ರಾಜಸ್ಥಾನವೆಂಬ ಸ್ವರ್ಗದ ತುಣುಕು-7 : ಚಲ್ಲಿದರು ಮಲ್ಲಿಗೆಯಾ, ಬಾಣಾಸೂರ ಏರಿಮ್ಯಾಗೆ... ಲಕ್ಷ್ಮೀಕಾಂತ ಇಟ್ನಾಳ

ರಾಜಸ್ಥಾನವೆಂಬ ಸ್ವರ್ಗದ ತುಣುಕು-7 : ಚಲ್ಲಿದರು ಮಲ್ಲಿಗೆಯಾ, ಬಾಣಾಸೂರ ಏರಿಮ್ಯಾಗೆ... ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ರಾಜಸ್ಥಾನವೆಂಬ ಸ್ವರ್ಗದ ತುಣುಕು-7 : ಚಲ್ಲಿದರು ಮಲ್ಲಿಗೆಯಾ, ಬಾಣಾಸೂರ ಏರಿಮ್ಯಾಗೆ...

ಮಳೆನಿಂತ ಮೇಲೂ ಮರದ ಹನಿ ನಿಲ್ಲದ ಹಾಗೆ ಮರಳರಾಣಿ ಜೈಸಲ್ಮೇರ್‍ನಿಂದ ಹೊರಟು ಬರುವಾಗ ಚಂದದ ಬಾಲ್ಯದ ಗುಬ್ಬಚ್ಚಿಗಳನ್ನು ತನ್ನ ಮಡಿಲಲ್ಲಿ ಸಾಕಿ, ಅಂದಿನ ಆ ನಮ್ಮೆಲ್ಲರ ಬಾಲ್ಯಗಳನ್ನು ಪೋಷಿಸುತ್ತಿರುವುದಕ್ಕೆ ವಿಶೇಷವಾಗಿ ಅಭಿನಂದಿಸಿದೆ. ಬೆಚ್ಚಗಿನ ಬಾಲ್ಯದ ನೆನಪುಗಳೊಂದಿಗೆ, ಮರಳರಾಣಿಯ ಮಡಿಲಿನ ಸ್ವರ್ಗಸದೃಶ ಅನುಭವ ನೀಡಿ ಆತ್ಮದ ಬಾಯಾರಿಕೆಯ ಹಸಿವಿಗೆ ಅಮೃತಸಿಂಚನ ಉಣಿಸಿ ತಣಿಸಿದ 'ಥಾರ್' ಗೆ ವಂದಿಸಿ, ಮತ್ತೊಮ್ಮೆ ಖಂಡಿತ ಬರುವುದಾಗಿ ಹೇಳಿ, ಅದರ ಬೆಚ್ಚಗಿನ ಪ್ರೀತಿಯ ಕೈಗಳಿಂದ ನನ್ನ ಬೆರಳುಗಳನ್ನು ಮನವೊಲ್ಲದ ಮನದೊಳಿಂದ ಬಿಡಿಸಿಕೊಂಡು, ಪ್ರೀತಿಯ ಕಣ್ಣುಗಳಿಂದ ಅದರತ್ತ ನೋಡುತ್ತ, 'ಬರ್ಲಾ' 'ಎಂದು ಅದರತ್ತ ನನಗಷ್ಟೆ ಕೇಳುವಂತೆ ಹೇಳಿ, ..ತೇವಗೊಂಡ ಕಣ್ಣುಗಳಲ್ಲಿ......ಭಾರವಾದ ಹೆಜ್ಜೆಗಳಿಂದ ವಾಹವವೇರಿದೆವು.ಈಗ ನಮ್ಮ ಸವಾರಿ ಜೋಧಪುರದೆಡೆ ಹೊರಟಿತು. ರಾಣಿ ಜೈಸಲ್ಮೇರ್ ನನ್ನತ್ತ ನೋಡುತ್ತಲೇ ಇತ್ತು, ತೆರೆದ ಕಣ್ಣುಗಳನ್ನು ಪಿಳುಕಿಸದೇ .......'ರುಲಾ ಕೆ ಗಯೇ ಸಪನಾ ಮೇರಾ, ಬೈಠಿ ಹೂಂ ಕಬ್ ಹೋ ಸವೇರಾ' (ಕಾದಿರುವೆ ಬರಲಿರುವ ಬೆಳಗಿಗಿಂದು, ಕಂಬನಿಯಗರೆಸಿತು ನನದೇ ಕನಸೊಂದು) ಹಾಡು ಅದರ ಎದೆಯಲ್ಲಿ ಅನುರಣಿಸುತ್ತಿತ್ತೇನೋ!

    ಮನಸ್ಸು ಇನ್ನೂ ಮರಳರಾಣಿ ಜೈಸಲ್ಮೇರನಲ್ಲಿಯೇ ಉಳಿದುಬಿಟ್ಟಿತ್ತು. ತನ್ನವರನ್ನು ಬೀಳ್ಕೊಡುವ ಕಣ್ಣುಗಳಲ್ಲಿ ಇರುವ ಆ ನೆಟ್ಟ ನೋಟವನ್ನು ಇನ್ನೂ ನನ್ನೆಡೆಗೆ ನೆಟ್ಟಿದ್ದನ್ನು ಬಿಟ್ಟಿಲ್ಲವೇನೋ ಆ ಮರಳರಾಣಿ....ಅದಕ್ಕೇ ನನಗೂ ಅದರದೇ ಗುಂಗು .... ಈ ಜೈಸಲ್ಮೇರ್ ಎಂಬ ರಾಣಿಯ ಮೈ ಅದೆಷ್ಟು ಮೃದು ಅಲ್ಲವೇ, ಮರಳೆಂದರೂ ಮರಳಲ್ಲ ಅದು, ಅದರ ಉಸಿರು ಬೆರೆತ ಜೀವಜಲವದು. ಅದೆಷ್ಟು ನುನುಪು. 'ದೂರದ ಗುಡ್ಡ ಕಣ್ಣಿಗೆ ನುಣ್ಣಗೆ' ...ಎಂದು ನಮ್ಮಲ್ಲಿ ನಾಣ್ಣುಡಿ ಇದೆಯಲ್ಲವೇ, ಇಲ್ಲಿ ಹಾಗಲ್ಲ ಕೈಯ ಸ್ಪರ್ಶಕ್ಕೂ ನುಣುಪೇ ಅದು, ಈ ಮರಳ ಗುಡ್ಡಗಳು, ಸ್ಯಾಂಡ್ ಡ್ಯೂನ್‍ಗಳು, ಅತೀ ಸಾಮೀಪ್ಯದಲ್ಲೂ ಮೃದುಭಾಷಿಗಳು, ಮೃದುಮನಸಿಗಳು, ಮೃದು ಮೈಯವಳು......

    . ಗೈಡ್ ಹೇಳುತ್ತಿದ್ದ ಮಾತು ನೆನಪಾಯಿತು. ದ್ವಾರಕೆಯ ಯದುಕುಲಪತಿ ಶ್ರೀಕೃóಷ್ಣನ ಚಂದ್ರವಂಶಜ ಪೀಳಿಗೆ ಯದು ರಾಜಪೂತ ದೊರೆ, ರಾಜಾ ದೇವರಾಜನಿಂದ ಸ್ಥಾಪಿತವಾದದ್ದು ಈ ಜೈಸಲ್ಮೇರ್ ರಾಜ್ಯ. ಮೊದಲು ಅದಕ್ಕೆ ಇನ್ನಾವುದೋ ಹೆಸರಿನಿಂದ ಕರೆಯುತ್ತಿದ್ದರೆಂದು ಕಾಣುತ್ತದೆ. . ಈತನೇ ಜೈಸಲ್ಮೇರ್ ರಾಜ್ಯದ ಸ್ಥಾಪಕ ದೊರೆ, ನಂತರದ ಆರನೆಯ ತಲೆಮಾರಿನ ರಾಜಾ ಜೈಸಲ್ ಈ ಜೈಸಲ್ಮೇರ್ ಕೋಟೆಯನ್ನು ಕಟ್ಟಿದ. ಹೀಗಾಗಿ ಇವರು ಶ್ರೀಕೃಷ್ಣನ ವಂಶಜರೆಂದು ನಂಬಲಾಗಿದೆ ಶ್ರೀಕೃಷ್ಣನ ಆರಾಧಕರಾದ ಇವರು ಯುಗಾಂತರದಲ್ಲಿ ಧರ್ಮಸಾಮರಸ್ಯ ಮೆರೆದು ಅರಮನೆಯ ಒಳಗೆ ಜೈನಮಂದಿರವನ್ನು ಕಟ್ಟಿಸಿದ ಸಮಷ್ಠಿ ದೃಷ್ಟಿ ಮೆಚ್ಚುಗೆಯಾಯಿತು. ಅರಮನೆಯನ್ನು ಆಗ ಕಟ್ಟಿದ್ದು ಗಟ್ಟಿ ಕಲ್ಲುಗಳಿಲ್ಲದ ಮಣ್ಣ ದಿನ್ನೆಯ ಮೇಲೆ, ಅಷ್ಟೊಂದು ಭದ್ರವಲ್ಲದ ಬುನಾದಿ ಅದು. ಅದರ ಎಸ್‍ಬಿಸಿ ('ಸೇಫ್ ಬಿಯರಿಂಗ್ ಕ್ಯಾಪ್ಯಾಸಿಟಿ' ಆಫ್ ಸಾಯಿಲ್') ಕಡಿಮೆ ಇರುವ ಮಣ್ಣು, ಈ ಮಣ್ಣಿನ ಸಾಂದ್ರತೆ (ಡೆನ್ಸಿಟಿ) ಕಡಿಮೆ, ಹೀಗಾಗಿ ಅದರ ಸಿಬಿಆರ್( ಕ್ಯಾಲಿಫೋರ್ನಿಯಾ ಬೀಯರಿಂಗ್ ರೇಶಿಯೋ) ಕಡಿಮೆ. ಈ ಭಾಗದಲ್ಲಿ ಮಳೆಯೇ ಇಲ್ಲದ್ದರಿಂದ ನೀರು (ಸಿಂಕ್) ಇಂಗಿ, ಬುನಾದಿ ನಾಶವಾಗುವ ಪ್ರಶ್ನೆಯೇ ಇರಲಿಲ್ಲ. ಇದುವರೆಗೂ ಇದು ಸತ್ಯವಾಗಿತ್ತು. ಆದರೆ ಇತ್ತೀಚೆಗೆ ಅಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮುಗಿಬೀಳುತ್ತಿದ್ದು, ಅರಮನೆಯ ಒಳಗೆ ನೀವು ನಂಬಲಿಕ್ಕಿಲ್ಲ ಆತ್ಮೀಯರೆ, ಸಣ್ಣ ದೊಡ್ಡ ನಲವತ್ತೈವತ್ತು ಹೋಟಲ್‍ಗಳು ಹುಟ್ಟಿಕೊಂಡಿವೆ. ಇದಲ್ಲದೇ ಈಗಾಗಲೇ ಇದರಲ್ಲಿ ಇಪ್ಪತ್ತೈದು ಸಾವಿರ ರಹವಾಸಿಗಳ ಜನಸಂಖ್ಯೆ ವಾಸವಾಗಿರುವ ಜೀವಂತ ಕೋಟೆ ಇದು. ಈಗ ಪ್ರವಾಸಿಗರ ವಸತಿಗಳಿಗೆ ಸಹಜವಾಗಿ ನೀರು ಹೆಚ್ಚು ಬೇಕು. ಈ ಹತ್ತು ವರ್ಷಗಳಲ್ಲಿ ಅದರ ನೀರಿನ ಬೇಡಿಕೆ ಇಪ್ಪತ್ತು ಪಟ್ಟು ಹೆಚ್ಚಿದೆ. ಅದರೆ ಈ ನೀರು ಸರಾಗವಾಗಿ ಹೊರಗೆ ಹರಿದುಹೋಗಲು ಸರಿಯಾದ ಡ್ರೇನೇಜ್ ವ್ಯವಸ್ಘೆ ಇಲ್ಲ, ಇದ್ದರೂ ಸಾಲದು. ಹೀಗಾಗಿ ಅದೆಲ್ಲ ಬಹುತೇಕ ತ್ಯಾಜ್ಯ ನೀರು ಅರಮನೆಯ, ಕೋಟೆಯ ಬುನಾದಿಯಲ್ಲೇ ಇಂಗಿ, ಕೋಟೆ ಸಿಂಕ್ ಅಗುವ ಸಾಧ್ಯತೆ ಇದೆ. ಇದಕ್ಕೆ ನಿದರ್ಶನವೆಂಬಂತೆ ಸುಮಾರು ಹತ್ತು ವರ್ಷದ ಹಿಂದೆ ಇದರ ಒಂದು ಭಾಗದ ಗೋಡೆ ಕುಸಿದಿದೆ. ಈಗ ಇನ್ನೊಂದು ದೊಡ್ಡ ಪಾಶ್ರ್ವಕಟ್ಟಡವೇ, ಮುಖ್ಯ ಗೋಡೆಯಿಂದ ಬಿರುಕುಬಿಟ್ಟು ಮುಂದೆ ಬಂದಿದೆ. ದೊಡ್ಡ ಬಿರುಕು ಕಾಣಿಸಿದೆ. ದುರಸ್ತಿ ಏನೋ ಮಾಡಲಾಗಿದೆ ಆದರೆ ಗಟ್ಟಿ ಬುನಾದಿಯಿಲ್ಲದೇ ಬುನಾದಿಯೇ ಸಿಂಕ್ ಆದರೆ, ಇಡೀ ಕೋಟೆಯೇ ಉರುಳಿದರೆ ಹೇಗೋ, ಭೂಕಂಪದಂತಹ ಪ್ರಕೃತಿಯ ವಿಘಟನೆಗಳು ಸಂಭವಿಸಿದರೆ ಇದರ ಸಂಭವನೀಯತೆ ನೂರಾರು ಪಟ್ಟು ಹೆಚ್ಚು. ..... ಏನೋ ಹಳಹಳಿ, ಎಂಥದೋ ಕಾಳಜಿ ಮನಕ್ಕೆ,

