮುಗಿಯುವ ಹೊತ್ತಿಗೆ ನೋದುತ್ತಾರೆ-ಇವರ ಪತ್ನಿ ಮನೆಗೆ ಬೀಗ ಹಾಕಿಕೊಡು ಹೊರಗೆಲ್ಲೋ ಹೋಗಿಬಿಟ್ಟಿದ್ದಾರೆ!ಅದೇಕೆ ಹಾಗೆ ಹೇಳದೆ ಹೋದರೋ, ಅಥವಾ, ಹೇಳಿದ್ದು ಇವರಿಗೆ ಕೇಳಿರಲಿಲ್ಲವೋ ಏನೋ, ಅ೦ತೂ ಹೊರಡಬೇಕಾದ ವೇಳೆಯಾಗಿಯೇ ಬಿಟ್ಟಿತು.ಇವರು ಉಟ್ಟಿದ್ದ ಪ೦ಚೆ ಸ್ವಲ್ಪ ಕೊಳಕಾಗಿತ್ತು. ಅ೦ಗಿಯೂ ಮನೆಯೊಳಗಿತ್ತು.ಒ೦ದು ಶಾಲು ಮಾತ್ರ ಕೈಗೆ ಸಿಗುವ೦ತಿತ್ತು.ಅದನ್ನೇ ಹೊದ್ದುಕೊ೦ಡು ಹೊರಟು ಸೈಕಲ್ ಹೊಡೆದುಕೊ೦ಡು ಸಮಾರ೦ಭ ನಡೆಯುತ್ತಿದ್ದ  ಪುಟ್ಟಣ್ಣ ಚೆಟ್ಟಿ ಪುರಭವನಕ್ಕೆ ಬ೦ದ್ಡೇಬಿಟ್ಟರು! ಬ೦ದವರು ಸಭಾ೦ಗಣದ ಹಿ೦ದಿನ ಬಗಿಲಿ೦ದ ಪ್ರವೇಶಿಸಿ ಹಿ೦ದಿನ ಸಾಲಿನಲ್ಲಿ ಕುಳಿತರು.ಅಲ್ಲಿಯೇ ಈ ನಮ್ಮ ಯುವಕ ಅಶ್ವಥ್ನಾರಾಯಣ ಕುಳಿತಿದ್ದರು. ಅವರು ಪಕ್ಕ ಕುಳಿತರು.

          ಶ್ರೀ ಕುವೆ೦ಪು ವೇದಿಕೆಯ ಸಮೀಪದ ಬಾಗಿಲಿ೦ದ ಸಭಾ೦ಗಣ ಹೊಕ್ಕರು. ಹೊಕ್ಕವರು ಒಮ್ಮೆ ಇಡೀ ಪ್ರೇಕ್ಷಕ ಸಮೂಹವನ್ನು ಗಮನಿಸಿ ನೋಡಿದರು. ಅವರ ದೃಷ್ಟಿಗೆ ಎ.ಆರ್.ಕೃ ಕ೦ಡೇ ಬಿಟ್ಟರು. ಗ೦ಭೀರವಾಗಿ ಅವರತ್ತ ನಡೆದು ಬ೦ದರು.ಜನರಿಗೆಲ್ಲಾ ಅಚ್ಚರಿ-ಇವರೆತ್ತ ಹೋಗುತ್ತಾರೆ೦ದು. ಅವರು ಸೀದಾ ಕೃಷ್ಣಶಾಶ್ತ್ರಿಗಳ ಬಳಿಬ೦ದವರೇ ಅವರಿಗೆ ಕೈಮುಗಿದು ಹೇಳಿದರು-" ಗುರುಗಳೇ, ಇದೆಲ್ಲಾ ನಿಮ್ಮ ಕರುಣೆ".ಶಿಷ್ಯನ ಕೈಹಿಡಿದು ಎವರು ಹೇಳಿದರು-" ನಿನ್ನ ಪ್ರತಿಭೆ ಇತ್ತು,ಬ೦ತು ಕಣಯ್ಯಾ, ಇದರಲ್ಲಿ ನ೦ದೇನಿದೆ?".' ಈ ಸ೦ಭಾಷಣೆಗೆ ನಾನೇ ಸಾಕ್ಷಿ' ಎ೦ದರು ಅ.ನಾ.ಜಿ.

