ದೇವರೊಡನೆ ಸಂದರ್ಶನ - 1

ದೇವರೊಡನೆ ಸಂದರ್ಶನ - 1

     ಆರಾಮ ಕುರ್ಚಿಯ ಮೇಲೆ ಕುಳಿತು ಟಿವಿ ನೋಡುತ್ತಾ ಗಣೇಶರು ಪಕ್ಕದ ಟೀಪಾಯಿಯ ಮೇಲಿದ್ದ ತಟ್ಟೆಯಿಂದ ಒಂದೊಂದೇ ಬೋಂಡಾವನ್ನು ಮಧ್ಯಪ್ರದೇಶಕ್ಕೆ ರವಾನಿಸುತ್ತಿದ್ದರು. 'ಹೀಗೂ ಉಂಟೆ?'ಯಲ್ಲಿ ಪವಾಡದ ಬಗ್ಗೆ ಏನೋ ಬರುತ್ತಿತ್ತು. ಕೊನೆಯಲ್ಲಿ ನಿರೂಪಕ 'ಹೀಗೂ ಉಂಟೆ?' ಎನ್ನುವುದಕ್ಕೂ ಗಣೇಶರ ಕೈ ಯಾಂತ್ರಿಕವಾಗಿ ತಟ್ಟೆಯ ಮೇಲೆ ಹೋದಾಗ ತಟ್ಟೆಯಲ್ಲಿ ಬೋಂಡಾ ಖಾಲಿಯಾಗಿರುವುದನ್ನು ಕಂಡು, 'ಛೇ, ಹೀಗೂ ಉಂಟು' ಎಂದುಕೊಳ್ಳುವುದಕ್ಕೂ ಸರಿಯಾಯಿತು. ಹಾಗೇ ಜೊಂಪು ಹತ್ತಿದಂತಾಗಿ ಕಣ್ಣು ತಂತಾನೇ ಮುಚ್ಚಿಕೊಂಡಿತು. ಕ್ಷಣಾರ್ಧದಲ್ಲಿ ಗೊರಕೆಯ ಸದ್ದು ಮೊಳಗತೊಡಗಿತ್ತು. ಸ್ವಲ್ಪ ಹೊತ್ತಾಗಿರಬೇಕು, "ಗಣೇಶಾ" ಎಂದು ಯಾರೋ ಆಪ್ಯಾಯಮಾನವಾಗಿ ಕರೆದಂತಾಯಿತು. ಎದ್ದು ಗಡಬಡಿಸಿ ನೋಡಿದರೆ ಯಾರೂ ಕಾಣಲಿಲ್ಲ. ಯಾರೋ ಮೆಲ್ಲಗೆ ನಕ್ಕಂತಾಯಿತು. "ನಾನೇ ಕರೆದಿದ್ದು" ಎಂಬ ಧ್ವನಿ ಬಂದಾಗ ಆ ಧ್ವನಿ ಎಲ್ಲಿಂದ ಬಂತು ಎಂದು ಅವರಿಗೆ ಗೊತ್ತಾಗಲಿಲ್ಲ. ಯಾರೂ ಕಾಣಿಸಲೂ ಇಲ್ಲ.

     "ಗಣೇಶಾ, ನಿನಗೆ ದೇವರ ಬಗ್ಗೆ ಬಹಳ ಆಸಕ್ತಿ ಇರುವಂತಿದೆ. ದೇವರಿಲ್ಲಾ ಅನ್ನುತ್ತೀಯಾ. ಆದರೂ ದೇವರ ಬಗ್ಗೆ ವಿಚಾರಿಸುತ್ತಿರುತ್ತೀಯಾ. ಹೌದೋ ಅಲ್ಲವೋ?"

