ಕಥೆ : ಕೆರೆಗೆ ಹಾರ‌

ಕಥೆ : ಕೆರೆಗೆ ಹಾರ‌

                                                                                           ಕೆರೆಗೆ ಹಾರ

              ಬರದೂರ ಗ್ರಾಮದ ಭರಮ ದನ ಮೇಯಲು ಬಿಟ್ಟು ನೆರಳು ಹುಡುಕಿ ಬನ್ನಿ ಮರದ ಕೆಳಗೆ ಕುಳಿತ. ಸೂರ್ಯ ಏರಿ ಬಂದು ಬೆವರಿಳಿಸ ಹತ್ತಿದ. ಬುತ್ತಿ ಬಿಚ್ಚಲು ಇನ್ನೂ ಸಮಯವಿತ್ತು. ಗಂಟಲು ಬಿಸಲೇರಿ ಬಾಟಲಿ ನೀರು ಬೇಡುತ್ತಿತ್ತು. ನೀರು ಗುಟಕರಿಸಿ ನುಂಗುವಾಗ ಯಾಕೋ ನೀರು ಗಂಟಲಿಗೆ ಸಿಕ್ಕಂತಾಗಿ ಮೇಲೆ ಕೆಳಗೆ ನೋಡಿ ನೀರು ಸರಾಗವಾಗಿ ಇಳಿಯುವಂತೆ ಮಾಡಿಕೊಂಡು ಒಮ್ಮೆ ಖ್ಯಾಕರಿಸಿ ಉಸಿರೆಳೆದುಕೊಂಡ. ಅದೇ ವೇಳೆಗೆ ಹೊಲದ ಬದಿಯ  ಚಕ್ಕಡಿ ಹಾದಿಯಲ್ಲಿ ಒಂದು ಜೀಪು ತೂರಾಡಿಕೊಂಡು ಬಂದು ನಿಂತಿತು. ಅದರಿಂದ ನಾಲ್ಕಾರು ಜನರು ಅವರ ಸರಂಜಾಮುಗಳು ಇಳಿದವು. ಅವರು ಲೊಚ ಲೊಚ ಮಾತಾಡುತ್ತಾ ಭರಮನ ಮುಂದೆ ಹಬ್ಬಿ ನಿಂತ ಬೂದಿ ಬಸಪ್ಪನ ಗುಡ್ಡವನ್ನೆ ಉದ್ದೇಶಿಸಿ ಏನೋ ಗಲಗಲ ಮಾತಾಡ ಹತ್ತಿದರು. ಅವರು ಗುಡ್ಡವನ್ನೆ ಮಾತಾಡಿಸುವ ಶಕ್ತಿ ಉಳ್ಳವರೇನೋ ಎನ್ನುವ ಭಾಸ ಭರಮನಿಗಾಯಿತು. ತಾನೂ ದಡಬಡಿಸಿ ಎದ್ದುನಿಂತ. ಅವರ ಪೈಕಿ ಒಬ್ಬ ಇವನನ್ನು ಕಂಡವನೇ ಇವನ ಹತ್ತಿರ ಬಂದ. “ತಂಬಾಕೈತೇನು?” ಎಂದು ಕೇಳಿದ. ಯಾರೋ ದೊಡ್ಡ ಸಾಹೇಬನಂತೆ ತೋರುವ ವ್ಯಕ್ತಿ ತನ್ನನ್ನು ತಂಬಾಕು ಕೇಳಿದ್ದು ನೋಡಿ ಗಾಬರಿಯಾಗಿ “ಐತಿ ತೊಗೊರಿ” ಎಂದು ಸ್ಟಾರ್ ಪಾಕೀಟಿನಲ್ಲಿದ್ದ ತಂಬಾಕು ಕೊಟ್ಟ. ತಂಬಾಕು ಸುಣ್ಣ ಬೆರಿಸಿ ತಿಕ್ಕಿ ಒಸಡಿನಲ್ಲಿಟ್ಟುಕೊಂಡು “ಈ ಹೊಲ ನಿಮ್ಮದೇನು?” ಎಂದು ಕೇಳಿದ. “ಹೌದರಿ, ಈ ಬೂದಿ ಬಸಪ್ಪನ ಗುಡ್ಡದ ಕೆಳಗೆ ಇರೊ ಹೊಲದ ಪೈಕಿ ಮೂರು ಎಕರೆ ನಂದು ಮೂರು ಎಕರೆ ನಮ್ಮಣ್ಣಂದರಿ, ಯಾಕರಿ ಸಾಹೇಬರ ಏನಾತ್ರಿ? ಎಂದ. “ ಯಾಕಿಲ್ಲ ಸರ್ಕಾರ ಇಲ್ಲಿ ಒಂದ ಕೆರಿ ಕಟ್ಟಬೇಕಂತ ಮಾಡೈತಿ. ನೀ ಏನ್ ಚಿಂತಿ ಮಾಡಬ್ಯಾಡ, ನಿನ್ನ ಹೊಲ ಕೆರಿ ಕಟ್ಟಾಕಂತ ತೊಗಂಡರೂ, ಅದಕ್ಕ ಸರ್ಕಾರದಿಂದ  ರೊಕ್ಕಾ ಕೊಡತಾರ. ” ಇಷ್ಟು ಹೇಳಿ ಪಿಚ್ಚ ಅಂತ ಒಮ್ಮೆ ತಂಬಾಕು ರಸ ಉಗಳಿ ದುಡು ದುಡು ಎಂದು ಮುಂದೆ ಸಾಗಿದ್ದ ತನ್ನ ಗುಂಪು ಸೇರಿದ. ತಂಬಾಕು ತಿಂದು ಹಾಗೇ ಹೊಗದೇ ಭರಮನ ತಲೆಯಲ್ಲಿ ಹುಳು ಬಿಟ್ಟು ಹೋದ ವ್ಯಕ್ತಿ ನೀರಾವರಿ ಇಲಾಖೆಯಲ್ಲಿ ಇಂಜಿನಿಯರಾಗಿರುವ ಹನುಮರೆಡ್ಡಿ.