    .. ಯಾಕೋ ಅರಮನೆಯ ಕಾಳಜಿ ಬಾಳ ಹೆಚ್ಚಾಯಿತೇನೋ. ಪ್ರೀತಿಪಾತ್ರರೊಬ್ಬರಿಗೆ ನೆಗಡಿಯಾದರೂ, ಹೆಚ್1 ಎನ್1 ಎಂದೋ, ಇನ್ನೊಂದೋ, ಮುನ್ನೊಂದೋ ವಿಚಾರಿಸುತ್ತೇವಲ್ಲ ಹಾಗಾಯಿತು ಇದು. ಅವರು ತೊಗೊಳ್ಳುವ ಮುಂಜಾಗರೂಕತೆ ತೊಗೊಳ್ಳುತ್ತಾರೆ, ಭಾಳ ಮುಂದ ಮುಂದ ಯೋಚಿಸಬ್ಯಾಡ ಎಂದು ಮನಸ್ಸು ಗದರಿತು. ನನ್ನೊಳಗೇ ನಕ್ಕೆ. ಲವ್ ಮಾಡುವಾಗ ಸಿಕ್ಕಿಹಾಕಿಕೊಂಡ ಭಾವ ನನಗೆ, ಹೌದು ಜೈಸಲ್ಮೇರ್ ಎಂಬ ಮರಳರಾಣಿಯ ಮೇಲೆ 'ಕ್ರಶ್' ಆಗಿಬಿಟ್ಟಿತ್ತು ನನಗೆ..... ಒಳಗೊಳಗೆ ನಕ್ಕು ನಾಚಿ ಸುಮ್ಮನಾದೆ. ಅದೇಕೋ ಗುಲ್ಜಾರರ , 'ದಿಲ್ ಢೂಂಢತಾ ಹೈ, ಫಿರ್ ವಹೀ ಫುರಸತ್ ಕೆ ರಾತ್ ದಿನ್, ಬೈಠೆ ರಹೇ ತಸವ್ವುರ್ ಎ ಜಾನಾ ಕಿಯೇ ಹುಯೆ', ನೆನಪಾಯಿತು, ಕಳೆದುಹೋದ ಗಳಗೆಯ ಸಂಗಾತಿಯ ಧ್ಯಾನದಲ್ಲಿ ಕುಳಿತು ಬಿಟ್ಟೆ. ಮತ್ತದನ್ನೇ ಯೋಚಿಸುತ್ತ....ಮತ್ತೆ ಮತ್ತೆ, ..ಎಷ್ಟೊತ್ತೋ....

     ಹಾಗೆ ಯೋಚಿಸುತ್ತ, ಯೋಚಿಸುತ್ತ ಒಮ್ಮೆ ಹೊರಗೆ ಅತ್ತಿತ್ತ ನೋಡಿದೆ. ಅರೆ! ಇದುವರೆಗೂ ಗಮನಿಸಿಯೇ ಇರಲಿಲ್ಲ, ನಾವು ಬಂದ ದಾರಿಯಲ್ಲಿಯೇ ಹಿಂತಿರುಗುತ್ತಿದ್ದೇವೆ, ಹೇಗೆ ಗೊತ್ತಾಯಿತು ಹಾಗಾದರೆ? ಇನ್ನೇನು ಪೋಕರಾನ್ ಇಪ್ಪತ್ತೈದು ಕಿಲೋಮೀಟರ್ ಬೋರ್ಡು ಕಣ್ಣಮುಂದೆಯೇ ಇತ್ತು. ಖುಷಿಯ ರೆಕ್ಕೆಗಳು ಮತ್ತೆ ಮೂಡಿದವು. ಮತ್ತೆ ನನ್ನ ಗೆಳೆಯನಂತಾಗಿದ್ದ ಮೆನೇಜರನನ್ನು ಮಾತನಾಡಿಸಬಹುದು. ಇನ್ನಷ್ಟು ಏನನ್ನಾದರೂ ಅರಿಯಬಹುದೆಂದು ತಿಳಿದು, ಸರಿ ಮತ್ತೇನಾದರೂ ಮಾತಾಡಲಿಕ್ಕೆ ಸಿಕ್ಕೀತು ಎಂದು ದಾರಿಗಣ್ಣಾದೆ, ....'ಪೋಕರಾನ್' ಎಂಬ ಈ ಭರತಖಂಡದ ಸರ್ವಶ್ರೇಷ್ಠ ಪದಕಗಳನ್ನು ಎದೆಗೆ ತಾಗಿಸಿಕೊಂಡ ಗೌರವನೆಲದ ಇನ್ನಷ್ಟು ಭೇಟಿಗೆ ಕಾತರನಾಗಿ ಕುಳಿತೆ...

    ಅಷ್ಟರಲ್ಲಿ ಸರವನ್ ತನ್ನ ರಾಜಸ್ಥಾನದ ರೀತಿರಿವಾಜುಗಳನ್ನು ಹೇಳ ಹತ್ತಿದ. ರಜಪೂತರಲ್ಲಿ ಅವರು ತಮ್ಮ ಅತ್ತಿಗೆಯ ಮುಖವನ್ನು ಕಣ್ಣೆತ್ತಿಯೂ ನೋಡಿರುವುದಿಲ್ಲ. ಕೇವಲ ಅವಳ ಕಾಲುಂಗುರ ಮಾತ್ರ ನೋಡಿರುತ್ತಾರೆ. ಲಕ್ಷ್ಮಣಂಗಳರು...... 'ಅಕಸ್ಮಾತ್ ಏನಾದರೂ ಹೆಚ್ಚು ಕಡಿಮೆಯಾಗಿ ಅವಳು ಕಾಣೆಯಾದರೆ, ಏನು ಮಾಡುವಿರಿ?' ಎಂದಳು ಪೂರ್ಣಿಮಾ.... ಅವರ ಹಸ್‍ಬಂಡ್ ಇರುತ್ತಾರಲ್ಲ, ಅಂದರೆ ನಮ್ಮ 'ಭಾಯೀ' ಎಂದ. ಅಕಸ್ಮಾತ್ ಅವರು ಇದ್ದಿಲ್ಲವಾದರೆ ? ಅವರ ಫೋಟೋ ಕೊಡುತ್ತೇವೆ ಎಂದ.. ಒಟ್ಟಾರೆ ಅವರು ತಮ್ಮ ರೀತಿ ರಿವಾಜುಗಳನ್ನು 'ಟು ದ ಕೋರ್' ಆಚರಿಸುತ್ತಾರೆ. ಅಲ್ಲಿ ರಜಪೂತರಲ್ಲಿ 'ಪರದಾ ಪರಥ್' ಸಂಪ್ರದಾಯ. ಅಂದರೆ ಪರದಾ ಪದ್ಧತಿ. ಹೆಣ್ಣಮಗಳೊಬ್ಬಳು ಹೊರಗೆಲ್ಲೂ ತನ್ನ ಮುಖ ತೋರುವ ಹಾಗಿಲ್ಲ. ಘೂಂಘಟ್ ಮುಚ್ಚಿಕೊಳ್ಳಲೇ ಬೇಕು. ಅಕಸ್ಮಾತ್ ನಾವು ಎಲ್ಲ ಅಣ್ಣ ತಮ್ಮಂದಿರು ಹಾಲ್‍ನಲ್ಲಿ ಮಾತನಾಡುತ್ತ ಕುಳಿತಿದ್ದೇವೆ ಅಂತಿಟ್ಕೊಳ್ಳಿ, ಮನೆಯಲ್ಲಿ ತರಕಾರಿಯೋ, ಚಹಪೌಡರ್, ಸಕ್ಕರೆಯೋ, ಹಾಲೋ ಏನು ಬೇಕಿದ್ದರೂ ಇವರಿದ್ದಲ್ಲಿಗೆ ಬಂದು ಹೇಳುವಂತಿಲ್ಲ.ಕೂಗಿಯೂ ಹೇಳುವಂತಿಲ್ಲ. ಅಕಸ್ಮಾತ್ ತನ್ನ ಪತಿ ಒಳಗೆ ಬಂದಾಗಲೇ ತಿಳಿಸಬೇಕು. ಹಿರಿಯರಿಗೆ, 'ಸಾ' ಎಂದೇ ಸಂಬೋಧಿಸಬೇಕು. ಅದು ಹಿಂದಿಯ 'ಜೀ'ಗಿಂತ ಹತ್ತು ಪಟ್ಟು ಗೌರವ ಪದ ಎಂದು ವಿವರಿಸಿದ ಸರವನ್. ಅಲ್ಲಿಯ ಗೃಹಿಣಿಯರಿಗೆ ಮೋಬೈಲ್ ಫೋನ್ ಬಂದರೂ ಮೊದಲು ಘೂಂಘಟ್ ಸರಿಯಾಗಿ ಮಾಡಿಕೊಂಡ ನಂತರವೇ 'ಹಲೋ ' ಹೇಳುವರು ಎಂದಾಗ, ಎಲ್ಲರೂ ಖೊಳ್ ಎಂದು ನಕ್ಕೆವು. ಆ ಸಹೋದರಿಯರು ಎಷ್ಟೊಂದು ಗಂಟುಗಳಲ್ಲಿ ಬಂಧಿಯಾಗಿರುವರಲ್ಲ ಎಂದೆನಿಸಿತು. ಮನೆಯ ಹೆಣ್ಣು ಮಗಳ ಮಕ್ಕಳ ಮದುವೆ, ಅಂದರೆ ಮೊಮ್ಮಕ್ಕಳ ಮದುವೆ, ಮುಂಜಿವೆ ಸಮಾರಂಭಗಳಲ್ಲಿ ಎಲ್ಲ ವೆಚ್ಚಗಳನ್ನೂ ತವರು ಮನೆಯ ತಂದೆ, ಸಹೋದರರೇ ನೋಡಿಕೊಳ್ಳುವುದು ವಾಡಿಕೆ,.. ಅವರು ಬೇರೆ ಬೇರೆಯಾಗಿದ್ದರೂ ಇದನ್ನು ಪಾಲಿಸುತ್ತಾರೆ. ಮೊದಲು ಪಾತ್ರೆ-ಪಗಡೆ ಆಯ್ದು ಕೊಡುತ್ತಾರೆ, ಮತ್ತೆ ಬಟ್ಟೆ ಕೊಡಿಸುತ್ತಾರೆ. ನಂತರ ಆಭರಣ, ಎಲ್ಲ ಸಂಪ್ರದಾಯಗಳಿಗೂ ಒಂದೊಂದು ಹೆಸರು. ಆ ಸಂಪ್ರದಾಯಗಳನ್ನು ಬಹುತೇಕರು ಪಾಲಿಸುತ್ತಾರೆ., ಕನಿಷ್ಠಪಕ್ಷ ಸಾಂಕೇತಿಕವಾಗಿಯಾದರೂ.. ಅವಳಿಗೆ ಹೆಚ್ಚು ಖರ್ಚಿನ ಹೊರೆಯಾಗದಿರಲೆಂದು ಈ ಪದ್ಧತಿ ಎಂದ... ಅತ್ಯುತ್ತಮ ಸಂಪ್ರದಾಯ. ಭಲೇ ಎಂದೆ.