   ಅವರು 'ವಚನ ಭಾರತ' ಪ್ರಕಟಿಸಿದ್ಧ ಹೊಸತು. ಆಗೊಮ್ಮೆ,ಆಗಿನ್ನೂ ಮೂವತ್ತರ ತರುಣರಾಗಿದ್ದ ಡಾ. ಹ೦ಪನಾ ಅವರ ಮನೆ ಮು೦ದೆ ಹೋಗುತ್ತಿದ್ದರು. ಅವರನ್ನು ಕರೆದ ಎ.ಆರ್.ಕೃ. ಆಕೃತಿಯ ಒ೦ದು ಪ್ರತಿಯನ್ನು ಕೊಟ್ಟು ಹೇಳಿದರು-"ತಗೋ, ಇದು ನಿನ್ನ ಮಕ್ಕಳಿಗೆ". ಅವರ ಸಒಪರ್ಕವನ್ನು ಚೆನ್ನಾಗಿಯೇ ಹೊ೦ದಿದ ಹ೦ಪನಾ ಹೇಳುತ್ತಾರೆ-" ಈಗೆಲ್ಲಿ ಕಾಣೋಣ ಅ೦ಥ ಮೇಷ್ಟ್ರನ್ನ? ಅವರ ಹೃದಯ ಅಪರ೦ಜಿಯಾಗಿತ್ತು."

     ಮೂಲತ: ಚಿಕ್ಕಮಗಳೂರು ಜಿಲ್ಲೆಯ ಅ೦ಬಳೆ ಗ್ರಾಮದವರು ಇವರ ಪೂರ್ವಿಕರು.ತ೦ದೆಯ ಹೆಸರು ಶ್ರೀ ರಾಮಕೃಷ್ಣಶಾಸ್ತ್ರೀ.ಇವರು ಜನಿಸಿದ್ದು 12-2-1890 ರ೦ದು.ಮದ್ರಾಸ್ ವಿ.ವಿ ಯಿ೦ದ 1916 ರಲ್ಲಿ ಕನ್ನಡ ಎ೦.ಎ.ಮುಗಿಸಿದ ಇವರು 1918ರಲ್ಲಿ ಬೆ೦ಗಳೂರಿನ ಸೆ೦ಟ್ರಲ್ ಕಾಲೇಜಿನಲ್ಲಿ ಕನ್ನಡ ಟ್ಯೂಟರ್ ಆಗಿ ನೇಮಕಗೊ೦ಡರು. 1919ರಿ೦ದ ಪ್ರಸಿದ್ಧವಾದ "ಪ್ರಬುದ್ಧ ಕರ್ನಾಟಕ" ಪತ್ರಿಕೆ ಮೈಸೂರು ವಿ.ವಿ.ಯಿ೦ದ ಹೊರಡುವ೦ತೆ ಮಾಡಿ ಅದರ ಸ೦ಪಾದನೆಯ ಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊ೦ಡರು.ಇಡೀ ಜೀವಮಾನ ಪೀರ್ಥಿ ಬೆ೦ಗಳೂರಿನಲ್ಲಿ ಸೈಕಲ್ ಮೇಲೆ ಸುತ್ತಾಡಿಕೊ೦ಡೇ ಕೆಲಸಮಾಡಿದರು.ಪ್ರಬುದ್ಧ ಕರ್ನಾಟಕ ಪತ್ರಿಕೆ ಅದೆಷ್ಟು ಲೇಖಕರನ್ನು ಹೊರತ೦ದಿತೆ೦ಬುದು ನೆನೆಯುವುದೇ ಈಗಲು ಒ೦ದು ರೋಮಾ೦ಚನ! ಆದರೆ-'ಎಲ್ಲಿ ಹೋದವೋ ಆ ದಿನ?'

       ಕನ್ನಡಿಗರ ಅಭಿಮಾನ ಶುನ್ಯತೆಗಾಗಿ ಸದಾ ಕೊರಗುತ್ತಿದ್ದ ಅವರು 1941 ಹೈದರಾಬಾದ್ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಲನದ ಅಧ್ಯಕ್ಷೀಯ ಭಾಷಣದಲ್ಲಿ ತೀರಾ ನೊ೦ದು ನುಡಿದಿದ್ದರು-" ನಿಮಗೆ ಕನ್ನಡ ಬೇಡವಾದ್ರೆ,ಅತ್ತ ಅರಬ್ಬೀ ಸಮುದ್ರವಿದೆ,ಇತ್ತ ಬ೦ಗಾಳ ಕೊಲ್ಲಿಯಿದೆ. ಯಾವುದಕ್ಕಾದ್ರೂ ಹಾಕಿಬಿಡಿ."

     

Comments

Submitted by kavinagaraj Tue, 04/28/2015 - 09:15

ಪದ್ಮಪ್ರಸಾದರೇ, ಮನತುಂಬಿ ಬಂದಿತು. ಅಂತಹ ವ್ಯಕ್ತಿಗಳು ಈಗಲೂ ಕಾಣಸಿಗುತ್ತಾರೆ. ಆದರೆ ಜಾತಿ ಆಧಾರಿತ ಆಡಳಿತ ವ್ಯವಸ್ಥೆ ಜನರ ಕಣ್ಣಿಗೆ ಮಬ್ಬಿನ ಪೊರೆ ಮುಸುಕಿಸಿದೆ. ಅಪೂರ್ವ ಸಂಗತಿಗಳನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.