                     ಭರಮನ ತಂದೆ ಶಿವಪ್ಪನಿಗೆ ಆರು ಜನ ಹೆಣ್ಣು ಮಕ್ಕಳು ಇಬ್ಬರೇ ಗಂಡು ಮಕ್ಕಳು. ಕಡೆಗೆ ಹುಟ್ಟಿದ ಈ ಗಂಡು ಮಕ್ಕಳು ಸಾಲು ಅಕ್ಕಂದಿರ ಆರೈಕೆಯಲ್ಲಿ ಬೆಳೆದವು. ಭರಮ ಕಡಿ ಹುಟ್ಟು ಕಟ್ಟಾಣಿ ಆದ್ದರಿಂದ ಎಲ್ಲರೂ ಎತ್ತಿ ಆಡಿಸುವರೇ. ಅಳಲಿಕ್ಕೂ ಪುರುಸೊತ್ತಿಲ್ಲದಂತೆ ಬೆಳೆದ. ಭರಮ ಶಾಲೆಗೆ ಹೋದರೂ ಒಂಭತ್ತು ಪಾಸಾಗಿ ಹತ್ತು ಫೇಲಾದ. ಅವನ ಅಣ್ಣ ಗುರುನಾಥನಿಗೂ ವಿದ್ಯೆ ಹತ್ತಲಿಲ್ಲ. ಇಬ್ಬರೂ ಹೊಲ ಮನಿ ಕೆಲಸಕ್ಕೆ ಹತ್ತಿದರು. ಹೊಲದಿಂದ ಬರುವ ಆದಾಯ ಕಡಿಮೆ ಆಗುತ್ತಿದ್ದಂತೆ ಅಣ್ಣತಮ್ಮಂದಿರಿಬ್ಬರು ಅವರಿವರ ಹೊಲಮನಿ ಕೆಲಸಕ್ಕೆ ಹೊರಟರು. ಅಣ್ಣ ಊರವರ ಹೊಲದಲ್ಲಿ ದುಡಿಯಲು, ತಮ್ಮ ಊರ ಮಂದಿ ದನ ಕಾಯವ ಕೆಲಸಕ್ಕೂ ಹತ್ತಿದ. ಯಾಕೊ ಕ್ರಮೇಣ ಭರಮನ ಬುದ್ಧಿ ಮಂದವಾಗಹತ್ತಿತು. ಇದು ಮದುವಿ ಹುಚ್ಚು ಇದ್ದರೂ ಇದ್ದೀತು ಎಂದುಕೊಂಡು ಮದುವಿ ಮಾಡಿದರು. ಅವನ ನಸೀಬು ಎಂಥಾದ್ದಿತ್ತೋ ಏನೋ? ಮದುವಿ ಆಗಿ ಬಂದ ಮಾದೇವಿ ಹೊಟ್ಟಿಲಿ ಕೂಸು ಇಟ್ಟುಕೊಂಡೆ ಬಂದಿದ್ದಳು. ಬಸರು ಬಾಣಂತನ ಎಂದು ತವರಿಗೆ ಹೋದವಳು ಹಾಗೆ ಯಾರೊಂದಿಗೊ ಓಡಿ ಹೋಗಿಬಿಟ್ಟಳು. ಗೋವಾದಲ್ಲಿ ನೋಡಿದೆ ಎಂದು ಕೆಲವರು, ಮಂಗಳೂರಿನಲ್ಲಿ ನೋಡಿದೆ ಎಂದು ಕೆಲವರು ಹೇಳಿದರು. ಯಾರ ಮಾತು ನಿಜ ಅಂತ ನೋಡುವ ಗೋಜಿಗೆ ಭರಮ ಹೋಗಲಿಲ್ಲ. ಆದರೆ ಈ ಘಟನೆಯಿಂದ ಭರಮ ಇನ್ನಷ್ಟು ಕುಗ್ಗಿ ಹೋದ. ತನ್ನಷ್ಟಕ್ಕೆ ತಾನೆ ಮಾತಾಡಿಕೊಳ್ಳುವುದು, ಗಾಳಿಯಲ್ಲಿ ಕೈ ಆಡಿಸುವುದು ಯಾರೊಂದಿಗೂ ಬೆರೆಯದೇ ದನ ಮೇಯಿಸಿಕೊಂಡು ಬರುವುದನ್ನಷ್ಟೆ ಮಾಡಹತ್ತಿದ.