ಧ್ವನಿ ಸ್ಪಷ್ಟವಾಗಿ ಕೇಳುತ್ತಿದೆ, ಆದರೆ ಯಾರೂ ಕಾಣುತ್ತಿರಲಿಲ್ಲವಾದ್ದರಿಂದ ಗಣೇಶರು ಉತ್ತರಿಸದೆ ಸುಮ್ಮನೆ ಸುತ್ತಲೂ ಕಣ್ಣಾಡಿಸುತ್ತಿದ್ದರು. ಅಶರೀರವಾಣಿ ಮತ್ತೆ ಮೊಳಗಿತು,

     "ಗಣೇಶ, ನಿನಗೆ ಒಂದು ಅಪೂರ್ವ ಅವಕಾಶ ಸಿಗುತ್ತಿದೆ. ನೀನು ದೇವರೊಡನೆ ಮಾತನಾಡಬಹುದು. ನಿನ್ನ ಅನುಮಾನ ಬಗೆಹರಿಸಿಕೊಳ್ಳಬಹುದು."

ಈಗ ಗಣೇಶರಿಗೆ ಧೈರ್ಯ ಬಂದು ಕೇಳಿಯೇಬಿಟ್ಟರು:

     "ಹೌದಾ? ನಾನು ದೇವರೊಡನೆ ಸಂದರ್ಶನ ಮಾಡಿ ದೇವರು ಹೇಳಿದ್ದನ್ನು ಪ್ರಕಟಿಸಬಹುದಾ?"

     "ಓಹೋ, ಆಗಬಹುದು. ನಾಳೆ ಬೆಳಿಗ್ಗೆ ಸೂರ್ಯೋದಯದ ಹೊತ್ತಿಗೆ ರತ್ನಗಿರಿಬೋರೆಯ ಕಲ್ಲುಮಂಟಪಕ್ಕೆ ಬಾ. ಅಲ್ಲಿ ದೇವರೊಡನೆ ಮಾತನಾಡಬಹುದು."

     "ಅಲ್ಲಿಗೇ ಯಾಕೆ ಬರಬೇಕು? ದೇವರು ಎಲ್ಲೆಲ್ಲೂ ಇರುತ್ತಾನಲ್ಲವಾ? ಇಲ್ಲೇ ಯಾಕೆ ಮಾತನಾಡಬಾರದು?"

     "ಇಲ್ಲೂ ಮಾತನಾಡಬಹುದು. ಆದರೆ ಹಾಗೆ ಮಾಡಿದರೆ ಆ ಸಂದರ್ಭದಲ್ಲಿ ನಿನ್ನನ್ನು ಕಂಡ ಬೇರೆಯವರು ನಿನಗೆ ಏನೋ ಆಗಿದೆಯೆಂದು ಆಸ್ಪತ್ರೆಗೆ ಸೇರಿಸುವ ಸಾಧ್ಯತೆ ಇದೆ. ಆದ್ದರಿಂದ ಆ ಸ್ಥಳದಲ್ಲಿ ಆದರೆ ಕ್ಷೇಮ."

     "ನಾನು ಬರುವಾಗ ಕ್ಯಾಮರಾ, ಟೇಪ್ ರಿಕಾರ್ಡರ್, ಪೆನ್ನು, ನೋಟು ಪುಸ್ತಕ ತರಬಹುದಾ? ನನ್ನ ಜೊತೆಗೆ ನನ್ನ ಕೆಲವು ಮಿತ್ರರನ್ನೂ ಕರೆತರಬಹುದಾ?"

ಜೋರಾಗಿ ನಕ್ಕ ಶಬ್ದ ಕೇಳಿಬಂತು.

     "ಆ ಯಾವುದರ ಅವಶ್ಯಕತೆಯೂ ಇಲ್ಲ. ನೀನು ಬಯಸಿದಂತೆ ಫೋಟೋ ತೆಗೆಯುವ, ರೆಕಾರ್ಡ್ ಮಾಡಿಕೊಳ್ಳುವ, ಬರೆದುಕೊಳ್ಳುವ ಎಲ್ಲಾ ವ್ಯವಸ್ಥೆಯೂ ತಾನಾಗಿಯೇ ಅಗುತ್ತದೆ. ಚಿಂತಿಸುವ ಅಗತ್ಯವಿಲ್ಲ. ನಿನ್ನ ಮಿತ್ರರುಗಳು ಯಾರನ್ನು ನಿನ್ನ ಜೊತೆಗೆ ಕರೆದುಕೊಂಡುಬರಬೇಕೆಂದಿರುವೆ ಎಂಬುದು ನನಗೆ ಗೊತ್ತು. ಅವರುಗಳು ಯಾರೂ ನೀನು ಕರೆದರೂ ಬರುವ ಸಂಭವ ಕಡಿಮೆ."