   ಅವರು ಕೊಡಮಾಡುವ 'ದಹೇಜ' ಮತ್ತಿತರ ವೆಚ್ಚಗಳಲ್ಲಿ ಪಾಲು ವಹಿಸಿಕೊಳ್ಳುವೆವು ಎಂದ. ಶಹರಗಳಲ್ಲಿ ಮದುವೆಗಳು ಅದ್ದೂರಿಯಾಗಿ ಮೂರು ಮೂರು ದಿನಗಳು ನಡೆದರೆ ಗ್ರಾಮಗಳಲ್ಲಿ ಊರ ಹೊಲಗಳಲ್ಲಿ ಒಂದು ಇಪ್ಪತ್ತು ಸಾವಿರದಲ್ಲಿ ಒಂದು ಟೆಂಟು ಹಾಕಿಸುತ್ತೇವೆ, ಹತ್ತಾರು ಸಿಹಿತಿನಿಸು ಮಾಡುತ್ತೇವೆ. ಹತ್ತಾರು ಸಿಹಿತಿನಿಸುಗಳು ಏಕೆ ಎಂದದ್ದಕ್ಕೆ, ಅಕಸ್ಮಾತ್ ಒಂದೋ ಎರಡೊ ಮಾಡಿಸಿದರೆ ಅದರಲ್ಲಿ ಒಂದು ಸರಿಯಾಗಿಲ್ಲ ಎಂದು ಇಟ್ಟುಕೊಳ್ಳಿ, ಉಳಿದವರೆಲ್ಲರೂ ಇನ್ನೊಂದನ್ನೇ ಆರಿಸಿ ಹಾಕಿಸಿಕೊಳ್ಳುವರು. ಅದೂ ಕೂಡ ಕೆಲಹೊತ್ತಿನಲ್ಲಿ ಖಾಲಿ ಆಗುತ್ತದೆ. ಇದರ ಬದಲಾಗಿ ಎಂಟು ಹತ್ತು ತರಹ ಮಾಡಿಸಿದರೆ, ಅದರ ಸ್ಯಾಂಪಲ್ ನೋಡುವುದರಲ್ಲೇ ಅವರ ಹೊಟ್ಟೆ ತುಂಬಿಬಿಡುತ್ತದೆ. ಅದರಲ್ಲೂ ತನಗೆ ಲೈಕ್ ಆದದ್ದನ್ನು ಇನ್ನಷ್ಟು ತಿಂದು ಭೋಜನ ಮುಗಿಸುತ್ತಾರೆ.. ಅಂದರೆ ಮಾಡಿದ್ದೆಲ್ಲ ಸಾರ್ಥಕವಾಗಿ ಅತಿಥಿಗಳ ಹೊಟೆಸೇರಿ ಸಂತೃಪ್ತಿಗೆ ಕಾರಣವಾಗುತ್ತದೆ, ಒಂದೋ ಎರಡೋ ಮಾಡಿಸಿದರೆ ವೇಸ್ಟ್ ಆಗುವುದೇ ಹೆಚ್ದು ಎಂದು ವಿಶ್ಲೇಷಿಸಿದ. ಭೋಜನದ ಕುರಿತು ಅವನ ವಿಶ್ಲೇಷಣೆ ಹಂಡ್ರೆಡ್ ಪರ್ಸೆಂಟ್ ಸರಿ ಎನಿಸದಿದ್ದರೂ, ಒಳ್ಳೆಯ ವಿರೋಧಿ ವಕೀಲನಂತೆ ಆಗ್ರ್ಯೂ ಮಾಡಿದ್ದ ಸರವನ್. 'ನಿಮ್ಮ ರೀತಿ ನಿಮಗ ಪಾಡ, ನಮ್ಮ ರೀತಿ ನಮಗ ಪಾಡ',, ಎಂದು ತಿಪ್ಪೆ ಸಾರಿಸಿಬಿಟ್ಟಳು ಹಿಂದೆ ಕುಳಿತು ಪೂರ್ಣಿಮಾ .......ಹ ಹ ಹ , ಎಲ್ಲರಲ್ಲೂ ನಗು. .

    ಅಷ್ಟರಲ್ಲಿ 'ಪೊಕರಾನ್' ಬಂದೇ ಬಿಟ್ಟಿತು. ಐದು, ನಾಲ್ಕು ಮೂರು ಎರಡು, ಕಿಮೀ. ಬಂತು ಬಂತು ನೋಡಿ, ನಮ್ಮೆಲ್ಲರ ಅಭಿಮಾನದ ದೇವತೆ.... ಸರ್ಕಲ್‍ನಲ್ಲಿ ಮೊನ್ನೆ ತಿಂಡಿ ತಿಂದ ಹೋಟಲ್‍ಗೇನೇ ಹೋಗೋಣ, ಎಂದೆ. ಗಾಡಿಯಿಂದ ಇಳಿದು, ಹೋಟಲ್ ಒಳಗೆ ಹೋಗುತ್ತಲೆ, 'ಪದರೋಸ್, ಪದರೋಸ್, ಬೆಂಗಳೂರು' (ಸ್ವಾಗತ ಸ್ವಾಗತ ಬೆಂಗಳೂರು) ಎಂದ . ಮೆನೇಜರು. ನಮ್ಮನ್ನು ಗುರುತು ಹಿಡಿದಿದ್ದ. ಅಷ್ಟೊಂದು ರಶ್‍ನಲ್ಲೂ ಅವನು ನಮ್ಮನ್ನು ಗುರುತಿಸಿದ್ದು ಖುಷಿ ನೀಡಿತು..' ಕ್ಯಾ ಕ್ಯಾ ದೇಖ್ ಕೆ ಆಯೆ.'ಎಂದ. ನಾನು, 'ಡೆಸರ್ಟ್ ಡೆಸರ್ಟ್ ಡೆಸರ್ಟ್'ಎಂದೆ. 'ಔರ್ ......ಡೆಸರ್ಟ್' ಎಂದು ಇಬ್ಬರೂ ಒಮ್ಮಲೇ ಅಂದು ಜೋರಾಗಿ ನಕ್ಕೆವು .ನಮ್ಮ ವೇವ್‍ಲೆಂಗ್ತ್ ಮ್ಯಾಚ್ ಅದಂತಿದ್ದವು. ಬೀರ್‍ಜೋಸ್ (ಕುಳಿತುಕೊಳ್ಳಿ) . 'ಜಿಮೂಸ' (ಊಟ ಮಾಡಿ) ಎಂದ. 'ಥಾಂಕ್ಯೂ, ಭೂಖ್ ಭೀ ಲಗೀ ಹೈ'ಎಂದೆ. ನಾನಂತೂ ಆಲೂ ಪರಾಟಾ ತೆಗೆದುಕೊಂಡೆ, ತಮತಮಗೆ ಬೇಕಾಗಿದ್ದನ್ನು ಹೇಳಿದರು ಪೂರ್ಣಿಮಾ ಹಾಗು ಅನೂಷಾ. ಪರೋಟಾ , ಕೇರ್ ಸಾಂಗ್ರಿ ಪಲ್ಯ ಹೇಳಿ ಸವಿದರು. ಇಲ್ಲಿ ಘೀ ಪರಾಟಾ ಸಿಕ್ಕಿತ್ತು ಸರವನ್‍ಗೆ. ಈ 'ಕೇ(ರ್) ಸಾಂಗ್ರಿ' ಎಂಬ ಮರದ ಮೇವನ್ನು ಒಂಟೆಗಳು ಮೇಯಿದು ಉಳಿಯುವ ಚಿಗುರುಗಳನ್ನು ಶೇಖರಿಸಿ ಒಣಗಿಸಿತಂದು, ಒಣಗಿಸಿ ಇಟ್ಟು ಅದರ ಭಾಜಿ(ಸಬ್ಜೀ) ಯನ್ನು ವóರ್ಷವಿಡೀ ತಿನ್ನುತ್ತಾರೆ. ಬಹಳ ರುಚಿಯಾಗಿರುತ್ತದೆ. ಇದು ರೆಫ್ರಿಜರೇಟರ್‍ನಲ್ಲಿ ಇಡದೇ ಮೂರು ದಿನ ಕೆಡದಂತಿರುತ್ತದೆ. ನಮ್ಮ ಪುಂಡಿ ಪಲ್ಯೆ ಇರುತ್ತದಲ್ಲ ಹಾಗೆ, ಇದು ರಾಜಸ್ಥಾನದ ಸಿಗ್ನೇಚರ್ ಭಾಜಿ. ಅಲ್ಲಿಗೆ ಹೋದರೆ ಇದರ ರುಚಿ ಸವಿಯಲು ಮರೆಯಬೇಡಿ. ಮೇನೇಜರನೊಂದಿಗೆ ಕುಶಲೋಪರಿಯಾಡಿ ಅಲ್ಲಿಂದ ಹೊರಬಂದೆವು..ವಾಹನವೇರುವಾಗ, ಎಲ್ಲೋ ಸಮೀಪದಿಂದ ಕಿಶೋರಕುಮಾರನ ' ಮೇರೇ ಮೆಹಬೂಬ್ ಕಯಾಮತ್ ಹೋಗೀ, ಆಜ್ ರುಸ್‍ವಾ ತೇರೀ ಗಲಿಯೋಂ ಮೇಂ ಮುಹೊಬ್ಬತ್ ಹೋಗೀ' ಹಾಡು ಕೇಳಿ ಬಂತು, ನನ್ನೆದೆಯ ಮಿಡಿತಗಳೇ ಹಾಡಾಗಿ ರೂಪುಗೊಂಡಿದ್ದುವೇನೋ!