                ಹಳ್ಳಿ ಊರು.ಚಾಷ್ಟಿ ಮಾಡುವ ಜನರೇ ಹೆಚ್ಚು. ತುಂಟ ಹುಡುಗರು ಭರಮನಿಗೆ  ‘ ಯಾಕೊ ಮಾವಾ, ಅಕ್ಕನ್ನ ಎಲ್ಲಿಗಿ ಕಳಿಸಿದೆಪಾ? ’ ಎಂದು ಕೇಳಿದರೆ ‘ ತೌರಿಗೆ ಹೊಗ್ಯಾಳ ನಾಳೆ ಬರ್ತಾಳ ’ ಎನ್ನುತ್ತಿದ್ದ. ಹಿಂದಿನಿಂದ ‘ ಗೋವಾಕ್ಕ ಹೋಗೊ ಮಾವಾ ಸಿಕ್ತಾಳ ’ ಎಂದು ಓಡಿ ಹೋಗುತ್ತಿದ್ದರು. ಹೊಲದ ಕೆಲಸ ಮುಗಿಸಿ ಸಂಜಿಕ ಗುಂಪಾಗಿ ಹರಟೆ ಹೊಡೆಯುತ್ತಾ ಮನೆಗೆ ಹಿಂದಿರುಗುತ್ತಿದ್ದ ಹೆಂಗಸರು “ ಭರಮಣ್ಣಾ ಅಕ್ಕನ್ನ ಎಲ್ಲಿ ಬಿಟ್ಟೆಪಾ?” ಎಂದರೆ “ ಊರಿಗೆ ಹೊಗ್ಯಾಳಬೇ ನಾಳೆ ಬರ್ತಾಳ “ ಎನ್ನುತ್ತಿದ್ದ. ಹಿಂದಿನಿಂದ ಕಿಸಕ್ ಅಂತ ನಕ್ಕು, ‘ ಇವನ ಕೈಲಿ ಆಕಿನ್ನ ಇಟುಗೊಳ್ಳುದ ಆಗಲಿಲ್ಲ ’ ಎನ್ನುವ ಅರ್ಥದ ಮಾತಾಡುತ್ತಿದ್ದರು. ಒಮ್ಮೆ ಇವನಿಗೂ ಇವನ  ಅಣ್ಣನ ಹೆಂಡತಿ ಮಾದೇವಿಗೂ ಯಾವುದೋ ಕಾರಣಕ್ಕೆ ಜಗಳ ಹತ್ತಿತು. ಅವಳು ಸಿಟ್ಟಿನಿಂದ ‘ ಹೆಂಡತಿ ಇಟಗೊಳ್ಳಲಾಕ ಆಗಲಾರದ ಗಂಡಸು, ನೀ ಏನ್ ನನಗ ಹೇಳ್ತಿ ಹೋಗೊ ’ ಎಂದು ಬಿಟ್ಟಳು. ಸಿಟ್ಟಿಗೆದ್ದ ಭರಮ ಜಗಳದ ಭರದಲ್ಲಿ ಅವಳ ಸೀರಿಗೆ ಕೈ ಹಾಕಿದ. ಇದನ್ನೆ ಕಾಯುತ್ತಿದ್ದವಳಂತೆ ಆಕೆ ಊರು ಒಂದು ಮಾಡುವಂತೆ ಚೀರಿಕೊಂಡುಬಿಟ್ಟಳು. ಜನ ಸೇರಿ ಜಗಳ ಬಿಡಿಸಿದರು. ಅಣ್ಣ ತಮ್ಮ ಒಂದಾಗಿ ಇರುವುದು ಸಾಧ್ಯವೇ ಇಲ್ಲವೆಂದು ಗುರುನಾಥನ ಹೆಂಡತಿ ಮಾದೇವಿ ಸೇರಿದ ಪಂಚಾಯತಿಗೆ ಹೇಳಿದಳು. ಪಂಚಾಯತಿ ಜನ ಅನಿವಾರ್ಯವಾಗಿ ಪಾಲು ಮಾಡಿಕೊಟ್ಟರು. ತಲಾ ಮೂರು ಎಕರೆ ಹೊಲದ ಪಾಲು ಬಂದಿತಾದರೂ ಬರಡು ಹೊಲದಲ್ಲಿ ಹೊಟ್ಟೆ ಹೇಗೆ ತುಂಬೀತು? ಭರಮ ಊರವರ ದನ ಕಾಯುವ ಕೆಲಸಕ್ಕೂ ಅವರಣ್ಣ ಊರವರ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಾ ತನ್ನ ಹೊಲದಲ್ಲೂ ಅಲ್ಪ ಸ್ವಲ್ಪ ಆದಾಯ ಗಳಿಸುತ್ತಿದ್ದ. ಇಷ್ಟೆಲ್ಲ ಆದರೂ ಗುರುನಾಥನಿಗೆ ತಮ್ಮ ಭರಮನ ಮೇಲೆ ಪ್ರೀತಿ ಕಡಿಮೆ ಆಗಲಿಲ್ಲ. ಬರುಬರುತ್ತಾ ಮಂದ ಬುದ್ಧಿಯವನಾಗುತ್ತಿದ್ದ ತಮ್ಮನನ್ನು ರಾತ್ರಿ ಊಟಕ್ಕೆ ತನ್ನ ಬಳಿಯೆ ಕೂಡ್ರಿಸಿಕೊಂಡು ಹೊಟ್ಟೆ ತುಂಬ ಊಟ ಹಾಕಿಸುತ್ತಿದ್ದ. ಯುಗಾದಿ ಬಂದಿತೆಂದರೆ ಒಂದು ಜೊತೆ ವಲ್ಲಿ ತಂದು ಅದನ್ನು ಎರಡು ಮಾಡಿ ತನಗೊಂದು ಇಟಗೊಂಡು ತಮ್ಮನಿಗೊಂದು ಕೊಡುತ್ತಿದ್ದ. ಹೊಸಾ ವಲ್ಲಿ ಉಟಗೊಂಡು ಇಬ್ಬರೂ ಜೋಡಾಗಿ ಊರ ಹನುಮಪ್ಪಗ ಹೋಗಿ ಕಾಯಿ ಒಡೆಸಿಕೊಂಡು ಬರುತ್ತಿದ್ದರು. ಭರಮನೂ  ಬೇರೆಯವರ ದನ ಕಾಯ್ದಿದ್ದಕ್ಕೆ ಬಂದ ಹಣವನ್ನೆಲ್ಲಾ ಅಣ್ಣನಿಗೆ ಕೊಟ್ಟುಬಿಡುತ್ತಿದ್ದ.