     "ಹಾಗಲ್ಲ, ನಾನು ಏನಾದರೂ ಮರೆತರೆ ಜ್ಞಾಪಿಸಲು ಅಷ್ಟೆ."

     "ನಿನಗೆ ಮರೆವು ಬರದಂತೆ, ನೀನು ಏನು ಕೇಳಬೇಕೆಂದಿರುವೆಯೋ ಅದೆಲ್ಲವನ್ನೂ ಕೇಳಲು ಆಗುವಂತೆ ದೇವರೇ ಮಾಡುತ್ತಾನೆ. ಚಿಂತಿಸಬೇಡ."

     ದೇವರನ್ನೇ ಸಂದರ್ಶನ ಮಾಡುವ ಅವಕಾಶ ಸಿಕ್ಕಿದ್ದರಿಂದ ಖುಷಿಯಾಗಿ ಗಣೇಶರು, "ಹುರ್ರೇ" ಎಂದು ಗಟ್ಟಿಯಾಗಿ ಕೈಯೆತ್ತಿ ಸಂಭ್ರಮಿಸಿದರೆ, ಗಣೇಶರ ಪತ್ನಿ ಅಡಿಗೆ ಮನೆಯಿಂದ ಇನ್ನಷ್ಟು ಬೋಂಡಾ ತರುತ್ತಾ, "ಏನಾಯ್ತುರೀ? ಈಗಿನ್ನೂ ಗೊರಕೆ ಹೊಡೆಯುತ್ತಿದ್ದಿರಿ. ಇಷ್ಟು ಬೇಗ ಎಚ್ಚರವಾಯಿತಾ!" ಎನ್ನಬೇಕೇ! ಗಣೇಶರು, 'ಹೀಗೂ ಉಂಟೇ?' ಎಂದುಕೊಳ್ಳುತ್ತಾ ಮತ್ತೆ ಬೋಂಡಾದಮನ ಕಾರ್ಯ ಆರಂಭಿಸಿದರು. ಅದುವರೆಗೆ ನಡೆದದ್ದು ಕನಸೋ, ನನಸೋ ಎಂದು ತಿಳಿಯದ ಸ್ಥಿತಿಯಲ್ಲಿದ್ದ ಗಣೇಶರ ಕೈ, ಬಾಯಿ ಮಾತ್ರ ಯಾಂತ್ರಿಕವಾಗಿ ಕೆಲಸ ಮುಂದುವರೆಸಿತ್ತು.

                                                                                                                                           (ಮುಂದುವರೆಯುವುದು.)

-ಕ.ವೆಂ.ನಾಗರಾಜ್.

Comments

Submitted by nageshamysore Wed, 08/05/2015 - 00:45

ಕವಿಗಳೆ, ಗಣೇಶರಿಂದ 'ಕಾಪಿರೈಟ್ಸ್' ತೆಗೆದುಕೊಂಡಿದ್ದೀರಾ ತಾನೆ ? ಇಲ್ಲದಿದ್ದರೆ ಅವರು ಎಚ್ಚೆತ್ತು 'ಗುರ್' ಎನ್ನುವ ಮೊದಲೆ ಮುಗಿಸಿಕೊಂಡು ಬಿಡಿ. ಹಾಳು ಮಧ್ಯಪ್ರದೇಶಕ್ಕೆ ಸೇರಿದ ಬೊಂಡಾ ಏನೆಲ್ಲಾ ಅವಾಂತರ ಮಾಡುವುದೊ ಹೇಳುವುದು ಕಷ್ಟ..!