    ಇಲ್ಲಿಂದ ಈ ರಸ್ತೆ ಟಿಸಿಲೊಡೊಯುತ್ತದೆ, ಎಡಕ್ಕೆ ಬೀಕಾನೇರ್, ಬಲಕ್ಕೆ ಜೋಧಪುರ. ಜೋಧಪರದಡೆ ಹೊರಳಿದೆವು. ಇಲ್ಲೇ ಇದೇ ರಸ್ತೆಯಲ್ಲಿ ಎರಡು ಕಿಮೀಗಳಲ್ಲೇ ಪೋಕರಾನ್ ಪಟ್ಟಣ.. ನಾವು ತಿಂಡಿ ತಿಂದದ್ದು, ಪೋಕರಾನ್ ಕ್ರಾಸ್‍ನಲ್ಲಿ. ಪೋಕ್ರಾನ್ ಪಟ್ಟಣದ ಮೇಲಿಂದ ಹಾದುಹೋಗುತ್ತದೆ ಈ ರಸ್ತೆ. . ಇಲ್ಲಿಂದ ಜೋಧಪುರಕ್ಕೆ ಸುಮಾರು ಇನ್ನೂರು ಕಿಮೀಗಳಷ್ಟು. ಅಂದರೆ ಹೆಚ್ಚು ಕಡಿಮೆ ಎರಡು ಎರಡೂವರೆ ಗಂಟೆಯ ಪಯಣ.. ಇಲ್ಲಿ ಸುತ್ತ ಮುತ್ತ ಜಿಪ್ಸಮ್ ಅದಿರು, ಸಂಗಮರಮರಿ(ಮಾರ್ಬಲ್) ಕಲ್ಲುಗಳು, ಮಾರ್ಬಲ್ ಇಂಡಸ್ಟ್ರಿ ಹೆಚ್ಚಿನ ಪ್ರಮಾಣದಲ್ಲಿದೆ,  ಇನ್ನೂ ಅನೇಕ ಅದಿರುಗಳು ದೊರೆಯುವ ಪ್ರದೇಶವಿದು. ನಮ್ಮ ಪ್ರಯಾಣದ ಎಡಬಲಕ್ಕೂ ಅಲ್ಲಲ್ಲಿ ಈಗ ಹೆಚ್ಚು ಹೆಚ್ಚು ವಸತಿ ಪ್ರದೇಶಗಳು ಕಾಣಹತ್ತಿದವು.

    ರಾಜಸ್ಥಾನದಲ್ಲಿ ಪಂಚಾಯತಿ ಇಲೆಕ್ಷನ್ ನಡೆದಿತ್ತು, ಎಲ್ಲಾ ಹಳ್ಳಿಗಳಲ್ಲಿಯೂ ಶಾಂತ ವಾತಾವರಣ, ವೋಟು ಹಾಕಲಿಕ್ಕೆ ನಿಂತ ಜನರ ಸಾಲಾದರೂ ಎಷ್ಟು ಕಲರ್‍ಫುಲ್ ತೆಳ್ಳನೆಯ ಉದ್ದುದ್ದ ಬಣ್ಣದ ಗೊಂಬೆಗಳನ್ನು ಸಾಲಾಗಿ ನಿಲ್ಲಿಸಿದಂತೆ. . ಪಿಂಕ್ ಘೂಂಘಟ್‍ಗಳಲ್ಲಿ ಹಳ್ಳಿಯ ಹೆಣ್ಣುಮಕ್ಕಳು, ತರತರಹದ ಪೇಟಾಗಳಲ್ಲಿ ಯುವಕರು, ಹಿರಿಯರು, ಮುಂದಾಳುಗಳು, ಅನುಯಾಯಿಗಳು, ಅಜ್ಜ ಅಜ್ಜಿಯರು, ಎಲ್ಲರೂ ಆ ಸಮಯದಲ್ಲಿ ಬಹುತೇಕ ಹಳ್ಳಿಗಳ ಶಾಲಾ ಆವರಣಗಳು, ಸರಕಾರೀ ಶಿಕ್ಷಣ ಸಂಸ್ಥೆಗಳ ಆವರಣಗಳಲ್ಲಿ, ಹೊರಗೆ ಗುಂಪಾಗಿ ಗುಂಪಾಗಿ ಕಂಡುಬರುತ್ತಿದ್ದರು. ಜೀಪು ಮೋಟರ್ ಸೈಕಲ್‍ಗಳಲ್ಲಿ ತಮ್ಮ ತಮ್ಮ ವೋಟರ್‍ಗಳನ್ನು ಕರೆತರುವ ಕೆಲಸ ಜೋರಾಗಿತ್ತು. ಬುರ್ ಬುರ್ ಎಂದು ಗಾಡಿಗಳು ಈಗ ಹಳ್ಳಿಗಳು ಬಂದಲ್ಲಿ ಓಡಾಡುವುದು ಕಂಡು ಬರುತ್ತಿತ್ತು. ಜೈಸಲ್ಮೇರದಲ್ಲಿ ಅದರ ನೆನಪಿಗಾಗಿ ಕೊಂಡ ಪೇಟಾ ಧರಿಸಿ ಮುಂದೆ ಕುಳಿತವನನ್ನು ಬಹಳಷ್ಟು ಜನ, ಕುತೂಹಲದಿಂದ ನೋಡುತ್ತಿದ್ದರು.

    ಜೋಧಪುರದವರೆಗೂ ಮರುಭೂಮಿ ತನ್ನ ಕುತ್ತಿಗೆಯನ್ನು , ಕೈಕಾಲುಗಳನ್ನು ಅಲ್ಲಲ್ಲಿ ಎಡಬಲಗಳಲ್ಲಿ ಚಾಚುತ್ತಲೇ ಇತ್ತು. ದೂರ ದೂರದವರೆಗೂ ಬಂಜರು ಬೆಂಗಾಡಿನಂತಹ ಜಮೀನುಗಳು, ಜಾಲಿಗಳ ಮರಗಳೊಂದಿಗೆ, ಒಣಹುಲ್ಲಿನ ಕಂದು ಬಣ್ಣದ ಅಂಗಿಧರಿಸಿದ ಇದು ನಮ್ಮೊಂದಿಗೆ ಇದ್ದೇ ಇತ್ತು. ಜೋಧಪುರ ಸಮೀಪಿಸಿದಾಗ, ಅಲ್ಲಲ್ಲಿ ಹೊಲಗಳೂ ಕಂಡುಬರಹತ್ತಿದ್ದವು. ಬಾಜರಾ, ಸಾಸಿವೆ ಬೆಳೆಯ ಹೊಲಗಳು.. ಅಲ್ಲಲ್ಲಿ ಮತ್ತೆ ಮತ್ತೆ ಕುರುಚಲು ಕಾಡು. ಮತ್ತು ವಿರಳವಾಗಿಯಾದರೂ ಕ್ವಾರಿಗಳು ರಸ್ತೆ ಪಕ್ಕಗಳಲ್ಲಿ. ...ಮರಳು ಜೋಧಪುರ ಸಮೀಪದವರೆಗೂ ಪಸರಿಸಿ, ನಮ್ಮನ್ನು ಹಿಂಬಾಲಿಸುತ್ತಲೇ ಇತ್ತು, ತೋಳು ಚಾಚಿ,... ಹೀಗಾಗಿ ಜೋಧಪುರಕ್ಕೆ 'ಗೇಟ್‍ವೇ ಟು ಥಾರ್' ಎನ್ನುವರು.. ಜೈಪುರದಲ್ಲಿ ಪಿಂಕ್ ಸಿಟಿಯಲ್ಲಿ ಪಿಂಕ್ ಬಣ್ಣ,, ಜೈಸಲ್ಮೇರ್‍ನಲ್ಲಿ ಸ್ವರ್ಣಬಣ್ಣವನ್ನು ಪ್ರತಿಫಲಿಸಿದಂತೆ, ಬಳಿದಂತೆ, ಇಲ್ಲಿ ಜೋಧಪುರದಲ್ಲಿ ಕೋಟೆಯ ಸುತ್ತಲೂ ನೀಲಿಬಣ್ಣದ ಕಟ್ಟಡಗಳು. ಬಹತೇಕ ಜನ ಇದನ್ನು ಪಾಲಿಸಿದ್ದಾರೆ. ಜೋಧಪುರ, ಸುಂದರ ಪಟ್ಟಣವಿದು.

    ದೂರದಿಂದಲೇ ಘನಗಾಂಭೀರ್ಯದಿಂದ ಕಾಣುತ್ತದೆ ಮೆಹರಾನ್‍ಗಢ್ ಫೋರ್ಟ್. ಅತ್ಯಂತ ಗಟ್ಟಿ ಮುಟ್ಟು, ನೆನ್ನೆ ಮೊನ್ನೆ ಕಟ್ಟಿದಂತಿದೆ. ಜೋಧಪುರಕ್ಕೆ ಪ್ರವೇಶಿಸಿ, ತಿಂಡಿ ತಿನ್ನುತ್ತ ಕುಳಿತರೆ ವಿಳಂ¨ವಾಗುವುದೆಂದು ತಲುಪುತ್ತಲೇ ಮೆಹರಾನಗಡ ಕೋಟೆಯತ್ತ ಹೊರಟೆವು. ಎತ್ತರದ ಬೆಟ್ಟದ ಮೇಲೆ ಕಟ್ಟಲಾಗಿರುವ ಕೋಟೆ ಸುಸ್ಥತಿಯಲ್ಲಿದೆ. ಬಲು ಭವ್ಯವಾಗಿದೆ. ಬೆಟ್ಟದ ಮೇಲಿರುವುದರಿಂದ ನಾಲ್ಕಾರು ಮಾರುಗಳ ದೂರದಲ್ಲಿಯೇ ಗಾಡಿಗಳು ನಿಲ್ಲುವುದರಿಂದ ಹಾವಿನಾಕಾರದ ರಸ್ತೆಯ ಮೂಲಕ ಅರಮನೆಯೆಡೆಗೆ ಏರುತ್ತ ಹೆಜ್ಜೆ ಹಾಕಬೇಕು. ರಾಜಸ್ಥಾನದ ಬಹುತೇಕ ಭಾಗವನ್ನು ಆಳಿದ ರಾಜ್ಯ ಈ ಮಾರವಾ ಸಾಮ್ರಾಜ್ಯ. 'ಮಾರವಾ ಕಿಂಗಡಂ' ಎಂದು ಇದಕ್ಕೆ ಇನ್ನೊಂದು ಹೆಸರು. ವರ್ಷದ ಬಹುತೇಕ ದಿನಗಳಲ್ಲಿ ಸೂರ್ಯನ ತಡೆರಹಿತ ದಿನಗಳನ್ನು ಪಡೆಯುವ ಇದಕ್ಕೆ 'ಸನ್ ಸಿಟಿ'ಎಂತಲೂ ಕರೆಯುವರು. ರಾಜಸ್ಥಾನದ ಎರಡನೆಯ ಅತಿ ದೊಡ್ಡ ಪಟ್ಟಣವಿದು.. ಮಿಲಿಟರಿ ಏರ್ ಬೇಸ್, ಮಿಲಿಟರಿ ಅಲ್ಲದೇ ನಾಗರಿಕ ಏರಪೋರ್ಟ ಹೊಂದಿ, ರೇಲ್ವೆ, ರಸ್ತೆಗಳ ಜಾಲಗಳಿಂದ ದೇಶದ ಎಲ್ಲ ದಿಕ್ಕುಗಳಿಗೂ ಉತ್ತಮವೆನ್ನಿಸುವಷ್ಟು ಸರ್ವಋತು ಸಂಪರ್ಕಗಳನ್ನು ಹೊಂದಿದ ಆರೋಗ್ಯಯುತ ಪಟ್ಟಣ.