                  ಇಂಜಿನಿಯರ ಹನುಮರೆಡ್ಡಿ ಸದಾ ಹಸಿರು ಹುಲ್ಲು ಮೇಯುವ  ಅಭ್ಯಾಸ ಇದ್ದವ. ಈ ಬಾರಿ ಎಲ್ಲಿ ಏನು ತಪ್ಪಾಗಿತ್ತೋ ಏನೋ ಅವನನ್ನು ನೀರು ಸಹಾ ಸಿಗದೂರಿಗೆ ಹಾಕಿದ್ದರು. ಆದರೂ ಛಲ ಬಿಡದ ಹನುಮರೆಡ್ಡಿ ತಾಲೂಕಿಗೆ ಅಡ್ಡಾಡಿ ಎಮ್ಮೆಲ್ಲೆ ಭೇಟಿಯಾಗಿ ಸರ್ವೆ ಮಾಡ್ತಿನಿ, ಕೆರಿ ಕಟ್ಟ್ತಿನಿ ಎಂದು ಹೇಳಿ ಒಂದಿಷ್ಟು ಕೊಟ್ಟು ಬರದೂರಿಗೆ ಒಂದು ಕೆರಿ ಮಂಜೂರು ಮಾಡಿಸಿಕೊಂಡು ಬಂದಿದ್ದ. ಜನರು ‘ಅಲ್ರಿ ಸಾಹೇಬ್ರ, ಮಳಿ ಇಲ್ಲದ ಊರಾಗ ಕೆರಿ ಕಟ್ಟಿ ಏನ ಮಾಡವ್ರು?’ ಎಂದರೆ “ಏ ಬುದ್ದಿಗೇಡಿಗೋಳಾ ಎಲ್ಲಿಟ್ಟಿರಿ ಬುದ್ದಿನಾ? ಬೂದಿ ಬಸಪ್ಪನ ಗುಡ್ಡದಿಂದ ಗಂಗಮ್ಮ ತಾಯಿ ಇಳಿದು ಮುಂದಕ ಹರಿದು ಹೋಗಿ ತುಂಗಭದ್ರಾ ಡ್ಯಾಮ್ ತುಂಬತಾಳ, ನಿಮ್ಮೂರಿಗೆ ಕುಡಿಯಾಕ ನೀರು ಸಿಗಂಗಿಲ್ಲ. ಅಲ್ಲಿ ನಿಮ್ಮ ಊರು ನೀರು ಬಳಸಿ ಕಬ್ಬು, ಭತ್ತ ಬೆಳಿತಾರ” ಎಂದು ಏನೇನೋ ಸಮಜಾಯಿಸಿ ಕೊಟ್ಟು  ಊರ ಮುಂದಿನ ಹೊಟೇಲ್ಲಿನಲ್ಲಿ ಎಲ್ಲರಿಗೂ ಚಾ ಕುಡಿಸಿ ಕೆರಿ ಕಟ್ಟಲು ಒಪ್ಪಿಗೆ ಪಡೆದುಕೊಂಡುಬಿಟ್ಟ.