Submitted by H A Patil Wed, 08/05/2015 - 16:44

ಕವಿ ನಾಗರಾಜರವರಿಗೆ ವಂದನೆಗಳು
ತಮ್ಮಿಂದ ಹೊಸದಾದ ಸಾಹಿತ್ಯ ಪ್ರಾಕಾರ ಸೊಗಸಾಗಿ ಮೂಡಿ ಬಂದಿದೆ ಒಂದು ತರಹದ ಲವಲವಿಕೆ ನಿಮ್ಮ ಬರಹದಲ್ಲಿದೆ. ಒಮ್ಮೆಗೆ ಆಶ್ಚರ್ಯವಾಯಿತು ಏನಿದು ಚೋದ್ಯ..1 ಕವಿ ನಾಗರಾಜರು ಹೀಗೆ ಬರೆಯುತ್ತಿದ್ದೀರಿ. ಗಣೇಶರವರನ್ನು ಕೆಣಕಿದ್ದೀರಿ ಈ ಸರಣಿ ಸ್ವಾರಸ್ಯಕರವಾಗಿರುವುದರಲ್ಲಿ ಸಂದೇಹವಿಲ್ಲ, ಗಣೇಶರ ಪ್ರತಿಕ್ರಿಯೆ ಹಾಗೂಮುಂದಿನ ಭಾಗದ ನಿರೀಕ್ಷೆಯಲ್ಲಿ ಧನ್ಯವಾದಗಳು.

Submitted by partha1059 Wed, 08/05/2015 - 17:23

ಹೀಗಾದರು ಆ ಗಣೇಶರನ್ನು ಸಂಪದಕ್ಕೆ ಎಳೆದು ತನ್ನಿ
ಸದಾ ಬೊಂಡ‌ ತಿನ್ನುವದರಲ್ಲಿ ಮಗ್ನ‌ !

Submitted by santhosha shastry Wed, 08/05/2015 - 18:16

ಕವಿವರ್ಯರೇ, ಕುತೂಹಲ‌ ಹುಟ್ಟಿಸಿ, ಈಗ‌ ನಮ್ಮ‌ "ತೀರದ‌ ದಾಹ‌"ವನ್ನು ತಣಿಸದಿದ್ದಲ್ಲಿ ತಪ್ಪಾಗುಲ್ವೇ?!!

Submitted by lpitnal Wed, 08/05/2015 - 23:51

ಕವೆಂನಾ ಜಿ, ತುಂಬ ರಸದುಂಬಿದಂತಿದೆ ಕಥನ. ದೇವರೊಂದಿಗೆ ಸಂದರ್ಶನ ....ಮುಂದುವರೆಯಲಿ ಸರ್.