    ಅರಮನೆಯ ಹಾಗೂ ಮ್ಯೂಜಿಯಂಗಳಿಗೆ ಟಿಕೆಟ್ ಕೊಂಡು ಒಳಗೆ ಪ್ರವೇಶಿಸಿದೆವು. ಕೋಟೆಯ ಮಹಾದ್ವಾರದ ಒಳ ಪ್ರವೇಶವಾಗುತ್ತಲೇ ಹರವಾದ ಪ್ರಾಂಗಣ. ಒಟ್ಟು ಏಳು ಗೇಟುಗಳನ್ನು ಹೊಂದಿರುವ ದೇಶದಲ್ಲಿಯೇ ಅತಿ ವಿಶಾಲ ಕೋಟೆಗಳಲ್ಲಿ ಎಣಿಕೆಯಾಗುವ ಕೋಟೆ ಇದು. ಜಯಪೋಳ ಎಂಬ ದ್ವಾರವನ್ನು ಜೈಪುರ, ಬಿಕಾನೇರ್ ಸೈನ್ಯದ ವಿರುದ್ಧ ಯುದ್ಧದಲ್ಲಿ ಗೆದ್ದ ನೆನಪಿಗಾಗಿ ಕಟ್ಟಿದರೆ , ಫತೇ ಪೋಳ ದ್ವಾರವನ್ನು ಮೊಘಲರ ವಿರುದ್ಧದ ವಿಜಯಕ್ಕಾಗಿ ಕಟ್ಟಲಾಗಿದೆ. ದೇಢ ಕಾಮಗ್ರಾ ದ್ವಾರಗಳಲ್ಲಿ ಅಂದಿನ ಯುದ್ಧ ಕಾಲದಲ್ಲಿ ಈ ಕೋಟೆಯತ್ತ ಎಸೆದ ಸೀಸದ ಗುಂಡಿನ ಕಚ್ಚು,ಗಳ ಗುರುತುಗಳನ್ನು ತೋರಿಸಿದ ಗೈಡ್. ಭೀಷಣ ಹೋರಾಟ ಕಂಡ ಗಳಿಗೆಯನ್ನು ಇನ್ನೂ ಮಡಿಲಿನಲ್ಲಿ ಹಿಡಿದಿಟ್ಟುಕೊಂಡಿದೆ ಆ ದ್ವಾರಬಾಗಿಲು.

    ರಾಠೋಡ ಸಾಮ್ರಾಜ್ಯದ ರಾಜಾ ರಣಮಲ್ಲನ 24 ಮಕ್ಕಳಲ್ಲಿ ಒಬ್ಬನಾದ ರಾವ್ ಜೋಧಾ ರಾಠೋಡ ಎಂಬ ರಾಜ ಈ ಮೆಹರಾನಗಡ (ಸೂರ್ಯ ಕೋಟೆ) ಕೋಟೆಯನ್ನು 1459 ರಲ್ಲಿ ಕಟ್ಟಿಸಿದ. ಅದುವರೆಗೂ ಸಾವಿರ ವರ್ಷದವರೆಗೂ ಅಲ್ಲಿಯೇ ಒಂಭತ್ತು ಕಿಮೀ. ಸಮೀಪದ ಮಂಡೋರದಲ್ಲಿ ಈ ಅರಸರ ರಾಜಧಾನಿ ಇದ್ದಿತು. ರಾವ್ ಜೋಧಾ ಇದನ್ನು ರಕ್ಷಣೆಯ ದೃಷ್ಟಿಯಿಂದ ನಾಲ್ಕುನೂರು ಅಡಿಗಳಷ್ಟು ಎತ್ತರದ ಶಿಲಾ ಬೆಟ್ಟದ ಮೇಲಿನ ಈ ಪ್ರದೇಶಕ್ಕೆ ಸ್ಥಳಾಂತರಿಸಿದ. ಅಂದು ಈ ಬೆಟ್ಟದ ಮೇಲೆ ಗವಿಯೊಂದರಲ್ಲಿ ಚೀರ ನಾಥ್‍ಜಿ ಎಂಬ ಒಬ್ಬ ಸಾಧು ತಪಸ್ಸು ಮಾಡಿಕೊಂಡಿದ್ದ. ಸುತ್ತ ಬೆಟ್ಟವೆಲ್ಲ ಪಕ್ಷಿಧಾಮ.. ಸಾಧುವನ್ನು ಒಕ್ಕಲೆಬ್ಬಿಸಿದ್ದರಿಂದ ಸಿಟ್ಟಿಗೆದ್ದ ಸಾಧು, ರಾವ್ ಜೋಧಾಗೆ ಈ ಜಾಗವು ನೀರಿನ ಬರದಿಂದ ಬಳಲಲಿ ಎಂದು ಶಾಪವೊಂದನ್ನು ನೀಡಿದ. ರಾಜನು ತಪಸ್ವಿಗಾಗಿ ಅವನಿದ್ದ ಗವಿಯ ಜಾಗದಲ್ಲಿಯೇ ಸಮೀಪದಲ್ಲಿ ಒಂದು ಮಂದಿರವನ್ನು ಹಾಗೂ ವಾಸಕ್ಕೆ ಮನೆಯನ್ನೂ ಕಟ್ಟಿಕೊಟ್ಟ. ಅವನಿಗೆ ಇರಲಿಕ್ಕೆ ಎಲ್ಲ ವ್ಯವಸ್ಥೆಯನ್ನೂ ಮಾಡಿದ. ಆದರೂ ರಾವ್‍ಜೋಧಾಗೆ ಸಮಾಧಾನವಾಗಲಿಲ್ಲ, ಅರಮನೆಗೆ ಯಾವುದೇ ಕೊರತೆಯಾಗದಂತೆ, ತಳಪಾಯದಲ್ಲಿ ಜೀವಂತವಾಗಿ ರಾಜಾ ರಾಮ ಮೇಘವಾಲ್ ಎಂಬವನನ್ನು ಬುನಾದಿಯಲ್ಲಿ ಜೀವಂತ ಸಮಾಧಿ ಮಾಡಿ, ಬಲಿ ನೀಡಲಾಯಿತು. ಅವನ ಮನೆಯವರೆಲ್ಲರಿಗೂ ನೋಡಿಕೊಳ್ಳುವುದಾಗಿ ರಾಜ ಭಾಷೆನೀಡಿದಂತೆ, ಅವರಿಗೆ ಜಮೀನು ದಾನ ಮಾಡಿ ಶಾಶ್ವತವಾಗಿ ನೆಲೆಗೊಳ್ಳಲು ಜಹಗೀರು ಭಕ್ಷೀಸು ನೀಡಿದ. . ಆ ಜಮೀನಿನಲ್ಲಿ ಇಂದಿಗೂ ಆ ವಂಶಸ್ಥರು ವಾಸವಾಗಿದ್ದಾರೆ.ಆದರೂ ಶಾಪದ ಫಲವೋ ಏನೋ ಈಗಲೂ ಮೂರು ನಾಲ್ಕು ವರ್ಷಗಳಲ್ಲಿ ಒಮ್ಮಯಾದರೂ ನೀರಿನ ಬರ ಇದ್ದೇ ಇರುವುದನ್ನು ದಾಖಲೆಗಳಿಂದ ಗುರುತಿಸಬಹುದಂತೆ.

   ಈ ಕೋಟೆಯನ್ನು ರಾವ ಜೋಧಾ ನಿರ್ಮಿಸಿದ್ದರೂ, ಇದರಲ್ಲಿ 1650ರ ಸುಮಾರು ಜಸವಂತ ಸಿಂಗ್ ಅನೇಕ ಹೊಸ ಕಟ್ಟಡಗಳನ್ನು ನಿರ್ಮಿಸಿದ. ಈ ಕೋಟೆಯ ಗೋಡೆಗಳ ಎತ್ತರ 118 ಅಡಿ ಇದ್ದರೆ, ಅಗಲ 70 ಅಡಿಗಳಷ್ಟು ಸುಭದ್ರ.. ಅರಮನೆಯಲ್ಲಿ ರಾಜಾ ಮಾನಸಿಂಗನ ರಾಣಿಯರು 1843 ರಲ್ಲಿ ಅವನೊಂದಿಗೆ ಸತಿ ಹೋದ ರಾಣಿಯರ ಹಸ್ತ ಮುದ್ರಿಕೆಗಳನ್ನು ನೋಡಿದಾಗ , ಕಣ್ದುಂಬಿತು. ಅಷ್ಟೆಲ್ಲಾ ಲಗ್ಝುರಿ ಬಿಟ್ಟು, ಎಲ್ಲವನ್ನೂ ತೊರೆದು, ಕೊನೆಗೆ ಜೀವವನ್ನೂ ಸಂಹರಿಸಿಕೊಳ್ಳಬೇಕಲ್ಲ! ಅದೂ ಬೆಂಕಿನ ನಾಲಗೆಗೆ ತಮ್ಮನ್ನೇ ತಾವು ಉರಿಸಿಕೊಂಡು, ದೇವರಿಗೆ ದೀಪ ಹಚ್ಚುವಾಗಲೋ, ಮತ್ತೆಲ್ಲೋ ಒಂದು ಕ್ಷಣ ಚುರ್ ಅನ್ನಿಸಿಕೊಂಡ ನೋವೇ ಅಷ್ಟು ಇರುವಾಗ, ಎಂದೂ ನೋವನ್ನೇ ನೋಡದ ಜೀವಗಳು, ಸುಖದ ಸುಪ್ಪತ್ತಿಗೆಯಲ್ಲಿಯೇ ಲೋಲಿದವರು, ಹೆಜ್ಜೆಗೆಳನ್ನೂ ನೆಲದ ಮೇಲೆ ಇಡದ ಆ ರಾಣಿಯಂದಿರು ಉರಿಯ ನಾಲಗೆಗಳಲ್ಲಿ ತಮ್ಮನ್ನು ದಹಿಸಿಕೊಳ್ಲುವಾಗ, ಆಗುವ ನೋವನ್ನು ಅದು ಹೇಗೆ ಸಹಿಸುತ್ತ ಅನುಭವಿಸಿದ್ದಿರಬಹುದು. ಛೆ, ಛೇ ಊಹಿಸಿಕೊಳ್ಳಲಾರೆ. ಬ್ರಿಟಿಷರ ಕಾಲದಿಂದಲೂ, ಹಾಗೂ ಸ್ವಾತಂತ್ರ್ಯಾ ನಂತರ ಈ ದೇಶದ ಕಾನೂನುಗಳಿಂದಲೂ ಈಗ ಈ ಸಂಪ್ರದಾಯಕ್ಕೆ ತೆರೆಬಿದ್ದಿದ್ದರೂ ಇತಿಹಾಸದ ದೃಷ್ಟಿಯಲ್ಲಿ ತೀರ ಇತ್ತೀಚೆಗೆ ಈ ಸಂಪ್ರದಾಯವು 1987 ರ ರೂಪಕನ್ವರ ವರೆಗೂ ದಾಖಲೆಗೆ ಸಿಗುತ್ತದಲ್ಲವೇ? ಯುದ್ಧಗಳಲ್ಲಿ ಸೋಲುಂಟಾದ ಸಂದರ್ಭಗಳಲ್ಲಿ ಶತೃ ಸೈನ್ಯದ ವಶಕ್ಕೆ ಈಡಾಗದೇ ತಮ್ಮ ಇಡೀ ಸಮುದಾಯವೇ ಆತ್ಮಹತ್ಯೆಗೆ ಶರಣಗುವ 'ಜೌಹರ್' ಎಂಬ ಆತ್ಮಹತ್ಯಾ ಸಂಪ್ರದಾಯವೂ ಕೂಡ ರಾಜಪೂತರಲ್ಲಿ ಇತ್ತಲ್ಲವೇ? ನಿದರ್ಶನಕ್ಕಾಗಿ ಹದಿಮೂರನೆಯ ಶತಮಾನದಲ್ಲಿ ಮಹಾರಾಣಾ ಉದಯಸಿಂಗ್‍ನ ಸೋಲಿನ ನಂತರ ಚಿತ್ತೋರಿನ ರಾಣಿಪದ್ಮಿಣಿ ಹಾಗೂ ಅವಳ ಇತರ ರಾಣಿಪರಿವಾರದವರೆಲ್ಲ ಯುದ್ಧಗಳಲ್ಲಿ ಸೋಲುಂಟಾದ ಸಂದರ್ಭಗಳಲ್ಲಿ 'ಜೌಹರ್'ಪದ್ಧತಿಗೆ ಶರಣಾಗಿದ್ದರಲ್ಲವೇ? ಎಂಥ ಸ್ವಾಭಿಮಾನ, ಅದೆಂಥ ಅಭಿಮಾನ, ತ್ಯಾಗಮಯ ಜೀವನ. ....'ವಕ್ತ್ ಕೆ ಸಿತಮ್ ಕಮ್ ಹಸೀಂ ನಹೀಂ, ಆಜ್ ಹೈ ಯಹಾಂ ಕಲ್ ಕಹೀಂ ನಹೀಂ' ....ಕಾಲರೌದ್ರದೊಳು ಎಂತೆಂತಹ ಕಥೆಗಳು ಹುದುಗಿವೆಯೋ,...

