ಬೆಳದಿಂಗಳು -ಲಕ್ಷ್ಮೀಕಾಂತ ಇಟ್ನಾಳ

ಬೆಳದಿಂಗಳು -ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ಬೆಳದಿಂಗಳು

ಇಂಪು, ಕಂಪಿನ ಪರಿಮಳದ ಬೆರಗು.... ಕಣ್ತಣಿವ ಬೆಳದಿಂಗಳು

ರೆಕ್ಕೆಯಲಿ ಯಕ್ಷಿ ಅಂಗಳದಲಿ ....ಹಾಲ್ನೊರೆಯ ತಿಳಿಗೆಂಪಲಿ

ತುಟಿಯರಳಿ ತುಳುಕಿದ ನಗೆ ಮಿಂಚಲಿ...ವಾತ್ಸಲ್ಯವರಳಿದ ಗೊಂಚಲು

ಲವಲವಿಕೆಯ ಮೊಳಕೆ ...ಪರಿಸರಕೆ,.. ಸಡಗರಕೆ ಸಡಗರ... ಮನೆಯ ಸಕಲಕೆ

ಭಾವಗಳಿಗೆ ಜೀವಸಹಿತ ಕನಸು ...ನಿರೀಕ್ಷೆಗೂ ಅನಿರೀಕ್ಷಿತ ನನಸು

 

ಕೊಳಲಾದ ಕಣ್ಣುಗಳು, ..ಕಣ್ಣುಕೊಳಗಳಲಿ ನವಿಲುಗಳ ನೃತ್ಯ

ಒಳ ಧಾವಂತ, ಏಕಾಂತ, ಬೆಳದಿಂಗಳ ಕೊಡೆಯಲಿ ನಿರಾತಂಕ

ಮನೆಯ ಹೃದಯ ಮಿಡಿತದಲಿ ನಗಾರಿಯ ನಾಟ್ಯ

ಎದೆಯಮೃತ ಕಲಶ... ಸುಮಧುರ ಶೃತಿ ....ಮನ ವೀಣೆಯ ತಂತಿ

ಓಹ್, ಭಾಷ್ಪಗಳು!..ಎದೆಯಾಳದ ಭಾವಗಳ ಹೊರಜಾರಿದ ಇಬ್ಬನಿ

 

ಬೆಳದಿಂಗಳಿದು ಆದರದ ಎದೆಗಳಲಿ ಬರೆದ ಕಾವ್ಯ..... ದೃಶ್ಯ ಕಾವ್ಯ

ಬದುಕೆಂಬುದು ವಿಸ್ಮಯದ ಕಡಲು...ಬೊಗಸೆಯಲಿ ಬಂದಿಳಿದ ಅಂಬುಧಿ

ಬೆಳಕಿದು...'ಬರಿ ಬೆಳಗಲ್ಲೋ ಅಣ್ಣಾ' ಅನಿಸಿದ ಗಳಿಗೆ.... ನಮ್ಮೊಳಗೆ

ದೈವಿ ಪ್ರಕಾಶಪಾತದ ಶ್ವೇತ ಧಾರೆ. ಧರೆಗಿಳಿದ ಕ್ಷಣವೆ,... ಸ್ಥಬ್ಧ ಗಳಿಗೆ

ತಿಳಿಗೊಳದ ನೇಸರ ಮೆರುಗು..ಅಮ್ಮನೆದೆಗಪ್ಪಿದ ಮಗುವಿನ ಮುಗ್ಧ ನಗು

 

ದಂತ ಪಂಕ್ತಿಗೆ ನಗಲು ಬೇಕೆ ಕಾರಣಗಳು!... ನಗೆವಾಲು ಉಕ್ಕಿದ ಮನೆಯ ಕೆನ್ನೆಗಳು

ಮೆಚ್ಚುಗೆಯ ಕಂಗಳಲಿ ಜೀಕಾಡಿದ ಜಿಗಿತ, ...ಮೌನಗಳ ಮುಗುಳು ಮನಗಳ ಸ್ವಗತ

ಹೊಂಬೆಳಕಿನ ಸಿರಿಯ ಶಾಮಿಯಾನ,... 'ಪ್ರಭೆ ಏನಿದು,ಬೆಳದಿಂಗಳಂತದು!', ಚಂದ್ರನಿಗೂ ಅನುಮಾನ

ಮೋಡಗಳಲ್ಲಿ ಮುಖತೂರಿ ಪಿಸುಮಾತಲಿ ಕೇಳಿತು 'ಖರೆ ಹೇಳು, ನೀನಾರು!'