Submitted by ಗಣೇಶ Fri, 08/07/2015 - 00:08

ನಡುರಾತ್ರಿ ದೀಪವಾರಿಸಿ,ಕಂಪ್ಯೂಟರ್ ಲೈಟನ್ನೂ ಮ್ಯೂಟ್ ಮಾಡಿ, ಸದ್ದಾಗದಂತೆ ಸಂಪದದೊಳಗೆ ನುಗ್ಗುವೆ...ಅದು ಹೇಗೆ ಪತ್ತೆ ಹಚ್ಚಿದಿರಿ ಕವಿನಾಗರಾಜರೆ!? ನನಗೆ ಸಪ್ತಗಿರಿವಾಸಿ ಮೇಲೆ ಡೌಟಿದೆ...
>>>ಒಂದೊಂದೇ ಬೋಂಡಾವನ್ನು ಮಧ್ಯಪ್ರದೇಶಕ್ಕೆ ರವಾನಿಸುತ್ತಿದ್ದರು. :) :) :)
-ನಮ್ಮ ಸಿದ್ಧಾಂತವೇ ಅದು : ಮಧ್ಯಪ್ರದೇಶಕ್ಕೆ ಸಪ್ಲೈ ಚೆನ್ನಾಗಿದ್ದರೆ, ಉತ್ತರ ಪ್ರದೇಶ ಚುರುಕಾಗಿರುತ್ತದೆ.
>>>...ಟಿವಿ ನೋಡುತ್ತಾ ಗಣೇಶರು ಪಕ್ಕದ ಟೀಪಾಯಿಯ ಮೇಲಿದ್ದ ತಟ್ಟೆಯಿಂದ ಒಂದೊಂದೇ ಬೋಂಡಾವನ್ನು...
- ಟಿ.ವಿ.ಯಲ್ಲಿ ಯಾವ ಚಾನಲ್ ಹಾಕಿದರೂ ನಡೆಯುತ್ತದೆ,ಟೀಪಾಯಿ ಮೇಲೆ ಏನಿದೆ ಅದು ಮುಖ್ಯ...ಟಿವಿಯಲ್ಲಿ ಮಗ್ನನೋ ತಿನ್ನುವುದರಲ್ಲಿ ಮಗ್ನನೋ ಅನ್ನುವುದು.. ಇನ್ನೂ ನಮ್ಮ ಮನೆಯವರಿಗೇ ಪತ್ತೆಹಚ್ಚಲಾಗಲಿಲ್ಲ :)
>>>ಕ್ಷಣಾರ್ಧದಲ್ಲಿ ಗೊರಕೆಯ ಸದ್ದು ಮೊಳಗತೊಡಗಿತ್ತು..:) :):)
-ಇದೂ ಸತ್ಯಾನೆ! ಅಲ್ಲಿ ಆರ್ಣವ್ ಗಂಭೀರ ಚರ್ಚೆಯಲ್ಲಿದ್ದರೆ, ಇಲ್ಲಿ ನನ್ನ ಗೊರಕೆ ಅದಕ್ಕೂ ಜೋರಾಗಿರುತ್ತದೆಯಂತೆ...ಗೋಷ್ಟಿಯಲ್ಲಿರುವ ಜನರ ಗದ್ದಲಕ್ಕೂ ಬೆದರದವ ನನ್ನ ಗೊರಕೆ ಶಬ್ದಕ್ಕೆ, ನನ್ನ ಕಡೆ ತಿರುಗಿ "ಮೆ ಮೆ..." ಅಂತಾನಂತೆ!!(ನನ್ನ ಮನೆಯವರ ಆರೋಪ). ಪ್ಲೇಟು ತಂದಿಟ್ಟ ಶಬ್ದಕ್ಕೆ ನನಗೆ ಎಚ್ಚರವಾಗಿ, ಮನೆಯವರೆಲ್ಲಾ ಪುನಃ ಸೀರಿಯಲ್ ನೋಡಲು ಸಾಧ್ಯವಾಗುವುದು....
ಇದೆಲ್ಲಾ ಸರಿ...ದೇವರ ಸಂದರ್ಶನ ವಿಷಯ ನಾನು ಯಾರಿಗೂ ಹೇಳಿಲ್ಲಾ...ಅದು ಹೇಗೆ ನಿಮಗೆ ಗೊತ್ತಾಯಿತು! ಅವಕಾಶ ಕೊಟ್ಟಿದ್ದರೆ ನಿಮ್ಮೆಲ್ಲರನ್ನೂ ಕರಕೊಂಡು ಹೋಗೋಣ ಅಂತಿದ್ದೆ..
ಸಂಸ್ಕೃತದಲ್ಲಿ ಹಂಪ್ರಂ...ಎಂದೆಲ್ಲಾ ಹೇಳಿದರೆ ಅರ್ಥಮಾಡಿಕೊಳ್ಳಲು ಶ್ರೀಧರ್‌ಜಿ, ನಿಮ್ಮನ್ನೂ...
ಅದನ್ನು ಕನ್ನಡಕ್ಕೆ ನನಗೆ ಅರ್ಥವಾಗುವಂತೆ ಹೇಳಲು ನಾಗೇಶರನ್ನೂ,
ದೇವರು ಅರ್ಧ ದಾರಿಯಲ್ಲಿ ಕೈಬಿಟ್ಟು ಹೋದರೆ, ದಾರಿ ತೋರಲು ಸ್ವರ್ಗನರಕಗಳ ಪರಿಚಯವಿರುವ ಪಾರ್ಥರನ್ನೂ...
ಕೇಳಬೇಕೆಂದಿದ್ದೂ ಮರೆತು ಹೋದುದನ್ನು ನೆನಪಿಸಲು ಸಪ್ತಗಿರಿವಾಸಿಯನ್ನೂ,
ದೇವರಿಗೆ ನೂರೆಂಟು ಸುತ್ತು ಹಾಕಲು..........ಹೀಗೇ ಸಂಪದ ಬಳಗವನ್ನೇ ಕರಕೊಂಡು ಹೋಗುತ್ತಿದ್ದೆ.. ಭಯರೀ..ದೇವರಿಗೆ! ಅದಕ್ಕೇ ಯಾರೂ ಬೇಡ ಅಂದಿದ್ದು..
*******
ಪ್ಲೇಟು ಖಾಲಿಯಾಯಿತು...ತಲೆ ಓಡುತ್ತಿಲ್ಲಾ...ನೀವು ಮುಂದುವರೆಸಿ....