   ...... ಇರಲಿ, ಕೋಟೆಯ ಒಳಗೆ ಅನೇಕ ಅರಮನೆಗಳಿವೆ.. ಅವುಗಳಲ್ಲಿ ಮೋತಿ ಮಹಲ್ (ಮುತ್ತಿನ ಮಹಲು), ಫೂಲ್ ಮಹಲ್( ಪುಷ್ಪ ಮಹಲು), ಶೀಷ್ ಮಹಲ್(ಗಾಜಿನ ಮಹಲು), ಸಿಲೆ ಖಾನಾ, ದೌಲತ್ ಖಾನಾ ಹೀಗೆ ಹಲವಾರು ಹೆಸರಿನ ದೊಡ್ಡ ದೊಡ್ಡ ಪ್ಯಾಲೆಸ್‍ಗಳಿವೆ. ಅದ್ದೂರಿ ಎಂದರೆ ಏನೆಂದು ನೋಡಿಯೇ ಕಣ್ದುಂಬಿಕೊಳ್ಳಬೇಕು. ಆ ಕುಸುರಿಯ ಜಾಲರಿಗಳು, ಕಂಬ, ಕಮಾನು, ಗೋಡೆ ಒಳಮಾಳಿಗೆಗಳಲ್ಲಿ ಕಲೆಗಳು, ಬಣ್ಣಗಳು ಅರಳಿದ ವೈಖರಿ ದಿಙ್ಮೂಢನನ್ನಾಗಿ ಮಾಡಿದವು. ಎಷ್ಟೊಂದು ಸುಸಜ್ಜಿತ ದೊಡ್ಡ ದೊಡ್ಡ ಹಾಲಗಳು, ಅವುಗಳ ಅಲಂಕಾರಗಳು, ಆ ಝೂಮರುಗಳು, ಆನೆಯ ಮೇಲೆ ಹೊರುವ ಚಿನ್ನ ಬೆಳ್ಳಿಯ ಅಂಬಾರಿಗಳು, ಪಲ್ಲಕ್ಕಿಗಳು, ಮೇಣೆಗಳು, ಆಯುಧ, ವಿದೇಶೀ ಶಾಹೀ ವಸ್ತುಗಳು, ಸುರೆಪಾನದ ಗ್ಲಾಸುಗಳು, ಬಂದೂಕುಗಳು, ತೋಫುಗಳು, ಒಂದು ಸಾಮ್ರಾಜ್ಯದಲ್ಲಿ ಏನೇನು ಬೇಕೋ, ಇನ್ನೇನೂ ಬೇಡವೇನೋ ಎನ್ನುವಂತೆ ಎಲ್ಲವೂ ಅಲ್ಲಿವೆ. ಅಲ್ಲಿ ಆನೆಗಳ ಮೇಲೆ ಹೊರುವ ಚಿನ್ನ ಬೆಳ್ಳಿಯ ಅಂಬಾರಿಗಳಿವೆ, ಜೋಧಪುರ ಹಾಗೂ ಮೊಘಲ್ ಸಾಮ್ರಾಜ್ಯಗಳ ವಿವಿಧ ಕಾಲಗಳ ನಾಣ್ಯಗಳು, ರೂಪಾಯಿಗಳು, ಇತಿಹಾಸಕ್ಕೆ ಸಾಕ್ಷಿಯಾದ ಪಟ್ಟಾಭಿಷೇಕಗಳ ಕಿರೀಟಗಳು, ವಿವಿಧ ಧಿರಿಸಿನ ಪೋಷಾಕುಗಳು, ಟರ್ಬನ್‍ಗಳು, ಕೋಟುಗಳು, ನಿಲುವಂಗಿಗಳು, ಪಾದರಕ್ಷೆಗಳು ಹಾಗೂ ರಾಣಿಯರ ಡ್ರೆಸ್‍ಗಳು, , ಸೀರೆಗಳು, ಅವರು ತೊಡುವ ವಿಧ ವಿಧ ಆಭರಣಗಳು, ಕಲಾ ಶಿಲ್ಪಗಳು, ಅಪರೂಪದ ಐತಿಹಾಸಿಕ ಘಟನೆಗಳ ಫೋಟೋ ಚಿತ್ರಗಳು, ಪೇಂಟಿಂಗಗಳು ಸಂಗೀತ ಪರಿಕರಗಳು, ಉಪಕರಣಗಳು ಏನೆಲ್ಲವುಗಳನ್ನು ಒಪ್ಪವಾಗಿ ಮ್ಯುಜಿಯಂಗಳಲ್ಲಿ ಸಂಗ್ರಹಿಸಿ ಇಡಲಾಗಿದೆ. .

    ಕಲಾಕಾರನೊಬ್ಬ ಅದೇ ತಾನೇ ಚಿತ್ರವೊಂದನ್ನು ಬಿಡಿಸುತ್ತಿದ್ದುದನ್ನು ಕ್ಲಿಕ್ಕಿಸಿದೆ. ಮ್ಯುಜಿಯಂನಲ್ಲಿ ಹಲವಾರು ಯುದ್ಧದ ಐತಿಹಾಸಿಕ ಕ್ಷಣಗಳು ತೈಲಚಿತ್ರಗಳಲ್ಲೊಂದನ್ನು ಪ್ರೀತಿಯಿಂದ ಕ್ಲಿಕ್ಕಿಸಿದೆ,. ಕೋಟೆಯ ಒಳಗೆ ರಾಠೋಡ ರಾಜರ ಇಷ್ಟದೇವತೆಯಾದ ಚಾಮುಂಡದೇವಿಯ ಮಂದಿರವಿದೆ, ಪ್ರತಿವರ್ಷವೂ ಅವಳ ಜಾತ್ರೆ ಜರುಗುತ್ತದೆ. 2008 ರಲ್ಲಿ ಇದೇ ಅರಮನೆಯ ಒಳಗಿನ ದೇವಿಯ ಜಾತ್ರೆಯಲ್ಲಿ ಉಂಟಾದ ನೂಕುನುಗ್ಗಲಿನ ಕಾಲ್ತುಳಿತಕ್ಕೆ ಸುಮಾರು 250 ಜನ ಭಕ್ತರು ಸಾವನ್ನಪ್ಪಿ, ಅದಕ್ಕಿಂತಲೂ ಹೆಚ್ಚು ಜನ ಗಾಯಗೊಂಡಿದ್ದು, ಇದೇ ಜಾಗದಲ್ಲಿ ಎಂದು ತಿಳಿದು ಖೇದವೆನಿಸಿತು..ವಿಶಾಲ ಕೋಟೆಯಲ್ಲಿ ನೋಡಿದ್ದೆಷ್ಟೋ ಬಿಟ್ಟಿದ್ದೂ ಅಷ್ಟೆ. ದಣಿದ ಕಾಲುಗಳಿಂದ ಹೊರಬಂದೆವು.