                     ಕೆರಿ ಕಟ್ಟಲುಬೇಕಾದ ಜಮೀನು ಎಂದು ಭರಮನ ಪಾಲಿನ ಮೂರು ಎಕರೆ ಜಮೀನು ಸ್ವಾಧೀನಕ್ಕೆ ಸರ್ಕಾರ ಆದೇಶ ಹೊರಡಿಸಿತು. ಸರ್ಕಾರದಿಂದ  ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಹಣವೂ ಮಂಜೂರಾಯಿತು. ಆದರೆ ಅದು ಭರಮನ ಕೈಗೆ ತಲುಪಲಿಲ್ಲ. ಈ ಹಣಕ್ಕಾಗಿ ನಿತ್ಯ ತಾಲೂಕಾಫೀಸಿಗೆ ಅಡ್ಡಾಡುವುದೇ ಭರಮನ ಕೆಲಸವಾಗಿ ಹೋಯಿತು. ಊರಲ್ಲಿ ದನ ಮೇಯಿಸುತ್ತ  ದನದೊಟ್ಟಿಗೆ ಅಡ್ಡಾಡಿದವನು ಈಗ ಶಹರದ ಮಂದಿ ಸಂಪರ್ಕಕ್ಕೆ ಬಂದನು. ಶಹರದ ಮಂದಿ ಎಷ್ಟು ನಯವಾಗಿ ಮಾತಾಡುತ್ತಾರಲ್ಲ ಎಂದು ಬೆರಗಾಗುತ್ತಿದ್ದನು.  ಕ್ರಮೇಣ  ಅವನಿಗೆ ಇದು ಅರ್ಥವಾಗಹತ್ತಿತು. ತಾನು ಮೇಯಿಸುತ್ತಿದ್ದ ಎಮ್ಮೆಗಳು ಮರ ಕಂಡ ಕೂಡಲೇ ಮೈ ತಿಕ್ಕುವ ರೋಗ ಇರುವಂತೆ ಈ ಜನರಿಗೆ ಮನುಷ್ಯರನ್ನ ಕಂಡ ಕೂಡಲೇ ಬಣ್ಣದ ಮಾತಾಡುವ ರೋಗವಿರಬಹುದೆಂದು ಅನಿಸತೊಡಗಿತು. ಊರಲ್ಲಿ ಕೆರಿ ರೊಕ್ಕ ಬಂದ ಕೂಡಲೇ ಕೊಡತೀನಿ ಎಂದು ಅವರಿವರ ಕಡೆ ಸಾಲ ಮಾಡಿದ. ಒಂದಡೆ ಸಾಲ ಬಡ್ಡಿಯೊಂದಿಗೆ  ಏರುತ್ತಿದ್ದರೆ ಇವನ ಕೆರೆ ಪರಿಹಾರದ ದುಡ್ಡು ಮಾಯಾ ಜಿಂಕೆಯಂತೆ ದೂರ ಓಡುತ್ತಿತ್ತು. ಕೊನೆಗೊಮ್ಮೆ ಖಡಕ್ಕಾಗಿ ಕೇಳಿದಾಗ ಗ್ರಾಮ ಸೇವಕ ಉಪತಹಸಿಲ್ದಾರರ ಕಡೆಗೆ ಕೈ ತೋರಿಸಿದ. ಉಪತಹಸಿಲ್ದಾರ ಇವನನ್ನು ಕೂಡ್ರಸಿಕೊಂಡು ‘ನಿಮ್ಮ ಊರ ಜಮೀನು ಇನ್ನೂ ಪೋಡಿಯಾಗಿಲ್ಲ, ಪೋಡಿಯಾದ ಮೇಲೆ ಸರ್ವೆ ಆಗಬೇಕು ಬೇರೆ ಬೇರೆ ಉತಾರ ಆಗಬೇಕು ಅದರಾಗ ನಿನ್ನ ಹೆಸರ ಕೂಡ್ರಸಬೇಕು. ಆಮ್ಯಾಲ ನಿನಗ ರೊಕ್ಕ ಬರತಾವ. ಈಗ ಸರ್ವೆ ಮಾಡಸು ಸರ್ವೆ ಮಾಡಿಸಿ ನಕ್ಷಾ ತೆಗೆದುಕೊಂಡು ಬಾ ಹೋಗು’ ಎಂದು  ಹೇಳಿ ಓಡಿಸಿಬಿಟ್ಟರು. ಈ ಸರ್ವೆ ಅಂದರೇನು? ಅದನ್ನು ಮಾಡವರು ಯಾರು? ನನ್ನ ಹೆಸರಿಗೆ ಜಮೀನು ಇಲ್ಲ ಅಂತಾದರೆ ನನ್ನ ಪಾಲಿನ ಜಮೀನು ಯಾರ ಹೆಸರಲ್ಲಿದೆ? ಅವರು ಗುಪ್ತವಾಗಿ ಹೇಳಿದ್ದು ಇವನಿಗೆ ತಿಳಿಯಲಿಲ್ಲ. ಬಿಚ್ಚಿಹೇಳಲು ಅವರು ಸಿದ್ಧರಿಲ್ಲ. ಇವರು ನನಗೆ ತಿಳಿಯುವಂತೆ ಯಾಕ ಮಾತಾಡುವದಿಲ್ಲ? ಎಂದು ವಿಚಾರ ಮಾಡಿ ಕೆಲ ದಿನ ಅಲ್ಲಿಗೆ ಹೋಗುವದನ್ನೆ ಬಿಟ್ಟುಬಿಟ್ಟ.