ಹೃದಯಗಳನ್ನು ಬೆಸೆದ ಬೆಳದಿಂಗಳು ಉಲಿಯಿತು.....'ನಾನೋ... ಭವಿಷ್ಯ!'

Rating
No votes yet

Comments

Submitted by swara kamath Sun, 08/30/2015 - 17:12

ಪ್ರಿಯ ಇಟ್ನಾಳರೆ
ಚಿಗುರೊಡೆವ ಭವಿಷ್ಯದ ಪರಿಯನ್ನು ಸುಂದರವಾಗಿ ಬೆಳದಿಂಗಳಿನ ರೂಪಕದೊಂದಿಗೆ ವ‌‌‌‍ರ‍್ಣಿಸುವ ಕವನದ ಕಲ್ಪನೆ ಅದ್ಭುತ.
ವಂದನೆಗಳು. ... ರಮೇಶ ಕಾಮತ್.

Submitted by lpitnal Mon, 08/31/2015 - 21:00

In reply to by swara kamath

ರಮೇಶ ಕಾಮತರೆ,
ಹೇಗಿರುವಿರಿ ಸರ್, ಕವನದ ರೂಪಕ ಬೆಳದಿಂಗಳು, ಅದನ್ನೇ ಪ್ರತಿಮೆಯಾಗಿಸಿ, ಒಳ ಝರಿಯಲ್ಲಿ ಹರಿಯುತ್ತ ಹೊರಟ ಎದೆಯ ಭಾವಗಳೊಂದಿಗೆ ಹರಿಯುತ್ತ ನಾನೂ ಚಲಿಸಿಬಿಟ್ಟೆ. ಇನ್ನೇನು ಬೆಳದಿಂಗಳು ಈಗ ನಮ್ಮ ಮನೆ ಬೆಳಗಲಿದೆ ಮಿತ್ರರೆ, ಅದೇ ಖುಷಿಯಲ್ಲಿ ಈ ಭಾವಝರಿಯ ಲಹರಿ...

Submitted by ravindra n angadi Mon, 08/31/2015 - 14:40

ನಮಸ್ಕಾರಗಳು ಸರ್,
ಅತಿ ಸುಕ್ಷ್ಮವಾದ ವಿವರಗಳನ್ನು ಸವಿಸ್ತಾರವಾಗಿ ವರ್ಣಿಸಿದ ರೀತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ,
ಧನ್ಯವಾದಗಳು.

Submitted by Huddar Shriniv… Mon, 08/31/2015 - 15:19

ಬೆಳಕಿದು...'ಬರಿ ಬೆಳಗಲ್ಲೋ ಅಣ್ಣಾ' ಅನಿಸಿದ ಗಳಿಗೆ.... ನಮ್ಮೊಳಗೆ
ದೈವಿ ಪ್ರಕಾಶಪಾತದ ಶ್ವೇತ ಧಾರೆ. ಧರೆಗಿಳಿದ ಕ್ಷಣವೆ,..
ಸುಂದರ ಕವನ‌ ಸರ್!