    'ಕುುಛ್ ದೂರ ಹಮಾರೆ ಸಾಥ್ ಚಲೋ, ಹಮ್ ದಿಲ್ ಕಿ ಕಹಾನೀ ಕಹದೇಂಗೆ, ಸಮಝೆ ನ ಜಿಸೆ ತುಮ್ ಆಂಖೋಂ ಸೆ ವೋ ಬಾತ್ ಜಬಾನೀ ಕಹದೇಂಗೆ,''ನಾಕೆಜ್ಜೆ ನಂಜೊತೆಗೂಡಿ ನಡೆ, ಮನದೊಳಗಿನ ಮಾತನು ಹೇಳವೆನು, ತಿಳಿಯದೇ ಹೋದರೆ ಕಣ್‍ಭಾಷೆ, ಆ ಸಂಗತಿ ಮಾತಲಿ ಹೇಳುವೆನು' ಹರಿಹರನ್ ಗಜಲ್‍ನ ಸಾಲುಗಳನ್ನು ನನ್ನವಳ ಕಿವಿಗಳಲ್ಲಿ ಹೇಳುತ್ತ ಈ ದಾರಿಯಲ್ಲಿ ಇಳಿಯುತ್ತ ಜೋಧಪುರ ಕೋಟೆಯಿಂದ ಹೊರ ಹೆಜ್ಜೆಹಾಕಿದೆವು,... ಅಕ್ಬರ, ಜಹಾಂಗೀರರು, ರಾವ ಜೋಧಾ, ಸರದಾರ ಸಿಂಗ್, ಮಹಾರಾಜಾ ಮಾನ ಸಿಂಗ್ ನಡೆದ ದಾರಿ ಇದು, ಅವರಿಗೂ ಈ ಗುನುಗುನು ಗಾನ ಕೇಳಿಸಿರಬಹುದೇ! ಏನಾಯ್ತೂಂದ್ರೆ, ಹೀಗೆ ಹೊರಬರುತ್ತ , ನಾವು ಜೋಧಪುರ ಈ ಅರಮನೆಯ ಭವ್ಯತೆಯನ್ನು ಮನತಣಿದು ನೋಡಿ, ದಣಿದು, ಅರಮನೆಯ ಇಳಿಜಾರಿನ ಕಲ್ಲುಚಪ್ಪಡಿ ಹೊದಿಕೆ ದಾರಿಗುಂಟ ಕೆಳಗಿಳಿಯುತ್ತಿದ್ದಾಗ, ತಿರುವು ಮುರುವು ರಸ್ತೆ,ಯಲ್ಲಿ ಮುಂದಿನ ತಿರುವಿನಲ್ಲಿ ಸುಶ್ರಾವ್ಯವಾದ ಶೃತಿಯ ದನಿಯೊಂದಿಗೆ ಡ್ರಮ್‍ನ ತಾಳಲಯದೊಂದಿಗೆ ರಾಜಸ್ಥಾನಿ ಫೋಲ್ಕ್ ಹಾಡು ಕಿವಿಗೆ ಬಿದ್ದಿತು. ಯಾರಿರಬಹುದು ಇಷ್ಟು ಸುಶ್ರಾವ್ಯವಾಗಿ ಹಾಡುತ್ತಿರುವುದು ಎಂದು ಕುತೂಹಲವಾಯಿತು. ಬೇಗ ಹೆಜ್ಜೆ ಹಾಕಿ ತಿರುವಲ್ಲಿ ತಿರುಗಿ ನೋಡಿದೆ. ಓಹ್ ಅಲ್ಲೇ ಕೋಟೆಯ ಗೋಡೆಯಲ್ಲಿ ಮಾಡಿನಂತಹ ಗೂಡೊಂದರಲ್ಲಿ ತನ್ನ ಎರಡು ಡ್ರಮ್‍ಗಳನ್ನು ಎದುರು ಬದುರು ಇಟ್ಟುಕೊಂಡು ಸಣ್ಣಕೋಲಾಟದ ಕೋಲುಗಳಿಂದ ಅವುಗಳನ್ನು ನುಡಿಸುತ್ತ ರಾಜಸ್ಥಾನೀ ಜನಪದೀಯ ರಾಗಮಿಶ್ರಿತ ಹಾಡುಗಳನ್ನು ಹಾಡುತ್ತಿದ್ದ ಪಂಡಿತ್‍ಜಿ ಕುಳಿತಿದ್ದರು. ವಿಶಾಲವಾಗಿ, ಎತ್ತರವಾದ ಕೋಟೆಯ ಎದುರಿನ ಗೋಡೆಗೆ ಅದರ ತರಂಗಗಳು ತಾಗಿ, ಪ್ರತಿಧ್ವನಿಯಾಗಿ ಎಷ್ಟೊಂದು ಇಂಪಾಗಿ ಕೇಳುತ್ತಿತ್ತೆಂದರೆ, ನ್ಯಾಚುರಲ್ ಸ್ಟೀರಿಯೋ ದನಿಯ ಅಲೆಗಳ ಕಂಪನಗಳು ಸೃಷ್ಟಿಯಾಗಿದ್ದವು. ಕೆಲವು ಕ್ಷಣ ಮೈಮರೆತು ಬಿಟ್ಟಿದ್ದೆ,..... ರಾಜಸ್ಥಾನೀ ಫೋಲ್ಕ್ ಹಾಡುತ್ತಿದ್ದರೆ,...... ಎಂಥ ಟ್ರೇನ್‍ಡ್ ವಾಯಿಸ್! ಕೇಳುತ್ತಿದ್ದರೆ, ಹಾಗೆಯೇ ಕೇಳುತ್ತಿರಬೇಕು, ಹಾಗಿತ್ತು, ....ಖರೆ ಅಂದರೆ,... ನನ್ನ ದಣಿವೇ ಮಾಯವಾಗಿ ಬಿಟ್ಟಿತ್ತು.. ಹಾಡುಗಳನ್ನು ಕೇಳಿ ಪ್ರೀತಿಯಿಂದ ತುಸು ಭಕ್ಷೀಸು ನೀಡಿ, ಮುಂದೆ ಹೆಜ್ಜೆ ಇಟ್ಟವನಿಗೆ, ಸಂಗೀತಗಾರನ ದನಿ ಹಿಂದಿನಿಂದ, ‘ಕಹಾಂ ಸೆ ಆನಾ ಹುವಾ ಸರ್ ಜಿ,. ....’’ ಹಿಂತಿರುಗಿ ‘ಬೆಂಗಳೂರು’ಎಂದೆ ನಗುತ್ತ. ‘ ಓ ಓಹೋ, ಸೌಥ’ ....ಎಂದು, ಮತ್ತೆ ‘ಆಪಕೆ ಜಬಾಂ ಮೆ ಗಾವೂಂ ?’ ಎಂದ ಅಕ್ಕರೆಯಿಂದ,. ಅರೆ . ನನ್ನ ಭಾಷೆಯಲ್ಲಿಯೇ! ಎಲ್ಲಿಯ ಬೆಂಗಳೂರು, ಎಲ್ಲಿಯ ಜೋಧಪುರ, ಪಾಕಿಸ್ತಾನದ ನೆಲಕ್ಕೆ ಮಲುಕು ಹಾಕಿಕೊಂಡ ಜೋಧಪುರವೆಲ್ಲಿ, ಸಾವಿರಾರು ಕಿಮೀಗಳ ದೂರದ ಬೆಂಗಳೂರೆಲ್ಲಿ! ಮುಖ ಇಷ್ಟಗಲ ಮಾಡಿಕೊಂಡು ಅವನತ್ತ ಕುತುಹಲದಿಂದ ಹಿಂತಿರುಗಿ ಹೋದೆವು., .''ಮೇರೆ ಭಾಷಾ ಮೇಂ ಗಾತೆ ಹೋ, ಹೋಜಾಯ್, ಹೋಜಾಯ್ ಪಂಡಿತ್ ಜಿ’’ಎಂದು ನಕ್ಕೆ. ಏನು ಹಾಡುವನು ಎಂದು ಕುತೂಹಲ ನನಗೂ. ಏನೋ ಹುರುಪು ಮೈತುಂಬ. ಅವನು ಕುಳಿತ ಮಾಡಿನ ಕಟ್ಟೆಯ ಮೇಲೆ ಕುಳಿತು ಬಿಟ್ಟೆ. ಅದೇಕೋ ಈಗ ಅಂವ ನಮ್ಮವನಾಗಿದ್ದ,

    ಶುರುಮಾಡಿದ ನೋಡಿ,, ‘’ಚಲ್ಲಿದರು ಮಲ್ಲಿಗೆಯಾ , ಬಾಣಾಸೂರ್ ಏರಿಮ್ಯಾಲೆ, .........ಅಂದದ ಚಂದದ ಮಾಯಕಾರ್ ಮಾದೇವ್‍ಗೆ ......ಅಂದದ ಚಂದದ ಮಾಯಕಾರ್ ಮಾದೆವ್ ಗೆ ......ಚಲ್ಲಿದರು ಮಲ್ಲಿಗೆಯಾ......’’ ಖುಷಿಯ ರೆಕ್ಕೆಗಳು ಮೂಡಿ ಮೈಯೆಲ್ಲಾ ರೋಮಾಂಚನ, .....ಕಣ್ಣುಗಳಿಂದ ಆನಂದಭಾಷ್ಟಗಳು ಚಿಲ್ಲನೆ ಚಿಮ್ಮಿ ಭಾವಕೋಶಮೀಟಿ ದಾಟಿ ಪುಟಿ ಪುಟಿದು, ಬಂದವು. ತಡೆಯಲಾಗಲಿಲ್ಲ. ಮಾಡಿನ ಮೇಲೆ ಹತ್ತಿ ಅವನನ್ನು ಗಟ್ಟಿಯಾಗಿ ತಬ್ಬಿ ಅಭಿನಂದಿಸಿದೆ.

    ‘ಆಪ್ ಜೈಸೆ ಲೋಗ್ ಕಮ್ ಹೀ ಮಿಲ್ತೇ ಹೈಂ ಸರ್’’ಎಂದು ಖುಷಿಯ ಕಣ್ಣಲ್ಲಿ ನಕ್ಕ. ಮತ್ತೆ,, ನನ್ನಡೆಗೆ 'ಸರ್ ಕೋಯೀ ಏಕ್ ಮೇರೀ ರಾಜಸ್ಥಾನÀ ಕಿ ಮಿಟ್ಟೀ ಕಿ ಕೋಯೀ ಗೀತ ಮಾಲೂಮ್ ಹೈ ಸರ್? ‘ಕೇಳಿದ,ಸಂಗೀತದ ವಿಷಯದಲ್ಲಿ ಅವರಂತಹ ಸಂಗೀತ ಸಾಧಕರ ಮುಂದೆ ನಿಲ್ಲಲೂ ಅರ್ಹತೆ ಇರದ ನನಗೆ ಪಂಡಿತಜಿ ಕೇಳಿಕೊಂಡಿದ್ದು ಮುಜುಗುರವಾಯಿತು. ಅವರ ಆ ಕೋರಿಕೆಗೆ ಆ ಸ್ವಾಭಿಮಾನದ ನೆಲದ ಮಣ್ಣಿನ ಹಾಡೊಂದನ್ನು ನನಗೆ ಬಂದಷ್ಟನ್ನು ಹಾಡಿದರಾಯಿತು ಎಂದು ಒಪ್ಪಿ, ಆ ನೆಲದ ವೆಲ್‍ಕಮ್ ಸಾಂಗ್, ‘ಕೇಸರಿಯಾ ಬಾಲಮ್ ಸಾ, ಆವೋ ನೀ...ಪಧಾರೋ...ಮ್ಹಾರೇ ದೇಸ್ ರೆ., .....ಸಾಜನ ಸಾಜನ..ಮೇ ಕರೂಂ, ಸಾಜನ ಸಾಜನ..........’’ ರಾಗ ಮಾಂಡದಲ್ಲಿ ನನಗೆ ಬಂದಷ್ಟನ್ನು ಹಾಡಿದೆ. ತಣ್ಮಯನಾಗಿ ಕಣ್ಣಮುಚ್ಚಿ ಹಾಡುತ್ತಿದ್ದವ ಕಣ್ಣು ತೆರೆದು ನೋಡಿದೆ..., ಅರೆ,.... ದಿಙ್ಮೂಢನಾದೆ.! ಗೆಳೆಯರೆ, ...., ನೀವು ನಂಬಲಿಕ್ಕಿಲ್ಲ, ಪಂಡಿತ್‍ಜಿ, ಗಾಳಿಯ ವೇಗದಲ್ಲಿ ಹಾರಿ ನನಗೆ ಉದ್ದಕ್ಕೂ ಶಿರಸಾಸ್ಟಾಂಗವೆರಗಿದ್ದರು! ತಕ್ಷಣ ಸಾವರಿಸಿಕೊಂಡು ಎಚ್ಚೆತ್ತು ಅವರನ್ನು ಗೌರವದಿಂದ ಎಬ್ಬಿಸುತ್ತ, ' ಪಂಡಿತ್‍ಜಿ ಪ್ಲೀಸ್ ಐಸಾ ಮತ್ ಕರನಾ, ಮೈ ತೊ ಆಪಕೇ ಸಾಮನೆ ಕುಛ್ ಭೀ ನಹೀಂ ಹೂಂ..ಯೇ ಬಾತ್ ಆಪ್‍ಕೊ ಮಾಲೂಮ್ ಹೈ ಭೀ, ಯೇ ಕ್ಯಾ ಕರ್ ರಹೇ ಹೋ ಪಂಡಿತ್ ಜೀ ‘’ ಎನ್ನುತ್ತ ಅವರನ್ನು ಎಬ್ಬಿಸಿ ಮತ್ತೆ ತಬ್ಬಿದೆ,. ಅವರಂತಹ ಸಂಗೀತ ಸಾರಥಿಯ ಮುಂದೆ ಕೇವಲ ಬಾಥ್‍ರೂಂ ಸಿಂಗರ್ ನಾನು,. ಅವರಿಗೆ ತಮ್ಮ ರಾಜಸ್ಥಾನೀ ಮಿಟ್ಟಿಯ ಹಾಡೊಂದನ್ನು ನನ್ನಂತಹ ದಖನೀ ಭಾಷೆಯವನೊಬ್ಬನ ಕಂಠದಲ್ಲಿ ಕೇಳಿದ್ದೇ ತಡೆಯದ ಅಭಿಮಾನ, ರೋಮಾಂಚನಗಳನ್ನು ಉಕ್ಕಿಸಿದ್ದವು. ಈ ಸಂಗೀತ ಸಾಧಕರೇ ಹೀಗೆ, ಅರಳಿಬಿಡುತ್ತಾರೆ, ಹೃದಯವಂತ ಭಾವಜೀವಿಗಳು... ಸಂಗೀತದ ಸೂತ್ರವೊಂದು ರಾಜಸ್ಥಾನದೊಂದಿಗೆ ನನ್ನನ್ನು ಹೀಗೆ ಬಂಧಿಸಿಬಿಟ್ಟಿತ್ತು. .....ರೋಮಾಂಚನದಿಂದ ಮೈ ಬಿಸಿಯಾಗಿತ್ತು ಇಬ್ಬರಿಗೂ,... ಅವರ ನೆಲದ ಅಭಿಮಾನಕ್ಕೆ, ಮಣ್ಣಿನ ಪ್ರೀತಿಗೆ ಹೃತ್ಪೂರ್ವಕವಾಗಿ ವಂದಿಸಿ, ಮುಂದೆ ಸಾಗಿದೆವು. ಇನ್ನೂ ಏನೇನು ಅನುಭವ ಆಗಲಿವೆಯೋ ಎಂಬ ಯೋಚನೆಯಲ್ಲಿ ಸಖೇದಾಶ್ಚರ್ಯದೊಂದಿಗೆ.....