                           ಕೊನೆಗೆ ಒಂದು ದಿನ ಅವರಣ್ಣ  ಒತ್ತಾಯ ಮಾಡಿದ ಮೇಲೆ ಹೊರಟು ನಿಂತ. ಬಸ್ಸು ಹತ್ತಿದ. ಮಗ್ಗಲು ಕುಳಿತ ಊರ ಹಿರಿಯ ‘ ಅಲೆಲೆ ಭರಮಾ! ಹೊಸಾ ಧೋತರಾ ಉಟಗೊಂಡು ಹೊಸಾ ಅಂಗಿ ಹಾಕ್ಕೊಂಡು ಎಲ್ಲಿಗೆ ಹೊಂಟಿಯಪಾ? ಹೆಂಡತಿ ಕರಿಯಾಕ ಮಾವನ ಮನಿಗೆ ಹೊಂಟಿಯೇನ್ ಮತ್ತ?’ ಎಂದು ಕೇಳಿದ. ‘ ಇಲ್ಲೊ ಕಾಕಾ ನನ್ನ ಕೆರಿ ರೊಕ್ಕ ಬರುದಿತ್ತು ಕೇಳಾಕ ಹೊಂಟೀನಿ ’ ಎಂದು ಹೇಳಿದ. ಬಸ್ಸು ಮುಂದೆ ಸಾಗುತ್ತಲೇ ನಿದ್ದೆಗೆ ಜಾರಿದ. ಭರಮನಿಗೆ ಕನಸಿನಲ್ಲಿ ತನ್ನ ಕೆರಿ ಹಣದ ಫೈಲು ಬಂದಂತೆ ಆಯಿತು. ಫೈಲಿನ ಬರೆದ ಅಕ್ಷರಗಳನ್ನು ಜ್ಞಾಪಿಸಿಕೊಂಡ ಕಂದಾಯ/ಭೂ.ಸ್ವಾ./ಬರದೂರ/ಸ.ನಂ.718 ಎಂದೇನೋ ಇದ್ದಿತು. ಆ ಬೂದು ಬಣ್ಣದ ಫೈಲಿನ ಮೇಲೆ ತಾನು ಕೈ ಆಡಿಸಿದಂತೆಯೂ ಸಾಹೇಬರು ಖುದ್ದಾಗಿ ತನ್ನನ್ನು ಕರೆದು ಕಟ್ಟು ಕಟ್ಟು ಹಣ ನೀಡಿದಂತೆ ಆಯಿತು. ಅದೇ ವೇಳೆಗೆ ಧಡ್! ಎಂದು ಡ್ರೈವ್ಹರ್ ಬ್ರೇಕ್ ಹಾಕಿ ಅಡ್ಡ ಬಂದ ಎಮ್ಮಿಗೆ ಬಸ್ ಡಿಕ್ಕಿ ಆಗುವದನ್ನು ತಪ್ಪಿಸಿದ. ಭರಮನ ಹಣಿ ಮುಂದಿನ ಕಂಬಿಗೆ ಬಡಿದು ದೊಡ್ಡ ಗುಮಟಿ ಆಯಿತು, ಗುಮಟಿ ನೋಯಿಸ ತೊಡಗಿತು. ಇದಕ್ಕೆಲ್ಲಾ ಆ ಭೂ ಸ್ವಾಧೀನ ಕಚೇರಿಯೆ ಕಾರಣವೆಂದು ಶಪಿಸಿದ. ತನ್ನ ಹೊಲಾ ನುಂಗಿ ಕಟ್ಟು ಕಟ್ಟು ಹಣ ತರುವ ಆ ಬೂದು ಬಣ್ಣದ ಫೈಲಿನ ಮೇಲೆ ಆ ವೇಳೆ ಅವನಿಗೆ ಅಪಾರ ಪ್ರೀತಿ ವಿಪರೀತ ಸಿಟ್ಟು ಒಟ್ಟಿಗೆ ಉಂಟಾಯಿತು. ಇವತ್ತು ಎರಡರಲ್ಲಿ ಒಂದಾಗಲೇಬೇಕು ಎಂದುಕೊಂಡು  ಜೋರಾಗಿ ಹೆಜ್ಜೆ ಹಾಕಿಕೊಂಡು ಆಫೀಸಿಗೆ ಹೋದ.