Submitted by lpitnal Mon, 08/31/2015 - 21:09

In reply to by Huddar Shriniv…

ಗೆಳೆಯ ಶ್ರೀನಿವಾಸ್ ಜಿ, ಓಹೋ, ನಿಮಗೆ ನಮ್ಮ ಬೇಂದ್ರೆ ಅಜ್ಜ ಕಂಡನಲ್ಲವೇ ಕವನದಲ್ಲಿ. ಸರಿಯಾಗಿ ಗಮನಿಸಿದಿರಿ. ಬೆಳದಿಂಗಳು ಕೇವಲ ಬೆಳಗಾಗಿ ಈ ಅಂಗಳಕ್ಕೆ ಬರುತ್ತಿಲ್ಲ, ಅದು ಇಳೆಯ ಮಗಳೂ ಹೌದು, ಹೀಗಾಗಿ ಪಕ್ಕಾ ಮನೆಯೇ ಸ್ವರ್ಗದ ಧರೆಯಾಗಲಿದೆ. ಹೂ ಅರಳಲಿವೆ ....ಖುಷಿಯ ರೆಕ್ಕೆ ಮೂಡಲಿವೆ ನನ್ನ ಕುಡಿಗೆ ..ಮನೆಯಲ್ಲಿ ಖುಷಿ ಇಮ್ಮಡಿಯಾಗಲಿದೆ. ವಂದನೆಗಳು ಸರ್.

Submitted by nageshamysore Mon, 08/31/2015 - 17:41

ಇಟ್ನಾಳರೆ ನಮಸ್ಕಾರ. ಅಂದ ಹಾಗೆ ವಸಂತ ನಿಮ್ಮ ಮನೆಯಲ್ಲಿ ತನ್ನ ಹಸಿರನ್ನು ಉಸುರಿರುವಂತಿದೆ - ಬೆಳದಿಂಗಳ ಚೆಲ್ಲುವ ಭವಿತದ ಪ್ರತಿಮಾ ರೂಪವಾಗಿ ? ಆ ಹರ್ಷವೆ ಕವನೋತ್ಸಾಹದ ಉದ್ಗಾರವಾಗಿ ಚೆಲ್ಲಿಕೊಂಡಂತಿದೆ..

Submitted by lpitnal Mon, 08/31/2015 - 21:25

In reply to by nageshamysore

ಆತ್ಮೀಯ ಗೆಳೆಯ ನಾಗೇಶ ಜಿ, ತಮ್ಮ ಮಾತು ನಿಜ. ಈಗ ಬೆಳದಿಂಗಳು ಮನೆಗೆ ಬರುವ ದಾರಿ ತೆರೆದುಕೊಳ್ಳುತ್ತಿದೆ, ಬಹುಶ: ನಾಲ್ಕಾರು ಮಾಸಗಳಷ್ಟೆ. ಖುಷಿಯ ಕುಂಚ ಚಿತ್ರವೊಂದನ್ನು ಬಿಡಿಸುತ್ತಿದೆ, .ಮನೆಯಲ್ಲಿ ನಗೆಯ ಕಲರವ ಸಮೃದ್ಧಿಗೊಳ್ಳಲಿದೆ....ಮನೆಯಲ್ಲಿ ಹೂಗಳು ಮಾತನಾಡಲಿವೆ ಬರುವ ಸಮಯಗಳಲ್ಲಿ, ...ತಮ್ಮ ಆತ್ಮೀಯ ಪ್ರತಿಕ್ರಿಯೆಗೆ ವಂದನೆಗಳು ಸರ್,.

Submitted by H A Patil Wed, 09/02/2015 - 19:39

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ಬೆಳದಿಂಗಳು ಕವನ ಒಂದು ಸಶಕ್ತ ರಚನೆ,ಹೃದಯಗಳನು ಬೆಸೆವ ಬೆಳದಿಂಗಳು ಬರಿ ಭವಿಷ್ಯ ಮಾತ್ರವೆ ಅಲ್ಲ ಅದು ಭೂತ ವರ್ತಮಾನ ಮತ್ತು ಭವಿಷಯಗಳ ಕೊಂಡಿ, ಬಹಳ ಪರಿಣಾಮಕಾರಿಯಾದ ಕವನ ನೀಡಿದ್ದೀರಿ ಧನ್ಯವಾದಗಳು.