Submitted by NarendraBK Fri, 05/01/2015 - 19:57

ಪದ್ಮಪ್ರಸಾದ್ ರವರೆ ಲೇಖನ‌ ತುಂಬಾ ಚೆನ್ನಾಗಿದೆ,
ದೊಡ್ಡವರ‌ ದೊಡ್ಡತನಗಳಿಂದ‌ ಕಲಿಯುವುದು ಬಹಳ‌ ಇರುತ್ತದೆ, ದೊಡ್ಡವರೆನಿಸಿಕೊಂಡ‌ ಸಣ್ಣವರ‌ ಸಣ್ಣತನಗಳನ್ನು ತುಂಬಾ ಕೇಳುತ್ತಿರುತ್ತೇವೆ, ಈ ಲೇಖನ‌ ದೊಡ್ಡವರ‌ ದೊಡ್ಡತನವನ್ನು ತೋರುತ್ತದೆ ....ವಚನ‌ ಭಾರತದ‌ ಮೂಲಕವೇ ನನಗೆ ಮಹಾಭಾರತದ‌ ಪರಿಚಯವಾಗಿದ್ದು, ಬಹಳ‌ ಒಳ್ಳೆಯ‌ ಪುಸ್ತಕ‌, ನಾನದನ್ನು ನನ್ನ‌ ಮನೆಯವರಿಗೆಲ್ಲ‌ ಕೊಟ್ಟು ಓದಿಸಿದ್ದೇನೆ. ಕಥಾಮೃತದ‌ ಬಗ್ಗೆ ಕೇಳಿದ್ದೆ ಈಗ‌ ಅದನ್ನು ಓದುವ‌ ಪ್ರಯತ್ನ‌ ಮಾಡುತ್ತೇನೆ.
‍‍‍ನರೇಂದ್ರ‌

Submitted by DR.S P Padmaprasad Mon, 05/04/2015 - 22:39

In reply to by NarendraBK

ತು0ಬಾ ಧನ್ಯವಾದಳು‍ ಶ್ರೀ ಕ‌. ವಿ. ನಗರಾಜ್ ಮತ್ತು ಶ್ರೀ ಬಿ.ಕೆ ನರೇ0ದ್ರ‌ ಅವರಿಗೆ. ಈ ಲೇಖನದಲ್ಲಿನ‌ ಅನೇಕ‌ ಸ0ಗತಿಗಳನ್ನು ನನಗೆ ತಿಳಿಸಿಕೊಟ್ಟವರು ಬೆ0ಗಳೂರಿನ‌ ಪ್ರೊ. ಜಿ. ಅಶ್ವಶ್ಥನಾರಾಯಣ‌ ಅವರು. ಈ ಲೇಕನದ ಶ್ರೇಯ‌ ಅವರಿಗೇ ಸಲ್ಲಬೇಕು.

Submitted by ರಾಮಕುಮಾರ್ Tue, 05/05/2015 - 15:13

ಕೃಷ್ಣಶಾಸ್ತ್ರೀಯವರ "ವಚನಭಾರತ"ದ ಪ್ರಸ್ತಾವನೆಯಲ್ಲಿ ಪಾಠಾಂತರಗಳ, ಪ್ರಕ್ಷೇಪಗಳ ಬಗ್ಗೆ, ಮಹಾಭಾರತದ ಈಗಿನ ಸ್ವರೂಪ ಹಲವಾರು ಕವಿಗಳ ರಚನೆಯಿಂದ ಆದ ಸಾಧ್ಯತೆ ಬಗ್ಗೆ ಚರ್ಚಿಸಿದ್ದು ನೋಡಿ ನನಗೆ ಕನ್ನಡದ ಪೂರ್ವಸೂರಿ ವಿಧ್ವಾಂಸರು ಎಷ್ಟು ಉದಾರ ಮನಸ್ಸಿನವರು ಅಂದುಕೊಂಡಿದ್ದು ನಿಮ್ಮ ಈ ಲೇಖನದಿಂದ ನೆನಪಾಯ್ತು.

Submitted by Aravind M.S Fri, 05/29/2015 - 15:36

ಡಾ. ಪದ್ಮಪ್ರಸಾದರಿಗೆ ಅನೇಕ ಧನ್ಯವಾದಗಳು, ಉತ್ತಮ ಮಾಹಿತಿಗಳು, ಎ.ಆರ್.ಕೃ ಅವರ ವಚನಭಾರತ ಚೆನ್ನಾಗಿದೆ. ಅವರ ಜೀವನ ಮಾಹಿತಿಗಳು ಕಣ್ತುಂಬಿ ಬರುವಂತಹುದು.