                      ಆಗಿನ್ನು ಹತ್ತು ಗಂಟೆ. ಅಲ್ಲೊಬ್ಬರು ಇಲ್ಲೊಬ್ಬರು ಬಂದಿದ್ದರು. ಭರಮ ತನ್ನ ಕೆಲಸವಿದ್ದ ಟೇಬಲ್ ಹತ್ತಿರ ಹೋದ, ಗುಮಾಸ್ತನಿನ್ನೂ ಬಂದಿರಲಿಲ್ಲ. ಎದುರಿಗಿದ್ದ ಕುರ್ಚಿ  ಮೇಲೆ ಕುಳಿತು ತನ್ನ ಭೂಸ್ವಾಧೀನ ಫೈಲು ಕಾಣುವುದೋ ಎಂದು ಕೈಯಾಡಿಸಿ ನೋಡತೊಡಗಿದ. ಅಲ್ಲಿ ಅದೇ ಬೂದು ಬಣ್ಣದ ಹತ್ತಾರು ಫೈಲು ಕಂಡವು. ಅವು ವೃದ್ಧ್ಯಾಪ್ಯ ವೇತನ, ಅಂಗವಿಕಲರ ವೇತನ, ತಾಳಿ ಭಾಗ್ಯ, ಮಡಿಲು ಭಾಗ್ಯ ಇವಕ್ಕೆ ಸಂಬಂಧಿಸಿದ ಫೈಲುಗಳಿದ್ದವು. ತನ್ನ ಫೈಲು ಇದರೊಳಗೆ ಇರಬೇಕು ಎಂದು ಭಾವಿಸಿ ಏಕಾಏಕಿ ಹೆಗಲ ಮೇಲಿನ ಟವಲು ತೆಗೆದು ಎಲ್ಲಾ ಫೈಲು ಕಟ್ಟ ತೊಡಗಿದ. ದೊಡ್ಡ ಗಂಟು ಮಾಡಿ ಹೆಗಲ ಮೇಲೆ ಹೊತ್ತು ಓಡತೊಡಗಿದ. ದೂರದಿಂದ ನೋಡಿದ ಪಿವನ್ ಹುಣಸಿಕಟ್ಟಿ ಏ ಹಿಡಿರಿ ಅವನ್ನ!  ಎನ್ನುತ್ತಾ ಅವನ ಹಿಂದೆ ಬೆನ್ನು ಹತ್ತಿದ. ಇದನ್ನು ನೋಡಿದ ಭರಮ ಹತ್ತಿರದಲ್ಲಿ ಇದ್ದ ಮೊಬೈಲ್ ಟವರ್ ಏರತೊಡಗಿದ. ಇದನ್ನು ಕಂಡ ಹುಣಸಿಕಟ್ಟಿ ಚೀರಾಡತೊಡಗಿದ, ಜನ ಸೇರಿದರು. ಪೋಲಿಸರಿಗೆ ಅಗ್ನಿಶಾಮಕದವರಿಗೆ ಫೋನು ಮಾಡಿ ಕರೆಸಲಾಯಿತು. ಭರಮ ಮೇಲಿರುತ್ತಲೇ ಇದ್ದ. ಸುದ್ದಿ ತಿಳಿದ ಮಾಧ್ಯಮದವರೂ ಬಂದರು.  ತಹಸಿಲ್ದಾರರು ಖುದ್ದಾಗಿ ಮೈಕ್ ಹಿಡಿದು “ ಭರಮಣ್ಣನವರೇ, ದಯವಿಟ್ಟು ಕೆಳಗೆ ಬನ್ನಿ! ನಿಮ್ಮ ಸಮಸ್ಯೆ ಏನಿದ್ದರೂ ಬಗೆಹರಿಸೋಣ! ನೀವು ಕೆಳಗೆ ಬನ್ನಿ ಎಂದು ಮಾಧ್ಯಮದವರನ್ನು ಮುಂದೆ ಮಾಡಿಕೊಂಡು ಅಂಗಲಾಚಿದರು. ಆ ಪೈಕಿ ಒಬ್ಬ ವರದಿಗಾರ “ ಸಾಹೇಬ್ರ ಭರಮ ಮೊಬೈಲ್ ಟವರ್ ಮ್ಯಾಲ ಅದಾನ, ಟಿವಿ ಕ್ಯಾಮರಾ ಮುಂದ ಇಲ್ಲಾ ” ಎಂದು ಚೇಷ್ಟೆ ಮಾಡಿದ. ಭರಮ ಮೇಲೆರುತ್ತಲೇ “ ನಿವ್ ಯಾರಾದರೂ ಮೇಲೆ ಬಂದರೆ ನಾನು ಇಲ್ಲಿಂದ ಹಾರಿ ಬಿಡ್ತಿನಿ” ಎಂದು ಉತ್ತರಿಸಿದ. ಬರದೂರಿಗೂ ಸುದ್ದಿ ಕಳಿಸಿ ಅವರಣ್ಣನಿಗೆ ಬರ ಹೇಳಿದರು. ಬಿಸಿಲು ಏರ ತೊಡಗಿತು. ನೆರೆದ ಮಾಧ್ಯಮದವರು        ‘ ಭರಮಣ್ಣನವರೇ! ನಿಮ್ಮ ಸಮಸ್ಯೆ ಏನು ಹೇಳಿ?’ ಎಂದು ಪೀಡಿಸತೊಡಗಿದವು. ಸ್ಥಳೀಯರ ಸಂದರ್ಶನ ಮಾಡಿ ಪ್ರಸಾರ ಮಾಡತೊಡಗಿದವು. ಅಗ್ನಿಶಾಮಕದವರು ಮೇಲೆರುವ ಪ್ರಯತ್ನದಲ್ಲಿತೊಡಗಿದರು. ಇದನ್ನು ಕಂಡ ಭರಮ ‘ ಮ್ಯಾಲ ಬರಬ್ಯಾಡ್ರಿ ’ ಎಂದು ಚೀರಿದವನೇ ಟವರಿನಿಂದ ಜಿಗಿದುಬಿಟ್ಟ. ಅವನು ಬಿದ್ದಿದ್ದು ವಿದ್ಯುತ್ ತಂತಿಯ ಮೇಲೆ! ಕ್ಷಣಾರ್ಧದಲ್ಲಿ ಸುಟ್ಟ ದೇಹ ಧೊಪ್ಪಂದು ಕೆಳಕ್ಕೆ ಬಿತ್ತು. ಸುಟ್ಟು ಬೂದಿಯಾದ ಫೈಲ ಹಾಳೆಗಳು ಗಾಳಿಗೆ ಹಾರಾಡತೊಡಗಿದವು. ಮಾಧ್ಯಮದವರು ಈ ದ್ರಶ್ಯವನ್ನು ನೇರವಾಗಿ ಪ್ರಸಾರ ಮಾಡಿ ವೀರಾವೇಶ ಮೆರೆದವು. ಅದೇ ಸಮಯಕ್ಕೆ ಊರಿನಿಂದ ಬಂದ ಅವರಣ್ಣ ಗುರುನಾಥ ತಮ್ಮನ ದೇಹದ ಬೂದಿ ಹಿಡಿದು ನೋಡಿದ. ಹೊಸ ಧೋತರದ ಬೂದಿ ಇನ್ನೂ ಗರಿಗರಿಯಾಗಿತ್ತು. ಗುರುನಾಥನ ಕಣ್ಣಿಂದ ಒಂದು ಹನಿ ನೀರು ಭೂಮಿಗೆ ಬೀಳುವುದನ್ನೆ ಕಾಯುತ್ತಿದ್ದ ಭೂಮಿ ತಟ್ಟನೇ ಅದನ್ನು ನುಂಗಿ ತನ್ನ ಒಡಲೊಳಗೆ ಸೇರಿಸಿಕೊಂಡುಬಿಟ್ಟಿತು. ಕನ್ನಡ ನಾಡ ಗೌಡತಿ ಭಾಗೀರಥಿ ಸ್ವರ್ಗದ ಬಾಗಿಲಲ್ಲಿ ಬಂದು ಭರಮನನ್ನು ಬಿಗಿದಪ್ಪಿಕೊಂಡಳು.