Submitted by kavinagaraj Fri, 08/07/2015 - 12:13

In reply to by ಗಣೇಶ

ವಾಹ್! ಎಂತಹ ಪ್ರತಿಕ್ರಿಯೆ! ಮಧ್ಯರಾತ್ರಿಯ ಪ್ರತಿಕ್ರಿಯೆ!!
ನೀವು ಒಮ್ಮೆ ಕುರುಕಲು ಕುರುಕುತ್ತಾ ನಿಮ್ಮ ಸಂದರ್ಶನದ ವಿವರವನ್ನು ಮೈಮರೆತು ಹಂಚಿಕೊಂಡದ್ದು ಲೀಕ್ ಆಗಿ ಸಂಪದದಲ್ಲಿ ಬ್ರೇಕಿಂಗ್ ನ್ಯೂಸ್ ಆಗಿಬಿಟ್ಟಿದೆಯೆಂದು ತೋರುತ್ತದೆ.
>>>ಪ್ಲೇಟು ತಂದಿಟ್ಟ ಶಬ್ದಕ್ಕೆ ನನಗೆ ಎಚ್ಚರವಾಗಿ, ಮನೆಯವರೆಲ್ಲಾ ಪುನಃ ಸೀರಿಯಲ್ ನೋಡಲು ಸಾಧ್ಯವಾಗುವುದು....--- ನಿಮ್ಮ ಮನೆಯವರ ಆಕ್ಷೇಪಣೆ ಹೊರಜಗತ್ತಿಗೂ ತಿಳಿದುಬಿಟ್ಟಿದೆ!! :))
ನಿಮಗೆ ಸಂಸ್ಕೃತದ 'ಹಂಪ್ರಂ...' ಇಷ್ಟವಿಲ್ಲವೆಂದೋ, ಕಷ್ಟವೆಂದೋ ದೇವರು ಕನ್ನಡದಲ್ಲೇ ಮಾತನಾಡುತ್ತಾನೆಂಬ ವಿಷಯ ಬಲ್ಲಮೂಲಗಳಿಂದ ತಿಳಿದುಬಂದಿದೆ.
ಮುಂದೊಮ್ಮೆ ಸಂಪದ ಬಳಗವನ್ನೇ ಸಮಯ ಮತ್ತು ಅವಕಾಶ (ದೇವರದ್ದು, ದೇವರ ಭಕ್ತರದ್ದು) ಹೊಂದಿಸಿಕೊಂಡು ಗೋಷ್ಠಿಯನ್ನೇ ನಡೆಸುವ ಬಗ್ಗೆ ನಾನೂ ಲಾಬಿ ಮಾಡುತ್ತೇನೆ.
ದೇವರಿಗೆ ಗಣೇಶರದ್ದು ಮಾತ್ರವಲ್ಲ, ದೇವರ ಭಕ್ತರುಗಳ ಭಯವೂ ಇದೆಯೆಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
*************
ನನಗೆ ಒಂದು ಅನುಮಾನ - ಮಧ್ಯರಾತ್ರಿಯಲ್ಲಿ ನಿಮ್ಮ ಮುಂದೆ ಪ್ಲೇಟು ಹೇಗೆ ಬಂದಿತ್ತು? ಆದರೆ ಖಾಲಿಯಾದುದರಲ್ಲಿ ಅನುಮಾನ ಬರಲಿಲ್ಲ. :))

Submitted by venkatb83 Wed, 08/12/2015 - 20:01

In reply to by kavinagaraj

" "ಅಲ್ಲಿಗೇ ಯಾಕೆ ಬರಬೇಕು? ದೇವರು ಎಲ್ಲೆಲ್ಲೂ ಇರುತ್ತಾನಲ್ಲವಾ? ಇಲ್ಲೇ ಯಾಕೆ ಮಾತನಾಡಬಾರದು?"