   ...... ಇಲ್ಲಿಂದ ಇಳಿದು ನಾವು ಜಸವಂತ ಥಾಡಾ ಎಂಬ ಜೋ'ಧಪುರ ರಾಜ ವಂಶಸ್ಥರ ರುದ್ರಭೂಮಿ ಪ್ರದೇಶಕ್ಕೆ ಭೇಟಿ ನೀಡಿದೆವು. ಸಂಗಮರಮರೆ (ಮಾರ್ಬಲ್) ಕಲ್ಲುಗಳಲ್ಲಿ ಕಟ್ಟಿದ ಸುಂದರ ಕಲಾತ್ಮಕ ಕಟ್ಟಡ ಇದು. ಎರಡೆನೆಯ ಮಹಾರಾಜಾ ಜಸವಂತ ಸಿಂಗ್ ನ ನೆನಪಿಗಾಗಿ ಮಗ ಮಹಾರಾಜ ಸರದಾರ ಸಿಂಗ್‍ಇದನ್ನು 1899 ರಲ್ಲಿ ಕಟ್ಟಿದ. ಇನ್ನೂ ಅನೇಕ ರಾಜ ಪರಿವಾರದವರ, ರಾಣಿಯರ ಮಂಟಪದಂತಹ ಮಾರ್ಬಲ್ ಕಲೆಯಲ್ಲೇ ಅರಳಿಸಿದ ಸಮಾಧಿಗಳು, ಸುಂದರವಾದ ಉದ್ಯಾನಗಳು, ಕಾರಂಜಿಗಳು, ದೊಡ್ಡ ಲೋಟಸ್ ಕೆರೆ, ಕೆರೆಯಲ್ಲಿಯ ನೀರಹಕ್ಕಿಗಳು, ರಾಕ್ ಗಾರ್ಡನ್, ಸುತ್ತಲಿನ ಗುಡ್ಡ ಬೆಟ್ಟಗಳು, ಆ ಬೆಟ್ಟದ ನೆತ್ತಿಯಮೇಲೆ ಸುತ್ತಲೂ ಕಾಣುವ ಕೋಟೆಯ ಗೋಡೆಗಳು ಈ ಪ್ರದೇಶವನ್ನು ತುಂಬ ಭವ್ಯವನ್ನಾಗಿಸಲು ಸಹಕರಿಸಿವೆ. ಪ್ರೀತಿಯ ಅಪ್ಪನಿಗಾಗಿ ಕಟ್ಟಿದ ಭವ್ಯ ತಾಜಮಹಲ್ ಅನ್ನಿಸಿತು ನನಗೆ. ಥಾಡಾ ಮಹಲಿನಂತಹ ಕಟ್ಟಡದ ಒಳಗೆ ಮಹಾರಾಜಾ ಜಸವಂತ ಸಿಂಗ್‍ರ ಭಾವಚಿತ್ರವನ್ನು ಇಡಲಾಗಿದೆ. ಈ ಹಾಲಿನ ಗೋಡೆಗಳ ಮಾರ್ಬಲ್ ಕಲ್ಲು ಚಪ್ಪಡಿಗಳ ಮುಖಾಂತರ ಸೂರ್ಯನ ಕಿರಣಗಳ ಬೆಳಕು ಒಳಪ್ರವೇಶಿಸುತ್ತದೆ, ಮಂದವಾದ ದೀಪ ಬೆಳಗಿದಂತೆ

    . ಅನೂಹ್ಯ ಅನುಭವದ ಹನಿಗಳೊಂದಿಗೆ ಹೊಟಲ್‍ನತ್ತ ಹೊರಳಿದೆವು. ರಾಜಸ್ಥಾನದಲ್ಲಿ ಅನೇಕ ಮಂತ್ರಿಗಳು, ದಿವಾಣಗಳ ಮಹಲುಗಳನ್ನು, ಹವೇಲಿಗಳನ್ನು ಇಂದು ಟೂರಿಸ್ಟ ಹೋಟಲ್‍ಗಳಾಗಿ ಪರಿವರ್ತಿಸಿದ್ದಾರೆ. ಹೀಗೆ ನಾವು ಉಳಿದುಕೊಂಡ ಹೋಟಲ್ ಕೂಡ 'ಕುಚಮನ್ ಹವೇಲಿ' ಮಂತ್ರಿಯೊಬ್ಬರ ಮನೆ, ಈಗ ಹೋಟಲ್ ಆಗಿದ್ದು, ತುಂಬಾ ಅಂದರೆ ತುಂಬಾ ಚನ್ನಾಗಿದೆ. ಎಲ್ಲವೂ ಶಾಹೀ......ಸಂಜೆ ಹವೇಲಿಗೆ ಬಂದು ಜೋಧಪುರ ಸಿಟಿಯೊಳಗೆ ಸಂಜೆ ವಾಕಿಂಗ್‍ಗೆ ಹೋದೆವು. ಕರಕುಶಲ ವಸ್ತುಗಳಿಗೆ ಪ್ರಸಿದ್ಧವಿದು ಜೋಧಪುರ, ಒಂದೆರಡು ಟ್ರೈಬಲ್ ಗಿಫ್ಟ್ ಐಟೆಮ್ ಕೊಂಡು ಅಲ್ಲಿಯೇ ಭೋಜನ ಮುಗಿಸಿಕೊಂಡು ಹವೇಲಿಗೆ ರಾಜರಂತೆ ಮರಳಿದೆವು.

Rating
No votes yet

Comments

Submitted by ಗಣೇಶ Fri, 07/03/2015 - 00:00

>>>.....ತಣ್ಮಯನಾಗಿ ಕಣ್ಣಮುಚ್ಚಿ ಹಾಡುತ್ತಿದ್ದವ ಕಣ್ಣು ತೆರೆದು ನೋಡಿದೆ..., ಅರೆ,.... ದಿಙ್ಮೂಢನಾದೆ.! ಗೆಳೆಯರೆ, ...., ನೀವು ನಂಬಲಿಕ್ಕಿಲ್ಲ, ಪಂಡಿತ್‍ಜಿ, ಗಾಳಿಯ ವೇಗದಲ್ಲಿ ಹಾರಿ ನನಗೆ ಉದ್ದಕ್ಕೂ ಶಿರಸಾಸ್ಟಾಂಗವೆರಗಿದ್ದರು! .....
-ಇಟ್ನಾಳರೆ, ನನಗೂ ರೋಮಾಂಚನವಾಯಿತು...
ಅರಮನೆಯನ್ನು ಮಾರಿ ನುಂಗುವ ಈಗಿನ ಕಾಲದ ರಾಜಕಾರಣಿಗಳ ಕತೆಯ ನಡುವೆ ನಿಮ್ಮ ಈ ಪ್ರವಾಸ ಲೇಖನ ಮುದನೀಡಿತು.

ಆತ್ಮೀಯ ಗಣೇಶ ಜಿ, ತಮ್ಮ ಮೆಚ್ಚುಗೆಗೆ ವಂದನೆಗಳು,.ಭಾಷೆಗಳು ಬೆಸೆಯುವ ಪ್ರೀತಿ ನೋಡಿ, ಎಷ್ಟ ಗಾಢವಾಗಿ ಪ್ರತಿಯೊಬ್ಬರಲ್ಲೂ ಅದು ಹೇಗೆ ಹುದುಗಿಕೊಂಡಿರುತ್ತದೆ ಎಂಬುದು ಮನದಟ್ಟಾದ ಗಳಿಗೆ ಅದು ನನಗೆ. ಓದಿಗೆ, ಪ್ರತಿಕ್ರಿಯೆಗೆ ಮತ್ತೊಮ್ಮೆ ವಂದನೆಗಳು ಸರ್.

Submitted by kavinagaraj Mon, 07/06/2015 - 21:12

ಪ್ರವಾಸದ ಜೊತೆಜೊತೆಗೆ ಅಲ್ಲಿನ ಸ್ಥಳದ ವಿವರಗಳು, ಇತಿಹಾಸವನ್ನೂ ತಿಳಿದು ಹಂಚಿಕೊಳ್ಳವ ಕೆಲಸ ಅಮೂಲ್ಯವಾದುದು. ನಿಮ್ಮ ಗೀತ-ಸಂಗೀತದ ಅಭಿಮಾನವೂ ಮೆಚ್ಚುವಂತಹದು. ಮನಃಪೂರ್ವಕವಾದ ಅಭಿಮಾನದೊಡಗೂಡಿದ ನನ್ನ ಶುಭಹಾರೈಕೆಗಳನ್ನು ಸ್ವೀಕರಿಸಿ, ಇಟ್ನಾಳರೇ.

ಹಿರಿಯರಾದ ಕವಿ ನಾಗರಾಜ್ ಸರ್, ತಮ್ಮ ವಾತ್ಸಲ್ಯಪೂರ್ಣ ನುಡಿಗಳಿಗೆ ಶರಣು ಸರ್, ವಂದನೆಗಳು