******

ವಿಳಾಸ : ಶ್ರೀನಿವಾಸ.ಹುದ್ದಾರ

          ಧಾರವಾಡ – 580008

        ಸಂಪರ್ಕ : 9448541024 

Comments

Submitted by kavinagaraj Wed, 09/02/2015 - 07:51

ಮನ ಕಲಕವ ಕಥೆಯಿದು. ವಾಸ್ತವದಲ್ಲೂ ಇಂತಹ ಹಲವಾರು ನೈಜ ಘಟನೆಗಳು ನಡೆಯುತ್ತಿರುತ್ತವೆ. ನನ್ನ ಸೇವಾವಧಿಯಲ್ಲಿ ಹಲವಾರು ಭರಮರನ್ನು ಕಂಡಿದ್ದೇನೆ, ಮರುಗಿದ್ದೇನೆ.

Submitted by lpitnal Wed, 09/02/2015 - 10:48

ಮನಕಲಕುವ ಗ್ರಾಮೀಣ ಬದುಕಿನ ಚಿತ್ರಣ. ಅದ್ಭುತವಾಗಿದೆ. ನೇಪಥ್ಯದಲ್ಲಿ ಸುಲಿಯುವ ಸ್ವಾರ್ಥಗಳು ಜೀವಗಳನ್ನು ಸುಡುವುದು ಹೀಗೆಯೇ., ಕರುಣೆ ಇಲ್ಲವೇ ಈ ಮಣ್ಣಿಗೆ ಅನಿಸುತ್ತದೆ. ನಿಜಕ್ಕೂ ಚಂತನಾರ್ಹ ಕಥೆ. ಈ ಸಾವಿಗೆ ನಾವೆಲ್ಲರೂ ಕಾರಣರು. ನಮ್ಮ ಸ್ವಾರ್ಥ ಮನಸುಗಳನ್ನು ಗಲ್ಲಿಗೇರಿಸಬೇಕು. ಏನಂತೀರಿ ಸರ್, ಅಂದಹಾಗೆ ಗ್ರಾಮೀಣ ಸೊಗಡಿನ ಪದಪ್ರಯೋಗಗಳು ಬಲು ಮೆಚ್ಚುಗೆಯಾದವು, 'ತಂಬಾಕೈತೈನು?' ವಲ್ಲಿ, ಹಳ್ಳಿಯ ಹೈಕಳಾದಿಯಾಗಿ ಎಲ್ಲರ ಚೇಷ್ಟೆಗಳು ಸಹಜವೆನಿಸಿ ಕಥೆಗೆ ಮೆರುಗು ನೀಡಿವೆ. ತುಂಬ ಆಪ್ತ ಕಥೆ ನೀಡಿದ ಶ್ರೀನಿವಾಸರವರಿಗೆ ಅಭಿನಂದನೆಗಳು.

Submitted by Huddar Shriniv… Wed, 09/02/2015 - 13:45

In reply to by lpitnal

ಸರ್, ಮೊದಲು ನಿಮ್ಮ‌ ವಿಶಾಲ‌ ಹ್ಱದಯಕ್ಕೆ ವಂದನೆಗಳು. ಈ ಕತೆ ನನ್ನ‌ ಗ್ರಾಮೀಣ‌ ಜೀವನದ‌ ಹಾಗೂ ನನ್ನ‌ ಗ್ರಾಮೀಣ‌ ಜನರ‌ ಕುರಿತಂತೆ ಇದೆ. ಇದು ಕೆಲ‌ ನ್ವೆಜವಾಗಿರುವ‌ ಸಂಗತಿಗಳನ್ನು ಆದರಿಸಿದೆ. ತಾವು ವ್ಯಕ್ತಪಡಿಸಿರುವ‌ ಅಬಿಪ್ರಾಯಕ್ಕೆ ನಮನಗಳು,