"ಇಲ್ಲೂ ಮಾತನಾಡಬಹುದು. ಆದರೆ ಹಾಗೆ ಮಾಡಿದರೆ ಆ ಸಂದರ್ಭದಲ್ಲಿ ನಿನ್ನನ್ನು ಕಂಡ ಬೇರೆಯವರು ನಿನಗೆ ಏನೋ ಆಗಿದೆಯೆಂದು ಆಸ್ಪತ್ರೆಗೆ ಸೇರಿಸುವ ಸಾಧ್ಯತೆ ಇದೆ. ಆದ್ದರಿಂದ ಆ ಸ್ಥಳದಲ್ಲಿ ಆದರೆ ಕ್ಷೇಮ."

:())))

ಹಿರಿಯರೇ -ನಿಮ್ಮ ಹಿಂದಿನ ಬರ್ಹಗಳಿಗಿಂತ ಭಿನ್ನವಾದ ಶೈಲಿಯಲ್ಲಿ ಬರಹ ಬರೆದಿರುವಿರಿ-ನೀವೇ ಹೇಳಿದ ಹಾಗೆ ಅದರ ಸಾರ -ಸಾರಾಗ್ರಾಹಿಗಳಿಗೆ ಅರ್ಥ ಆಗುತ್ತೆ...!!
ನನಗೆ ಸಂಶ್ಯ ಅಂದ್ರೆ-ದೇವರು ಗಣೇಶಣ್ಣ ಅವ್ರನ್ನೇ ಆರಿಸಿದ್ದು.... !!

ದೇವರನ್ನು ನೋಡಲು -ಗಣೇಶಣ್ಣ ಅವರ ಜೊತೆ ಹೋಗಲು ನಮಗೂ ಅವಕಾಶ ಸಿಕ್ಕಿದ್ದಕ್ಕೆ ನನ್ನಿ..
ಗಣೇಶ-ವೆಂಕಟೇಶ-ಮಧ್ಯ ಅಂತರ ಬರೀ 2 ಕಿ.ಮಿ ಅಸ್ಟೇ...!!
ಅವ್ರೂ ನಂಜೊತೆ ಮಾತಾಡಿ ನೋಡಿ ಆಗಿದೆ-ಆದರೆ ಅವ್ರು ಯಾರು ಹೇಗಿದ್ದಾರೆ ಎಂಬುದೇ ನಮಗೆ ಮಿಲಿಯನ್ ಡಾಲರುಗಳಿಗಿಂತ ದೊಡ್ಡ ಕುತೂಹಲ-
ಈಗ ದೇವರು ಮತ್ತು ಗಣೇಶಣ್ನರ ಭೇಟಿ ಒಟ್ಟೊಟ್ಟಿಗೆ..!!

ಕುತೂಹಲದಿಂದ ಕಾಯ್ತಿರುವೆ...

ಶುಭವಾಗಲಿ
\\\|||||||///

Submitted by kavinagaraj Thu, 08/13/2015 - 07:42

In reply to by venkatb83

:) ಧನ್ಯವಾದ, ಗಣೇಶರೇ. ನನಗೂ ಈಗ ಗಣೇಶ ಮತ್ತು ಮಿತ್ರರುಗಳೇ ದೇವರು ಹೇಗಿದ್ದಾನೆ ಎಂದು ಹೇಳಬೇಕು! ಏಕೆಂದರೆ ದೇವರ ಸಂದರ್ಶನ ಮಾಡುತ್ತಿರುವವರು ಅವರೇ!!

Submitted by kavinagaraj Thu, 08/13/2015 - 07:43

In reply to by kavinagaraj

ವೆಂಕಟೇಶರೇ ಅನ್ನುವಲ್ಲಿ ಗಣೇಶರೇ ಎಂದು ಬರೆದುಬಿಟ್ಟೆ. ಸರಿಪಡಿಸಿಕೊಳ್ಳಿ. ಗಣೇಶರ ಪ್ರಭಾವ ಅಷ್ಟು ಗಾಢವಾದುದಾದ್ದರಿಂದ ಹೀಗಾಯಿತು!!